ಬ್ರಹ್ಮಗಿರಿ ವನ್ಯಜೀವಿ ಅರಣ್ಯದೊಳಗೆ ಮರಗಳ್ಳತನ ದಂಧೆ

ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಡಿಕೇರಿ
ಅತ್ಯಮೂಲ್ಯ ವನ್ಯಸಂಪತ್ತು ಹೊಂದಿರುವ ಬ್ರಹ್ಮಗಿರಿ ವನ್ಯಜೀವಿ ಅರಣ್ಯ ಪ್ರದೇಶದೊಳಗಿರುವ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮರಗಳ್ಳ ಹನನ ರಾಜಾರೋಷವಾಗಿ ನಡೆದಿದೆ. ಕುಟ್ಟದ ಪ್ರಭಾವಿ ಮರ ವ್ಯಾಪಾರಿಯೊಬ್ಬರು ವ್ಯವಸ್ಥಿತ ಮತ್ತು ಸುರಕ್ಷಿತವಾಗಿ ನಡೆಯುತ್ತಿರುವ ಮರಗಳ್ಳ ತನದ ಪ್ರಮುಖ ರೂವಾರಿ.
ಅರಣ್ಯದೊಳಗೆ ಹೇರಳವಾಗಿರುವ ದೇವದಾರ್, ಬೀಟೆ, ನಂದಿ, ಹೆಬ್ಬಲಸು, ಹೊನ್ನೆ ಮರಗಳು ಒಂದೊಂದಾಗಿ ಮರಗಳ್ಳರಿಗೆ ಬಲಿ ಯಾಗುತ್ತಿದೆ. ಅರಣ್ಯ ಸಂರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆ ಜವಾಬ್ದಾರಿ ಮರೆತಿದೆ. ಅಕ್ರಮ ಸಾಗಣೆ ಮೇಲೆ ಕ್ರಮಕೈಗೊಳ್ಳದ ಪೊಲೀಸ್ ಇಲಾಖೆಯೂ ಇದರಲ್ಲಿ ಶಾಮೀಲಾಗಿದೆ.
ಅಕ್ರಮ ರಸ್ತೆ ನಿರ್ಮಾಣ: ಅರಣ್ಯ ಪ್ರದೇಶಕ್ಕೆ ಒತ್ತಿಕೊಂಡಿರುವ ಕಾಫಿ ತೋಟವೊಂದಕ್ಕೆ ಹೋಗುವ ನೆಪದಲ್ಲಿ ವನ್ಯಜೀವಿ ಅರಣ್ಯ ಪ್ರದೇಶ ದೊಳಗೆ ಕಾನೂನುಬಾಹಿರವಾಗಿ ರಸ್ತೆ  ನಿರ್ಮಿಸ ಲಾಗಿದೆ. ಈ ರಸ್ತೆ ಮೂಲಕ ಮರಗಳನ್ನು ಕಡಿದು, ಸಾಗಣೆ ಮಾಡಲಾಗುತ್ತಿದೆ.
ಅರಣ್ಯಾಧಿಕಾರಿಗಳಿಗೆ ಮರಗಳ್ಳತನದ ಬಗ್ಗೆ ಖಚಿತ ಮಾಹಿತಿಯನ್ನು ಸ್ಥಳೀಯರು ನೀಡಿದ್ದರೂ, ಅವರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದ ಅರಣ್ಯಾಧಿಕಾರಿಗಳೂ ಸಹ ಶಾಮೀಲಾಗಿ  ‘ಪಾಲು’ ಪಡೆದುಕೊಳ್ಳುತ್ತಿರುವ ಅನುಮಾನ ಇದೆ ಎನ್ನುತ್ತಾರೆ.
ಮರ ಹನನ ನಿರಂತರ: ಹಲವು ದಶಕಗಳಿಂದ ಮರಗಳ್ಳತನದಲ್ಲಿ  ತೊಡಗಿರುವ ದಕ್ಷಿಣ ಕೊಡಗಿನ ಜನತೆಗೆ ಚಿರಪರಿಚಿತ ಮರ ವ್ಯಾಪಾರಿ ಇದರ ಹಿಂದೆ ಇದ್ದಾರೆ. ಅರಣ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಬುಟ್ಟಿಗೆ ಹಾಕಿ ಕೊಂಡು ಅಕ್ರಮ ದಂಧೆ ಮುಂದುವರಿಸಿದ್ದಾರೆ.
ಬ್ರಹ್ಮಗಿರಿ ವನ್ಯಜೀವಿ ವಿಭಾಗದ ಶ್ರೀಮಂಗಲ ವಲಯ ವ್ಯಾಪ್ತಿಯ ಮಂಚಳ್ಳಿ ಗ್ರಾಮದ ಸಮೀಪ ದಲ್ಲಿಯೇ ಮರಗಳ ಮಾರಣ ಹೋಮ ನಡೆದಿರುವುದನ್ನು ವೈಲ್ಡ್ ಲೈಫ್ ಫಸ್ಟ್ ಸಂಘಟನೆ ಯವರು ಪೊಲೀಸ್ ಅರಣ್ಯ ಸಂಚಾರಿದಳದ ಗಮನಕ್ಕೆ ತಂದು, ಮುಟ್ಟುಗೋಲು ಹಾಕಿಕೊಳ್ಳು ವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಬೀಟೆ ವಶ: ಪೊಲೀಸ್ ಅರಣ್ಯ ಸಂಚಾರಿದಳದ  ಸಬ್‌ಇನ್ಸ್‌ಪೆಕ್ಟರ್ ಕೆ.ಪಿ. ಹರಿಶ್ಚಂದ್ರ ನೇತೃತ್ವದಲ್ಲಿ ಗುರುವಾರ ನಡೆದ ಕಾರ್ಯಾಚರಣೆಯಲ್ಲಿ  ೫ ಲಕ್ಷ ರೂ. ಮೌಲ್ಯದ ಬೀಟೆ ಮರದ ೭ ನಾಟಾ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, ಎರಡು ಬೃಹತ್ ಬೀಟೆ ಮರಗಳನ್ನು ಕಡಿದು ಸಾಗಣೆ ಮಾಡಿರುವುದಕ್ಕೆ ಮರದ ಗುತ್ತಿ ಸಾಕ್ಷಿ ಯಾಗಿದೆ. ಈ ಪ್ರಕರಣದ ತನಿಖೆಯನ್ನು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ನಾಯಕ್‌ಗೆ (ವನ್ಯಜೀವಿ ವಿಭಾಗ)  ವಹಿಸಲಾಗಿದೆ.
೨೦೦೩ರಲ್ಲಿ ಬ್ರಹ್ಮಗಿರಿ ವನ್ಯಜೀವಿ ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ನಡೆಯುತ್ತಿದ್ದ ಮರಗಳ್ಳತನದ ಬಗ್ಗೆ ಬಂದ ದೂರಿನ ಅನ್ವಯ ಲೋಕಾಯುಕ್ತ ತಂಡ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿತ್ತು. ಈ ಸಂದರ್ಭದಲ್ಲಿ ೧೪ ಮರಗಳನ್ನು ಕಡಿದಿರುವುದಕ್ಕೆ ಸಾಕ್ಷಿ ಲಭ್ಯವಾಗಿತ್ತು.
ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಲೋಕಾಯುಕ್ತ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದಲೇ ಮರದ ಮೌಲ್ಯ ವಸೂಲಿ ಮಾಡುವುದಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆ ಮುಂದುವರಿದಿದೆ.
೨೦೦೩ರಲ್ಲಿ ಲೋಕಾಯುಕ್ತ ದಾಳಿ ನಡೆಸುವ ವೇಳೆಯಲ್ಲಿ ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ ಆಗಿದ್ದ ಮೋಟಪ್ಪ  ಪ್ರಸ್ತುತ ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಆಗಿ ಒಂದು ತಿಂಗಳ ಹಿಂದೆ ಯಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ವನ್ಯಜೀವಿ ಅರಣ್ಯ ಪ್ರದೇಶದ ಸಂರಕ್ಷಣೆಯಲ್ಲಿ ಇವರೆಷ್ಟು ಕಾರ‍್ಯೋನ್ಮುಖರಾಗುತ್ತಾರೆ ಎಂಬ ಕುತೂಹಲ ಇದೆ.
ಅರಣ್ಯದೊಳಗೆ ಮರಗಳನ್ನು ನಾಟಾಗಳಾಗಿ ಪರಿವರ್ತಿಸಿ ಸಾಗಣೆ ಮಾಡಲಾಗುತ್ತಿದೆ. ಈ ಮರಗಳನ್ನು ಕುಟ್ಟದಲ್ಲಿ ಅರಣ್ಯ- ಪೊಲೀಸ್ ತಪಾಸಣಾ ಗೇಟ್‌ಗಳಲ್ಲಿನ ತಪಾಸಣೆ ಕಣ್ತಪ್ಪಿಸಿ ಕೇರಳಕ್ಕೆ ಸಾಗಣೆ ಮಾಡುವುದು ಸುಲಭದ ಮಾತಲ್ಲ. ಗೇಟ್‌ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ‘ಮಾಮೂಲಿ’ ನೀಡು ವುದರ ಮೂಲಕ ಮರಗಳನ್ನು ಕೇರಳದತ್ತ ಸುರಕ್ಷಿತವಾಗಿ ಸಾಗಿಸಲಾಗುತ್ತಿದೆ.
ವನ್ಯಜೀವಿ ವಿಭಾಗದ ಉನ್ನತಾಧಿಕಾರಿಗಳು ಬ್ರಹ್ಮಗಿರಿ ಅರಣ್ಯ ಪ್ರದೇಶದೊಳಗೆ ನಡೆಯುತ್ತಿರುವ ಅಕ್ರಮ ಮರಗಳ್ಳತನ ದಂಧೆಗೆ ಕಡಿವಾಣ ಹಾಕಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ. ಪ್ರಸ್ತುತ ನಡೆದಿರುವ ಮರಗಳ್ಳತನ ದಂಧೆಯಲ್ಲಿ ಶಾಮೀಲಾಗಿರುವವರ ಪತ್ತೆಗೆ ತಂಡ ರಚಿಸುವ ಅಗತ್ಯ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ