ಈ ಶ್ರಾವಣಕ್ಕೂ ಸ್ವರ ಹೊರಡಿಸಲಿಲ್ಲ !

ಚೀ. ಜ. ರಾಜೀವ ಮೈಸೂರು
ಶ್ರಾವಣ ಬಂದರೂ ಸ್ವರ ಮಾತ್ರ ಹೊರಡಲಿಲ್ಲ !
ಹೀಗೆ ಮಾತು ಆರಂಭಿಸಬೇಕಾದದ್ದು ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಬಗ್ಗೆ. ಈಗಾಗಲೇ ಘೋಷಣೆ ಯಾಗಿ, ಚಿಕ್ಕ ರೂಪದಲ್ಲಿ ಅಸ್ತಿತ್ವಕ್ಕೆ ಬಂದು ಎರಡು ವರ್ಷವೇ ಕಳೆದರೂ ಇನ್ನೂ ಚಟುವಟಿಕೆ ಆರಂಭವಾ ಗಿಲ್ಲ. ಮುಂದಿನ ತಿಂಗಳಿಂದ ವಿಶ್ವ ವಿದ್ಯಾಲಯ ಕಾರ‍್ಯಾರಂಭ ಮಾಡಲಿದೆ ಎಂಬ ಕುಲಪತಿಯ ವಚನ ಮತ್ತೆ ಸುಳ್ಳಾ ಗಿದೆ.
ಕುಲಪತಿ ಡಾ.ಹನುಮಣ್ಣ ನಾಯಕ ದೊರೆ  ಅವರು ಈ ಮೊದಲು ಘೋಷಿಸಿದ ಪ್ರಕಾರ  ಈ ಸೆಪ್ಟಂಬರ್‌ನಿಂದ ಶೈಕ್ಷಣಿಕ ಚಟುವಟಿಕೆ ಆರಂಭಿಸಬೇಕಿತ್ತು. ಆದರೆ, ಇನ್ನೂ ಶಾಶ್ವತ ನೆಲೆಯೇ ಸಿಕ್ಕಿಲ್ಲ. ಜತೆಗೆ ಅನುದಾನದ ಕೊರತೆ, ವಿವಿ ಅಧಿನಿಯಗಳಿಗೆ ಸಮ್ಮತಿ ಸಿಗದಿರುವುದು -ನಾನಾ ಕಾರಣಗಳಿಗೆ ಸ್ವರ ಹೊರಡಲು ಮತ್ತೊಂದು ಶ್ರಾವಣ ಕಾಯಬೇಕು.
‘ವಿವಿ ಅಧಿನಿಯಮಗಳಿಗೆ ರಾಜ್ಯಪಾಲರ ಅಂಕಿತ ಬೀಳಬೇಕಿದೆ. ಜಿಲ್ಲಾಡಳಿತ ಸದ್ಯಕ್ಕೆ ತೋರಿಸಿರುವ ತಾತ್ಕಾಲಿಕ ನೆಲೆಯಲ್ಲಿ ಚಟುವಟಿಕೆ ಆರಂಭಿಸಬೇಕೇ ಅಥವಾ ಬೇಡವೇ ಎಂಬ ಜಿಜ್ಞಾಸೆ ಇನ್ನೂ ಮುಗಿದಿಲ್ಲ. ಹಾಗಾಗಿ ಇನ್ನೂ ಸ್ವಲ್ಪ ತಡ’ ಎನ್ನುತ್ತಾರೆ ಡಾ. ದೊರೆ.
ಮೈಸೂರಿನಲ್ಲಿ  ಸಂಗೀತ ವಿವಿ ಆರಂಭ ಘೋಷಣೆ ಹೊರಬಿದ್ದಿದ್ದು ೨೦೦೭ರ ಬಜೆಟ್‌ನಲ್ಲಿ. ರೂಪ ಸಿಕ್ಕಿದ್ದು ೨೦೦೮ರ ಜುಲೈನಲ್ಲಿ. ಈ ಲೆಕ್ಕ ಹಿಡಿದರೂ ವಿವಿ ಗೆ ಎರಡು ವರ್ಷ ತುಂಬಿದೆ. ೨೦೦೯ರ ಅಂತ್ಯ ದಲ್ಲಿ ಕುಲಪತಿಯಾಗಿ ಅಧಿಕಾರ ವಹಿಸಿ ಕೊಂಡ ಡಾ. ದೊರೆಯವರು ನೆಲೆ ಹುಡುಕುವುದರಲ್ಲೇ ಸುಸ್ತಾಗಿದ್ದಾರೆ.
ವರ್ಷದಾರಂಭದಲ್ಲಿ  ವಿವಿ ಕ್ಯಾಂಪಸ್‌ಗೆ ತಾಲೂಕಿನ ವರಕೋಡು ಬಳಿ ೧೦೦ ಎಕರೆ ಭೂಮಿಯನ್ನು ಗುರುತಿ ಸಿತ್ತು. ಇನ್ನೇನು  ಭೂಮಿ ಕೈಗೆ ಬಂತು ಎನ್ನುವಷ್ಟರಲ್ಲಿ ಅರಣ್ಯ ಇಲಾಖೆ ತಕರಾರು ತೆಗೆಯಿತು. ಪರಿಣಾಮ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಮಧ್ಯೆ ವ್ಯಾಜ್ಯ ಹುಟ್ಟಿತೇ ಹೊರತು ವಿವಿಗೆ ಭೂಮಿ ಸಿಗಲಿಲ್ಲ. ಕ್ಯಾಂಪಸ್ ನಿರ್ಮಾಣಕ್ಕೆ  ೧೦೦ ಎಕರೆ  ಭೂಮಿ ಸಿಗುತ್ತದೆಂಬ ನಿರೀಕ್ಷೆ ಹೊಂದಿದ್ದ ಕುಲಪತಿ, ಸೆಪ್ಟಂಬರ್‌ನಿಂದ ಚಟುವಟಿಕೆ ಆರಂಭಿಸುವುದಾಗಿ ಹೇಳಿದ್ದರು.
ಆಧುನಿಕ ಶಿಕ್ಷಣ ಮಾದರಿಯಲ್ಲೇ ಸಂಗೀತ ಹಾಗೂ ಪ್ರದರ್ಶಕ ಕಲೆಗಳಿಗೆ ಸಂಬಂಧಿಸಿದಂತೆ  ಬಿಎ, ಎಂಎ, ಡಿಪ್ಲೊಮಾ ಕೋರ್ಸ್‌ಗಳನ್ನು ಸಾಂಪ್ರದಾಯಿಕ ಹಾಗೂ ದೂರ ಶಿಕ್ಷಣ ಪದ್ಧತಿಯಲ್ಲಿ ನಡೆಸುವುದು, ಗುರುಕುಲ ಮಾದರಿಯಲ್ಲಿ ಕಲಾವಿದರ ತಯಾರಿ ಸೇರಿದಂತೆ ಎಲ್ಲವೂ ಆರಂಭವಾಗ ಲಿದೆ ಎಂದಿದ್ದರು. ಈ ಮಧ್ಯೆ ತನ್ನ ಅಸ್ತಿತ್ವದ ಸಾಬೀತಿಗೆ ಒಂದಿಷ್ಟು ಶಿಕ್ಷಣೇತರ ಕಾರ‍್ಯಕ್ರಮಗಳನ್ನು ನಡೆಸಲೂ ತೀರ್ಮಾನಿಸಲಾಗಿತ್ತು. ಆದರೆ ಭೂಮಿ ಪಡೆಯುವುದೇ ಬಹು ದೊಡ್ಡ ಸವಾಲಾಗಿದೆ. ಮೈಸೂರಿನ ಸಂಗೀತ ದಿಗ್ಗಜರು, ರಾಜಕಾರಣಿಗಳು, ಅಧಿಕಾರಿ ಗಳು ಸೇರಿದಂತೆ ಎಲ್ಲರ ಸಹಕಾರದಿಂದ ಹರ ಸಾಹಸ ಪಟ್ಟರೂ ಸಂಪಾದನೆ ಶೂನ್ಯ.
ಲಕ್ಷ್ಮೀಪುರಂ ಶಾಲೆ ತಾತ್ಕಾಲಿಕ ನೆಲೆ: ವರಕೋಡು ಜಮೀನು ಸಿಗಲಾರದು ಎಂದೆನಿಸಿದಾಗ ಸಂಗೀತ ವಿವಿ, ಇಲವಾಲ ಬಳಿ ಇರುವ ಅಲೋಕದ ಮೇಲೆ ಕಣ್ಣು ಹಾಕಿತು. ಅರಣ್ಯ ಇಲಾಖೆಗೆ ಸೇರಿದ ಅಲ್ಲಿ ಒಂದಿಷ್ಟು ಪಾರಂಪರಿಕ ಕಟ್ಟಡಗಳಿದ್ದು, ಆ ಸ್ಥಳ ಸೂಕ್ತವೆನಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು. ಆದರೆ, ಅಲ್ಲಿ ಅರಣ್ಯೇತರ ಚಟುವಟಿಕೆ ನಡೆಸುವಂತಿಲ್ಲ ಎಂದು ಅರಣ್ಯ ಇಲಾಖೆ ಆಕ್ಷೇಪ ಸಲ್ಲಿಸಿತು. ಹಾಗಾಗಿ ಆ ಜಾಗವೂ ಸಿಗಲಿಲ್ಲ.
ಈ ನಡುವೆ ನಗರದ ಹೃದಯ ಭಾಗದ ಲಕ್ಷ್ಮೀಪುರಂ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ತಾತ್ಕಾಲಿಕವಾಗಿ ಬಳಸಲು ಜಿಲ್ಲಾಡಳಿತ ಸಂಗೀತ ವಿವಿಗೆ ಸೂಚಿಸಿದೆ. ಮಕ್ಕಳ ಕೊರತೆಯಿಂದ ತಾತ್ಕಾಲಿಕವಾಗಿ ಮುಚ್ಚಿರುವ ಶಾಲೆಯ ಕಟ್ಟಡದಲ್ಲೇ, ವಿವಿ ಆರಂಭವಾಗಲಿ. ಬಳಿಕ ಜಾಗ ಹುಡುಕಿದ ರಾಯಿತು ಎಂಬುದು ಜಿಲ್ಲಾಡಳಿತದ ನಿಲುವು. ಈ ಸಲಹೆ ಕುಲಪತಿಗೆ ಸಂಪೂರ್ಣ ರುಚಿಸಿದಂತಿಲ್ಲ.
೨೦ ಕೊಠಡಿಗಳ ಈ ಶಾಲೆಯಲ್ಲಿ ತನ್ನ  ಚಟುವಟಿಕೆ ಆರಂಭಿಸಲು ವಿವಿ ಒಪ್ಪಿಕೊಂಡರೂ, ಇಲ್ಲಿಗೆ ಬರಲು ಇನ್ನೂ ೨-೩ ತಿಂಗಳು ಬೇಕು. ಕಾರಣ, ಇಲ್ಲಿನ ಎಲ್ಲ ಕಟ್ಟಡಗಳನ್ನು ದುರಸ್ತಿಗೊಳಿಸಿ ವ್ಯವಸ್ಥಿತ ರೂಪ ನೀಡಬೇಕಾದದ್ದು ಸದ್ಯದ ತುರ್ತು. ಅಲ್ಲಿಗೆ ಸಂಗೀತ ವಿವಿ ಶರದೃತುವಿನಲ್ಲಿ ಹಾಡಬಹುದೇನೋ ಕಾದು ನೋಡಬೇಕಿದೆ.

ಅರಣ್ಯದಲ್ಲಿ ಸಫಾರಿ ನಿಯಮಾವಳಿ ಜಾರಿಯಾಗುತ್ತಿಲ್ಲ

ಕುಂದೂರು ಉಮೇಶಭಟ್ಟ, ಮೈಸೂರು
ಕರ್ನಾಟಕದ ವನ್ಯಜೀವಿಗಳ ಪಾಲಿಗೆ ಉರುಳಾಗುತ್ತಿದೆ  ‘ಸಾಹೇಬ್ರ ಸಫಾರಿ ’.
ಇದೇನು ಸಾಹೇಬ್ರ ಸಫಾರಿ ಎಂದು ಅಚ್ಚರಿ ಪಡಬೇಡಿ. ಪ್ರಭಾವಿಗಳ ಒತ್ತಡ ಬಳಸಿ ಮೇಲಧಿಕಾರಿಗಳ ಶಿಫಾರಸಿನೊಂದಿಗೆ ನಡೆಯುತ್ತಿರುವ ಸಫಾರಿ. ನಾಗರಹೊಳೆ, ಬಂಡೀಪುರ, ಚಾಮ ರಾಜನಗರ, ದಾಂಡೇಲಿ, ಭದ್ರಾ ಸೇರಿದಂತೆ ರಾಜ್ಯದ ವನ್ಯಜೀವಿಗಳ ತಾಣವಾಗಿರುವ ಅರಣ್ಯ ಪ್ರದೇಶದಲ್ಲಿ ಸಫಾರಿ ಎಗ್ಗಿಲ್ಲದೇ ನಡೆಯುತ್ತಲೇ ಇದೆ. ಅದೂ ರೆಸಾರ್ಟ್ ಸಂಸ್ಕೃತಿ ಅರಣ್ಯಕ್ಕೆ ಸೋಕಿದ ನಂತರವಂತೂ ಇದು ಮಿತಿ ಮೀರಿದೆ.
ಸಫಾರಿ ನೆಪದಲ್ಲಿ ಚಾಮರಾಜನಗರ ಅರಣ್ಯದಲ್ಲಿ  ಜಿಂಕೆ ಬೇಟೆಯಾಡುತ್ತಿದ್ದ ಮೂವರು ಸಿಕ್ಕಿಬಿದ್ದು, ಮತ್ತೊಬ್ಬ ದೇಶದಿಂದಲೇ ಪರಾರಿ ಯಾದ ನಂತರ ಸಾಹೇಬ್ರ ಸಫಾರಿ ಹೆಸರಿನಲ್ಲಿ ನಡೆಯುತ್ತಿರುವ ದಂಧ ಮುಖಗಳು ಬಹಿರಂಗ ವಾಗತೊಡಗಿವೆ.
ಸಫಾರಿ ನೆಪದಲ್ಲಿ ಕೆಲವರಿಗೆ ಇದು ಸಾವಿರಾರು ಹಣವಾದರೆ, ದೊಡ್ಡ ಕುಳಗಳಿಗೆ ಕೋಟಿ ಕೋಟಿ ಹಣದ ಲೆಕ್ಕಾಚಾರ. ಸಫಾರಿಗೆ ಸಂಬಂಧಿಸಿ ನಿಯಮಾವಳಿಗಳ ಮಾಹಿತಿ ಅರಣ್ಯ ಅತಿಥಿ ಗೃಹ ಗಳ ಫಲಕಗಳಲ್ಲಿ ಕಾಣಸಿಗುತ್ತವೆ. ಫಲಕಗಳಿಗೆ ಮಾತ್ರ ಅದು ಸೀಮಿತ.
ಸಾಮಾನ್ಯರಿಗೆ ಸುಲಭವಲ್ಲ: ರಾಜ್ಯದ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ನೇರ ದರ್ಶನ ಹಾಗೂ ಕಾಡನ್ನು ಅನುಭವಿಸಲೆಂದೇ ರೂಪಿಸಿದ್ದು ಸಫಾರಿ. ವನ್ಯಜೀವಿಗಳನ್ನು ಕಣ್ಣಾರೆ ಕಾಣುವ ಹಾಗೂ ನಿತ್ಯ ಬದುಕಿನ ಜಂಜಡಗಳಿಂದ ಕೊಂಚ ರಿಲ್ಯಾಕ್ಸ್ ಪಡೆಯಲು ಈ ಸಫಾರಿ ಸಹಕಾರಿ. ದೇಶ ವಿದೇಶಗಳಲ್ಲೂ ಇದು ಜನಪ್ರಿಯ. ಕರ್ನಾಟಕದ ಅರಣ್ಯಗಳಲ್ಲೂ ಸಫಾರಿ ವ್ಯವಸ್ಥೆಯಿದೆ. ಇದು ಅರಣ್ಯ ಇಲಾಖೆ ಧ್ಯೇಯವೂ ಹೌದು. ಸಾಕಷ್ಟು ಪ್ರಾಣಿಪ್ರಿಯರು ಈಗಲೂ ಸಫಾರಿಯ ಉಪಯೋಗ ಪಡೆಯುತ್ತಲೇ ಇದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಹಣದ ಕಾರಣಕ್ಕೆ ಅರಣ್ಯದಲ್ಲೂ ಬದಲಾವಣೆಗಳೂ ಆಗಿವೆ. ಕೆಲವರಿಗೆ ವನ್ಯಜೀವಿಗಳನ್ನು ಕಾಣುವ ತವಕ. ಅದಕ್ಕೆ ಎಷ್ಟಾದರೂ ಹಣ ಖರ್ಚಾದರೂ ತೊಂದರೆಯಿಲ್ಲ. ಇದಕ್ಕಾಗಿಯೇ ಹುಟ್ಟಿ ಕೊಂಡಿದ್ದು ಸಾಹೇಬ್ರ ಸಫಾರಿ. ಯಾರದೋ ಒಬ್ಬರ ಹೆಸರನ್ನು ಹೇಳಿಕೊಂಡು ಸಫಾರಿ ನೆಪದಲ್ಲಿ ಅರಣ್ಯ ಪ್ರವೇಶ ಮಾಡಿ ಅಲ್ಲಿ ನಡೆಸುವುದು ಮೋಜು ಮೇಜುವಾನಿ. ಮೇಲಧಿಕಾರಿಗಳ ಶಿಫಾರಸು ಇರುವುದರಿಂದ ಕೆಳ ಹಂತದ ಸಿಬ್ಬಂದಿಗೂ ನಿಯಂತ್ರಣ ಕಷ್ಟ. ಆದರೆ ಸಾಮಾನ್ಯರು ಇಂಥ ಸಫಾರಿಗೆ ಹೋಗ ಬೇಕೆಂಬುದು ಕರ ಕಷ್ಟ.
ನಿಲ್ಲದ ತಿಕ್ಕಾಟ: ಸಫಾರಿ ವಿಚಾರದಲ್ಲಿ ಕರ್ನಾಟಕ ಸ್ವಾಮ್ಯದ ಜಂಗಲ್ ರೆಸಾರ್ಟ್ ಲಿ. ಹಾಗೂ ಅರಣ್ಯ ಇಲಾಖೆ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಅದೂ ಸಫಾರಿ ಕಾರಣಕ್ಕೆ. ನಾಗರಹೊಳೆ, ಬಂಡೀಪುರ, ಚಾಮರಾಜನಗರ ವನ್ಯಜೀವಿ ವಿಭಾಗಗಳಲ್ಲಿ ವರ್ಷ ಗಳಿಂದ ಇಂಥ ತಿಕ್ಕಾಟ ಇದ್ದೇ ಇದೆ.
ಯಾವುದೇ ರೆಸಾರ್ಟ್ ಸಫಾರಿಗೆ ಪ್ರವಾಸಿಗರನ್ನು ಕರೆದುಕೊಂಡು ಬರಬೇಕೆಂದರೆ ಇಂತಿಷ್ಟು ಹಣವನ್ನು ಅರಣ್ಯ ಇಲಾಖೆಗೆ ಪಾವತಿಸಬೇಕು. ನಿತ್ಯ ಇಷ್ಟೇ ಪ್ರಯಾಣಿಕರೊಂದಿಗೆ ನಿಗದಿತ ಸಫಾರಿ ಮಾತ್ರ ಮಾಡಬೇಕು ಎನ್ನುವ ಸೂಚನೆ ಇದೆ. ಆದರೆ ಇವ್ಯಾವುವೂ ಸರಿಯಾಗಿ ಪಾಲನೆ ಯಾಗುತ್ತಲೇ ಇಲ್ಲ.
ಅರಣ್ಯದಂಚಿನಲ್ಲಿ ಬರುವ ರೆಸಾರ್ಟ್‌ಗಳು ಹಾಗೂ ಸ್ಥಳೀಯ ಅಧಿಕಾರಿಗಳ ನಡುವೆ ಸಮರಕ್ಕೂ ಸಫಾರಿ ಕಾರಣವಾಗಿದೆ. ಕೆಲ ವೊಬ್ಬರು ರೆಸಾರ್ಟ್‌ಗಳೊಂದಿಗೆ ಸೇರಿಕೊಂಡು ಹೋಗಿ ಸಫಾರಿಗೆ ಮುಕ್ತ ಅವಕಾಶ ಮಾಡಿ ಕೊಟ್ಟಿದ್ದರೆ ಕೆಲವು ಅಧಿಕಾರಿಗಳು ಹೀಗೆ ಸಂಘರ್ಷ ನಡೆಸುತ್ತಲೇ ಇದ್ದಾರೆ.
ಸಫಾರಿ ಎಂದರೆ ಅದು ವನ್ಯಜೀವಿಗಳ ವೀಕ್ಷಣೆ ಹಾಗೂ ಪರಿಸರ ಪ್ರೀತಿ. ಆದರೆ ಇತ್ತೀಚಿನ ವರ್ಷ ಗಳಲ್ಲಿ ರೆಸಾರ್ಟ್ ಸಂಸ್ಕೃತಿ ಬಂದ ಮೇಲಂತೂ ಹಿಂದೆ ಇರುವುದು ಹಣ ಮಾಡುವ ಮನೋಭಾವ. ಖಾಸಗಿ ರೆಸಾರ್ಟ್‌ಗಳು ಪ್ರವಾಸಿಗರಿಗೆ ಸಫಾರಿಗೆಂದು ಸಾವಿರಾರು ರೂ. ಹಣ ಪಡೆಯುತ್ತವೆ. ಅದು ಅರಣ್ಯ ಇಲಾಖೆಗೆ ಆದಾಯವಾಗದೇ ಕೆಲವರ ಜೇಬು ಸೇರುತ್ತಿದೆ. ಇದರ ಹಿಂದೆ ಕೆಲಸ ಮಾಡುವುದು ಸಾಹೇಬ್ರ ಸಫಾರಿ.
ಕೆಲವೊಮ್ಮೆ ಅನಾಹುತಗಳು ಆದಾಗ ಇಂಥ ಸಫಾರಿಯ ಮೇಲೆ ನಿಯಂತ್ರಣ ಹೇರಲಾಗುತ್ತದೆ ಯಾದರೂ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅರಣ್ಯ ಇಲಾಖೆಗೂ ಸಾಧ್ಯವಾಗುತ್ತಿಲ್ಲ.  ಸಫಾರಿ ಹೆಸರಿನಲ್ಲಿ ರಾಜಸ್ತಾನ, ಮಧ್ಯ ಪ್ರದೇಶದಲ್ಲಿ ನಡೆದಿರುವ ಅನಾಹುತಗಳ ಫಲ ವನ್ಯಜೀವಿಗಳ ಮಾರಣ ಹೋಮ. ಕರ್ನಾಟಕದಲ್ಲಿ ಎಚ್ಚೆತ್ತು ಕೊಳ್ಳುವುದು ಯಾವಾಗ?

ಗಂಗೋತ್ರಿ ಶಾಲೆ ‘ಕೆಲ’ ಮಕ್ಕಳಿಗೆ ನಿತ್ಯ ಶನಿವಾರ !

ಚೀ.ಜ.ರಾಜೀವ ಮೈಸೂರು
ಮಾನಸ ಗಂಗೋತ್ರಿಯ ಅಂಗಳದಲ್ಲಿರುವ  ಈ ಶಾಲೆಯ ಕೆಲವು ಮಕ್ಕಳಿಗೆ ನಿತ್ಯವೂ ಶನಿವಾರ !
ಏಕೆಂದರೆ ಈ ಎಲ್ಲ ಮಕ್ಕಳು ಬೆಳಗ್ಗೆ ೮ರ ಸುಮಾರಿಗೆ ಶಾಲೆಗೆ ಬಂದರೆ, ವಾಪಸ್ ಮನೆಗೆ ಮರಳುವುದು ಸಂಜೆ ೬ರ ಬಳಿಕವೆ. ಹಿಂದಿರುಗುವ ವಿಚಾರದಲ್ಲಿ ಮಾತ್ರ ಶನಿವಾರ ದೊರಕುವ ಅರ್ಧದಿನದ ರಜೆಯ ಮಜೆ ಇಲ್ಲ. 
ಶೈಕ್ಷಣಿಕವಾಗಿ ಹಿಂದುಳಿದ  ಮಕ್ಕಳಿಗೆ  ನೀಡುವ  ಪರಿಹಾರ ಬೋಧನೆ  ಮಾದರಿಯ ತರಗತಿಗಳು, ಫಲಿತಾಂಶವನ್ನು ಸುಧಾರಿಸಲು ಮಕ್ಕಳಿಗೆ ವಿಶೇಷ ತರಗತಿಗಳು ಇಲ್ಲಿ ನಡೆಯುತ್ತವೆಯಾದರೂ, ಬೆಳಗ್ಗೆ ೮ ರಿಂದ ಸಂಜೆ ೬ರವರೆಗೆ ಶಾಲೆಯಲ್ಲಿ ಉಳಿಯುವ ಮಕ್ಕಳಿಗೂ ಇಂಥ ತರಗತಿಗಳಿಗೂ ನೇರ ಸಂಬಂಧವಿರುವುದಿಲ್ಲ.  ಮೇಷ್ಟ್ರು ಸೇರಿ ದಂತೆ ಯಾರು ಏನೇ ಹೇಳಲಿ- ಬಿಡಲಿ ಕೆಲವು ಮಕ್ಕಳು ಶಾಲೆಗೆ ಬಹುಬೇಗ ಬಂದೇ ಬರುತ್ತಾರೆ. ಏನಿದು ಎಂಬ ಅಚ್ಚರಿಯೇ ?, ಇಂಥದ್ದೊಂದು ಕುತೂಹಲದ ಜಾಡು ಹಿಡಿದು ಹೊರಟರೆ, ಸಿಗುವ ಉತ್ತರ ಮೈಸೂರಿನ ಕೂಲಿ ಕಾರ್ಮಿಕ ಕುಟುಂಬಗಳ  ಕಥೆಯನ್ನೇ ತೆರೆದಿಡುತ್ತದೆ. ಅಂದಹಾಗೆ ಶಾಲೆಗೆ ಬಹುಬೇಗ ಬರುವ ಈ ಎಲ್ಲ ಮಕ್ಕಳು ಕೂಲಿ ಕಾರ್ಮಿಕರ ಕುಟುಂಬದವರು.
ಯಾಕೆ ಬೇಗ ಬರುತ್ತಾರೆ
ಮೈಸೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ರುವ ಮಾನಸ ಗಂಗೋತ್ರಿ ಶಿಕ್ಷಣ ಸಂಸ್ಥೆ ನಡೆಸುವ   ಈ ಪ್ರಾಥಮಿಕ ಹಾಗೂ ಪ್ರೌಢ  ಶಾಲೆಗೆ  ಸುತ್ತ ಮುತ್ತಲಿನ ವಸತಿ ಪ್ರದೇಶಗಳಾದ ವಿಜಯಶ್ರೀ ಪುರ, ತೊಣಚಿ ಕೊಪ್ಪಲು, ಜನತಾ ನಗರ, ಪಡುವಾರಹಳ್ಳಿ, ಹಿನಕಲ್, ಬೋಗಾದಿ ಮತ್ತು ಗಂಗೋತ್ರಿ ಲೇ ಔಟ್‌ನ ಮಕ್ಕಳು ಕಲಿಯಲು ಬರುತ್ತಾರೆ. ಶಾಲೆಗೆ ಕೂಗಳತೆಯಲ್ಲಿರುವ ಗಂಗೋತ್ರಿ ಅಧ್ಯಾಪಕರ  ವಸತಿ ಗೃಹಗಳಿಂದ ಯಾವ ಮಕ್ಕಳೂ ಶಾಲೆಗೆ ಬರುವುದಿಲ್ಲ.  ಸಾಮಾನ್ಯವಾಗಿ ಶಾಲೆಗೆ ಬರುವ ಬಹುತೇಕ ಮಕ್ಕಳು ಬಡ ಕುಟುಂಬದ ಹಿನ್ನೆಲೆಯವರು ಮತ್ತು ಶ್ರಮ ಜೀವಿಗಳು.  ಈ ಸಂಗತಿಯೇ ಪರೋಕ್ಷವಾಗಿ ಮಕ್ಕಳು ಬಹುಬೇಗ ಶಾಲೆಗೆ  ಬರುವಂಥ ಸ್ಥಿತಿಗೆ ತಳ್ಳಿದೆ !
‘ಇಲ್ಲೇ ವಿಜಯಶ್ರೀಪುರದಲ್ಲಿ ನನ್ನ  ಮನೆ ಇದೆ. ಅಪ್ಪ ಬೆಳ್ಳಂಬೆಳಗ್ಗೆ ಗಾರೆ ಕೆಲಸಕ್ಕೆಂದು ಕುವೆಂಪು ನಗರದ ಕಡೆ ಹೋಗುತ್ತಾನೆ. ಅಮ್ಮ ಎದ್ದ ತಕ್ಷಣ ಮನೆಗೆಲಸ ಮಾಡಲು ಹೋಗುತ್ತಾಳೆ. ಉಳಿಯು ವುದು ನಾನು ಮತ್ತು ನನ್ನ ತಮ್ಮ. ಮನೆಯಲ್ಲಿ ಇಬ್ಬರೇ ಉಳಿದರೆ ಜಗಳ ಆಡುತ್ತೇವೆ ಎಂದು, ತಾವು ಕೆಲಸಕ್ಕೆ ಹೋಗುವಾಗಲೇ ನಮ್ಮನ್ನೂ  ಇಲ್ಲಿಗೆ ತಂದು ಬಿಡುತ್ತಾರೆ. ಹಾಗಾಗಿ ದಿನಾ(ನಿತ್ಯ) ಬೆಳಗ್ಗೆನೇ ಶಾಲೆಗೆ ಬರುತ್ತೇನೆ’ ಎನ್ನುತ್ತಾನೆ ಶಾಲೆಯ ವಿದ್ಯಾರ್ಥಿ ಸೋಮು(ಹೆಸರು ಬದಲಿಸ ಲಾಗಿದೆ). ನಾನೂ ಬೆಳಗ್ಗೆನೇ ಶಾಲೆಗೆ ಬರುತ್ತೇನೆ. ಮೊದಲೆಲ್ಲಾ  ಅಪ್ಪ ಒಬ್ಬರೇ ತಳ್ಳೋ ಗಾಡಿಯಲ್ಲಿ  ವ್ಯಾಪಾರ ಮಾಡಲು ಹೋಗುತ್ತಿದ್ದರು.  ವರ್ಷ ದಿಂದ ಅಮ್ಮನೂ  ಅವರ ಜತೆ  ಹೋಗುತ್ತಾರೆ.  ಮನೆಯಲ್ಲಿ ಯಾರೂ ಇರುವುದಿಲ್ಲ. ಹಾಗಾಗಿ ಬಂದು ಬಿಡುತ್ತೇವೆ’ ಎನ್ನುತ್ತಾನೆ  ಜನತಾ ನಗರದಿಂದ ಬರುವ  ರಾಜೇಶ್(ಬೇರೆ ಹೆಸರು). ಹೀಗೆ ಸುಮಾರು ೫ ರಿಂದ ೧೦ ಮಕ್ಕಳು ಶಾಲೆಗೆ ಬಹುಬೇಗನೇ ಬರುತ್ತಾರೆ.
‘ನಮ್ಮ ಶಾಲೆಗೆ ಮಕ್ಕಳನ್ನು ಕಳುಹಿಸುವ ಪಾಲಕರ ಮನೆಯ ಚಿತ್ರಣವೇ ಬದಲಾಗುತ್ತಿದೆ. ತರಕಾರಿ- ಸೊಪ್ಪು ಮಾರಾಟ ಮಾಡೋರು, ಗಾರೆ ಕೆಲಸಕ್ಕೆ ಹೋಗುವವರೇ ಹೆಚ್ಚು. ಇತ್ತೀಚಿನ ವರ್ಷಗಳಲ್ಲಿ ಅಮ್ಮಂದಿರು ಮನೆಯಲ್ಲಿ ಇರು ವುದಿಲ್ಲ. ಹಾಗಾಗಿ, ಕೆಲವು ಮಕ್ಕಳು ಬಹುಬೇಗ ಬರುತ್ತಾರೆ. ಆದರೆ, ಈ ಸಮಸ್ಯೆ ಪ್ರಾಥಮಿಕ ಶಾಲೆಯಲ್ಲಿ ಕಡಿಮೆ ಎನ್ನುತ್ತಾರೆ’  ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ. ಎಸ್. ಶಾಂತಲ.
ಪ್ರೌಢಶಾಲೆಯಲ್ಲಿ ಹೆಚ್ಚು
ಶಾಲೆಗೆ ಬಹುಬೇಗ ಬರುವವರಲ್ಲಿ ಪ್ರೌಢ ಶಾಲೆ ಮಕ್ಕಳೇ ಹೆಚ್ಚು. ನಮ್ಮಲ್ಲಿ ಪರಿಹಾರ ಬೋಧನೆ ಮಾದರಿ ಒಂದಿಷ್ಟು ತರಗತಿ ನಡೆಸುತ್ತೇವೆ. ಶೈಕ್ಷಣಿಕ ವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುತ್ತೇವೆ. ಆ ಕಾರಣಕ್ಕೆ ಬಹಳಷ್ಟು ವಿದ್ಯಾರ್ಥಿ ಗಳು ಶಾಲೆ ಆರಂಭವಾಗುವುದಕ್ಕಿಂತ ಮುಂಚಿತ ವಾಗಿಯೇ ಬರುತ್ತಾರೆ.  ಇವರಲ್ಲದೆ, ಬೆಳಗ್ಗೆಯೇ ಕೂಲಿಗೆ ತೆರಳುವ ಕೆಲವು ಪಾಲಕರು ಕೂಡ ಮಕ್ಕಳನ್ನು ಶಾಲೆಗೆ ತಂದು ಬಿಟ್ಟು ಹೋಗುತ್ತಾರೆ. ಅವರ ಸಂಖ್ಯೆ ಕಡಿಮೆ ಎನ್ನುತ್ತಾರೆ  ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯ ಅಲ್ಲದಾಸಯ್ಯ. ‘ತರಗತಿ ಆರಂಭವಾಗು ವುದಕ್ಕೂ ಮುನ್ನವೇ ಶಾಲೆಗೆ ಬರುವ ಮಕ್ಕಳ ಬಗ್ಗೆ ನಿಗಾ ಇಡುವಂತೆ ಸೂಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಂದನ್ ಪತ್ರಿಕೆಗೆ ತಿಳಿಸಿದರು.

ಯುನಾನಿ ಚಿಕಿತ್ಸೆಗೆ ಜಿಂಕೆ ಬೇಟೆ: ಕೋಟ್ಯಾಂತರ ರೂ. ದಂಧೆ

ಕುಂದೂರು ಉಮೇಶಭಟ್ಟ, ಮೈಸೂರು
ಇದು ಚಿತ್ರನಟ ಸಲ್ಮಾನ್‌ಖಾನ್ ಕೃಷ್ಣಮೃಗ ಬೇಟೆ ಯಾಡಿ ಸಿಕ್ಕಿ ಬಿದ್ದ ಪ್ರಕರಣದ ಇನ್ನೊಂದು ಮುಖ. ನಡೆದಿರುವುದು ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ. ಇಲ್ಲಿ ವರ್ಷಗಳಿಂದ ನಡೆಯುತ್ತಿದ್ದುದು ಮೇಲ್ನೋಟಕ್ಕೆ ಮೋಜಿನ ಸಫಾರಿ. ಆದರೆ ಒಳಸುಳಿ ಯಲ್ಲಿ ಜಿಂಕೆ ಬೇಟೆ. ಇದರ ಹಿಂದೆ ದುಬೈ, ಸೌದಿ ಅರೇಬಿಯಾ ಸೇರಿದಂತೆ ಪ್ರಮುಖ ದೇಶಗಳ ಸಂಬಂಧ.
ಯುನಾನಿ ಚಿಕಿತ್ಸೆಗೆಂದೇ ಕರ್ನಾಟಕದ ವನ್ಯಧಾಮ ಗಳಲ್ಲಿ ಜಿಂಕೆ ಬೇಟೆಯಾಡಿ ವಿದೇಶಗಳಿಗೆ ಸರಬರಾಜು ಮಾಡಿ ಕೋಟ್ಯಂತರ ಹಣ ಮಾಡುತ್ತಿದ್ದ ಅಂತಾ ರಾಷ್ಟ್ರೀಯ ಜಾಲವೊಂದನ್ನು ಚಾಮರಾಜನಗರ ಜಿಲ್ಲೆ ಯಲ್ಲಿ ಬೇಧಿಸಲಾಗಿದೆ. ಅದೂ ಅರಣ್ಯ ಇಲಾಖೆ ಇತಿಹಾಸ ದಲ್ಲೇ ಮೊದಲ ಬಾರಿ ಮೊಬೈಲ್ ಟ್ರ್ಯಾಕರ್ ತಂತ್ರ ಜ್ಞಾನ ಬಳಸಿ ಪ್ರಾಣಿ ಹಂತಕರನ್ನು ಪತ್ತೆ ಹಚ್ಚಿರು ವುದು ವಿಶೇಷ. ಇದಕ್ಕೆ ಸಾಥ್ ನೀಡಿದ್ದು ಪೊಲೀಸ್ ಇಲಾಖೆ.
ಜಿಂಕೆ ಬೇಟೆಯಾಡಿದ ಮೂವರು ಈಗ ಸಿಕ್ಕಿ ಬಿದ್ದಿದ್ದಾರೆ. ಜಿಂಕೆ ಬೇಟೆ ಹಾಗೂ ಅದರ ಬಳಕೆಯ ಮಾಸ್ಟರ್ ಮೈಂಡ್ ದುಬೈಗೆ ಪರಾರಿಯಾಗಿದ್ದಾನೆ.
ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿರುವ ಮುಸ್ತಾಫ ಯುನಾನಿಯ ಡಾ.ಹಕೀಂ ಸೈಯದ್ ಅಮ್ರಾನ್ ಅಹಮದ್ ಅವರ ಪುತ್ರ ಇಮ್ರಾನ್ ಜಿಂಕೆ ಬೇಟೆಯಾಡಿದ ಪ್ರಮುಖ ಆರೋಪಿ. ಈತ ತಲೆಮರೆಸಿ ಕೊಂಡಿದ್ದಾನೆ. ಈತನೊಂದಿಗೆ ಇದ್ದ ಚಿಕ್ಕಮಗಳೂರಿನ ಪ್ಲಾಂಟರ್ ಶೋಯೆಬ್, ಮೈಸೂರಿನ ಡರ್ಟ್ ಟ್ರಾಕರ್(ಬೈಕ್) ತನ್ವೀರ್ ಹಾಗೂ ಸ್ಥಳೀಯ ಕಾಲೇಜೊಂದರಲ್ಲಿ ಬಿಬಿಎಂ ವಿದ್ಯಾರ್ಥಿ ನವಾಜ್ ಬಂಧಿತರು.
ಕೊಂದು ಪರಾರಿ: ಘಟನೆ ನಡೆದಿದ್ದು ಜೂನ್ ೨೫ ರಂದು. ಚಾಮರಾಜನಗರ ಜಿಲ್ಲೆಯ ಕ್ಯಾತೇದೇವರ ಗುಡಿ (ಕೆ.ಗುಡಿ) ಪ್ರಮುಖ ವನ್ಯಧಾಮ. ಉನ್ನತಾಧಿಕಾರಿ ಗಳ ಅನುಮತಿಯಿಂದ ನಾಲ್ವರ ತಂಡ ಅಲ್ಲಿಗೆ ಆಗ ಮಿಸಿದೆ. ಕೆ.ಗುಡಿಯಿಂದ ಬೂದಿಪಡಗ ಮಾರ್ಗವಾಗಿ ಸಂಜೆ ಹೊರಟ ತಂಡ ಗುಂಡಿನಿಂದ ಜಿಂಕೆಯೊಂದನ್ನು ಕೊಂದಿದೆ. ಕೊಂದ ಜಿಂಕೆಯನ್ನು ಕಾಡಿನ ರಸ್ತೆಯಲ್ಲಿ ಹಾಕಿದ ತಂಡ ಸ್ವಲ್ಪ ಹೊತ್ತಿನ ನಂತರ ಅಲ್ಲಿಗೆ ಬಂದಿದೆ. ಜಿಂಕೆಯನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಅಲ್ಲಿಂದ ಹೊರಟಿದೆ. ಇದೇ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಅದೇ ಮಾರ್ಗದಲ್ಲಿ ಬಂದಿದೆ. ಕಾರು ಜೋರಾಗಿ ಓಡಿದ್ದನ್ನು ಕಂಡು ಎಚ್ಚೆತ್ತು ಕೊಂಡ ಅಧಿಕಾರಿಗಳು ಬೂದಿಪಡಗ ಮಾರ್ಗದಲ್ಲಿ ತೆರಳಿದ್ದಾರೆ. ಅಷ್ಟರಲ್ಲಿ ಕಾರೊಂದು ಅರಣ್ಯ ಚೆಕ್‌ಪೋಸ್ಟ್‌ನಿಂದ ಪರಾರಿಯಾಗಿ ರುವುದು ಕಂಡಿದೆ. ಕೂಡಲೇ ಅರಣ್ಯ ಇಲಾಖೆಯವರು ಕಾರನ್ನು ಬೆನ್ನಟ್ಟಿ ದರೂ ಪ್ರಯೋಜನವಾಗಲೇ ಇಲ್ಲ. ಕಾರಿನ ಸಂಖ್ಯೆ (ಕೆಎ೧೮-ಎನ್೬೩೩) ಆಧರಿಸಿ ತಪಾಸಣೆ ನಡೆಸಿದಾಗ ಮೊದಲು ಸಿಕ್ಕ ಮಾಹಿತಿ ಚಿಕ್ಕ ಮಗಳೂರಿನ ಪ್ಲಾಂಟರ್ ಶೋಯೆಬ್‌ನದ್ದು. ಆನಂತರ ತನಿಖೆ ಮುಂದುವರೆಸಿದಾಗ ಅಲ್ಪಸ್ವಲ್ಪ ಮಾಹಿತಿ ದೊರೆತರೂ ಅದು ಸಾಕ್ಷಿ ದೃಷ್ಟಿಯಿಂದ ಪರಿಪೂರ್ಣವಾಗಲೇ ಇಲ್ಲ.
ಮೊಬೈಲ್ ಟ್ರ್ಯಾಕರ್: ಪ್ರಕರಣ ಬಯಲಾದಾಗ ಚಾಮರಾಜನಗರ ಡಿಸಿಎಫ್ ಆಗಿದ್ದು ಈಗ ಬೆಂಗ ಳೂರಿಗೆ ವಗಾರ್ವಣೆಗೊಂಡಿರುವ ದಕ್ಷ ಅಧಿಕಾರಿ ಬಿಸ್ವಜೀತ್ ಮಿಶ್ರ, ಜಿಂಕೆ ಬೇಟೆಗಾರರ ಹಿಂದೆ ದೊಡ್ಡ ಜಾಲವೇ ಇರುವ ಅನುಮಾನದೊಂದಿಗೆ ಸಂಪರ್ಕಿ ಸಿದ್ದು ಪರಿಚಿತ ಮೈಸೂರು ಪೊಲೀಸ್ ಅಧಿಕಾರಿಯನ್ನು. ಆಗ ದಕ್ಷಿಣ ವಲಯ ಐಜಿಪಿ ಈ ಪ್ರಕರಣದ ತನಿಖೆಗೆ ನಿಯೋಜಿಸಿದ್ದು ವಿಶೇಷ ತಂಡದ ಡಿವೈಎಸ್ಪಿ ಚನ್ನಬಸವಣ್ಣ ಅವರನ್ನು. ಮಿಶ್ರ ಅವರೊಂದಿಗೆ ಚರ್ಚಿಸಿದ ಚನ್ನಬಸವಣ್ಣ ಹಾಗೂ ಅರಣ್ಯ ಇಲಾಖೆ ತಂಡಕ್ಕೆ ಹೊಳೆದಿದ್ದು ಮೊಬೈಲ್ ಬಳಕೆ.
ಆ ದಿನ(ಜೂನ್ ೨೫) ಕೆ.ಗುಡಿ, ಚಾಮರಾಜನಗರ ಹಾಗೂ ಯಳಂದೂರು ಭಾಗದಲ್ಲಿ ಹೆಚ್ಚು ಬಾರಿ ಬಳಕೆಯಾದ ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕರ್ ಬಳಸಿ ಪತ್ತೆ ಹಚ್ಚುವ ಯೋಚನೆ ಹೊಳೆಯಿತು. ಅದರಂತೆ ಸಂಸ್ಥೆಯವರಿಗೆ ಕೇಳಿದಾಗ ಸಿಕ್ಕಿ ಬಿದ್ದಿದ್ದು ಪ್ರಮುಖ ಆರೋಪಿ ಬೆಂಗಳೂರಿನ ಸಲ್ಮಾನ್. ಜೂನ್ ೨೫ರಂದು ೨ ಗಂಟೆ ಅವಧಿಯಲ್ಲಿ ನೂರಾರು ಕರೆಗಳನ್ನು ಈತ ಮಾಡಿದ್ದ. ಆತನ ನಂಬರ್ ಆಧರಿಸಿ ತನಿಖೆ ತೀವ್ರಗೊಳಿಸಿದಾಗ ಮೂವರು ಸಿಕ್ಕಿ ಬಿದ್ದರು. ಈಗ ಮೂವರು ಜೈಲು ಸೇರಿದ್ದರೆ, ಜಿಂಕೆ ಬೇಟೆಯ ಕಿಂಗ್ ಪಿನ್ ಇಮ್ರಾನ್ ದುಬೈಗೆ ಪರಾರಿಯಾಗಿದ್ದಾನೆ.
ಬಂಧಿತರನ್ನು ಚಾಮರಾಜನಗರ ಜೆಎಂಎಸ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸೆ.೪ರವರೆಗೆ ನ್ಯಾಯಾಂಗಬಂಧನಕ್ಕೆ ಒಪ್ಪಿಸಲಾಗಿದೆ. ಜಿಂಕೆ ಹತ್ಯೆ ಮಾಡಿದ ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಆದರೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸೆರೆಗೆ ಅರಣ್ಯ ಹಾಗೂ ಪೊಲೀಸ್ ಇಲಾಖೆ ಯವರು ಜಂಟಿ ಕಾರ‍್ಯಾಚರಣೆ ಆರಂಭಿಸಿದ್ದಾರೆ.
ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರ ಕ್ಷಣಾಧಿಕಾರಿ ಬಿ.ಕೆ.ಸಿಂಗ್ ಕೊಳ್ಳೇಗಾಲಕ್ಕೆ ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಜತೆಗೆ ಮೈಸೂರು ಮೂಲದ ಸ್ವಯ ಸೇವಾ ಸಂಸ್ಥೆಯೊಂದು ವೈಲ್ಡ್‌ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋ ಈ ಪ್ರಕರಣ ಕೈಗೆತ್ತಿಕೊಳ್ಳುವಂತೆ ಒತ್ತಡ ಹೇರಲು ಮುಂದಾಗಿದೆ.

೨ ಲಕ್ಷ ಕಲಿಕಾರ್ಥಿಗಳನ್ನು ಸೆಳೆಯಲು ಗುರಿ

ಚೀ. ಜ. ರಾಜೀವ ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಹೊಸ ಹೆಜ್ಜೆಯೆಂದರೆ ರಾಜ್ಯದ ೧೦ ಕಡೆ  ಮಿನಿ ಮುಕ್ತ  ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದು.
‘ಮುಕ್ತ ವಿವಿ  ಈಗಾಗಲೇ ಆರು ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದ್ದು, ಬಹಳ ಹಿಂದಿನಿಂದಲೇ ಕಾರ್ಯನಿರ್ವಹಿಸುತ್ತಿವೆ. ಇದರ ಜತೆಗೆ ಈ ವರ್ಷ ಹೊಸದಾಗಿ ಇನ್ನೂ ನಾಲ್ಕು ಪ್ರದೇಶಿಕ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಒಂದೊಂದು ಪ್ರಾದೇಶಿಕ ಕೇಂದ್ರವೂ ಒಂದೊಂದು ಮಿನಿ ವಿವಿ ಮಾದರಿಯಲ್ಲಿ ಕಾರ‍್ಯ ನಿರ್ವಹಿಸಬೇಕು’ ಎನ್ನು ತ್ತಾರೆ ವಿವಿ ಕುಲಪತಿ ಪ್ರೊ. ಕೆ. ಎಸ್. ರಂಗಪ್ಪ .
ಹಾಗೆ ನೋಡಿದರೆ, ಪ್ರಾದೇಶಿಕ ಕೇಂದ್ರಗಳ  ಕಲ್ಪನೆ ಹೊಸದೇನಲ್ಲ. ಆದರೆ,  ಅವುಗಳ ಕಾರ್ಯವೈಖರಿ ಮಾತ್ರ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಒಬ್ಬ ಬೋಧಕೇತರ ವರ್ಗದ ಸಿಬ್ಬಂದಿಯನ್ನು ಇಂಥ ಕೇಂದ್ರಗಳ ಉಸ್ತುವಾರಿಗೆ ನೇಮಿಸಲಾಗಿತ್ತು. ಮೂಲ ಸೌಕರ್ಯಗಳ ಕೊರತೆಯೂ ಇತ್ತು. ಹಾಗಾಗಿ ವಿವಿ ಆಡಳಿತ ಎಲ್ಲ ಹಳೆ ಕೇಂದ್ರಗಳಿಗೆ ಕಾಯಕಲ್ಪ ನೀಡಲು ನಿರ್ಧರಿಸಿದೆ. ಒಂದು ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಸೇವಾ ಶಿಸ್ತನ್ನು ನಿಗದಿ ಪಡಿಸಿ, ಹೊಸ ನಾಲ್ಕು ಹೊಸ  ಕೇಂದ್ರಗಳನ್ನು ಆರಂಭಿಸುತ್ತಿದೆ. ಈ ಎಲ್ಲವೂಮಿನಿ ಮುಕ್ತ ವಿಶ್ವವಿದ್ಯಾನಿಲಯಗಳಂತಾಗಲಿವೆ. ಅದಕ್ಕಾಗಿ ಎಲ್ಲ ಅಗತ್ಯ ಮೂಲ ಸೌಕರ‍್ಯ ಕಲ್ಪಿಸಿಕೊಡಲು ವಿವಿ ನಿರ್ಧರಿಸಿದೆ. 
ನಾಲ್ಕು ಹೊಸ ಕೇಂದ್ರಗಳು: ಮೊದಲ ಹೆಜ್ಜೆಯಾಗಿ ಬೆಂಗಳೂರು, ಶಿವಮೊಗ್ಗ, ಧಾರವಾಡ, ದಾವಣಗೆರೆ, ಗುಲ್ಬರ್ಗಾ, ಮಂಗಳೂರು ಕೇಂದ್ರಗಳನ್ನು ಶಕ್ತಿಯುತ ಗೊಳಿಸಬೇಕು. ಈ ವರ್ಷದಿಂದ ಹಾಸನ, ಚಾಮರಾಜ ನಗರ, ಬಳ್ಳಾರಿ ಮತ್ತು ತುಮಕೂರಿನಲ್ಲಿ ಕೇಂದ್ರ ಗಳನ್ನು ತೆರೆಯಲಾಗಿದೆ. ಎಲ್ಲ ಕೇಂದ್ರಗಳಿಗೂ ಪೂರ್ಣಾವಧಿ ನಿರ್ದೇಶಕ ಹಾಗೂ ಸಹಾಯಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಈ ಪೈಕಿ  ೯ ಜನ  ಪಿಎಚ್.ಡಿ ಪೂರ್ಣಗೊಳಿಸಿ ರುವ ಪ್ರಾಧ್ಯಾಪಕರು.
‘ಪ್ರಾದೇಶಿಕ ನಿರ್ದೇಶಕರ  ಸ್ಥಾನಗಳಿಗೆ ಒಂದು ಶೈಕ್ಷಣಿಕ ಘನತೆಯನ್ನು ತುಂಬಲು ಹಾಗೂ ಕೇಂದ್ರಗಳನ್ನು ಮಿನಿ ವಿವಿಗಳನ್ನಾಗಿ ರೂಪಿಸಲು ಇಂಥ ಶಕ್ತಿಯುತ ಅಭ್ಯರ್ಥಿಗಳನ್ನು  ನೇಮಿಸಲಾಗಿದೆ. ಇನ್ಮುಂದೆ, ಇಲ್ಲಿಯೇ ವಿವಿಯ ವಿವರಣಾ ಪುಸ್ತಕ, ಬೋಧನಾ ಸಾಮಗ್ರಿಯನ್ನು ನೀಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮೀಣ ವಿದ್ಯಾರ್ಥಿಗಳು ಮೈಸೂರಿಗೆ ಬರುವುದು ತಪ್ಪುತ್ತದೆ’ ಎನ್ನುತ್ತಾರೆ ರಂಗಪ್ಪ.
ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವವರ ಸಂಖ್ಯೆ ಬಹಳ ಕಡಿಮೆ. ಈಗಿರುವ ಶೇ. ೧೨ರಷ್ಟು ಪ್ರಮಾಣವನ್ನು ೨೦೨೦ರ ವೇಳೆಗಾದರೂ ಶೇ.೩೦ಕ್ಕೆ ತರಬೇಕು ಎಂಬುದು ಕೇಂದ್ರ ಸರಕಾರದ ಕನಸು. ನಮ್ಮ ದೇಶದ ಸಾಂಪ್ರದಾಯಿಕ ವಿವಿಗಳಿಂದ ಈ ಕನಸು ನನಸು ಅಸಾಧ್ಯ. ಮುಕ್ತ ವಿವಿಗಳು ಚಟುವಟಿಕೆ ವಿಸ್ತರಿಸಬೇಕು. ೨೦೦೯-೧೦ನೇ ಸಾಲಿನಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ೧ ಲಕ್ಷಕ್ಕೂ ಹೆಚ್ಚಿತ್ತು. ಈ ವರ್ಷ ೨ ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕೆಂಬುದು ವಿವಿ ಗುರಿ. ೧೮ ರಿಂದ ೮೦ರ ವಯೋಮಾನದವರನ್ನು ಸೆಳೆಯಲು ವಿವಿ ಸನ್ನದ್ಧವಾಗಿದೆ ಎಂದು ವಿವಿ ಈ ವರ್ಷದ ವಿವರಣಾ ಪುಸ್ತಕದಲ್ಲಿ ಹೇಳಿಕೊಂಡಿದೆ.
ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರಕಾರ ಬಯಸುವಷ್ಟು  ವಿದ್ಯಾರ್ಥಿಗಳನ್ನು ಸೆಳೆಯಲು ಜಿಲ್ಲೆಗೊಂದು ಮುಕ್ತ ವಿವಿ ಬೇಕು ಎಂದು  ಇದೇ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಸುಧಾರಾವ್ ತಮ್ಮ ಅಧಿಕಾರವಧಿಯ  ಕಡೆ ದಿನಗಳಲ್ಲಿ ಸಲಹೆ ನೀಡಿದ್ದರು.  ಅದು ಸಾಧ್ಯವಾಗದ ಮಾತು ಎಂದು ಅಂದಿನ ಉನ್ನತ ಶಿಕ್ಷಣ ಸಚಿವ ನಕ್ಕು ಸುಮ್ಮನಾಗಿದ್ದರು. ಆದರೆ, ಈಗ  ಪ್ರಾದೇಶಿಕ ಕೇಂದ್ರಗಳನ್ನೇ ಮಿನಿ ಮುಕ್ತ ವಿವಿ ಮಾದರಿಯಲ್ಲಿ ರೂಪಿಸಲಾಗುತ್ತಿದೆ. 

ಸೂಳೆಕೆರೆಯ ನೂರಾರು ಎಕರೆ ಒತ್ತುವರಿ

ರವಿ ಸಾವಂದಿಪುರ ಭಾರತಿನಗರ
ಮದ್ದೂರು ತಾಲೂಕಿನ ಅತಿ ದೊಡ್ಡ ಕೆರೆ ಎಂದೇ ಕರೆಯುವ  ಮುಟ್ಟನಹಳ್ಳಿ ಸಮೀಪದ ಸೂಳೆಕೆರೆಯ ನೂರಾರು ಎಕರೆ ಪ್ರದೇಶ ಒತ್ತುವರಿಯಾಗಿದೆ.
೯೭೪ ಎಕರೆ ವಿಸ್ತೀರ್ಣವುಳ್ಳ ಸೂಳೆಕೆರೆಯ ಸುಮಾರು ೨೦೦ ಎಕರೆ ಪ್ರದೇಶವನ್ನು ಅಕ್ಕಪಕ್ಕದ ಜಮೀನುಗಳ ಮಾಲೀಕರು ಮತ್ತು ಕೆಲವು ಪಟ್ಟಭದ್ರರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದಾರೆ.
೧೮೯೫ರಲ್ಲಿ  ವೇಶ್ಯೆಯೊಬ್ಬಳು ಸಮಾಜ ಸೇವಾ ದೃಷ್ಟಿಯಿಂದ ಮುಟ್ಟನಹಳ್ಳಿ ಸಮೀಪ ಈ ಕೆರೆ ನಿರ್ಮಿ ಸಿದಳೆಂಬುದನ್ನು ದಾಖಲೆಗಳು ತಿಳಿಸುತ್ತವೆ. ಶತಮಾನ ಕಂಡಿರುವ ಈ ಕೆರೆಯಿಂದ ಅಂದಾಜು ೧೫ ಸಾವಿರ ಎಕರೆ ಪ್ರದೇಶಕ್ಕೆ  ನೀರುಣಿಸಲಾಗುತ್ತಿದೆ.
ಮದ್ದೂರು, ಮಂಡ್ಯ ಎರಡೂ ತಾಲೂಕುಗಳಲ್ಲಿ ಕೆರೆ ಅಚ್ಚುಕಟ್ಟಿನ ಜಮೀನುಗಳಿವೆ. ವಿಶ್ವೇಶ್ವರಯ್ಯ ನಾಲೆಯಿಂದ ಹಾಗೂ ಕೆಆರ್‌ಎಸ್ ಜಲಾಶಯದ ಸೋರಿಕೆ ನೀರು ಮಂಡ್ಯ ಮಾರ್ಗವಾಗಿ ಈ ಕೆರೆಗೆ  ಬರುತ್ತದೆ.
ಕೆರೆಯ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ತಲಾ ಎರಡು ನಾಲೆಗಳನ್ನು ನಿರ್ಮಿಸಿ, ಅಚ್ಚುಕಟ್ಟು  ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ.
ಕೆರ ಭರ್ತಿಯಾದ ಬಳಿಕ ಹೆಚ್ಚುವರಿ ನೀರನ್ನು ಹೆಬ್ಬಾಳ ಚೆನ್ನಯ್ಯ ನಾಲೆಗೆ ಹರಿಸಲಾಗುತ್ತದೆ. ಹೀಗಾಗಿ ಹೆಬ್ಬಾಳ ಚೆನ್ನಯ್ಯ ನಾಲೆ ವ್ಯಾಪ್ತಿಯ ರೈತರ ಜಮೀನು ಗಳಿಗೂ ಸೂಳೆಕೆರೆಯ ನೀರು ದೊರೆಯುತ್ತಿದೆ.ವಿಶ್ವೇಶ್ವರಯ್ಯ ನಾಲೆ ವಿಭಾಗದ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದ ಈ ಸೂಳೆಕೆರೆ ಯನ್ನು ೧೯೯೭-೯೮ರಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ವಹಿಸಲಾ ಯಿತು. ೨೦೦೭- ೦೮ರಲ್ಲಿ  ಕೆರೆ ಹೂಳನ್ನು ೧೪ ಲಕ್ಷ ರೂ. ವೆಚ್ಚದಲ್ಲಿ ತೆಗೆಸಲಾ ಯಿತು.
ಸುಮಾರು ೨೦೦ ಎಕರೆ ಪ್ರದೇಶವನ್ನು ಹತ್ತಾರು ವರ್ಷಗಳಿಂದಲೂ ಒತ್ತುವರಿ ಮಾಡಿಕೊ ಳ್ಳಲಾಗಿದೆ.
ಕೆರೆಯ ಒಡಲಲ್ಲಿ ಮತ್ತೆ ಹೂಳು ಶೇಖ ರಣೆ ಯಾಗುತ್ತಿದೆ. ಗಿಡಗಂಟಿ ಗಳು, ವಡಕೆಗಳು ಬೆಳೆದು ನೀರು ಶೇಖರಣೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಸಾವಿರಾರು ಎಕರೆಗೆ ನೀರುಣಿಸುವ ಈ ಬೃಹತ್ ಕೆರೆ ಒತ್ತುವರಿಯಿಂದಾಗಿ ದಿನಗಳೆದಂತೆ ಕಿರಿದಾಗುತ್ತಿದೆ. ಜತೆಗೆ, ತನ್ನ ಸೊಬಗು, ಮಹತ್ವ ಕಳೆದುಕೊಳ್ಳುತ್ತಿದೆ.
ಕೆರೆಗೆ ಹೊಂದಿಕೊಂಡಂತಿರುವ ಅಕ್ಕಪಕ್ಕದ ಜಮೀನುಗಳ ಮಾಲೀಕರು ಮತ್ತು ಕೆಲ ಪಟ್ಟಭದ್ರರು ಒತ್ತುವರಿ ಮಾಡಿ ಕೊಂಡಿ ರುವ ವಿಷಯ ಈಗ ರಹಸ್ಯವಾಗಿ ಉಳಿದಿಲ್ಲ. ಜಿಲ್ಲೆಯಲ್ಲಿ ಕೆರೆ ಒತ್ತುವರಿ ತೆರವು ಕಾರ‍್ಯಾಚರಣೆ ಆರಂಭ ಗೊಂಡಿದೆ. ಆದರೆ, ಇಂಥ ದೊಡ್ಡ ಕೆರೆಯ ತ್ತುವರಿ ತೆರವಿಗೆ ತಾಲೂಕು ಆಡಳಿತ ಮುಂದಾಗದಿರುವುದು ದುರಂತ.
ಸೂಳೆ ಕೆರೆ ಜಮೀನು ಒತ್ತುವರಿ ವಿಚಾರವಾಗಿ ಸೂಳೆಕೆರೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ ಅವರು ನ್ಯಾಯಾಲಯದ ಮೊರೆ ಹೋಗಿ ದ್ದಾರೆ. ಹಲವು ವರ್ಷ ಗಳಿಂದ ಕೆರೆ ಒತ್ತುವರಿ ವಿವಾದ ನ್ಯಾಯಾಲಯದಲ್ಲಿದ್ದು, ಇನ್ನೂ ತೀರ್ಪು ಹೊರ ಬಿದ್ದಿಲ್ಲ.ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯೇ ಕೆರೆಯ ಒತ್ತುವರಿಗೆ ಕಾರಣವೆನ್ನಲಾಗುತ್ತಿದೆ. ಸಂಬಂಧಿಸಿದವರು ಈಗಲಾದರೂ ಇತ್ತ ಗಮನ ಹರಿಸಿ ಕೆರೆ ರಕ್ಷಣೆಗೆ ಮುಂದಾಗಬೇಕಿದೆ.

ಕಳ್ಳರ ಮೇಲೆ ಜಾಗೃತದಳ ಕಣ್ಣು, ಕೋಟಿಗಟ್ಟಲೆ ದಂಡ ವಸೂಲಿ



ವಿಕ ಸುದ್ದಿಲೋಕ ಮೈಸೂರು

ಮೈಸೂರು ಭಾಗದಲ್ಲಿ ಹೆಚ್ಚುತ್ತಿದ್ದಾರೆ ವಿದ್ಯುತ್ ಕಳ್ಳರು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿ(ಸೆಸ್ಕ್) ಜಾಗೃತ ದಳದ ದಂಡ ವಸೂಲಿಯಲ್ಲೂ ಗಣನೀಯ ಏರಿಕೆ...
ದೊಡ್ಡ ದೊಡ್ಡ ಕೈಗಾರಿಕೆಯಿಂದ ಹಿಡಿದು ಮನೆ, ಲಾಡ್ಜ್ ನಿಂದ ಆರಂಭಗೊಂಡು ಬ್ಯೂಟಿಪಾರ್ಲರ್, ಉದ್ಯಮಿಯಿಂದ ಹಿಡಿದು ರೈತರವರೆಗೂ ವಿದ್ಯುತ್ ಕದಿಯುತ್ತಿರುವವರ ಮೇಲೆ ಸೆಸ್ಕ್ ಜಾಗೃತದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸುವರು. ಸರಕಾರಿ ಸಂಸ್ಥೆಗಳ ವಿದ್ಯುತ್ ಕಳ್ಳತನವನ್ನೂ ಬಿಟ್ಟಿಲ್ಲ.
ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲಾ ವ್ಯಾಪ್ತಿಯ ಈ ಜಾಗೃತದಳ ನಾಲ್ಕೇ ತಿಂಗಳಲ್ಲಿ ವಿಧಿಸಿದ ದಂಡ ಪ್ರಮಾಣ ೨ ಕೋಟಿ ರೂ. ದಾಟಿದೆ. ವಿದ್ಯುತ್ ಕದ್ದು ಶಿಕ್ಷೆಗೆ ಗುರಿಯಾದವರ ಸಂಖ್ಯೆಯೂ ಹತ್ತನ್ನು ದಾಟಿದೆ.
ದಂಡದಲ್ಲಿ ಏರಿಕೆ: ಐದು ವರ್ಷದ ಹಿಂದೆ ಆರಂಭಗೊಂಡ ಸೆಸ್ಕ್ ಜಾಗೃತದಳದ ದಂಡ ವಸೂಲಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ವಿದ್ಯುತ್ ಕಳ್ಳತನ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಜತೆಗೆ ಪತ್ತೆ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ.
೨೦೦೭-೦೮ರ ಆರ್ಥಿಕ ವರ್ಷದಲ್ಲಿ ೧೪,೬೦೨ ಕಡೆ ದಾಳಿ ನಡೆಸಿ ೧೩೭೨ ಮೊಕದ್ದಮೆ ದಾಖಲಿಸಲಾಗಿತ್ತು. ೧.೬೭ ಕೋಟಿ ರೂ.ಗಳ ದಂಡದಲ್ಲಿ ವಸೂಲಿ ಯಾಗಿದ್ದು ೧.೪೭ ಕೋಟಿ ರೂ. ಅದೇ ೨೦೦೮-೦೯ರಲ್ಲಿ ೯೮೨೮ ಕಡೆ ದಾಳಿ ಮಾಡಿ ೧೬೬೨ ಮೊಕದ್ದಮೆ ದಾಖಲಿಸಲಾಯಿತು. ೩.೯೯ ಕೋಟಿ ರೂ.ಗಳ ದಂಡದಲ್ಲಿ ವಸೂಲಿ ಮಾಡಿದ್ದು ೨.೫೨ ಕೋಟಿ ರೂ. ಇನ್ನು ೨೦೦೯-೧೦ರಲ್ಲಿ ೭೦೯೪ ಕಡೆ ದಾಳಿ ನಡೆಸಿ ೧೫೩೨ ಮೊಕದ್ದಮೆ ದಾಖಲೆ ಮಾಡಲಾಯಿತು. ಈ ಅವಧಿಯಲ್ಲಿ ೬.೩೮ ಕೋಟಿ ರೂ. ದಂಡದಲ್ಲಿ ೩.೦೮ ಕೋಟಿ ರೂ. ವಸೂಲಿ ಮಾಡಲಾಯಿತು.
೨೦೧೦-೧೧ರ ನಾಲ್ಕು ತಿಂಗಳ ಅವಧಿಯಲ್ಲಿಯೇ ೩೮೧ ಮೊಕದ್ದಮೆ ದಾಖಲಿಸಿ ೨.೧೩ ಕೋಟಿ ರೂ. ದಂಡದಲ್ಲಿ ೧ ಕೋಟಿಯಷ್ಟು ವಸೂಲಿ ಮಾಡಲಾಗಿದೆ. ದಂಡ ವಸೂಲಿ ಯಲ್ಲಿ ವಿಭಾಗಕ್ಕೆ ಪ್ರಶಸ್ತಿಯೂ ಬಂದಿದೆ.
ಕಳ್ಳತನದ ಈ ಪರಿ: ಹೇಳಿ ಕೇಳಿ ಅದು ವಿದ್ಯುತ್. ಅದನ್ನು ಮುಟ್ಟುವುದೇ ಸಾಹಸ. ಇನ್ನು ಕಳ್ಳತನ ಮಾಡಬೇಕು ಎಂದರೆ ಎಂಟೆದೆಯೇ ಬೇಕು. ಅದಕ್ಕೂ ಚಾಣಾಕ್ಷ ಮಾರ್ಗಗಳನ್ನು ನಮ್ಮವರು ಕಂಡುಕೊಂಡಿದ್ದಾರೆ.
ಅದೊಂದು ಪ್ರಮುಖ ಕಂಪೆನಿ. ಸೋಲಾರ್ ಸಂಪರ್ಕ ಮೇಲ್ನೋಟಕ್ಕೆ ಮಾತ್ರ. ಮಾಡೋದು ವಿದ್ಯುತ್ ಕಳ್ಳತನ. ಸೆಸ್ಕ್ ಜಾಗೃತ ದಳದವರು ಇದನ್ನು ಪತ್ತೆ ಹಚ್ಚಲು ದೊಡ್ಡ ಸಾಹಸವನ್ನೇ ಮಾಡಬೇಕಾಯಿತು.
ಇನ್ನೊಂದು ಕಡೆ ವಿದ್ಯುತ್ ನಿಯಂತ್ರಣಕ್ಕೂ ಅಳವಡಿಸಿ ಕೊಂಡಿದ್ದರು ರಿಮೋಟ್ ಕಂಟ್ರೋಲ್. ಇದೇ ರೀತಿ ಮೈಸೂರಿನಲ್ಲಿ ಬ್ಯೂಟಿ ಪಾರ್ಲರ್, ಹಾಸನದಲ್ಲಿ ಕಾಫಿ ಕ್ಯೂರಿಂಗ್, ಚನ್ನರಾಯಪಟ್ಟಣದಲ್ಲಿ ಲಾಡ್ಜ್, ಕೊಡಗಿನಲ್ಲಿ ಹಿಟ್ಟಿನ ಗಿರಣಿ, ಗುಂಡ್ಲುಪೇಟೆಯಲ್ಲಿ ರೆಸಾರ್ಟ್ ಮೇಲೂ ವಿದ್ಯುತ್ ಕಳ್ಳತನದ ದಾಳಿ ಮಾಡಿ ಲಕ್ಷಾಂತರ ರೂ. ದಂಡ ವಸೂಲಿ ಮಾಡ ಲಾಗಿದೆ.
ಅದೊಂದು ಸರಕಾರಿ ಕಟ್ಟಡ. ಅಲ್ಲಿಗೆ ವಿದ್ಯುತ್ ಸಂಪರ್ಕ ಪಡೆದಿದ್ದು ನೇರವಾಗಿ ಕಂಬದಿಂದಲೇ. ತಿಂಗಳುಗಳ ಕಾಲ ಹಾಗೆ ವಿದ್ಯುತ್ ಹರಿಯಿತು. ಸೆಸ್ಕ್ ಜಾಗೃತಕ್ಕೆ ಗೊತ್ತಾಗಿದ್ದೇ ತಡ ಆಯ್ತು ದಾಳಿ. ಈಗ ಅಕ್ರಮ ಬಂದ್ ಆಗಿದೆ. ಸುಮಾರು ೫ಲಕ್ಷ ರೂ. ದಂಡವನ್ನು ಮುಜರಾಯಿ ಇಲಾಖೆ ಪಾವತಿಸಿದೆ.
ಕೊಡಗಿಗೂ ಠಾಣೆ: ಸದ್ಯ ಸೆಸ್ಕ್ ಜಾಗೃತ ದಳಕ್ಕೆ ಎಸ್ಪಿ ದರ್ಜೆ ಅಧಿಕಾರಿ ಮುಖ್ಯಸ್ಥರು. ಡಿವೈಎಸ್ಪಿ, ಇಇ ನಂತರದ ಉಸ್ತುವಾರಿಗಳು. ಮೈಸೂರು, ಮಂಡ್ಯ, ಚಾಮರಾಜ ನಗರ ಹಾಗೂ ಹಾಸನದಲ್ಲಿ ಸೆಸ್ಕ್ ಜಾಗೃತದಳದ ಪೊಲೀಸ್ ಠಾಣೆಯಿದೆ. ಅಲ್ಲಿ ಒಬ್ಬ ಇನ್ಸ್‌ಪೆಕ್ಟರ್, ಒಬ್ಬರು ಎಸ್‌ಐ, ಇಬ್ಬರು ಎಎಸ್‌ಐ ಹಾಗೂ ಹೆಡ್ ಕಾನ್ಸ್‌ಟೆಬಲ್, ೮ ಮಂದಿ ಕಾನ್ಸ್‌ಟೆಬಲ್‌ಗಳು ಇದ್ದಾರೆ.
ತಾಂತ್ರಿಕ ವಿಭಾಗದಿಂದ ಒಬ್ಬೊಬ್ಬ ಎಇಇ ಹಾಗೂ ಎಇ, ಲೈನ್‌ಮ್ಯಾನ್‌ಗಳಿದ್ದಾರೆ. ಆದರೆ ಮೆಸ್ಕಾಂನಿಂದ ಬೇರ್ಪಟ್ಟು ಸೆಸ್ಕ್‌ಗೆ ಸೇರಿದ ನಂತರ ಕೊಡಗು ಜಿಲ್ಲೆಯಲ್ಲಿ ಸೆಸ್ಕ್ ಪೊಲೀಸ್ ಠಾಣೆ ಬೇಕೆನ್ನುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಸದ್ಯ ಮೈಸೂರು ಕಚೇರಿಯಿಂದಲೇ ಕೊಡಗಿನ ಉಸ್ತುವಾರಿ ವಹಿಸಲಾಗುತ್ತಿದೆ. ಇದಕ್ಕೆ ಒಪ್ಪಿಗೆಯೂ ದೊರೆತಿದ್ದು ಕೊಡಗಿ ನಲ್ಲೂ ಸೆಸ್ಕ್ ಠಾಣೆ ಸದ್ಯವೇ ಬರಲಿದೆ.
ಹೊಸ ಕಚೇರಿ: ಐದು ವರ್ಷದಿಂದ ಶ್ರೀಹರ್ಷ ರಸ್ತೆಯ ಸೆಸ್ಕ್ ಕಚೇರಿಯಲ್ಲಿಯೇ ಜಾಗೃತದಳ ಕಾರ‍್ಯನಿರ್ವಹಿಸು ತ್ತಿತ್ತು. ಈಗ ಕಾರ್ಪೊರೇಟ್ ಮಾದರಿಯ ಕಚೇರಿಗೆ ಕಟ್ಟಡ ಸ್ಥಳಾಂತರಗೊಂಡಿದೆ.
ಸರಸ್ವತಿಪುರಂ ಅಗ್ನಿಶಾಮಕದಳದ ಪಕ್ಕದ ಖಾಸಗಿ ಕಟ್ಟಡದಲ್ಲಿ ಜಾಗೃತ ದಳದ ಕಚೇರಿಯಿದೆ.

ದೇಜಗೌ ಧೃತರಾಷ್ಟ್ರ


ವಿಕ ಸುದ್ದಿಲೋಕ ಮೈಸೂರು
ತಮ್ಮ ಪುತ್ರ ಶಶಿಧರ ಪ್ರಸಾದ್ ಅವರಿಗೆ ಬೆಂಬಲವಾಗಿ ಉಪವಾಸ ಸತ್ಯಾಗ್ರಹ ಕುಳಿತ ಡಾ.ದೇಜಗೌ ಅವರ ನಡೆಯನ್ನು ಕಟುವಾಗಿ ಟೀಕಿಸಿರುವ ಪ್ರಗತಿಪರ ಸಂಘಟನೆಗಳು, ಆ ಮೂಲಕ ಮಹಾತ್ಮ ಗಾಂಧಿ ಕೊಟ್ಟ ಉಪವಾಸ ಸತ್ಯಾಗ್ರಹದ ಮೌಲ್ಯವನ್ನು ಕಳೆದಿದ್ದಾರೆಂದು ಜರಿದಿದ್ದಾರೆ.
ವಿಶ್ವವಿದ್ಯಾನಿಲಯದಲ್ಲಿ ಭ್ರಷ್ಟಾಚಾರ ನಡೆಸಿರುವುದು ಸ್ಪಷ್ಟ. ರಂಗವಿಠಲಾ ಚಾರ್ ಆಯೋಗದ ವರದಿಯಲ್ಲಿ ಬೋಧಕರ ನೇಮಕದಲ್ಲಿ ನಡೆದ ಅಕ್ರಮಗಳನ್ನು ದಾಖಲಿಸಿದ್ದು, ಸ್ವತಃ ಶಶಿಧರಪ್ರಸಾದ್ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದರು. ರೋಸ್ಟರ್ ಅನುಸರಿಸದಿರುವುದನ್ನು ಕುಲಸಚಿವರು, ಕ್ಲರ್ಕ್ ಸಹ ಒಪ್ಪಿದ್ದಾರೆ. ಹೀಗಿದ್ದರೂ ಪುತ್ರನಿಗೆ ಬೆಂಬಲವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಸರಿಯಲ್ಲ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ.ಮಲ್ಲೇಶ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಟೀಕಿಸಿದರು.
ಸತ್ಯದ ಅರ್ಥ ಅವರಿಗೆ ಗೊತ್ತಿದೆ ಎಂದುಕೊಂಡಿದ್ದೇವೆ. ಗಾಂಧೀಜಿ ನಮಗೆ ನೀಡಿದ ಸತ್ಯಾಗ್ರಹದ ಮಹತ್ವವನ್ನು ಮರೆತು ಭ್ರಷ್ಟತೆಗೆ ಬಳಸುತ್ತಿರುವುದು ಒಪ್ಪುವಂತದ್ದಲ್ಲ. ದೇಜಗೌ ಅವರಿಗೆ ಧೃತರಾಷ್ಟ್ರ ವ್ಯಾಮೋಹ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಉನ್ನತ ಸ್ಥಾನದ ಕುಲಪತಿ ವಿರುದ್ಧ ಕ್ರಮ ಕೈಗೊಳ್ಳಬಾರದು. ಶೈಕ್ಷಣಿಕ ವಲಯದಲ್ಲಿ ಗೌರವ ಪಡೆದವರು ಜೈಲಿಗೆ ಹೋಗಬಾರದು ಎಂದೂ ಸಹ ರಾಜ್ಯಪಾಲರು ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಕುಲಪತಿಗಳಿಗೊಂದು ಕಾನೂನು, ಸಾಮಾನ್ಯರಿಗೊಂದು ಕಾನೂನಿದೆಯೇ? ಶಶಿಧರಪ್ರಸಾದ್ ಮಾತ್ರವಲ್ಲ. ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗಬೇಕು ಎಂದು ಪ್ರೊ.ಎನ್.ಎಸ್.ರಘುನಾಥ್ ಹೇಳಿದರು.
ಸಂವಿಧಾನಬದ್ಧವಾಗಿ ರಾಜ್ಯಪಾಲರು ಮಾತನಾಡಬೇಕು, ಅವರೇನು ರಾಜಕಾರಣಿ ಅಲ್ಲ. ರಾಜ್ಯಪಾಲರ ದ್ವಂದ್ವ ನಿಲುವು. ಹೀಗೆ ಮಾನಸಿಕ ಸ್ಥಿರತೆ ಇರದವರನ್ನು ಜವಾಬ್ದಾರಿಯುತ ಸ್ಥಾನದಿಂದ ಪದಚ್ಯುತಗೊಳಿಸುವುದು ಸೂಕ್ತ ಎಂದರು ಕಿಕ್ಕೇರಿ ನಾರಾಯಣ.
ಪಿಐಎಲ್
ನಿಯಮಬಾಹಿರ ನೇಮಕದಲ್ಲಿ ಅಪಾರ ಹಣ ಹರಿದಾಡಿದ ಸಂಶಯವಿದ್ದು, ಲೋಕಾಯುಕ್ತ ತನಿಖೆಯಾಗಬೇಕಿದೆ. ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು. ಈಗಾಗಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ಮಾಡಿ, ಮೈಸೂರು ವಿವಿ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಎಲ್ಲಾ ಶಾಸಕರು, ಸಂಸದರು ಒಗ್ಗಟ್ಟಿನಿಂದ ಸರಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಲಾಗಿದೆ. ಇದನ್ನು ಗಮನಿಸಿ ಪಿಐಎಲ್ ಹೂಡಲು ತೀರ್ಮಾನಿಸಲಾಗುವುದು ಎಂದರು. ಒಕ್ಕೂಟದ ಸಂಚಾಲಕ ಕೆ.ಮುದ್ದುಕೃಷ್ಣ ಜಿ.ಪಿ.ಬಸವರಾಜು ಗೋಷ್ಠಿಯಲ್ಲಿದ್ದರು.

ನೋವಿನ ನೋಟ

ಈ ಕಾಲೇಜಿನಲ್ಲಿ ಫಲಿತಾಂಶ ಮೇಲೇರಲೇ ಇಲ್ಲ!

ಕಬ್ಬು ಭತ್ತದ ನಡುವೆ ಅರಳಿದ ಪುಷ್ಪೋದ್ಯಮ

ಎಗ್ಗಿಲ್ಲದೇ ಸಾಗಿದೆ ಅಕ್ರಮ ಮರಳು ಮಾಫಿಯಾ ದಂಧೆ!

ಇದು ಅನಾಥ ವೃತ್ತಾಂತ

ಮೈಸೂರಿನಲ್ಲಿ ಭಿಕ್ಷಾಟನೆ ನಿರ್ಮೂಲನೆಗೆ ಪಣ

ಆರ್.ಕೃಷ್ಣ, ಮೈಸೂರು
ಅತ್ತ ಬೆಂಗಳೂರಿನ ನಿರ್ಗತಿಕರ ಕೇಂದ್ರದಲ್ಲಿ ಸರಣಿ ಸಾವು ಸಂಭವಿಸಿದ್ದರೆ, ಇತ್ತ ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ‘ಭಿಕ್ಷುಕ ಮುಕ್ತ ನಗರ’ವನ್ನಾಗಿಸುವ ಕಾರ‍್ಯಕ್ಕೆ ಚಾಲನೆ ನೀಡಲಾಗಿದೆ.
‘ಭಿಕ್ಷೆ ಮುಕ್ತ ನಗರ’ ಎಂದು ಘೋಷಣೆಯಾಗಿರುವ ರಾಜ್ಯದ ಹೆರಿಟೇಜ್ ಸಿಟಿ, ‘ಜ್ಯೂವೆಲ್ ಅಫ್ ಕರ್ನಾಟಕ’ ಮೈಸೂರಿನಲ್ಲಿ ಇನ್ನು ಮುಂದೆ ಭಿಕ್ಷೆ ಬೇಡಿದರೆ ಸಜೆ ಕಾಯ್ದಿದೆ. ಭಿಕ್ಷಾಟನೆ ನಿಷೇಧಿಸಿರುವ ರಾಜ್ಯ ಸರಕಾರ ೧೯೭೫ರಲ್ಲಿ ಕರ್ನಾಟಕ ಭಿಕ್ಷಾಟನೆ ಅಧಿನಿಯಮವನ್ನು ಜಾರಿಗೊಳಿಸಿ ಇಡೀ ರಾಜ್ಯಕ್ಕೆ ವಿಸ್ತರಿಸಿತ್ತು. ಆದರೆ ನಾನಾ ಕಾರಣದಿಂದ ಈ ಕಾಯಿದೆ ಸಮರ್ಪಕವಾಗಿ ಜಾರಿಗೊಳ್ಳದಿದ್ದರೂ ರಾಜ್ಯದಲ್ಲಿ ಪ್ರಥಮವಾಗಿ ನಗರದ ಪ್ರವಾಸಿ ತಾಣಗಳನ್ನು ಭಿಕ್ಷೆ ಮುಕ್ತ ವಲಯವನ್ನಾಗಿ ಮಾಡಲು ನಗರಪಾಲಿಕೆ, ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿವೆ.
ಇನ್ನು ಮುಂದೆ ಭಿಕ್ಷೆ ಬೇಡುವ ೧೬ ವರ್ಷ ತುಂಬಿದ ಬಾಲಕ, ೧೮ ವರ್ಷ ತುಂಬಿದ ಬಾಲಕಿಯರನ್ನು ಅಧಿನಿಯಮ ಸೆಕ್ಷನ್ ೩ರ ಅನ್ವಯ ಬಂಧಿಸಿ ತಹಸೀಲ್ದಾರ್ ಮುಂದೆ ಹಾಜರುಪಡಿಸಲಾಗುವುದು. ನಿಯಮದ ಪ್ರಕಾರ ವಿಚಾರಣೆ ನಡೆಸಿ ಭಿಕ್ಷೆ ಬೇಡುವವರಿಗೆ ಒಂದರಿಂದ ಮೂರು ವರ್ಷದವರೆಗೆ ಸಜೆ ವಿಧಿಸುವುದರ ಜತೆಗೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಬಂಧನದಲ್ಲಿ ಇರಿಸಲಾಗುವುದು.
ನಗರದ ಅರಮನೆ, ಮೃಗಾಲಯ, ಸಂತ ಫಿಲೋವಿನಾ ಚರ್ಚ್, ಚಾಮುಂಡಿಬೆಟ್ಟ ಸೇರಿದಂತೆ ಇತರೆ ಪ್ರೇಕ್ಷಣಿಯ ಸ್ಥಳದ ಜತೆಗೆ ನಗರದ ಸುತ್ತಮುತ್ತಲ ಪ್ರದೇಶಗಳಾದ ಕೃಷ್ಣರಾಜಸಾಗರದ ಬೃಂದಾವನದಲ್ಲೂ ಭಿಕ್ಷೆ ಬೇಡುವಂತಿಲ್ಲ. ಪೊಲೀಸ್‌ಠಾಣೆಗಳು ತಮ್ಮ ವ್ಯಾಪ್ತಿಯ ಭಿಕ್ಷುಕರನ್ನು ಬಂಧಿಸಿ ಪರಿಹಾರ ಕೇಂದ್ರಗಳ ವಶಕ್ಕೆ ನೀಡಬೇಕು. ಈ ಮೂಲಕ ನಗರವನ್ನು ಭಿಕ್ಷೆ ರಹಿತ ವಲಯವನ್ನಾಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ.
ಸಮೀಕ್ಷೆಗೆ ಚಾಲನೆ: ಭಿಕ್ಷುಕರು, ನಿರ್ಗತಿಕರಿಗೆ ಪುನರ್ವಸತಿ ಕಲ್ಪಿಸಲು ಸುಪ್ರೀಂಕೋರ್ಟ್‌ನ ನಿರ್ದೇಶನ ಪಾಲನೆಗೆ ನಗರ ಪಾಲಿಕೆ ಮುಂದಾಗಿದೆ. ಸರಕಾರದ ವಿವಿಧ ಯೋಜನೆ ಜತೆಗೆ ನರ್ಮ್‌ನಡಿ ನಗರದಲ್ಲಿ ನಿರ್ಗತಿಕರ ಪುನರ್ ವಸತಿಗೆ ಯೋಜನೆ ಹಾಕಿಕೊಳ್ಳಲಾಗಿದೆ. ಇವರಿಗಾಗಿ ದೊಡ್ಡ ಶೆಲ್ಟರ್ ನಿರ್ಮಿಸಿ ಅಲ್ಲಿ ವಿವಿಧ ತರಬೇತಿ ನೀಡುವ ಮೂಲಕ ಮುಖ್ಯವಾಹಿನಿಗೆ ತರುವ ಉದ್ದೇಶ ಈ ಯೋಜನೆಯದ್ದು.
ಸಮೀಕ್ಷೆ ಕಾಲಕ್ಕೆ ರಸ್ತೆ ಬದಿ, ಮಾರುಕಟ್ಟೆ ಹೊರಗೆ, ಮಳಿಗೆಗಳ ಮುಂದೆ, ಬಸ್ ನಿಲ್ದಾಣ, ಸೇತುವೆ ಕೆಳ ಭಾಗ, ಸಬ್‌ವೇ ಸೇರಿದಂತೆ ವಿವಿಧೆಡೆ ರಾತ್ರಿ ಕಳೆಯುವ ಜನ ಸಮೂಹದ ಪ್ರಮಾಣ ಎಷ್ಟಿದೆ ಎಂಬುದನ್ನು ಅರಿಯಲು ಸಮೀಕ್ಷೆ ನಡೆಯುತ್ತಿದ್ದು, ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಈ ಕಾರ‍್ಯಕ್ಕೆ ಚಾಲನೆ ನೀಡಿದ್ದಾರೆ.
ಒಂದು ವಾರ ರಾತ್ರಿ ೧೦ರಿಂದ ಬೆಳಗಿನ ಜಾವ ದವರೆಗೂ ನಗರದಲ್ಲಿ ಸಮೀಕ್ಷೆ ಕಾರ‍್ಯ ನಡೆಯುತ್ತಿದ್ದು, ಮೊದಲ ಮೂರು ದಿನ ನಿರ್ಗತಿಕರ ಬೆರಳಿಗೆ ಅಳಿಸಲಾಗದ ಶಾಯಿ (ಚುನಾವಣೆ ಸಮಯದಲ್ಲಿ ಬಳಸುವ ಇಂಕು)ಯನ್ನು ಹಚ್ಚಿ ಗುರುತಿಸಲಾಗುವುದು. ಬಳಿಕ ಇಂಥವರನ್ನು ಕೌನ್ಸೆಲಿಂಗ್ ಮೂಲಕ ಮನೆಗೆ ಕಳುಹಿಸುವ ಅಥವಾ ನಿಜವಾಗಲೂ ನಿರ್ಗತಿಕರಾಗಿದ್ದರೆ ಅಂಥವರಿಗೆ ಇನ್ನಾರು ತಿಂಗಳಲ್ಲಿ ಸೂರು ನೀಡುವ ಕಾರ‍್ಯ ನಡೆಯಲಿದೆ.
ಪಾಲಿಕೆ, ಜಿಲ್ಲಾಡಳಿತದ ಅಧಿಕಾರಿಗಳ ನೇತೃತ್ವ ದಲ್ಲಿ ೧೩೫ ಮಂದಿಯನ್ನು ಒಳಗೊಂಡ ೧೩ ತಂಡವನ್ನು ರಚಿಸಲಾಗಿದೆ. ಈ ಕಾರ‍್ಯಕ್ಕೆ ಮೈರಾಡ, ಆರ್‌ಎಲ್‌ಎಚ್‌ಪಿ ಹಾಗೂ ಸ್ವಾಮಿ ವಿವೇಕಾ ನಂದ ಯೂತ್ ಮೂವ್‌ಮೆಂಟ್ ಕೈ ಜೋಡಿಸಿವೆ. ಹೀಗೆ ಸಂಗ್ರಹಿಸಿದ ಸಮಗ್ರ ವರದಿಯನ್ನು ರಾಜ್ಯ ಸರಕಾರದ ಮೂಲಕ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವುದು.

ಬಾರದ ನೀರು: ನೀಗದ ರೈತರ ಸಮಸ್ಯೆ

ವಿಕ ಸುದ್ದಿಲೋಕ ಕೃಷ್ಣರಾಜನಗರ
ತಾಲೂಕಿನ ಸೌತನಹಳ್ಳಿ, ಸಾತಿ ಗ್ರಾಮ ಸೇರಿದಂತೆ ಈ ಭಾಗದ ನೂರಾರು ಎಕರೆ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನಾಲಾ ನೀರು ಹರಿಯದೆ ರೈತರು ಭತ್ತ ಬೆಳೆಯಲು ಕಾಲುವೆ ಎದುರು ನೋಡುವಂತಾಗಿದೆ.
ಈ ಭಾಗಕ್ಕೆ ಚಾಮರಾಜ ಮತ್ತು ರಾಮಸಮುದ್ರ ನಾಲೆಯ ನೀರು ಹರಿಯುತ್ತಿದ್ದು ನಾಲೆಯ ಮೇಲ್ಭಾಗದ ಅಚ್ಚುಕಟ್ಟುದಾರರು ಈಗಾಗಲೆ ನಾಟಿ ಕಾರ್ಯ ಮುಗಿಸಿ ಕಳೆ ತೆಗೆಯುವ ಹಂತ ತಲುಪಿದೆ. ನಾಲೆಯ ಕೊನೆಭಾಗದ ಈ ಗ್ರಾಮದ ಸುತ್ತ ಮುತ್ತಲ ರೈತರು ಮಾತ್ರ ನೀರಿಗಾಗಿ ಕಾದು ಸುಸ್ತಾಗಿ ನೀರಾವರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿ ಹಿಡಿಶಾಪ ಹಾಕಿ, ಹಾಕಿರುವ ಪೈರು ಒಣಗದಂತೆ ನೀರು ಹಾಕುತ್ತಿದ್ದಾರೆ.
ಇಂಥ ಪರಿಸ್ಥಿತಿ ಈ ಭಾಗದಲ್ಲಿ ಪ್ರತಿವರ್ಷ ಮಾಮೂಲಾಗಿದ್ದು, ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನಹರಿಸುತ್ತಿಲ್ಲ.
ಬರುವ ನೀರಿಗಾಗಿ ರೈತರು ಭತ್ತದ ಅಗೆ ಹಾಕಿಕೊಂಡು ಕಾದುಕುಳಿತಿದ್ದು, ನೀರು ಬಾರದ ಕಾರಣ ಈ ಮೊದಲು ಹಾಕಿದ್ದ ಹುರಳಿ, ಅಲಸಂದೆ ಹಾಗೂ ಇತರ ಬೆಳೆಗಳನ್ನು ಉಳುಮೆ ಮಾಡದೆ ಹಾಗೆ ಬಿಟ್ಟುಕೊಂಡು ಬರುವ ನೀರಿಗಾಗಿ ಎದುರು ನೋಡುತ್ತಿದ್ದಾರೆ.
ಈ ಭಾಗದಲ್ಲಿ ಭತ್ತ ಬಿಟ್ಟು ಬೇರೆ ಬೆಳೆ ಇಲ್ಲದ ಕಾರಣ ಇಲ್ಲಿನ ಜನತೆಗೆ ಭತ್ತದ ಬೆಳೆಯು ವರ್ಷದ ಕೂಳಾಗಿದೆಯಲ್ಲದೆ ವಾಣಿಜ್ಯದ ದೃಷ್ಟಿಯಿಂದಲೂ ಈ ಭಾಗದ ಜನತೆಗೆ ಪ್ರಮುಖ ಬೆಳೆಯಾಗಿದೆ.
ನೀರುಬಾರದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸುವ ರೈತರು, ನೀರಾವರಿ ಅಧಿಕಾರಿಗಳು ಕಾಲುವೆ ದುರಸ್ತಿಗೊಳಿಸಿ ನೀರು ಬಿಟ್ಟರೆ ಎಲ್ಲರ ಬೆಳೆಗೂ ದೊರೆಯುತ್ತದೆ. ಆದರೆ ಯಾರೂ  ಒಮ್ಮೆಯೂ ಕಾಲುವೆ ಏರಿ ಮೇಲೆ ಬಂದಿಲ್ಲ ಎಂದು ದೂರಿದ್ದಾರೆ.
ಸಾತಿಗ್ರಾಮದ ರೈತ ಶಾಂತರಾಜು ಪತ್ರಿಕೆಯೊಂದಿಗೆ ಮಾತನಾಡಿ, ಈ ಭಾಗದ ಸುಮಾರು ೮೦ ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲದೆ ಪರದಾಡುವಂತಾಗಿದೆ. ಕಟ್ಟು ನೀರು ಕೊಟ್ಟರೆ ಎಲ್ಲರಿಗೂ ನೀಡಬಹುದು. ಆದರೆ ಯಾವ ಅಧಿಕಾರಿಯೂ ಈ ಬಗ್ಗೆ ಕ್ರಮಕ್ಕೆ ಮುಂದಾಗದ ಕಾರಣ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆಹರಿಸದಿದ್ದರೆ ರೈತರೊಡಗೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ರೈತ ರೇವಣ್ಣ ಮಾತನಾಡಿ, ರೈತರೆಲ್ಲರೂ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದಾಗ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದವರು ಮತ್ತೆ ಇತ್ತ ತಿರುಗಿ ನೋಡಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಮತ್ತೊಬ್ಬ ರೈತ ಶಿವರಾಮು ಮಾತನಾಡಿ, ಉದ್ಯೋಗ ಖಾತ್ರಿಯಲ್ಲಿ ನಾಲೆ ಸ್ವಚ್ಛಗೊಳಿಸುವ ಕೆಲಸ ಮಾಡಿದರು. ಆದರೆ ಕೆಲಸ ಮಾತ್ರ ಸರಿಯಾಗಿ ಮಾಡದೆ ಬಿಲ್ ಪಡೆದರು. ಅದರ ಪರಿಣಾಮ ನಾವು ಎದುರಿಸಬೇಕಾಗಿದೆ ಎಂದು ದೂರಿದರು.

ಪ್ಲಾಸ್ಟಿಕ್ ಫ್ರೀ ಕ್ಯಾಂಪಸ್

ಚೀ. ಜ. ರಾಜೀವ ಮೈಸೂರು
ಈ ಕ್ಯಾಂಪಸ್‌ಗೆ ಪ್ಲಾಸ್ಟಿಕ್‌ನಿಂದ ತಯಾರಿಸಿದ, ರೂಪಿತವಾದ, ಅಲಂಕೃತವಾದ ಯಾವುದೇ ರೀತಿಯ ಪಠ್ಯ-ಪಠ್ಯೇತರ  ಸಾಮಗ್ರಿಗಳನ್ನು ತರುವಂತಿಲ್ಲ !
ಜೆಎಸ್‌ಎಸ್ ಕಾನೂನು ಕಾಲೇಜಿಗೆ ಪ್ರವೇಶಿಸಿದ ತಕ್ಷಣ, ಇಂಥದ್ದೊಂದು ‘ಕಾನೂನ’ನನ್ನು ಹೊತ್ತ ಭಿತ್ತಿಬರಹಗಳು ಗಮನಸೆಳೆಯುತ್ತವೆ. ಇದರಲ್ಲೇನಾದರೂ ತಿರುಳು ಇರಬಹುದೇ ಎಂದು ಕ್ಯಾಂಪಸ್ ಸುತ್ತು ಹಾಕಿದರೆ, ಎಲ್ಲಿಯೂ ಪ್ಲಾಸ್ಟಿಕ್‌ನ ಸುಳಿವು ಸಿಗದು !
‘ಪ್ಲಾಸ್ಟಿಕ್  ಪ್ರವೇಶ’ ನಿರ್ಬಂಧಿಸಿದ ಈ ನಿಯಮವನ್ನು- ಕಾಲೇಜಿನ ಆಡಳಿತ ಮಂಡಳಿಯಾಗಲೀ, ಪ್ರಾಂಶುಪಾಲರಾಗಲಿ, ಆಡಳಿತಾಧಿಕಾರಿಯಾಗಲಿ ವಿಧಿಸಿಲ್ಲ. ಬಣ್ಣ-ಬಣ್ಣದ ಕಾಗದ ಪೇಪರ್‌ನಲ್ಲಿ ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರೇ ‘ಪ್ಲಾಸ್ಟಿಕ್ ವಿರೋಧಿ’ ಹೇಳಿಕೆಗಳನ್ನು ಬರೆದು, ಕಂಬ-ಕಂಬಗಳಿಗೆ ಅಂಟಿಸಿದ್ದಾರೆ.
ನೋ ಟು ಪ್ಲಾಸ್ಟಿಕ್, ಯಸ್ ಟು ಪೇಪರ್, ಸೇ ಟಾಟಾ, ಬೈ  ಟು ಪ್ಲಾಸ್ಟಿಕ್... ಎಂದು ಸರಳವಾಗಿಯೇ ಪ್ಲಾಸ್ಟಿಕ್‌ನ ದುರ್ಗಣಗಳನ್ನು ಸಾರುವ ಹತ್ತಾರು ಬರಹ ಕಾಣಬಹುದು. ಒಂದರ್ಥದಲ್ಲಿ ಇದು ವಿದ್ಯಾರ್ಥಿ ಸಮುದಾಯ ವಿಧಿಸಿಕೊಂಡಿರುವ ಸ್ವಯಂ ‘ಶಾಸನ’. 
ಈ ಕಾಲೇಜಿನಲ್ಲಿ  ಈಗ ‘ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ನಿರ್ಮಾಣ’ ಸಪ್ತಾಹ ಶುರುವಾಗಿದೆ. ಕಾಲೇಜಿನ  ಪ್ರಾಂಶುಪಾಲ ಪ್ರೊ. ಕೆ. ಎಸ್. ಸುರೇಶ್, ಪ್ರಾಧ್ಯಾಪಕ ಪ್ರೊ. ವೇಣುಗೋಪಾಲ್, ಉಪನ್ಯಾಸಕ ಜಗದೀಶ್ ಅವರ ಮಾರ್ಗದರ್ಶನದಲ್ಲಿ  ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರು ಪಾಲ್ಗೊಳ್ಳುತ್ತಿದ್ದಾರೆ.
ಭಾವನೆಗಳನ್ನು ಕೆರಳಿಸುವ ಇಲ್ಲವೇ ಪ್ರಚೋದಿಸುವ  ವಸ್ತ್ರ  ಧರಿಸುವಂತಿಲ್ಲ, ಸೆಲ್ ತರುವಂತಿಲ್ಲ, ಬೈಕ್ ತರುವಂತಿಲ್ಲ, ರ‍್ಯಾಗಿಂಗ್ ಮಾಡುವಂತಿಲ್ಲ, ತಂಬಾಕು ಉತ್ಪನ್ನಗಳಿಗೆ ಅವಕಾಶವಿಲ್ಲ ... ಎಂಬಂಥ ನಾನಾ ‘ಇಲ್ಲಗಳ ಕ್ಯಾಂಪಸ್’ ನಿರ್ಮಾಣ ಮಾಲಿಕೆಯ ಮುಂದುವರಿದ  ಭಾಗವಿದು.
ಲಂಚ್ ಬಾಕ್ಸ್ ಇಲ್ಲವೇ ಬೇರೆ ಯಾವುದಾದರೂ ಪರಿಕರಕ್ಕೆ  ಹೊದಿಸಿದ ಕವರ್ ಆಗಿ, ಚಾಕೋಲೇಟ್ ರ‍್ಯಾಪರ್ ರೂಪದಲ್ಲಿ, ಪ್ಲಾಸ್ಟಿಕ್ ಶೀಟ್ಸ್, ಫೈಲ್ಸ್  ಆಕಾರ ಸೇರಿದಂತೆ ವಿವಿಧ ರೂಪದಲ್ಲಿ ಪ್ಲಾಸ್ಟಿಕ್  ಕ್ಯಾಂಪಸ್‌ಗಳನ್ನು ಪ್ರವೇಶಿಸುತ್ತದೆ. ಬಳಸುವ ಪೆನ್-ಪೆನ್ಸಿಲ್, ಧರಿಸುವ ಕನ್ನಡಕಗಳು ಪ್ಲಾಸ್ಟಿಕ್‌ನಿಂದಲೇ ರೂಪಿತ. ಈ ಎಲ್ಲವನ್ನೂ ಸಾಧ್ಯವಾದಷ್ಟು ಮಟ್ಟಿಗೆ ಒಳ ತರುವುದನ್ನು, ಬಳಸುವುದನ್ನು ಕಡಿಮೆ ಮಾಡಬೇಕೆಂಬುದು ಸಪ್ತಾಹದ  ವಾಸ್ತವ ನೀತಿ.
‘ಆ. ೧೬ ರಿಂದ ೨೧ರವರೆಗೆ  ನಮ್ಮ ವಿದ್ಯಾರ್ಥಿಗಳು  ಪ್ಲಾಸ್ಟಿಕ್ ಫ್ರೀ ಕ್ಯಾಂಪಸ್  ಸಪ್ತಾಹ ಕೈಗೊಂಡಿದ್ದಾರೆ. ಈ ದಿನಗಳಲ್ಲಿ ಪ್ಲಾಸ್ಟಿಕ್‌ನಿಂದ ರೂಪಿತವಾದ ಯಾವುದೇ ಸಾಮಗ್ರಿಯನ್ನು ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ತರುವುದಿಲ್ಲ’ ಎನ್ನುತ್ತಾರೆ ಕಾಲೇಜಿನ ರೀಸರ್ಚ್ ಗ್ರೂಪ್‌ನ ಸಂಚಾಲಕ, ಉಪನ್ಯಾಸಕ ಎ.ಟಿ. ಜಗದೀಶ್.
‘ಸಾಂಕೇತಿಕವಾಗಿ ಆರಂಭವಾದ  ಈ ಸಪ್ತಾಹ, ತನ್ನ ಅವಧಿಯ ಬಳಿಕ ವಿದ್ಯಾರ್ಥಿಗಳ ದೈನಂದಿನ ಚಟುವಟಿಕೆಯ ಭಾಗವಾಗಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ಪ್ಲಾಸ್ಟಿಕ್ ವಿರೋಧಿ ಮನೋಭಾವಕ್ಕೆ ಇದೂ ಒಂದು ಹೆಜ್ಜೆಯಾಗಲಿ’ ಎನ್ನುತ್ತಾರೆ ಪ್ರಾಂಶುಪಾಲ ಪ್ರೊ. ಸುರೇಶ್.
‘ನಿತ್ಯದ ಬದುಕಿನಿಂದ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ದೂರವಿಡುತ್ತೇವೆ ಎಂದರೆ, ಯಾರೂ ಅದನ್ನು ನಂಬುವುದಿಲ್ಲ. ಅಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಎಂಬುದು ಅನಿವಾರ್ಯ. ಈ  ಸಪ್ತಾಹದಿಂದ ನಾಳೆಯೇ, ನಮ್ಮ ವಿದ್ಯಾರ್ಥಿಗಳು ಪ್ಲಾಸ್ಟಿಕ್ ತೊರೆಯುತ್ತಾರೆ ಎಂದೇನಲ್ಲ. ಆದರೆ, ಯಾವುದೇ ಸಮಸ್ಯೆಯ ಸೃಷ್ಟಿಯ ಹಿಂದೆ, ಪರಿಹಾರವೂ ಇರುತ್ತದೆ. ಇಂಥ ಸಪ್ತಾಹಗಳು ಪರ‍್ಯಾಯ ಗಳನ್ನು ಹುಡುಕಲು ಪ್ರೇರಕವಾದೀತು’ ಎನ್ನುತ್ತಾರೆ ಪ್ರೊ. ವೇಣು ಗೋಪಾಲ್.
ತಾವೇ ಜಾರಿಗೆ ತಂದಿರುವ ಶಾಸನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂತಸವಿದೆ. ‘ಈ ಬಗ್ಗೆ ನಾವು  ಕಾಲೇಜಿನ ಸುತ್ತ ಮುತ್ತಲಿನ ಪ್ರದೇಶಗಳಿಗೆ  ತೆರಳಿ, ಜಾಥಾದ ಮೂಲಕ ಅರಿವು ಮೂಡಿಸು ತ್ತೇವೆ. ಇಲ್ಲಿಯೇ ಪೇಪರ್ ಬ್ಯಾಗ್‌ಗಳನ್ನು ತಯಾರಿಸುತ್ತೇವೆ’ ಎಂದು ಅತ್ಯುತ್ಸಾಹದಲ್ಲಿ ಮಾತನಾಡುತ್ತಾರೆ. ಒಟ್ಟಾರೆ -ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ಯನ್ನು ಕಡಿಮೆ ಮಾಡಲು ಪಣ ತೊಟ್ಟಿದ್ದಾರೆ. ಇದು ಇತರ ಕಾಲೇಜಿನ ವಿದ್ಯಾರ್ಥಿಗಳಿಗೂ ಮಾದರಿಯಾಗಬೇಕಷ್ಟೇ.
ಮಹಿಳಾ ಕಾಲೇಜಿನಲ್ಲಿ ವಿಜ್ಞಾನ ಪದವಿ ಆರಂಭ
ವಿಜಯನಗರದಲ್ಲಿರುವ ಸರಕಾರಿ ಮಹಿಳಾ ಕಾಲೇಜಿನಲ್ಲಿ ೨೦೧೦-೧೧ನೇ ಶೈಕ್ಷಣಿಕ ಸಾಲಿನಿಂದ ಅಧಿಕೃತವಾಗಿ ವಿಜ್ಞಾನ ಪದವಿ ಆರಂಭವಾಗಿದೆ.
ವಿವಿ  ಸಿಂಡಿಕೇಟ್ ಸದಸ್ಯ ಪ್ರೊ. ಎ. ನಾಗೇಂದ್ರರಾವ್  ಅವರು ಬಿಎಸ್ಸಿ ಪದವಿ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಇತರೆ ವಿಷಯಗಳಿಗಿಂತ ವಿಜ್ಞಾನದ ಕಲಿಕೆ ಅವಶ್ಯಕತೆ ಹೆಚ್ಚಿದೆ. ವಿದ್ಯಾರ್ಥಿನಿಯರು ವಿಜ್ಞಾನ ಪದವಿ ಕಲಿಯುವ ಮೂಲಕ, ಮೂಲ ವಿಜ್ಞಾನಕ್ಕೆ  ಒತ್ತು ನೀಡಬೇಕಿದೆ ಎಂದರು. ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಕೆ. ಶ್ರೀಹರಿ, ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯು ವಂತಾಗಬೇಕು ಎಂದರು. ಪ್ರಾಂಶು ಪಾಲ ಪ್ರೊ. ಕೆ. ಎಸ್. ಲಕ್ಷ್ಮಣ ಗೌಡ ಅಧ್ಯಕ್ಷತೆ ವಹಿಸಿದ್ದರು.

ಸಂಚಾರ ಠಾಣೆ ಎಂಬ ‘ ಶಕ್ತಿ ’ ಕೇಂದ್ರಗಳು

ವಿಕ ಸುದ್ದಿಲೋಕ ಮೈಸೂರು
ದೇವರಾಜ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಹುದ್ದೆ ಅಲಂಕರಿ ಸಲು ಭಯ. ಇದಕ್ಕೆ ಕಾರಣ ಸಸ್ಪೆಂಡ್ ಮೇನಿಯಾ...
ಒಂದೂವರೆ ತಿಂಗಳ ಹಿಂದೆಯೇ ಇಲ್ಲಿನ ಇನ್ಸ್‌ಪೆಕ್ಟರ್ ರಾಮಚಂದ್ರ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಸಸ್ಪೆಂಡ್‌ಗೊಂಡರು. ಅನಂತರ ಈ ಠಾಣೆಯಲ್ಲಿನ ಇನ್ಸ್‌ಪೆಕ್ಟರ್ ಹುದ್ದೆ ಖಾಲಿ. ಈಗ ಪ್ರಭಾರ ಇನ್ಸ್‌ಪೆಕ್ಟರ್ ಇದ್ದರೂ ಕಾಯಂ ಅಧಿಕಾರಿ ಬರಲು ಆಗುತ್ತಿಲ್ಲ.
ನಗರದ ಸಂಚಾರ ಠಾಣೆಗಳಿಗೆ ಬರಬೇಕೆಂದರೆ ಅಧಿಕಾರಿ ಯಿಂದ ಹಿಡಿದು ಕಾನ್ಸ್‌ಟೆಬಲ್‌ವರೆಗೂ ಭಾರಿ ಬೇಡಿಕೆ. ಇಲ್ಲಿಗೆ ಬರಲು ಭಾರಿ ಪ್ರಭಾವದ ಜತೆಗೆ ತಮ್ಮ ಆರ್ಥಿಕ ಶಕ್ತಿಯನ್ನೂ ಪ್ರದರ್ಶಿಸಲೇಬೇಕು. ಅಷ್ಟರಮಟ್ಟಿಗೆ ಸಂಚಾರ ಠಾಣೆಗಳು ಶಕ್ತಿಕೇಂದ್ರಗಳು.
ಸಸ್ಪೆಂಡ್ ಮೇನಿಯಾ: ಸಂಚಾರ ಠಾಣೆಗೆ ಕುರ್ಚಿ ಸಿಗಬೇಕೆಂದರೆ ಶಕ್ತಿ ಪ್ರದರ್ಶನದ ಜತೆಗೆ ಚಾಣಾಕ್ಷತೆಯೂ ಬೇಕು. ಕೊಂಚ ಎಚ್ಚರ ತಪ್ಪಿದರೆ ಹಣವೇ ಕುರ್ಚಿಯನ್ನೂ ಬಲಿ ತೆಗೆದುಕೊಂಡು ಬಿಡುತ್ತದೆ. ಇದು ಸಾಕಷ್ಟು ಬಾರಿ ಹೀಗೆಯೇ ಆಗಿದೆ.
ಅದರಲ್ಲೂ ದೇವರಾಜ ಸಂಚಾರ ಠಾಣೆಗಂತೂ ಸಸ್ಪೆಂಡ್ ಅಪಖ್ಯಾತಿಯಿದೆ. ಇಲ್ಲಿ ಎಸ್‌ಐ ಆಗಿದ್ದ ಅಂಕಯ್ಯ ಈ ರೀತಿಯ ಆರೋಪಗಳಿಗೆ ಸಿಲುಕಿದ್ದರು. ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಸಸ್ಪೆಂಡ್ ಆದರು.
ಇದಾದ ಕೆಲವೇ ದಿನದಲ್ಲಿ ಇನ್ಸ್‌ಪೆಕ್ಟರ್ ಸರದಿ. ಒಳ್ಳೆಯ ಅಧಿಕಾರಿ ಎಂದು ಹೆಸರು ಪಡೆದಿದ್ದ ರಾಮಚಂದ್ರ, ಪ್ಲಾನೆಟೆಕ್ಸ್ ನಲ್ಲಿ ಒಂದು ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು. ಬಳಿಕ ಅವರಿಗೂ ಸಸ್ಪೆಂಡ್ ಶಿಕ್ಷೆ.
ಠಾಣೆಯ ಪ್ರಮುಖರಿಬ್ಬರೂ ಸಸ್ಪೆಂಡ್ ಆಗಿದ್ದೇ ತಡ ಇಲ್ಲಿಗೆ ಬರಲು ಪ್ರಭಾವಿಗಳೂ ಹಿಂದೇಟು ಹಾಕಿದರು. ಇದರಿಂದ ತಿಂಗಳವರೆಗೆ ಇಲ್ಲಿನ ಹುದ್ದೆ ಖಾಲಿಯೇ ಉಳಿದಿತ್ತು. ಎಸ್‌ಐ ನೇಮಕವಾದರೂ ಇನ್ಸ್‌ಪೆಕ್ಟರ್ ಹುದ್ದೆ ಇನ್ನೂ ಖಾಲಿ ಇದೆ. ಸದ್ಯಕ್ಕೆ ಕಾಯಂ ಅಧಿಕಾರಿ ಬರುವ ಸೂಚನೆ ಇಲ್ಲ.
ಹೊಸ ಎಸ್‌ಐ-ಪ್ರಭಾರ ಪಿಐ: ದೇವರಾಜ ಸಂಚಾರ ಠಾಣೆಗೆ ಎಸ್‌ಐ ಆಗಿ ಬರಲು ನಗರದಲ್ಲೇ ಸಾಕಷ್ಟು ಶಕ್ತಿವಂತ ಎಸ್‌ಐ ಗಳಿದ್ದಾರೆ. ಆದರೆ ಅವರಿಗೂ ಸಸ್ಪೆಂಡ್ ಮೇನಿಯಾ ಆವರಿಸಿದ್ದ ರಿಂದ ಹಿಂದೆ ಸರಿದರು. ಇದರಿಂದ ಸರಕಾರವೇ ಹೊಸ ಎಸ್‌ಐ ಅವರನ್ನು ಇಲ್ಲಿಗೆ ನೇಮಿಸಿತು. ದೂರದ ಕೋಲಾರದಿಂದ ಈಗ ಬಾಲಕೃಷ್ಣ ಎಸ್‌ಐ ಆಗಿ ಇಲ್ಲಿಗೆ ಬಂದರು. ಇನ್ನೂ ಇನ್ಸ್‌ಪೆಕ್ಟರ್ ಹುದ್ದೆಯದ್ದೂ ಇದೇ ಕಥೆ. ಸದ್ಯ ನಗರದಲ್ಲಿರುವವರಿಗೆ ಈ ಹುದ್ದೆಗೆ ಬರಲು ಮನಸಿದ್ದರೂ ಹಿಂದೇಟು ಹಾಕುತ್ತಿದ್ದಾರೆ. ನೇಮಕಕ್ಕೆ ಡಿಜಿ ಅವರ ಬಿಗಿ ನಿಲುವುಗಳೂ ಅಡ್ಡಿಯಾಗಿದೆ. ಈಗ ಸಮಾವೇಶ ಗಳಲ್ಲದೇ ದಸರೆಗೂ ಬರುತ್ತಿರುವುದರಿಂದ ಭಾರ ಕಡಿಮೆ ಮಾಡಲು ಆಯುಕ್ತ ಸುನೀಲ್ ಅಗರವಾಲ್ ಮುಂದಾಗಿ ದ್ದಾರೆ. ಈಗ ಪ್ರಭಾರ ಇನ್ಸ್‌ಪೆಕ್ಟರ್ ಆಗಿ ಹಿರಿಯ ಇನ್ಸ್‌ಪೆಕ್ಟರ್ ಅಶೋಕ ಪುರಂ ಠಾಣೆಯ ನಂಜುಂಡ ಅವರನ್ನು ಆಯುಕ್ತರು ನೇಮಕ ಮಾಡಿದ್ದಾರೆ. ಮೂರು ದಿನದ ಹಿಂದೆಯೇ ನಂಜುಂಡ ಅಧಿಕಾರ ಸ್ವೀಕರಿಸಿ ಕೆಲಸ ಶುರು ಮಾಡಿದ್ದಾರೆ.
ಸಂಚಾರ ಠಾಣೆಯೆಂದರೆ..: ನಗರದಲ್ಲಿರುವ ಸಂಚಾರ ಪೊಲೀಸ್ ಠಾಣೆಗಳ ಸಂಖ್ಯೆ ಆರು. ಆರು ಮಂದಿ ಎಸ್‌ಐ ಅಲ್ಲದೇ, ಮೂವರು ಸರ್ಕಲ್ ಇನ್ಸ್‌ಪೆಕ್ಟರ್‌ಗಳು, ಒಬ್ಬರು ಎಸಿಪಿ ಸಂಚಾರಕ್ಕಾಗಿಯೇ ಇದ್ದಾರೆ.ಈ  ಸಂಚಾರಿ ಪೊಲೀಸ್ ಠಾಣೆ ಗಳಿಗೆ ಎಸ್‌ಐ ಆಗಿ ಬರಬೇಕೆಂದರೆ ಭಾರಿ ಬೇಡಿಕೆ. ಅಷ್ಟರ ಮಟ್ಟಿಗಿನ ‘ಶಕ್ತಿ’ ಕೇಂದ್ರಗಳಿವು. ದೇವರಾಜ ಠಾಣೆ ಸಂಚಾರಿ ಠಾಣೆ ಎಸ್‌ಐ ಸ್ಥಾನ ಅಲಂಕರಿಸಬೇಕೆಂದರೆ ಒಂದು ಕೈ ಮೇಲೆ ಎನ್ನುವಂತ ಸ್ಥಿತಿ.
ನಗರದ ವಾಹನ ಸಂಚಾರ, ಹೊರ ರಾಜ್ಯಗಳಿಂದ ಬರುವ ಪ್ರಮುಖ ವಾಹನಗಳ ನಿಯಂತ್ರಣ ಸಂಚಾರ ಪೊಲೀಸ್ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಬರಲು ಪೊಲೀಸರಿಗೂ ಬಲು ಇಷ್ಟ. ಬೇರೆ ಠಾಣೆಗಳಲ್ಲಿ ಪತ್ತೆಯ ತಲೆನೋವು ಇರುತ್ತದೆ. ಇಲ್ಲಿ ಅದಿಲ್ಲ.
ಪ್ರತಿ ವರ್ಷ ಸಂಚಾರ ಠಾಣೆಯ ಎಸ್‌ಐಗಳ ಬದಲಾವಣೆ ಆಗುತ್ತಲೇ ಇರುತ್ತದೆ. ಈ ವರ್ಷ ವಿವಿಪುರಂ ಸಂಚಾರ ಠಾಣೆ ಎಸ್‌ಐ ಪರಶುರಾಮ್ ಒಬ್ಬರೇ ಬದಲಾಗಿದ್ದು. ಅಲ್ಲಿಗೆ ಬಂದ ಪ್ರಕಾಶ್ ದೊಡ್ಡ ಮಟ್ಟದ ಪ್ರಭಾವವನ್ನೇ ಬಳಸಿದ್ದಾರೆ ಎನ್ನುತ್ತವೆ ಇಲಾಖೆ ಮೂಲಗಳು.
ದೇವರಾಜ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಸಸ್ಪೆಂಡ್ ಆದ ನಂತರ ಹಿಂದೆ ಸಂಚಾರದಲ್ಲಿ ಕೆಲಸ ಮಾಡಿ ಅನುಭವ ಇರುವ ನಂಜುಂಡ ಅವರನ್ನು ನೇಮಿಸಲಾಗಿದೆ. ಅವರನ್ನೇ ಕಾಯಂ ಆಗಿ ನೇಮಿಸಿ ಅಶೋಕಪುರಂ ಠಾಣೆಗೆ ಬೇರೆ   ಅಧಿಕಾರಿ ನೇಮಿಸುವಂತೆ ಡಿಜಿಗೆ ಪತ್ರ ಬರೆದಿದ್ದೇನೆ.
-ಸುನೀಲ್ ಅಗರವಾಲ್, ನಗರ ಪೊಲೀಸ್ ಆಯುಕ್ತ

ಹೇಮಾವತಿ ಹಿನ್ನೀರು ಸೃಷ್ಟಿಸಿದ ಸಂಕಷ್ಟ

ಚೆರಿಯಮನೆ ಸುರೇಶ್ ಶನಿವಾರಸಂತೆ
ಹೇಮಾವತಿ ನದಿಗೆ ಅಡ್ಡಲಾಗಿ ಗೊರೂರು ಜಲಾಶಯ ನಿರ್ಮಿಸಿ ಹಾಸನದ ಲಕ್ಷಾಂತರ ಮಂದಿ ರೈತರನ್ನು ಹೇಮಪಟ್ಟಕದಲ್ಲಿ ಕೂರಿಸಿದ ಸರಕಾರ ಇದೇ ವೇಳೆ ಹಿನ್ನೀರಿನಿಂದ ಬದುಕು ಕಳೆದುಕೊಂಡ ಜನಾರ್ದನಹಳ್ಳಿ ರೈತರ ಬದುಕನ್ನು ಹೇಮಾವತಿ ಹಿನ್ನೀರಿಗೆ ದೂಡಿದ ಕಣ್ಣೀರಿನ ಕಥೆ ಇದು.
ಹೇಮಾವತಿ ಹಿನ್ನೀರಿನಿಂದ ಹೊನ್ನಿನಂಥ ಭೂಮಿ ಕಳೆದುಕೊಂಡ ರೈತರ ಕಣ್ಣೀರಿಗೆ ಕೊನೆಯೇ ಇಲ್ಲ. ಬೀದಿಗೆ ಬಿದ್ದ ರೈತರು ೪೫ ವರ್ಷಗಳ ಹಿಂದೆ ಕಣ್ಣೀರಿನ ನದಿಯನ್ನೇ ಹರಿಸಿದರು. ಇದಕ್ಕೆ ಪ್ರತಿಯಾಗಿ ಸರಕಾರ ಭರವಸೆಯ ನದಿಯನ್ನಷ್ಟೇ ಹರಿಸಿದೆ.
ಹಾಸನ ತಾಲೂಕಿನ ಗೊರೂರಿನಲ್ಲಿ ಸಕಲೇಶಪುರದಲ್ಲಿ ಹುಟ್ಟಿ ಹರಿಯುವ ಹೇಮಾವತಿ ನದಿಗೆ ಅಡ್ಡಲಾಗಿ ಗೊರೂರು ಡ್ಯಾಂ ೧೯೬೫ ರಲ್ಲಿ ತಲೆ ಎತ್ತಿ ನಿಂತಿತು. ಹೇಮಾ ವತಿಯು ಡ್ಯಾಂನಲ್ಲಿ ತುಂಬಿಕೊಳ್ಳುತ್ತಿದ್ದಂತೆಯೇ ಇತ್ತ ಕೊಡಗಿನ ಜನಾರ್ದನಹಳ್ಳಿ ಮುಳುಗಲು ಪ್ರಾರಂಭ ವಾಯಿತು. ನೋಡ ನೋಡುತ್ತಿದ್ದಂತೆ ಜನಾರ್ದನಹಳ್ಳಿಯ ಸಂಪದ್ಭರಿತ ಭೂಮಿ ಹೇಮಾವತಿ ಒಡಲಿನಲ್ಲಿ ಲೀನವಾಯಿತು.
ಹೇಮಾವತಿಯ ಹಿನ್ನೀರಿನಿಂದ ಭೂಮಿ ಕಳೆದು ಕೊಂಡ ರೈತರು ಗ್ರಾಮದ ಮತ್ತೊಂದು ಬದಿಯಲ್ಲಿ ನೆಲೆ ಕಂಡು ಕೊಳ್ಳಲು ಪ್ರಾರಂಭಿಸಿದರು. ಸುಮಾರು ೪೭ ಕುಟುಂಬಗಳು ಬೀದಿಗೆ ಬಿದ್ದವು. ಆ ಸಂದರ್ಭ ೧೦ ಕುಟುಂಬಗಳಿಗೆ ತಲಾ ೩ ಸಾವಿರ ರೂ. ಪರಿಹಾರ ದೊರೆಯಿತು. ಉಳಿದವರಿಗೆ ನಯಾಪೈಸೆ ದೊರೆಯಲಿಲ್ಲ. ಸರಕಾರ ಭೂಮಿ ಕಳೆದು ಕೊಂಡ ರೈತರಿಗೆ ಕನಿಷ್ಠ ಪುನರ್ವಸತಿ ಕಲ್ಪಿಸಲು ಕೂಡ ಮುಂದಾಗಲಿಲ್ಲ. ಭೂಮಿ ಕಳೆದುಕೊಂಡ ರೈತರು ಅಳಿದು ಳಿದ ಹಣದಲ್ಲಿ ಸಣ್ಣಪುಟ್ಟ ಮನೆಗಳನ್ನು ಕಟ್ಟಿಕೊಂಡು ಇಂದಿಗೂ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಪರಿಹಾರಕ್ಕಾಗಿ ನಾಲ್ಕು ದಶಕಗಳಿಂದ ರೈತರು ನಡೆಸಿದ ಹೋರಾಟಕ್ಕೆ ಸರಕಾರ ನಯಾಪೈಸೆಯ ಬೆಲೆ ನೀಡಲಿಲ್ಲ. ಪ್ರಸ್ತುತ ಹೇಮಾವತಿ ಹಿನ್ನೀರು ಆವರಿಸಿ ಕೊಂಡಿರುವ ಜಾಗದಲ್ಲಿ ಈ ಹಿಂದೆ ೪೭ ಕುಟುಂಬಗಳು ಉತ್ತಮ ಬದುಕು ನಡೆಸುತ್ತಿದ್ದವು. ಎಲ್ಲರೂ ಕನಿಷ್ಠ  ೧೦ ರಿಂದ ಗರಿಷ್ಠ ೪೫ ಎಕರೆ ವರೆಗೆ ಜಮೀನು ಹೊಂದಿದ್ದರು. ಈಗ ಯಾರ ಬಳಿಯೂ ಎರಡು ಎಕರೆಗಿಂತ ಹೆಚ್ಚಿನ ಭೂಮಿ ಇಲ್ಲ. ಹಲವರ ಬಳಿ ಮನೆಯೊಂದನ್ನು ಹೊರತುಪಡಿಸಿ ಯಾವುದೇ ಆಸ್ತಿಗಳಿಲ್ಲ. ಒಂದು ಕಾಲದಲ್ಲಿ ಹಲವು ಮಂದಿಗೆ ತಮ್ಮ ಹೊಲಗಳಲ್ಲಿ ಉದ್ಯೋಗ ನೀಡುತ್ತಿದ್ದ ಜಮೀನ್ದಾರ ಕುಟುಂಬಗಳು ಇಂದು ಬೇರೆಯವರ ಬಳಿ ಕೂಲಿ ಮಾಡಿ ಜೀವಿಸುತ್ತಿ ದ್ದಾರೆ.
ಅಳಿದುಳಿದ ಜನಾದನಹಳ್ಳಿಯಲ್ಲಿ ಪ್ರಸ್ತುತ ೭೨ ಕುಟುಂಬಗಳು (ಸುಮಾರು ೪೦೦ ಮಂದಿ) ವಾಸ ಮಾಡು ತ್ತಿವೆ. ಇವರಲ್ಲಿ ಬಡ ಹಾಗೂ  ಮಧ್ಯಮವರ್ಗದವರೇ ಹೆಚ್ಚಿದ್ದಾರೆ. ಗ್ರಾಮದ ಪಕ್ಕದಲ್ಲಿಯೇ ಹಿನ್ನೀರು ಇರುವುದ ರಿಂದ ಇಡೀ ಗ್ರಾಮ ಶೀತಪ್ರದೇಶವಾಗಿ ಮಾರ್ಪಾಡುಗೊಂಡಿದೆ. ಮಳೆಗಾಲದಲ್ಲಂತೂ ಸಮಸ್ಯೆ ದ್ವಿಗುಣಗೊಳ್ಳುತ್ತದೆ. ದಿನವಿಡೀ ಹೊಲದಲ್ಲಿ ದುಡಿದು ಬೆವರು ಸುರಿಸಿ ಬೆಳೆದ ಬೆಳೆಗಳನ್ನು ಮನೆಯಲ್ಲಿ  ಶೇಖರಿಸಿಟ್ಟುಕೊಳ್ಳಲಾಗುತ್ತಿಲ್ಲ.ಶೀತದ ವಾತಾವರಣ ಇರುವುದರಿಂದ ಆಹಾರಧಾನ್ಯಗಳು ಕೆಡುತ್ತಿವೆ. ನೀರು ಮಡುಗಟ್ಟಿ ನಿಲ್ಲುವುದರಿಂದ ಗ್ರಾಮದಲ್ಲಿ ಬೀಸುವ ಗಾಳಿಯಲ್ಲಿ ದುರ್ನಾತ ಸೇರಿಕೊಂಡು ಇಡೀ ಗ್ರಾಮವನ್ನು ಕಲುಷಿತಗೊಳಿಸುತ್ತಿದೆ. ಅಲ್ಪಸ್ವಲ್ಪ ಇರುವ ಭೂಮಿಯಲ್ಲಿ ಬೆಳೆ ತೆಗೆದು ನೆಮ್ಮದಿಯ ಬದುಕು ನಡೆಸೋಣವೆಂದರೆ ಕಾಡಾನೆಗಳ ಕಾಟ.
ಜನಾರ್ದನಹಳ್ಳಿ ಶೀತಪೀಡಿತ ಗ್ರಾಮವಾಗಿರು ವುದರಿಂದ ಕಾಯಿಲೆಯಿಂದ ಬಳಲುತ್ತಿರುವವರು, ಸಣ್ಣ ಮಕ್ಕಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೆಡೆ ಶೀತ ಪ್ರದೇಶ, ಮತ್ತೊಂದೆಡೆ ಮಡುಗಟ್ಟಿರುವ ಹಿನ್ನೀರಿನಿಂದ ಸೊಳ್ಳೆಗಳು ಸೃಷ್ಟಿಯಾಗಿ ಕಾಯಿಲೆ ಹರಡುತ್ತಿವೆ. ‘ನಾಲ್ಕು ದಶಕಗಳಿಂದ ಹೋರಾಟ ನಡೆಸುತ್ತಿದ್ದೇವೆ. ಸರಕಾರ ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ’ ಎಂದು ಇಲ್ಲಿನ ಜನರು ದುಃಖದಿಂದ ಹೇಳುತ್ತಾರೆ.
ಗ್ರಾಮಕ್ಕೆ ಗ್ರಾ.ಪಂ.ಸದಸ್ಯರಿಂದ ಹಿಡಿದು ಶಾಸಕರವರೆಗಿನ ಎಲ್ಲಾ ಜನಪ್ರತಿನಿಧಿಗಳು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಸಚಿವರು ಭೇಟಿ ಕೊಟ್ಟಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವ ಮಾತುಗಳನ್ನು ಆಡಿದ್ದಾರೆ. ಆದರೆ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಎಂ.ಸಿ.ನಾಣಯ್ಯ ಕಾನೂನು ಸಚಿವರಾಗಿದ್ದಾಗ ಗ್ರಾಮಕ್ಕೆ ಭೇಟಿ ನೀಡಿ, ‘ಜನಾರ್ದನಹಳ್ಳಿಯನ್ನು ಶೀತಪೀಡಿತ ಪ್ರದೇಶವೆಂದು ಘೋಷಿಸಿ, ಗ್ರಾಮದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ’ ಎಂದು ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದರು.
ಎಂ.ಸಿ. ನಾಣಯ್ಯ ಅವರ ಪ್ರಯತ್ನದಿಂದ ಗ್ರಾಮಕ್ಕೆ ಅಧಿಕಾರಿಗಳ ದಂಡು ಭೇಟಿ ನೀಡಿ ಪರಿಶೀಲಿಸಿತು. ಆಗಿನ ಜಿಲ್ಲಾ ಉಪ ವಿಭಾಗಾಧಿಕಾರಿ ‘ಜನಾರ್ದನಹಳ್ಳಿಯ ಕೆಲವು ಮನೆಗಳು ಮಾತ್ರ ಶೀತಪೀಡಿತ ಪ್ರದೇಶದಲ್ಲಿದ್ದು, ಗ್ರಾಮವನ್ನು ಸ್ಥಳಾಂತರಿಸುವ ಅವಶ್ಯ ಇಲ್ಲ’ ಎಂದು ಸರಕಾರಕ್ಕೆ ವರದಿ ನೀಡಿದರು. ಹೀಗಾಗಿ ಜನಾರ್ದನಹಳ್ಳಿ ಜನರ ಪುನರ್ವಸತಿ ಕನಸು ನನಸಾಗಲೇ ಇಲ್ಲ.
ಇಷ್ಟೆಲ್ಲ ನಡೆದರೂ ಗ್ರಾಮಸ್ಥರು ಹೋರಾಟವನ್ನು ಕೈ ಬಿಡಲಿಲ್ಲ. ನಿರಂತರ ಹೋರಾಟದ ಫಲವಾಗಿ ಸರಕಾರ ಪುನರ್ವಸತಿಗಾಗಿ ಪಕ್ಕದ ನೀರುಗುಂದ ಗ್ರಾಮದಲ್ಲಿ ಐದೂವರೆ ಎಕರೆ ಜಾಗವನ್ನು ಕಾಯ್ದಿರಿಸಿತು. ಕಂದಾಯ ಇಲಾಖೆಯು ಜನಾದನಹಳ್ಳಿಯನ್ನು ಶೀತಪೀಡಿತ ಪ್ರದೇಶವೆಂದು ಘೋಷಣೆ ಮಾಡಿದರೆ ಸ್ಥಳಾಂತರ ಪ್ರಕ್ರಿಯೆ ಸುಗಮಗೊಳ್ಳಲಿದೆ.
ಇದೇ ಗ್ರಾಮದಲ್ಲಿ ಕೆಲವು ಬೆಸ್ತರ ಕುಟುಂಬಗಳು ವಾಸ ಮಾಡುತ್ತಿವೆ. ಇವರಿಗೆ ಸರಕಾರ ಐದು ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಹಿನ್ನೀರಿನಲ್ಲಿ ಮುಳುಗಿ ಬದುಕು ಕಳೆದುಕೊಂಡ ರೈತರ ತಲೆಮೇಲೊಂದು ಸೂರು ಕಟ್ಟಿಕೊಡಲು ಸರಕಾರ ಇದುವರೆಗೂ ಚಿಂತನೆ ನಡೆಸದೇ ಇರುವುದು ದುರಂತವೇ ಸರಿ.
ಸರಕಾರ ನಮ್ಮನ್ನು ಹೇಮಪಟ್ಟಕದಲ್ಲಿ ಕೂರಿಸುವುದು ಬೇಡ. ಕನಿಷ್ಠಪಕ್ಷ ಪುನರ್ವಸತಿ ಕಲ್ಪಿಸಿಕೊಟ್ಟರೆ ಸಾಕು ಎಂಬುದು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಬದುಕನ್ನು ಕಳೆದುಕೊಂಡ ಜನಾರ್ದನಹಳ್ಳಿಯ ಜನರ ಬೇಡಿಕೆಯಾಗಿದೆ. ಇವರ ಕನಿಷ್ಠ ಆಸೆಯನ್ನು ಸರಕಾರ ಈಡೇರಿಸುವ ಸೌಜನ್ಯ ತೋರಬೇಕಾಗಿದೆ. ಆ ಮೂಲಕ ನೊಂದವರ ಕಣ್ಣೀರು ಒರೆಸುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ.

ಗುರುಪ್ರಸಾದ್‌ಗೆ ರಾಷ್ಟ್ರಪತಿ ಪದಕ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗಿನ ಯುವಕನೊಬ್ಬ ನಕ್ಸಲ್- ಭಯೋ ತ್ಪಾದಕ ಸಂಘಟನೆಗಳ ನಡುವಿನ ನಂಟಿನ ಆರೋಪದಡಿ ಪೊಲೀಸರ ಬಂಧನಕ್ಕೆ ಒಳಗಾಗಿರುವ ಘಟನೆ ಮಧ್ಯೆಯೇ ನಕ್ಸಲ್ ವಿರುದ್ಧದ ಕಾದಾಟದಲ್ಲಿ ಬಲಿದಾನಗೈದ ಕೊಡಗಿನ ಪೊಲೀಸ್ ಕಾನ್ಸ್‌ಸ್ಟೇಬಲ್ ಕೊಡಗಿನ ಗುರು ಪ್ರಸಾದ್‌ಗೆ ರಾಷ್ಟ್ರಪತಿ ಪದಕ ಘೋಷಣೆ ಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಮಾವಿನ ಹೊಳೆಯಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆ ಸಂದರ್ಭ ಗುಂಡಿನ ಚಕಮಕಿಯಲ್ಲಿ ನಕ್ಸಲರ ಗುಂಡಿಗೆ ಬಲಿಯಾದ ಎಂ.ಎನ್. ಗುರುಪ್ರಸಾದ್ ಮಡಿಕೇರಿ ತಾಲೂಕು ಕುಂದಚೇರಿ ಗ್ರಾಮದ ಮುಕ್ಕಾಟಿ ಸಿ. ನಂಜಪ್ಪ- ಲೀಲಾವತಿ ದಂಪತಿಯ ಏಕೈಕ ಪುತ್ರ.
ವಯೋವೃದ್ಧ ಪೋಷಕರಿಗೆ ಪ್ರೀತಿಯ ಮಗ ಹಾಗೂ ಒಡಹುಟ್ಟಿದ ಐವರು ಸಹೋದರಿಯರಿಗೆ ಮುದ್ದಿನ ಸೋದರನ ಅಕಾಲಿಕ ಸಾವು ಇಂದಿಗೂ ಮರೆಯಲಾಗದ ನೋವು. ಚೇರಂಬಾಣೆ ಕೊಡವ ಸಮಾಜದಲ್ಲಿ ಇದ್ದ ಚಿಕ್ಕಪ್ಪ ರಾಜು ಅವರ ಪುತ್ರಿ ಕುಮುದಾ ಅವರ ವಿವಾಹ ದಿನದಂದೇ ಪಾರ್ಥಿವ ಶರೀರರವಾಗಿ ಬಂದಿದ್ದು ವಿಪರ‍್ಯಾಸ.
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಐದನೇ ತುಕಡಿಗೆ ೧೯೯೯ ರಲ್ಲಿ ಪೇದೆಯಾಗಿ ಕರ್ತವ್ಯಕ್ಕೆ ಸೇರಿದ್ದ. ಕುಟುಂಬದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಎಸ್‌ಎಸ್‌ಎಲ್‌ಸಿಗೆ ಮೊಟಕುಗೊಳಿಸಿ, ಪೊಲೀಸ್ ಕರ್ತವ್ಯಕ್ಕೆ ಸೇರಿದ್ದರು. ಕಾನಕಂಡ ಪ್ರಾಥಮಿಕ ಶಾಲೆಯಲ್ಲಿ ಕಿರಿಯ ಪ್ರಾಥಮಿಕ ಶಿಕ್ಷಣ,  ಚೆಟ್ಟಿಮಾನಿ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ಹಾಗೂ ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಿಕ್ಷಣ ಮುಗಿಸಿದ್ದರು.
ಕರ್ನಾಟಕ- ತಮಿಳುನಾಡು ರಾಜ್ಯಕ್ಕೆ ಸವಾಲಾಗಿದ್ದ ನರಹಂತಕ ವೀರಪ್ಪನ್ ವಿರುದ್ಧ ಚಾಮರಾಜನಗರ ಜಿಲ್ಲೆಯ ಮಲೆಮಹಾದೇಶ್ವರ ಬೆಟ್ಟದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂರು ವರ್ಷ ಸಕ್ರಿಯವಾಗಿದ್ದ ಅವರಿಗೆ ವೀರಪ್ಪನ್ ಸತ್ತ ನಂತರ ಸರಕಾರ ೨ ಲಕ್ಷ ರೂ. ಇನಾಮು ನೀಡಿತ್ತು. ಸುಂದರ ಬದುಕಿನ ಕನಸಿನೊಂದಿಗೆ ಗುರುಪ್ರಸಾದ್, ಕುಶಾಲನಗರದಲ್ಲಿ ನಿವೇಶನ ಖರೀದಿಸಿದ್ದರು. ಮನೆ ಕಟ್ಟುವ ಆಸೆ ಈಡೇರುವ ಮುನ್ನವೇ ವಿಧಿಲೀಲೆಗೆ ಬಲಿಯಾಗಿದ್ದರು.
ನಂಜಪ್ಪ- ಲೀಲಾವತಿ ದಂಪತಿಗೆ ಪ್ರಾರಂಭದಲ್ಲಿ ಐವರು ಪುತ್ರಿಯರು ಜನಿಸಿದರು, ಪುತ್ರ ಸಂತಾನದ ಭಾಗ್ಯ ಇರಲಿಲ್ಲ. ದಂಪತಿ ಪುತ್ರ ಸಂತಾನಕ್ಕಾಗಿ ದೇವರ (ಗುರು) ಮೊರೆ ಹೋದರು. ಅಲ್ಲಿಂದ ಮಗ ಜನಿಸಿದಕ್ಕಾಗಿ ಆತನಿಗೆ ‘ಗುರುಪ್ರಸಾದ’ ಎಂದು ನಾಮಕರಣ ಮಾಡಿದರು. ದಂಪತಿಯ ಪ್ರಾರ್ಥನೆಯಂತೆ ಜನಿಸಿದ ಮಗನಿಂದ ಫಲ ದೊರೆಯುವ ಭಾಗ್ಯ ಮಾತ್ರ ಸಫಲವಾಗಿಲ್ಲ.
ಈಡೇರದ ಭರವಸೆ: ನಕ್ಸಲ್ ಗುಂಡಿಗೆ ಬಲಿಯಾದ ನಂತರ ಗುರುಪ್ರಸಾದ್ ಪ್ರಾರ್ಥಿವ ಶರೀರ ಹುಟ್ಟೂರಿಗೆ ತಂದ ಸಂದರ್ಭದಲ್ಲಿ ಜನಪ್ರತಿನಿಧಿಗಳು ನೀಡಿದ್ದ ಭರವಸೆ ಎರಡು ವರ್ಷದ ನಂತರವೂ ಈಡೇರಿಲ್ಲ. ಕುಗ್ರಾಮಕ್ಕೆ ಇನ್ನೂ ವಿದ್ಯುತ್ ವ್ಯವಸ್ಥೆ ಇಲ್ಲ. ದೇಶ ಕಾಯುವ ಕಾಯಕದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಊರಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದೆಂದು ನೀಡಿದ ಭರವಸೆ ಇಂದಿಗೂ ಈಡೇರಿಲ್ಲ.
ಗುರುಪ್ರಸಾದ್‌ಗೆ ಗೌರವ ಸಲ್ಲಿಸಲು ಚೆಟ್ಟಿಮಾನಿ ಯಲ್ಲಿ ಪ್ರತಿಮೆ ಸ್ಥಾಪಿಸುವ ಘೋಷಣೆಯನ್ನು ನೀಡಿದ್ದ ಜನಪ್ರತಿನಿಧಿಗಳು ಅತ್ತ ಮುಖ ಮಾಡಿಲ್ಲ. ಹೊಸ ದಿಲ್ಲಿಯ ಸಿಆರ್‌ಪಿಯಲ್ಲಿ ಕೆಲಸ ಮಾಡುತ್ತಿದ್ದ ಗುರು ಪ್ರಸಾದ್ ಸಹೋದರಿ ಕುಮುದಾ ಅವರನ್ನು ಕರ್ನಾಟಕ ಸೇವೆಗೆ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಅದೂ ಈಡೇರಿಲ್ಲ. ಪ್ರಸ್ತುತ ಕುಮುದಾ ರಾಜಸ್ತಾನದಲ್ಲಿದ್ದಾರೆ.

‘ಮೇವು’ ದಷ್ಟ ಪುಷ್ಟ

ಕುಂದೂರು ಉಮೇಶಭಟ್ಟ ಮೈಸೂರು
ರಾಸುಗಳಿಗೆ ನೀಡುವ ಮೇವನ್ನು ಪೌಷ್ಟಿಕಾಂಶವಾಗಿಸುವ ಜತೆಗೆ ಅದನ್ನು ವರ್ಷವಿಡೀ ಸಂಗ್ರಹಿಸಿಡುವ ವಿಶಿಷ್ಟ ಯೋಜನೆ ರೈತರ ಬಾಗಿಲಿಗೆ ಬಂದಿದೆ.
ಮೈಸೂರು ಹಾಗೂ ಧಾರವಾಡ ಹಾಲು ಒಕ್ಕೂಟಗಳು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೇವು ಬಿಲ್ಲೆ  ಘಟಕ ಸ್ಥಾಪನೆಗೆ ತಲಾ ೨.೫೦ ಕೋಟಿ ರೂ.ಗಳನ್ನು  ಪಡೆದುಕೊಂಡಿವೆ. ಚಾಮರಾಜನಗರ ಹಾಗೂ ಹಾವೇರಿ ಜಿಲ್ಲೆಯಲ್ಲಿ ಇಂಥ ಘಟಕಗಳು ಮೊದಲು ಸ್ಥಾಪನೆಗೊಳ್ಳಲಿವೆ. ರೈತರೂ ತಮ್ಮ ಊರಲ್ಲಿ ಮಿನಿ ಘಟಕ ಸ್ಥಾಪಿಸಿಕೊಳ್ಳಲು ಯೋಜನೆ ಅವಕಾಶ ನೀಡಿದೆ. ಇಲ್ಲಿನ ರೈತರ ಪ್ರತಿಕ್ರಿಯೆ ಆಧರಿಸಿ ಇತರೆ ಒಕ್ಕೂಟಗಳಿಗೂ ಈ ನೆರವು ದೊರೆಯಲಿದೆ.
ಏನಿದು ಯೋಜನೆ: ರಾಸುಗಳ ಆರೋಗ್ಯ ಸುಧಾರಣೆ ಹಾಲು ಉತ್ಪಾದನೆ ಸಂತಾನಾ ಭಿವೃದ್ಧಿ ಹಾಗೂ ವಿಶೇಷವಾಗಿ ಹಾಲು ಉತ್ಪಾದನಾ ವೆಚ್ಚ ಕಡಿಮೆ ಮಾಡುವಲ್ಲಿ ಹಸಿರು ಹಾಗೂ ಒಣ ಮೇವಿನ ಪಾತ್ರವೇ ಪ್ರಮುಖ.
ಮಳೆಗಾಲದಲ್ಲಿ ಮಾತ್ರ ಹಸಿರು ಮೇವನ್ನು ರಾಸುಗಳಿಗೆ ನೀಡುತ್ತಿದ್ದು ಉಳಿದ ದಿನಗಳಲ್ಲಿ ಒಣ ಮೇವನ್ನೇ ಹೆಚ್ಚು ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ರೈತರು ಧಾನ್ಯ ಬೆಳೆ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಒಣ ಮೇವಿನ ಲಭ್ಯತೆಯೂ ಕಡಿಮೆಯಾಗುತ್ತಿದೆ. ಹಾಲು ಉತ್ಪಾದಕರು ಉತ್ಪಾದನೆ ಹೆಚ್ಚಿಸಲು ದುಬಾರಿ ಪಶು ಆಹಾರ ಅವಲಂಬಿಸಿದಾಗ ವೆಚ್ಚ ಅಧಿಕಗೊಂದು ರೈvರು ಹೈನೋದ್ಯಮದಲ್ಲಿ ಆಸಕ್ತಿ ಕಳೆದುಕೊಳ್ಳುವ ಸಂಧರ್ಭ ಹೆಚ್ಚು.  ಇದಕ್ಕಾಗಿಯೇ ಹಸಿರು ಮೇವು ಲಭ್ಯತೆ ಕಡಿಮೆ ಇರುವ ಪ್ರದೇಶದ ರೈತರಿಗೆ ಹೆಚ್ಚು ಅನುಕೂಲ ಮಾಡಿ ಕೊಡಲು ಒಣಮೇವನ್ನು ಒತ್ತಡೀಕರಣ ತಂತ್ರಜ್ಞಾನ ದಿಂದ ಸಂಸ್ಕರಿಸಿ ಒಣ ಮೇವಿನಲ್ಲಿ ಇರುವ ಅತ್ಯಲ್ಪ ಪೌಷ್ಠಿಕಾಂಶ ವೃದ್ಧಿಸುವ ಘಟಕಗಳಿಗೆ ಕೇಂದ್ರ ಸರಕಾರ ನೆರವು ನೀಡುತ್ತಿದೆ. ವಾರ್ಷಿಕವಾಗಿ ಕೋಟ್ಯಾಂತರ ರೂ.ಗಳನ್ನು ಕೇಂದ್ರ ಸರಕಾರ ವೆಚ್ಚ ಮಾಡುತ್ತಿದ್ದು.ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಜಾರ್ಖಂಡ್ ರಾಜ್ಯಗಳು ಇದರ ಲಾಭ ಪಡೆಯುತ್ತಿವೆ.ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಇಂಥ ಘಟಕ  ಸ್ಥಾಪನೆಗೆ ಕರ್ನಾಟಕಕಕ್ಕೆ ಅನುಮತಿ ನೀಡಿದೆ.
ಎರಡು ವಿಧಾನಗಳು: ಲಾಭದಾಯಕ ಹೈನುಗಾರಿಕೆಯಲ್ಲಿ ಮೇವಿನ ಪಾತ್ರ ಮಹತ್ವದ್ದು. ಹಸಿರು ಮೇವಿನ ಬೆಳೆಗಳಾದ ಹೈಬ್ರಿಡ್ ನೇಪಿಯರ್, ಗಿನಿ, ಮುಸುಕಿ ನ ಜೋಳ, ಹೈಬ್ರಿಡ್ ಜೋಳ ಹಾಗೂ ಒಣಮೇವನ್ನು ಹಾಗೆಯೇ ಸಹಜವಾಗಿ ನೀಡಿದಾಗ ಮೃದುವಾದ ಭಾಗ ತಿಂದು ಗಡಸಾಗಿರುವ ಭಾಗ ತಿನ್ನದೇ ಇರಬಹುದು. ಇದರಿಂದ ಮೇವು ಪೋಲಾಗಿ ರೈತರಿಗೆ ನಷ್ಟ ಸಂಭವಿಸುವ ಸಾಧ್ಯತೆ ಹೆಚ್ಚು. ಇದಕ್ಕಾಗಿಯೇ ಮೇವು ಸಂಸ್ಕೃರಣೆಯ ೨ ವಿಧಾನ ಬಳಸಬಹುದು.
ಕತ್ತರಿಸುವ ಯಂತ್ರ-ಇದಕ್ಕಾಗಿಯೇ ಮೇವು ತುಂಡರಿಸುವ ಯಂತ್ರ ಬಳಸಿ ಮೇವನ್ನು ಸಣ್ಣದಾಗಿ ಕತ್ತರಿಸಿ ನೀಡಿದಾಗ ನಷ್ಟ ತಗ್ಗಲಿದೆ.ಯಂತ್ರ ಬಳಕೆಗೆಂದೇ ಶೇ ೭೫ ರ ಅನುದಾನದಲ್ಲಿ  ಕೇಂದ್ರ ಸರಕಾರ ನೆರವು ನೀಡಲಿದೆ. ಕೇಂದ್ರ ಸರಕಾರದ ಮೇವು ಮತ್ತು ಪಶು ಆಹಾರ ಯೋಜನೆ ಅಡಿಯಲ್ಲಿ ದೊರೆಯುವ ಅನುದಾನಕ್ಕಾಗಿ ೫೦೫ ಮೇವು ತುಂಡರಿಸುವ ಯಂತ್ರಗಳ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. ರಸಮೇವು ತಯಾರಿಕಾ ಘಟಕ  ಸ್ಥಾಪನೆಗೂ ಸಹ ಶೇ ೧೦೦ ಅನುದಾನದಲ್ಲಿ ೮೦ ಘಟಕ ಸ್ಥಾಪನೆಗೂ ಅನುಮೋದನೆ ದೊರೆತಿದೆ. ಇದಕ್ಕಾಗಿ ಕೇಂದ್ರ ಸರಕಾರ ೧.೬೦ ಕೋಟಿ ರೂ.ಗಳನ್ನು ಮೈಮುಲ್‌ಗೆ ಒದಗಿಸಿದೆ.
ರಸಮೇವು ಘಟಕ ಸ್ಥಾಪನೆ-ಹೆಚ್ಚು ರಾಸುಗಳನ್ನು ಹೊಂದಿರುವ ರೈತರು ಮಳೆಗಾಲದಲ್ಲಿ ಹೆಚ್ಚಿನ ಹಸಿರು ಮೇವು ಬೆಳೆಸಿ ವೈಜ್ಞಾನಿಕವಾಗಿ ಸಂಗ್ರಹಿಸಿ ವರ್ಷವಿಡಿ ಉಪಯೋಗಿಸುವ ವಿಧಾನವೇ ರಸ ಮೇವು. ಇದರಲ್ಲಿ ಭೂಮಿ ಮೇಲೆ ಅಥವಾ ಒಳಗಡೆ ವೃತ್ತಾಕರ ಅಥವ ಚೌಕಾಕರದಲ್ಲಿ ಗುಂಡಿ ತೆಗೆದು ಸಿಮೆಂಟ್ ತೊಟ್ಟಿ ನಿರ್ಮಿಸ ಬೇಕು. ಬೆಳೆದ ಹಸಿರು ಮೇವನ್ನು ತುಂಡರಿಸಿ ಕಾಕಂಬಿ, ಉಪ್ಪು, ಖನಿಜದೊಂದಿಗೆ ಮಿಶ್ರಣ ಮಾಡಬೇಕು. ಜೈವಿಕ ಕಲ್ಚರನ್ನು ಸಿಂಪಡಿಸಿ, ತೊಟ್ಟಿಯಲ್ಲಿ ಮೇವನ್ನು ತುಂಬಿಸಿ ಗಾಳಿ ಹೋಗದ ಹಾಗೆ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿ ಭಾರ ಹೇರಬೇಕು, ೧೫ ದಿನಗಳ ನಂತರ ಮೇವು ರಸಮೇವಾಗಿ ಪರಿವರ್ತನೆ ಗೊಂಡು ಉತ್ತಮ ಸುವಾಸನೆ ಹಾಗೂ ಮೆದುವಿನಿಂದ ರಸಮೇವಾಗಿ ಪರಿವರ್ತನೆ ಗೊಳ್ಳುತ್ತದೆ.
ಪ್ರತಿ ನಿತ್ಯ ೨೦-೨೫ ಕೆ.ಜಿ. ರಸ ಮೇವಿನ ಜತೆ ಕಡ್ಡಾಯವಾಗಿ ೫ ಕೆ.ಜಿ.ದ್ವಿದಳ ಮೇವಾದ ಕುದುರೆ ಮಸಾಲೆ ಸೊಪ್ಪು ನೀಡಿದಲ್ಲಿ ರಾಸುಗಳಿಗೆ ಅವಶ್ಯವಿರುವ ಪೌಷ್ಠಿಕಾಂಶವೂ ಸಿಕ್ಕಂತಾಗುತ್ತದೆ. ಇಂಥ ಮೇವು ಹಾಲು ಉತ್ಪಾದನೆ ಹೆಚ್ಚಿಸುವಲ್ಲಿ ಸಹಕಾರಿ. ಪಶು ಆಹಾರ ಬಳಕೆ ಶೇ ೬೦-೮೦ರಷ್ಟು ತಗ್ಗಲಿದೆ.
ಘಟಕದ ಸುತ್ತ ಮುತ್ತ: ಘಟಕ ದಿನ ಒಂದಕ್ಕೆ ೧೦-೧೨ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು ಪ್ರತಿ ಬ್ಲಾಕ್ ಗಳು ಅಂದಾಜು ೧೦ ಕೆ.ಜಿ. ತೂಕದ್ದು.
ದಿನವೊಂದಕ್ಕೆ ಒಂದು ಬ್ಲಾಕ್ ಅನ್ನು ರಾಸಿಗೆ ನೀಡಿ ಮೇವಿನ ಅವಶ್ಯಕತೆ ನೀಗಿಸಬಹುದು. ಈ ತಾಂತ್ರಿಕತೆ ಬರ ಜಿಲ್ಲೆಯಲ್ಲಿ ನಷ್ಟವಾಗುತ್ತಿರುವ ವಿವಿಧ ಬೆಳೆಗಳ ಒಣಮೇವನ್ನು ಸಮರ್ಪಕ ಬಳಕೆ ಮಾಡಿ ಹೈನೋದ್ಯಮದಲ್ಲಿ ಹಾಲು ಉತ್ಪಾದನಾ ವೆಚ್ಚ ಕಡಿಮೆ ತಗ್ಗಿಸಿ ಜನರ ಆರ್ಥಿಕ ಪರಿಸ್ಥಿತಿ ಹೆಚ್ಚಿಸಲಿದೆ. ಪಶು ಆಹಾರಕ್ಕೆ ಉಪಯೋಗಿಸುವ ಹಾಗೂ ಸ್ಥಳೀಯವಾಗಿ ಸಿಗುವ ಕಚ್ಚಾ ಪದಾರ್ಥಗಳಾದ ಹಿಂಡಿ, ತೌಡು, ಕಾಕಂಬಿ, ಉಪ್ಪು, ಲವಣಾಂಶಗಳನ್ನು ನಿಗದಿತ ಪ್ರಮಾಣಗಳಲ್ಲಿ ಮಿಶ್ರಣ ಮಾಡಬೇಕು.  ಒಣ ಮೇವನ್ನು ಅರ್ಧ ಇಂಚಿಗಿಂತ ಕಡಿಮೆ ಅಳತೆಯಲ್ಲಿ ತುಂಡರಿಸಿ ಕಚ್ಚಾ ಪದಾರ್ಥಗಳನ್ನು ಸೇರಿಸಿ ಒತ್ತಡೀಕರಣ, ಯಂತ್ರಗಳ ಸಹಾಯದಿಂದ ಮೇವಿನ ಬಿಲ್ಲೆಗಳನ್ನು ತಯಾರಿಸಬಹುದು. ಘಟಕಗಳ ಸಾiರ್ಥ ದಿನ ಒಂದಕ್ಕೆ ೧೦-೩೦ ಟನ್ ವರೆಗೆ ವಿವಿಧ ಮಾಡಲ್‌ಗಳಲ್ಲಿ ಯಂತ್ರಗಳು ಲಭ್ಯವಿದ್ದು, ಒಣ ಮೇವು ಹೆಚ್ಚಾಗಿ ಸಿಗುವ ಪ್ರದೇಶಗಳಲ್ಲಿ ಅಳವಡಿಸಿ,  ಹಸಿರು ಮೇವು ಲಭ್ಯವಿಲ್ಲದಿರುವ ಪ್ರದೇಶಗಳಿಗೆ ಸರಬರಾಜು ಮಾಡಬಹುದು. ಇದರ ಬಗ್ಗೆ ಮಾಹಿತಿ ಬೇಕೆಂದರೆ  ಕರೆ ಮಾಡಿ
ದೂ: ೯೭೪೧೧೨೮೨೭೭, ೦೮೨೧-೨೪೭೩೮೩೭

ಉನ್ನತಾಧಿಕಾರ ಸಮಿತಿಗೆ ಜನರ ಧ್ವನಿ ‘ಕೇಳಲಿ’

ಪಿ. ಓಂಕಾರ್ ಮೈಸೂರು
ದಸರೆ ಹತ್ತು ಹಲವು ವೈಶಿಷ್ಟ್ಯಗಳ ಸಂಗಮ.ಲಕ್ಷಾಂತರ ಜನ ಸಂಧಿಸುವ ಸಂಭ್ರಮ.ಕಾಲಕ್ಕೆ ತಕ್ಕಂತೆ ಬದಲಾಗುವ,ಹೊಸಕಾಲದ ಬಣ್ಣ ತೊಟ್ಟು ಬೆಡಗು ಮೂಡಿಸುವ ವೈಭವ. ಇಷ್ಟೊಂದು ದೊಡ್ಡ ಹಬ್ಬದಲ್ಲಿ ಲೋಪಗಳು ಸಹಜ.ಸರ್ವ ಸಂತೃಪ್ತಿ ಅಸಾಧ್ಯ...
ಉತ್ಸವದ ಅಪಸವ್ಯಗಳನ್ನು ಪಟ್ಟಿ ಮಾಡಿದರೆ ಸಂಘಟಕರು ಇಂಥ ‘ಸಹಜ ಲೋಪ ’ದ ಸೂರಿನಡಿ ನಿಂತು, ಟೀಕೆಗಳ ಮಳೆಯಿಂದ ಬಚಾವಾಗಲು ಪ್ರಯತ್ನಿಸುತ್ತಾರೆ. ಲೋಪ ಮೊದಲನೆಯ ಸಲವಾದರೆ, ‘ಸಹಜ’ದ ವಾದವನ್ನು ನಿಜ ಎಂದು ಒಪ್ಪಬಹುದು.ಆದರೆ,ಹಿಂದಿನ  ದಸರೆಗಳ ಸಂಗತಿ ಹಾಗಲ್ಲ.ಪುನರಾವರ್ತಿತ, ನಿರಂತರ ಲೋಪಗಳೇ ಹೆಚ್ಚು !
ಯಾವುದೇ ಸಲಹೆ ನೀಡಿದರೂ ಅಧಿಕಾರಸ್ಥ  ಜನ ಈ ಕಿವಿಯಲ್ಲಿ ಕೇಳಿ, ಇನ್ನೊಂದರಲ್ಲಿ ಬಿಡುತ್ತಾರೆ ಎನ್ನುವುದು ಇತಿಹಾಸ. ಒಂದಿಲ್ಲೊಂದು ಮಾಧ್ಯಮದ ಮೂಲಕ ಸಾರ್ವಜನಿಕ ಚರ್ಚೆ ನಡೆಯುವುದು,ಸಲಹೆ-ಸೂಚನೆಗಳನ್ನು ನೀಡುವುದು,ದಸರೆಯಲ್ಲಿ ಅವು ಅವೇ ತಪ್ಪುಗಳು ರಾರಾಜಿಸುವುದು,ಸಂಭ್ರಮದ ಸಾಗರ ಬಹುಪಾಲು ‘ಉಪ್ಪು ಉಪ್ಪೇನಿಸುವುದು’ ಪ್ರತಿ ಬಾರಿಯ ವಿದ್ಯಮಾನ.
ಗೊತ್ತಿದ್ದೂ ಸಂಭವಿಸುವ,‘ಲಾಭ’ ಪ್ರೇರಕ  ತಪ್ಪುಗಳೇ ಹೆಚ್ಚು. ದೀಪ ವೈಭವ, ಸಾಂಸ್ಕೃತಿಕ ಸಂಭ್ರಮದಲ್ಲಿ ಎಲ್ಲವೂ ಮುಚ್ಚಿಹೋಗುತ್ತದೆ ಎಂದು ಅಧಿಕಾರಸ್ಥರು ಭ್ರಮಿಸುತ್ತಾರೆ. ಆದರೆ, ಎಲ್ಲವನ್ನೂ ಜನ ಸೂಕ್ಷ್ಮವಾಗಿ ಅವಲೋಕಿಸುತ್ತಾರೆ ಎನ್ನುವುದು ವಿಜಯ ಕರ್ನಾಟಕ ನಡೆಸಿದ ‘ದಸರೆ ಹೇಗಿದ್ದರೆ ಸುಂದರ’ ಅಭಿಯಾನದಲ್ಲಿ ವೇದ್ಯ.
‘ನಾಡ ಹಬ್ಬ ದಸರೆ ಹೇಗಿರಬೇಕು,ಹೇಗಿದ್ದರೆ ಸುಂದರ’ ಎಂದು ಪತ್ರಿಕೆ ಕೇಳಿದ್ದಕ್ಕೆ ಕ್ಲುಪ್ತ ಸಮಯದಲ್ಲಿಯೇ ಹಿಂದಿನ ಲೋಪಗಳ ಸಮೇತ ಸಲಹೆಗಳ ಮಹಾಪೂರ ಹರಿಸಿದ್ದಾರೆ. ಜನಪ್ರತಿನಿಧಿಗಳು ದಸರೆಯನ್ನು ಜನರ ಉತ್ಸವವನ್ನಾಗಿ ಅರಳಿಸುತ್ತಾರೆ,ಸಂಭ್ರಮವನ್ನು ತುಂಬುತ್ತಾರೆ ಎಂದು ಮತ್ತೊಮ್ಮೆ ‘ನಂಬಿ’ದ್ದಾರೆ. ದಸರೆ ನಿಜಕ್ಕೂ ಹೇಗಿರಬೇಕು ಎನ್ನುವ ಕುರಿತು ತಮ್ಮದೇ ಕಲ್ಪನೆಗಳನ್ನು ಹಂಚಿಕೊಂಡಿದ್ದಾರೆ. ಜನರ ನಂಬಿಕೆಯನ್ನು ದಸರೆಯಾ ಸಂಘಟಕರು ಉಳಿಸಿಕೊಳ್ಳುತ್ತಾರಾ? ಹಿಂದಿನ ವರ್ಷಗಳಂತೆ ಒಂದು ಕಿವಿಯಲ್ಲಿ ಕೇಳಿ,ಇನ್ನೊಂದರಲ್ಲಿ ಬಿಡುತ್ತಾರಾ ಎನ್ನುವುದು ಸದ್ಯದ ಪ್ರಶ್ನೆ.

ಆನೆ ಮೇಲೆ ಅಂಭಾರಿ: ಪರ್ಯಾಯ ಚಿಂತನೆ ಅಗತ್ಯ

ಪಿ.ಓಂಕಾರ್ ಮೈಸೂರು
ದಸರೆಯ ಪ್ರಮುಖ ಆಕರ್ಷಣೆ ಜಂಬೂ ಸವಾರಿ.ಆನೆ ಮೇಲೆ ‘ಅಂಬಾರಿ’ಯನ್ನು ನೋಡಲೆಂದೇ ಲಕ್ಷಾಂತರ  ಜನ ಬರುತ್ತಾರೆ. ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯೂ ಆನೆ-ಅಂಬಾರಿಯೇ.
ಇಂಥ ಜನಾಕರ್ಷಣೆಯ  ಅಂಬಾರಿಯ ‘ಭಾರ’ವನ್ನು ಆನೆ ಮೇಲಿಂದ ಇಳಿಸ ಬೇಕು ಎನ್ನುವ ಬೇಡಿಕೆ  ಬಹು ಹಿಂದಿನಿಂದ ಚಾಲ್ತಿಯಲ್ಲಿದ್ದರೂ,ಗಟ್ಟಿ ಧ್ವನಿ ಬಂದದ್ದು ಪರಿಸರವಾದಿ ಮನೇಕಾ ಗಾಂಧಿ ಆಕ್ಷೇಪ  ಎತ್ತಿದ ನಂತರವೇ. ಆಗ ಜೆ.ಎಚ್.ಪಟೇಲ್ ರಾಜ್ಯದ ಮುಖ್ಯಮಂತ್ರಿ. ‘ಭಾರವಾದ ಅಂಬಾರಿಯನ್ನು ಆನೆ ಮೇಲೆ ಹೊರಿಸುವುದು ಪ್ರಾಣಿ ಹಿಂಸೆ. ಸರಕಾರವೇ ಇದಕ್ಕೆ ಕಾರಣವಾಗುವುದು ಸರಿಯಲ್ಲ ’ಎಂದರು ಮನೇಕಾ. ಆಗ, ಪಟೇಲ್ ‘ಆನೆ ಮೇಲಲ್ಲದೆ, ಅಂಬಾರಿಯನ್ನು ಆಕೆಯ ಮೇಲೆ ಹೊರಿಸಲು ಸಾಧ್ಯವಾಗುತ್ತ’ ಎಂದು ಲೇವಡಿ ಮಾಡುವ ಮೂಲಕ ಬೇಡಿಕೆಯನ್ನು ತಳ್ಳಿಹಾಕಿದರು.
ಆನಂತರವೂ ಮನೇಕಾ ತಂಡ ‘ಪ್ರಾಣಿ ದಯಾ’ ಒತ್ತಾಯವನ್ನು ಜಾರಿಯಲ್ಲಿಟ್ಟಿತ್ತಾ ದರೂ ಗಂಭೀರವಾಗಿ ಪರಿಗಣಿಸಿದವರು ಕಡಿಮೆ. ಎರಡು ವರ್ಷದ ಹಿಂದೆ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರೇ ಆನೆ ಪರ ವಕಾಲತ್ತು ವಹಿಸುವ ಮೂಲಕ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿತು. ಮನೇಕಾ ಅಭಿಪ್ರಾಯವನ್ನೇ ಒಡೆಯರ್ ಇನ್ನೊಂದು ರೀತಿ ಯಲ್ಲಿ ವ್ಯಾಖ್ಯಾನಿಸಿದರು. ಆನೆ ಅಂಬಾರಿಯನ್ನು ದೀರ್ಘಾವಧಿ ಹೊತ್ತು ನಿಲ್ಲುವಂತೆ ಮಾಡುವುದು ಸರಿಯಲ್ಲ. ಹೊರೆ ತಪ್ಪಿಸಲು ಮೆರವಣಿಗೆಯ ಮುಂಚೂಣಿ ಯಲ್ಲೇ ಸರ್ವಾಲಂಕೃತ ಗಜಪಡೆ ತೆರಳ ಬೇಕು. ಇಲ್ಲವೇ, ಅರಮನೆ ಆವರಣಕ್ಕಷ್ಟೇ ‘ಜಂಬೂ ಸವಾರಿ’ಯನ್ನು ಸೀಮಿತಗೊಳಿಸಬೇಕು ಎನ್ನುವುದು ಅವರ ಸಲಹೆ. ಅದಕ್ಕೂ ಪರ ವಿರೋಧ ವ್ಯಕ್ತವಾಗಿ, ಸಾಕಷ್ಟು ಚರ್ಚೆ ನಡೆಯಿತು.ಆಗಲೂ ಸರಕಾರ ಸೊಲ್ಲೆತ್ತಲಿಲ್ಲ.
ಇದು ಭಾವನಾತ್ಮಕ ವಿಷಯ. ಅಷ್ಟು ಸುಲಭದಲ್ಲಿ ಪರಿಹರಿಸಲಾಗದು ಎನ್ನುವುದು ನಿಜವೇ. ೭೫೦ ಕೆ.ಜಿ. ಆನೆಯಂತ ಆನೆಗೆ ಅದ್ಯಾವ ಲೆಕ್ಕವೂ ಅಲ್ಲ ಎನ್ನುವುದೂ ಅಷ್ಟೇ ನಿಜ.ಆದರೆ,ಅಷ್ಟೊಂದು ಭಾರವನ್ನು ಆರೇಳು ತಾಸು ಹೊತ್ತು ನಿಂತು,ಸಾಗಬೇಕು ಎನ್ನುವ ಕಠಿಣ ಕಾಯಕದ ಬಗ್ಗೆ ಮಾನವೀಯ ಸ್ಪಂದನ ಅಗತ್ಯ.ನಂಬಿಕೆ, ಪ್ರಾಣಿದಯೆ ಎಲ್ಲದರಾಚೆಗಿನ ಸಂಗತಿಗಳತ್ತಲೂ ಗಮನ ಹರಿಸಬೇಕು.
ಇತ್ತೀಚಿನ ವರ್ಷಗಳಲ್ಲಿ ಆನೆಗಳು, ಅದರಲ್ಲೂ ಸಾಕಿದ ‘ಮಠ ’ದ ಆನೆಗಳು ಮದವೇರಿ ವರ್ತಿಸಿದ್ದು, ಅಂಕುಶ ಹಾಕಿ ನಿಯಂತ್ರಿಸುತ್ತಿದ್ದ ಮಾವುತರು ಸೇರಿ ಹಲವು ಜೀವಗಳನ್ನು ಬಲಿ ತೆಗೆದುಕೊಂಡದ್ದು ಸರ್ವ ವಿಧಿತ. ಆನೆಯೂ  ಸೇರಿ ಯಾವುದೇ ಪ್ರಾಣಿಗಳ  ಸ್ವಭಾವವೇ ಅಂಥದ್ದು. ಎಷ್ಟೇ  ನಿಯಂತ್ರಿಸಿದರೂ ಒಮ್ಮೊಮ್ಮೆ   ತಿರುಗಿ ಬಿದ್ದು, ಅವಾಂತರ ಸೃಷ್ಟಿಸುತ್ತವೆ ಎನ್ನು ವುದು ಹಲವು ಘಟನೆಗಳಲ್ಲಿ ವ್ಯಕ್ತ.
ಹಾಗಂತ, ದಸರೆಯಲ್ಲಿ ಹಾಗಾಗುತ್ತದೆ ಎಂದಲ್ಲ.ಹಿಂದೆ ಯಾವತ್ತೂ ಯಾವುದೇ ಅನಾಹುತ ಆಗಿಲ್ಲ. ಆದರೆ, ಯಾವತ್ತೂ ಗಜ ಸಹನೆ ಹೀಗೆ ಇರುತ್ತದೆ ಎನ್ನಲಾ ಗದು. ‘ಬಲರಾಮ’ನೇ ನಿರಂತರ ಅಂಬಾರಿಯನ್ನು ಹೊರಲಾರ. ಭವಿಷ್ಯ ದಲ್ಲಿ  ಹೊರುವ ಹೊಣೆಗೆ ಬೆನ್ನು ಕೊಡುವ  ಆನೆಯ ಸ್ವಭಾವವೂ ಹೀಗೇ ಇರುತ್ತದೆ ಎಂದು ಊಹಿಸಲಾಗದು. ಎಷ್ಟೇ ತರಬೇತಿ ನೀಡಿ, ಅಂಕುಶ ಹಾಕಿದರೂ ತಿರುಗಿ ಬೀಳುವುದಿಲ್ಲ ಎನ್ನಲು ಗ್ಯಾರಂಟಿ ಇಲ್ಲ.
ವಾಸ್ತವ ಹೀಗಿದ್ದಾಗ, ‘ಪರ‍್ಯಾಯ’ ಯದ ಆಲೋಚನೆಯನ್ನು ಸಾರಾಸಗಟು ತಳ್ಳಿ ಹಾಕಿ, ಇಂದಿನ  ಸಂಭ್ರಮಕ್ಕಷ್ಟೇ ತೃಪ್ತಿ ಪಡುವುದು ಸರಿಯಲ್ಲ. ಜನ ಸಮೂಹದ ಮನಸ್ಸಿನಲ್ಲಿ ನೆಲೆ ನಿಂತ ನಂಬಿಕೆ, ವೈಭವದ ಆಕಾಂಕ್ಷೆ, ಆರಾಧನಾ ಭಾವವನ್ನು ಒಂದೇ ಸಾರಿಗೆ ಕಿತ್ತು, ಪರ‍್ಯಾಯ ಸೃಷ್ಟಿಸುವುದು ಸರಿಯಲ್ಲ. ಆದರೆ, ಮುಂದೆಂದಾದರೂ ಇದು ಅನಿವಾರ‍್ಯವಾಗಬಹುದು.
ಭಾರ ಹೊತ್ತು ನಿಲ್ಲುವ ಅವಧಿಯನ್ನು ಕಡಿತಗೊಳಿ ಸುವುದು, ಸರ್ವಾಲಂಕೃತ ಆನೆಗಳ ಆಕರ್ಷಣೆಯನ್ನು ಉಳಿಸಿಕೊಂಡು,ಅಂಬಾರಿಯನ್ನು ಬೇರೆ ವಿಧಾನದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯುವುದು ಮತ್ತಿತರ  ಸಲಹೆ ಗಳನ್ನು  ಸಂಘಟಕರು ಗಂಭೀರವಾಗಿ ಪರಿಗಣಿಸಬೇಕು. ಪರ‍್ಯಾಯಕ್ಕೆ ಜನರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ಕೆಲಸ ಇಂಥ ಚರ್ಚೆಗಳ ಮೂಲಕವೇ ನಡೆಯಬೇಕು.

ಅಧಿಕಾರಸ್ಥರ ದರ್ಬಾರು ತಪ್ಪಲಿ


ವಿಕ ಸುದ್ದಿಲೋಕ ಮೈಸೂರು
ಅಚ್ಚುಕಟ್ಟುತನಕ್ಕೆ ಆದ್ಯತೆ ನೀಡಿ
೧. ನವರಾತ್ರಿಯ ಸಂಜೆಗಳಲ್ಲಿ ಅರಮನೆ ಅಂಗಳದಲ್ಲಿ ನಡೆಯುವ ಸಾಂಸ್ಕೃತಿಕ ಕಾರ‍್ಯಕ್ರಮಗಳಿಗೆ ಹೆಚ್ಚು ಮರ‍್ಯಾದೆ ಇದೆ.ಅಲ್ಲಿ ಕಾರ‍್ಯಕ್ರಮ ನೀಡುವುದೆಂದರೆ ಕಲಾವಿದರಿಗೂ ಪ್ರತಿಷ್ಠೆಯ ಸಂಗತಿ. ಆದ್ದರಿಂದ ಕಲಾವಿದರ  ಪುನರಾವರ್ತನೆಯಾಗದಂತೆ, ಎಲ್ಲರಿಗೂ ಅವಕಾಶ ದೊರೆ ಯುವಂತೆ ಗಮನಹರಿಸಬೇಕು. ಅದೇ ರೀತಿ ಬೇರೆ ಬೇರೆ ಕಲಾ ಪ್ರಕಾರ ಗಳಿಗೂ ಅಲ್ಲಿ ವೇದಿಕೆ ಕಲ್ಪಿಸಬೇಕು. ಸ್ಥಳೀಯ ಕಲಾವಿದರಿಗೂ ಅರ್ಹ ಗೌರವ ದೊರೆಯಬೇಕು.
೨. ಪಾಸ್ ಸಮಸ್ಯೆ ಪ್ರಮುಖ. ಸಂಘಟಕರೇ ನೀಡಿದ ಪಾಸ್ ಹೊಂದಿದ್ದರೂ ಹಲವರಿಗೆ ಕಾರ‍್ಯಕ್ರಮ ನೋಡಲಾಗದ ಸ್ಥಿತಿ. ಬನ್ನಿಮಂಟಪದಲ್ಲಂತೂ, ಆಸನಕ್ಕಿಂತ ಹೆಚ್ಚು ವಿತರಿಸಿ ನೂಕುನುಗ್ಗಲು ಸೃಷ್ಟಿಸಲಾಗುತ್ತಿದೆ. ಈ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ವಹಿಸಬೇಕು. ಪಾಸು ವಿತರಿಸುವುದೇ ಆದರೆ ಅಗತ್ಯ ಶಿಸ್ತು ತರಬೇಕು.
೩. ವಿಶಾಲವಾಗಿ ಬೆಳೆಯುತ್ತಿರುವ ನಗರದಲ್ಲಿ,ಕೆಲವು ಬಡಾವಣೆಗಳು ಆರೇಳು ಕಿ.ಮೀ. ದೂರದಲ್ಲಿವೆ. ಇಲ್ಲಿ ಜನಸಂಖ್ಯೆಯೂ ಹೆಚ್ಚಿದೆ. ದಸರಾ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಅಲ್ಲಿಗೂ ವಿಸ್ತರಿಸಬೇಕು.
೪. ಉತ್ಸವದ ವೇಳೆ,ನಗರ ಹೃದಯ ಭಾಗದಿಂದ ಬಡಾವಣೆಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು. ನಗರ ನಿಲ್ದಾಣದಲ್ಲಿ ಬಸ್ ವೇಳಾಪಟ್ಟಿ ಯನ್ನು  ಪ್ರದರ್ಶಿಸಿ, ಅದಕ್ಕೆ ತಕ್ಕಂತೆ ಬಸ್‌ಗಳು ಸಂಚರಿಸುವಂತೆ ಮಾಡಬೇಕು.
೫. ವಿಜ್ಞಾನದ ಹೊಸ ಶೋಧಗಳನ್ನು ಜನರಿಗೆ, ಆಸಕ್ತರಿಗೆ ಪರಿಚಯಿ ಸಲು ಕಾಲೇಜು ಮಟ್ಟದಲ್ಲಿ ಶೈಕ್ಷಣಿಕ ವಿಜ್ಞಾನ ವಸ್ತುಪ್ರದರ್ಶನವನ್ನು ಸಂಘಟಿಸ ಬೇಕು. ಇದರಿಂದ ವಿದ್ಯಾರ್ಥಿಗಳ ಅಭಿವ್ಯಕ್ತಿಗೂ ಅವಕಾಶ ನೀಡಿದಂತಾಗುತ್ತದೆ.  ಸಂಘಟನೆ ಅರ್ಹರ ಸಮಿತಿಯನ್ನು ರಚಿಸಬೇಕು. ಇದು ಈ ಬಾರಿ ಸಾಧ್ಯವಿಲ್ಲವಾದರೆ, ಮುಂದಿನ ವರ್ಷದಿಂದಲಾ ದರೂ ಮಾಡಬೇಕು.
೬. ಎಲ್ಲಾ ವಿಷಯದಲ್ಲಿ ಅಚ್ಚುಕಟ್ಟುತನ  ಇರಬೇಕು.ಸಂಘಟನೆಯನ್ನು ಸರಿಯಾಗಿ ಮಾಡಿದರೆ  ದಸರೆಗೆ ಹೊಸ ಆಕರ್ಷಣೆ ತುಂಬಬಹುದು.
-ಅಡ್ಯನಡ್ಕ ಕೃಷ್ಣಭಟ್, ವಿಜ್ಞಾನ ಲೇಖಕರು
ಹಸ್ತಕ್ಷೇಪ ತಪ್ಪಲಿ
ಚಿಕ್ಕವಳಾಗಿದ್ದಾಗ  ಮಹಾರಾಜರ ನೇತೃತ್ವದ ದಸರೆಯನ್ನು ನೋಡಿದ್ದೆ.ಆ ವೈಭವವನ್ನು ಈಗಿನ ಉತ್ಸವಕ್ಕೆ ಹೋಲಿಸುವಂತೆಯೇ ಇಲ್ಲ.ಜನರ ಉತ್ಸವ ಎಂದು ಹೇಳಲಾಗುತ್ತಿದೆಯಾದರೂ  ಸರಕಾರಿ ಯೋಜನೆ ಥರ  ‘ಅನುಷ್ಠಾನ’ ಗೊಳ್ಳುತ್ತಿದೆಯಷ್ಟೆ. ಎಲ್ಲಾ ವರ್ಗ ದವರಿಗೆ ಭಾಗವಹಿಸಲು ಮುಕ್ತ ಅವಕಾಶವಿಲ್ಲ. ಪರಿಣಾಮ, ಜನರಲ್ಲಿ ಉತ್ಸಾಹ, ಸಂಭ್ರಮ ಕಾಣು ತ್ತಿಲ್ಲ. ಅಧಿಕಾರಿಗಳು,ರಾಜಕಾರಣಿಗಳಷ್ಟೆ ಉತ್ಸವವನ್ನು ಅನುಭವಿಸುತ್ತಿದ್ದಾರೆ.
ಪಾಸು ಹೊಂದಿದವರ ಹಾವಳಿಯಿಂದ  ಟಿಕೆಟ್ ಖರೀದಿಸಿ ದವರೂ ನೆಮ್ಮದಿಯಿಂದ  ಜಂಬೂಸವಾರಿ ನೋಡುವುದು ಸಾಧ್ಯವಾಗುತ್ತಿಲ್ಲ. ಟಿವಿಯಲ್ಲಿ ಕುಳಿತು ನೋಡುವುದೇ ಚೆನ್ನ  ಎನ್ನುವ ಅಭಿಪ್ರಾಯ ಸಾಮಾನ್ಯವಾಗುತ್ತಿದೆ. ಬನ್ನಿಮಂಟಪದ ಪಂಜಿನ ಕವಾಯಿತಿನಲ್ಲೂ ಇದೇ ಕತೆ. ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ‍್ಯಕ್ರಮ, ಲೇಸರ್ ಶೋ ಖುಷಿ, ಅನುಭೂತಿ ನೀಡುವುದಿಲ್ಲ. ಅಧಿಕಾರಿಗಳು, ರಾಜಕಾರಣಿಗಳ  ಹಸ್ತಕ್ಷೇಪ, ಹಾವಳಿ ತಪ್ಪಬೇಕು. ಜನರ ಉತ್ಸವವಾಗಿ ರೂಪಿಸಲು ಜನರದ್ದೇ ಸಮಿತಿಗಳನ್ನು ರಚಿಸಬೇಕು. ಜಂಬೂ ಸವಾರಿ ಮೆರವಣಿಗೆಯಲ್ಲಿ ಹೋಂಗಾರ್ಡ್, ಎನ್‌ಸಿಸಿ, ಶಾಲಾ ಮಕ್ಕಳ  ತಂಡಗಳು ಹೆಚ್ಚು ಸಾಗುವಂತೆ ಮಾಡಬೇಕು.ಬನ್ನಿಮಂಟಪದ ವಿಶಾಲ ಆವರಣದಲ್ಲಿ ಎದ್ದು ಕಾಣುವಂತೆ  ದೊಡ್ಡ ತಂಡಗಳಿಂದ ನೃತ್ಯ ಮತ್ತಿತರ  ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಆಯೋಜಿಸಬೇಕು.
ದಸರಾ ಮೆರವಣಿಗೆಯಲ್ಲಿ ವಿಂಟೇಜ್ ಕಾರ್‌ಗಳ ರ‍್ಯಾಲಿಗೆ  ಅವಕಾಶ ನೀಡ ಬೇಕು. ವೆಬ್ ಸೈಟ್‌ಅನ್ನು ವ್ಯವಸ್ಥಿತವಾಗಿ ರೂಪಿಸಿ, ಅಪ್‌ಡೇಟ್ ಮಾಡಬೇಕು.
 -ಪ್ರೊ.ಉಷಾರಾಣಿ, ಮೈಸೂರು ವಿವಿ ಪತ್ರಿಕೋದ್ಯಮ ಪ್ರಾಧ್ಯಾಪಕಿ
ನೆಲೆಯಲ್ಲೇ ಕಲೆಗೆ ಬೆಲೆ ಇಲ್ಲ
ಹಿಂದೆಲ್ಲ ಮೂರು ತಿಂಗಳ ಮುಂಚೆಯೇ ‘ಉತ್ತಮ ಕಲಾಕೃತಿಗಳನ್ನು ಪ್ರದರ್ಶನಕ್ಕೆ ನೀಡಿ’ ಎಂದು ಕಲಾವಿದರಿಗೆ ಪತ್ರ ಬರುತ್ತಿತ್ತು.ಹಿರಿಯ ಕಲಾವಿದ ದಿ.ಪಿ.ಆರ್.ತಿಪ್ಪೇಸ್ವಾಮಿ ನೇತೃತ್ವ ವಹಿಸುತ್ತಿ ದ್ದಾಗಲಂತೂ ಕಲಾವಿದರಿಗೆ ಉತ್ತಮ ಮನ್ನಣೆ ಸಿಗುತ್ತಿತ್ತು.ಪ್ರದರ್ಶನದ ಕೊನೆಯಲ್ಲಿ ಪ್ರಶಸ್ತಿ,ಪ್ರಮಾಣ ಪತ್ರವೂ ದೊರೆಯುತ್ತಿತ್ತು. ಆದರೆ,ಇತ್ತೀಚಿನ ವರ್ಷ ಗಳಲ್ಲಿ ಕಲಾವಿದರಿಗೆ ಬೆಲೆಯೇ ಇಲ್ಲ.ಯಾರನ್ನು ಕೇಳೋದೋ ಗೊತ್ತಿಲ್ಲ. ‘ಈ ಬಾರಿ ಬಜೆಟ್ ಇಲ್ಲ. ಮುಂದಿನ ಸಾರಿ ಚೆನ್ನಾಗಿ ಮಾಡೋಣ’ ಎಂಬುದು ಪ್ರತಿವರ್ಷದ ಭರವಸೆ.
‘ಇನ್ಲೆ ’ಕಲೆಯಲ್ಲಿ ಮೈಸೂರು ಪ್ರಪಂಚದಲ್ಲೇ ಪ್ರಸಿದ್ಧ. ಆದರೆ, ದಸರೆಯಲ್ಲೇ ತಕ್ಕ ಮಾನ್ಯತೆ ಸಿಗುತ್ತಿಲ್ಲ. ಬೇರೆ ಬೇರೆ ಕಲಾ ಪ್ರಕಾರಗಳಲ್ಲಿ,ಹೊರಗಿನಿಂದ ಕರೆಸುವ ಕಲಾವಿದರಿಗೆ ಲಕ್ಷಾಂತರ  ಹಣ ನೀಡಲಾಗುತ್ತದೆ. ಆ ಬಗ್ಗೆ ಬೇಸರವೇನಿಲ್ಲ. ಆದರೆ, ಸ್ಥಳೀಯ ಕಲೆ, ಕಲಾವಿದರಿಗೆ  ತಕ್ಕ ಗೌರವವನ್ನಾದರೂ ನೀಡಬೇಕಲ್ಲವೇ? ಅದಾಗಬೇಕು.
-ಪಿ.ಗೌರಯ್ಯ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಇನ್ಲೇ ಕಲಾವಿದರು

ಆನೆ ಮೇಲಿಂದ ಅಂ‘ಬಾರಿ’ ಇಳಿಸಿ

ವಿಕ ಸುದ್ದಿಲೋಕ ಮೈಸೂರು
ಹಿಂದೆ, ಈಗಲೂ ಕೆಲವೆಡೆ ಗ್ರಾಮೀಣ ಪ್ರದೇಶದಿಂದ ಮೈಸೂರು ದಸರೆಗೆ ಬರುವ  ಜನ ‘ಫೌಜು’ನೋಡಲು ಹೋಗ್ತೀವಿ ಎಂದೇ ಹೇಳುತ್ತಾರೆ. ಅಂದರೆ, ಅವರ ತಿಳುವಳಿಕೆ ಪ್ರಕಾರ ಅದು ಸೈನ್ಯದ ಪ್ರದರ್ಶನ. ಶಕ್ತಿ ದೇವತೆಯ ಪೂಜೆ, ಬನ್ನಿ ಕಡಿದು-ಮುಡಿಯುವುದು,ಆನೆಯ ಮೇಲೆ ರಾಜನ (ಈಗ ಶಕ್ತಿ ದೇವತೆ) ಮೆರವಣಿಗೆ ಎಲ್ಲವೂ ಸೈನ್ಯಕ್ಕೆ ಸಂಬಂಧಿಸಿದ ವಿಚಾರವೇ. ನಂತರ ಸರಕಾರ ಪ್ರಭುತ್ವದ ಪ್ರದರ್ಶನ  ನಿಲ್ಲಿಸಿ,ಪ್ರಜಾಪ್ರಭುತ್ವದ ಆಶಯಕ್ಕೆ ಬದ್ಧವಾಗಿ ಆರಾಧನೆ- ಉತ್ಸವದ ಸ್ವರೂಪ ನೀಡಿದ್ದು ಇತಿಹಾಸ.
ಗ್ರಾಮೀಣ ಭಾಗಗಳಲ್ಲಿ ಇಂಥದೇ ದೇವತೆಗಳ ಮೆರವಣಿಗೆ ನಡೆಯುತ್ತದೆ. ಉತ್ಸವ ಸಣ್ಣದಾದರೆ ದೇವರನ್ನು ಜನರೇ ಹೊತ್ತು ಸಾಗುತ್ತಾರೆ. ದೊಡ್ಡ ಜಾತ್ರೆ ಯಾದರೆ ಅಲಂಕೃತ ತೇರಿನಲ್ಲಿ ಕೂರಿಸಿ ಎಳೆಯುತ್ತಾರೆ. ಪ್ರಾಣಿ ಪಕ್ಷಿಗಳು ಪ್ರತಿಮೆಗೆ ಸೀಮಿತ. ಆದರೆ, ದಸರೆಯಲ್ಲಿ ಆನೆಯ ಮೇಲೆ ೭೫೦ ಕೆಜಿ ಭಾರದ ಅಂಬಾರಿ ಇಟ್ಟು, ಶಕ್ತಿ ದೇವತೆಯ ಮೆರವಣಿಗೆ ಮಾಡಲಾಗುತ್ತಿದೆ. ಇದು ಸೂಕ್ತವಲ್ಲ .
ಕಳೆದ ೧೧ವರ್ಷ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ  ‘ಬಲರಾಮ’, ಅದಕ್ಕೆ ಹಿಂದಿದ್ದ ದ್ರೋಣ ಮತ್ತಿತರ ಆನೆಗಳು ಜನ ಜಾತ್ರೆಯಲ್ಲಿ ಸಹನೆಯಿಂದ ವರ್ತಿಸಿ ಸರಕಾರದ ಘನತೆಯನ್ನು, ಜನರ ಘನತೆಯನ್ನು ಉಳಿಸಿವೆ. ತಪ್ಪು ಹೆಜ್ಜೆ ಹಾಕಿ ಅವಾಂತರ ಸೃಷ್ಟಿಸದೆ  ತಮ್ಮ ಘನತೆಯನ್ನೂ ಉಳಿಸಿಕೊಂಡಿವೆ. ಈಗ, ನಾವು ಅವುಗಳ ಮೇಲೆ ‘ಭಾರ ’ ಹೊರಿಸುವುದನ್ನು ನಿಲ್ಲಿಸುವ ಮೂಲಕ ನಮ್ಮ ‘ಮನುಷ್ಯ ಘನತೆ’ಯನ್ನು ಉಳಿಸಿಕೊಳ್ಳಬೇಕು.
ಈ ಸಂಬಂಧ ಪ್ರಾಣಿದಯಾ ಸಂಘಟನೆಗಳ ಆಕ್ಷೇಪವನ್ನು ಲಘವಾಗಿ ಪರಿಗಣಿಸಬಾರದು. ಬಲರಾಮನಿಗೆ ವಯಸ್ಸಾಗು ತ್ತಿದೆ, ಅದೇ ಸ್ವಭಾವದ ಉತ್ತರಾಧಿಕಾರಿ ಹುಡುಕಾಟವೂ ಕಷ್ಟವಾಗುತ್ತಿದೆ, ಎಷ್ಟೇ ಆದೇಶ ಪಾಲಿಸಿದರೂ ಪ್ರಾಣಿಗಳ ವರ್ತನೆ  ಯಾವತ್ತೂ ಒಂದೇ ಥರ ಇರುವುದಿಲ್ಲ ಎನ್ನುವ  ಸತ್ಯವೂ ಅನೇಕ ಪ್ರಕರಣಗಳಲ್ಲಿ ವೇದ್ಯವಾಗಿದೆ. ಆದ್ದರಿಂದ, ಆನೆ ಮೇಲಿನ ಅಂಬಾರಿ ಭಾರ ಇಳಿಸುವ ಕುರಿತು ಗಂಭೀರವಾಗಿ ಯೋಚಿಸಬೇಕು. ಐತಿಹಾಸಿಕ ಮೆರವಣಿಗೆಯ ಆಕರ್ಷಣೆಗೆ ಆನೆ ಅಗತ್ಯ ಎಂದಾದರೆ, ಅವುಗಳನ್ನು ಸರ್ವಾಲಂಕೃತವಾಗಿ ಸಾಗುವಂತೆ ಮಾಡಿ, ಅಂಬಾರಿ ಮತ್ತು ಅದರೊಳಗಿನ ಶಕ್ತಿದೇವತೆ ಯನ್ನು ವಿಶಿಷ್ಟ ತೇರಿನಲ್ಲಿ ಇಟ್ಟು ಎಳೆಯಬಹುದು. ಸೂಕ್ತ, ಬೇರೆ ಪರ‍್ಯಾಯ ವಾದರೆ ಇನ್ನೂ ಒಳ್ಳೆ ಯದು. ಈ ವಿಷಯದಲ್ಲಿ ಗ್ರಾಮೀಣ ಜನರ ಆಚರಣೆ ಸ್ವರೂಪ  ನಮಗೆ ಮಾದರಿಯಾಗಬೇಕು.
ಉಳಿದಂತೆ, ದಸರೆಯ ಸಮಯಕ್ಕೆ ಕಾಮಗಾರಿ ನಡೆಸುವುದು ಸಮ್ಮತವಲ್ಲ. ಕಾಟಾಚಾರಕ್ಕೆ ರಸ್ತೆಗಳಿಗೆ ತೇಪೆ ಹಾಕಿ ಕೈತೊಳೆದುಕೊಳ್ಳುವ ಬದಲು ಅಗತ್ಯಕ್ಕೆ ಅನುಗುಣವಾಗಿ ನಿರಂತರವಾಗಿ ಅಭಿವೃದ್ಧಿ ಚಟುವಟಿಕೆ ನಡೆಸಬೇಕು. ಇತ್ತೀಚಿನ ವರ್ಷಗಳಲ್ಲಿ ದಸರೆ ವ್ಯಾವಹಾರಿಕವಾಗುತ್ತಿದೆ. ಕೋಟಿಗಳ ಲೆಕ್ಕದಲ್ಲಿ ಹಣದ ವಹಿವಾಟು ನಡೆದರೂ  ಸಾಮೂಹಿಕ ಆರಾಧನೆಯ ಸ್ವರೂಪ ಉಳಿದಿಲ್ಲ. ಪ್ರತ್ಯೇಕತೆ ವಿಜೃಂಭಿಸುತ್ತಿದೆ. ಸಾಮೂಹಿಕ ಸಂಭ್ರಮ ತುಂಬುವ  ನಿಟ್ಟಿನಲ್ಲಿ ತಜ್ಞರು ಚರ್ಚೆ ನಡೆಸಬೇಕು.
-ಪ್ರೊ.ಕೃಷ್ಣಮೂರ್ತಿ ಹನೂರು ಜಾನಪದ ವಿದ್ವಾಂಸ.