ಬಿಜೆಪಿ ಅಭಿವೃದ್ಧಿ ‘ಮಂತ್ರ’ ಗ್ರಾ.ಪಂ.ಮುಖಿ

ವಿಕ ಸುದ್ದಿಲೋಕ ಮೈಸೂರು
ಅಭಿವೃದ್ಧಿ ‘ಮಂತ್ರದಂಡ’ಬಳಸಿ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ‘ದಿಗ್ವಿಜಯ’ ಸಾಧಿಸಿದ ಬಿಜೆಪಿಯ ‘ಭರವಸೆ ಮಳೆ ’ ಹಳ್ಳಿಗಳತ್ತ ಮುಖಮಾಡಿದೆ.
ಬಿಬಿಎಂಪಿ ಗೆಲುವಿನ ಲಹರಿಯಲ್ಲೇ, ಗ್ರಾಮ ಪಂಚಾಯಿತಿ ಗಳಲ್ಲಿ ‘ಕಮಲ’ ಅರಳಿಸುವ  ಸಂಕಲ್ಪದೊಂದಿಗೆ ಮಂಗಳವಾರ ವಿಜಯ ಸಂಕಲ್ಪ ‘ಯಾತ್ರೆ’ ಆರಂಭಿಸಿರುವ  ಪಕ್ಷದ ನಾಯಕರು, ಹಳ್ಳಿ ಜನರ ಮೇಲೆ ಅಭಿವೃದ್ಧಿ ಮಂತ್ರದಂಡ ಬೀಸಿದ್ದಾರೆ. ಕಾಕತಾಳೀಯ ಎಂಬಂತೆ ಹೊರಗೆ ಮಳೆ.
ಹಾಲು,ಹೈನು: ಮೈಸೂರಿನಲ್ಲಿ ಮಂಗಳವಾರ ನಡೆದ ‘ವಿಜಯ ಸಂಕಲ್ಪ ಸಮಾವೇಶ ’ದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರೈತ ಕುಟುಂಬಗಳಿಗೆ ಹಸು,ಎಮ್ಮೆ, ಕುರಿ ಖರೀದಿಗೆ  ಸಹಕಾರ ಸಂಸ್ಥೆಗಳ ಮೂಲಕ ಶೇ.೬ ಬಡ್ಡಿ ದರದಲ್ಲಿ ೫೦ ಸಾವಿರ ರೂ.ವರೆಗೆ ಸಾಲ ಸೌಲಭ್ಯ ಕಲ್ಪಿಸುವ ನಿರ್ಧಾರ ಘೋಷಿಸಿದರು.
ರಾಜ್ಯದ ಪ್ರತಿ ಮನೆಯಲ್ಲಿ ಕನಿಷ್ಠ ೨ ಎಮ್ಮೆ, ಆಕಳು, ಕುರಿಗಳಿರ ಬೇಕು; ಕುಟುಂಬ ಆರ್ಥಿಕವಾಗಿ ಸದೃಢವಾಗಲು ಹೈನು ಗಾರಿಕೆ ನೆರವಾಗಬೇಕು ಎಂಬುದು ಸರಕಾರದ ಇಚ್ಛೆ. ಇದರಿಂದ ಹೈನು ಉತ್ಪಾದನೆಗೂ ಉತ್ತೇಜನ ನೀಡಿದಂತಾಗು ತ್ತದೆ ಎಂದು ಹೇಳಿದರು. ಎರಡು,ಮೂರು ದಿನದಲ್ಲಿ ಹಾಲಿನ ದರ ಹೆಚ್ಚಿಸಿ,ಅದರ ಲಾಭ ರೈತರಿಗೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪುನರುಚ್ಚರಿಸಿದರು.
ಲಕ್ಷ ಕೋಟಿ ಬಜೆಟ್: ಈ ಬಾರಿ ೭೧ ಸಾವಿರ ಕೋಟಿ ರೂ.ಬಜೆಟ್ ಮಂಡಿಸಿದ್ದೇನೆ. ಮುಂದಿನ ಮೂರು ವರ್ಷದಲ್ಲಿ ಬಜೆಟ್ ಗಾತ್ರವನ್ನು ೧ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು. ಸೋರಿಕೆ ತಡೆದು, ಖಜಾನೆಯನ್ನು ತುಂಬಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತೇನೆ  ಎಂದು ಅಭಯ ನೀಡಿದರು.
ಗುಡಿಸಲು ರಹಿತ ರಾಜ್ಯ: ಸರಕಾರ ಕೈಗೊಂಡ ಅಭಿವೃದ್ಧಿ ಯೋಜನೆ, ಬಡವರಿಗೆ,ಮಹಿಳೆಯರಿಗೆ ಕಲ್ಪಿಸಿದ ಸೌಲಭ್ಯವನ್ನು ಪಟ್ಟಿ ಮಾಡಿದ ಅವರು, ಮುಂದಿನ ಮೂರು ವರ್ಷದಲ್ಲಿ ‘ಗುಡಿಸಲು ರಹಿತ ರಾಜ್ಯ’ವನ್ನಾಗಿಸಲು ದೊಡ್ಡ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡುವ  ಆಶ್ವಾಸನೆ  ನೀಡಿದರು.
ಹಳ್ಳಿಗಳಿಂದ ನಗರಕ್ಕೆ ವಲಸೆ ತಪ್ಪಿಸಿ,ಹಳ್ಳಿಗಳಲ್ಲೇ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅಗತ್ಯ ಸೌಲಭ್ಯ ಕಲ್ಪಿಸುವ  ಸಂಕಲ್ಪ ಸರಕಾರದ್ದು. ಈ ಕಾರಣಕ್ಕೆ ಕೈಗಾರಿಕೆ, ಕೃಷಿ ಕ್ಷೇತ್ರ ಮತ್ತು ಹಳ್ಳಿಗಳಲ್ಲಿ ಗುಡಿ ಕೈಗಾರಿಕೆ ಅಭಿವೃದ್ಧಿಗೆ  ಸಮಾನ  ಒತ್ತು ನೀಡಲಾಗುವುದು ಎಂದು ಹೇಳಿದರು.
ವಿದ್ಯುತ್ ಸ್ವಾವಲಂಬನೆ: ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು ೭,೫೦೦ ಕೋಟಿ ರೂ.ಸಬ್ಸಿಡಿ ನೀಡ ಲಾಗುತ್ತಿದೆ.೭ರಿಂದ ೮ ರೂ.ನೀಡಿ ವಿದ್ಯುತ್ ಖರೀದಿಸಿ ರೈತರ ಪಂಪ್‌ಸೆಟ್‌ಗೆ ಉಚಿತವಾಗಿ ನೀಡಲಾಗುತ್ತಿದೆ. ೩ವರ್ಷದಲ್ಲಿ ವಿದ್ಯುತ್ ಉತ್ಪಾದನೆಯಲ್ಲೂ ಸ್ವಾವಲಂಬನೆ  ಸಾಧಿಸಲು  ಕ್ರಮ ಕೈಗೊಳ್ಳಲಾಗಿದೆ ಎಂದರು.
ಇಲ್ಲಿ ಬಲ ಇಲ್ಲ: ನಮ್ಮ ಸಾಧನೆ ಮಾತನಾಡಬೇಕು.ಮಾತ ನಾಡೋದಷ್ಟೇ ಸಾಧನೆ ಆಗಬಾರದು.೨೨ ತಿಂಗಳಲ್ಲಿ ನಾವು ಮಾಡಿದ ಕೆಲಸ ಬಿಬಿಎಂಪಿ ಚುನಾವಣೆ ಫಲಿತಾಂಶದಲ್ಲಿ ವ್ಯಕ್ತವಾಗಿದೆ. ಗ್ರಾಮರಾಜ್ಯ, ರಾಮರಾಜ್ಯದ ಕಲ್ಪನೆ  ಸಾಕಾರ ಗೊಳಿಸಲು ಎಲ್ಲಾ ಗ್ರಾ.ಪಂ.ಗಳಲ್ಲಿ ಯೋಗ್ಯ,ಪ್ರಾಮಾಣಿಕ ಅಭ್ಯರ್ಥಿಗಳನ್ನು ನಿಲ್ಲಿಸಿ,ಗೆಲ್ಲಿಸಿ.ಹಳ್ಳಿಗಳ ಪ್ರತಿ ಮನೆಗಳಲ್ಲಿ ಕಮಲ ಅರಳಿಸಿ ಎಂದು ಕಾರ‍್ಯಕರ್ತರು, ಮುಖಂಡರಿಗೆ ಸಲಹೆ ನೀಡಿದರು.
ಉಳಿದ ಭಾಗಗಳಿಗೆ ಹೋಲಿಸಿದರೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಬಲ ಕಡಿಮೆ. ಒಟ್ಟಾಗಿ,ಒಂದಾಗಿ ಕೆಲಸ ಮಾಡಿ, ಅಭಿವೃದ್ಧಿ ಕಾರ‍್ಯಕ್ರಮಗಳನ್ನು ಜನರಿಗೆ ತಲುಪಿಸುವ ಮೂಲಕ  ಇಲ್ಲೂ ಪ್ರಾಬಲ್ಯ ಸಾಧಿಸುವಂತೆ  ಸೂಚಿಸಿದರು.
ಶೇ.೭೦ ವಿಶ್ವಾಸ: ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತ ನಾಡಿ, ಗ್ರಾ.ಪಂ.ದಿಗ್ವಿಜಯ ನಮ್ಮ ಮುಂದಿನ ಗುರಿ. ಸಾಧನೆ, ಸಂಘಟನೆ,ತಪಸ್ಸಿನ  ಆಧಾರದ ಮೇಲೆ ಹಳ್ಳಿ ಹಳ್ಳಿಗಳಲ್ಲಿ ಕಮಲ ಅರಳಿಸಲಾಗುವುದು. ಶೇ.೭೦ರಷ್ಟು ಗ್ರಾ.ಪಂ.ಗಳು ಪಕ್ಷಕ್ಕೆ ಒಲಿಯು ತ್ತವೆ  ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಡವರು, ನೊಂದವರ ನೋವಿಗೆ ಮಿಡಿಯುವ ಅಭ್ಯರ್ಥಿಗಳನ್ನು  ಚುನಾವಣೆಗೆ ನಿಲ್ಲಿಸಿ,ಜನ ಖಂಡಿತಾ ಗೆಲ್ಲಿಸುತ್ತಾರೆ  ಎಂದು ಮುಖಂಡರಿಗೆ ಸಲಹೆ ನೀಡಿದರು.
ಪಕ್ಷದ ರಾಷ್ಟ್ರೀಯ  ಪ್ರಧಾನ ಕಾರ‍್ಯದರ್ಶಿ ಅನಂತಕುಮಾರ್, ಮಾಜಿ ರಾಜ್ಯಾಧ್ಯಕ್ಷ ಸದಾನಂದಗೌಡ,  ಸಚಿವ ಪಿ.ಎಂ. ನರೇಂದ್ರ ಸ್ವಾಮಿ,ಶಾಸಕರಾದ ತೋಂಟದಾರ್ಯ,ಎಸ್.ಎ. ರಾಮದಾಸ್, ಸಿ.ಟಿ.ರವಿ,ಸಿದ್ದರಾಜು, ಕೆ.ಆರ್.ಮಲ್ಲಿಕಾರ್ಜುನಪ್ಪ, ನಂಜುಂಡ ಸ್ವಾಮಿ, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಮುಖಂಡರಾದ ಜಿ.ಟಿ.ದೇವೇಗೌಡ, ಸಿ.ರಮೇಶ್, ಎ.ಆರ್. ಕೃಷ್ಣಮೂರ್ತಿ, ಡಿ.ಸಿ.ತಮ್ಮಣ್ಣ,ಎಲ್.ಆರ್. ಶಿವರಾಮೇಗೌಡ, ಎಲ್. ರೇವಣಸಿದ್ದಯ್ಯ, ಗೋ.ಮಧುಸೂದನ್ ಮತ್ತಿತರರು ಹಾಜರಿದ್ದರು. ಮೈಸೂರು, ಚಾಮರಾಜನಗರ,ಮಂಡ್ಯ ಮತ್ತು ಹಾಸನ ಜಿಲ್ಲೆ  ಗ್ರಾ.ಪಂ.ಗಳಿಂದ  ತಲಾ ಐವರು ಪ್ರತಿನಿಧಿಗಳಂತೆ  ಸುಮಾರು ೫ ಸಾವಿರ ಕಾರ‍್ಯಕರ್ತರು ಪಾಲ್ಗೊಂಡಿದ್ದರು.

ವೀರಶೈವ ಮಠಗಳಿಂದ ಸರಕಾರಕ್ಕೆ ಆನೆ ಬಲ

ರಾಜ್ಯದಲ್ಲಿ ಶಿಕ್ಷಣ ನೀಡಬೇಕೆನ್ನುವ ಸರಕಾರದ ಶೇ.೫೦ರಷ್ಟು ಜವಾಬ್ದಾರಿಯನ್ನು ವೀರಶೈವ ಮಠಗಳೇ ಹೊತ್ತುಕೊಂಡಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಂಡಾಡಿ ದ್ದಾರೆ.
ಹೊಸಮಠದ ನಟರಾಜ ಪ್ರತಿಷ್ಠಾನದ ರಜತ ಮಹೋತ್ಸವ ಸಂಭ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು,  ಸರಕಾರ ಮಾಡಲಾಗದ ಹಲವಾರು ಕೆಲಸಗಳನ್ನು ಮಠಗಳು ಮಾಡುತ್ತಿವೆ.  ಅದರಲ್ಲೂ ವಿಶೇಷವಾಗಿ ವೀರಶೈವ ಮಠಗಳು ಶಿಕ್ಷಣ ನೀಡುವ ನಿಟ್ಟಿನಲ್ಲಿ ಶ್ರಮಿಸಿ ಸರಕಾರದ ಹೊರೆ ಯನ್ನು ಕಡಿಮೆ ಮಾಡಿವೆ. ಇದರಿಂದ ಸರಕಾರಕ್ಕೂ ಆನೆ ಬಲ ಬಂದಿದೆ ಎಂದು ನುಡಿದರು.
ಗ್ರಾಮೀಣರಲ್ಲಿ ಶಿಕ್ಷಣ ಪಡೆದವರ ಪ್ರಮಾಣ ಹೆಚ್ಚಾಗಬೇಕು ಎನ್ನುವ ಉದ್ದೇಶದಿಂದ ಸರ ಕಾರಗಳು ವರ್ಷಗಳಿಂದ ಪ್ರಾಮಾಣಿಕ ವಾಗಿ ಪ್ರಯತ್ನಿಸುತ್ತಿವೆ. ಇಷ್ಟಾದರೂ ಶೇ.೧೫ರಷ್ಟು ಮಂದಿ ಮಾತ್ರ ಪದವೀಧರ ರಾಗುತ್ತಿದ್ದಾರೆ. ಶಿಕ್ಷಣವಿಲ್ಲದೇ ಸಮಾಜ ದಲ್ಲಿ ಬದಲಾವಣೆ ಸಾಧ್ಯವಿಲ್ಲ. ಇದರಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು ಮುಂದಾಗ ಬೇಕು ಎಂದು ಕಿವಿಮಾತು ಹೇಳಿದರು.
ಭಾರತದ ಹಿರಿಮೆ:  ಭಾರತ ದೇಶದ ಕಡೆ ಅಮೆರಿಕ ಸೇರಿದಂತೆ ಹಲವು ದೇಶಗಳು ನೋಡುತ್ತಿವೆ. ಭಾರತದ ಯುವಕರ ಸಾಮರ್ಥ್ಯದ ಬಗ್ಗೆ ಸ್ವತಃ ಅಮೆ ರಿಕ ಅಧ್ಯಕ್ಷ ಬರಾಕ್ ಒಬಾಮ ಅವರೇ ಮಾತನಾಡಿದ್ದಾರೆ. ಕಷ್ಟಗಳ ನಡುವೆಯೂ ಭಾರತದ ಸಾಧನೆ ಹೆಮ್ಮೆ ಪಡುವಂತದ್ದು ಎಂದರು.
ಕೃಷಿ ಜಮೀನನ್ನು ಕಿತ್ತುಕೊಂಡು ಕೈಗಾರಿಕೆಗಳನ್ನು ಸ್ಥಾಪಿಸ ಬೇಕು ಎನ್ನುವುದು ಸರಕಾರದ ನೀತಿಯಲ್ಲ. ಆದರೆ ಕೈಗಾರಿಕೆ ಬೆಳೆಯದೇ ದೇಶದ ಪ್ರಗತಿಯೂ ಆಗುವುದಿಲ್ಲ. ಇದಕ್ಕಾಗಿ ೫ ಸಾವಿರ ಎಕರೆ ಭೂಮಿ ಮೀಸಲಿಟ್ಟಿದ್ದೇವೆ. ಸಾಕಷ್ಟು ಅಭಿವೃದ್ಧಿ ನಡುವೆಯೂ ಟೀಕೆ ಮಾಡಲಾಯಿತು. ಇದನ್ನು ಲೆಕ್ಕಿಸದೇ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಜನ ಆಶೀರ್ವಾದ ಮಾಡಿದ್ದಾರೆ. ಸೋರಿಕೆಯನ್ನು ತಪ್ಪಿಸಿ ಆರ್ಥಿಕ ಸ್ಥಿತಿ ಉತ್ತಮ ಪಡಿಸುತ್ತೇವೆ ಎಂದು ನುಡಿದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ವಹಿಸಿದ್ದರು.  ಶ್ರೀ ಚಿದಾನಂದ ಸ್ವಾಮೀಜಿ, ಶಾಸಕರಾದ ತೋಂಟ ದಾರ್ಯ, ಪ್ರೊ.ಕೆ. ಆರ್. ಮಲ್ಲಿ ಕಾರ್ಜುನಪ್ಪ ಹಾಜರಿದ್ದರು.ಮಠದ ಮುಂಭಾಗದಲ್ಲಿ ೩ ದಿನ ನಡೆಯುವ ರಜತಮಹೋತ್ಸವ ಅಂಗವಾಗಿ ವಿವಿಧ ಕಾರ‍್ಯಕ್ರಮಗಳು ಆಯೋಜನೆಗೊಂಡಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ