‘ಎಲ್ಲರೂ...’ಒಂದಾಗದಿದ್ದರೆ ಉಳಿಗಾಲವಿಲ್ಲ

ಪಿ.ಓಂಕಾರ್ ಮೈಸೂರು
ವರ್ತಮಾನದ ರಾಜಕೀಯ,ಬಂಡವಾಳ ಶಾಹಿ ವ್ಯವಸ್ಥೆಯಿಂದ  ಜನತಂತ್ರಕ್ಕೆ ಗಂಡಾಂತರ ಎದುರಾಗಿದೆ. ‘ಎಲ್ಲರೂ ಒಂದಾಗಿ...’ ಜನತಂತ್ರ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕು. ಇಲ್ಲವೇ ಯಾರಿಗೂ ಉಳಿಗಾಲವಿಲ್ಲ.
-ಇದು ದೇವನೂರ ಮಹಾದೇವ ಅವರ ಆತಂಕ.
ಅಂತಃಕರಣವಿಲ್ಲದ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಗಳು  ಜಗತ್ತನ್ನು ಆಳುತ್ತಿದ್ದು ,‘ಬಲಿಷ್ಠ  ಮಾತ್ರ ಬದುಕುತ್ತಾನೆ’ ಎನ್ನು ವಂತಾಗಿದೆ. ದಲಿತರು, ಕಾರ್ಮಿಕರು, ರೈತರಿಗೆ ಉಳಿಗಾಲವಿಲ್ಲದಂತಾಗಿ ಅಸಮಾನತೆ, ಅಸಹಾಯಕತೆ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ, ಇಂಥವರೆಲ್ಲರೂ  ಒಂದಾಗಿ ಉದ್ಯೋಗ, ಸ್ವಾವಲಂಬನೆ, ಸಮಾನತೆಯ ದಿಕ್ಕಿನಲ್ಲಿ ಚಲಿಸುವುದು ಅತ್ಯಂತ  ಅನಿವಾರ‍್ಯ. ಆದ್ದರಿಂದಲೇ  ‘ಎಲ್ಲರೂ ಒಂದಾಗಿ...’ ಎನ್ನುವ ಆಶಯವನ್ನು ಕೇಂದ್ರೀಕರಿಸುತ್ತಿದ್ದೇವೆ ಎಂದವರು ಮಹಾದೇವ.
‘ಒಡಲಾಳ’ ಅನಾವರಣ
  ಆ ದಶಕ  ಮತ್ತು ಈಗ ಒಂದಾಗುವ ತುರ್ತು?
- ಎಪ್ಪತ್ತು ,ಎಂಬತ್ತರ ದಶಕಕ್ಕೂ ,ಪ್ರಸ್ತುತಕ್ಕೂ ಅಜಗಜಾಂತರ ವ್ಯತ್ಯಾಸ. ಆಗ ಮತದಾರನ  ಮತಕ್ಕೆ ‘ಮೌಲ್ಯ’ವಿತ್ತು. ಇವತ್ತು ಅದು ಕೊಂಡುಕೊಳ್ಳುವ ವಸ್ತು. ಶಾಸಕರೂ ಖರೀದಿ ಸರಕಾಗಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿ ‘ಮತ’ ಮಾರಿಕೊಂಡವನು ಬಂಡವಾಳ ಶಾಹಿ ವ್ಯವಸ್ಥೆಯ ಬಲಿಪಶು ಆಗುತ್ತಿದ್ದಾನೆ. ಅಸಮಾನತೆ ಹಿಂದೆಂದಿಗಿಂತ  ಇಂದು ಹೆಚ್ಚುತ್ತಿದೆ. ಬಡವರಿಗೆ ಉಳಿಗಾಲವೇ ಇಲ್ಲ ಎನ್ನುವಂತ ಪರಿಸ್ಥಿತಿ.
 ವಿಘಟನೆಯಾದ ಮನಸ್ಸುಗಳ ಪುನರ್ ಸಂಘಟನೆ ಸಾಧ್ಯ ಅನ್ನಿಸುತ್ತಾ?
- ಯಾವುದೇ  ಪ್ರಗತಿಪರ ಸಂಘಟನೆಗಳಿಗೆ ರಾಜಕೀಯ ನಿಲುವಿರಬೇಕು. ಇಲ್ಲವೇ ಬೇರೆಯವರಿಗೆ ಅಸ್ತ್ರವಾಗುವ ಅಪಾಯವಿದೆ. ಬಿಜೆಪಿ ಥರದ ಕೋಮುವಾದಿ, ದ್ವೇಷವನ್ನೇ ಬಂಡವಾಳ  ಮಾಡಿಕೊಂಡ ಪಕ್ಷ ಅಧಿಕಾರಕ್ಕೆ ಬರಲು ನಾವೂ ಕಾರಣವಾಗಬಹುದು. ಆದ್ದರಿಂದ, ರಾಜಕೀಯ ನಿಲುವು ಅವಶ್ಯ.  ಹೋರಾಟಗಾರರಿಗೆ ರಾಜಕೀಯ ನಿರ್ವಹಣೆ ಕಷ್ಟ. ನಿರ್ವಹಿಸುವುದರಲ್ಲಿ ಎದುರಾದ ಸಮಸ್ಯೆ,ಭಿನ್ನಾಭಿಪ್ರಾಯಗಳಿಂದ ದಸಂಸ ಹಿಂದೆ ವಿಘಟಿಸಿರಬಹುದು. ಅದು ಸೈದ್ಧಾಂತಿಕವಾದದ್ದು ಅಲ್ಲವಾದ್ದರಿಂದ ನಿಭಾಯಿಸಿಕೊಳ್ಳುವ ಹದ ನಮಗೆ ಬೇಕು, ಪಡೆದುಕೊಳ್ಳಬೇಕು.
 ಚಳವಳಿಯ ಕಾವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ ಯಾಕೆ?
 -ಎಲ್ಲರೂ ದಸಂಸದ ಚುನಾವಣೆ ಬಹಿಷ್ಕಾರದಂತ  ನಿಲುವನ್ನು ವೈಭವೀಕರಿಸುತ್ತಿದ್ದಾರೆ. ಅದರೊಳಗಿನ ಅಪಾಯವನ್ನು ನೋಡುವುದಿಲ್ಲ. ಅದೇ ಮುಂದುವರಿದು ಅತಿರೇಕಕ್ಕೆ ಹೋಗಿದ್ದರೆ ‘ನಕ್ಸಲೈಟ್’ ರೀತಿಯ ಸಂಘಟನೆಯಾಗುವ ಅಪಾಯವಿತ್ತು. ಆಗಲೂ ಅಭಿಪ್ರಾಯ ಭೇದದಿಂದ ಛಿದ್ರತೆ ಖಂಡಿತವಾಗಿತ್ತು. ಒಂದು ಹಂತದಲ್ಲಿ  ಬಿಎಸ್ಪಿಗೆ ಇಡೀ ದಸಂಸ ಬೆಂಬಲ ಕೊಟ್ಟಿತು. ಬಿಎಸ್ಪಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಜತೆ ಸೇರಿ ಸರಕಾರ ಮಾಡಿದ ನಂತರ  ಪರ-ವಿರೋಧದ ಎರಡು ಗುಂಪುಗಳಾದವು. ಅಲ್ಲಿಂದ ರಾಜಕೀಯವಾಗಿ ಏಕ ನಿಲುವು ಸಾಧ್ಯವಾಗದ್ದು ಹಲವು ಗುಂಪುಗಳಾಗಲು ಕಾರಣ.
 ಕೆಲವು ನಾಯಕರ ಹಿತಾಸಕ್ತಿಗಳೇ ವಿಘಟನೆಗೆ ಕಾರಣ ಎಂಬ ಮಾತಿದೆಯಲ್ಲ?
- ದಸಂಸ ಎಲ್ಲಾ ಕ್ಷೇತ್ರಕ್ಕೂ ಹಬ್ಬಲಿಲ್ಲ. ಅವರವರ ಸ್ವಭಾವಕ್ಕೆ ತಕ್ಕಂತೆ ನಡೆದದ್ದರಿಂದ  ಅಸಂಖ್ಯಾತ ನಾಯಕರು ಹುಟ್ಟಿಕೊಂಡರು. ಸಾಮರಸ್ಯ ಸಾಧಿಸಿ, ಎಲ್ಲಾ ಕ್ಷೇತ್ರಗಳನ್ನೂ ಕಾರ‍್ಯಕ್ಷೇತ್ರ ಮಾಡಿಕೊಂಡು ಸಮನ್ವಯ ಸಾಧಿಸುವ ಒಂದು ರಚನೆ  ಅಗತ್ಯವಿತ್ತು. ಆದರೆ, ಎಲ್ಲರ ಕಣ್ಣೂ  ಒಂದೇ ರೀತಿ ಕಾರ‍್ಯಕ್ರಮ, ಒಂದೇ ಸಮಸ್ಯೆ, ಒಂದೇ ಕ್ಷೇತ್ರದತ್ತ ನೆಟ್ಟಿದ್ದರಿಂದ ಪೈಪೋಟಿ ಉಂಟಾಯಿತು. ಇದೂ ವಿಘಟನೆಗೆ ಇನ್ನೊಂದು ಕಾರಣ. ವಿದ್ಯಾರ್ಥಿ,ಮಹಿಳಾ,ಕೂಲಿ ಕಾರ್ಮಿಕರು, ರೈತರು, ಸಹಕಾರ  ಕ್ಷೇತ್ರ, ವಿದ್ಯಾ ಕ್ಷೇತ್ರ, ಪ್ರಕಟಣೆ  ಇತ್ಯಾದಿ ಎಲ್ಲಾ ಕ್ಷೇತ್ರಗಳನ್ನು ತಮ್ಮ ಕಾರ‍್ಯಚಟುವಟಿಕೆ,ನಾಯಕತ್ವಕ್ಕೆ ವ್ಯಾಪಿಸಿಕೊಂಡಿದ್ದರೆ  ಪೈಪೋಟಿ ತಪ್ಪಿಸಬಹುದಿತ್ತು. ಈ ರೀತಿ ದಸಂಸಕ್ಕೂ ಸಾಧ್ಯವಾಗಲಿಲ್ಲ. ರೈತ ಸಂಘಕ್ಕೂ ಆಗಲಿಲ್ಲ. ಭವಿಷ್ಯದ ನಡೆ ಹೀಗೆ,ವಿಶಾಲ ವ್ಯಾಪಿಯಾಗಿರಬೇಕು.
 ಈಗಿನ ನಾಯಕತ್ವದಲ್ಲೇ ಒಂದಾಗುವ ಸಾಧ್ಯತೆ ಇದೆಯೇ?
-ಈಗ,ರಾಜ್ಯಮಟ್ಟದಲ್ಲಿ ದಲಿತಾ ಏಕತಾ ಚಾಲನಾ ಸಮಿತಿ ರಚನೆಯಾಗಿದೆ. ಪ್ರೊ.ಎಚ್.ಎಂ.ರುದ್ರಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಮರಿಸ್ವಾಮಿ  ಅವರ ನಾಯಕತ್ವದಲ್ಲಿ ಈ ಪ್ರಯತ್ನ ನಡೆಯುತ್ತಿದೆ. ಈಗಿರುವ ಎಲ್ಲಾ ಬಣಗಳ  ಸಂಚಾಲಕರ ಜತೆ ಮಾತುಕತೆ ನಡೆದಿದೆ. ಮೊದಲ ಹಂತದಲ್ಲಿ ವರ್ಷಕ್ಕೆ ನಾಲ್ಕಾರು ಜಂಟಿ ಕಾರ‍್ಯಕ್ರಮ ರೂಪಿಸಲಾಗುವುದು.
 ಬಣಗಳು ಒಗ್ಗೂಡಿದರಷ್ಟೇ ಸಾಲದು, ಮನಸ್ಸುಗಳನ್ನು ಬೆಸೆಯುವ ಕೆಲಸ ಆಗಬೇಕು ಎನ್ನುವ ಮಾತಿದೆಯಲ್ಲ?
-ಇದು ಬಹಳ ದೊಡ್ಡ ಮಾತು. ಆಗಬೇಕಾದ ಅಗತ್ಯವೂ ಸಹ. ಆ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇದು. ಜಿಲ್ಲಾ ಮಟ್ಟದಲ್ಲಿ ಅಧ್ಯಯನ ಶಿಬಿರವೊಂದು ನಡೆದರೆ, ಆ ಸಂದರ್ಭವೇ ಮನಸ್ಸು ಕೂಡಿಸುವ ಕೆಲಸವಾದೀತು. ಅದಕ್ಕಾಗೇ ಪ್ರತ್ಯೇಕ ಕಾರ‍್ಯಕ್ರಮ ಬೇಕಿಲ್ಲ.
 ರೈತ, ಪ್ರಗತಿಪರ ಸಂಘಟನೆಗಳ ಪಾತ್ರ?
-ಮೊದಲು ಇದಾಗಲಿ.ನಂತರ ವಿಶಾಲತೆಯನ್ನು ಪಡೆದುಕೊಳ್ಳುವ ಬಗ್ಗೆ ಆಲೋಚಿಸಬಹುದು. ‘ನಾವಷ್ಟೇ(ನಾವು ಮಾತ್ರ)’ ಎಂದುಕೊಳ್ಳುವವರೆಲ್ಲಾ ಬೇಗ ಸುಸ್ತು ಹೊಡೆಯುತ್ತಾರೆ.
  ಶಕ್ತಿ ರಾಜಕಾರಣ  ಒಡೆಯುವುದನ್ನೇ ಕಾಯಕ ಮಾಡಿಕೊಂಡಿ ರುವ ವರ್ತಮಾನದಲ್ಲಿ ಆ ಶಕ್ತಿಗಳು ಒಂದಾಗಲು ಬಿಡುತ್ತವೆಯೇ?
-ನಾವು ಮಾಡುವುದನ್ನು ಮಾಡಲೇಬೇಕು. ಉತ್ತರ ಚರಿತ್ರೆಗೆ ಸಂಬಂಧಿಸಿದ್ದು. ವಿಫಲಗೊಳಿಸುವ ಪ್ರಯತ್ನ ಆಗುತ್ತಲೇ ಇರುತ್ತೆ. ಮನೆ ಕಟ್ಟಿಸುವ  ಸಂದರ್ಭದಲ್ಲೂ ಅದರದ್ದೇ ಆದ ಸಮಸ್ಯೆಗಳಿರುತ್ತವೆ. ನಮ್ಮ ಆಶಯ ಕೂಡಿಸುವ ಕಡೆ, ಸಮಾನತೆಯ ಕಡೆ ಹೋಗ್ತಿದೆಯೋ ಇಲ್ಲವೋ ಎನ್ನುವುದನ್ನಷ್ಟೇ ಯೋಚಿಸಬೇಕು. ಮುಖಾಮುಖಿ ಯಾಗುವ ವಾಸ್ತವ ಬೇರೆಯದೇ ಇರಬಹುದು,ಆಶಯ,ಏಕತೆ, ಸಮಾನತೆಯಷ್ಟೇ ನಮ್ಮ ಹಂಬಲವಾಗಬೇಕು.
 ಎಲ್ಲಾ ಬಣಗಳ ಪ್ರಮುಖರ ರಾಜಕೀಯ ಹಿತಾಸಕ್ತಿಗಳು ಅಡ್ಡಿಯಾಗು ವುದಿಲ್ಲವೇ?
-ಈಗಾಗಲೇ ಮುಂದುವರಿದ ಬೆಳವಣಿಗೆ ಇದು. ಒಂದು ಮನೆಯಲ್ಲಿ ಗಂಡ,ಹೆಂಡತಿ,ಮಕ್ಕಳು ಎಲ್ಲರೂ ನಾಲ್ಕು ಪಕ್ಷಕ್ಕೆ ಮತ ಹಾಕುತ್ತಾರೆ. ಆದರೂ,ಕುಟುಂಬ ಕುಟುಂಬವಾಗಿರಬಲ್ಲದು. ಕೋಮುವಾದಿ ಪಕ್ಷದ ಹೊರತು ಉಳಿದ ಪಕ್ಷಗಳ ಒಲವಿರುವವರು ಚುನಾವಣೆ ಸಂದರ್ಭದಲ್ಲಿ ಅವರವರ  ಇಷ್ಟದಂತೆ ಸ್ಪಂದಿಸಿ, ಉಳಿದ ಸಂದರ್ಭದಲ್ಲಿ ‘ಕುಟುಂಬ’ದಂತಿರುವುದು, ಸ್ವಲ್ಪ ಅಸಮಾಧಾನ ಆಗಬಹುದಾದರೂ ಕಷ್ಟ ಅಲ್ಲ. ದಲಿತ ಏಕತಾ ಸಮಿತಿ ಆಶಯ ‘ಎಲ್ಲರೂ ಒಂದಾಗಿ’ ಎನ್ನುವುದಾದ್ದರಿಂದ  ಇದೇನು ಸಮಸ್ಯೆ ಆಗಲ್ಲ ಎಂದುಕೊಂಡಿದ್ದೇನೆ.
 ಒಟ್ಟು ನಡೆಯ ಕುರಿತು ಪ್ರತಿಕ್ರಿಯೆ ಹೇಗಿದೆ?
-ಎಲ್ಲರೂ ತುಂಬಾ ಆಸೆಗಣ್ಣಿನಿಂದ ನೋಡ್ತಿದ್ದಾರೆ. ದಲಿತ ನೌಕರರು, ಅಧಿಕಾರಿಗಳು, ಬೇಸತ್ತು ಸುಮ್ಮನಿದ್ದ ಕಾರ‍್ಯಕರ್ತರಲ್ಲಿ ಕ್ರಿಯಾಶೀಲತೆ, ಸ್ಪಂದನೆ ಉಂಟಾಗಿದೆ. ಮಾಧ್ಯಮಗಳಲ್ಲೂ ಕುತೂಹಲ ಮೂಡಿಸಿದೆ. ಬೇರೆ ಪ್ರಗತಿಪರ ಸಂಘಟನೆಗಳು ಕೂಡ ಪ್ರಭಾವಿತವಾಗಿವೆ. ಇದು ಅತ್ಯಂತ ಆಶಾದಾಯಕ ಬೆಳವಣಿಗೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ