ಮಿಮ್ಸ್‌ಗೆ ಮುಳುವಾದ ವೈದ್ಯರ ಗುಂಪುಗಾರಿಕೆ

ಮತ್ತೀಕೆರೆ ಜಯರಾಮ್ ಮಂಡ್ಯ
ಚೆಂದದ ಕಟ್ಟಡ, ಸುಸಜ್ಜಿತ ಆಸ್ಪತ್ರೆ, ಅಚ್ಚುಕಟ್ಟಾದ ಸೌಲಭ್ಯ, ಸುಂದರ ಪರಿಸರ. ಇಷ್ಟೆಲ್ಲ ಇರುವ ಮಂಡ್ಯ ವೈದ್ಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್)ಗೆ ವೈದ್ಯರ ಮಿತಿ ಮೀರಿದ ಗುಂಪುಗಾರಿಕೆ ಮತ್ತು ಕಚ್ಚಾಟವೇ ಮುಳುವಾಗಿದೆ. 
ಮಂಡ್ಯ ಜಿಲ್ಲೆಗೊಂದು ಸರಕಾರಿ ವೈದ್ಯ ಕಾಲೇಜು ಬೇಕೆನ್ನುವ ಬೇಡಿಕೆ ಮೂರ‍್ನಾಲ್ಕು ದಶಕದಿಂದಲೂ ಕೇಳಿ ಬಂದಿತ್ತು. ಅದು, ೪ ವರ್ಷದ ಹಿಂದಷ್ಟೇ ಈಡೇರಿತ್ತು. ಆದರೆ, ಈಗ ಅಲ್ಲಿನ ಅಧ್ವಾನಗಳನ್ನು ಕಂಡರೆ ಯಾಕಪ್ಪಾ ಬಂತು ಈ ಕಾಲೇಜು ಎನ್ನುವಂತಾಗಿದೆ.
ವೈದ್ಯ ಕಾಲೇಜು ಬಂದ ಮೇಲೆ ಆಸ್ಪತ್ರೆ ಸಹಜವಾಗಿಯೇ ಮೇಲ್ದರ್ಜೆಗೇರುತ್ತದೆ. ಸಾಕಷ್ಟು ವೈದ್ಯರು ಮತ್ತು ಸಿಬ್ಬಂದಿ ಲಭ್ಯರಿ ರುತ್ತಾರೆ. ರೋಗಿಗಳಿಗೆ ಗುಣಮಟ್ಟದ ಸೇವೆ ದೊರಕುತ್ತದೆ ಎಂಬೆಲ್ಲ ಕನಸು ಕಟ್ಟಿಕೊಂಡಿದ್ದ ಮಂಡ್ಯದ ಜನರು ಈಗ ರೋಸಿ ಹೋಗಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಹೇಳಿ ಕೇಳಿ ಗೌಡ್ರ ಗದ್ಲ. ಅದು, ಯಾವೊಂದು ಕ್ಷೇತ್ರ ಮತ್ತು ವಿಷಯದಲ್ಲೂ ಹೊರತಲ್ಲ. ಈಗ ಮಿಮ್ಸ್‌ನಲ್ಲೂ ಅದೇ ನಡೆಯುತ್ತಿದೆ. ಇಷ್ಟೆ ಆಗಿದ್ದರೆ ಪರವಾಗಿರಲಿಲ್ಲ. ಸಂಸ್ಥೆಯು ಭ್ರಷ್ಟಾಚಾರ, ಲೂಟಿ, ಕಚ್ಚಾಟ,  ಕೆಸರೆರೆಚಾಟದಲ್ಲೇ ಮುಳುಗಿದೆ.
ಕಾಡಿ ಬೇಡಿ ಅನುಮತಿ: ಸತತ ೩ ವರ್ಷವೂ ಭಾರತೀಯ ವೈದ್ಯ ಮಂಡಳಿ (ಎಂಸಿಐ)ಯಿಂದ ಕಾಡಿ ಬೇಡಿಯೇ ಅನುಮತಿ ಗಿಟ್ಟಿಸಿಕೊಳ್ಳಲಾಗಿದೆ. ಮೊದಲ ವರ್ಷ ಕಟ್ಟಡ ಪೂರ್ಣವಾಗಿಲ್ಲವೆಂದು ಅನುಮತಿ ನಿರಾಕರಣೆಯಾಗಿತ್ತು.
೨ನೇ ಮತ್ತು ೩ನೇ ವರ್ಷದಲ್ಲಿ ಮೂಲ ಸೌಲಭ್ಯಗಳು ಮತ್ತು ಬೋಧಕ ಸಿಬ್ಬಂದಿಯ ಕೊರೆತೆಯನ್ನು ಮುಂದೊಡ್ಡಿ ಎಂಸಿಐ ಅನುಮತಿ ನೀಡಿರಲಿಲ್ಲ. ಮೂರು ವರ್ಷವೂ ಷರತ್ತು ಪಾಲನೆಗೆ ಕಾಲಮಿತಿ ಅವಕಾಶ ಪಡೆದು, ಅನುಮತಿ ಪಡೆ ಯಲಾಗಿತ್ತು. ಕಳೆದ ವರ್ಷ ಮಿಮ್ಸ್‌ಗೆ ಭೇಟಿ ನೀಡಿದ್ದ ಎಂಸಿಐ ೩ನೇ ವರ್ಷದ ಪದವಿ ತರಗತಿಗೆ ಪ್ರವೇಶಾವಕಾಶವನ್ನೇ ನಿರಾಕರಿಸಿತ್ತು. ಸಂಸದ ಎನ್. ಚಲುವರಾಯಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದಿಲ್ಲಿ ಮಟ್ಟದಲ್ಲಿ ಲಾಬಿ ನಡೆಸಿ, ಅನುಮತಿ ಕೊಡಿಸಿದ್ದರು.
ಅಂಥ ಸ್ಥಿತಿಯಲ್ಲಿದ್ದಾಗಲೂ ಸಂಸ್ಥೆಯ ಗೌರ್ನಿಂಗ್ ಕೌನ್ಸಿಲ್ ಅಧ್ಯಕ್ಷರು, ವೈದ್ಯಕೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಚಂದ್ರಗೌಡ ಅವರು ಮಿಮ್ಸ್‌ಗೆ ಕನಿಷ್ಠ ಪಕ್ಷ ಭೇಟಿ ನೀಡುವ ಗೋಜಿಗೆ ಹೋಗಿರಲಿಲ್ಲ.
ಮತ್ತೆ ಭೇಟಿ ನಿಗದಿ: ಎಂಸಿಐ ತ್ರಿಸದಸ್ಯ ತಂಡವು ೨೦೦೯ರ ನವೆಂಬರ್-೨೦೧೦ರ ಫೆಬ್ರವರಿ ಒಳಗೆ ಮಿಮ್ಸ್ ಪರಿಶೀಲನೆಗಾಗಿ ಭೇಟಿ ನೀಡುವುದಾಗಿ ಸೂಚನೆ ಕಳುಹಿಸಿದೆ. ಈ ಹಂತದಲ್ಲಿ ಸಂಸ್ಥೆಯ ಮಾನ ಹಾದಿ ಬೀದಿಗಳಲ್ಲಿ ಹರಾಜಾಗುವ ಮಟ್ಟಕ್ಕೆ ಬಂದು ನಿಂತಿದೆ.
ಸಂಸ್ಥೆಯಲ್ಲಿ ಈಗಲೂ ೧೫ ಬೋಧಕ ಸಿಬ್ಬಂದಿಯ ಕೊರತೆ ಎದುರಾಗಿದೆ. ೪ ವರ್ಷ ಕಳೆದಿದ್ದರೂ ರೇಡಿಯಾಲಜಿ ವಿಭಾಗಕ್ಕೆ ಬೋಧಕರೇ ಸಿಕ್ಕಿಲ್ಲ. ಕಾಲೇಜು ಕಟ್ಟಡ, ವೈದ್ಯರ ವಸತಿ ಗೃಹ ಮತ್ತು ಹಾಸ್ಟೆಲ್ ಕಟ್ಟಡ ಬಹುಪಾಲು ಪೂರ್ಣಗೊಂಡಿದ್ದರೂ ಹಸ್ತಾಂತರವಾಗಿಲ್ಲ.
ಕೊರತೆ ಇರುವ ಬೋಧಕ ಸಿಬ್ಬಂದಿಯ ನೇಮಕ ಪ್ರಕ್ರಿಯೆ ನಿಯಮ ಬಾಹಿರ ಎನ್ನುವ ಕಾರಣಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿದೆ. ಪ್ರಭಾರ ನಿರ್ದೇಶಕಿ ಡಾ.ಪುಷ್ಪಾ ಸರ್ಕಾರ್ ಅವರ ಅಧಿಕಾರವೇ ಪ್ರಶ್ನಾರ್ಹವಾಗಿದೆ. ಈ ವಿಷಯವೂ ಕೋರ್ಟ್‌ನ ಕಟಕಟೆ ಹತ್ತಿದೆ.
ತಾರಕಕ್ಕೇರಿರುವ ಜಗಳ: ಮಿಮ್ಸ್‌ನಲ್ಲಿ ವೈದ್ಯರು ವಿದ್ಯಾರ್ಥಿಗಳಿಗೆ ಪಾಠ ಹೇಳುವ ಜತೆಗೆ ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ನೀಡುವ ಬದಲು ಕಚ್ಚಾಟದಲ್ಲಿ ತೊಡಗಿದ್ದಾರೆ. ಕೂಗಾಟ, ಕಚ್ಚಾಟ, ಕಾಲೆಳೆದಾಟ, ಆರೋಪ, ಪ್ರತ್ಯಾರೋಪದ ವಿಷಯದಲ್ಲಿ ಇಲ್ಲಿನ ವೈದ್ಯರು ರಾಜಕಾರಣಿಗಳನ್ನೇ ಮೀರಿಸಿ ನಿಂತಿದ್ದಾರೆ.
ಶಸ್ತ್ರ ಚಿಕಿತ್ಸೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಎಂ. ಪರಮೇಶ್ವರ ಮತ್ತು ಮೈಕ್ರೊ ಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ.ಸುಮಂಗಲಿ ಅವರಿಬ್ಬರನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ.
ಮಾಜಿ ಸಚಿವ ಎಸ್.ಡಿ.ಜಯರಾಮ್ ಅವರ ಅಳಿಯ ಪರಮೇಶ್ವರ್ ಅಲಿಯಾಸ್ ಪರಮೇಶ್ ಅಮಾನತು ಹಿನ್ನಲೆಯಲ್ಲಿ ಮಂಡ್ಯ ಸೇರಿದಂತೆ ವಿವಿಧೆಡೆ ಪ್ರತಿಭಟನೆ ಪ್ರತಿಧ್ವನಿಸಿತ್ತು. ಅಮಾನತು ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎನ್ನುವ ವ್ಯಾಪಕ ಟೀಕೆ ಕೇಳಿ ಬಂದಿತ್ತು. ಪ್ರತೀಕಾರಕ್ಕಾಗಿ ಪರಮೇಶ್ವರ್ ಕೂಡಾ ಮಿಮ್ಸ್‌ನ ವೈಫಲ್ಯಗಳನ್ನು ಬಯಲಿಗೆಳೆಯಲು ಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಜಕೀಯ ಪ್ರತಿಷ್ಠೆ: ಮಿಮ್ಸ್‌ಗೆ ‘ಗ್ರಹಣ’ ಹಿಡಿಯಲು ರಾಜಕೀಯ ಪ್ರತಿಷ್ಠೆಯೂ ಕಾರಣವಾಗಿದೆ. ಮಂಡ್ಯಕ್ಕೆ ಸರಕಾರಿ ವೈದ್ಯ ಕಾಲೇಜು ಮಂಜೂರಾಗಲು ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದ ಎನ್. ಚಲುವರಾಯಸ್ವಾಮಿ ಅವರ ಪರಿಶ್ರಮ ಕಾರಣ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಇತ್ತೀಚೆಗೆ ಮಿಮ್ಸ್‌ನಲ್ಲಿ ತಾರಕ್ಕೇರಿದ್ದ ವೈದ್ಯರ ಗುದ್ದಾಟವನ್ನು ತಿಳಿದು ಭೇಟಿ ನೀಡಿದ್ದ ವೇಳೆ  ಚಲುವರಾಯಸ್ವಾಮಿ, ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದವರಿಗೆ ಕಪಾಳ ಮೋಕ್ಷ ಮಾಡಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಅದು, ರಾಮಚಂದ್ರಗೌಡರನ್ನೇ ಗುರಿಯಾಗಿಟ್ಟುಕೊಂಡು ಹೇಳಿದ ಮಾತಾಗಿತ್ತು.
ಅಂತೆಯೇ ಚಲುವರಾಯಸ್ವಾಮಿ, ಮಿಮ್ಸ್ ನಿರ್ದೇಶಕಿ ಪುಷ್ಪಾ ಸರ್ಕಾರ್ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವಕಾಶಕ್ಕಾಗಿ ಕಾದಿದ್ದ ರಾಮಚಂದ್ರಗೌಡ, ಜಾ.ದಳದ ಪ್ರಭಾವಿ ನಾಯಕರ ಕುಟುಂಬಕ್ಕೆ ಸೇರಿದ ವೈದ್ಯ ಡಾ.ಸಿ.ಎಂ. ಪರಮೇಶ್ವರ್ ಅವರನ್ನೇ ಅಮಾನತುಪಡಿಸಿ ಚಲುವರಾಯಸ್ವಾಮಿ ಬುಡಕ್ಕೇ ಕತ್ತರಿ ಹಾಕಿದರು
ರಾಮಚಂದ್ರಗೌಡರನ್ನು ಕಂಡರೆ ಕೊತ ಕೊತ ಕುದಿಯುತ್ತಿದ್ದ ಚಲುವರಾಯಸ್ವಾಮಿ ಅವರು ಪರಮೇಶ್ವರ್ ಅಮಾನತು ಬೆನ್ನಲ್ಲೇ ಕೆಂಡಾಮಂಡಲವಾಗಿದ್ದಾರೆ. ಅಮಾನತು ಆದೇಶ ಹಿಂತೆಗೆದುಕೊಳ್ಳುವಂತೆ ಖುದ್ದು ರಾಮಚಂದ್ರಗೌಡ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಫೋನಾಯಿಸಿ ಶಿಫಾರಸು ಮಾಡಿದ್ದರೂ ಪ್ರಯೋಜನವಾಗಿಲ್ಲ.
ಚಲುವರಾಯಸ್ವಾಮಿ, ರಾಮಚಂದ್ರಗೌಡ ಮತ್ತು ಜಿಲ್ಲೆಯ ಶಾಸಕರು ಮಿಮ್ಸ್‌ನ ಗೊಂದಲ ನಿವಾರಿಸುವ ಬದಲು ಉರಿಯುವ ಬೆಂಕಿಗೆ ತುಪ್ಪು ಸುರಿಯುತ್ತಿದ್ದಾರೆ. ಇದು, ಹೀಗೇ ಮುಂದುವರಿದಲ್ಲಿ ಮಂಡ್ಯದಲ್ಲಿ ಮುಚ್ಚಿ ಹೋದ ಕಾರ್ಖಾನೆಗಳ ಸಾಲಿಗೆ ಮಿಮ್ಸ್ ಕೂಡಾ ಸೇರುವ ಕಾಲ ದೂರವಿಲ್ಲ.
ಆರೋಪಗಳ ಸುರಿಮಳೆ: ಮಿಮ್ಸ್‌ನಲ್ಲಿ ಎಲ್ಲವೂ ನೆಟ್ಟಗಿಲ್ಲ. ಸಂಸ್ಥೆ ಪ್ರಾರಂಭದಿಂದ ಇಲ್ಲಿವರೆಗೆ ನಡೆದಿರುವ ನೇಮಕದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅರ್ಹತೆ ಮಾನದಂಡವಾಗಿಲ್ಲ. ಮೀಸಲು ನಿಯಮ ಪಾಲಿಸಿಯೇ ಇಲ್ಲ. ಪ್ರಭಾರ ನಿರ್ದೇಶಕ ಹುದ್ದೆ ಸೇರಿದಂತೆ ಉನ್ನತ ಹುದ್ದೆಗಳಿಗೆ ನೇಮಕ ವಿಷಯದಲ್ಲಿ ಜ್ಯೇಷ್ಠತೆ ಕಾಪಾಡಿಲ್ಲ ಎನ್ನುವ ಕೂಗು ಕೇಳಿ ಬಂದಿದೆ.
ಖರೀದಿ ಅವ್ಯವಹಾರದ ಬಗ್ಗೆ ಲೋಕಾಯುಕ್ತ ತನಿಖೆ ನಡೆದಿದೆ. ವರದಿಯಲ್ಲಿ ಅವ್ಯವಹಾರ ಸಾಬೀತಾಗಿದ್ದರೂ ಯಾರ ವಿರುದ್ಧವೂ ಕ್ರಮ ಜರುಗಿಸಿಲ್ಲ. ಹೊಸ ಕಟ್ಟಡದ ಕಾಮಗಾರಿ ಗುಣಮಟ್ಟದ ಬಗ್ಗೆಯೂ ಲೋಕಾಯುಕ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ನಾಲ್ಕೇ ವರ್ಷದಲ್ಲಿ ಸಂಸ್ಥೆ ಅರಾಜಕತೆ, ಅಧ್ವಾನ, ಅವಾಂತರ, ಗೊಂದಲದ ಗೂಡಾಗಿ ನಲುಗುತ್ತಿರುವುದು ವಿಪರ್ಯಾಸದ ಸಂಗತಿ.
ಪ್ರಭಾವಿ ಕುಟುಂಬದವರು: ಮಿಮ್ಸ್‌ನಲ್ಲಿ ಮಂಡ್ಯದ ಪ್ರಭಾರಿ ರಾಜಕಾರಣಿಗಳ ಕುಟುಂಬದ ವೈದ್ಯರು ಮತ್ತು ಬೋಧಕ ಸಿಬ್ಬಂದಿಯೂ ಸಾಕಷ್ಟಿದ್ದಾರೆ. ದೊಡ್ಡವರ ಮಕ್ಕಳು ಮತ್ತು ಕುಟುಂಬದವರು ಇದ್ದ ಕಡೆ ಪ್ರತಿಷ್ಠೆಗಾಗಿ ಕಾದಾಟ ತಪ್ಪಿದ್ದಲ್ಲ. ಸಂಸ್ಥೆಯ ಗೊಂದಲಕ್ಕೆ ಕೆಲವರು ನೇರ ಭಾಗಿಯಾದರೆ ಮತ್ತೆ ಕೆಲವರು ಪರೋಕ್ಷವಾಗಿದ್ದಾರೆ.
ಅಮಾನತಿನಲ್ಲಿರುವ ಸಹಾಯಕ ಪ್ರಾಧ್ಯಾಪಕ ಹಾಗೂ ಶಸ್ತ್ರ ಚಿಕಿತ್ಸಕ ಡಾ.ಸಿ.ಎಂ. ಪರಮೇಶ್ವರ್ ಅವರು ಮಾಜಿ ಸಚಿವ ಎಸ್.ಡಿ. ಜಯರಾಮ್ ಅಳಿಯ. ಮಿಮ್ಸ್ ನಿರ್ದೇಶಕ ಹುದ್ದೆಯಿಂದ ರಾಜಕೀಯ ಕಾರಣಗಳಿಂದ ವಂಚಿತರಾಗಿರುವ ಡಾ.ಜಿ.ಎಂ. ಪ್ರಕಾಶ್ ಅವರು ಮಾಜಿ ಸಂಸದ ಜಿ. ಮಾದೇಗೌಡರ ಪುತ್ರ.
ಮಾಜಿ ಶಾಸಕ ಎಚ್.ಡಿ. ಚೌಡಯ್ಯ ಪುತ್ರಿ ಡಾ.ಸವಿತಾ, ಮಾಜಿ ಶಾಸಕ ಎಚ್.ಬಿ. ರಾಮು ಪುತ್ರಿ ಡಾ.ಸ್ಮಿತಾ, ರೈತ ಸಂಘದ ನಾಯಕ ಕೆ. ಬೋರಯ್ಯ ಅವರ ಪುತ್ರ ಆರ್‌ಎಂಒ ಡಾ.ರವೀಂದ್ರ ಬಿ.ಗೌಡ ಸಂಸ್ಥೆಯಲ್ಲಿರುವ ಪ್ರಭಾವಿ ಕುಟುಂಬಗಳ ಸದಸ್ಯರು. ಇನ್ನು, ಸಂಸದ ಎನ್. ಚಲುವರಾಯಸ್ವಾಮಿ ಸಹೋದರ ಪುತ್ರ ಡಾ.ಮೋಹನ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಡಿಟಿಒ ಆಗಿದ್ದಾರೆ.
ಖಾಸಗಿ ಪ್ರಾಕ್ಟೀಸ್‌ಗೆ ಒತ್ತು: ಮಂಡ್ಯದ ಮಿಮ್ಸ್, ಜಿಲ್ಲಾ ಆಸ್ಪತ್ರೆ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶೇಕಡ ೧೦೦ರಷ್ಟು ವೈದ್ಯರು ಖಾಸಗಿ ಪ್ರಾಕ್ಟೀಸ್‌ಗೆ ಒತ್ತು ನೀಡಿದ್ದಾರೆ. ಕೆಲವರು ಸ್ವಂತ ನರ್ಸಿಂಗ್ ಹೋಂ, ಕ್ಲಿನಿಕ್ ಹೊಂದಿದ್ದಾರೆ. ಇನ್ನುಳಿದವರು ಹಗಲು, ರಾತ್ರಿಯೆನ್ನದೆ ಖಾಸಗಿ ಪ್ರಾಕ್ಟೀಸ್‌ನಲ್ಲೇ ಮುಳುಗಿ ವೈದ್ಯ ವೃತ್ತಿಯನ್ನು ದುಡ್ಡಿನ ದಂಧೆ ಮಾಡಿಕೊಂಡಿ ದ್ದಾರೆ.
ಖಾಸಗಿ ಪ್ರಾಕ್ಟೀಸ್ ವಿಷಯದಲ್ಲಿ ಮಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ.ರಾಮಲಿಂಗೇಗೌಡ ಸಹಿತ ಎಲ್ಲಾ ೮ ವಿಭಾಗಗಳ ಮುಖ್ಯಸ್ಥರೂ ಹೊರತಲ್ಲ. ಕೆಲ ವೈದ್ಯರು, ಬೋಧಕರು ಮತ್ತು ಪ್ರಯೋಗಾಲಯಗಳ ಕೆಲಸಗಾರರು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ, ಕೆಲಸದ ಅವಧಿಯಲ್ಲೇ ಖಾಸಗಿ ಪ್ರಾಕ್ಟೀಸ್ ಮಾಡುತ್ತಿರುವುದೂ ಉಂಟು.
೪ ವರ್ಷಕ್ಕೆ ೫ನೇ ನಿರ್ದೇಕರು: ಮಂಡ್ಯ ಜಿಲ್ಲೆಯಲ್ಲಿ ಉನ್ನತ ಹುದ್ದೆಗಳಲ್ಲಿ ಯಾರಿಗೂ ಹೆಚ್ಚು ದಿನ ಉಳಿಗಾಲವಿಲ್ಲ. ಜಿಲ್ಲಾಧಿಕಾರಿ, ಮೈಷುಗರ್ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಂತೆಯೇ ಮಿಮ್ಸ್‌ನ ನಿರ್ದೇಶಕ ಹುದ್ದೆಯೂ ಶಾಪಗ್ರಸ್ತವಾಗಿದೆ.  ೪ ವರ್ಷ ತುಂಬುವಷ್ಟರಲ್ಲಿ ಮಿಮ್ಸ್ ೫ನೇ ನಿರ್ದೇಶಕರನ್ನು ಕಾಣು ವಂತಾಗಿದೆ. ಈ ಹುದ್ದೆಗೂ ಲಂಚದ ಹಾವಳಿ ಹೆಚ್ಚಿದೆ.
ಸಂಸ್ಥೆಯ ಪ್ರಾರಂಭದಲ್ಲಿ ನಿರ್ದೇಶಕರಾಗಿ ಡಾ.ಚಂದ್ರಶೇಖರ್ ಕೆಲಸ ಮಾಡಿದ್ದರು. ಬಳಿಕ ಬಂದ ಡಾ.ಚಿದಾನಂದ ಅವರು ಸಿಬ್ಬಂದಿ ನೇಮಕದಲ್ಲೇ ಮುಳುಗಿದ್ದರು. ಅವರಾದ ನಂತರ ಡಾ.ಶಿವಕುಮಾರ್ ವೀರಯ್ಯ, ಡಾ.ರಾಜೀವ್ ಶೆಟ್ಟಿ ನಿರ್ದೇಶಕರಾಗಿದ್ದರು. ಇದೀಗ ಡಾ.ಪುಷ್ಪಾ ಸರ್ಕಾರ್ ಪ್ರಭಾರ ನಿರ್ದೇಶಕಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ