ಪ್ರವಾಸಿ ತಾಣಗಳಲ್ಲಿ ಜನ ಪ್ರವಾಹ

ವಿಕ ಸುದ್ದಿಲೋಕ ಮೈಸೂರು
ಮೈಸೂರಿನ ಪ್ರವಾಸಿ ತಾಣಗಳಲ್ಲಿ ಭಾನುವಾರ ಜನವೋ ಜನ. ನಾಡ ಹಬ್ಬ ದಸರಾ ಮಹೋತ್ಸವಕ್ಕೂ ಮುನ್ನವೇ ದಸರೆಯ ದಿನಗಳನ್ನು ನೆನಪಿಸುವಂಥ ಜನಜಂಗುಳಿ. ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ವಾಹನಗಳ ಸಾಲು ಸಾಲು.
ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಬಹುತೇಕರು ಪ್ರವಾಸಿ ತಾಣಗಳು, ದೇವಾಲಯಗಳಿಗೆ ಭೇಟಿ ನೀಡಿ ರಜೆಯನ್ನು ಸದುಪಯೋಗಪಡಿಸಿಕೊಂಡರು. ಮನೆ ಯಲ್ಲೇ ಶುಕ್ರವಾರ ರಂಜಾನ್, ಶನಿವಾರ ಗಣೇಶ ಚತುರ್ಥಿ ಸಂಭ್ರಮವನ್ನು ಆಚರಿಸಿದ ನಾಗರಿಕರು ವಾರಾಂತ್ಯ ದಿನವಾದ ಭಾನುವಾರ ಪ್ರವಾಸಿ ತಾಣ ಗಳತ್ತ, ವೀಕ್ಷಣಾ ಸ್ಥಳಗಳತ್ತ ಮುಖ ಮಾಡಿದ್ದರು.
ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ಜಗನ್ಮೋಹನ ಕಲಾ ಗ್ಯಾಲರಿ ಮತ್ತಿತರೆಡೆ ಜನಸಂದಣಿ ಕಂಡು ಬಂದಿತು. ದುಡಿಯುವ ವರ್ಗಕ್ಕೆ ಶುಕ್ರವಾರ ರಂಜಾನ್, ಶನಿವಾರ ಗಣೇಶ ಚತುರ್ಥಿ, ಭಾನುವಾರ ವಾರಾಂತ್ಯ ಒಟ್ಟಿಗೆ ಮೂರು ದಿನಗಳು ರಜೆ ಲಭಿಸಿದ ಪರಿಣಾಮವಿದು. ದಸರಾ ವಸ್ತು ಪ್ರದರ್ಶನದ ಮೈದಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾರು, ದ್ವಿಚಕ್ರವಾಹನಗಳು ನಿಂತಿದ್ದವು.
ಅರಮನೆ ವೀಕ್ಷಣೆಗೆ ಸ್ಥಳೀಯರು ಸೇರಿದಂತೆ ಪ್ರವಾಸಿಗಳು ತಂಡೋಪತಂಡವಾಗಿ ಆಗಮಿಸಿ ದ್ದರು. ಅಂಬಾವಿಲಾಸ ಅರಮನೆಯ ವೈಭವವನ್ನು ಕಣ್ತುಂಬಿಸಿಕೊಳ್ಳಲು ಪ್ರವೇಶಕ್ಕಾಗಿ ಜನರು ಸಾಲು ಗಟ್ಟಿ ನಿಂತಿದ್ದರು. ವಿದೇಶಿ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬಂದಿತು. ಎಂದಿನಂತೆ ಪೊಲೀಸ್ ಭದ್ರತೆಯಲ್ಲಿ ಪ್ರವೇಶ ನೀಡಲಾಗುತ್ತಿತ್ತು. ಅರಮನೆ ಆವರಣದ ವಾಹನ ನಿಲ್ದಾಣದಲ್ಲಿ ವಾಹನಗಳು ಭರ್ತಿಯಾದ ಹಿನ್ನೆಲೆ ಯಲ್ಲಿ ರಸ್ತೆಯ ಅಲ್ಲಲ್ಲಿ ವಾಹನಗಳು ಸಾಲಾಗಿ ನಿಂತಿ ದ್ದವು. ಕೆಲವರು ದಸರಾ ವಸ್ತುಪ್ರದರ್ಶನದ ಎದುರಿನ ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಿದ್ದರು.
ಈ ದಿನ ೧೮,೬೫೦ ಮಂದಿ ಭೇಟಿ ನೀಡಿದ್ದರು. ರಜೆ ದಿನಗಳಲ್ಲಿ ಈ ಪ್ರಮಾಣದಲ್ಲಿ ಜನರ ಆಗಮನ ಸಾಮಾನ್ಯ.ಕೆಲ ದಿನಗಳಲ್ಲಿ ೨೩ ಸಾವಿರಕ್ಕೂ ಹೆಚ್ಚು ಮಂದಿ ಒಂದೇ ದಿನ ಭೇಟಿ ನೀಡಿದ ಉದಾಹರಣೆ ಗಳು ಉಂಟು ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಅವರಾದಿ ತಿಳಿಸಿದ್ದಾರೆ.
ಮೃಗಾಲಯಕ್ಕೆ ದಾಖಲೆ ಆದಾಯ: ಶ್ರೀ ಚಾಮ ರಾಜೇಂದ್ರ ಮೃಗಾಲಯ ವೀಕ್ಷಣೆಗೂ ಜನರು ಕಿಕ್ಕಿರಿದು ತುಂಬಿದ್ದರು. ಬೆಳಗಿನಿಂದ ಸಾಲುಗಟ್ಟಿ ನಿಂತಿದ್ದ ಪ್ರವಾಸಿಗರು ಪ್ರಾಣಿಗಳನ್ನು ವೀಕ್ಷಿಸಿ ಸಂತಸಪಟ್ಟರು. ಕಳೆದ ಮೂರು ದಿನಗಳಿಂದಲೂ ಅಪಾರ ಸಂಖ್ಯೆಯ ವೀಕ್ಷಕರು ಮೃಗಾಲಯಕ್ಕೆ ಆಗಮಿಸಿದ್ಧಾರೆ. ಆದರೆ ಭಾನುವಾರ ದಾಖಲೆ ಪ್ರಮಾಣದಲ್ಲಿ ಜನರು ಭೇಟಿ ನೀಡಿದ್ದರು. ಒಂದೇ ದಿನ ೩೦,೦೦೦ ಮಂದಿ ಆಗಮಿಸಿ, ೯.೩೭ ಲಕ್ಷ ರೂ. ಆದಾಯ ತಂದಿರುವುದು ಮೃಗಾಲಯದ ಇತಿಹಾಸದಲ್ಲೇ ದಾಖಲೆಯಾಗಿದೆ.
ಸೆ.೧೦ ರಂದು ೬,೪೦೦ ಮಂದಿ ಆಗಮಿಸಿದ್ದು, ಆದಾಯ ೨.೧೧ ಲಕ್ಷ ರೂ.ಗಳಾದರೆ, ಸೆ.೧೧ ರಂದು ೧೯,೦೦೦ ಮಂದಿ ೬ ಲಕ್ಷ ರೂ. ಹಾಗೂ ಭಾನುವಾರ (ಸೆ.೧೨) ದಂದು ೩೦,೦೦೦ ಮಂದಿ ವೀಕ್ಷಿಸಿದ್ದು, ೯,೩೭,೮೮೦ ರೂ. ಆದಾಯ ಬಂದಿದೆ. ಈ ಹಿಂದಿನ ೮.೫೭ ಲಕ್ಷ ರೂ. ಆದಾಯವೇ ಹೆಚ್ಚಿನದಾಗಿತ್ತು ಎಂದು ಮೃಗಾಲಯದ ಕಾರ‍್ಯ ನಿರ್ವಾಹಕ ನಿರ್ದೇಶಕ ವಿಜಯ ಕುಮಾರ್ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ