ದಾಸ್ತಿಕೊಳ ಬಡಾವಣೆಯಲ್ಲಿ ನೀರಿಗೆ ತತ್ವಾರ

ವಿಕ ಸುದ್ದಿಲೋಕ ಹುಣಸೂರು
ಬಿಳಿಕೆರೆಗೆ ಹೊಂದಿಕೊಂಡಂತಿರುವ ದಾಸ್ತಿಕೊಳ ಬಡಾವಣೆಯಲ್ಲಿ ಜನತೆ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ.
ಮೈಸೂರು-ಹುಣಸೂರು ಮುಖ್ಯ ರಸ್ತೆಯ ಅಂಚಿನಲ್ಲಿರುವ ಬಡಾವಣೆಯಲ್ಲಿ  ೨೫೦ಕ್ಕೂ ಹೆಚ್ಚು ಬಡ ಕುಟುಂಬಗಳೇ ವಾಸಿಸುತ್ತಿದ್ದು,  ನೀರಿನ ಟ್ಯಾಂಕ್ ಇದ್ದರೂ ನಿಷ್ಪ್ರಯೋಜಕ. ಜತೆಗೆ ಮೂರು ಬೋರ್‌ವೆಲ್‌ಗಳಲ್ಲಿ ಎರಡು ಕೆಟ್ಟು ಹೋಗಿವೆ. ಮತ್ತೊಂದರಲ್ಲಿ ಗಂಟೆಗೊಂದು ಬಿಂದಿಗೆ ನೀರು ಸಿಗುತ್ತಿದೆ. ಟ್ಯಾಂಕಿಗೆ ನೀರು ಪೂರೈಸುವ ಬೋರ್‌ವೆಲ್‌ನಲ್ಲಿ ಬಹುತೇಕ ನೀರು ಬತ್ತಿಹೋಗಿದೆ. ಸಿಕ್ಕುವ ಅಲ್ಪಸ್ವಲ್ಪ ನೀರಿನಲ್ಲಿ  ೧೦-೧೫ ದಿನಕ್ಕೊಮ್ಮೆ ನೀರು ಪೂರೈಸುತ್ತಾರೆ.
ಪಂಪ್‌ಸೆಟ್ಟೇ ಗತಿ: ಬಡಾವಣೆಯ ಮಹಿಳೆಯರು ಬೆಳಗಿನ ಜಾವ ಗ್ರಾಮಕ್ಕೆ ಒಂದು ಕಿ.ಮೀ. ದೂರವಿರುವ ಪಂಪ್‌ಸೆಟ್‌ಗಳಿಂದ ಜಮೀನಿನ ಮಾಲೀಕರನ್ನು ಗೋಗರೆದು  ನೀರು ಹೊತ್ತು ತರುವ ಹೀನಸ್ಥಿತಿ ಇಲ್ಲಿದೆ. ನೀರು ಬೇಕೆಂದಾಗಲೆಲ್ಲ ಅಲ್ಲಿಗೆ ಓಡಬೇಕಾದ ಪರಿಸ್ಥಿತಿ ಈ ಜನರದ್ದು. ಅಂತರ್ಜಲ ಕುಸಿದು ನೀರು ಪಾತಾಳಕ್ಕಿಳಿದಿರುವ ಒಂದು ಬೋರ್‌ವೆಲ್‌ನಲ್ಲಿ ಒಂದು ಬಿಂದಿಗೆ ನೀರು ತುಂಬಲು ಕನಿಷ್ಠ ೧ ಗಂಟೆ ತೆಗೆದುಕೊಳ್ಳುತ್ತಿದೆ. ಒಮ್ಮೊಮ್ಮೆ ನೀರು ನಿಂತು ಹೋಗುತ್ತದೆ. ಈ ನೀರಿಗೂ ನೂಕುನುಗ್ಗಲು ಉಂಟಾಗಿ ನಿತ್ಯ ಜಗಳ ನಡೆಯುತ್ತಿರುತ್ತದೆ.
ಏಕಿ ಅವಸ್ಥೆ ?: ಚಿಕ್ಕಮಾದು ಶಾಸಕರಾಗಿದ್ದ ೧೮ ವರ್ಷದ ಹಿಂದೆ ನೂತನ ಬಡಾವಣೆ ರಚಿಸಲಾಗಿತ್ತು. ಆಗ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ಮುಂದೆ ಇಲ್ಲಿ ಜನಸಂಖ್ಯೆ ಹೆಚ್ಚಾಯಿತು. ತಕ್ಕಂತೆ ಸೌಲಭ್ಯ ಒದಗಿಸಲಿಲ್ಲ, ಇರುವ ಕುಡಿಯುವ ನೀರಿನ ಯೋಜನೆಗೆ ಟ್ಯಾಂಕ್ ನಿರ್ಮಿಸಿದರೆ ಹೊರತು ನೀರು ಪೂರೈಸುವ ಜಲ ಸಂಪನ್ಮೂಲ ಗುರುತಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಹಾಗೂ ನೀರುಗಂಟಿಗಳು ತಮಗಿಷ್ಟ ಬಂದ ರೀತಿಯಲ್ಲಿ ನೀರು ನಿರ್ವಹಣೆ ಮಾಡುತ್ತಿರುವುದೇ ಈ ಅವಸ್ಥೆಗೆ ಕಾರಣ
ಚರಂಡಿ ಇಲ್ಲ: ಇಷ್ಟಲ್ಲದೆ ಬೀದಿದೀಪ ಕೆಟ್ಟು ೨ ತಿಂಗಳಾಗಿದ್ದರೂ ಸರಿಪಡಿಸಿಲ್ಲ, ಬೀದಿಗಳು ಡಾಂಬರು ಕಂಡಿಲ್ಲ, ಹಲವೆಡೆ ಚರಂಡಿ ನಿರ್ಮಿಸಿಲ್ಲ, ಕೆಲವೆಡೆ ಮಳೆ ನೀರು ಮನೆಗೆ ನುಗ್ಗುತ್ತಿದೆ, ಚರಂಡಿಯಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿವೆ. ಹಾವುಗಳ ಕಾಟ ಇಲ್ಲಿದೆ, ಸುವರ್ಣ ಗ್ರಾಮ ಯೋಜನೆಯಡಿ ಹಾಕಿರುವ ಕಸದ ತೊಟ್ಟಿಯಲ್ಲಿ ಕಸ ತುಂಬಿ ತುಳುಕಾಡುತ್ತಿದ್ದರೂ ಎತ್ತುವವರಿಲ್ಲ.
ಮಹಿಳೆಯರ ಆಕ್ರೋಶ:  ಮೂರ‍್ನಾಲ್ಕು ವರ್ಷದಿಂದ ನೀರಿಲ್ಲದೆ ಸಾಯ್ತಿದ್ದೀವಿ, ಅವರಿವರ ಪಂಪ್‌ಸೆಟ್‌ನಿಂದ ನೀರನ್ನು ಹೊತ್ತು ತರ‍್ತಿದ್ದೀವಿ, ಯಾರಿಗೆ ಹೇಳಿದ್ರು ಕೇಳಿಸ್ಕೋತ ಇಲ್ಲ. ಶಾಸಕರಿಗೂ, ಅಧಿಕಾರಿಗಳಿಗೂ ಕಷ್ಟ ಹೇಳ್ಕೊಂಡ್ರು ಏನೂ ಆಗಿಲ್ಲ. ಈ ಬಗ್ಗೆ ಗ್ರಾ.ಪಂ. ವಿರುದ್ಧ ಹಾಗೂ ಬಿಳಿಕೆರೆಯಲ್ಲಿ ವಾಣಿಜ್ಯ ಮಳಿಗೆ ಉದ್ಘಾಟನೆ ಸಂದರ್ಭದಲ್ಲಿ  ನಾವೆಲ್ಲ ಖಾಲಿ ಕೊಡ ಹಿಡಿದು ಪ್ರತಿಭಟಿಸಿದ್ದೇವೆ, ಜನಸ್ಪಂದನ ಸಭೆಗಳಲ್ಲಿ ಗಲಾಟೆ ಮಾಡಿದ್ದೇವೆ.ಆದರೂ ಇಲ್ಲಿನ ಸಮಸ್ಯೆ ಬಗೆಹರಿಸಲು ಯಾರೂ ಯತ್ನಿಸಿಲ್ಲ, ಇನ್ನು ನಮ್ಮ ಜನ ಪ್ರತಿನಿಧಿಗಳು ಇದ್ದು ಸತ್ತಂತಾಗಿದ್ದಾರೆ ಎಂದು ಬಡಾವಣೆಯ  ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
------------------------
ದಾಸ್ತಿಕೊಳದ ನೀರಿನ ಸಮಸ್ಯೆ ಬಗ್ಗೆ ತಿಳಿದಿದೆ. ತಕ್ಷಣವೇ ಬಿಳಿಕೆರೆಯಿಂದ ಪೈಪ್‌ಲೈನ್ ಅಳವಡಿಸಿ ಅಥವಾ ಮತ್ತೊಂದು ಬೋರ್‌ವೆಲ್ ಹಾಕಿಸಿ ಸಮರ್ಪಕ ನೀರಿನ ವ್ಯವಸ್ಥೆಗೆ ಕ್ರಮ ವಹಿಸುತ್ತೇನೆ.
-ಎ.ಬಿ.ಬಸವರಾಜು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ.
--------------------
ಈ ಭಾಗದಲ್ಲಿ ಅಂತರ್ಜಲ ಕುಸಿದಿದೆ. ಆದರೆ, ಈ ಸಾಲಿನ ಅನುದಾನ ಬಿಡುಗಡೆಯಾಗಿಲ್ಲ . ಆದರೂ ತಕ್ಷಣ ಕ್ರಮ ವಹಿಸ್ತೇನೆ.
-ದಯಾನಂದ್, ಎ.ಇ.ಇ., ಜಿ.ಪಂ.
-------------------
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಕೆಟ್ಟಿರುವ ಬೋರ್‌ವೆಲ್ ಸರಿಪಡಿಸುತ್ತೇನೆ, ನೀರುಗಂಟಿಗಳನ್ನು ಹದ್ದುಬಸ್ತಿನಲ್ಲಿಡುತ್ತೇನೆ.
-ಶ್ರೀನಿವಾಸ್, ಕಾರ್ಯದರ್ಶಿ ಬಿಳಿಕೆರೆ ಗ್ರಾ.ಪಂ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ