ಇವು ನಿಜಕ್ಕೂ ರೋಡ್‌ಕಿಂಗ್

ಸದೇಶ್ ಕಾರ್ಮಾಡ್
ಚಿಂದಿ ಚಿಂದಿ ಜೀನ್ಸು , ಯಮಹಾ ಬೈಕು, ಕಾಲೇಜ್ ಕ್ಯಾಂಪಸ್, ಲೈಫ್ ಸ್ಟೈಲ್ ಸೂಪರ್....
ಯುವಜನತೆ ಯಾವ ಬೈಕ್ ಮೇಲೆ ಹೆಚ್ಚು  ವ್ಯಾಮೋಹ ಇಟ್ಟುಕೊಂಡಿದ್ದಾರೆಂಬುದಕ್ಕೆ ಕನ್ನಡ ಚಲನಚಿತ್ರವೊಂದರ ಈ ಗೀತೆ ಸಾಕ್ಷಿ. ಕೊಡಗಿನ ಯುವಜನತೆ ಯಮಹಾ ಬೈಕ್ ಕ್ರೇಜ್ಹ್‌ನೊಂದಿಗೆ ಇದೀಗ ಕರ್ನಾಟಕದ ಹೆಮ್ಮೆಯ ಕಂಪೆನಿ ಜಾವ, ಯಜ್ಡಿ, ರೋಡ್ ಕಿಂಗ್ ಬೈಕುಗಳು ಸೇರ್ಪಡೆಗೊಂಡಿವೆ.
ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಕೊಡಗು ಜಿಲ್ಲೆಗೆ ಈ ಬೈಕುಗಳು ಹೇಳಿ ಮಾಡಿಸಿದಂತದ್ದು. ಆದರೆ ಈ ಹಿಂದೆ ಹೆಚ್ಚು ಬಳಸುತ್ತಿದ್ದದ್ದು ಮಧ್ಯವಯಸ್ಕರು ಅಥವಾ ವಯಸ್ಕರು. ಆದರೆ ಕಳೆದೆರಡು ವರ್ಷಗಳಲ್ಲಿ ಈ ಬೈಕ್‌ಗಳಿಗೆ ಯುವಕರು ಸಾರಥಿಯಾದ ನಂತರ ಎಲ್ಲಿಲ್ಲದ ಬೇಡಿಕೆ. ಕಾಲೇಜ್ ಕ್ಯಾಂಪಸ್‌ವೊಳಗೆ ಯಮಹಾ ಬೈಕ್‌ನೊಂದಿಗೆ ಕಾಲಿಟ್ಟರೆ ಮಾತ್ರ ಗೌರವ ಎಂದು ತಿಳಿದುಕೊಂಡಿದ್ದ ಹುಡುಗರು ಇದೀಗ ಜಾವ, ಯಜ್ಡಿ, ರೋಡ್‌ಕಿಂಗ್ ಬೆನ್ನೇರಿ ಹೊರಟ್ಟಿದ್ದಾರೆ.
ಕಳೆದ ಐದಾವರು ವರ್ಷಗಳ ಹಿಂದೆ ಈ ಬೈಕುಗಳು ಶೆಡ್ ಸೇರಿಕೊಂಡಿತ್ತು. ಕೆಲವು ಹಿರಿಯರು ಮಾತ್ರ ಚಲಾಯಿಸುತ್ತಿದ್ದರು. ಮಾರುಕಟ್ಟೆಯಲ್ಲಿ ‘ರೀಸೇಲ್ ವ್ಯಾಲ್ಯೂ’ ಇಲ್ಲದ ಕಾರಣ ಗುಜರಿ ಅಂಗಡಿ ಸೇರತೊಡ ಗಿತು. ಸುಸ್ಥಿತಿಯಲ್ಲಿದ್ದ ಯಜ್ಡಿ ಬೈಕ್ ಕೇವಲ ೧ರಿಂದ ೨ ಸಾವಿರ ರೂ.ಗೆ ಮಾರಾಟ ಮಾಡಿದ ಉದಾಹರಣೆಗಳಿವೆ. ಆದರೆ ಈ ಬೈಕ್‌ಗಳಿಗೆ ಯುವಕರು ಸಾರಥಿಯಾದ ಮೇಲೆ ೩೦ ರಿಂದ ೩೫ ಸಾವಿರ ರೂ.ಗೆ ಏರಿಕೆಯಾಗಿದೆ.
ಶೆಡ್‌ವೊಳಗಿದ್ದ ಹಳೆ ಬೈಕುಗಳು ಹೊಸದಾಗಿ ಶೃಂಗಾರಗೊಂಡು ರೋಡಿಗಿಳಿದಿವೆ. ಇದಕ್ಕಾಗಿ ಯುವಕರು ಕನಿಷ್ಠ ೧೦ ರಿಂದ ಗರಿಷ್ಠ ೨೫ ಸಾವಿರ ರೂ..ವರೆಗೆ ವೆಚ್ಚ ಮಾಡುತ್ತಿದ್ದಾರೆ. ಹೀಗಾಗಿ ಜಾವ ಕಂಪನಿಯ ಬೈಕ್‌ಗಳಿಗೆ ಕೊಡಗಿನಲ್ಲಿ ಭಾರಿ ಬೇಡಿಕೆ.
‘ನಾಲ್ಕೈದು ವರ್ಷಗಳ ಹಿಂದೆ ಜಾವ ಕಂಪನಿಯ ಬೈಕ್‌ಗಳನ್ನು ಕೊಳ್ಳುವವರಿರಲಿಲ್ಲ. ಹೀಗಾಗಿ ಗುಜರಿ ಅಂಗಡಿಗಳಿಗೆ ೨ ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದೆವು. ಈಗ ಈ ಬೈಕುಗಳು ಸಿಗುವುದೇ ಅಪರೂಪ. ಮೈಲೇಜ್ ಕಡಿಮೆ ಅನ್ನುವುದನ್ನು ಹೊರತುಪಡಿಸಿದರೆ ನಿರ್ವಹಣೆಯ ವೆಚ್ಚ ತೀರಾ ಕಡಿಮೆ. ಹೀಗಾಗಿ ಹೆಚ್ಚಿನವರು ಇದೀಗ ಜಾವ ಕಂಪನಿಯ ಬೈಕ್‌ಗಳ ಕಡೆ ಮುಖ ಮಾಡಿದ್ದಾರೆ’ ಎಂದು ಮಡಿಕೇರಿಯ ಬೈಕ್ ವಿತರಕರಾದ ಪೊನ್ನಚನ ಮಧು ಹೇಳುತ್ತಾರೆ.
ಜಾವ ಕಂಪನಿಯು ಪ್ರಥಮ ಬಾರಿಗೆ ಹೊರ ತಂದ ಜಾವ ಬೈಕ್‌ನ ಟ್ಯಾಂಕ್ ಮೇಲೆ ಮೀಟರ್ ಅಳವಡಿಸಲಾಗಿತ್ತು. ಆದರೆ ಈ ಬೈಕ್ ಕಾಣಸಿಗುವುದೇ ಅಪರೂಪ. ಈ ಬೈಕ್‌ಗಳು ಇದೀಗ ೬೦ ಸಾವಿರ ರೂ.ವರೆಗೆ ಬೆಲೆ ಬಾಳುತ್ತಿವೆ. ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಜಾವ ಕ್ಲಬ್‌ಗಳು ಪ್ರಾರಂಭಗೊಂಡ ನಂತರ ಜಾವ ಕಂಪೆನಿಯ ಬೈಕ್‌ಗಳು ತಮ್ಮ ಮೌಲ್ಯವನ್ನು ವೃದ್ಧಿಸಿಕೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ