ಓ ಗುರುವೇ, ನೀನು ಗೆಳೆಯನಾಗು ಕಲಿಕೆಗೆ ಸಹಕರಿಸು !

ಚೀ. ಜ. ರಾಜೀವ ಮೈಸೂರು
ಮೊದಲಿದ್ದ  ಪದವಿ ತರಗತಿಗಳನ್ನು ಈಗ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮ ತರಗತಿಗಳ ಸ್ವರೂಪವೇ ಬದಲಾಗಿದೆ. ಅಲ್ಲಿಗೆ ಬರುವ ವಿದ್ಯಾರ್ಥಿಗಳು, ಅವರ ಸಾಮಾಜಿಕ ಹಿನ್ನೆಲೆ-ಮುನ್ನೆಲೆ, ತಿಳಿವಳಿಕೆ-ಗ್ರಹಿಕೆಯ ಪ್ರಮಾಣ... ಹೀಗೆ ಎಲ್ಲವೂ ಬದಲಾಗಿದೆ.  ಹಾಗಾಗಿ ಪಾಠ ಮಾಡುವ ಅಧ್ಯಾಪಕ ಬದಲಾಗಲೇಬೇಕು !
ನಿವೃತ್ತ ಪ್ರಾಧ್ಯಾಪಕ, ಚಿಂತಕ  ಡಾ. ಕೆ. ವಿ. ನಾರಾಯಣ್  ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕನ್ನಡ ಅಧ್ಯಾಪಕರ ಕಾರ್ಯಾ ಗಾರದಲ್ಲಿ  ಇಂಥದ್ದೊಂದು ಅರ್ಥ ಬರುವ ಮಾತನಾಡಿದ್ದರು.
ಬಿಎಂಶ್ರೀ- ಕುವೆಂಪು, ತ. ಸು. ಶಾಮರಾಯ- ಜಿಎಸ್‌ಎಸ್, ಕುವೆಂಪು -ಪ್ರಭುಶಂಕರ್,  ಪ್ರೊ. ಎಸ್. ವಿ. ರಂಗಣ್ಣ- ಸಿ. ಡಿ. ನರಸಿಂಹಯ್ಯ, ಜಿ. ಎಚ್. ನಾಯಕ್-ಎನ್.ಎಸ್.ತಾರಾನಾಥ್, ಡಾ. ದೇಜಗೌ- ಡಾ. ಸಿಪಿಕೆ  ಅವರಂಥ ಗುರು-ಶಿಷ್ಯ ಪರಂಪರೆಯನ್ನು ಭವಿಷ್ಯದ ದಿನದಲ್ಲಿ ಕಾಣುವುದು ಕಷ್ಟ.  ಈ ಜೋಡಿಯನ್ನು ಸೂಕ್ಷ್ಮವಾಗಿ ನೋಡಿ. ಎಲ್ಲರೂ ಬರಹಗಾರರೆ. ನಮ್ಮ ಕಾಲೇಜುಗಳು ಬಹುಕಾಲದವರೆಗೆ ಹೊತ್ತು ಮೆರೆಸಿದ್ದು  ಇಂಥ ಪ್ರತಿಭೆಗಳನ್ನೇ. ಆದರೆ, ಈಗ  ಬರೆಯುವವನಷ್ಟೇ ಪ್ರತಿಭಾನ್ವಿತನಲ್ಲ,  ಕುಂಚ ಹಿಡಿಯುವವನು, ಕುಸ್ತಿ ಮಾಡುವವನು, ಕಂಸಾಳೆ ಬಾರಿಸುವವನು, ಕೊಳಲು ನುಡಿಸುವವನು,  
ಕಬಡ್ಡಿ ಆಡುವವನು... ಹೀಗೆ  ಎಲ್ಲರೂ ಪ್ರತಿಭಾನ್ವಿತರೆ. ಹಾಗಾಗಿ ತರಗತಿಗಳು ವೈವಿಧ್ಯಮಯಗೊಂಡಿವೆ. ವಿದ್ಯಾರ್ಥಿ ಕಲಿತರಷ್ಟೇ ಸಾಲದು, ಕೌಶಲ್ಯವನ್ನೂ ಮೈಗೂಡಿಸಿಕೊಂಡಿರಬೇಕು ಎಂಬುದು ಆಧುನಿಕ ಸಮಾಜದ  ಅಪೇಕ್ಷೆ .  ಮಾಹಿತಿ ತಂತ್ರಜ್ಞಾನದ  ಪರಿಣಾಮದಿಂದಲೂ ತರಗತಿಗಳು ಮಾರ್ಪಾಟಾಗಿವೆ. ಯಾವುದೇ ವಿಷಯವನ್ನು ಪರಾಮರ್ಶೆ ಮಾಡಲು ವಿದ್ಯಾರ್ಥಿ ಈಗ  ಗ್ರಂಥಾಲಯಕ್ಕೆ ಹೋಗಬೇಕೆಂದಿಲ್ಲ. ಕಂಪ್ಯೂಟರ್‌ನ ಗೂಗಲ್ ಆ ಪಾತ್ರವನ್ನು ನಿರ್ವಹಿಸುತ್ತಿದೆ. ಕಪ್ಪು ಹಲಗೆ- ಸೀಮೆಸುಣ್ಣ  ಜಾಗದಲ್ಲಿ  ಬಿಳಿ ಹಲಗೆ- ಹಸಿರು ಮಾರ್ಕರ್,  ನೋಟ್ಸ್ ಬದಲು ಸಿಡಿ ಬಂದು ಕುಳಿತಿವೆ. 
ಇಂಥ ಹೊತ್ತಲ್ಲಿ,  ಗುರು  ಹೇಗಿರಬೇಕು ?. ಇದು  ನೈಜ ಅಧ್ಯಾಪಕರ ಮುಂದಿರುವ ಸವಾಲು. ಬಹುದೊಡ್ಡ  ಗುರು-ಶಿಷ್ಯ ಪರಂಪರೆಯನ್ನು ಹೊಂದಿರುವ  ಇತಿಹಾಸವಿರುವ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ತಮ್ಮ ಕನಸಿನ  ೨೧ನೇ ಶತಮಾನದ ಗುರುವನ್ನು ವಿದ್ಯಾರ್ಥಿ ವಿಶೇಷದಲ್ಲಿ ಕಡೆದಿದ್ದಾರೆ.  ಅವರ ಕನಸಿನಲ್ಲಿ  ವಾಸ್ತವದ ಶಿಕ್ಷಕರೂ ಇದ್ದಾರೆ, ಅವರ ಗುಣ-ಅವಗುಣಗಳೂ ವ್ಯಕ್ತಗೊಂಡಿವೆ. ಮಹಾರಾಜ ಕಾಲೇಜಿನ ವರ್ತಮಾನದ ಸ್ಥಿತಿ-ಗತಿಯ ಮೇಲೂ ಪ್ರತಿಕ್ರಿಯೆಗಳು ಬೆಳಕು ಚೆಲ್ಲಿವೆ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ