ಮನೆಯ ದೀಪಗಳು ಆರಿ ಹೋದವು...

ಕುಂದೂರು ಉಮೇಶಭಟ್ಟ ಮೈಸೂರು
ವೇಣುಗೋಪಾಲಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆಂದು ತೆಗೆದ ಮಣ್ಣೇ ಇವರ ಜೀವಕ್ಕೆ ಕುತ್ತಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ.
ಇಲ್ಲಿ ದೇವಸ್ಥಾನ ಸ್ಥಳಾಂತರ ಕಾರ‍್ಯ ಆರಂಭವಾಗಿ ಏಳು ವರ್ಷ ಕಳೆದಿದೆ. ದೇವಸ್ಥಾನಕ್ಕೆ ಅಡಿಪಾಯ ಹಾಕಲು ಆಗ ಬಳಸಿದ್ದು ಇದೇ ಹಿನ್ನೀರಿನ ಮಣ್ಣನ್ನೇ. ಆಗ ಜಲಾಶಯದ ನೀರಿನ ಪ್ರಮಾಣ ಇಳಿದು ಹೋಗಿತ್ತು. ಸಾಕಷ್ಟು ಮಣ್ಣು ತೆಗೆದಿದ್ದರಿಂದ ಅಲ್ಲಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಇದು ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ. ಮೂರು ವರ್ಷದ ಹಿಂದೆ ದಸರೆ ವೇಳೆ ಇಲ್ಲಿಯೇ ೧೦ ಮಂದಿ ಜಲಸಮಾಧಿಯಾಗಿದ್ದರು.
ಸರಿಯಾದ ಮಾಹಿತಿ ಇಲ್ಲ: ವೇಣುಗೋಪಾಲಸ್ವಾಮಿ ದೇವಸ್ಥಾನ ಸ್ಥಳಾಂತರದ ನಂತರ ಇದು ಪ್ರಮುಖ ಪಿಕ್‌ನಿಕ್ ತಾಣ. ನಿತ್ಯ ಇಲ್ಲಿಗೆ ಸಾಕಷ್ಟು ಮಂದಿ ಬರುತ್ತಾರೆ. ಈಗ ರಜೆ ಸಮಯ. ಜತೆಗೆ ಬೇಸಿಗೆ ಬೇರೆ. ಕಾವೇರಿ ಇಲ್ಲಿ ಹಿನ್ನೀರಾಗಿ ಹರವಿಕೊಂಡಿದ್ದು, ಇಲ್ಲಿಗೆ ಬರುವುದು ಬಿಸಿಲ ಧಗೆ ಆರಿಸಿಕೊಳ್ಳಲೆಂದೇ. ಶನಿವಾರ, ಭಾನುವಾರ ಬಂತೆಂದರೆ ಇಡೀ ಹಿನ್ನೀರಿನುದ್ದಕ್ಕೂ ಯುವ ಪಡೆ ಲಗ್ಗೆ ಇಟ್ಟಿರುತ್ತದೆ.
ನಾಲ್ಕೈದು ವರ್ಷದಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಇಲ್ಲಿ ಜಾಗೃತಿ ಮೂಡಿಸುವ ಹೆಚ್ಚಿನ ಫಲಕಗಳೇ ಇಲ್ಲ. ಗುಂಡಿ ಬಿದ್ದಿರುವುದು. ಸುಳಿ ಇರುವುದು ಉತ್ಸಾಹದಲ್ಲಿದ್ದವರಿಗೆ ತಿಳಿಯುತ್ತಲೇ ಇಲ್ಲ. ಒಂದೆರಡು ಕಡೆ ಹಾಕಿದ್ದರೂ ಅದು ಸರಿಯಾಗಿ ಕಾಣುವುದೇ ಇಲ್ಲ. ಇದರಿಂದ ಸಂಭ್ರಮಕ್ಕೆಂದು ಬರುವವರಲ್ಲಿ ಕೆಲವರು ಕುಟುಂಬದವರಿಗೆ ಶೋಕವನ್ನು ನಿರಂತರ. ಮಾಡಿ ಹೋಗುತ್ತಿದ್ದಾರೆ. ಈ ಭಾಗ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕಿನ ಗಡಿಯಲ್ಲಿ ಬರುವುದರಿಂದ ಪೊಲೀಸರೂ ಇತ್ತ ಕಡೆ ಗಮನ ನೀಡುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಬೇಸಿಗೆ ದಿನಗಳು ಈಗಿನ್ನೂ ಆರಂಭವಾಗಿರುವುದರಿಂದ ಇನ್ನೂ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರಬಹುದು. ಈಗಲೇ ಸಂಬಂಧಪಟ್ಟ ಇಲಾಖೆಯವರು ಎಚ್ಚರಿಕೆ ಫಲಕಗಳನ್ನು ಅಲ್ಲಲ್ಲಿ ಅಳವಡಿಸಲಿ ಎನ್ನುತ್ತಾರೆ ಪ್ರವಾಸಿಗ ರಮೇಶ್‌ಚಂದ್ರ.
ಅಪ್ಪನ ನೋವಿಗೆ...
ಇವ್ನು ಎದುರು ಮನೆಯ ಹುಡುಗ, ಎಲ್ಲಿಗೂ ಹೋದವನಲ್ಲ. ಕಾಲೇಜು ಮುಗಿದರೆ ಮನೆಗೆ ಬರುತ್ತಿದ್ದವ. ಟಿವಿ ನೋಡುವುದು ಈತನ ಹವ್ಯಾಸವಾಗಿತ್ತು. ಸ್ನೇಹಿತರ ಒತ್ತಾಯಕ್ಕೆ ಕಟ್ಟು ಬಿದ್ದು ಇಲ್ಲಿಗೆ ಬಂದು ಜೀವ ಕಳೆದುಕೊಂಡಿದ್ದಾನೆ. ಈತನ ತಂದೆ ಪ್ರಭಾಕರ್ ಆರ್‌ಎಂಸಿಯಲ್ಲಿ ಕಮೀಷನ್ ಏಜೆಂಟ್ ಆಗಿದ್ದವರು. ಕೆಲ ವರ್ಷದ ಹಿಂದೆ ವಿಕಲಚೇತನರಾಗಿದ್ದಾರೆ. ಮಗ ಹೋದ ವಿಷಯ ಕೇಳಿ ಇನ್ನಷ್ಟು ಕುಗ್ಗಿ ಹೋಗಿದ್ದಾರೆ ಎಂದು ಬೇಸರದಿಂದ ಹೇಳಿದರು ಚೇತನ್ ಅವರ ಎದುರು ಮನೆಯ ದಿನೇಶ್.
ಮಗನ ನೇವರಿಸುತ್ತಾ...
ಮೂಲತಃ ಹಳ್ಳಿ ಮೈಸೂರಿನವರಾದ ನಾಗೇಂದ್ರ ಮಕ್ಕಳ ಶಿಕ್ಷಣಕ್ಕೆ ಮೈಸೂರಿನ ನಿಮಿಷಾಂಬ ನಗರದಲ್ಲಿ ಮನೆ ಮಾಡಿಕೊಂಡಿದ್ದಾರೆ. ಮಗಳು ಭವ್ಯ ದೇಹ ಪತ್ತೆಯಾಗದೇ ಅವರ ಕುಟುಂಬದವರು ಬೇಸರದಲ್ಲಿದ್ದರು. ‘ಆಕೆ ಹೊಂಟೊದ್ಲು, ನೀನು ಮಾತ್ರ ಯಾವ ಪಿಕ್‌ನಿಕ್‌ಗೂ ಹೋಗ್ಬೇಡ, ಬೈಕ್ ಅನ್ನು ಜೋರಾಗಿ ಓಡಿಸಿಕೊಂಡು ಹೋಗ್ಬೇಡ.. ಎಂದು ಮಗಳನ್ನು ಕಳೆದುಕೊಂಡ ಹೆತ್ತೊಡಲು ಮಗನ ತಲೆಯನ್ನು ಭವ್ಯ ಅವರ ತಾಯಿ ನೇವರಿಸುತ್ತಾ ಸಮಾಧಾನಪಟ್ಟುಕೊಳ್ಳುತ್ತಿದ್ದುದು ಕರುಳು ಹಿಂಡುವಂತಿತ್ತು.
ಹೇಳಿದ್ದು ಎಲ್ಲಿಗೋ, ಕರೆದುಕೊಂಡು ಹೋಗಿದ್ದು ಇನ್ನೆಲ್ಲಿಗೋ...
ಹೇಳಿದ್ದು ಎಡಮುರಿಗೆ ಹೋಗುತ್ತೇವೆಂದು, ನೀವು ಕರೆದುಕೊಂಡು ಹೋದದ್ದು ಕೆಆರ್‌ಎಸ್ ಹಿನ್ನೀರಿಗೆ, ಆ ಮೂಲಕ ಶವದ ಮನೆಗೆ...
ಹೀಗೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದವರು ಮಕ್ಕಳನ್ನು ಕಳೆದುಕೊಂಡ ಹೆತ್ತೊಡಲುಗಳು. ಕೆಆರ್‌ಎಸ್ ಹಿನ್ನೀರಿನಲ್ಲಿ ಸಂಭ್ರಮಕ್ಕೆಂದು ಹೋಗಿ ಜೀವ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದು ಮೊದಲು ಬಂದಿದ್ದು ಚೇತನ್‌ನ ಕುಟುಂಬದವರು.
‘ನಮ್ಮ ಹುಡುಗ ಎಡಮುರಿಗೆ ಹೋಗಿ ಬೇಗನೇ ಬರುತ್ತೇನೆ ಎಂದು ಹೇಳಿ ಹೋದ. ಸ್ನೇಹಿತರೊಂದಿಗೆ ಖುಷಿಯಿಂದಲೇ ಹೋದ. ಈಗ ಹೆಣವಾಗಿದ್ದಾನೆ. ಎಡಮುರಿಗೆ ಕರೆದುಕೊಂಡು ಹೋಗುವ ಬದಲು ಈ ಅಧ್ಯಾಪಕರು ಇಲ್ಲಿಗೆ ಕರೆದು ಕೊಂಡು ಬಂದಿದ್ದಾರೆ ’ಎಂದು ಆಕ್ರೋಶ ವ್ಯಕ್ತಪಡಿಸಿದರು ಚೇತನ್ ಸಂಬಂಧಿಕರು.
ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಇತರೆ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರೂ ಆಕ್ರೋಶಕ್ಕೆ ಗುರಿಯಾದರು. ಅವಾಚ್ಯ ಶಬ್ದಗಳ ವಿನಿಮಯವೂ ಆಯಿತು. ಹಲ್ಲೆ ನಡೆಯಬಹುದು ಎನ್ನುವುದನ್ನು ಅರಿತ ಕೆಆರ್‌ಎಸ್ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋದರು.
ಅಳುವ ಕಡಲೊಳು
ಆರ್. ಕೃಷ್ಣ ಮೈಸೂರು
‘ಎದೆಯಾಳದಲ್ಲಿ ಮುಡುಗಟ್ಟಿದ ದುಃಖ, ಆಗಾಗ ಕಣ್ಣಿನಿಂದ ಜಿನುಗುವ ಹನಿನೀರು, ಇಷ್ಟಾಗಿಯೂ ಮುಖದಲ್ಲಿ ವಿಷಾದದ ನಗು’.
ಕೆಆರ್‌ಎಸ್ ಕಬಿನಿ ಹಿನ್ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟ ಅಗ್ರಹಾರದ ಬಸವೇಶ್ವರ ರಸ್ತೆಯ ಸುರಭಿ ಎನ್. ಜೋಯಿಷ್ ಅವರ ಮನೆಯಲ್ಲಿನ ದೃಶ್ಯ.
ಎರಡು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ತಮ್ಮ ಎಡಗಾಲಿಗೆ ತೀವ್ರಪೆಟ್ಟಾಗಿ ನಡೆದಾಡಲು ಕಷ್ಟ ಪಡುವ ಸುರಭಿ ಅವರ  ತಂದೆ ನಾಗರಾಜ ಜೋಯಿಷ್ ಅವರು ಮಗಳ ಸಾವಿನ ದುಃಖವನ್ನು ಹೊರ ಹಾಕಲು ಸಾಧ್ಯವಾಗದ, ತಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು.
‘ಕನ್ಯಾಕುಮಾರಿ, ರಾಮೇಶ್ವರ, ಗೋವಾ, ಚೆನ್ನೈ ಬೀಚ್‌ಗಳಲ್ಲಿ ಅಡ್ಡಾಡಿ, ಸ್ನಾನ ಮಾಡಿ ಬಂದ ಮಗಳಿಗೆ ಕೆಆರ್‌ಎಸ್‌ನಿಂದ ಹೊರ ಬರಲು ಸಾಧ್ಯವಾಗದೇ ಹೋಯಿತು ನೋಡಿ ಸಾರ್’ ಎಂದು ಉಕ್ಕಿ ಬಂದ ದುಃಖ ತಡೆದುಕೊಂಡರು.
‘ಮೀನಾಕ್ಷಿಪುರದಲ್ಲಿರುವ ನಮ್ಮ ಅಜ್ಜಿ ಮನೆಗೆ ಹೋಗೋಣ ಎಂದು ನಮ್ಮ ಮೇಷ್ಟ್ರು ಹೇಳುತ್ತಿದ್ದಾರೆ. ಕಾಲೇಜಿನಿಂದ ೧೦-೧೫ ವಿದ್ಯಾರ್ಥಿಗಳು ಹೋಗುತ್ತಿದ್ದೇವೆ. ಗೊಮ್ಮಟಗಿರಿ, ಕೆಆರ್‌ಎಸ್, ಬಲಮುರಿ, ಎಡಮುರಿ ನೋಡಿಕೊಂಡು ಸಂಜೆ ಬರುತ್ತೇವೆ’ ಎಂದು ಮೂರು ದಿನದಿಂದ ಒಂದೇ ಸಮನೆ ಹೇಳುತ್ತಿದ್ದಳು. ಹೋಗು ಎಂದ ಮೇಲೆ ಭಾನುವಾರ ಬೆಳಗ್ಗೆಯೇ ಸ್ನಾನ ಮಾಡಿ, ತಿಂಡಿ ತಿಂದು ಬೆಳಗ್ಗೆ ೮.೩೦ರ ವೇಳೆಗೆ ಮನೆ ಬಿಟ್ಟಳು.
ಸಂಜೆ ೫ರ ಹೊತ್ತಿಗೆ ಅವರ ಮೇಷ್ಟ್ರು ಫೋನ್ ಮಾಡಿ ನಿಮ್ಮ ಮಗಳು ಸೇರಿದಂತೆ ನಾಲ್ಕು ಮಂದಿ ನೀರಿಗಿಳಿದವರು ಕಾಣುತ್ತಿಲ್ಲ. ಬೇಗ ಬನ್ನಿ ಎಂದು ತಿಳಿಸಿದರು. ತಕ್ಷಣ ದಿಗಿಲುಗೊಂಡು ಅವರ ತಾಯಿ, ನನ್ನ ಇನ್ನೊಬ್ಬಳು ಮಗಳು ಸುರಕ್ಷಾಳನ್ನು ಸ್ಥಳಕ್ಕೆ ಹೋಗಲು ಕಾರು ಮಾಡಿಕಳುಹಿಸಿದೆ. ಅಷ್ಟರಲ್ಲಿ ನೀರಿನಲ್ಲಿ ಮುಳುಗಿ ಸತ್ತಿರುವವರ ಹೆಸರನ್ನು ಟಿವಿಯಲ್ಲಿ ತೋರಿಸಿದರು ಎಂದು ಕಣ್ಣೀರು ಒರೆಸಿಕೊಂಡರು. ‘ಆಕ್ಷಿಡೆಂಟ್‌ಅಗಿ ಕಾಲು ಊನ ಅದಾಗ, ಅಪ್ಪನಿಗೆ ಹೀಗಾಯಿತು ಅಂತಾ ಯೋಚ್ನೆ ಮಾಡಬೇಡಮ್ಮ. ಡಿಗ್ರಿ ಮುಗಿಯುತ್ತಿದ್ದಂತೆ ಕೆಲ್ಸಕ್ಕೆ ಸೇರುತ್ತೇನೆ. ಎಲ್ಲರನ್ನು ಚೆನ್ನಾಗಿ ನೋಡ್ಕೋತ್ತೀನಿ ಅಂತಿದ್ಲು. ಇನ್ನೆಲ್ಲಿ ನೋಡ್ಕೋತ್ತಾಳೆ’ ಎಂದು ರೋದಿಸಿದಾಗ ಆಕ್ಕ-ಪಕ್ಕ ಇದ್ದವರು ಸಮಾಧಾನ ಪಡಿಸಲೆತ್ನಿಸಿದರು.
ನಜರ್‌ಬಾದ್‌ನ ಬಾಲಕಿಯರ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ರುವ ನಾಗರಾಜ ಅವರಿಗೆ ಸಾಂತ್ವನ ಹೇಳ ಬರುವವರನ್ನು ವಿಷಾದದ ನಗುವಿನಿಂದಲೇ ಬರಮಾಡಿಕೊಂಡು, ‘ಬನ್ನಿ ನನ್ನ ಮಗಳನ್ನು ನೋಡಲು ಬಂದ್ರ. ಇನ್ನೇನು ಮೈಸೂರಿಗೆ ಬರುತ್ತಾಳೆ’ ಎಂದು ಮುಖಕ್ಕೆ ಕೈ ಇಟ್ಟು ಬಿಕ್ಕಳಿಸುತ್ತಿದ್ದರೆ ನೆರೆದಿದ್ದವರ ಕಣ್ಣು ಹನಿಗೂಡುತ್ತಿದ್ದವು. ಇದೇ ವೇಳೆ ಕರೆಂಟ್ ಹೋದಾಗ ‘ನೋಡಿದ್ರ ಕರೆಂಟು ಇಲ್ಲ, ನಮ್ಮ ಮನೆ ದೀಪವೂ ಇಲ್ಲ’ ಎಂದು ನಗುತ್ತಿದ್ದರೆ, ಅಲ್ಲಿದ್ದವರಿಗೆ ಏನು ಹೇಳಬೇಕು ಎಂದು ತೋಚದೇ ವಿಷಾದದಿಂದ ನೋಡುತ್ತಿದ್ದರು. ಮನೆ ಮಂದಿಯೆಲ್ಲಾ ಘಟನೆ ನಡೆದ ಸ್ಥಳಕ್ಕೆ ತೆರಳಿದ್ದರಿಂದ ನಾಗರಾಜು, ಅವರ ತಂದೆ, ಆಪ್ತರಾದ ಕೆಲ ಮಂದಿ ಮಾತ್ರ ಮನೆಯಲ್ಲಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ