ಅರಣ್ಯ ಇಲಾಖೆ ‘ಸಹವಾಸ’ ಎಂದಿದ್ದರೂ ಸಂಕಟ !

ಚೀ. ಜ. ರಾಜೀವ, ಮೈಸೂರು
‘ಅರಣ್ಯ ಇಲಾಖೆ ನಂಟಿರುವ ಯಾವುದೇ ಭೂಮಿಯ ಸಹವಾಸವೇ ಸಲ್ಲದು. ಅಂಥ ಪ್ರದೇಶದ ಮಾಲೀಕತ್ವ ಪಡೆದು,  ಸಂಗೀತ ವಿಶ್ವವಿದ್ಯಾನಿಲಯದ ಕೇಂದ್ರ ವನ್ನು(ಕ್ಯಾಂಪಸ್) ನಿರ್ಮಾಣ ಮಾಡಲು ಹೋಗು ವುದು, ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೆಜ್ಜೆ-ಹೆಜ್ಜೆಗೂ ಪರದಾಟ ನಿಶ್ಚಿತ. ಅದೊಂದು ರೀತಿ ಗಾಳಿಯಲ್ಲಿ ಗುದ್ದಾಡಿದಂಗೆ... !’
ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಹನುಮಣ್ಣ ನಾಯಕ ದೊರೆ ಅವರಿಗೆ ಕೆಲ ವಿಶ್ರಾಂತ ಕುಲಪತಿಗಳು, ಅಧಿಕಾರಿಗಳು ನೀಡಿರುವ ಸಲಹೆ ಇದು.
ಸಂಗೀತ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಅಗತ್ಯ ವಾಗಿ ಬೇಕಾದ ವರಕೋಡಿನ ೧೦೦ ಎಕರೆ ಭೂಮಿ ವಿವಾದ ಬಗೆಹರಿಯಿತು ಎನ್ನುವಷ್ಟರಲ್ಲಿ, ಹೊಸ ದೊಂದು ಸವಾಲು ಎದುರಾಗಿದೆ. ವಿವಿಗೆ ಭೂಮಿ ನೀಡುವ ವಿಚಾರದಲ್ಲಿ ಜಿಲ್ಲಾಧಿಕಾರಿಯದ್ದೇ ತಂಟೆ- ತಕರಾರು ಎಂಬರ್ಥದಲ್ಲಿ ನಾಡೋಜ ದೇಜಗೌ ಕಿಡಿಕಾರಿದ್ದರಲ್ಲದೆ, ಭೂಮಿ ನೀಡಬೇಕು ಎಂದು ಉಪವಾಸ ಸತ್ಯಾಗ್ರಹ ಕೂರುವುದಾಗಿ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಪಿ. ಮಣಿವಣ್ಣನ್ ಅವರು- ‘ಮೈಸೂರು ತಾಲೂಕು ವರ ಕೋಡಿನಲ್ಲಿ ಸಂಗೀತ ವಿವಿಗೆ ನೀಡಿರುವ ೧೦೦ ಎಕರೆ ಭೂಮಿ ಕಂದಾಯ ಇಲಾಖೆಗೆ ಸೇರಿದ್ದು, ಅರಣ್ಯ ಇಲಾಖೆ ಅನುಮತಿ ಪಡೆದು ಯಾವುದೇ ರೀತಿಯ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳುವುದು ಸಂಗೀತ ವಿವಿಗೆ ಬಿಟ್ಟಿದ್ದು. ಅನುಮತಿ ದೊರಕಿಸಿ ಕೊಡಲು ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ’ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಆದರೆ ಕೆಲ ವಿಶ್ರಾಂತ ಕುಲಪತಿಗಳ ಪ್ರಕಾರ ಸಂಗೀತ ವಿವಿ ಭೂಮಿ ಮಂಜೂರು ವಿವಾದ ಈಗಷ್ಟೇ ಶುರು ವಾಗಿದೆ. ಇಲ್ಲಿಯವರೆಗೆ ನಡೆದಿದ್ದು ವಿವಾ ದವೇ ಅಲ್ಲ.ಸಮಸ್ಯೆಯ ಆಳ-ಅರಿವನ್ನು ಅರ್ಥಮಾಡಿಕೊಳ್ಳದೇ ಇರುವ ಎರಡು ಗುಂಪುಗಳ ನಡುವಿನ ವಾಕ್ಸಮರವಷ್ಟೆ ಎಂಬುದು ಅವರ ಅನುಭವದ ಮಾತು. ಕ್ಯಾಂಪಸ್ ನಿರ್ಮಾಣ ಸಂಬಂಧ ಅರಣ್ಯ ಇಲಾಖೆಯೊಂದಿಗೆ ಈಗಲೂ ಕಾನೂನು ಸಮರ ನಡೆಸುತ್ತಲೇ ಇರುವ ಎರಡು ವಿವಿಗಳ ವಾಸ್ತವದ ಕಥೆ ಇದು.
ದಶಕಗಳ ಬಳಿಕ ವಿವಾದ ಶುರು: ಮೈಸೂರು ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟು, ೧೯೮೭ರಲ್ಲಿ ಸ್ವತಂತ್ರವಾಗಿ ರೂಪುಗೊಂಡ ಕುವೆಂಪು ವಿಶ್ವ ವಿದ್ಯಾ ನಿಲಯ ಶಿವಮೊಗ್ಗದಿಂದ ೨೮ ಕಿ. ಮೀ. ದೂರದಲ್ಲಿ ರುವ ಶಂಕರಘಟ್ಟದ ‘ಜ್ಞಾನ ಸಹ್ಯಾದ್ರಿ’ ಯಲ್ಲಿ ನೆಲೆ ನಿಂತಿದೆ. ವಿವಿ ಕಟ್ಟಲೆಂದು ೨೩೦ ಎಕರೆ ಸಾಮಾಜಿಕ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆ ಅಂದು ಸೀಮಿತ ಅವಧಿಗೆ ಭೋಗ್ಯಕ್ಕೆ ನೀಡಿತ್ತು. ಈ ಪೈಕಿ ೧೦೦ ಎಕರೆ ಪ್ರದೇಶದಲ್ಲಿ ಕಟ್ಟಡ-ಮೈದಾನ-ರಸ್ತೆ ನಿರ್ಮಿಸಿ ರುವ ವಿವಿ, ಉಳಿದ ೧೩೦ ಎಕರೆ ಪ್ರದೇಶ ವನ್ನು ಅರಣ್ಯ ಭೂಮಿಯಾಗಿಯೇ ಸಂರಕ್ಷಿಸುತ್ತಿದೆ. ಮೂರು ವರ್ಷದ ಕೆಳಗೆ ಭೋಗ್ಯದ ಅವಧಿ ಮುಗಿದಿದೆ. ಇದನ್ನು ನವೀಕರಣ ಗೊಳಿಸುವಂತೆ ಸಲ್ಲಿಸಿದ ಅರ್ಜಿಗೆ ಮಾರುತ್ತರ ನೀಡಿರುವ ಅರಣ್ಯ ಇಲಾಖೆ- ತನ್ನ ಜಾಗವನ್ನು ತೆರವುಗೊಳಿಸುವಂತೆ ವಿವಿಗೆ ಸೂಚಿಸಿದೆ !
ನಿರ್ಮಾಣಗೊಂಡಿರುವ ಸುಸಜ್ಜಿತ ಕ್ಯಾಂಪಸ್ ತೆರವುಗೊಳಿಸುವುದು ಹೇಗೆ ಎಂಬುದು ವಿವಿಯ ಪ್ರಶ್ನೆ. ಸಾಮಾಜಿಕ ವಾಗಿ ಹಿಂದುಳಿದ ವರ್ಗವನ್ನು ಶೈಕ್ಷಣಿಕ ವಾಗಿ ಮೇಲಕ್ಕೆ ಎತ್ತುತ್ತಿರುವ ತನ್ನ ಕಾಯಕ ವನ್ನು ಇಲಾಖೆಗೆ ನೆನಪಿಸಿರುವ ವಿವಿ, ಇದೇ ಕಾರಣಕ್ಕಾಗಿ ರಿಯಾಯಿತಿ ನೀಡು ವಂತೆ ಕೋರಿದೆ. ‘ಹಾಗಾದರೆ, ಬಳಕೆ ಯಲ್ಲಿರುವ ೧೦೦ ಎಕರೆ ಪ್ರದೇಶಕ್ಕೆ ೪೩ ಕೋಟಿ ರೂ. ಶುಲ್ಕ ನೀಡಿ, ಭೋಗ್ಯ ನವೀ ಕರಿಸಿಕೊಳ್ಳಿ. ಉಳಿದ ೧೩೦ ಎಕರೆಯನ್ನು ವಾಪಸ್ ಒಪ್ಪಿಸಿಬಿಡಿ’ ಎಂದು ಇಲಾಖೆ ವರಾತ ತೆಗೆದಿದೆ. ಈ ಸಮರ ಇನ್ನೂ ಮುಂದುವರಿದಿದೆ ಎಂದು ವಿವಿಯ ಹಿರಿಯ ಅಧಿಕಾರಿಯೊಬ್ಬರು ವಿಜಯ ಕರ್ನಾಟಕಕ್ಕೆ ತಿಳಿಸಿದರು.
ಐದು ವರ್ಷವಾದರೂ ವ್ಯಾಜ್ಯ ನಿಂತಿಲ್ಲ: ೨೦೦೪ರಲ್ಲಿ ಆರಂಭವಾದ ತುಮಕೂರು ವಿಶ್ವವಿದ್ಯಾನಿಲಯ ಐದು ವರ್ಷದಿಂದ ಅರಣ್ಯ  ‘ಭೂ ವ್ಯಾಜ್ಯ’ ನಡೆಸುತ್ತಲೇ ಇದೆ. ಇನ್ನೂ ಪರಿಹಾರ ಸಿಕ್ಕಿಲ್ಲ. ಡಾ. ಪರಮೇಶ್ವರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ತುಮಕೂರಿನಿಂದ ೧೦ ಕಿ.ಮೀ. ದೂರ ದಲ್ಲಿರುವ ದೇವರಾಯನದುರ್ಗದಲ್ಲಿ ಕಂದಾಯ ಇಲಾಖೆಗೆ ಸೇರಿದ ೩೦೦ ಎಕರೆ ಜಮೀನನ್ನು ವಿಶ್ವವಿದ್ಯಾನಿಲಯಕ್ಕೆ ನೀಡಲಾಯಿತು. ಆದರೆ, ಭೂ ನಕಾಶೆ (ಟೋಪೊಗ್ರಫಿಕಲ್ ಶೀಟ್) ಪ್ರಕಾರ ಇದು ಅರಣ್ಯ ಭೂಮಿ ಎಂದು ಇಲಾಖೆ ವಾದಿಸಿತು. ಪರಿಸರವಾದಿ ಗಳು ಭೂಮಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಮೊರೆ ಹೊಕ್ಕರು. ವಿಷಯ ನ್ಯಾಯಾ ಲಯದ ಉನ್ನತಾಧಿಕಾರ ಸಮಿತಿಯ ಮುಂದಿದ್ದು, ಇನ್ನೂ ಬಗೆಹರಿದಿಲ್ಲ. ಈ ನಡುವೆ ಜಿಲ್ಲಾಡಳಿತ ವಿವಿಗೆ ಕುಣಿಗಲ್ ರಸ್ತೆಯಲ್ಲಿರುವ ಬಿದರಕಟ್ಟೆಯಲ್ಲಿ ೩೦೦ ಎಕರೆ ಜಮೀನನ್ನು ನೀಡಿತು. ವಿವಿ ಹೆಸರಿಗೆ ಖಾತೆ, ಪಹಣಿ... ಎಲ್ಲ ಪ್ರಕ್ರಿಯೆ ಮುಗಿದು, ಕಟ್ಟಡ ಹಾಗೂ ಕ್ಯಾಂಪಸ್ ವಿನ್ಯಾಸವೂ ಸಿದ್ಧವಾಯಿತು. ಅಲ್ಲಿಯವರೆಗೆ ಸುಮ್ಮನಿದ್ದ ಅರಣ್ಯ ಇಲಾಖೆ, ಈ ಭೂಮಿ ಸಾಮಾಜಿಕ ಅರಣ್ಯ ಪ್ರದೇಶ ಎಂದು ಆಕ್ಷೇಪ ಎತ್ತಿತು. ಪರಿಣಾಮ ಕ್ಯಾಂಪಸ್ ನಿರ್ಮಾಣ ಮತ್ತೊಮ್ಮೆ ನನೆಗುದಿಗೆ ಬಿತ್ತು. ‘ವಿವಿಗೆ ಭೂಮಿ ನೀಡಲು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ, ಸ್ವತಃ ಅರಣ್ಯ ಇಲಾಖೆ ಖಾತೆಯನ್ನು ಹೊಂದಿದ್ದ ಚೆನ್ನಿಗಪ್ಪ, ಅಂದಿನ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರಿಗೂ ಮನಸ್ಸು ಇತ್ತು. ಆದರೆ, ಅರಣ್ಯ ಇಲಾಖೆಯ ಕಠಿಣ ನಿಯಮಾವಳಿಗಳು ಅದಕ್ಕೆ ಅವಕಾಶ ನೀಡಲಿಲ್ಲ’ ಎಂದು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಓ. ಅನಂತರಾಮಯ್ಯ ವಿಜಯ ಕರ್ನಾಟಕಕ್ಕೆ ತಿಳಿಸಿದರು.
ಇಂಥ ಅನುಭವಗಳನ್ನು ಗಮನದಲ್ಲಿ ಇಟ್ಟುಕೊಂಡೇ ಸಂಗೀತ ವಿವಿ ಕುಲಪತಿಗಳು ಚಿಂತನೆ ನಡೆಸಲಿ ಎಂಬುದು ಅವರ ಸಲಹೆ.
ವರಕೋಡಿನ ೧೦೦ ಎಕರೆ ಪ್ರದೇಶದಲ್ಲಿ ವಿವಿ ಕ್ಯಾಂಪಸ್ ನಿರ್ಮಾಣ ಮಾಡಲು ಸಿದ್ಧ. ಆದರೆ, ಈ ಸಂಬಂಧ ಅರಣ್ಯ ಇಲಾಖೆಯೊಂದಿಗೆ ವ್ಯವಹಾರ ಮಾಡುವುದು, ಅನುಮತಿ ದೊರಕಿಸಿಕೊಡುವುದು ಸೇರಿದಂತೆ ಎಲ್ಲ ರೀತಿಯ  ಜವಾಬ್ದಾರಿಯನ್ನು ಜಿಲ್ಲಾಡಳಿತವೇ ಹೊರಬೇಕು. ಉಳಿದಂತೆ ಜಿಲ್ಲಾಡಳಿತ ನಮಗೆ ನೀಡಲು ಬಯಸಿರುವ ಮಾದೇನಹಳ್ಳಿಯ ೭೦ ಎಕರೆ ಭೂಮಿಯ ಆರ್‌ಟಿಸಿಯಲ್ಲಿ ಅರಣ್ಯ ಇಲಾಖೆಯ ಹೆಸರಿದೆ. ವರಕೋಡು ಆರ್‌ಟಿಸಿ ಯಲ್ಲಿ  ತನ್ನ ಹೆಸರು ಇಲ್ಲದಿದ್ದರೂ, ಅರಣ್ಯ  ಇಲಾಖೆ ಇಷ್ಟೆಲ್ಲಾ ತಕರಾರು ತೆಗೆದಿರುವಾಗ, ಮಾದೇನಹಳ್ಳಿ ಭೂಮಿ ಬಗ್ಗೆ ಸುಮ್ಮನೇ ಕೂರುವುದೇ? ಹಾಗಾಗಿ,  ಆ ಪ್ರದೇಶಕ್ಕೆ ಹೋಗಲು ಭಯ.
- ಡಾ. ಹನುಮಣ್ಣ ನಾಯಕ ದೊರೆ, ಕುಲಪತಿ, ಸಂಗೀತ ವಿವಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ