ಇದೇ ನಮ್ಮ ಸಿಟಿ..ಕಣ್ಣುಮುಚ್ಚಿ ಮೂಗುಮುಚ್ಚಿ !

ನಗರದ ‘ಅಶುಚಿತ್ವ’ ಸಾರುವ ಮತ್ತಷ್ಟು ಚಿತ್ರಗಳು ಇಲ್ಲಿ ಸೆರೆ ಯಾಗಿವೆ. ಇದು ಇಟ್ಟಿಗೆಗೂಡು ಹಾಗೂ ಅರಮನೆ ಸುತ್ತ ಮುತ್ತಲಿನ ‘ಅವ್ಯವಸ್ಥೆ’!. ಕಟ್ಟಡ ನಿರ್ಮಾಣಕ್ಕೆ ತಂದ ಇಟ್ಟಿಗೆ, ಕಲ್ಲು. ರಸ್ತೆಯನ್ನೇ ಆಕ್ರಮಿಸಿಕೊಂಡಿವೆ. ಗೋಡೆ ಪೋಸ್ಟರ್, ಪಕ್ಕದಲ್ಲೇ ಕಸದ ರಾಶಿ... ನಗರದ ಅಂದಗೆಡಿ ಸುತ್ತಿರುವುದಕ್ಕೆ ಸಾಕ್ಷೀಭೂತವಾಗಿವೆ. ಸಾರ್ವಜನಿಕರೂ ಇದಕ್ಕೆ ಛಾಯಾಚಿತ್ರ, ಅಭಿಪ್ರಾಯ ಕಳುಹಿಸಬಹುದು.

ಹೊಂಡ ಸಿಟಿಯಾಯ್ತು; ಈಗ ಕ್ಲೀನ್ ಸಿಟಿ

ವಿಜಯ ಕರ್ನಾಟಕ ಪತ್ರಿಕೆ ಆರಂಭಿಸಿದ ‘ಸ್ವಲ್ಪ ಅಡ್ಜಸ್ಟ್ ಮಾಡಬೇಡಿ’ಯ ‘ಹೊಂಡ ಸಿಟಿ’ ಪ್ರಚಾರೋಂದಲನಕ್ಕೆ ಸಿಕ್ಕ ಸಾರ್ವಜನಿಕರ ಪ್ರತಿಕ್ರಿಯೆ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಈಗ ನಮ್ಮ ನಗರದ ಸ್ಥಿತಿಯ ಅನಾವರಣಗೊಳಿಸಲು ಹೊರಟಿದ್ದೇವೆ. ಈ ಪ್ರಚಾರೋಂದಲನದ ಹೆಸರು ‘ಕ್ಲೀನ್ ಸಿಟಿ’. ನಮ್ಮ ನಗರ ಚೆನ್ನಾಗಿದೆಯೇ ಎಂಬ ಪ್ರಶ್ನೆ ಕೇಳುವ ಹಾಗೂ ಒಂದಿಷ್ಟು ಛಾಯಾಚಿತ್ರಗಳ ಜತೆಗೇ ತಾಜಾ ಸ್ಥಿತಿಯನ್ನು ಅನಾವರಣಗೊಳಿಸುವ ಪ್ರಯತ್ನವಿದು. ಪತ್ರಿಕೆಯ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆಯವರು ತಮ್ಮ ಚಿತ್ರಗಳ ಮೂಲಕವೇ ಬಿಚ್ಚಿಟ್ಟಿದ್ದಾರೆ. ದಸರೆಗೆ ಕಳೆಗಟ್ಟಲು ಕೊಳೆ ತೊಲಗಿಸಿ ಎಂಬುದೇ ನಮ್ಮ ಧ್ಯೇಯ.

ಮನರಂಜನಾ ದಸರೆಯಲ್ಲಿ ಅದದೇ ಕಲಾವಿದರು...

ವಿಕ ಸುದ್ದಿಲೋಕ ಮೈಸೂರು
‘ಅಳಿಯ ಅಲ್ಲ ಮಗಳ ಗಂಡ’ ಎಂಬುದೊಂದು ಗಾದೆ ಮಾತು. ದಸರೆಗೆ ಸಂಬಂಧಿಸಿದ ಕೆಲವು ವಿದ್ಯಮಾನ ಈ ಮಾತಿಗೆ ಅನ್ವರ್ಥ.ಯುವ ದಸರೆಯ ಹೇಷಾರವದ ಪೊರೆ ಕಳಚಿ,ಹೊಸ ವೇಷ ತೊಟ್ಟಿರುವ  ‘ಮನರಂಜನಾ ದಸರೆ’ಯ ವಿಷಯದಲ್ಲಂತೂ ಈ ಮಾತು ಹೆಚ್ಚು ಅನ್ವಯ.
ನಾಲ್ಕೈದು ವರ್ಷದಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಯುವಕರನ್ನು,ಗಣ್ಯಾತಿಗಣ್ಯ ಪಡ್ಡೆಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ್ದ ಯುವ ದಸರೆ ಮತ್ತು ಆ ಬಾಬ್ತಿನಲ್ಲಿ ನಡೆಯುತ್ತಿದ್ದ ದೊಡ್ಡ ಮ್ತೊತದ ಖರ್ಚು ವೆಚ್ಚಗಳ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ದಸರೆಯ ಸಂಸ್ಕೃತಿ,ಪರಂಪರೆಗೆ ತದ್ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರುವ  ಯುವೋತ್ಸವಕ್ಕೆ ಕಡಿವಾಣ ಹಾಕಿ ಎಂಬ ಒತ್ತಾಯ ವ್ಯಾಪಕವಾಗಿ ಕೇಳಿಬಂದಿತ್ತು.
ಆರಂಭದಲ್ಲಿ ದಸರೆಯ ಉಸ್ತುವಾರಿ ವಹಿಸಿದ್ದ  ಸಚಿವ ಸುರೇಶ್ ಕುಮಾರ್ ಮತ್ತು ಜಿಲ್ಲಾಧಿಕಾರಿ ಹರ್ಷಗುಪ್ತ  ಈ ಅಹವಾಲಿಗೆ ಸ್ಪಂದಿಸಿದ್ದು ಸುಳ್ಳಲ್ಲ. ಯುವ ದಸರೆಯನ್ನು ಮಾನಸ ಗಂಗೋತ್ರಿಯ ಬಯಲು ರಂಗಮಂದಿರಕ್ಕೆ ಸೀಮಿತಗೊಳಿಸಲಾಗುವುದು,ಅಂತರ ವಿವಿ ಮಟ್ಟದ ಸ್ಪರ್ಧೆಗಳಲ್ಲಿ ಯುವಕರ ಸಂಭ್ರಮ ವ್ಯಕ್ತವಾಗುವಂತೆ ವೇದಿಕೆ ರೂಪಿಸಲಾಗುವುದು ಎಂದು ಭರವಸೆಯನ್ನೂ ನೀಡಿದ್ದರು.
ಗಡಿಪಾರಾದರೂ: ಆದರೆ,‘ಯುವ ದಸರೆ’ಯ ಹೆಸರಿನಲ್ಲಿ ನಡೆಯುತ್ತಿದ್ದ ‘ಸಾಂಸ್ಕೃತಿಕ ದಂಧೆ ’ ದಸರೆಯಲ್ಲಿ ಯಾವ ಮಟ್ಟಿಗೆ ಹಾಸು ಹೊಕ್ಕಾ ಗಿತ್ತೆಂದರೆ, ಯುವ ದಸರೆಯ ಹೆಸರು ಗಂಗೋತ್ರಿ ಪರಿಸರಕ್ಕೆ ‘ಗಡಿ’ ಪಾರಾದರೂ, ಮನರಂಜನೆಯ ಹೆಸರಿನಲ್ಲಿ ಹಿಂದಿನ ‘ವರಸೆ’ಯಲ್ಲೇ ವಕ್ಕರಿಸುತ್ತಿದೆ. ‘ಮನರಂಜನಾ ದಸರೆ ’ಯ ಉಸ್ತುವಾರಿ ವಹಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ನಡೆಸಿರುವ ಸಿದ್ಧತೆಗಳನ್ನು ಅವಲೋಕಿಸಿದರೆ ‘ಅಳಿಯ ಅಲ್ಲ ಮಗಳ ಗಂಡ’ ಎನ್ನುವಂತೆ ಯುವ ದಸರೆ ‘ಹೊಸ ವೇಷ’ ದಲ್ಲಿ ಅನಾವರಣಗೊಳ್ಳುವ  ಸೂಚನೆಗಳು ವ್ಯಕ್ತವಾಗಿವೆ.

ಬೇಕಿತ್ತಾ ಈ ಎರಡು ಕಾರ್ಯಕ್ರಮಗಳು ?

ಚೀ. ಜ. ರಾಜೀವ ಮೈಸೂರು
ದಸರಾ ಆಚರಣೆ ಉಸ್ತುವಾರಿ ಹೊತ್ತ ವೈದ್ಯ ಶಿಕ್ಷಣ ಸಚಿವ ಎಸ್. ಎ. ರಾಮದಾಸ್ ಅವರ ಕನಸಿನ ‘ಮನೆ ಮನೆ ದಸರಾ’ ಹಾಗೂ  ‘ಶಾಲೆಯಲ್ಲೂ ದಸರಾ’ ಕುರಿತು ಸಾರ್ವಜನಿಕ ವಾಗಿ ಎದ್ದಿರುವ  ಪ್ರಶ್ನೆ ಮೇಲಿನದು. ಸಚಿವರಾಗಿ ಹೊಸ ಹುರುಪಿನಲ್ಲಿ ಇವುಗಳನ್ನು ಘೋಷಿಸಿದರು. ಆದರೆ ಅದು ರಂಗೋಲಿ ಸ್ಪರ್ಧೆ ಹಾಗೂ ದಸರಾ ಸ್ಪರ್ಧೆಯೇ ಈ ಕಾರ‍್ಯಕ್ರಮಗಳ ತಿರುಳು ಎಂಬುದು ತಿಳಿಯುತ್ತಿದ್ದಂತೆಯೇ ಇದು ಅಗತ್ಯವಿರಲಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ.
ಬೊಂಬೆ ಪ್ರದರ್ಶನ ಓಕೆ, ರಂಗೋಲಿ ಏಕೆ: ನಗರದ ಎಲ್ಲ ವಾರ್ಡ್‌ಗಳ ಜನತೆ ಹಬ್ಬದ ಸಡಗರ- ಸಂಭ್ರಮದಲ್ಲಿ ಭಾಗವಹಿಸಬೇಕು ಎಂಬುದು ಸಚಿವರ ಕಾಳಜಿ. ಆದರೆ, ಪ್ರತಿ ಬಾರಿಯೂ ನಗರದ ಎಲ್ಲರೂ   ಭಾಗವಹಿಸಿ ಸಂಭ್ರಮಿಸುತ್ತಿದ್ದಾರೆ. ದಸರಾ ಬಹಳ ವರ್ಷಗಳಿಂದ ಮೈಸೂರಿನ ಜನರಿಗೆ ಊರೊಟ್ಟಿನ ಹಬ್ಬ. ಸಹಜವಾಗಿ ಹಬ್ಬಕ್ಕೆ ನೆಂಟರಿಷ್ಟರನ್ನು ಕರೆಸುತ್ತಾರೆ- ಸತ್ಕರಿಸುತ್ತಾರೆ. ವಸ್ತು ಸ್ಥಿತಿ ಹೀಗಿದ್ದರಿಂದಲೇ, ಈ ಹೊಸ ‘ಮನೆ ಮನೆ ದಸರಾ’ ಎಂದ ತಕ್ಷಣ, ಏನಿದು ಆಚರಣೆ ಎಂದೇ ಅಚ್ಚರಿಗೆ ಬಿದ್ದರು !
‘ನಾನು ಏನೋ ವಿಶಿಷ್ಟವಾಗಿರಬಹುದೆಂದಿದ್ದೆ. ಆದರೆ, ಪ್ರತಿ ಮನೆ ಮುಂದೆ ರಂಗೋಲಿ ಬಿಡಿಸೋದು, ಗೊಂಬೆ ಕೂರಿಸೋದು ಎಂದು ಕೇಳಿ ನಿರಾಶೆಗೊಂಡೆ. ಈ ಎರಡನ್ನೂ ನಾವು ಮೊದಲಿಂದಲೂ ಮಾಡುತ್ತಿದ್ದೇವೆ. ಹೊಸತೇನು?’ ಎನ್ನುತ್ತಾರೆ ಕೃಷ್ಣಮೂರ್ತಿ ಪುರಂನ ಗೃಹಿಣಿ ಸರೋಜಮ್ಮ.
‘ಮನೆ ಮುಂದೆ ರಂಗೋಲಿ ಬಿಡಿಸೋದು ಸರಕಾರಿ ನಿರ್ದೇಶಿತ ಆಚರಣೆಯಲ್ಲ. ಸರಕಾರ ಹೇಳಿದರೂ, ಹೇಳದಿದ್ದರೂ ಮಾಡುತ್ತೇವೆ’ ಎನ್ನುತ್ತಾರೆ ಅವರು.

ಅಂಗಲಾಚೋದು ತಪ್ಪಲ್ಲ !

ವಿಕ ಸುದ್ದಿಲೋಕ ಮೈಸೂರು
ಕಾಡು, ದಟ್ಟ ಕಾಡು.ಅದೇ ಸ್ವರ್ಗ. ನರಕವೂ. ವರ್ಷದ ಹತ್ತು ತಿಂಗಳು ಬದುಕು ಅರಳುವುದು, ನಲಗುವುದು, ನಗುವುದು ಎಲ್ಲಾ ಅಲ್ಲೆ. ಆಕಾಶದಂಗಳವನ್ನು ಸರ್ವಾಲಂಕೃತವಾಗಿ ಕಣ್ಣ ಕಣಜಕ್ಕೆ ಇಳಿಸುವ ಜೋಪಡಿಗಳ ಮಡಿಲಲ್ಲಿ ಮಲಗಿ ಕನಸು ಕಾಣುವುದು,ಕಾಣುತ್ತಲೇ ಅಡವಿಗೆ ನೆಗೆದು ಬದುಕು ಕಟ್ಟಿಕೊಳ್ಳುವುದು, ಅಪರೂಪ ಕ್ಕೊಮ್ಮೆ ಜೋಪಡಿಯಾಚೆ ಕಾಲು ಚಾಚುವುದು... ಬದುಕು ಅಕ್ಷರಶಃ ಇಷ್ಟೇನೆ.
ದಸರೆ ಬಂತೆಂದರೆ ಒಂದೆರಡು ತಿಂಗಳು ನಾಡು. ಅರಮನೆಯಂತ ಊರು. ಅರಮನೆಯೇ. ಪಲ್ಲಂಗವಲ್ಲ, ಅಂಗಳ ಎನ್ನು ವುದೊಂದೇ ಪರಕು. ಆದರೇನು, ಕಾಡು ಬದುಕನ್ನು ಮೀರಿಸುವುದ ಕ್ಕಾದೀತೆ. ಅಲ್ಲಿನ ಬದುಕಿಗೆ ಅದರದ್ದೇ ಸೊಬಗಿದೆ, ಸೊಗಡಿದೆ. ಅದರ ಮುಂದೆ ‘ಇದನ್ನು’ ನೀವಾಳಿಸಿ ಒಗೆಯಬೇಕು...
ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ಗಜಪಡೆ ಪಾಲಕರ ಕುಟುಂಬವನ್ನು ಒಮ್ಮೆ ಮಾತಿಗೆಳೆದು ನೋಡಿ. ‘ಏನೇ ಆದರೂ ನಮಗೆ ನಮ್ಮ ಕಾಡೇ ಚೆಂದ, ಅಟ್ಟಿ ಉಣ್ಣುವ ಊಟವೇ ರಸಗವಳ. ಇಲ್ಲಿ ಎಲ್ಲ ಬುರ್ನಾಸು ’ಎಂದು ಮುಖ ಸಿಂಡರಿಸಿಕೊಳ್ಳುತ್ತಾರೆ. ಏನೇ ಆದರೂ ಮಿತ ಸಂತೃಪ್ತಿ ಅವರದ್ದು. ಕೊಡುವವರಿದ್ದಾರೆ, ಕೊಡು ತ್ತಾರೆ ಎಂದ ಮಾತ್ರಕ್ಕೆ ಆಗಸಕ್ಕೆ ಕೈ ಚಾಚುವ ದುರಾಸೆ ಅವರದ್ದಲ್ಲ. ನಮಗೋ, ಅವರ ಮಿತ ಆಸೆಯನ್ನೂ ಪೂರೈಸುವ ಸೌಜನ್ಯವಿಲ್ಲ !

ಮೈಸೂರು: ಪ್ರವಾಸಿ ತಾಣಗಳ ಖ್ಯಾತಿ, ನಿರ್ವಹಣೆ ಅಪಖ್ಯಾತಿ

ಜೆ.ಶಿವಣ್ಣ ಮೈಸೂರು
ಪ್ರಪಂಚದಲ್ಲಿ ನೋಡಲೇಬೇಕಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ನಾಲ್ಕನೆಯದು !
ಹೌದು, ನ್ಯೂಯಾರ್ಕ್ ಟೈಮ್ಸ್ ೨೦೧೦ರ ಶಿಫಾರಸು ಪಟ್ಟಿಯಂತೆ ಜಾಗ ತಿಕ ಪ್ರವಾಸೋದ್ಯಮ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅತ್ಯುತ್ತಮ ಪ್ರವಾಸಿ ತಾಣಗಳನ್ನು ಹೊಂದಿರುವ ಮೈಸೂರು ನೋಡಬೇಕಾದ ಪ್ರವಾಸಿ ತಾಣ. ಮತ್ತೊಂದು ವಿಶೇಷ ಎಂದರೆ ಮೈಸೂರಿನ ವಿಶ್ವವಿಖ್ಯಾತ ಅರಮನೆಗೆ ತಾಜ್‌ಮಹಲ್‌ಗಿಂತ ಹೆಚ್ಚು ಪ್ರವಾಸಿಗರು ಬರುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ. ಇತ್ತೀಚೆಗೆ ಯೋಗ, ಆಯುರ್ವೇದವೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಯೋಗ ನಗರಿ ಎನ್ನುವ ಪಟ್ಟ ಬೇರೆ ದಕ್ಕಿದೆ.
ಪ್ರತಿ ತಿಂಗಳು ೩ ಲಕ್ಷಕ್ಕೂ ಅಧಿಕ ಪ್ರವಾಸಿಗರು ಪಾರಂಪರಿಕ ನಗರಿಗೆ ಬರು ತ್ತಾರೆ. ವಿಶ್ವ ಮನ್ನಣೆ ಗಳಿಸಿರುವ ದಸರೆಯಲ್ಲಿ ಈ ಸಂಖ್ಯೆ ದುಪ್ಪಟ್ಟು ಗೊಳ್ಳು ತ್ತದೆ. ೨೦೦೯-೧೦ನೇ ಸಾಲಿನಲ್ಲಿ ೨೭.೭೦ ಲಕ್ಷ ಪ್ರವಾಸಿಗರು ಅರಮನೆಯನ್ನು ವೀಕ್ಷಿಸಿದ್ದಾರೆ. ೨೩ ಸಾವಿರಕ್ಕೂ ಹೆಚ್ಚು ಮಂದಿ ಒಂದೇ ದಿನ ಭೇಟಿ ನೀಡಿದ ಉದಾಹರಣೆಗಳು ಸಾಕಷ್ಟಿವೆ. ಗಣೇಶ ಚತುರ್ಥಿಯಂದು ೩೦,೦೦೦ ಮಂದಿ ಆಗಮಿಸಿ ೯.೩೭ ಲಕ್ಷ ರೂ. ಆದಾಯ ತಂದಿರುವುದು ಮೃಗಾಲಯದ ಇತಿ ಹಾಸದಲ್ಲೇ  ದಾಖಲೆ. ಇದು  ಇಲ್ಲಿನ ಪ್ರವಾಸಿ ತಾಣಗಳ ಆಕರ್ಷಣೆಯ ತಾಕತ್ತು.

ಪ್ರವಾಸಿ ತಾಣಗಳಲ್ಲಿ ಮೈಸೂರಿಗಿಂತ ಮಂಡ್ಯ ಜಿಲ್ಲೆ ಕಮ್ಮಿಯೇನಲ್ಲ

ಮತ್ತೀಕೆರೆ ಜಯರಾಮ್ ಮಂಡ್ಯ
ಸಮೃದ್ಧ ನೀರಾವರಿಯಿಂದ ಕೂಡಿದ ‘ಶ್ರೀಮಂತ’ ಮಂಡ್ಯ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ಬಯಲುನಾಡಿನ ಈ ಪ್ರದೇಶ ಸಾಂಸ್ಕೃತಿಕ ಪರಂಪರೆಯ ವೈವಿಧ್ಯತೆ ಮೆರೆದಿದೆ. ವಿಶ್ವವಿಖ್ಯಾತ ಪ್ರವಾಸಿ ತಾಣಗಳನ್ನು ಹೊಂದಿದ ಈ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡಿಲ್ಲ.
ಕಾವೇರಿ ಮಡಿಲಲ್ಲಿರುವ ಈ ಜಿಲ್ಲೆಯಲ್ಲಿ ರಾಜ ಮಹಾರಾಜರ ಆಳ್ವಿಕೆಯ ಕುರುಹುಗಳಾಗಿರುವ ಕೋಟೆ-ಕೊತ್ತಲಗಳು, ರಮಣೀಯ ಸ್ಥಳಗಳು, ಕಣ್ಮನ ಕೋರೈಸುವ ಪ್ರವಾಸಿ ತಾಣಗಳು, ಐತಿಹ್ಯ ಸಾರುವ ಸ್ಮಾರಕಗಳು, ಭಕ್ತರ ಸಾಗರವನ್ನು ಕಾಣುವಂತಹ ಯಾತ್ರಾ ಸ್ಥಳಗಳು ಇಲ್ಲಿ ಸಾಕಷ್ಟಿವೆ. 
ಪ್ರವಾಸೋದ್ಯಮ ಕ್ಷೇತ್ರದಲ್ಲಿ ನೆರೆಯ ಮೈಸೂರಿಗಿಂತ ಮಂಡ್ಯ ಜಿಲ್ಲೆ ಕಮ್ಮಿಯೇನಲ್ಲ. ಆದರೆ, ಮೈಸೂರಿಗೆ ದೊರೆತಷ್ಟು ಮನ್ನಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಹರಿದು ಬಂದ ಅನುದಾನ  ಮಂಡ್ಯ ಜಿಲ್ಲೆ ಪಾಲಿಗಿಲ್ಲ. ಜಿಲ್ಲೆಯ ಪ್ರವಾಸೋದ್ಯಮ ಸರಕಾರದಿಂದ ಉಪೇಕ್ಷಿಸಲ್ಪಟ್ಟಿರುವುದು ವಿಪರ್ಯಾಸ. 
ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳನ್ನೆಲ್ಲಾ ನೋಡಲು ಒಂದೆರಡು ದಿನ ಸಾಲುವುದೇ ಇಲ್ಲ. ಅಷ್ಟೊಂದು ತಾಣಗಳು ಇಲ್ಲಿವೆ. ಕೆಲ ರಮಣೀಯ ಸ್ಥಳಗಳು ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿರುವ ಪ್ರವಾಸಿ ಮಾರ್ಗದರ್ಶಿಯ ಪಟ್ಟಿಯಲ್ಲಿ ಮಾಯವಾಗಿವೆ. ಪ್ರವಾಸೋದ್ಯಮ ಇಲಾಖೆಯ  ನಿರ್ಲಕ್ಷ್ಯದಿಂದ ಅವೆಷ್ಟೋ ತಾಣಗಳು ಮರೆಯಾಗಿವೆ.
ಕೆಆರ್‌ಎಸ್, ಬೃಂದಾವನ ಮತ್ತು ರಂಗನತಿಟ್ಟು ಪಕ್ಷಿಧಾಮದಂತಹ ಮಹತ್ವ ಪಡೆದ ಸ್ಥಳಗಳು ಮಂಡ್ಯ ಜಿಲ್ಲೆಯಲ್ಲೇ ಇವೆ. ಒಂದಿಷ್ಟು ಅಭಿವೃದ್ಧಿ ಕಂಡಿರುವ ಆ ತಾಣಗಳು ಮೈಸೂರಿಗೆ ಸೇರಿದ್ದೆನ್ನುವಂತೆ ಬಿಂಬಿಸುವ ಮೂಲಕ ಮಂಡ್ಯದ ಮಹತ್ವವನ್ನು ಕಡಿಮೆ ಮಾಡುವ ಕೆಲಸ ಪ್ರವಾಸೋದ್ಯಮ ಇಲಾಖೆಯಿಂದಲೇ ಆಗಿದೆ.

ನೋಡಬನ್ನಿ ಕೊಡಗಿನ ಸೊಬಗನ್ನು

ಪ್ರಕೃತಿ ವೀಕ್ಷಣೆ
ಕೊಡಗಿನ ಸುಂದರ ಪರಿಸರದ ವೀಕ್ಷಣೆಗಾಗಿಯೇ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಬಹುತೇಕ ಸಮಯ ಕೂಲ್... ಕೂಲ್... ಆಗಿರುವ ತಂಪಾದ ಹವಾಮಾನ. ಎಲ್ಲೆಂದರಲ್ಲಿ ಕಾಣುವ ಹಚ್ಚಹಸಿರಿನ ಪ್ರಕೃತಿ ನೋಡುವುದೇ ಒಂದು ಚಂದ. ಕಾಂಕ್ರೀಟ್ ಕಾಡುಗಳಾಗಿರುವ ನಗರ ಪ್ರದೇಶದಿಂದ ಸ್ವಲ್ಪ ದಿನಗಳ ಕಾಲ ದೂರ ಇರಲು ಇಲ್ಲಿಗೆ ಆಗಮಿಸುವವರು ಇದ್ದಾರೆ.
ಕಾಫಿ ತೋಟ, ಜಲಪಾತ, ಅರಣ್ಯ ಪ್ರಕೃತಿ ಸಿರಿ ಕೊಡಗಿನಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಹೋಂಸ್ಟೇ, ರೆಸಾರ್ಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭವಾಗಿರುವುದರಿಂದ ಕೆಲವು ವರ್ಷಗಳ ಹಿಂದೆ ಪ್ರವಾಸಿಗರ ವಾಸ್ತವ್ಯಕ್ಕೆ ಇದ್ದ ಕೊರತೆ ನಿವಾರಣೆಯಾಗಿದೆ. ಇಲ್ಲಿನ ವಾಸ್ತವ್ಯ ದರ ದುಬಾರಿಯಾಗಿರುವುದು ಕೆಲವು ಪ್ರವಾಸಿಗರ ಪಾಲಿಗೆ ಹೊರೆಯಾಗಿದೆ.
ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಿಗೆ ತೆರಳಲು ಖಾಸಗಿ ಅಥವಾ ಬಾಡಿಗೆ ವಾಹನಗಳು  ಬೇಕು. ಇಲ್ಲಿಗೆ ಹೋಗಲು ಬಸ್ ವ್ಯವಸ್ಥೆಗಳು ಇಲ್ಲದಿರುವುದು ಕೊರತೆ.  ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಗೈಡ್‌ಗಳು ಇಲ್ಲಿ ಲಭ್ಯ ಇಲ್ಲ. ಆದ್ದರಿಂದ ಆ ಪ್ರದೇಶಕ್ಕೆ ಹೋಗುವ ಮುನ್ನ ವಾಸ್ತವ್ಯ ಹೂಡಿರುವ ಸ್ಥಳದಲ್ಲಿಯೇ ಸ್ಪಷ್ಟ ಮಾಹಿತಿ ಪಡೆದುಕೊಂಡು ಹೋಗುವುದೇ ಸೂಕ್ತ.

ದಸರೆ ಬಂತು: ಪ್ರವಾಸೋದ್ಯಮ ಇಲಾಖೆ ಏಳಲೇ ಇಲ್ಲ !

ವಿಕ ಸುದ್ದಿಲೋಕ ಮೈಸೂರು
ದಸರೆ ಮತ್ತು ಪ್ರವಾಸೋದ್ಯಮ....
ಇವು ಒಂದಕ್ಕೊಂದು ಬಿಡಿಸಲಾಗದ ನಂಟು. ದಸರೆ ಎನ್ನುವುದೇ ಪ್ರವಾಸೋದ್ಯಮಕ್ಕೆ ಕೇಂದ್ರ ಆಕರ್ಷಣೆ. ವರ್ಷವಿಡೀ ಲಕ್ಷಾಂತರ ಪ್ರವಾಸಿಗರು ಮೈಸೂರಿನತ್ತ ಆಗಮಿಸುತ್ತಾರೆ.  ಅದೂ ದಸರೆಯ ಸಮಯದಲ್ಲೇ ಇದು ಸಿಂಹಪಾಲು.
ಪ್ರವಾಸಿಗರಿಂದ, ಪ್ರವಾಸಿಗರಿಗಾಗಿಯೇ ಇರ ಬೇಕಾದ ಪ್ರವಾಸೋದ್ಯಮ ಇಲಾಖೆಗೆ ಹಿಡಿದಿದೆ ಗ್ರಹಣ. ದಸರೆ ಬಂದರೇನಂತೆ ಆಗ ನೋಡಿದ ರಾಯಿತು... ಎನ್ನುವ ಮನೋಭಾವದಿಂದಲೇ ಕೆಲಸ ಮಾಡುತ್ತಿದೆ ಇಲಾಖೆ.
ಏನು ಮಾಡ್ತಿದೆ ? : ಪ್ರವಾಸಿಗರನ್ನು ಸೆಳೆಯುವ ಚುಂಬಕ ಶಕ್ತಿ ಮೈಸೂರಿಗಿದ್ದರೂ ಪ್ರವಾಸೋದ್ಯಮ ಇಲಾಖೆಯ ಅಶಕ್ತತೆ ಫಲವಾಗಿ ದಸರೆಯನ್ನೂ ಬ್ರಾಂಡ್ ಮಾಡಲಾಗುತ್ತಿಲ್ಲ. ಮೈಸೂರು ಎನ್ನುವುದೇ ವಿಶ್ವದಲ್ಲಿ ಪ್ರಮುಖ ಪ್ರವಾಸೋದ್ಯಮ ಕೇಂದ್ರ. ಇಲ್ಲಿ ಸಮುದ್ರ ತೀರ ಬಿಟ್ಟರೆ ಎಲ್ಲವೂ ಉಂಟು. ೧೦೦ ಕಿ.ಮೀ. ವ್ಯಾಪ್ತಿಯೊಳಗೆ ನೂರಾರು ಪ್ರವಾಸಿ ತಾಣಗಳಿವೆ.
ಎರಡು ತಿಂಗಳ ಹಿಂದೆ ನಡೆದ ಒರಿಸ್ಸಾದ ಪುರಿ ಜಗನ್ನಾಥ ಯಾತ್ರೆಯನ್ನೇ ನೆನಪಿಸಿಕೊಳ್ಳಿ. ಪುರಿಗೆ ಧಾರ್ಮಿಕ ಹಿನ್ನೆಲೆಯಿದ್ದರೂ ಅಲ್ಲಿ  ಆಗಮಿಸುವ ಕೋಟ್ಯಂತರ ಭಕ್ತರು ಬೆಳೆಸುವುದು ಪ್ರವಾಸೋ ದ್ಯಮವನ್ನೇ. ಆಂಧ್ರಪ್ರದೇಶದ ತಿರುಪತಿಯ ಉತ್ಸವವನ್ನೇ ತೆಗೆದುಕೊಳ್ಳಿ. ಇಲ್ಲಿಯೂ ಭಕ್ತರ ದಂಡೇ. ಮೈಸೂರು ದಸರೆ ಕೂಡ ಅಧಿದೇವತೆ ಚಾಮುಂಡೇಶ್ವರಿ ಉತ್ಸವ. ನಾಡಹಬ್ಬ ಎಂದು ಘೋಷಿಸಿ ಧಾರ್ಮಿಕ ಸ್ಪರ್ಶ ನೀಡಿದರೆ ಪ್ರವಾಸಿಗ ರನ್ನು ಇನ್ನಷ್ಟು ಆಕರ್ಷಿಸಬಹುದೇನೋ.

ಗುಂಡಿ ಮುಚ್ಚೋದ್ರಲ್ಲೂ ಗಂಡಾಗುಂಡಿ !

‘ಗುಂಡಿ’ ಬಿದ್ದ ರಸ್ತೆಗೆ ಡಾಂಬರು ಬಂತು ಎಂದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ ಅದು ‘ಕಳಪೆ’ ಎಂಬುದು ಗೊತ್ತಾಗುತ್ತಿದ್ದಂತೆ ಮತ್ತೊಮ್ಮೆ ಬೇಸರಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ‘ವಿಜಯ ಕರ್ನಾಟಕ’ ನಿರಂತರವಾಗಿ ‘ಹೊಂಡ ಸಿಟಿ’ಯನ್ನು ಸಚಿತ್ರ ವರದಿ ಮಾಡಿದ ಫಲವಾಗಿ ಗುಂಡಿ ಮುಚ್ಚುವ ಕಾರ್ಯಕ್ಕೆ ಇತ್ತೀಚೆಗೆ ಚಾಲನೆ ನೀಡಲಾಗಿತ್ತು. ಆದರೆ ಅದು ಈಗಾಗಲೇ ಹಲವೆಡೆ ಕಿತ್ತು ಬಂದಿದೆ. ಗುಂಡಿ ಮುಚ್ಚುವಷ್ಟೇ ಅದು ‘ಕಳಪೆ’ಯಾಗದಂತೆ ನೋಡಿಕೊಳ್ಳುವುದು ಮುಖ್ಯ ಎನ್ನುವುದು ಜನರ ಅಭಿಮತ.

‘ವಿಶ್ವೇಶ್ವರಯ್ಯ’ ಭವನದಲ್ಲಿ ಎಷ್ಟೊಂದು ನೀರು ವ್ಯರ್ಥ !

ವಿಕ ವಿಶೇಷ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೃಹತ್ ಕಟ್ಟಡಗಳಿ ಗೊಂದು ವಿಶಿಷ್ಟ ಸ್ಥಾನ. ಆದರೆ ಇಂಥದ್ದೊಂದು ಗರಿಮೆಗೆ ಸಾಕ್ಷಿಯಾದ ಕಟ್ಟಡವೊಂದರ ನೆಲ ಮಾಳಿಗೆ ನೀರಿನಿಂದ ಶಿಥಿಲವಾಗುತ್ತಿದ್ದರೂ ಜನಪ್ರತಿನಿಧಿಗಳದ್ದು ಮಾತ್ರ ‘ಗಡದ್ದು ನಿದ್ದೆ’ !
ಇದು ಮೈಸೂರಿನ ಹೃದಯ ಭಾಗದ ಕ.ಆರ್.ವೃತ್ತದ ‘ವಿಶ್ವೇಶ್ವರಯ್ಯ ಭವನ’ ಕಟ್ಟಡದ ಸ್ಥಿತಿ. ೧೯೬೪ರಲ್ಲಿ ಕೆ.ಪುಟ್ಟಸ್ವಾಮಿ ಅವರಿಂದ ಉದ್ಘಾಟನೆಗೊಂಡ ಈ ಪಾಲಿಕೆ ಕಟ್ಟಡ ಕೆ.ಆರ್. ವೃತ್ತಕ್ಕೊಂದು ಅಂದ ಹೆಚ್ಚಿಸಿದೆ. ಆದರೆ ಈ ಭವ್ಯ ಕಟ್ಟಡದ ಸಮಸ್ಯೆಯನ್ನು ಇಂದು ಕೇಳುವವರೇ ಇಲ್ಲ.
ಇದು ಮಳೆ ನೀರಲ್ಲ: ಮೂರ‍್ನಾಲ್ಕು ತಿಂಗಳಿಂದ ಇಲ್ಲಿ ನೀರು ಶೇಖರಣೆಯಾಗುತ್ತಲೇ ಇದೆ. ಆದರೆ ಅದು ಮಳೆ ನೀರಲ್ಲ, ಶುದ್ಧ ಜಲ. ಅದನ್ನು ಹೊರದಬ್ಬುವ ಕಾರ‍್ಯವನ್ನು ಇಲ್ಲಿನ ಅಂಗಡಿಗಳ ಮಾಲೀಕರು ಮಾಡು ತ್ತಲೇ ಬಂದಿದ್ದಾರೆ. ನಿತ್ಯ ನೀರು ಶೇಖರಣೆಯಾಗು ವುದರಿಂದ ಕೆಳಭಾಗದಲ್ಲಿ ಕಲ್ಲಿನ ಹಾಸುಗಳಿದ್ದು ‘ಶುದ್ಧ ನೀರು’ ಅಲ್ಲೇ ನಿಂತು ಈಗಾಗಲೇ ಗೋಡೆಗಳೆಲ್ಲಾ ಒದ್ದೆಯಾಗಿದೆ. ಹಲವೆಡೆ ಗಾರೆ ಉದುರುತ್ತಿದೆ. ರಾತ್ರಿಯೆಲ್ಲಾ ‘ಹನಿ ಹನಿಗೂಡಿ’ ಇಲ್ಲಿನ ಹಳ್ಳ ತುಂಬುವುದರಿಂದ ಬೆಳಗ್ಗೆ ಬಂದೊಡನೆ ಮೋಟಾರ್ ಹಾಕಿ ನೀರನ್ನು ಹೊರದಬ್ಬುವುದೇ ಇಲ್ಲಿ ಇವರಿಗೆ ಮೊದಲ ಕೆಲಸ. ದಿನಕ್ಕೆ ಮೂರ‍್ನಾಲ್ಕು ಬಾರಿ ಮೋಟಾರ್‌ನಿಂದ ನೀರು ಹೊರ ಹಾಕಬೇಕಾದ ಸ್ಥಿತಿ. ಹೊರ ಹಾಕುತ್ತಿದ್ದರೂ ಮತ್ತೆ ಮತ್ತೆ ಇಲ್ಲಿ ನೀರು ತುಂಬುತ್ತಿದೆ.
ಫುಟ್‌ಪಾತ್, ರಸ್ತೆಗೆ ನೀರು: ಕಟ್ಟಡದ ಒಳಗೆ ಶೇಖರಣೆಯಾಗುವ ನೀರನ್ನು ಬೇರೆ ‘ದಾರಿ ಕಾಣದೆ’ ಮೋಟಾರ್ ಮೂಲಕ ಹೊರ ಹಾಕಲಾಗುತ್ತಿದೆ. ಅದು ಸದಾ ಜನಸಂದಣಿಯಿಂದ ಕೂಡಿರುವ ಕೆ.ಆರ್. ವೃತ್ತದ ಮುಂದಿನ ಫುಟ್‌ಪಾತ್ ಹಾಗೂ ರಸ್ತೆಯಲ್ಲಿ ಟೌನ್‌ಹಾಲ್ ಕಡೆಗೆ ಹರಿಯುತ್ತಿದೆ. ದಿನಕ್ಕೆ ೫ರಿಂದ  ೬ ಸಾವಿರ ಲೀಟರ್‌ನಷ್ಟು ಹರಿದು ಹೋಗುತ್ತಿದೆ. ಕಟ್ಟಡದ ಒಳಗಿಳಿದರೆ ಮಾತ್ರ ಎದುರಾಗುವ ಈ ಸಮಸ್ಯೆ ಹೊರಗಿನಿಂದ ಕಾಣದಿದ್ದರಿಂದ ಯಾರೂ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಂತಿಲ್ಲ !.
ಚಿದಂಬರ ರಹಸ್ಯ !: ನೆಲದಿಂದ ನೀರು ಉಕ್ಕುತ್ತಿ ದ್ದೆಯೋ, ಗೋಡೆಗಳಿಂದ ಜಿನುಗುತ್ತಿದೆಯೋ, ಪೈಪ್ ಏನಾದರೂ ಒಡೆದು ಇತ್ತ ಕಡೆ ಹರಿದು ಬರುತ್ತಿ ದೆಯೋ ಎಂಬುದೇ ಇಲ್ಲಿ ತಿಳಿಯುತ್ತಿಲ್ಲ. ಇಲ್ಲೊಂದು ಕೊಳವಿತ್ತು. ಹಾಗಾಗಿ ‘ಜಲ’ ಉಕ್ಕುತ್ತಿದ್ದರೂ ಆಶ್ಚರ್ಯ ವಿಲ್ಲ ಎನ್ನುತ್ತಾರೆ ಹಿರಿಯರು.
ಬಂದರು - ಹೋದರು: ಮೇಯರ್, ಉಪ ಮೇಯರ್, ಆಯುಕ್ತರು, ಜಿಲ್ಲಾಧಿಕಾರಿ ಇಲ್ಲಿಗೆ ಬಂದು ಸಮಸ್ಯೆಯನ್ನು ಕಣ್ಣಾರೆ ‘ಕಂಡು’ ಹೋಗಿದ್ದಾರೆ. ಆದರೆ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.
ದಸರಾ ಹಬ್ಬ ಹತ್ತಿರ ಬರುತ್ತಿದೆ. ‘ಮೈಸೂರಿನ ಸೌಂದರ್ಯ‘ ವನ್ನು ಕಣ್ಣಿಗೆ ತುಂಬಿಕೊಳ್ಳಲು ದೇಶ- ವಿದೇಶಗಳಿಂದ ಜನ ಆಗಮಿಸುತ್ತಾರೆ. ಆದರೆ ನಗರದ ಮಧ್ಯಭಾಗದಲ್ಲಿ ರುವ ಕೆ.ಆರ್.ವೃತ್ತದಲ್ಲೇ ಇಂಥದ್ದೊಂದು ಸಮಸ್ಯೆ ಕಂಡು ಜನ ಬೇಸರಿಸಿಕೊಂಡರೆ ಆಶ್ಚರ್ಯವಿಲ್ಲ. ಹಾಗಾಗಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಯಾರೂ ಅರಿಯರು ಈ ‘ಹೊಂಡಾಂತರಂಗ’

ವಿಕ ಸುದ್ದಿಲೋಕ ಮೈಸೂರು
‘ಹೊಂಡ ಸಿಟಿ’ಯಲ್ಲಿ ಆದಷ್ಟು ಬೇಗ ದಸರಾ ಕಾಮಗಾರಿಗಳನ್ನು ಆರಂಭಿಸಿ, ಅಷ್ಟೇ ತ್ವರಿತವಾಗಿ ಮುಕ್ತಾಯಗೊಳಿಸಬೇಕೆಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು  ಗುರುವಾರ ನೂರೊಂದು ತೆಂಗಿನ ಕಾಯಿ ಒಡೆಯುವ ಮೂಲಕ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.
ವಿಜಯಕರ್ನಾಟಕದ ‘ಸ್ವಲ್ಪ ಅಡ್ಜಸ್ಟ್ ಮಾಡಬೇಡಿ’ ಅಭಿಯಾನದ ಶೀರ್ಷಿಕೆಗಳನ್ನೇ ಹೊತ್ತ ಬ್ಯಾನರ್ ಹಿಡಿದುಕೊಂಡಿದ್ದ ಕಾರ್ಯಕರ್ತರು ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ  ಕಾಯಿ ಒಡೆದರು, ಪಾಲಿಕೆ ವಿರುದ್ಧ ಘೋಷಣೆ ಮೊಳಗಿಸಿದರು. ಮೊದಲೆಲ್ಲಾ ದಸರಾ ಆರಂಭಕ್ಕೆ ೨ ತಿಂಗಳು ಬಾಕಿ ಇದೆ  ಇರುವಂತೆಯೆ ದಸರಾ ಕಾಮಗಾರಿ ಶುರುವಾಗುತ್ತಿತ್ತು. ಆದರೆ ಈ ಬಾರಿ ಉತ್ಸವಕ್ಕೆ ೧೫ ದಿನ ಬಾಕಿ ಇದ್ದರೂ, ಸಿದ್ಧತೆಯ ಸೂಚನೆಗಳು ಕಾಣುತ್ತಿಲ್ಲ. ರಸ್ತೆಯೆಲ್ಲಾ ಹಳ್ಳ ಬಿದ್ದಿವೆ. ಹಾಗಾಗಿ ಪಾಲಿಕೆ ಅಧಿಕಾರಿಗಳಿಗೆ  ಸದ್ಬುದ್ಧಿ ನೀಡಪ್ಪ ಎಂದು ಕಾರ್ಯಕರ್ತರು ದೇವರಿಗೆ ಕಾಯಿ ಒಡೆದರು. ಇದು ಕೂಡ ಪ್ರತಿಭಟನೆಯ ಅಸ್ತ್ರ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಸತೀಶ್ ಗೌಡ, ನಗರಾಧ್ಯಕ್ಷ ಉಮೇಶ್, ಯುವ ಅಧ್ಯಕ್ಷ ಲೋಕೇಶ್ ಪಿಯಾ, ಕಾರ್ಯಾಧ್ಯಕ್ಷ ಮಧುಚಂದ್ರ ಮತ್ತಿತರರು ನೇತೃತ್ವ ವಹಿಸಿದ್ದರು.

ಶಾಲೆಗೆ ಚಕ್ಕರ್: ತಂಬಾಕು ಕೆಲಸಕ್ಕೆ ಹಾಜರ್ !

ಚೀ. ಜ. ರಾಜೀವ ಮೈಸೂರು
ತಂಬಾಕು ಬೆಳೆಯುವ ಜಿಲ್ಲೆಯ ಯಾವುದೇ ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗಳಿಗೆ ಈ ದಿನಗಳಲ್ಲಿ ಭೇಟಿ ನೀಡಿ !
ನಿಮಗೆ ತರಗತಿಯಲ್ಲಿ ಸಿಗೋರು ೧೫- ೨೦ ಮಕ್ಕಳಷ್ಟೇ. ಶಾಲೆಯ ಒಟ್ಟೂ ವಿದ್ಯಾರ್ಥಿಗಳ ಸಂಖ್ಯೆ ಇಷ್ಟೊಂದು ಕಡಿಮೆಯೇ ಎನ್ನಬೇಡಿ. ಹಾಜರಿ ಪುಸ್ತಕದಲ್ಲಿ ೩೦ರಿಂದ ೪೦ ಮಕ್ಕಳ ಹೆಸರಿರುತ್ತೆ. ಉಳಿದ ಅರ್ಧಕರ್ಧ ಮಕ್ಕಳು ಎಲ್ಲಿಗೆ ಹೋಗಿದ್ದಾರೆ ಎಂದು ಶಿಕ್ಷಕರನ್ನು ಕೇಳಿ- ‘ಹೊಗೆಸೊಪ್ಪು ಬೆಳೆಯುವ ಹೊಲ-ಗದ್ದೆಗಳಿಗೆ ’ ಎಂದು ಸರಳವಾಗಿ ಉತ್ತರಿಸುತ್ತಾರೆ.
‘ಹಂಗಾದ್ರೆ, ಅವರಿಗೆ ಪಾಠ ಪ್ರವಚನ...?’ ಅಂದ್ರೆ- ‘ಹೊಗೆಸೊಪ್ಪು ಹಂಗಾಮ ಮುಗಿದ ಬಳಿಕ, ಸರಿಯಾಗಿ ಶಾಲೆಗೆ ಬರುತ್ತಾರೆ. ಅಯ್ಯೋ, ನಿಮಗೆ ಗೊತ್ತಿಲ್ವಾ ?, ಇಲ್ಲೆಲ್ಲಾ ಇದು ಮಾಮೂಲಿ. ಶಾಲೆ  ನಡೆಯೋದೇ ಹೀಗೆ !’ ಎನ್ನುತ್ತಾರೆ  ಕೆಲ ಶಿಕ್ಷಕರು.
ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾ ಪಟ್ಟಣ ಮತ್ತು  ನಂಜನಗೂಡು ತಾಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ಸರಕಾರಿ ಶಾಲೆಗಳ ಸಮಸ್ಯೆ - ಸ್ಥಳೀಯರ ದೃಷ್ಟಿಯಲ್ಲಿ ಸಮಸ್ಯೆಯೇ ಅಲ್ಲ. ಶಾಲೆಗೆ ಚಕ್ಕರ್ ಹೊಡೆದು, ತಂಬಾಕು ಬೆಳೆಯುವ ಹೊಲ-ಗದ್ದೆಯಲ್ಲಿ  ಕೂಲಿ ಕಾರ್ಮಿಕರಾಗುವುದು, ಬಹಳಷ್ಟು ಮಕ್ಕಳ ಶಿಕ್ಷಣದ ಒಂದು ಭಾಗ. ಸಾರ್ವಜನಿಕ ಶಿಕ್ಷಣ ಇಲಾಖೆ ಮಾತ್ರ ಇದನ್ನು ಸಮಸ್ಯೆ ಎಂದು ಪರಿಗಣಿಸಿದ್ದರೂ, ಪರಿಹಾರವೇ ತೋಚುತ್ತಿಲ್ಲ !
ಕೂಲಿಗೆ ಮಕ್ಕಳೇ ಯೋಗ್ಯ: ಮೇ ತಿಂಗಳು ಕಳೆಯುತ್ತಿದ್ದಂತೆಯೇ ಮೂರು ತಾಲೂಕುಗಳ ಗ್ರಾಮೀಣ ಪ್ರದೇಶದ ಹೊಲ-ಗದ್ದೆಗಳಲ್ಲಿ ತಂಬಾಕು ಕೃಷಿ ಆರಂಭವಾಗುತ್ತದೆ. ಈ ಅವಧಿಯಲ್ಲಿ ಸಸಿ ನೆಡುವ ಹಾಗೂ ಅದಕ್ಕೆ  ಗೊಬ್ಬರ ಹಾಕುವ ಕೆಲಸಕ್ಕೆ ಎಲ್ಲರ ಮಕ್ಕಳೂ ಮೊರೆ ಹೋಗುತ್ತಾರೆ. ಬುಡಕ್ಕೆ ಗೊಬ್ಬರ ಹಾಕಿದ ಮೇಲೆ ಒಮ್ಮೆ ಉತ್ತು, ನಂತರ ಸಸಿಗೆ ಮಣ್ಣು ಏರಿಸುತ್ತಾರೆ. ಈ ಕೆಲಸವೂ ಮಕ್ಕಳಿಗೆ ಸಲೀಸು. ಹಾಗಾಗಿ ಮೂರನೇ ಬಾರಿಯೂ ಕೃಷಿಕರು ಮಕ್ಕಳನ್ನೇ ತಮ್ಮ ಹೊಲ-ಗದ್ದೆಗಳಿಗೆ ಕರೆತರುತ್ತಾರೆ.
ಇದಕ್ಕೆ ಮಕ್ಕಳನ್ನೇ ಬಳಸಲು, ಕೂಲಿ ಕಾರ್ಮಿಕರ ಕೊರತೆ ಹಾಗೂ ಬಡತನವಷ್ಟೇ ಕಾರಣವಲ್ಲ. ತಂಬಾಕು ಕೃಷಿಯ ಸ್ವರೂಪವೇ ಆ ರೀತಿ. ನಡು ಬಗ್ಗಿಸಿ ಸಸಿ ನೆಡಲು, ಗೊಬ್ಬರ ಹಾಕಲು-ದೊಡ್ಡವರಿಗೆ ಕಷ್ಟ. ಜತೆಗೆ ದೊಡ್ಡವರಿಗೆ ೧೫೦ ರೂ. ನೀಡುವ ಬದಲು, ಮಕ್ಕಳಿಗೆ ೬೦ ರೂ. ಕೊಟ್ಟರೆ ಮುಗೀತು ಎಂಬ ಲೆಕ್ಕಾಚಾರ.
ನಾಲ್ಕು ತಿಂಗಳ ಸಮಸ್ಯೆ: ರಾಜ್ಯದಲ್ಲಿ ಸುಮಾರು ೬೭೫೦೦ ತಂಬಾಕು ಬೆಳೆಗಾರರ ಪೈಕಿ ಶೇ. ೭೦ರಷ್ಟು ಬೆಳೆಗಾರರು ಮೈಸೂರು ಜಿಲ್ಲೆಯಲ್ಲೇ ಇದ್ದಾರೆ. ಹುಣಸೂರು, ಪಿರಿಯಾಪಟ್ಟಣ ಮತ್ತು ನಂಜನ ಗೂಡು ತಾಲೂಕಿನ ಬಹಳಷ್ಟು  ಗ್ರಾಮಗಳ ರೈತರ ಕೃಷಿ ಚಟುವಟಿಕೆಯೇ ಇದು. ಜೂನ್‌ನಿಂದ ಸೆಪ್ಟೆಂಬರ್ ವರೆಗಿನ ನಾಲ್ಕು ತಿಂಗಳಲ್ಲಿ ತಂಬಾಕು ಮಡಿ ಮಾಡುವುದು, ಗೊಬ್ಬರ ನೀಡುವುದು, ಸೊಪ್ಪು ಕೊಯ್ಯುವುದಕ್ಕೆ ಸೇರಿದ ಚಟುವಟಿಕೆಗಳು ನಡೆಯುತ್ತಿರುತ್ತವೆ. ಈ ಅವಧಿಯಲ್ಲೇ ಮಕ್ಕಳು ಶಾಲೆಗೆ ಗೈರು.
‘ಬಹಳ ವರ್ಷಗಳಿಂದ ಇಲ್ಲೆಲ್ಲಾ ಹೊಗೆಸೊಪ್ಪು ಬೆಳೆಯುತ್ತಿದ್ದೇವೆ. ಆದರೆ, ೫-೧೦ ವರ್ಷ ಗಳಿಂದೀಚೆಗೆ  ಸೊಪ್ಪು  ಬೆಳೆಯುವವರ ಸಂಖ್ಯೆ ಹೆಚ್ಚಿದೆ. ತಂಬಾಕು ಮಂಡಳಿಗೆ ದಂಡ ಕಟ್ಟಿದರೂ ಸರಿ, ಹೊಗೆಸೊಪ್ಪು ಬೆಳೆಯುತ್ತೇವೆ ಎಂಬ ಮನಸ್ಥಿತಿ ರೈತರದ್ದು. ಹಾಗಾಗಿ ೧೫-೨೦ ಸಾವಿರ ಅನಧಿಕೃತ ಬೆಳೆಗಾರರಿದ್ದಾರೆ. ಬಹುತೇಕ  ಕೃಷಿಕರ ಮಕ್ಕಳು ಮನೆಯ ಕೆಲಸಕ್ಕೆ ಕೂಲಿಕಾರರಾಗುತ್ತಾರೆ’ ಎಂಬುದು ಹುಣಸೂರು ತಾಲೂಕು  ಚಿಲ್ಕುಂದ  ಶಾಲೆಯ ಶಿಕ್ಷಕರೊಬ್ಬರು ನೀಡುವ ವಿವರಣೆ.
‘ತಂಬಾಕು ಹೊಲದಿಂದ ಮಕ್ಕಳನ್ನು ಶಾಲೆಗೆ ಕರೆತರಲು ಇಲಾಖೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ಪ್ರತಿ ಗ್ರಾಮ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸುತ್ತೇವೆ. ಶಾಲಾಭಿವೃದ್ಧಿ ಸಮಿತಿಗಳ ಮೂಲಕವೂ ಹೇಳಿಸುತ್ತೇವೆ. ಆದರೂ  ಪ್ರಯೋಜನ ವಾಗಿಲ್ಲ’  ಎನ್ನುತ್ತಾರೆ ನಂಜನಗೂಡು ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಮಂಗಳಾ.
ಮಕ್ಕಳನ್ನು ಕೂಲಿ ಕಾರ್ಮಿಕರನ್ನಾಗಿಸುವ ಪಾಲಕರಿಗೆ ಯಾರು ತಿಳಿ ಹೇಳಬೇಕು ?, ಯಾವ ಶಿಕ್ಷೆ ನೀಡಬೇಕು ?. ಸಂಕೀರ್ಣವಾದ  ಈ ಸಮಸ್ಯೆಗೆ ಪರಿಹಾರ ಏನು ? ಶಿಕ್ಷಣ ತಜ್ಞರು ಮತ್ತು ಇಲಾಖೆ ಅಧಿಕಾರಿಗಳೇ  ಹೇಳಬೇಕಷ್ಟೇ.

ಎದ್ದು ಕುಳಿತಿದ್ದಾರೆ ರೇಷ್ಮೆ ಇಲಾಖೆ ಮಂದಿ

ಕುಂದೂರು ಉಮೇಶಭಟ್ಟ ಮೈಸೂರು
ವರ್ಷಗಳಿಂದ ಮಲಗಿದ್ದ ರಾಜ್ಯ ರೇಷ್ಮೆ ಇಲಾಖೆಗೆ ಈಗ ಎದ್ದು ಕುಳಿತುಕೊಳ್ಳುವ ಕಾಲ.
ರೇಷ್ಮೆ ಇಲಾಖೆ ಆಯುಕ್ತರಾಗಿ ಬಂದಿರುವ ಪಿ.ಮಣಿವಣ್ಣನ್ ಅವರೀಗ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಡಿದೆಬ್ಬಿಸುವ ಕಾರ‍್ಯದಲ್ಲಿ ನಿರತ.
ಕೆಲಸವನ್ನೇ ಮರೆತಿದ್ದ ಹಲವರಿಗೆ ಆಯುಕ್ತರಿಂದ ಬರುತ್ತಿರುವ ಎಸ್‌ಎಂಎಸ್, ಇ-ಮೇಲ್‌ಗಳು ಎದ್ದು ಕುಳಿತುಕೊಳ್ಳುವಂತೆ ಮಾಡಿವೆ,
ಮಣಿವಣ್ಣನ್ ಇನ್ನು ನಮ್ಮನ್ನು ಮಲಗಲು ಬಿಡೋಲ್ಲ ಎನ್ನುವ ಹೆದರಿಕೆ ಸಿಬ್ಬಂದಿಯಲ್ಲಿ ನಿಧಾನವಾಗಿ ಬರತೊಡಗಿದೆ. ಇದನ್ನೇ ಬಳಸಿಕೊಂಡು ಇಲಾಖೆ ಅಧಿಕಾರಿಗಳಿಗೆ ಸೆಪ್ಟೆಂಬರ್ ೨೮ರಿಂದ ಮೂರು ದಿನ ಮೈಸೂರಿನಲ್ಲಿ ಪ್ರೇರಣಾ ಕಾರ‍್ಯಕ್ರಮವನ್ನು ನಡೆಸಲಾಗುತ್ತಿದೆ. ೨ನೇ ಹಂತದಲ್ಲಿ ಸಿಬ್ಬಂದಿಗಳ ಮೇಲೆ ಈ ಪ್ರಯೋಗ. ಆ ಮೂಲಕ ರೇಷ್ಮೆ ಇಲಾಖೆಗೆ ಗುರಿ ನಿಗದಿಪಡಿಸುವ ಕಾರ‍್ಯವೂ ಸದ್ದಿಲ್ಲದೇ ನಡೆಯುತ್ತಿದೆ.
ರೇಷ್ಮೆಕೃಷಿ ಏರಿಳಿತ
ಕರ್ನಾಟಕದಲ್ಲಿ ರೇಷ್ಮೆಯನ್ನು ಪರ‍್ಯಾಯ ಕೃಷಿಯಾಗಿ ರೂಪಿಸಬೇಕು. ಆ ಮೂಲಕ ಕರ್ನಾಟಕದ ಅತ್ಯುತ್ತಮ ದರ್ಜೆಯ ರೇಷ್ಮೆಯನ್ನು ದೇಶವಲ್ಲದೇ ಹೊರದೇಶಗಳಿಗೂ ಸರಬರಾಜು ಮಾಡುವಷ್ಟು ನಮ್ಮವರು ಸ್ವಾವಲಂಬಿಗಳಾಗಬೇಕು ಎನ್ನುವ ಕನಸಿನೊಂದಿಗೆ ಹಲವಾರು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಯಿತು. ಪ್ರತ್ಯೇಕ ಇಲಾಖೆಯನ್ನೇ ಹುಟ್ಟು ಹಾಕಿ ಅಧಿಕಾರಿಗಳು, ಸಿಬ್ಬಂದಿಗಳ ನಿಯೋಜನೆಯಾಯಿತು. ದಕ್ಷಿಣ ಕರ್ನಾಟಕದಲ್ಲಿ ರೇಷ್ಮೆ ಕೃಷಿ ಯಶಸ್ಸಿಯ ಹಾದಿ ಹಿಡಿಯಿತಾದರೂ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ರೇಷ್ಮೆ ಜನರ ಭಾಗವಾಗಲೇ ಇಲ್ಲ.
೧೯೮೦ರ ದಶಕದಲ್ಲಿ ವಿಶ್ವ ಬ್ಯಾಂಕ್‌ನಿಂದ ರೇಷ್ಮೆಗೆ ಉತ್ತೇಜನ ನೀಡುವ ಕಾರ‍್ಯಕ್ರಮ ವಾಯಿತು. ಆಗ ೧೦೦ ಕೋಟಿ ರೂ.ಗಳ ಆರ್ಥಿಕ ನೆರವು ವಿಶ್ವಬ್ಯಾಂಕ್‌ನಿಂದ ದೊರೆತಾಗ ಸಾಕಷ್ಟು ಕಾರ‍್ಯಕ್ರಮಗಳು ಜಾರಿಯಾದವು. ಸಾಕಷ್ಟು ರೇಷ್ಮೆ ಕೇಂದ್ರಗಳು ತಲೆ ಎತ್ತಿದವು. ರೈತರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ ಕಂಡು ಬಂದು ಉತ್ಪಾದನೆಯಲ್ಲೂ ಏರಿಕೆಯಾಯಿತು. ಆನಂತರ ಜಪಾನ್ ಸೇರಿದಂತೆ ಹಲವು ದೇಶಗಳ ತಂತ್ರಜ್ಞಾನವನ್ನು ನಮ್ಮಲ್ಲಿ ಅಳವಡಿಸುವ ಕಾರ‍್ಯಕ್ರಮ ಗಳು ನಡೆದವು.
ಇಷ್ಟರ ನಡುವೆ ದೇಶದ ಮುಕ್ತ ಆರ್ಥಿಕ ನೀತಿಯಿಂದಾಗಿ ರೇಷ್ಮೆಯ ಆಮದು ಪ್ರಮಾಣದಲ್ಲಿ ಏರಿಕೆ, ಘಟಾನುಘಟಿಗಳ ಲಾಬಿ, ನಿರೀಕ್ಷಿತ ಬೆಲೆ ಸಿಗದೇ ಸಾಕಷ್ಟು ಮಂದಿ ರೇಷ್ಮೆ ಕೃಷಿಯಿಂದ ದೂರ ಸರಿಯತೊಡಗಿದರು. ಚಾಮರಾಜನಗರ ಜಿಲ್ಲೆ ಯೊಂದರಲ್ಲೇ ರೇಷ್ಮೆಯನ್ನು ನೆಚ್ಚಿಕೊಂಡಿದ್ದ ಸಾವಿರಾರು ಕುಟುಂಬಗಳು ಪರ‍್ಯಾಯ ಬೆಳೆಯತ್ತ ಮುಖ ಮಾಡಿವೆ. ಬಹಳಷ್ಟು ಕಡೆ ರೇಷ್ಮೆ ಕೇಂದ್ರಗಳೆಲ್ಲಾ ಹಾಳು ಕೊಂಪೆಗಳಾಗಿವೆ.
ಮಲಗಿದ್ದ ರೇಷ್ಮೆ ಇಲಾಖೆಗೆ
ಇಂಥ ಸ್ಥಿತಿಯಲ್ಲಿ ಸಕ್ರಿಯವಾಗಿಯೇ ಕೆಲಸ ಮಾಡುತ್ತಿದ್ದ ರೇಷ್ಮೆ ಇಲಾಖೆಯೂ ನಿಧಾನವಾಗಿ ತನ್ನ ಮಹತ್ವ ಕಳೆದುಕೊಳ್ಳತೊಡಗಿತು. ಸ್ಪಷ್ಟವಾದ ನೀತಿ ಇಲ್ಲದಿರುವುದು, ನಿರಂತರವಾಗಿ ಆಯುಕ್ತರ ಬದಲಾವಣೆ ಫಲವಾಗಿ ಇಲಾಖೆ ಮಲಗಿಯೇ ಹೋಯಿತು.
ರೇಷ್ಮೆ ಇಲಾಖೆಯ ಕಚೇರಿಯೊಳಗೆ ಕಾಲಿಟ್ಟು ನೋಡಿ, ಅಲ್ಲಿನ ಸಂಭಾಷಣೆ ಹೀಗೆ ಇರುತ್ತದೆ.
ಆಯ್ಯೋ ಕೆಲಸ ಏನಿಲ್ಲಾ ಕಣಯ್ಯಾ, ಒಂದು ಚಹಾ ಕುಡಿದು ಬರೋಣ ಬಾ ಎಂದು ಒಬ್ಬರು ಹೇಳಿದರೆ, ಇಲ್ಲಿಯೇ ಸ್ವಲ್ಪ ಹೊತ್ತು ನಿದ್ದೆ ಮಾಡಿ ಮುಗಿಸುತ್ತೇನೆ ಇರು, ಬರೀ ಸಹಿ ಮಾಡಿ ದಿನದೂಡುವುದೇ ನಮ್ಮ ಕೆಲಸವಾಗಿ ಹೋಗಿದೆ ಎಂದು ಹೇಳುವವರನ್ನು ಕಾಣಬಹುದು. ಕೆಲವರಂತೂ ಕ್ಷೇತ್ರ ಕಾರ‍್ಯದ ನೆಪದಲ್ಲಿ ಕಚೇರಿಗಳಿಗೆ ಅತಿಥಿಗಳಾಗಿದ್ದಾರೆ. ಕೆಲವರು ಮಾತ್ರ ನಿಷ್ಠೆಯಿಂದ ಕೆಲಸ ಮಾಡುತ್ತಲೇ ಇದ್ದಾರೆ.
ಬಾಲಸುಬ್ರಹ್ಮಣ್ಯರಿಂದ ಮಣಿವಣ್ಣನ್‌ವರೆಗೆ..
ಇಂಥ ಸ್ಥಿತಿಯಲ್ಲಿ ರೇಷ್ಮೆ ಇಲಾಖೆಯನ್ನು ಯಾರು ಕಾಪಾಡಬೇಕು ಎಂದು ಕೆಲವರು ಹೇಳುತ್ತಲೇ ಇರುತ್ತಾರೆ. ಹಿಂದೆ ಬಾಲಸುಬ್ರಹ್ಮಣ್ಯಂ ಅವರು ಇಲಾಖೆ ನಿರ್ದೇಶಕರಾಗಿದ್ದಾಗ ಸಾಕಷ್ಟು ಚಟುವಟಿಕೆ ನಡೆದವು. ಆನಂತರ ವಿ.ಮಧು, ಆರ್.ಜಿ.ನಡದೂರ್ ಅವರು ಆಯುಕ್ತರಾಗಿದ್ದಲೂ ಇಲಾಖೆ ಜೀವಂತವಾಗಿಯೇ ಇತ್ತು. ಕಳೆದ ವರ್ಷ ಶಂಭುದಯಾಳ್ ಮೀನಾ ಅವರನ್ನು ಇಲಾಖೆಗೆ ನೇಮಿಸಲಾಯಿತು. ಬದಲಾವಣೆ ಗಾಳಿ ಬೀಸುತ್ತಿದೆ ಎನ್ನುವ ಹೊತ್ತಿಗೆ ಮೀನಾ ಎತ್ತಂಗಡಿಯಾದರು. ಪೆರುಮಾಳ್ ಅವರು ಗಣಿ ಗದ್ದಲದಲ್ಲಿ ಯಾರದ್ದೋ ಮೇಲಿನ ಸಿಟ್ಟಿಗೆ ಇಲ್ಲಿಗೆ ಬಂದರು. ಈಗ ಮಣಿವಣ್ಣನ್ ಅವರನ್ನು ನೇಮಿಸಲಾಗಿದೆ. ಮೂರು ತಿಂಗಳಲ್ಲಿ ಅವರು ಇಲಾಖೆ ತಿಳಿಯುವ ಪ್ರಯತ್ನ ಮಾಡಿದ್ದಾರೆ. ಒಳ್ಳೆಯದನ್ನು ಮಾಡಬಹುದು ಎನ್ನುವ ನಿರೀಕ್ಷೆಯೊಂದಿಗೆ ಈಗ ಅಧಿಕಾರಿಗಳು, ಸಿಬ್ಬಂದಿಗಳನ್ನು ಸರಿ ದಾರಿಗೆ ತರಲು ಮುಂದಾಗಿದ್ದಾರೆ. ಈಗಾಗಲೇ ಅವರ ಇ-ಮೇಲ್, ಎಸ್‌ಎಂಎಸ್‌ಗಳು ಸಾಕಷ್ಟು ಕೆಲಸ ಮಾಡುತ್ತಿವೆ. ಮಣಿವಣ್ಣನ್ ಅವರದ್ದು ಆರಂಭಿಕ ಉತ್ಸಾಹವಾಗದೆ ಕನಿಷ್ಠ ಎರಡು ವರ್ಷ ಇಲ್ಲೇ ಇದ್ದು ಇಲಾಖೆ ಸುಧಾರಿಸಲಿ ಎಂಬುದು ಹಲವರ ನಿರೀಕ್ಷೆ.

ಡೀಲ್ ಮಗಾ ಡೀಲ್ ರಸ್ತೆ ಕಾಮಗಾರಿಗೂ ಡೀಲ್

ಮೈಸೂರಿನ ಗಂಡಾಗುಂಡಿ ರಸ್ತೆಗಳ ಹಿಂದಿನ ಕಮೀಷನ್ ವ್ಯವಹಾರದ ಗುಟ್ಟು ಗೊತ್ತೇ ?
ಯಾವುದೇ ಕಾಮಗಾರಿ ನಡೆಯುವ ಮುನ್ನವೇ ಅದರ ಹಿಂದೆ ವ್ಯವಹಾರ ಕುದುರಿರುತ್ತದೆ. ನಗರದಲ್ಲಿನ ಕಾಮಗಾರಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನಿಲ್ಲ,ಕಮಿಷನ್ ವ್ಯವಹಾರ ನಡೆಯುವ ಬಗೆ ಹೀಗೆ ನೋಡಿ- ಒಂದು ಕಾಮಗಾರಿಯನ್ನು ಟೆಂಡರ್ ಮೂಲಕ ಇಲ್ಲವೇ ತುಂಡು ಗುತ್ತಿಗೆ ಮೂಲಕ ನೀಡುವ ಪರಿಪಾಠವಿದೆ. ದೊಡ್ಡ ಮೊತ್ತದ್ದಾದರೆ ಟೆಂಡರ್ ಮೂಲಕ ಕಾಮಗಾರಿ ವಹಿಸಿದರೆ, ಸಣ್ಣ ಮೊತ್ತದ್ದು ತುಂಡು ಗುತ್ತಿಗೆ ರೂಪದಲ್ಲಿ ವಹಿಸಲಾಗುತ್ತದೆ.  ಅದರಲ್ಲೂ ರಸ್ತೆ ಕಾಮಗಾರಿಗಳನ್ನು ಇತ್ತೀಚಿನ ವರ್ಷಗಳಲ್ಲಿ ತುಂಡು ಗುತ್ತಿಗೆಯಲ್ಲಿ ನೀಡುವುದು ಬೆಳೆದು ಬಂದಿದೆ. ಇದರಿಂದ ಗುತ್ತಿಗೆ ಇಲ್ಲವೇ ತುಂಡು ಗುತ್ತಿಗೆ ಮೂಲಕ ನೀಡುವ ಕಾಮಗಾರಿಗಳಿಗೆ ಇಂತಿಷ್ಟು ಕಮಿಷನ್ ವ್ಯವಹಾರ ನಡೆಯುತ್ತಿದೆ. ವರ್ಷಗಳಿಂದಲೂ ಕಮಿಷನ್ ವಹಿವಾಟು ನಡೆದಿದ್ದರೂ ಇತ್ತೀಚಿಗೆ ಹೆಚ್ಚಾಗಿದೆ.
ಒಂದು ಕಾಮಗಾರಿ ಮೊದಲ ಹಂತದಲ್ಲಿ ಕಮಿಷನ್ ವ್ಯವಹಾರ ಕುದುರುವುದು ಎಂಜಿನಿಯರ್ ಹಾಗೂ ಗುತ್ತಿಗೆದಾರರ ನಡುವೆ. ಗುಂಡು ಗುತ್ತಿಗೆಗೆ ಶೇ.೨ರಷ್ಟು ಕಮಿಷನ್ ಅನ್ನು ಹಂಚಿಕೊಳ್ಳಲಾಗುತ್ತದೆ. ಇದೇ ದೊಡ್ಡ ಕಾಮಗಾರಿಯಾದರೇ ಇದರ ಮೊತ್ತ ಶೇ. ೧೦ರಿಂದ ೧೫ಕ್ಕೆ ಏರುತ್ತದೆ. ಮೊದಲ ಡೀಲ್ ಇಲ್ಲಿಯೇ ಸರಿಯಾಗಿ ಬಿಡುತ್ತದೆ. ಎಂಜಿನಿಯರ್‌ಗೆ ಸರಿಯಾದ ಕಮಿಷನ್ ಹೋಗಲಿಲ್ಲ ಎಂದರೆ ಅಂತಿಮ ವರದಿ ನೀಡಬೇಕಾದವರು. ಹಣ ಒದಗಿಸಬೇಕಾದವರು, ಮುಂದೆಯೂ ಇದೇ ರೀತಿಯ ಸಹಕಾರ ಬೇಕಾದವರು ಎಂಜಿನಿಯರ್‌ಗಳೇ ಆಗಿದ್ದರಿಂದ ಇಲ್ಲಿ ತಕರಾರು ಇಲ್ಲದೇ ವ್ಯವಹಾರ ಕುದುರಿಬಿಡುತ್ತದೆ.
ಕಮೀಷನ್‌ನ ೨ನೇ ಹಂತ ಎಂಜಿನಿಯರ್‌ಗಳ ಬಳಿಕ ಸ್ಥಳೀಯ ಜನಪ್ರತಿನಿಧಿಗಳದ್ದು. ಪಾಲಿಕೆ ಸದಸ್ಯರು, ಶಾಸಕರ ಜತೆಯಲ್ಲಿ ಮೇಲ್ಮಟ್ಟದ ಅಧಿಕಾರಿಗಳಿಗೂ ಶೇ.೫ರಿಂದ ೧೦ರಷ್ಟು ಕಮಿಷನ್ ಸುಲಭವಾಗಿ ತಲುಪುತ್ತದೆ ಎನ್ನುವುದು ಗುಟ್ಟಾಗೇನೂ ಉಳಿದಿಲ್ಲ. ಇನ್ನು ಸ್ಥಳೀಯವಾದ ಪುಡಾರಿಗಳಿಗೂ ಕೆಲವೊಮ್ಮೆ ಕಮಿಷನ್ ಹಂಚಿಕೆಯಾಗುವುದೂ ಇದೆ. ಒಂದು ಕಾಮಗಾರಿ ಆರಂಭವಾಯಿತೆಂದರೆ ಕಮಿಷನ್ ರೂಪದಲ್ಲಿ ಹೋಗುವ ಮೊತ್ತ ಶೇ.೨೫ರಿಂದ ೩೫ ದಾಟುತ್ತದೆ.
ನಗರದ ರಸ್ತೆ ಕಾಮಗಾರಿ ಇದಕ್ಕಿಂತ ಭಿನ್ನ. ರಸ್ತೆ ಡಾಂಬರೀಕರಣಕ್ಕೆ ಒಮ್ಮೆ ಹಣ ಬಂದರೆ ಮತ್ತೊಮ್ಮೆ ಗುಂಡಿ ಮುಚ್ಚಲು ಹಣ ನೀಡಲಾಗುತ್ತದೆ. ಕೆಲವೊಮ್ಮೆ ಪಾಲಿಕೆಯಲ್ಲದೇ ಲೋಕೋಪಯೋಗಿ ಇಲಾಖೆಯೂ ಕೆಲವು ರಸ್ತೆಗಳ ನಿರ್ವಹಣೆಗೆ ಮುಂದಾಗುತ್ತದೆ. ಇದರಿಂದ ಮುಖ್ಯ ರಸ್ತೆಗಳನ್ನು ಬಿಟ್ಟು ಬಡಾವಣೆಯ ರಸ್ತೆಗಳ ಕಾಮಗಾರಿ ದಾಖಲೆಯಲ್ಲಿ ಪೂರ್ಣಗೊಂಡಿರು ತ್ತದೆ. ಹಣ ಮಾತ್ರ ಜನಪ್ರತಿನಿಧಿಗಳು-ಅಧಿಕಾರಿಗಳು- ಗುತ್ತಿಗೆದಾರರ ನಡುವೆ ಹಂಚಿಕೆಯಾಗಿ ಬಿಡುತ್ತದೆ, ಕಳೆದ ವರ್ಷ ನಗರದಲ್ಲಿ ಗುಂಡಿ ಮುಚ್ಚಲು ನೀಡಿದ್ದ ೨ ಕೋಟಿ ರೂ. ಮಂಗಮಾಯವಾಗಿದ್ದು ಹೇಗೆ ಎನ್ನುವು ದನ್ನು ಪಾಲಿಕೆ ಸದಸ್ಯ ರೊಬ್ಬರು ಪ್ರಶ್ನಿಸಿರುವುದು.

ಕನ್ನಡ ಚಿತ್ರರಂಗದ ‘ಹಾಸ್ಯರತ್ನ’ ಮೈಸೂರು ರತ್ನಾಕರ್

ಜೆ.ಶಿವಣ್ಣ  ಮೈಸೂರು
‘ಅಯ್ಯೋ ನಾನು ಬದುಕೋದಿಲ್ಲ ಕಣಪ್ಪ, ಸುಮ್ನೇ ಏಕೆ, ಮತ್ತೊಂದು ಆಸ್ಪತ್ರೆಗೆ ಕರ‍್ಕೊಂಡ್ ಹೋಗಿ, ದುಡ್ಡು  ಕಳೆದುಕೊಳ್ಳುತ್ತೀಯಾ....?’  ಸಾಯುವ ಕಡೆ ಕ್ಷಣದಲ್ಲಿ ತನ್ನೊಂದಿಗಿದ್ದ ಕಡೆ ಮಗ ವಿಜಯಕುಮಾರ್‌ಗೆ ರತ್ನಾಕರ್ ಬುದ್ಧಿಮಾತು ಹೇಳಿದರಂತೆ. ಬಹುಶಃ ರತ್ನಾಕರ್ ಅವರ ಕೊನೆಯ ಮಾತು ಇದೇ ಅನ್ಸುತ್ತೆ.. ಜೀವನದುದ್ದಕ್ಕೂ ಆರ್ಥಿಕ ಮುಗ್ಗಟ್ಟು  ಎದುರಿಸಿದ  ರತ್ನಾಕರ್  ಸಂಧ್ಯಾಕಾಲದಲ್ಲೂ ಆಸ್ಪತ್ರೆ ಚಿಕಿತ್ಸೆಗೆ ವೆಚ್ಚ ಭರಿಸಲು  ಹೆಣಗಾಡಬೇಕಾಯಿತು. ಬರಿಗೈ ದಾಸರಾಗಿದ್ದರು, ಅದೇ ಚಿಂತೆಯಲ್ಲಿ ಕೊನೆಯುಸಿರೆಳೆದರು.
ಬೆಳ್ಳಿಲೋಕದ ಜನಪ್ರಿಯತೆ ಹೊಟ್ಟೆ ತುಂಬಿಸುವುದಿಲ್ಲ ಎಂಬುದು ಅನುಭವಸ್ಥರ ಮಾತು. ನೂರಾರು ಚಲನಚಿತ್ರಗಳಲ್ಲಿ ನಟಿಸಿ, ತಮ್ಮ ವಿಶಿಷ್ಟ ದನಿಯ ಮೂಲಕ  ಜನಪ್ರಿಯತೆ ಸಂಪಾದಿಸಿದ್ದ  ರತ್ನಾಕರ್ ಕೊನೆ ದಿನಗಳಲ್ಲಿ ದೀನಸ್ಥಿತಿ ತಲುಪಿದ್ದರು. ಜೀವ ತೊಯ್ದಾಡುತ್ತಿದ್ದರೂ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಮಕ್ಕಳಿಗೆ ಹೊರೆಯಾಗಬಾರದೆಂದು ಮಗನನ್ನು ಕರೆದು ‘ಆಸ್ಪತ್ರೆಗೆ ಬೇಡ. ನನ್ನ ಆಯುಷ್ಯ ಮುಗಿಯಿತು. ದುಡ್ಡು ವ್ಯರ್ಥ ಮಾಡಬೇಡ. ಮನೆಗೆ ಕರೆದೊಯ್ಯಿ’ ಎಂದು ಹಠಹಿಡಿದಿತ್ತು ಆ ಹಿರಿಜೀವ.
ಸಂಕಷ್ಟಗಳಿಂದಲೇ ಮೇಲೆ ಬಂದು  ಒಂದಷ್ಟು ಕಾಲ ತಕ್ಕಮಟ್ಟಿಗೆ ಎನ್ನುವಂತಿದ್ದರೂ ಕೊನೆ ದಿನಗಳಲ್ಲೂ ಸಂಕಷ್ಟ ಬೆನ್ನು ಬಿಡಲಿಲ್ಲ. ತಮ್ಮ ೭೭-೭೮ ರ ವಯಸ್ಸಿನಲ್ಲೂ ‘ಯಾರಾದರೂ ಕರೆದು ಚಿತ್ರಗಳಲ್ಲಿ ಅವಕಾಶ ನೀಡಬಾರದೇ’ ಎಂದು ಹಂಬಲಿಸುತ್ತಿದ್ದರು. ಆ ಹಂಬಲದಲ್ಲಿ ತುತ್ತಿನ ಚೀಲ ತುಂಬಬೇಕಾದ ದುಗುಡತೆ ಇತ್ತು. ಅವಕಾಶ ಇಲ್ಲದಿರು ವುದಕ್ಕೆ ಕೊರಗುತ್ತಿದ್ದರು. ಯಾರಾದರೂ ಸನ್ಮಾನಕ್ಕೆ ಆಹ್ವಾನಿಸಿದರೆ, ‘ನನಗೆ ಸನ್ಮಾನ ಬೇಡ. ಕೆಲಸ (ನಟನೆ) ಕೊಡಿ’ ಎನ್ನುತ್ತಿದ್ದರು.
ವಿಶೇಷ ಎಂದರೆ ಕಡುಕಷ್ಟದ ಮಧ್ಯೆಯೂ ತಮ್ಮನ್ನು ನಟನಾಗಿ ರೂಪಿಸಿದ ಸೋರಟ್ ಅಶ್ವತ್ಥ್ ಅವರನ್ನು ಸ್ಮರಿಸಿ ಪ್ರತಿ ವರ್ಷ ಹಿರಿಯ ಕಲಾವಿದರನ್ನು ಕರೆತಂದು ಸನ್ಮಾನಿಸುತ್ತಿದ್ದರು. ೧೭ ವರ್ಷಗಳ ಹಿಂದೆ ತಮ್ಮ ಪತ್ನಿಯನ್ನು ಕಳೆದುಕೊಂಡ ರತ್ನಾಕರ್ ಆ ಬಳಿಕ ಆರೋಗ್ಯ ಕೈಕೊಡುವವರೆಗೂ ಅವರೇ ಅಡುಗೆ ಮಾಡುತ್ತಿದ್ದರು.
ಸನ್ಮಾನಿಸಿದರು, ಮರೆತರು: ಮೂರು ವರ್ಷಗಳ ಹಿಂದೆ ದಸರಾ ಚಲನಚಿತ್ರೋತ್ಸವದಲ್ಲಿ ಅವರನ್ನು ಸನ್ಮಾನಿಸಲಾಗಿತ್ತು. ಅವರನ್ನು ಕಾರಿನಲ್ಲಿ ಕರೆತಂದ ಆಯೋಜಕರು ಶಾಲುಹೊದಿಸಿ, ಸನ್ಮಾನಿಸಿ ಬಳಿಕ ಮರೆತರು. ಅವರೇ ಮನೆಗೆ ಕರೆದೊಯ್ಯುವರೆಂದು ಜೇಬಿನಲ್ಲಿ ಹಣ ಇಟ್ಟುಕೊಳ್ಳದೇ ಬಂದಿದ್ದರು. ಅವರ  ಈ ಸ್ಥಿತಿಯನ್ನು ಕಂಡ ಪತ್ರಕರ್ತರೊಬ್ಬರು ತಮ್ಮ ದ್ವಿಚಕ್ರವಾಹನದಲ್ಲಿ ಅವರನ್ನು ಮನೆ ಮುಟ್ಟಿಸಿದರು. ಈ ಹೊತ್ತಿನಲ್ಲಿ ರತ್ನಾಕರ್-‘ಈ ಶಾಲು, ಹಾರ ತುರಾಯಿ ನೀಡಿದರೆ ಏನು ಪ್ರಯೋಜನ’ ಎಂದು ತಮ್ಮ ಒಳಬೇಗುದಿ ತೋಡಿಕೊಂಡಿದ್ದರು. 
ಕ್ಯಾಸೆಟ್ ಬಯಕೆ: ವಿಶಿಷ್ಟ ದನಿಯ ಏರಿಳಿತದ ಮೂಲಕವೇ ಜನಮಾನಸದಲ್ಲಿ ಚಿರಪರಿಚಿತರಾಗಿದ್ದ ರತ್ನಾಕರ್ ಕುಳ್ಳಗಿದ್ದರೂ ಜೊಳ್ಳಲ್ಲ. ರಂಗಭೂಮಿ, ಸಿನಿಮಾದಲ್ಲಿ ನಟನೆ, ಸಹನಿರ್ದೇಶನ, ನಿರ್ದೇಶನ, ಗಾಯನ...ಎಲ್ಲಾ ಕ್ಷೇತ್ರಗಳಲ್ಲೂ ದುಡಿದಿದ್ದರು. ಹಬ್ಬ ಹರಿದಿನಗಳು ಕುರಿತಾದ ಹಾಡುಗಳ ಕ್ಯಾಸೆಟ್ ಹೊರತಂದಿದ್ದರು. ಕೊನೆ ದಿನಗಳಲ್ಲಿ ಅಂಬೇಡ್ಕರ್ ಅವರ ಕುರಿತಂತೆ ಗೀತೆ ರಚಿಸಿ ಕ್ಯಾಸೆಟ್ ಮಾಡುವ ಹೆಬ್ಬಯಕೆ ಇತ್ತು. ಆದರೆ ಕೊನೆಯಾಸೆ ಈಡೇರಲೇ ಇಲ್ಲ.
ರಾಮಾನುಜ ರಸ್ತೆಯಲ್ಲಿ ಚಿತ್ರಮಂದಿ: ರಾಮಾನುಜ ರಸ್ತೆ ಚಿತ್ರರಂಗದ ಅನೇಕ ದಿಗ್ಗಜರ ನೆಲೆವೀಡಾಗಿತ್ತು. ರತ್ನಾಕರ್‌ರಲ್ಲದೇ, ಅವರನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಸಾಕಿ ಸಲುಹಿ ನಟನಾಗಿ ರೂಪಿಸಿದ ಸೋರಟ್ ಅಶ್ವತ್ಥ್ ೧೪ ನೇ ಕ್ರಾಸ್‌ನಲ್ಲಿ ವಾಸವಿದ್ದರು. ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿ, ಎಚ್.ಎಲ್.ಎನ್.ಸಿಂಹ, ಎಂ.ಎನ್.ಆರಾಧ್ಯ, ನಟ ಚೇತನ್‌ರಾಮರಾವ್, ಪದ್ಮನಾಭ್, ರೂಪರಾಜ್, ಫೈಟರ್‌ಶೆಟ್ಟಿ ಮೊದಲಾದವರು ಈ ಭಾಗದಲ್ಲಿ ವಾಸವಿದ್ದರು.

ಹೊಂಡ ಸಿಟಿ: 99 ಕೋಟಿ ರೂ.ವೆಚ್ಚದಲ್ಲಿ ರಸ್ತೆ ದುರಸ್ತಿ

ವಿಕ ಸುದ್ದಿಲೋಕ ಮೈಸೂರು
‘ನಾವೇಕೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು, ಗುಂಡಿ ಬಿದ್ದ ರಸ್ತೆಗಳಲ್ಲಿ  ನಾವೇಕೆ ಸಂಚರಿಸಬೇಕು ?’ ಎಂಬ ಮೈಸೂರಿಗರ  ಸಿಟ್ಟು-ಸೆಡವು, ಕೋಪ-ತಾಪ, ಆಕ್ರೋಶ-ಆತಂಕಕ್ಕೆ ಮಣಿದ ಪಾಲಿಕೆ ಗುಂಡಿ ಮುಚ್ಚಿಸುವ ಕೆಲಸಕ್ಕೆ ಇಳಿದಿದೆ.
೨೨ ಕೋಟಿ ರೂ. ವೆಚ್ಚದಲ್ಲಿ  ರಸ್ತೆ ದುರಸ್ತಿ ಕಾಮಗಾರಿ ಶುರುವಾಗಿದೆ. ಮೇಯರ್ ಸಂದೇಶ್ ಸ್ವಾಮಿ, ಪಾಲಿಕೆ ಆಯುಕ್ತ ಕೆ. ಎಸ್. ರಾಯ್ಕರ್ ಅವರು ಕೊಟ್ಟ ಮಾತನ್ನು  ಉಳಿಸಿ ಕೊಂಡಿದ್ದಾರೆ.
‘ಆದರೆ ....’. ನಾಗರಿಕರು ಅಡ್ಜಸ್ಟ್ ಮಾಡಿ ಕೊಳ್ಳಬಾರದು ಎಂಬ ವಿಜಯ ಕರ್ನಾಟಕ ಪತ್ರಿಕೆಯ ಕಳಕಳಿ ಇಷ್ಟಕ್ಕೆ ನಿಂತಿಲ್ಲ. ೩೨ ರಸ್ತೆ ದುರಸ್ತಿಗೆ ಪಾಲಿಕೆ ಖರ್ಚು ಮಾಡುತ್ತಿರುವ ವೆಚ್ಚ  ಒಂದಲ್ಲ, ಎರಡಲ್ಲ...೨೨ ಕೋಟಿ ರೂ. ಅಂದರೆ ಒಂದು ರಸ್ತೆಗೆ ಸರಾಸರಿ ೭೦ ಲಕ್ಷ ರೂ. ಹಾಗಾಗಿ, ಸ್ಥಳೀಯ ನಾಗರಿಕರು ಇಷ್ಟು ಹಣದಲ್ಲಿ ಗುತ್ತಿಗೆದಾರರು ಯಾವ ರೀತಿ ಕೆಲಸ ಮಾಡುತ್ತಾರೆ, ಈ ಕಾಮಗಾರಿ ನಡೆಯುವ ಸಂದರ್ಭದಲ್ಲಿ  ಸ್ಥಳೀಯ ಪಾಲಿಕೆ ಸದಸ್ಯರು ಮುಂದೆ ನಿಂತು, ಗುಣಮಟ್ಟದ ಕೆಲಸ ಮಾಡಿಸುವರೇ ಇಲ್ಲವೇ ಗುತ್ತಿಗೆದಾರರೊಂದಿಗೆ ಸೇರಿಕೊಂಡು ‘ಗುಂಡಿ’  ಮುಚ್ಚುವರೇ ? - ಇಂಥ ಸಂಗತಿಗಳ ಬಗ್ಗೆಯೂ ಗಮನಹರಿಸ ಬೇಕಿದೆ. ಅನುಮಾನಗಳು ಕಂಡುಬಂದಲ್ಲಿ ಪತ್ರಿಕೆಗೆ ತಿಳಿಸಲೂ ಬಹುದು.
ಇಷ್ಟೆಲ್ಲಾ ಏಕೆ ನಿಗಾ ವಹಿಸಬೇಕು  ಎಂದ್ರೆ, ಕಳೆದ ವರ್ಷ ಜೂನ್‌ನಲ್ಲಿ ಮೈಸೂರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯನ್ನು ನೆನಪಿಸಿಕೊಳ್ಳಬೇಕಿದೆ.
ಗುಂಡಿ ಲೆಕ್ಕದಲ್ಲಿ ೩ ಕೋಟಿ ನುಂಗಿದ್ದರು: ೨೦೦೯ರ ಜೂನ್‌ನಲ್ಲಿ ಅಂದಿನ ಮೇಯರ್ ಪುರುಷೋತ್ತಮ್ ಅಧ್ಯಕ್ಷತೆಯಲ್ಲಿ ನಡೆಯು ತ್ತಿದ್ದ  ಕೌನ್ಸಿಲ್ ಸಭೆಯಲ್ಲಿ, ಬಿಜೆಪಿ ಸದಸ್ಯೆ ಸುನಂದಾ ಪಾಲನೇತ್ರ ಅವರು ಗುಂಡಿ ರಸ್ತೆಗಳ ವಿಷಯವನ್ನು ಪ್ರಸ್ತಾಪಿಸಿದ್ದರು.
‘೨೦೦೮-೦೯ನೇ ಸಾಲಿನಲ್ಲಿ (ಅಯೂಬ್‌ಖಾನ್ ಅವಧಿ) ೨೬ ವಾರ್ಡ್‌ಗಳ ರಸ್ತೆಗಳ ಗುಂಡಿ ಮುಚ್ಚಲು ೨.೮೯ ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಪಾಲಿಕೆ ಕಾರ್ಯಪಾಲಕ ಎಂಜನಿಯರ್ ನನಗೆ ಲಿಖಿತವಾಗಿ ಮಾಹಿತಿ ಕೊಟ್ಟಿದ್ದಾರೆ. ಅವರ ಹೇಳಿಕೆ ಪ್ರಕಾರ ಶೇ.೮೨ರಷ್ಟು  ಕಾಮಗಾರಿ ಪೂರ್ಣಗೊಂಡಿದೆ. ಆದರೆ, ನಾನಂತೂ ಪಾಲಿಕೆ ಸಿಬ್ಬಂದಿ ಗುಂಡಿ ಮುಚ್ಚಿದ್ದನ್ನು ನೋಡಿಯೇ ಇಲ್ಲ. ಬರೀ ಮಣ್ಣು ಹಾಕಿದ್ದಾರಷ್ಟೆ’ ಎನ್ನುತ್ತಾರೆ ಪಾಲನೇತ್ರ.
ಪಾಲಿಕೆಯ  ಅಂದಿನ ಲೆಕ್ಕಪತ್ರ ಹಾಗೂ ಪರಿಶೋಧನೆ ಸಮಿತಿ ಅಧ್ಯಕ್ಷೆಯೂ ಆಗಿದ್ದ  ಪಾಲನೇತ್ರ ಸಭೆಯ ಮುಂದಿಟ್ಟ ಈ ವಿಷಯ, ಯಾರಿಗೂ ಗೊತ್ತೇ ಇರಲಿಲ್ಲ. ಹಾಗಾಗಿ ಈ ವಿಷಯದ ಕುರಿತು ಸದನದಲ್ಲಿ ಗಂಭೀರ ಚರ್ಚೆ ಶುರುವಾಯಿತು. ‘ಇದು ಹೇಗೆ ಸಾಧ್ಯ, ೩ ಕೋಟಿ ರೂ. ಗಳಲ್ಲಿ  ಗುಂಡಿ ಮುಚ್ಚಿಸಿರು ವುದು ಎಲ್ಲಿ ?’ ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಬಹಳಷ್ಟು ಸದಸ್ಯರು ತನಿಖೆಗೆ ಆಗ್ರಹಿಸಿದರು.
ಇದಕ್ಕೆ ಮಣಿದ ಪುರುಷೋತ್ತಮ್- ‘ಎಲ್ಲೆಲ್ಲಿ ಕಾಮಗಾರಿ ನಡೆದಿದೆ, ಇನ್ನೂ ಎಲ್ಲಿ ನಡೆಯುತ್ತಿದೆ ಎನ್ನುವುದನ್ನು ತಿಳಿಯಲು ಸ್ಥಳ ಪರಿಶೀಲನೆ ಮಾಡಿ, ತನಿಖೆ ನಡೆಸೋಣ. ಆನಂತರ ಕ್ರಮ ಕೈಗೊಳ್ಳೋಣ’ ಎಂದು  ಭರವಸೆ ನೀಡಿದ್ದರು.
ಆದರೆ ಅದು ಕೂಡ ಮತದಾರರಿಗೆ ನೀಡುವ ಭರವಸೆಯಾಗಿಯೇ ಉಳಿಯಿತು. ತನಿಖೆಯೂ ನಡೆಯಲಿಲ್ಲ, ಯಾರ ಮೇಲೂ ಕ್ರಮ ಕೈಗೊಳ್ಳಲಿಲ್ಲ. ‘ವ್ಯವಸ್ಥೆಯ ಪಾಲು ದಾರರು’ ಗುಂಡಿ ಮುಚ್ಚಿಸುತ್ತೇವೆಂದು ಹೇಳಿ, ತಮ್ಮ -ತಮ್ಮ ಜೇಬು ಮುಚ್ಚಿಸಿಕೊಂಡರು.  ಜನ ಎಚ್ಚರಿಕೆಯಿಂದ ಇರದಿದ್ದರೆ, ಈಗಿನ ೨೨ ಕೋಟಿ ರೂ.  ಕೂಡ ಯಾರ‍್ಯಾರದ್ದೋ ಜೇಬು ಸೇರಬಹುದು !

ಶಿಕ್ಷೆಯಾಗಬೇಕಾದವರಿಗೆ ವರ್ಗಾವಣೆ ಭಕ್ಷೀಸು...

ವಿಕ ವಿಶೇಷ ಮಂಡ್ಯ
ಇದೇನಪ್ಪಾ ತೆಂಗಿನ ಗರಿ ಕಡ್ಡಿ ಪೊರಕೆಗೆ ೨೫೦ ರೂ. !
ಹೌದೇ ಎಂದು ಹುಬ್ಬೇರಿಸಬೇಡಿ. ಕಾರಣ, ಮಂಡ್ಯ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನಕ್ಕೆ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ೨೦ ಲಕ್ಷ ರೂ. ವೆಚ್ಚದಲ್ಲಿ ಸಾಮಗ್ರಿಗಳನ್ನು ಖರೀದಿಸಿದ ಅಧಿಕಾರಿಗಳ ರಾಮ-ಕೃಷ್ಣನ ಲೆಕ್ಕಕ್ಕೆ ಇದೊಂದು ಉದಾಹರಣೆ. ಇಂಥ ಹಗರಣದಲ್ಲಿ ಭಾಗಿಯಾದ ಅಧಿಕಾರಿಗೆ ರಾಜ್ಯ ಸರಕಾರವೇ ಬೇರೆಡೆಗೆ ವರ್ಗಾಯಿಸಿ ಭಕ್ಷೀಸು ನೀಡಿದೆ.   
ಪೊರಕೆ ಅಷ್ಟೇ ಅಲ್ಲ. ಇತರೆ ಸಾಮಗ್ರಿಗಳ ಖರೀದಿ ಯಲ್ಲೂ ಗೋಲ್-ಮಾಲ್. ಮೆಟಲ್ ಪ್ಲೇಟ್‌ಗೆ ೬೫೦ ರೂ., ಬಾಣಲಿಗೆ ೬೨೫ ರೂ., ಕಸ ಸಾಗಿಸುವ ಗಾಡಿಗೆ ೧೫,೬೫೦ ರೂ. ಪಾವತಿಸಲಾಗಿದೆ. ತಾಲೂಕಿನ ೪೫ ಗ್ರಾ.ಪಂ.ಗಳಿಗೆ ತಲಾ ೫೬ ಸಾವಿರ ರೂ. ವೆಚ್ಚದಲ್ಲಿ ಸೋಲಾರ್ ಯುಪಿಎಸ್ ಖರೀದಿಸಲಾಗಿದೆ. ಸೋಲಾರ್ ಬೆಲೆ ಹೆಚ್ಚೆಂದರೆ, ೨೫ ಸಾವಿರ ರೂ.. ಯಾವುದಕ್ಕೂ ಇರಲೆಂದು ಕೊಟೇಷನ್ ಪಡೆದು ಖರೀದಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದವರಿಗೆ ಆರು ತಿಂಗಳಿಂದ ಕೂಲಿ ಹಣ ಕೊಟ್ಟಿಲ್ಲ. ಆದರೆ, ಈ ಯೋಜನೆಯ ಹಣದಲ್ಲಿ ಕಮೀಷನ್ ಆಸೆಗೆ ಸೋಲಾರ್ ಯುಪಿಎಸ್ ಖರೀದಿಸಲಾಗಿದೆ.
ಇತರೆ ಖರೀದಿ ಅವ್ಯವಹಾರ: ವಿವಿಧ ಅನುದಾನ ಗಳಡಿ ೨ ಲಕ್ಷ ರೂ. ವೆಚ್ಚದಲ್ಲಿ ಶಾಲೆಗಳಿಗೆ ಪೀಠೋಪಕರಣ, ಕಂಪ್ಯೂಟರ್, ಯುಪಿಎಸ್ ಖರೀದಿ, ೧.೩೩ ಲಕ್ಷ ರೂ.ನಲ್ಲಿ ಹೊಲಿಗೆ ಯಂತ್ರ ಖರೀದಿ, ೩ ಲಕ್ಷ ರೂ.ನಲ್ಲಿ ಆರೋಗ್ಯ ಇಲಾಖೆಗೆ ಲಿನನ್ ಮತ್ತು ಸಲಕರಣೆ ಖರೀದಿ, ೩ ಲಕ್ಷ ರೂ. ವೆಚ್ಚದಲ್ಲಿ ರೇಷ್ಮೆ ಇಲಾಖೆಗೆ ನೈಲಾನ್ ಪರದೆ, ಸ್ಟ್ರೇಯರ್ ಖರೀದಿಸಲಾಗಿದೆ. ೬೯ ಸಾವಿರ ರೂ.ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಹೊಲಿಗೆ ಯಂತ್ರ ಸರಬರಾಜು, ೪ ಲಕ್ಷ ರೂ. ವೆಚ್ಚದಲ್ಲಿ ಬಿಸಿಎಂ ಇಲಾಖೆಗೆ ಬಯೋಮೆಟ್ರಿಕ್ ಸಿಸ್ಟಂ, ಕುಡಿಯುವ ನೀರು, ಪಾತ್ರೆ ಸಾಮಗ್ರಿ, ೭೫ ಸಾವಿರ ರೂ.ನಲ್ಲಿ ಆರೋಗ್ಯ ಇಲಾಖೆಗೆ ಸ್ಟೆತಾಸ್ಕೋಪ್, ಪ್ಲಾಸ್ಟಿಕ್ ಮತ್ತು ಹ್ಯಾಂಡ್ ಟವಲ್ ಖರೀದಿಯನ್ನು ದರ ಪಟ್ಟಿ ಮುಖಾಂತರ ಕೈಗೊಳ್ಳಲಾಗಿದೆ. ಆದರೆ ಈ ಯಾವ ಖರೀದಿಗೂ ಜಾಹೀರಾತು ನೀಡಿಲ್ಲ. ಸೂಚನಾ ಫಲಕದಲ್ಲಿ ಪ್ರಕಟಿಸಿರುವುದಾಗಿ ಹೇಳಿ ರಹಸ್ಯ ಟೆಂಡರ್ ನಡೆಸಲಾಗಿದೆ. ಆದರೆ, ೯.೨೩ ಲಕ್ಷ ರೂ.ನಲ್ಲಿ ಶಿಶು ಅಭಿವೃದ್ಧಿ ಇಲಾಖೆಗೆ ಪೀಠೋಪಕರಣಗಳ ಪೂರೈಕೆಗಷ್ಟೇ ಟೆಂಡರ್ ನಡೆದಿದೆ.
ಲಕ್ಷಾಂತರ ರೂ. ನಷ್ಟ: ತಾಲೂಕು ಪಂಚಾಯಿತಿಗೆ ಅಧಿಕಾರ ಮೊಟಕುಗೊಳಿಸಲಾಗಿದೆ ಎಂದು ಚುನಾಯಿತ ಪ್ರತಿನಿಧಿಗಳು ಬೊಬ್ಬೆ ಹಾಕುತ್ತಲೇ ಇದ್ದಾರೆ.
ಆದರೆ, ಒಂದೇ ವರ್ಷದಲ್ಲಿ ಸರಿ ಸುಮಾರು ೩೫-೪೦ ಲಕ್ಷ ರೂ. ಅವ್ಯವಹಾರ ನಡೆದಿರುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಇನ್ಯಾವ ಅಧಿಕಾರ ನೀಡಬೇಕು ಎಂಬ ಪ್ರಶ್ನೆ ಸೃಷ್ಟಿಸಿದೆ.
ಕಮೀಷನ್ ಹಂಚಿಕೊಳ್ಳುವವರೆಗೆ ತಾ.ಪಂ. ವರಿಷ್ಠರು ಮತ್ತು ಅಧಿಕಾರಿಗಳು ಮುಗುಮ್ಮಾಗಿದ್ದರು. ಇತ್ತೀಚೆಗೆ ಸಭೆಯೊಂದರಲ್ಲಿ ಅನುಮೋದನೆಗೆ ಲೆಕ್ಕಪತ್ರ ಇಟ್ಟಾಗ ಕೆಲ ಸದಸ್ಯರು ಬಂಡವಾಳ ಬಿಚ್ಚಿಟ್ಟರು. ಮಾನ-ಮರ್ಯಾದೆ ಜತೆಗೆ ಹುದ್ದೆಗೆ ಕುತ್ತು ಬರುವುದನ್ನು ಮನಗಂಡ ಭ್ರಷ್ಟರು, ಹಗರಣ ಬಯಲಾದ ಬಳಿಕ ಪರಸ್ಪರ ಕಚ್ಚಾಟಕ್ಕೆ ಇಳಿದರು. ಯಾರಿಗೆ ಎಷ್ಟು ಕಮೀಷನ್ ಸಿಕ್ಕಿದೆ ಎನ್ನುವ ಲೆಕ್ಕ ಸಮೇತ ಸತ್ಯ ಬಯಲು ಮಾಡಿದರು.
ಸರಕಾರದ ಶ್ರೀರಕ್ಷೆ: ಸಂಪೂರ್ಣ ಸ್ವಚ್ಛತಾ ಆಂದೋಲನ ಸರಕಾರದ ಮಹತ್ವಾಕಾಂಕ್ಷೆ ಯೋಜನೆ ನಿಜ. ಆದರೆ, ಯೋಜನೆಯ ಹಣವನ್ನು ತಿಂದು ತೇಗಿ ಹಳ್ಳಹಿಡಿಸುತ್ತಿರುವ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಸರಕಾರವೇ ಶ್ರೀ ರಕ್ಷೆಯಾಗಿದೆ. ಹಗರಣ ಬೆಳಕಿಗೆ ಬಂದ ಬಳಿಕ ಸಾಮಾನ್ಯ ಸಭೆಯಲ್ಲಿ ಆಗಿನ ಕಾರ್ಯ ನಿರ್ವಹಣಾಧಿಕಾರಿ ಷಡಕ್ಷರಮೂರ್ತಿ, ಇಡೀ ಪ್ರಕರಣದ ಬಗ್ಗೆ ತನಿಖೆಯಾಗಿ ವರದಿ ಬರಲಿ. ಎಲ್ಲವನ್ನೂ ಎದುರಿಸುವೆ. ಆರೋಪಿ ಎಂಬ ಹಣೆಪಟ್ಟಿ ಕಟ್ಟಿಕೊಂಡು ಬೇರೆಡೆ ಹೋಗಲಾರೆ ಎಂದಿದ್ದರು. ಆದರೆ, ಚಿಕಿತ್ಸೆಗೆಂದು ರಜೆ ಹಾಕಿ ಹೋದವರು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಭಾರಿ ಭ್ರಷ್ಟಾಚಾರದ ಆರೋಪವಿದ್ದರೂ  ಅವರನ್ನು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಗೆ ವರ್ಗಾಯಿಸಿರುವ ಸರಕಾರವೇ ಪೇಚಿಗೆ ಸಿಕ್ಕಿ ಹಾಕಿಕೊಂಡಿದೆ.
ವರಿಷ್ಠರ ತಲೆದಂಡ: ಮಂಡ್ಯ ತಾ.ಪಂ. ಜಾ.ದಳ ತೆಕ್ಕೆಯಲ್ಲಿದೆ. ಸರಕಾರದ ವಿರುದ್ಧ ದಿನ ಬೆಳಗಾದರೆ ಅಬ್ಬರಿಸುತ್ತಿರುವ ದಳಪತಿಗಳು, ಈಗ ಅಧ್ಯಕ್ಷೆ ನಾಗರತ್ನ ಮತ್ತು ಉಪಾಧ್ಯಕ್ಷೆ ಮಮತಾ ಅವರಿಂದ ರಾಜೀನಾಮೆ ಕೊಡಿಸಿ ಕೈತೊಳೆದುಕೊಂಡಿದ್ದಾರೆ. ಕಳಂಕಿತ ವರಿಷ್ಠರೂ ರಾಜೀನಾಮೆ ನೀಡಿ ತಣ್ಣಗಿ ದ್ದಾರೆ. ಹಗರಣದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಪಾತ್ರದ ಬಗ್ಗೆ ಆರೋಪವಿದ್ದರೂ ಆರಾಮಾಗಿದ್ದಾರೆ.

ವಿಕ ಅಭಿಯಾನಕ್ಕೆ ಜಯ

ವಿಕ ಸುದ್ದಿಲೋಕ ಮೈಸೂರು
ಸೋಮವಾರದಿಂದ ಗುಂಡಿ ಮುಚ್ತೀವಿ, ಮಂಗಳವಾರದಿಂದ ರಸ್ತೆ ಡಾಂಬರೀಕರಣ ಮಾಡ್ತೀವಿ, ಮಳೆ ನಿಲ್ಲಲಿ ಎಂದು ಕಾದೆವು. ಇನ್ನು ಮುಂದೆ ಕಾಯಲು ಹೋಗೋಲ್ಲ. ದಸರೆಯನ್ನು ಗಮನದಲ್ಲಿಟ್ಟು ಕೊಂಡು ಕೆಲಸ ಶುರು ಮಾಡ್ತೀವಿ...
ಗುಂಡಿಗಳನ್ನು ಮುಚ್ಚಲು ಕೊನೆಗೂ ಎದ್ದು ಕುಳಿತಿದೆ ಮೈಸೂರು ಮಹಾನಗರ ಪಾಲಿಕೆ. ರಜೆ ದಿನದಲ್ಲೂ ಅಧಿಕಾರಿಗಳ ಸಭೆ ನಡೆಸಿದ ಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್ ಅವರ ಸ್ಪಷ್ಟ ನುಡಿ ಇದು.
ವಿಜಯಕರ್ನಾಟಕದಲ್ಲಿ ಪ್ರಕಟವಾಗುತ್ತಿರುವ ಸ್ವಲ್ಪ ಅಡ್ಜಸ್ಟ್ ಮಾಡಬೇಡಿ ಎನ್ನುವ ಅಂಕಣದ ಗುಂಡಿ ಸರಣಿಯ ಹಿನ್ನೆಲೆಯಲ್ಲಿ ಎಚ್ಚರಗೊಂಡ ಆಯುಕ್ತ ಕೆ.ಎಸ್.ರಾಯ್ಕರ್ ಭಾನುವಾರ ವಾದರೂ ಅಧಿಕಾರಿಗಳ ಸಭೆ ನಡೆಸಿದರು. ಸುಮಾರು ಒಂದೂವರೆ ತಾಸು ನಡೆದ ಎಲ್ಲಾ ಅಧಿಕಾರಿಗಳ ಸಭೆಯಲ್ಲಿ ರಸ್ತೆ ದುರಸ್ಥಿ ಕಾರ‍್ಯ ಆರಂಭಿಸಿ ಬೇಗನೇ ಮುಗಿಸುವ ಸೂಚನೆಗಳನ್ನು ನೀಡಿದರು.
ದಸರೆ ಇನ್ನೇನು ಹತ್ತಿರದಲ್ಲಿದೆ. ಮಾಧ್ಯಮ ಗಳಲ್ಲೂ ರಸ್ತೆ ಅವ್ಯವಸ್ಥೆಗಳನ್ನು ಬಿಂಬಿಸಲಾಗು ತ್ತಿದೆ. ಅಚ್ಚುಕಟ್ಟಾದ ಕೆಲಸದ ಮೂಲಕ ದಸರಗೆ ಬರುವ ಪ್ರವಾಸಿಗರನ್ನು ಗುಂಡಿಮುಕ್ತ ವಾಗಿ ಸ್ವಾಗತಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ೪೭೦ ರಸ್ತೆಗಳಿದ್ದು, ಅದರಲ್ಲಿ ೩೪ ಪ್ರಮುಖ ವಾದವು. ೨೨ ಕೋಟಿ ರೂ.ಗಳನ್ನು ರಸ್ತೆಗಳ ದುರಸ್ತಿಗೆ ವೆಚ್ಚ ಮಾಡಲಾಗುತ್ತಿದೆ.  ಈಗಾಗಲೇ ಕಾರ‍್ಯಾದೇಶಗಳನ್ನು ಗುತ್ತಿಗೆ ದಾರರಿಗೆ ನೀಡಲಾಗಿದೆ ಎಂದು ಪತ್ರಿಕೆ ಪ್ರತಿನಿಧಿಗೆ ತಿಳಿಸಿದರು.
ಈ ಬಾರಿ ರಸ್ತೆ ದುರಸ್ತಿ ಕೆಲಸ ಆರಂಭ ವಾಗದೇ ಇರುವುದಕ್ಕೆ ಮಳೆಯೇ ಪ್ರಮುಖ ಕಾರಣ. ಬಿಡುವು ನೀಡದ ಹಾಗೆ ಮಳೆ ಬರು ತ್ತಿರುವುದರಿಂದ ಕೆಲಸ ಮಾಡಿ ಉಪಯೋಗ ವಾಗದೇ ಹೋಗಬಾರದು ಎನ್ನುವ ಕಾರಣಕ್ಕೆ ಕೆಲಸವನ್ನು ನಿಲ್ಲಿಸಲಾಗಿದೆ. ಮಳೆ ಬರಲಿ ಬಿಡಲಿ, ಸೋಮ ವಾರದಿಂದ ರಸ್ತೆಗಳ ಗುಂಡಿ ಮುಚ್ಚುವ ಕಾರ‍್ಯ ಆರಂಭ ವಾಗಲಿದೆ. ಮಂಗಳವಾರದಿಂದ ರಸ್ತೆಗಳ ಡಾಂಬರೀಕರಣ ಶುರುವಾಗಲಿದೆ. ಮಳೆ ಬಂದರೂ ಅಗತ್ಯ ತಂತ್ರಜ್ಞಾನ ಬಳಸಿ ರಸ್ತೆ ಗಟ್ಟಿಮುಟ್ಟಾಗಿ ದುರಸ್ತಿ ಮಾಡಲಾಗುತ್ತದೆ ಎಂದರು.
ವಿದೇಶ ಪ್ರವಾಸ ಹೊಗಲೇಬೇಕು: ದಸರೆ ವೇಳೆ ಆಯುಕ್ತರಾzವ್ರು ಇಲ್ಲಿ ಇದ್ದುಕೊಂಡು ಕೆಲಸದ ಉಸ್ತುವಾರಿ ನೋಡಿಕೊಳ್ಳಬೇಕು. ನೀವೆ ವಿದೇಶಕ್ಕೆ ಹಾರಿದರೆ ಪಾಲಿಕೆ ಕಥೆ ಏನು ಎನ್ನುವುದು ಪತ್ರಿಕೆ ಪ್ರಶ್ನೆಯಾಗಿತ್ತು.
ಮೈಸೂರಿಗೆ ವರ್ಷದ ಹಿಂದೆಯೇ ಬಸ್ ರ‍್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಂ(ಬಿಆರ್‌ಟಿಎಸ್) ಯೋಜನೆಯಡಿ ೯೦೦ ಕೋಟಿ ರೂ. ಕೇಂದ್ರದಿಂದ ಲಭಿಸಿತ್ತು. ಆದರೆ ಆಗ ನಮ್ಮವರು ಯೋಜನೆ ಜಾರಿಗೊಳಿಸಲು ಆಗೋದಿಲ್ಲ ಎಂದು ಪತ್ರ ಬರೆದಿದ್ದರಿಂದ ಹಣ ಬಳಸಿಕೊಳ್ಳಲು ಆಗಲಿಲ್ಲ. ಈಗ ಮತ್ತೊಮ್ಮೆ ಅವಕಾಶ ಒದಗಿ ಬಂದಿದೆ. ಇದಕ್ಕಾಗಿಯೇ ಈ ವಿದೇಶ ಪ್ರವಾಸ.
ನಾನೊಬ್ಬನೇ ವಿದೇಶ ಪ್ರವಾಸ ಹೋಗುತ್ತಿಲ್ಲ . ಕೇಂದ್ರ ನಗರಾಭಿವೃದ್ಧಿ ರಾಜ್ಯ ಸಚಿವರ ನೇತೃತ್ವದಲ್ಲಿ ೨೨ ಅಧಿಕಾರಿಗಳ ತಂಡ ಕೊಲಂಬಿಯಾ, ಮೆಕ್ಸಿಕೋ ಹಾಗೂ ಲಂಡನ್‌ಗೆ ತೆರಳಲಿದೆ. ರಾಜ್ಯ ನಗರಾಭಿವೃದ್ಧಿ ಕಾರ‍್ಯದರ್ಶಿ ಶಂಭುದಯಾಳ್ ಮೀನಾ ಕೂಡ ಇರಲಿದ್ದಾರೆ. ವಿದೇಶ ಪ್ರವಾಸದಿಂದ ನಗರಕ್ಕೆ ಭವಿಷ್ಯದಲ್ಲಿ ಒಳ್ಳೆಯದು ಆಗಲಿ ಎಂದು ಹೋಗುತ್ತಿದ್ದೇನೆ ಹೊರತು ಇದರ ಹಿಂದೆ ಬೇರೆ ಉದ್ದೇಶಗಳಿಲ್ಲ ಎನ್ನುವುದು ಅವರ ಸುದೀರ್ಘ ಸ್ಪಷ್ಟನೆ.ನಾನು ವಿದೇಶ ಪ್ರವಾಸಕ್ಕೆ ಹೋಗುವ ಮುನ್ನ ರಸ್ತೆ ಕೆಲಸ ಮುಗಿಸಿ ಹೋಗ್ತೀನಿ, ನಾನು ಇಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಕಾಮಗಾರಿಗಳಿಗೆ ತೊಂದರೆ ಆಗೋಲ್ಲ. ಅದಕ್ಕೆ ಬೇಕಾದ ಸೂಚನೆಗಳನ್ನು ನೀಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದರು.
ತಿಕ್ಕಾಟವಿಲ್ಲ: ಮೇಯರ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಾಗಲಿ, ತಿಕ್ಕಾಟವಾಗಲಿ ಇಲ್ಲ. ಬೆಂಗಳೂರಿನಲ್ಲಿಯೇ ಮೂರು ದಿನ ಜತೆಯಲ್ಲಿ ದಸರೆಗೆ ಅತಿಥಿಗಳನ್ನು ಆಹ್ವಾನಿಸಲು ತೆರಳಿದ್ದೆವು ಎಂದು ತಿಳಿಸಿದರು.
ಹಂಗಾಮಿ ಆಯುಕ್ತ ರಾಮು : ಕೆ.ಎಸ್.ರಾಯ್ಕರ್ ಅವರು ವಿದೇಶ ಪ್ರವಾಸ ಹೋದಾಗ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಬಿ.ರಾಮು ಪ್ರಭಾರ ಆಯುಕ್ತರಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಸರಕಾರವೂ ಈ ಸಂಬಂಧ ಆದೇಶ ಹೊರಡಿಸಿದೆ. ರಾಮು ಅವರು ಆಯುಕ್ತರಾಗಿ ಬರಲು ವರ್ಷದಿಂದ ಪ್ರಯತ್ನಿಸು ತ್ತಲೇ ಇದ್ದಾರೆ. ಅವರಿಗೆ ಈಗ ಹಂಗಾಮಿ ನೆಪದಲ್ಲಿ ಪಾಲಿಕೆ ಆಗುಹೋಗುಗಳ ತರಬೇತಿ ಅವಧಿ !.

೮ ದಿನಗಳೊಳಗೆ ಗುಂಡಿ ಮಾಯ

 ವಿಕ ಸುದ್ದಿಲೋಕ ಮೈಸೂರು
ಮೈಸೂರಿನ ರಸ್ತೆಗಳು ರಿಪೇರಿಯಾದರೆ ಮಾತ್ರ ವಿದೇಶ ಪ್ರವಾಸ, ಮಳೆ ಬರಲಿ ಬಿಡಲಿ ಎಂಟು ದಿನದಲ್ಲಿ ಗುಂಡಿಗಳನ್ನು ಮುಚ್ಚಲು ಕಟ್ಟು ನಿಟ್ಟಿನ ಕ್ರಮ.
ವಿಜಯ ಕರ್ನಾಟಕದ ‘ಸ್ವಲ್ಪ ಅಡ್ಜೆಸ್ಟ್ ಮಾಡಬೇಡಿ’ ಅಂಕಣದಡಿ ಪ್ರಕಟವಾಗುತ್ತಿರುವ ಸರಣಿಗೆ ಮೈಸೂರಿನ ಪ್ರಥಮ ಪ್ರಜೆ ಸಂದೇಶ್‌ಸ್ವಾಮಿಯವರ ಪ್ರತಿಕ್ರಿಯೆ ಇದು.
ಶನಿವಾರ ಪ್ರಕಟವಾದ ‘ದಸರೆಗೆ ಬಂದೋರು ಗುಂಡಿಗೆ, ತೋರಣ ಕಟ್ಟೋರು ಫಾರಿನ್‌ಗೆ‘ ಎಂಬ ವರದಿಗೆ ಸ್ಪಷ್ಟನೆ ನೀಡಲು ತಾವೇ ಖುದ್ದು ವಿಜಯಕರ್ನಾಟಕ ಕಚೇರಿಗೆ ಬಂದಿದ್ದ ಸ್ವಾಮಿ, ಒಂದು ತಾಸಿಗೂ ಹೆಚ್ಚು ಹೊತ್ತು ರಸ್ತೆ ಅಭಿವೃದ್ಧಿ, ದಸರೆ ಸಿದ್ಧತೆ ಕುರಿತು ಮಾಹಿತಿಗಳನ್ನು ಹಂಚಿಕೊಂಡರು.
‘ನಾನು ಮೇಯರ್ ಆದ ೩ ತಿಂಗಳಲ್ಲಿ  ಕಾಮಗಾರಿಗಳೇ ಆಗಿಲ್ಲ. ಹಾಗೆಂದು ಕೆಲಸ ಮಾಡಿಸದೇ ಬಿಟ್ಟು ಹೋಗುವ ಜಾಯಮಾನ ದವನೂ ನಾನಲ್ಲ’ ಎಂದರು.
ಹಿಂದಿನ ಎಲ್ಲಾ ವರ್ಷಗಳಿಗಿಂತ ಈ ವರ್ಷ ದಸರೆ ವೇಳೆ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಸುಮಾರು ೨೦ ಕೋಟಿ ರೂ. ಇದಕ್ಕೆಂದೇ ಮೀಸಲಿಡಲಾಗಿದೆ. ಮೊದಲನೇ ಹಂತದಲ್ಲಿ ೧೩೩೩ ಕಾಮಗಾರಿಗಳಿಗೆ ೯.೬೮ ಕೋಟಿ ರೂ.

ಮತ್ತದೇ ಭರವಸೆ, ಅದದೇ ಬೇಸರ !

ಬುಧವಾರ ನಗರದಲ್ಲಿ ದಸರಾ ಸಿದ್ದತೆ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ‘ಕಾಮಗಾರಿಗಳು ನಡೆಯುತ್ತಿಲ್ಲ. ರಸ್ತೆ ಗುಂಡಿ ಮುಚ್ಚಿಲ್ಲ’ ಎಂಬ ಪತ್ರಿಕಾ ವರದಿ,ಸಾರ್ವಜನಿಕರ ದೂರುಗಳ ಬಗ್ಗೆಯೂ ಮೇಯರ್ ಸಂದೇಶ್ ಸ್ವಾಮಿ ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಅಧಿಕಾರಿಗಳು ಎರಡು ವಾರದ ಹಿಂದೆ ನೀಡಿದ್ದ ‘ತಕ್ಷಣ ಕ್ರಮ’ ಎಂಬ ಅದೇ ಭರವಸೆಯನ್ನು ಚಾಚೂ ತಪ್ಪದೆ ಪುನರುಚ್ಚರಿಸಿದರು.ನಂತರ ಸುದ್ದಿಗಾರರ ಜತೆ ಮಾತನಾಡಿದ ಸಚಿವರು ಅಷ್ಟೇ ‘ನಂಬಿಕೆ ’ಯಿಂದ ಮಾಸಾಂತ್ಯದೊಳಗೆ  ರಸ್ತೆಗಳು ‘ನೈಸ್’ ಆಗುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಳೆ ಕಾರಣ: ಮೇಯರ್ ಸಂದೇಶ್ ಸ್ವಾಮಿ ‘೨೨ಕೋಟಿ ರೂ.ವೆಚ್ಚದ ಕಾಮಗಾರಿ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅದಕ್ಕಿಂತ ಮೊದಲು ಕರೆದ ಟೆಂಡರ್ ಪ್ರಕ್ರಿಯೆ ಮುಗಿದು  ಗುತ್ತಿಗೆದಾರರಿಗೆ ಕಾರ‍್ಯಾದೇಶ ನೀಡಲಾಗಿದೆ. ಜಲ್ಲಿ, ಡಾಂಬರು ಎಲ್ಲಾ ರೆಡಿ ಇಟ್ಟುಕೊಂಡು ಕಾಯ್ತಿದ್ದೇವೆ. ಆದ್ರೇನು ಮಾಡೋದು, ಮಳೆ ಬಿಡುವು ಕೊಡ್ತಿಲ್ಲ. ನಿರಂತರವಾಗಿ ಮೂರು ದಿನ ಮಳೆ ನಿಂತರೆ ತಕ್ಷಣ ರಸ್ತೆಗಳ ದುರಸ್ತಿ ಮಾಡಲಾಗುವುದು’ ಎಂದು  ಅಭಯ ನೀಡಿದರು.
ಅವರ ಪುಣ್ಯ, ‘ಈ ಮಧ್ಯೆ ಹಲವು ದಿನ ಮಳೆಯೇ ಬರಲಿಲ್ಲ. ಆಗ ಏನು ಮಾಡ್ತಿದ್ರಿ’ ಎಂದು ಯಾರೂ ಕೇಳಲಿಲ್ಲ. ದಸರೆಯವರೆಗೂ ಮಳೆ ಕಣ್ಣಾಮುಚ್ಚಾಲೆ ಆಡುತ್ತಲೇ ಇದ್ದರೆ  ಗುಂಡಿಗಳು ಹಾಗೇ ಉಳಿಯುತ್ತವಾ ಎಂಬ ಪ್ರಶ್ನೆಗೆ ‘ಹಾಗೇನಿಲ್ಲ. ತಿಂಗಳಾಂತ್ಯದೊಳಗೆ ಗುಂಡಿ ಮುಚ್ಚುತ್ತೇವೆ’ ಎಂದು ಭರವಸೆ          ನೀಡಿದರು.
ಮಣ್ಣೆರೆಚುವ ಕೆಲಸ: ಈ ಮಧ್ಯೆ,ನಗರದ ಹಲವು ರಸ್ತೆಗಳ ಗುಂಡಿಗೆ ಮಣ್ಣು, ಕಟ್ಟಡ ತ್ಯಾಜ್ಯ ಸುರಿದು ತುಂಬುವ ‘ಘನಾಂದಾರಿ’ ಕೆಲಸವನ್ನು ಅಧಿಕಾರಿ,ಸಿಬ್ಬಂದಿ ಮುಂದುವರಿಸಿದ್ದಾರೆ. ಮೇಯರ್ ಹೇಳಿಕೆ ಪ್ರಕಾರ ಅದಕ್ಕೂ ‘ತಾಂತ್ರಿಕ’ ಕಾರಣ ಇದೆ.ಮಣ್ಣು ಹಾಕಿದರೆ ಗುಂಡಿಗಳು ಇನ್ನಷ್ಟು ವಿಸ್ತರಿಸುವುದಿಲ್ಲ ಎನ್ನುವುದು ತಜ್ಞ ಎಂಜಿನಿಯರ್‌ಗಳು ಕಂಡುಕೊಂಡ ಸತ್ಯವಂತೆ.
ಓಡಾಡುವ  ಜನರು ಧೂಳನ್ನಾದರೂ ಕುಡಿಯಲಿ, ಕೆಸರನ್ನಾದರೂ ಎರಚಿಸಿಕೊಳ್ಳಲಿ, ಸ್ಕಿಡ್ ಆಗಿ ಬಿದ್ದು ಸಾಯಲಿ... ಇವರಿಗೇನು ಕಷ್ಟ -ನಷ್ಟ  ಇಲ್ಲತಾನೆ ?!

ಬಿಸಿಲು ಬಂದ್ರೆ ಧೂಳ್... ಮಳೆ ಬಂದ್ರೆ ತೇಲ್...!

ವಿಕ ವಿಶೇಷ, ಮೈಸೂರು
ವಿಶ್ವವಿಖ್ಯಾತ ದಸರಾ ಮಹೋತ್ಸವ  ಸಮೀಪಿಸುತ್ತಿದೆ. ‘ಜನೋತ್ಸವಕ್ಕೆ ಇನ್ನಷ್ಟು ಮೆರಗು ತುಂಬಲು ವ್ಯಾಪಕ ಸಿದ್ಧತೆ ಕೈಗೊಳ್ಳಲಾಗುತ್ತಿದೆ ’ಎಂದು ಸಂಘಟಕರು ಹೇಳುತ್ತಿದ್ದಾರಾದರೂ, ನಗರದ ಬೀದಿಗಳಲ್ಲಿ ಅದಿನ್ನೂ ‘ಅಗೋಚರ ’!
ಅಂದರೆ, ಸಾಂಸ್ಕೃತಿಕ ನಗರಿಯ ಜನರಿಗೆ ನಿತ್ಯ ನರಕ ಪ್ರಾಯವಾಗಿರುವ ರಾಜ ಮಾರ್ಗ,ಉಪ ಮಾರ್ಗಗಳಲ್ಲಿನ ಹೊಂಡ, ಗುಂಡಿಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಹಿಂದಿನ ವರ್ಷ ಗಳಂತೆ ಕನಿಷ್ಠ  ‘ತೇಪೆ ’ಹಾಕುವ ಕೈಂಕರ್ಯಕ್ಕೂ ಚಾಲನೆ ದೊರಕಿಲ್ಲ...ಎಂಬಲ್ಲಿಗೆ  ಈ ಬಾರಿ ದಸರೆ ಮಹೋತ್ಸವದ  ಪ್ರವಾಸಿ ಆಕರ್ಷಣೆಗಳ ಪಟ್ಟಿಯಲ್ಲಿ ರಸ್ತೆಗಳ ಹೊಂಡ,ಗುಂಡಿ ರಾರಾಜಿಸುವುದು, ಮಳೆ ಬಂದರೆ ‘ಬೋನಸ್’ ಸ್ವರೂಪದಲ್ಲಿ ಕೆಸರೆರಚಾಟ ಬಹುತೇಕ ಖಚಿತ !
ಭರವಸೆ ಕತೆ ಏನಾಯ್ತು: ಇತ್ತೀಚೆಗೆ ದಸರೆಗೆ ಸಂಬಂಧಿಸಿದ ಸಭೆಯೊಂದರಲ್ಲಿ ಹಿರಿಯ ಪತ್ರಕರ್ತರು ರಸ್ತೆಗಳ ದುರವಸ್ಥೆ, ತುರ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ  ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರ ಗಮನ ಸೆಳೆದಿದ್ದರು. ಸಚಿವರ  ನಿರ್ದೇಶನದ  ಮೇರೆಗೆ ವಿವರಣೆ ನೀಡಿದ ನಗರ ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್,ಟೆಂಡರ್ ಪ್ರಕ್ರಿಯೆ ಮುಗಿಸಿ ಕೆಲಸ ಆರಂಭಿಸುತ್ತೇವೆ. ಸೆ.೩೦ರೊಳಗೆ ಎಲ್ಲಾರಸ್ತೆಗಳ ದುರಸ್ತಿ ಮುಗಿಯಲಿದೆ ಎಂದು ಭರವಸೆ ನೀಡಿದ್ದರು.
ಮಣ್ಣು ಹಾಕಿದರು: ಅದಾಗಿ ಎರಡು ವಾರಗಳಾದರೂ ಯಾವೊಂದು ರಸ್ತೆಗೂ ಚಿಕಿತ್ಸೆ ದೊರಕಿಲ್ಲ. ಪಾಲಿಕೆಯ ಗ್ಯಾಂಗ್‌ಮನ್‌ಗಳು ‘ಶಸ್ತ್ರ ಸಜ್ಜಿತ’ರಾಗಿ ಬಂದು ಕೆಲವು ರಸ್ತೆಗಳ ಭಯಾನಕ ಗುಂಡಿಗಳಿಗೆ ‘ಮಣ್ಣು’ ಹಾಕಿದರಾದರೂ,ಉಪಕಾರ ಕ್ಕಿಂತ ಅಪಕಾರವಾಗಿದ್ದೇ ಹೆಚ್ಚು. ಮುಚ್ಚಿದ ಬೆನ್ನಿಗೇ ಧಾರಾಕಾರ ಮಳೆ ಸುರಿದು, ಆ ಪ್ರದೇಶಗಳೆಲ್ಲ ಕೆಸರು ಗದ್ದೆ ಗಳಾಗಿ ಮಾರ್ಪಾಡಾಗಿ ಸಂಚಾರ ಇನ್ನಷ್ಟು ದುಸ್ತರ ವಾಯಿತು. ಮರುದಿನದ ಬಿಸಿಲಿಗೆ ಎಲ್ಲಾ ಧೂಳ್ ಮಗಾ ಧೂಳ್ !
ಜಸ್ಕೋ ಭೀತಿ: ಇದು ಒಂದೆರೆಡು-ಮೂರು ರಸ್ತೆಯ ಕತೆಯಲ್ಲ. ಹೃದಯಭಾಗ, ಪ್ರಮುಖ ಬಡಾವಣೆಯ ಬಹುತೇಕ ಮುಖ್ಯರಸ್ತೆಗಳದ್ದು ಇಂಥದೇ ದುಸ್ಥಿತಿ. ನಗರದಲ್ಲಿ ನಡೆಯುತ್ತಿರುವ ನರ್ಮ್, ಜಸ್ಕೋ ಕಾಮಗಾರಿಗಳು ಹಲವು ಉತ್ತಮ ರಸ್ತೆಗಳನ್ನು ಹದಗೆಡಿಸಿದ್ದು ಸುಳ್ಳಲ್ಲ. ಸರಸ್ವತಿಪುರಂ ಮತ್ತಿತರ ವಾರ್ಡ್‌ಗಳಲ್ಲಿ ಕೆಲ ತಿಂಗಳ ಹಿಂದೆ ಎಲ್ಲಾ ರಸ್ತೆ ಗಳನ್ನು ದುರಸ್ತಿ ಮಾಡಲಾಗಿತ್ತು. ಅದಾಗಿ ತಿಂಗಳಲ್ಲೇ  ಜಸ್ಕೋ  ಪ್ರಾಯೋಗಿಕವಾಗಿ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿ ಆರಂಭಿಸಿ, ಎಲ್ಲಾ ರಸ್ತೆಗಳನ್ನು ‘ನುಂಗಿ’ ನೀರು ಕುಡಿಯಿತು.
ಈ ಹಿನ್ನೆಲೆಯನ್ನು ಗಮನಿಸಿದರೆ, ‘ಎಲ್ಲಾ ರಸ್ತೆಗಳಿಗೆ ಡಾಂಬರೀಕರಣ ಮಾಡಿ’ ಎಂದು ಆಗ್ರಹಿಸುವುದು ಅಧಿಕಾರಿ, ಜನಪ್ರತಿನಿಧಿ ಮತ್ತು ಗುತ್ತಿಗೆದಾರರ ಪಾಲಿಗೆ ‘ಹಬ್ಬದೂಟ’ ವಾಗಿ ಪರಿಣಮಿಸುವ  ಅಪಾಯವೂ ಇದೆ. ಹಾಗಂತ, ‘ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು’ ಎದುರಿರುವ ನಾಡಹಬ್ಬವನ್ನು ಹೊಂಡ,ಗುಂಡಿಗಳ  ಜತೆಗೇ ಮಾಡಿ ಮುಗಿಸುವುದೂ ನ್ಯಾಯವಲ್ಲ.ಕನಿಷ್ಠ ಗುಂಡಿಗಳಿಗೆ ಮಣ್ಣಿನ ಬದಲು ಡಾಂಬರು ತೇಪೆಯನ್ನಾದರೂ ಹಾಕುವ ಕೆಲಸ  ಜರೂರು ಆಗಬೇಕು.ಈ ವಿಷಯದಲ್ಲಿ ಜನ ಸಹಿಸಬಾರದು. ಈ ಹಿನ್ನೆಲೆಯಲ್ಲಿ ಅಧಿಕಾರಸ್ಥರ ಕಣ್ಣು ತೆರೆಸುವ  ಸಚಿತ್ರ ‘ಹೊಂಡಾಸಿಟಿ’ ಸರಣಿ ಇಂದಿನಿಂದ ಆರಂಭ. ನಿತ್ಯ ಒಂದೊಂದು ರಸ್ತೆಗಳ ‘ನರಕ ದರ್ಶನ’ ಅನಾವರಣವಾಗಲಿದೆ.

ಸ್ವಲ್ಪ ಅಡ್ಜಸ್ಟ್ ಮಾಡಬೇಡಿ ಆಂದೋಲನ

ವಿಜಯ ಕರ್ನಾಟಕ ಮೈಸೂರು ಆವೃತ್ತಿ ದಸರೆಗೆ ಮುನ್ನುಡಿಯಂತೆ "ದಸರೆಗೆ ದಾರಿ ಬಿಡಿ, ಗುಂಡಿ ನೋಡಿ ಕಾಲಿಡಿ" ಜಾಗೃತಿ ಆಂದೋಲನ ಆರಂಭಿಸಿದೆ. ಬುಧವಾರ (ಸೆ. 15) ದಿಂದ ಆಂದೋಲನ ಆರಂಭ. ಇದರ ಮೊದಲ ಕಂತು ಇಲ್ಲಿದೆ.

ದಂಡ ತೆರುವುದೇ ಇಷ್ಟ

ವಿಕ ಸುದ್ದಿಲೋಕ ಮೈಸೂರು
ನಾವು ಸಂಚಾರ ನಿಯಮ ಉಲ್ಲಂಘಿಸಿಯೇ ತೀರೋರು, ಹೆಲ್ಮೆಟ್ ಹಾಕೋಲ್ಲ ಏನು ಮಾಡ್ತೀರಿ...
ಇದು ಮೈಸೂರು ನಗರ ಜನತೆಯಲ್ಲಿ ಕಂಡು ಬರುತ್ತಿರುವ ಸಂಚಾರ ಮನೋಭಾವ. ನಗರದಲ್ಲಿ ಒಂದು ಕಡೆ ಸಂಚಾರ ಪೊಲೀಸರ ಬಿಗಿ ಕ್ರಮಗಳು ಹೆಚ್ಚಾಗುತ್ತಿದ್ದರೂ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಯಾಗುತ್ತಿದೆ. ನಗರ ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್ ಅವರು ಬಿಡುಗಡೆ ಮಾಡಿರುವ ಆಗಸ್ಟ್ ತಿಂಗಳ ಸಂಚಾರ ವರದಿಯಲ್ಲಿ ಇದು ದೃಢವಾಗಿದೆ.
ಈ ವರ್ಷದ ಆಗಸ್ಟ್ ತಿಂಗಳಲ್ಲಿ ದಾಖಲಿಸಿದ ಸಂಖ್ಯೆ ೧೭,೪೫೯. ಅದೇ ಕಳೆದ ವರ್ಷದ ಆಗಸ್ಟ್‌ನಲ್ಲಿ ೧೨,೬೭೪ ಮೊಕದ್ದಮೆ ದಾಖಲಿಸಲಾಗಿತ್ತು.
ಹೆಚ್ಚುತಿದೆ ಸಂಖ್ಯೆ: ನಗರದಲ್ಲಿ ವಾಹನ ಚಲಾಯಿಸುವವರು ಸಂಚಾರ ನಿಯಮ ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವುದು ಧೃಡವಾಗುತ್ತಿದೆ. ಈ ವರ್ಷದ ಆಗಸ್ಟ್‌ನಲ್ಲಿ ೭೨೧೧ ಮಂದಿ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಇದು ೪೬೫೩ರಷ್ಟಿತ್ತು.
ಮೊಬೈಲ್‌ನಲ್ಲಿ ಮಾತನಾಡುತ್ತಲೇ ಗಾಡಿ ಓಡಿಸುತ್ತಿದ್ದುವರು ೨೩೫ ಮಂದಿ. ಹೋದ ವರ್ಷ ೨೬೬ ಮೊಕದ್ದಮೆ ದಾಖಲಿಸ ಲಾಗಿತ್ತು. ಡಿಎಲ್ ಇಲ್ಲದೇ ವಾಹನ ಚಾಲನೆ ಮಾಡಿ ೨೫೦ ಮಂದಿ ಸಿಕ್ಕಿಬಿದ್ದಿದ್ದರೆ ಹೋದ ವರ್ಷ ೪೪೭ ಮಂದಿ ದಂಡ ತೆತ್ತಿದ್ದರು. ಮದ್ಯಪಾನ ಮಾಡಿ ವಾಹನ ಚಲಾಯಿಸುವಾಗ ೫೨ ಮಂದಿ ಸಿಕ್ಕಿ ಬಿದ್ದು ದಂಡ ಪಾವತಿಸಿದ್ದಾರೆ. ಹಿಂದಿನ ವರ್ಷದ ಆಗಸ್ಟ್‌ನಲ್ಲಿ ೨೪೭ ಮಂದಿ ದಂಡ ಕಟ್ಟಿದ್ದರು. ನಿರ್ಲಕ್ಷದಿಂದ ವಾಹನ ಚಾಲನೆ ಮಾಡಿದವರು ೯೪ ಮಂದಿ. ಹೋದ ವರ್ಷದ ಆಗಸ್ಟ್‌ನಲ್ಲಿ ೨೮೦ ಮಂದಿ ಸಿಕ್ಕಿಬಿದ್ದು ದಂಡ ತೆತ್ತಿದ್ದರು.
ಹೆಲ್ಮೆಟ್ ಹಾಕಲೊಲ್ಲರು: ಇನ್ನು ಹೆಲ್ಮೆಟ್ ಹಾಕದವರನ್ನು ಹುಡುಕಿ ಹುಡುಕಿ ಪೊಲೀಸರು ಮೊಕದ್ದಮೆ ದಾಖಲಿಸುತ್ತಲೇ ಇದ್ದಾರೆ. ಇಷ್ಟಾದರೂ ಹೆಲ್ಮೆಟ್ ಧರಿಸದೇ ಸಿಕ್ಕಿಬಿದ್ದು ದಂಡ ತೆತ್ತವರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಯಾಗಿದೆ. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಂತೂ ಹೆಲ್ಮೆಟ್ ಇಲ್ಲದೇ ಬೇಕಾಬಿಟ್ಟಿಯಾಗಿ ವಾಹನ ಓಡಿಸು ತ್ತಿರುವುದು ಸಾಮಾನ್ಯ. ಭರ್ರೆಂದುಶಬ್ದ ಮಾಡುತ್ತ ಅಕ್ಕ ಪಕ್ಕದಲ್ಲಿ ವಾಹನ ಚಲಾಯಿಸುತ್ತಿರುವವರನ್ನು ಭಯ ಬೀಳಿಸುವವರು ಯುವಕರೇ. ಯುವಕರಿಗಿಂತ ಯುವತಿಯರು ನಾವೇನೂ ಕಡಿಮೆ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಜತೆಗೆ ಮಹಿಳೆಯರಿಗೂ ಹೆಲ್ಮೆಟ್ ಎಂದರೆ ಅಲರ್ಜಿ. ತಮ್ಮ ಸೌಂದರ್ಯದ ಕಾರಣಕ್ಕೆ ಹೆಲ್ಮೆಟ್ ಹಾಕುವುದನ್ನು ಕಡಿಮೆ ಮಾಡಿದ್ದಾರೆ. ಪೊಲೀಸರಿಗೆ ಸಿಕ್ಕಿಬಿದ್ದು ತಲೆಯನ್ನೂ ಕೆರೆದುಕೊಂಡು ದಂಡ ತೆತ್ತು ಹೋಗು ತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ದಂಡ ತೆತ್ತವರ ಸಂಖ್ಯೆ ೯೨೬೧. ಕಳೆದ ವರ್ಷದ ಇದೇ ತಿಂಗಳು ಹೆಲ್ಮೆಟ್ ಧರಿಸದೇ ದಂಡ ಕಟ್ಟಿವರು ೬೧೪೮ ಮಂದಿ.
ಸತ್ತವರೂ ಅಧಿಕ: ಆಗಸ್ಟ್‌ನಲ್ಲಿ ಹೆಲ್ಮೆಟ್ ಧರಿಸದೇ ಮೃತಪಟ್ಟ ದ್ವಿಚಕ್ರ ವಾಹನ ಸವಾರರ ಸಂಖ್ಯೆ ೪. ಗಾಂiಗೊಂಡವರು ೨೪ ಮಂದಿ. ಹೆಲ್ಮೆಟ್ ಧರಿಸಿಯೂ ನಾಲ್ವರು ಜೀವ ತೆತ್ತಿದ್ದಾರೆ. ೪೩ ಮಂದಿ ಗಾಯಗೊಂಡಿದ್ಧಾರೆ. ಕಳೆದ ವರ್ಷ ಇದೇ ತಿಂಗಳಲ್ಲಿ ಹೆಲ್ಮೆಟ್ ಧರಿಸದೆಯೇ ವಾಹನ ಚಲಾಯಿಸಿ ಒಬ್ಬ ಮೃತಪಟ್ಟಿದ್ದ. ೪೧ ಮಂದಿ ಗಾಯಗೊಂಡಿದ್ದರು.

ಪ್ರವಾಸಿ ತಾಣಗಳಲ್ಲಿ ಜನ ಪ್ರವಾಹ

ವಿಕ ಸುದ್ದಿಲೋಕ ಮೈಸೂರು
ಮೈಸೂರಿನ ಪ್ರವಾಸಿ ತಾಣಗಳಲ್ಲಿ ಭಾನುವಾರ ಜನವೋ ಜನ. ನಾಡ ಹಬ್ಬ ದಸರಾ ಮಹೋತ್ಸವಕ್ಕೂ ಮುನ್ನವೇ ದಸರೆಯ ದಿನಗಳನ್ನು ನೆನಪಿಸುವಂಥ ಜನಜಂಗುಳಿ. ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ವಾಹನಗಳ ಸಾಲು ಸಾಲು.
ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಬಹುತೇಕರು ಪ್ರವಾಸಿ ತಾಣಗಳು, ದೇವಾಲಯಗಳಿಗೆ ಭೇಟಿ ನೀಡಿ ರಜೆಯನ್ನು ಸದುಪಯೋಗಪಡಿಸಿಕೊಂಡರು. ಮನೆ ಯಲ್ಲೇ ಶುಕ್ರವಾರ ರಂಜಾನ್, ಶನಿವಾರ ಗಣೇಶ ಚತುರ್ಥಿ ಸಂಭ್ರಮವನ್ನು ಆಚರಿಸಿದ ನಾಗರಿಕರು ವಾರಾಂತ್ಯ ದಿನವಾದ ಭಾನುವಾರ ಪ್ರವಾಸಿ ತಾಣ ಗಳತ್ತ, ವೀಕ್ಷಣಾ ಸ್ಥಳಗಳತ್ತ ಮುಖ ಮಾಡಿದ್ದರು.
ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ಜಗನ್ಮೋಹನ ಕಲಾ ಗ್ಯಾಲರಿ ಮತ್ತಿತರೆಡೆ ಜನಸಂದಣಿ ಕಂಡು ಬಂದಿತು. ದುಡಿಯುವ ವರ್ಗಕ್ಕೆ ಶುಕ್ರವಾರ ರಂಜಾನ್, ಶನಿವಾರ ಗಣೇಶ ಚತುರ್ಥಿ, ಭಾನುವಾರ ವಾರಾಂತ್ಯ ಒಟ್ಟಿಗೆ ಮೂರು ದಿನಗಳು ರಜೆ ಲಭಿಸಿದ ಪರಿಣಾಮವಿದು. ದಸರಾ ವಸ್ತು ಪ್ರದರ್ಶನದ ಮೈದಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾರು, ದ್ವಿಚಕ್ರವಾಹನಗಳು ನಿಂತಿದ್ದವು.
ಅರಮನೆ ವೀಕ್ಷಣೆಗೆ ಸ್ಥಳೀಯರು ಸೇರಿದಂತೆ ಪ್ರವಾಸಿಗಳು ತಂಡೋಪತಂಡವಾಗಿ ಆಗಮಿಸಿ ದ್ದರು. ಅಂಬಾವಿಲಾಸ ಅರಮನೆಯ ವೈಭವವನ್ನು ಕಣ್ತುಂಬಿಸಿಕೊಳ್ಳಲು ಪ್ರವೇಶಕ್ಕಾಗಿ ಜನರು ಸಾಲು ಗಟ್ಟಿ ನಿಂತಿದ್ದರು. ವಿದೇಶಿ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬಂದಿತು. ಎಂದಿನಂತೆ ಪೊಲೀಸ್ ಭದ್ರತೆಯಲ್ಲಿ ಪ್ರವೇಶ ನೀಡಲಾಗುತ್ತಿತ್ತು. ಅರಮನೆ ಆವರಣದ ವಾಹನ ನಿಲ್ದಾಣದಲ್ಲಿ ವಾಹನಗಳು ಭರ್ತಿಯಾದ ಹಿನ್ನೆಲೆ ಯಲ್ಲಿ ರಸ್ತೆಯ ಅಲ್ಲಲ್ಲಿ ವಾಹನಗಳು ಸಾಲಾಗಿ ನಿಂತಿ ದ್ದವು. ಕೆಲವರು ದಸರಾ ವಸ್ತುಪ್ರದರ್ಶನದ ಎದುರಿನ ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಿದ್ದರು.
ಈ ದಿನ ೧೮,೬೫೦ ಮಂದಿ ಭೇಟಿ ನೀಡಿದ್ದರು. ರಜೆ ದಿನಗಳಲ್ಲಿ ಈ ಪ್ರಮಾಣದಲ್ಲಿ ಜನರ ಆಗಮನ ಸಾಮಾನ್ಯ.ಕೆಲ ದಿನಗಳಲ್ಲಿ ೨೩ ಸಾವಿರಕ್ಕೂ ಹೆಚ್ಚು ಮಂದಿ ಒಂದೇ ದಿನ ಭೇಟಿ ನೀಡಿದ ಉದಾಹರಣೆ ಗಳು ಉಂಟು ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಅವರಾದಿ ತಿಳಿಸಿದ್ದಾರೆ.
ಮೃಗಾಲಯಕ್ಕೆ ದಾಖಲೆ ಆದಾಯ: ಶ್ರೀ ಚಾಮ ರಾಜೇಂದ್ರ ಮೃಗಾಲಯ ವೀಕ್ಷಣೆಗೂ ಜನರು ಕಿಕ್ಕಿರಿದು ತುಂಬಿದ್ದರು. ಬೆಳಗಿನಿಂದ ಸಾಲುಗಟ್ಟಿ ನಿಂತಿದ್ದ ಪ್ರವಾಸಿಗರು ಪ್ರಾಣಿಗಳನ್ನು ವೀಕ್ಷಿಸಿ ಸಂತಸಪಟ್ಟರು. ಕಳೆದ ಮೂರು ದಿನಗಳಿಂದಲೂ ಅಪಾರ ಸಂಖ್ಯೆಯ ವೀಕ್ಷಕರು ಮೃಗಾಲಯಕ್ಕೆ ಆಗಮಿಸಿದ್ಧಾರೆ. ಆದರೆ ಭಾನುವಾರ ದಾಖಲೆ ಪ್ರಮಾಣದಲ್ಲಿ ಜನರು ಭೇಟಿ ನೀಡಿದ್ದರು. ಒಂದೇ ದಿನ ೩೦,೦೦೦ ಮಂದಿ ಆಗಮಿಸಿ, ೯.೩೭ ಲಕ್ಷ ರೂ. ಆದಾಯ ತಂದಿರುವುದು ಮೃಗಾಲಯದ ಇತಿಹಾಸದಲ್ಲೇ ದಾಖಲೆಯಾಗಿದೆ.
ಸೆ.೧೦ ರಂದು ೬,೪೦೦ ಮಂದಿ ಆಗಮಿಸಿದ್ದು, ಆದಾಯ ೨.೧೧ ಲಕ್ಷ ರೂ.ಗಳಾದರೆ, ಸೆ.೧೧ ರಂದು ೧೯,೦೦೦ ಮಂದಿ ೬ ಲಕ್ಷ ರೂ. ಹಾಗೂ ಭಾನುವಾರ (ಸೆ.೧೨) ದಂದು ೩೦,೦೦೦ ಮಂದಿ ವೀಕ್ಷಿಸಿದ್ದು, ೯,೩೭,೮೮೦ ರೂ. ಆದಾಯ ಬಂದಿದೆ. ಈ ಹಿಂದಿನ ೮.೫೭ ಲಕ್ಷ ರೂ. ಆದಾಯವೇ ಹೆಚ್ಚಿನದಾಗಿತ್ತು ಎಂದು ಮೃಗಾಲಯದ ಕಾರ‍್ಯ ನಿರ್ವಾಹಕ ನಿರ್ದೇಶಕ ವಿಜಯ ಕುಮಾರ್ ತಿಳಿಸಿದ್ದಾರೆ.

ಸರಕಾರಿ ಶಾಲೆಗಳಿಗೆ ಬೇಕು ‘ಸಮುದಾಯ’ ಮೇಷ್ಟ್ರು !

ಚೀ. ಜ. ರಾಜೀವ ಮೈಸೂರು
ನಿಮ್ಮೂರಿನ ಇಲ್ಲವೇ  ನಿಮ್ಮ ಭಾಗದ  ಸರಕಾರಿ ಶಾಲೆಯಲ್ಲಿ  ಯಾವುದಾದರೊಂದು ‘ಪರಿಣತ’ ವಿಷಯವನ್ನು ಬೋಧಿಸಲು ನೀವು ಆಸಕ್ತರಾಗಿರುವಿರಾ ?, ನೈಜ ಕಾಳಜಿ ಮತ್ತು ಸಾಮರ್ಥ್ಯ  ಇದ್ದರೆ,   ನಿಮ್ಮ ಬಯಕೆ ಈ ವರ್ಷದಿಂದಲೇ ಸಾಕಾರಗೊಳ್ಳಲಿದೆ.  ಸಾರ್ವಜನಿಕ ಶಿಕ್ಷಣ  ಇಲಾಖೆಯೇ ಇಂಥದ್ದೊಂದು  ಬಯಕೆಗೆ ವೇದಿಕೆ ಕಲ್ಪಿಸಿಕೊಡುತ್ತಿದೆ.
ಸಮುದಾಯದ ಸಂಪನ್ಮೂಲ ವ್ಯಕ್ತಿಗಳ ಸೇವೆಯನ್ನು ಶಾಲಾ ಮಕ್ಕಳ ಪರಿಪೂರ್ಣ ವಿಕಸನಕ್ಕೆ ಬಳಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ೨೦೧೦-೧೧ನೇ ಸಾಲಿನಿಂದ ‘ಸಮುದಾಯ ದೀಪ ’ ಯೋಜನೆ ಜಾರಿಗೊಳಿಸುತ್ತಿದೆ.
‘ಮೈಸೂರು ಜಿಲ್ಲೆಯಲ್ಲೂ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆಸಕ್ತ ಸಂಪನ್ಮೂಲ ವ್ಯಕ್ತಿಗಳು ಸ್ಥಳೀಯ ಮುಖ್ಯೋಪಾಧ್ಯಾಯರ ಮೂಲಕ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಬಹುದು’ ಎಂದು ಯೋಜನೆ ಜಾರಿಯ ಉಸ್ತುವಾರಿ ಹೊತ್ತಿರುವ  ಜಿಲ್ಲಾ  ಡಯಟ್ ಪ್ರಾಂಶುಪಾಲ ಕೆಂಪರಾಜೇಗೌಡ  ವಿಜಯ ಕರ್ನಾಟಕಕ್ಕೆ ತಿಳಿಸಿದರು.
ಏನಿದು ಯೋಜನೆ: ಮಕ್ಕಳಿಗೆ  ಪಠ್ಯ ಬೋಧಿಸುವ ಜತೆಗೆ  ಪಠ್ಯೇತರ ವಿಷಯಗಳನ್ನು ಬೋಧಿಸಬೇಕೆಂಬುದು ಅನೇಕ  ಶಿಕ್ಷಣ ತಜ್ಞರ ಅಭಿಮತ. ಇದಕ್ಕಾಗಿ  ಆಯಾ ಕ್ಷೇತ್ರದಲ್ಲಿ ಪರಿಣತಿ ಪಡೆದವರೇ ಇದ್ದರೆ ಹೆಚ್ಚು ಸೂಕ್ತ ಎಂಬುದು  ಇಲಾಖೆಯ ಚಿಂತನೆ.  ಸಾಮಾಜಿಕ ಮೌಲ್ಯ, ರೀತಿ-ನೀತಿ, ನಾಯಕತ್ವ ಗುಣ, ಪ್ರಾಮಾಣಿಕತೆ. ಸ್ಪರ್ಧಾ ಮನೋಭಾವ, ರಚನಾತ್ಮಕ ಕೌಶಲ್ಯ, ಬಿಡುವಿನ ವೇಳೆಯ ಸದ್ಬಳಕೆ, ದೈಹಿಕ ಸದೃಢತೆ, ಸೌಂದರ್ಯ ಪ್ರಜ್ಞೆ, ಸಾಂಸ್ಕೃತಿಕ ಮೌಲ್ಯಗಳನ್ನು ಸಹಪಠ್ಯ ಚಟುವಟಿಕೆಗಳ ಮೂಲಕ ಬೋಧಿಸಿದರೆ - ಅದು ಸಮಗ್ರ ಶಿಕ್ಷಣವಾಗಬಲ್ಲದು.  ಈ ಎಲ್ಲ ವಿಷಯಗಳನ್ನು ಇಲಾಖೆಯ ಶಿಕ್ಷಕರು ಬೋಧಿಸಲು ಶಕ್ತರಾದರೂ,  ಪರಿಣತರ ಮೂಲಕ ಹೇಳಿಸಿದರೆ ಹೆಚ್ಚು ಅರ್ಥಪೂರ್ಣ. ಹಾಗಾಗಿ ಸಮುದಾಯದ ವ್ಯಕ್ತಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
‘ಸ್ಥಳೀಯ ಸಮಸ್ಯೆಗಳು, ಅಲ್ಲಿನ ನಂಬಿಕೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳ ಸ್ಪಷ್ಟವಾದ ಪರಿಕಲ್ಪನೆ ಮೂಡಿಸುವ ಸಲುವಾಗಿಯೂ ಯೋಜನೆಯನ್ನು ದುಡಿಸಿಕೊಳ್ಳಲಾಗುವುದು’  ಎಂದು  ಕೆಂಪರಾಜೇಗೌಡ ತಿಳಿಸಿದರು.
ಯಾವ ವಿಷಯ ಬೋಧಿಸಬಹುದು
ಜಿಲ್ಲೆಯ ಎಲ್ಲ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲೂ ಈ ಯೋಜನೆ ಜಾರಿಗೆ ಬರಲಿದೆ. ೧೮ ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾವಂತ ಯುವಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಬಹುದು. ಪ್ರತಿ  ತರಗತಿಗೆ ವಾರದಲ್ಲಿ  ೨ ಅವಧಿಯನ್ನು ನೀಡಲಾಗುವುದು. ಸಮುದಾಯದ ಸಂಪನ್ಮೂಲ ವ್ಯಕ್ತಿ ಆಯ್ದ ಶಾಲೆಯಲ್ಲಿ  ಶೈಕ್ಷಣಿಕ  ವರ್ಷದ ಕನಿಷ್ಠ  ಒಂದು ಸೆಮಿಸ್ಟರ್ ಅವಧಿಗೆ ಬೋಧಿಸಬೇಕು. ಆಯ್ಕೆಯಾದವರೊಂದಿಗೆ ಬಿಇಒ ಒಡಂಬಡಿಕೆ ಮಾಡಿಕೊಳ್ಳಬೇಕು ಎಂಬುದು ಇಲಾಖೆ ರೂಪಿಸಿರುವ ನೀತಿ.
ಕಲೆ ಹಾಗೂ ಕೌಶಲ, ವ್ಯಕ್ತಿತ್ವ ವಿಕಸನ, ಜನಪದ ಸೇರಿದಂತೆ ಎಲ್ಲ ರೀತಿಯ  ಸಂಗೀತ ಮತ್ತು ನಾಟಕ,  ಇಂಗ್ಲಿಷ್ ಸಂವಹನ ಕಲೆ, ಕಂಪ್ಯೂಟರ್ ಜ್ಞಾನ, ಕರಾಟೆ ಹಾಗೂ ಇತರೆ ಪ್ರಯೋಗ, ಯೋಗ ಮತ್ತು ಧ್ಯಾನ, ಕ್ರೀಡಾ ತರಬೇತಿ, ಭಾಷಣ, ಕಥೆ ಹೇಳುವುದು, ಜನಪದ ಗೀತೆ- ನೃತ್ಯ ವಿಷಯಗಳನ್ನು ಸಂಪನ್ಮೂಲ ವಿದ್ಯಾರ್ಥಿಗಳು ಬೋಧಿಸಬಹುದು.
ಈ ಯೋಜನೆಯಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳಿಗೆ  ಇಲಾಖೆ ಯಾವುದೇ ರೀತಿಯ ಭತ್ಯೆ ಇಲ್ಲವೇ ಆರ್ಥಿಕ ಸೌಲಭ್ಯ ನೀಡುವುದಿಲ್ಲ. ಬದಲಿಗೆ ಅಭ್ಯರ್ಥಿಯ ತೃಪ್ತಿಕರ ಸೇವೆಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಡಯಟ್ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪರಿಶೋಧನಾ ಸಮಿತಿ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡುವುದು. ಡಯಟ್ ಉಪ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ, ತಾಲೂಕು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವರು.

ಬೈರಾಪುರ ಪಂಚಾಯಿತಿಯಲ್ಲಿ ಕೆಲಸ ಮಾಡದವರಿಗೂ ಕೂಲಿ

ಆರ್.ಕೃಷ್ಣ ಮೈಸೂರು
ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕರ್ಮಕಾಂಡ ಇನ್ನೂ ನಿಂತಿಲ್ಲ.
ಯೋಜನೆಯಲ್ಲಿ ಅವ್ಯವಹಾರ ಸಾಬೀತಾದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂಬ ಸರಕಾರದ ಎಚ್ಚರಿಕೆಗೂ ಯಾರೂ ಮಣಿದಿಲ್ಲ. ಮಾಡದ ಕೆಲಸಕ್ಕೆ ಬಿಲ್ ಪಡೆಯುವುದು ಒಂದೆಡೆ ಯಾದರೆ, ನಕಲಿ ಕಾರ್ಮಿಕರನ್ನು ಸೃಷ್ಟಿಸಿ ಸಹಿ ಹಾಕಿಕೊಂಡು ಹಣವನ್ನು ಜೇಬಿಗಿಳಿಸುವ ದಂಧೆ ನಡೆದೇ ಇದೆ.
ಈಗ ತಿ.ನರಸೀಪುರ ತಾಲೂಕು ಬೈರಾಪುರ ಗ್ರಾಮ ಪಂಚಾಯಿತಿಯ ಸರದಿ. ಯೋಜನೆಯಡಿ ನಡೆದ ಅವ್ಯವಹಾರ ಮಾಹಿತಿ ಹಕ್ಕು ಮೂಲಕ ಪಡೆದ ಮಾಹಿತಿಯಲ್ಲಿ ಸಾಬೀತಾಗಿದೆ. ಕಾಮಗಾರಿ ನಡೆದಿದೆ ಎಂದು ಕಾರ‍್ಯ ನಿರ್ವಹಣ ಏಜೆನ್ಸಿಯವರು ನೀಡಿದ ಮಸ್ಟರ್ ರೋಲ್‌ನ ಹಾಳೆಯಲ್ಲಿ ಒಂದೇ ಹೋಲಿಕೆ ಇರುವ ಹಲವು ಹೆಬ್ಬೆಟ್ಟಿನ ಗುರುತು ಹಾಗೂ ಸಹಿಗಳಿವೆ. ಜತೆಗೆ ಒಂದು ಹಾಳೆಯಲ್ಲಿ ಹೆಬ್ಬೆಟ್ಟಿನ ಗುರುತಿದ್ದರೆ, ಮತ್ತೊಂದು ಹಾಳೆಯಲ್ಲಿ ಅವರದ್ದೇ ಸಹಿಗಳಿವೆ.
ಇದರಲ್ಲಿ ‘ಗೆಜೆಟ್ ಅಧಿಕಾರಿ’ಗೆ ಕಡಿಮೆ ಇಲ್ಲದಂತೆ ಉದ್ಯೋಗ ಯೋಜನೆಯಡಿ ಕೂಲಿಗೆ ಬಂದವ ‘ಕೂಲಿ ಕಾರ್ಮಿಕ’ನ ಹೆಸರಿನಲ್ಲಿ ಆಂಗ್ಲ ಭಾಷೆಯಲ್ಲಿ ‘ಚೆಂದ’ವಾಗಿ ಸಹಿ ಮಾಡಿದ್ದಾರೆ. (ಅಕುಶಲ ಕೂಲಿ ಪಾವತಿಗಾಗಿನ ಮಸ್ಟರ್‌ರೋಲ್, ಎಂ. ಆರ್. ಸಂಖ್ಯೆ ೦೫೬೧೪, ಕ್ರಮ ಸಂಖ್ಯೆ ೫೧, ನೊಂದಣಿ ಸಂಖ್ಯೆ ೫೧೯). ಇಂಥ ನಿದರ್ಶನಗಳು ಒಂದೇ ಗ್ರಾಮ ಪಂಚಾಯಿತಿಯಲ್ಲಿ ಬಹಳಷ್ಟಿವೆ.
ಇನ್ನೂ ಅಚ್ಚರಿಯೆಂದರೆ ಶಾಲೆ-ಕಾಲೇಜಿನಲ್ಲಿ ಕಲಿಯುತ್ತಿರುವ ಜನಪ್ರತಿನಿಧಿಗಳ ಮಕ್ಕಳು, ಯೋಜನೆಯಡಿ ೧೦ ದಿನ ‘ಕೂಲಿ ಕೆಲಸ’ ಮಾಡಿ ಹಣ ಪಡೆದಿದ್ದಾರೆ. ಇದಕ್ಕೆ ಗ್ರಾಮ ಪಂಚಾಯಿತಿ ಕಾರ‍್ಯದರ್ಶಿ ಆರ್.ಮಹಾದೇವ (ಈಗ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ) ಲೆಕ್ಕ ಪರಿಶೋಧನೆ ಮಾಡಿ ಸಹಿ ಮಾಡಿದ್ದು, ತಾಲೂಕು ಪಂಚಾಯಿತಿ ಕಾರ‍್ಯ ನಿರ್ವಾಹಕ ಅಧಿಕಾರಿ ಅನುಮೋದಿಸಿದ್ದಾರೆ.
ಒಂದು ದಿನವೂ ದೊರೆಯದ ಕೂಲಿ: ಉದ್ಯೋಗ ಖಾತರಿ ಯೋಜನೆಯಡಿ ವರ್ಷದಲ್ಲಿ ಕಡ್ಡಾಯವಾಗಿ ನೂರು ದಿನದ ಉದ್ಯೋಗ ನೀಡಬೇಕು ಎಂಬ ನಿಯಮ ಇದ್ದರೂ ಪಾಲಿಸಿಲ್ಲ. ತಿ.ನರಸೀಪುರ ಪಟ್ಟಣಕ್ಕೆ ಹೊಂದಿಕೊಂಡ ಬೈರಾಪುರ ಗ್ರಾಮದಲ್ಲಿ ಸುಮಾರು ೩೫೦ ಕುಟುಂಬಗಳಿದ್ದು, ಬಹುತೇಕ ಕುಟುಂಬಗಳಿಗೆ ಕೂಲಿಯೇ ಆಧಾರ. ಹೀಗಾಗಿ ಗ್ರಾಮದಲ್ಲಿ ೫೦೦ಕ್ಕೂ ಹೆಚ್ಚು ಮಂದಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಎರಡು ವರ್ಷ ಕಳೆಯುತ್ತಿದ್ದರೂ ಬಹುತೇಕರಿಗೆ ಒಂದು ದಿನವೂ ಕೂಲಿ ದೊರೆತಿಲ್ಲ. ಆದರೆ ಮತ್ತೊಂದು ಚಮತ್ಕಾರ ಎಂದರೆ ಒಂದು ದಿನವೂ ಕೂಲಿ ಮಾಡದವರ ಹೆಸರಿನಲ್ಲಿ ‘ಕೆಲಸ ಮಾಡಿದ್ದಾರೆ’ ಎಂದು  ನೀಡುವ  ‘ಮಸ್ಟರ್ ರೋಲ್’ನಲ್ಲಿ ನಮೂದಿಸಲಾಗಿದೆ. ಕೆಲಸ ನೀಡಿ ಎಂದು ಕಾರ್ಡ್ ಹಿಡಿದು ಗ್ರಾಮ ಪಂಚಾಯಿತಿ ಕಚೇರಿಗೆ ಹೋದರೆ, ನೀವಾಗಲೇ ಕೆಲಸ ಮಾಡಿದ್ದೀರಿ. ಬೇರೆಯವರಿಗೆ ಅವಕಾಶ ನೀಡಬೇಕಿರುವುದರಿಂದ ಮತ್ತೆ ಕೆಲಸ ನೀಡಲಾಗದು ಎನ್ನುವ ಉತ್ತರ ಗ್ರಾಮ ಪಂಚಾಯಿತಿ ಕಾರ‍್ಯದರ್ಶಿಯದ್ದು.
ಕೆಲ ಗುತ್ತಿಗೆದಾರರು ತಮಗೆ ಪರಿಚಯಸ್ಥ, ಸಂಬಂಧಿಕರಿಗೆ ಪುಕ್ಕಟ್ಟೆ  ನೂರು ರೂ. ನೀಡಿ ಒಂದು ವಾರ ಕೆಲಸ ಮಾಡಿರುವುದಾಗಿ ಸೃಷ್ಟಿಸಿಕೊಂಡ ದಾಖಲೆಗೆ ಸಹಿ ಪಡೆದುಕೊಳ್ಳುವುದೂ ಚಾಲ್ತಿ ಯಲ್ಲಿದೆ. ನೂರು ರೂ. ಆಸೆಗೆ ಸಹಿ ಮಾಡಿದವರು ಇದ್ಯಾವುದನ್ನೂ ಗಮನಿಸದಿರುವುದರಿಂದ ಅವ್ಯವಹಾರ ನಿಂತಿಲ್ಲ.

ರಾಜ್ಯ ಮುಕ್ತ ವಿವಿ ವೆಬ್‌ಸೈಟ್ ಕಳ್ಳರಿಗೆ ‘ಮುಕ್ತ’

ವಿಕ ವಿಶೇಷ ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ಗೆ ಹ್ಯಾಕರ್‌ಗಳು ಕನ್ನ ಹಾಕಿದ್ದರೂ ವಿವಿಯ ಐಟಿ ನಿರ್ವಹಣಾ ವಿಭಾಗ ಮಾತ್ರ ತಣ್ಣಗೆ ಮಲಗಿದೆ.
ಅಧಿಕೃತ ವೆಬ್‌ಸೈಟ್‌ಗಳಿಗೆ ವೈರಸ್‌ಗಳನ್ನು ಬಿಟ್ಟು ಈಗಾಗಲೇ ಕಳ್ಳಕಿಂಡಿಗಳನ್ನು ಕೊರೆಯಲಾಗಿದೆ. ಅಷ್ಟೇ ಅಲ್ಲದೇ ಅಲ್ಲಿನ ಮಾಹಿತಿಗಳನ್ನೆಲ್ಲಾ ಜಾಲಾಡಿ ಮೂಲಕ್ಕೆ ಧಕ್ಕೆ ತರುವ ಕೆಲಸ ಸಾಫ್ಟ್‌ವೇರ್ ಕಳ್ಳರಿಂದ ನಡೆಯುತ್ತಿದೆ.
ಅಂಕಪಟ್ಟಿ ಸೇರಿದಂತೆ ಪ್ರಮುಖ ದಾಖಲೆಗಳನ್ನೇ ತಿದ್ದುವಲ್ಲಿ ಸಾಫ್ಟ್‌ವೇರ್ ಕಳ್ಳರು ಕೈ ಚಳಕ ತೋರಿದರೆ ಎನ್ನುವ ಭಯ ಸದ್ಯಕ್ಕೆ ಕಾಡುತ್ತಿದೆ. ಮುಕ್ತ ವಿವಿ ವೆಬ್‌ಸೈಟ್‌ನಿಂದ ಮಾಹಿತಿ ಪಡೆಯಲು ಮುಂದಾ ಗುವ ಕಂಪ್ಯೂಟರ್‌ಗೂ ವೈರಸ್ ತಗಲುತ್ತಿದೆ. ಹ್ಯಾಕರ್‌ಗಳ ಹಾವಳಿಯ ಬಗ್ಗೆ ವಿವಿ ಆಡಳಿತಕ್ಕೆ ತಿಳಿದಿದ್ದರೂ ನಿರ್ಲಕ್ಷ್ಯ ತಳೆದಿರುವುದು ವಿದ್ಯಾರ್ಥಿ ವಲಯದಲ್ಲಿ ಹೊಸ ಆತಂಕ ಸೃಷ್ಟಿಸಿದೆ.
ಎಚ್ಚರಿಸಿದ ಗೂಗಲ್: ಮುಕ್ತ ವಿವಿಯಲ್ಲಿ ಹೀಗೆ ವೆಬ್‌ಸೈಟ್ ಅನ್ನು ಕೊರೆದಿರುವ ಮಾಹಿತಿಯನ್ನು ಗೂಗಲ್ ಸಂಸ್ಥೆ ಈಗಾಗಲೇ ನೀಡಿದೆ. ಅದರಲ್ಲೂ ಆಗಸ್ಟ್ ೨೭ರಿಂದ ಸೆಪ್ಟೆಂಬರ್ ೬ರವರೆಗೆ ನಡೆಸಿದ ತಪಾಸಣೆಯಲ್ಲಿ ಸುಮಾರು ೨೪ ಕಿಂಡಿಗಳನ್ನು(ಎಕ್ಸ್ ಪ್ಲಾಯಿಟ್)ಮಾಡಲಾಗಿದೆ. ಕೂಡಲೇ ಈ ಬಗ್ಗೆ ಎಚ್ಚರ ವಹಿಸಿ ಎಂದು ಸೂಚಿಸಿದೆ. ಚೀನಾದ ಕೆಲ ಹ್ಯಾಕರ್‌ಗಳೇ ಕರಾಮತ್ತು ಪ್ರದರ್ಶಿಸುತ್ತಿದ್ದಾರೆ ಎಂದೂ ಹೇಳಲಾಗಿದೆ. ಜತೆಗೆ ಯಾವ್ಯಾವ ಹ್ಯಾಕರ್‌ಗಳು ಒಳ ಪ್ರವೇಶಿಸಿದ್ದರೆಂಬ ಮಾಹಿತಿಯನ್ನೂ ರವಾನಿಸಿದೆ. ಈ ಹಿಂದೆಯೂ ವೆಬ್‌ಸೈಟ್ ಕಳ್ಳತನದ ಬಗ್ಗೆ ವಿಧಾನಪರಿಷತ್ ಸದಸ್ಯ ಹಾಗೂ ಆಡಳಿತ ಮಂಡಳಿ ಸದಸ್ಯ ಮರಿತಿಬ್ಬೇಗೌಡ ವಿವಿ ಗಮನಕ್ಕೆ ತಂದಿದ್ದಾರೆ. ಕಳ್ಳ ಕಿಂಡಿಗಳನ್ನು ಬಿಗಿಯಾಗಿ ಮುಚ್ಚಲು ಸೂಚಿಸಿದ್ದರೂ ಯಾರೂ ಗಂಭೀರವಾಗಿ ತೆಗೆದುಕೊಂಡಂತಿಲ್ಲ.
ಮಲಗಿದ ಐಟಿ ವಿಭಾಗ: ಮುಕ್ತ ವಿವಿ ಈಗ ರಾಜ್ಯ,ದೇಶವಲ್ಲದೇ ಹೊರ ದೇಶಗಳಲ್ಲೂ ಹಲವು ಸಂಸ್ಥೆಗಳೊಂದಿಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದೆ. ಇಂಥ ಸಂದರ್ಭದಲ್ಲಿ ಶೈಕ್ಷಣಿಕ ಕಾರ‍್ಯಕ್ರಮ, ಮಾನವ ಸಂಪನ್ಮೂಲ ನಿರ್ವಹಣೆ, ಆರ್ಥಿಕ ಲೆಕ್ಕಾಚಾರಕ್ಕೆ ಮಾಹಿತಿ ತಂತ್ರಜ್ಞಾನ ವಿಭಾಗದ ಪಾತ್ರ ಬಹಳ ಪ್ರಮುಖ. ವಿ.ವಿ.ಯಲ್ಲಿ ಪ್ರತ್ಯೇಕ ಮಾಹಿತಿ ತಂತ್ರಜ್ಞಾನ ವಿಭಾಗವಿದೆ. ಹಿರಿಯ ಅಧಿಕಾರಿ, ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರ್ವಹಣೆಯ ಹೊಣೆ. ಆದರೆ ಈ ವಿಭಾಗ ಮಲಗಿದೆ. ಒಂದೂವರೆ ವರ್ಷದ ಹಿಂದೆಯೇ ವೆಬ್‌ಸೈಟ್‌ಗೆ ಕನ್ನ ಹಾಕು ತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕರೂ ಐಟಿ ವಿಭಾಗ ತಲೆ ಕೆಡಿಸಿಕೊಳ್ಳಲಿಲ್ಲ. ಕೊಳ್ಳೆ ಹೊಡೆಯುವವರು ಹೊಡೆದುಕೊಳ್ಳಲಿ ಎಂದು ತಣ್ಣಗಿತ್ತು.
ಆನ್‌ಲೈನ್‌ಗೆ ನೀತಿ ಇಲ್ಲ: ಮುಕ್ತ ವಿಶ್ವವಿದ್ಯಾನಿಲಯ ಆರಂಭವಾಗಿ ಒಂದೂವರೆ ದಶಕ ಕಳೆದಿದೆ. ಆನ್‌ಲೈನ್ ಶಿಕ್ಷಣವೂ ಆರಂಭವಾಗಿ ೩-೪ ವರ್ಷವಾಗಿದೆ. ಆದರೂ ತಾಂತ್ರಿಕ ಭದ್ರತೆ ಕಲ್ಪಿಸಿಲ್ಲ. ತಂತ್ರಜ್ಞಾನ ನಿರ್ವಹಣೆಗೆ ಪ್ರತಿ ಸಂಸ್ಥೆ ತನ್ನದೇ ಆದ ನೀತಿಯನ್ನು ರೂಪಿಸಿಕೊಳ್ಳುತ್ತದೆ. ಒಂದುವೇಳೆ ಆನಾಹುತ ಘಟಿಸಿದರೂ ತಕ್ಷಣವೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳ ಲಾಗುತ್ತದೆ. ಆದರೆ ಮುಕ್ತ ವಿವಿ ಮಾತ್ರ ಸುಮ್ಮನಿದೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ತರುವಂಥ ಘಟನೆ ನಡೆದರೂ ನಿರ್ಲಕ್ಷ್ಯ ವಹಿಸುವುದು ಸರಿಯೇ ಎಂಬ ಪ್ರಶ್ನೆಗೆ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಜತೆಗೆ ಪರೀಕ್ಷೆ ನಡೆಸುವ ವಿವಿ ಎಚ್ಚರಿಕೆ ವಹಿಸುವುದು ಸೂಕ್ತ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸಿದ ನಾರ್ಟನ್ ಸಿಮೆಟ್ರಿ ಕಂಪನಿ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು.
ಬೇರೆ ವಿವಿ, ಸಂಸ್ಥೆಗೂ ಬೇಕು ಎಚ್ಚರ: ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳು, ಸರಕಾರಿ ಇಲಾಖೆಗಳು, ಸಂಸ್ಥೆಗಳ ವೆಬ್‌ಸೈಟ್‌ಗಳು ಹೀಗೆ ಕಳ್ಳರ ಪಾಲಾಗಿರುವ ಸಾಧ್ಯತೆಯೇ ಹೆಚ್ಚು. ಅದರಲ್ಲೂ ಪ್ರಮುಖ ಇಲಾಖೆಗಳ ಮೂಲಕ್ಕೆ ಸಾಫ್ಟ್‌ವೇರ್ ಕಳ್ಳರು ಕೈ ಹಾಕಿದರೆ ಆಗುವ ಅನಾಹುತ ಅಪಾರ. ಇದನ್ನು ತಪ್ಪಿಸಲು ಆಗಾಗ ಭದ್ರತೆಯನ್ನು ಪರಿಶೀಲಿಸುವುದು ಸೂಕ್ತ ಎಂಬುದು ತಂತ್ರಜ್ಞರ ಸಲಹೆ.

ಆಹಾರ ಇಲಾಖೆ ಆದೇಶ ತಂದ ತಾಪತ್ರಯ

ಪಿ.ಓಂಕಾರ್ ಮೈಸೂರು
ಬಿಪಿಎಲ್ ಕಾರ್ಡ್ ಹೊಂದಿದ ಹಲವು ಪಡಿತರ ಫಲಾನುಭವಿಗಳಿಗೆ ಹಬ್ಬಕ್ಕೆ ಮುನ್ನ ‘ವಿದ್ಯುತ್ ಬಿಲ್’ ಶಾಕ್. ಗೌರಿ-ಗಣೇಶನ ಹಬ್ಬಕ್ಕೆ ಅಕ್ಕಿ,ಸಕ್ಕರೆ,ಸೀಮೆ ಎಣ್ಣೆ ಸಿಕ್ಕುತ್ತದೆಯೊ, ಇಲ್ಲವೊ ಎನ್ನುವ ಆತಂಕ.
ಪಡಿತರಕ್ಕೂ ವಿದ್ಯುತ್‌ಗೂ ಎತ್ತಣಿಂದೆತ್ತ ಸಂಬಂಧ ಎಂಬ ಪ್ರಶ್ನೆಯೇ.ಅದು ಸಹಜವೆ. ಆದರೆ,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಗಸ್ಟ್ ಮಾಸಾಂತ್ಯದಲ್ಲಿ ಹೊರಡಿಸಿರುವ ಆದೇಶ ಹಲವು ಪಡಿತರದಾರರಿಗೆ ಅಕ್ಷರಶಃ ‘ಶಾಕ್’ಹೊಡೆಸುತ್ತಿದೆ.
ಏನಿದು ಆದೇಶ: ‘ನಗರ ಪಾಲಿಕೆ,ಪುರಸಭೆ,ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂತ್ಯೋದಯ, ಅಕ್ಷಯ ಹಾಗೂ ಎಪಿಎಲ್ ಕಾರ್ಡುದಾರರು ಸೆಪ್ಟೆಂಬರ್‌ನ ಪಡಿತರ ಪಡೆಯುವಾಗ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಚಿಲ್ಲರೆ ಸೀಮೆ ಎಣ್ಣೆ ವಿತರಕರಿಗೆ ಹಿಂದಿನ ಯಾವುದಾದರೂ ೧ ತಿಂಗಳ ವಿದ್ಯುತ್ ಬಿಲ್ ಅಥವಾ ಬಿಲ್‌ನ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ನೀಡಬೇಕು’ ಎಂದು ಇಲಾಖೆ ಆಯುಕ್ತರು ಆ.೩೧ರಂದು ಹೊರಡಿಸಿದ್ದಾರೆ.
ಸಮಸ್ಯೆ ಏನು: ವಿದ್ಯುತ್ ಸಂಪರ್ಕ ಹೊಂದಿದವರಿಗೆ ಆದೇಶದಿಂದ ಸಮಸ್ಯೆಯೇನಿಲ್ಲ. ಬಿಲ್ ಪ್ರತಿಯನ್ನು ನೀಡಿ ಪಡಿತರ ಖರೀದಿಸುತ್ತಿದ್ದಾರೆ. ಆದರೆ, ವಿದ್ಯುತ್ ಸಂಪರ್ಕ ಇಲ್ಲದ, ಇದ್ದರೂ ತಮ್ಮ ಹೆಸರಿನಲ್ಲಿ ವಿದ್ಯುತ್ ಮೀಟರ್ ಹೊಂದಿರದ ಬಡವರು,ಅತಿ ಬಡವರು  ಆತಂಕಕ್ಕೊಳಗಾಗಿದ್ದಾರೆ.
‘ನಮ್ಮನೆಯಲ್ಲಿ ಕರೆಂಟೇ ಇಲ್ಲ, ಬಿಲ್ ಕಟ್ಟೋದು ಎಲ್ಲಿಂದ? ಬಿಲ್ ಕೊಡದೆ ಅಕ್ಕಿ,ಸಕ್ಕರೆ ಕೊಡಲ್ಲ ಅಂತಾರೆ. ವೋಟಿನ ಗುರುತು ಚೀಟಿ ನೀಡ್ತೀನಿ ಎಂದರೂ ಕೊಡಲ್ಲ ಎಂದರು. ಹಬ್ಬ ದಲ್ಲೇ ಹೀಗೆ ಮಾಡಿದರೆ ಹೇಗೆ’ ಎನ್ನುವುದು ಬಿಪಿಎಲ್ ಫಲಾನುಭವಿಯೊಬ್ಬರ ಪ್ರಶ್ನೆ. ಒಬ್ಬರದ್ದಷ್ಟೇ ಅಲ್ಲ,ಇಂಥದೇ ನೂರಾರು ದೂರುಗಳನ್ನು ಇಲಾಖೆ ಅಧಿಕಾರಿಗಳೇ ಎದುರಿಸುತ್ತಿದ್ದಾರೆ.
ಉದ್ದೇಶವೇನು: ‘ಕೆಲವರು ಎರಡು,ಮೂರು ಕಾರ್ಡ್ ಹೊಂದಿದ್ದು, ಪಡಿತರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸುಳ್ಳು ವಿಳಾಸ ನೀಡಿ ಕಾರ್ಡ್ ಪಡೆದವರ ಸಂಖ್ಯೆಯೂ ದೊಡ್ಡದಿದೆ. ವಿಳಾಸ ಪತ್ತೆ ಹಚ್ಚಿ ದುರುಪಯೋಗ ತಪ್ಪಿಸುವುದು ಆದೇಶದ ಉದ್ದೇಶ ’ ಎನ್ನುವುದು ಅಧಿಕಾರಿಗಳ ಸಮಜಾಯಿಷಿ.
ಉದ್ದೇಶವೇನೋ  ಒಳ್ಳೆಯದೇ. ಆದರೆ, ಆಯ್ದುಕೊಂಡ ‘ವಿಧಾನ ’ ದಡ್ಡತನದ್ದು ಎನ್ನುವುದು ಈಗಿನ ವಿದ್ಯಮಾನದಿಂದ ವೇದ್ಯ. ನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ವಾಸಿಸುವ ಎಲ್ಲರೂ ವಿದ್ಯುತ್ ಸಂಪರ್ಕ ಪಡೆದಿರುತ್ತಾರೆ ಎಂದು ಉನ್ನತಾಧಿಕಾರಿಗಳು ತಪ್ಪಾಗಿ ಭಾವಿಸಿದಂತಿದೆ.
ಕರೆಂಟಿಲ್ಲದವರು: ಪುರಸಭೆ,ಪಟ್ಟಣ ಪಂಚಾಯಿತಿಯಷ್ಟೇ ಅಲ್ಲ,ವಿದ್ಯುತ್ ದೀಪ ‘ಬೆಳಗದ’ ಅದೆಷ್ಟೋ ಕೊಳಚೆ ಪ್ರದೇಶದ ಮನೆಗಳು ಮಹಾನಗರದಲ್ಲೇ ಇವೆ. ದೀಪ ಇದ್ದರೂ ತಮ್ಮ ಹೆಸರಿನಲ್ಲಿ ಮೀಟರ್ ಹೊಂದದ ‘ವಠಾರ ’ ನಿವಾಸಿ ಕುಟುಂಬ ಗಳ ಸಂಖ್ಯೆಯೂ ದೊಡ್ಡದಿದೆ. ಅವರೆಲ್ಲ ‘ಎಲ್ಲಿಂದ ಬಿಲ್ ತಂದು ನೀಡುತ್ತಾರೆ ’ಎನ್ನುವ ಪ್ರಶ್ನೆಗೆ ಅಧಿಕಾರಿಗಳ ಬಳಿಯೇ ಉತ್ತರವಿಲ್ಲ.ಹಲವೆಡೆಯಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈಗ  ‘ಪ್ಲೇಟ್’ ಬದಲಾಯಿಸುತ್ತಿದ್ದಾರೆ. ಇಷ್ಟರಲ್ಲೇ ಬೇರೊಂದು ಆದೇಶ ಬರುತ್ತೆ ಎಂದೂ ಹೇಳುತ್ತಾರೆ. ಅಷ್ಟರಲ್ಲಿ ಹಬ್ಬ ಮುಗಿದಿರುತ್ತೆ ಎನ್ನುವುದು ಫಲಾನುಭವಿಗಳ ಆತಂಕ.
ಸೂಕ್ತ ಕ್ರಮದ ಭರವಸೆ: ‘ವಿದ್ಯುತ್ ಬಿಲ್ ನೀಡುವುದು ಕಡ್ಡಾಯ ಎಂದು ಆದೇಶಿಸಲಾಗಿದೆಯಷ್ಟೆ. ಪಡಿತರ ನೀಡಬಾರದು ಎಂದು ಎಲ್ಲಿಯೂ ಹೇಳಿಲ್ಲ.ನ್ಯಾಯಬೆಲೆ ಅಂಗಡಿಯವರು ಹಾಗೇ ನಾದರೂ ಮಾಡುತ್ತಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ’ ಎನ್ನುತ್ತಾರೆ  ಇಲಾಖೆ ಮೈಸೂರು ಸಹಾಯಕ ನಿರ್ದೇಶಕ (ಉಪ ನಿರ್ದೇಶಕ ಪ್ರಭಾರ)ಮಂಜುನಾಥ್. ಆದರೆ,‘ಇಲಾಖೆ ಆದೇಶದಂತೆ ಕರೆಂಟ್ ಬಿಲ್ ನೀಡುವವರೆಗೆ ಪಡಿತರ ನೀಡಲ್ಲ’ ಎಂಬುದು ಹಲವು ನ್ಯಾಯಬೆಲೆ ಅಂಗಡಿ ಮಾಲೀಕರ ಪಟ್ಟು. ಆದೇಶವನ್ನು ತಮ್ಮ ‘ಲಾಭ’ಕ್ಕೆ ಆದಷ್ಟು ಬಳಸಿಕೊಳ್ಳುವ ಹುನ್ನಾರ ಅವರದ್ದು.
ವಿದ್ಯುತ್ ಬಿಲ್ ಹೊಂದಿರದ ನೂರಾರು ಬಡವರಿಗೆ ‘ಶಾಕ್’ ನೀಡುತ್ತಿರುವ ಆದೇಶವನ್ನು ಕೂಡಲೇ ಪರಿಷ್ಕರಿಸಿ, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಕ್ತ ನಿರ್ದೇಶನ  ನೀಡದಿದ್ದರೆ,‘ಹಬ್ಬಕ್ಕೆ ಹೆಚ್ಚುವರಿ ಪಡಿತರ’ ಎಂಬ ಇಲಾಖೆಯ ಇನ್ನೊಂದು ಭರವಸೆ ಅರ್ಥ ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.

ಮಿಮ್ಸ್‌ನ ನೇಮಕ, ಬಡ್ತಿಯಲ್ಲೂ ಅಕ್ರಮ

ವಿಕ ಸುದ್ದಿಲೋಕ ಮಂಡ್ಯ
ಹಾಸನ ಮತ್ತು ಮೈಸೂರು ವೈದ್ಯ ಕಾಲೇಜುಗಳ ಅಕ್ರಮ ನೇಮಕ ಬಯಲಾಗಿ ಬೋಧಕೇತರ ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ. ಅದರ ಬೆನ್ನಲ್ಲೇ ಮಂಡ್ಯದ ಮಿಮ್ಸ್ ಕೂಡಾ ಅಕ್ರಮ ನೇಮಕಗಳ ಆಗರದ ಆರೋಪಕ್ಕೆ ಗುರಿಯಾಗಿದೆ.
ಇವೆರಡು ಕಾಲೇಜುಗಳಲ್ಲಿ ಬೋಧಕೇತರ ಸಿಬ್ಬಂದಿ ನೇಮಕ ವಷ್ಟೇ ಅಕ್ರಮ. ಆದರೆ, ಇಲ್ಲಿ ನಿರ್ದೇಶಕರ ಸಹಿತ ಬೋಧಕ, ಬೋಧಕೇತರ ಸಿಬ್ಬಂದಿಯ ನೇಮಕ, ಬಡ್ತಿ ಎಲ್ಲದರಲ್ಲೂ ಗೋಲ್‌ಮಾಲ್ ಆಗಿದೆ ಎನ್ನಲಾಗಿದೆ. ಸ್ವತಃ ವೈದ್ಯ ಶಿಕ್ಷಣ ಸಚಿವ ಹಾಗೂ ಗೌರ‍್ನಿಂಗ್ ಕೌನ್ಸಿಲ್ ಅಧ್ಯಕ್ಷ ರಾಮಚಂದ್ರಗೌಡರೇ ಎರಡು ವರ್ಷ ಜಿಲ್ಲೆಯ ಉಸ್ತುವಾರಿ ವಹಿಸಿದ್ದರು. ಹಾಗಾಗಿ ಅಕ್ರಮಗಳು ಅವರ ಮೂಗಿನಡಿಯೇ ನಡೆದಿದೆ ಎನ್ನಲಾಗಿದೆ. ಮಿತಿ ಮೀರಿದ ಗುಂಪು ಗಾರಿಕೆ, ಜಾತಿ ಸಂಘರ್ಷ ಮತ್ತು ಅವ್ಯವಸ್ಥೆಗಳಿಂದ ನಲುಗಿದ್ದ ಮಿಮ್ಸ್‌ನಲ್ಲಿ ಅಕ್ರಮ ನೇಮಕದ ಬಗ್ಗೆ ಈಗಾಗಲೇ ಲೋಕಾಯುಕ್ತ ತನಿಖೆ ನಡೆದಿದೆ. ಆ ವರದಿ ಮೇಲಿನ್ನೂ ಯಾವುದೇ ಕ್ರಮ ಜಾರಿ ಗೊಳಿಸದೆ ತಪ್ಪಿತಸ್ಥರನ್ನು ರಕ್ಷಿಸುವ ಸಂಚು ನಡೆದಿದೆ.
ಕಾಯಂ ನಿರ್ದೇಶಕರಿಲ್ಲ: ಮಿಮ್ಸ್‌ಗೆ ಈಗ ಐದು ವರ್ಷ. ಭಾರತೀಯ ವೈದ್ಯ ಮಂಡಳಿಯಿಂದ ೩ ಬಾರಿ ಕಾಡಿಬೇಡಿ ಅನುಮತಿ ಪಡೆದ ಮಿಮ್ಸ್‌ನಲ್ಲಿ ಈ ವರೆಗೆ ಐವರು ನಿರ್ದೇಶಕರು ಬದಲಾಗಿದ್ದಾರೆ. ೨೦೦೫-೦೬ರಲ್ಲಿ ಬಂದ ಮೊದಲ ನಿರ್ದೇಶಕ ಡಾ.ಚಂದ್ರಶೇಖರ್ ಕಾಲೇಜು ಪ್ರಾರಂಭಕ್ಕೆ ಮುನ್ನವೇ ಜಾಗ ಖಾಲಿ ಮಾಡಿದರು. ಬಳಿಕ ಡಾ.ಚಿದಾನಂದ ಮತ್ತು ಡಾ.ಶಿವಕುಮಾರ್ ವೀರಯ್ಯ ಒಂದಷ್ಟು ನೇಮಕ ನಡೆಸಿ, ಎತ್ತಂಗಡಿಯಾದರು. ನಾಲ್ಕನೆಯವರಾಗಿ ಬಂದ ಡಾ.ರಾಜೀವ್‌ಶೆಟ್ಟಿ ರಜೆ ಹಾಕುತ್ತಲೇ ಕಾಲ ಕಳೆದರು. ಇವರ ನಿರ್ಗಮನ ಬೆನ್ನಲ್ಲೇ ಡಾ.ಪುಷ್ಪಾ ಸರ್ಕಾರ್ ಪ್ರಭಾರಿಯಾಗಿ ನಿರ್ದೇಶಕರಾದರು.
ವೈದ್ಯ ಕಾಲೇಜು ನಿರ್ದೇಶಕ ಹುದ್ದೆಗೆ ೧೦ ವರ್ಷ ಆಡಳಿತಾತ್ಮಕ ಅನುಭವ, ೫ ವರ್ಷ ಪ್ರಾಧ್ಯಾಪಕರಾಗಿ ಸೇವೆ ಕಡ್ಡಾಯ. ಆ ಅರ್ಹತೆ ಪುಷ್ಪಾ ಸರ್ಕಾರ್‌ಗೆ ಇಲ್ಲ. ನಿರ್ದೇಶಕರ ನೇಮಕಕ್ಕೆ ಇನ್ನೂ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಹುದ್ದೆ ಖಾಲಿ ಇದೆ ಎನ್ನುವ ಕಾರಣಕ್ಕೆ ಅರ್ಹತೆ ಪರಿಗಣಿಸದೇ ಪುಷ್ಪಾ ಸರ್ಕಾರ್‌ಗೆ ಹುದ್ದೆ ನೀಡಲಾಗಿದೆ ಎನ್ನುವ ಅಂಶವನ್ನು ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯೇ ಮಾಹಿತಿ ಹಕ್ಕು ಅರ್ಜಿಯೊಂದಕ್ಕೆ ನೀಡಿರುವ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೇ ಮುಖ್ಯ ಆಡಳಿತಾಧಿಕಾರಿ ಎತ್ತಂಗಡಿಯಾದರು.
ಡಾ.ಪುಷ್ಪಾ ಸರ್ಕಾರ್ ಅವರಿಗೆ ನಿಗದಿಪಡಿಸಿದ ಅನುಭವ, ಅರ್ಹತೆ ಇಲ್ಲದ ಕಾರಣವನ್ನು ಎಂಸಿಐ ತನ್ನ ವರದಿಯಲ್ಲಿ ನಮೂದಿಸಿ ಸಂಸ್ಥೆಗೆ ಈ ಅನುಮತಿ ನಿರಾಕರಿಸಿತ್ತು. ಪೂರ್ಣಾವಧಿ ನಿರ್ದೇಶಕರನ್ನು ನೇಮಿಸುವುದಾಗಿ ಎಂಸಿಐಗೆ ಅಫಿಡವಿಟ್ ಸಲ್ಲಿಸಿದ್ದ ಸರಕಾರವು ಈವರೆಗೆ ನೇಮಕಕ್ಕೆ ಮುಂದಾಗಿಲ್ಲ.
ಅಕ್ರಮಗಳು:  ಕೆಲ ವೈದ್ಯರು ಮತ್ತು ಸಿಬ್ಬಂದಿಯ ನೇಮಕ, ಬಡ್ತಿ ತೀರ್ಮಾನಗಳು ಬೇಕಾಬಿಟ್ಟಿಯಾಗಿ ನಡೆದಿವೆ. ಬೋಗಸ್ ದಾಖಲೆ ಸಲ್ಲಿಸಿ ಕೆಲಸಕ್ಕೆ ಸೇರಿದ್ದ ವೈದ್ಯ ದಂಪತಿಯ ಬಣ್ಣ ಬಯಲಾ ಗಿದ್ದು, ಕ್ರಿಮಿನಲ್ ಮೊಕದ್ದಮೆ ಹೂಡಲು ಲೋಕಾಯುಕ್ತ ಸೂಚಿಸಿದೆ. ಈ ಮಧ್ಯೆ ಆ ದಂಪತಿ ವೃತ್ತಿಗೆ ಟಾಟಾ ಹೇಳಿ ರಾಜಕೀಯಕ್ಕೆ ಧುಮುಕಿದ್ದಾರೆ. ಈ ರಾಜೀನಾಮೆ ವಿಷಯದಲ್ಲಿ ಗೌರ‍್ನಿಂಗ್ ಕೌನ್ಸಿಲ್ ತೀರ್ಮಾನ ಏನೂ ಇಲ್ಲ. ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ.
ವೈಯಕ್ತಿಕ ಕಾರಣದ ನೆಪವೊಡ್ಡಿ ಸಹಾಯಕ ಪ್ರಾಧ್ಯಾಪಕರೊ ಬ್ಬರು ಬೆಳಗ್ಗೆ ರಾಜೀನಾಮೆ ನೀಡಿದ್ದರು. ಮಧ್ಯಾಹ್ನ ಅಂಗೀಕರಿಸಿ, ಸಂಜೆ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಮರು ದಿನ ಅವರನ್ನು ಸಹ ಪ್ರಾಧ್ಯಾಪಕರಾಗಿ ನೇಮಿಸಲಾಗಿದೆ.
ನಿಯಮಾವಳಿಯಂತೆ ರಾಜೀನಾಮೆ ಅಂಗೀಕಾರಕ್ಕೆ ೩೦ ದಿನ ಕಾಲಾವಕಾಶ ನೀಡಬೇಕು. ಅಂಗೀಕಾರ ಮತ್ತು ಬಿಡುಗಡೆ ತೀರ್ಮಾನ ಗೌರ‍್ನಿಂಗ್ ಕೌನ್ಸಿಲ್‌ನಲ್ಲೇ ಆಗಬೇಕು. ಆದರೆ, ಈ ಪ್ರಕರಣದಲ್ಲಿ ಎಲ್ಲಾ ತೀರ್ಮಾನಗಳು ನಿರ್ದೇಶಕರ ಹಂತದಲ್ಲೇ ನಡೆದಿವೆ.
ಇಬ್ಬರು ವೈದ್ಯರನ್ನು ಸೇವೆಯಿಂದ ಅಮಾನತುಪಡಿಸಿ ೭ ತಿಂಗಳು ಕಳೆದಿದೆ. ಅವರಿಗೆ ಮಾಸಿಕ ಶೇಕಡ ೭೫ರಷ್ಟು ವೇತನವನ್ನು ಪಾವತಿಸ ಲಾಗುತ್ತಿದೆ. ವಿಚಾರಣೆ ನಡೆಸಿ, ಪ್ರಕರಣ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಇನ್ನೂ ಕ್ರಮ ಜರುಗಿಸಿಲ್ಲ.
ನೇಮಕ ಅಕ್ರಮ: ರಾಷ್ಟ್ರಪತಿ ಆಳ್ವಿಕೆಯಿದ್ದಾಗ ೨೦೦೮ರಲ್ಲಿ ೧೦೦ ಶುಶ್ರೂಷಕಿಯರನ್ನು ನೇಮಿಸಿಕೊಳ್ಳಲಾಗಿತ್ತು. ಅದರಲ್ಲಿ ಭಾರಿ ಅಕ್ರಮ ಎಸಗಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ನೇಮಕ ಪ್ರಕ್ರಿಯೆ ಯಲ್ಲಿ ಅರ್ಜಿ ನಮೂನೆಗಳ ವಿತರಣೆ ಮತ್ತು ಸಲ್ಲಿಸುವಿಕೆಯಿಂದಲೇ ಲಂಚಾವತಾರ ಕಾಲೂರಿತ್ತು. ಮೌಖಿಕ ಸಂದರ್ಶನ ದಲ್ಲಿ ಗೋಲ್‌ಮಾಲ್ ನಡೆದಿದೆ. ಈ ನೇಮಕಕ್ಕೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅನುಮೋದನೆ ಸಿಕ್ಕಿರುವುದು ಮತ್ತೊಂದು ವಿಶೇಷ.
ಸಚಿವರ ಕರಾಮತ್ತು: ಎರಡು ತಿಂಗಳ ಹಿಂದಷ್ಟೇ ಪ್ರಭಾರ ನಿರ್ದೇಶಕರು ಜಿಲ್ಲಾಸ್ಪತ್ರೆಯ  ೮ ಮಂದಿ ವೈದ್ಯರನ್ನು ಸೇವೆಯಿಂದ ಬಿಡುಗಡೆ ಮಾಡಿದ್ದರು. ಆಗ ಅವರೆಲ್ಲರೂ ಕೆಎಟಿ ಮೊರೆ ಹೋಗಿದ್ದರು. ಮಿಮ್ಸ್‌ನಿಂದ ಬಿಡುಗಡೆಗೊಂಡು ಮಾತೃ ಇಲಾಖೆಗೆ ತೆರಳುವಂತೆ ಕೆಎಟಿ ಸೂಚಿಸಿತ್ತು. ೮ ವೈದ್ಯರ ಪೈಕಿ ಒಂದಿಬ್ಬರು ಪ್ರಭಾವಿಗಳಿದ್ದರು. ಅವರ ಬೆನ್ನಿಗೆ ಜಿಲ್ಲೆಯ ಬಹುತೇಕ ಶಾಸಕರು, ಸಂಸದರು ನಿಂತರು. ಶಿಫಾರಸಿಗೆ ಮಣಿದ ವೈದ್ಯ ಶಿಕ್ಷಣ ಸಚಿವರು ಸಾರಾಸಗಟು ಎಂಟೂ ಮಂದಿಯನ್ನೂ ವಾಪಸ್ ಮಿಮ್ಸ್‌ಗೆ ಮರಳುವಂತೆ ಕರಾಮತ್ತು ಪ್ರದರ್ಶಿಸಿದ್ದಾರೆ.
ಒಂದು ದಿನದ ವೈದ್ಯರು: ಮಿಮ್ಸ್ ಮತ್ತು ಜಿಲ್ಲಾಸ್ಪತ್ರೆಯಲ್ಲಿ ರೇಡಿಯಾಲಜಿ ವಿಭಾಗದ ವೈದ್ಯರೇ ಇಲ್ಲ. ಹಾಗಾಗಿ ಸಿಟಿ ಸ್ಕ್ಯಾನಿಂಗ್ ಸಹಿತ ಇತರೆ ಸೌಲಭ್ಯ ಅಲಭ್ಯ. ಮಂಡ್ಯಕ್ಕೆ ಬರಲು ಬೆಂಗಳೂರು ವೈದ್ಯ ಕಾಲೇಜಿನ ರೇಡಿಯಾಲಜಿ ವಿಭಾಗದ ಮುಖ್ಯಸ್ಥರೊಬ್ಬರು ಕೋರಿಕೆ ಸಲ್ಲಿಸಿದ್ದರೂ ಗೌರ‍್ನಿಂಗ್ ಕೌನ್ಸಿಲ್ ಪರಿಗಣಿಸಿಲ್ಲ. ಎಂಸಿಐ ತಂಡ ಪರಿಶೀಲನೆಗೆಂದು ಬಂದಾಗ ಖಾಲಿ ಇರುವ ಹುದ್ದೆಗಳಿಗೆ ಹೊರಗಿನ ಅರ್ಹ ವೈದ್ಯರನ್ನು ಒಂದು-ಎರಡು ದಿನದ ಮಟ್ಟಿಗಷ್ಟೇ ಸಂಭಾವನೆ ಕೊಟ್ಟು ಕರೆಸಿಕೊಳ್ಳಲಾಗುತ್ತದೆ. ಸಮಿತಿ ನಿರ್ಗಮಿಸಿದ ಮರು ಕ್ಷಣವೇ ಅವರೆಲ್ಲಾ ಮಂಡ್ಯವನ್ನು ಖಾಲಿ ಮಾಡುತ್ತಾರೆ. 

೨೦ ತಿಂಗಳಲ್ಲಿ ವಂಚನೆ ೫೯ ಪ್ರಕರಣ, ಪತ್ತೆಯಾಗಿದ್ದು ಒಂದೇ !

ಕುಂದೂರು ಉಮೇಶಭಟ್ಟ ಮೈಸೂರು
ಪೊಲೀಸರ ಹೆಸರಿನಲ್ಲಿ ಚಿನ್ನಾಭರಣ ದೋಚುತ್ತಿರುವ ಯುವಪಡಿಛಿ ಮೈಸೂರಿ ನಲ್ಲೀಗ ಸಕ್ರಿಯ, ೨೦ರ ಆಸು ಪಾಸಿನ ಯುವಕರ ಗ್ಯಾಂಗ್‌ಗೆ ೬೦ರಿಂದ ೭೦ ವರ್ಷದೊಳಗಿನ ವೃದ್ಧೆ ಯರೇ ಟಾರ್ಗೆಟ್...
ನಾವು ಪೊಲೀಸರೆಂದು ಹೇಳಿಕೊಂಡು ಬರುವ ಕಳ್ಳರು ಮಹಿಳೆಯರನ್ನು ಚಿನ್ನಾಭರಣ ದೋಚಿ ವಂಚಿಸುತ್ತಿರುವ ಪ್ರಕರಣ ಮೈಸೂರಿನಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಕಳೆದ ಒಂದೂವರೆ ವರ್ಷದಲ್ಲಿ ನಿವೃತ್ತಿಗರ ಸ್ವರ್ಗದಲ್ಲಿ ದಾಖಲಾದ ಇಂಥ ಪ್ರಕರಣಗಳ ಸಂಖ್ಯೆ ೫೯. ಇಷ್ಟಾದರೂ ಪೊಲೀಸರಿಗೆ ಸಿಕ್ಕಿ ಬಿದ್ದ ಪ್ರಕರಣ ಕೇವಲ ೧. ಒಂದು ಕಡೆ ಸರಗಳ್ಳತನ ತಲೆನೋವು ಇದ್ದೇ ಇದೆ. ಈಗ ಹೊಸ ರೀತಿಯಲ್ಲಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿರುವುದು ಮೈಸೂರು ಪೊಲೀಸರಿಗೆ ಇಂಥ ವಂಚನೆ ದೊಡ್ಡ ತಲೆನೋವು.
ಚಾಣಾಕ್ಷ ಕಳ್ಳರು: ಮೈಸೂರಿನಲ್ಲಿ ಸರಗಳ್ಳತನಕ್ಕೆ ಎರಡು ದಶಕದ ಇತಿಹಾಸ. ಮೈಸೂರಿನಲ್ಲಿ ಸರಗಳ್ಳತನದ ಪ್ರಕರಣಗಳ ಸಂಖ್ಯೆ ಸಾವಿರ ದಾಟಿ ಹೋಗಿದೆ. ಸರಗಳ್ಳತನ ಆಗಾಗ ನಡೆಯುತ್ತಲೇ ಇರುತ್ತದೆ.
ಸರಗಳ್ಳತನಕ್ಕೆ ಇಳಿದರೆ ಎಚ್ಚರಿಕೆ ಮುಖ್ಯ, ಅದರಿಂದ ಸಿಗುವ ಚಿನ್ನಾಭರಣದ ಪ್ರಮಾಣವೂ ಕಡಿಮೆ. ಇದಕ್ಕಾಗಿ ೨೦ರಿಂದ ೨೫ ವರ್ಷಗೊಳಗಿನ ವೃತ್ತಿಪರ ಗ್ಯಾಂಗ್ ಆರಿಸಿಕೊಂಡ ದಾರಿ ಮಹಿಳೆಯರ ವಂಚನೆ. ರಸ್ತೆಯಲ್ಲಿ ನಡೆದು ಹೋಗುವ ವೃದ್ಧೆಯರ ಗಮನ ಬೇರೆಡೆ ಸೆಳೆದು ಭಯ ಹುಟ್ಟುವ ಮೂಲಕ ಚಿನ್ನಾಭರಣ ದೋಚುವುದು. ಪೇಪರ್ ಇಲ್ಲವೇ ಬಟ್ಟೆಯಲ್ಲಿ ಚಿನ್ನಾಭರಣ  ಹಾಕಿಸಿಕೊಂಡು ಬಳಿಕ ಅದರಲ್ಲಿ ಕಲ್ಲು ಇಲ್ಲವೇ ರೋಲ್ಡ್‌ಗೋಲ್ಡ್ ಹಾಕಿಕೊಡುವ ವಂಚನೆಯಿದು. ಕನಿಷ್ಟ ೨೦ ಗ್ರಾಮ್‌ನಿಂದ ೧೫೦ ಗ್ರಾಮ್‌ವರೆಗಿನ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ೨೦೧೦ರ ಎಂಟು ತಿಂಗಳಲ್ಲೇ ಈ ಪ್ರಕರಣಗಳ ಸಂಖ್ಯೆ ೩೫. ತಿಂಗಳಿಗೆ  ಸರಾಸರಿ ೪. ಚಾಣಾಕ್ಷತದಿಂದಲೇ ಈ ಮಾರ್ಗವನ್ನು ಕಳ್ಳರು ಕಂಡುಕೊಂಡಿದ್ದಾರೆ. ಅದೂ ಒಂದೇ ದಿನ ಎರಡು ಇಲ್ಲವೇ ಮೂರು ಕಡೆ ಚಿನ್ನಾಭರಣ ದೋಚಿ ಆತಂಕವನ್ನು ಹುಟ್ಟಿಸಿದ್ದಾರೆ.
ಪೊಲೀಸರಲ್ಲಿ ಇಲ್ಲ: ಪೊಲೀಸರ ಹೆಸರು ಬಳಸಿಕೊಂಡು ಕಳ್ಳತನದ ಮಾರ್ಗವನ್ನು ಕಳ್ಳರು ಕಂಡುಕೊಂಡರೂ ಪೊಲೀಸ ರಿಗೆ ಮಾತ್ರ ಅವರನ್ನು ಹಿಡಿಯುವ ಚಾಣಾಕ್ಷತೆ ಕಾಣುತ್ತಿಲ್ಲ.
ಒಮ್ಮೆ ಯಾವ ಗ್ಯಾಂಗ್ ಇಂಥ ಕೃತ್ಯ ಮಾಡುತ್ತಿರಬಹುದು ಎಂದು ಕಳ್ಳರ ಜಾಡು ಹಿಡಿಯುವ ಹೊತ್ತಿಗೆ ಮತ್ತೊಂದು ಮಾರ್ಗವನ್ನು ಅವರು ಕಂಡುಕೊಳ್ಳುತ್ತಿದ್ದಾರೆ. ಪೊಲೀಸರೂ ಗಂಭೀರವಾಗಿ ಸ್ವೀಕರಿಸದೇ ಇರುವುದರಿಂದ ಮಹಿಳೆಯರು ಮಾತ್ರ ವಂಚನೆಗೆ ಒಳಗಾಗುತ್ತಲೇ ಇದ್ದಾರೆ.
ಪೊಲೀಸರು ನಾವು ಎಂದು ಹೇಳಿಕೊಳ್ಳುವವರು ಯಾವಾಗಲೂ ಚಿನ್ನಾಭರಣ ಬಿಚ್ಚಿಕೊಡಿ ಎಂದು ಹೇಳುವುದಿಲ್ಲ. ಹಾಗೆ ಹೇಳಿದರೆ ಅವರು ಪೊಲೀಸರೇ ಅಲ್ಲ. ಮಹಿಳೆಯರೇ ಎಚ್ಚರ ವಹಿಸಬೇಕಷ್ಠೆ ಎನ್ನುವ ಜಾಗೃತಿ ಮೂಡಿಸುವುದರಲ್ಲಿ ಪೊಲೀಸರು ನಿರತರಾಗಿದ್ದಾರೆ.

ಓ ಗುರುವೇ, ನೀನು ಗೆಳೆಯನಾಗು ಕಲಿಕೆಗೆ ಸಹಕರಿಸು !

ಚೀ. ಜ. ರಾಜೀವ ಮೈಸೂರು
ಮೊದಲಿದ್ದ  ಪದವಿ ತರಗತಿಗಳನ್ನು ಈಗ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮ ತರಗತಿಗಳ ಸ್ವರೂಪವೇ ಬದಲಾಗಿದೆ. ಅಲ್ಲಿಗೆ ಬರುವ ವಿದ್ಯಾರ್ಥಿಗಳು, ಅವರ ಸಾಮಾಜಿಕ ಹಿನ್ನೆಲೆ-ಮುನ್ನೆಲೆ, ತಿಳಿವಳಿಕೆ-ಗ್ರಹಿಕೆಯ ಪ್ರಮಾಣ... ಹೀಗೆ ಎಲ್ಲವೂ ಬದಲಾಗಿದೆ.  ಹಾಗಾಗಿ ಪಾಠ ಮಾಡುವ ಅಧ್ಯಾಪಕ ಬದಲಾಗಲೇಬೇಕು !
ನಿವೃತ್ತ ಪ್ರಾಧ್ಯಾಪಕ, ಚಿಂತಕ  ಡಾ. ಕೆ. ವಿ. ನಾರಾಯಣ್  ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕನ್ನಡ ಅಧ್ಯಾಪಕರ ಕಾರ್ಯಾ ಗಾರದಲ್ಲಿ  ಇಂಥದ್ದೊಂದು ಅರ್ಥ ಬರುವ ಮಾತನಾಡಿದ್ದರು.
ಬಿಎಂಶ್ರೀ- ಕುವೆಂಪು, ತ. ಸು. ಶಾಮರಾಯ- ಜಿಎಸ್‌ಎಸ್, ಕುವೆಂಪು -ಪ್ರಭುಶಂಕರ್,  ಪ್ರೊ. ಎಸ್. ವಿ. ರಂಗಣ್ಣ- ಸಿ. ಡಿ. ನರಸಿಂಹಯ್ಯ, ಜಿ. ಎಚ್. ನಾಯಕ್-ಎನ್.ಎಸ್.ತಾರಾನಾಥ್, ಡಾ. ದೇಜಗೌ- ಡಾ. ಸಿಪಿಕೆ  ಅವರಂಥ ಗುರು-ಶಿಷ್ಯ ಪರಂಪರೆಯನ್ನು ಭವಿಷ್ಯದ ದಿನದಲ್ಲಿ ಕಾಣುವುದು ಕಷ್ಟ.  ಈ ಜೋಡಿಯನ್ನು ಸೂಕ್ಷ್ಮವಾಗಿ ನೋಡಿ. ಎಲ್ಲರೂ ಬರಹಗಾರರೆ. ನಮ್ಮ ಕಾಲೇಜುಗಳು ಬಹುಕಾಲದವರೆಗೆ ಹೊತ್ತು ಮೆರೆಸಿದ್ದು  ಇಂಥ ಪ್ರತಿಭೆಗಳನ್ನೇ. ಆದರೆ, ಈಗ  ಬರೆಯುವವನಷ್ಟೇ ಪ್ರತಿಭಾನ್ವಿತನಲ್ಲ,  ಕುಂಚ ಹಿಡಿಯುವವನು, ಕುಸ್ತಿ ಮಾಡುವವನು, ಕಂಸಾಳೆ ಬಾರಿಸುವವನು, ಕೊಳಲು ನುಡಿಸುವವನು,  
ಕಬಡ್ಡಿ ಆಡುವವನು... ಹೀಗೆ  ಎಲ್ಲರೂ ಪ್ರತಿಭಾನ್ವಿತರೆ. ಹಾಗಾಗಿ ತರಗತಿಗಳು ವೈವಿಧ್ಯಮಯಗೊಂಡಿವೆ. ವಿದ್ಯಾರ್ಥಿ ಕಲಿತರಷ್ಟೇ ಸಾಲದು, ಕೌಶಲ್ಯವನ್ನೂ ಮೈಗೂಡಿಸಿಕೊಂಡಿರಬೇಕು ಎಂಬುದು ಆಧುನಿಕ ಸಮಾಜದ  ಅಪೇಕ್ಷೆ .  ಮಾಹಿತಿ ತಂತ್ರಜ್ಞಾನದ  ಪರಿಣಾಮದಿಂದಲೂ ತರಗತಿಗಳು ಮಾರ್ಪಾಟಾಗಿವೆ. ಯಾವುದೇ ವಿಷಯವನ್ನು ಪರಾಮರ್ಶೆ ಮಾಡಲು ವಿದ್ಯಾರ್ಥಿ ಈಗ  ಗ್ರಂಥಾಲಯಕ್ಕೆ ಹೋಗಬೇಕೆಂದಿಲ್ಲ. ಕಂಪ್ಯೂಟರ್‌ನ ಗೂಗಲ್ ಆ ಪಾತ್ರವನ್ನು ನಿರ್ವಹಿಸುತ್ತಿದೆ. ಕಪ್ಪು ಹಲಗೆ- ಸೀಮೆಸುಣ್ಣ  ಜಾಗದಲ್ಲಿ  ಬಿಳಿ ಹಲಗೆ- ಹಸಿರು ಮಾರ್ಕರ್,  ನೋಟ್ಸ್ ಬದಲು ಸಿಡಿ ಬಂದು ಕುಳಿತಿವೆ. 
ಇಂಥ ಹೊತ್ತಲ್ಲಿ,  ಗುರು  ಹೇಗಿರಬೇಕು ?. ಇದು  ನೈಜ ಅಧ್ಯಾಪಕರ ಮುಂದಿರುವ ಸವಾಲು. ಬಹುದೊಡ್ಡ  ಗುರು-ಶಿಷ್ಯ ಪರಂಪರೆಯನ್ನು ಹೊಂದಿರುವ  ಇತಿಹಾಸವಿರುವ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ತಮ್ಮ ಕನಸಿನ  ೨೧ನೇ ಶತಮಾನದ ಗುರುವನ್ನು ವಿದ್ಯಾರ್ಥಿ ವಿಶೇಷದಲ್ಲಿ ಕಡೆದಿದ್ದಾರೆ.  ಅವರ ಕನಸಿನಲ್ಲಿ  ವಾಸ್ತವದ ಶಿಕ್ಷಕರೂ ಇದ್ದಾರೆ, ಅವರ ಗುಣ-ಅವಗುಣಗಳೂ ವ್ಯಕ್ತಗೊಂಡಿವೆ. ಮಹಾರಾಜ ಕಾಲೇಜಿನ ವರ್ತಮಾನದ ಸ್ಥಿತಿ-ಗತಿಯ ಮೇಲೂ ಪ್ರತಿಕ್ರಿಯೆಗಳು ಬೆಳಕು ಚೆಲ್ಲಿವೆ !

ಗಜಪಯಣಕ್ಕೆ ಸಂಭ್ರಮದ ಚಾಲನೆ

ಹನಗೋಡು ನಟರಾಜ್ ಹುಣಸೂರು
ನಾಡಹಬ್ಬದ ಚಟುವಟಿಕೆಗಳಿಗೆ ಚಾಲನೆ ನೀಡುವ ಗಜಪಯಣ -೨೦೧೦ಕ್ಕೆ ಶುಕ್ರವಾರ ಅದ್ದೂರಿ ಚಾಲನೆ..
ಮಳೆಯಿಂದಾಗಿ ಹಸಿರು ಹೊದ್ದ ಭೂರಮೆಯ ಸ್ವರ್ಗ ವಾಗಿರುವ ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಸೇರಿದ ವೀರನಹೊಸಳ್ಳಿಯಲ್ಲಿ ಬಲರಾಮ ನೇತೃತ್ವದ ಗಜಪಡೆ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿದವು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಅವರು ಇತರೆ ಜನಪ್ರತಿನಿಧಿಗಳು, ಅಧಿಕಾರಿ ಸಮೂಹ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಉತ್ಸಾಹದ ನಡುವೆ ಗಜಪಡೆಗೆ ಪುಷ್ಪ ಎರಚಿ ಪಯಣಕ್ಕೆ ಶುಭ ಕೋರಿದರು.
ಗಜಪಯಣದ ನಾಯಕ ಬಲರಾಮ ರಾಜಗಾಂಭೀರ್ಯ ದಿಂದ ಹೊರ ನಡೆದಾಗ ಅಕ್ಕಪಕ್ಕದಲ್ಲಿ ಸಾಥ್ ನೀಡಿದ್ದು ಸರಳ, ವರಲಕ್ಷ್ಮಿ. ಜತೆಗೆ ಅಭಿಮನ್ಯು, ಅರ್ಜುನ ಹಾಗೂ ಗಜೇಂದ್ರನೂ ಗಜಪಯಣಕ್ಕೆ ಮೆರಗು ನೀಡಿದವು. ಒಂದಿನಿತು ಅಳುಕು ಆತಂಕವಿಲ್ಲದೇ  ಎಂದಿನಂತೆ ಶಾಂತವದನನಾಗಿಯೇ ಬಲರಾಮ ತನ್ನ ೧೨ನೇ ಜಂಬೂಸವಾರಿಗಾಗಿ ಮೈಸೂರಿನತ್ತ ಹೆಜ್ಜೆ ಹಾಕಿದ. ಅಲ್ಲಿಂದ ಲಾರಿ ಮೂಲಕ ಆರು ಆನೆಗಳು  ಸಂಜೆಯೇ ಮೈಸೂರು ತಲುಪಿ ಅರಣ್ಯ ಭವನದಲ್ಲಿ ಆಶ್ರಯ ಪಡೆದವು.
ನಾಡಿನ ಉತ್ಸವವಾಗಲಿ: ಗಜಪಯಣಕ್ಕೆ ಮೊದಲ ಬಾರಿ ಚಾಲನೆ ನೀಡಿದ ಸಚಿವ ಸುರೇಶ್‌ಕುಮಾರ್, ದಸರೆ ನಾಡಹಬ್ಬ ವಾಗಲಿ ಎಂದು ಆಶಿಸಿದರು. ಗಜಪಯಣಕ್ಕೆ ಹಿನ್ನೆಲೆ ಇದೆ. ಪ್ರಪಂಚದಲ್ಲೆ ಪ್ರಸಿದ್ಧಿಯಾದ ದಸರಾ ಉತ್ಸವದಲ್ಲಿ ಭಾಗವಹಿ ಸುವ ಗಜಗಳಿಗೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವಿದೆ. ಎಲ್ಲರ ಸಹಕಾರದಿಂದ ದಸರೆ ನಾಡಿನ ಉತ್ಸವವಾಗಬೇಕು. ದಸರಾದಿಂದ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಇದು ನಮ್ಮ ನಾಡಿನ ಹೆಗ್ಗಳಿಕೆಯಾಗಿದೆ. ಎಲ್ಲ ಸಿದ್ಧತೆಗಳು ಭರದಿಂದ ನಡೆದಿದ್ದು , ಇದು ನಾಡಿನ ಉತ್ಸವವೆಂದು ತಿಳಿದು ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಸಾಂಸ್ಕೃತಿಕ ಮೆರುಗು: ಕಳೆದ ಬಾರಿಯಷ್ಟು ಅದ್ಧೂರಿ ಕಾರ‍್ಯಕ್ರಮ ವಿಲ್ಲದಿದ್ದರೂ ನಿಗದಿತ ಸಮಯ ಬೆಳಗ್ಗೆ ೧೦ಕ್ಕೆ ಆರಂಭಗೊಂಡು ೧೧-೩೦ಕ್ಕೆ ಮುಕ್ತಾಯಗೊಂಡಿತು.
ಗಜಪಯಣ ಸಮಾರಂಭದಲ್ಲಿ ಗಿರಿಜನರ ಕೋಲಾಟ, ಮೈಲಾಂಬೂರಿನ ವೀರ ಕುಣಿತ, ವಾದ್ಯ ವೃಂದ, ನಂದಿಕಂಬ, ಹುಣಸೂರಿನ ಬಾಲಕರ ಸರಕಾರಿ ಶಾಲೆ ಮಕ್ಕಳ ಬ್ಯಾಂಡ್‌ಸೆಟ್, ನಾಗಾಪುರ ಹಾಡಿ ಆಶ್ರಯ ಶಾಲೆ, ಟೆಬೆಟ್ ಹಾಗೂ ಮೊರಾರ್ಜಿ ಶಾಲೆ ಮಕ್ಕಳ ಆಕರ್ಷಕ ನೃತ್ಯ ಕಾರ‍್ಯಕ್ರಮಗಳು ಸಮಾರಂಭಕ್ಕೆ ಮೆರುಗು ನೀಡಿದವು. ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಹಾಡಿ ಮತ್ತು ಗ್ರಾಮಗಳಿಂದ ಎರಡು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಶಿಕ್ಷಕ ಮಹೇಶ್ ನೇತೃತ್ವದ ತಂಡ ನಾಡಗೀತೆ, ರೈತಗೀತೆ ಹಾಡಿದರು.

ಬ್ರಹ್ಮಗಿರಿ ವನ್ಯಜೀವಿ ಅರಣ್ಯದೊಳಗೆ ಮರಗಳ್ಳತನ ದಂಧೆ

ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಡಿಕೇರಿ
ಅತ್ಯಮೂಲ್ಯ ವನ್ಯಸಂಪತ್ತು ಹೊಂದಿರುವ ಬ್ರಹ್ಮಗಿರಿ ವನ್ಯಜೀವಿ ಅರಣ್ಯ ಪ್ರದೇಶದೊಳಗಿರುವ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮರಗಳ್ಳ ಹನನ ರಾಜಾರೋಷವಾಗಿ ನಡೆದಿದೆ. ಕುಟ್ಟದ ಪ್ರಭಾವಿ ಮರ ವ್ಯಾಪಾರಿಯೊಬ್ಬರು ವ್ಯವಸ್ಥಿತ ಮತ್ತು ಸುರಕ್ಷಿತವಾಗಿ ನಡೆಯುತ್ತಿರುವ ಮರಗಳ್ಳ ತನದ ಪ್ರಮುಖ ರೂವಾರಿ.
ಅರಣ್ಯದೊಳಗೆ ಹೇರಳವಾಗಿರುವ ದೇವದಾರ್, ಬೀಟೆ, ನಂದಿ, ಹೆಬ್ಬಲಸು, ಹೊನ್ನೆ ಮರಗಳು ಒಂದೊಂದಾಗಿ ಮರಗಳ್ಳರಿಗೆ ಬಲಿ ಯಾಗುತ್ತಿದೆ. ಅರಣ್ಯ ಸಂರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆ ಜವಾಬ್ದಾರಿ ಮರೆತಿದೆ. ಅಕ್ರಮ ಸಾಗಣೆ ಮೇಲೆ ಕ್ರಮಕೈಗೊಳ್ಳದ ಪೊಲೀಸ್ ಇಲಾಖೆಯೂ ಇದರಲ್ಲಿ ಶಾಮೀಲಾಗಿದೆ.
ಅಕ್ರಮ ರಸ್ತೆ ನಿರ್ಮಾಣ: ಅರಣ್ಯ ಪ್ರದೇಶಕ್ಕೆ ಒತ್ತಿಕೊಂಡಿರುವ ಕಾಫಿ ತೋಟವೊಂದಕ್ಕೆ ಹೋಗುವ ನೆಪದಲ್ಲಿ ವನ್ಯಜೀವಿ ಅರಣ್ಯ ಪ್ರದೇಶ ದೊಳಗೆ ಕಾನೂನುಬಾಹಿರವಾಗಿ ರಸ್ತೆ  ನಿರ್ಮಿಸ ಲಾಗಿದೆ. ಈ ರಸ್ತೆ ಮೂಲಕ ಮರಗಳನ್ನು ಕಡಿದು, ಸಾಗಣೆ ಮಾಡಲಾಗುತ್ತಿದೆ.
ಅರಣ್ಯಾಧಿಕಾರಿಗಳಿಗೆ ಮರಗಳ್ಳತನದ ಬಗ್ಗೆ ಖಚಿತ ಮಾಹಿತಿಯನ್ನು ಸ್ಥಳೀಯರು ನೀಡಿದ್ದರೂ, ಅವರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದ ಅರಣ್ಯಾಧಿಕಾರಿಗಳೂ ಸಹ ಶಾಮೀಲಾಗಿ  ‘ಪಾಲು’ ಪಡೆದುಕೊಳ್ಳುತ್ತಿರುವ ಅನುಮಾನ ಇದೆ ಎನ್ನುತ್ತಾರೆ.
ಮರ ಹನನ ನಿರಂತರ: ಹಲವು ದಶಕಗಳಿಂದ ಮರಗಳ್ಳತನದಲ್ಲಿ  ತೊಡಗಿರುವ ದಕ್ಷಿಣ ಕೊಡಗಿನ ಜನತೆಗೆ ಚಿರಪರಿಚಿತ ಮರ ವ್ಯಾಪಾರಿ ಇದರ ಹಿಂದೆ ಇದ್ದಾರೆ. ಅರಣ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಬುಟ್ಟಿಗೆ ಹಾಕಿ ಕೊಂಡು ಅಕ್ರಮ ದಂಧೆ ಮುಂದುವರಿಸಿದ್ದಾರೆ.
ಬ್ರಹ್ಮಗಿರಿ ವನ್ಯಜೀವಿ ವಿಭಾಗದ ಶ್ರೀಮಂಗಲ ವಲಯ ವ್ಯಾಪ್ತಿಯ ಮಂಚಳ್ಳಿ ಗ್ರಾಮದ ಸಮೀಪ ದಲ್ಲಿಯೇ ಮರಗಳ ಮಾರಣ ಹೋಮ ನಡೆದಿರುವುದನ್ನು ವೈಲ್ಡ್ ಲೈಫ್ ಫಸ್ಟ್ ಸಂಘಟನೆ ಯವರು ಪೊಲೀಸ್ ಅರಣ್ಯ ಸಂಚಾರಿದಳದ ಗಮನಕ್ಕೆ ತಂದು, ಮುಟ್ಟುಗೋಲು ಹಾಕಿಕೊಳ್ಳು ವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಬೀಟೆ ವಶ: ಪೊಲೀಸ್ ಅರಣ್ಯ ಸಂಚಾರಿದಳದ  ಸಬ್‌ಇನ್ಸ್‌ಪೆಕ್ಟರ್ ಕೆ.ಪಿ. ಹರಿಶ್ಚಂದ್ರ ನೇತೃತ್ವದಲ್ಲಿ ಗುರುವಾರ ನಡೆದ ಕಾರ್ಯಾಚರಣೆಯಲ್ಲಿ  ೫ ಲಕ್ಷ ರೂ. ಮೌಲ್ಯದ ಬೀಟೆ ಮರದ ೭ ನಾಟಾ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, ಎರಡು ಬೃಹತ್ ಬೀಟೆ ಮರಗಳನ್ನು ಕಡಿದು ಸಾಗಣೆ ಮಾಡಿರುವುದಕ್ಕೆ ಮರದ ಗುತ್ತಿ ಸಾಕ್ಷಿ ಯಾಗಿದೆ. ಈ ಪ್ರಕರಣದ ತನಿಖೆಯನ್ನು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ನಾಯಕ್‌ಗೆ (ವನ್ಯಜೀವಿ ವಿಭಾಗ)  ವಹಿಸಲಾಗಿದೆ.
೨೦೦೩ರಲ್ಲಿ ಬ್ರಹ್ಮಗಿರಿ ವನ್ಯಜೀವಿ ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ನಡೆಯುತ್ತಿದ್ದ ಮರಗಳ್ಳತನದ ಬಗ್ಗೆ ಬಂದ ದೂರಿನ ಅನ್ವಯ ಲೋಕಾಯುಕ್ತ ತಂಡ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿತ್ತು. ಈ ಸಂದರ್ಭದಲ್ಲಿ ೧೪ ಮರಗಳನ್ನು ಕಡಿದಿರುವುದಕ್ಕೆ ಸಾಕ್ಷಿ ಲಭ್ಯವಾಗಿತ್ತು.
ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಲೋಕಾಯುಕ್ತ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದಲೇ ಮರದ ಮೌಲ್ಯ ವಸೂಲಿ ಮಾಡುವುದಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆ ಮುಂದುವರಿದಿದೆ.
೨೦೦೩ರಲ್ಲಿ ಲೋಕಾಯುಕ್ತ ದಾಳಿ ನಡೆಸುವ ವೇಳೆಯಲ್ಲಿ ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ ಆಗಿದ್ದ ಮೋಟಪ್ಪ  ಪ್ರಸ್ತುತ ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಆಗಿ ಒಂದು ತಿಂಗಳ ಹಿಂದೆ ಯಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ವನ್ಯಜೀವಿ ಅರಣ್ಯ ಪ್ರದೇಶದ ಸಂರಕ್ಷಣೆಯಲ್ಲಿ ಇವರೆಷ್ಟು ಕಾರ‍್ಯೋನ್ಮುಖರಾಗುತ್ತಾರೆ ಎಂಬ ಕುತೂಹಲ ಇದೆ.
ಅರಣ್ಯದೊಳಗೆ ಮರಗಳನ್ನು ನಾಟಾಗಳಾಗಿ ಪರಿವರ್ತಿಸಿ ಸಾಗಣೆ ಮಾಡಲಾಗುತ್ತಿದೆ. ಈ ಮರಗಳನ್ನು ಕುಟ್ಟದಲ್ಲಿ ಅರಣ್ಯ- ಪೊಲೀಸ್ ತಪಾಸಣಾ ಗೇಟ್‌ಗಳಲ್ಲಿನ ತಪಾಸಣೆ ಕಣ್ತಪ್ಪಿಸಿ ಕೇರಳಕ್ಕೆ ಸಾಗಣೆ ಮಾಡುವುದು ಸುಲಭದ ಮಾತಲ್ಲ. ಗೇಟ್‌ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ‘ಮಾಮೂಲಿ’ ನೀಡು ವುದರ ಮೂಲಕ ಮರಗಳನ್ನು ಕೇರಳದತ್ತ ಸುರಕ್ಷಿತವಾಗಿ ಸಾಗಿಸಲಾಗುತ್ತಿದೆ.
ವನ್ಯಜೀವಿ ವಿಭಾಗದ ಉನ್ನತಾಧಿಕಾರಿಗಳು ಬ್ರಹ್ಮಗಿರಿ ಅರಣ್ಯ ಪ್ರದೇಶದೊಳಗೆ ನಡೆಯುತ್ತಿರುವ ಅಕ್ರಮ ಮರಗಳ್ಳತನ ದಂಧೆಗೆ ಕಡಿವಾಣ ಹಾಕಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ. ಪ್ರಸ್ತುತ ನಡೆದಿರುವ ಮರಗಳ್ಳತನ ದಂಧೆಯಲ್ಲಿ ಶಾಮೀಲಾಗಿರುವವರ ಪತ್ತೆಗೆ ತಂಡ ರಚಿಸುವ ಅಗತ್ಯ ಇದೆ.

ಸಂಚಾರಿ ಪೊಲೀಸರಿಗೆ ‘ವ್ಹೀಲ್ ಲಾಕ್’ ತಂದ ಫಜೀತಿ

ವಿಕ ಸುದ್ದಿಲೋಕ ಮೈಸೂರು
ಪೊಲೀಸರು ಚಾಪೆ ಕೆಳಗೆ ನುಸುಳಿದರೆ, ವಾಹನ ಚಾಲಕರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ.
ಅಡ್ಡಾದಿಡ್ಡಿ ವಾಹನ ನಿಲ್ಲಿಸುವವರಿಗೆ ಪಾಠ ಕಲಿಸಲು ಮುಂದಾಗಿರುವ ಪೊಲೀಸರಿಗೆ ಈಗ ಹೊಸ ತಲೆನೋವು ಶುರುವಾಗಿದೆ.
ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳ ಚಕ್ರಕ್ಕೆ ಹಾಕುತ್ತಿರುವ ‘ಲಾಕ್’ ವ್ಯವಸ್ಥೆಯನ್ನೇ ಭೇದಿಸುತ್ತಿರುವ ಚಾಲಕರು, ಲಾಕ್ ಸಮೇತ ಪರಾರಿಯಾಗುತ್ತಿದ್ದಾರೆ.
ಇಂಥ ಪ್ರಕರಣ ದಿನೇದಿನೆ ಹೆಚ್ಚುತ್ತಿದ್ದು, ಒಂದು ತಿಂಗಳ ಅಂತರದಲ್ಲಿ ನಿಯಮ ಉಲ್ಲಂಘಿಸಿದ ವಾಹನಗಳಿಗೆ ಹಾಕಿದ್ದ ನಾಲ್ಕು ‘ವೀಲ್‌ಲಾಕ್’ ನಾಪತ್ತೆಯಾಗಿವೆ.
ಹೀಗಾಗಿ ಕಳುವಾಗಿರುವ ತಮ್ಮ ಲಾಕ್ ಪತ್ತೆ ಮಾಡಿಕೊಡಿ ಎಂದು ಪೊಲೀಸರೇ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ನೀತಿಪಾಠ ಹೇಳಲು ಮುಂದಾಗುವ ಸಂಚಾರಿ ಪೊಲೀಸರು, ಕಾರಿಗೆ ತಾವು ಹಾಕಿದ ಲಾಕ್ ಕಳುವಾಗದಂತೆ ‘ಡ್ಯೂಟಿ’ ಮಾಡಬೇಕಿದೆ.
ನಡೆಯುವುದಿಷ್ಟು: ಮೈಸೂರಿನಲ್ಲಿ ಹೆಚ್ಚುತ್ತಿರುವ ನಾಲ್ಕು ಚಕ್ರ ವಾಹನ ಸವಾರರ ಆಟಾಟೋಪಕ್ಕೆ ಬ್ರೇಕ್ ಹಾಕಲು ನಗರ ಪೊಲೀಸರು ವಿನೂತನ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಬೇಕಾಬಿಟ್ಟಿಯಾಗಿ ನಿಲ್ಲುತ್ತಿದ್ದ ದ್ವಿಚಕ್ರ ವಾಹನಗಳನ್ನು ಎತ್ತುಕೊಂಡು ಹೋಗಲು ‘ಟೈಗರ್’ ವಾಹನ ಇದೆ. ನಾಲ್ಕು ಚಕ್ರ ವಾಹನಗಳ ನಿಯಂತ್ರಣಕ್ಕೆ ಇದೇ ಟೈಗರ್ ಬಳಸಿಕೊಂಡಾಗ, ವಾಹನಗಳು ಹಾನಿಗೊಂಡಿವೆ ಎಂಬ ನೆಪದಲ್ಲಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರು. ನಂತರ ‘ವೀಲ್ ಲಾಕ್’ ವ್ಯವಸ್ಥೆಗೆ ಮೊರೆ ಹೋದರು.
ನಗರದ ಯಾವುದೇ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲುವ ನಾಲ್ಕು ಮತ್ತು ಮೂರು ಚಕ್ರ ವಾಹನಕ್ಕೆ, ಸಂಚಾರ ಪೊಲೀಸರು ಲಾಕ್ ಹಾಕುತ್ತಿದ್ದರು. ಜತೆಗೆ ವಾಹನದ ಮೇಲೆ  ‘ಸಂಚಾರ ನಿಯಮ ಉಲ್ಲಂಘನೆಗಾಗಿ ವೀಲ್ ಲಾಕ್ ಮಾಡುತ್ತಿದ್ದರು. ೨೦೦ ರೂ. ದಂಡ ಪಾವತಿಸಿದರೆ ಇದನ್ನು ತೆಗೆಯಲಾಗುವುದು ಎಂಬ ವಾಹನದ ಬಳಿ ಚೀಟಿ ಅಂಟಿಸಿ ಸಂಪರ್ಕಿಸಬೇಕಾದ ಪೊಲೀಸ್ ಠಾಣೆ ವಿಳಾಸ, ನಂಬರ್ ನಮೂದಿಸುತ್ತಿದ್ದರು. ಇಂಥ ವ್ಯಕ್ತಿಗಳು ಸಂಬಂಧ ಪಟ್ಟ ಠಾಣೆಗೆ ತೆರಳಿ ದಂಡ ತೆತ್ತರೆ, ಬಳಿಕ ವಾಹನ ಬಿಡುಗಡೆ ಮಾಡುವುದು ವಾಡಿಕೆ.
ಆದರೆ ಸಂಚಾರ ನಿಯಮ ಉಲ್ಲಂಘಿಸಿದ ನಾಲ್ಕು ಚಕ್ರ ಅಥವಾ ಮೂರು ಚಕ್ರ ವಾಹನ ಚಾಲಕರು, ಪೊಲೀಸರನ್ನು ಸಂಪರ್ಕಿಸುವ ಗೋಜಿಗೆ ಹೋಗದೆ ಲಾಕ್ ಹಾಕಿರುವ ಚಕ್ರವನ್ನು ಬಿಚ್ಚಿ ಬೇರೊಂದು ಚಕ್ರ (ಸ್ಟೆಪ್ನಿ) ಅಳವಡಿಸಿಕೊಂಡು ಹೋಗುತ್ತಿರುವುದು ನಡೆಯುತ್ತಿದೆ.
ಬೀಟ್ ಮುಗಿಸಿ ಬರುವ ಪೊಲೀಸರು ತಾವು ಲಾಕ್ ಮಾಡಿದ್ದ ವಾಹನವೂ ಇಲ್ಲ, ಜತೆಗೆ ಅದಕ್ಕೆ ಹಾಕಿದ್ದ ಲಾಕ್ ಕೂಡ ಇಲ್ಲದಿರುವುದನ್ನು ಕಂಡು ಆಶ್ಚರ್ಯಗೊಳ್ಳುತ್ತಿದ್ದಾರೆ. ತಮಗೆ ನೀಡಿದ್ದ ೨ ಸಾವಿರ ರೂ. ಬೆಲೆ ಬಾಳುವ ಲಾಕ್ ನಾಪತ್ತೆ ಯಾಗುವ  ಜತೆಗೆ ಮೇಲಿನ ಆಧಿಕಾರಿಗಳಿಂದ ಬೈಗುಳ ತಿನ್ನಬೇಕಾದ ಪರಿಸ್ಥಿತಿ ಸಂಚಾರಿ ಪೊಲೀಸರದ್ದು.
ಲಾಕ್ ನಾಪತ್ತೆಯಾದ ಪ್ರಕರಣಗಳು: ಆಶೋಕ ರಸ್ತೆಯ ಕನ್ನಿಕಾಪರಮೇಶ್ವರಿ ದೇವಸ್ಥಾನದ ಬಳಿ ಆಟೋರಿಕ್ಷಾ (ಕೆಎಲ್ ೧೦-೮೦೧೨) ಸಂಚಾರಿ ನಿಯಮ ಉಲ್ಲಂಘಿಸಿ ನಿಲ್ಲಿಸಲಾಗಿತ್ತು. ಕರ್ತವ್ಯ ದಲ್ಲಿದ್ದ ಎಎಸ್‌ಐ ಮಹಾದೇವಯ್ಯ ಅವರು ಆಟೋರಿಕ್ಷಾಕ್ಕೆ ವೀಲ್‌ಲಾಕ್ ಮಾಡಿ, ತೆರಳಿದರು. ಆದರೆ, ಮರಳಿ ಬರುವ ವೇಳೆಗೆ ಚಾಲಕ, ಲಾಕ್ ಮಾಡಿದ್ದ ಚಕ್ರ ಬಿಚ್ಚಿ, ಸ್ಟೆಪ್ನಿ ಹಾಕಿಕೊಂಡು ಪರಾರಿಯಾಗಿದ್ದ. ನಗರ ಪೊಲೀಸರು ನೀಡಿರುವ ಸಂಖ್ಯೆ ನರಸಿಂಹ ವಿಭಾಗ ೩೩೮೫ ಇದ್ದು, ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಪೊಲೀಸರು ಆಟೋ ಹುಡುಕಾಟದಲ್ಲಿದ್ದಾರೆ.
ಇದೇ ರೀತಿ ಕೆ.ಟಿ.ಸ್ಟ್ರೀಟ್‌ನಲ್ಲಿ ಲಾಕ್ ಹಾಕಿದ್ದ ಆಟೋರಿಕ್ಷಾ ನಾಪತ್ತೆಯಾಗಿತ್ತು. ಮೊದಲೇ ಬರೆದಿಟ್ಟುಕೊಂಡಿದ್ದ ನಂಬರ್ ಸಹಾಯದಿಂದ ಪತ್ತೆ ನಡೆಸಿದಾಗ ಅದು ಮೇಲುಕೋಟೆ ಚಲುವರಾಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ್ದೆಂದು ತಿಳಿಯಿತು. ವಿನೋಬಾ ರಸ್ತೆಯ ಶಾಂತಲಾ ಬಾರ್ ಬಳಿ ನಿಯಮ ಉಲ್ಲಂಘಿಸಿದ್ದ ಕಾರ್ ಚಾಲಕ, ಚಕ್ರ ಬದಲಿಸಿ ಪರಾರಿಯಾಗಿದ್ದ. ತನಿಖೆ ನಡೆಸಿದಾಗ ಆತ ಬೆಂಗಳೂರಿನ ಬನ್ನೇರುಘಟ್ಟದ ಬಳಿ ಸಿಕ್ಕಿ ಬಿದ್ದಿದ್ದ.
ಈಗ ಇವರು ಸರಕಾರಿ ಆಸ್ತಿ ಕಳವು ಆರೋಪದ ಮೇಲೆ ಪ್ರಕರಣ ಎದುರಿಸುತ್ತಿದ್ದು, ನ್ಯಾಯಾಲಯಕ್ಕೆ ಅಲೆಯುವಂತಾಗಿದೆ.

ನನೆಗುದಿಯಲ್ಲಿ ಮ.ಬೆಟ್ಟಕ್ಕೆ ಕಾವೇರಿ ನೀರು ಯೋಜನೆ

ವಿಕ ಸುದ್ದಿಲೋಕ ಚಾಮರಾಜನಗರ
ಮಲೈ ಮಹಾದೇಶ್ವರಬೆಟ್ಟಕ್ಕೆ ಕಾವೇರಿ ಕುಡಿಯುವ ನೀರು ಕಲ್ಪಿಸುವ ಯೋಜನೆ ಕಾಮಗಾರಿ ಟೆಂಡರ್ ಪ್ರಕ್ರಿಯೆಯನ್ನು   ಅಧಿಕಾರಿಗಳು ವಿನಾಕಾರಣ ಮುಂದೂ ಡುತ್ತಿದ್ದಾರೆ ಎಂದು ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರ            ಭದ್ರಸ್ವಾಮಿ ಆಪಾದಿಸಿದ್ದಾರೆ.
ಮಾದಪ್ಪನ ಸನ್ನಿಧಿಯಲ್ಲಿ ಕುಡಿಯುವ  ನೀರಿಗೆ ಬರ ಬಂದಿದೆ. ಇಂಥ ಸ್ಥಿತಿಯಲ್ಲಿ ತುರ್ತಾಗಿ ಕಾವೇರಿ ನೀರು ಪೂರೈಸುವ ಕೆಲಸವಾಗಬೇಕು. ಆದರೆ, ಅಧಿಕಾರಿಗಳಿಗೆ ಈ ಬಗ್ಗೆ ಕಾಳಜಿ ಇಲ್ಲ. ಕಾಮಗಾರಿ ನಡೆಸಲು ಸರಕಾರ ಹಾಗೂ ಕೇಂದ್ರ ಪರಿಸರ ಇಲಾಖೆಯಿಂದಲೂ ಅನುಮತಿ ದೊರೆತ್ತಿದ್ದರೂ ಟೆಂಡರ್ ಪ್ರಕ್ರಿಯೆ ಮುಂದೂಡುವ ಮೂಲಕ ಅಧಿಕಾರಿ ಗಳು ತಾತ್ಸಾರ  ಮಾಡುತ್ತಿದ್ದಾರೆ  ಎಂದು  ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ  ವೇಳೆಯಲ್ಲಿ  ಪಾಲಾರ್ ಸೇತುವೆಯಿಂದ ಸುಮಾರು ೩೦ ಕಿ.ಮೀ. ಅಂತರದಿಂದ ಬೆಟ್ಟಕ್ಕೆ ನೀರೊದಗಿಸುವ ಯೋಜನೆಗೆ  ಚಿಂತಿಸಲಾಯಿತು. ಆದರೆ, ಆಗ ಅದಕ್ಕೆ ಅರಣ್ಯ ಇಲಾಖೆ ತಕರಾರು ಅರ್ಜಿ ಸಲ್ಲಿಸಿತು. ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶದಲ್ಲಿ ಕೇಂದ್ರ ಪರಿಸರ ಉನ್ನತಾಧಿಕಾರ ಸಮಿತಿಯ ಅನುಮತಿ ಇಲ್ಲದೆ ಕಾಮಗಾರಿ ಕೈಗೊಳ್ಳುವಂತಿಲ್ಲ ಎಂದು ಯೋಜನೆ ಸ್ಥಗಿತಗೊಳಿಸಲಾಯಿತು ಎಂದು ಬೇಸರ ವ್ಯಕ್ತ ಪಡಿಸಿದರು.
ಹೋರಾಟದ ಫಲ: ನಂತರ ಈ ಕುರಿತು ಜಿಲ್ಲಾಭಿವೃದ್ಧಿ ಹೋರಾಟ ಸಮಿತಿಯು ಕೇಂದ್ರ ಸರಕಾರದ ಪರಿಸರ ಇಲಾಖೆ, ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವ ಹಾರ ನಡೆಸಿತು. ಬೆಟ್ಟಕ್ಕೆ ನೀರಿನ ಅಗತ್ಯ ವನ್ನು ಮನದಟ್ಟು ಮಾಡಿಕೊಡಲಾಯಿತು. ಅಲ್ಲದೆ,  ಈ ಭಾಗದ ಸಂಸದರು ಕೇಂದ್ರ ಸಚಿವರನ್ನು ಭೇಟಿ ಮಾಡಿ ನೀರಿನ ಯೋಜನೆ ಅನುಷ್ಠಾನದ ಬಗ್ಗೆ ಒತ್ತಡ ಹೇರಿದ್ದರು. ಇದೆಲ್ಲದರ ಫಲವಾಗಿ ರಾಜ್ಯ ಸರಕಾರ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಬೇಕು ಎಂದು  ಸುಪ್ರೀಂ ಕೋರ್ಟ್ ಮೊರೆ ಹೋಯಿತು.
ಆದರೆ, ಅಂದಿನ ತಮಿಳುನಾಡು ಮುಖ್ಯ ಮಂತ್ರಿ ಜಯಲಲಿತಾ ಇದಕ್ಕೂ ಕ್ಯಾತೆ ತೆಗೆದಿದ್ದರು. ಕಾವೇರಿ ನ್ಯಾಯಾಧೀಕರಣ ಇರುವಾಗ ನೀರಿನ ಯೋಜನೆ ಸರಿಯಲ್ಲ ಎಂದು ಕೊಕ್ಕೆ ಹಾಕಲು ಯತ್ನಿಸಿದರು. ಇದಕ್ಕೆ ಕೋರ್ಟ್ ಸೊಪ್ಪು ಹಾಕಲಿಲ್ಲ. ೨೦೦೭ರ ಏ. ೫ರಂದು ಕುಡಿಯುವ ನೀರಿಗೆ ಅನುಮತಿ ನೀಡಿತು.  ಇದಾದ ನಂತರ  ಕೇಂದ್ರ ಪರಿಸರ ಸಚಿವಾಲಯವೂ ೦.೩೦ ಹೆಕ್ಟೇರ್ ಭೂ ಪ್ರದೇಶವನ್ನು  ಯೋಜನೆಗಾಗಿ ಬಳಸಿಕೊಳ್ಳಲು ಅನುಮತಿ ನೀಡಿತು ಎಂದರು.
ಪ್ರತಿಭಟನೆ ಎಚ್ಚರಿಕೆ: ವಿನಾಕಾರಣ ಅಧಿಕಾರಿಗಳು ಟೆಂಡರ್ ತೆರೆಯುವುದನ್ನು ಮುಂದೂಡಿದ್ದಾರೆ. ಇದು ಸರಿಯಲ್ಲ. ಈ ನಿರ್ಲಕ್ಷ್ಯ ಧೋರಣೆ ಹೀಗೆ ಮುಂದುವರಿದರೆ  ಸೆ. ೪ರಂದು ಮಲೆ ಮಹಾದೇಶ್ವರಬೆಟ್ಟದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇನ್ನು ಜಿಲ್ಲೆಯಲ್ಲಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯನ್ನು  ಅಧಿಕಾರಿ, ಸಿಬ್ಬಂದಿ ಸಮೇತ ಗುಲ್ಬರ್ಗ ಜಿಲ್ಲೆಗೆ ವರ್ಗಾಯಿಸಿರುವುದು ಸರಿಯಲ್ಲ. ಜಿಲ್ಲೆಯ ಕೆಲವು  ಜಮೀನಿನನ್ನು ಸರಕಾರ ಭೂ ಸ್ವಾಧೀನ ಪಡಿಸಿಕೊಂಡಿದ್ದು,  ಪರಿ ಹಾರ ಬಾಕಿ ಉಳಿಸಿಕೊಂಡಿದೆ. ಹೀಗಿರುವಾಗ ಏಕಾಏಕಿ ಕಚೇರಿ ವರ್ಗಾಯಿಸಿದರೆ  ಆ ರೈತರು ಮೈಸೂರು ಕಚೇರಿಗೆ ಅಲೆಯ ಬೇಕಾಗುತ್ತದೆ. ಆದ್ದರಿಂದ ಎಲ್ಲ ಪ್ರಕರಣ ಇತ್ಯರ್ಥ ವಾಗುವವರೆಗೂ ಕಚೇರಿ ಯನ್ನು ಜಿಲ್ಲೆಯಲ್ಲೇ ಮುಂದುವರಿಸ ಬೇಕು ಎಂದು ಆಗ್ರಹಿಸಿದರು.  ಗೋಷ್ಠಿಯಲ್ಲಿ  ಗೋವಿಂದರಾಜು, ಬಿ.ಲಿಂಗಪ್ಪ  ಹಾಜರಿದ್ದರು.