‘ಚಿಣ್ಣರ ಅಂಗಳ’ದಲ್ಲಿ ೩ ಸಾವಿರ ಮಕ್ಕಳು !

ಚೀ.ಜ.ರಾಜೀವ ಮೈಸೂರು
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶೈಕ್ಷಣಿಕ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುತ್ತಿರುವ ‘ಚಿಣ್ಣರ ಅಂಗಳ’ ಕಾರ್ಯಕ್ರಮಕ್ಕೆ ಈ ಬಾರಿ ದಶಕದ  ಸಂಭ್ರಮ, ಅಂತೆಯೇ ಹೊಸ ಸವಾಲು ಕೂಡ !   
ಏಕೆಂದರೆ  ಈ ಬಾರಿ ಅಂಗಳಕ್ಕೆ ೧೪ ವರ್ಷದ ಶಾಲಾ ಮಕ್ಕಳು ಕೂಡ ಬಂದು ಕೂರುವವರಿದ್ದಾರೆ. ಇಲ್ಲಿಯವರೆಗೆ ೧೩ ವರ್ಷ ದೊಳಗಿನ ಸೋರಿಕೆ ಮಕ್ಕಳನ್ನು ಮಾತ್ರ ಶಾಲೆಗೆ ಆಕರ್ಷಿಸಲು  ಇಲಾಖೆ ಬೆವರು ಸುರಿಸಿದೆ. ಆದರೆ, ಈ ವರ್ಷ ಕಡ್ಡಾಯ ಶಿಕ್ಷಣ ಕಾಯ್ದೆ  ಜಾರಿಗೆ ಬಂದಿದೆ.  ೬ ರಿಂದ ೧೪ ವರ್ಷದೊಳಗಿನ ಎಲ್ಲ  ಮಕ್ಕಳಿಗೂ ಉಚಿತ ಶಿಕ್ಷಣ ನೀಡಲೇಬೇಕಾದ ಮಹತ್ವದ ಜವಾಬ್ದಾರಿಯನ್ನು ಸರಕಾರಗಳು ಹೊತ್ತಿವೆ.  ಈ ವಯೋಮಾನದ ಶಾಲೆಗೆ ಸೇರದೆ  ಇರುವ ಹಾಗೂ ಅರ್ಧಕ್ಕೆ ಶಾಲೆ ಬಿಟ್ಟ ಎಲ್ಲ ಮಕ್ಕಳನ್ನು ಶಾಲೆಗೆ ತರಬೇಕಿದೆ. ಪ್ರೌಢ ಶಿಕ್ಷಣದ ಸಾರ್ವತ್ರೀಕರಣಕ್ಕೆ ದೇಶವೇ ಸಿದ್ಧವಾಗಿದೆ. ಹಾಗಾಗಿ, ಶಿಕ್ಷಣ ಇಲಾಖೆ ಕಾಯ್ದೆಗೆ ಪೂರಕವಾಗಿ ಈ ಸಾಲಿನ ಚಿಣ್ಣರ ಅಂಗಳದ ಸ್ವರೂಪವನ್ನು ಸ್ವಲ್ಪ ಬದಲಿಸಿಕೊಂಡಿದೆ. 
೨೦೧೦- ಜನವರಿಯಲ್ಲಿ ನಡೆಸಿದ ಸಮಗ್ರ ಮಕ್ಕಳ ಗಣತಿ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ೭ರಿಂದ ೧೪ ವರ್ಷ ವಯೋಮಾನದ ೩೬೨೩ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪೈಕಿ ೭೪೫ ಮಕ್ಕಳು ಇನ್ನೂ ಶಾಲೆಗೆ ಸೇರಿಲ್ಲ. ಉಳಿದ ೨೮೭೮ ಮಕ್ಕಳು ಶಾಲೆಯ ದಾಖಲೆಗೆ, ಹೊರಗುಳಿದಿವೆ. ಈ ಮಕ್ಕಳ ಪೈಕಿ ೨೯೫೭ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ಕರೆತರಲು ಚಿಣ್ಣರ ಅಂಗಳದ ಮೂಲಕ ಪ್ರಯತ್ನಿಸಲಾಗುವುದು. ಇದಕ್ಕಾಗಿ ಎಲ್ಲ  ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಉಪ ನಿರ್ದೇಶಕ ಪುರುಷೋತ್ತಮ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ರಾಜ್ಯಾದ್ಯಂತ ಏ.೧೬ ರಿಂದ ಮೂರು ತಿಂಗಳ ಕಾಲ ಚಿಣ್ಣರ ಅಂಗಳ ಕಾರ್ಯಕ್ರಮ ನಡೆಯಲಿದೆ. ಮೈಸೂರು ಜಿಲ್ಲೆಯಲ್ಲಿ  ಒಂದು ದಿನ ತಡವಾಗಿ, ಅದರೆ ಏ. ೧೭ರಿಂದ  ಆರಂಭವಾಗಿ ಜು. ೧೬ರ ವರೆಗೆ  ೧೧೨ ಕೇಂದ್ರಗಳಲ್ಲಿ ಚಿಣ್ಣರ ಅಂಗಳ ನಡೆಯ ಲಿದೆ. ೧೧೨ ಶಿಕ್ಷಕರು, ಅಷ್ಟೇ ಸಂಖ್ಯೆಯ ಸ್ವಯಂ ಸೇವಕರು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುವರು.
ಮೂರು ಪಟ್ಟು ಹೆಚ್ಚಾಗಿದೆ: ಚಿಣ್ಣರ ಅಂಗಳಕ್ಕೆ  ಈಗ ೧೦ ವರ್ಷ. ಯೋಜನೆ ಆರಂಭವಾದ ೨೦೦೧ರಲ್ಲಿ ರಾಜ್ಯದಲ್ಲಿ ೯.೮೬ ಲಕ್ಷ ವಿದ್ಯಾರ್ಥಿಗಳು ಶಾಲೆಯಿಂದ ಹೊರಗಿದ್ದರು. ಈ ಪ್ರಮಾಣ ೨೦೦೯ರ ವೇಳೆಗೆ ೩೫ ಸಾವಿರಕ್ಕೆ ಇಳಿಯಿತು. ಆದರೆ, ಈ ಬಾರಿ ೧೪ ವರ್ಷದ ಮಕ್ಕಳನ್ನು ಪರಿಗಣಿಸಿರುವುದರಿಂದ ಈ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಲಿದೆ. ಮೈಸೂರು ಜಿಲ್ಲೆಯಲ್ಲಿಯೇ ಕಳೆದ ವರ್ಷ  ಕೇವಲ ೮೫೦ ಮಕ್ಕಳಿಗೆ ಮಾತ್ರ ಕಾರ್ಯಕ್ರಮ ನಡೆದಿತ್ತು. ಈ ಬಾರಿ ೩೦೦೦ ಮಕ್ಕಳು ಅಂಗಳಕ್ಕೆ ಕಲಿಯಲು ಬರಲಿದ್ದಾರೆ.  ಹೆಚ್ಚಾಗಿರುವ ಎಲ್ಲ ಮಕ್ಕಳು ೮ನೇ ತರಗತಿ ಹಂತದಲ್ಲಿ ಸೋರಿಕೆಯಾದವರು ಎಂಬುದು ಗಮನಾರ್ಹ.
ಎಂಟನೇ ತರಗತಿ ಮಕ್ಕಳೇ ಹೆಚ್ಚು: ಶಾಲೆ ಬಿಟ್ಟಿರುವ ಮಕ್ಕಳ ಪೈಕಿ ೧೪ ವರ್ಷ ತುಂಬಿದ ಮಕ್ಕಳು ಹೆಚ್ಚಿರುವುದು ಮಕ್ಕಳ ಗಣತಿಯಲ್ಲಿ ವ್ಯಕ್ತವಾಗಿದೆ. ಕಳೆದ ಸಾಲಿನ ತನಕ ಇಂಥ ಮಕ್ಕಳನ್ನು ಅಂಗಳದ ವ್ಯಾಪ್ತಿಗೆ ತಂದಿರಲಿಲ್ಲ.  ಶಿಕ್ಷಣ ಕಾಯ್ದೆ  ಜಾರಿಗೆ ಬಂದಿದೆ. ಇದಲ್ಲದೆ, ಪ್ರೌಢ ಶಿಕ್ಷಣದ ಸಾರ್ವತ್ರೀಕರಣಕ್ಕೂ ನಾವು ಸಜ್ಜಾಗಬೇಕಿದೆ. ಹಾಗಾಗಿ ೧೪ ವರ್ಷದ ಮಕ್ಕಳನ್ನು  ಮತ್ತೆ  ಶಾಲೆಗೆ ಆಕರ್ಷಿಸಬೇಕಿದೆ. ಇದು ಚಿಣ್ಣರ ಅಂಗಳದಲ್ಲಿ ಕೆಲಸ ಮಾಡಲಿರುವ ಶಿಕ್ಷಕರ ಮುಂದಿರುವ ಹೊಸ ಸವಾಲು ಎನ್ನುತ್ತಾರೆ ಯೋಜನೆಯ ಸಹಾಯಕ ಸಮನ್ವಯಾಧಿಕಾರಿ ಎಸ್. ರೇವಣ್ಣ . 
ಸಾಮಾನ್ಯವಾಗಿ ೧೦ ವರ್ಷದೊಳಗಿನ ಮಕ್ಕಳು ಶಾಲೆಗೆ ಬರದಿದ್ದರೆ ಅವರನ್ನು ಮನವೊಲಿಸಿ ಕರೆತರುವುದು ಸುಲಭ. ಆದರೆ. ೧೦ ರಿಂದ ೧೪ ವರ್ಷದ ಮಕ್ಕಳನ್ನು  ಆಕರ್ಷಿಸುವುದು ಸ್ವಲ್ಪ ಕಷ್ಟ. ಬಡತನ, ಪೋಷಕರ ನಿರಾಸಕ್ತಿ. ವಲಸೆ, ವಿವಿಧ ಬಗೆಯ ಶೋಷಣೆಗಳಿಂದ ಮಕ್ಕಳು ಶಾಲೆಗೆ ಬೆನ್ನು ತೋರಿಸಿರುತ್ತಾರೆ.  ಈ ಮಕ್ಕಳನ್ನು ಸೆಳೆಯುವುದು ನಿಜವಾದ ಸವಾಲು. 
 ಸೇತುಬಂಧದ ಗೊತ್ತು-ಗುರಿ !
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ನೇರವಾಗಿ ಶಾಲೆಗೆ ದಾಖಲಿಸಿದರೆ, ಅವರು ಶಾಲೆಯ ಚಟುವಟಿಕೆ ಮತ್ತು ಕಲಿಕಾ ವಿಧಾನಗಳಿಗೆ ಹೊಂದಿಕೊಳ್ಳುವುದು ಕಷ್ಟ.   ಇಂಥ ಸಂದರ್ಭದಲ್ಲಿ ಅವರಿಗೆ ಶಾಲೆ ಆಕರ್ಷಣೆಯ ಕೇಂದ್ರವಾಗುವುದಿಲ್ಲ. ಇಂಥ ಮಕ್ಕಳಲ್ಲಿ ಶಾಲೆಯ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ನಿರಂತರವಾಗಿ ಅವರನ್ನು ಸೆಳೆಯಲು ಚಿಣ್ಣರ ಅಂಗಳ ನಡೆಸಲಾಗುವುದು.
ಆಸಕ್ತಿದಾಯಕ  ಆಟ, ಹಾಡು, ಕಥೆಗಳು, ಸೃಜನಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಕಲಿಯುವ ಪ್ರೀತಿ ಬೆಳೆಸುವುದು ಹಾಗೂ  ಔಪಚಾರಿಕೆ ಶಾಲೆಗೆ ಸೇರಲು ಇರುವ ಹಿಂಜರಿಕೆಯನ್ನು ಹೋಗಲಾಡಿಸುವುದು ಪ್ರಮುಖ ಉದ್ದೇಶ.
ವಸತಿ ರಹಿತ ಮತ್ತು ವಸತಿ ಸಹಿತ ಚಿಣ್ಣರ ಅಂಗಳ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಂದು ಕ್ಲಸ್ಟರ್ ವ್ಯಾಪ್ತಿಯಲ್ಲಿ ಒಂದು ಕೇಂದ್ರ ಸ್ಥಾಪಿಸಿ, ೨೫ ಮಕ್ಕಳಿಗೆ ಅವಕಾಶ ನೀಡಲಾಗುವುದು. ಹೆಚ್ಚು ಸೋರಿಕೆ ಮಕ್ಕಳು  ಕಂಡು ಬಂದರೆ, ಅವರಿಗೆ  ಸಮೀಪದ ಶಾಲೆಯಲ್ಲಿ ವಸತಿ ರಹಿತವಾಗಿ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಸಂಖ್ಯೆ ಬಿಡಿ-ಬಿಡಿಯಾಗಿದ್ದರೆ, ೨೫ ಮಕ್ಕಳನ್ನು ಸೇರಿಸಿ, ಅವರಿಗೆ ವಸತಿ ಸಹಿತವಾಗಿ ಯಾವುದಾದರೊಂದು ಹಾಸ್ಟೆಲ್‌ನಲ್ಲಿ ವಸತಿ ಸಹಿತವಾಗಿ ಅಂಗಳ ಕೇಂದ್ರ  ತೆರೆಯಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ