ಶಾಲೆಗೆ ಚಕ್ಕರ್: ತಂಬಾಕು ಕೆಲಸಕ್ಕೆ ಹಾಜರ್ !

ಚೀ. ಜ. ರಾಜೀವ ಮೈಸೂರು
ತಂಬಾಕು ಬೆಳೆಯುವ ಜಿಲ್ಲೆಯ ಯಾವುದೇ ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗಳಿಗೆ ಈ ದಿನಗಳಲ್ಲಿ ಭೇಟಿ ನೀಡಿ !
ನಿಮಗೆ ತರಗತಿಯಲ್ಲಿ ಸಿಗೋರು ೧೫- ೨೦ ಮಕ್ಕಳಷ್ಟೇ. ಶಾಲೆಯ ಒಟ್ಟೂ ವಿದ್ಯಾರ್ಥಿಗಳ ಸಂಖ್ಯೆ ಇಷ್ಟೊಂದು ಕಡಿಮೆಯೇ ಎನ್ನಬೇಡಿ. ಹಾಜರಿ ಪುಸ್ತಕದಲ್ಲಿ ೩೦ರಿಂದ ೪೦ ಮಕ್ಕಳ ಹೆಸರಿರುತ್ತೆ. ಉಳಿದ ಅರ್ಧಕರ್ಧ ಮಕ್ಕಳು ಎಲ್ಲಿಗೆ ಹೋಗಿದ್ದಾರೆ ಎಂದು ಶಿಕ್ಷಕರನ್ನು ಕೇಳಿ- ‘ಹೊಗೆಸೊಪ್ಪು ಬೆಳೆಯುವ ಹೊಲ-ಗದ್ದೆಗಳಿಗೆ ’ ಎಂದು ಸರಳವಾಗಿ ಉತ್ತರಿಸುತ್ತಾರೆ.
‘ಹಂಗಾದ್ರೆ, ಅವರಿಗೆ ಪಾಠ ಪ್ರವಚನ...?’ ಅಂದ್ರೆ- ‘ಹೊಗೆಸೊಪ್ಪು ಹಂಗಾಮ ಮುಗಿದ ಬಳಿಕ, ಸರಿಯಾಗಿ ಶಾಲೆಗೆ ಬರುತ್ತಾರೆ. ಅಯ್ಯೋ, ನಿಮಗೆ ಗೊತ್ತಿಲ್ವಾ ?, ಇಲ್ಲೆಲ್ಲಾ ಇದು ಮಾಮೂಲಿ. ಶಾಲೆ  ನಡೆಯೋದೇ ಹೀಗೆ !’ ಎನ್ನುತ್ತಾರೆ  ಕೆಲ ಶಿಕ್ಷಕರು.
ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾ ಪಟ್ಟಣ ಮತ್ತು  ನಂಜನಗೂಡು ತಾಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ಸರಕಾರಿ ಶಾಲೆಗಳ ಸಮಸ್ಯೆ - ಸ್ಥಳೀಯರ ದೃಷ್ಟಿಯಲ್ಲಿ ಸಮಸ್ಯೆಯೇ ಅಲ್ಲ. ಶಾಲೆಗೆ ಚಕ್ಕರ್ ಹೊಡೆದು, ತಂಬಾಕು ಬೆಳೆಯುವ ಹೊಲ-ಗದ್ದೆಯಲ್ಲಿ  ಕೂಲಿ ಕಾರ್ಮಿಕರಾಗುವುದು, ಬಹಳಷ್ಟು ಮಕ್ಕಳ ಶಿಕ್ಷಣದ ಒಂದು ಭಾಗ. ಸಾರ್ವಜನಿಕ ಶಿಕ್ಷಣ ಇಲಾಖೆ ಮಾತ್ರ ಇದನ್ನು ಸಮಸ್ಯೆ ಎಂದು ಪರಿಗಣಿಸಿದ್ದರೂ, ಪರಿಹಾರವೇ ತೋಚುತ್ತಿಲ್ಲ !
ಕೂಲಿಗೆ ಮಕ್ಕಳೇ ಯೋಗ್ಯ: ಮೇ ತಿಂಗಳು ಕಳೆಯುತ್ತಿದ್ದಂತೆಯೇ ಮೂರು ತಾಲೂಕುಗಳ ಗ್ರಾಮೀಣ ಪ್ರದೇಶದ ಹೊಲ-ಗದ್ದೆಗಳಲ್ಲಿ ತಂಬಾಕು ಕೃಷಿ ಆರಂಭವಾಗುತ್ತದೆ. ಈ ಅವಧಿಯಲ್ಲಿ ಸಸಿ ನೆಡುವ ಹಾಗೂ ಅದಕ್ಕೆ  ಗೊಬ್ಬರ ಹಾಕುವ ಕೆಲಸಕ್ಕೆ ಎಲ್ಲರ ಮಕ್ಕಳೂ ಮೊರೆ ಹೋಗುತ್ತಾರೆ. ಬುಡಕ್ಕೆ ಗೊಬ್ಬರ ಹಾಕಿದ ಮೇಲೆ ಒಮ್ಮೆ ಉತ್ತು, ನಂತರ ಸಸಿಗೆ ಮಣ್ಣು ಏರಿಸುತ್ತಾರೆ. ಈ ಕೆಲಸವೂ ಮಕ್ಕಳಿಗೆ ಸಲೀಸು. ಹಾಗಾಗಿ ಮೂರನೇ ಬಾರಿಯೂ ಕೃಷಿಕರು ಮಕ್ಕಳನ್ನೇ ತಮ್ಮ ಹೊಲ-ಗದ್ದೆಗಳಿಗೆ ಕರೆತರುತ್ತಾರೆ.
ಇದಕ್ಕೆ ಮಕ್ಕಳನ್ನೇ ಬಳಸಲು, ಕೂಲಿ ಕಾರ್ಮಿಕರ ಕೊರತೆ ಹಾಗೂ ಬಡತನವಷ್ಟೇ ಕಾರಣವಲ್ಲ. ತಂಬಾಕು ಕೃಷಿಯ ಸ್ವರೂಪವೇ ಆ ರೀತಿ. ನಡು ಬಗ್ಗಿಸಿ ಸಸಿ ನೆಡಲು, ಗೊಬ್ಬರ ಹಾಕಲು-ದೊಡ್ಡವರಿಗೆ ಕಷ್ಟ. ಜತೆಗೆ ದೊಡ್ಡವರಿಗೆ ೧೫೦ ರೂ. ನೀಡುವ ಬದಲು, ಮಕ್ಕಳಿಗೆ ೬೦ ರೂ. ಕೊಟ್ಟರೆ ಮುಗೀತು ಎಂಬ ಲೆಕ್ಕಾಚಾರ.
ನಾಲ್ಕು ತಿಂಗಳ ಸಮಸ್ಯೆ: ರಾಜ್ಯದಲ್ಲಿ ಸುಮಾರು ೬೭೫೦೦ ತಂಬಾಕು ಬೆಳೆಗಾರರ ಪೈಕಿ ಶೇ. ೭೦ರಷ್ಟು ಬೆಳೆಗಾರರು ಮೈಸೂರು ಜಿಲ್ಲೆಯಲ್ಲೇ ಇದ್ದಾರೆ. ಹುಣಸೂರು, ಪಿರಿಯಾಪಟ್ಟಣ ಮತ್ತು ನಂಜನ ಗೂಡು ತಾಲೂಕಿನ ಬಹಳಷ್ಟು  ಗ್ರಾಮಗಳ ರೈತರ ಕೃಷಿ ಚಟುವಟಿಕೆಯೇ ಇದು. ಜೂನ್‌ನಿಂದ ಸೆಪ್ಟೆಂಬರ್ ವರೆಗಿನ ನಾಲ್ಕು ತಿಂಗಳಲ್ಲಿ ತಂಬಾಕು ಮಡಿ ಮಾಡುವುದು, ಗೊಬ್ಬರ ನೀಡುವುದು, ಸೊಪ್ಪು ಕೊಯ್ಯುವುದಕ್ಕೆ ಸೇರಿದ ಚಟುವಟಿಕೆಗಳು ನಡೆಯುತ್ತಿರುತ್ತವೆ. ಈ ಅವಧಿಯಲ್ಲೇ ಮಕ್ಕಳು ಶಾಲೆಗೆ ಗೈರು.
‘ಬಹಳ ವರ್ಷಗಳಿಂದ ಇಲ್ಲೆಲ್ಲಾ ಹೊಗೆಸೊಪ್ಪು ಬೆಳೆಯುತ್ತಿದ್ದೇವೆ. ಆದರೆ, ೫-೧೦ ವರ್ಷ ಗಳಿಂದೀಚೆಗೆ  ಸೊಪ್ಪು  ಬೆಳೆಯುವವರ ಸಂಖ್ಯೆ ಹೆಚ್ಚಿದೆ. ತಂಬಾಕು ಮಂಡಳಿಗೆ ದಂಡ ಕಟ್ಟಿದರೂ ಸರಿ, ಹೊಗೆಸೊಪ್ಪು ಬೆಳೆಯುತ್ತೇವೆ ಎಂಬ ಮನಸ್ಥಿತಿ ರೈತರದ್ದು. ಹಾಗಾಗಿ ೧೫-೨೦ ಸಾವಿರ ಅನಧಿಕೃತ ಬೆಳೆಗಾರರಿದ್ದಾರೆ. ಬಹುತೇಕ  ಕೃಷಿಕರ ಮಕ್ಕಳು ಮನೆಯ ಕೆಲಸಕ್ಕೆ ಕೂಲಿಕಾರರಾಗುತ್ತಾರೆ’ ಎಂಬುದು ಹುಣಸೂರು ತಾಲೂಕು  ಚಿಲ್ಕುಂದ  ಶಾಲೆಯ ಶಿಕ್ಷಕರೊಬ್ಬರು ನೀಡುವ ವಿವರಣೆ.
‘ತಂಬಾಕು ಹೊಲದಿಂದ ಮಕ್ಕಳನ್ನು ಶಾಲೆಗೆ ಕರೆತರಲು ಇಲಾಖೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ಪ್ರತಿ ಗ್ರಾಮ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸುತ್ತೇವೆ. ಶಾಲಾಭಿವೃದ್ಧಿ ಸಮಿತಿಗಳ ಮೂಲಕವೂ ಹೇಳಿಸುತ್ತೇವೆ. ಆದರೂ  ಪ್ರಯೋಜನ ವಾಗಿಲ್ಲ’  ಎನ್ನುತ್ತಾರೆ ನಂಜನಗೂಡು ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಮಂಗಳಾ.
ಮಕ್ಕಳನ್ನು ಕೂಲಿ ಕಾರ್ಮಿಕರನ್ನಾಗಿಸುವ ಪಾಲಕರಿಗೆ ಯಾರು ತಿಳಿ ಹೇಳಬೇಕು ?, ಯಾವ ಶಿಕ್ಷೆ ನೀಡಬೇಕು ?. ಸಂಕೀರ್ಣವಾದ  ಈ ಸಮಸ್ಯೆಗೆ ಪರಿಹಾರ ಏನು ? ಶಿಕ್ಷಣ ತಜ್ಞರು ಮತ್ತು ಇಲಾಖೆ ಅಧಿಕಾರಿಗಳೇ  ಹೇಳಬೇಕಷ್ಟೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ