ಒಂದೇ ಜಾತಿಯ ದಂಪತಿ ಚುನಾವಣೆಯಲ್ಲಿ ಅಂತರ್ಜಾತಿ !



ವಿಕ ವಿಶೇಷ ಮೈಸೂರು
ತಾಲೂಕಿನ ಪ್ರತಿಷ್ಠಿತ ಗ್ರಾ. ಪಂ.ಯ ವ್ಯಾಪ್ತಿಗೆ ಬರುವ ಕುಟುಂಬದಲ್ಲಿ ಗಂಡ ಹೆಂಡತಿ ಇಬ್ಬರೂ ರಾಜಕಾರಣಿಗಳು. ಕಳೆದ ಚುನಾವಣೆಯಲ್ಲಿ ಗಂಡ ಬಿಸಿಎಂ(ಎ) ಅಡಿ ಆಯ್ಕೆಯಾಗಿದ್ದರು. ಈಗ ಅವರ ಪತ್ನಿ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಡಿ ನಾಮಪತ್ರ ಸಲ್ಲಿಸಿದ್ದಾರೆ !
ಒಂದೇ ಕುಟುಂಬದಲ್ಲಿ ಗಂಡ ಒಂದು ಜಾತಿ, ಹೆಂಡತಿ ಇನ್ನೊಂದು ಜಾತಿ. ಇದರರ್ಥ ಅಂತರ್ಜಾತಿ ವಿವಾಹಿತರೇನಲ್ಲ. ಇಬ್ಬರೂ ರಾಜ ಪರಿವಾರ ಜಾತಿಗೆ ಸೇರಿದವರು, ಪರಸ್ಪರ ನೆಂಟ ರಿಷ್ಟರು. ಹೀಗಿದ್ದರೂ ಇದ್ಹೇಗೆ ಎಂದರೆ ಉತ್ತರ ಸರಳ- ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಲು ಮೀಸಲಿನ ದುರ್ಬಳಕೆ !
ಗ್ರಾ. ಪಂ. ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಬಿಸಿಎಂ (ಎ) ವರ್ಗದ ಮೀಸಲು ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಸಮಯಕ್ಕೆ ತಕ್ಕಂತೆ ಜಾತಿಗಳನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿರುವುದು ವರದಿಯಾಗುತ್ತಿದೆ.
ಕಡಕೊಳ ಗ್ರಾ. ಪಂ. ನ ಬಿಸಿಎಂ(ಎ) ಮೀಸಲು ಸ್ಥಾನಕ್ಕೆ ರಾಜ ಪರಿವಾರ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಅವರ ತಾಯಿ ಅದೇ ಗ್ರಾ. ಪಂ. ಯಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಪರಿಶಿಷ್ಟ ಪಂಗಡ ಎಂದು ಘೋಷಿಸಿಕೊಂಡು, ಆ ಜಾತಿಯ ಸವಲತ್ತು ಪಡೆದಿದ್ದಾರೆ. ಚುನಾವಣೆಗೆ ನಿಲ್ಲಲು ಮಗ ಬಿಸಿಎಂ(ಎ) ಆದ್ರೆ, ಸವಲತ್ತು ಪಡೆಯುವ ತಾಯಿ ಎಸ್ಟಿ .
ಜಿಲ್ಲೆಯ ೨೩೫ ಗ್ರಾಮ ಪಂಚಾಯಿತಿಗಳ ೪೩೦೦ ಸ್ಥಾನಗಳಿಗೆ ಮೇ ೧೨ರಂದು ಚುನಾವಣೆ ನಡೆಯುತ್ತಿದ್ದು, ಈ ಪೈಕಿ ಪರಿಶಿಷ್ಟ ಪಂಗಡಕ್ಕೆ ೬೨೦ ಹಾಗೂ ಬಿಸಿಎಂ(ಎ)ಗೆ ೧೧೬೭ ಸ್ಥಾನಗಳು. ಪರಿಶಿಷ್ಟ ಪಂಗಡದಡಿ ಜಿಲ್ಲೆಯಲ್ಲಿ ಪ್ರಮುಖವಾಗಿ ಬೇಡ, ವಾಲ್ಮೀಕಿ, ನಾಯಕ ಜನಾಂಗದವರು ಸ್ಪರ್ಧಿಸಲು ಅರ್ಹರು. ಒಕ್ಕಲಿಗರು, ಲಿಂಗಾಯಿತರು, ಕ್ರೈಸ್ತರನ್ನು ಹೊರತು ಪಡಿಸಿ ಉಳಿದ ಎಲ್ಲ ಹಿಂದುಳಿದ ಜಾತಿಗಳು ಬಿಸಿಎಂ(ಎ) ಮೀಸಲಿನಡಿ ಸ್ಪರ್ಧಿಸಬಹುದು. ಹೀಗಿದ್ದರೂ ಬಹಳಷ್ಟು ಕಡೆ ರಾಜ ಪರಿವಾರ ಹಾಗೂ ಕಾಡು ಕುರುಬ ಕೋಮಿನವರು ಈ ಮೀಸಲು ಬಳಸುತ್ತಿದ್ದಾರೆ ಎಂಬ ದೂರುಗಳು ಜಿಲ್ಲಾಧಿಕಾರಿ ಕಚೇರಿಗೆ ಮುಟ್ಟಿವೆ.
ಕಡಕೊಳ, ಸಿಂಧುವಳ್ಳಿ, ಉದ್ಬೂರು, ರಮ್ಮನಹಳ್ಳಿ, ಕಳಲೆ, ಇಲವಾಲ, ಗಾಡವಗೆರೆ, ತಲಕಾಡು, ಬೆಟ್ಟದಪುರ, ಭೇರ್ಯ, ಮಿರ್ಲೆ ಸೇರಿದಂತೆ ಬಹಳಷ್ಟು ಕಡೆ ಜಾತಿ ದುರ್ಬಳಕೆಯ ದೂರುಗಳು ಕೇಳಿ ಬರುತ್ತಿವೆ. ಕೆಲವೆಡೆ ಗ್ರಾಮ ಪಂಚಾಯಿತಿ ಸ್ಥಾನಗಳ ಮೀಸಲಷ್ಟೇ ಬದಲಾಗಿಲ್ಲ. ಕೆಲವರ ಜಾತಿಯೂ ಬದಲಾಗಿದೆ !
ಮೀಸಲು ದುರ್ಬಳಕೆ ಇತಿಹಾಸ: ೧೯೭೧ರ ಜನಗಣತಿವರೆಗೆ ರಾಜ್ಯ ದಲ್ಲಿರುವ ಮೂಲನಿವಾಸಿಗಳು, ಗಿರಿಜನರು ಮತ್ತು ಬೆಳಗಾವಿ, ಕೊಡಗು ಜಿಲ್ಲೆಯ ಕೆಲ ನಾಯಕರು ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರು. ಒಟ್ಟೂ ಜನಸಂಖ್ಯೆ ೩.೯೦ ಲಕ್ಷ. ೧೯೮೧ರ ಜನಗಣತಿ ವೇಳೆಗೆ, ಇತರೆ ಜಿಲ್ಲೆಗಳ ನಾಯಕರು ಕೂಡ ತಮ್ಮನ್ನು ಪರಿಶಿಷ್ಟ ಪಂಗಡ ಎಂದು ಸ್ವಯಂ ಘೋಷಿಸಿಕೊಂಡು, ಗಣತಿಯಲ್ಲಿ ದಾಖಲಿಸಿದರು. ಅಲ್ಲಿಯವರೆಗೆ ನಾಯಕರು ಬಿಸಿಎಂ(ಎ) ವರ್ಗಕ್ಕೆ ಸೇರಿದ್ದರು. ಗಣತಿ ಬಳಿಕ ರಾಜಕೀಯ ಕಾರಣಕ್ಕಾಗಿ ಈ ಎಲ್ಲರನ್ನೂ ಪರಿಶಿಷ್ಟ ಪಂಗಡ ಎಂದೇ ಪರಿಗಣಿಸಲಾಯಿತು. ೧೯೯೧ರ ಜನಗಣತಿಯಲ್ಲೂ ಪುನರಾವರ್ತನೆ ಆಯಿತು.
ಪರಿಣಾಮ-ಗಿರಿಜನೇತರ ಕೋಮಿಗೆ ಸೇರಿದ ಹತ್ತಾರು ಜಾತಿಗಳು ‘ಪರಿಶಿಷ್ಟ ಪಂಗಡ’ದಡಿ ಆಶ್ರಯ ಪಡೆದು, ಮೀಸಲಿನ ಲಾಭ ಪಡೆದವು. ಈ ಮಧ್ಯೆ ಮೈಸೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿದ್ದ ಪರಿವಾರದವರು ಪರಿಶಿಷ್ಟ ಪಂಗಡಕ್ಕೆ ಸೇರಲು ಪ್ರಯತ್ನಿಸಿ ವಿಫಲರಾದರು. ಹೀಗಿದ್ದರೂ ಕೆಲವರು ಶಾಲೆಗೆ ದಾಖಲಾಗುವಾಗ ತಮ್ಮ ಜಾತಿ ಕಾಲಂನಲ್ಲಿ ಪರಿವಾರ ನಾಯಕರು ಎಂದು ಬರೆಸಿ ಕೊಳ್ಳುವುದು ತಪ್ಪಿಲ್ಲ.
ದುರ್ಬಳಕೆ ಹೇಗೆ ? ಸಾಮಾನ್ಯವಾಗಿ ಶಾಲೆಗೆ ಸೇರುವಾಗ ಪರಿವಾರ ಕೋಮಿನ ವರು ಹಾಗೂ ಕಾಡು ಕುರುಬರು ತಮ್ಮ ಜಾತಿಯನ್ನು ಪರಿಶಿಷ್ಟ ಪಂಗಡ ಎಂದು ಬರೆಸಿಕೊಳ್ಳುತ್ತಾರೆ. ಇದನ್ನು ತೋರಿಸಿಯೇ ಮುಂದೆ ತಾವು ಪರಿಶಿಷ್ಟ ಪಂಗಡ ಎಂದು ಪ್ರಮಾಣ ಪತ್ರ ಪಡೆಯುತ್ತಾರೆ. ಒಂದು ವೇಳೆ ಬಿಸಿಎಂ(ಎ)ನಡಿ ಲಾಭ ಪಡೆಯ ಬೇಕಾದಲ್ಲಿ ಬೇರೊಂದು ದಾಖಲೆಯನ್ನು ತೋರಿಸು ತ್ತಾರೆ. ನಾವು ಪರಿವಾರದವರಷ್ಟೆ, ಪರಿವಾರ ನಾಯಕರಲ್ಲ. ಹಾಗಾಗಿ ಬಿಸಿಎಂ(ಎ) ಎಂದು ಬಿಂಬಿಸಿಕೊಳ್ಳುತ್ತಾರೆ. ಒಟ್ಟಾರೆ ಎರಡು ಮೀಸಲುಗಳನ್ನು ಸಂದರ್ಭಕ್ಕೆ ತಕ್ಕಂತೆ ದುರುಪಯೋಗಪಡಿಸಿ ಕೊಳ್ಳುವುದು !
ಪಂಚಾಯಿತಿ ಚುನಾವಣೆಗೆ ಏಕಿಷ್ಟು ರಶ್...?
ಚೀ. ಜ. ರಾಜೀವ ಮೈಸೂರು
ತಾಲೂಕಿನ ಕಡಕೊಳ ಗ್ರಾಮ ಪಂಚಾಯಿತಿಯ ೨೨ ಸ್ಥಾನಗಳಿಗೆ ಮೇ ೧೨ರಂದು ನಡೆಯಲಿ ರುವ ಚುನಾವಣೆಗೆ ನಾಮಪತ್ರಗಳ ಸಂಖ್ಯೆ ೭೪. ಇದರಲ್ಲಿ ಯುವಕರ ಸಂಖ್ಯೆಯೇ ಅಧಿಕ !
ಈ ಅಂಕಿ-ಸಂಖ್ಯೆ ಮತ್ತು ಯುವಕರ ಚುನಾವಣೆ ಪ್ರೀತಿ ಗ್ರಾಮದ ಹಿರಿಯರು ಮತ್ತು ಯಜಮಾನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಮಾತ್ರವಲ್ಲ, ಕಾಲ ಕೆಟ್ಟು ಹೋಯಿತು ಎಂಬ ‘ಸ್ಥಾಪಿತ ಹಳಹಳಿಕೆ’ ಅವರನ್ನು ಚಿಂತೆಗೀಡು ಮಾಡಿದೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದವರ ಸಂಖ್ಯೆ ೩೫ರ ಗಡಿ ದಾಟಿರಲಿಲ್ಲ. ಈ ಬಾರಿ ದ್ವಿಗುಣ. ಇದು ಒಂದರ ಕಥೆಯಲ್ಲ. ಜಿಲ್ಲೆಯ ಬಹುತೇಕ ಕಡೆ ಇದೇ ರೀತಿಯ ಬೆಳವಣಿಗೆ. ಇದರ ಹಿನ್ನೆಲೆ ಶೋಧನೆಗೆ ಕಡಕೊಳ ಸುತ್ತಮುತ್ತಲಿನ ಗ್ರಾಮಗಳನ್ನು ಸುತ್ತಾಡಿದರೆ, ಸಿಗುವ ಉತ್ತರಗಳು ಸ್ವಾರಸ್ಯಕರ.
ಪಂಚಾಯಿತಿ ವ್ಯವಸ್ಥೆಯ ಮೂರನೇ ಸ್ತರದಲ್ಲಿ ಅರಳುತ್ತಿರುವ ರಾಜಕೀಯ ಪ್ರಜ್ಞೆ, ಗ್ರಾಮೀಣ ಉದ್ಯೋಗ ಖಾತ್ರಿಯಂಥ ಯೋಜನೆಗಳ ಮೂಲಕ ಗ್ರಾ. ಪಂ. ಗಳಿಗೆ ಹರಿದು ಬರುತ್ತಿರುವ ಲಕ್ಷಾಂತರ ರೂ. ಅನುದಾನ, ಬಿಜೆಪಿಯ ಆಪರೇಷನ್ ಕಮಲ...ಹೀಗೆ ತರಹೇವಾರಿ ಉತ್ತರಗಳು.
ರಾಜಕೀಯ ಅರಿವು: ‘ಮೊದಲೆಲ್ಲಾ ಊರಲ್ಲಿ ಯಜಮಾನ ಮನುಷ್ಯರಿಗೆ, ಅವರ ಮಾತಿಗೆ ಬೆಲೆ-ಗೌರವ ಇರುತ್ತಿತ್ತು. ಈಗ ಹಾಗಿಲ್ಲ. ಯಾವು ದಾದರೂ ಊರಿನ ಕೆಲಸದ ಬಗ್ಗೆ ಸಲಹೆ-ಸೂಚನೆ ನೀಡಲು ಹೋದರೆ, ನೀನೇನೂ ಎಲೆಕ್ಟೆಡ್ ಮೆಂಬ್ರಾ ಎಂದು ಪ್ರಶ್ನಿಸುತ್ತಾರೆ. ಅವ್ರು ಕೇಳೋದ್ರಲ್ಲೂ ತಪ್ಪಿಲ್ಲ. ಅದಕ್ಕಾಗಿ ನಾಮಪತ್ರ ಸಲ್ಲಿಸಿದ್ದೇನೆ’ ಎನ್ನು ತ್ತಾರೆ ಕಡಕೊಳದ ಮಹೇಶ್ ಎಂಬ ಯುವಕ.
‘ಐದು ವರ್ಷದ ಹಿಂದೆ ಚುನಾವಣೆಗೆ ೪೦ ಜನ ನಿಂತಿದ್ರು. ಊರಿನ ಯಜಮಾನ್ರಾದ ರಂಗ ನಾಯ್ಕ, ವಜ್ರ ನಾಯ್ಕ್ ಅವರು ಎಲ್ರನ್ನೂ ಕರ‍್ಸೆ ಮಾತಾಡಿದ್ದಕ್ಕೆ ೧೦ ಜನ ವಾಪಸ್ ತೆಗೆದುಕೊಂಡ್ರು. ಮೂರು ಜನರ ಅವಿರೋಧ ಆಯ್ಕೆ ಆಗಿತ್ತು’ ಎನ್ನುವ ಗ್ರಾಮದ ಸಿದ್ದನಾಯಕ ಅವರಿಗೆ ಈಗಿನ ಬೆಳವಣಿಗೆಗಳು ಬೇಸರ ತಂದಿವೆ. ‘ಈಗ ನಮ್ಮೂರಲ್ಲಿ ರಂಗನಾಯ್ಕರು ಇಲ್ಲ. ಯಾರೂ ಯಾರ ಮಾತನ್ನು ಕೇಳೋದಿಲ್ಲ. ನಾಮಪತ್ರ ಸಲ್ಲಿಸಿರುವವರದ್ದು ನಾವು-ನಮ್ಮಿಷ್ಟ ಅನ್ನೋ ಧೋರಣೆ. ಎಲ್ರೂ ರಾಜಕಾರಣಿಗಳೇ. ಕಾಲ ಕೆಟ್ಟು ಹೋಯಿತು’ ಎಂದು ಹಳಹಳಿಸುತ್ತಾರೆ.
ಖಾತ್ರಿ ಯೋಜನೆ ಆಕರ್ಷಣೆ: ಚುನಾವಣೆಗೆ ನಾಮಪತ್ರ ಸಲ್ಲಿಸಿರುವವರ ಪೈಕಿ ೩೦ ರಿಂದ ೫೦ ವರ್ಷದೊಳಗಿನವರು ಹೆಚ್ಚಿದ್ದಾರೆ. ಬಹುತೇಕ ಹೊಸ ಮುಖಗಳು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸುವರ್ಣ ಗ್ರಾಮದಂಥ ಯೋಜನೆ ಗಳು ಕೆಲವರನ್ನು ಆಕರ್ಷಿಸಿವೆ. ‘ಖಾತ್ರಿ ಯೋಜನೆ ಯಲ್ಲಿ ಏನು ಕೆಲಸ ಇದೆ, ಏನು ಮಾಡಬಹುದು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಆದರೆ, ಖಾತ್ರಿ ಯೋಜನೆ ದೆಸೆಯಿಂದ ಕೆಲ ತಿಂಗಳಲ್ಲೇ ದುಂಡುಗಾದವರು (ಹಣ ಮಾಡಿಕೊಂಡ ಜನ) ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ. ಇದರಿಂದಲೂ ಬಹಳಷ್ಟು ಜನ ಸ್ಪರ್ಧೆಗಿಳಿದಿದ್ದಾರೆ’ ಎನ್ನುತ್ತಾರೆ ಕಡಕೊಳ ಕನ್ನಡ ಗೆಳೆಯರ ಬಳಗದ ಉಪಾಧ್ಯಕ್ಷ ಕುಮಾರಸ್ವಾಮಿ.
ಸಾಮಾನ್ಯವಾಗಿ ಗ್ರಾ.ಪಂ. ಕಾಮಗಾರಿಗಳ ಗುತ್ತಿಗೆಯನ್ನು, ಅಲ್ಲಿನ ಸದಸ್ಯರೇ ತಮ್ಮ ಬಂಧು- ಬಾಂಧವರ ಹೆಸರಿನಲ್ಲಿ ಪಡೆಯುವುದು ಹೊಸ ದೇನಲ್ಲ. ಜಾತಿ, ಹಣದ ಪ್ರಭಾವ ಇದ್ದ ಸದಸ್ಯರು ಮಾತ್ರ ಕಾಮಗಾರಿ ಮಾಡಿಸಿ, ಒಂದಿಷ್ಟು ದುಡ್ಡು ಮಾಡಿಕೊಳ್ಳುತ್ತಿದ್ದರು. ಆದರೆ, ಖಾತ್ರಿ ಹಾಗೂ ಸುವರ್ಣ ಗ್ರಾಮ ಯೋಜನೆ ಜಾರಿಗೆ ಬಂದ ಬಳಿಕ ಪಂಚಾಯಿತಿಯ ಬಹುತೇಕ ಸದಸ್ಯರ ಸ್ಥಿತಿ-ಗತಿ ಸುಧಾರಿಸಿದೆ ಎಂದು ಹೇಳುತ್ತಾರೆ.
ಆಪರೇಷನ್ ಕಮಲದ ಪ್ರಭಾವ !: ಸಾಮಾನ್ಯ ವಾಗಿ ನಾಮಪತ್ರ ಸಲ್ಲಿಸಿದವರೆಲ್ಲರಿಗೂ ಚುನಾವಣೆಗೆ ಸ್ಪರ್ಧಿಸಲೇಬೇಕೆಂಬ ಆಗ್ರಹವೇನಿ ರದು. ಸ್ಪರ್ಧಿಸಲೇಬೇಕೆಂದು ಹಠ ತೊಟ್ಟ ಅಭ್ಯರ್ಥಿ ರಾಜಿಗೆ ಕರೆದರೆ, ಒಂದು ಆಟ ಆಡಿ ಬಿಡೋಣ ಎಂಬ ಮನೋಭಾವ. ಇಂಥವರು ಎಲ್ಲ ಕಾಲದಲ್ಲೂ ಎಲ್ಲ ಚುನಾವಣೆ ಸಂದರ್ಭದಲ್ಲೂ ಇರುತ್ತಾರೆ. ಆದರೆ, ಈ ಬಾರಿ ಇಂಥವರು ಹೆಚ್ಚು. ಚುನಾಯಿತ ಪ್ರತಿನಿಧಿಗಳನ್ನು ಖರೀದಿಸುವ ಆಪರೇಷನ್ ಕಮಲ ಎಂಬ ಕಾರ‍್ಯಾಚರಣೆ ತಮ್ಮ ಬಾಗಿಲಿಗೂ ಬಂದೀತೆಂಬ ಆಲೋಚನೆ.
‘ಅವಿರೋಧ ಆಯ್ಕೆಗೆ ಸಹಕರಿಸಿದರೆ, ಬಿಜೆಪಿ ಯವ್ರು ಉಳಿದ ಕ್ಯಾಂಡಿಡೇಟ್‌ಗಳಿಗೆ ದುಡ್ಡು ಕೊಡ್ತಾರಂತೆ. ಇದಕ್ಕಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳಿಗೆ ಈಗಾಗ್ಲೆ ನೋಟಿನ ಕಂತೆ ಬಂದಿದೆಯಂತೆ. ಹಾಗಾಗಿ ನಾನೂ ನಾಮ ಪತ್ರಸಲ್ಲಿಸಿದ್ದೇನೆ. ನನಗೂ ಒಂದಿಷ್ಟು ಹಣ ನೀಡಲಿ’ ಎಂದವರು ಹೆಸರು ಬಹಿರಂಗ ಪಡಿಸಲು ಬಯಸದ ಅಭ್ಯರ್ಥಿಯೊಬ್ಬ. ಬಿಜೆಪಿ ಮುಖಂಡರು ಹಣ ಹಂಚಿ ದ್ದಾರೋ ಇಲ್ಲವೋ, ಇಂಥದೊಂದು ವದಂತಿ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿರುವುದಂತೂ ಸತ್ಯ.

ಪರಮಾತ್ಮ ಆಡಿಸಿದಂತೆ ಆಡಿದ ಕಾಡಾನೆ...!

ಚಮ್ಮಟೀರ ಪ್ರವೀಣ್ ಉತ್ತಪ್ಪ ಗೋಣಿಕೊಪ್ಪಲು
‘ಗುಂಡಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು...’ ಎಂಬ ವಿಚಾರ ಅರಿಯದ ಕಾಡಾನೆಯೊಂದು ಕಳ್ಳಬಟ್ಟಿ ತಯಾರಿಸಲು ಕೆಲವರು ಅರಣ್ಯದಲ್ಲಿ ಬಚ್ಚಿಟ್ಟಿದ್ದ ಪುಳಗಂಜಿ ಕುಡಿದು ತಲೆ ತಿರುಗಿ ಬಿದ್ದುದು ಫಜೀತಿಗೆ ಕಾರಣ ವಾಯಿತು.
ತಿತಿಮತಿ ಸಮೀಪದ ಮಾವುಕಲ್ಲು ರಕ್ಷಿತಾರಣ್ಯದ ಕಾರೆಹಡ್ಲು ಗಿರಿಜನ ಹಾಡಿಯ ಸಮೀಪದಲ್ಲಿರುವ ಕೃಷಿ ಭೂಮಿಯಲ್ಲಿ ಪುಳಗಂಜಿ ಕುಡಿದು ತಲೆತಿರುಗಿ ನೆಲಕ್ಕುರುಳಿದ್ದ ಕಾಡಾನೆಯನ್ನು ಕಂಡ ಗಿರಿಜನರು ಭಯ ಗೊಂಡು ಬೊಬ್ಬೆ ಹಾಕಿದರು. ಎಷ್ಟು ಕೂಗಿದರೂ ಆನೆಯ ಕಿವಿಗೆ ಅವರ ಬೊಬ್ಬೆ ಮುಟ್ಟಲೇ ಇಲ್ಲ. ಮಲಗಿದ್ದ ಆನೆಯ ಪಕ್ಕದಲ್ಲಿಯೇ ಅದರ ಮರಿ ಅಮ್ಮನಿಗೆ ಕಾವಲು ಕಾಯುತ್ತಾ ನಿಂತಿತ್ತು.
ಸುದ್ದಿ ತಿಳಿದು ಮತ್ತಷ್ಟು ಮಂದಿ ಓಡೋಡಿ ಬಂದರು. ಯಾರೆಷ್ಟೇ ಕೂಗು ಹಾಕಿದರೂ ಆನೆ ಎಚ್ಚರಗೊಳ್ಳಲಿಲ್ಲ. ‘ಕುಡಿಯೋದೇ ನನ್ನ ವೀಕ್ನೆಸ್ಸು...’ ಎಂಬಂತೆ ಮತ್ತಿನಿಂದ ಹೊರಬರಲು ಸಾಧ್ಯವಾಗದೆ ಮಲಗಿದ್ದಲ್ಲಿಯೇ ತೊಳಲಾಡು ತಿತ್ತು. ಅರಣ್ಯಾಧಿಕಾರಿಗಳಿಗೆ ಕರೆ ಹೋಯಿತು. ಸ್ಥಳಕ್ಕೆ ಆಗಮಿಸಿದ ಎಸಿಎಫ್ ಅಲೆ ಗ್ಸಾಂಡರ್, ಅದರ ಮೈಮೇಲೆ ನೀರು ಚಿಮುಕಿಸಿದರು. ಚಿಕಿತ್ಸೆ ಕೊಡಿಸಲು ವೈದ್ಯರನ್ನು ಕರೆತರುವ ಪ್ರಯತ್ನ ಮಾಡಿದ ರಾದರೂ ಅದು ಸಫಲವಾಗಲಿಲ್ಲ.
ಸಾಕಾನೆಗಳ ನೆರವು: ಮದವೇರಿದ ಆನೆಯ ಮೇಲೇಳಿಸುವ ಕಾರ‍್ಯಕ್ಕೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಭರತ ಹಾಗೂ ಅಶೋಕನನ್ನು ಕರೆತರ ಲಾಯಿತು. ಮಲಗಿದ್ದ ಕಾಡಾನೆಯ ಗತ್ತು ನೋಡಿದ ಅಶೋಕ, ಅದರ ಬಳಿ ಸುಳಿಯಲು ಹಿಂದೇಟು ಹಾಕಿದ. ಆದರೆ, ಭರತ ಧೈರ್ಯ ಮಾಡಿದ. ನೇರವಾಗಿ ಕಾಡಾನೆಯ ಬಳಿ ತೆರಳಿ ಎಬ್ಬಿಸುವ ಕಾರ್ಯದಲ್ಲಿ ನಿರತನಾದ.
ಕಾವಲಿತ್ತು ಮರಿಯಾನೆ: ಕಾಡಾನೆಯ ಪಕ್ಕದಲ್ಲಿಯೇ ಅದರ ಮರಿ ಬೀಡು ಬಿಟ್ಟಿತ್ತು. ತಾಯಿಗೆ ಏನು ಮಾಡಿ ಬಿಡುತ್ತಾರೋ ಎಂಬ ಭಯ ಮರಿಗೆ ಕಾಡುತಿದ್ದಂತೆ ಭಾಸವಾಗುತ್ತಿತ್ತು. ಹೀಗಾಗಿ ಯಾರನ್ನೂ ಅದು ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ. ಸುಮಾರು ೨ ಗಂಟೆಗಳ ಕಾಲ ಪ್ರಯತ್ನ ನಡೆಸಿ ಮರಿಯಾನೆಯನ್ನು ಓಡಿಸಲಾ ಯಿತು. ನಂತರ ಭರತನ ಸಹಕಾರ ದೊಂದಿಗೆ ಕಾಡಾನೆಯನ್ನು ಮೇಲೆಬ್ಬಿ ಸುವ ಕಾರ್ಯ ಮುಂದುವರಿಯಿತು.
ಸತತ ಯತ್ನ ವಿಫಲವಾದಾಗ ಹುಸಿಗೋಪ ದಿಂದ ಭರತ ಕಾಡಾನೆಯನ್ನು ತಿವಿದ. ತಿವಿತದ ಹೊಡೆತಕ್ಕೆ ಬೆಚ್ಚಿದ ಆನೆ ಕುಡಿದ ಅಮಲಿನಲ್ಲಿಯೇ ಮೆಲ್ಲನೆ ಕಣ್ತೆರೆದು ಒಮ್ಮೆ ಸುತ್ತ ದೃಷ್ಠಿ ಹಾಯಿಸಿತು. ಸುತ್ತಲೂ ನೆರೆದಿದ್ದ ಜನರನ್ನು ಕಂಡು ಅವಾಕ್ಕಾಯಿತು. ಗಲಿಬಿಲಿಗೊಂಡು ಕಾಡಿನ ಕಡೆಗೆ ಓಟ ಕಿತ್ತಿತು. ಕಾಡಾನೆ ತನ್ನ ಮೇಲೆಯೇ ದಾಳಿ ನಡೆಸಲು ಬರುತ್ತಿದೆ ಎಂದು ಭ್ರಮಿಸಿದ ಭರತನೂ ಓಟ ಕಿತ್ತ. ಅಶೋಕ ಮಾವುತನ ಮಾತನ್ನೂ ಕೇಳದಾದ. ಕಾಡಾನೆ, ಜತೆಗೆ ಭರತನ ಓಟ, ಮಾವುತನ ಪರದಾಟ ನೆರೆದವರಿಗೆ ಮನರಂಜನೆ ಒದಗಿಸಿತು.
ಈಗ ಬಿದಿರು ಹೂ ಬಿಟ್ಟಿರುವುದರಿಂದ ಆನೆಗಳಿಗೆ ಆಹಾರದ ಕೊರತೆ ಎದುರಾಗಿದೆ. ಜತೆಗೆ ಬೇಸಿಗೆಯಾಗಿರು ವುದರಿಂದ ಎಲ್ಲೆಂದರಲ್ಲಿ ನೀರು ಸಿಗುತ್ತಿಲ್ಲ. ಹೀಗಾಗಿ ದಾಹವನ್ನು ನೀಗಿಸಿ ಕೊಳ್ಳಲು ಆನೆ, ಕಳ್ಳಬಟ್ಟಿ ತಯಾರಿಸಲು ಬಳಕೆ ಮಾಡುವ ಪುಳಗಂಜಿ ಕುಡಿದಿರುವ ಸಾಧ್ಯತೆ ಇದೆ ಎಂಬುದು ಅರಣ್ಯಾಧಿಕಾರಿಗಳ ಸ್ಪಷ್ಟನೆ.
೨೫ ವರ್ಷದ ಆನೆಗೆ ಯಾವುದೇ ಕಾಯಿಲೆ ಇಲ್ಲ ಎಂಬುದು ಅವರ ಸಮಜಾಯಿಷಿ.

ನೇಣಿಗೆ ಶರಣಾದ ಯುವತಿ, ತನಿಖೆ ಕೈ ಬಿಟ್ಟ ಪೊಲೀಸರು


ವಿಕ ಸುದ್ದಿಲೋಕ ಮೈಸೂರು ಲೈಂಗಿಕ ಸಿಡಿ ಪ್ರಕರಣ ನೆನಪಿರಬೇಕು, ಅದನ್ನೇ ಹೋಲುವ ಮತ್ತೊಂದು ಪ್ರಕರಣ ನಗರದಲ್ಲಿ ನಡೆದಿದೆ.
ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿ ವಂಚನೆಗೆ ಬಲಿಯಾಗಿದ್ದು, ತನ್ನ ಕುಟುಂಬಕ್ಕೆ ವಿಷಯ ತಿಳಿಯಿತೆಂದು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯಾವಾಗ: ನಗರದ ಕಾಲೇಜೊಂದರ ವಿದ್ಯಾರ್ಥಿನಿ ಯೊಬ್ಬಳ ಆತ್ಮಹತ್ಯೆ ಸುದ್ದಿ ೨೦ ದಿನದ ಹಿಂದೆ ವರದಿ ಯಾಗಿತ್ತು. ನೇಣಿಗೆ ಪ್ರಯತ್ನಿಸಿದ್ದ ಯುವತಿ ಮೂರು ದಿನ ಆಸ್ಪತ್ರೆಯಲ್ಲಿದ್ದರೂ ಚಿಕಿತ್ಸೆ ಫಲಕಾರಿ ಯಾಗಲಿಲ್ಲ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಜುಗುಪ್ಸೆಯಿಂದ ಆತ್ಮಹತ್ಯೆ ಎಂದು. ಕುಟುಂಬದವರೂ ಹೀಗೆಯೇ ದೂರು ನೀಡಿದರು.
ಇದಾದ ಒಂದೆರಡು ದಿನದಲ್ಲಿ ಆಕೆಯ ಆತ್ಮಹತ್ಯೆಗೆ ಜುಗುಪ್ಸೆ ಕಾರಣವಾಗಿದ್ದರೂ ಸಿಡಿ ಹಗರಣವೊಂದು ಅದರ ಮೂಲವೆಂಬ ಸಂಗತಿ ಬಯಲಾಯಿತು. ಪರಿಚಿತ ಯುವಕನೊಬ್ಬ ಈಕೆಯೊಂದಿಗೆ ಸ್ನೇಹ ಬೆಳೆಸಿ, ದುರ್ಬಳಕೆ ಮಾಡಿ ಕೊಂಡಿದ್ದ. ಆಕೆಯೊಂದಿಗಿನ ದೈಹಿಕ ಸಂಬಂಧವನ್ನು ಚಿತ್ರೀಕರಿಸಿಕೊಂಡಿದ್ದ. ಕೊನೆಗೆ ಇದು ಮೊಬೈಲ್‌ಗಳಿಗೆ ಹರಿದಾಡತೊಡಗಿದ್ದನ್ನು ಕೇಳಿ ಯುವತಿ ಬೇಸರಗೊಂಡಿದ್ದಳು. ಮನೆಯವರಿಗೂ ಮಾಹಿತಿ ತಿಳಿದು ಛೀಮಾರಿ ಹಾಕಿದ್ದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಾಗಿ ಕಾಲೇಜು ಕಾರಿಡಾರ್‌ಗಳಲ್ಲಿ ಚರ್ಚಿತವಾಯಿತು.
ಹೇಗೆ ದಾಖಲಾಗಿದೆ: ಬಹುದಿನಗಳಿಂದ ಪರಿಚಿತ ವಿರುವ ಯುವತಿಯನ್ನು ಆತ ಕಾಮಕೇಳಿಗೆ ಆಹ್ವಾನಿಸಿದ. ಅಜ್ಞಾತ ಸ್ಥಳವೊಂದರ ಸುಸಜ್ಜಿತ ಕೊಠಡಿಯಲ್ಲಿ ಮಾನಸಿಕವಾಗಿ ಯುವತಿಯನ್ನು ಅಣಿಗೊಳಿಸಿದ. ಆಕೆ ಶೌಚಾಲಯಕ್ಕೆ ಹೋಗಿ ಬರುವಾಗಲೇ ಈತ ಕ್ಯಾಮೆರಾವನ್ನು ಟೇಬಲ್ ಒಂದರ ಮೇಲೆ ಅಳವಡಿಸಿ ಅದನ್ನು ಸಣ್ಣಪುಟ್ಟ ಪೇಪರ್, ತೆಳುವಾದ ಬಟ್ಟೆಗಳನ್ನು ಹಾಕಿ, ಏನೋ ಇಟ್ಟಂತೆ ಮುಚ್ಚಿಟ್ಟಿದ್ದ. ಸುಮಾರು ೪೫ ನಿಮಿಷದ ಚಟುವಟಿಕೆಯನ್ನು ಚಿತ್ರೀಕರಿಸಲಾಗಿದೆ. ಈ ಹುನ್ನಾರದ ಸಣ್ಣ ಎಳೆಯೂ ಈಕೆಗೆ ಸಿಗಲಿಲ್ಲ.
ವಂಚನೆ ಪ್ರಕರಣ: ಈ ಹಿಂದೆಯೂ ಇಂಥದೊಂದು ಪ್ರಕರಣವಾಗಿತ್ತಾದರೂ, ವಂಚನೆ ಪ್ರಕರಣವಾಗ ಲಿಲ್ಲ. ಅವರಿಬ್ಬರೂ ಮದುವೆಯಾದರು. ಈಗ ನಡೆ ದಿರುವುದು ಉದ್ದೇಶಪೂರ್ವಕವಾಗಿಯೇ ಆಗಿರು ವುದರಿಂದ ಇದು ವಂಚನೆಯೇ ಎನ್ನಲಾಗಿದೆ.
ಕುವೆಂಪುನಗರ ಠಾಣೆ ಇನ್ಸ್‌ಪೆಕ್ಟರ್ ಡಿ.ಧನಂಜಯ ಅವರೂ ಕಾಲೇಜಿಗೆ ಆಗಮಿಸಿ ಪ್ರಾಂಶುಪಾಲರು. ಅಧ್ಯಾಪಕರು ಹಾಗೂ ಕೆಲ ವಿದ್ಯಾರ್ಥಿಗಳೊಂದಿಗೆ ವಿವರಣೆ ಪಡೆದರು. ವಂಚಕ ಯುವಕನ ಬಗ್ಗೆಯೂ ಮಾಹಿತಿ ಕಲೆ ಹಾಕಿದರು. ಆದರೂ ಯಾರೊಬ್ಬರೂ ಈ ರೀತಿಯಲ್ಲಿ ದೂರು ನೀಡ ದಿರುವುದರಿಂದ ತನಿಖೆಯನ್ನು ಸ್ಥಗಿತಗೊಳಿಸಿದರು.
ಯುವತಿ ಸಿಡಿ ಬಲೆಯಲ್ಲಿ ಬಿದ್ದಿದ್ದಾಳೆ ಎನ್ನುವ ಮಾಹಿತಿ ನಮಗೂ ಇದೆ. ಈ ಕುರಿತು ಮಾಹಿತಿ ಯನ್ನೂ ಕಲೆ ಹಾಕಿದ್ದೇವೆ. ಯಾವುದೇ ದೂರು ಇಲ್ಲದೇ ಇರುವುದರಿಂದ ಕ್ರಮ ಕೈಗೊಳ್ಳಲಾಗದು ಎನ್ನುವುದು ಧನಂಜಯರವರ ವಿವರಣೆ.
ಈ ನಡುವೆ ಇದು ಕುಶಾಲನಗರದಲ್ಲಿ ನಡೆದಿದ್ದ ಪ್ರಕರಣ. ಅಲ್ಲಿಯ ಯುವತಿಯೊಂದಿಗೆ ನಡೆಸಿದ್ದು. ಆತನನ್ನು ಬಂಧಿಸಲಾಗಿದೆ ಎಂದು ಇದನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವೂ ನಡೆಯುತ್ತಿದೆ ಎನ್ನಲಾಗಿದೆ.
ದೊಡ್ಡ ಜಾಲ: ಪ್ರಮುಖ ಕಾಲೇಜುಗಳಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಅವರಿಗೆ ಬಗೆಬಗೆಯ ಸೇವೆ ಒದಗಿಸಿ ಮನಗೆಲ್ಲುವ ಮೂಲಕ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಜಾಲವೂ ನಗರದಲ್ಲಿ ಬಲವಾಗುತ್ತಿದೆ.

ಪರಸ್ಪರ ವಿರೋಧಿಗಳಿಗೂ ಅವಿರೋಧ ಆಯ್ಕೆಯ ಜಪ

ಒಂದೇ ಒಂದು ನಾಮಪತ್ರ ಸಲ್ಲಿಕೆ

ವಿಕ ಸುದ್ದಿಲೋಕ ಕೊಳ್ಳೇಗಾಲ

ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿರುವ ತಾಲೂಕಿನ ಕುರಟ್ಟಿ ಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಬುಧವಾರ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂಬ ಕಾರಣಕ್ಕೆ ಎಲ್ಲ ೧೦ ಗ್ರಾಮಗಳ ಜನತೆ ಒಗ್ಗೂಡಿ ಚುನಾವಣೆ ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದರು. ಅಲ್ಲದೆ ಈ ಬಗ್ಗೆ ತಹಸೀಲ್ದಾರ್‌ಗೆ ಪತ್ರ ಬರೆದಿದ್ದರು. ಹೀಗಾಗಿ ೨೧ ಸದಸ್ಯ ಸ್ಥಾನಗಳನ್ನು ಹೊಂದಿರುವ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ೬ ದಿನಗಳಿಂದ ಒಂದು ನಾಮಪತ್ರವೂ ಸಲ್ಲಿಕೆಯಾಗಿರಲಿಲ್ಲ. ಆದರೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಬುಧವಾರ ಗ್ರಾಮಸ್ಥರ ತೀರ್ಮಾನವನ್ನು ಕಡೆಗಣಿಸಿ ಚೆನ್ನೂರು ಬಾಲಕ್ ಸಾಮಾನ್ಯ ಕ್ಷೇತ್ರದಿಂದ ಶೆಟ್ಟಿ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ನಾಮಪತ್ರ ಸಲ್ಲಿಸಿರುವ ವ್ಯಕ್ತಿಯನ್ನು ಮನವೊಲಿಸಿ ವಾಪಸ್ ತೆಗೆಸುವ ಯತ್ನ ನಡೆದಿದೆ.

ಸಿಎಂ ಹುಟ್ಟೂರಿನಲ್ಲಿ ಅವಿರೋಧ ಆಯ್ಕೆ ?

ವಿಕ ಸುದ್ದಿಲೋಕ ಕೆ.ಆರ್.ಪೇಟೆ

ಜಾ.ದಳ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಹಗೆತನಕ್ಕೆ ಹೆಸರಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆಯಲ್ಲಿ ಈ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ಅವಿರೋಧ ಆಯ್ಕೆ ಖಚಿತವಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗೌರವಾರ್ಥ ಗ್ರಾ.ಪಂ.ನ ಎಲ್ಲಾ ೯ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಸಲು ಗ್ರಾಮದ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ. ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಬೂಕನಕೆರೆ ಅಭಿವೃದ್ಧಿಗೆ ೩೦ ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ. ಇದು ಅವಿರೋಧ ಆಯ್ಕೆಗೆ ಕಾರಣ.

ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕರಾಗಿದ್ದಾಗ ಈ ಗ್ರಾಮದಲ್ಲಿ ರಾಜಕೀಯ ಘರ್ಷಣೆ ಸಂಭವಿಸಿ ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕ್ರಿಮಿನಲ್ ಮೊಕದ್ದಮೆ ಹಿನ್ನೆಲೆಯಲ್ಲಿ ನೂರಾರು ಮಂದಿ ತಿಂಗಳಾನುಗಟ್ಟಲೆ ಊರು ತೊರೆದಿದ್ದರು. ಈ ಬಗ್ಗೆ ಯಡಿಯೂರಪ್ಪ ಸದನದಲ್ಲಿ ಗಮನ ಸೆಳೆದಿದ್ದರು.

ಇಂಥ ಗ್ರಾಮದಲ್ಲಿ ಈಗ ಅವಿರೋಧ ಆಯ್ಕೆ ನಡೆಯುತ್ತಿರುವುದು ಶಾಂತಿ ಮತ್ತು ಸೌಹಾರ್ದ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದರ ಹಿಂದೆ ಮುಖ್ಯಮಂತ್ರಿ ಸೋದರಳಿಯರ ಪಾತ್ರ ಸ್ಪಷ್ಟ. ಕೆಲವರು ಹೆಚ್ಚುವರಿಯಾಗಿ ನಾಮಪತ್ರ ಸಲ್ಲಿಸಿದ್ದರೂ ವಾಪಸಾತಿ ಪತ್ರಕ್ಕೂ ಸಹಿ ಹಾಕಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು. ಸದ್ಯದ ತೀರ್ಮಾನದ ಪ್ರಕಾರ ಬಿ.ಎಸ್. ರವೀಶ್, ಸರಸ್ವತಮ್ಮ, ಶಂಭುಲಿಂಗಶೆಟ್ಟಿ, ನಾಗರಾಜು, ಬಿ.ಪಿ. ಕುಮಾರ್, ಅಶ್ವತ್ಥಮೂರ್ತಿ, ಕುಮಾರಿ, ಗೀತಾ, ಶಾಂತಮ್ಮ ಆಯ್ಕೆಯಾಗಲಿರುವರು.

ಬಿಜೆಪಿ-ಕಾಂಗ್ರೆಸ್ ಸಾಥ್-ಸಾಥ್...

ವಿಕ ಸುದ್ದಿಲೋಕ ಶ್ರೀಮಂಗಲ

ಈ ಜೋಡಿ ಬಲು ಅಪರೂಪದ್ದು. ಕಾಂಗ್ರೆಸ್- ಬಿಜೆಪಿ ಪಕ್ಷಗಳೆರಡೂ ರಾಷ್ಟ್ರ- ರಾಜ್ಯ- ಜಿಲ್ಲಾ ರಾಜಕೀಯದಲ್ಲಿ ಬದ್ಧ ವೈರಿಗಳು. ಆದರೆ, ಕೊಡಗಿನ ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಭಾಯಿ-ಭಾಯಿ.

ತಕ್ಷಣಕ್ಕೆ ಇದನ್ನು ಒಪ್ಪುವುದು ಕಷ್ಟ. ಆದರೂ ಬಿಜೆಪಿ- ಕಾಂಗ್ರೆಸ್ ಸ್ಥಾನ ಹೊಂದಾಣಿಕೆ ಮಾಡಿ ಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಜಾತ್ಯತೀತ ಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವೀಣಾ ಅಚ್ಚಯ್ಯ ಮಂಗಳವಾರ ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಈ ಪ್ರಕರಣದಲ್ಲಿ ಅವರ ಹೇಳಿಕೆಗೆ ಉಲ್ಟಾ ಪಲ್ಟಾ.

ಮೇ ೧೨ ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್- ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಂಟಿಯಾಗಿ ನಾಮಪತ್ರ ಸಲ್ಲಿಸಿದರು.. ಒಟ್ಟು ೧೮ ಸ್ಥಾನಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.

ಕಳೆದ ಬಾರಿ ಹೊಂದಿದ್ದಷ್ಟೇ ೧೨ ಸ್ಥಾನಗಳನ್ನು ಕಾಂಗ್ರೆಸ್ ಪಡೆದು ಕೊಳ್ಳಲಿದೆ. ಜೆಡಿ(ಎಸ್) ಹೊಂದಿದ್ದ ೧ ಸ್ಥಾನವೂ ಕಾಂಗ್ರೆಸ್‌ಗೆ ದಕ್ಕಿದೆ. ಬಿಜೆಪಿ ಗೆಲುವು ಸಾಧಿಸಿದ್ದ ೫ ಸ್ಥಾನಗಳು ಬಿಜೆಪಿಯಲ್ಲೇ ಉಳಿದಿವೆ. ಆ ಮೂಲಕ ೧೮ ಸ್ಥಾನಕ್ಕೂ ಅಭ್ಯರ್ಥಿ ಗಳನ್ನು ಅವಿರೋಧವಾಗಿ ಆಯ್ಕೆ ಮಾಡುವುದು ಎರಡೂ ಪಕ್ಷಗಳ ಉದ್ದೇಶ.

ಅವಿರೋಧವಾಗಿ ಆಯ್ಕೆಯಾಗುವ ಗ್ರಾ.ಪಂ.ಗೆ ರಾಜ್ಯ ಸರಕಾರದ ೧೫ ಲಕ್ಷ ರೂ. ವಿಶೇಷ ಅನುದಾನ ಲಭ್ಯವಾಗಲಿದೆಯೆಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹೇಳಿಕೆ ಈ ಹುಮ್ಮಸ್ಸು ತುಂಬಿದೆ. ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಕ್ಷೇತಕ್ಕೆ ತಲಾ ೧ ಲಕ್ಷ ರೂ. ಅನುದಾನ ಸಿಗಲಿದೆ. ಈ ಅನುದಾನ ಬಳಸಿ ಗ್ರಾಮಾಭಿವೃದ್ಧಿ ಮಾಡಲು ಈ ಒಪ್ಪಂದಕ್ಕೆ ಬರಲಾಗಿದೆ ಎಂದು ಬಿಜೆಪಿ ಕುಟ್ಟ ಸ್ಥಾನೀಯ ಸಮಿತಿ ಅಧ್ಯಕ್ಷ ಚೋಡುಮಾಡ ಸೂರತ್ ಹಾಗೂ ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟೀರ ಶಿವು ಪತ್ರಿಕೆಗೆ ತಿಳಿಸಿದ್ದಾರೆ.

ಆದರೆ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಒಪ್ಪಂದದ ೧೮ ಅಭ್ಯರ್ಥಿಗಳಲ್ಲದೆ, ಬೇರೆಯವರೂ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆಗೆ ತೊಡಕಾಗಿದೆ. ಇನ್ನೆರಡು ದಿನಗಳಲ್ಲಿ ನಾಮಪತ್ರ ಸಲ್ಲಿಸಿರುವ ಇತರರ ಮನವೊಲಿಸಿ ವಾಪಸು ತೆಗೆಸಲಾಗುವುದೆಂದು ಎರಡೂ ಪಕ್ಷಗಳ ನಾಯಕರು ಹೇಳುತ್ತಿದ್ದು, ಅದು ಎಷ್ಟು ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.

ಅವಿರೋಧ ಆಯ್ಕೆಯೆಡೆಗೆ ಅಪರಿಮಿತ ಆಸಕ್ತಿ

ಮಡಹಳ್ಳಿ ಮಹೇಶ್ ಗುಂಡ್ಲುಪೇಟೆ

ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ತಾಲೂಕಿನಲ್ಲಿ ಈಗ ಅವಿರೋಧ ಆಯ್ಕೆಯ ಲೆಕ್ಕಾಚಾರ.

ತಾಲೂಕಿನಲ್ಲಿ ಒಟ್ಟು ೩೦ ಗ್ರಾ.ಪಂ.ಗಳಿದ್ದು, ೪೮೦ ಸ್ಥಾನಗಳಿವೆ. ತಾಲೂಕಿನ ೧೮೦ ಗ್ರಾಮಗಳು ಸಜ್ಜಾಗಿವೆ. ಸ್ಪರ್ಧಾಕಾಂಕ್ಷಿಗಳು ತಮ್ಮ ಬೆಂಬಲಿಗರು ಹಾಗೂ ಹಿತೈಷಿಗಳೊಂದಿಗೆ ತಮ್ಮ ಇಷ್ಟ ದೇವರಿಗೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದರು. ನಂತರ ಬಹು ಮಂದಿ ಸಂತೋಷದಲ್ಲಿ ಮದ್ಯದಂಗಡಿಗೆ ಲಗ್ಗೆ ಹಾಕಿದರು.

ಹಂಗಳ ಗಾ.ಪಂ.ಯಲ್ಲಿ ೨೨ ಸ್ಥಾನಗಳಿಗೂ ಅವಿರೋಧ ಆಯ್ಕೆ ಯಾಗುವ ಸಂಭವ ಹೆಚ್ಚು. ೧೪ ಸ್ಥಾನಗಳಲ್ಲಿ ೧೦ ಬಿಜೆಪಿ ಹಾಗೂ ೪ ಕಾಂಗ್ರೆಸ್ ಬೆಂಬಲಿಗರಿಗೆ ಎನ್ನುವ ಬಗ್ಗೆ ಮಾತುಕತೆ ಗಳು ನಡೆದಿವೆ. ಅಲ್ಲದೇ ಪುತ್ತನಪುರ, ಹಂಗಳಪುರ, ಮೇಲುಕಾಮನಹಳ್ಳಿ ಹಾಗೂ ಮಗುವಿನಹಳ್ಳಿ ಗ್ರಾಮಗಳಲ್ಲಿ ಅವಿರೋಧ ಆಯ್ಕೆಯ ಬಗ್ಗೆ ಎರಡೂ ಪಕ್ಷದ ಮುಖಂಡರು ಚರ್ಚೆಯಲ್ಲಿ ತೊಡಗಿದ್ದಾರೆನ್ನಲಾಗಿದೆ.

ಶಿಂಡನಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ೧೫ ಸದಸ್ಯ ಬಲವಿದ್ದು, ಶಿಂಡನಪುರ, ಕಂದೇಗಾಲ, ಕೆಲಸೂರುಪುರ ಗ್ರಾಮಗಳಲ್ಲಿ ಬಿಜೆಪಿ ಬೆಂಬಲಿಗರ ಸಂಖ್ಯೆ ಹೆಚ್ಚಾಗಿದೆ. ದೊಡ್ಡತುಪ್ಪೂರು ಮತ್ತು ಬೆಟ್ಟಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಇಲ್ಲಿಯೂ ಹೊಂದಾಣಿಕೆಯ ಲೆಕ್ಕಾಚಾರ. ತಾಲೂಕಿನ ಈಗಾಗಲೇ ಮಡಹಳ್ಳಿ ಗ್ರಾಮದಲ್ಲಿ ೫ ರಲ್ಲಿ ೪ ಸ್ಥಾನಗಳು ಆಯ್ಕೆಯಾ ಗಿವೆ. ಸಾಮಾನ್ಯ ವರ್ಗದ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಬೇಕು.

ಮುಖಂಡರಿಗೆ ಧರ್ಮ ಸಂಕಟ: ಮೀಸಲು ಸ್ಥಾನಗಳಿಗೆ ಸಮಸ್ಯೆ ಯಿಲ್ಲ. ಸಾಮಾನ್ಯ ವರ್ಗದ ಸ್ಥಾನಗಳಿಗಿರುವ ಪೈಪೋಟಿ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾದ ನಂತರ ಆಕಾಂಕ್ಷಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು ಎಂಬ ಕಾರಣಕ್ಕೆ ಸುಮ್ಮನಿದ್ದಾರೆ.

ಅವಿರೋಧ ಆಯ್ಕೆಗಾಗಿ ಕೆಲವು ಗ್ರಾಮಗಳಲ್ಲಿ ದೇವಸ್ಥಾನ ನಿರ್ಮಾಣ ಹಾಗೂ ಇತರೆ ಉದ್ದೇಶಗಳಿಗೆ ಹಣದ ಬೇಡಿಕೆಯನ್ನು ಇಡಲಾಗುತ್ತಿದೆ.

ಶಾಸಕರಿಗೆ ಪ್ರತಿಷ್ಠೆ ವಿಚಾರ: ಶಾಸಕ ಎಚ್.ಎಸ್.ಮಹಾದೇವ ಪ್ರಸಾದ್ ತಾಲೂಕಿನ ಪ್ರತಿಗ್ರಾಮದಲ್ಲೂ ಇರುವ ತಮ್ಮ ಬೆಂಬಲಿಗರ ಪಡೆಗೆ ಚುನಾವಣೆಯಲ್ಲಿ ಗೆಲ್ಲುವ ಹೊಣೆಯನ್ನು ವಹಿಸಿದ್ದಾರೆ. ಚುನಾವಣೆಯಲ್ಲಿ ಹಣಕ್ಕಿಂತ ಜಾತಿ ಹಾಗೂ ಸ್ಥಳೀಯವಾಗಿ ಅಭ್ಯರ್ಥಿಗಳ ಸಂಬಂಧಗಳೇ ಪ್ರಾಮುಖ್ಯ ವಹಿಸುತ್ತವೆ. ಆದ ಕಾರಣ ಎಲ್ಲದರದ್ದೂ ಅದರತ್ತಲೇ ಗಮನ.

ಬಿಜೆಪಿ ಪಾಳೆಯದಲ್ಲೂ: ಇನ್ನೊಂದೆಡೆ ೨೦೦೮ ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಎಚ್.ಎಸ್.ಮಹಾದೇವಪ್ರಸಾದ್ ಅವರಿಗೆ ಪೈಪೋಟಿ ನೀಡಿದ್ದ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಇತ್ತ ಗಮನಹರಿಸಿದ್ದಾರೆ. ತಾಲೂಕಿನ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ಮಧ್ಯೆಯೇ ಜಿದ್ದಾಜಿದ್ದಿ. ಒಂದೆಡೆ ಅವಿರೋಧ ಆಯ್ಕೆಗೆ ಕಸರತ್ತು ನಡೆಯುತ್ತಿದ್ದರೆ, ಮತ್ತೊಂದೆಡೆ ಚುನಾವಣೆ ಮೂಲಕವೇ ತಮ್ಮ ಪರಾಕ್ರಮ ಮೆರೆಯಲೂ ಮುಖಂಡರು ಹಾತೊರೆಯುತ್ತಿದ್ದಾರೆ.

ಜಂಗಲ್ ಲಾಡ್ಜ್ ಲ್ಲಿ ಪಪ್ಪಾ ಇಲ್ಲ!

ಬೆಂಗಳೂರು-ಮೈಸೂರು ಷಟ್ಪಥ ರಸ್ತೆ ಇನ್ನು ಕನಸು

ಗಾಳಿ ಪ(ಟ)ತಂಗ

ಮರಳು ಮಾಫಿಯಾದಲ್ಲಿ ಮುಳುಗಿ ಹೋದ ಮುಳ್ಳೂರು

ಪತಿ ಅಭಿಲಾಷೆಗೆ ಕೆಲಸದಿಂದಲೇ ಗೌರವ ತರುವೆ

ಅರಮನೆ ನೋಡಲಿಕ್ಕೆ ಸಾಲು ಸಾಲು

ಚೀ ಜ. ರಾಜೀವ ಮೈಸೂರು
ಅರಮನೆಗೆ ಅರಮನೆಯೇ ಸಾಟಿ ! ಮೈಸೂರು ಪ್ಯಾಲೇಸ್ ಎಂದೇ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ  ಅಂಬಾವಿಲಾಸ ಅರಮನೆ  ೨೦೦೯-೨೦೧೦ನೇ ಸಾಲಿನ ಆರ್ಥಿಕ ವರ್ಷದಲ್ಲಿ ಹೊಸ  ‘ಪ್ರವಾಸಿ ದಾಖಲೆ’ಯನ್ನು ಬರೆದಿದೆ.  ಈ ಸಾಲಿನಲ್ಲಿ  ಮೈಸೂರು ಅರಮನೆಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ೨೭ ಲಕ್ಷ  ದಾಟಿದೆ. (ಇವರೆಲ್ಲರೂ ಟಿಕೆಟ್ ನೀಡಿ ಅರಮನೆಯೊಳಗೆ ಹೋದ ಪ್ರವಾಸಿಗರು. ಹೊರಗೆ ನಿಂತು ನೋಡಿದವರ ಸಂಖ್ಯೆಯೂ ಲಕ್ಷದ ಲೆಕ್ಕದಲ್ಲಿ  ಇರುತ್ತದೆ )
ಇಷ್ಟೊಂದು ಬೃಹತ್ ಸಂಖ್ಯೆಯ ಪ್ರವಾಸಿಗರು ಅರಮನೆಯನ್ನು ಸಂದರ್ಶಿಸಿರುವುದು ಇದೇ ಮೊದಲು. ಎರಡು ವರ್ಷಗಳ ಕೆಳಗೆ, ಅಂದರೆ ೨೦೦೬-೦೭ನೇ ಸಾಲಿನಲ್ಲಿ  ಪ್ರವಾಸಿಗರನ್ನು ಸೆಳೆಯುವ ಆಕರ್ಷಣೆ ಯಲ್ಲಿ  ಆಗ್ರಾದ ವಿಶ್ವವಿಖ್ಯಾತ ತಾಜ್ ಮಹಲ್, ಹೊಸದಿಲ್ಲಿಯ ಕುತಾಬ್ ಮಿನಾರ್, ಕೆಂಪುಕೋಟೆ, ಫತೇಪುರ್ ಸಿಕ್ರಿ, ಹಂಪಿಯಂಥ  ಪ್ರವಾಸಿ ಸ್ಮಾರಕಗಳನ್ನು  ಮೈಸೂರು ಅರಮನೆ ಹಿಂದಿಕ್ಕಿತ್ತು.  ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ(ಎಎಸ್‌ಐ) ಹಾಗೂ ಕೇಂದ್ರ ಪ್ರವಾಸೋದ್ಯಮ ಇಲಾಖೆ ನೀಡಿದ ವರದಿಯನ್ನು ತಾಳೆ ಹಾಕಿ ನೋಡಿದಾಗ, ಮೈಸೂರು ಅರಮನೆ ಸೌಂದರ್ಯವನ್ನು ಸವಿಯಲು ಬರುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿರುವ ಅಂಶ ವ್ಯಕ್ತವಾಗಿತ್ತು. ಆ ವರ್ಷ ಮೈಸೂರು ಅರಮನೆಯನ್ನು  ೨೫,೨೬,೩೬೭ ಪ್ರವಾಸಿಗರು ವೀಕ್ಷಿಸಿದ್ದರೆ, ತಾಜ್‌ಮಹಲ್‌ಗೆ  ೨೫,೩೯,೪೭೧ ಜನ ಭೇಟಿ ನೀಡಿದ್ದರು. ಆನಂತರದ ವರ್ಷಗಳಲ್ಲಿ ಕಾಣಿಸಿಕೊಂಡ ಆರ್ಥಿಕ ಹಿಂಜರಿತದ ಪರಿಣಾಮ, ೨೦೦೭-೦೮, ೨೦೦೮-೨೦೦೯ನೇ ಸಾಲಿನಲ್ಲಿ   ಪ್ರವಾಸಿಗರ ಸಂಖ್ಯೆ ಒಂದಿಷ್ಟು ಕಡಿಮೆಯಾಯಿತು.
ಆದರೆ, ೨೦೦೯-೨೦೧೦ನೇ ಸಾಲಿನಲ್ಲಿ ಆರ್ಥಿಕ ಹಿಂಜರಿತ ಸರಿದು ಹೋದ ಪರಿಣಾಮ ಮತ್ತೆ ಮೈಸೂರು ಅರಮನೆ  ದೇಶ-ವಿದೇಶಗಳ  ಸಹಸ್ರಾರು ಪ್ರವಾಸಿಗರನ್ನು  ಆಕರ್ಷಿಸಲಾರಂಭಿಸಿದೆ. ‘ಮಾರ್ಚ್ ಅಂತ್ಯದ ವೇಳೆಗೆ ಅರಮನೆಗೆ ೨೭,೭೧,೦೦೦ ಪ್ರವಾಸಿಗರು ಮೈಸೂರು ಅರಮನೆಗೆ ಭೇಟಿ ನೀಡಿದ್ದರು. ಏಪ್ರಿಲ್‌ನಲ್ಲಿ ಇನ್ನೂ ೨ ಲಕ್ಷ ಜನ ಪ್ರವಾಸಿಗರನ್ನು ಸೆಳೆಯಬಹುದು’  ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಪಿ. ವಿ. ಅವರಾದಿ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ಅಂಥಾ ಆಕರ್ಷಣೆ ಏನು: ಆಗ್ರಾದ  ತಾಜ್‌ಮಹಲ್‌ನಂಥ ಕೆಲವು ಸ್ಮಾರಕಗಳ  ಸೌಂದರ್ಯ ಮೊದಲ ನೋಟಕ್ಕೆ ಮನಸೆಳೆಯುತ್ತದೆ. ಭವ್ಯವಾದ ಮಹಲ್‌ನ ಮುಂದಿರುವ ನಿಗದಿತ  ಒಂದು ಕೇಂದ್ರದಲ್ಲಿ ನಿಂತು ನೋಡಿದ ಯಾವುದೇ ಪ್ರವಾಸಿಗ-ವಾವ್ ಎಂದು ಅಚ್ಚರಿಯ ಉದ್ಗಾರ ತೆಗೆಯಲೇಬೇಕು. ನಂತರದ ತಾಜ್ ವೀಕ್ಷಣೆ ಇದೇ ಅಚ್ಚರಿಯನ್ನು ಜೀವಂತವಾಗಿಡುವುದಿಲ್ಲ. ಎಲ್ಲ  ಪ್ರಸಿದ್ಧ ಪ್ರವಾಸಿ ಸ್ಮಾರಕಗಳು  ಇಂಥ ವೈಶಿಷ್ಟ್ಯವಾದ ಸೆಳೆತ ಹೊಂದಿವೆ. ಆದರೆ, ಮೈಸೂರು ಪ್ಯಾಲೇಸ್ ಎಲ್ಲ ಪ್ರವಾಸಿ ಕೇಂದ್ರಗಳಿಗಿಂತ ಭಿನ್ನ. ಮೊದಲ ನೋಟಕ್ಕೆ ತಾಜ್‌ನಷ್ಟು ಅಪರಿಮಿತವಾಗಿ ಸೆಳೆಯದೇ ಇರಬಹುದು. ಆದರೆ, ಅರಮನೆಯ ರೂಪ ರಾಶಿಯನ್ನು ಸವಿಯಲು ಒಳ ಹೊಕ್ಕರೆ, ಹೆಜ್ಜೆ-ಹೆಜ್ಜೆಗೂ  ಬೆರಗು ಮೂಡಿಸುತ್ತದೆ.
ಬೂದು ಬಣ್ಣದ ಗ್ರಾನೈಟ್ ಶಿಲೆಯಲ್ಲಿ ಅರಳಿ ನಿಂತಿರುವ ಮೂರು ಮಹಡಿಯ ಮಹಲು, ಅದರ ಮೇಲೆ ಐದು ಅಂತಸ್ತಿನ ಗೋಪುರವನ್ನು ಕಣ್ತುಂಬಿಸಿಕೊಂಡು ಒಳಹೊಕ್ಕರೆ, ಪ್ರತಿ ಹೆಜ್ಜೆಯಲ್ಲೂ ಅರಳಿರುವ ಕಲಾತ್ಮಕತೆ ಪ್ರವಾಸಿಗರನ್ನು ಕೈ ಹಿಡಿಯುತ್ತದೆ. ಸುತ್ತಮುತ್ತ, ಮೇಲೆ ಕೆಳಗೆ- ಯಾವ ಕಡೆ ಕತ್ತು ತಿರುಗಿಸಿದರೂ, ಎಲ್ಲ ಕಡೆಯೂ ಸೌಂದರ್ಯ. ಹಾಸುನೆಲ, ಭವ್ಯವಾದ ಕಟಾಂಜನ, ಮೆಟ್ಟಿಲುಗಳು, ಮೂಲೆಕಟ್ಟು,  ಕಂಭಗಳು,ತೊಲೆ, ಪರದೆ, ಜಾಲಾಂದ್ರಗಳು, ಬಾಗಿಲು-ಕಿಟಕಿಗಳ ಅಲಂಕಾರ, ದಂತ ಮತ್ತು ಮರದಿಂದ ಮಾಡಿರುವ  ಕಲಾಕೃತಿಗಳು, ಗೋಡೆಯ ಮೇಲಿರುವ ಪೇಯಿಂಟ್.. ಹೀಗೆ ಅರಮನೆಯೊಳಗೆ ಎಲ್ಲವೂ ನಯನ ಮನೋಹರ. ದರ್ಬಾರ್ ಹಾಲ್, ಸುವರ್ಣ ಸಿಂಹಾಸನ,  ರಾಜಮಹಾರಾಜರು ಬಳಸುತ್ತಿದ್ದ ಪೀಠೋಪಕರಣಗಳು ಅರಮನೆಯ ಸೌಂದರ್ಯವನ್ನು ಪೂರ್ಣಗೊಳಿ ಸಿವೆ ಎನ್ನುತ್ತಾರೆ  ಲೇಖಕ  ಪ್ರೊ. ಪಿ. ವಿ. ನಂಜುಂಡರಾಜೇ ಅರಸ್. ವಿದ್ಯುತ್ ದೀಪಾಲಂಕಾರದಲ್ಲಿ  ಕಂಗೊಳಿಸುವ ಅರಮನೆ,  ಬೆಳದಿಂಗಳಲ್ಲಿ ಕಾಣುವ ತಾಜ್ ಸೌಂದರ್ಯಕ್ಕೆ ಸರಿಸಾಟಿಯಾಗಿ ನಿಲ್ಲುತ್ತದೆ.
ಆಡಿಯೋ ಕಿಟ್ ಸೌಲಭ್ಯ: ದೇಶ-ವಿದೇಶದ ಪ್ರವಾಸಿಗರನ್ನು ಗಮನದಲ್ಲಿ ಇಟ್ಟುಕೊಂಡು ಅರಮನೆ ಮಂಡಳಿ ಕೆಲವೊಂದು ಸೌಕರ್ಯಗಳನ್ನು ಕಲ್ಪಿಸಿದೆ. ವಿದೇಶಿ ಪ್ರವಾಸಿಗರಿಗಾಗಿ  ಬಹುಭಾಷಾ ಶ್ರವ್ಯ ಸಲಕರಣೆಗಳು( ಆಡಿಯೋ ಕಿಟ್)  ಶ್ರವ್ಯ  ಮಾರ್ಗದರ್ಶಿ(ಆಡಿಯೋ ಗೈಡ್) ಸೌಲಭ್ಯ ನೀಡುತ್ತಿವೆ,  ಸುಮಾರು ಒಂದು ಗಂಟೆಗಳ ಅವಧಿಯಲ್ಲಿ ಅಂಬಾವಿಲಾಸ ಅರಮನೆಯ ಸಂಪೂರ್ಣ ಇತಿಹಾಸವನ್ನು ಆಡಿಯೋ ಗೈಡ್‌ಗಳು  ಪ್ರವಾಸಿಗರಿಗೆ  ಮನಮುಟ್ಟುವಂತೆ ವಿವರಿಸುತ್ತವೆ.  ಕನ್ನಡ, ಹಿಂದಿ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ಸ್ಪ್ಯಾನಿಶ್ ಮತ್ತು ಜಪಾನೀಸ್  ಸೇರಿ  ಎಂಟು ಭಾಷೆಯಲ್ಲಿ  ಈ ಸೇವೆ ಲಭ್ಯವಿದೆ. ರಷ್ಯಾದಲ್ಲಿ ಈ ಸೇವೆ ನೀಡಿ ಎಂಬ ಬೇಡಿಕೆ ಇದೆ ಎಂದು ಅವರಾದಿ ವಿವರಿಸಿದರು.

ತಲೆಬಿಸಿ ಮಾಡಿಕೊಳ್ಳದಿರುವುದೇ ಪರಿಹಾರದ ಮೊದಲ ಹಂತ

ವಿಕ ಸುದ್ದಿಲೋಕ ಮೈಸೂರು
‘ತಲೆನೋವು ಬಂತೆಂದರೆ ಬೆಚ್ಚಿ ಬೀಳುವ ಅಗತ್ಯವಿಲ್ಲ. ಎಲ್ಲಾ ತಲೆನೋವುಗಳು ಅಪಾಯಕಾರಿ ತಲೆನೋವು ಆಗಿರುವುದಿಲ್ಲ. ತಲೆಬಿಸಿ ಮಾಡಿಕೊಳ್ಳದಿರುವುದೇ ಪರಿಹಾರದ ಮೊದಲ ಹಂತ. ನಂತರ ತಕ್ಷಣವೇ ವೈದ್ಯರನ್ನು ಕಾಣುವುದು ಸೂಕ್ತ. ವೈದ್ಯರ ಸಲಹೆ ಇಲ್ಲದೇ  ಸ್ವ-ಚಿಕಿತ್ಸೆ ಸಲ್ಲದು. ಅದು ನಿಜವಾಗಲೂ ಅಪಾಯಕಾರಿ. ತಲೆನೋವನ್ನು ಕಷ್ಟಪಟ್ಟು ಅನುಭವಿಸಬೇಡಿ, ಚಿಕಿತ್ಸೆ ಪಡೆದುಕೊಳ್ಳಿ’
- ಇದು ನರರೋಗ ತಜ್ಞ ವೈದ್ಯರಾದ ಡಾ.ಸುರೇಶ್ ಅವರ ಸಲಹೆ. ‘ವಿಜಯ ಕರ್ನಾಟಕ’ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ  ‘ಫೋನ್- ಇನ್ ’ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ತಲೆನೋವಿನ ಸಮಸ್ಯೆ’ಗಳಿಗೆ ಸಂಬಂಧಿಸಿದ ಸಾರ್ವಜನಿಕರ ಅನುಮಾನಗಳಿಗೆ ಸಾವಧಾನವಾಗಿ ಉತ್ತರಿಸಿ ಪರಿಹರಿಸಿದರು, ಸಲಹೆ ನೀಡಿದರು, ಮಾರ್ಗದರ್ಶನ ಮಾಡಿದರು.
ವೈದ್ಯರಿಗೆ ದೂರವಾಣಿಯಲ್ಲಿ ಬಂದ ಎಲ್ಲಾ ಕರೆಗಳು ‘ತಲೆ ನೋವಿನ ಸಮಸ್ಯೆಗಳನ್ನು ಹೊತ್ತು ತಂದವು. ಆನೇಕ ಕರೆಗಳಲ್ಲಿ ತಲೆ ನೋವಿನ ಕುರಿತಂತೆ ವಿನಾಕಾರಣ ಆತಂಕವಿರುವುದು ವ್ಯಕ್ತ ವಾಯಿತು. ಚಿಕಿತ್ಸೆ ಪಡೆದುಕೊಳ್ಳುವಲ್ಲಿ ವಿಳಂಬ, ಚಿಕಿತ್ಸೆಯನ್ನು ಮುಂದುವರಿಸದಿರುವುದು ತಿಳಿದುಬಂತು. ಮೂರು ದಿನಗಳಿಂದ ಹಿಡಿದು ಅನೇಕ ವರ್ಷಗಳವರೆಗೆ ನೋವಿನ ಬಾಧೆ ಅನುಭವಿಸಿ ದವರು ಆತಂಕದಿಂದಲೇ ಕರೆ ಮಾಡಿ ‘ನೋವು’ ತೋಡಿ ಕೊಂಡರು.
ಶೇ.೨೦ ರಷ್ಟು ಜನಸಂಖ್ಯೆಯಲ್ಲಿ ತಲೆನೋವು ಸರ್ವೇಸಾಮಾನ್ಯ. ಅದರಲ್ಲಿ ಶೇ.೮೦ ರಷ್ಟು ಅರೆತಲೆನೋವು (ಮೈಗ್ರೇನ್) ಆಗಿರುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚು. ಅರೆತಲೆನೋವು, ಕ್ಲಸ್ಟರ್ ತಲೆನೋವು, ಟೆನ್‌ಷನ್ ತಲೆನೋವು, ಇತ್ಯಾದಿಗಳು ಕೆಲ ತಲೆನೋವಿನ ಬಗೆಗಳು. ಮೈಗ್ರೇನ್‌ಗೆ ೩ ರಿಂದ ೬ ತಿಂಗಳು ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು. ವ್ಯಕ್ತಿಯ ವಯಸ್ಸು, ದೇಹಸ್ಥಿತಿ, ಮನಸ್ಥಿತಿಯನ್ನು ಆಧರಿಸಿ ಚಿಕಿತ್ಸೆ ಅವಧಿ ವಿಸ್ತರಣೆಯಾಗುತ್ತದೆ. ವೈದ್ಯರ ಸಲಹೆ ಅನುಸರಿಸಿ ಔಷಧ ಸೇವಿಸಬೇಕು ಎಂದು ತಿಳಿಸಿದರು.
ಕಾರಣಗಳು ಅನೇಕ: ನಮ್ಮ ದೈಹಿಕ ಸಮಸ್ಯೆಗಳಿಂದಲೇ ತಲೆನೋವು ಬರುವುದರಿಂದ ತಡೆಗೆ ಔಷಧ ತೆಗೆದುಕೊಳ್ಳಲೇಬೇಕು. ಅದು ತಾತ್ಕಾಲಿಕವಾದರೂ ಶೇ.೮೦ ರಷ್ಟು ಗುಣವಾಗುತ್ತದೆ. ಉಳಿದಂತೆ ಇತರ ಬಹುವಿಧಾನ (ಮಲ್ಟಿಪಲ್)ಗಳನ್ನು ಬಳಸಬಹುದು. ತಲೆನೋವಿಗೆ ಕಾರಣ ಅನೇಕ. ಮೆದುಳಿಗೆ ರಕ್ತಪೂರೈಸುವ ರಕ್ತನಾಳಗಳ ವ್ಯತ್ಯಾಸದಿಂದ ಮೈಗ್ರೇನ್ ಬರುತ್ತದೆ. ಗ್ಲುಕೋಸ್ ಅಂಶ ರಕ್ತದ ಮೂಲಕ ಮೆದುಳಿಗೆ ಪೂರೈಕೆಯಾಗುವಲ್ಲಿ ವ್ಯತ್ಯಾಸವಾದರೆ ತಲೆನೋವು/ಮೈಗ್ರೇನ್ ಕಾಡುತ್ತದೆ. ಅನುವಂಶೀಯತೆ, ದೈಹಿಕ ಒತ್ತಡ ಇತ್ಯಾದಿಗಳು ಕಾರಣವಾದರೂ ಅವುಗಳೇ ನಿಖರವಾದವು ಎಂದು ಹೇಳಲಾಗದು.
ತಲೆಬೇನೆಗೆ  ಅನೇಕ ಸಾಮಾನ್ಯ ಕಾರಣಗಳೂ ಉಂಟು. ಹಲವ ರಿಗೆ ಪ್ರಯಾಣ, ವಾಸನೆ, ಹಬೆ, ಆವಿ, ಹೊಗೆ, ಘಾಟು, ಹಸಿವು, ಬಿಸಿಲಿನ ಬೇಗೆ, ನಿದ್ರಾಹೀನತೆ, ಕೆಲ ಆಹಾರಗಳು ಆಗಬರದಿರುವುದು ತಲೆನೋವು ಸೃಷ್ಟಿಸುತ್ತವೆ. ಗೆಡ್ಡೆ (ಟ್ಯೂಮರ್) ಯಿಂದ ಶೇ.೨೦ ರಷ್ಟು ತಲೆನೋವು ಬರುತ್ತದೆ. ಆದರೆ ಎಲ್ಲಾ ತಲೆನೋವು ಟ್ಯೂಮರ್ ಅಲ್ಲ. ಮೊಟ್ಟ ಮೊದಲು ಏಕಾಏಕಿ ತಲೆ ಸಿಡಿಯುವಷ್ಟು ತಲೆನೋವು ಕಾಣಿಸಿಕೊಂಡು ವಾಂತಿಯಾದರೆ ಸ್ಕ್ಯಾನ್ ಮಾಡಿಸಬೇಕು. ಸಾಮಾನ್ಯ ತಲೆನೋವಿಗೆ ಸ್ಕ್ಯಾನಿಂಗ್ ಅನಗತ್ಯ.
ಮೆದುಳಿನ ಬದಲಾವಣೆ, ನ್ಯೂರಾನ್ಸ್ ಮೇಲಿನ ಒತ್ತಡ, ಮೆದುಳಿನಲ್ಲಿರುವ ರಾಸಾಯನಿಕಗಳ ಪ್ರಕ್ರಿಯೆ ಈ ಮೂರು ಸಿದ್ಧಾಂತಗಳ/ಥಿಯರಿಗಳ ಮೇಲೆ ಮೈಗ್ರೇನ್ ಬರಬಹುದೆಂದು ತಿಳಿಯಲಾಗಿದೆ. ವಿದೇಶದಲ್ಲಿ  ಪ್ರಸ್ತುತ ತಲೆನೋವು ಒಂದು ಪ್ರತ್ಯೇಕ ಕಾಯಿಲೆಯಾಗಿ ಪರಿಗಣಿತವಾಗುತ್ತಿದೆ. ಅದಕ್ಕೇ ಮೀಸಲಾದ ಆಸ್ಪತ್ರೆಗಳು ತಲೆಎತ್ತಲಾರಂಭಿಸಿವೆ.
ಕನ್ನಡಕ ಪರಿಹಾರ ಅಲ್ಲ: ದೃಷ್ಟಿದೋಷ ತಲೆಬೇನೆಗೆ ನೇರ ಕಾರಣವಲ್ಲ. ದೃಷ್ಟಿದೋಷದಿಂದ ಶೇ.೧ ರಷ್ಟು ಮಾತ್ರ ತಲೆನೋವು ಬರುತ್ತದೆ. ಕನ್ನಡಕ ಧರಿಸುವುದರಿಂದಲೇ ಪರಿಹಾರ ಸಿಗುವುದಿಲ್ಲ. ತಲೆನೋವು ಬಂದಾಕ್ಷಣ ಕನ್ನಡಕ ಧರಿಸಲು ಮುಂದಾಗುವುದು ಮೂಢನಂಬಿಕೆ. ದೃಷ್ಟಿ ದೌರ್ಬಲ್ಯದಿಂದ ಓದುವಾಗ, ಕಂಪ್ಯೂಟರ್ ಬಳಸುವಾಗ ಅಥವಾ ಇನ್ಯಾವುದೇ ಕಾರ‍್ಯದಲ್ಲಿ ದೃಷ್ಟಿ ಮತ್ತು ಸ್ನಾಯುಗಳನ್ನು ಅದಕ್ಕೆ ಬಲವಂತವಾಗಿ ಹೊಂದಿಸಿಕೊಳ್ಳುವ ಭರದಲ್ಲಿ ಬಿಗಿಹಿಡಿದಾಗ ತಲೆಬೇನೆ ಶುರುವಾಗುತ್ತದೆ. ಹಾಗಾಗಿ ತಲೆನೋವಿಗೆ ಕಾರಣವಾಗುವ ಇತರ ನಿಖರ ಕಾರಣಗಳನ್ನು ಪತ್ತೆ ಮಾಡುವುದು ಒಳಿತು ಎಂದರು. 
ಮಕ್ಕಳಲ್ಲೂ ತಲೆಬೇನೆ: ೫ ರಿಂದ ೧೫ ವರ್ಷದ ಮಕ್ಕಳಲ್ಲಿ ತಲೆನೋವು ಸಾಮಾನ್ಯ. ಪುಟ್ಟ ಮಕ್ಕಳಿಗೆ ತಲೆಬೇನೆ/ಮೈಗ್ರೇನ್ ಕಾಣಿಸಿಕೊಳ್ಳಲು ಅನೇಕ ಕಾರಣಗಳಿರುತ್ತವೆ. ಮೆದುಳಿನ ಬೆಳವಣಿಗೆಯಲ್ಲಿ ಏರುಪೇರು, ಹೆಚ್ಚು ನೀರಿನಾಂಶ, ಹುಟ್ಟಿನಿಂದಲೇ ಗೆಡ್ಡೆ ಇದ್ದರೆ, ಪ್ರಸವ ವೇಳೆ ಮಗುವಿಗೆ ಡ್ಯಾಮೇಜ್ ಆಗಿ ರಕ್ತಸ್ರಾವವಾಗಿದ್ದರೆ, ವೈರಾಣು ಸೋಂಕು, ಅನುವಂಶೀಯತೆ, ಸೈನೋಸೈಟೀಸ್ ಮತ್ತಿತರ ಅನೇಕ ಕಾರಣಗಳಿರುತ್ತವೆ.
ಆದರೆ ಅದನ್ನು ಪರೀಕ್ಷೆಯಿಂದ ದೃಢಪಡಿಸಿಕೊಳ್ಳುವುದು ಅವಶ್ಯ. ನಿಖರ ಕಾರಣ ಪತ್ತೆಯಾದರೆ ಚಿಕಿತ್ಸೆ ಸುಲಭ. ದೊಡ್ಡವರ ತಲೆನೋವಿಗೆ ಮಾತ್ರೆ ನಿವಾರಕವಾಗಬಹುದು. ಆದರೆ ಮಕ್ಕಳಿಗೆ ಪರೀಕ್ಷೆ ನಂತರವೇ ಚಿಕಿತ್ಸೆ ಅವಶ್ಯ. ಮೈಗ್ರೇನ್‌ಗೆ ಅನುವಂಶೀಯತೆ ಶೇ.೨೦-೩೦ ರಷ್ಟು ಕಾರಣವಾದರೆ, ಶೇ.೭೦-೮೦ ರಷ್ಟು ಇತರ ಕಾರಣಗಳಿಂದ ಬರುತ್ತದೆ. ಧ್ಯಾನ, ಯೋಗದಿಂದಲೂ ಒಂದಷ್ಟು ತಲೆನೋವಿನ ಬಾಧೆ ನಿವಾರಿಸಿಕೊಳ್ಳಬಹುದಾಗಿದೆ. ಆಯುರ್ವೇದ ಔಷಧ ಬಳಕೆಯಿಂದಲೂ ಗುಣಪಡಿಸಬಹುದೆಂದು ಸಾಬೀತಾಗಿದೆ ಎಂದು ತಿಳಿಸಿದರು.
ನಮ್ಮ ವೈದ್ಯರು
ಡಾ.ಸುರೇಶ್, ಎಂಬಿಬಿಎಸ್,ಎಂಡಿ,ಡಿಎಂ
ನರರೋಗ ತಜ್ಞರಾದ ಡಾ.ಸುರೇಶ್ ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನರರೋಗಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ರಾಗಿದ್ದಾರೆ. ಮೈಸೂರಿನಲ್ಲೇ ಪೂರ್ಣ ವಿದ್ಯಾಭ್ಯಾಸ ಪೂರೈಸಿರುವ ಅವರು, ಪಿಯುಸಿವರೆಗೆ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಮೈಸೂರು ಮಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಡಿ ಕಲಿತ ಅವರು, ಬೆಂಗಳೂರಿನ ನಿಮ್ಹಾನ್‌ನಲ್ಲಿ ಡಿಎಂ ಮುಗಿಸಿದರು. ೨೦೦೦ ರಲ್ಲಿ ಸರಕಾರಿ ಹುದ್ದೆಗೆ ವೈದ್ಯರಾಗಿ ಸೇರಿದರು. ಮೊಬೈಲ್ -೯೪೪೮೦೪೫೦೫೪.
ಎಲ್ಲಿ , ಯಾವಾಗ ಸಿಗುತ್ತಾರೆ ?
ತಲೆನೋವಿನ ಸಮಸ್ಯೆಗಳಿಗೆ ಈ ವೈದ್ಯರನ್ನು ದೊಡ್ಡಾಸ್ಪತ್ರೆ ಎಂದೇ ಖ್ಯಾತವಾಗಿರುವ ಕೆ.ಆರ್.ಆಸ್ಪತ್ರೆಯ ನರರೋಗಶಾಸ್ತ್ರ ವಿಭಾಗದ ಕೊಠಡಿ ಸಂಖ್ಯೆ ೯ ರ ಹೊರರೋಗಿಗಳ ವಿಭಾಗ (ಒಪಿಡಿ)ದಲ್ಲಿ ವಾರದಲ್ಲಿ ಎರಡು ದಿನಗಳು (ಬುಧವಾರ ಮತ್ತು ಶನಿವಾರ) ಭೇಟಿ ಮಾಡಿ ಪರಿಹಾರ ಪಡೆದುಕೊಳ್ಳಬಹುದು.
ವಿರಾಮದಿಂದ ಆರಾಮ
ಕಥೆ, ಕವಿತೆಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿರುವ ಮೈಸೂರಿನ ಉಷಾ ಎಂಬುವವರು ಪಾತ್ರ ಸೃಷ್ಟಿಸಲು ತಿಣು ಕಾಡುವಾಗ ತಲೆನೋವು ಧುತ್ತನೆ ಕಾಡುತ್ತದೆ ಎಂದು  ಅಳಲು ತೋಡಿ ಕೊಂಡರು. ಅಂದು ಕೊಂಡ ಪಾತ್ರಗಳು ಸಿಗದಿದ್ದಾಗ ತಲೆ, ಕುತ್ತಿಗೆ ಮಾಂಸ ಖಂಡಗಳು ಬಿಗಿ ಯಾಗಿ ಟೆನ್‌ಷನ್ ಶುರುವಾಗಿ ತಲೆ ಬಾಧೆಗೆ ಮೂಲವಾಗುತ್ತದೆ ಎಂದು ಅಲವತ್ತು ಕೊಂಡರು. ಅದಕ್ಕೆ ವೈದ್ಯರು - ಭಾವನಾತ್ಮಕ ಲೋಕದಲ್ಲಿ ಇರುವವರು ಗುರಿ ತಲುಪದಿದ್ದಾಗ ನಿರಾಶರಾಗಿ ಯೋಚನೆಗೆ ಬೀಳುವುದರಿಂದ ತಲೆನೋವು ಕಾಣಿಸಿಕೊಳ್ಳು ತ್ತದೆ. ಇದಕ್ಕೆ ಸರಳ ಪರಿಹಾರವೆಂದರೆ ಕೆಲಸದ ನಡುವೆ ‘ವಿರಾಮ’ ತೆಗೆದುಕೊಳ್ಳುವುದು ಎಂದು ಸಲಹೆ ಮಾಡಿದರು.

‘ಎಲ್ಲರೂ...’ಒಂದಾಗದಿದ್ದರೆ ಉಳಿಗಾಲವಿಲ್ಲ

ಪಿ.ಓಂಕಾರ್ ಮೈಸೂರು
ವರ್ತಮಾನದ ರಾಜಕೀಯ,ಬಂಡವಾಳ ಶಾಹಿ ವ್ಯವಸ್ಥೆಯಿಂದ  ಜನತಂತ್ರಕ್ಕೆ ಗಂಡಾಂತರ ಎದುರಾಗಿದೆ. ‘ಎಲ್ಲರೂ ಒಂದಾಗಿ...’ ಜನತಂತ್ರ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕು. ಇಲ್ಲವೇ ಯಾರಿಗೂ ಉಳಿಗಾಲವಿಲ್ಲ.
-ಇದು ದೇವನೂರ ಮಹಾದೇವ ಅವರ ಆತಂಕ.
ಅಂತಃಕರಣವಿಲ್ಲದ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಗಳು  ಜಗತ್ತನ್ನು ಆಳುತ್ತಿದ್ದು ,‘ಬಲಿಷ್ಠ  ಮಾತ್ರ ಬದುಕುತ್ತಾನೆ’ ಎನ್ನು ವಂತಾಗಿದೆ. ದಲಿತರು, ಕಾರ್ಮಿಕರು, ರೈತರಿಗೆ ಉಳಿಗಾಲವಿಲ್ಲದಂತಾಗಿ ಅಸಮಾನತೆ, ಅಸಹಾಯಕತೆ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ, ಇಂಥವರೆಲ್ಲರೂ  ಒಂದಾಗಿ ಉದ್ಯೋಗ, ಸ್ವಾವಲಂಬನೆ, ಸಮಾನತೆಯ ದಿಕ್ಕಿನಲ್ಲಿ ಚಲಿಸುವುದು ಅತ್ಯಂತ  ಅನಿವಾರ‍್ಯ. ಆದ್ದರಿಂದಲೇ  ‘ಎಲ್ಲರೂ ಒಂದಾಗಿ...’ ಎನ್ನುವ ಆಶಯವನ್ನು ಕೇಂದ್ರೀಕರಿಸುತ್ತಿದ್ದೇವೆ ಎಂದವರು ಮಹಾದೇವ.
‘ಒಡಲಾಳ’ ಅನಾವರಣ
  ಆ ದಶಕ  ಮತ್ತು ಈಗ ಒಂದಾಗುವ ತುರ್ತು?
- ಎಪ್ಪತ್ತು ,ಎಂಬತ್ತರ ದಶಕಕ್ಕೂ ,ಪ್ರಸ್ತುತಕ್ಕೂ ಅಜಗಜಾಂತರ ವ್ಯತ್ಯಾಸ. ಆಗ ಮತದಾರನ  ಮತಕ್ಕೆ ‘ಮೌಲ್ಯ’ವಿತ್ತು. ಇವತ್ತು ಅದು ಕೊಂಡುಕೊಳ್ಳುವ ವಸ್ತು. ಶಾಸಕರೂ ಖರೀದಿ ಸರಕಾಗಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿ ‘ಮತ’ ಮಾರಿಕೊಂಡವನು ಬಂಡವಾಳ ಶಾಹಿ ವ್ಯವಸ್ಥೆಯ ಬಲಿಪಶು ಆಗುತ್ತಿದ್ದಾನೆ. ಅಸಮಾನತೆ ಹಿಂದೆಂದಿಗಿಂತ  ಇಂದು ಹೆಚ್ಚುತ್ತಿದೆ. ಬಡವರಿಗೆ ಉಳಿಗಾಲವೇ ಇಲ್ಲ ಎನ್ನುವಂತ ಪರಿಸ್ಥಿತಿ.
 ವಿಘಟನೆಯಾದ ಮನಸ್ಸುಗಳ ಪುನರ್ ಸಂಘಟನೆ ಸಾಧ್ಯ ಅನ್ನಿಸುತ್ತಾ?
- ಯಾವುದೇ  ಪ್ರಗತಿಪರ ಸಂಘಟನೆಗಳಿಗೆ ರಾಜಕೀಯ ನಿಲುವಿರಬೇಕು. ಇಲ್ಲವೇ ಬೇರೆಯವರಿಗೆ ಅಸ್ತ್ರವಾಗುವ ಅಪಾಯವಿದೆ. ಬಿಜೆಪಿ ಥರದ ಕೋಮುವಾದಿ, ದ್ವೇಷವನ್ನೇ ಬಂಡವಾಳ  ಮಾಡಿಕೊಂಡ ಪಕ್ಷ ಅಧಿಕಾರಕ್ಕೆ ಬರಲು ನಾವೂ ಕಾರಣವಾಗಬಹುದು. ಆದ್ದರಿಂದ, ರಾಜಕೀಯ ನಿಲುವು ಅವಶ್ಯ.  ಹೋರಾಟಗಾರರಿಗೆ ರಾಜಕೀಯ ನಿರ್ವಹಣೆ ಕಷ್ಟ. ನಿರ್ವಹಿಸುವುದರಲ್ಲಿ ಎದುರಾದ ಸಮಸ್ಯೆ,ಭಿನ್ನಾಭಿಪ್ರಾಯಗಳಿಂದ ದಸಂಸ ಹಿಂದೆ ವಿಘಟಿಸಿರಬಹುದು. ಅದು ಸೈದ್ಧಾಂತಿಕವಾದದ್ದು ಅಲ್ಲವಾದ್ದರಿಂದ ನಿಭಾಯಿಸಿಕೊಳ್ಳುವ ಹದ ನಮಗೆ ಬೇಕು, ಪಡೆದುಕೊಳ್ಳಬೇಕು.
 ಚಳವಳಿಯ ಕಾವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ ಯಾಕೆ?
 -ಎಲ್ಲರೂ ದಸಂಸದ ಚುನಾವಣೆ ಬಹಿಷ್ಕಾರದಂತ  ನಿಲುವನ್ನು ವೈಭವೀಕರಿಸುತ್ತಿದ್ದಾರೆ. ಅದರೊಳಗಿನ ಅಪಾಯವನ್ನು ನೋಡುವುದಿಲ್ಲ. ಅದೇ ಮುಂದುವರಿದು ಅತಿರೇಕಕ್ಕೆ ಹೋಗಿದ್ದರೆ ‘ನಕ್ಸಲೈಟ್’ ರೀತಿಯ ಸಂಘಟನೆಯಾಗುವ ಅಪಾಯವಿತ್ತು. ಆಗಲೂ ಅಭಿಪ್ರಾಯ ಭೇದದಿಂದ ಛಿದ್ರತೆ ಖಂಡಿತವಾಗಿತ್ತು. ಒಂದು ಹಂತದಲ್ಲಿ  ಬಿಎಸ್ಪಿಗೆ ಇಡೀ ದಸಂಸ ಬೆಂಬಲ ಕೊಟ್ಟಿತು. ಬಿಎಸ್ಪಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಜತೆ ಸೇರಿ ಸರಕಾರ ಮಾಡಿದ ನಂತರ  ಪರ-ವಿರೋಧದ ಎರಡು ಗುಂಪುಗಳಾದವು. ಅಲ್ಲಿಂದ ರಾಜಕೀಯವಾಗಿ ಏಕ ನಿಲುವು ಸಾಧ್ಯವಾಗದ್ದು ಹಲವು ಗುಂಪುಗಳಾಗಲು ಕಾರಣ.
 ಕೆಲವು ನಾಯಕರ ಹಿತಾಸಕ್ತಿಗಳೇ ವಿಘಟನೆಗೆ ಕಾರಣ ಎಂಬ ಮಾತಿದೆಯಲ್ಲ?
- ದಸಂಸ ಎಲ್ಲಾ ಕ್ಷೇತ್ರಕ್ಕೂ ಹಬ್ಬಲಿಲ್ಲ. ಅವರವರ ಸ್ವಭಾವಕ್ಕೆ ತಕ್ಕಂತೆ ನಡೆದದ್ದರಿಂದ  ಅಸಂಖ್ಯಾತ ನಾಯಕರು ಹುಟ್ಟಿಕೊಂಡರು. ಸಾಮರಸ್ಯ ಸಾಧಿಸಿ, ಎಲ್ಲಾ ಕ್ಷೇತ್ರಗಳನ್ನೂ ಕಾರ‍್ಯಕ್ಷೇತ್ರ ಮಾಡಿಕೊಂಡು ಸಮನ್ವಯ ಸಾಧಿಸುವ ಒಂದು ರಚನೆ  ಅಗತ್ಯವಿತ್ತು. ಆದರೆ, ಎಲ್ಲರ ಕಣ್ಣೂ  ಒಂದೇ ರೀತಿ ಕಾರ‍್ಯಕ್ರಮ, ಒಂದೇ ಸಮಸ್ಯೆ, ಒಂದೇ ಕ್ಷೇತ್ರದತ್ತ ನೆಟ್ಟಿದ್ದರಿಂದ ಪೈಪೋಟಿ ಉಂಟಾಯಿತು. ಇದೂ ವಿಘಟನೆಗೆ ಇನ್ನೊಂದು ಕಾರಣ. ವಿದ್ಯಾರ್ಥಿ,ಮಹಿಳಾ,ಕೂಲಿ ಕಾರ್ಮಿಕರು, ರೈತರು, ಸಹಕಾರ  ಕ್ಷೇತ್ರ, ವಿದ್ಯಾ ಕ್ಷೇತ್ರ, ಪ್ರಕಟಣೆ  ಇತ್ಯಾದಿ ಎಲ್ಲಾ ಕ್ಷೇತ್ರಗಳನ್ನು ತಮ್ಮ ಕಾರ‍್ಯಚಟುವಟಿಕೆ,ನಾಯಕತ್ವಕ್ಕೆ ವ್ಯಾಪಿಸಿಕೊಂಡಿದ್ದರೆ  ಪೈಪೋಟಿ ತಪ್ಪಿಸಬಹುದಿತ್ತು. ಈ ರೀತಿ ದಸಂಸಕ್ಕೂ ಸಾಧ್ಯವಾಗಲಿಲ್ಲ. ರೈತ ಸಂಘಕ್ಕೂ ಆಗಲಿಲ್ಲ. ಭವಿಷ್ಯದ ನಡೆ ಹೀಗೆ,ವಿಶಾಲ ವ್ಯಾಪಿಯಾಗಿರಬೇಕು.
 ಈಗಿನ ನಾಯಕತ್ವದಲ್ಲೇ ಒಂದಾಗುವ ಸಾಧ್ಯತೆ ಇದೆಯೇ?
-ಈಗ,ರಾಜ್ಯಮಟ್ಟದಲ್ಲಿ ದಲಿತಾ ಏಕತಾ ಚಾಲನಾ ಸಮಿತಿ ರಚನೆಯಾಗಿದೆ. ಪ್ರೊ.ಎಚ್.ಎಂ.ರುದ್ರಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಮರಿಸ್ವಾಮಿ  ಅವರ ನಾಯಕತ್ವದಲ್ಲಿ ಈ ಪ್ರಯತ್ನ ನಡೆಯುತ್ತಿದೆ. ಈಗಿರುವ ಎಲ್ಲಾ ಬಣಗಳ  ಸಂಚಾಲಕರ ಜತೆ ಮಾತುಕತೆ ನಡೆದಿದೆ. ಮೊದಲ ಹಂತದಲ್ಲಿ ವರ್ಷಕ್ಕೆ ನಾಲ್ಕಾರು ಜಂಟಿ ಕಾರ‍್ಯಕ್ರಮ ರೂಪಿಸಲಾಗುವುದು.
 ಬಣಗಳು ಒಗ್ಗೂಡಿದರಷ್ಟೇ ಸಾಲದು, ಮನಸ್ಸುಗಳನ್ನು ಬೆಸೆಯುವ ಕೆಲಸ ಆಗಬೇಕು ಎನ್ನುವ ಮಾತಿದೆಯಲ್ಲ?
-ಇದು ಬಹಳ ದೊಡ್ಡ ಮಾತು. ಆಗಬೇಕಾದ ಅಗತ್ಯವೂ ಸಹ. ಆ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇದು. ಜಿಲ್ಲಾ ಮಟ್ಟದಲ್ಲಿ ಅಧ್ಯಯನ ಶಿಬಿರವೊಂದು ನಡೆದರೆ, ಆ ಸಂದರ್ಭವೇ ಮನಸ್ಸು ಕೂಡಿಸುವ ಕೆಲಸವಾದೀತು. ಅದಕ್ಕಾಗೇ ಪ್ರತ್ಯೇಕ ಕಾರ‍್ಯಕ್ರಮ ಬೇಕಿಲ್ಲ.
 ರೈತ, ಪ್ರಗತಿಪರ ಸಂಘಟನೆಗಳ ಪಾತ್ರ?
-ಮೊದಲು ಇದಾಗಲಿ.ನಂತರ ವಿಶಾಲತೆಯನ್ನು ಪಡೆದುಕೊಳ್ಳುವ ಬಗ್ಗೆ ಆಲೋಚಿಸಬಹುದು. ‘ನಾವಷ್ಟೇ(ನಾವು ಮಾತ್ರ)’ ಎಂದುಕೊಳ್ಳುವವರೆಲ್ಲಾ ಬೇಗ ಸುಸ್ತು ಹೊಡೆಯುತ್ತಾರೆ.
  ಶಕ್ತಿ ರಾಜಕಾರಣ  ಒಡೆಯುವುದನ್ನೇ ಕಾಯಕ ಮಾಡಿಕೊಂಡಿ ರುವ ವರ್ತಮಾನದಲ್ಲಿ ಆ ಶಕ್ತಿಗಳು ಒಂದಾಗಲು ಬಿಡುತ್ತವೆಯೇ?
-ನಾವು ಮಾಡುವುದನ್ನು ಮಾಡಲೇಬೇಕು. ಉತ್ತರ ಚರಿತ್ರೆಗೆ ಸಂಬಂಧಿಸಿದ್ದು. ವಿಫಲಗೊಳಿಸುವ ಪ್ರಯತ್ನ ಆಗುತ್ತಲೇ ಇರುತ್ತೆ. ಮನೆ ಕಟ್ಟಿಸುವ  ಸಂದರ್ಭದಲ್ಲೂ ಅದರದ್ದೇ ಆದ ಸಮಸ್ಯೆಗಳಿರುತ್ತವೆ. ನಮ್ಮ ಆಶಯ ಕೂಡಿಸುವ ಕಡೆ, ಸಮಾನತೆಯ ಕಡೆ ಹೋಗ್ತಿದೆಯೋ ಇಲ್ಲವೋ ಎನ್ನುವುದನ್ನಷ್ಟೇ ಯೋಚಿಸಬೇಕು. ಮುಖಾಮುಖಿ ಯಾಗುವ ವಾಸ್ತವ ಬೇರೆಯದೇ ಇರಬಹುದು,ಆಶಯ,ಏಕತೆ, ಸಮಾನತೆಯಷ್ಟೇ ನಮ್ಮ ಹಂಬಲವಾಗಬೇಕು.
 ಎಲ್ಲಾ ಬಣಗಳ ಪ್ರಮುಖರ ರಾಜಕೀಯ ಹಿತಾಸಕ್ತಿಗಳು ಅಡ್ಡಿಯಾಗು ವುದಿಲ್ಲವೇ?
-ಈಗಾಗಲೇ ಮುಂದುವರಿದ ಬೆಳವಣಿಗೆ ಇದು. ಒಂದು ಮನೆಯಲ್ಲಿ ಗಂಡ,ಹೆಂಡತಿ,ಮಕ್ಕಳು ಎಲ್ಲರೂ ನಾಲ್ಕು ಪಕ್ಷಕ್ಕೆ ಮತ ಹಾಕುತ್ತಾರೆ. ಆದರೂ,ಕುಟುಂಬ ಕುಟುಂಬವಾಗಿರಬಲ್ಲದು. ಕೋಮುವಾದಿ ಪಕ್ಷದ ಹೊರತು ಉಳಿದ ಪಕ್ಷಗಳ ಒಲವಿರುವವರು ಚುನಾವಣೆ ಸಂದರ್ಭದಲ್ಲಿ ಅವರವರ  ಇಷ್ಟದಂತೆ ಸ್ಪಂದಿಸಿ, ಉಳಿದ ಸಂದರ್ಭದಲ್ಲಿ ‘ಕುಟುಂಬ’ದಂತಿರುವುದು, ಸ್ವಲ್ಪ ಅಸಮಾಧಾನ ಆಗಬಹುದಾದರೂ ಕಷ್ಟ ಅಲ್ಲ. ದಲಿತ ಏಕತಾ ಸಮಿತಿ ಆಶಯ ‘ಎಲ್ಲರೂ ಒಂದಾಗಿ’ ಎನ್ನುವುದಾದ್ದರಿಂದ  ಇದೇನು ಸಮಸ್ಯೆ ಆಗಲ್ಲ ಎಂದುಕೊಂಡಿದ್ದೇನೆ.
 ಒಟ್ಟು ನಡೆಯ ಕುರಿತು ಪ್ರತಿಕ್ರಿಯೆ ಹೇಗಿದೆ?
-ಎಲ್ಲರೂ ತುಂಬಾ ಆಸೆಗಣ್ಣಿನಿಂದ ನೋಡ್ತಿದ್ದಾರೆ. ದಲಿತ ನೌಕರರು, ಅಧಿಕಾರಿಗಳು, ಬೇಸತ್ತು ಸುಮ್ಮನಿದ್ದ ಕಾರ‍್ಯಕರ್ತರಲ್ಲಿ ಕ್ರಿಯಾಶೀಲತೆ, ಸ್ಪಂದನೆ ಉಂಟಾಗಿದೆ. ಮಾಧ್ಯಮಗಳಲ್ಲೂ ಕುತೂಹಲ ಮೂಡಿಸಿದೆ. ಬೇರೆ ಪ್ರಗತಿಪರ ಸಂಘಟನೆಗಳು ಕೂಡ ಪ್ರಭಾವಿತವಾಗಿವೆ. ಇದು ಅತ್ಯಂತ ಆಶಾದಾಯಕ ಬೆಳವಣಿಗೆ.

ಯುಜಿಸಿಗೆ ‘ಲೆಕ್ಕ’ ನೀಡಲು ಸೆಮಿನಾರ್‌ಗಳೆಂಬ ಪ್ರಹಸನ !

ಚೀ. ಜ. ರಾಜೀವ  ಮೈಸೂರು
‘ಆ ಪ್ರೊಫೆಸರ್ ಏನು ಮಾತನಾಡಿದ್ರು ಅಂಥ ನನಗೆ ನಿಜಕ್ಕೂ ಗೊತ್ತಾಗಲಿಲ್ಲ. ಪ್ರಬಂಧ ಮಂಡಿಸಲು ನೀಡಿದ ವಿಷಯವನ್ನು ಯಾಕೆ ಅಷ್ಟೊಂದು ಕ್ಲಿಷ್ಟವಾಗಿ, ಗಹನವಾಗಿ ಹೇಳಿದ್ರೂ ಅನ್ನೋದು ಕೂಡ ತಿಳೀಲಿಲ್ಲ.  ಎಷ್ಟೇ ಆದ್ರೂ ಇದು - ರಾಷ್ಟ್ರೀಯ ವಿಚಾರ ಸಂಕಿರಣ  ಅಲ್ವಾ. ಅದಕ್ಕೆ ಅವರು ಯಾರಿಗೂ ಅರ್ಥವಾಗ ದಂತೆ ಮಾತನಾಡಿದ್ರೂ ಅಂಥ ಕಾಣುತ್ತೆ.... !’  
‘ಇಂಗ್ಲಿಷ್ ಸಾಹಿತ್ಯ ವಿಮರ್ಶೆಯ ಇತ್ತೀಚಿನ ಬೆಳವಣಿಗೆ’ ಕುರಿತು  ನಗರದಲ್ಲಿ ನಡೆದ  ವಿಚಾರ ಸಂಕಿರಣದಲ್ಲಿ  ಭಾಗವಹಿಸಿದ್ದ  ಇಂಗ್ಲಿಷ್  ಅಧ್ಯಾಪಕರೊಬ್ಬರ ಅನಿಸಿಕೆ ಇದು. ‘ಈ ವಿಚಾರ ಸಂಕಿರಣದಿಂದ ನಿಮಗೆಷ್ಟು ಲಾಭವಾಯಿತು ?’  ಎಂಬ ಪ್ರಶ್ನೆಗೆ  ಅವರು ನೀಡಿದ  ಹೇಳಿಕೆಯಲ್ಲಿ ಪ್ರಶ್ನೆ, ಅನುಮಾನ, ಕುತೂಹಲ, ವ್ಯಂಗ್ಯ  ಮತ್ತು ವಿಷಾದ  ಎಲ್ಲವೂ ಇತ್ತು, ಸಮರ್ಪಕ ಉತ್ತರವೊಂದನ್ನು ಬಿಟ್ಟು .
ಎರಡು ವರ್ಷದ ಹಿಂದೆಯಷ್ಟೇ ನೌಕರಿ ಹಿಡಿದು, ವೃತ್ತಿಯ ಬಗ್ಗೆ  ಅತ್ಯುತ್ಸಾಹ  ಹೊಂದಿರುವ  ತರುಣ ಅಧ್ಯಾಪಕನ ಪಾಡು ಹೀಗಿರುವಾಗ, ವಿಚಾರ ಸಂಕಿರಣದಲ್ಲಿ  ಭಾಗವಹಿಸಿದ್ದ ವಿದ್ಯಾರ್ಥಿಗಳ  ಸ್ಥಿತಿ ಏನಾಗಿರಬೇಡ ? 
ನಮ್ಮ ಕಾಲೇಜುಗಳಲ್ಲಿ ನಡೆಯುವ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಯುಜಿಸಿ ಪ್ರಾಯೋಜಿತ  ಪ್ರಾದೇಶಿಕ/ ರಾಷ್ಟ್ರೀಯ/ ಅಂತಾರಾಷ್ಟ್ರೀಯ ವಿಚಾರಸಂಕಿರಣ ಮತ್ತು ಕಾರ್ಯಾಗಾರಗಳ ಗುಣಮಟ್ಟದ  ಬಗ್ಗೆ  ಶೈಕ್ಷಣಿಕ ವಲಯ ಕಂಡುಕೊಂಡಿರುವ ಸತ್ಯವಿದು !
ದೇಶ-ವಿದೇಶದ ಶಿಕ್ಷಣ ತಜ್ಞರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಪರಸ್ಪರ ಜ್ಞಾನ  ವಿನಿಮಯಕ್ಕೆ ದಾರಿ ಮಾಡಿಕೊಡುವ ಮೂಲಕ ವಿದ್ಯಾರ್ಥಿಗಳು ಮತ್ತು  ಅಧ್ಯಾಪಕರ ಅರಿವಿನ ಮಟ್ಟವನ್ನು ವಿಸ್ತರಿಸುವ ಮಹತ್ತರ ಉದ್ದೇಶದಿಂದ ಯುಜಿಸಿ ಆರಂಭಿಸಿರುವ ‘ಸೆಮಿನಾರ್/ವರ್ಕ್‌ಶಾಪ್’ಗಳು ತಲುಪಿರುವ ಸ್ಥಿತಿ ಇದು.
ಶೈಕ್ಷಣಿಕ ಬೇಸರಕ್ಕೆ ಬ್ರೇಕ್ ಸಿಗಲಿಲ್ಲ: ಈ ಹಿಂದೆ ಪದವಿಯ ಬಹುತೇಕ ವಿದ್ಯಾರ್ಥಿಗಳ ಪಾಲಿಗೆ  ಶೈಕ್ಷಣಿಕ ವರ್ಷ ಎಂದರೆ  ತರಗತಿ, ಪ್ರಯೋಗಾಲಯ, ಪರೀಕ್ಷೆಗಳು, ವರ್ಷದ ಆರಂಭದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ, ಅಂತ್ಯದಲ್ಲಿ ಸಮಾರೋಪಕ್ಕೆ ಹೊಂದಿಕೊಂಡಂತೆ ಒಂದಿಷ್ಟು  ಶಿಕ್ಷಣೇತರ ಕಾರ‍್ಯಕ್ರಮ.... ಇಷ್ಟೇ  ಆಗಿರುತ್ತಿದ್ದವು. ಈ ಶೈಕ್ಷಣಿಕ ವೇಳಾಪಟ್ಟಿ  ಸಹಜವಾಗಿಯೇ ವಿದ್ಯಾರ್ಥಿ ಗಳು ಮತ್ತು ಬೋಧಕರ ಪಾಲಿಗೆ  ನೀರಸ ಹಾಗೂ ನಿರಾಶದಾಯಕವಾಗಿರುತ್ತಿತ್ತು. ಈ ಬೇಸರ, ಏಕತಾನತೆಯನ್ನು ಹೊಡೆದೋಡಿಸಲು ಯುಜಿಸಿ ಎರಡು ವರ್ಷಗಳಿಂದ ವಿಚಾರ ಸಂಕಿರಣ ಮತ್ತು ಕಾರ‍್ಯಾಗಾರ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದೆ.
ಕಲಿಯುವ ವಿಷಯದಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆ ಮೇಲೆ ಬೆಳಕು ಚೆಲ್ಲುವುದು, ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಜ್ಞಾನದ ಮಟ್ಟ ಕಾಲಕ್ಕೆ ತಕ್ಕಂತೆ ಪರಿಷ್ಕೃತವಾಗಬೇಕು ಎಂಬುದು ಯುಜಿಸಿಯ ಇನ್ನೊಂದು ಮಹದಾಸೆ.  ಈ ಉದ್ದೇಶ ಗಳು ಒಳ್ಳೆಯದೇ ಆಗಿ ದ್ದರೂ, ಅದನ್ನುಕಾಲೇಜು ಗಳು ಬಳಸಿಕೊಳ್ಳುತ್ತಿ ರುವ ರೀತಿ- ನೀತಿಯಲ್ಲಿ ಮಾತ್ರ ಸದುದ್ದೇಶ  ಕಾಣಿಸುತ್ತಿಲ್ಲ. ನಮ್ಮ ಕಾಲೇಜಲ್ಲೂ  ಇಂತಿಷ್ಟು ಸೆಮಿನಾರ್ ಆದವು ಎಂದು ಲೆಕ್ಕ  ಹಿಡಿಯ ಲೆಂದೇ  ಬಹಳಷ್ಟು ಕಾಲೇಜುಗಳು ಕಾಟಾಚಾರಕ್ಕೆ ಕಾರ್ಯಾಗಾರ ನಡೆಸುತ್ತಿವೆ ಎಂಬುದು ಸಾಮಾನ್ಯ ಆರೋಪ.
ಹೆಸರು ಹೇಳಲು ಇಚ್ಛಿಸದ ಪ್ರಾಂಶುಪಾಲ ರೊಬ್ಬರು ಹೇಳುವ ಪ್ರಕಾರ, ‘ಕಾಲೇಜು ಗಳ  ನಿರ್ವಹಣೆಗೆ ಮಾನ್ಯತೆ ನೀಡುವ ಪದ್ಧತಿಯನ್ನು ನ್ಯಾಕ್ ಜಾರಿಗೆ ತಂದ ಬಳಿಕ, ಸಂಘಟಿಸುವ ಕಾರ್ಯಾಗಾರ, ಸೆಮಿನಾರ್‌ಗಳ  ‘ಅಂಕಿ-ಸಂಖ್ಯೆಗೆ’ ಮೌಲ್ಯ ಬಂದಿದೆ. ಹಾಗಾಗಿ ಶಾಸ್ತ್ರಕ್ಕೆ ಸೆಮಿನಾರ್ ಎಂಬಂತಾಗಿದೆ. ಗುಣಮಟ್ಟವನ್ನು  ಮತ್ತು ಅದರ ಪರಿಣಾಮವನ್ನು ಅಳೆದು ಕಾರ್ಯಾಗಾರಕ್ಕೆ ಮೌಲ್ಯ ನೀಡುವ ವ್ಯವಸ್ಥೆ ಇದ್ದಿದ್ದರೆ, ಚೆನ್ನಾಗಿರುತ್ತಿತ್ತು’
‘ಇಲ್ಲಿಗೆ ಬರುವ ಅಧ್ಯಾಪಕರಿಗೆ ರಜೆ ಸೌಲಭ್ಯ, ಸಾರಿಗೆ ಭತ್ಯೆ ನೀಡಲಾಗುವುದು. ಇಲ್ಲಿ ಪ್ರಬಂಧ ಮಂಡಿಸುವ ಅಧ್ಯಾಪಕರಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರ  ಉಂಟು. ಅಧ್ಯಾಪಕರು ಸ್ವಂತದ್ದೆಂದು ಖರ್ಚು ಮಾಡುವುದು ನೋಂದಣಿ ಶುಲ್ಕ ಮಾತ್ರ. ಅದರ ಬಾಬ್ತಿಗೆ ಊಟ, ಬ್ಯಾಗ್ ನೀಡುತ್ತೇವೆ. ಕೆಲ ಅಧ್ಯಾಪಕರು ವಿಚಾರ ಸಂಕಿರಣದ ಲಾಭ-ನಷ್ಟವನ್ನು ಈ ಮಟ್ಟದಲ್ಲಿ  ಅಳೆಯುತ್ತಿದ್ದಾರೆ’ ಎಂದು ಪ್ರಾಂಶುಪಾಲರು ಬೇಸರ ವ್ಯಕ್ತಪಡಿಸುತ್ತಾರೆ.
‘ಯಾವಾಗಲೂ ತರಗತಿಯಲ್ಲಿ  ಕುಳಿತು ಪಾಠ ಕೇಳಿ-ಕೇಳಿ ಬೋರ್ ಆಗಿರುತ್ತದೆ. ಹಾಗಾಗಿ, ನಮ್ಮ ಅಧ್ಯಾಪಕರು ಇಂಥ ವಿಚಾರ ಸಂಕಿರಣಗಳಿಗೆ ನಮ್ಮನ್ನೂ ಕಳುಹಿಸುತ್ತಾರೆ. ಆದರೆ, ಈ ಗೋಷ್ಠಿಗಳು ತರಗತಿಗಳಿಗಿಂತ ಬೋರ್ ಆಗುತ್ತವೆ. ನಮ್ಮ ತಿಳಿವಳಿಕೆ ಮಟ್ಟಕ್ಕೆ ಮೀರಿದ ಸಂಗತಿಯನ್ನೇ ಸಂಪನ್ಮೂಲ ವ್ಯಕ್ತಿಗಳು ಮಾತನಾಡುತ್ತಾರೆ. ಹಾಗಾಗಿ, ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ’ ಎಂಬುದು ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಯೊಬ್ಬರ ಅನಿಸಿಕೆ.
ಒಟ್ಟಾರೆ- ಯುಜಿಸಿ ನೀಡುತ್ತಿರುವ ಸೌಲಭ್ಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು  ಒಂದು ಮೌಲಿಕ ವಿಚಾರ ಸಂಕಿರಣ ಇಲ್ಲವೇ ಕಾರ್ಯಾಗಾರವನ್ನು ನಡೆಸಬೇಕಿದೆಯಷ್ಟೇ !
ಸ್ವಲ್ಪ ಪ್ರಯೋಜನವೂ ಆಗಿದೆ...!
ಎಲ್ಲ ಕಾಲೇಜುಗಳು ಕಾಟಾಚಾರಕ್ಕೆ ನಡೆಸುತ್ತವೆ ಎಂದೇನಿಲ್ಲ. ಕೆಲವು ಕಡೆ ಗುಣಮಟ್ಟದ ವಿಚಾರಸಂಕಿರಣಗಳು/ಕಾರ್ಯಾಗಾರಗಳು  ನಡೆದಿವೆ.  ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಜೆಎಸ್‌ಎಸ್ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ(ಸ್ವಾಯತ್ತ) ಪ್ರಾಂಶುಪಾಲ ಪ್ರೊ. ಬಿ. ವಿ. ಸಾಂಬಶಿವಯ್ಯ.
ನಮ್ಮ ಕಾಲೇಜಿನಲ್ಲೇ ೨೦೦೯-೧೦ನೇ ಸಾಲಿನಲ್ಲಿ ನಾಲ್ಕು ಕಾರ್ಯಾಗಾರ, ಎರಡು ವಿಚಾರ ಸಂಕಿರಣ ಆಯೋಜಿಸಿದ್ದೇವೆ. ಗ್ರಾಹಕ ಚಳವಳಿ, ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್, ಉದ್ಯಮಶೀಲತೆ, ತ್ರೈಯೋಗ ಕುರಿತು ನಾಲ್ಕು ಕಾರ್ಯಾಗಾರ, ಕೃಷ್ಣದೇವರಾಯ ಮತ್ತು ಬುದ್ಧನ ವಿಚಾರ ಕುರಿತು ವಿಚಾರ ಸಂಕಿರಣ ಆಯೋಜಿಸಿದ್ದೆವು. ಎಲ್ಲವೂ ಎಲ್ಲರಿಗೂ  ಅರ್ಥವಾಗಿದೆ, ಪ್ರಯೋಜನವಾಗಿದೆ  ಎಂದು ಪತ್ರಿಕೆಗೆ ತಿಳಿಸಿದರು. ವಿಷಯ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯಲ್ಲಿ  ಜಾಣ್ಮೆ, ಶ್ರದ್ಧೆ ತೋರಿಸಿದರೆ ಯುಜಿಸಿ ಕಾರ್ಯಕ್ರಮ ಎಲ್ಲರಿಗೂ ಪ್ರಯೋಜನಕಾರಿ ಎಂಬುದು ಅವರ ಅನಿಸಿಕೆ.

ಮೈಸೂರು ಪ್ರಾಂತ್ಯದಲ್ಲಿ ಮತ್ತೆ ಕಾಣಿಸಿಕೊಂಡ ಕಾಲರಾ

ಶಿವಕುಮಾರ್ ಬೆಳ್ಳಿತಟ್ಟೆ  ಮೈಸೂರು
ಕಲುಷಿತ ನೀರಿನಿಂದ ಬರುವ ಕಾಲರಾ ರೋಗ ಮತ್ತೆ ಮೈಸೂರು ಪ್ರಾಂತ್ಯದಲ್ಲಿ ಕಾಣಿಸಿಕೊಳ್ಳತೊಡಗಿದೆ.
ಮೈಸೂರು, ಮಂಡ್ಯ, ಕೊಡಗು ಚಾಮರಾಜ ನಗರ, ಹಾಸನ ಜಿಲ್ಲೆಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಮೈಸೂರಿನಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಇತ್ತೀಚೆಗೆ ದಿನಕ್ಕೆ ಕನಿಷ್ಠ ಐದಾರು ಮಂದಿ ವಾಂತಿಭೇದಿ ತೊಂದರೆಯಿಂದ ದಾಖಲಾಗುತ್ತಿದ್ದು, ಅಂಥ ಪ್ರಕರಣಗಳು ಈ ವರ್ಷ  ೧೦೦೦ಕ್ಕೂ ಅಧಿಕವಾಗಿವೆ. ಈ ಪೈಕಿ ಕೆಲವು ಕಾಲರಾ ಪ್ರಕರಣಗಳಾಗಿ ದೃಢಪಟ್ಟಿವೆ.
ಮೂರು ತಿಂಗಳಲ್ಲಿ ಒಟ್ಟು ೩೩ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷಕ್ಕೆ (೧೫ ಪ್ರಕರಣ) ಹೋಲಿಸಿದರೆ  ಹೆಚ್ಚು. ಮಂಡ್ಯ ಜಿಲ್ಲೆಯಲ್ಲಿ ೧೨ ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ಸುತ್ತಮುತ್ತ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಸೂಕ್ತ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಿ.ಎಂ. ವಾಮದೇವ ಪತ್ರಿಕೆಗೆ ತಿಳಿಸಿದ್ದಾರೆ.
ಎಲ್ಲೆಲ್ಲಿ ಕಾಲರಾ?: ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾತ್ರ ಇದ್ದು, ಹಳೇ ಮೈಸೂರು ಭಾಗದ ಜಿಲ್ಲೆಗಳ ಮಂದಿ ಮೈಸೂರು ಆಸ್ಪತ್ರೆಯಲ್ಲೇ ದಾಖಲಾಗುತ್ತಿದ್ದಾರೆ. ಚಾಮರಾಜನಗರ-೨, ಮೈಸೂರು- ೫, ಹಾಸನ, ಮಡಿಕೇರಿ ತಲಾ ಒಂದೊಂದು ಪ್ರಕರಣಗಳಿದ್ದು, ಮಂಡ್ಯದಲ್ಲಿ ಅತಿ ಹೆಚ್ಚು-೧೨.
ಕಲುಷಿತ ನೀರು: ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗುತ್ತಿರುವುದೇ ಮಂಡ್ಯ ಜಿಲ್ಲೆಯಲ್ಲಿ ಕಾಲರಾ ಪ್ರಕರಣಗಳು ಹೆಚ್ಚುತ್ತಿರಲು ಕಾರಣವೆನ್ನಲಾಗಿದೆ. ಕೆಆರ್‌ಎಸ್ ಬಳಿ ಇರುವ ಪಂಪ್‌ಹೌಸ್‌ನಿಂದ ಪೂರೈಕೆಯಾಗುವ ಕುಡಿಯುವ ನೀರಿಗೆ ನೀರು ಪೂರೈಕೆಯಾಗುತ್ತದೆ.  ಆ ನೀರನ್ನು ಶುದ್ಧೀಕರಿಸಲು ಹೊಸಹಳ್ಳಿ ಬಳಿ ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ. ಆದರೆ ಕೆಲ ತಿಂಗಳಿನಿಂದ ಫಿಲ್ಟರ್‌ಗಳು ಸ್ಥಗಿತಗೊಂಡಿದ್ದು, ಶ್ರೀರಂಗಪಟ್ಟಣ ತಾಲೂಕಿಗೆ ಸೇರಿದ ಪಾಲಹಳ್ಳಿ, ಪಂಪಿನ ಹೊಸಹಳ್ಳಿ, ಮೊಗರಹಳ್ಳಿ, ಮಂಟಿ, ಹೊಸ ಆನಂದೂರು ಗ್ರಾಮಗಳಿಗೆ ನದಿ ನೀರು ಶುದ್ಧೀಕರಣವಾಗದೇ ಪೂರೈಕೆಯಾಗುತ್ತಿದೆ. ಆದ್ದರಿಂದ ಈ ಗ್ರಾಮಗಳ ಅನೇಕ ಮಂದಿ ವಾಂತಿಭೇದಿ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಪೈಕಿ ೯ಕ್ಕೂ ಹೆಚ್ಚು ಮಂದಿಗೆ ಕಾಲರಾ ಇರುವುದು ದೃಢವಾಯಿತು ಎಂದು ಶ್ರೀರಂಗಪಟ್ಟಣ ತಾಲೂಕು ಕಿರಿಯ ಆರೋಗ್ಯ ಸಹಾಯಕ ಗಿರೀಶ್ ಹೇಳಿದ್ದಾರೆ.
ಆ ಗ್ರಾಮಗಳಲ್ಲಿ ಇನ್ನೂ ವಾಂತಿ, ಭೇದಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆದರೆ ಅಲ್ಲಿನ ಫಿಲ್ಟರ್‌ಗಳ ದುರಸ್ತಿ ಇನ್ನೂ ನಡೆದಿಲ್ಲ. ಬದಲಾಗಿ ಗ್ರಾಮಗಳಲ್ಲಿ ನೀರಿನ ಟ್ಯಾಂಕ್ ಮತ್ತು ಇತರ ನೀರು ಸಂಗ್ರಹ ಜಾಲಗಳನ್ನು ಶುದ್ಧೀಕರಿಸಲಾಗುತ್ತಿದೆ. ಹಾಗೆಯೇ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಹತ್ತಳ್ಳಿ, ಪಾಂಡವಪುರ ತಾಲೂಕಿನ ಹಗ್ಗನಹಳ್ಳಿ ಸೇರಿದಂತೆ ಜಿಲ್ಲೆಯ ಗಡಿ ಭಾಗದಲ್ಲೂ ಇದೇ ಸಮಸ್ಯೆ ತಲೆದೋರಿದ್ದು, ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ಬಗ್ಗೆ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಅಧಿಕಾರಿಗಳು ಜಿಲ್ಲಾಧಿಕಾರಿಗೂ ಮಾಹಿತಿ ನೀಡಿದ್ದಾರೆ. ಅಲ್ಲದೆ ಸುತ್ತಮುತ್ತಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಪ್ರತ್ಯೇಕ ಪತ್ರಗಳ ಮೂಲಕ ಎಚ್ಚರಿಕೆ ವಹಿಸಲು ಮಾಹಿತಿ ನೀಡಿದ್ದಾರೆ. ಜನರಿಗೆ ರೋಗದ ಬಗ್ಗೆ ಸೂಕ್ತ ಜಾಗೃತಿ ಮೂಡಿಸುವ ಕಾರ‍್ಯಕ್ರಮಗಳನ್ನೂ ರೂಪಿಸಿದ್ದಾರೆ. ಕಲುಷಿತ ನೀರು ಪತ್ತೆ ಹಚ್ಚುವುದು, ಕುದಿಸಿ ಆರಿಸಿದ ನೀರು ಕುಡಿಯುವುದು ಹಾಗೂ ತಕ್ಷಣದ ಚಿಕಿತ್ಸೆ ಪಡೆಯುವಂತೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಕಿಡ್ನಿಗೂ ಆಪತ್ತು: ಕಲುಷಿತ ನೀರಿನಿಂದ ಆರಂಭ ಗೊಳ್ಳುವ  ಈ ಕಾಯಿಲೆಗೆ ನೀರೇ ಮದ್ದು.  ಸತತ ವಾಂತಿಭೇದಿಯಾದಾಗ ಹೆಚ್ಚು ನೀರಿನಾಂಶದ ಆಹಾರ ಸೇವಿಸುವುದೇ  ತಕ್ಷಣದ ಪರಿಹಾರ. ಆದರೆ ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ಪಡೆಯ ಬೇಕು. ವಿಳಂಬವಾದರೆ ದೇಹದಲ್ಲಿ  ನೀರಿನಾಂಶ ಕಡಿಮೆಯಾಗಿ ಕರುಳು ಒಣಗುತ್ತದೆ. ಕಿಡ್ನಿ ಕಾರ್ಯ ಸ್ಥಗಿತವಾಗಿ ರೋಗಿ ಸಾಯಲೂಬಹುದು.
ಯಳಂದೂರಿನಲ್ಲಿ ವಾಂತಿಭೇದಿ: ಒಬ್ಬನ ಸಾವು
ವಿಕ ಸುದ್ದಿಲೋಕ ಯಳಂದೂರು
ವಾಂತಿಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಟ್ಟಣದ ಬಳೇಪೇಟೆ ನಿವಾಸಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ.
ಬಳೇಪೇಟೆ ಉಪ್ಪಾರ ಬೀದಿಯ ಅಂಕಶೆಟ್ಟಿ (೬೦) ಮೃತಪಟ್ಟವರು. ಎರಡು ದಿನಗಳ ಹಿಂದೆ ಬೀದಿಯಲ್ಲಿ ವಾಂತಿಭೇದಿ ಕಾಣಿಸಿಕೊಂಡಿತ್ತು. ಹೀಗಾಗಿ ಸುಮಾರು ೨೦ ಮಂದಿ ಪಟ್ಟಣದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಗುರುವಾರ ಅಂಕಶೆಟ್ಟಿಗೆ ವಾಂತಿ ಭೇದಿ ಕಾಣಿಸಿಕೊಂಡ ಪರಿಣಾಮ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಾ ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಕೆಲ ಸಮಯಕ್ಕೇ ಕೊನೆಯುಸಿರೆಳೆದರು. ಇನ್ನೂ ೬ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖ ರಾಗುತ್ತಿದ್ದಾರೆ.
ವಾಂತಿಭೇದಿಗೆ ಕುಡಿಯುವ ನೀರು ಕಲುಷಿತ ಗೊಂಡಿದ್ದೇ ಕಾರಣ ಎನ್ನಲಾಗಿದೆ. ಇದು ಎರಡು ದಿನಗಳ ಹಿಂದೆಯೇ ಪತ್ತೆಯಾದ ಹಿನ್ನೆಲೆಯಲ್ಲಿ ಓವರ್ ಹೆಡ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲಾಗಿದೆ. ಆದರೆ ಅಂಕಶೆಟ್ಟಿ  ಸಾವಿಗೆ ವಾಂತಿಭೇದಿ ಕಾರಣವಲ್ಲ. ಅವರಿಗೆ ಅಸ್ತಮಾ ಕಾಯಿಲೆ ಇತ್ತು. ಹೀಗಾಗಿ ಅವರು ನಮ್ಮ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯ ಗಣೇಶ್‌ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ರಸ್ತೆ ಅವ್ಯವಸ್ಥೆ, ಸಂಚಾರ ದುಸ್ತರ, ದುರಸ್ತಿ ನಿರಂತರ !

ವಿಕ ಸುದ್ದಿಲೋಕ  ಮಂಡ್ಯ
ಇಲ್ಲೊಂದು ರಸ್ತೆ ವರ್ಷಕ್ಕೆ ಎರಡು ಮೂರು ಬಾರಿ ದುರಸ್ತಿಯಾಗುತ್ತಲೇ ಇದೆ.  ದುರಸ್ತಿಯಾಗಿ ತಿಂಗಳು ತುಂಬುವಷ್ಟರಲ್ಲಿ ಮತ್ತೆ ಯಥಾಸ್ಥಿತಿಯಂತೆ ಮಂಡಿಯುದ್ದ ಗುಂಡಿಗಳು ಮೂಡುತ್ತವೆ. ಸಂಚಾರ ದುಸ್ತರ. 
ಮಂಡ್ಯದ ಪ್ರಮುಖ ಜಿಲ್ಲಾ ಹೆದ್ದಾರಿಗಳಲ್ಲಿ ಒಂದಾಗಿರುವ ಮತ್ತು ಅತಿ ಹೆಚ್ಚು ವಾಹನ, ಕಬ್ಬಿನ ಗಾಡಿಗಳ ಸಂಚಾರವಿರುವ ಮಂಡ್ಯ-ನಾಗಮಂಗಲ ರಸ್ತೆಯು ಅವ್ಯವಸ್ಥೆ, ಅಧ್ವಾನಗಳ ಆಗರವಾಗಿದೆ. ಅದರ ಕಥೆವ್ಯಥೆ ಇಲ್ಲಿದೆ.
ಮಂಡ್ಯ-ನಾಗಮಂಗಲ ರಸ್ತೆ ಸುಮಾರು ೪೦ ಕಿ.ಮೀ. ಉದ್ದವಿದೆ. ಈಚೆಗಷ್ಟೇ ಅಭಿವೃದ್ಧಿಪಡಿಸಿರುವ ರಸ್ತೆಯಲ್ಲಿ ಎಲ್ಲಿ ನೋಡಿದರೂ ಹಳ್ಳ-ಗುಂಡಿಗಳೇ ಕಾಣುತ್ತವೆ. ಭಾರಿ ಮತ್ತು ಲಘು ವಾಹನಗಳಿರಲಿ ಸೈಕಲ್, ದ್ವಿಚಕ್ರ ವಾಹನಗಳ ಸಂಚಾರವೂ ಸುಗಮವಲ್ಲ.
ಈ ರಸ್ತೆಯಲ್ಲಿ ಹಳ್ಳ, ಗುಂಡಿಗಳು ಮತ್ತು ಉಬ್ಬುಗಳನ್ನು ದಾಟಿ ಸಾಗಲು ಚಾಲಕರು ವಾಹನಗಳನ್ನು ಸರ್ಕಸ್ ರೀತಿಯಲ್ಲಿ ಅತ್ತಿತ್ತ ಎಳೆದಾಡಿಕೊಂಡೇ ಹೋಗುತ್ತಾರೆ. ನಾಗಮಂಗಲ- ಮಂಡ್ಯ ನಡುವಣ ಸಂಚಾರಕ್ಕೆ ಕಮ್ಮಿಯೆಂದರೂ  ಒಂದುಕಾಲು ಗಂಟೆ ಬೇಕೇಬೇಕು. ಇತ್ತ ಮಂಡ್ಯದ ಕೆರೆಯಂಗಳದ ಮಗ್ಗುಲಲ್ಲಿ ಮತ್ತು ಅತ್ತ ನಾಗಮಂಗಲ ಸಮೀಪಿಸುವಾಗ ರಸ್ತೆ ಚಿಂದಿ ಚಿತ್ರಾನ್ನವಾಗಿದೆ. ಇಲ್ಲಿ ವಾಹನಗಳು ಸಾಗುವಾಗ ಚಾಲಕ ಮತ್ತು ಪ್ರಯಾಣಿಕರಿಗೆ ನರಕ ಸದೃಶವಾಗುತ್ತಿದೆ. ಅವರೆಲ್ಲರೂ ಅಧಿಕಾರಿ ಗಳು ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಕಣ್ಣಿಗೆ ಕಾಣದ ಸಮಸ್ಯೆ: ಮಂಡ್ಯ-ಕೆರಗೋಡು, ಮಂಡ್ಯ-ನಾಗಮಂಗಲ ರಸ್ತೆಗಳು ಚಿಕ್ಕಮಂಡ್ಯ ಬಳಿ ಕೂಡುತ್ತವೆ. ಮಂಡ್ಯ ಮತ್ತು ಚಿಕ್ಕಮಂಡ್ಯ ನಡುವೆ ೨.೫ ಕಿ.ಮೀ. ರಸ್ತೆಯು ತೀರಾ ಹದಗೆಟ್ಟಿದೆ. ಘಟಾನುಘಟಿ ರಾಜಕಾರಣಿಗಳು, ಅಧಿಕಾರಿಗಳು ದಿನ ನಿತ್ಯ ಈ ರಸ್ತೆಯಲ್ಲೇ ಸಂಚರಿಸುತ್ತಿದ್ದರೂ ಸಮಸ್ಯೆ ಕಣ್ಣಿಗೆ ಕಂಡಿಲ್ಲ. 
ಮಂಡ್ಯದಿಂದ ಹಾದು ಹೋಗುವಾಗ ರಸ್ತೆಯ ಎಡಕ್ಕೆ ವಿಶ್ವೇಶ್ವರಯ್ಯ ನಾಲೆಯ ಪಿಕಪ್‌ನಲ್ಲಿ ನೀರು ಹರಿಯುತ್ತದೆ. ಆ ಪಿಕಪ್‌ನಿಂದ ರಸ್ತೆಯ ಬಲ ಮಗ್ಗುಲಲ್ಲಿರುವ ಸುಮಾರು ೫೦೦ ಎಕರೆ ಜಮೀನಿಗೆ ನೀರೊದಗಿಸಲಾಗುತ್ತಿದೆ. 
ಸದಾ ನೀರು ಹರಿಯುವ ಪ್ರದೇಶದಲ್ಲಿ ರಸ್ತೆಯ ಆಯಸ್ಸು ಕಮ್ಮಿ ನಿಜ. ಆದರೆ, ಪಿಕಪ್ ನಾಲೆ ಅಭಿವೃದ್ಧಿಪಡಿಸುವ ಜತೆಗೆ ರಸ್ತೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಮತ್ತು ವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಿದಲ್ಲಿ ರಸ್ತೆಯನ್ನು ದೀರ್ಘ ಬಾಳಿಕೆ ಬರುವಂತೆ ಅಭಿವೃದ್ಧಿಪಡಿಸಬಹುದು.
ಈ ಬಗ್ಗೆ ಅಧಿಕಾರಿಗಳಾಗಲೀ ಜನ ಪ್ರತಿನಿಧಿಗಳಾಗಲೀ ಕಾಳಜಿ ವಹಿಸಿಯೇ ಇಲ್ಲ. ಗುಂಡಿ ಬಿದ್ದು ಸಂಚಾರಕ್ಕೆ ಅಡ್ಡಿಯಾದ ಒಂದಿಷ್ಟು ಮಣ್ಣು ಸುರಿದು, ದುರಸ್ತಿ ಹೆಸರಿನಲ್ಲಿ ಗುತ್ತಿಗೆದಾರರು ಮತ್ತು ತಮ್ಮ ಕಿಸೆ ತುಂಬಿಸಿಕೊಳ್ಳುವುದಷ್ಟೇ ಇಲ್ಲಿ ಆಗುತ್ತಿರುವ ಕೆಲಸ.
ರಸ್ತೆಯ ಹಳ್ಳ, ಗುಂಡಿಗಳಿಗೆ ಮಣ್ಣು ತುಂಬಿ ಕೆಲವೇ ದಿನಗಳಾಗಿದೆ. ಪಿಕಪ್‌ನಲ್ಲಿ ಹರಿಯುತ್ತಿರುವ ನೀರು ರಸ್ತೆಯನ್ನು ಆವರಿಸಿಕೊಂಡು ಮತ್ತೆ ಗುಂಡಿ ಬಿದ್ದಿದೆ. ೩-೪ ದಿನಗಳಿಂದ ವಾಹನ ಸಂಚಾರಕ್ಕೆ ತೀರಾ ಅಡ್ಡಿಯುಂಟಾಗಿದೆ. ಚಾಲಕರು ಮತ್ತು ಪ್ರಯಾಣಿಕರ ಪಾಡು ಹೇಳ ತೀರದಾಗಿದೆ.
ಮುಸುಕಿನ ಗುದ್ದಾಟ: ಮಂಡ್ಯ ಮತ್ತು ಚಿಕ್ಕಮಂಡ್ಯ ನಡುವಿನ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದೆ. ಆದರೆ, ರಸ್ತೆ ಮಗ್ಗುಲಲ್ಲಿರುವ ಪಿಕಪ್ ನಾಲೆಯು ಕಾವೇರಿ ನೀರಾವರಿ ನಿಗಮದ ಸ್ವತ್ತು. ಈಗ ಉಭಯ ಇಲಾಖೆಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
ಪಿಕಪ್ ನಾಲೆಯನ್ನು ಅಭಿವೃದ್ಧಿಪಡಿಸಿ, ರಸ್ತೆಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಲೋಕೋಪಯೋಗಿ ಇಲಾಖೆಯು ಕಾವೇರಿ ನೀರಾವರಿ ನಿಗಮಕ್ಕೆ ಮೇಲಿಂದ ಮೇಲೆ ಪತ್ರ ಬರೆ ಯುತ್ತಲೇ ಇದೆ. ಕಾವೇರಿ ನೀರಾವರಿ ನಿಗಮ ಕಣ್ಮುಚ್ಚಿ ಕುಳಿತಿದೆ.
ಮೈಷುಗರ್‌ನಲ್ಲಿ ರಸ್ತೆ ಅಭಿವೃದ್ಧಿ ನಿಧಿಯನ್ನು ಸಂಗ್ರಹಿಸಲಾಗುತ್ತಿದೆ. ತನ್ನ ಕಾರ್ಖಾನೆಗೆ ಈ ಮಾರ್ಗದಲ್ಲೇ ಅತಿ ಹೆಚ್ಚು ಕಬ್ಬು ಬರುತ್ತಿದ್ದು, ಈ ರಸ್ತೆಯನ್ನು ನಿಧಿಯಿಂದ ಅಭಿವೃದ್ಧಿಪಡಿಸಬಹುದು. ಆದರೆ, ಕಾರ್ಖಾನೆ ಆಡಳಿತ ಮಂಡಳಿ ತನಗೇನೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ.
ಹೀಗೆ ಒಂದು ಇಲಾಖೆಯು ಮತ್ತೊಂದು ಇಲಾಖೆ ಮೇಲೆ ದೂಷಣೆ ಮಾಡುತ್ತಾ ಹೊಣೆಯಿಂದ ಜಾರಿಕೊಳ್ಳುತ್ತಲೇ ಇದೆ.  ಸಮಸ್ಯೆ ಪರಿಹಾರಕ್ಕೆ ಕಾಳಜಿ ತೋರದ ಜನಪ್ರತಿನಿಧಿಗಳು ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ಜನರು ಪರಿತಪಿಸುತ್ತಿದ್ದಾರೆ.
ಎತ್ತುಗಳಿಗೆ ರಕ್ತ ಕಣ್ಣೀರು: ಕೆರಗೋಡು ಮತ್ತು ನಾಗಮಂಗಲ ರಸ್ತೆ ಕಡೆಯಿಂದ ಟ್ರ್ಯಾಕ್ಟರ್, ಎತ್ತಿನ ಗಾಡಿ ಮತ್ತು ಲಾರಿಗಳಲ್ಲಿ ಇದೇ ಮಾರ್ಗವಾಗಿ ಕಬ್ಬು ತುಂಬಿಕೊಂಡು ನೂರಾರು ರೈತರು ಪ್ರತಿನಿತ್ಯ ಮಂಡ್ಯದ ಮೈಷುಗರ್‌ಗೆ ಬರುತ್ತಾರೆ.
ಈಗ ಕಾರ್ಖಾನೆ ಸ್ಥಗಿತಗೊಂಡಿದೆ. ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ನಡೆಯುವಾಗ ೪-೫ ಟನ್ ಕಬ್ಬು ತುಂಬಿಕೊಂಡು ಗಾಡಿ ಎಳೆದು ಬರುವ ಎತ್ತುಗಳ ಕಣ್ಣಲ್ಲಿ ನೀರಿನ ಬದಲು ರಕ್ತವೇ ಹರಿಯುವಂತಾಗುತ್ತದೆ. ಗೋ ಹತ್ಯೆ ನಿಷೇಧ ಜಾರಿಗೆ ತಂದು ಗೋವುಗಳ ಸಂರಕ್ಷಣೆಗೆ ಒತ್ತು ನೀಡಿರುವುದಾಗಿ ಬಿಜೆಪಿ ಸರಕಾರ ಬೊಬ್ಬೆಯಿಡುತ್ತಿದೆ. ಆದರೆ, ಈ ರಸ್ತೆಯಲ್ಲಿ ಕಬ್ಬು ತುಂಬಿದ ಗಾಡಿ ಎಳೆದೊಯ್ಯುವ ಎತ್ತುಗಳಿಗೆ ಸರಕಾರವೇ ಹಿಂಸೆ ನೀಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ದಾಸ್ತಿಕೊಳ ಬಡಾವಣೆಯಲ್ಲಿ ನೀರಿಗೆ ತತ್ವಾರ

ವಿಕ ಸುದ್ದಿಲೋಕ ಹುಣಸೂರು
ಬಿಳಿಕೆರೆಗೆ ಹೊಂದಿಕೊಂಡಂತಿರುವ ದಾಸ್ತಿಕೊಳ ಬಡಾವಣೆಯಲ್ಲಿ ಜನತೆ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ.
ಮೈಸೂರು-ಹುಣಸೂರು ಮುಖ್ಯ ರಸ್ತೆಯ ಅಂಚಿನಲ್ಲಿರುವ ಬಡಾವಣೆಯಲ್ಲಿ  ೨೫೦ಕ್ಕೂ ಹೆಚ್ಚು ಬಡ ಕುಟುಂಬಗಳೇ ವಾಸಿಸುತ್ತಿದ್ದು,  ನೀರಿನ ಟ್ಯಾಂಕ್ ಇದ್ದರೂ ನಿಷ್ಪ್ರಯೋಜಕ. ಜತೆಗೆ ಮೂರು ಬೋರ್‌ವೆಲ್‌ಗಳಲ್ಲಿ ಎರಡು ಕೆಟ್ಟು ಹೋಗಿವೆ. ಮತ್ತೊಂದರಲ್ಲಿ ಗಂಟೆಗೊಂದು ಬಿಂದಿಗೆ ನೀರು ಸಿಗುತ್ತಿದೆ. ಟ್ಯಾಂಕಿಗೆ ನೀರು ಪೂರೈಸುವ ಬೋರ್‌ವೆಲ್‌ನಲ್ಲಿ ಬಹುತೇಕ ನೀರು ಬತ್ತಿಹೋಗಿದೆ. ಸಿಕ್ಕುವ ಅಲ್ಪಸ್ವಲ್ಪ ನೀರಿನಲ್ಲಿ  ೧೦-೧೫ ದಿನಕ್ಕೊಮ್ಮೆ ನೀರು ಪೂರೈಸುತ್ತಾರೆ.
ಪಂಪ್‌ಸೆಟ್ಟೇ ಗತಿ: ಬಡಾವಣೆಯ ಮಹಿಳೆಯರು ಬೆಳಗಿನ ಜಾವ ಗ್ರಾಮಕ್ಕೆ ಒಂದು ಕಿ.ಮೀ. ದೂರವಿರುವ ಪಂಪ್‌ಸೆಟ್‌ಗಳಿಂದ ಜಮೀನಿನ ಮಾಲೀಕರನ್ನು ಗೋಗರೆದು  ನೀರು ಹೊತ್ತು ತರುವ ಹೀನಸ್ಥಿತಿ ಇಲ್ಲಿದೆ. ನೀರು ಬೇಕೆಂದಾಗಲೆಲ್ಲ ಅಲ್ಲಿಗೆ ಓಡಬೇಕಾದ ಪರಿಸ್ಥಿತಿ ಈ ಜನರದ್ದು. ಅಂತರ್ಜಲ ಕುಸಿದು ನೀರು ಪಾತಾಳಕ್ಕಿಳಿದಿರುವ ಒಂದು ಬೋರ್‌ವೆಲ್‌ನಲ್ಲಿ ಒಂದು ಬಿಂದಿಗೆ ನೀರು ತುಂಬಲು ಕನಿಷ್ಠ ೧ ಗಂಟೆ ತೆಗೆದುಕೊಳ್ಳುತ್ತಿದೆ. ಒಮ್ಮೊಮ್ಮೆ ನೀರು ನಿಂತು ಹೋಗುತ್ತದೆ. ಈ ನೀರಿಗೂ ನೂಕುನುಗ್ಗಲು ಉಂಟಾಗಿ ನಿತ್ಯ ಜಗಳ ನಡೆಯುತ್ತಿರುತ್ತದೆ.
ಏಕಿ ಅವಸ್ಥೆ ?: ಚಿಕ್ಕಮಾದು ಶಾಸಕರಾಗಿದ್ದ ೧೮ ವರ್ಷದ ಹಿಂದೆ ನೂತನ ಬಡಾವಣೆ ರಚಿಸಲಾಗಿತ್ತು. ಆಗ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ಮುಂದೆ ಇಲ್ಲಿ ಜನಸಂಖ್ಯೆ ಹೆಚ್ಚಾಯಿತು. ತಕ್ಕಂತೆ ಸೌಲಭ್ಯ ಒದಗಿಸಲಿಲ್ಲ, ಇರುವ ಕುಡಿಯುವ ನೀರಿನ ಯೋಜನೆಗೆ ಟ್ಯಾಂಕ್ ನಿರ್ಮಿಸಿದರೆ ಹೊರತು ನೀರು ಪೂರೈಸುವ ಜಲ ಸಂಪನ್ಮೂಲ ಗುರುತಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಹಾಗೂ ನೀರುಗಂಟಿಗಳು ತಮಗಿಷ್ಟ ಬಂದ ರೀತಿಯಲ್ಲಿ ನೀರು ನಿರ್ವಹಣೆ ಮಾಡುತ್ತಿರುವುದೇ ಈ ಅವಸ್ಥೆಗೆ ಕಾರಣ
ಚರಂಡಿ ಇಲ್ಲ: ಇಷ್ಟಲ್ಲದೆ ಬೀದಿದೀಪ ಕೆಟ್ಟು ೨ ತಿಂಗಳಾಗಿದ್ದರೂ ಸರಿಪಡಿಸಿಲ್ಲ, ಬೀದಿಗಳು ಡಾಂಬರು ಕಂಡಿಲ್ಲ, ಹಲವೆಡೆ ಚರಂಡಿ ನಿರ್ಮಿಸಿಲ್ಲ, ಕೆಲವೆಡೆ ಮಳೆ ನೀರು ಮನೆಗೆ ನುಗ್ಗುತ್ತಿದೆ, ಚರಂಡಿಯಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿವೆ. ಹಾವುಗಳ ಕಾಟ ಇಲ್ಲಿದೆ, ಸುವರ್ಣ ಗ್ರಾಮ ಯೋಜನೆಯಡಿ ಹಾಕಿರುವ ಕಸದ ತೊಟ್ಟಿಯಲ್ಲಿ ಕಸ ತುಂಬಿ ತುಳುಕಾಡುತ್ತಿದ್ದರೂ ಎತ್ತುವವರಿಲ್ಲ.
ಮಹಿಳೆಯರ ಆಕ್ರೋಶ:  ಮೂರ‍್ನಾಲ್ಕು ವರ್ಷದಿಂದ ನೀರಿಲ್ಲದೆ ಸಾಯ್ತಿದ್ದೀವಿ, ಅವರಿವರ ಪಂಪ್‌ಸೆಟ್‌ನಿಂದ ನೀರನ್ನು ಹೊತ್ತು ತರ‍್ತಿದ್ದೀವಿ, ಯಾರಿಗೆ ಹೇಳಿದ್ರು ಕೇಳಿಸ್ಕೋತ ಇಲ್ಲ. ಶಾಸಕರಿಗೂ, ಅಧಿಕಾರಿಗಳಿಗೂ ಕಷ್ಟ ಹೇಳ್ಕೊಂಡ್ರು ಏನೂ ಆಗಿಲ್ಲ. ಈ ಬಗ್ಗೆ ಗ್ರಾ.ಪಂ. ವಿರುದ್ಧ ಹಾಗೂ ಬಿಳಿಕೆರೆಯಲ್ಲಿ ವಾಣಿಜ್ಯ ಮಳಿಗೆ ಉದ್ಘಾಟನೆ ಸಂದರ್ಭದಲ್ಲಿ  ನಾವೆಲ್ಲ ಖಾಲಿ ಕೊಡ ಹಿಡಿದು ಪ್ರತಿಭಟಿಸಿದ್ದೇವೆ, ಜನಸ್ಪಂದನ ಸಭೆಗಳಲ್ಲಿ ಗಲಾಟೆ ಮಾಡಿದ್ದೇವೆ.ಆದರೂ ಇಲ್ಲಿನ ಸಮಸ್ಯೆ ಬಗೆಹರಿಸಲು ಯಾರೂ ಯತ್ನಿಸಿಲ್ಲ, ಇನ್ನು ನಮ್ಮ ಜನ ಪ್ರತಿನಿಧಿಗಳು ಇದ್ದು ಸತ್ತಂತಾಗಿದ್ದಾರೆ ಎಂದು ಬಡಾವಣೆಯ  ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
------------------------
ದಾಸ್ತಿಕೊಳದ ನೀರಿನ ಸಮಸ್ಯೆ ಬಗ್ಗೆ ತಿಳಿದಿದೆ. ತಕ್ಷಣವೇ ಬಿಳಿಕೆರೆಯಿಂದ ಪೈಪ್‌ಲೈನ್ ಅಳವಡಿಸಿ ಅಥವಾ ಮತ್ತೊಂದು ಬೋರ್‌ವೆಲ್ ಹಾಕಿಸಿ ಸಮರ್ಪಕ ನೀರಿನ ವ್ಯವಸ್ಥೆಗೆ ಕ್ರಮ ವಹಿಸುತ್ತೇನೆ.
-ಎ.ಬಿ.ಬಸವರಾಜು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ.
--------------------
ಈ ಭಾಗದಲ್ಲಿ ಅಂತರ್ಜಲ ಕುಸಿದಿದೆ. ಆದರೆ, ಈ ಸಾಲಿನ ಅನುದಾನ ಬಿಡುಗಡೆಯಾಗಿಲ್ಲ . ಆದರೂ ತಕ್ಷಣ ಕ್ರಮ ವಹಿಸ್ತೇನೆ.
-ದಯಾನಂದ್, ಎ.ಇ.ಇ., ಜಿ.ಪಂ.
-------------------
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಕೆಟ್ಟಿರುವ ಬೋರ್‌ವೆಲ್ ಸರಿಪಡಿಸುತ್ತೇನೆ, ನೀರುಗಂಟಿಗಳನ್ನು ಹದ್ದುಬಸ್ತಿನಲ್ಲಿಡುತ್ತೇನೆ.
-ಶ್ರೀನಿವಾಸ್, ಕಾರ್ಯದರ್ಶಿ ಬಿಳಿಕೆರೆ ಗ್ರಾ.ಪಂ.

ಮಿಮ್ಸ್‌ಗೆ ಮುಳುವಾದ ವೈದ್ಯರ ಗುಂಪುಗಾರಿಕೆ

ಮತ್ತೀಕೆರೆ ಜಯರಾಮ್ ಮಂಡ್ಯ
ಚೆಂದದ ಕಟ್ಟಡ, ಸುಸಜ್ಜಿತ ಆಸ್ಪತ್ರೆ, ಅಚ್ಚುಕಟ್ಟಾದ ಸೌಲಭ್ಯ, ಸುಂದರ ಪರಿಸರ. ಇಷ್ಟೆಲ್ಲ ಇರುವ ಮಂಡ್ಯ ವೈದ್ಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್)ಗೆ ವೈದ್ಯರ ಮಿತಿ ಮೀರಿದ ಗುಂಪುಗಾರಿಕೆ ಮತ್ತು ಕಚ್ಚಾಟವೇ ಮುಳುವಾಗಿದೆ. 
ಮಂಡ್ಯ ಜಿಲ್ಲೆಗೊಂದು ಸರಕಾರಿ ವೈದ್ಯ ಕಾಲೇಜು ಬೇಕೆನ್ನುವ ಬೇಡಿಕೆ ಮೂರ‍್ನಾಲ್ಕು ದಶಕದಿಂದಲೂ ಕೇಳಿ ಬಂದಿತ್ತು. ಅದು, ೪ ವರ್ಷದ ಹಿಂದಷ್ಟೇ ಈಡೇರಿತ್ತು. ಆದರೆ, ಈಗ ಅಲ್ಲಿನ ಅಧ್ವಾನಗಳನ್ನು ಕಂಡರೆ ಯಾಕಪ್ಪಾ ಬಂತು ಈ ಕಾಲೇಜು ಎನ್ನುವಂತಾಗಿದೆ.
ವೈದ್ಯ ಕಾಲೇಜು ಬಂದ ಮೇಲೆ ಆಸ್ಪತ್ರೆ ಸಹಜವಾಗಿಯೇ ಮೇಲ್ದರ್ಜೆಗೇರುತ್ತದೆ. ಸಾಕಷ್ಟು ವೈದ್ಯರು ಮತ್ತು ಸಿಬ್ಬಂದಿ ಲಭ್ಯರಿ ರುತ್ತಾರೆ. ರೋಗಿಗಳಿಗೆ ಗುಣಮಟ್ಟದ ಸೇವೆ ದೊರಕುತ್ತದೆ ಎಂಬೆಲ್ಲ ಕನಸು ಕಟ್ಟಿಕೊಂಡಿದ್ದ ಮಂಡ್ಯದ ಜನರು ಈಗ ರೋಸಿ ಹೋಗಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಹೇಳಿ ಕೇಳಿ ಗೌಡ್ರ ಗದ್ಲ. ಅದು, ಯಾವೊಂದು ಕ್ಷೇತ್ರ ಮತ್ತು ವಿಷಯದಲ್ಲೂ ಹೊರತಲ್ಲ. ಈಗ ಮಿಮ್ಸ್‌ನಲ್ಲೂ ಅದೇ ನಡೆಯುತ್ತಿದೆ. ಇಷ್ಟೆ ಆಗಿದ್ದರೆ ಪರವಾಗಿರಲಿಲ್ಲ. ಸಂಸ್ಥೆಯು ಭ್ರಷ್ಟಾಚಾರ, ಲೂಟಿ, ಕಚ್ಚಾಟ,  ಕೆಸರೆರೆಚಾಟದಲ್ಲೇ ಮುಳುಗಿದೆ.
ಕಾಡಿ ಬೇಡಿ ಅನುಮತಿ: ಸತತ ೩ ವರ್ಷವೂ ಭಾರತೀಯ ವೈದ್ಯ ಮಂಡಳಿ (ಎಂಸಿಐ)ಯಿಂದ ಕಾಡಿ ಬೇಡಿಯೇ ಅನುಮತಿ ಗಿಟ್ಟಿಸಿಕೊಳ್ಳಲಾಗಿದೆ. ಮೊದಲ ವರ್ಷ ಕಟ್ಟಡ ಪೂರ್ಣವಾಗಿಲ್ಲವೆಂದು ಅನುಮತಿ ನಿರಾಕರಣೆಯಾಗಿತ್ತು.
೨ನೇ ಮತ್ತು ೩ನೇ ವರ್ಷದಲ್ಲಿ ಮೂಲ ಸೌಲಭ್ಯಗಳು ಮತ್ತು ಬೋಧಕ ಸಿಬ್ಬಂದಿಯ ಕೊರೆತೆಯನ್ನು ಮುಂದೊಡ್ಡಿ ಎಂಸಿಐ ಅನುಮತಿ ನೀಡಿರಲಿಲ್ಲ. ಮೂರು ವರ್ಷವೂ ಷರತ್ತು ಪಾಲನೆಗೆ ಕಾಲಮಿತಿ ಅವಕಾಶ ಪಡೆದು, ಅನುಮತಿ ಪಡೆ ಯಲಾಗಿತ್ತು. ಕಳೆದ ವರ್ಷ ಮಿಮ್ಸ್‌ಗೆ ಭೇಟಿ ನೀಡಿದ್ದ ಎಂಸಿಐ ೩ನೇ ವರ್ಷದ ಪದವಿ ತರಗತಿಗೆ ಪ್ರವೇಶಾವಕಾಶವನ್ನೇ ನಿರಾಕರಿಸಿತ್ತು. ಸಂಸದ ಎನ್. ಚಲುವರಾಯಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದಿಲ್ಲಿ ಮಟ್ಟದಲ್ಲಿ ಲಾಬಿ ನಡೆಸಿ, ಅನುಮತಿ ಕೊಡಿಸಿದ್ದರು.
ಅಂಥ ಸ್ಥಿತಿಯಲ್ಲಿದ್ದಾಗಲೂ ಸಂಸ್ಥೆಯ ಗೌರ್ನಿಂಗ್ ಕೌನ್ಸಿಲ್ ಅಧ್ಯಕ್ಷರು, ವೈದ್ಯಕೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಚಂದ್ರಗೌಡ ಅವರು ಮಿಮ್ಸ್‌ಗೆ ಕನಿಷ್ಠ ಪಕ್ಷ ಭೇಟಿ ನೀಡುವ ಗೋಜಿಗೆ ಹೋಗಿರಲಿಲ್ಲ.
ಮತ್ತೆ ಭೇಟಿ ನಿಗದಿ: ಎಂಸಿಐ ತ್ರಿಸದಸ್ಯ ತಂಡವು ೨೦೦೯ರ ನವೆಂಬರ್-೨೦೧೦ರ ಫೆಬ್ರವರಿ ಒಳಗೆ ಮಿಮ್ಸ್ ಪರಿಶೀಲನೆಗಾಗಿ ಭೇಟಿ ನೀಡುವುದಾಗಿ ಸೂಚನೆ ಕಳುಹಿಸಿದೆ. ಈ ಹಂತದಲ್ಲಿ ಸಂಸ್ಥೆಯ ಮಾನ ಹಾದಿ ಬೀದಿಗಳಲ್ಲಿ ಹರಾಜಾಗುವ ಮಟ್ಟಕ್ಕೆ ಬಂದು ನಿಂತಿದೆ.
ಸಂಸ್ಥೆಯಲ್ಲಿ ಈಗಲೂ ೧೫ ಬೋಧಕ ಸಿಬ್ಬಂದಿಯ ಕೊರತೆ ಎದುರಾಗಿದೆ. ೪ ವರ್ಷ ಕಳೆದಿದ್ದರೂ ರೇಡಿಯಾಲಜಿ ವಿಭಾಗಕ್ಕೆ ಬೋಧಕರೇ ಸಿಕ್ಕಿಲ್ಲ. ಕಾಲೇಜು ಕಟ್ಟಡ, ವೈದ್ಯರ ವಸತಿ ಗೃಹ ಮತ್ತು ಹಾಸ್ಟೆಲ್ ಕಟ್ಟಡ ಬಹುಪಾಲು ಪೂರ್ಣಗೊಂಡಿದ್ದರೂ ಹಸ್ತಾಂತರವಾಗಿಲ್ಲ.
ಕೊರತೆ ಇರುವ ಬೋಧಕ ಸಿಬ್ಬಂದಿಯ ನೇಮಕ ಪ್ರಕ್ರಿಯೆ ನಿಯಮ ಬಾಹಿರ ಎನ್ನುವ ಕಾರಣಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿದೆ. ಪ್ರಭಾರ ನಿರ್ದೇಶಕಿ ಡಾ.ಪುಷ್ಪಾ ಸರ್ಕಾರ್ ಅವರ ಅಧಿಕಾರವೇ ಪ್ರಶ್ನಾರ್ಹವಾಗಿದೆ. ಈ ವಿಷಯವೂ ಕೋರ್ಟ್‌ನ ಕಟಕಟೆ ಹತ್ತಿದೆ.
ತಾರಕಕ್ಕೇರಿರುವ ಜಗಳ: ಮಿಮ್ಸ್‌ನಲ್ಲಿ ವೈದ್ಯರು ವಿದ್ಯಾರ್ಥಿಗಳಿಗೆ ಪಾಠ ಹೇಳುವ ಜತೆಗೆ ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ನೀಡುವ ಬದಲು ಕಚ್ಚಾಟದಲ್ಲಿ ತೊಡಗಿದ್ದಾರೆ. ಕೂಗಾಟ, ಕಚ್ಚಾಟ, ಕಾಲೆಳೆದಾಟ, ಆರೋಪ, ಪ್ರತ್ಯಾರೋಪದ ವಿಷಯದಲ್ಲಿ ಇಲ್ಲಿನ ವೈದ್ಯರು ರಾಜಕಾರಣಿಗಳನ್ನೇ ಮೀರಿಸಿ ನಿಂತಿದ್ದಾರೆ.
ಶಸ್ತ್ರ ಚಿಕಿತ್ಸೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಎಂ. ಪರಮೇಶ್ವರ ಮತ್ತು ಮೈಕ್ರೊ ಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ.ಸುಮಂಗಲಿ ಅವರಿಬ್ಬರನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ.
ಮಾಜಿ ಸಚಿವ ಎಸ್.ಡಿ.ಜಯರಾಮ್ ಅವರ ಅಳಿಯ ಪರಮೇಶ್ವರ್ ಅಲಿಯಾಸ್ ಪರಮೇಶ್ ಅಮಾನತು ಹಿನ್ನಲೆಯಲ್ಲಿ ಮಂಡ್ಯ ಸೇರಿದಂತೆ ವಿವಿಧೆಡೆ ಪ್ರತಿಭಟನೆ ಪ್ರತಿಧ್ವನಿಸಿತ್ತು. ಅಮಾನತು ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎನ್ನುವ ವ್ಯಾಪಕ ಟೀಕೆ ಕೇಳಿ ಬಂದಿತ್ತು. ಪ್ರತೀಕಾರಕ್ಕಾಗಿ ಪರಮೇಶ್ವರ್ ಕೂಡಾ ಮಿಮ್ಸ್‌ನ ವೈಫಲ್ಯಗಳನ್ನು ಬಯಲಿಗೆಳೆಯಲು ಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಜಕೀಯ ಪ್ರತಿಷ್ಠೆ: ಮಿಮ್ಸ್‌ಗೆ ‘ಗ್ರಹಣ’ ಹಿಡಿಯಲು ರಾಜಕೀಯ ಪ್ರತಿಷ್ಠೆಯೂ ಕಾರಣವಾಗಿದೆ. ಮಂಡ್ಯಕ್ಕೆ ಸರಕಾರಿ ವೈದ್ಯ ಕಾಲೇಜು ಮಂಜೂರಾಗಲು ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದ ಎನ್. ಚಲುವರಾಯಸ್ವಾಮಿ ಅವರ ಪರಿಶ್ರಮ ಕಾರಣ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಇತ್ತೀಚೆಗೆ ಮಿಮ್ಸ್‌ನಲ್ಲಿ ತಾರಕ್ಕೇರಿದ್ದ ವೈದ್ಯರ ಗುದ್ದಾಟವನ್ನು ತಿಳಿದು ಭೇಟಿ ನೀಡಿದ್ದ ವೇಳೆ  ಚಲುವರಾಯಸ್ವಾಮಿ, ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದವರಿಗೆ ಕಪಾಳ ಮೋಕ್ಷ ಮಾಡಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಅದು, ರಾಮಚಂದ್ರಗೌಡರನ್ನೇ ಗುರಿಯಾಗಿಟ್ಟುಕೊಂಡು ಹೇಳಿದ ಮಾತಾಗಿತ್ತು.
ಅಂತೆಯೇ ಚಲುವರಾಯಸ್ವಾಮಿ, ಮಿಮ್ಸ್ ನಿರ್ದೇಶಕಿ ಪುಷ್ಪಾ ಸರ್ಕಾರ್ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವಕಾಶಕ್ಕಾಗಿ ಕಾದಿದ್ದ ರಾಮಚಂದ್ರಗೌಡ, ಜಾ.ದಳದ ಪ್ರಭಾವಿ ನಾಯಕರ ಕುಟುಂಬಕ್ಕೆ ಸೇರಿದ ವೈದ್ಯ ಡಾ.ಸಿ.ಎಂ. ಪರಮೇಶ್ವರ್ ಅವರನ್ನೇ ಅಮಾನತುಪಡಿಸಿ ಚಲುವರಾಯಸ್ವಾಮಿ ಬುಡಕ್ಕೇ ಕತ್ತರಿ ಹಾಕಿದರು
ರಾಮಚಂದ್ರಗೌಡರನ್ನು ಕಂಡರೆ ಕೊತ ಕೊತ ಕುದಿಯುತ್ತಿದ್ದ ಚಲುವರಾಯಸ್ವಾಮಿ ಅವರು ಪರಮೇಶ್ವರ್ ಅಮಾನತು ಬೆನ್ನಲ್ಲೇ ಕೆಂಡಾಮಂಡಲವಾಗಿದ್ದಾರೆ. ಅಮಾನತು ಆದೇಶ ಹಿಂತೆಗೆದುಕೊಳ್ಳುವಂತೆ ಖುದ್ದು ರಾಮಚಂದ್ರಗೌಡ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಫೋನಾಯಿಸಿ ಶಿಫಾರಸು ಮಾಡಿದ್ದರೂ ಪ್ರಯೋಜನವಾಗಿಲ್ಲ.
ಚಲುವರಾಯಸ್ವಾಮಿ, ರಾಮಚಂದ್ರಗೌಡ ಮತ್ತು ಜಿಲ್ಲೆಯ ಶಾಸಕರು ಮಿಮ್ಸ್‌ನ ಗೊಂದಲ ನಿವಾರಿಸುವ ಬದಲು ಉರಿಯುವ ಬೆಂಕಿಗೆ ತುಪ್ಪು ಸುರಿಯುತ್ತಿದ್ದಾರೆ. ಇದು, ಹೀಗೇ ಮುಂದುವರಿದಲ್ಲಿ ಮಂಡ್ಯದಲ್ಲಿ ಮುಚ್ಚಿ ಹೋದ ಕಾರ್ಖಾನೆಗಳ ಸಾಲಿಗೆ ಮಿಮ್ಸ್ ಕೂಡಾ ಸೇರುವ ಕಾಲ ದೂರವಿಲ್ಲ.
ಆರೋಪಗಳ ಸುರಿಮಳೆ: ಮಿಮ್ಸ್‌ನಲ್ಲಿ ಎಲ್ಲವೂ ನೆಟ್ಟಗಿಲ್ಲ. ಸಂಸ್ಥೆ ಪ್ರಾರಂಭದಿಂದ ಇಲ್ಲಿವರೆಗೆ ನಡೆದಿರುವ ನೇಮಕದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅರ್ಹತೆ ಮಾನದಂಡವಾಗಿಲ್ಲ. ಮೀಸಲು ನಿಯಮ ಪಾಲಿಸಿಯೇ ಇಲ್ಲ. ಪ್ರಭಾರ ನಿರ್ದೇಶಕ ಹುದ್ದೆ ಸೇರಿದಂತೆ ಉನ್ನತ ಹುದ್ದೆಗಳಿಗೆ ನೇಮಕ ವಿಷಯದಲ್ಲಿ ಜ್ಯೇಷ್ಠತೆ ಕಾಪಾಡಿಲ್ಲ ಎನ್ನುವ ಕೂಗು ಕೇಳಿ ಬಂದಿದೆ.
ಖರೀದಿ ಅವ್ಯವಹಾರದ ಬಗ್ಗೆ ಲೋಕಾಯುಕ್ತ ತನಿಖೆ ನಡೆದಿದೆ. ವರದಿಯಲ್ಲಿ ಅವ್ಯವಹಾರ ಸಾಬೀತಾಗಿದ್ದರೂ ಯಾರ ವಿರುದ್ಧವೂ ಕ್ರಮ ಜರುಗಿಸಿಲ್ಲ. ಹೊಸ ಕಟ್ಟಡದ ಕಾಮಗಾರಿ ಗುಣಮಟ್ಟದ ಬಗ್ಗೆಯೂ ಲೋಕಾಯುಕ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ನಾಲ್ಕೇ ವರ್ಷದಲ್ಲಿ ಸಂಸ್ಥೆ ಅರಾಜಕತೆ, ಅಧ್ವಾನ, ಅವಾಂತರ, ಗೊಂದಲದ ಗೂಡಾಗಿ ನಲುಗುತ್ತಿರುವುದು ವಿಪರ್ಯಾಸದ ಸಂಗತಿ.
ಪ್ರಭಾವಿ ಕುಟುಂಬದವರು: ಮಿಮ್ಸ್‌ನಲ್ಲಿ ಮಂಡ್ಯದ ಪ್ರಭಾರಿ ರಾಜಕಾರಣಿಗಳ ಕುಟುಂಬದ ವೈದ್ಯರು ಮತ್ತು ಬೋಧಕ ಸಿಬ್ಬಂದಿಯೂ ಸಾಕಷ್ಟಿದ್ದಾರೆ. ದೊಡ್ಡವರ ಮಕ್ಕಳು ಮತ್ತು ಕುಟುಂಬದವರು ಇದ್ದ ಕಡೆ ಪ್ರತಿಷ್ಠೆಗಾಗಿ ಕಾದಾಟ ತಪ್ಪಿದ್ದಲ್ಲ. ಸಂಸ್ಥೆಯ ಗೊಂದಲಕ್ಕೆ ಕೆಲವರು ನೇರ ಭಾಗಿಯಾದರೆ ಮತ್ತೆ ಕೆಲವರು ಪರೋಕ್ಷವಾಗಿದ್ದಾರೆ.
ಅಮಾನತಿನಲ್ಲಿರುವ ಸಹಾಯಕ ಪ್ರಾಧ್ಯಾಪಕ ಹಾಗೂ ಶಸ್ತ್ರ ಚಿಕಿತ್ಸಕ ಡಾ.ಸಿ.ಎಂ. ಪರಮೇಶ್ವರ್ ಅವರು ಮಾಜಿ ಸಚಿವ ಎಸ್.ಡಿ. ಜಯರಾಮ್ ಅಳಿಯ. ಮಿಮ್ಸ್ ನಿರ್ದೇಶಕ ಹುದ್ದೆಯಿಂದ ರಾಜಕೀಯ ಕಾರಣಗಳಿಂದ ವಂಚಿತರಾಗಿರುವ ಡಾ.ಜಿ.ಎಂ. ಪ್ರಕಾಶ್ ಅವರು ಮಾಜಿ ಸಂಸದ ಜಿ. ಮಾದೇಗೌಡರ ಪುತ್ರ.
ಮಾಜಿ ಶಾಸಕ ಎಚ್.ಡಿ. ಚೌಡಯ್ಯ ಪುತ್ರಿ ಡಾ.ಸವಿತಾ, ಮಾಜಿ ಶಾಸಕ ಎಚ್.ಬಿ. ರಾಮು ಪುತ್ರಿ ಡಾ.ಸ್ಮಿತಾ, ರೈತ ಸಂಘದ ನಾಯಕ ಕೆ. ಬೋರಯ್ಯ ಅವರ ಪುತ್ರ ಆರ್‌ಎಂಒ ಡಾ.ರವೀಂದ್ರ ಬಿ.ಗೌಡ ಸಂಸ್ಥೆಯಲ್ಲಿರುವ ಪ್ರಭಾವಿ ಕುಟುಂಬಗಳ ಸದಸ್ಯರು. ಇನ್ನು, ಸಂಸದ ಎನ್. ಚಲುವರಾಯಸ್ವಾಮಿ ಸಹೋದರ ಪುತ್ರ ಡಾ.ಮೋಹನ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಡಿಟಿಒ ಆಗಿದ್ದಾರೆ.
ಖಾಸಗಿ ಪ್ರಾಕ್ಟೀಸ್‌ಗೆ ಒತ್ತು: ಮಂಡ್ಯದ ಮಿಮ್ಸ್, ಜಿಲ್ಲಾ ಆಸ್ಪತ್ರೆ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶೇಕಡ ೧೦೦ರಷ್ಟು ವೈದ್ಯರು ಖಾಸಗಿ ಪ್ರಾಕ್ಟೀಸ್‌ಗೆ ಒತ್ತು ನೀಡಿದ್ದಾರೆ. ಕೆಲವರು ಸ್ವಂತ ನರ್ಸಿಂಗ್ ಹೋಂ, ಕ್ಲಿನಿಕ್ ಹೊಂದಿದ್ದಾರೆ. ಇನ್ನುಳಿದವರು ಹಗಲು, ರಾತ್ರಿಯೆನ್ನದೆ ಖಾಸಗಿ ಪ್ರಾಕ್ಟೀಸ್‌ನಲ್ಲೇ ಮುಳುಗಿ ವೈದ್ಯ ವೃತ್ತಿಯನ್ನು ದುಡ್ಡಿನ ದಂಧೆ ಮಾಡಿಕೊಂಡಿ ದ್ದಾರೆ.
ಖಾಸಗಿ ಪ್ರಾಕ್ಟೀಸ್ ವಿಷಯದಲ್ಲಿ ಮಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ.ರಾಮಲಿಂಗೇಗೌಡ ಸಹಿತ ಎಲ್ಲಾ ೮ ವಿಭಾಗಗಳ ಮುಖ್ಯಸ್ಥರೂ ಹೊರತಲ್ಲ. ಕೆಲ ವೈದ್ಯರು, ಬೋಧಕರು ಮತ್ತು ಪ್ರಯೋಗಾಲಯಗಳ ಕೆಲಸಗಾರರು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ, ಕೆಲಸದ ಅವಧಿಯಲ್ಲೇ ಖಾಸಗಿ ಪ್ರಾಕ್ಟೀಸ್ ಮಾಡುತ್ತಿರುವುದೂ ಉಂಟು.
೪ ವರ್ಷಕ್ಕೆ ೫ನೇ ನಿರ್ದೇಕರು: ಮಂಡ್ಯ ಜಿಲ್ಲೆಯಲ್ಲಿ ಉನ್ನತ ಹುದ್ದೆಗಳಲ್ಲಿ ಯಾರಿಗೂ ಹೆಚ್ಚು ದಿನ ಉಳಿಗಾಲವಿಲ್ಲ. ಜಿಲ್ಲಾಧಿಕಾರಿ, ಮೈಷುಗರ್ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಂತೆಯೇ ಮಿಮ್ಸ್‌ನ ನಿರ್ದೇಶಕ ಹುದ್ದೆಯೂ ಶಾಪಗ್ರಸ್ತವಾಗಿದೆ.  ೪ ವರ್ಷ ತುಂಬುವಷ್ಟರಲ್ಲಿ ಮಿಮ್ಸ್ ೫ನೇ ನಿರ್ದೇಶಕರನ್ನು ಕಾಣು ವಂತಾಗಿದೆ. ಈ ಹುದ್ದೆಗೂ ಲಂಚದ ಹಾವಳಿ ಹೆಚ್ಚಿದೆ.
ಸಂಸ್ಥೆಯ ಪ್ರಾರಂಭದಲ್ಲಿ ನಿರ್ದೇಶಕರಾಗಿ ಡಾ.ಚಂದ್ರಶೇಖರ್ ಕೆಲಸ ಮಾಡಿದ್ದರು. ಬಳಿಕ ಬಂದ ಡಾ.ಚಿದಾನಂದ ಅವರು ಸಿಬ್ಬಂದಿ ನೇಮಕದಲ್ಲೇ ಮುಳುಗಿದ್ದರು. ಅವರಾದ ನಂತರ ಡಾ.ಶಿವಕುಮಾರ್ ವೀರಯ್ಯ, ಡಾ.ರಾಜೀವ್ ಶೆಟ್ಟಿ ನಿರ್ದೇಶಕರಾಗಿದ್ದರು. ಇದೀಗ ಡಾ.ಪುಷ್ಪಾ ಸರ್ಕಾರ್ ಪ್ರಭಾರ ನಿರ್ದೇಶಕಿ.

ತ್ರಿಭಾಷಾ ಸೂತ್ರ ಜಾರಿಯಾಗಲಿ

ನವೀನ್‌ಕುಮಾರ್  ಪಿರಿಯಾಪಟ್ಟಣ
ರಾಷ್ಟ್ರದಲ್ಲಿ ಎಲ್ಲಡೆ ತ್ರಿಭಾಷಾ ಸೂತ್ರ ಕಡ್ಡಾಯ ವಾಗಿ ಜಾರಿಯಾಗಬೇಕು ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಪಿರಿಯಾಪಟ್ಟಣದಲ್ಲಿ ನಡೆದ ೧೦ನೇ ಜಿಲ್ಲಾ  ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾಷೆಯ ಉಳಿವಿಗಾಗಿ ಇಂದು ಹೋರಾಟ ಅನಿವಾರ್ಯ. ಕನ್ನಡ ನಾಡು ನುಡಿಯ ವಿಚಾರ ಬಂದಾಗ ಕನ್ನಡಿಗರು ಪಕ್ಷಾತೀತವಾಗಿ ಹೋರಾಟ ನಡೆಸುವುದು ಅಗತ್ಯ ಎಂದರು.
ಪುಂಡತನ ಸಲ್ಲ: ಇಂದು ಕನ್ನಡ ಭಾಷೆ ಅಪಾಯಕಾರಿ ಪರಿಸ್ಥಿತಿಯಲ್ಲಿದೆ. ಯಾವುದೇ ಭಾಷೆಯನ್ನು ನಾವು ವಿರೋಧಿಸುವುದು ಬೇಡ. ಬದಲಿಗೆ ಎಲ್ಲಾ ಭಾಷೆಯನ್ನು ಗೌರವಿ ಸುತ್ತ ಕನ್ನಡವನ್ನು ಮಾತ್ರ ಕಲಿಯೋಣ, ಬೆಳಗಾವಿ ಹೋರಾಟದಲ್ಲಿ ಮಹಾಜನ ವರದಿ ಅಂತಿಮ ಎಂದಿದ್ದರೂ ಭಾಷೆಯ ವಿಚಾರದಲ್ಲಿ ಮಹಾರಾಷ್ಟ್ರದ ಕೆಲವು ರಾಜಕಾರಣಿಗಳು ಪುಂಡತನ ತೋರುತ್ತಿದ್ದು, ಭಾಷೆಯ ವಿಷಯದಲ್ಲಿ  ರಾಜಕೀಯ ದ್ವೇಷ ಉಂಟು ಮಾಡುತ್ತಿರುವುದು ಸರಿಯಲ್ಲ  ಎಂದರು.
ಆಂಗ್ಲ ವ್ಯಾಮೋಹ ಆತಂಕ:  ಕರ್ನಾಟಕ ದಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಮತ್ತು ದಬ್ಬಾಳಿಕೆ ಹೆಚ್ಚಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿಯೆ ಶೇ. ೬೮ರಷ್ಟು ಇತರ ಭಾಷಿಕರಿದ್ದು ಇವರು ಕನ್ನಡ ಭಾಷೆಗೆ ಗೌರವ ಕೊಡದಿದ್ದರೂ ಬದುಕಬಹುದೆಂಬ ನಿರ್ಣಯಕ್ಕೆ ಬಂದಿರುವುದು ಅಪಾಯಕಾರಿ ಸಂಗತಿಯಾಗ ಲಿದೆ. ಆದ್ದರಿಂದ ಅತಿಯಾದ ಸೌಜನ್ಯ ನಮ್ಮ ಭಾಷೆಗೆ ಮಾರಕವಾಗಿದ್ದು ಮುಂದಿನ ದಿನ ಗಳಲ್ಲಿ ಬೆಂಗಳೂರು ಕೇಂದ್ರಾಡಳಿತ ಪ್ರದೇಶ ವಾದರೂ ಆಶ್ವರ್ಯವಿಲ್ಲ ಎಂದು ತಿಳಿಸಿದರು.
ರಾಜ್ಯದ ಪ್ರತಿ ತಾಲೂಕಿನಲ್ಲಿ ಕನ್ನಡ ಅಭಿವೃದ್ದಿ  ಪ್ರಾಧಿಕಾರದ ವತಿಯಿಂದ ಕನ್ನಡ ಭವನ ನಿರ್ಮಾಣ ಮಾಡಲಾಗುವುದು ಎಂದು ಪ್ರಕಟಿಸಿದ ಅವರು. ಇದಕ್ಕಾಗಿ ಪ್ರತಿತಾಲೂಕಿಗೆ ೭ ಲಕ್ಷ ರೂ.   ಮಂಜೂರು ಮಾಡಲಾಗುವುದು ಎಂದು ತಿಳಿಸಿದರು. ಕನ್ನಡದ ಕೆಲಸಗಳ ವಿಚಾರದಲ್ಲಿ ಇಂದೇ ಮಾಡುವ ಮನೋಭಾವನೆ ಅಗತ್ಯ ಎಂದು ತಿಳಿಸಿದರು.
ಸಮ್ಮೇಳನದ ಅಧ್ಯಕ್ಷ ಪಿ.ಕೆ.ರಾಜಶೇಖರ್ ಮಾತನಾಡಿ, ನನ್ನ ಹುಟ್ಟೂರಿನಲ್ಲಿ ಅಧ್ಯಕ್ಷ ಸ್ಥಾನ ಪಡೆದಿದ್ದು, ಹೃದಯ ತುಂಬಿ ಬಂದಿದೆ. ಸಮ್ಮೇಳನವನ್ನು ಯಶಸ್ವಿ ಮಾಡುವಲ್ಲಿ ಪಿರಿಯಾಪಟ್ಟಣದ ಜನರ ಕೊಡುಗೆ, ಶ್ರಮ, ನಡವಳಿಕೆಗಳಿಂದ ನಾವು ಹೊಗೆಸೊಪ್ಪಿನ ಶ್ರೀಮಂತಿಕೆಯ ಜತೆಗೆ ಹೃದಯ ಶ್ರೀಮಂತಿಕೆ ಯನ್ನು ಹೊಂದಿದ್ದೇವೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ ಎಂದರು.
ಭಾಷಣದಲ್ಲಿ ಗದ್ಗದಿತರಾದ ಪಿಕೆಆರ್ ನಾನೊಬ್ಬ ನಿಮ್ಮಡಿಯಲ್ಲಿ ಅರಳಿದ ಹೂ ಆದೆ ಎಂದು ಕಾವ್ಯಮಯವಾಗಿ ನುಡಿದರು. ಮನೆಯ ತಾಯಿ ಕನ್ನಡವನ್ನು ಕಲಿಸಿದರೆ ಮಾತ್ರ ಕನ್ನಡ ಉಳಿಯುತ್ತದೆ. ಇಂಗ್ಲಿಷ್‌ನ ಪಿಂಕಿ,ರಿಂಕಿಗಳನ್ನು ಬಿಟ್ಟು ಕನ್ನಡದ ಹೆಸರನ್ನು ಮಕ್ಕಳಿಗೆ ನಾಮಕರಣ ಮಾಡುವ ಮೂಲಕ ಮನೆಯಿಂದಲೇ ಕನ್ನಡ ಉಳಿಸಿ ಬೆಳೆಸುವ ಪ್ರಕ್ರಿಯೆ ಆರಂಭವಾಗಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾಡಿದ ಸಂಸದ ವಿಶ್ವನಾಥ್, ಸರಕಾರ ಕನ್ನಡ ಸಂಸ್ಕೃತಿಯನ್ನು ಜನರ ಹೃದಯದಲ್ಲಿ ಮೂಡಿಸಬೇಕು ಎಂಬ ಹಿನ್ನೆಲೆಯಲ್ಲಿ ಸಮ್ಮೇಳನಗಳನ್ನು ಆಯೋಜಿಸುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು.
ಕನ್ನಡಭವನ ಕಟ್ಟಲು ತಮ್ಮ ವ್ಯಾಪ್ತಿಯ ೮ ತಾಲೂಕುಗಳಿಗೆ ತಲಾ ೫ ಲಕ್ಷ ರೂ.ಗಳನ್ನು ಮಂಜೂರು ಮಾಡುವುದಾಗಿ ಪ್ರಕಟಿಸಿದ ಅವರು, ಇಂಥ ಸಮ್ಮೇಳನಗಳಲ್ಲಿ ಬರಿ ಠರಾವುಗಳನ್ನು ಮಾಡದೆ ಇವುಗಳ ಪರಿಣಾಮಗಳನ್ನು ಜಾರಿಗೊಳಿಸಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಕೆ.ವೆಂಕಟೇಶ್, ತಾಲೂಕಿನಲ್ಲಿ ವಾಸಿಸುವವರು ಹೆಚ್ಚಿನವರು ರೈತಾಪಿ ವರ್ಗದವರಾಗಿದ್ದರೂ ಇಂಥ ಕನ್ನಡ ಸಂಸ್ಕೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ೫೦ ಮಂದಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಜಿಲ್ಲೆಯ ಮಹನೀಯರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಟಿ.ಸಿ.ವಸಂತ್‌ರಾಜೇ ಅರಸ್ ತಾವು ಕಾರ್ಯನಿರ್ವಹಿಸಿದ  ಈ ಕಾಲೇಜು  ಕಾಂಪೌಂಡ್ ಬಿದ್ದುಹೋಗಿದೆ. ಇದನ್ನು ಸರಿಪಡಿಸುವಂತೆ ಮನವಿ ಮಾಡಿದರು. ಖ್ಯಾತ ಚಲನ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲರ ಪತ್ನಿ ನಾಗಲಕ್ಷ್ಮಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಸತ್ಯನಾರಾಯಣ, ತೋಂಟದಾರ್ಯ, ಸಾ.ರಾ.ಮಹೇಶ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮೈ.ವಿ.ರಾಜು, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ತಾ.ಅಧ್ಯಕ್ಷ ವೈ.ಡಿ.ರಾಜಣ್ಣ ಹಾಜರಿದ್ದರು.

ಜನರ ಹೃದಯವಂತಿಕೆಯಿಂದ ಮಾತ್ರ ಭಾಷಾ ಬೆಳವಣಿಗೆ
ಭಾಷೆಯ ಬೆಳವಣಿಗೆ ಕೇವಲ  ಸರಕಾರದ ಹಣದಿಂದ ಸಾಧ್ಯವಿಲ್ಲ , ಜನರ ಹೃದಯವಂತಿಕೆಯಿಂದ ಮಾತ್ರ ಸಾಧ್ಯ ಎಂದು ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದರು. 
ಪಿರಿಯಾಪಟ್ಟಣದಲ್ಲಿ ನಡೆಯುತ್ತಿರುವ ೧೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಚುಟುಕು ಕವಿಗೋಷ್ಠಿಯಲ್ಲಿ ಮಾತನಾಡಿದರು.
ಪಿರಿಯಾಪಟ್ಟಣ ತಾಲೂಕು ಪುಟ್ಟಣ್ಣ ಕಣಗಾಲ್ ರಂಥ ಉತ್ತಮ ನಿರ್ದೇಶಕ, ಕಣಗಾಲ್ ಪ್ರಭಾಕರ ಶಾಸ್ತ್ರಿಯವರಂಥ   ಉತ್ತಮ ಸಾಹಿತಿಗಳನ್ನು ಕೊಡುಗೆಯಾಗಿ ನೀಡಿದೆ ಎಂದರು.
ಭಾಷೆಯ ಅವನತಿಯಾದರೆ ಸರ್ವನಾಶವಾದಂತೆ.  ಆದ್ದರಿಂದ  ಕನ್ನಡದ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ  ನೇತೃತ್ವದ ಸರಕಾರ  ಕನ್ನಡಿಗರ ಬೆನ್ನೆಲುಬಾಗಿ ನಿಂತಿದೆ ಎಂದು ತಿಳಿಸಿದರು.
ಕನ್ನಡ ಸಂಸ್ಕೃತಿ ಇಲಾಖೆಗೆ ೧೮೦ ಕೋಟಿ ರೂ.ಗಳನ್ನು ಸರಕಾರ ಅನುದಾನ ನೀಡಿದ್ದು , ಪ್ರತಿ ಜಿಲ್ಲಾ  ಸಾಹಿತ್ಯ ಸಮ್ಮೇಳನ ನಡೆಸಲು ೫ ಲಕ್ಷ ರೂ.ಗಳನ್ನು ನೀಡುತ್ತಿದೆ. ಅದೇ ರೀತಿ ಎಲ್ಲಾ ತಾಲೂಕಿನಲ್ಲೂ  ತಾಲೂಕು ಕನ್ನಡ ಸಮ್ಮೇಳನ ನಡೆಸಲು ೧ ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಯಾದಲ್ಲಿ ಮಾತ್ರ ಸಂಸ್ಕೃತಿಯ ವಿನಿಮಯ ಮತ್ತು ಅಭಿವೃದ್ಧಿ  ಸಾಧ್ಯ.  ಈ ನಿಟ್ಟಿನಲ್ಲಿ ಮೈಸೂರು ಪಾರಂಪರಿಕ ನಗರವಾಗಿ ಬೆಳೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ  ನರ್ಮ್ ಯೋಜನೆಯನ್ನು ಬೆಂಗಳೂರಿಗಷ್ಟೇ ಅಲ್ಲದೆ ಮೈಸೂರಿಗೂ ನೀಡಿದೆ.  ಬೆಂಗಳೂರಿನಂಥ ನಗರಗಳಲ್ಲಿ ಔದಾರ್ಯ ವಿದ್ದರೆ ನಾವೇ ಹೊರಗಿರಬೇಕಾಗುತ್ತದೆ. ಅತಿಯಾದ ಔದಾರ್ಯ ಗಳನ್ನು ಬಿಟ್ಟು  ನಮ್ಮ ತನವನ್ನು ಉಳಿಸಿಕೊಳ್ಳವ ಕರ್ತವ್ಯ ಮಾಡಬೇಕಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎಲ್ಲಾ ಬಸ್ ನಿಲ್ದಾಣಗಳನ್ನು ಹೈಟೆಕ್‌ಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪಿರಿಯಾಪಟ್ಟಣ ಬಸ್ ನಿಲ್ದಾಣಕ್ಕೆ ಒಂದು ಕೋಟಿ ರೂ ಮಂಜೂರು ಮಾಡಲಾಗುತ್ತಿದೆ. ಅಲ್ಲದೆ,  ತಾಲೂಕಿನ  ಬೆಟ್ಟದಪುರ ನಿಲ್ದಾಣಕ್ಕೆ ೩೦ ಲಕ್ಷ ರೂ., ಹುಣಸೂರಿನ ಬಸ್‌ನಿಲ್ದಾಣದ ಅಭಿವೃದ್ಧಿಗೆ ೩೦ ಲಕ್ಷ ರೂ., ಕಟ್ಟೆಮಳಲವಾಡಿ ನಿಲ್ದಾಣಕ್ಕೆ ೩೦ ಲಕ್ಷ ರೂ. ನೀಡಲು ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಪಿ.ಕೆ.ರಾಜಶೇಖರ್, ಶಾಸಕ ಕೆ.ವೆಂಕಟೇಶ್  ಮತ್ತಿತರರು ಹಾಜರಿದ್ದರು.

ನಾಲ್ಕೇ ತಿಂಗಳಲ್ಲಿ ಏರಿತು ಅಪರಾಧ ಪ್ರಮಾಣ

ವಿಕ ಸುದ್ದಿಲೋಕ ಮೈಸೂರು
ನಾಲ್ಕು  ತಿಂಗಳಲ್ಲಿ ಮೈಸೂರು ನಗರದ ಅಪರಾಧ ಪ್ರಮಾಣ ಸರ್ರನೇ ಏರಿದೆಯೇ?
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಅಜಯಕುಮಾರ್ ಸಿಂಗ್ ಭಾನುವಾರ ನಗರಕ್ಕೆ ಆಗಮಿಸಿದಾಗ ನಗರ ಪೊಲೀಸ್ ಆಯುಕ್ತರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿನ ಅಂಕಿ ಅಂಶಗಳು ಇಂಥಹದೊಂದು ಶಂಕೆಯನ್ನು ಹುಟ್ಟು ಹಾಕಿದೆ.
೨೦೦೯ರ ಡಿಸೆಂಬರ್, ಈ ವರ್ಷದ ಜನವರಿ, ಫೆಬ್ರವರಿ, ಮಾರ್ಚ್ ಸೇರಿ ನಾಲ್ಕೇ ತಿಂಗಳಲ್ಲಿ ಮೈಸೂರಿನಲ್ಲಿ ಕಳವಾದ ವಸ್ತುಗಳ ಪ್ರಮಾಣ ೧.೭೩ ಕೋಟಿ ರೂ.  ಇದು ಹಿಂದಿನ ಎರಡು ವರ್ಷದಲ್ಲಿನ ಇದೇ ಅವಧಿಯ ಮೊತ್ತದ ಎರಡು ಪಟ್ಟು. ಈ ನಾಲ್ಕು ತಿಂಗಳಲ್ಲಿ ವಶಪಡಿಸಿಕೊಂಡ ಮೊತ್ತ ೫೨.೦೯ ಲಕ್ಷ ರೂ.  ಹಿಂದಿನ ಎರಡು ವರ್ಷದಲ್ಲಿ ಇದು ಅರ್ಧದಷ್ಟು ಕಡಿಮೆ.
ಈ ಅಂಕಿ ಅಂಶ ನೋಡಿದಾಗ ಮೈಸೂರಿನಲ್ಲಿ ಪತ್ತೆಯಾದ ಪ್ರಮಾಣದಲ್ಲಿ ಏರಿಕೆ ಕಂಡು ಬಂದರೂ,. ಅಪರಾಧದಲ್ಲೂ ಹೆಚ್ಚಳವಾಗಿರುವುದು ಗೋಚರಿಸುತ್ತದೆ.
ಸರಗಳ್ಳತನ ಮಿತಿ ಮೀರಿದೆ: ಸರಗಳ್ಳತನ ತಪ್ಪಿಸಲೆಂದೇ ಬೆಳಗ್ಗೆಯಿಂದ ಮಧ್ಯ ರಾತ್ರಿವರೆಗೆ ವಿವಿಧ ಆಪರೇಶನ್‌ಗಳನ್ನು ನಗರ ಪೊಲೀಸರು ಆರಂಭಿಸಿದ್ದಾರೆ. ಆದರೂ ಸರಗಳ್ಳತನ ಮಾತ್ರ ಸೆನ್ಸೆಕ್ಸ್ ಮಾದರಿಯಲ್ಲೇ ಏರಿಕೆಯಾಗಿದೆ.
೨೦೦೮ರ ನಾಲ್ಕು ತಿಂಗಳಲ್ಲಿ ೧೨ ಸರಗಳ್ಳತನ ವರದಿ ಯಾಗಿ ೩ ಪತ್ತೆಯಾಗಿದ್ದವು. ಅದೇ ೨೦೦೯ರಲ್ಲಿ ೨೪ ಸರಗಳ್ಳತನ ನಡೆದು ಪತ್ತೆಯಾಗಿದ್ದು ಕೇವಲ ೨ ಮಾತ್ರ. ಅದೇ ೨೦೧೦ರಲ್ಲಿ ವರದಿಯಾದ ಸರಗಳ್ಳ ತನದ ಪ್ರಕರಣಗಳು ೪೨. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ದ್ವಿಗುಣ ವಾಗುತ್ತಾ ಹೋಗುತ್ತಿದೆ. ಇನ್ನು ಪತ್ತೆ ವಿಚಾರದಲ್ಲೂ ನಗರ ಪೊಲೀಸರು ಹಿಂದೆ ಬಿದ್ದಿದ್ದಾರೆ. ನಾಲ್ಕು ತಿಂಗಳಲ್ಲಿ ಪತ್ತೆಯಾದ ಸರಗಳ್ಳತನ ೧೧ ಅಷ್ಟೇ. ಸರಗಳ್ಳತನದಿಂದ ಆದ ಕಳವಿನ ಪ್ರಮಾಣ ೧೪.೭೩ ಲಕ್ಷ ರೂ. ೨೦೦೮ರಲ್ಲಿ ೨.೯೫ ಲಕ್ಷ ರೂ, ೨೦೦೯ರಲ್ಲಿ ೬.೫೭ ಲಕ್ಷ ರೂ. ನಷ್ಟಿದ್ದು. ಇದೂ ಗಣನೀಯವಾಗಿ ಏರಿದೆ.
ಹಗಲು ಇಳೀತು, ರಾತ್ರಿ ಏರಿತು: ಇನ್ನು ಮನೆಗಳ್ಳತನ ಹಾಗೂ ಸಾಮಾನ್ಯ ಕಳ್ಳತನದ ಪ್ರಮಾಣದಲ್ಲೂ ಏರಿಕೆಯಾಗಿದೆ. ಹಗಲು ಕಳ್ಳತನ ಪ್ರಮಾಣ ಹಿಂದಿನ ವರ್ಷಗಳಲ್ಲಿ ಕ್ರಮವಾಗಿ ೧೦ ಹಾಗೂ ೪ ಇದ್ದವು. ಈ ನಾಲ್ಕು ತಿಂಗಳಲ್ಲಿ ಇದು ಒಂದಕ್ಕೆ ಇಳಿದಿದೆ. ಅದೇ ರಾತ್ರಿ ಕಳ್ಳತನ ಪ್ರಮಾಣ ಏರಿದೆ. ೨೦೦೮ರಲ್ಲಿ ೭೨, ೨೦೦೯ರಲ್ಲಿ ೨೭ ಇದ್ದ ಪ್ರಮಾಣ ೨೦೧೦ರಲ್ಲಿ ೫೧ಕ್ಕೆ ಜಿಗಿದಿದೆ. ಸಾಮಾನ್ಯ ಕಳವಿನ ಮೊತ್ತವೂ ಎರಡು ಪಟ್ಟನ್ನೂ ದಾಟಿದೆ. ೨೦೦೮ರಲ್ಲಿ ೪೭,೧೦,೨೬೯ ರೂ.ಗಳಷ್ಟು ಕಳವಾದರೆ, ೨೦೦೯ರಲ್ಲಿ ೭೦,೧೭,೦೫೦ಕ್ಕೆ ಜಿಗಿಯಿತು. ಈ ವರ್ಷದ ನಾಲ್ಕು ತಿಂಗಳಲ್ಲಿ ಇದು ೯೭,೫೧,೮೬೫. ಪತ್ತೆಯಾದ ಪ್ರಮಾಣ ೨೯,೫೮,೬೪೦ ರೂ.
ಹಗಲು ಎಚ್ಚರಿಕೆಯಾಗಿರುವ ಪೊಲೀಸರು ರಾತ್ರಿ ಕಾರ‍್ಯಾಚರಣೆ ಯಲ್ಲಿ ಎತ್ತ ಜಾರುತ್ತಿದ್ದಾರೆ ಎನ್ನುವುದನ್ನು ಈ ಅಂಕಿ ಅಂಶ ತೋರುತ್ತದೆ.
ಸಾಮಾನ್ಯ ಕಳ್ಳತನದಲ್ಲೂ ಇದೇ ಅಂಕಿ ಅಂಶ, ೨೦೦೮ರಲ್ಲಿ ೨೩೦, ೨೦೦೯ರಲ್ಲಿ ೧೮೭ ಇದ್ದರೆ ಈ ವರ್ಷ ಇದು ೩೦೫ಕ್ಕೆ ಏರಿ ಹೋಗಿದೆ. ಸುಲಿಗೆ ಪ್ರಕರಣ ದಾಖಲಾಗಿದ್ದು ೧೮. ಹಿಂದಿನ ವರ್ಷದಲ್ಲಿ ಕ್ರಮವಾಗಿ ೧೫ ಹಾಗೂ ೬ ಇದ್ದವು.
ಇದೇ ರೀತಿ ದರೋಡೆ ಪ್ರಕರಣ ಹಿಂದಿನ ಎರಡು ವರ್ಷದ ಈ ಅವಧಿಯಲ್ಲಿ ಯಾವುದೇ ಪ್ರಕರಣ ದಾಖಲಾಗೇ ಇಲ್ಲ. ಈ ವರ್ಷ ಒಂದು ಪ್ರಕರಣ ದಾಖಲಾದರೂ ಪತ್ತೆಯಾಗಿರುವುದು ಸಮಾಧಾನದ ಸಂಗತಿ. ದರೋಡೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಹಿಂದಿನ ಎರಡು ವರ್ಷ ಕ್ರಮವಾಗಿ ೨, ೧ ಇದ್ದರೆ, ಈ ವರ್ಷ ನಾಲ್ಕಕ್ಕೆ ಏರಿದೆ. ಲಾಭಕ್ಕಾಗಿ ಕೊಲೆ ನಡೆದ ಪ್ರಕರಣಗಳು ಹಿಂದಿನ ಎರಡು ವರ್ಷದಲ್ಲಿ ಯಾವುದೂ ಇಲ್ಲ. ಈಗ ಆ ಸಂಖ್ಯೆ ೨. ಪತ್ತೆಯಾಗಿದ್ದು ೧.
ಇದೇ ಅವಧಿಯಲ್ಲಿ ಕೊಲೆಯಾದ ಪ್ರಕರಣದಲ್ಲಿ ಅರ್ಧದಷ್ಟು ಇಳಿಮುಖವಾಗಿದೆ. ೨೦೦೮ರಲ್ಲಿ ೧೧, ೨೦೦೯ರಲ್ಲಿ ೧೨ ಪ್ರಕರಣ ದಾಖಲಾಗಿ ಭೇದಿಸಲ್ಪಟ್ಟಿದ್ದವು.
ಸುನೀಲ್ ಅಗರವಾಲ್ ಅವರು ನಗರ ಪೊಲೀಸ್ ಆಯುಕ್ತರಾಗಿ ಬಂದ ೧೦ ತಿಂಗಳ ಅವಧಿಯಲ್ಲಿ ಪೊಲೀಸಿಂಗ್ ಬಲವಾಗಿದೆ ಎನ್ನುವ ಭಾವನೆ ಒಂದು ಕಡೆಯಿದ್ದರೂ, ಅಪರಾಧದ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಏಕೆ ಎನ್ನುವುದಕ್ಕೆ ಅವರೇ ಉತ್ತರ ನೀಡಬೇಕು.
ಉತ್ಸಾಹದ ಪ್ರದರ್ಶನ
ಈ ನಡುವೆ ನಗರದ ವಿವಿಧ ಠಾಣೆಗಳ ಪೊಲೀಸರು ವಶಪಡಿಸಿಕೊಂಡ ಮಾಲುಗಳ ಪ್ರದರ್ಶನ ಗಮನ ಸೆಳೆಯಿತು. ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಬೈಕ್‌ಗಳು, ಕಂಪ್ಯೂಟರ್ ಉತ್ಪನ್ನಗಳು, ಚಿನ್ನಾಛರಣಗಳು, ಪಾರಂಪರಿಕ ಮಹತ್ವದ ವಿಗ್ರಹ, ನಾಣ್ಯಗಳ ಪ್ರದರ್ಶನದಲ್ಲಿ ಉತ್ಸಾಹ ಕಂಡು ಬಂದಿತು.
ಮಂಡಿ, ಕುವೆಂಪುನಗರ, ಸರಸ್ವತಿಪುರಂ, ನರಸಿಂಹ ರಾಜ ಠಾಣೆ ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಪ್ರಮಾಣ ಗಮನ ಸೆಳೆದರೆ, ಲಕ್ಷ್ಮಿಪುರಂ ಠಾಣೆ ಇನ್ಸ್‌ಪೆಕ್ಟರ್ ಸೂರ‍್ಯನಾರಾಯಣರಾವ್ ವಶಪಡಿಸಿಕೊಂಡಿರುವ ೧೧೬ ಗ್ರಾಂ.ನ ಚಿನ್ನದ ಬಿಸ್ಕೇಟ್ ವಿಶೇಷವೆನಿಸಿತು. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಅಜಯಕುಮಾರ್‌ಸಿಂಗ್ ಅವರು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು, ಬೈಕ್‌ಗಳನ್ನು ನೋಡಿ, ಶೋರೂಂಗಳಿಂದಲೇ ಕದ್ದ ಹೊಸ ಬೈಕ್‌ಗಳಂತೆಯೇ ಇದೆಯಲ್ಲಾ ಎಂದು  ಅಚ್ಚರಿಯಿಂದಲೇ ಕೇಳಿದರು. ಇದು ಹೊರಗಡೆಯೇ ಕದ್ದು ಸಿಕ್ಕಿಬಿದ್ದಿದ್ದು ಎಂದು ಆಯುಕ್ತ ಸುನೀಲ್ ಅಗರವಾಲ್ ಸ್ಪಷ್ಟನೆ ನೀಡಿದರು.

‘ಸಂಗೀತ ವಿವಿ ಬದಲು ಜನಪದ ವಿವಿ ಸ್ಥಾಪಿಸಿ’

ನವೀನ್‌ಕುಮಾರ್ /ಹನಗೋಡು ನಟರಾಜ್, ಪಿರಿಯಾಪಟ್ಟಣ
ಜನಪದ ವಿಶ್ವವಿದ್ಯಾನಿಲಯ  ಸ್ಥಾಪಿಸಲು  ಹಿಂದೇಟು ಹಾಕುತ್ತಿರುವ  ಸರಕಾರ ಸಂಗೀತ  ವಿಶ್ವವಿದ್ಯಾನಿಲಯ ಸ್ಥಾಪಿಸಲು  ಆದ್ಯತೆ  ನೀಡುತ್ತಿರುವುದು ವಿಷಾದನೀಯ ಎಂದು  ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ  ಹೇಳಿದರು.
ಪಿರಿಯಾಪಟ್ಟಣದ  ಗೋಣಿಕೊಪ್ಪ  ರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವಕಾಲೇಜಿನ  ಪ್ರಾಂಗಣದ ಪುಟ್ಟಣ್ಣಕಣಗಾಲ್  ವೇದಿಕೆಯಲ್ಲಿ  ಮೈಸೂರು ಜಿಲ್ಲಾ ೧೦ನೇ  ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. 
ದೇಶದ  ೪೫ ವಿಶ್ವವಿದ್ಯಾನಿಲಯಗಳಲ್ಲಿ  ಸಂಗೀತಕ್ಕೆ ಪ್ರತ್ಯೇಕ ವಿಭಾಗಗಳಿವೆ. ಇವುಗಳಲ್ಲೇ ಕೆಲವು ಕಡೆ ವಿದ್ಯಾರ್ಥಿಗಳಿಗಿಂತ  ಅಧ್ಯಾಪಕರೇ ಹೆಚ್ಚಾಗಿದ್ದಾರೆ . ಆದ್ದರಿಂದ ಸಂಗೀತ ವಿವಿಗೆ ಬದಲಾಗಿ  ಸರಕಾರ ಜನಪದ  ವಿವಿಗೆ ಮಾನ್ಯತೆ  ನೀಡಬೇಕಿತ್ತು ಎಂದರು.
ಮೂರು ಸಾವಿರ ವರ್ಷಗಳ ಇತಿಹಾಸ ಉಳ್ಳ ಕನ್ನಡ ಭಾಷೆ  ಅನೇಕ ದಾಳಿ, ಅನ್ಯಭಾಷಿಕರ  ಆಕ್ರಮಣದ ನಡುವೆಯೂ ಇಂದಿಗೂ  ತನ್ನ ತನವನ್ನು  ಉಳಿಸಿಕೊಂಡು ಬೆಳೆದಿದೆ. ಆದರೆ ಕನ್ನಡಿಗರಲ್ಲಿ  ಆಂಗ್ಲಭಾಷೆಯ  ವ್ಯಾಮೋಹ ಹೆಚ್ಚುತ್ತಿದ್ದು, ಐಎಎಸ್, ಐಪಿಎಸ್ ಅಧಿಕಾರಿಗಳು ಇಂಗ್ಲಿಷ್‌ನಲ್ಲೇ  ವ್ಯವಹರಿ ಸುತ್ತ ಇನ್ನೂ ಬ್ರಿಟಿಷರ  ಗುಲಾಮಗರಿ ಪ್ರದರ್ಶಿಸುತ್ತಿದ್ದಾರೆ. ಚಿಂತಕ  ರಾಮಮನೋಹರ ಲೋಹಿಯಾ ಅವರು ಈ ಹುದ್ದೆ ಗಳನ್ನು ರದ್ದುಮಾಡಿ ಸ್ಥಳೀಯ ಭಾಷೆಯಲ್ಲೇ  ತರಬೇತಿ ನೀಡಿದ ಅಧಿಕಾರಿಗಳನ್ನೇ ನೇಮಿಸಬೇಕೆಂದು ಶಿಫಾರಸು ಮಾಡಿದ್ದರು. ಈವರೆಗೆ ಇದು ಜಾರಿಗೆ ಬಂದಿಲ್ಲ. ಕನ್ನಡ ಸಾಹಿತ್ಯದಲ್ಲಿ  ಕೇವಲ ಸಾಹಿತ್ಯ  ಕೃತಿ ರಚನೆಯಾದರೆ ಸಾಲದು, ಬದಲಾಗಿ ಬದುಕನ್ನು ರೂಪಿಸುವ ಸಾಹಿತ್ಯ ರಚನೆಯಾಗಬೇಕಿದೆ ಎಂದರು.
ನೆರೆಯ ರಾಜ್ಯಗಳಾದ  ತಮಿಳುನಾಡು, ಆಂಧ್ರ ,ಕೇರಳಗಳಲ್ಲಿ  ಮಾತೃ ಭಾಷೆಗೆ  ಪ್ರಾಧಾನ್ಯ ನೀಡುತ್ತಿದ್ದು , ಭಾಷೆಯ ಅಭಿಮಾನದ ಜತೆಗೆ  ದುರಭಿಮಾನವೂ ಅವರದಾಗಿದೆ. ಆದರೆ  ಕರ್ನಾಟಕದಲ್ಲಿ ಇತರ ಭಾಷೆಗಳಿಗೆ ಆದ್ಯತೆ  ನೀಡುತ್ತಿದ್ದು, ಭಾಷೆಯ ನಿರಭಿಮಾನವನ್ನು  ಮೂಡಿಸುತ್ತಿರುವುದು ದುರಂತ ಎಂದರು.
ಸನ್ಮಾನ  ಸ್ವೀಕರಿಸಿ ಮಾತನಾಡಿದ ಸಾಹಿತಿ ದೇಜಗೌ, ಕನ್ನಡ  ಸಮೃದ್ಧ  ಭಾಷೆ .ಇದರಲ್ಲಿನ  ಕಂಪು, ಸಂಪತ್ತು ಬೇರೆ ಭಾಷೆಯಲ್ಲಿ  ಇಲ್ಲ. ಜಗತ್ತಿನ ಎಲ್ಲ ಭಾಷೆಗಿಂತ ಶ್ರೀಮಂತ ಭಾಷೆ ಕನ್ನಡ ನಾಡಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ  ಶಾಲೆ ನಡೆಸುವವರಿಗೆ ಸರಕಾರ ಹೆಚ್ಚಿನ ತೆರಿಗೆ ವಿಧಿಸಬೇಕು ಹಾಗೂ ಕನ್ನಡ ಮಾಧ್ಯಮ ದಲ್ಲೇ ವ್ಯಾಸಂಗ ಮಾಡಿದವರಿಗೆ ಮಾತ್ರ  ಸರಕಾರಿ ಹುದ್ದೆ ಎಂಬ ನೀತಿ ಜಾರಿ ಮಾಡುವ ಗಂಡಸುತನ ತೋರಬೇಕು.  ಆಗ ಮಾತ್ರ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ  ಸಿಗಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ  ೧೩ ನೂತನ ಕೃತಿಗಳನ್ನು ವಿವಿಧ ಗಣ್ಯರು ಬಿಡುಗಡೆ  ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯರಾಮರಾಜೇ ಅರಸ್ ಮಾತನಾಡಿ,  ಮುಂದಿನ ಸಾಲಿನಿಂದ ತಾಲೂಕು ಮಟ್ಟದಲ್ಲಿ  ಸಾಹಿತ್ಯ ಸಮ್ಮೇಳನ ನಡೆಸಲು ೧ ಲಕ್ಷ ರೂ. ಅನುದಾನ  ನೀಡಲು ಹಾಗೂ ಕನ್ನಡದಲ್ಲಿ  ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ೧ ಲಕ್ಷ ರೂ. ಬಹುಮಾನ  ನೀಡಲು ಸರಕಾರ  ನಿರ್ಧರಿಸಿದೆ  ಎಂದರು. ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ಚರ್ಚಿಸಲು  ಮೈಸೂರಿನಲ್ಲಿ  ಏ.೧೮ ರಂದು ೯೦ ಮಂದಿ ವಿದ್ವಾಂಸರ ಸಭೆ ನಡೆಯಲಿದೆ. ಇಲ್ಲಿ  ಶಾಸ್ತ್ರೀಯ ಸ್ಥಾನಮಾನಕ್ಕೆ ಬೇಕಾದ ಅನುದಾನ, ಭಾಷೆಯ ಬೆಳವಣಿಗೆಗೆ ಅಗತ್ಯವಾದ ಕ್ರಿಯಾಯೋಜನೆ  ತಯಾರಿಸಲಾಗುವುದು ಎಂದರು.
ಕಸಾಪ ರಾಜ್ಯಾಧ್ಯಕ್ಷ  ನಲ್ಲೂರು ಪ್ರಸಾದ್ ಮಾತನಾಡಿ,  ಮಹಾಜನ್ ವರದಿ ಅಂತಿಮ ಎಂದಿದ್ದರೂ  ಮಹಾರಾಷ್ಟ್ರ ಬೆಳಗಾವಿ ವಿಚಾರದಲ್ಲಿ  ಕಿತಾಪತಿ ಮಾಡುತ್ತಿದೆ.  ಗೋವಾ ಮಹದಾಯಿ ಯೋಜನೆಗೆ ,ಆಂಧ್ರಪ್ರದೇಶ  ಕೃಷ್ಣಾ ಯೋಜನೆಗೆ ಅಡ್ಡಗಾಲು ಹಾಕುತ್ತಿವೆ. ತಮಿಳುನಾಡು ಕಾವೇರಿ  ನೀರಿಗಾಗಿ ಹುಯಿಲೆಬ್ಬಿಸುತ್ತಿದೆ. ರಾಜಕಾರಣಿಗಳು ನಾಡು, ನುಡಿಯ  ವಿಚಾರ ಬಂದಾಗ ಪಕ್ಷಭೇದ ಮರೆತು ಕನ್ನಡದ ಪಕ್ಷದಂತೆ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದರು.
 ಕಸಾಪ ಜಿಲ್ಲಾಧ್ಯಕ್ಷ  ಮಡ್ಡೀಕೆರೆ ಗೋಪಾಲ್ ಪ್ರಾಸ್ತಾವಿಕ  ಮಾತುಗಳನ್ನಾಡಿದರು. ಶಾಸಕ  ಕೆ.ವೆಂಕಟೇಶ್ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಅಕಬರ ಅಲಿ ಕನ್ನಡ ಬಾವುಟ  ಹಸ್ತಾಂತರಿ ಸಿದರು. ವೇದಿಕೆಯಲ್ಲಿ ಶಾಸಕರಾದ ಎಚ್.ಸಿ.ಮಹಾದೇವಪ್ಪ , ಎಚ್.ಎಸ್.ಮಹಾದೇವಪ್ರಸಾದ್, ಮಾಜಿ ಸಚಿವೆಯರಾದ  ರಾಣಿಸತೀಶ್, ಲೀಲಾದೇವಿ ಆರ್.ಪ್ರಸಾದ್, ಮಾಜಿ ಶಾಸಕ ಎಚ್.ಸಿ.ಬಸವರಾಜು, ಜಿ.ಪಂ.ಉಪಾಧ್ಯಕ್ಷೆ  ನಂದಿನಿ ಚಂದ್ರಶೇಖರ್, ಮಾಜಿ ಅಧ್ಯಕ್ಷ  ಮರಿಗೌಡ, ಜಿ.ಪಂ.ಸದಸ್ಯರು, ತಾ.ಪಂ.ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ  ಜಮೃದ್, ಪ.ಪಂ.ಅಧ್ಯಕ್ಷೆ ನಾಗಮ್ಮ, ಕಸಾಪ ತಾ.ಅಧ್ಯಕ್ಷ ವೈ.ಡಿ.ರಾಜಣ್ಣ, ಕಾರ್ಯದರ್ಶಿ ಶಫೀಉಲ್ಲಾ  ಮತ್ತಿತರರು ಹಾಜರಿದ್ದರು.
ಪಿರಿಯಾಪಟ್ಟಣಕ್ಕೂ ಬಂದಿದ್ದ ಬುಕನಾನ್
ಟಿಪ್ಪು ಪತನದ ನಂತರದ ವರ್ಷವೇ ಈಸ್ಟ್ ಇಂಡಿಯಾ ಕಂಪನಿ ಫ್ರಾನ್ಸಿನ್ ಬುಕನಾನ್ ಅವರ ಪ್ರವಾಸ ಏರ್ಪಡಿಸಿ ಇತಿಹಾಸ ಬರೆ ಯುವಂತೆ ಹೇಳಿತು. ಅಂತೆಯೇ ಬುಕನಾನ್ ಪ್ರವಾಸ ಕೈಗೊಂಡು ಶ್ರೀರಂಗಪಟ್ಟಣ, ನಂತರ ಪಾಲಹಳ್ಳಿ ಮೂಲಕ ಪಿರಿಯಾಪಟ್ಟಣಕ್ಕೆ ಭೇಟಿ ಇತ್ತಿದ್ದ. ಆತ ಬಂದ ಸಮಯಕ್ಕೆ ಪಿರಿಯಾ ಪಟ್ಟಣ ಕೋಟೆಯೊಳಗಿನ ಊರು ಸಂಪೂರ್ಣ ನಾಶವಾಗಿತ್ತು. ಆಗ ಸೆಪ್ಟೆಂಬರ್, ೧೮೦೦.
ಕೋಟೆ ಹೊರಗೆ ಕೆಲವೇ ಮನೆಗಳು ಇದ್ದುವು. ಭೀತರಾಗಿದ್ದ ಆ ಮನೆ ಗಳವರು ಸಂಜೆವರೆಗೂ ಬಾಗಿಲು ಗಳನ್ನು ಭದ್ರಪಡಿಸಿ ಹೊರ ಹೋಗಿ ರಾತ್ರಿ ಮಾತ್ರ ವಾಸ ಮಾಡುತ್ತಿದ್ದು, ನಂತರದ ವರ್ಷದಲ್ಲಿ ಕೆಲವೇ ತಿಂಗಳುಗಳಲ್ಲಿ ಪಟ್ಟಣವನ್ನು ಶೀಘ್ರವಾಗಿ ಅಭಿವೃದ್ಧಿಪಡಿಸಲಾಯಿತೆಂದು ಬುಕನಾನ್ ತನ್ನ ಗ್ರಂಥದಲ್ಲಿ ದಾಖಲಿಸಿದ್ದಾನೆ.

‘ಚಿಣ್ಣರ ಅಂಗಳ’ದಲ್ಲಿ ೩ ಸಾವಿರ ಮಕ್ಕಳು !

ಚೀ.ಜ.ರಾಜೀವ ಮೈಸೂರು
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶೈಕ್ಷಣಿಕ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುತ್ತಿರುವ ‘ಚಿಣ್ಣರ ಅಂಗಳ’ ಕಾರ್ಯಕ್ರಮಕ್ಕೆ ಈ ಬಾರಿ ದಶಕದ  ಸಂಭ್ರಮ, ಅಂತೆಯೇ ಹೊಸ ಸವಾಲು ಕೂಡ !   
ಏಕೆಂದರೆ  ಈ ಬಾರಿ ಅಂಗಳಕ್ಕೆ ೧೪ ವರ್ಷದ ಶಾಲಾ ಮಕ್ಕಳು ಕೂಡ ಬಂದು ಕೂರುವವರಿದ್ದಾರೆ. ಇಲ್ಲಿಯವರೆಗೆ ೧೩ ವರ್ಷ ದೊಳಗಿನ ಸೋರಿಕೆ ಮಕ್ಕಳನ್ನು ಮಾತ್ರ ಶಾಲೆಗೆ ಆಕರ್ಷಿಸಲು  ಇಲಾಖೆ ಬೆವರು ಸುರಿಸಿದೆ. ಆದರೆ, ಈ ವರ್ಷ ಕಡ್ಡಾಯ ಶಿಕ್ಷಣ ಕಾಯ್ದೆ  ಜಾರಿಗೆ ಬಂದಿದೆ.  ೬ ರಿಂದ ೧೪ ವರ್ಷದೊಳಗಿನ ಎಲ್ಲ  ಮಕ್ಕಳಿಗೂ ಉಚಿತ ಶಿಕ್ಷಣ ನೀಡಲೇಬೇಕಾದ ಮಹತ್ವದ ಜವಾಬ್ದಾರಿಯನ್ನು ಸರಕಾರಗಳು ಹೊತ್ತಿವೆ.  ಈ ವಯೋಮಾನದ ಶಾಲೆಗೆ ಸೇರದೆ  ಇರುವ ಹಾಗೂ ಅರ್ಧಕ್ಕೆ ಶಾಲೆ ಬಿಟ್ಟ ಎಲ್ಲ ಮಕ್ಕಳನ್ನು ಶಾಲೆಗೆ ತರಬೇಕಿದೆ. ಪ್ರೌಢ ಶಿಕ್ಷಣದ ಸಾರ್ವತ್ರೀಕರಣಕ್ಕೆ ದೇಶವೇ ಸಿದ್ಧವಾಗಿದೆ. ಹಾಗಾಗಿ, ಶಿಕ್ಷಣ ಇಲಾಖೆ ಕಾಯ್ದೆಗೆ ಪೂರಕವಾಗಿ ಈ ಸಾಲಿನ ಚಿಣ್ಣರ ಅಂಗಳದ ಸ್ವರೂಪವನ್ನು ಸ್ವಲ್ಪ ಬದಲಿಸಿಕೊಂಡಿದೆ. 
೨೦೧೦- ಜನವರಿಯಲ್ಲಿ ನಡೆಸಿದ ಸಮಗ್ರ ಮಕ್ಕಳ ಗಣತಿ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ೭ರಿಂದ ೧೪ ವರ್ಷ ವಯೋಮಾನದ ೩೬೨೩ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪೈಕಿ ೭೪೫ ಮಕ್ಕಳು ಇನ್ನೂ ಶಾಲೆಗೆ ಸೇರಿಲ್ಲ. ಉಳಿದ ೨೮೭೮ ಮಕ್ಕಳು ಶಾಲೆಯ ದಾಖಲೆಗೆ, ಹೊರಗುಳಿದಿವೆ. ಈ ಮಕ್ಕಳ ಪೈಕಿ ೨೯೫೭ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ಕರೆತರಲು ಚಿಣ್ಣರ ಅಂಗಳದ ಮೂಲಕ ಪ್ರಯತ್ನಿಸಲಾಗುವುದು. ಇದಕ್ಕಾಗಿ ಎಲ್ಲ  ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಉಪ ನಿರ್ದೇಶಕ ಪುರುಷೋತ್ತಮ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ರಾಜ್ಯಾದ್ಯಂತ ಏ.೧೬ ರಿಂದ ಮೂರು ತಿಂಗಳ ಕಾಲ ಚಿಣ್ಣರ ಅಂಗಳ ಕಾರ್ಯಕ್ರಮ ನಡೆಯಲಿದೆ. ಮೈಸೂರು ಜಿಲ್ಲೆಯಲ್ಲಿ  ಒಂದು ದಿನ ತಡವಾಗಿ, ಅದರೆ ಏ. ೧೭ರಿಂದ  ಆರಂಭವಾಗಿ ಜು. ೧೬ರ ವರೆಗೆ  ೧೧೨ ಕೇಂದ್ರಗಳಲ್ಲಿ ಚಿಣ್ಣರ ಅಂಗಳ ನಡೆಯ ಲಿದೆ. ೧೧೨ ಶಿಕ್ಷಕರು, ಅಷ್ಟೇ ಸಂಖ್ಯೆಯ ಸ್ವಯಂ ಸೇವಕರು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುವರು.
ಮೂರು ಪಟ್ಟು ಹೆಚ್ಚಾಗಿದೆ: ಚಿಣ್ಣರ ಅಂಗಳಕ್ಕೆ  ಈಗ ೧೦ ವರ್ಷ. ಯೋಜನೆ ಆರಂಭವಾದ ೨೦೦೧ರಲ್ಲಿ ರಾಜ್ಯದಲ್ಲಿ ೯.೮೬ ಲಕ್ಷ ವಿದ್ಯಾರ್ಥಿಗಳು ಶಾಲೆಯಿಂದ ಹೊರಗಿದ್ದರು. ಈ ಪ್ರಮಾಣ ೨೦೦೯ರ ವೇಳೆಗೆ ೩೫ ಸಾವಿರಕ್ಕೆ ಇಳಿಯಿತು. ಆದರೆ, ಈ ಬಾರಿ ೧೪ ವರ್ಷದ ಮಕ್ಕಳನ್ನು ಪರಿಗಣಿಸಿರುವುದರಿಂದ ಈ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಲಿದೆ. ಮೈಸೂರು ಜಿಲ್ಲೆಯಲ್ಲಿಯೇ ಕಳೆದ ವರ್ಷ  ಕೇವಲ ೮೫೦ ಮಕ್ಕಳಿಗೆ ಮಾತ್ರ ಕಾರ್ಯಕ್ರಮ ನಡೆದಿತ್ತು. ಈ ಬಾರಿ ೩೦೦೦ ಮಕ್ಕಳು ಅಂಗಳಕ್ಕೆ ಕಲಿಯಲು ಬರಲಿದ್ದಾರೆ.  ಹೆಚ್ಚಾಗಿರುವ ಎಲ್ಲ ಮಕ್ಕಳು ೮ನೇ ತರಗತಿ ಹಂತದಲ್ಲಿ ಸೋರಿಕೆಯಾದವರು ಎಂಬುದು ಗಮನಾರ್ಹ.
ಎಂಟನೇ ತರಗತಿ ಮಕ್ಕಳೇ ಹೆಚ್ಚು: ಶಾಲೆ ಬಿಟ್ಟಿರುವ ಮಕ್ಕಳ ಪೈಕಿ ೧೪ ವರ್ಷ ತುಂಬಿದ ಮಕ್ಕಳು ಹೆಚ್ಚಿರುವುದು ಮಕ್ಕಳ ಗಣತಿಯಲ್ಲಿ ವ್ಯಕ್ತವಾಗಿದೆ. ಕಳೆದ ಸಾಲಿನ ತನಕ ಇಂಥ ಮಕ್ಕಳನ್ನು ಅಂಗಳದ ವ್ಯಾಪ್ತಿಗೆ ತಂದಿರಲಿಲ್ಲ.  ಶಿಕ್ಷಣ ಕಾಯ್ದೆ  ಜಾರಿಗೆ ಬಂದಿದೆ. ಇದಲ್ಲದೆ, ಪ್ರೌಢ ಶಿಕ್ಷಣದ ಸಾರ್ವತ್ರೀಕರಣಕ್ಕೂ ನಾವು ಸಜ್ಜಾಗಬೇಕಿದೆ. ಹಾಗಾಗಿ ೧೪ ವರ್ಷದ ಮಕ್ಕಳನ್ನು  ಮತ್ತೆ  ಶಾಲೆಗೆ ಆಕರ್ಷಿಸಬೇಕಿದೆ. ಇದು ಚಿಣ್ಣರ ಅಂಗಳದಲ್ಲಿ ಕೆಲಸ ಮಾಡಲಿರುವ ಶಿಕ್ಷಕರ ಮುಂದಿರುವ ಹೊಸ ಸವಾಲು ಎನ್ನುತ್ತಾರೆ ಯೋಜನೆಯ ಸಹಾಯಕ ಸಮನ್ವಯಾಧಿಕಾರಿ ಎಸ್. ರೇವಣ್ಣ . 
ಸಾಮಾನ್ಯವಾಗಿ ೧೦ ವರ್ಷದೊಳಗಿನ ಮಕ್ಕಳು ಶಾಲೆಗೆ ಬರದಿದ್ದರೆ ಅವರನ್ನು ಮನವೊಲಿಸಿ ಕರೆತರುವುದು ಸುಲಭ. ಆದರೆ. ೧೦ ರಿಂದ ೧೪ ವರ್ಷದ ಮಕ್ಕಳನ್ನು  ಆಕರ್ಷಿಸುವುದು ಸ್ವಲ್ಪ ಕಷ್ಟ. ಬಡತನ, ಪೋಷಕರ ನಿರಾಸಕ್ತಿ. ವಲಸೆ, ವಿವಿಧ ಬಗೆಯ ಶೋಷಣೆಗಳಿಂದ ಮಕ್ಕಳು ಶಾಲೆಗೆ ಬೆನ್ನು ತೋರಿಸಿರುತ್ತಾರೆ.  ಈ ಮಕ್ಕಳನ್ನು ಸೆಳೆಯುವುದು ನಿಜವಾದ ಸವಾಲು. 
 ಸೇತುಬಂಧದ ಗೊತ್ತು-ಗುರಿ !
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ನೇರವಾಗಿ ಶಾಲೆಗೆ ದಾಖಲಿಸಿದರೆ, ಅವರು ಶಾಲೆಯ ಚಟುವಟಿಕೆ ಮತ್ತು ಕಲಿಕಾ ವಿಧಾನಗಳಿಗೆ ಹೊಂದಿಕೊಳ್ಳುವುದು ಕಷ್ಟ.   ಇಂಥ ಸಂದರ್ಭದಲ್ಲಿ ಅವರಿಗೆ ಶಾಲೆ ಆಕರ್ಷಣೆಯ ಕೇಂದ್ರವಾಗುವುದಿಲ್ಲ. ಇಂಥ ಮಕ್ಕಳಲ್ಲಿ ಶಾಲೆಯ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ನಿರಂತರವಾಗಿ ಅವರನ್ನು ಸೆಳೆಯಲು ಚಿಣ್ಣರ ಅಂಗಳ ನಡೆಸಲಾಗುವುದು.
ಆಸಕ್ತಿದಾಯಕ  ಆಟ, ಹಾಡು, ಕಥೆಗಳು, ಸೃಜನಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಕಲಿಯುವ ಪ್ರೀತಿ ಬೆಳೆಸುವುದು ಹಾಗೂ  ಔಪಚಾರಿಕೆ ಶಾಲೆಗೆ ಸೇರಲು ಇರುವ ಹಿಂಜರಿಕೆಯನ್ನು ಹೋಗಲಾಡಿಸುವುದು ಪ್ರಮುಖ ಉದ್ದೇಶ.
ವಸತಿ ರಹಿತ ಮತ್ತು ವಸತಿ ಸಹಿತ ಚಿಣ್ಣರ ಅಂಗಳ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಂದು ಕ್ಲಸ್ಟರ್ ವ್ಯಾಪ್ತಿಯಲ್ಲಿ ಒಂದು ಕೇಂದ್ರ ಸ್ಥಾಪಿಸಿ, ೨೫ ಮಕ್ಕಳಿಗೆ ಅವಕಾಶ ನೀಡಲಾಗುವುದು. ಹೆಚ್ಚು ಸೋರಿಕೆ ಮಕ್ಕಳು  ಕಂಡು ಬಂದರೆ, ಅವರಿಗೆ  ಸಮೀಪದ ಶಾಲೆಯಲ್ಲಿ ವಸತಿ ರಹಿತವಾಗಿ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಸಂಖ್ಯೆ ಬಿಡಿ-ಬಿಡಿಯಾಗಿದ್ದರೆ, ೨೫ ಮಕ್ಕಳನ್ನು ಸೇರಿಸಿ, ಅವರಿಗೆ ವಸತಿ ಸಹಿತವಾಗಿ ಯಾವುದಾದರೊಂದು ಹಾಸ್ಟೆಲ್‌ನಲ್ಲಿ ವಸತಿ ಸಹಿತವಾಗಿ ಅಂಗಳ ಕೇಂದ್ರ  ತೆರೆಯಲಾಗಿದೆ.

ಹಸಿವು ಅರ್ಧ ಸತ್ಯ; ಕೊರತೆಯೇ ಪೂರ್ಣ ಸತ್ಯ

ಚೀ. ಜ. ರಾಜೀವ  ಮೈಸೂರು
ಈ ಕಾಲದಲ್ಲೂ ಹಸಿವು ತಾಳಲಾರದೆ ಕಾಡಿನಿಂದಾಚೆ ಇರುವ ಹಾಡಿಯ ಗಿರಿಜನರು ಸಾಯುತ್ತಾರೆ ಎಂದರೆ ನಂಬಲು ಸಾಧ್ಯವೇ !?’ 
ಬಲ್ಲೇನಹಳ್ಳಿ ಹಾಡಿಯ ಜೇನು ಕುರುಬ ಕೋಮಿನ  ಚಿಕ್ಕಸಿದ್ದಯ್ಯರ ಸಾವಿನ  ಸುದ್ದಿಗೆ, ನಾಗರಿಕ  ಸಮಾಜದ ಮಂದಿಗೆ ಹಾಗೆ ಅನಿಸ ಬಹುದು. ಚುನಾಯಿತ ಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳಂತೂ ಹಾಡಿಗೆ  ಭೇಟಿ ನೀಡಿ, ಎಲ್ಲವನ್ನೂ ಪರಿಶೀಲಿಸುವ ಮುನ್ನವೇ ‘ಹಸಿವಿ ನಿಂದ ಸಾವು’ ಸಾಧ್ಯವಿಲ್ಲ ಎಂದಿದ್ದಾರೆ.
ಆದರೆ ಇಡೀ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಸ್ಪಷ್ಟವಾಗುವ ಸತ್ಯವೆಂದರೆ, ಹಸಿವೇ ಸಾವಿಗೆ ಕಾರಣವಲ್ಲ, ಆದರೆ ಹಸಿವೂ ಸಾವಿಗೆ ಕಾರಣ.
ವರ್ಷಕ್ಕೆ ೧೦೦ ದಿನ ಉದ್ಯೋಗ ಭದ್ರತೆ ಒದಗಿಸುವ ಮಹಾತ್ಮಾ ಗಾಂಧಿ ರಾಷ್ಟ್ರೀಯ  ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಕೌಟುಂಬಿಕ ಹಾಗೂ ಸಮುದಾಯ ಭದ್ರತೆ ನೀಡುವ ಅರಣ್ಯ ಹಕ್ಕು ಕಾಯ್ದೆ, ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಮೇಲೆ ನಿಗಾ ಇಡುವ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಸೇರಿದಂತೆ ಹತ್ತಾರು ಸರಕಾರಿ ಯೋಜನೆಗಳು ಜಾರಿಯಲ್ಲಿವೆ. ಆದರೂ  ಗಂಜಿಗೂ ಗತಿ ಇಲ್ಲದೇ ಜನ ಬದುಕುತ್ತಿದ್ದಾರೆ ಎಂದು ಹೇಳಿದರೆ ನಂಬಬೇಕು. ಚಿಕ್ಕಸಿದ್ದಯ್ಯನ ಸಾವಿಗೆ ಕಾರಣ ಏನು ?- ಇಂಥ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಬಲ್ಲೇನಹಳ್ಳಿ ಹಾಡಿಗೆ ಭೇಟಿ ನೀಡಿ ದರೆ ನಮ್ಮನ್ನು ಖಚಿತಪಡಿಸುವ ಸಂಗತಿಯೆಂದರೆ ಹಸಿವೆಂಬ ಸಂಕಟ ಅವನನ್ನು ಕೊಂದಿ ರಲೂಬಹುದು. ಹಾಗಾಗಿ ಹಸಿವಿನಿಂದ ಸಾವು ಎಂಬ ಮಾತಿನಲ್ಲಿ ಅರ್ಧ ಸತ್ಯವಿದೆ.
ಬಡತನ, ಅಪೌಷ್ಟಿಕತೆ, ಅನಕ್ಷರತೆ, ಅಜ್ಞಾನ, ನಿರುದ್ಯೋಗ, ಮೂಲ ಸೌಲಭ್ಯಗಳ  ಅಪೂರ್ಣತೆ, ಸರಕಾರಿ ಯೋಜನೆಗಳ ಅಲಭ್ಯತೆ, ಕುಡಿಯುವ ನೀರಿನ ಸಮಸ್ಯೆ, ಹಾಡಿಯ ಜನರನ್ನು ಕಾಡುತ್ತಿರುವ ಕಾಯಿಲೆ, ಸರಕಾರಿ ನೌಕರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ... ಸಾಲು-ಸಾಲು ಸಂಕಷ್ಟಗಳಿಂದ  ಭಾರವಾಗಿರುವ ಈ ಹಾಡಿಯಲ್ಲಿ  ಜೇನುಕುರುಬ ಪಂಗಡಕ್ಕೆ ಸೇರಿದ ೭೦ ಕುಟುಂಬಗಳಿವೆ.
ತಾಲೂಕು ಕೇಂದ್ರ  ಹುಣಸೂರಿನಿಂದ ಸುಮಾರು  ೧೫ ಕಿ. ಮೀ. ದೂರದಲ್ಲಿರುವ  ಈ  ಹಾಡಿಯ ಬಹುತೇಕ ಜನರಿಗೆ ಕಾಡಿಗಿಂತ, ನೆರೆಯ ಕೊಡಗು  ಜಿಲ್ಲೆ ಹೆಚ್ಚು ಪರಿಚಯ. ಹಾಡಿಯೊಂದಿಗಿನ ಗ್ರಾಮಕ್ಕೆ  ಒಳ್ಳೆಯ ರಸ್ತೆ ಸಂಪರ್ಕವೂ ಇದೆ. ಹಿಂದೊಮ್ಮೆ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸು  ಈ ಊರಲ್ಲಿ ವಾಸ್ತವ್ಯ ಹೂಡಿದ್ದರು. ಜೇನು ಕುರುಬರಲ್ಲದೆ, ೨೦ ಮುಸ್ಲಿಂ, ೫೦ ದಲಿತ ಹಾಗೂ ಒಂದೆರಡು ಬಡಗಿ ಕುಟುಂಬಗಳು ಈ ಹಾಡಿಯ ಆಜುಬಾಜಿನಲ್ಲಿವೆ. ಗಿರಿಜನರಿಗೆ ಹೋಲಿಸಿದರೆ ಉಳಿದ ಜಾತಿಯ ಕುಟುಂಬಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ಪರವಾಗಿಲ್ಲ. ಇಷ್ಟೊಂದು ಸುಧಾರಿತ ಗ್ರಾಮದ ಹಾಡಿಯ ವ್ಯಕ್ತಿ ಹಸಿವಿನಿಂದ ಮೃತಪಟ್ಟರೇ ಎಂಬ  ಅನುಮಾನ ತೀರಾ ಸಹಜ. ಆದರೆ, ಹಾಡಿಯಲ್ಲಿ ಈ ಅನುಮಾನಗಳಿಗೆ ಉತ್ತರವಿದೆ.
ದಾಳಿ ಇಟ್ಟ ರೋಗ: ಪತ್ನಿ ಸಣ್ಣಮ್ಮ, ಎರಡನೇ ಮಗಳು ಕಮಲ, ಚಿಕ್ಕಮ್ಮನ ಮಗ, ಮಗಳು ಸೇರಿದಂತೆ ಒಟ್ಟು  ಐದು ಮಂದಿಯ ಕುಟುಂಬಕ್ಕೆ ಈ ಚಿಕ್ಕಸಿದ್ದಯ್ಯನೇ ಯಜಮಾನ. ಗ್ರಾಮದ ಕೆಲ ಮನೆಗಳ ದನ ಕಾದದ್ದಕ್ಕೆ ಸಿಗುವ ಆಹಾರ ಮತ್ತು ಆದಾಯವೇ ಆಧಾರ. ಕುಟುಂಬದ ಇತರರು ಕೂಲಿ-ನಾಲಿ ಮಾಡಿ ಬದುಕುತ್ತಿದ್ದರು. ಮೂರ‍್ನಾಲ್ಕು ತಿಂಗಳಿನಿಂದೀಚೆಗೆ ಚಿಕ್ಕಸಿದ್ದಯ್ಯ ಏಕಾಏಕಿ ಕಾಯಿಲೆಗೆ ಬಿದ್ದರು. ವಾಂತಿ-ಭೇದಿಯ ಜತೆ ಒಮ್ಮೊಮ್ಮೆ ಮೂಗು-ಬಾಯಿಂದ ರಕ್ತವೂ ಬರುತ್ತಿತ್ತು. ‘ರಂಗನಕೊಪ್ಪಲು, ಹುಣಸೂರಿನ ಸರಕಾರಿ ಆಸ್ಪತ್ರೆಗೆ ತೋರ‍್ಸಿದ್ವಿ ಸ್ವಾಮಿ. ಏನೂ ಅಂತ ಗೊತ್ತಾಗಲಿಲ್ಲ. ಹಿಂದೊಮ್ಮೆ ಎಕ್ಸರೇನೋ, ಅದೇನೋ  ತೆಗ್ಸ್‌ಬೇಕು ಅಂದಿದ್ರು. ದುಡ್ಡು ಇರಲಿಲ್ಲ. ವಾರದಿಂದೀಚೆಗೆ ದನ ಮೇಯ್ಕಿಸ್ಕೊಂಡು ಬಂದು ಬಯಲಿಗೆ ಹೋಯಿತು(ಹೋದ). ಅಲ್ಲಿಂದ ಬಂದು ಹಾಸಿಗೆ ಹಿಡ್ದೋನೋ, ಅಂಗೇ ಹೋಗಿಬಿಟ್ಟ’ ಎನ್ನುತ್ತಾರೆ ಪತ್ನಿ ಸಣ್ಣಮ್ಮ. ವಿಪರ್ಯಾಸವೆಂದರೆ  ಆರೋಗ್ಯ ಅಭಿಯಾನ ಯೋಜನೆ ಈ ಚಿಕ್ಕಸಿದ್ದಯ್ಯನ ಕಾಯಿಲೆಯನ್ನು ಪತ್ತೆ ಹಚ್ಚಲು ನೆರವಾಗಲಿಲ್ಲ !
ಮೂರು ದಿನದಿಂದ ಊಟ ಇರಲಿಲ್ಲ : ಕುಟುಂಬದವರು ಹೇಳುವ ಪ್ರಕಾರ  ಹಾಸಿಗೆ ಹಿಡಿದಿದ್ದ  ಚಿಕ್ಕಸಿದ್ದಯ್ಯ ಮೂರು ದಿನಗಳಿಂದ ಅನ್ನವನ್ನೇ ತ್ಯಜಿಸಿದ್ದರು. ಊಟ ಸೇರುತ್ತಿರಲಿಲ್ಲ ಎಂದಲ್ಲ, ಮಾಡುತ್ತಿದ್ದ ಗಂಜಿ ಎಲ್ಲರಿಗೂ ಸಾಕಾಗುತ್ತಿರಲಿಲ್ಲ. ‘ಸ್ವಾಮಿ, ಸೊಸೈಟಿಯಲ್ಲಿ ನೀಡಿದ ೨೭ ಕೆಜಿ ಅಕ್ಕಿ, ತೀರಿ ವಾರವಾಯ್ತು. ನಾಲ್ಕೈದು ದಿನದಿಂದ ಗಂಜೀನೇ ಗತಿ. ಅದು ಎಲ್ಲರಿಗೂ ಸಾಕಾಗುತ್ತಿರಲಿಲ್ಲ. ಹಾಗಾಗಿ, ನನ್ನ ಗಂಡ ತಿನ್ನೋದನ್ನೆ ನಿಲ್ಲಿಸಿದ ’ ಎಂದಾಗ ಸಣ್ಣಮ್ಮನಿಗೆ ದುಃಖವಾಯಿತು.
ಅಕ್ಕಿ ಸಾಲುವುದಿಲ್ಲ ಎಂದು  ಇನ್ನೊಂದು ಪಡಿತರ ಚೀಟಿ ಮಾಡಿಸಲು ಚಿಕ್ಕ ಸಿದ್ದಯ್ಯ ಪ್ರಯತ್ನಿಸಿದ್ದರು. ಉಳ್ಳವರ ಮನೆಗೆ ಎರಡೆರಡು ಬಿಪಿಎಲ್ ಕಾರ್ಡ್ ಕೊಡುವ ಆಹಾರ ಇಲಾಖೆ ಅಧಿಕಾರಿಗಳು, ಈ ಬಡವನಿಗೆ ಕುಟುಂಬಕ್ಕೊಂದೇ ಕಾರ್ಡ್ ಎಂದು ನ್ಯಾಯಪರತೆಯ ಪಾಠ ಮಾಡಿದರು. ಪಡಿತರದ ಕೊರತೆಯೂ ಹಸಿವಿನ ಸಂಕಟಕ್ಕೆ ಒತ್ತಾಯವಾಗಿ ದೂಡಿತ್ತು !
ನಿರುದ್ಯೋಗವೇ ಇಲ್ಲಿ ಖಾತ್ರಿ !: ಗ್ರಾಮ ಪಂಚಾಯಿತಿ ನೌಕರರ ನಾಲಗೆಯಲ್ಲಿ ನರೇಗಾ ಎಂದೇ ನಲಿದಾಡುವ ರಾಷ್ಟ್ರೀಯ  ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂಬುದೇ  ಈ ಕುಟುಂಬಕ್ಕೆ ಗೊತ್ತಿಲ್ಲ. ಯೋಜನೆ ಜಾರಿಯಾಗಿ ಎರಡು ವರ್ಷ ಕಳೆದರೂ ಅದರ ಫಲ ಹಾಡಿಗೆ ತಲುಪಿಲ್ಲ.‘ವಯಸ್ಸಾಯಿತು ಎಂದು ಯಾರೂ ನಮ್ಮನ್ನು ಕೂಲಿ ಕೆಲಸಕ್ಕೆ ಕರೆಯೋದಿಲ್ಲ. ಕೂಲಿ ಸಿಕ್ಕಿದ್ರೆ, ನನ್ನ ಗಂಡ ಬದುಕುತ್ತಿದ್ದನೇನೋ’ ಎಂಬುದು ಸಣ್ಣಮ್ಮನ ಕೊರಗಾದರೆ, ಅಧಿಕಾರಿಗಳು ಇದಕ್ಕೆ ನೀಡುವ ಕಾರಣವೇ ಭಿನ್ನ. ‘ನಾವು ಯಾವಾಗ ಬಂದ್ರೂ, ಈ ಹಾಡೀಲಿ ಜನವೇ ಇರೋದಿಲ್ಲ ಸರ್. ಬೆಳ್ಳಂಬೆಳಗ್ಗೆ ಕೊಡಗಿಗೆ ಕೂಲಿ ಹೋಗ್ತಾರೆ.  ಅಲ್ಲಿ ಕೂಲಿ ಜಾಸ್ತಿ, ಹಾಗಾಗಿ, ಯಾರೂ ಬರೋದಿಲ್ಲ...!’ ಎನ್ನುತ್ತಾರೆ  ಸ್ಥಳೀಯ ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಣ್ಣೇಗೌಡ. 
ಅರಣ್ಯ ಭೂಮಿಗೆ ಅರ್ಜಿ ಸಲ್ಲಿಸಿದ್ದರು: ಮೂಲ ನಿವಾಸಿ ಗಿರಿಜನರಿಗೆ ಕಾಡಿನಲ್ಲೇ ಅರಣ್ಯ ಭೂಮಿ ಅನುಭವ ಹಕ್ಕು ನೀಡಲೆಂದೇ ಕೇಂದ್ರ ಸರಕಾರ ಪರಿಶಿಷ್ಟ ವರ್ಗ ಹಾಗೂ ಇತರ ಪರಂಪರಾಗತ ಅರಣ್ಯವಾಸಿಗಳ(ಅರಣ್ಯ ಹಕ್ಕು ಮಾನ್ಯತೆ) ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದಿದೆ. ಎರಡು ವರ್ಷ ಕಳೆದರೂ ಅದು ಜಿಲ್ಲೆಯಲ್ಲಿ ಜಾರಿಯಾಗಿಲ್ಲ. ಸಾಮೂಹಿಕ ಹಕ್ಕಿಗಾಗಿ ಅರ್ಜಿ ಸಲ್ಲಿಸಿರುವ ಜಿಲ್ಲೆಯ ೯೫ ಹಾಡಿಗಳ ೬ ಸಾವಿರ ಗಿರಿಜನರ ಪೈಕಿ ಮೃತ ಚಿಕ್ಕಸಿದ್ದಯ್ಯನೂ ಇದ್ದಾನೆ !
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಜನಪ್ರಿಯ ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಸೇರಿದಂತೆ ಯಾವೊಂದು ಯೋಜನೆಯ ಫಲವೂ ಈ ಕುಟುಂಬದ ಬಾಗಿಲು ತನಕ ಹರಿದು ಬಂದಿಲ್ಲ. ತಿಂಗಳಿಗೆ ೪೦೦ ರೂ. ಬಂದಿದ್ದರೆ ಊಟದ ಸಮಸ್ಯೆ ನೀಗುತ್ತಿತ್ತೇನೋ ?. ಹೀಗೆ  ಹಾಡಿಯ ಚಿಕ್ಕಸಿದ್ದಯ್ಯನಿಗೆ ‘ಆಹಾರ ಭದ್ರತೆ’, ‘ಸಾಮಾಜಿಕ ಭದ್ರತೆ ಒದಗಿಸುವ  ಯಾವ ಯೋಜನೆಯ ಫಲ ಸಿಕ್ಕಿದ್ದರೂ ಪರಿಸ್ಥಿತಿ ಬದಲಾಗುತ್ತಿತ್ತೇನೋ? ಎಂಬ ಪ್ರಶ್ನೆಗಳು ಎದ್ದಿವೆ.
ಅದೊಂದು ಹಕ್ಕು ಎಂದು ಕೇಳುವ ಚೈತನ್ಯ  ಹಾಡಿಯ  ಅನಕ್ಷರಸ್ಥರಿಗೆ  ಇಲ್ಲ. ಚಿಕ್ಕಸಿದ್ದಯ್ಯನಿಗೆ ಹಸಿವು ಅನಿವಾರ್ಯವಾಯಿತೇನೋ? ಹಸಿವಿನಿಂದ ಸಾವು ಎಂಬುದು ರಾಷ್ಟ್ರೀಯ ಅಪಮಾನ. ಮಂತ್ರಿ ಮಹೋದಯರು, ಜಿಲ್ಲಾಡಳಿತದ ಅಧಿಕಾರಿಗಳು ಏನೇ ಹೇಳಬಹುದು-ಸೂಕ್ಷ್ಮವಾಗಿ ನೋಡಿದರೆ ಈ ಸಾವಿಗೆ ಹಸಿವೂ ಕಾರಣವಾಗಿದೆ. ಮೈಸೂರು ಜಿಲ್ಲೆಗೇ ಅವಮಾನವಾಗಬೇಕು !
ಇದು ಮೊದಲೇನಲ್ಲ !
ಜಿಲ್ಲೆಯ ಗಿರಿಜನರು ಹಸಿವಿನಿಂದ ಸಾಯುತ್ತಿರುವುದು ಇದೇ ಮೊದಲೇನಲ್ಲ.  ಬಂಡೀಪುರ ಅರಣ್ಯ ವ್ಯಾಪ್ತಿಗೆ ಬರುವ ಎಚ್. ಡಿ. ಕೋಟೆ ತಾಲೂಕು ದಡದಹಳ್ಳಿ ಹಾಡಿಯಲ್ಲೂ ನಾಲ್ಕು ಜನ ಗಿರಿಜನ ಮಕ್ಕಳು ೧೯೯೨-೯೩ನೇ ಸುಮಾರಿನಲ್ಲಿ  ಊಟವಿಲ್ಲದೇ  ಮೃತಪಟ್ಟಿದ್ದರು. ೨೦೦೨ರಲ್ಲಿ ಕಾಕನಕೋಟೆ ಪ್ರದೇಶದ ಮೂರು ಮಕ್ಕಳು ಕೂಡ ಇದೇ ರೀತಿ ಸಾವಿಗೀಡಾಗಿದ್ದರು ಎಂದು ವರದಿಯಾಗಿತ್ತು. ದಡದಹಳ್ಳಿ ಪ್ರಕರಣವಂತೂ ಸಂಸತ್‌ನಲ್ಲಿ ಸದ್ದು ಮಾಡಿತ್ತು. ಅಂದಿನ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಹಾಡಿಗೆ ಭೇಟಿ ನೀಡಿದ್ದರು.
ವಯಸ್ಸು ಸಮಸ್ಯೆ
ಚಿಕ್ಕಸಿದ್ದಯ್ಯನಿಗೆ ವೃದ್ಧಾಪ್ಯ ವೇತನ ದೊರೆಯುತ್ತಿರ ಲಿಲ್ಲ. ಏಕೆಂದರೆ, ಅವರಿಗೆ  ಅಷ್ಟೊಂದು ವಯಸ್ಸಾಗಿರ ಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರು ಎಂಬುದು ಹಾಡಿ ಜನರ ದೂರು.  ಭಾರತೀಯ ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಪ್ರಕಾರ  ಚಿಕ್ಕಸಿದ್ದಯ್ಯ ಹುಟ್ಟಿದ್ದು  ೧೯೪೯. ಅಂದರೆ ೬೧ ವರ್ಷ.  ಆದರೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತೀರಾ ಇತ್ತೀಚೆಗೆ ನೀಡಿರುವ  ಪಡಿತರ ಚೀಟಿ ಪ್ರಕಾರ ಅವರ ವಯಸ್ಸು   ೪೮.  ಇದು ಸ್ವಾರಸ್ಯಕರ ಸಂಗತಿಯಲ್ಲ.  ಓರಿಗೆಯಲ್ಲಿ ತಮ್ಮನಾದ ಚಿಕ್ಕಸಿದ್ದಯ್ಯನ ಸಹೋದರ ಸಂಬಂಧಿಗೆ ವೃದ್ಧಾಪ್ಯ ವೇತನ ದೊರೆಯುತ್ತಿದೆ !. ವೃದ್ಧಾಪ್ಯ ವೇತನವೂ ಎರಡು ತಿಂಗಳಿನಿಂದ ಹಾಡಿಯ ವೃದ್ಧರಿಗೆ ಬಂದಿಲ್ಲವಂತೆ !
ಕುಟುಂಬಕ್ಕೆ ಪಡಿತರ ನೀಡಲಾಗಿತ್ತು
ಹನಗೋಡು ನಟರಾಜ್ ಹುಣಸೂರು
ಬಲ್ಲೇನಹಳ್ಳಿ ಹಾಡಿಯ ಮೃತ ಚಿಕ್ಕಸಿದ್ದಯ್ಯನ ಕುಟುಂಬಕ್ಕೆ ಪಡಿತರ ಪೂರೈಕೆ ಮಾಡಲಾಗಿತ್ತು ಎಂದು ಹುಣಸೂರು  ಉಪ ವಿಭಾಗ ಆಡಳಿತ ಹೇಳಿದೆ.
‘ಮೃತ ಚಿಕ್ಕಸಿದ್ದಯ್ಯನಿಗೆ ಸರಕಾರದಿಂದ ಅಂತ್ಯೋದಯ ಪಡಿತರ ಚೀಟಿ ನೀಡ ಲಾಗಿತ್ತು. ಏ. ೨೯ರಂದು ಪಡಿತರ ವಿತರಿಸಲಾಗಿತ್ತು. ಕಳೆದ ತಿಂಗಳು ಹೊಟ್ಟೆನೋವು, ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರೆಂದು  ಅವರ  ಕುಟುಂಬದವರು ತಿಳಿಸಿದ್ದಾರೆ’ ಎಂದು ಉಪ ವಿಭಾಗಾಧಿಕಾರಿ ಕೆ. ವಿದ್ಯಾಕುಮಾರಿ ಸ್ಪಷ್ಟನೆ ನೀಡಿದ್ದಾರೆ.
ಸರಿಯಾಗಿ ಪಡಿತರ ನೀಡುತ್ತಿಲ್ಲ: ಉಪ ವಿಭಾಗಾಧಿಕಾರಿ ಕೆ.ವಿದ್ಯಾಕುಮಾರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು,  ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕ ಶಿವಣ್ಣ ಸೇರಿದಂತೆ  ಅಧಿಕಾರಿಗಳ ತಂಡ ಬುಧವಾರ  ಬೆಳಗ್ಗೆ ಬಲ್ಲೇನಹಳ್ಳಿ ಹಾಡಿಗೆ  ಭೇಟಿ ನೀಡಿದ್ದರು.
ಚಿಕ್ಕಸಿದ್ಧಯ್ಯ ಕುಟುಂಬದವರನ್ನು ಭೇಟಿ ಮಾಡಿದ ಅಧಿಕಾರಿಗಳು  ಹಾಡಿಯ ಸಮಸ್ಯೆ ಕಂಡು ಅವಾಕ್ಕಾದರು. ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಪಡಿತರ ವಿತರಿಸುತ್ತಿಲ್ಲ. ಕೆಲವೇ ದಿನ ಕೊಟ್ಟು, ನಂತರ ಮುಗಿದು ಹೋಯಿತೆಂದು ಸಬೂಬು ಹೇಳುತ್ತಾರೆ. ತೂಕದಲ್ಲೂ ವಂಚಿಸುತ್ತಿದ್ದಾರೆ. ಕೇಳಿದರೆ ದಬಾಯಿಸುತ್ತಾರೆ. ಇನ್ನೂ ಹಲವು ಕುಟುಂಬಗಳಿಗೆ ಪಡಿತರ ಚೀಟಿ ಸಿಕ್ಕಿಲ್ಲ. ಹಾಡಿಯ ಎಲ್ಲಾ ಮನೆಗಳು ಶಿಥಿಲಗೊಂಡಿವೆ.  ಇಂಥ ಅಭದ್ರ ಕಟ್ಟಡಗಳಲ್ಲೆ ೨-೩ ಕುಟುಂಬ ವಾಸಿಸುತ್ತಿದೆ. ಬೀದಿ ದೀಪ ಕೆಟ್ಟು ಆರು ತಿಂಗಳಾಗಿದೆ. ರಸ್ತೆ, ಚರಂಡಿ ಶುಚಿಗೊಳಿಸಿಲ್ಲ. ಕುಡಿಯುವ ನೀರಿಗಾಗಿ ಒಂದೇ ನಲ್ಲಿ, ಬೋರ್‌ವೆಲ್ ಕೆಟ್ಟಿವೆ. ಆರೋಗ್ಯ ಸಂಚಾರಿ ಘಟಕದ ವಾಹನ  ಇದ್ದರೂ, ಪ್ರಯೋಜನವಿಲ್ಲ. ೫೦ಕ್ಕೂ ಹೆಚ್ಚು ಮಕ್ಕಳಿದ್ದರೂ ಪ್ರತ್ಯೇಕ ಅಂಗನವಾಡಿ ಇಲ್ಲ. ನಮ್ಮ ಭೂಮಿಯನ್ನೆ ಇತರರು ಒತ್ತುವರಿ ಮಾಡಿದ್ದಾರೆ. ಹೀಗೆ ಹಾಡಿ ಸಮಸ್ಯೆಗಳ ಪಟ್ಟಿ ಮಾಡಿ ಅಧಿಕಾರಿಗಳಿಗೆ ದರ್ಶನ ಮಾಡಿಸಿದರು.
ತಿಂಗಳು ಪೂರ್ತಿ ಪಡಿತರ ನೀಡಿ:  ಪಡಿತರ ಸಮಸ್ಯೆ ಬಗೆಹರಿಸಬೇಕು; ತಿಂಗಳು ಪೂರ್ತಿ ಪಡಿತರ ವಿತರಿಸಬೇಕು, ಪಡಿತರ ಚೀಟಿ ಸಿಗದಿರುವವರಿಗೆ ತಾತ್ಕಾಲಿಕ ಆಹಾರ ವಿತರಿಸಲು ಕ್ರಮ ವಹಿಸುವುದು, ತಕ್ಷಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಬೇಕು, ದುರಸ್ತಿಗೊಂಡ ಮನೆಗಳನ್ನು ಕೆಡವಿ ಹೊಸ ಮನೆ ನಿರ್ಮಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ವಿದ್ಯಾಕುಮಾರಿ ಸೂಚಿಸಿದರು.
ತಾ.ಪಂ. ಇಒ ಬಸವರಾಜು ಅವರು, ಹಾಡಿಯ ಉಳಿದ ಎಲ್ಲರಿಗೂ ಇಂದೇ  ಖಾತರಿ ಯೋಜನೆಯ ಜಾಬ್ ಕಾರ್ಡ್ ಮಾಡಿಸಿ ನಾಳೆಯೇ ಉದ್ಯೋಗ ನೀಡಬೇಕು, ರಸ್ತೆ, ಬೀದಿದೀಪ, ನಲ್ಲಿ, ಬೋರ್‌ವೆಲ್ ದುರಸ್ತಿಗೊಳಿಸಿ ಇಂದೇ ವರದಿ ನೀಡ ಬೇಕೆಂದು ಗ್ರಾ.ಪಂ. ಕಾರ್ಯದರ್ಶಿ ಸಣ್ಣೇಗೌಡರಿಗೆ ಸೂಚನೆ ನೀಡಿದರು. ಸಮರ್ಪಕ ಪಡಿತರ ವಿತರಣೆಗೆ ಕ್ರಮಕೈಗೊಳ್ಳಬೇಕು. ಚೀಟಿ ಹೊಂದಿಲ್ಲದವರ ಹಾಗೂ ಫೋಟೋ ತೆಗೆಸದವರ ಪಟ್ಟಿ ಮಾಡಿರಿ. ನ್ಯಾಯಬೆಲೆ ಅಂಗಡಿಯವರು, ಸರಿಯಾಗಿ ವಿತರಿಸದಿದ್ದಲ್ಲಿ ದೂರು ನೀಡಿರೆಂದು ಜಿಲ್ಲಾ ಆಹಾರ ಉಪ ನಿರ್ದೇಶಕ ಶಿವಣ್ಣ ಸೂಚಿಸಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಮೇಲ್ವಿಚಾರಕ ಶಂಕರ್ ಮನೆರಹಿತರ ಹಾಗೂ ದುರಸ್ತಿಗೊಂಡ ಮನೆಗಳ ಪಟ್ಟಿ ಮಾಡಿಕೊಂಡರು. ಇಲಾಖೆಗೆ ಹಾಡಿಗೆ ಅಗತ್ಯವಾಗಿ ಬೇಕಾದ ಸವಲತ್ತುಗಳ ಮಾಹಿತಿ ನೀಡುವುದಾಗಿ ತಿಳಿಸಿದರು. ಆಹಾರ ಶಿರಸ್ತೇದಾರ್ ಗೋವಿಂದರಾಜು, ಮೇಲ್ವಿಚಾರಕ, ಮಂಚೇಗೌಡ, ಗ್ರಾಮಲೆಕ್ಕಿಗ, ವಸಂತಕುಮಾರ್, ಗ್ರಾ.ಪಂ. ಕಾರ್ಯದರ್ಶಿ ಸಣ್ಣೇಗೌಡ, ಗ್ರಾ.ಪಂ. ಮಾಜಿ ಸದಸ್ಯೆ ಸಣ್ಣಮಾದಮ್ಮ ಮತ್ತಿತರರು ಹಾಜರಿದ್ದರು.

ಕಬಳಿಕೆ ಮಾಧ್ಯಮಗಳಿಂದ ಜನಪದ ‘ಧನಪದ’

ಪಿರಿಯಾಪಟ್ಟಣ ಕೆಂಪೇಗೌಡ ರಾಜಶೇಖರ ...
ಹೀಗೆಂದರೆ ಗುರುತು ಹಿಡಿಯುವುದು ಕಷ್ಟ . ಅದೇ, ‘ಪಿಕೆಆರ್ ’ಎನ್ನಿ ,ವಿದ್ವತ್‌ಕ್ಷೇತ್ರ,‘ವಿದ್ಯಾರ್ಥಿವಿಶ್ವ’ದಲ್ಲಿ ಫೇಮಸ್.
ಮೈಸೂರು ಜಿಲ್ಲೆ ಪಿರಿಯಾಪಟ್ಟಣದ  ಪಿ.ಡಿ.ಕೆಂಪೇಗೌಡ -ಪುಟ್ಟಮ್ಮ ದಂಪತಿ ಪುತ್ರ ರಾಜಶೇಖರ  ಅವರು ಅಧ್ಯಾಪಕರಾಗಿ,ಜನಪದ ವಿದ್ವಾಂಸರಾಗಿ, ಗಾಯಕರಾಗಿ ಕಟ್ಟಿಕೊಂಡ  ವೃತ್ತಿ-ಪ್ರವೃತ್ತಿಯ ಬದುಕು ‘ಜನಪದ ಜೋಗಿ’ಯ ಘನ ಗೌರವವನ್ನು ತಂದು ಕೊಟ್ಟಿದೆ.
ಜಾನಪದ ಕ್ಷೇತ್ರದ ‘ಕೃಷಿ’ಕರಲ್ಲಿ ಪಿಕೆಆರ್ ಅವರದ್ದು ಮುಂಚೂಣಿ ಹೆಸರು. ಸಂಶೋಧನಾ ವಿದ್ಯಾರ್ಥಿಯಾಗಿ ದ್ದಾಗಲೇ ೧೫೦೦ ಪುಟಗಳ ಬೃಹತ್ ಕೃತಿ ‘ಮಲೆಯ ಮಾದೇ ಶ್ವರ’ ಜನಪದ ಮಹಾಕಾವ್ಯವನ್ನು ಪ್ರಕಟಿಸಿದ ಹೆಚ್ಚುಗಾರಿಕೆ ಅವರದ್ದು. ‘ಜಾನಪದ ಸಾಹಿತ್ಯ ಸೌಧದ ಹೆಗ್ಗಂಬ’ ಎಂದು ವಿದ್ವಾಂಸರಿಂದ ಪ್ರಶಂಸೆಗೆ ಪಾತ್ರವಾಗಿದ್ದ ಈ ಕೃತಿಗೆ ೧೯೭೪ರಲ್ಲಿಯೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಕವಿತೆ,ಭಾಷಾಶಾಸ್ತ್ರ, ಜೀವನ ಚರಿತ್ರೆ, ಅನುವಾದ ,ಮಕ್ಕಳ ಸಾಹಿತ್ಯ,ಜಾನಪದವೂ ಸೇರಿ ೭೦ಕ್ಕೂ ಹೆಚ್ಚು ಮೌಲಿಕ ಕೃತಿಗಳ ಪ್ರಕಟಣೆ. ಈ ಪೈಕಿ ಬಹುಪಾಲು ಜಾನಪದ ಆವೃತ. ೨೦೦೪ರಲ್ಲಿ ಪ್ರಕಟವಾದ ‘ಜನಪದ ಮಹಾಭಾರತ’ ಮತ್ತೊಂದು ಜನಪದ ಮಹಾಕಾವ್ಯ.
ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ೧೯೯೬ರಲ್ಲಿ ‘ಜಾನ ಪದ ತಜ್ಞ’ ಪ್ರಶಸ್ತಿ. ೨೦೦೫-೦೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ಮಾತ್ರ ವಲ್ಲ, ಅನೇಕ ಸಂಘ ಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿ,ಮಾನ ಸಮ್ಮಾನ.
ಮಹಾರಾಜ ಕಾಲೇಜಿನಲ್ಲಿ ಹಲವು ವರ್ಷ, ಮಾನಸಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕೊನೆಯ ನಾಲ್ಕಾರು ವರ್ಷ ಕನ್ನಡ ಪ್ರಾಧ್ಯಾಪಕ ರಾಗಿ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ  ಸೆಳೆಯುತ್ತಿದ ಅವರು, ಇತ್ತೀಚೆಗಷ್ಟೆ  ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಆದರೆ,ಪ್ರವೃತ್ತಿ ಅವಿಶ್ರಾಂತ. ಬಗಲು ಚೀಲ ನೇತುಹಾಕಿಕೊಂಡು ಈಗಲೂ ಜನರ ‘ಪದ’ ಸಂಗ್ರಹ ನಿರತ.
ಜನಪದ ವಿದ್ವಾಂಸ,ವಿದ್ಯಾರ್ಥಿಪ್ರಿಯ ಅಧ್ಯಾಪಕ ಅಷ್ಟೇ ಅಲ್ಲ. ಅವರಲ್ಲೊಬ್ಬ ಶ್ರೇಷ್ಠ ಗಾಯಕನೂ ಇದ್ದಾನೆ. ಜನರ ‘ಪದ’ಕ್ಕೆ  ಇಂಪು ನೀಡಿ,ದೇಸಿ ಕಂಪನ್ನು ವಿಶ್ವ ವ್ಯಾಪಿ ಗೊಳಿಸಿದ್ದಾರೆ. ಮೂಲ ಮಟ್ಟುಗಳಲ್ಲೇ  ಜನಪದವನ್ನು ಹಾಡಿ ಶ್ರೀಮಂತ ಗೊಳಿಸುತ್ತಿರುವ ‘ಹೊನ್ನಾರು’ ತಂಡದ ರೂವಾರಿಯೂ ಹೌದು. ಈ ತಂಡ ಅಮೆ ರಿಕದ ಚಿಕಾಗೋದಲ್ಲಿ ನಡೆದ ೫ನೇ ‘ಅಕ್ಕ ಸಮ್ಮೇಳನ’ ದಲ್ಲಿ ಹಾಡಿದ್ದು ವಿಶೇಷ.ಮೂಲ ಮಟ್ಟುಗಳಲ್ಲಿ ಹಾಡಿದ ಕ್ಯಾಸೆಟ್‌ಗಳೂ ಜನಪ್ರಿಯ.
ವರ್ಷದ ಹಿಂದೆ ಅವರ ಶಿಷ್ಯರು, ಅಭಿಮಾನಿಗಳು ಸಾವಿರ ಪುಟಗಳ ಅಭಿನಂದನಾ ಗ್ರಂಥ ‘ಜಾನಪದ ಜೋಗಿ’ಯನ್ನು ಕಟ್ಟಿ, ಸಮರ್ಪಿಸಿದ್ದಾರೆ. ‘ಜೋಗಿ’ ಪದಕ್ಕೆ ಅನ್ವರ್ಥವಾಗೇ  ಜನಪದ ಕ್ಷೇತ್ರದಲ್ಲಿ ಅವರು ಕಾರ‍್ಯಶೀಲರು. ‘ಜನಪದ ಕಲಾಶಾಲೆ’ಯೊಂದನ್ನು ಕಟ್ಟಬೇಕೆಂಬುದು ಅವರ ಮಹದಾಸೆ.
ಈಗ  ತವರೂರು ಪಿರಿಯಾಪಟ್ಟಣದಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ  ಸರ್ವಾಧ್ಯಕ್ಷ ಸ್ಥಾನದ ಗೌರವ. ತಾಲೂಕಿನ ಪ್ರತಿ ಹಳ್ಳಿಯನ್ನು ಅಲೆದು, ಜನಪದವನ್ನು ಸಂಗ್ರಹಿಸಿರುವ  ಅವರಿಗೆ  ಇದು ಅರ್ಹ ಗೌರವ.
ಸಮ್ಮೇಳನಾಧ್ಯಕ್ಷರಾಗಿರುವ  ಖುಷಿಯಲ್ಲಿ ಅವರು ‘ವಿಜಯ ಕರ್ನಾಟಕ’ದ ಜತೆ ಮುಕ್ತ ವಾಗಿ ಮಾತನಾಡಿದ್ದಾರೆ. ಸಹಜವಾಗಿಯೇ ,  ಮಾತೆಲ್ಲ ಜನಪದವಾಗಿದೆ. ಈ ಕ್ಷೇತ್ರದ ಕುರಿತ ಕಾಳಜಿ,ಕಳಕಳಿಗಳು ವ್ಯಕ್ತವಾಗಿವೆ.
ಕನ್ನಡ-ಜನಪದ ಸಮಾನ ದುಃಖ
-ಕನ್ನಡ ಭಾಷೆ ಮತ್ತು ಜನಪದದ್ದು ಸಮಾನ ದುಃಖ. ಎರಡರ ದುರ್ಗತಿಯೂ ಒಂದೇ ಥರ. ಆಧುನಿಕತೆಯ ಅಬ್ಬರದಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಕಬಳಿಕೆ ಮಾಧ್ಯಮಗಳು ಜನಪದವನ್ನು ಪರಿಷ್ಕರಿಸಿ ‘ಧನಪದ ’ವನ್ನಾಗಿಸಿವೆ. ಉಳಿಸಿ ಕೊಳ್ಳಲು ಏನು ಮಾಡಬೇಕು ಎನ್ನುವುದೇ ಗೊಂದಲಕಾರಿ.ಇದೇ ಸ್ಥಿತಿ ಮುಂದುವರಿದರೆ ಫೋಕ್ಲೋರ್ ‘ಜೋಕ್ಲೋರ್’ ಆಗುವ ಅಪಾಯವಿದೆ.
-ಕನ್ನಡಕ್ಕೆ ಮನ,ಮನೆ ಮುಚ್ಚುತ್ತಿದೆ. ಕನ್ನಡ ಮೇಷ್ಟ್ರುಗಳ ಮಕ್ಕಳೂ ಅಮೆರಿಕ  ಪಾಲಾಗುತ್ತಿದ್ದಾರೆ. ‘ಕೇಳಿದರೆ, ಅವರವರ ಆಯ್ಕೆ’ ಎಂದು ತೇಲಿಸುತ್ತಾರೆ. ಇಂಥ ‘ಸಮಯ ಸಾಧಕ ’ಕನ್ನಡ ಪ್ರೇಮ ದುರ್ದೈವ. ಶ್ರೀಮಂತರು,ಶಿಷ್ಟರಿಗೆ ಇಂಗ್ಲಿಷ್ ಶಿಕ್ಷಣ, ಬಡವರು,ದುರ್ಬಲರಿಗೆ  ಮಾತ್ರ ಕನ್ನಡ ಎನ್ನುವುದು ಈಗಿನ ಸ್ಥಿತಿ. ಇದು ಬದಲಾಗಿ,ಎಲ್ಲರಿಗೂ ಸಮಾನ ಶಿಕ್ಷಣ ವ್ಯವಸ್ಥೆ ಜಾರಿ ಆಗದಿದ್ದರೆ  ಕನ್ನಡವನ್ನು ಉಳಿಸಿಕೊಳ್ಳುವುದು ಅಸಾಧ್ಯ.
ಜನ“ಪದ‘ಉಳಿಸಿ,ಬೆಳೆಸಲು ...
-ಶ್ರೇಷ್ಠ ಜನಪದ ಗಾಯಕರನ್ನು ಗುರುತಿಸಿ,ನಾಡಿನ ವಿವಿಧೆಡೆ ನಿರಂತರ ಕಾರ‍್ಯಕ್ರಮ ಏರ್ಪಡಿಸಬೇಕು.ಆಕಾಶವಾಣಿ,ದೂರದರ್ಶನಗಳಲ್ಲಿ ಹೆಚ್ಚು ಅವಕಾಶ ಅಗತ್ಯ. ಕಲಾವಿದರಿಗೆ ಒಂದಷ್ಟು ನೆರವು,ಗೌರವ  ನೀಡಿದರಷ್ಟೇ ಸಾಲದು.
-ತಾಲೂಕು ಅಥವಾ ಜಿಲ್ಲೆಗೊಂದು ಜನಪದ ವಿದ್ಯಾಸಂಸ್ಥೆ  ಸ್ಥಾಪನೆ ಸೂಕ್ತ. ಜನಪದ ಅಕಾಡೆಮಿ ತಾಲೂಕು,ಜಿಲ್ಲಾಮಟ್ಟದ ಸಂಘ ಸಂಸ್ಥೆಗಳ  ಸಹಯೋಗದಲ್ಲಿ ಜನಪದ ಗೀತ ಗಾಯನ ತರಬೇತಿ ಶಿಬಿರ  ಏರ್ಪಡಿಸಬೇಕು.ಶಾಲಾ ಕಾಲೇಜುಗಳಲ್ಲಿ ಜನಪದ ಸಂಗೀತದ ಕಲಿಕೆ ಕಡ್ಡಾಯವಾಗಬೇಕು.ಮೂಲ ಮಟ್ಟುಗಳಲ್ಲಿ ಹಾಡುವವರನ್ನೇ  ಸಂಪನ್ಮೂಲ ವ್ಯಕ್ತಿಗಳನ್ನಾಗಿ ಕರೆಸಬೇಕು. ಮೂಲವನ್ನು ಅನುಕರಿಸುವ ಸಮರ್ಥರನ್ನೇ ಕಲಿಕಾರ್ಥಿಗಳನ್ನಾಗಿ ಆಯ್ಕೆ ಮಾಡಬೇಕು.
-ಪ್ರತಿ ಜಿಲ್ಲೆಯಲ್ಲೂ ಜನಪದ ವಸ್ತುಸಂಗ್ರಹಾಲಯ ಸ್ಥಾಪಿಸ ಬೇಕು. ಮೌಖಿಕ,ಭೌತಿಕ ಸಂಸ್ಕೃತಿಗೆ ಸಂಬಂಧಿಸಿದ ವಸ್ತು, ಪ್ರದರ್ಶನಾತ್ಮಕ ಕಲೆಗಳನ್ನೆಲ್ಲ ಇಲ್ಲಿ ಸಂರಕ್ಷಿಸಬೇಕು. ಪ್ರದರ್ಶನಾತ್ಮಕ ಕಲೆಗಳ ತರಬೇತಿ ಕೇಂದ್ರ ಮತ್ತು ಜನಪದ ಅಧ್ಯಯನ ಕೇಂದ್ರ ವಾಗಿಯೂ ಕೆಲಸ ಮಾಡಬೇಕು. ಜನಪದ ಜೀವನದ ಸತ್ವ ಮತ್ತು ತತ್ತ್ವಗಳು ಮಾನವ  ಪ್ರೀತಿಯ ಸಂವರ್ಧನೆಗೆ ನೆರವಾಗುವ ಬಗೆಯನ್ನು ಕಲಿಸಬೇಕು.ಇದರಿಂದ ಜಾನಪದದಲ್ಲಿ ನಿರಂತರ ಜೀವಂತಕ್ಕೆ ಕಾಪಿಟ್ಟುಕೊಳ್ಳುವುದು ಸಾಧ್ಯ.
‘ಮೂಲ ಮಟ್ಟು ’ ಇತ್ಯಾದಿ...
- ಜನಪದ ಸಂಗೀತದ ಮೂಲಮಟ್ಟುಗಳಲ್ಲಿ ಮಾರ್ಪಾಡು  ಅಪಾಯಕಾರಿ. ಕಾಯಕ ಸಂಬಂಧಿ ಗೀತೆಗಳು ಆಯಾ ಕಾಯಕಕ್ಕೆ ಹೊಂದುವ ಮಟ್ಟು,ತಾಳಗಳಲ್ಲಿರುತ್ತವೆ. ಮಾರ್ಪಾಡಾದರೆ ಮಟ್ಟಿಗೆ ಧಕ್ಕೆ. ಸ್ವಲ್ಪ ಅವಕಾಶ ಕೊಟ್ಟರೂ ಮೂಲವನ್ನು ಪೂರ್ಣ ವಾಗಿ ಕೈಬಿಡುವ ಅಪಾಯ. ಶಾಸ್ತ್ರೀಯ ಸಂಗೀತದಂತೆಯೇ ಜನಪದ ಸಂಗೀತಕ್ಕೂ ತನ್ನ ತನದ ಅಗತ್ಯವಿದೆ. ಜನಪ್ರಿಯತೆ ಯೊಂದೇ ಶ್ರೇಷ್ಠತೆಯ ಮಾನದಂಡವಾಗಬಾರದು. ಆದ್ದರಿಂದ ಮೂಲ ಕಲಾವಿದರಿಗೆ ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳ ಬೇಕಾದ ಬಗ್ಗೆ ಅರಿವು ಮೂಡಿಸುವ ಕಾರ‍್ಯಕ್ರಮ ಹಮ್ಮಿಕೊಳ್ಳ ಬೇಕು.
ವಾದ್ಯ,ಪರಿಕರ ವಿಶೇಷ...
ವಿಶೇಷ ವಾದ್ಯಗಳಿಂದಲೇ ವೃತಿ ಗಾಯಕರ ಪ್ರತಿ ತಂಡ ತಮ್ಮದೇ ವೈಶಿಷ್ಟ್ಯವನ್ನು ಉಳಿಸಿಕೊಂಡಿವೆ. ಆದ್ದರಿಂದ ಜನಪದ ಗಾಯಕರಿಗೆ ಶಿಷ್ಟ ವಾದ್ಯಗಳ ಅಗತ್ಯವಿಲ್ಲ. ಬಳಸಿದರೆ ಕಲಸು ಮೇಲೋಗರವಾಗಿ ಸಂಪ್ರದಾಯ ವೈಶಿಷ್ಟ್ಯ ನಾಶವಾಗುತ್ತದೆ. ಕ್ಯಾಸೆಟ್‌ಗಳಲ್ಲಿ ಹಾಡಿದ ಹೆಚ್ಚಿನ ಗಾಯಕರು ಇಂಥ ಸ್ಥಿತಿಗೆ ಕಾರಣವಾಗಿದ್ದು, ಗೀತೆಗಳನ್ನು ಮೂಲ ರೂಪದಲ್ಲಿ ತೋರಿಸು ವಲ್ಲಿ ಸೋತಿದ್ದಾರೆ.
-ಅನಾಹುತ,ಅಚಾತುರ್ಯಗಳ ಕಲ್ಪನೆ ಇಲ್ಲದ ಹವ್ಯಾಸಿ ಗಾಯಕರು, ಸಿನಿಮಾ ಮಂದಿ ‘ಜನಪದ ಗೀತೆಗಳನ್ನು ಜನಪ್ರಿಯ ಗೊಳಿಸುತ್ತಿದ್ದೇವೆ’ ಎಂದು ಬೀಗುತ್ತಿದ್ದಾರೆ. ವಾಸ್ತವವಾಗಿ ಇದು ಜನಪದ ಸಂಗೀತದ ವಿಕೃತಿ.ಮೂಲಕ್ಕೆ ‘ಹೊನ್ನ ಶೂಲ‘ !
ಪ್ರಸ್ತುತದ ಸಂಶೋಧನೆ ಕುರಿತು...
- ಸ್ನಾತಕೋತ್ತರ ತರಗತಿಗಳಲ್ಲಿ ಜನಪದ ಅಧ್ಯಯನ  ಪ್ರಾರಂಭ ವಾದ ನಂತರ  ಸಂಶೋಧನೆಗೆ ನೂರಾರು ವಿಷಯಗಳು ಗೋಚರಿಸುತ್ತಿವೆ ಎನ್ನುವುದು ನಿಜ. ಆದರೆ,ವಿದ್ವತ್ತು, ಕ್ಷೇತ್ರಕಾರ‍್ಯ, ಚಿಂತನ ಶೀಲತೆಗಳ ಕೊರತೆಯ ಕಾರಣಕ್ಕೆ ಡಾಕ್ಟರೇಟ್ ಪ್ರಬಂಧ ಗಳು ಪೇಲವವಾಗುತ್ತಿವೆ. ಮಾರ್ಗದರ್ಶಕರು, ತೀರ್ಪುಗಾರರ  ತಜ್ಞತೆಯೂ ಅನುಮಾನಾರ್ಹ. ವಿದ್ಯಾರ್ಥಿಗಳು ನೀಡಿದ ತಪ್ಪು ಉಲ್ಲೇಖಗಳನ್ನೇ  ‘ತಜ್ಞ’ರು ಅನುಮೋದಿಸಿದ ಉದಾಹರಣೆ ಗಳೂ ಇವೆ.
- ಜಾತಿ ಮತ್ತಿತರ ಕಾರಣದಿಂದ ಅನಾರೋಗ್ಯಕರ ವರ್ತುಲ ಗಳೂ  ಸೃಷ್ಟಿಯಾಗುತ್ತಿವೆ. ಪ್ರಬಂಧಗಳು ‘ಬೂಸಾ ಬೆಟ್ಟ’ದಂತೆ ಬೆಳೆದರೆ ಪ್ರಯೋಜನವಿಲ್ಲ. ಸತ್ವಪೂರ್ಣ, ಸತ್ಯನಿಷ್ಠ  ಸಂಶೋಧನೆ ಗಳ ಅಗತ್ಯವಿದೆ. ಇದಕ್ಕೆ ಶುದ್ಧ ಮನಸ್ಸಿನ  ಸಂಶೋಧನಾ ವಿದ್ಯಾರ್ಥಿಗಳು, ತಜ್ಞ ಮಾರ್ಗದರ್ಶಕರ ಅಗತ್ಯವೂ ಇದೆ.
ಜನಪದ  ಒಡನಾಟ
-ಜನಪದದ ಒಡನಾಟ,ನಿರಂತರ ತಿರುಗಾಟದಿಂದ ನಷ್ಟವಾಗಿ ದ್ದೇನೂ ಇಲ್ಲ. ಈ ಕ್ಷೇತ್ರ ಕಾರ‍್ಯದಲ್ಲಿ ದಕ್ಕಿದ  ಸುಖ,ಸಂತೋಷ, ಸಂತೃಪ್ತಿ ಎಷ್ಟೇ ಹಣ ಕೊಟ್ಟರೂ  ಸಿಗಲಾರದಷ್ಟು. ಇಂಥ ಪಾರಮಾರ್ಥಿಕ  ಸುಖವೇ ನಿಜವಾದ ಸುಖ ಎಂದು ಭಾವಿಸಿದ ವನು ನಾನು.
-‘ಜನಪದ ಮಹಾಭಾರತ ’ ಜನಪದರಲ್ಲಿ ಇದೆ ಎಂಬ ಕಲ್ಪನೆಯೇ ಇರಲಿಲ್ಲ. ನಿರಂತರ ಕ್ಷೇತ್ರಕಾರ‍್ಯದಿಂದ ಮಾತ್ರ ಇಂಥ ಅಗೋಚರ  ಸಂಗತಿಗಳು ಬೆಳಕಿಗೆ ಬರುತ್ತವೆ. ಸಾಧ್ಯವಾದಷ್ಟು ಜನಪದ ಸಾಮಗ್ರಿಯನ್ನು ಸಂಗ್ರಹಿಸಿಕೊಳ್ಳುವ ಕೆಲಸ  ಜರೂರಾಗಿ ನಡೆಯಬೇಕು. ಇಲ್ಲವೇ  ಈಗ ಆಗಿರುವ ನಷ್ಟದ ಜತೆಗೆ ಇನ್ನಷ್ಟನ್ನು ಕಳೆದುಕೊಳ್ಳುತ್ತೇವೆ. ಎಲ್ಲವನ್ನೂ ಹಾಳುಮಾಡಿದ ಮೇಲೆ ಕಳೆದುಕೊಂಡದ್ದನ್ನು ಉಳಿಸಿಕೊಳ್ಳಬೇಕಿತ್ತು ಎಂದು ಹಳಹಳಿಸಿದರೆ ಏನೂ ಪ್ರಯೋಜನವಿಲ್ಲ.