ಹೂ ಅರಳಿತು, ಬದುಕು ಬಾಡಿತು

ಆರ್. ರಾಜೇಂದ್ರ, ಕೃಷ್ಣರಾಜನಗರ
ಮೈಸೂರು ಎಂದರೆ ಥಟ್ಟನೆ ನೆನಪಿಗೆ ಬರುವುದು ಮೈಸೂರು ಮಲ್ಲಿಗೆ, ಮೈಸೂರು ಪಾಕು, ಮೈಸೂರು ರೇಷ್ಮೆ ಇಂಥ ಜಗದ್ವಿಖ್ಯಾತಿ ಪಡೆದ ಮೈಸೂರು ಜಿಲ್ಲ್ಲೆಯಲ್ಲಿ ಕಾಕಡ ಹೂ  ಸಹ ತನ್ನ  ಅಸ್ತಿತ್ವ ಸ್ಥಾಪಿಸಿದ್ದರೂ, ಬೆಳಕಿಗೂ ಬಾರದೆ, ಬೆಲೆಯೂ ಇಲ್ಲದೆ ಬೆಳೆಗಾರರು ಕಾಕಡ ಹೂ ಬೆಳೆಗೆ ತಿಲಾಂಜಲಿ ಹೇಳುವ ಪರಿಸ್ಥಿತಿ ಬಂದೊದಗಿದೆ.
ಸಭೆ ,ಸಮಾರಂಭ, ಜಾತಿ, ಧರ್ಮದ ಭೇದ ವಿಲ್ಲದೆ ಪೂಜೆ ಪುನಸ್ಕಾರ ಎಲ್ಲದಕ್ಕೂ ಸಲ್ಲುವ,  ಈ ಬೆಳೆ ತಾಲೂಕಿನ ಹಲವೆಡೆ ಹೆಸರಾಗಿದ್ದು, ರೈತರು ತಮ್ಮ ದೈನಂದಿನ ಕೆಲಸ ಹಾಗೂ ಪ್ರಮುಖ ಬೆಳೆ ಯೊಂದಿಗೆ ಉಪ ಬೆಳೆಯಾಗಿ ಬೆಳೆಯುತ್ತಿದ್ದಾರೆ.
ತಾಲೂಕಿನ ಕಾಟ್ನಾಳು, ಚಂದಗಾಲು, ಚಿಕ್ಕವಡ್ಡರ ಗುಡಿ, ದೊಡ್ಡ ವಡ್ಡರಗುಡಿ, ಕಂಚಿನಕೆರೆ, ಡೆಗ್ಗನಹಳ್ಳಿ, ತಿಪ್ಪೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು   ಪ್ರಮುಖ ಬೆಳೆಯೊಂದಿಗೆ  ಕಾಕಡ ಹೂ ಬೆಳೆಯುತ್ತಿದ್ದಾರೆ.  ಅದರಲ್ಲೂ ಕೆಲವು ಕುಟುಂಬಗಳು ಹೂ ಬೆಳೆಯನ್ನು ನಂಬಿ ಬದುಕು ನಡೆಸುತ್ತಿದ್ದು, ಬೆಲೆ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ನಲುಗಿ ಹೋಗಿದ್ದಾರೆ.
ಬೆಳೆದ ಹೂ ಕೊಂಡು ಹೋಗಿ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಇಲ್ಲದೆ  ಮಧ್ಯವರ್ತಿಗಳ ಹಾವಳಿಯಿಂದ, ದಲ್ಲಾಳಿಗಳು ನಿಗದಿ ಮಾಡಿದ ಬೆಲೆಗೆ ಮಾರಾಟ ಮಾಡಿ ಬಂದಷ್ಟು ಹಣ ಪಡೆದು ಪಾಲಿಗೆ ಬಂದದ್ದು ಪಂಚಾಮೃತ ಎನ್ನುವಂತಾಗಿದೆ.
ಮೈಸೂರು - ಹಾಸನದ ಮುಖಾಂತರ ರಾಜ್ಯದ ವಿವಿಧೆಡೆಗೆ ದಲ್ಲಾಳಿಗಳ ಮುಖಾಂತರ  ರವಾನೆಯಾಗುತ್ತಿದ್ದು,  ಹೂವಿನ ಬೆಲೆಯಲ್ಲಿ ಏರುಪೇರಾದರೂ ಮಧ್ಯವರ್ತಿಗಳು ನಿಗದಿಪಡಿಸಿದ ಹಣವನ್ನು ಬೆಳೆಗಾರರು ಪಡೆದು ತೆಪ್ಪಗಿರುವಂತಾಗಿದೆ.
ಪ್ರತಿಯೊಬ್ಬ ರೈತರೂ ಪ್ರತಿದಿನ ೫ರಿಂದ ೨೫ ಕೆ.ಜಿ. ಯವರೆಗೆ ಹೂ ಬಿಡಿಸುತ್ತಾರೆ.  ಈ ಕೆಲಸವೂ ತ್ರಾಸದಾಯಕ ವಾಗಿದ್ದು ಕೂಲಿಕಾರರು ಸಿಗುವುದು ಕಷ್ಟವಾಗಿದೆ. ಬಿಡಿಸಿದ ಕೂಡಲೇ ಮಾರಾಟ ಮಾಡಬೇಕಾಗಿರುವುದರಿಂದ ಮಾರುಕಟ್ಟೆಯ ವ್ಯವಸ್ಥೆ ಇಲ್ಲದೆ ಹೂ ಕೊಂಡರೆ ಸಾಕು ಎಂಬ ಸ್ಥಿತಿಗೆ ಬೆಳೆಗಾರರು ತಲುಪಿದ್ದಾರೆ.
ಹೂ ಬೆಳೆಯುವವರು ಹೇಳುವಂತೆ ವಿಶೇಷ ದಿನಗಳಲ್ಲಿ ಕೆ.ಜಿ.ಗೆ ೧೦೦ ರೂಪಾಯಿ ಆದರೂ ನೀಡುವುದು ೪೦ ರೂ. ಮಾತ್ರ. ಕೆ.ಜಿ. ಹೂಗೆ ೩೦ ಆದರೂ ನಮಗೆ ನೀಡುವುದು ೪೦ ರೂಪಾಯಿ  ಮಾತ್ರ ಎನ್ನುತ್ತಾರೆ.
ಪುಷ್ಪೋದ್ಯಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಸಲಹೆ, ಸಹಕಾರ ನೀಡಿರುವುದರ ಜತೆಗೆ ಆರ್ಥಿಕ ನೆರವು ನೀಡಬೇಕೆನ್ನುವ ಬೆಳೆಗಾರರು ಇತ್ತೀಚೆಗೆ ತೋಟಗಾರಿಕೆ ಸಚಿವರು ಕೃಷ್ಣರಾಜ ನಗರದಲ್ಲಿ ಹೂವಿನ ಮಾರುಕಟ್ಟೆ ತೆರೆಯುವುದಾಗಿ ಹೇಳಿದ್ದು  ಈ ಕೆಲಸ ಬೇಗ ಆಗಲಿ ಎಂಬುದು ರೈತರ ಕನಸು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ