ನಕಲಿ ಔಷಧ ಪಿಡುಗು ತಡೆಗೆ ಕಲಾಂ ಕರೆ

ವಿಕ ಸುದ್ದಿಲೋಕ ಮೈಸೂರು
ದೇಶದಲ್ಲಿ ನಕಲಿ ಔಷಧ ಹಾವಳಿ ಹೆಚ್ಚಿದ್ದು,ಅಕ್ರಮ ತಡೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಕರೆ ನೀಡಿದ್ದಾರೆ.
ಜೆಎಸ್‌ಎಸ್ ವಿಶ್ವವಿದ್ಯಾನಿಲಯ ಮಂಗಳವಾರ ಆಯೋಜಿಸಿದ್ದ  ಪ್ರಥಮ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ದೇಶದಲ್ಲಿ ಮಾರಾಟವಾಗುತ್ತಿರುವ  ಶೇ.೪೦ ರಷ್ಟು  ಔಷಧಗಳ ಗುಣಮಟ್ಟ, ನೈಜತೆಯ ಬಗ್ಗೆ ಅನುಮಾನಗಳಿವೆ. ತತ್ವರಹಿತ ಜನರು ನಕಲಿ ಔಷಧಗಳನ್ನು ವಾಮಮಾರ್ಗದಲ್ಲಿ ಪೂರೈಸುವ ಕಳ್ಳದಂಧೆ ನಡೆಸಿದ್ದಾರೆ ಎಂದು ಆಕ್ಷೇಪಿಸಿದರು.
ತಡೆ ಪ್ರತಿಜ್ಞೆ: ಔಷಧ, ಸೌಂದರ್ಯವರ್ಧಕ ಕಾಯಿದೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮರ್ಥವಾಗಿ ಜಾರಿಗೊಳಿಸಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ಮಾರಾಟಗಾರರೂ ಆಗಾಗ  ಔಷಧಗಳ ಮೂಲವನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಅಕ್ರಮ ತಡೆ ರೀತಿ ನೀತಿಗಳ ಕುರಿತು ಫಾರ್ಮಸಿ ವಿದ್ಯಾರ್ಥಿಗಳಿಗೆ ಅರಿವು ಮಾಡಿಸುವಂತ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಸಲಹೆ ನೀಡಿದರು. ‘ನಕಲಿ ಔಷಧ ಹಾವಳಿ ತಡೆಯಲು ಪ್ರಯತ್ನಿಸುತ್ತೇನೆ ’ ಎಂದು ನೂತನ ಪದವೀಧರರಿಂದ ಪ್ರತಿಜ್ಞೆಯನ್ನೂ ಮಾಡಿಸಿದರು.
ಭಾರತ ನಾಯಕನಾಗಲಿ: ಜಗತ್ತಿನ ಔಷಧ ಉದ್ಯಮದ ಒಟ್ಟು  ವಹಿವಾಟು ೭೭೩ ಬಿಲಿಯನ್ ಡಾಲರ್. ಇದರಲ್ಲಿ ಭಾರತದ ಪಾಲು ೧೭ ಬಿಲಿಯನ್ ಡಾಲರ್ ಮಾತ್ರ. ೨೦೨೦ ರ ವೇಳೆಗೆ ೨೫ ಬಿಲಿಯನ್ ಯುಎಸ್ ಡಾಲರ್‌ಗೆ ಏರಿಸುವ ಗುರಿ ಇದೆ. ಈ ಪೈಕಿ ಶೇ. ೬೦ರಷ್ಟು ರಪ್ತು ಸಂಬಂಧಿ. ಈಗಲೂ, ಅಮೆರಿಕ ಉಪಯೋಗಿಸುವ ಸಸ್ಯಜನ್ಯ ಔಷಧದ ಶೇ.೪೦ ಭಾಗ ಭಾರತ ಮೂಲದ್ದು ಎಂದು ವಿವರಿಸಿದರು.
ಹತ್ತು ವರ್ಷದಲ್ಲಿ ದೇಶದ  ಔಷಧ ಉದ್ಯಮದ ವಹಿವಾಟನ್ನು ನೂರು ಬಿಲಿಯನ್ ಡಾಲರ್‌ಗೆ ಏರಿಸಬೇಕು. ಪ್ರಪಂಚದ ಶೇ.೨೦ರಷ್ಟು ಉತ್ಪಾದನೆ  ದೇಶದಲ್ಲಾಗುವಂತೆ ಗುರಿ ನಿಗದಿಪಡಿಸಬೇಕು.ಆ ಮೂಲಕ ಔಷಧ ಕ್ಷೇತ್ರದಲ್ಲಿ ಭಾರತ ನಾಯಕನಾಗಬೇಕು ಎಂದು ಆಶಿಸಿದರು. ಅಂಥ ಸಾಮರ್ಥ್ಯ ದೇಶಕ್ಕಿದೆ. ಕ್ಷೇತ್ರದಲ್ಲಿ ತೊಡಗಿಸಿಕೊಂಡ ಎಲ್ಲರೂ ಗುರಿ ಸಾಧನೆಗೆ  ದುಡಿಯಬೇಕು. ಅಡ್ಡ ಪರಿಣಾಮ ಬೀರದ ಔಷಧ ತಯಾರಿಕೆಯತ್ತಲೂ ಗಂಭೀರ  ಚಿಂತನೆ ಅಗತ್ಯ ಎಂದು ಕಿವಿಮಾತು ಹೇಳಿದರು.
ಫಾರ್ಮಸಿ ವಿಷನ್: ಕಲಾಂ ಅವರ ‘ಫಾರ್ಮಸಿ ವಿಷನ್ -೨೦೨೦’ರ  ಸಲಹೆ ಸೂಚನೆಗಳ ಮುಖ್ಯಾಂಶ. ಎಚ್‌ಐವಿ, ಮಲೇರಿಯಾ, ಕ್ಯಾನ್ಸರ್‌ನಂತ ಕಾಯಿಲೆಗಳಿಗೆ ಕಡಿಮೆ ವೆಚ್ಚದ, ಗುಣಮಟ್ಟದ ಲಸಿಕೆ ತಯಾರಿಸಬೇಕು. ೪೭ ಬಿಲಿಯನ್ ಬೆಲೆಯ ೫೦ಕ್ಕೂ ಹೆಚ್ಚು ಜನಪರಿಚಿತ ಔಷಧಗಳು ೩ರಿಂದ ೫ ವರ್ಷಗಳಲ್ಲಿ ಪೇಟೆಂಟ್ ಕಳೆದಿದ್ದು, ಹೊಸ ಔಷಧಗಳ ಮೂಲಕ ಮಾರುಕಟ್ಟೆ  ಪ್ರವೇಶಿಸ ಬಹುದಾದ ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ದೇಶದಲ್ಲಿನ ಸಾಂಪ್ರದಾಯಿಕ  ಔಷಧ ಪದ್ಧತಿ, ಗಿಡಮೂಲಿಕೆಗಳನ್ನು ಬಳಸಿ ಜಗತ್ತಿನ ಕಾಯಿಲೆಗಳಿಗೆ ಔಷಧ ಉತ್ಪಾದಿಸಲು ತೊಡಗಿಸಿಕೊಳ್ಳಬೇಕು. ಮೂಲ ಪರಿಕರಗಳನ್ನು ಬಳಸಿಕೊಂಡು ಅಧಿಕೃತ  ಸಂಶೋಧನೆ ಗಳನ್ನು ನಡೆಸುವ ಮೂಲಕ ‘ನಾಯಕತ್ವ’ ಸಾಧಿಸಬೇಕು.
ಉಪದೇಶ: ಘಟಿಕೋತ್ಸವದಲ್ಲಿ ಪದವಿ ಪಡೆದ ಎಲ್ಲರೂ ‘ಎಂ.ಫಾರ್ಮ’ ವಿದ್ಯಾರ್ಥಿಗಳಾಗಿದ್ದರಿಂದ, ಔಷಧ ಉದ್ಯಮ ಮತ್ತು ವೈದ್ಯ ಕ್ಷೇತ್ರದತ್ತಲೇ ತಮ್ಮ ಭಾಷಣವನ್ನು ಕೇಂದ್ರೀಕರಿಸಿದ ಕಲಾಂ, ಜನರು ಬದುಕು,ಆರೋಗ್ಯವನ್ನು ನಿಮ್ಮ ನಂಬಿಕೆಗೆ ಒಪ್ಪಿಸುತ್ತಾರೆ. ಅವರ ಹಿತ ಕಾಯ್ದುಕೊಳ್ಳಲು ಶ್ರಮಿಸಿ. ಒಳ್ಳೆಯ ಆರೋಗ್ಯ ಸೇವೆ ನೀಡುವುದೇ ನಿಮ್ಮ ಆದ್ಯತೆಯಾಗಲಿ ಎಂದು ಕರೆ ನೀಡಿದರು.
ಇಲ್ಲದವರಿಗೆ ಸ್ಪಂದಿಸಿ: ಆಂಧ್ರಪ್ರದೇಶದ ಭೀಮಾವರಂನ ಡಾ.ಸೋಮರಾಜು, ಬಿಳಿಗಿರಿರಂಗನಬೆಟ್ಟದ ವಿವೇಕಾ ನಂದ ಗಿರಿಜನ ಕಲ್ಯಾಣ ಕೇಂದ್ರದ ಡಾ.ಸುದರ್ಶನ್, ಬೆಂಗಳೂರು ಥ್ರೊಂಬೊಸಿಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ಡಾ.ವಿ.ವಿ.ಕಕ್ಕೇರ್, ಕಠ್ಮಂಡುವಿನ ಮುಖ್ಯ ಧರ್ಮಗುರು ಮತ್ತು ವೈದ್ಯ ಸಂಶೋಧಕ  ಚೊಯ್ಕಿ ನೈಯ್ಮ ರಿಂಪೋಂಚಿ ಅವರು ಕಾರ‍್ಯಕ್ಷೇತ್ರದಲ್ಲಿ ಸಾಧಿಸಿದ ಯಶೋಗಾಥೆಗಳನ್ನು ಹೃದಯಂಗಮವಾಗಿ ವಿವರಿಸಿದ ಕಲಾಂ, ನೀವೂ ಅವರಂತೆಯೇ ಆಗಿ.ಗ್ರಾಮೀಣ ಮತ್ತು ಗಿರಿಜನರ ಸೇವೆಗೆ ಕಂಕಣಬದ್ಧರಾಗಿ,‘ಇಲ್ಲದವರ ’ ನೋವಿಗೆ ಸದಾ ಸ್ಪಂದಿಸಿ ಎಂದು ಸಲಹೆ ನೀಡಿದರು.
ನಿಮ್ಮ ಬುದ್ಧಿ ನಿವಾರಿಸಲಿ ನೋವು: ಬುದ್ಧಿವಂತಿಕೆ ಇನ್ನೊಬ್ಬರಿಗೆ ನೋವು ನೀಡಬಾರದು ಎನ್ನುವುದು ಅವರ ಮಾತಿನ  ಪ್ರಧಾನ ಆಶಯವಾಗಿತ್ತು. ‘ನನ್ನ ಬು ನಿವಾರಿಸಲಿ ನೋವು’  ಎಂಬ ವಾಕ್ಯದೊಂದಿಗೆ ಭಾಷಣ ಆರಂಭಿಸಿದ ಅವರು,ಅದೇ ಆಶಯದೊಂದಿಗೆ ಮುಗಿಸಿದರು.
‘ಸಮಾಜ ಯಾವ ಕಾರಣಕ್ಕಾಗಿ ನಿಮ್ಮನ್ನು  ನೆನಪಿಸಿ ಕೊಳ್ಳಲು ಬಯಸುತ್ತೀರಿ’ ಎಂದು ಪ್ರಶ್ನಿಸಿದ ಅವರು, ನಿಮ್ಮ ಗುರಿ ಇತಿಹಾಸ ನಿರ್ಮಿಸಬಲ್ಲದ್ದಾಗಬಹುದು. ಆದ್ದರಿಂದ, ಉತ್ತಮ ಗುರಿ ಸಾಧನೆಗೆ ನಿರಂತರವಾಗಿ ಶ್ರಮಿಸಿ.ಉದಾತ್ತ ಮನೋಭಾವ, ಮೌಲ್ಯಾಧಾರಿತ ಸೇವೆ, ಸಹಿಷ್ಣುತೆ, ನಿರಂತರತೆ, ಜ್ಞಾನ ವರ್ಧನೆ ಮತ್ತಿತರ ಗುಣಗಳು ವೃತ್ತಿಗೆ ಮಾನವೀಯ ಅಂತಃಕರಣದ ಸ್ಪರ್ಶ ನೀಡಲು ನೆರವಾಗುತ್ತವೆ  ಎಂದು ಹೊಸ ಪದವೀಧರರನ್ನು ಹುರಿದುಂಬಿಸಿದರು.
೧೦ಮಂದಿಗೆ ಚಿನ್ನ: ವಿವಿ ಕುಲಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ, ೧೧೯ ಎಂ.ಫಾರ್ಮ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಪೈಕಿ ೬೫ ಮಂದಿ ಖುದ್ದು ಹಾಜರಿದ್ದು ಪ್ರತಿಜ್ಞೆ ಸ್ವೀಕರಿಸಿದರು.ಉನ್ನತ ಸಾಧನೆ ಮಾಡಿದ ೧೦ಮಂದಿಗೆ ಚಿನ್ನದ ಪದಕ,ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಸಮ ಕುಲಾಧಿಪತಿ  ಡಾ.ಬಿ.ಎನ್. ಬೆಟ್ಕೆರೂರ್, ಕುಲಸಚಿವ ಡಾ.ಮೃತ್ಯುಂಜಯ ಪಿ.ಕುಳೇನೂರ್, ಪರೀಕ್ಷಾಂಗ ಕುಲಸಚಿವ ಡಾ.ಆರ್. ವಿಜಯಸಿಂಹ ಮತ್ತಿತರರು ಭಾಗವಹಿಸಿದ್ದರು. ಕುಲಪತಿ ಡಾ.ಬಿ.ಸುರೇಶ್ ಸ್ವಾಗತಿಸಿ,ವರದಿ ಮಂಡಿಸಿದರು.

‘ಬಾವಲಿ’ಗಳ ಬದುಕಿಗೆ ಕುತ್ತಾದ ಅರಣ್ಯ ಇಲಾಖೆ

ಪಿ.ಓಂಕಾರ್ ಮೈಸೂರು
ಸಾವಿರಾರು ಬಾವಲಿಗಳು ನೆಲೆ ತಪ್ಪಿವೆ. ನೂರಾರು ಮರಿಗಳು ಕಣ್ಣು ಬಿಡುವ ಮೊದಲೇ, ಅಮ್ಮನ ಮಡಿಲಲ್ಲೇ ಪ್ರಾಣ ಬಿಟ್ಟಿವೆ. ಹತ್ತಾರು ವರ್ಷಗಳಿಂದ ಬದುಕಿಗೆ ರಕ್ಷೆಯಾಗಿದ್ದ ಕಬಿನಿ ಹಿನ್ನೀರು ಪ್ರದೇಶವೇ ಅಮಾಯಕ ಬಾವಲಿಗಳ ಬದುಕಿಗೆ ಮುಳುವಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರು ಪ್ರದೇಶದ ೫ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಇಲಾಖೆ ಬೆಳೆಸಿ, ಈಗ ಕಟಾವು ಮಾಡಿಸಿರುವ ಸರ್ವೇ (ಗಾಳಿ ಮರ) ತೋಪಿನಲ್ಲಿ ‘ಸಾವಿನ ವಾಸನೆ’ ಮಡುಗಟ್ಟಿದೆ ಯಾದರೂ, ಅರಣ್ಯಾಧಿಕಾರಿಗಳ ಮೂಗಿಗೆ ಬಡಿದಿಲ್ಲ. ಬಡಿದರೂ ಬಾವಲಿಗಳ ಸಾವು ಮುಖ್ಯ ಎನಿಸಿಲ್ಲ !
೩೦ ವರ್ಷದ ಹಿಂದೆ: ಕಬಿನಿ ಜಲಾಶಯ ನಿರ್ಮಿಸಲು ಈ ಪ್ರದೇಶದಲ್ಲಿ ರೈತರ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ೧೯೭೪ರಲ್ಲಿ ಕಾಮಗಾರಿ ಮುಗಿದು, ಹಿನ್ನೀರಿನಿಂದ ಆಚೆಗೂ ನೂರಾರು ಎಕರೆ ಭೂಮಿ ಉಳಿಯಿತು. ಇಲ್ಲಿ ಉಳುಮೆ ಮಾಡಿದರೆ ಜಲಾಶಯಕ್ಕೆ ‘ಹೂಳು’ ಹರಿಯಬಹುದು ಎನ್ನುವ ಕಾರಣಕ್ಕೆ ರೈತರಿಗೆ ಹಿಂತಿರುಗಿಸಲಿಲ್ಲ.
ಬಾವಲಿ ಕಾಡು: ಹೀಗೆ ಉಳಿದ ಭೂಮಿಯಲ್ಲಿ ೧೯೮೨ ರಲ್ಲಿ ಅರಣ್ಯ ಬೆಳೆಸಲೆಂದು ನೀರಾವರಿ ಇಲಾಖೆ ಅರಣ್ಯ ಇಲಾಖೆಗೆ ವಹಿಸಿತು. ಇಲಾಖೆ ಸರ್ವೇ, ನೀಲಗಿರಿ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಟ್ಟಿದ್ದು, ಅವೆಲ್ಲ ಕಾಡಿನ ಸ್ವರೂಪದಲ್ಲಿ ಬೆಳೆದು ನಿಂತಿತ್ತು. ಜಲಾಶಯ ಸಮೀಪದ ಹಿನ್ನೀರು ಪ್ರದೇಶದ ಸರ್ವೇ ತೋಪಿನಲ್ಲಿ ಸಾವಿರಾರು ಬಾವಲಿ ಗಳು ಆಶ್ರಯ ಪಡೆದಿದ್ದವು. ಇದೇ ಕಾರಣಕ್ಕೆ ಈ ಪ್ರದೇಶವನ್ನು ಸ್ಥಳೀಯರು ‘ಬಾವಲಿ ಕಾಡು’ ಎಂದೇ ಕರೆಯುತ್ತಿದ್ದರು. ಒಮ್ಮೆಗೆ ಎಲ್ಲವೂ ಗರಿಬಿಚ್ಚಿ ಹಾರಿದರೆ ‘ಮೋಡಕವಿದ ವಾತಾವರಣ’ ನಿರ್ಮಾಣ ವಾಗುತ್ತಿತ್ತು ಎನ್ನುವುದು ಗ್ರಾಮಸ್ಥರ ಹೇಳಿಕೆ.
ವರಮಾನದ ಮೇಲೆ ಕಣ್ಣು: ಬೆಳೆದು ನಿಂತ ಈ ಮರಗಳನ್ನು ಕಡಿದು, ಹರಾಜಿಗಿಟ್ಟರೆ  ಬರಬಹುದಾದ ವರಮಾನದ ಮೇಲಷ್ಟೇ ಕಣ್ಣಿಟ್ಟ ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಎಫ್‌ಐಸಿ)ಕಟಾವು ಹೊಣೆ ವಹಿಸಿತು. ನಂತರ, ನಿಯೋಜಿತ ಕಾರ್ಮಿಕರು ಯಾಂತ್ರಿಕ ಗರಗಸಗಳಿಂದ ಕತ್ತರಿಸಿ ಲಾರಿಗಳಿಗೆ ತುಂಬಿ ಸಾಗಿಸಿದರು.
ಮನುಷ್ಯ ಯಂತ್ರಗಳು: ಇಂಥ ಮರಗಳನ್ನು ನಿಗದಿತ ಸಮಯ ಮುಗಿದ ನಂತರ ಕಟಾವು ಮಾಡಿಸಿ ಮಾರು ವುದು ಅಕ್ರಮವೇನಲ್ಲ. ಆದರೆ ಕಡಿಯುವ ಮುನ್ನ ಅಲ್ಲಿದ್ದ ಬಾವಲಿಗಳ ಆವಾಸ ಕ್ರಮವನ್ನು ಇಲಾಖೆ ಅರಿಯಲಿಲ್ಲ. ಹಾಗಾಗಿ  ಸಾವಿರಾರು ಬಾವಲಿಗಳ  ಆವಾಸ ಮತ್ತು ಜೀವಕ್ಕೆ ಆಪತ್ತು ತಂದೊಡ್ಡಿಯೂ ‘ಸಾಮೂಹಿಕ ಹತ್ಯೆ’ಯ ಸುಳಿವೇ ಇಲ್ಲದಂತಿದೆ. ಕಡಿ ಯುವ ‘ಕಾಮಗಾರಿ’ಯಲ್ಲಿ ತೊಡಗಿದ ಮನುಷ್ಯರೂ ಯಂತ್ರಗಳಂತಾಗಿದ್ದ ರಿಂದ, ಮರಗಳಿಗೆ ಜೋತು ಬಿದ್ದ ಬಾವಲಿಗಳು, ಅವುಗಳ ಬಿಸಿ ಅಪ್ಪುಗೆಯಲ್ಲಿದ್ದ ಕಣ್ಣು ಬಿಡದ ಮರಿಗಳು ಸತ್ತು ಬೀಳುತ್ತಿದ್ದುದನ್ನು ಗಮನಿಸಲಿಲ್ಲ ಅಥವಾ ಮನಸ್ಸಿನ ಕಣ್ಣು ಕುರುಡಾಗಿ ದ್ದರಿಂದ ಕಂಡೂ ಕಾಣಿಸದಂತಿದ್ದರು.
ಬಾವಲಿ ವಿಶೇಷ: ಬಾವಲಿಗಳು ಮರಿಹಾಕುವುದು ವರ್ಷಕ್ಕೊಮ್ಮೆ ಮೇ, ಜೂನ್ ತಿಂಗಳಲ್ಲಿ. ಪೋಷಿಸಲು ಗೂಡನ್ನು ಕಟ್ಟುವುದಿಲ್ಲ. ಮರಕ್ಕೆ ತಲೆ ಕೆಳಗಾಗಿ ಜೋತು ಬಿದ್ದ ಅಮ್ಮನ ತೆಕ್ಕೆಯಲ್ಲೇ ಮರಿಗಳು ಬೆಳೆಯುತ್ತವೆ. ತಾಯಿ ಬಾವಲಿ ರೆಕ್ಕೆಗಳನ್ನು ಬುಟ್ಟಿಯಂತೆ ಮಾಡಿ ಕರುಳ ಕುಡಿಗಳನ್ನು ರಕ್ಷಿಸುತ್ತದೆ. ಹುಟ್ಟಿದ ೯ ದಿನ ಮರಿ ಕಣ್ಣು ಬಿಡು ವುದಿಲ್ಲ. ತಿಂಗಳವರೆಗೆ ಹಾರುವುದೂ ಸಾಧ್ಯವಿಲ್ಲ. ಅಷ್ಟು ಕಾಲ ತಾಯಿ ಮೊಲೆ ಹಾಲೇ ಅವುಗಳಿಗೆ ಆಹಾರ.
ಸೂಕ್ಷ್ಮಗಳ ಅರಿವಿಲ್ಲ: ಪ್ರಾಣಿ ಲೋಕದ ಇಂಥ ಸೂಕ್ಷ್ಮಗಳು ಮರ ಕಡಿಯುವ ವರಿಗೆ ಗೊತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳೂ ಅವರಂತೆಯೇ ಆಗಿದ್ದು ಬಾವಲಿಗಳ ಪಾಲಿನ ದುರದೃಷ್ಟ. ಇಲಾಖೆ ‘ಬಾವಲಿ ಕಾಡಿನ’ ಸಂಹಾರಕ್ಕೆ ‘ಸುಪಾರಿ’ ಕೊಟ್ಟಿದ್ದು, ನಿಯೋಜಿತ ಕಾರ್ಮಿಕರು ಗರಗಸ ಹಚ್ಚಿದ್ದು ‘ಸಂತಾನಾಭಿವೃದ್ಧಿ’ ಕಾಲದಲ್ಲೇ ಆಗಿದ್ದರಿಂದ ನೂರಾರು ಬಾವಲಿಗಳ ಸಂಹಾರ ನಡೆದಿದೆ ಎನ್ನುವುದು ಪರಿಸರ ಪ್ರಿಯರ ಆಕ್ಷೇಪ.

ಎಚ್ಚರ...! ನಿಮ್ಮ ಆರೋಗ್ಯಕ್ಕೆ ಮುನ್ನೆಚ್ಚರಿಕೆ ಅಗತ್ಯ

ಜೆ.ಶಿವಣ್ಣ, ಮೈಸೂರು
ಸದ್ದಿಲ್ಲದೇ ಕಾಲಿಡುತ್ತಿವೆ ಸಾಂಕ್ರಾಮಿಕ ಕಾಯಿಲೆಗಳು. ನಗರದ ಹಲವೆಡೆ ಈಗಾಗಲೇ ತಮ್ಮ ಇರುವಿಕೆಯನ್ನು ಪ್ರಚುರಪಡಿಸುತ್ತಿವೆ.
ಕುವೆಂಪುನಗರ ಸೇರಿದಂತೆ ವಿವಿಧೆಡೆ ವೈರಾಣು ಜ್ವರ (ವೈರಲ್ ಫೀವರ್), ವಾಂತಿ ಭೇದಿ ದಾಂಗುಡಿ ಇಟ್ಟಿದ್ದು, ಮುಂಗಾರು ಅಡಿಯಿಡುತ್ತಿರುವ ಬೆನ್ನಲ್ಲೇ ತಮ್ಮ ಪ್ರತಾಪ ಪ್ರದರ್ಶಿಸಲಾರಂಭಿಸಿವೆ. ಈಗಾಗಲೇ ಅನೇಕರು ಹಾಸಿಗೆ ಹಿಡಿದಿದ್ದಾರೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ದೌಡಾಯಿಸಿದ್ದು, ಕಾಯಿಲೆ ಉಲ್ಭಣಿಸುತ್ತಿದೆ.
ಆಸ್ಪತ್ರೆಗಳಲ್ಲಿ ವೈದ್ಯರಿಂದ ಹಾಸಿಗೆ ಖಾಲಿ ಇಲ್ಲ ಎನ್ನುವ ಉತ್ತರದೊಂದಿಗೆ ಮನೆಯಲ್ಲೇ ವಿಶ್ರಮಿಸಲು ಸಲಹೆ ಸಿಗುತ್ತಿದೆ. ಮನೆಯಲ್ಲಿ ಒಬ್ಬರಿಗೆ ಜ್ವರ ಬಂದಿದ್ದೇ ತಡ ಕುಟುಂಬದ ಇತರರೂ ಜ್ವರ ಬಾಧೆಗೆ ಸಿಲುಕುತ್ತಿದ್ದಾರೆ. ಈಗ ಖಾಸಗಿ ಚಿಕಿತ್ಸಾ ಕೇಂದ್ರಗಳು, ಕ್ಲಿನಿಕ್‌ಗಳಲ್ಲಿ ಜನದಟ್ಟಣೆ. ಈಗಾಗಲೇ ಕುವೆಂಪುನಗರ, ರಾಮಕೃಷ್ಣನಗರ, ಜನತಾನಗರ, ಶಾರದಾದೇವಿ ನಗರ, ಜಯಲಕ್ಷ್ಮಿಪುರಂ, ಜಲಪುರಿ ಮೊದಲಾ ದೆಡೆ ವೈರಾಣು ಜ್ವರ ಪ್ರಕರಣಗಳು ದಾಖಲಾಗಿವೆ.
ಅಲ್ಲಲ್ಲಿ ಚಿಕೂನ್‌ಗುನ್ಯಾ, ಡೆಂಗೆ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಯಾವುವೂ ದೃಢಪಟ್ಟಿಲ್ಲ. ಕಾಯಿಲೆ ಉಲ್ಬಣಿಸಿದ ರೋಗಿಗಳು ಆಸ್ಪತ್ರೆಗಳ ಕದ ತಟ್ಟುತ್ತಿದ್ದು, ಚಿಕಿತ್ಸೆ ಲಭಿಸುವುದಾದರೂ ಹಾಸಿಗೆ ಸಿಗುತ್ತಿಲ್ಲ. ಕಳೆದ ವರ್ಷ ಡೆಂಗೆ, ಚಿಕ್ಯೂನ್‌ಗುನ್ಯಾ, ಹಂದಿ ಜ್ವರ ದಾಂಧಲೆ ನಡೆಸಿ ನಡುಕ ಹುಟ್ಟಿಸಿದ್ದಿನ್ನೂ ಮರೆತಿಲ್ಲ. ಪಾಲಿಕೆ, ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ವರ್ಷವೂ ಅದು ಮರುಕಳಿಸುವ ಆತಂಕ ಹೆಚ್ಚಾಗಿದೆ.
ಕಳೆದ ವರ್ಷದ ಮಾಹಿತಿ: ಮುಂಗಾರು ಪೂರ್ವ ಮತ್ತು ಬಳಿಕ ಸಾಂಕ್ರಾಮಿಕ ರೋಗ ಗಳು ಹೆಚ್ಚು. ೨೦೦೯ ನೇ ಸಾಲಿನಲ್ಲಿ ಜನವರಿ ಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ ದೃಢೀ ಕೃತ ಡೆಂಗೆ ಪ್ರಕರಣಗಳ ಸಂಖ್ಯೆ ೪೨. ಚಿಕೂನ್‌ಗುನ್ಯಾ - ೪೬, ಕರುಳು ಬೇನೆ- ೮೯೯, ಕಾಲರಾ- ೨೭ ಹಾಗೂ ಮಲೇರಿಯಾ ೪೧ ಪ್ರಕರಣ.
ಮನೆ ಮನೆ ತಪಾಸಣೆ: ನಗರಪಾಲಿಕೆ ಈಗಾಗಲೇ ರೋಗವಾಹಕವಾದ ಸೊಳ್ಳೆಗಳ ವಿರುದ್ಧ ಸಮರ ಸಾರಿದ್ದು, ನಿರ್ಮೂಲನೆಗೆ ಬಳಸಬಹುದಾದ ಎಲ್ಲಾ ವಿಧಾನಗಳನ್ನು ಕಾರ್ಯರೂಪಕ್ಕೆ ತರಲಿದೆ. ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಚಿಕೂನ್‌ಗುನ್ಯಾ, ಡೆಂಗೆ ಜ್ವರ ಶಂಕಿತ ಪ್ರದೇಶಗಳಲ್ಲಿ ಮನೆ ಮನೆ ತಪಾಸಣಾ ಕಾರ್ಯ ಆರಂಭವಾಗಿದೆ.
ನಗರದ ವಿವಿಧ ನರ್ಸಿಂಗ್ ಕಾಲೇಜುಗಳ ಸುಮಾರು ೩೦೬ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಆರೋಗ್ಯ ತಪಾಸಣೆ, ಕರಪತ್ರಗಳ ಮೂಲಕ ಆರೋಗ್ಯ ಜಾಗೃತಿ, ನೀರು ಸಂಗ್ರಹಾಗಾರಗಳ ಸ್ವಚ್ಛತೆ ಕೈಗೊಂಡಿದ್ದಾರೆ. ಜಯನಗರ, ಜನತಾನಗರ, ಕುವೆಂಪುನಗರ, ರಾಮಕೃಷ್ಣನಗರ, ಸರಸ್ವತಿಪುರಂ, ಉದಯಗಿರಿ ಮುಂತಾದೆಡೆ ಮನೆ ಮನೆ ತಪಾಸಣೆ ನಡೆಸಿ ಡೆಮಿಫೋಸ್ ದ್ರಾವಣವನ್ನು ಸೊಳ್ಳೆಗಳ ಲಾರ್ವಾಗಳನ್ನು ನಿರ್ಜೀವಗೊಳಿಸಲು ಸಿಂಪಡಿಸಲಾಗಿದೆ.
ಸಂಪರ್ಕ ಸಾಧನಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ನಿರ್ಧರಿಸಿರುವ ಪಾಲಿಕೆ ಎಸ್‌ಎಂಎಸ್ ಮೂಲಕ ಜನರಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲಿದೆ. ಆಕಾಶವಾಣಿ, ಎಫ್‌ಎಂ ರೇಡಿಯೋನಲ್ಲಿ ಪ್ರಚಾರ, ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಮಕ್ಕಳಿಗೆ ತಿಳಿವಳಿಕೆ ನೀಡುವ ಕಾರ್ಯವೂ ನಡೆದಿದೆ. ಜಿಲ್ಲಾ ಆರೋಗ್ಯ ಇಲಾಖೆಯೂ  ಮಲೇರಿಯಾ ಮಾಸಾಚರಣೆ ಆರಂಭಿಸಿದ್ದು, ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ನಿರಂತರ ಸಮೀಕ್ಷಾ ಕಾರ್ಯ ನಡೆದಿದೆ.
ಮೀನು ಅಸ್ತ್ರ: ಸೊಳ್ಳೆಗಳ ಆಶ್ರಯ ತಾಣವಾದ ಕೆರೆಗಳಲ್ಲಿ ಅವುಗಳ ಸಂಹಾರಕ್ಕೆ ಮೀನುಗಳನ್ನು ಪ್ರಯೋಗಿಸಲಾಗುತ್ತಿದೆ. ಮಲೇರಿಯಾ, ಡೆಂಗೆ ಮತ್ತು ಚಿಕೂನ್‌ಗುನ್ಯಾ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಲಾರ್ವಾ ತಿಂದು ಹಾಕುವ ಗ್ಯಾಂಬೂಸಿಯಾ ಮತ್ತು ಗಪ್ಪಿ ಮೀನಿನ ಮರಿಗಳನ್ನು ಮೀನುಗಾರಿಕೆ ಇಲಾಖೆ ಸಹಭಾಗಿತ್ವ ದಲ್ಲಿ ಪಾಲಿಕೆಯು ನಗರದ ಎಲ್ಲ ಕೆರೆಗಳಿಗೆ ಬಿಡುತ್ತಿದೆ.
ನೀರಿನ ತೊಟ್ಟಿಗಳು, ಕಾರಂಜಿ ಮತ್ತಿತರ ನೀರಿನ ಸ್ಥಳಗಳಲ್ಲಿ ಈ ಮೀನುಗಳನ್ನು ಬಿಡಬಹುದು. ಚಿಕೂನ್ ಗುನ್ಯಾ, ಡೆಂಗೆ ಮೊದಲಾದ ರೋಗಗಳನ್ನು ಹರಡುವ ಈಡಿಸ್ ಈಜಿಪ್ಟಸ್ ಜಾತಿಯ ಸೊಳ್ಳೆಗಳು ಸ್ವಚ್ಛ ನೀರಿನಲ್ಲೇ ಮೊಟ್ಟೆ ಹಾಕಿ ಮರಿ ಮಾಡುತ್ತವೆ.
ಈ ಹೊಸ ವಿಧಾನದ ಮೂಲಕ ನಿಯಂತ್ರಿಸಲಾಗುತ್ತಿದೆ. ಸಾರ್ವ ಜನಿಕರೂ ಕೈಜೋಡಿಸಿದರೆ ಮಾತ್ರ ಸಾಂಕ್ರಾಮಿಕ ರೋಗಗಳ ತಡೆ ಸಾಧ್ಯ ಎನ್ನುತ್ತಾರೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್.

ದೊಡ್ಡರಾಯಪೇಟೆ ಸಮಸ್ಯೆಗಳೂ ದೊಡ್ಡವೇ...

ವಿಕ ಸುದ್ದಿಲೋಕ ಚಾಮರಾಜನಗರ
ದೊಡ್ಡರಾಯಪೇಟೆ ಗ್ರಾಮದ ಹೊಸ ಬಡಾವಣೆ ಯಲ್ಲಿ ಸಮಸ್ಯೆಗಳೂ ‘ದೊಡ್ಡ’ಗಾತ್ರದಲ್ಲೇ  ಇವೆ. ಅನೈರ್ಮಲ್ಯ ಮನೆಗಳ ಮುಂದೆಯೇ ತಾಂಡವವಾಡುತ್ತಿದೆ. ಮೂಲ ಸೌಲಭ್ಯ ಮರೆಯಾಗಿದೆ.
ಈ ಬಡಾವಣೆ ಹೊಸದಾದರೂ ಇಲ್ಲಿ ಹೊಸತನವಿಲ್ಲ. ನಿವಾಸಿಗಳ ಗೋಳನ್ನು ಕೇಳೋರಿಲ್ಲ. ರಾತ್ರಿಯಾದರೆ ಬೆಳಕನ್ನು ನೀಡಲು ಇಲ್ಲಿ ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಚರಂಡಿ ವ್ಯವಸ್ಥೆ ಹದಗೆಟ್ಟಿರುವ ಪರಿಣಾಮ ಎಲ್ಲೆಂದರಲ್ಲಿ ಗಬ್ಬು ಸಾಮಾನ್ಯ.
ಗ್ರಾಮದಲ್ಲಿ ಏಳೆಂಟು ವರ್ಷಗಳ ಹಿಂದೆ  ಹೊಸ ಬಡಾವಣೆ ನಿರ್ಮಿಸಲಾಗಿದ್ದು, ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಇವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ಆಡಳಿತ ವರ್ಗ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ  ಇಲ್ಲಿನ ನಿವಾಸಿಗಳು  ಸಮಸ್ಯೆಗಳೊಡನೆಯೇ ಕಾಲ ದೂಡಬೇಕಾದ ಅನಿವಾರ್ಯತೆ.
ಬಡಾವಣೆಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಬಹುತೇಕ ಮಂದಿಗೆ ಬೇಸಾಯ ಹಾಗೂ ಕೂಲಿಯೇ ಆಧಾರ. ಇದು ಹೇಳಿ, ಕೇಳಿ ಹೊಸ  ಬಡಾವಣೆ. ಎಲ್ಲ ಸೌಲಭ್ಯಗಳು ಹೊಸದಾಗೇ ಆಗಬೇಕಿತ್ತು. ಆದರೆ ಏಳೆಂಟು ವರ್ಷ ಕಳೆದರೂ ಸೌಲಭ್ಯಗಳು ಇತ್ತ  ತಿರುಗಿ ನೋಡಿಲ್ಲ.
ರಸ್ತೆ ಎಂಬುದು ನೆಪಮಾತ್ರಕ್ಕಿದೆ. ಅದರ ಬದಿಯಲ್ಲೇ ಕೊಳಚೆ ನೀರು ಮಡುಗಟ್ಟಿ ನಿಂತಿದ್ದು, ಸಾಂಕ್ರಾಮಿಕ ರೋಗಗಳನ್ನು ಹರಡುವ ಕೇಂದ್ರವಾಗಿದೆ.
ಕಾವೇರಿ ಕೈ ಕೊಟ್ಟರೆ ದೇವರೇ ಗತಿ: ದೊಡ್ಡರಾಯ ಪೇಟೆ ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿದೆ. ಹೀಗಾಗಿ ನಗರಕ್ಕೆ ಸರಬರಾಜಾಗುವ ಕಾವೇರಿ ಪೈಪ್‌ಲೈನ್ ಮೂಲಕವೇ  ನೀರು ಕೊಂಡೊಯ್ಯಲಾಗಿದೆ. ಒಂದು ವೇಳೆ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದರೆ ಈ ಬಡಾವಣೆ ನಿವಾಸಿಗಳ ಪಾಡು ಹೇಳ ತೀರದು.
ಬಡಾವಣೆಯಲ್ಲೇ ೫ ಕೊಳವೆ ಬಾವಿಗಳಿದ್ದವು. ಆಗ ಕಾವೇರಿ ನೀರು ಬಾರದಿದ್ದರೂ ತೊಂದರೆ ಇರುತ್ತಿರಲಿಲ್ಲ. ಆದರೀಗ ಒಂದು ದಿನ ಕಾವೇರಿ ಕೈಕೊಟ್ಟರೆ ನಿವಾಸಿಗಳು ದೂರದ ಪಂಪ್‌ಸೆಟ್‌ಗಳಿಂದ ನೀರು ಹೂಡುವ ಸ್ಥಿತಿ ನಿರ್ಮಾಣವಾಗುತ್ತದೆ. ಏಕೆಂದರೆ  ೬ ತಿಂಗಳಿಂದ ಕೆಟ್ಟಿರುವ ಕೊಳವೆ ಬಾವಿಯ ಕೈ ಯಂತ್ರಗಳನ್ನು ಸರಿಪಡಿಸಿಲ್ಲ.
ದುರಸ್ತಿಗೆಂದು ಪೈಪ್, ಚೈನ್‌ಗಳನ್ನು ಬಿಚ್ಚಿ ಒಯ್ಯಲಾಗಿದೆ. ನಂತರ ಅವುಗಳನ್ನು ತಂದು ಜೋಡಿಸಿಲ್ಲ. ಪರಿಣಾಮ ಕೊಳವೆಯಲ್ಲಿ ನೀರಿದ್ದರೂ ಅದನ್ನು ಪಡೆಯಲಾಗುತ್ತಿಲ್ಲ.
ಬೀದಿ ದೀಪ ವ್ಯವಸ್ಥೆ ಇಲ್ಲ: ಇದು  ಹೆಸರಿಗೆ ಮಾತ್ರ ಹೊಸ ಬಡಾವಣೆ. ಸಮಸ್ಯೆಗಳು ಮಾತ್ರ ಹಳೆಯವೇ.  ರಾತ್ರಿ ಆಯಿತೆಂದರೆ  ಬಡಾವಣೆ ತುಂಬ ಅಂಧಕಾರ ನೆಲೆಸುತ್ತದೆ. ಬೀದಿ ದೀಪದ ವ್ಯವಸ್ಥೆ ಸರಿಯಿಲ್ಲದ್ದು ಇದಕ್ಕೆ ಕಾರಣ. ಗ್ರಾಮ ಪಂಚಾಯಿತಿಯವರು ಒಮ್ಮೆ ಬಲ್ಬ್  ಅಳವಡಿಸಿದರೆ ಮತ್ತೆ ಇತ್ತ ತಿರುಗಿ ನೋಡುವ ಸೌಜನ್ಯ ತೋರಿಲ್ಲ.
ಇದರಿಂದ ಕೆಟ್ಟ ಬಲ್ಬ್ ಅದೇ ಸ್ಥಿತಿಯಲ್ಲಿರುತ್ತವೆ. ನಿವಾಸಿಗಳು ಹೋಗಿ ಗಲಾಟೆ ಮಾಡದ ಹೊರತು ಹೊಸ ಬಲ್ಬ್ ಬರೋಲ್ಲ. ಬಡಾವಣೆ ಗ್ರಾಮದ ಹೊರ ವಲಯದಲ್ಲಿದೆ. ಹೀಗಾಗಿ ರಾತ್ರಿ ವೇಳೆ ಓಡಾಡಲು ಬೆಳಕು ಬೇಕೇ ಬೇಕು. ಆದರೆ  ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷ್ಯ ಪರಿಣಾಮ ರಾತ್ರಿ ವೇಳೆ ಭಯದಿಂದಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಾಲುವೆಯಂತೆ ಹರಿಯುವ ಕೊಳಚೆ: ಬಡಾವಣೆಯ ಅನತಿ ದೂರದಲ್ಲಿ ಕೊಳಚೆ ನೀರು ಕಾಲುವೆ ರೀತಿಯಲ್ಲಿ ಹರಿಯುತ್ತದೆ.  ಚಾ.ನಗರದ  ವಿವಿಧ ಬಡಾವಣೆಗಳ ಕೊಳಚೆ  ನೀರನ್ನು ಈ ಭಾಗಕ್ಕೆ ಬಿಡಲಾಗಿದೆ. ಪರಿಣಾಮ ರಾತ್ರಿ ವೇಳೆ ಗಬ್ಬು ನಾರುತ್ತದೆ.
ಇದರಿಂದ ಸೊಳ್ಳೆ ಕಾಟವೂ ಹೆಚ್ಚು. ಈ ನೀರನ್ನು ಬೇರೆಡೆಗೆ  ಬಿಡಬೇಕು ಎಂಬುದು ನಿವಾಸಿಗಳ ಒತ್ತಾಯ. ಜಿಲ್ಲಾ ಕೇಂದ್ರದಲ್ಲಿ ಒಳ ಚರಂಡಿ ವ್ಯವಸ್ಥೆ ಆಗುವವರೆಗೂ  ಇಲ್ಲಿ ಈ ಗೋಳು ತಪ್ಪಿದ್ದಲ್ಲ.
ಸುವರ್ಣ ಯೋಗ ಇಲ್ಲ: ಗ್ರಾಮದಲ್ಲಿ ಸಮಸ್ಯೆಗಳು ಹೆಚ್ಚು ಪ್ರಮಾಣದಲ್ಲಿರುವ ಕಾರಣ  ಸುವರ್ಣ ಗ್ರಾಮೋದಯ ವ್ಯಾಪ್ತಿಗೆ ಒಳಪಡಲಿದೆ ಎಂಬ ನಿರೀಕ್ಷೆ ಗ್ರಾಮಸ್ಥರದಾಗಿತ್ತು. ಆದರೆ ಅದನ್ನು ಗ್ರಾ.ಪಂ. ಕೇಂದ್ರ ಸ್ಥಾನವಾದ ಕೂಡ್ಲೂರಿಗೆ ನೀಡಲಾಯಿತು. ಮುಂದಿನ ಬಾರಿಯಾದರೂ ಗ್ರಾಮವನ್ನು ಸುವರ್ಣ ಗ್ರಾಮೋದಯ ಯೋಜನೆಗೆ ಒಳಪಡಿಸಬೇಕು. ಆ ಮೂಲಕ ಅಭಿವೃದ್ಧಿಗೆ  ಒತ್ತು ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹ.  ಸದ್ಯದಲ್ಲೇ ಗ್ರಾ.ಪಂ.ನಲ್ಲಿ ಹೊಸ ಆಡಳಿತ ಅಧಿಕಾರಕ್ಕೆ ಬರಲಿದ್ದು, ಇನ್ನಾದರೂ ಗ್ರಾಮದ ಹೊಸ ಬಡಾವಣೆ ಸಮಸ್ಯೆ ನೀಗಲಿ, ಗ್ರಾ.ಪಂ. ನ  ಹೊಸ  ಸದಸ್ಯರು ತಮ್ಮ ವ್ಯಾಪ್ತಿಯ ಸಮಸ್ಯೆ ಬಗೆಹರಿಸಲು ಶ್ರಮಿಸಲಿ ಎಂಬ ಒತ್ತಾಯ ನಿವಾಸಿಗಳದ್ದು.

ಹಿಪ್ಪುನೇರಳೆಗೆ ಪಪಾಯ ಹಿಟ್ಟು ತಿಗಣೆ ಪೀಡೆ

ವಿಶೇಷ ವರದಿ ಚಾಮರಾಜನಗರ
ಸ್ವಲ್ಪ ಚೇತರಿಕೆ ಹಾದಿಯಲ್ಲಿದ್ದ ರೇಷ್ಮೆ ಬೆಳೆಗಾರರಿಗೆ ಇದೀಗ ಮತ್ತೆ ಪೆಟ್ಟು ಬಿದ್ದಿದೆ. ಹಿಪ್ಪುನೇರಳೆ ಬೆಳೆಗೆ ಪಪಾಯ ಹಿಟ್ಟು ತಿಗಣೆ (ಪ್ಯಾರಾಕಾಕಸ್ ಮಾರ್ಜಿನೇಟಸ್)  ಎಂಬ  ಕೀಟ ಪೀಡೆ ಆವರಿಸಿಕೊಂಡಿದ್ದು, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಈ ಹಿಟ್ಟು ತಿಗಣೆ ಬಾಧೆ ಚಾ.ನಗರ ತಾಲೂಕಿನ ವಿವಿಧೆಡೆ ಆವರಿಸಿಕೊಂಡು ಹಿಪ್ಪು ನೇರಳೆ ಬೆಳೆಯುವ ರೈತರನ್ನು ಆತಂಕಕ್ಕೆ ಸಿಲುಕಿಸಿದೆ. ಈ ಕೀಟ ಪೀಡೆ ತಗುಲಿದ ಬೆಳೆಯನ್ನು ಕಟಾವು ಮಾಡುವುದೊಂದೇ ಮಾರ್ಗ. ಹೀಗಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ಚಾ.ನಗರ ತಾಲೂಕಿನ ಮಂಗಲ, ಅಂಕನಶೆಟ್ಟಿಪುರ, ವೆಂಕಟಯ್ಯಛತ್ರ, ಕಾಗಲವಾಡಿ, ಮೇಲಾಜಿಪುರ ಹಾಗೂ ತಾಳವಾಡಿ ಭಾಗದಲ್ಲಿ ಅಧಿಕವಾಗಿ ಕಂಡು ಬಂದಿದೆ. ಇಲ್ಲಿನ ಹಲವಾರು ಮಂದಿ ರೈತರು ಈಗಾಗಲೇ ಹಿಪ್ಪು ನೇರಳೆಯನ್ನು  ಅನಿವಾರ್ಯವಾಗಿ ಕಟಾವು ಮಾಡಿದ್ದಾರೆ.
ಚಾ.ನಗರ ದಶಕಗಳ ಹಿಂದೆ ರೇಷ್ಮೆನಾಡು ಎಂದೇ ಪ್ರಸಿದ್ಧಿ ಪಡೆದಿತ್ತು. ಆದರೆ ಮಾರುಕಟ್ಟೆಯಲ್ಲಿನ ದರ ಕುಸಿತ. ವಾಣಿಜ್ಯ ಬೆಳೆಗಳ ಆಕರ್ಷಣೆ  ಕಾರಣಕ್ಕಾಗಿ ರೈತರು ರೇಷ್ಮೆಯಿಂದ ವಿಮುಖರಾಗಿದ್ದರು. ಆದರೆ ಈಚೆಗೆ ರೇಷ್ಮೆಗೆ  ಉತ್ತಮ ದರ ಬರುವಂತಾದ ಕಾರಣ ರೈತರು ಮತ್ತೆ  ರೇಷ್ಮೆ ಕಡೆಗೆ ಮುಖ ಮಾಡಿದ್ದರು.
ಒಂದೂವರೆ ದಶಕದ ಹಿಂದೆ ಚಾ.ನಗರ ತಾಲೂಕುವೊಂದರಲ್ಲೇ ೧೬ ಸಾವಿರ ಹೆಕ್ಟೇರ್ ಹಿಪ್ಪು ನೇರಳೆ ಬೆಳೆ ಇತ್ತು. ಅದು ಕ್ರಮೇಣ ಐದೂವರೆ ಸಾವಿರ ಹೆಕ್ಟೇರ್‌ಗೆ  ಇಳಿದಿತ್ತು.  ಒಂದೂವರೆ ವರ್ಷದಿಂದೀಚೆಗೆ  ಹಿಪ್ಪು ನೇರಳೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿ ಸದ್ಯ ೬೪೮೭ ಹೆಕ್ಟೇರ್ ಬೆಳೆ ಇದೆ.
ಹೆಮ್ಮಾರಿಯಾಗಿ ಅಪ್ಪಳಿಸಿದೆ: ಇಂಥ ಸಂದರ್ಭದಲ್ಲಿ ಪಪಾಯ ಹಿಟ್ಟು ತಿಗಣೆ ಬಾಧೆ ಹೆಮ್ಮಾರಿಯಂತೆ  ಅಪ್ಪಳಿಸಿದೆ. ತಾಲೂಕಿನಲ್ಲಿರುವ  ಹಿಪ್ಪುನೇರಳೆ ತೋಟದ ಪೈಕಿ ಶೇ. ೨೫ರಷ್ಟಕ್ಕೆ  ಇದು ಹರಡಿದೆ. ಈಗ ನಿರ್ಲಕ್ಷ್ಯ ಮಾಡಿದರೆ ವ್ಯಾಪಕವಾಗಿ ಹರಡಲಿದೆ ಎಂದು  ಕೇಂದ್ರೀಯ  ರೇಷ್ಮೆ ಸಂಶೋಧನಾ ಪ್ರಾದೇಶಿಕ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಒಂದು ರೀತಿಯಲ್ಲಿ ಅಂಟು ಬಾಧೆಯಾಗಿದ್ದು, ಹಿಪ್ಪು ನೇರಳೆ ಸೇರಿದಂತೆ ಹತ್ತಿ, ಸೀಬೆ, ದಾಳಿಂಬೆ, ಸೂರ್ಯಕಾಂತಿ, ತೇಗ, ಅಲಸಂದೆ, ದಾಸವಾಳ ಗಿಡಕ್ಕೆ ಬೇಗ ತಗಲುತ್ತದೆ. ತಾಲೂಕಿನಲ್ಲಿ ಹಿಪ್ಪು ನೇರಳೆ  ಹೊರತು ಪಡಿಸಿ ಉಳಿದ ಬೆಳೆ ಅಷ್ಟಾಗಿ ಇಲ್ಲ. ಹೀಗಾಗಿ ಸದ್ಯ ತೊಂದರೆಗೆ ಒಳಗಾಗಿರುವವರು ರೇಷ್ಮೆ ಬೆಳೆಗಾರರು ಮಾತ್ರ.
ಏನಿದು ಬಾಧೆ, ಎಲ್ಲಿಂದ ಬಂತು: ಪಪಾಯ  ಹಿಟ್ಟು ತಿಗಣೆ  ಎಂಬುದು ಈ ಕೀಟ ಪೀಡೆಯ ಸ್ಥಳೀಯ ಹೆಸರು. ಇದನ್ನು ವೈಜ್ಞಾನಿಕವಾಗಿ  ‘ಪ್ಯಾರಾಕಾಕಸ್ ಮಾರ್ಜಿನೇಟಸ್’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದರ ಮೂಲಕ ಮೆಕ್ಸಿಕೋ. ಪರಂಗಿ ಬೆಳೆಯೊಂದಿಗೆ ಇದು ಭಾರತಕ್ಕೆ ಕಾಲಿಟ್ಟಿತ್ತು.
ಹೀಗಾಗಿ ಇದನ್ನು ಪಪಾಯ ಹಿಟ್ಟು ತಿಗಣೆ ಎಂದು ಕರೆಯಲಾಗುತ್ತದೆ. ಬಿಳಿ ಬಣ್ಣದ ಈ ಪೀಡೆ. ಅಂಟು ದ್ರವವನ್ನೊಳಗೊಂಡಿದೆ.   ಇದು ಹೆಚ್ಚಾಗಿ ಪರಂಗಿ ಗಿಡಕ್ಕೆ ಆಕರ್ಷಿತವಾಗುತ್ತದೆ. ಪರಂಗಿ ಗಿಡಗಳ ಹತ್ತಿರ ಹಿಪ್ಪು ನೇರಳೆ ತೋಟವಿದ್ದರೆ ತೊಂದರೆ ತಪ್ಪಿದ್ದಲ್ಲ.  ಇದು ಚಾ.ನಗರ ತಾಲೂಕಿಗೆ ದಾಳಿ ಇಡುವ ಮುನ್ನ ತಮಿಳುನಾಡಿನಲ್ಲಿ ಕಾಣಿಸಿಕೊಂಡಿತ್ತು. ಕೊಯಮತ್ತೂರು, ಈರೋಡ್ ಜಿಲ್ಲೆಗಳಲ್ಲಿ  ಹೆಕ್ಟೇರ್‌ಗಟ್ಟಲೆ ಹಿಪ್ಪು ನೇರಳೆ ತೋಟ ಈ ಬಾಧೆಯಿಂದ ಹಾನಿಗೀಡಾಗಿದೆ ಎನ್ನುತ್ತಾರೆ  ಕೇಂದ್ರದ ಅಧಿಕಾರಿಗಳು.

ಆತಂಕ ಬೇಕಿಲ್ಲ: ತಜ್ಞರ ಸಲಹೆ


ವಿಕ ಸುದ್ದಿಲೋಕ ಗೋಣಿಕೊಪ್ಪಲು
ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳಲ್ಲಿ ಉದ್ದ ಮೀಸೆ ಮಿಡತೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸ ಆತಂಕ ಹುಟ್ಟು ಹಾಕಿವೆ.
ಗೋಣಿಕೊಪ್ಪಲು, ಭದ್ರಗೋಳ, ದೇವರಪುರ, ತಿತಿಮತಿ, ಕುಟ್ಟ, ಚೂರಿಕಾಡು, ಶ್ರೀಮಂಗಲ, ನಾಲ್ಕೇರಿ, ಪಾಲಿಬೆಟ್ಟ ವ್ಯಾಪ್ತಿಯಲ್ಲಿ ಇವು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿವೆ. ರಾತ್ರಿ ವೇಳೆ ಮಿಡತೆಗಳು ಗುಂಪು- ಗುಂಪಾಗಿ ಬೆಳಕಿನೆಡೆಗೆ ಆಕರ್ಷಿತವಾಗಿ (ವಿದ್ಯುತ್ ದೀಪ) ಮನೆಗಳ ಬಳಿ, ಬೀದಿ ದೀಪಗಳ ಬಳಿ ಹಾರು ತ್ತಿದ್ದವು. ಕೆಲವೆಡೆ ದೀಪಗಳ ಕೆಳಗೆ ಮಿಡತೆಗಳ ರಾಶಿಯೇ ಬಿದ್ದಿತ್ತು. ಗಿಡಮರಗಳಲ್ಲಿ, ಎಲೆ, ಕಾಂಡದ ಮೇಲೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಇವು ಕಂಡು ಬಂದಿವೆ.
ಗೋಣಿಕೊಪ್ಪಲಿನ ಕಾಪ್ಸ್ ವಿದ್ಯಾಸಂಸ್ಥೆ  ಆವರಣ ದಲ್ಲಿ ಬಿದ್ದಿದ್ದ ಮಿಡತೆಗಳ ರಾಶಿಯ ಎತ್ತರವೇ ಸುಮಾರು ಅರ್ಧ  ಅಡಿಯಷ್ಟಿತ್ತು.
ಅವುಗಳಿಂದ ಬೆಳೆಗಳಿಗೆ ಹಾನಿಯಾಗಬಹುದೇ ಎನ್ನುವ ಆತಂಕ ಕೂಡ ಶುರುವಾಗಿದ್ದು, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಹಾಗೂ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ರೈತರು ದೂರವಾಣಿ ಕರೆ  ಮಾಡಿ ವಿಚಾರಿಸುತ್ತಿದ್ದಾರೆ. ಈ ರೀತಿ ಅಧಿಕ ಸಂಖ್ಯೆಯಲ್ಲಿ ಮಿಡತೆಗಳನ್ನು ನೋಡುತ್ತಿರುವುದು ಇದೇ ಮೊದಲು ಎನ್ನುತ್ತಾರೆ ಹಲವು ರೈತರು.
ಆತಂಕ ಬೇಡ: ಕೆಲ ಪ್ರಭೇದದ ಮಿಡತೆಗಳು ಅನುಕೂಲಕರ ಸನ್ನಿವೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಲಕ್ಷಗಟ್ಟಲೇ ಗುಂಪು ಗುಂಪಾಗಿ ಕಾಣಿಸಿಕೊಂಡಾಗ ಅವುಗಳನ್ನೇ ‘ಲೋಕಸ್ಟ್’ ಗಳೆಂದು ಕರೆಯಲಾಗುತ್ತದೆ. ಇವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಥವಾ ದೇಶದಿಂದ ದೇಶಕ್ಕೆ ಹೋಗುತ್ತಿರುತ್ತವೆ. ಮಾರ್ಗದಲ್ಲಿ ಬರುವ ಹೆಚ್ಚು  ಕಡಿಮೆ ಎಲ್ಲಾ ಗಿಡಮರ/ ಸಸ್ಯಗಳ ಎಲೆಗಳನ್ನು ತಿಂದು ಮುಗಿಸುತ್ತವೆ.
ಲೋಕಸ್ಟ್‌ಗಳ ದೇಹ ರಚನೆಯಲ್ಲೇ ಕೆಲ ವಿಶಿಷ್ಟ  ಮಾರ್ಪಾಡುಗಳಿರುತ್ತವೆ. ಕುಡಿಮೀಸೆಗಳು ಚಿಕ್ಕದು. ಹಾರಾಟಕ್ಕೆ ಅನುಕೂಲವಾಗುವಂತೆ ಎದೆಯ ಭಾಗದಲ್ಲಿ ಹಾಗೂ ಕಾಲಿನಲ್ಲಿ ಮಾರ್ಪಾಡುಗಳನ್ನು ಕಾಣಬಹುದು. ಕೊಡಗಿನಲ್ಲಿ ಇದೀಗ ಕಾಣಿಸಿಕೊಂಡ ಮಿಡತೆಗಳು ಲೋಕಸ್ಟ್‌ಗಳ ರೀತಿಯ ದೇಹ ರಚನೆ ಹೊಂದಿಲ್ಲ ಎನ್ನುತ್ತಾರೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿಷಯ ತಜ್ಞ  ನೆಲ್ಲೀರ ಎಂ. ಪೂಣಚ್ಚ.
ದಕ್ಷಿಣ ಕೊಡಗಿನಲ್ಲಿ ಕಾಣಿಸಿದ ಮಿಡತೆಗಳು ಉದ್ದ (ತಮ್ಮ ದೇಹಕ್ಕಿಂತಲೂ ಉದ್ದವಾದ)ಕುಡಿಮೀಸೆ ಹೊಂದಿವೆ. ಈ ಪ್ರಭೇದದ ಮಿಡತೆಗಳು ಇದುವರೆಗೂ ಬೆಳೆ ಹಾನಿಯುಂಟು ಮಾಡಿದ ವರದಿಯಿಲ್ಲ. ಇವೂ ಸಹ ಸಸ್ಯಾವಲಂಬಿಗಳೇ. ಆದರೂ ಕಾಡಿನಲ್ಲಿ ಬೆಳೆಯುವ ಕೆಲ ಹುಲ್ಲುಗಿಡಗಳನ್ನು ಮಾತ್ರ ತಿನ್ನುತ್ತವೆ. ಹಾಗಾಗಿ ಆತಂಕ ಬೇಡ ಎನ್ನುತ್ತಾರೆ ಅವರು.
ಇದ್ದಕ್ಕಿದ್ದಂತೆ ಇಷ್ಟೊಂದು ಸಂಖ್ಯೆಯಲ್ಲಿ ಮಿಡತೆ ಕಾಣಿಸಿಕೊಂಡ ಕಾರಣದ ಬಗ್ಗೆ ಅಧ್ಯಯನ ನಡೆಯ ಬೇಕಿದೆ. ಯಾವ ಸ್ಥಳದಲ್ಲಿ ಇವು ಉತ್ಪತ್ತಿಯಾಗುತ್ತಿವೆ, ಈ ವರ್ಷದಲ್ಲಿ ಇವುಗಳ ಹೆಚ್ಚಿನ ಉತ್ಪತ್ತಿಗೆ  ಕಾರಣವೇನು, ಈಗಾಗಲೇ ಪ್ರೌಢಾವಸ್ಥೆ  ತಲುಪಿರುವ ಇವು, ತಮ್ಮ ಬೆಳವಣಿಗೆಯ ಹಂತದಲ್ಲಿ ಗಿಡಮರಗಳಿಗೆ ಹೆಚ್ಚಿನ  ಹಾನಿಯನ್ನೇನಾದರೂ ಮಾಡಿರುವವೇ ಹೇಗೆ- ಇತ್ಯಾದಿ ಅಂಶಗಳು ಪತ್ತೆಯಾಗಬೇಕಿದೆ. ಸಾಮಾನ್ಯ ವಾಗಿ ದೀಪಕ್ಕೆ ಮಿಡತೆಗಳು ಆಕರ್ಷಿತವಾಗುವುದಿಲ್ಲ. ಆದರಿಲ್ಲಿ ಬೆಳಕಿಗೆ ಆಕರ್ಷಿತವಾಗುತ್ತಿರುವುದು ಹೇಗೆ ಎಂಬ ಅಂಶವೂ ತಿಳಿಯಬೇಕಿದೆ.

ಕಾಡು ಪ್ರಾಣಿ ಬೇಟೆ ‘ನಿರಾತಂಕ’

ವಿಕ ತಂಡ ಮೈಸೂರು
ರಾಜ್ಯದಲ್ಲಿ ವನ್ಯಜೀವಿ ಹತ್ಯೆ ಪ್ರಕರಣಗಳಿಗೆ ಕೊರತೆ ಯಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳು ತಪ್ಪಿತಸ್ಥರನ್ನು ಬಂಧಿಸಿದರೂ ಶಿಕ್ಷೆ ಆಗುತ್ತಿರುವ ಪ್ರಕರಣಗಳೆಷ್ಟು ?
ಇಂಥ ಪ್ರಶ್ನೆ ಇಟ್ಟುಕೊಂಡು ಹೊರಟರೆ ಸಿಗುವ ಉತ್ತರ ಶೂನ್ಯ.
ಲಭ್ಯ ಮಾಹಿತಿ ಪ್ರಕಾರ ಕಟ್ಟುನಿಟ್ಟಾಗಿ ಕಾನೂನು ಜಾರಿಯಾಗುವುದು ಮತ್ತು ಶಿಕ್ಷೆ ಸಿಗುವುದು ಕೇವಲ ಶೇ. ೧ರಷ್ಟು ಪ್ರಕರಣಗಳಲ್ಲಿ. ಉಳಿದದ್ದೆಲ್ಲಾ ಸೂಕ್ತ ಸಾಕ್ಷಿಯಿಲ್ಲ ಎಂಬ ‘ಸಕಾರಣ’ ದಲ್ಲಿ ಖುಲಾಸೆ. ವನ್ಯಜೀವಿ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಯಿತೇ ಇಲ್ಲವೇ ಎಂಬ ಬಗ್ಗೆ ಜನರಿರಲಿ ಸ್ವತಃ ಅರಣ್ಯ ಇಲಾಖೆಯೇ ತಲೆ ಕೆಡಿಸಿಕೊಳ್ಳದು. ಹಾಗಾದರೆ  ಎಡವುತ್ತಿರುವುದು ಎಲ್ಲಿ ? ಎನ್ನುವುದಕ್ಕೆ ಹಲವು ಆಯಾಮಗಳಿವೆ.
ಹುಲಿಯ ಕೊಳೆತ ದೇಹ ಪತ್ತೆ, ಆನೆ ಸಾವು, ದಂತ ಕಳವು, ಹುಲಿ ಸಾವು-ಉಗುರು ನಾಪತ್ತೆ. ಚಿರತ ಚರ್ಮ ಮಾರಾಟಕ್ಕೆ ಯತ್ನ; ಮೂವರ ಬಂಧನ-ಹೀಗೆ ಸುದ್ದಿಗಳಾಗಿ ಆರೋಪಿ ಗಳು, ವಶಪಡಿಸಿಕೊಂಡ ಮಾಲು ಹಾಗೂ ಅರಣ್ಯ ಸಿಬ್ಬಂದಿಯ ಫೋಟೋ ಸಹ ಪ್ರಕಟವಾಗುತ್ತದೆ. ಅಲ್ಲಿಗೆ ಪ್ರಕರಣ ಖತಂ.
ಹೀಗೊಂದು ಕಾರಣ: ಇಲಾಖೆಯ ಅಧಿಕಾರಿಗಳಲ್ಲಿ ಬಹುತೇಕರಿಗೆ ವನ್ಯಜೀವಿ ಅಪರಾಧ ಪ್ರಕರಣಗಳ ತನಿಖೆ ವಿಧಾನವೇ ಗೊತ್ತಿರದು.ಇದಕ್ಕೆ ಹೆಚ್ಚಿನ ಡಿಸಿಎಫ್‌ಗಳು ವಿಜ್ಞಾನ ವಿಷಯ ಹಿನ್ನೆಲೆಯವರು. ಕಾನೂನಿನ ಪರಿಜ್ಞಾನ ಹಾಗೂ ಕೇಂದ್ರ ವನ್ಯಜೀವಿಗಳ ಸಂರಕ್ಷಣಾ ಕಾಯಿದೆ ಬಗ್ಗೆಯೂ ಹೆಚ್ಚು ತಿಳಿದಿರದು. ಸ್ಥಳ ಮಹಜರು, ಡಿಎನ್‌ಎ ಪರೀಕ್ಷೆ, ಪ್ರಥಮ ವರ್ತಮಾನ ವರದಿ, ಆರೋಪ ಪಟ್ಟಿ, ಮಾಲುಗಳ ವಶ-ಒಟ್ಟೂ ತನಿಖೆಯ ಸಮರ್ಪಕ ವಿಧಾನ ತಿಳಿದಿರದು.
ಬೆರಳಿನ ತುದಿಯಲ್ಲಿ ಸುಳಿವು: ಬೇಟೆ ಪ್ರಕರಣಗಳಲ್ಲಿ  ಅದರ ಮಾಂಸದ ಚೂರನ್ನು ಡಿಎನ್‌ಎ ಪರೀಕ್ಷೆ ನಡೆಸಿ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಆದರೆ ಬಹುತೇಕ ಸಂದರ್ಭ ಇದು ಪಾಲನೆಯಾಗದು. ಸತ್ತ ಪ್ರಾಣಿಯ ಪರೀಕ್ಷೆ ನಡೆಸಿ ವೈದ್ಯರು ನೀಡುವ ವರದಿ ಮೇಲೆ ಇಂಥ ಪ್ರಾಣಿಯದ್ದೇ ಮಾಂಸ ಎಂದು ವಾದಿಸಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ಡಿಎನ್‌ಎ ಪರೀಕ್ಷೆ ನಡೆಸಿದರೆ ಸೂಕ್ತ. ಆರೋಪಿಯ ಬೆರಳಿನ ಉಗುರಿನ ತುದಿಯಲ್ಲಿ ಆ ಪ್ರಾಣಿಯ ರಕ್ತದ ಸೂಕ್ಷ್ಮಾಣು ಕಣಗಳಿರುತ್ತವೆ. ಉಗುರುಗಳ ಮುಂಭಾಗವನ್ನು ಕತ್ತರಿಸಿ ಅದನ್ನು ಡಿಎನ್‌ಎ ಪ್ರಯೋಗಾಲಯಕ್ಕೆ ಕಳುಹಿಸಿ ಆ ಮೂಲಕವೂಸಾಬೀತು ಪಡಿಸಬಹುದೆಂಬುದು ತಜ್ಞರ ಅಭಿಮತ.
ಆರಣ್ಯ ಕಾಯಿದೆಯಡಿ ವರದಿಯಾಗುವ ಪ್ರಕರಣಗಳಲ್ಲಿ ಬಲಿಯಾದ ಪ್ರಾಣಿ, ಅದರ ಚಹರೆ, ವಯಸ್ಸು, ಸ್ಥಳ, ಸಮಯ, ದಿನಾಂಕವೆಲ್ಲವೂ ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಚಾರ್ಜ್‌ಶೀಟ್ ಸಲ್ಲಿಕೆ ಇತ್ಯಾದಿ ಕ್ರಮ ಮಹತ್ವದ್ದು. ಇಂದಿಗೂ ಮೈಸೂರು, ಎಚ್.ಡಿ.ಕೋಟೆ , ನಂಜನಗೂಡು, ಗುಂಡ್ಲುಪೇಟೆ, ಕೊಡಗು, ಹಾಗೂ ಚಾಮರಾಜನಗರ, ಕೊಳ್ಳೇಗಾಲ ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣ ಗಳಿವೆ. ತನಿಖೆಯ ಗತಿಯೇ ತಿಳಿಯದು. ಪರಿಣಾಮ ೬೦ ದಿನ ಕಳೆದಾಗ ಆರೋಪಿಗೆ ಆರಾಮವಾಗಿ ಜಾಮೀನು ಸಿಗುತ್ತದೆ. ಆತ ಹೊರಬಂದು ಮತ್ತೊಂದು ಬೇಟೆಗೆ ಸಿದ್ಧತೆ ನಡೆಸುತ್ತಾನೆ.
ಸಿಬ್ಬಂದಿ ಕೊರತೆ: ಇಲಾಖೆಯಲ್ಲಿ ಗಾರ್ಡ್‌ಗಳಿಂದ ಹಿಡಿದು ವಿವಿಧ ಸ್ತರದ  ಒಂದು ಸಾವಿರ ಹುದ್ದೆಗಳು ಖಾಲಿ ಇವೆ. ಹೊಸ ನೇಮಕವಿರಲಿ, ಇರುವವರಿಗೇ ಸರಕಾರ ಉತ್ತಮವಾದ ಶೂ ಅಥವಾ ಗನ್ ಕೊಡಿಸದು.
ಒಟ್ಟಿನಲ್ಲಿ ಇರುವ ಮಂದಿಯೇ ಆನೆ ಹಾವಳಿ ತಡೆಗಟ್ಟಬೇಕು, ಫೈರ್‌ಲೈನ್ ಹಾಕಬೇಕು, ಆನೆ  ಓಡಿಸಬೇಕು, ಬೆಂಕಿ ಕಾಣಿಸಿಕೊಂಡರೆ ನಂದಿಸಬೇಕು, ಮತ್ತೊಂದೆಡೆ ಗುಂಡಿನ ಶಬ್ದ ಕೇಳಿದರೆ ಹಂತಕರ ಬೆನ್ನು ಹತ್ತಬೇಕು...ಹೀಗೆ ಜತೆಗೆ  ಮೇಲಧಿಕಾರಿಗಳ ಆಗು ಹೋಗುಗಳ ಬಗ್ಗೆ ಗಮನಹರಿಸಲೂ ಬೇಕು !

‘ಮೋಳೆ’ಗ್ರಾಮದಲ್ಲಿರೋದೆಲ್ಲಾ ಬರೀ ಗೋಳೇ

ವಿಕ ಸುದ್ದಿಲೋಕ ಕೊಳ್ಳೇಗಾಲ
ನಿಜಕ್ಕೂ ಈ ಗ್ರಾಮಸ್ಥರದ್ದು ತ್ರಿಶಂಕು ಸ್ಥಿತಿ. ನಗರಸಭೆ ವ್ಯಾಪ್ತಿಗೆ ಸೇರಿದ್ದರೂ ಈ ಗ್ರಾಮ ಅತ್ತ ಹಳ್ಳಿಯೂ ಅಲ್ಲ. ಇತ್ತ ನಗರ ಪ್ರದೇಶವೂ ಅಲ್ಲ. ಗ್ರಾಮದ ಎತ್ತ ನೋಡಿದರೂ ಅನೈರ್ಮಲ್ಯ. ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲ ಕೊಳಚೆ ನೀರು ಬಂದು ಸೇರುವುದು ಈ ಗ್ರಾಮವನ್ನೆ !
ಹೌದು, ಇದು ನಗರಸಭೆ ವ್ಯಾಪ್ತಿಯ ಮೋಳೆ ಗ್ರಾಮದ ದುಃಸ್ಥಿತಿ. ಸದಾ ಕೊಳಚೆಯಲ್ಲೇ ಇರುವ ಇಲ್ಲಿನ ಜನತೆಯ ಬದುಕು ಮೂರಾಬಟ್ಟೆ. ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಆಡಳಿತ ವೈಖರಿಗೆ ಈ ಗ್ರಾಮ  ಕೈಗನ್ನಡಿ. ಈ ಹಿಂದೆ ಪುರಸಭೆಯಾಗಿ ಮೇಲ್ದರ್ಜೆ ಗೇರಿಸುವ ಸಂದರ್ಭದಲ್ಲಿ ಈ ಮೋಳೆ ಗ್ರಾಮವನ್ನು ಪಟ್ಟಣದ ವ್ಯಾಪ್ತಿಗೆ ಸೇರಿಸಲಾಯಿತು. ಪುರಸಭೆ ಆಡಳಿತ ದಲ್ಲಂತೂ ಗ್ರಾಮಕ್ಕೆ ಕಾಯಕಲ್ಪ ದೊರೆಯ ಲಿಲ್ಲ. ನಗರಸಭೆಯಾದ ನಂತರವಾದರೂ ಮೋಳೆ ಅಭಿವೃದ್ಧಿ ಯತ್ತ ಮುಖ ಮಾಡುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. 
ಅಭಿವೃದ್ಧಿ ದೂರವೇ ದೂರ: ೧೯೯೩ರಲ್ಲಿ ಗ್ರಾಮದ ಬಡ ಜನರಿಗೆ ಆಶ್ರಯ ಯೋಜನೆಯಡಿ ೬೮ ನಿವೇಶನಗಳನ್ನು ನೀಡ ಲಾಗಿದೆ.  ಅದನ್ನು ಹೊರತು ಪಡಿಸಿ ದರೆ ಮೂಲ ಸೌಲಭ್ಯ ಎಂಬುದು ಮರೀಚಿಕೆ.  ಸುಮಾರು ೨೫೦೦ ರಷ್ಟು ಜನಸಂಖ್ಯೆ ಇರುವ  ಈ ಗ್ರಾಮದಲ್ಲಿರುವ ಎಲ್ಲರೂ ಹಿಂದುಳಿದ ವರ್ಗದ ಉಪ್ಪಾರರು.  ಜೀವನಾಧಾರಕ್ಕೆ ಹೂವು, ಸೊಪ್ಪು, ತರಕಾರಿ ಮಾರುವುದು, ಗಾರೆ ಕೆಲಸ ಇವರ ನಿತ್ಯ ಕಸುಬು. ಇಂಥ ಕಷ್ಟ ಜೀವಿಗಳು ವಾಸಿಸುವ ಈ ಪ್ರದೇಶಕ್ಕೆ ಕನಿಷ್ಠ ಮೂಲ ಸೌಲಭ್ಯ ವನ್ನು ಒದಗಿಸುವಲ್ಲಿ ನಗರಸಭೆ ವಿಫಲವಾಗಿದೆ.
ಗ್ರಾಮದಲ್ಲಿ ಕೊಳಚೆ ನೀರು ಬಂದು ನಿಲ್ಲುವುದರಿಂದ ಇಡೀ ವಾತಾವರಣ ಹದಗೆಡುತ್ತಿದೆ. ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ದುರ್ಗಂಧ ಸ್ವಾಗತಿಸುತ್ತದೆ. ಸಮಸ್ಯೆ ಇಷ್ಟೇ ಇದ್ದರೆ ತೊಂದರೆ ಇರುತ್ತಿರಲಿಲ್ಲ. ಇಲ್ಲಿ ಶೌಚಾಲಯದ ಉದ್ದೇಶಕ್ಕೆ ಗ್ರಾಮದ ಯಾವ ಮೂಲೆಯಲ್ಲೂ ಹಳ್ಳ ತೆಗೆಯುವಂತಿಲ್ಲ. ಒಂದು ವೇಳೆ ತೆಗೆದರೂ ಪ್ರಯೋಜನವಾಗುವುದಿಲ್ಲ. ಮೂರೂವರೆ ಅಡಿ ಉದ್ದಕ್ಕೆ ಹಳ್ಳ ತೆಗೆದರೆ ಕೊಳಚೆ ನೀರು ತುಂಬಿಕೊಳ್ಳುತ್ತದೆ. 
ಗ್ರಾಮದಲ್ಲಿ ಕೊಳಚೆ ನೀರು ಅಂತರ್ಜಲದ ರೀತಿಯಲ್ಲಿ ಆವರಿಸಿಕೊಳ್ಳುತ್ತಿದೆ. ಸುಮಾರು ೨೦ ವರ್ಷಗಳಿಂದ ಗ್ರಾಮದ ಸುತ್ತಲೂ ಕೊಳಚೆ ನೀರು ನಿಲ್ಲುತ್ತಿರುವುದರಿಂದ ಇಡೀ ಪ್ರದೇಶ ದಲ್ಲಿ ಆ ನೀರೇ ಆವರಿಸಿಕೊಂಡಿದೆ. ಇದು ಹೀಗೆ ಮುಂದು ವರಿದರೆ ಕೊಳವೆಬಾವಿ ಯಲ್ಲೂ ಕೊಳಚೆ ನೀರು ಬರುವುದರಲ್ಲಿ ಅನುಮಾನವಿಲ್ಲ.
ಇತ್ತ ಯಾರ ಲಕ್ಷ್ಯವೂ ಇಲ್ಲ:  ನಗರಸಭೆಯ ಇತರೆ ಬಡಾ ವಣೆಗಳಿಗೆ ಸಿಗುವ ಸೌಲಭ್ಯ ಇತ್ತ ಬರುತ್ತಿಲ್ಲ. ಈ ಬಡಾವಣೆ ಯನ್ನು ನಗರಸಭೆ ಹಾಗೂ ಇತರೆ ಜನಪ್ರತಿನಿಧಿಗಳು ಕಡೆಗಣಿಸಿ ದ್ದಾರೆ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ. ಕಾವೇರಿ ಕುಡಿ ಯುವ ನೀರಿನ ಪೂರೈಕೆ ಇದೆಯಾದರೂ ಸಮರ್ಪಕವಾಗಿಲ್ಲ. ಪೈಪ್‌ಲೈನ್ ಅವ್ಯವಸ್ಥೆಯಿಂದಾಗಿ ಮೋಳೆ ಗ್ರಾಮಸ್ಥರು ಕಾವೇರಿಯನ್ನು ಅಗತ್ಯಕ್ಕನುಸಾರ ಬಳಸಲು ಸಾಧ್ಯವಾಗುತ್ತಿಲ್ಲ.
ರಸ್ತೆಗಳು ಡಾಂಬರು ಇರಲಿ, ಮೆಟ್ಲಿಂಗ್‌ಅನ್ನೂ ಕಂಡಿಲ್ಲ. ಇನ್ನು ಚರಂಡಿ ವ್ಯವಸ್ಥೆ ಕನಸಿನ ಮಾತು. ಚರಂಡಿ ವ್ಯವಸ್ಥೆ ಇಲ್ಲವಾದ್ದರಿಂದ ಓಡಾಡುವ ರಸ್ತೆಗಳ ಮಧ್ಯದಲ್ಲೇ ಕೊಳಚೆ ನೀರು ನಿಂತಿರುತ್ತದೆ. ಇಂಥ ಅವ್ಯವಸ್ಥೆಯ ನಡುವೆಯೂ ಇಲ್ಲಿನ ಜನ ವಾಸವಾಗಿದ್ದಾರೆ ಎಂಬುದೇ ಅಚ್ಚರಿ ಸಂಗತಿ. ಎಲ್ಲೆಂದರಲ್ಲಿ ತಿಪ್ಪೆ ಗುಂಡಿ, ಕೊಳಚೆಮಯ ವಾತಾವರಣದಿಂದಾಗಿ ಗ್ರಾಮ ದಲ್ಲಿ ಆಗಾಗ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈ ಹಿಂದೆ ಪುರಸಭೆ ಆಡಳಿತವಿದ್ದಾಗ ಸೊಳ್ಳೆಗಳನ್ನು ನಾಶ ಪಡಿಸುವ ಸಲುವಾಗಿ ಫಾಗಿಂಗ್ ಯಂತ್ರವನ್ನು ಖರೀದಿಸಲಾಗಿತ್ತು. ಅದನ್ನು ಉದ್ಘಾಟಿಸಿದ್ದನ್ನು ಬಿಟ್ಟರೆ ಅದನ್ನು ಮತ್ಯಾವ ಸಂದರ್ಭದಲ್ಲೂ ಬಳಸಿಲ್ಲ.
ಒಟ್ಟಾರೆ ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಮೋಳೆ ಗ್ರಾಮಸ್ಥರ ಸ್ಥಿತಿ ಚಿಂತಾಜನಕವಾಗಿದೆ. ಕಷ್ಟದ ಜೀವಿಗಳನ್ನು ನಗರಸಭೆ ನಿಕೃಷ್ಟವಾಗಿ ಕಾಣುತ್ತಿದೆ. 

ಆನ್‌ಲೈನ್ ಕೋರ್ಸ್‌ಗೆ KSOU ‘ಮುಕ್ತ ’


ವಿಕ ವಿಶೇಷ ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು)ಪ್ರಸಕ್ತ ಶೈಕ್ಷಣಿಕ ವರ್ಷ ದಿಂದ ಆನ್‌ಲೈನ್ ಮೂಲಕ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ನಿರ್ಧರಿಸಿದೆ.
ಉನ್ನತ ಶಿಕ್ಷಣ ವಂಚಿತರ ಮನೆ ಬಾಗಿಲಿಗೆ  ಅಂಚೆ  ಮೂಲಕ  ‘ಶಿಕ್ಷಣ’ ತಲುಪಿಸುವ  ಮಹಾನ್ ಉದ್ದೇಶದಿಂದ ೧೪ ವರ್ಷಗಳ ಹಿಂದೆ ಆರಂಭವಾದ ವಿವಿ, ಈಗ ತನ್ನ  ವ್ಯಾಪ್ತಿಯ ಎಲ್ಲೆಯನ್ನು ಸಾಗರದಾಚೆಗೆ ಕೊಂಡೊಯ್ದಿದೆ. ಈ ವರ್ಷದಿಂದ ದೇಶ- ವಿದೇಶಗಳ ಯಾವುದೇ ಮೂಲೆಯಲ್ಲಿರುವ  ವಿದ್ಯಾರ್ಥಿಗಳು, ತಾವು ಕುಳಿತಲ್ಲಿಂದಲೇ ವಿವಿ ನೀಡುವ ಸ್ನಾತಕೋತ್ತರ ಕೋರ್ಸ್‌ಗಳನ್ನು ಕಲಿತು, ಪದವಿ ಪಡೆಯ ಬಹುದು. ಮುಕ್ತ ವಿವಿ ಇನ್ಮುಂದೆ ದೂರ ಶಿಕ್ಷಣದ ಜತೆಗೆ ಆನ್‌ಲೈನ್ ಮೂಲಕವೂ ಶಿಕ್ಷಣ ಕಲಿ ಸುವ ಹೊಸ ಹೊಣೆಯನ್ನು ಹೊರಲಿದೆ.  ಈ ನೆಲೆ ಯಲ್ಲಿ- ಮೈಸೂರು ಕೇಂದ್ರಿತ ಮುಕ್ತ ವಿವಿ ಈಗ ಜಾಗತಿಕ ವಿದ್ಯಾರ್ಥಿ ವೃಂದವನ್ನು  ಸೆಳೆ ಯಲು ಶಕ್ತವಾಗಿರುವ ಅಂತಾರಾಷ್ಟ್ರೀಯ ವಿವಿಯೂ ಹೌದು !
‘೨೦೧೦-೧೧ನೇ ಸಾಲಿನಿಂದಲೇ  ಎಂಬಿಎ (ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನೇಸ್ಟ್ರೇಷನ್) ಕೋರ್ಸ್ ಅನ್ನು ಅನ್ ಲೈನ್ ಮೂಲಕ  ವಿವಿ ನೀಡಲಿದೆ. ಜುಲೈ ನಿಂದ ವಿದ್ಯಾರ್ಥಿಗಳ ದಾಖಲೆಯೂ ಆರಂಭವಾಗಲಿದೆ’ ಎಂದು ಮುಕ್ತ ವಿವಿ ಕುಲಪತಿ ಡಾ. ಕೆ. ಎಸ್. ರಂಗಪ್ಪ ವಿಜಯ ಕರ್ನಾಟಕಕ್ಕೆ ತಿಳಿಸಿದರು.
‘ಆನ್‌ಲೈನ್ ಕೋರ್ಸ್ ವಿವಿಗೆ ಹೊಸದಾದರೂ, ಅದರ ಕಾರ್ಯವೈಖರಿ ಹೊಸದೇನಲ್ಲ. ನಾವು ನೀಡುತ್ತಿರುವ  ಪದವಿ, ಸ್ನಾತಕೋತ್ತರ ಪದವಿ ಮತ್ತು ವಿವಿಧ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್‌ಗಳ  ಪಠ್ಯ ಹಾಗೂ ಸಾಮಗ್ರಿಗಳನ್ನು ರಚಿಸುವಲ್ಲಿ ಮಾಹಿತಿ ತಂತ್ರಜ್ಞಾನವನ್ನು ದುಡಿಸಿಕೊಳ್ಳು ತ್ತಿದ್ದೇವೆ. ಕೇವಲ ಲಿಪಿ ಆಧರಿತ ಶಿಕ್ಷಣ ಸಾಮಗ್ರಿಗಳನ್ನು ಅವಲಂಬಿಸದೇ,  ದೃಶ್ಯ ಹಾಗೂ ಶ್ರವ್ಯ ಕಲಿಕಾ ಸಾಮಗ್ರಿಗಳನ್ನು ಬಳಸುತ್ತಿದ್ದೇವೆ.  ಜ್ಞಾನವಾಣಿ ವಾಹಿನಿಗಳ ಮೂಲಕವೂ ಶಿಕ್ಷಣ ಬೋಧಿಸುತ್ತಿದ್ದೇವೆ. ಆನ್‌ಲೈನ್ ಶಿಕ್ಷಣ ನೀಡುವಿಕೆ, ನಮ್ಮ ಈ ಕಾರ್ಯ ವಿಧಾನದ ಮುಂದುವರಿದ ಭಾಗವಷ್ಟೆ’ ಎಂದು ಹೇಳಿದರು.
‘ಆನ್‌ಲೈನ್ ಶಿಕ್ಷಣ ನೀಡಿಕೆಯಲ್ಲಿ ಅನುಭವ ಹೊಂದಿ ರುವ  ಪರಿಣತ  ಸಂಸ್ಥೆ  ಹಾಗೂ ತಜ್ಞ ಅಧ್ಯಾಪಕರ ನೆರವು ಪಡೆದು ಕೋರ್ಸ್ ಪ್ರಾರಂಭಿಸುತ್ತೇವೆ.  ನಮ್ಮಲ್ಲಿ  ಪೂರ್ಣ ಪ್ರಮಾಣದ ಬೋಧನಾ ಸಿಬ್ಬಂದಿ ತಯಾರಾಗುವವರೆಗೆ, ಈ ಸೇವೆಯನ್ನು ಹೊರ ಗುತ್ತಿಗೆ ಆಧಾರದ ಮೇಲೆ  ಪಡೆಯಲಾಗುವುದು. ವಿದ್ಯಾರ್ಥಿಗಳ ನೋಂದಣಿ, ಈ- ಕಲಿಕೆ ಸೇರಿದಂತೆ ಎಲ್ಲವೂ ಆನ್‌ಲೈನ್ ಆಗಲಿದೆ. ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ಆನ್‌ಲೈನ್ ಕೋರ್ಸ್‌ಗಳ ಮಾದರಿಯಲ್ಲೇ, ಎಂಬಿಎ ಕೋರ್ಸ್ ರೂಪಿಸಿದ್ದೇವೆ’ ಎಂದು ವಿವರಿಸಿದರು.
ಆನ್‌ಲೈನ್ ಎಂಬಿಎ ಏಕೆ
ಆನ್‌ಲೈನ್ ಮೂಲಕ ಪದವಿ ಪಡೆಯಲು ಬಯಸುವವರು  ಸಾಮಾನ್ಯವಾಗಿ ಯಾವುದಾದರೊಂದು ಕ್ಷೇತ್ರದಲ್ಲಿ ಕಾರ್ಯನಿರತ ಉನ್ನತ ಪದವೀಧರರೇ ಆಗಿರುತ್ತಾರೆ. ತಮ್ಮ ವೃತ್ತಿಯಲ್ಲಿ ಇನ್ನಷ್ಟು ಏಳ್ಗೆ ಹೊಂದಲು ಅವರಿಗೆ ಎಂಬಿಎ ಪದವಿ ಬೇಕಿರುತ್ತದೆ ಎಂಬುದು ಕೆಲವು ಸಮೀಕ್ಷೆಗಳಿಂದಲೂ ದೃಢಪಟ್ಟಿದೆ. ಇದಲ್ಲದೆ,  ಎಂಬಿಎ ಪದವೀಧರರಿಗೆ ಮಾತ್ರ ವಿವಿಧ  ಕ್ಷೇತ್ರಗಳಲ್ಲಿ ಉದ್ಯೋಗವಕಾಶ ಹೆಚ್ಚಿದೆ. ಹಾಗಾಗಿ ವಿವಿ ಮೊದಲ ವರ್ಷ ಎಂಬಿಎ ಕೋರ್ಸ್ ಆರಂಭಿಸುತ್ತಿದೆ ಎಂಬುದು ರಂಗಪ್ಪ ನೀಡುವ ವಿವರಣೆ. ಇದರ ಯಶಸ್ಸನ್ನು ಗಮನಿಸಿ ಮುಂಬರುವ ವರ್ಷಗಳಲ್ಲಿ  ಬೇರೆ-ಬೇರೆ ಕೋರ್ಸ್‌ಗಳನ್ನು ಆನ್‌ಲೈನ್ ಮೂಲಕ  ಪ್ರಾರಂಭಿಸಲು ಚಿಂತನೆ ನಡೆಸಲಾಗುವುದು ಎಂದರು.
ಎಂಎಸ್ಸಿ, ಎಲ್‌ಎಲ್‌ಎಂ ಶುರು
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಂಪ್ಯೂಟರ್ ಸೈನ್ಸ್, ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ವಿವಿ ಆರಂಭಿಸುತ್ತಿದೆ. ‘ನಾನು ಹೇಳಿ-ಕೇಳಿ ವಿಜ್ಞಾನ ಕ್ಷೇತ್ರದಿಂದ ಬಂದವನು. ಇಲ್ಲಿಗೆ ಬಂದ ಮೊದಲ ದಿನವೇ, ಭೌತಶಾಸ್ತ್ರ, ರಸಾಯನಶಾಸ್ತ್ರ ಸೇರಿದಂತೆ ಮೂಲ ವಿಜ್ಞಾನ ವಿಷಯಗಳ ಎಂಎಸ್ಸಿ  ಕೋರ್ಸ್ ಆರಂಭಿಸಬೇಕೆಂಬ ಸಂಕಲ್ಪ ತೊಟ್ಟಿದ್ದೆ. ಆದರೆ, ಎಲ್ಲವೂ ಸಾಧ್ಯವಾಗುತ್ತಿಲ್ಲ. ಈ ವರ್ಷ ಎರಡು ಎಂಎಸ್ಸಿಗಳನ್ನು ಮಾತ್ರ ಆರಂಭಿಸಲಾಗುತ್ತಿದೆ. ಇದರ ಜತೆಗೆ ಕಾನೂನಿನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು (ಎಲ್‌ಎಲ್‌ಎಂ) ಶುರು ಮಾಡುತ್ತಿದ್ದೇವೆ . ಇದಕ್ಕಾಗಿ ಎಲ್ಲ ಶೈಕ್ಷಣಿಕ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕರುನಾಡ ‘ಕಪ್ಪು’ ಕಥೆ !

ಚೀ.ಜ.ರಾಜೀವ,  ಮೈಸೂರು
ಅಪಾಯದಲ್ಲಿ ಚಿತ್ರದುರ್ಗ, ದಾವಣಗೆರೆ... ಕಪ್ಪು ನಗರಗಳ ವರ್ಗಕ್ಕೆ ಸೇರಿದ ಬೆಂಗಳೂರು, ಮಂಗಳೂರು, ಬಳ್ಳಾರಿ, ಶಿವಮೊಗ್ಗ ...  ಇನ್ನೂ ಸ್ವಚ್ಛವಾಗಬೇಕಾಗಿರುವ  ಮೈಸೂರು... !
ಕೇಂದ್ರ ನಗರಾಭಿವೃದ್ಧಿ ಇಲಾಖೆ  ೨೦೦೯-೧೦ನೇ ಸಾಲಿನಲ್ಲಿ ನಡೆಸಿರುವ ಸ್ವಚ್ಛತಾ ಸಮೀಕ್ಷೆಯ ಸಾರವಿದು. ದೇಶದ ೪೨೩ ನಗರಗಳ ಪೈಕಿ ಮೈಸೂರಿಗೆ  ಎರಡನೇ ರ‍್ಯಾಂಕ್ ಲಭಿಸಿದೆ  ಎಂದು ಮುಖ್ಯಮಂತ್ರಿ ಸಹಿತ ಎಲ್ಲರೂ ಹೊಗಳುತ್ತಲೇ ಇದ್ದಾರೆ. ಆದರೆ, ಸಮೀಕ್ಷೆಯೊಳಗೆ ಅಡಗಿದ ಸತ್ಯವೆಂದರೆ ಮೈಸೂರು ಸಂಪೂರ್ಣ ಸ್ವಚ್ಛ ನಗರವಲ್ಲ. ಮೊದಲ ರ‍್ಯಾಂಕ್ ಪಡೆದಿರುವ ಚಂಡೀಗಢ ಸೇರಿದಂತೆ ದೇಶದ ಯಾವುದೇ ನಗರವೂ ಸ್ವಚ್ಛ  ಹಾಗೂ ಆರೋಗ್ಯವಂತ ನಗರವಾಗಿಲ್ಲ. ಮೈಸೂರು-‘ಸುಧಾರಣೆಯಾಗುತ್ತಿರುವ ಅನೈರ್ಮಲ್ಯ ಪೀಡಿತ ನಗರ’ವಷ್ಟೆ . ಅಂದರೆ- ಇರುವ ಅನೈರ್ಮಲ್ಯಪೀಡಿತ ನಗರಗಳ ಪೈಕಿ ಮೈಸೂರು ವಾಸಿ !
ಸಮೀಕ್ಷೆಯ ಹಿನ್ನೆಲೆಯಲ್ಲಿ ಮೈಸೂರು ಪಾಲಿಕೆ ಸೇರಿದಂತೆ  ವಿವಿಧ ನಗರ/ಪಟ್ಟಣಗಳ ಸ್ಥಳೀಯ ಆಡಳಿತಗಳು ಬೆನ್ನುತಟ್ಟಿ ಕೊಳ್ಳುತ್ತಿರುವ ಪ್ರಕಾರ ನಮ್ಮ ನಗರಗಳು ಸ್ವಚ್ಛವಾಗಿಲ್ಲ. ಸಮೀಕ್ಷೆಯ ಸಾರಾಂಶದಲ್ಲಿ ತಮಗೆ ಬೇಕಿರುವ ಅಂಶವನ್ನಷ್ಟೇ ಆಯ್ದು, ಅದನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿಕೊಳ್ಳು ತ್ತಿವೆ. ರಾಜ್ಯದ ೨೫ ನಗರಗಳ ಸ್ವಚ್ಛತಾ ಕಾಳಜಿಯೂ ಬಹಿರಂಗವಾಗಿದೆ. ದೇಶದ ಮೊದಲ ೨೫ ರ‍್ಯಾಂಕ್‌ಗಳ ಪಟ್ಟಿಯಲ್ಲಿ ರಾಜ್ಯದ ಮೈಸೂರು-೨, ಮಂಗಳೂರು-೮, ಬೆಂಗಳೂರು-೧೨, ಮಂಡ್ಯ-೧೫ ಮತ್ತು ಬೀದರ್-೨೨ನೇ  ಸ್ಥಾನ ಪಡೆದಿವೆ.  ನಿಜವಾಗಿಯೂ ಸಮೀಕ್ಷೆ ಏನು ಹೇಳುತ್ತಿದೆ ಎಂಬ ಸಂಗತಿ ಇಲ್ಲಿದೆ.
ಯಾಕೆ ಈ ಸಮೀಕ್ಷೆ 
೨೦೦೧ರ ಜನಸಂಖ್ಯೆ ಪ್ರಕಾರ  ೧ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ದೇಶದ ೪೨೩ ನಗರಗಳ ನೈರ್ಮಲ್ಯ ಅಳೆದು, ರ‍್ಯಾಂಕ್ ನೀಡಲು ಕೇಂದ್ರ ನಗರಾಭಿವೃದ್ಧಿ ಇಲಾಖೆ ಪ್ರತಿಷ್ಠಿತ ಮೂರು ಏಜೆನ್ಸಿಗಳ ಮೂಲಕ ಸಮೀಕ್ಷೆ  ನಡೆಸಿದೆ.  ಈ ಮೂಲಕ ಪರಸ್ಪರ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡಿಸುವುದು ಕೇಂದ್ರ ಸರಕಾರದ ಉದ್ದೇಶ. ಮೂರು ಸ್ವತಂತ್ರ ಸಂಸ್ಥೆಗಳ ಪ್ರತಿನಿಧಿಗಳು ಎಲ್ಲ ನಗರಗಳಿಗೂ ಭೇಟಿ ನೀಡಿ, ಅಲ್ಲಿನ ಸ್ಥಿತಿಯನ್ನು ಅಧ್ಯಯನ ಮಾಡಿದ್ದಾರೆ. ಬಳಿಕ ರಾಜ್ಯ ಸರಕಾರ ಹಾಗೂ ಸ್ಥಳೀಯ ಆಡಳಿತದ ಮುಖ್ಯಸ್ಥರೊಂದಿಗೆ ಚರ್ಚಿಸಿ, ವರದಿ ಸಿದ್ಧಪಡಿಸಿದ್ದಾರೆ. ಒಂದರ್ಥದಲ್ಲಿ, ಇಲ್ಲಿರುವ ಶೇ. ೫೦ರಷ್ಟು ಮಾಹಿತಿ ಸ್ಥಳೀಯ ಸಂಸ್ಥೆಗಳು ನೀಡಿದ ಅಂಕಿ-ಅಂಶ, ವರದಿಯನ್ನು ಆಧರಿಸಿದೆ !
ಮಾನದಂಡಗಳೇನು ?
ನಗರದಲ್ಲಿರುವ ಬಯಲು ಶೌಚಾಲಯ ಮುಕ್ತ ವ್ಯವಸ್ಥೆ, ಬಡ ಜನತೆ ಹಾಗೂ ಕೊಳೆಗೇರಿ ನಿವಾಸಿಗಳಿಗೆ ಕಲ್ಪಿಸಿರುವ ಶೌಚಾಲಯ ವ್ಯವಸ್ಥೆ ಮತ್ತು ಅವುಗಳ ಸಮರ್ಪಕ  ನಿರ್ವಹಣೆ-ಬಳಕೆ, ಸಾರ್ವಜನಿಕ ಶೌಚಾಲಯಗಳ  ಲಭ್ಯತೆ, ಶೌಚಗುಂಡಿಗಳಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಸ್ಥಿತಿ-ಗತಿ, ಅವರಿಗೆ ನೀಡುತ್ತಿರುವ ಆಧುನಿಕ ಸೌಲಭ್ಯ-ಪರಿಕರ ಗಳು, ಒಳಚರಂಡಿ ನೀರಿನ ಸಂಸ್ಕರಣೆ ಮತ್ತು ಬಳಕೆ, ಘನ ತ್ಯಾಜ್ಯ ನಿರ್ವಹಣೆ, ಶುದ್ಧ ಕುಡಿಯುವ ನೀರಿನ ಪೂರೈಕೆ,  ನಗರಕ್ಕೆ ನೀರು ಪೂರೈಸುವ ಸಂಪನ್ಮೂಲ ಹಾಗೂ ಅಂತರ್ಜಲದ ಗುಣಮಟ್ಟ, ಸಂಸ್ಕರಣೆ ಸೇರಿದಂತೆ ಕೆಲ ಸೌಲಭ್ಯಗಳ ಲಭ್ಯತೆ ಹಾಗೂ ಸಮರ್ಪಕ ನಿರ್ವಹಣೆಯನ್ನು ಅಧ್ಯಯನ ನಡೆಸಲಾಗಿದೆ. ಸಾರ್ವಜನಿಕರು ಹೆಚ್ಚು ಸೇರುವ ಬಸ್ ಹಾಗೂ ರೈಲು ನಿಲ್ದಾಣ, ಮಾರುಕಟ್ಟೆ ಪ್ರದೇಶಗಳ ಸ್ವಚ್ಛತೆ ಯನ್ನೂ ಅಳೆಯಲಾಗಿದೆ. ಈ ಎಲ್ಲ ಅಂಶಗಳಿಗೂ ನಿಗದಿತ  ಅಂಕ ಎಂದು ನೀಡಿ, ನಗರಗಳ ರ‍್ಯಾಂಕ್ ಪಟ್ಟಿ ತಯಾರಿಸಲಾಗಿದೆ. 
ಮೈಸೂರು ನೀಲಿಯೂರು
ಸಮೀಕ್ಷೆಗೆ ಆಯ್ದುಕೊಂಡ ನಗರಗಳನ್ನು ನಾಲ್ಕು ವರ್ಗಗಳ ನ್ನಾಗಿಸಲಾಗಿದೆ. ತಾನು ನಿಗದಿ ಪಡಿಸಿದ ಮಾನದಂಡಗಳು ಸಂಪೂರ್ಣ ಮಟ್ಟಿಗೆ ಅನುಷ್ಠಾನದಲ್ಲಿದ್ದರೆ, ಆ ನಗರಗಳನ್ನು ಹಸಿರು ನಗರ ಎಂದು ವರ್ಗೀಕರಿಸಿದೆ. ಅಲ್ಲಿಯ ನಗರಗಳನ್ನು ಮಾತ್ರ ‘ಆರೋಗ್ಯಪೂರಿತ ನಿರ್ಮಲ ನಗರಿ’ ಎಂದು ಘೋಷಿಸಿದೆ. ಇಲ್ಲಿ ಸ್ಥಾನ ಪಡೆಯಲು ೯೧ ರಿಂದ ೧೦೦ ಅಂಕ ಗಳಿಸಬೇಕು. ಬೇಸರದ ಸಂಗತಿ ಎಂದರೆ, ಯಾವ ನಗರವೂ ಈ ವರ್ಗದಲ್ಲಿ ಸ್ಥಾನ ಪಡೆದಿಲ್ಲ !
ನಂತರದ ಸ್ಥಾನ ನೀಲಿ ನಗರಗಳದ್ದು!. ಸಮೀಕ್ಷೆ ಪ್ರಕಾರ- ಸುಧಾರಣೆ ಕಾಣುತ್ತಿರುವ ಆದರೂ, ಅನೈರ್ಮಲ್ಯನಗರಗಳು. ಈ ವರ್ಗದಡಿ ೭೩.೪೮ ಅಂಕ ಪಡೆದ ಚಂಡೀಗಢ ಪ್ರಥಮ ಸ್ಥಾನ ಪಡೆದರೆ, ೭೦.೬೫ ಅಂಕ ಪಡೆದ ಮೈಸೂರಿಗೆ ಎರಡನೇ ಸ್ಥಾನ. ಸಮಾಧಾನದ ಸಂಗತಿ ಅಂದ್ರೆ, ದೇಶದ ೪೨೩ ನಗರಗಳ ಪೈಕಿ ಚಂಡೀಗಢ, ಮೈಸೂರು, ಸೂರತ್ ಮತ್ತು ದಿಲ್ಲಿಯ ನ್ಯೂ ದಿಲ್ಲಿ ಮುನ್ಸಿಪಾಲ್ ಕೌನ್ಸಿಲ್ ಮಾತ್ರ ಈ ನೀಲಿ ನಗರಗಳು.
ಕೋಲಾರ ಕಪ್ಪು 
ಗಣನೀಯ ಪ್ರಮಾಣದಲ್ಲಿ ಸುಧಾರಣೆ ಕಾಣಬೇಕಾದ ನಗರಗಳನ್ನು ಸಮೀಕ್ಷೆ ಕಪ್ಪು ವರ್ಗದ ಪಟ್ಟಿಗೆ ಸೇರಿಸಿದೆ. ಸುಮಾರು ೨೨೮ ನಗರಗಳ ಪೈಕಿ ಬೆಂಗಳೂರು, ಮಂಗಳೂರು, ಮಂಡ್ಯ, ಬೀದರ್,  ಶಿವಮೊಗ್ಗ, ಉಡುಪಿ ಸೇರಿದಂತೆ ೨೧ ನಗರಗಳು ಈ ಪಟ್ಟಿಯಲ್ಲಿವೆ. ರಾಜ್ಯದ ಶೇ. ೮೮ರಷ್ಟು ನಗರಗಳು ಕಪ್ಪು ವರ್ಗಕ್ಕೆ ಸೇರಿವೆ. ಶೇ.೯೦ಕ್ಕಿಂತ ಹೆಚ್ಚು ಕಡೆ, ಮನುಷ್ಯನ ಮಲ-ಮೂತ್ರ ಸಂಗ್ರಹ ಮತ್ತು ನಿರ್ವಹಣೆ ಸ್ಥಿತಿ ಸುಧಾರಿಸಿದೆ. ಆದರೆ, ಇದೇ ಮಾತನ್ನು ತ್ಯಾಜ್ಯ ನೀರುಗಳ ಸಂಸ್ಕರಣೆ ವಿಷಯದಲ್ಲಿ ಹೇಳುವಂತಿಲ್ಲ  !
ಚಿತ್ರದುರ್ಗ ಕೆಂಪು ನಗರ !
ಸಾರ್ವಜನಿಕರ ಆರೋಗ್ಯ ಇನ್ನೇನು ಸಂಪೂರ್ಣ ಹದಗೆಟ್ಟು ಹೋಗಲಿದೆ ಎಂಬ ಭಯಾನಕ ಸ್ಥಿತಿಯ ಅಂಚಿನಲ್ಲಿರುವ, ಪರಿಸರ ಹಾಗೂ ಸ್ವಚ್ಛತೆಗೆ ಸಂಬಂಧಿಸಿ ತುರ್ತು ಚಿಕಿತ್ಸೆಯನ್ನು ನೀಡಲೇಬೇಕಿರುವ ನಗರಗಳನ್ನು ಸಮೀಕ್ಷೆ ಕೆಂಪು ಪಟ್ಟಿಗೆ ಸೇರಿಸಿದೆ. ಆತಂಕಕಾರಿ ವಿಷಯವೆಂದರೆ, ಈ ವರ್ಗದ ಪಟ್ಟಿಯಲ್ಲಿ ಶೇ. ೪೫ ನಗರಗಳು ಇವೆ !
ರಾಜಸ್ತಾನ್, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ ಪಶ್ಚಿಮ ಭಾರತದ ಬಹುತೇಕ ನಗರಗಳು ನೈರ್ಮಲ್ಯದ ವಿಷಯದಲ್ಲಿ ಆತಂಕಕಾರಿ. ರಾಜ್ಯದ ಚಿತ್ರದುರ್ಗ ಮತ್ತು ದಾವಣಗೆರೆ ಈ ಪಟ್ಟಿಯಲ್ಲಿವೆ. ರಾಜ್ಯ ಸರಕಾರ  ಈ ಊರುಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕು. ಸಮೀಕ್ಷೆ ಪ್ರಕಾರ ಇವು ಅಪಾಯಕಾರಿ.

ಗ್ರಾ.ಪಂ. ಆಡಳಿತ ಚುಕ್ಕಾಣಿಗೆ ಕಾಂಗ್ರೆಸ್, ಬಿಜೆಪಿ ಜಿದ್ದಾಜಿದ್ದಿ

ಫಾಲಲೋಚನ ಆರಾಧ್ಯ ಚಾಮರಾಜನಗರ
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ನೆರೆ ರಾಜ್ಯಗಳಿಗೆ ಪ್ರವಾಸದ ನೆಪದಲ್ಲಿ ಸದಸ್ಯರನ್ನು ಹೈಜಾಕ್ ಮಾಡಲಾಗಿದೆ.
ಈಗ ಮೇಲ್ಮನೆ ಚುನಾವಣೆ ಕಾವೇರುತ್ತಿದ್ದು, ಇದರೊಂದಿಗೆ ಗ್ರಾಮ ಮಟ್ಟದಲ್ಲಿ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಗಾದಿಯನ್ನು ಹಿಡಿಯಲು ಕಾಂಗ್ರೆಸ್, ಬಿಜೆಪಿ ಹಾಗೂ ಜಾ.ದಳ ಹಲವು ಬಗೆಯ ತಂತ್ರಗಳನ್ನು ರೂಪಿಸುತ್ತಿವೆ. ಈ ಪೈಕಿ ಸದಸ್ಯ ರನ್ನು ವಾರಗಟ್ಟಲೆ ಪ್ಯಾಕೇಜ್ ಟೂರ್ ಕರೆದೊಯ್ದಿರುವುದೇ ಹೆಚ್ಚು.
ಹಲವು ಗ್ರಾ.ಪಂ. ಸದಸ್ಯರು ಈಗ ತಮಿಳುನಾಡು, ಕೇರಳ, ದಿಲ್ಲಿ ಸೇರಿದಂತೆ ವಿವಿಧೆಡೆ ಪ್ರವಾಸದ ಮಜಾ ಅನುಭವಿಸು ತ್ತಿದ್ದಾರೆ. ತಮ್ಮ ತಮ್ಮ ಗ್ರಾ.ಪಂ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆಯವರೆಗೂ ಇವರು ಇತ್ತ ಕಾಲಿಡರು. ಬಿಟ್ಟಿ ಪ್ರವಾಸದೊಂದಿಗೆ ಕೇಳಿದ್ದೆಲ್ಲವೂ ಉಚಿತ.
೨೦ ದಿನದಿಂದ ಕಾಣೆ: ಪುಣಜೂರು ಗ್ರಾಮ ಪಂಚಾ ಯಿತಿಯ ೧೦ ಮಂದಿ ಸದಸ್ಯರು ೨೦ ದಿನದಿಂದ ಕಾಣೆ ಯಾಗಿದ್ದಾರೆ. ಇವರೆಲ್ಲರೂ ಎಲ್ಲಿದ್ದಾರೆ ಎಂಬುದು ಕೆಲವರಿಗಷ್ಟೇ ಗೊತ್ತು. ಇವರನ್ನು ಕಾಂಗ್ರೆಸ್ ಕಡೆ ಯವರು ಪ್ರವಾಸ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ. ಈ ಪಂಚಾಯಿತಿಯಲ್ಲಿ ೧೦ ಬಿಜೆಪಿ ಹಾಗೂ ೭ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದರು. ಹೀಗಾಗಿ ಇಬ್ಬರು ಬಿಜೆಪಿಯವರಿಗೆ ಆಮಿಷವೊಡ್ಡಿ ತಮ್ಮ ಬೆಂಬಲಿಗ ಸದಸ್ಯರನ್ನೂ ಸೇರಿದಂತೆ ತಮಿಳುನಾಡಿನೆಡೆಗೆ ಪ್ರವಾಸ ಕರೆ ದೊಯ್ಯಲಾಗಿದೆ ಎಂದು ಹೇಳಲಾಗು ತ್ತಿದೆ. ಇಲ್ಲಿ ಜೂ.೨೪ ರಂದು ಚುನಾವಣೆ. ಅಲ್ಲಿಯ ವರೆಗೂ ಈ ಸದಸ್ಯ ರಿಗೆ ಪ್ರವಾಸದ ಮಜಾ. ಕೈ ತುಂಬಾ ರೊಕ್ಕ ಗ್ಯಾರಂಟಿ ಎನ್ನಲಾಗುತ್ತಿದೆ.
ಒಬ್ಬರಿಂದ ಎಚ್ಚೆತ್ತು ಕೊಂಡರು: ನಂಜೇ ದೇವನಪುರ  ಗ್ರಾ.ಪಂ. ದ್ದು ಇನ್ನೂ ವಿಚಿತ್ರ. ಇಲ್ಲಿ ಬಿಜೆಪಿ ಬೆಂಬಲಿತರು ೯ ಹಾಗೂ ಕಾಂಗ್ರೆಸ್‌ನ ೮ ಮಂದಿ ಗೆದ್ದಿದ್ದರು. ಇದರಿಂದ ಸಮಬಲ ಸಾಧಿಸಲು ಬಿಜೆಪಿ ಪಾಳಯದಿಂದ ಒಬ್ಬ ಸದಸ್ಯರನ್ನು ಕಾಂಗ್ರೆಸ್ ಕಡೆಯವರು ಖರೀದಿಸಿ ಪ್ರವಾಸಕ್ಕೂ ಕರೆದೊಯ್ದರು. ಇದರಿಂದ ಎಚ್ಚೆತ್ತ ಬಿಜೆಪಿ ಯವರು ಉಳಿದ ೮ ಮಂದಿಯನ್ನು ಮಾರನೇ ದಿನವೇ ಪ್ರವಾಸಿ ತಾಣವೊಂದಕ್ಕೆ ಪ್ಯಾಕೇಜ್ ಟೂರ್ ಹೊರಡಿಸಿ ದರು. ಈಗ ಉಭಯ ಕಡೆಗಳಲ್ಲೂ ಸಮಬಲವಿದೆ. ಯಾರನ್ನು ಯಾರು ಸೆಳೆಯುತ್ತಾರೆ ಎಂಬುದು ನಿಗೂಢ. ಒಟ್ಟಾರೆ ಹೆಚ್ಚು ಹಣ ಬಿಚ್ಚಿದವರ ಕಡೆ.
ಮೂವರು ಒಗ್ಗೂಡಿ ಟೂರ್: ಕೊಳ್ಳೇಗಾಲ ತಾಲೂಕಿ ನಲ್ಲಿ ಟೂರ್ ಭರಾಟೆ ಇನ್ನೂ ಜೋರು. ಚಾ.ನಗರದಲ್ಲಿ ಎರಡು ಪಕ್ಷಗಳ ಮಧ್ಯೆ ಹೋರಾಟ ಏರ್ಪಟಿದ್ದರೆ, ತಾಲೂಕಿನ ಮಧುವನಹಳ್ಳಿ ಗ್ರಾ.ಪಂ.ನಲ್ಲಿ ಒಂದು ಪಕ್ಷವನ್ನು ಮಟ್ಟ ಹಾಕಲು ಇತರೆ ಮೂರು ಪಕ್ಷಗಳ ಬೆಂಬಲಿತರು ಒಗ್ಗೂಡಿದ್ದಾರೆ. ಆ ಮೂರು ಪಕ್ಷದ ಸದಸ್ಯರು ಸೇರಿ ನಿಗೂಢ ಸ್ಥಳವೊಂದರಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯ ಚರ್ಚೆಯಲ್ಲಿ ಮಗ್ನರಾಗಿ ದ್ದಾರೆ. ಇಂಥ ಜಾಲಿ ಟೂರ್ ಸಂಗಾತಿಗಳು ಇನ್ನು ಸಾಕಷ್ಟಿವೆ. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಮೀಪಿಸು ತ್ತಿದ್ದಂತೆ ಇಂಥವು ಇನ್ನೂ ಹೆಚ್ಚಾಗಲಿವೆ. ಕಾಂಚಾಣವೂ ಭರ್ಜರಿಯಾಗಿ ನರ್ತಿಸಲಿದೆ.
ಪ್ರತಿಷ್ಠೆ ಹಾಗೂ ಯೋಜನೆ: ಈ ಮೊದಲು ಸರಕಾರದ ಬಲಾಬಲ ಪ್ರದರ್ಶನ, ನಗರಪಾಲಿಕೆ, ನಗರಸಭೆಯಲ್ಲಿ ಇಂಥ ಪ್ರಹಸನ ನಡೆಯುತ್ತಿತ್ತು. ಇದೀಗ ಗ್ರಾ.ಪಂ. ಮಟ್ಟಕ್ಕೂ ಇದು ಕಾಲಿಟ್ಟಿದೆ. ಪಕ್ಷಗಳ ಪ್ರತಿಷ್ಠೆ ಹಾಗೂ ಈಚೆಗೆ ಗ್ರಾ.ಪಂ.ಗೆ ವಿವಿಧ ಯೋಜನೆಗಳಿಂದ ಹರಿದು ಬರುತ್ತಿರುವ ಅನುದಾನ ಇದಕ್ಕೆ ಕಾರಣ.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೋಟಿಗಟ್ಟಲೆ ಹಣಕ್ಕೆ ಕ್ರಿಯಾಯೋಜನೆ ತಯಾರಿಸ ಬಹುದು. ಹಾಗೆಂದು ಸದಸ್ಯರು ಗ್ರಾಮದ ಅಭಿವೃದ್ಧಿ ಗೆಂದು ಇಷ್ಟು ಪೈಪೋಟಿ ನಡೆಸುತ್ತಿಲ್ಲ. ಯೋಜನೆಯ ಕಾಮಗಾರಿಯಿಂದ ದಕ್ಕಬಹುದಾದ ಕಮಿಷನ್ ಮೇಲೆಯೇ ಬಹುತೇಕರ ಕಣ್ಣು.

ಪಾರ್ಟಿಯಲ್ಲ, ಇವು ಜಾತಿಯ ಔತಣ ಕೂಟಗಳು !

ವಿಕ ಸುದ್ದಿಲೋಕ ಮೈಸೂರು
ದಕ್ಷಿಣ ಪದವೀಧರರ ಕ್ಷೇತ್ರದಂದ ವಿಧಾನ ಪರಿಷತ್‌ಗೆ ನಡೆಯು ತ್ತಿರುವ ಚುನಾವಣೆಯಲ್ಲಿ ಪ್ರಬುದ್ಧ ಮತದಾರರನ್ನು ಸೆಳೆಯಲು ಔತಣಕೂಟಗಳನ್ನು  ಏರ್ಪಡಿಸು ತ್ತಿರುವುದು ಹೊಸ ವಿಷಯ ವೇನಲ್ಲ. ಆದರೆ, ಈ ಔತಣಕೂಟಗಳು ಕೂಡ ಈಗ ಜಾತಿಯ ನೆಲೆಯಲ್ಲಿ, ವೃತ್ತಿಯ ನೆಲೆಯಲ್ಲಿ  ನಡೆಯುತ್ತಿವೆ.  ಜಾತಿ -ವೃತ್ತಿ ಪ್ರೇಮ, ಮತ ದಾರರಿಗೆ ಆಮಿಷ ಒಡ್ಡುವ ಕಡು ಭ್ರಷ್ಟತನಕ್ಕೆ ಹೊಸ ಪರಿಭಾಷೆಯನ್ನು ಹೊಸೆಯಲಾಗಿದೆ ! ಕಾಂಗ್ರೆಸ್, ಜಾತ್ಯತೀತ ಜನತಾದಳ ಮತ್ತು ಬಿಜೆಪಿ-ಈ ಮೂರು         ಪಕ್ಷಗಳು ಈ ವಿಚಾರದಲ್ಲಿ  ಪೈಪೋಟಿಗೆ ಇಳಿದಿವೆ.
ಸಮಾಜ ಬಾಂಧವರಿಗೆ ಪಾರ್ಟಿ
ಮತದಾನ ಸಮೀಪಿಸುತ್ತಿರುವಂತೆ ಚುನಾವಣಾ ಪ್ರಚಾರವನ್ನು ಬಿರುಸು ಗೊಳಿಸಿರುವ ಬಿಜೆಪಿ, ಆಯ್ದ ಜಾತಿ ಹಾಗೂ ವೃತ್ತಿ ಬಾಂಧವರಿಗಾಗಿ ಹೋಟೆಲ್‌ಗಳಲ್ಲಿ  ಔತಣಕೂಟಗಳನ್ನು ಏರ್ಪಡಿಸುತ್ತಿದೆ.
ಮಂಗಳವಾರ ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ  ‘ಸ್ನೇಹ ಮಿಲನ’ ಹೆಸರಿನಲ್ಲಿ ನಡೆದ  ಕಾರ್ಯಕ್ರಮದಲ್ಲಿ  ನಗರ ಮತ್ತು ಜಿಲ್ಲೆಯ ಪ್ರಬಲ ಕೋಮಿನ  ಮುಖಂಡರು, ಮತ ಬಾಂಧವರು ಭಾಗವಹಿಸಿದ್ದರು.  ಶಾಸಕ ಎಚ್. ಎಸ್. ಶಂಕಲಿಂಗೇಗೌಡ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ. ಟಿ. ದೇವೇಗೌಡರ ಹೆಸರಿನಲ್ಲಿ  ಆಯೋಜನೆಯಾಗಿದ್ದ  ಈ ಕಾರ್ಯಕ್ರಮದಲ್ಲಿ  ಮಾಜಿ ಸಚಿವೆ ಶೋಭಾ ಕರಂದ್ಲಾಜೆ  ಅವರೇ ಕೇಂದ್ರ ಬಿಂದು. ಮೈಸೂರು ಪಾಲಿಕೆಯಲ್ಲಿರುವ  ಆ ಸಮುದಾಯಕ್ಕೆ ಸೇರಿದ ಪಾಲಿಕೆ ಸದಸ್ಯರು ಅತ್ಯುತ್ಸಾಹದಲ್ಲಿ ಓಡಾಟ ನಡೆಸಿ, ತಮ್ಮ ಸಮಾಜದ ಬಾಂಧವರನ್ನು ಕಲೆ ಹಾಕಿದ್ದಾರೆ. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ. ಪಿ. ಮಂಜುನಾಥ್, ಪಾಲಿಕೆ ಸದಸ್ಯರಾದ ನಾಗೇಂದ್ರ, ನಂದೀಶ್ ಪ್ರೀತಂ, ನಿಂಗಣ್ಣ ಭಾಗ ವಹಿಸಿದ  ಇನ್ನಿತರ ಮುಖಂಡರು. ಅಭ್ಯರ್ಥಿ ಗೋ. ಮಧು ಸೂದನ್ ಕೂಡ ಭಾಗವಹಿಸಿ  ಪ್ರಚಾರ ನಡೆಸಿದರು. ಜಿಲ್ಲೆಯ ೨೫೦ಕ್ಕೂ ಹೆಚ್ಚು ಸರಕಾರಿ ಅಧಿಕಾರಿಗಳು ಭಾಗವಹಿಸಿ ಬಿರಿಯಾನಿ ಊಟವನ್ನು ಸವಿದರು.
ವೃತ್ತಿ ಬಾಂಧವರಿಗೆ ಊಟ
‘ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ವಕೀಲರ ಪಾತ್ರ’ ಕುರಿತು ಬಿಜೆಪಿ ಜೂ. ೧೬ರಂದು ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ  ಸಂವಾದ ಕಾರ‍್ಯಕ್ರಮ ಆಯೋಜಿಸಿದೆ. ಸ್ವತಃ ವಕೀಲರೂ ಆಗಿರುವ ಕಾನೂನು ಸಚಿವ ಸುರೇಶ್ ಕುಮಾರ್ ಭಾಗವಹಿಸಲಿರುವ ಈ ಕಾರ‍್ಯಕ್ರಮ ವಕೀಲರಿಗೆ ಮಾತ್ರ ಆಯೋಜನೆ ಗೊಂಡಿದೆ.  ವಕೀಲರೂ ಆಗಿರುವ ಶಾಸಕ ತೋಂಟ ದಾರ್ಯ, ಮೃಗಾಲಯ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ಹಿರಿಯ ವಕೀಲರಾದ ಪಿ. ಡಿ. ಮೇದಪ್ಪ, ಓ. ಶ್ಯಾಂ ಭಟ್ ಭಾಗವಹಿಸುತ್ತಿದ್ದಾರೆ. ಹೆಸರಿಗೆ ರಾಜ್ಯದ ಅಭಿವೃದ್ಧಿಯಲ್ಲಿ ವಕೀಲರ ಪಾತ್ರ  ಏನಿರಬೇಕು ಎಂಬ ವಿಷಯ ಇದ್ದರೂ,  ಅಸಲಿ ಸಂಗತಿಯೇ ಬೇರೆ. ಪಕ್ಷದ ಅಭ್ಯರ್ಥಿ ಗೆಲ್ಲಿಸಲು ವಕೀಲರು ಏನು ಮಾಡಬೇಕು ಎಂಬುದರ ಕುರಿತು ಸಚಿವರು ಸಂವಾದ ನಡೆಸು ವರು. ಬಿಜೆಪಿ ಪಾಳೆ ಯದ ವಕೀಲರಾದ ಎ. ಜಿ. ತಮ್ಮಯ್ಯ, ಎಸ್. ಮಹದೇವಸ್ವಾಮಿ ಮತ್ತು ಅ.ಮ. ಭಾಸ್ಕರ್ ಅವರ ಹೆಸರಲ್ಲಿ ಕಾರ‍್ಯಕ್ರಮ ಆಯೋಜನೆಗೊಂಡಿದೆ.
ಸ್ನೇಹ ಮಿಲನ
ನಾವೇನು ಕಡಿಮೆ ಎಂಬಂತೆ ಇನ್ನೊಂದು ಕೋಮಿನ ಮುಖಂಡರು ಜೂ. ೧೭ರಂದು ಖಾಸಗಿ ಹೋಟೆಲ್‌ನಲ್ಲಿ  ತಮ್ಮವರಿಗಾಗಿ ಸ್ನೇಹ ಮಿಲನ ಆಯೋಜಿಸಿದ್ದಾರೆ. ಶಾಸಕರಾದ ತೋಂಟದಾರ್ಯ,  ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಪಾಲಿಕೆ ಸದಸ್ಯರಾದ ಜಯ ಶಂಕರ ಸ್ವಾಮಿ, ಸುನಂದಾ ಪಾಲನೇತ್ರ, ಪ್ರದೀಪ್‌ಕುಮಾರ್ ಮತ್ತಿತರು ಆಯೋಜಿಸಿರುವ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ- ಮಾಜಿ ಸಚಿವ ವಿ. ಸೋಮಣ್ಣ . ಅಂದಹಾಗೆ- ಪ್ರಬಲ ಕೋಮಿನವರ ಯಾವ  ಪಾರ್ಟಿಗೂ  ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಹ್ವಾನವಿಲ್ಲ !

ಜ್ಞಾನದ ಬಾಗಿಲು ತೆರೆದ ದಿಟ್ಟೆಯರು

ಈಚನೂರು ಕುಮಾರ್
ಸೂರಿನ ಲಕ್ಷ್ಮೀಪುರಂನಲ್ಲೊಂದು ಸುಂದರ ಭವನ. ಶಾಂತಿವಿಲಾಸ ಅದರ ಹೆಸರು. ಈ ಕಟ್ಟಡಕ್ಕೀಗ ಶತಮಾನೋತ್ಸವ ಸಂಭ್ರಮ. ಈ ಸಂಖ್ಯೆ ನೂರಷ್ಟೇ ನೆನಪಿಗೆ ಕಾರಣವಲ್ಲ. ಅಂಥ ಕಟ್ಟಡದಲ್ಲಿ ಸಾರ್ಥಕ ಜೀವನ ನಡೆಸಿದ್ದ ಎರಡು ಸಾಧಕಿಯರಿಂದ ಕಲ್ಲು ಮಣ್ಣುಗಳ ಆ ನಿರ್ಜೀವ ಕಟ್ಟಡಕ್ಕೂ, ಅದರ ಆಯುಸ್ಸಿಗೂ ಮೌಲ್ಯ.
ಕವಿ ದೇಶಿಕಾಚಾರ್ ರುಕ್ಮಿಣಿಯಮ್ಮ ಮತ್ತು ಎ.ಟಿ. ಲಕ್ಷ್ಮಮ್ಮ. ಬಹುಶಃ ಮೈಸೂರು ಭಾಗದಲ್ಲಿ ಬಿಟ್ಟರೆ ಉಳಿದಂತೆ ಇಂದಿನ ತಲೆಮಾರಿಗೆ ಈ ಎರಡೂ ಹೆಸರು ಅಪರಿಚಿತವೇ. ಆದರೆ ಅಂದಿನ ಅಗ್ಗಳಿಕೆ ಸಣ್ಣದೇನಲ್ಲ. ದಕ್ಷಿಣ ಭಾರತದ ಮೊದಲ ಮೂವರು ಪದವೀಧರೆಯರಲ್ಲಿ ಒಬ್ಬರು ಇದೇ ರುಕ್ಮಿಣಿಯಮ್ಮ. ಅವರ ಮಗಳು ಎ.ಟಿ.ಲಕ್ಷ್ಮಮ್ಮ. ಬಹಳ ಏನು ಬಂತು? ಒಂದೇ ಮಾತಿನಲ್ಲಿ ಹೇಳಿಬಿಡಬಹುದಾದರೆ ಕಳೆದ ಶತಮಾನದ ಮಾದರಿ ಹೆಣ್ಣುಗಳು. ಮಹಿಳೆ ಯರಿಗೆ eನದ ಬಾಗಿಲು ತೆರೆದು ಒಳಗೆ ಕರಕೊಂಡ ಸಾಧ್ವಿಮಣಿಯರು. ಸ್ತ್ರೀ ಸಂಕುಲದ ಮಟ್ಟಿಗೆ ಆರದ ನಂದಾದೀಪಗಳು.  ಇಂದೇನು ನಾವು ಕಾಣುತ್ತಿದ್ದೇವಲ್ಲಾ ಅಂಥ ಆಧುನಿಕತೆಗೆ, ಸ್ತ್ರೀ ಸಂಕುಲದ ಭವಿಷ್ಯದ ಸನ್ನಿವೇಶಕ್ಕೆ ಅದಾಗಲೇ ಕನ್ನಡಿ ಹಿಡಿದು ನಿಂತಿದ್ದರು ರುಕ್ಮಿಣಿಯಮ್ಮ. ಇಂಥ ಸೇವೆಯನ್ನು ಮಹಾರಾಜರು ಪರಿಗಣಿಸಿದ್ದು ‘ಲೋಕ ಸೇವಾ ಪರಾಯಿಣಿ’ ಎಂಬ ಬಿರುದು ನೀಡಿ. ಅಂದು ಇಡೀ ಮಹಿಳಾ ಸಂಕುಲ ಪಟ್ಟ ಖಷಿ ನೋಡಬೇಕಿತ್ತು. ಮಹಿಳಾ ಸಮ್ಮೇಳನಗಳು, ಮಹಿಳಾ ಸಮಾಜಗಳ ಸಭೆ ಎಲ್ಲೆಂದರಲ್ಲಿ ಪ್ರತೀ ಹೆಣ್ಣೂ ಇದು ತನಗೇ ಸಂದದ್ದು ಎಂದು ಭಾವಿಸಿ ಖುಷಿಪಟ್ಟಿದ್ದರೆ ಅದು ನೈಜ ಸೇವೆಯ ಪ್ರತೀಕ.
ರುಕ್ಮಿಣಿಯಮ್ಮ ಎಲ್ಲ ಅಮ್ಮಂದಿರ ಅದೇ ಜೀವನೋತ್ಸಾಹಕ್ಕೆ ಪ್ರತಿನಿಧಿ. ಹೆಣ್ಣೆಂಬ ಸ್ವಾಭಿಮಾನಕ್ಕೆ ಸಂಕೇತ. ಅದರಲ್ಲೂ ಅವರು ಶಿಕ್ಷಕಿ, ಹೀಗಾಗಿ ಸಹಜವಾಗಿಯೇ ಸಹಸ್ರಾರು ವಿದ್ಯಾರ್ಥಿನಿಯರಿಗೆ ತಾವು ನಡೆದ ಹಾದಿಯ ಹದುಳನ್ನೇ ಧಾರೆ ಎರೆದರು. ಮಹಾರಾಣಿ ಕಾಲೇಜಿನಲ್ಲಿ ಸವೆಸಿದ ೩೨ ವರ್ಷಗಳ ಅವಿಚ್ಛಿನ್ನವಾಗಿ ಸೇವಾವಧಿಯಲ್ಲಿ ಅವರಿಂದ ಪುಟವಿಟ್ಟಿಸಿಕೊಂಡ ಚಿನ್ನದ ಗಟ್ಟಿಗಳೆಷ್ಟೋ...
ಸಿಂಹಿಣಿಯ ಹೊಟ್ಟೆಯಲ್ಲಿ ಹುಟ್ಟಿದವರು ಎ.ಟಿ. ಲಕ್ಷ್ಮಮ್ಮ. ತಾಯಿ ರುಕ್ಮಿಣಿಯಮ್ಮನವರು ಮಹಾರಾಣಿ ಕಾಲೇಜಿನಲ್ಲಿ ಬದುಕು ಕಟ್ಟಿಕೊಂಡು ಸಾಹಿತ್ಯ -ಸಾಮಾಜಿಕ ಪರಿಶುದ್ಧತೆಗೆ ಹೋರಾಡಿದರೆ, ಲಕ್ಷ್ಮಮ್ಮ ಮಹಾರಾಣಿ ಹೈಸ್ಕೂಲನ್ನು ಕರ್ಮಭೂಮಿ ಮಾಡಿಕೊಂಡವರು. ವಾಕ್‌ಚಾತುರ್ಯ, ಭಾಷಣ ಗಾರಿಕೆಯಂತೂ ಹೆಸರುವಾಸಿ. ಅದಕ್ಕಾಗಿಯೇ ಇವರನ್ನು ‘ಲೇಡಿ ವಿತ್ ದಿ ಸಿಲ್ವರ್ ಟಂಗ್’ ಎಂದು ಕರೆಯಲಾಯಿತು.  ಕನ್ನಡತಿಯರಲ್ಲಿ ಸ್ವಾಭಿಮಾನದ ಮೊದಲ ಕಿಚ್ಚು ಹೊತ್ತಿಸಿದ, ಆಧುನಿಕ ಸ್ತ್ರೀ ಸಂಕುಲ ಸ್ಮರಿಸಲೇ ಬೇಕಾದ ಈ ಇಬ್ಬರು ದಿಟ್ಟೆಯರಿಗೊಂದು ಹ್ಯಾಟ್ಸ್ ಆಫ್ ಹೇಳದಷ್ಟು ಕೃತಘ್ನರೇ ನಾವು ?
ಮೊದಲಿಗಳಮ್ಮಾ...
ರುಕ್ಮಿಣಿಯಮ್ಮ ಹಲವು ಅಧಿಕಾರ, ಸ್ಥಾನಮಾನ ಅನುಭವಿಸಿದರು. ಜತೆಗೆ ಆಕೆ ಅರಮನೆ ಗುರು-ಮಾರ್ಗದರ್ಶಕ ಅಂಬಿಲ್ ನರಸಿಂಹ ಅಯ್ಯಂಗಾರ್ ಸಂಬಂಧಿಕರು. ಎಲ್ಲಕ್ಕಿಂತ ಹೆಚ್ಚಾಗಿ ‘ಮೊದಲು’ಗಳಿಗೆ ಈಕೆ ಪರ್ಯಾಯ. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್‌ಗೆ ನಾಮಕರಣಗೊಂಡ ಮೊದಲ ಸದಸ್ಯೆ. ಮೈಸೂರು ಎಕನಾಮಿಕ್ ಕಾನ್ಫರೆನ್ಸ್, ಓರಿಯಂಟಲ್ ಕಾನ್ಫರೆನ್ಸ್‌ಗಳಲ್ಲಿ ಪಾಲ್ಗೊಂಡ ಅಗ್ಗಳಿಕೆ. ಮೈಸೂರು ಪ್ರಜಾಪ್ರತಿನಿಧಿ ಸಭೆ, ಜಿಲ್ಲಾ ಮಂಡಳಿಯ ಸದಸ್ಯೆ. ಹಿಂದೂ ಕಾನೂನು ಸುಧಾರಣಾ ಸಮಿತಿಗೆ ಅನುಭವದ ಧಾರೆ. ರಾಜ್ಯಾಂಗ ಸುಧಾರಣಾ ಸಮಿತಿಗೂ ಆಯ್ಕೆ; ಗ್ರಾಮೀಣ ಮಹಿಳೆಯ ಅಕ್ಷರದ ಹಕ್ಕಿಗೆ, ಮೌಢ್ಯತೆಯ ನಾಶಕ್ಕೆ ರೂಪುಗೊಂಡ ಮೊದಲ ಆಂದೋಲನ.
ವಾತ್ಸಲ್ಯಮಯಿ ರುಕ್ಮಿಣಿಯಮ್ಮ ಹತ್ತಾರು ಮಹಿಳಾ ಸಂಘಗಳ ಸ್ಥಾಪಕಿ. ಅಖಿಲ ಭಾರತ ಮಹಿಳಾ ಸಮ್ಮೇಳನವನ್ನು ಕಳೆದ ಶತಮಾನದ ಪ್ರಾರಂಭದಲ್ಲೇ ನಡೆಸಿ ಯಶಸ್ವಿಯಾದಾಕೆ. ೧೯೧೮ರಲ್ಲಿ ಮಹಿಳಾ ಸಮಾಜ ಸ್ಥಾಪನೆ. ವಾಣಿವಿಲಾಸ ಲೇಡಿಸ್ ಕ್ಲಬ್ ಹಿಂದೆಯೂ ಇವರ ಪಾತ್ರವಿದೆ. ಬಾಲಕಿಯರ ಪ್ರಾಥಮಿಕ ಶಾಲೆಗಳು ಮೈಸೂರಿನಲ್ಲಿ ಆರಂಭವಾಗಲು ಉತ್ತೇಜನ ನೀಡಿದವರು. ಅವರಿಗೆ ಅಭಿಮಾನಿ ಗಳು ಇಟ್ಟ ಹೆಸರು- ‘ವರ್ಡ್ಸ್ ವರ್ತ್’.

‘ಪಂಚಾಚಾರ್ಯ ಪ್ರಭೆ’ ಬೆಳಗಿದ ಪಂಡಿತ ಕಾಶೀನಾಥ ಶಾಸ್ತ್ರಿ ಜಯಂತಿ

೧೧೫ನೇ ಜಯಂತಿಯನ್ನು ಕಾಶೀನಾಥ ಶಾಸ್ತ್ರೀ ಕುಟುಂಬ ದವರಿಂದ ಜೂನ್ ೧೬ ರಂದು ಸಾಂಪ್ರದಾಯಿಕವಾಗಿ ಆಚರಣೆ ಪಂಚಾಚಾರ್ಯ ಪೀಠ, ಪರಂಪರೆ ಪ್ರಸಿದ್ಧ. ಈ ಆಚಾರ್ಯರ ಪ್ರಣೀತ ವಿಚಾರ, ಸಿದ್ಧಾಂತಗಳನ್ನು ಭಾರತದ ಪೂರ್ತಿ ಪ್ರಸರಿಸಬೇಕೆಂದು ಬಯಸಿ ಪ್ರಯತ್ನಿಸಿ ಯಶಸ್ವಿ ಯಾದವರೇ ಪಂಡಿತ ಕಾಶೀನಾಥ ಶಾಸ್ತ್ರಿ. ಇವರ ೧೧೫ನೇ ಜಯಂತಿ  ಅವರ ಕುಟುಂಬವರ್ಗದವರಿಂದ ಬುಧವಾರ ನಡೆಯುತ್ತಿದೆ.
ವೀರಶೈವ ಧರ್ಮದ ಪಂಚಪೀಠದ ಶಾಖಾಮಠಗಳಾದ ಕಾಶಿ, ಕೇದಾರ, ಕಾಶ್ಮೀರ, ನೇಪಾಳ, ಭೂತಾನ, ಕಂಚಿ, ಕುಂಭಕೋಣ, ರಾಮೇಶ್ವರ, ಶ್ರೀಲಂಕಾಗಳಲ್ಲೂ ಸಿದ್ಧಾಂತದ ಪುನರುತ್ಥಾನ ಇವರ ಧ್ಯೇಯ. ಇವರಿಗೆ ದಾರಿದೀಪವಾಯಿತು.
ಕಾಶಿಯಲ್ಲೇ ೧೯೧೮ರಲ್ಲಿ ಪ್ರಥಮ ಪಂಚಾಚಾರ್ಯ ಸಮ್ಮೇಳನ ನಡೆಸಿ ವೀರಶೈವ ಸಿದ್ಧಾಂತದ ಪ್ರಾಚೀನತೆ, ಪರಂಪರೆಯನ್ನು ವಿವಿಧ ಮಾಧ್ಯಮದಲ್ಲಿ ತಿಳಿಸಿದರು. ಪಂಚಪೀಠಗಳ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ದೊರಕುವ ಎಲ್ಲ ಮಾಹಿತಿ ಸಂಗ್ರಹಿಸಿ ‘ಶ್ರೀ ಕಾಶೀನಾಥ ಗ್ರಂಥಮಾಲೆ’ ಪ್ರಾರಂಭಿಸಿ ೬೦ ಕ್ಕೂ ಹೆಚ್ಚು ಸಂಸ್ಕೃತ, ಕನ್ನಡ ಕೃತಿಗಳನ್ನು ಪ್ರಕಟಿಸಿದರು. ಗೋರಖಪುರದಿಂದ ಇಂದಿಗೂ ಬರುತ್ತಿರುವ ಕಲ್ಯಾಣ ತಿಂಗಳ ಪತ್ರಿಕೆಯಲ್ಲಿ ಈಗಲೂ ಶಾಸ್ತ್ರಿಯವರ ವಿದ್ವತ್ ಲೇಖನ ಪುನರ್ ಮುದ್ರಣಗೊಳ್ಳುತ್ತಿವೆ.
ಪಂಚಾಚಾರ್ಯರ ಮೂರ್ತಿ ಶಿಲ್ಪ, ಭಾವಚಿತ್ರ ರೂಪುರೇಷೆ ಮಾಡಿದವರೂ ಇವರೇ. ವೀರಶೈವ ಮಹಾತ್ಮರು, ಶ್ರೀಕರ ಭಾಷ್ಯ, ಶ್ರೀ ರೇಣುಕ ವಿಜಯ, ಸಿದ್ಧಾಂತ ಶಿಖಾಮಣಿಯನ್ನು ಕನ್ನಡ ಲೋಕಕ್ಕೆ ತಂದುಕೊಟ್ಟ ಮಹನೀಯರು. ಶಿವಾದ್ವೈತ ಮಂಜರಿ, ಶ್ರೀಕರ ಭಾಹ್ಯ, ನಂದಿಕೇಶ್ವರ ಕಾರಿಕೆ, ಶಿವಾದ್ವೈತ ಪರಿಭಾಷೆ ಸೇರಿದಂತೆ ದುರ್ವಾದ ದೂರೀಕರಣ, ಸೂಕ್ಷ್ಮಾನಮಃ, ಚಂದ್ರ ಜ್ಞಾನಾಗಮಃ, ಕಾರಣವನು‘ ಮುಕುಟಾಗಮಃ ಶಕ್ತಿವಿಶಿಷ್ಟಾದ್ವೈತ, ವೀರಶೈವರತ್ನ ಬರೆದು ಪ್ರಸ್ತುತಪಡಿಸಿ ದವರು. ಇಂದಿಗೂ ಈ ಗ್ರಂಥಗಳೇ ಆಧಾರಗ್ರಂಥಗಳು.
ಪತ್ರಿಕಾ ಮಾಧ್ಯಮ: ತಾನು ಸಂಶೋಧಿಸಿದ ಪ್ರಾಚೀನ ಪರಂಪರೆಯ ಸಿದ್ಧಾಂತಗಳಿಗಾಗಿ ೮೪ ವರ್ಷಗಳ ಹಿಂದೆ ೧೬-೫-೧೯೨೭ ರಂದು ಕಾಶೀನಾಥ ಶಾಸ್ತ್ರಿ ಅವರು ಪಂಚಾಚಾರ್ಯ ಪ್ರಭಾ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಈ ನಾಲ್ಕನೇ ತಲೆಮಾರಿನಲ್ಲೂ ಈ ಪತ್ರಿಕೆ ನಿಂತಿಲ್ಲ. ಜೀವನದ ಏರುಪೇರು, ಕೌಟುಂಬಿಕ ಬಿರುಗಾಳಿಗೂ ಜಗ್ಗದೆ ಪ್ರತಿ ಸೋಮವಾರ ಪ್ರಕಟವಾಗಿ ಸಿದ್ಧಾಂತ, ಅಭಿಮಾನಿ ವಾಚಕರ ಚಂದಾದಾರರನ್ನು ತಲುಪುತ್ತಿದೆ.
ಸಯ್ಯಾಜಿರಾವ್ ರಸ್ತೆಯಲ್ಲಿ ಹೆಸರಾಂತ ಪಂಚಾಚಾರ್ಯ ಎಲೆಕ್ಟ್ರಿಕ್ ಪ್ರೆಸ್ ಇದ್ದ ಸ್ಥಳದಲ್ಲೇ ಈಗ ಚಾಮುಂಡೇಶ್ವರಿ ಚಿತ್ರಮಂದಿರವಿದೆ. ಜರ್ಮನಿಯಿಂದ ಹೊಸ ಮುದ್ರಣ ಮಂತ್ರ ‘ಡ್ಯಾನ್ಸನ್ ಪೇಯ್ನಿ ಅಂಡ್ ಎಲೈಟ್’ ತರಿಸಿ ಪ್ರೆಸ್ ಸ್ಥಾಪಿಸಿ ಮುದ್ರಣ ಕಾರ‍್ಯವನ್ನು ಕೈಗೊಳ್ಳಲಾಯಿತು. ಇದೀಗ ಈ ಯಂತ್ರ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ‘ಮಂಜೂಷ’ ವಸ್ತು ಸಂಗ್ರಹಾಲಯದಲ್ಲಿ ವಿರಾಜಮಾನ.
ಅವಿವಾಹಿತರಾಗಿದ್ದ ಕಾಶೀನಾಥ ಶಾಸ್ತ್ರಿ ಅವರ ಸೋದರ ಮಹದೇವಯ್ಯ ೧೯೫೦ರಿಂದ ೧೯೮೪ರವರೆಗೆ, ನಂತರ ಇವರ ಮಗ ಬಿಲಂ ಸಿದ್ದೇಶ್ವರಯ್ಯ ೧೯೮೪ರಿಂದ ನಡೆಸುತ್ತಿದ್ದು ಇದೀಗ ಇವರ ಮಗ ಬಿ.ಎಸ್.ಕಾಶೀನಾಥ್ ನಿರ್ವಹಿಸುತ್ತಿ ದ್ದಾರೆ.
ಪಂಚಾಚಾರ್ಯ ಪ್ರಭಾದಲ್ಲಿ ಗಾಂಧೀಜಿ ಅವರ ಮೈಸೂರು ಭೇಟಿ ವರದಿ ಅಲ್ಲದೆ ಬಾಲ್ಯ ವಿವಾಹ ನಿವಾರಣೆಗೆ ಬಂದ ಕಾಯ್ದೆ, ಮೈಸೂರು, ತಮಿಳುನಾಡು, ಕಾವೇರಿ ವಿವಾದ, ಜಸ್ಟೀನ್ ಪೇಜ್ ಆಯೋಗ ವರದಿಯಲ್ಲಿದೆ. ನಾಲ್ವಡಿಯವರ ಆಡಳಿತದ ಬೆಳ್ಳಿ ಹಬ್ಬ ಮುಂತಾದ ಸಾವಿರಾರು ಸಂಗತಿಗಳು ಅಚ್ಚಾಗಿವೆ. ಮೈಸೂರಿನ ರಾಜರ ಬಳಿ ಪಂಡಿತರಿಗೆ ಆಶ್ರಯವಿತ್ತು. ಇಲ್ಲೆಲ್ಲಾ ವಿದ್ವಾನ್ ಮಂಡಲಿ, ವಿದ್ವಾಂಸರು ಪಂಡಿತರ ಸಹವಾಸಕ್ಕೆಂದೇ ದೂರದ ನವಲಗುಂದ ತಾಲೂಕಿನಿಂದ ಬಂದ ರೆಡ್ಡೀರ ನಾಗನೂರಿನ ಬೃಹನ್ಮಠದ ಕಾಶೀನಾಥ ಶಾಸ್ತ್ರಿ  ಎಲ್ಲ ವಿದ್ವಾಂಸರ ಮನ್ನಣೆ ಗಳಿಸಿದರು. ಅವರ ಪ್ರತಿಭೆಗಳಿಗೆ ಅವಕಾಶಕೊಟ್ಟು ಸಾಹಿತ್ಯದ ಪ್ರಕಾಶನ ಕೈಗೊಂಡರು. ಇಂಥ ಘನ ವಿದ್ವಾಂಸರಾದ ಇವರು ೧೮೯೫ರಲ್ಲಿ ಜನಿಸಿ ೫೫ ವರ್ಷ ಬಾಳಿ ೧೯೫೦ರಲ್ಲಿ ನಿಧನರಾದರು. ಇವರ ಜಯಂತಿಯನ್ನು ಆಧುನಿಕ ಕೌಟುಂಬಿಕ ಪದ್ಧತಿ ತುಂಬಿರುವ ಈ ಸಮಾಜದಲ್ಲಿ ಜಯಂತಿ ಆಚರಣೆ ಕೈಗೊಂಡಿರುವುದು ಅರ್ಥಪೂರ್ಣ.
-ಈಚನೂರು ಕುಮಾರ್

ಕುಷ್ಠರೋಗ: ರಾಷ್ಟ್ರೀಯ ಮಾದರಿ ಸಮೀಕ್ಷೆ

ಜೆ.ಶಿವಣ್ಣ ಮೈಸೂರು
ಕುಷ್ಠರೋಗ ನಿರ್ಮೂಲನೆಗೆ ಪಣತೊಟ್ಟಿರುವ ಕೇಂದ್ರ ಸರಕಾರ ೨೦೧೦-೧೧ನೇ ಸಾಲಿನಲ್ಲಿ ದೇಶವ್ಯಾಪಿ ಕುಷೃರೋಗದ ‘ರಾಷ್ಟ್ರೀಯ ಮಾದರಿ ಸಮೀಕ್ಷೆ’ ಕಾರ್ಯಕ್ರಮ ನಡೆಸಲು ಮುಂದಾಗಿದೆ.
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ರಾಷ್ಟ್ರದ ೯೩ ಜಿಲ್ಲೆಗಳನ್ನು ಸಮೀಕ್ಷೆಗೆ ಆರಿಸಿದ್ದು, ರಾಜ್ಯದ ಆರು ಜಿಲ್ಲೆಗಳು ಕಾರ್ಯಕ್ರಮದಲ್ಲಿ ಸೇರಿವೆ. ಮೈಸೂರು, ಬೆಂಗಳೂರು ಗ್ರಾಮಾಂತರ, ಉಡುಪಿ, ಬೀದರ್, ಬಳ್ಳಾರಿ ಮತ್ತು ಧಾರವಾಡ ಆ ಜಿಲ್ಲೆಗಳು. ಪ್ರತಿ ಜಿಲ್ಲೆಯ ಅತಿ ಹೆಚ್ಚು ಕುಷ್ಠರೋಗ ಸಾಂದ್ರತೆ ತಾಲೂಕು ಮತ್ತು ಕಡಿಮೆ ಸಾಂದ್ರತೆ ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು ಮಾದರಿ ಸಮೀಕ್ಷೆ   ರೂಪಿಸಲಾಗಿದೆ.
ಸಮೀಕ್ಷೆ ಉದ್ದೇಶ: ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಪಿಆರ್ ಮಟ್ಟವನ್ನು ಭಾರತ ತಲುಪಿದ್ದರೂ ಅದು ಎಷ್ಟರ ಮಟ್ಟಿಗೆ ನಿಖರ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು (ಮೌಲ್ಯಮಾಪನ) ಸಮೀಕ್ಷೆಯ ಮೂಲ ಗುರಿ. ಜತೆಗೆ ಕುಷ್ಠರೋಗದ ಹೊಸ ರೋಗಿಗಳ ಸಾಂದ್ರತೆಯ ಜನಸಂಖ್ಯೆಗೆ ಅನುಗುಣವಾಗಿ ಅಧ್ಯಯನ, ಅದರ ಸಾಂದ್ರತೆ ಅನುಸಾರ ಅಂಗವಿಕಲತೆಯನ್ನು ಗ್ರೇಡ್-೧ ಮತ್ತು ಗ್ರೇಟ್ -೨ ಎಂದು ನಿರ್ಧಾರ, ಕುಷ್ಠರೋಗ ಸಾಮಾಜಿಕ ಪಿಡುಗಾಗಿ ಉಳಿದಿದೆಯೇ, ರೋಗಿಗಳನ್ನು ಸಮಾಜದಿಂದ ಪ್ರತ್ಯೇಕಿಸಲಾಗುತ್ತಿದೆಯೇ (ಸೋಷಿಯಲ್ ಸ್ಟಿಗ್ಮಾ ಅಂಡ್ ಡಿಸ್‌ಕ್ರಿಮಿನೇಷನ್) ಎನ್ನುವುದನ್ನು ಗುರುತಿಸುವುದು.
ಜಿಲ್ಲೆಯ ಎರಡು ತಾಲೂಕು: ಮೈಸೂರು ಜಿಲ್ಲೆಯಲ್ಲಿ ಕಡಿಮೆ ಸಾಂದ್ರತೆ ಇರುವ ಹುಣಸೂರು ಹಾಗೂ ಹೆಚ್ಚು ಸಾಂದ್ರತೆ ಇರುವ ತಿ.ನರಸೀಪುರ ತಾಲೂಕಿನಲ್ಲಿ  ಜೂ. ೭ರಿಂದ ಸೆ. ೩೧ರವರೆಗೆ ಮೂರು ತಿಂಗಳ ಕಾಲ ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಸಹಕಾರದೊಂದಿಗೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುವರು. ಇದಕ್ಕಾಗಿ ನಾಲ್ವರು ವೈದ್ಯ ಅಧಿಕಾರಿಗಳು, ಪ್ರತಿ ತಾಲೂಕಿನಲ್ಲಿ ೨೨ ಮಂದಿ ಶೋಧನಾ ಸದಸ್ಯರು, ೬೦ ಮಂದಿ ಆಶಾ ಕಾರ್ಯಕರ್ತೆಯರು, ೬೦ ಮಂದಿ ಗ್ರಾ.ಪಂ. ಸದಸ್ಯರು ಭಾಗವಹಿಸುವರು. ಅಂತಿಮವಾಗಿ ಶಂಕಾಸ್ಪದ ಪ್ರಕರಣಗಳನ್ನು ದೃಢಪಡಿಸಲು ಇಬ್ಬರು ಹಾಗೂ ಇಬ್ಬರು ಅಧಿಕಾರಿಗಳು ಊರ್ಜಿತ ಗೊಳಿಸುವರು.
ಗ್ರಾಮಕ್ಕೆ ಸಮೀಕ್ಷೆಗೆ ತೆರಳುವ ಮುನ್ನ ದಿನ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಲಾಗು ವುದಲ್ಲದೇ, ಕರಪತ್ರ ಹಂಚಿಕೆ, ಜಾಗೃತಿ ಶಿಕ್ಷಣ ಸಭೆ, ಸ್ವಸಹಾಯ, ಯುವಕ ಸಂಘಗಳೊಡನೆ ಚರ್ಚೆ ಇತ್ಯಾದಿ ಹಮ್ಮಿಕೊಳ್ಳಲಾಗುತ್ತಿದೆ.
ಅಂಕಿ ಅಂಶ: ಕುಷ್ಠರೋಗ ಪ್ರಮಾಣ ಶೇ.೧ಕ್ಕಿಂತ ಕಡಿಮೆ ಸ್ಥಾನಿಕತೆ (ಪ್ರಿವಲೆನ್ಸ್ ದರ ) ಇರಬೇಕೆನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ತಾಕೀತು. ಅದರನ್ವಯ ಭಾರತದಲ್ಲಿ ಈಗಾಗಲೇ ಕುಷ್ಠರೋಗ ಪ್ರಮಾಣ (೧೦ ಸಾವಿರ ಜನಸಂಖ್ಯೆಗೆ) ೦.೭೩ರಷ್ಟಿದೆ. ಕರ್ನಾಟಕದಲ್ಲಿ ಆ ಪ್ರಮಾಣ ೦.೫ ಇದ್ದರೆ, ಮೈಸೂರು ಜಿಲ್ಲೆಯಲ್ಲಿ ಕುಷ್ಠರೋಗವು ನಿರ್ಮೂಲನಾ ಹಂತದಲ್ಲಿದ್ದು, ಸ್ಥಾನಿಕತೆ  ೦.೨೨ ರಷ್ಟಿಗೆ ತಲುಪಿದೆ.
ಕುಷ್ಠರೋಗ ನಿವಾರಣೆಗೆ ೧೯೮೯ರಲ್ಲಿ ಬಹು ಔಷಧ ಚಿಕಿತ್ಸೆ ಆರಂಭಿಸಿದಾಗ ಜಿಲ್ಲೆಯಲ್ಲಿ ೩೭೧೦ ರೋಗಿಗಳಿದ್ದಾರಲ್ಲದೇ, ಸ್ಥಾನಿಕತೆ ೧೦,೦೦೦ ಜನಸಂಖ್ಯೆಗೆ ೨೦. ೦೩ ಇತ್ತು. ಪ್ರಸ್ತುತ ೨೦೦೯ರ ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ೮೬ ಕುಷ್ಠರೋಗಿಗಳಿದ್ದು, ಪ್ರಿವಲೆನ್ಸ್ ದರ  ೦.೨೯ ಕ್ಕೆ ಇಳಿದಿತ್ತು. ಅದಿನ್ನೂ ಕಡಿಮೆಯಾಗಿದೆ. ಆರೋಗ್ಯ ಇಲಾಖೆ ವತಿಯಿಂದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ತಪಾಸಣೆ, ಸಲಹೆ, ಮಾರ್ಗದರ್ಶನ ಮತ್ತು ಬಹು ಔಷಧ ಚಿಕಿತ್ಸೆ ನೀಡಲಾಗುತ್ತಿದೆ ಎಂದು  ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳು ತಿಳಿಸಿದ್ದಾರೆ.

ಪಂಚಾಯಿತಿದಾರರಿಗೆ ನೀತಿಬೋಧೆ ಸಾಮರ್ಥ್ಯವೃದ್ಧಿ ಪಾಠ

ಪಿ.ಓಂಕಾರ್ ಮೈಸೂರು
ರಾಜ್ಯದ ೫,೬೨೮ ಗ್ರಾಮಪಂಚಾಯಿತಿಗಳ ಎಲ್ಲಾ ೯೧,೪೦೨ ನೂತನ ಸದಸ್ಯರ ‘ಸಾಮರ್ಥ್ಯವೃದ್ಧಿ’ಗೆ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎಎನ್‌ಎಸ್‌ಎಸ್‌ಐಆರ್‌ಡಿ) ೪ ಹಂತದ ತರಬೇತಿ  ಕಾರ್ಯಕ್ರಮ ರೂಪಿಸಿದೆ.
ಹಳ್ಳಿ ಪಂಚಾಯಿತಿಗಳಿಗೆ ಆಯ್ಕೆಯಾದ ನೂತನ ‘ಸರದಾರ’ರದ್ದು ವೈವಿಧ್ಯಮಯ ಹಿನ್ನೆಲೆ. ರಾಜಕೀಯ ಸಂಗದಲ್ಲೇ ಇರುವ ಹಳ್ಳಿ ರಾಜಕಾರಣಿಗಳು, ಗುತ್ತಿಗೆದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಂಥ ಯಾವುದೇ ಅನುಭವ ಇಲ್ಲದ ಕೃಷಿಕರು,ಕೂಲಿಕಾರರು ಮತ್ತು ಅಕ್ಷರ ವಂಚಿತ ಮಂದಿಯೂ ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಪ್ರತಿನಿಧಿಗಳಾಗಿದ್ದಾರೆ.
ಇಂಥ ಎಲ್ಲಾ ಸದಸ್ಯರನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆ ತರಬೇತಿಯನ್ನು ವಿನ್ಯಾಸಗೊಳಿಸಿದ್ದು, ರಾಜ್ಯ ಪಂಚಾಯತ್ ರಾಜ್ ಇಲಾಖೆ ಸಮ್ಮತಿ ನೀಡಿದೆ. ಈಗ ಎಲ್ಲಾ ಪಂಚಾಯಿತಿಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ‘ಸಂಭ್ರಮ’ ಮನೆ ಮಾಡಿದ್ದು, ಜುಲೈ ೨ನೇ ವಾರದ ವೇಳೆಗೆ ಪಾಠಕ್ಕೆ ಕಿವಿ ಒಡ್ಡಲಿದ್ದಾರೆ. ಈ ಪ್ರಕ್ರಿಯೆ ಮುಂದಿನ ಒಂದು ವರ್ಷ ಜಾರಿಯಲ್ಲಿರುತ್ತದೆ.
ಅಧ್ಯಕ್ಷ, ಉಪಾಧ್ಯಕ್ಷರಿಗೆ: ಮೊದಲ ಹಂತದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಮೂರು ದಿನದ ತರಬೇತಿ. ಜುಲೈ ೨ನೇ ವಾರ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಏಕಕಾಲಕ್ಕೆ ಆರಂಭವಾಗಲಿದ್ದು, ಆಗಸ್ಟ್ ಅಂತ್ಯದವರೆಗೆ ನಡೆ ಯುತ್ತದೆ. ಮುಖಾಮುಖಿ ತರಬೇತಿ ಈ ಬಾರಿಯ ವಿಶೇಷ. ಹೊಸದಾಗಿ ನೇಮಕಗೊಂಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ಮತ್ತು ಕಾರ್ಯದರ್ಶಿಗಳನ್ನು ೩ನೇ ದಿನ ಅಧ್ಯಕ್ಷ-ಉಪಾಧ್ಯಕ್ಷರ ಜತೆ ಕೂರಿಸಿ ‘ಹೊಂದಾಣಿಕೆ ಆಡಳಿತ’ದ ಪಾಠ ಬೋಧಿಸಲಾಗುತ್ತದೆ.
ಎಲ್ಲಾ ಸದಸ್ಯರಿಗೆ: ೨ನೇ ಹಂತದಲ್ಲಿ ಎಲ್ಲಾ ೯೧,೪೦೨ ಸದಸ್ಯರು ವಿದ್ಯಾರ್ಥಿ ಗಳಾಗಲಿದ್ದಾರೆ. ಮುಖಾಮುಖಿ ಮತ್ತು ಉಪಗ್ರಹ ಆಧರಿತ ಕಾರ್ಯಕ್ರಮಗಳನ್ನು ಸಂಯೋಜಿಸಿ ತರಬೇತಿಯನ್ನು ವಿನ್ಯಾಸಗೊಳಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಆರಂಭ, ಡಿಸೆಂಬರ್ ಅಥವಾ ಮುಂದಿನ ಜನವರಿ ವೇಳೆಗೆ ಪ್ರಕ್ರಿಯೆ ಮುಗಿಯಲಿದೆ.
ತಾಲೂಕುವಾರು ಸದಸ್ಯರ ಸಂಖ್ಯೆಯನ್ನಾಧರಿಸಿ,ವಿವಿಧ ಬ್ಯಾಚ್‌ಗಳಲ್ಲಿ ತರಬೇತಿ ಸಂಘಟಿಸಲಾಗುತ್ತದೆ. ಪ್ರತಿ ಸದಸ್ಯರಿಗೆ ೧೧ದಿನಕ್ಕೆ ಕಡಿಮೆ ಇಲ್ಲದಂತೆ ಸಾಮರ್ಥ್ಯವೃದ್ಧಿ ಪಾಠ ಲಭ್ಯ.
 ಇ-ಲರ್ನಿಂಗ್ ಪ್ಯಾಕೇಜ್: ಪ್ರಕ್ರಿಯೆಗೆ ಸುಮಾರು ೩೫೦ ರಿಂದ ೩೭೦ ಮಂದಿ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜತೆಗೆ, ವಿವಿಧ ಯೋಜನೆ ಗಳನ್ನು ಸದ್ಬಳಕೆ ಮಾಡಿಕೊಂಡ ಮಾದರಿ ಪಂಚಾಯಿತಿಯ ಉದಾಹರಣೆ ಇರುವ ಡಿವಿಡಿಗಳನ್ನೊಳಗೊಂಡ ‘ಇ-ಲರ್ನಿಂಗ್ ’ಪ್ಯಾಕೇಜ್‌ಅನ್ನು  ಎಎನ್‌ಎಸ್‌ಎಸ್‌ಐಆರ್‌ಡಿ ರೂಪಿಸಿದೆ. ಸಂಪನ್ಮೂಲ ವ್ಯಕ್ತಿಗಳ ಗೈರು ಸಂದರ್ಭ ಇ-ಲರ್ನಿಂಗ್ ತರಬೇತಿ. ಕಿಟ್‌ಗಳನ್ನು ನಂತರ ಎಲ್ಲಾ ಪಂಚಾಯಿತಿಗಳಿಗೆ ವಿತರಿಸುವ ಉದ್ದೇಶ ಸಂಸ್ಥೆಯದ್ದು.
೩ ಮತ್ತು ೪ನೇ ಹಂತ: ಗ್ರಾ.ಪಂ.ಸ್ಥಾಯಿ ಸಮಿತಿ ಸದಸ್ಯರಿಗೆ ೩ ದಿನದ ತರಬೇತಿ ೩ನೇ ಹಂತದ ಕಾರ‍್ಯಕ್ರಮ. ಪ್ರತಿ ಪಂಚಾಯಿತಿಗಳಲ್ಲಿ ಸ್ಥಾಯಿ ಸಮಿತಿಗಳ ರಚನೆ ಆಗುತ್ತದಾದರೂ ಈ ಹಿಂದಿನ ಅವಧಿಗಳಲ್ಲಿ ಕಾರ‍್ಯ ನಿರ್ವಹಿಸಿದ್ದಿಲ್ಲ. ಕಾರ‍್ಯವ್ಯಾಪ್ತಿಯ ಅರಿವೂ ಇರುವುದಿಲ್ಲ. ಸಮಗ್ರ ಮಾಹಿತಿ ಯನ್ನೊಳಗೊಂಡ ತರಬೇತಿ ಮೂಲಕ ಈ ಐದು ವರ್ಷದ ‘ಹಂಗಾಮಿನಲ್ಲಿ’ ಸಮಿತಿಗಳನ್ನು ಸಕ್ರಿಯಗೊಳಿಸುವ ಆಶಯ ಸಂಸ್ಥೆಯದ್ದು. ೪ನೇ ಹಂತದಲ್ಲಿ, ಎಲ್ಲಾ ಸದಸ್ಯರಿಗೆ ಮತ್ತೊಮ್ಮೆ ಶಿಕ್ಷಣ, ಆರೋಗ್ಯ, ನೀರು, ನೈರ್ಮಲ್ಯ ಇತ್ಯಾದಿ ಸಂಗತಿಗಳ ಕುರಿತು ವಲಯ/ವಿಷಯವಾರು ತರಬೇತಿ ನೀಡಲಾಗುತ್ತದೆ.
ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ: ೨೫೦ ಮಂದಿ ಸಂಪನ್ಮೂಲ ವ್ಯಕ್ತಿಗಳು ಸಂಸ್ಥೆಯ ಸಂಪರ್ಕದಲ್ಲಿದ್ದಾರೆ. ಪಂಚಾಯಿತಿ ವ್ಯವಸ್ಥೆ ಬಗ್ಗೆ ನಂಬಿಕೆ, ತಿಳಿವಳಿಕೆ ಇರುವ, ಬೋಧನೆ ಕೌಶಲ್ಯವುಳ್ಳ ಅರ್ಹರನ್ನು ಸ್ಥಳೀಯವಾಗಿಯೇ ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ.ಎಲ್ಲರಿಗೂ ಎಸ್‌ಐಆರ್‌ಡಿಯಲ್ಲಿ ‘ಮಾಸ್ಟರ್ ಟ್ರೈನರ್’ಮೂಲಕ ತರಬೇತಿ ನೀಡಲಾಗುವುದು ಎಂದು ತರಬೇತಿ ಸಲಹೆಗಾರ ವಿಲ್‌ಫ್ರೆಡ್ ಡಿಸೋಜಾ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ಎಲ್ಲಾ ತಾಲೂಕು ಕೇಂದ್ರದಲ್ಲಿ ನಡೆಯುವ ಪ್ರಕ್ರಿಯೆ ಮೇಲೆ ನಿಗಾ ಇಡಲು ಹತ್ತು-ಹದಿನೈದು ಜನರ ತಂಡವೊಂದನ್ನು ರಚಿಸಲಾಗುತ್ತಿದೆ. ಗ್ರಾಮಾಭಿವೃದ್ಧಿ ದಿಸೆಯಲ್ಲಿ ನೂತನ ಸದಸ್ಯರನ್ನು ಸರ್ವ ಸನ್ನದ್ಧರನ್ನಾಗಿಸಿ, ಹೊಸ ಕನಸು ತುಂಬುವುದು ಉದ್ದೇಶ ಎಂದು ವಿವರಿಸಿದರು.

ಪರ್ವತಾರೋಹಿ ಮರೆತ ಸರಕಾರ

ವಿಕ ಸುದ್ದಿಲೋಕ ಮೈಸೂರು
ಮೈಸೂರಿನ ಹೆಸರನ್ನು ಪರ್ವತಾರೋಹಣದ ಮೂಲಕ ದೇಶಾದ್ಯಂತ ಪಸರಿಸಿದ ಗೋವಿಂದ ರಾಜು ಅವರಿಗೆ ಸಿಗಲೇ ಇಲ್ಲ ಗೌರವ. ಅದಕ್ಕಾಗಿ ಕುಟುಂಬದ ಸದಸ್ಯರ ಮನಸಿನಲ್ಲಿ ಬರೀ ನಿರೀಕ್ಷೆಗಳ ಭಾರ.
ಕಾಲು ಬೆರಳು ಕಳೆದು ಕೊಂಡರೂ ಪರ್ವತಾರೋಹಣದ ಉತ್ಸಾಹ ಕಳೆದುಕೊಳ್ಳದೇ ಸಾಧನೆಯ ಉತ್ತುಂಗಕ್ಕೇರಿದ ಗೋವಿಂದರಾಜು ಮೃತಪಟ್ಟು ಇದೀಗ ಒಂದು ವರ್ಷ. ಗೋವಿಂದರಾಜು ಹೆಸರು ಮುಂದಿನ ಪೀಳಿಗೆಗೂ ಮುಟ್ಟ ಬೇಕೆನ್ನುವ ಬಯಕೆಯೊಂದಿಗೆ ಅವರ ಕುಟುಂಬ ಪ್ರಯತ್ನಿಸುತ್ತಿದೆ. ಭಾನುವಾರ ನಡೆದ ಅವರ ವರ್ಷದ ತಿಥಿ ಸಂದರ್ಭದಲ್ಲೂ ಇದೇ ಧ್ಯಾನ. ಗೋವಿಂದರಾಜು ಅವರು ಸ್ಥಾಪಿಸಿದ ಡೆಕ್ಕನ್ ಮೌಂಟೆನರಿ ಲೀಗ್ ಮೂಲಕ ಅಪ್ಪನ ಚಟುವಟಿಕೆ ವಿಸ್ತರಿಸುವುದು ಮಗನ ಹಂಬಲ. ಸಾಕಷ್ಟು ಇಲಾಖೆ ಗಳಿಗೆ ನೆರವಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಯಾರೀ ಗೊವಿಂದರಾಜು: ಮೈಸೂರಲ್ಲಿ ೧೯೩೨ ರಲ್ಲಿ ಜನಿಸಿದ ಗೋವಿಂದರಾಜು ತೇನ್‌ಸಿಂಗ್‌ನ ಕೊನೆಯ ವಿದ್ಯಾರ್ಥಿ. ಪರ್ವತಾರೋಹಣ ಇವರ ಸಾಧನೆ ಕ್ಷೇತ್ರ. ಓದಿದ್ದು ಕಡಿಮೆ. ಮನೆಯ ಲ್ಲೇನೂ ಸ್ಥಿತಿವಂತರಲ್ಲ. ಹರಯಕ್ಕೆ ಬರುವಷ್ಟರಲ್ಲಿ ಪರ್ವತಾರೋಹಣದ ಆಭಿರುಚಿ ಬೆಳೆದಿತ್ತು. ತೇನ್‌ಸಿಂಗ್ ಹಿಮಾಲಯ ಏರಿದ ವಿಚಾರ ಓದಿ ಛಲ ಬಿಡದೇ ಪ್ರಯತ್ನಿಸುತ್ತಿದ್ದರು. ಅದರಂತೆ ಎಲ್ಲಾ ಪರ್ವತಗಳನ್ನು ಏರಿದ ಗೋವಿಂದರಾಜು ಚಿತ್ರರಂಗದಲ್ಲೂ ದುಡಿದರು. ಅತ್ಯುತ್ತಮ ಕುಸ್ತಿ ಪಟು. ಆರು ದಶಕದ ಕಾಲ ಪರ್ವತಾರೋಹಣದ ನಂಟು. ಹಿರಿಯ ಪೊಲೀಸ್ ಅಧಿಕಾರಿಗಳು, ಚಿತ್ರ ನಟರು ಹಾಗೂ ವಿಶೇಷ ಪಡೆಗಳ ತರಬೇತುದಾರ. ಚಿತ್ರನಟ ಎಂ.ಪಿ.ಶಂಕರ್ ಸ್ನೇಹಿತ. ಅವರೊಂದಿಗೆ ಗಂಧದಗುಡಿ ಸೇರಿ ಹಲವು ಚಿತ್ರಗಳ ಸಹಾಯಕ ನಿರ್ದೇಶಕರು. ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರು.
ಅಧಿಕಾರಿಗಳೇ ಇತ್ತ ನೋಡಿ: ಆರು ತಿಂಗಳ ಹಿಂದೆ ಮುಂಬಯಿ ದಾಳಿಯಲ್ಲಿ ಹತರಾದ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆಗೂ ಇವರೇ ತರಬೇತುದಾರರು. ಹೈದರಾಬಾದ್‌ನ ಐಪಿಎಸ್ ಅಧಿಕಾರಿಗಳ ತರಬೇತಿ ಸಂಸ್ಥೆಯಲ್ಲಿ ೧೯೮೭ರಿಂದ ೨೦೦೪ರವರೆಗೆ ಗೋವಿಂದರಾಜು ಪರ್ವತಾರೋಹಣ, ಚಾರಣದ ತರಬೇತಿ ನೀಡುತ್ತಿದ್ದರು. ಇದರಲ್ಲಿ ಈಗಿನ ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್, ಹಿಂದಿನ ಆಯುಕ್ತ ಪ್ರವೀಣ್ ಸೂದ್ ಅವರೂ ಇದ್ದಾರೆ. ಗೋವಿಂದರಾಜು ಮೃತಪಟ್ಟಾಗ ಒಂದಿಬ್ಬರು ಅಧಿಕಾರಿಗಳು ಮನೆಗೆ ಬಂದು ಸಂತಾಪ ಹೇಳಿ, ನಮ್ಮ ಸಹಾಯ ಇರುತ್ತದೆ ಎಂದು ಹೇಳಿಹೋಗಿದ್ದರೂ ಯಾವುದೇ ನೆರವು ಸಿಕ್ಕಿಲ್ಲ.
ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣ ದಲ್ಲಿರುವ ಸಾಹಸ ಕ್ರೀಡೆಗೆ ಗೋವಿಂದರಾಜು ಹೆಸರಿಡಬೇಕು. ಕ್ರೀಡಾ ಹಾಗೂ ಯುವಜನ ಇಲಾಖೆಯವರು ಅವರ ಹೆಸರಿನಲ್ಲೊಂದು ಪ್ರಶಸ್ತಿ ಸ್ಥಾಪಿಸಬೇಕು ಎನ್ನುವುದು ಅವರ ಕುಟುಂಬದ ಬೇಡಿಕೆ.

ಮುಚ್ಚುವ ಹಾದಿಯಲ್ಲಿದೆ ಲಕ್ಷ್ಮೀಪುರಂ ಶಾಲೆ

ವಿಕ ವಿಶೇಷ ಮೈಸೂರು
ಲಕ್ಷ್ಮೀಪುರಂ  ಶಾಲೆಗೆ  ಸೇರಲು ಮಕ್ಕಳೇ ಬರುತ್ತಿಲ್ಲ !
ಆರು ವರ್ಷ ಉರುಳಿದರೆ ಶತಮಾನೋತ್ಸವ ಆಚರಣೆಯ ಸಡಗರ - ಸಂಭ್ರಮವನ್ನು ಕಾಣಬೇಕಿರುವ ನಗರದ  ಅತ್ಯಂತ ಹಳೆಯ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ೨೦೧೦-೧೧ನೇ ಸಾಲಿಗೆ  ವ್ಯಾಸಂಗ ಮಾಡಲು ಉಳಿದ ಮಕ್ಕಳ ಸಂಖ್ಯೆ ಕೇವಲ ೫. ತರಗತಿಗಳು ೭, ಮಕ್ಕಳು ೫ ಎಂಬ ವಿಚಿತ್ರ ಸನ್ನಿವೇಶ !
ಹಾಗಾಗಿ ಒಂದಷ್ಟು ದಿನ ಕಾಯ್ದು ನೋಡಿ, ತಾತ್ಕಾಲಿಕವಾಗಿ ಶಾಲೆ ಯನ್ನು ಮುಚ್ಚಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ.
ಲಕ್ಷ್ಮೀಪುರಂನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಇಷ್ಟುದ್ದದ ಹೆಸರಿನಲ್ಲಿ ಕರೆದರೆ, ತಕ್ಷಣ ಯಾರಿಗೂ ಈ ಶಾಲೆಯ ನೆನಪು ಬಾರದು. ಅದೇ ಲಕ್ಷ್ಮೀಪುರಂ ಶಾಲೆ ಎನ್ನಿ ! ತಕ್ಷಣ, ಓ ಅದ... ಸಂಸದ ಎಚ್.ವಿಶ್ವನಾಥ್, ನಟ ಅಂಬರೀಷ್ ಓದಿದ ಶಾಲೆ ಎಂದು ನೆನಪು ಮಾಡಿಕೊಳ್ಳುವವರೇ ಹೆಚ್ಚು.
ಸ್ಥಳೀಯ ಶಾಸಕ ಎಸ್. ಎ. ರಾಮದಾಸ್ ಹಾಗೂ ನಂಜನಗೂಡು ಶಾಸಕ ವಿ. ಶ್ರೀನಿವಾಸಪ್ರಸಾದ್ ಅವರಿಗೂ ಈ ಶಾಲೆ ಅಂದ್ರೆ ಅಚ್ಚು ಮೆಚ್ಚು. ೧೯೧೬ರಲ್ಲಿ ಮೈಸೂರು ಮಹಾರಾಜರಿಂದ ಸ್ಥಾಪನೆಯದ ಈ ಶಾಲೆ  ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದೆ. ಇಲ್ಲಿ ತಯಾರಾದ ಅಸಂಖ್ಯಾತ ಮಕ್ಕಳು ಸಮಾಜದ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸು ತ್ತಿದ್ದಾರೆ.  ಅರಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಎಲ್ಲ ಸಿಬ್ಬಂದಿಗಳ ಮಕ್ಕಳಿಗೂ ಲಕ್ಷ್ಮೀಪುರಂ ಶಾಲೆಯೇ ಸರಸ್ವತಿ ಮಂದಿರ. 
ಅಶೋಕಪುರಂ, ಕೃಷ್ಣಮೂರ್ತಿಪುರಂ, ಜಯನಗರ, ಲಕ್ಷ್ಮೀಪುರಂ, ನಂಜುಮಳಿಗೆ ಸೇರಿದಂತೆ ಹೃದಯ ಭಾಗದಲ್ಲಿರುವ ಬಹುತೇಕ  ಎಲ್ಲ ನಿವಾಸಿಗಳ  ಮಕ್ಕಳು ಹಿಂದೊಮ್ಮೆ ‘ಅ,ಆ,ಇ.ಈ...’-ಕಲಿತಿದ್ದು ಇಲ್ಲಿಯೇ.  ಇಂಥ ಶಾಲೆ ಸೇರಲು ಈಗ ಮಕ್ಕಳೇ ಬರುತ್ತಿಲ್ಲ ಎಂಬುದು ಮಾತ್ರ ಸೋಜಿಗದ ಸಂಗತಿ. ಹಿಂದೊಮ್ಮೆ ಈ ಶಾಲೆಯಲ್ಲಿ ೬೦೦ ರಿಂದ ೮೦೦ ಮಕ್ಕಳು ಕಲಿಯುತ್ತಿದ್ದರು, ಅಂಗಳದಲ್ಲಿ ನಿಂತು  ಜನಗಣ ಮನ ಹಾಡುವುದನ್ನು  ನೋಡುವುದೇ ಒಂದು ಭಾಗ್ಯ ಎಂಬ ದಿನಗಳು ಈಗ ನೆನಪು ಮಾತ್ರ.
೨೦ ವಿದ್ಯಾರ್ಥಿಗಳಿಗೆ ಹುಡುಕಾಟ: ಶಿಕ್ಷಣ ಇಲಾಖೆ ಮೂಲಗಳು ಹೇಳುವ ಪ್ರಕಾರ- ೨೦೦೯-೧೦ನೇ ಸಾಲಿನಲ್ಲಿ  ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ  ಮಕ್ಕಳ ಸಂಖ್ಯೆ ಕೇವಲ ೧೫ರ ಆಸು-ಪಾಸಿನಲ್ಲಿ ಇತ್ತು.  ಇವರ ಪೈಕಿ ೧೦ ಮಕ್ಕಳು ಏಳನೇ ತರಗತಿ ಉತ್ತೀರ್ಣರಾಗಿ, ಪ್ರೌಢಶಾಲೆ ಸೇರಲು ಟಿಸಿ ಪಡೆದುಕೊಂಡು ಹೋದರು. ಹಾಗಾಗಿ  ಈಗ ಉಳಿದಿರುವವರು  ಐವರು ಮಾತ್ರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಂದನ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.
‘ಈ ಶಾಲೆಯ ಆಸುಪಾಸಿನಲ್ಲಿ ಇಲಾಖೆ ನಡೆಸಿದ  ಗಣತಿ ಪ್ರಕಾರ ಶಾಲೆ ಬಿಟ್ಟ ಮಕ್ಕಳು ಇದ್ದಾರೆ.  ಅವರೆಲ್ಲರನ್ನೂ ಶಾಲೆಗೆ ಕರೆತರಲಾಗು ವುದು. ಜೂ. ೩೦ರ ತನಕವೂ ಪ್ರವೇಶಕ್ಕೆ ಅವಕಾಶವಿದೆ. ಒಟ್ಟು ಮಕ್ಕಳ ಸಂಖ್ಯೆ ೨೦ ಆದರೂ ಶಾಲೆಯನ್ನು ಮುಂದುವರಿಸಲಾಗುವುದು’ ಎಂದು ತಿಳಿಸಿದರು.
ಖಾಸಗಿ ಶಾಲೆಗಳ ಆಕರ್ಷಣೆ : ಲಕ್ಷ್ಮೀಪುರಂ ಸುತ್ತ-ಮುತ್ತ ಖಾಸಗಿ ಶಾಲೆಗಳು ಹೆಚ್ಚಾಗಿದ್ದೇ ಲಕ್ಷ್ಮೀಪುರಂ ಶಾಲೆ ಸೊರಗಲು ಕಾರಣ ವಾಯಿತು. ಈ ನಡುವೆ ಶಾಲೆಯನ್ನು ಸುಧಾರಿಸಿ, ಮಕ್ಕಳನ್ನು ಸೆಳೆ ಯಲು ಶಾಲೆಯನ್ನು ರೋಟರಿ ಸಂಸ್ಥೆಯವರಿಗೆ ದತ್ತು ನೀಡಲಾಯಿತು. ಇದಲ್ಲದೆ, ಮಕ್ಕಳನ್ನು ಸೆಳೆಯಲು, ತಮ್ಮಲ್ಲಿಯೇ ಹಿಡಿದಿಟ್ಟುಕೊಳ್ಳಲು ಇಲಾಖೆ  ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಲೇ ಇದೆ. ಆದರೂ ಮಕ್ಕಳು ಸರಕಾರಿ ಶಾಲೆಗೆ ಬರುತ್ತಿಲ್ಲ. ಹಾಗಾಗಿ, ಇದಕ್ಕೇನು ಪರಿಹಾರ ಎಂಬುದು ಇಲಾಖೆಗೂ ಹೊಳೆಯುತ್ತಿಲ್ಲ. ಆದರೂ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚದೇ, ಉಳಿಸಿಕೊಳ್ಳಲು ಪ್ರಯತ್ನ ಸಾಗಿದೆ. ಸಂಸದ ಎಚ್. ವಿಶ್ವನಾಥ್, ಸ್ಥಳೀಯ ಶಾಸಕ ಎಸ್. ಎ. ರಾಮದಾಸ್, ವಿ. ಶ್ರೀನಿವಾಪ್ರಸಾದ್  ಶಾಲೆಗೊಮ್ಮೆ ಬಂದು ಹೋಗಬೇಕಿದೆ !

ರೈಲ್ವೆ ಇಲಾಖೆಗೆ ಯಾವಾಗ ಬುದ್ಧಿ ಬರುತ್ತೋ...

ಕುಂದೂರು ಉಮೇಶಭಟ್ಟ, ಮೈಸೂರು
ಮೂರು ವರ್ಷದ ಹಿಂದೆಯೇ ಇಂಥದೊಂದು ಅಪಘಾತ ಸಂಭವಿಸಿದಾಗಲೇ ರೈಲ್ವೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು, ಅವರಿಗೆ ಯಾವಾಗ ಬುದ್ದಿ ಬರುತ್ತೋ ಗೊತ್ತಾಗುತ್ತಿಲ್ಲ...
ಹೀಗೆ ಸಿದ್ದಲಿಂಗಪುರ, ನಾಗನಹಳ್ಳಿ, ಬೆಲವತ್ತ, ಕೆ.ಆರ್. ಮಿಲ್ ಕಾಲೋನಿಯ ಹಲವಾರು ನಿವಾಸಿಗಳು ಆಕ್ರೋಶ ಮಾತುಗಳನ್ನಾಡುವುದು ಸತ್ಯವೇ ಎನ್ನಿಸುತ್ತದೆ.
ಶನಿವಾರ ಮಧ್ಯಾಹ್ನ ಭಾರಿ ರೈಲ್ವೆ ದುರಂತ ತಪ್ಪಿರ ಬಹುದು. ಹೀಗೆ ಆಗಾಗ ಈ ಗ್ರಾಮಗಳ ಗ್ರಾಮಸ್ಥರು ರೈಲು ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳುತ್ತಾರೆ. ಅವರಿಗೆ ಇಲ್ಲಿ ನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ.
ಶ್ರೀರಂಗಪಟ್ಟಣದಿಂದ ನಾಗನಹಳ್ಳಿ ದಾಟಿ ವರುಣಾ ನಾಲೆಗೂ ಮುನ್ನ  ಇರುವ ತಿರುವು ಭಾರಿ ಅಪಾಯ ಕಾರಿ. ತಿರುವಿನ ಜತೆಗೆ ಇಲ್ಲಿನ ಮಾನವ ರಹಿತ ಕ್ರಾಸಿಂಗ್ ಅನ್ನು ನಿತ್ಯ ನೂರಾರು ಮಂದಿ ದಾಟುತ್ತಾರೆ. ಕೆ.ಆರ್.ಮಿಲ್ ಕಾಲೋನಿಯಿಂದ ಬೆಲವತ್ತ,       ಆರ್‌ಬಿಐ ಕಡೆಗೆ ಹೋಗಲು ಇದೇ ರೈಲ್ವೆ ಹಳಿಯನ್ನು ದಾಟಬೇಕು. ಕೆಲವೊಮ್ಮೆ ಹಳಿ ದಾಟುವಾಗ ರೈಲು ಏಕಾಏಕಿ ನುಗ್ಗಿದ ಉದಾಹರಣೆಗಳು ಇವೆ.
ಇದರಿಂದಲೇ ಇಂಥ ಅನಾಹುತಗಳು ಸಂಭವಿಸ ಬಾರದು, ಸಾವಿರಾರು ಮಂದಿ ಸುರಕ್ಷಿತ ಸಂಚಾರಕ್ಕೆ ಇಲ್ಲೊಂದು ಮೇಲ್ಸೇತುವೆ ನಿರ್ಮಿಸಿ ಎನ್ನುವ ಬೇಡಿಕೆಯನ್ನು ಜನ ಕೇಳುತ್ತಲೇ ಬಂದಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬಂದಿದ್ದ ರೈಲ್ವೆ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೂ ಮನವಿ ಸಲ್ಲಿಸಲಾಗಿದೆ. ಸಂಸದ ಎಚ್.ವಿಶ್ವನಾಥ್ ಕೂಡ ಮನವಿ ಸ್ವೀಕರಿಸಿ ದ್ದಾರೆ. ಇಷ್ಟಾದರೂ ರೈಲ್ವೆ ಅಧಿಕಾರಿಗಳಿಗೆ ಜನರ ಮನವಿ ಕೇಳಿಸುತ್ತಿಲ್ಲ. ಇದೇ ಕಾರಣಕ್ಕೆ ಈ ಭಾಗದ ಜನ ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು.
‘ನಾವು ಹಿಂದೆ ಬಹಳಷ್ಟು ಬಾರಿ ಮನವಿ ಕೊಟ್ಟಿದ್ದೇವೆ. ಈಗ ರೈಲ್ವೆ ಸಚಿವರೇ ಮನವಿ ಪಡೆದರೂ ಪ್ರಯೋಜನವಾಗಿಲ್ಲ. ಬರೀ ಭರವಸೆ ಮಾತ್ರ ನಮಗೆ ಸಿಗುತ್ತಿವೆ. ಇಂಥ ಅನಾಹುತ ಸಂಭವಿಸಿದಾಗಲೂ ಎಚ್ಚೆತ್ತುಕೊಳ್ಳದಿದ್ದರೆ ಹೇಗೆ? ಅವರಿಗೆ ಯಾವಾಗ ಜ್ಞಾನ ಬರ‍್ತದೋ ನೋಡೋಣ ಎನ್ನುತ್ತಾರೆ ಕೆ.ಆರ್.ಮಿಲ್ ಕಾಲೋನಿಯ ಮನೋಹರ್.
ಹಿಂದೆಯೂ ತಪ್ಪಿದ್ದ ಅನಾಹುತ: ಮೂರು ವರ್ಷದ ಹಿಂದೆ ಮೈಸೂರು-ಮಯಿಲಾಡುದೊರೈ ರೈಲು ಹೊರಟಿದ್ದಾಗ ಬುಲ್ಡೋಜರ್ ಅಡ್ಡ ಬಂದಿತ್ತು. ಆಗ ದೊಡ್ಡ ಅನಾಹುತ ಸಂಭವಿಸಿರಲಿಲ್ಲ. ನಾಲ್ಕು ದಿನಗಳ ಹಿಂದೆ ಬೈಕ್ ಒಂದು ರೈಲಿಗೆ ಸಿಲುಕಿತ್ತು ಎಂದು ಗ್ರಾಮಸ್ಥರು ಹಾಗೂ ರೈಲ್ವೆ ಅಧಿಕಾರಿಗಳು ಹಳೆ ಘಟನೆ ಗಳನ್ನು ನೆನಪಿಸಿಕೊಳ್ಳುತ್ತಾರೆ.

ಹಜ್ರಾ ಸಮಿತಿ ವರದಿಯ ಗತಿ ಏನು ?

ಚೀ. ಜ. ರಾಜೀವ ಮೈಸೂರು
ನ್ಯಾಯಮೂರ್ತಿ ಎಚ್. ರಂಗವಿಠಲಾಚಾರ್ ಸಮಿತಿ ವರದಿಗೇನೋ ‘ಮುಕ್ತಿ’ ಸಿಗುವ ಲಕ್ಷಣ ಸದ್ಯಕ್ಕೆ ಗೋಚರವಾಗುತ್ತಿವೆ. ಆದರೆ, ದಶಕಗಳ ಹಿಂದೆ ಮೈಸೂರು ವಿವಿಯಲ್ಲಿ ಇಂಥದ್ದೇ ಸದ್ದು ಮಾಡಿದ್ದ ಹಜ್ರಾ ಕಮಿಟಿಯ ವರದಿಯ ಕಥೆ ಏನಾಯಿತು ?
ಮೈಸೂರು ವಿವಿ ಅಂಗಳದಲ್ಲಿ ಎದ್ದಿರುವ ಪ್ರಶ್ನೆ ಇದು. ರಂಗವಿಠಲಾಚಾರ್ ಸಮಿತಿ ವರದಿ ಅನುಸಾರ ವಿಶ್ರಾಂತ ಕುಲಪತಿ ಪ್ರೊ. ಜೆ. ಶಶಿಧರ ಪ್ರಸಾದ್ ವಿರುದ್ಧ  ಕ್ರಿಮಿನಲ್ ಮೊಕದ್ದಮೆ ಹೂಡಲು ಸರಕಾರ ಆದೇಶಿ ಸಿದೆ. ಈ ವಿಷಯ ವಿವಿಯ ಸ್ನಾತ ಕೋತ್ತರ ಕೇಂದ್ರಗಳಲ್ಲಿ ಮುಂದೇನು ಎಂಬ ಚರ್ಚೆಗೆ ನಾಂದಿಯಾಡಿದೆ. ಇದರ ಜತೆಯಲ್ಲೇ ೧೯೯೭ರಲ್ಲಿ ಸದ್ದು ಮಾಡಿದ ಹಜ್ರಾ ಸಮಿತಿಯ ವರದಿಯೂ ಉಲ್ಲೇಖವಾಗುತ್ತಿದೆ.
ಪ್ರೊ. ಎಂ. ಮಾದಯ್ಯ ಅವರು ಮೈಸೂರು ವಿವಿ ಕುಲಪತಿಯಾಗಿದ್ದ ೧೯೯೧-೯೭ರ ಅವಧಿಯಲ್ಲಿ ಅಧ್ಯಾಪಕರು ಹಾಗೂ ಅಧ್ಯಾಪಕೇತರ ನೇಮಕ ಅವ್ಯವಹಾರ, ಪರೀಕ್ಷಾ ಅಕ್ರಮ, ಹಣ ದುರುಪಯೋಗದ ಆರೋಪಗಳು ವ್ಯಕ್ತವಾಗಿದ್ದವು. ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಯಲ್ಲಿ ಅಕ್ರಮ, ವಿವಿ ಹಾಗೂ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ಇಬ್ಬರು ಮಹಿಳಾ ಪ್ರೊಫೆಸರ್‌ಗಳ ನೇಮಕ, ಕ್ರಿಕೆಟ್ ಸ್ಟೇಡಿಯಂ ಅಭಿವೃದ್ಧಿಗೆ ಬಿಡುಗಡೆಯಾದ ಹಣದ ದುರ್ಬಳಕೆ; ಪರೀಕ್ಷಾ ಅಕ್ರಮ ಎಸಗಿದ ಪ್ರಾಧ್ಯಾಪಕರಿಗೆ ರಕ್ಷಣೆ ಎಂಬುದೂ ಸೇರಿದಂತೆ ೧೫ ಗಂಭೀರ ಆರೋಪಗಳನ್ನು ಕುಲಪತಿ ವಿರುದ್ಧ ಹೊರಿಸಲಾಗಿತ್ತು.
ಇವುಗಳ ಬಗ್ಗೆ ಸಿಒಡಿ ತನಿಖೆಯೇ ನಡೆಯಬೇಕೆಂದು ವ್ಯಾಪಕ ಕೂಗು ಕೇಳಿ ಬಂದಿತ್ತು. ಆಗ ಪ್ರತಿಪಕ್ಷದಲ್ಲಿದ್ದ ಶಾಸಕರಾದ ಕೆ. ಎಸ್. ಪುಟ್ಟಣ್ಣಯ್ಯ, ಎಲ್. ಆರ್. ಶಿವರಾಮೇಗೌಡ, ಸಿ. ಎಸ್. ಪುಟ್ಟೇಗೌಡ, ಎಚ್. ಕೆ. ಕುಮಾರಸ್ವಾಮಿ ತನಿಖೆಗೆ ಆಗ್ರಹಿಸಿದ್ದರು. ವಿಧಾನ ಮಂಡಲದ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಪರಿಣಾಮ ಅಂದಿನ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಆರೋಪಗಳ ತನಿಖೆಗೆ ಅಂದಿನ ಐಎಎಸ್ ಅಧಿಕಾರಿ ಎಸ್. ಕೆ. ಹಜ್ರಾ ಅವರನ್ನು ನೇಮಿಸಿದರು. ಹಜ್ರಾ ಅವರು ವಿಚಾರಣೆ ನಡೆಸಿ, ೧೯೯೭ರ ಫೆಬ್ರವರಿಯಲ್ಲಿ ವರದಿ ಸಲ್ಲಿಸಿದರು. ನಂತರ ಈ ವರದಿಯಲ್ಲಿ ಏನಿತ್ತು ಎಂಬುದು ಬಹಿರಂಗವಾಗಲೇ ಇಲ್ಲ. ಆಗಿನ ರಾಜ್ಯಪಾಲ ಖುರ್ಷಿದ್ ಆಲಂಖಾನ್ ಅವರಾಗಲಿ, ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕಾಲ ಎಲ್ಲವನ್ನೂ ಮರೆಸಿತು.
ಹತ್ತು ವರ್ಷಗಳ ಬಳಿಕ- ಈ ಅವ್ಯವಹಾರದಲ್ಲಿ ಕುಲಪತಿಯೊಂದಿಗೆ ಭಾಗಿಯಾಗಿದ್ದ ಪ್ರಾಧ್ಯಾಪಕರೊಬ್ಬರು ಬೇರೊಂದು ವಿವಿಯ ಕುಲಪತಿಯೂ ಆದರು. ಯಾರಿಗೂ ಏನೂ ಆಗಲೇ ಇಲ್ಲ. ಹಣ-ಜಾತಿ ಬಲಗಳು ಒಗ್ಗೂಡಿ ಹಜ್ರಾ ಸಮಿತಿ ವರದಿಯನ್ನು ಸಮಾಧಿ ಮಾಡಿದವು ಎಂಬುದು ಅಂದು ಹೋರಾಟದಲ್ಲಿ ಭಾಗವಹಿಸಿದ್ದ ನಿವೃತ್ತ ಪ್ರಾಧ್ಯಾಪಕರೊಬ್ಬರ ನೋವಿನ ಮಾತು !
ಗಂಗೋತ್ರಿಯಲ್ಲಿ ನೇಮಕದ ಚರ್ಚೆ: ನ್ಯಾಯಮೂರ್ತಿ ರಂಗವಿಠಲಾ ಚಾರ್ ಸಮಿತಿ ಶಿಫಾರಸು ಒಂದು ವೇಳೆ ಜಾರಿಗೊಂಡರೆ ಏನಾಗಬಹುದು?, ನೇಮಕವಾದ ಅಧ್ಯಾಪಕರ ಭವಿಷ್ಯವೇನು? ಎಂಬುದೂ ಚರ್ಚೆಯಾಗುತ್ತಿದೆ.
‘ಶಶಿಧರ ಪ್ರಸಾದ್ ಅವಧಿಯಲ್ಲಿ ನೇಮಕವಾದ ಎಲ್ಲವೂ ಅಕ್ರಮ ವೇನಲ್ಲ. ೭೦ ಹುದ್ದೆಗಳ ನೇಮಕಗಳಲ್ಲಿ ಮಾತ್ರ ಅಕ್ರಮ ನಡೆದಿದೆ. ಉಳಿದವು ಕಾನೂನು ಬದ್ಧ. ಹುದ್ದೆಗೆ ಬೇಕಾದ ಎಲ್ಲ ಶೈಕ್ಷಣಿಕ ಅರ್ಹತೆ ಗಳ ಜತೆಗೆ, ಸಾಕಷ್ಟು ಅನುಭವ, ಪ್ರತಿಭೆ ಇರುವವರು ಅಧ್ಯಾಪಕರಾಗಿ ದ್ದಾರೆ. ಹಾಗಾಗಿ ಸಾರಾಸಗಟಾಗಿ ಎಲ್ಲ ನೇಮಕಗಳನ್ನು ರದ್ದು ಪಡಿಸುವ ನಿರ್ಧಾರವನ್ನು ವಿವಿ, ಸರಕಾರ ತೆಗೆದುಕೊಳ್ಳಬಾರದು’ ಎಂಬುದು ಇದ ಮಾಲಿಕೆಯಲ್ಲಿ ನೇಮಕಗೊಂಡ ಪ್ರಾಧ್ಯಾಪಕರೊಬ್ಬರ ನಿಲುವು.
ಅಕ್ರಮ ನೇಮಕದ ಹಿನ್ನೆಲೆಯಲ್ಲಿ ವಿಜಾಪುರ ಮಹಿಳಾ ವಿ ವಿ ೬೭ ಜನ ಅಧ್ಯಾಪಕರ ನೇಮಕವನ್ನು ರದ್ದು ಪಡಿಸಿತ್ತು. ಹಾಗಾಗಿ ಎಲ್ಲರಲ್ಲೂ ಆತಂಕ ಹೆಚ್ಚಿದೆ. ನೇಮಕವಾದ ಬಹಳಷ್ಟು ಅಧ್ಯಾಪಕರು, ಅವರ ಪರ ವಾಗಿರುವ ಪ್ರಭಾವಿಗಳೀಗ ವಿವಿಯ ಸಿಂಡಿಕೇಟ್ ಸದಸ್ಯರ ಮನೆ ಬಾಗಿಲನ್ನು ಎಡತಾಕಲಾರಂಭಿಸಿದ್ದಾರೆ !

ಕುಂಟ ಕುಂಟ ಕೂರ‍್ಗೆ ನಮ್ಮ ನಗರ ಸಾರಿಗೆ !

ಜೆ. ಶಿವಣ್ಣ ಮೈಸೂರು
ನಗರ ಸಾರಿಗೆ ಬಸ್ ‘ಸೇವೆ’ ಸುಧಾರಣೆ ಕಂಡಿಲ್ಲ. ಪ್ರಯಾ ಣಿಕರ ಬವಣೆ ತಪ್ಪಿಲ್ಲ. ಸಮಯ ಪರಿಪಾಲನೆ ಸಾರಿಗೆ ಸಂಸ್ಥೆಗೆ ಗೊತ್ತೇ ಇಲ್ಲ. ನಮ್ಮದು ‘ಸಾರ್ವಜನಿಕ ಸೇವೆ’ ಎನ್ನುವುದನ್ನು ಮರೆತ ವಿವೇಚನಾರಹಿತ ಅಧಿಕಾರಿಗಳು, ಸಿಬ್ಬಂದಿಯ ಉದ್ಧಟತನದ, ಕಾಟಾಚಾರದ ವರ್ತನೆಗೆ ಕೊನೆ ಇಲ್ಲ. ಪ್ರಯಾಣ ದರ ಏರುವುದೂ ನಿಂತಿಲ್ಲ. ಸೇವೆ ಮಾತ್ರ ಕೆಟ್ಟು ನಿಂತ ಬಸ್‌ನಂತೆ ನಿಂತಲ್ಲೇ ಇದೆ !
ಸಾರಿಗೆ ಸೇವೆಯನ್ನೇ ಅವಲಂಬಿಸಿದವರು ಬಸ್‌ಗಾಗಿ ಗಂಟೆಗಟ್ಟಲೆ ಕಾಯಲೇ ಬೇಕು. ಬಸ್‌ಗಾಗಿ ಅಸಹನೆ, ಚಡಪಡಿಕೆಯಿಂದ ಕಾಯುವ ಪ್ರಯಾಣಿಕನಿಗೆ ಒತ್ತಡದಂಥ  ಮಾನಸಿಕ ಸಮಸ್ಯೆಗಳನ್ನು ತಂದಿಡುತ್ತಿದೆ. ಮಕ್ಕಳಿಗೆ ಶಾಲೆಗೆ ಚಕ್ಕರ್ ಇಲ್ಲವೇ ಲೇಟ್ ಎಂಟ್ರಿ, ದೂರದೂರಿಗೆ ಬಸ್ಸೋ, ರೈಲೋ ಹಿಡಿದು ಹೋಗುವ ಉದ್ಯೋಗಿಗಳಿಗೆ ಸಂಬಳ ಕಟ್ ಇಲ್ಲವೇ ಬಾಸ್‌ನಿಂದ ಬೈಗುಳ. ಇದು ಸಾರಿಗೆ ಬಸ್ ಪ್ರಯಾಣಿಕರ ದಿನನಿತ್ಯದ ಹಾಡು-ಪಾಡು.
ಬೆಳಗ್ಗೆ, ಸಂಜೆ ಹೊತ್ತು ಬಸ್‌ಸ್ಟಾಪ್‌ಗಳಲ್ಲಿ ಜನಸಂದಣಿ ಸಾಮಾನ್ಯ. ಬೆಳಗ್ಗೆ ೮ ರಿಂದ  ೯- ೯.೩೦ ರ ವೇಳೆ, ಸಂಜೆ ೪ ರಿಂದ ೫- ೫.೩೦ ರ ವೇಳೆ ಯಾವುದೇ ಮಾರ್ಗದಲ್ಲೂ ಬಸ್ ರಶ್. ಶಾಲಾ, ಕಾಲೇಜು, ವ್ಯಾಪಾರ, ಉದ್ಯೋಗಕ್ಕೆ ಬಹುತೇಕರು ಹೊರಡುವುದು/ಮರಳುವುದು ಈ ಹೊತ್ತಿನಲ್ಲೇ. ಆದರೆ ಬಸ್ಸೇ ಬಿರಿಯುವಷ್ಟು  ಭರ್ತಿ. ಬಾಗಿಲಲ್ಲೇ ಜೋತು ಬಿದ್ದಿರುತ್ತಾರೆ. ಇಳಿಯಲು, ಹತ್ತಲು ಹರಸಾಹಸ ಮಾಡಬೇಕು. ಹತ್ತಲಾಗದ ಅಸಹಾಯಕರು ಮತ್ತೊಂದು ಬಸ್ ಕಾಯುವ ಸ್ಥಿತಿ.
ಆ ಇಕ್ಕಟ್ಟಿನಲ್ಲಿ ಮಹಿಳೆಯರು, ಮಕ್ಕಳ ಪಾಡು ಹೇಳತೀರದು. ಪುಸ್ತಕದ ಬ್ಯಾಗ್ ಹೊತ್ತ ಶಾಲಾ ಮಕ್ಕಳ ಸ್ಥಿತಿ ಚಿಂತಾಜನಕ. ನಿರ್ವಾಹಕನ ಪಾಡು ಇದಕ್ಕಿಂತ ಭಿನ್ನವಿಲ್ಲ. ಟಿಕೆಟ್ ವಿತರಿಸಲೇ ಅರ್ಧತಾಸುಬೇಕು. ಇನ್ನು ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ಗುರಿ ಸೇರುವುದಾದರೂ ಹೇಗೆ ? ಕೆಲ ಸ್ಟಾಪ್‌ಗಳಲ್ಲಿ ಜನಜಾಸ್ತಿಯಿದ್ದರೆ ಬಸ್ ನಿಲ್ಲಿಸುವುದೇ ಇಲ್ಲ.
ಹೆಚ್ಚು ಸೌಲಭ್ಯ ಒದಗಿಸಲು ಪ್ರತ್ಯೇಕ ‘ನಗರ ಸಾರಿಗೆ ವಿಭಾಗ’ ಮಾಡಿದರೂ  ಪ್ರಯೋಜನವಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಇರಬಹುದು. ರಶ್ ಇರಲಿ, ಇಲ್ಲದಿರಲಿ, ಬಸ್‌ಗಳನ್ನು ಒಂದೇ ವಿಧದಲ್ಲಿ ನಿಯೋಜಿಸಲಾಗುತ್ತಿದೆ.ಅಗತ್ಯವಿರುವ ಕಡೆಗೂ, ಇಲ್ಲದಿರುವ ಮಾರ್ಗಗಳಿಗೂ ಸಮಾನವಾಗಿ ಬಸ್‌ಗಳನ್ನು ಬಿಡಲಾಗುತ್ತದೆ. ಒಮ್ಮೊಮ್ಮೆ ಮೂರ‍್ನಾಲ್ಕು ಬಸ್‌ಗಳು ಒಟ್ಟಿಗೆ ಖಾಲಿ ಖಾಲಿ ಮೆರವಣಿಗೆ ಹೊರಡುತ್ತವೆ.
ಮಧ್ಯಾಹ್ನದ ವೇಳೆ ಎಲ್ಲಾ ಬಸ್‌ಗಳಿಗೆ ವಿಶ್ರಾಂತಿ ! ಟೀ- ಕಾಫಿ, ತಿಂಡಿಗಾಗಿ ಎಲ್ಲೆಂದ ರಲ್ಲಿ ಬಸ್ ನಿಂತು ಬಿಡುವುದೂ ಉಂಟು. ಬಸ್ ನಂಬಿದರೆ ವೇಳೆಗೆ ಸರಿಯಾಗಿ ಶಾಲೆ ತಲುಪೋದು ಕಷ್ಟವೆಂದೇ ಪೋಷಕರು ತಮ್ಮ ಮಕ್ಕಳನ್ನು ಆಟೋರಿಕ್ಷಾ, ವ್ಯಾನ್‌ಗಳಲ್ಲಿ ಕಳುಹಿಸುತ್ತಿದ್ದಾರೆ. ಬಹುತೇಕ ಶಿಕ್ಷಕರಿಗೂ ಆಟೋಗಳೇ ಗತಿ.
ನರ್ಮ್ ಲೆಕ್ಕ ತೋರಿಸಲೆಂದೇ ಹೊಸ ಬಸ್‌ಗಳನ್ನು ಬಿಡಲಾಗುತ್ತಿದೆ ಎನ್ನುವ ಸಂಶಯವಿದೆ. ಮೇಲಧಿಕಾರಿಗಳನ್ನು ಮೆಚ್ಚಿಸಲು  ‘ಹಳೆಯ ಬಸ್‌ಗಳಿಲ್ಲ’ ಎಂದು ದಾಖಲಿಸುವ ಉಮೇದಿನ ಕೆಲ ಅಧಿಕಾರಿಗಳಿಂದ ೨ ಹಳೆ ಬಸ್‌ಗಳಿಗೆ ಬದಲಾಗಿ ಒಂದು ಹೈಟೆಕ್ ಬಸ್ ನಿಯೋಜಿಸುವ ಕೆಲಸವೂ ನಡೆಯುತ್ತಿದ್ದು, ಮತ್ತೆ ಸಮಸ್ಯೆ ಪ್ರಯಾಣಿಕರಿಗೆ ಉಚಿತ ಮತ್ತು ಖಚಿತ. ಮುಖ್ಯ ಬಸ್ ನಿಲ್ದಾಣಗಳು ಹೈಟೆಕ್ ಸ್ವರೂಪದೊಂದಿಗೆ ಲಕಲಕಿಸುತ್ತಿವೆ, ಜಾಹೀರಾತುಗಳಿಂದ ಕಂಗೊಳಿಸುತ್ತಿವೆ. ಅತ್ಯಾಧುನಿಕ ಬಸ್‌ಗಳೂ ರಸ್ತೆಯಲ್ಲಿವೆ. ಇಷ್ಟನ್ನೇ ತೋರಿ ‘ಅತ್ಯುತ್ತಮ ಸೇವೆ’ನಮ್ಮದು ಎಂದು ಬೆನ್ನು ತಟ್ಟಿಕೊಳ್ಳುತ್ತಾರೆ ಅಧಿಕಾರಿಗಳು. ಆದರೆ ‘ಸೇವೆ’ ಪಡೆದಿರುವ ಪ್ರಯಾಣಿಕರು ಪರದಾಡುವುದು ತಪ್ಪಿಲ್ಲ.
ವರ್ಣರಂಜಿತವಾಗಿ ರಸ್ತೆಯಲ್ಲಿ ಅಡ್ಡಾಡುತ್ತಿರುವ  ನರ್ಮ್‌ನ ‘ನಾಜೂಕಿನ ಬಸ್’ಗಳು ಹೆಚ್ಚು ಕಾಲ ರಸ್ತೆಯಲ್ಲಿರದೇನೋ. ಹಿಂಭಾಗ ಎಂಜಿನ್‌ವುಳ್ಳ ಮಾರ್ಕೋಪೋಲೊ ಬಸ್ ಹೊರಡಿಸುವ ಕರ್ಕಶ ಶಬ್ದ, ಹೊಗೆಯಿಂದ ಪರಿಸರ ಮಾಲಿನ್ಯ ಹೇಳತೀರದು. ವೋಲ್ವೋ ಸೇರಿದಂತೆ ವಿವಿಧ ವಿನ್ಯಾಸದ ಆಧುನಿಕ ಬಸ್‌ಗಳು ರಸ್ತೆಗಿಳಿದರೂ ‘ಡಬ್ಬಾ’ ಬಸ್‌ಗಳೇನೂ ಕಮ್ಮಿಯಿಲ್ಲ. ಗ್ರಾಮಾಂತರ ಸಿಟಿ ಬಸ್‌ಗಳಲ್ಲಿ ಬೆರಳೆಣಿಕೆಯಷ್ಟು ಹೊರತುಪಡಿಸಿದರೆ, ಎಲ್ಲವೂ ಹಳೇ ಮಾಡೆಲ್. ತಾಲೂಕಿನ ೧೩೧ ಗ್ರಾಮಗಳಿಗೆ ಬಸ್ ಕಲ್ಪಿಸಲಾಗಿದ್ದು, ‘ತಳ್ಳುಮಾಡೆಲ್’ಗಳಿಗೆ ಕೊರತೆ ಇಲ್ಲ. ಈ ಭಾಗದ ನಿಲ್ದಾಣ ದುರಸ್ತಿ ಕಾಣದೇ  ಗಬ್ಬೆದ್ದು ಹೋಗಿದೆ. 
ನರ್ಮ್ ಎಂದರೆ ನವೀಕರಣ. ಆದರೆ ಸಾರಿಗೆ ವ್ಯವಸ್ಥೆಯಲ್ಲಿ ಮೇಲ್ನೋಟದ ನವೀಕರಣಕವಷ್ಟೇ. ನಗರ ಬಸ್ ನಿಲ್ದಾಣವೇ ಇದಕ್ಕೆ ತಾಜಾ ಉದಾಹರಣೆ. ನರ್ಮ್‌ನಲ್ಲಿ ಈ ನಿಲ್ದಾಣವನ್ನು ೧೨ ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ. ಆದರೆ ನಿಲ್ದಾಣ ಸ್ಕೇಟಿಂಗ್ ರಿಂಕ್‌ನಂತಾಗಿದೆ. ೨ ಹೆಜ್ಜೆಯ ಅಂಕಣ ತಲುಪಲೂ ಅಂಡರ್‌ಪಾಸ್ ಬಳಸಬೇಕು. ಅಂಕಣಗಳು ಕಿಷ್ಕಿಂಧೆಯಾಗಿದ್ದು, ಮುಂದೆ ನಿಂತ ಬಸ್ ಜಾಗದಿಂದ ಕದಲುವವರೆಗೂ ಹಿಂದಿರುವ ಬಸ್ ಚಲಿಸಲಾಗದು. ಈ ನಡುವೆ  ನಿಲ್ದಾಣ ಎತ್ತಂಗಡಿ ಯಾಗುವ ಭೀತಿ ಎದುರಿಸುತ್ತಿದೆ. ನಿಲ್ದಾಣದಿಂದ ಅರಮನೆ ಅಂದಕ್ಕೆ ಧಕ್ಕೆ ಎನ್ನುವುದು ಅಧಿಕಾರಿಗಳಿಗೆ ತಡವಾಗಿ ಜ್ಞಾನೋದಯವಾಗಿದೆ. ಯಾರದು ಸರಿ, ಯಾರದು ತಪ್ಪು ಎನ್ನುವ ತರ್ಕಕ್ಕಿಂತ ಜನರ ಹಣ ಪೋಲು ಎನ್ನುವುದರಲ್ಲಿ ಸಂಶಯವಿಲ್ಲ.     ಒಟ್ಟಾರೆ ಸಾರಿಗೆ ಸರಿಯಾಗುವುದೆಂದೋ, ಉತ್ತಮ ಸೇವೆ ದೊರಕುವುದೆಂದೋ ?
ಇಷ್ಟೆಲ್ಲಾ ಅಧ್ವಾನಗಳ ಮಧ್ಯೆ ಸಮಾಧಾನಕರ ಸಂಗತಿ ಎಂದರೆ ಜೆಎನ್-ನರ್ಮ್ ಕೊಡುಗೆ. ಜೆಎನ್-ನರ್ಮ್ ಅಡಿಯಲ್ಲಿ ನೂತನ ವಾಹನಗಳಿಗೆ ೫೦.೩೦ ಕೋಟಿ ರೂ. ಮಂಜೂರಾಗಿದ್ದು, ೩೩.೯೮ ಕೋಟಿ ರೂ. ಬಿಡುಗಡೆಯಾಗಿದೆ. ೩೦ ನಗರ ಸಾರಿಗೆ ವೋಲ್ವೋ ಬಸ್, ೭೯ ಸೆಮಿ ಲೋಫ್ಲೋರ್ ವಾಹನಗಳು, ೪೧ ಮಾರ್ಕೋ ಫೋಲೋ ವಾಹನ ಸೇರಿ ೧೫೦ ಬಸ್‌ಗಳನ್ನು ಖರೀದಿಸಲಾಗಿದೆ.
ಜೆಎನ್-ನರ್ಮ್‌ನಲ್ಲಿ ೨೨.೭೦ ಕೋಟಿ ರೂ.ಗಳಲ್ಲಿ ಇಂಟಲಿ ಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ಯೋಜನೆಗೆ ಅನುಮತಿ ಸಿಕ್ಕಿದ್ದು, ಜಾಗತಿಕ ಟೆಂಡರ್  ಕರೆಯಲಾಗಿದೆ. ಇದರಡಿ ಜಿಪಿಎಸ್ ಅಳವಡಿಸಿ ಯಾವ ಬಸ್, ಯಾವ ಭಾಗದಲ್ಲಿದೆ ಎನ್ನುವುದರ ಮಾಹಿತಿ ಲಭ್ಯತೆ, ಬೇಡಿಕೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಇತ್ಯಾದಿ ಆಗಲಿದೆ.

ಬಾಗಿದ ಶಿಕ್ಷಕನಿಗೆ ಬಿತ್ತು ಗುದ್ದು

ಚೀ.ಜ.ರಾಜೀವ ಮೈಸೂರು
ಬಗ್ಗುವವನಿಗೆ  ಮೂರು ಗುದ್ದು ಜಾಸ್ತಿ ಎಂಬುದು ಗ್ರಾಮೀಣ ಪ್ರದೇಶದ ಆಡು ನುಡಿ !
ರಾಜ್ಯದ ಪ್ರಾಥಮಿಕ ಶಿಕ್ಷಕರ ಪಾಡು ಹೆಚ್ಚು ಕಡಿಮೆ ಹೀಗೆ ಆಗಿದೆ.  ಜನಗಣತಿ, ಮಕ್ಕಳ ಗಣತಿ,  ಬಾಲ ಕಾರ್ಮಿಕರ ಗಣತಿ,  ಎಪಿಎಲ್-ಬಿಪಿಎಲ್ ಕಾರ್ಡ್ ಸಮೀಕ್ಷೆ, ಮತಪಟ್ಟಿ  ಪರಿಷ್ಕರಣೆ  ಎಂದು  ಶಿಕ್ಷಣೇತರ ಇಲಾಖೆಗಳಿಗೆ ಸಂಬಂಧಿಸಿದ  ಹೆಚ್ಚುವರಿ ಕಾರ್ಯಕ್ಕಾಗಿ  ಮೈ ಬಗ್ಗಿಸಿ ಕೆಲಸ ಮಾಡುತ್ತಲೇ ಬಂದಿರುವ  ಶಿಕ್ಷಕ ಸಮುದಾಯಕ್ಕೆ ಈಗ ಸರಕಾರ ಸರಿಯಾದ  ಗುದ್ದನ್ನೆ  ಪ್ರಯೋಗಿಸಿದೆ.
ಜನಗಣತಿಯಲ್ಲಿರುವ ಶಿಕ್ಷಕರನ್ನು  ಈ  ವರ್ಷ  ವರ್ಗಾವಣೆ ಮಾಡದಂತೆ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶ ಶಿಕ್ಷಕ ಸಮುದಾಯದಲ್ಲಿ  ಬೇಸರವನ್ನಷ್ಟೇ ಮೂಡಿಸಿಲ್ಲ, ಆಕ್ರೋಶವನ್ನು ತಂದಿದೆ.  ಅಂತೂ-ಇಂತೂ ಜೂ. ೧೫ ರಿಂದ  ವರ್ಗಾವಣೆ ಪ್ರಕ್ರಿಯೆ ಶುರುವಾಗಲಿದೆ ಎಂದು ಕೌನ್ಸೆಲಿಂಗ್‌ಗೆ ಮಾನಸಿಕ ಸಿದ್ಧತೆ ಆರಂಭಿಸಿರುವ ಶಿಕ್ಷಕ ಸಮುದಾಯಕ್ಕೆ  ಹೊಸ ಆದೇಶ  ಗೊಂದಲವನ್ನೂ ಮೂಡಿಸಿದೆ.
ಮೂರು ವರ್ಷಗಳಿಂದ ಶಿಕ್ಷಕರ ಸಾಮಾನ್ಯ ವರ್ಗಾವಣೆಗೆ ಸತಾಯಿಸುತ್ತಾ ಬಂದಿದ್ದ  ಸರಕಾರ  ಕಳೆದ ವರ್ಷವಷ್ಟೇ  ಕೌನ್ಸೆಲಿಂಗ್ ಮೂಲಕ ವರ್ಗಾವಣೆ  ಪ್ರಕ್ರಿಯೆಯನ್ನು ಸರಿಯಾದ ಹಳಿಗೆ ತರುವ ಪ್ರಯತ್ನ ಆರಂಭಿಸಿತು.  ಹತ್ತು-ಹಲವು ಗೊಂದಲಗಳ ನಡುವೆಯೂ ೨೦೦೯ರಲ್ಲಿ  ಶೇ. ೫ರಷ್ಟು ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ  ವರ್ಗ ಮಾಡಿತು.  ಕಳೆದ ಸಾಲಿನ  ಕೌನ್ಸೆಲಿಂಗ್‌ನಿಂದ ಪಾಠ ಕಲಿತು, ಈ ವರ್ಷ  ಒಂದಿಷ್ಟು ಸುಧಾರಣೆ ಮೂಲಕ ವರ್ಗಾವಣೆ ಕೈಗೆತ್ತಿಕೊಳ್ಳಬಹುದು ಎಂದೇ  ಶಿಕ್ಷಕ ಸಮುದಾಯ ಭಾವಿಸಿತ್ತು. ಅಂಥಾ ಯಾವುದೇ ರೀತಿಯ ಸುಧಾರಣೆಯನ್ನೂ ಸರಕಾರ ಮಾಡಲೇ ಇಲ್ಲ. ಆ  ಬೇಸರದ  ನಡುವೆಯೂ ವರ್ಗಾವಣೆಗಾಗಿ ಸಿದ್ಧವಾಗಿದ್ದವರಿಗೆ, ಹೊಸ ಆದೇಶ ಆತಂಕ  ಮೂಡಿಸಿದೆ. ಆದೇಶ ಹೊರಬಿದ್ದು ನಾಲ್ಕು ದಿನವಾದರೂ  ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ  ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಶಿಕ್ಷಕರ ಆತಂಕವನ್ನು ಹೆಚ್ಚಿಸಿದೆ.
ಯಾಕೆ ಈ ಆದೇಶ: ಕೇಂದ್ರ ಸರಕಾರ ೧೦ ವರ್ಷಕ್ಕೊಮ್ಮೆ ನಡೆಸುವ ‘ಭಾರತದ ಜನಗಣತಿ ೨೦೧೧: ಮನೆ ಪಟ್ಟಿ  ಮತ್ತು ಮನೆ ಗಣತಿ ಅನುಸೂಚಿ’ ಕಾರ್ಯಾರಂಭಗೊಂಡಿದ್ದು, ರಾಜ್ಯದ ಲಕ್ಷಾಂತರ ಶಿಕ್ಷಕರು ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಏಪ್ರಿಲ್ ೧೫ ರಿಂದ ಜೂನ್ ೦೧ರವರೆಗೆ ಮೊದಲ ಹಂತದಲ್ಲಿ  ಮನೆ ಗಣತಿ ನಡೆದಿದ್ದು, ಎರಡನೇ ಹಂತದಲ್ಲಿ ೨೦೧೧ನೇ ಫೆಬ್ರವರಿಯಲ್ಲಿ  ಜನಗಣತಿ ನಡೆಯಬೇಕಿದೆ. ಈ ಮಹಾಗಣತಿಯಲ್ಲಿ ದೊರಕುವ ಮಾಹಿತಿ ದೇಶದ  ಮಾನವ ಸಂಪನ್ಮೂಲದ  ಬಳಕೆಗೆ ಸಹಕಾರಿಯಾಗಲಿದೆ. ಹಾಗಾಗಿ ಜನಗಣತಿ ಒಂದಿಷ್ಟೂ ತಪ್ಪಿಲ್ಲದೆ, ಅಚ್ಚುಕಟ್ಟಾಗಿ, ವೈಜ್ಞಾನಿಕವಾಗಿ ನಡೆಯಬೇಕೆಂಬುದು ಕೇಂದ್ರ ಸರಕಾರದ ಬಯಕೆ. ಗಣತಿ ಕಾಯ್ದೆ ಅನುಸಾರ- ಗಣತಿ ದಾರರನ್ನು ಗಣತಿ ಸಂದರ್ಭದಲ್ಲಿ ವರ್ಗಾವಣೆ  ಮಾಡುವಂತಿಲ್ಲ. ಹಾಗಾಗಿ,  ಐಎಎಸ್  ಅಧಿಕಾರಿಗಳು  ಇಂಥದ್ದೊಂದು ಆದೇಶ ಹೊರಡಿಸಿದ್ದಾರೆ. 
ಕೌನ್ಸೆಲಿಂಗ್‌ಗೆ ಭಂಗವಿಲ್ಲ: ಶಿಕ್ಷಕರ ಕೌನ್ಸೆಲಿಂಗ್ ಈಗಾಗಲೇ ಪ್ರಕಟವಾಗಿರುವ ವೇಳಾಪಟ್ಟಿಯಂತೆ ನಡೆಯಲಿದೆ. ಆದರೆ, ಕೌನ್ಸೆಲಿಂಗ್ ಬಳಿಕ ವರ್ಗಾವಣೆ ಆದೇಶವನ್ನೂ ನೀಡಲಾಗುವುದು.  ಆದರೆ, ವರ್ಗಾವಣೆ ಆದ ಶಿಕ್ಷಕರ ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದರೆ,  ಅಂಥವರನ್ನ್ನು ಗಣತಿ ಮುಕ್ತಾಯಗೊಳ್ಳುವವರೆಗೂ ಬಿಡುಗಡೆ ಮಾಡುವಂತಿಲ್ಲ. ಅನಿವಾರ್ಯ ಎನಿಸಿದರೆ  ಜಿಲ್ಲಾ ಜನಗಣತಿ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯ ಪೂರ್ವಾನುಮತಿ  ಪಡೆಯಲೇಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ತಮ್ಮ ಕಚೇರಿಗೂ ಪತ್ರ ಬರೆದಿದ್ದಾರೆ ಎಂದು  ಮೈಸೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗೇಂದ್ರ ಕುಮಾರ್ ವಿಜಯಕರ್ನಾಟಕಕ್ಕೆ ತಿಳಿಸಿದರು.
‘ಹಾಗಾಗಿ, ಗಣತಿಯಲ್ಲಿ ಭಾಗಿಯಾಗದೇ ಇರುವ  ಶಿಕ್ಷಕರಿಗೆ ಈ ಆದೇಶದಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಅವರನ್ನು ಬಿಡುಗಡೆ ಮಾಡಲಾಗುವುದು.  ಗಣತಿ ಕಾರ್ಯದಲ್ಲಿ ಭಾಗಿಯಾಗಿರುವವರನ್ನು ಮಾತ್ರ ಮುಖ್ಯ ಕಾರ್ಯದರ್ಶಿ ಸೂಚನೆ ಅನುಸಾರ ಬಿಡುಗಡೆ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.
ನಿರರ್ಥಕ ಕೌನ್ಸೆಲಿಂಗ್ ? 
ಒಂದು ವೇಳೆ ಈ ಆದೇಶವೇನಾದರೂ ಚಾಚೂ ತಪ್ಪದೇ ಅನುಷ್ಠಾನವಾಗುತ್ತದೆ ಎಂದರೆ- ಈ ವರ್ಷ ಯಾವುದೇ ಶಿಕ್ಷಕರ ವರ್ಗಾವಣೆ ಆಗುವುದೇ ಇಲ್ಲ.  ಏಕೆಂದರೆ ಶೇ. ೯೦ರಷ್ಟು ಶಿಕ್ಷಕರು ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ ಈ ಆದೇಶ ಬಹುಪಾಲು ಶಿಕ್ಷಕರಿಗೆ ಅನ್ವಯಿಸುತ್ತದೆ. ಜಿಲ್ಲೆಯೊಳಗೆ ಶೇ. ೫ರಷ್ಟು ಹಾಗೂ ಜಿಲ್ಲೆಯಿಂದ ಹೊರಗೆ ಶೇ. ೨ರಷ್ಟು ಪ್ರಮಾಣದ ಶಿಕ್ಷಕರಷ್ಟೇ ವರ್ಗಾವಣೆ ಆಗುತ್ತಿರುವುದು. ಉಳಿದಂತೆ ಸಾವಿರಾರು ಶಿಕ್ಷಕರು ಪರಸ್ಪರ ವರ್ಗಾವಣೆಯ ಪ್ರಯೋಜನ ಪಡೆಯಲು ಕಾದು ಕುಳಿತಿದ್ದಾರೆ. ಇವರಿಗೆ ಆದೇಶದಿಂದ ಹೆಚ್ಚು ತೊಂದರೆಯಾಗಲಿದೆ.  ಒಂದು ವೇಳೆ  ಕೌನ್ಸೆಲಿಂಗ್‌ನಲ್ಲಿ ವರ್ಗಾವಣೆ ಆದೇಶ ಸಿಕ್ಕರೂ, ಗಣತಿ ಶಿಕ್ಷಕರು ಬಿಡುಗಡೆ ಹೊಂದಲು ೨೦೧೧ರ ಮಾರ್ಚ್ ತನಕ ಕಾಯಬೇಕು.  ಮಾರ್ಚ್ ನಂತರ ಬೇಸಿಗೆ ರಜೆ ಶುರುವಾಗುತ್ತದೆ. ಆ ವೇಳೆಗೆ ೨೦೧೧-೧೨ನೇ ಸಾಲಿನ ವರ್ಗಾವಣೆಗೆ ಸಿದ್ಧತೆ ಆರಂಭವಾಗಿರುತ್ತದೆ. ಇದೆಲ್ಲವನ್ನೂ ಗಮನಿಸಿದರೆ ಈ ವರ್ಷದ ಕೌನ್ಸೆಲಿಂಗ್ ಏಕೆ ಬೇಕು ಎನಿಸುತ್ತದೆ.

ತ.ನಾಡು, ಕೇರಳದಿಂದ ಹೆಣ್ಣು ಮಕ್ಕಳ ಸಾಗಣೆ

ವಿಕ ಸುದ್ದಿಲೋಕ ಮೈಸೂರು
ರಾಜ್ಯದ ಗಡಿ ಜಿಲ್ಲೆಗಳು ಈಗ ನೆರೆಯ ತಮಿಳುನಾಡು ಮತ್ತು ಕೇರಳದಿಂದ ಎಚ್‌ಐವಿ ಪೀಡಿತ ಆನಾಥ ಮಹಿಳೆಯರ ಸಾಗಣೆಗೆ ಹೆದ್ದಾರಿ !
ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಕೆಲ ಗಡಿ ಗ್ರಾಮಗಳಲ್ಲಿ ಹಾದು ಹೋಗುವ ಆಂತಾರಾಜ್ಯ ಹೆದ್ದಾರಿಯಲ್ಲಿ ಕಾಣಸಿಕ್ಕ ನೆರೆ ರಾಜ್ಯಗಳ ಮಾನಸಿಕ ಅಸ್ವಸ್ಥ ಮಹಿಳೆಯರು ಈಗ ಎಚ್‌ಐವಿ ಪೀಡಿತರು.
ಲಾರಿ ಚಾಲಕರಿಂದ ಅತ್ಯಾಚಾರಕ್ಕೀಡಾಗಿ ಹೆದ್ದಾರಿ ಯಲ್ಲಿ ಬಿಟ್ಟ ಈ ಅಮಾಯಕಮಹಿಳೆಯರು ಈಗ ಗಡಿ ಗ್ರಾಮಗಳ ಭಿಕ್ಷುಕಿಯರಷ್ಟೇ ಅಲ್ಲ, ಕಾಮುಕರ ಲೈಂಗಿಕ ದೌರ್ಜನ್ಯದಿಂದ ಮಾನಸಿಕ ಅಸ್ವಸ್ಥಕ್ಕೊಳಗಾಗಿದ್ದಾರೆ. ಅವರ ಪೈಕಿ ಕೆಲವರು ಗರ್ಭಿಣಿಯಾಗಿ, ಎಚ್‌ಐವಿ ಪೀಡಿತ ಶಿಶುವಿಗೆ ಜನ್ಮ ನೀಡಿರುವ ಉದಾಹರಣೆ ಇದೆ. ಇದು ಸರಕಾರಕ್ಕೂ ಗೊತ್ತಿದೆ :
ಈ ಕೃತ್ಯದ ಬಗ್ಗೆ ಮಾಹಿತಿ ಪಡೆದ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಪರಿಶೀಲಿಸಿ ವರದಿ ಸಲ್ಲಿಸಲು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರೋಗ್ಯಾ ಧಿಕಾರಿಗಳಿಗೆ ಪತ್ರ ಬರೆದಿದೆ. ಅಧಿಕಾರಿಗಳು ಈಗಾಗಲೇ ಪ್ರಾಥಮಿಕ ಮಾಹಿತಿನೀಡಿದ್ದು, ಸದ್ಯದಲ್ಲೇ ವರದಿ ಸಲ್ಲಿಸುವರು. ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಹಾಗೂ ಆ ಹೆಣ್ಣುಮಕ್ಕಳಿಗೆ ಸೂಕ್ತ ಆಸರೆ ಒದಗಿಸುವುದಾಗಿ ಹೇಳುತ್ತಾರೆ ಪ್ರಾಧಿಕಾರದ ಸದಸ್ಯ ಡಾ.ಚಂದ್ರಶೇಖರ್.
ಇದೆಲ್ಲ ಹೇಗೆ ನಡೆಯುತ್ತಿದೆ ?: ತಮಿಳುನಾಡು ಮತ್ತು ಕೇರಳ ಗಡಿಯಲ್ಲಿನ ಬುದ್ಧಿಮಾಂದ್ಯ ಮತ್ತು ಮಾನಸಿಕ ಅಸ್ವಸ್ಥ ಹೆಣ್ಣು ಮಕ್ಕಳನ್ನು ಕರೆತರುವ ಲಾರಿ ಚಾಲಕರು ಚಾಮರಾಜನಗರ ವ್ಯಾಪ್ತಿಯ ಬಂಡೀಪುರ ಅರಣ್ಯ ಸಮೀಪದ ಅಂತಾರಾಜ್ಯ ಹೆದ್ದಾರಿ, ಗುಂಡ್ಲುಪೇಟೆ ತಾಲೂಕಿನ ಮಂಗಳ, ಅಂಗಲ ಗ್ರಾಮಗಳಲ್ಲಿ ಹಾದು ಹೋಗುವ ಊಟಿ ಮುಖ್ಯ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂದು ಚಾಮರಾಜನಗರ ಜಿಲ್ಲಾ ಆರೊಗ್ಯ ಇಲಾಖೆ ಅಧಿಕಾರಿಗಳೇ ದೃಢಪಡಿಸಿದ್ದಾರೆ.
ಈ ಹೆಣ್ಣುಮಕ್ಕಳು ಲಾರಿಚಾಲಕರಿಂದ ದುರ್ಬಳಕೆ ಯಾಗಿರುವ ಶಂಕೆಯೂ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಸೂಚನೆಯಂತೆ ಪರಿಶೀಲಿಸಿದ್ದು, ಪೊಲೀಸರು ಎಚ್ಚರ ವಹಿಸಬೇಕು. ಇಂಥ ಅನಾಥರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಆಸ್ಪತ್ರೆಗೆ ಸೇರಿಸಬೇಕೆಂದು ಸೂಚಿಸಿರುವುದಾಗಿ ಚಾಮರಾಜನಗರ ಮಾನಸಿಕ ಆರೋಗ್ಯಾಧಿಕಾರಿ ಡಾ.ಪ್ರಭುಸ್ವಾಮಿ ತಿಳಿಸಿದ್ದಾರೆ.
ಅನಾಥ ಮಹಿಳೆಯರು ಎಲ್ಲಿದ್ದಾರೆ ?
ಇಂಥ ಹೆಣ್ಣುಮಕ್ಕಳಲ್ಲಿ ಬಹುತೇಕರು ‘ಕರುಣಾಲಯ’ದ ಆಶ್ರಯದಲ್ಲಿದ್ದಾರೆ. ಹೆದ್ದಾರಿಗಳಲ್ಲಿ ಅಲೆಯುತ್ತಾ, ಭಿಕ್ಷೆ ಬೇಡುತ್ತಿದ್ದ ಈ ಮಹಿಳೆಯರನ್ನು ಕರೆತಂದು ಚಿಕಿತ್ಸೆ ನೀಡುತ್ತಿರುವುದು ಸಂಸ್ಥೆಯ ಸಿಬ್ಬಂದಿ. ಮೊದಲು ಅವರಿಗೆ ಎಚ್‌ಐವಿ ಪರೀಕ್ಷೆ           ನಡೆಸಿದ್ದು, ನಾಲ್ವರಿಗೆ ಎಚ್‌ಐವಿ ಇರುವುದು ಪತ್ತೆ        ಯಾಗಿದೆ. ಅವರು ಮಾನಸಿಕ ಆಸ್ವಸ್ಥರಾದ್ದರಿಂದ ಅವರು ಯಾರು ಇತ್ಯಾದಿ ವಿವರ ಸಿಗಲಿಲ್ಲ. ಕೆಲ ತಿಂಗಳ ಹಿಂದೆ  ಒಬ್ಬಾಕೆ ಗರ್ಭವತಿಯಾಗಿ ಅಲ್ಲೇ ಹೆರಿಗೆಯೂ ಆಗಿತ್ತು. ಆಕೆಯ ಎಚ್‌ಐವಿ ಪೀಡಿತ ಮಗು ಈಗ ಬೆಂಗಳೂರಿನ ಪುನರ್ವಸತಿ ಚಿಕಿತ್ಸಾ ಕೇಂದ್ರದಲ್ಲಿದೆ.
ಐವತ್ತೈದು ಮಂದಿಗೆ ಆಶ್ರಯ ನೀಡಿರುವ ಕರುಣಾಲಯ ಬೆಲ್ಜಿಯಂ ಮೂಲದ ಸೈಂಟ್ ಚಾರ್ಲ್ಸ್ ಸಂಸ್ಥೆಯದು. ದಕ್ಷಿಣ ಭಾರತದ ಕೆಲ ರಾಜ್ಯಗಳ ಬುದ್ಧಿಮಾಂದ್ಯ ಅನಾಥರಿದ್ದಾರೆ.
ತಮಿಳು ಭಾಷಿಕರೇ ಹೆಚ್ಚು. ಇಲ್ಲಿರುವ ಎಚ್‌ಐವಿ ಪೀಡಿತರು ತಾವು ತಮಿಳುನಾಡು, ಕರ್ನಾಟಕದವರೆಂದು ಹೇಳುತ್ತಾರೆ. ಹೊರಗೆಲ್ಲೂ ಕಳಿಸದೇ, ಇಲ್ಲಿಯೇ ನೋಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಕರುಣಾಲಯದ ಕ್ರೈಸ್ತ ಸನ್ಯಾಸಿನಿ ಸಿಸ್ಟರ್ ಹಿಲರಿ.

ದೊಡ್ಡಾಸ್ಪತ್ರೆಯ ದೊಡ್ಡರೋಗಕ್ಕೆ ಮದ್ದು ನೀಡುವವರ್ಯಾರು?

ಸ್ಥಳಾಂತರಿತ ಖಾಸಗಿ ಬಸ್ ನಿಲ್ದಾಣದಲ್ಲೂ ಅದೇ ಅವ್ಯವಸ್ಥೆ

ಕೊಡಗಿಗೆ ಇನ್ನೂ ಸುರಿಯದ 'ಮುಂಗಾರು ಮಳೆ'

ಕೆಲವೆಡೆ ಅನುದಾನದ ಚಿಂತೆ: ಹಲವೆಡೆ ಕೊಠಡಿಗಳ ಕೊರತೆ

ತಾತ್ಕಾಲಿಕ ಕೊಠಡಿಗಳಲ್ಲಿ ಪಾಠ; ತಪ್ಪದ ಅಲೆದಾಟ

'ಪದವಿ'ಗೇರಲು ಪದವೀಧರರ ಮುಂದೆ ಸರ್ಕಸ್

ಜವರಾಯನಾಗುತ್ತಿರುವ ಖಾಸಗಿ ವಾಹನಗಳು

ಹದವಾಯ್ತು ಇಳೆ: ಶುರುವಾಯ್ತು ಕೃಷಿ ಕಾಯಕ

ಅದರ ಕಥೆ ಸದ್ಯಕ್ಕೆ ಕೇಳಬೇಡ್ರಿ!

'ಅನ್ಯದಂಧೆ'ಗಿಳಿದ ಕೃಷಿ ಟ್ರ್ಯಾಕ್ಟರ್ ಗಳು