ಹಳ್ಳ ಹಿಡಿದ ಉದ್ಯೋಗ ಖಾತ್ರಿ

ಕುಂದೂರು ಉಮೇಶಭಟ್ಟ, ಮೈಸೂರು
ಕಾಂಗ್ರೆಸ್ ಸಂಸದರು, ಶಾಸಕರು ಸೇರಿ ಘಟಾನುಘಟಿ ನಾಯಕರು ಇದ್ದರೂ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣ ವಿಫಲ !.
೨೦೧೦-೧೧ನೇ ಸಾಲಿನ ಆರ್ಥಿಕ ವರ್ಷ ಮುಗಿಯಲು ಇನ್ನೆರಡು ತಿಂಗಳು ಮಾತ್ರ ಬಾಕಿಯಿದ್ದರೂ ಉದ್ಯೋಗ ಖಾತ್ರಿಯ ಪ್ರಗತಿ ಕೇವಲ ಶೇ.೯.
ಜಿಲ್ಲೆಗೆ ಈ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಿಡುಗಡೆಯಾದ ಮೊತ್ತ ೧೯೦ ಕೋಟಿ ರೂ. ಈವರೆಗೂ ಮಾಡಿರುವ ಖರ್ಚಾದ ಮೊತ್ತ ಬರೀ ೧೭.೬೨ ಕೋಟಿ ರೂ. ಇದರ ಪ್ರಮಾಣ ಬರೀ ಶೇ ೮.೯೯ ಮಾತ್ರ. ಮೂವರು ಶಾಸಕರು, ಒಬ್ಬ ಕ್ಯಾಬಿನೆಟ್ ದರ್ಜೆಯ ಮಂಡಳಿಯ ಅಧ್ಯಕ್ಷರಿದ್ದರೂ ಹುಣಸೂರಿನಲ್ಲಿ ಖರ್ಚು ಮಾಡಿದ ಮೊತ್ತ ಬರೀ ೨೪ ಲಕ್ಷ ರೂ. ಇದು ಲಭ್ಯವಿರುವ ಅನುದಾನದಲ್ಲಿ ಶೇ.೧ಕ್ಕಿಂತ ಕಡಿಮೆ.

ಫಲ, ಪುಷ್ಪ ಪ್ರದರ್ಶನ

ನವೀನ್ ಮಂಡ್ಯ
ಬೆಂಗಳೂರಿನ ಸಸ್ಯಕಾಶಿ ಲಾಲಾಬಾಗ್ ಮಾದರಿಯಲ್ಲಿ ಮಂಡ್ಯದ ತೋಟಗಾರಿಕೆ ಕಚೇರಿ ಆವರಣದಲ್ಲಿ ಫಲಪುಷ್ಪಗಳು ನಳನಳಿಸುತ್ತಿವೆ. ೪೦ಕ್ಕೂ ಹೆಚ್ಚು ಬಗೆಯ ಹೂವುಗಳು ತಮ್ಮ ಸೌಂದರ್ಯವನ್ನು ಮೈಚೆಲ್ಲಿ ಕುಳಿತಿವೆ.
ತೋಟಗಾರಿಕೆ ಕಚೇರಿ ಆವರಣದಲ್ಲಿ ಎತ್ತ ನೋಡಿದರೂ `ಚೆಲುವೆಲ್ಲಾ ತನ್ನದೆನ್ನುವ' ಹೂ ಗಿಡಗಳ ವಿಹಂಗಮ ನೋಟ ಕಂಡು ಬರುತ್ತದೆ. ೩೦೦೦ ಹೂದಾನಿಗಳನ್ನು ಜೋಡಿಸಿಟ್ಟು ಅಲಂಕರಿಸಿ ಸೌಂದರ್ಯವನ್ನು ಇಮ್ಮಡಿಗೊಳಿಸಲಾಗಿದೆ.
ಮಾರಿಗೋಲ್ಡ್, ಜೀನಿಯಾ, ವಿಂಕಾ, ಸಲ್ವಿಯಾ, ಪಿಂಕ್ ಪ್ಲಾಕ್ಸ್, ಗ್ಯಾಲಾಡಿಯಾ, ಕಾಸ್‌ಮಾಸ್ ಗ್ಲೋಬ್... ಸೇರಿದಂತೆ ೨೦ಕ್ಕೂ ಹೆಚ್ಚು ಹೈಬ್ರಿಡ್ ತಳಿಯ ಹೂವುಗಳು ಈ ಬಾರಿಯ ವಿಶೇಷ ಆಕರ್ಷಣೆಯಾಗಿವೆ.

ಗ್ಯಾಸ್ ಬಂಕ್ ಕೊರತೆ: ಚಾಲಕರ ದೂರು

ವಿಕ ವಿಶೇಷ, ಮೈಸೂರು
ಆಟೋರಿಕ್ಷಾಗಳಿಗೆ ಎಲ್‌ಪಿಜಿ ಕಿಟ್ ಅಳವಡಿಕೆ ಕಡ್ಡಾಯ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಆಟೋ ಚಾಲಕರ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ನಿಗದಿತ ಗಡುವು ಜ.೩೧ಕ್ಕೆ ಅಂತ್ಯಗೊಳ್ಳುತ್ತಿರುವಂತೆಯೇ ಜಟಾಪಟಿ ತಾರಕಕ್ಕೇರಿದೆ.

ಘಟಿಕೋತ್ಸವದ ಮುಡಿ ಏರುವುದೇ ಮೈಸೂರು ಪೇಟ ?

ವಿಕ ವಿಶೇಷ  ಮೈಸೂರು
ಮೈಸೂರು ವಿಶ್ವವಿದ್ಯಾನಿಲಯದ ೯೧ನೇ ವಾರ್ಷಿಕ ಘಟಿಕೋತ್ಸವದಲ್ಲಿ  ಗಣ್ಯರು ಮತ್ತು ವಿದ್ಯಾರ್ಥಿಗಳು ಧರಿಸುವ ಉಡುಪಿಗೆ  ದೇಸಿಯ ಸೊಗಡು, ಮೈಸೂರು ಸಂಪ್ರದಾಯದ ಸ್ಪರ್ಶ ಸಿಗಲಿದೆಯೇ ? ಘಟಿಕೋತ್ಸವದಲ್ಲಿ ಭಾಗವಹಿಸುವ ಪುರುಷ ಗಣ್ಯರು,  ಅಭ್ಯರ್ಥಿಗಳು ಮೈಸೂರು ಪೇಟ ಧರಿಸುವರೇ ?
ವಿಶ್ವವಿದ್ಯಾನಿಲಯದ ಆಡಳಿತ ವಲಯದಲ್ಲಿ ಇಂಥದ್ದೊಂದು ಚರ್ಚೆ ಶುರುವಾಗಿದೆ. ಘಟಿಕೋತ್ಸವದ ವಸ್ತ್ರ ಸಂಹಿತೆಯನ್ನು ಬದಲಿಸಲು ಮೈಸೂರು ವಿವಿ ಕಳೆದ ವರ್ಷವೇ ನಿರ್ಧಾರ ಕೈಗೊಂಡಿತ್ತು.  ಕಣ್ಣಿಗೆ ರಾಚುವ ಬ್ರಿಟಿಷ್ ಪರಂಪರೆಯ ವಿವಿಧ ಬಣ್ಣದ  ಗೌನ್ ಹಾಗೂ ಚೌಕಾಕಾರದ ಟೋಪಿ(ಮಾರ್ಟರ್ ಬೋರ್ಡ್)ಯನ್ನು  ಕೈ ಬಿಟ್ಟು, ಸರಳವಾದ  ಉಡುಪುಗಳನ್ನು ವಸ್ತ್ರ ಸಂಹಿತೆಯನ್ನಾಗಿಸ ಬೇಕೆಂಬುದು ಕುಲಪತಿ  ಪ್ರೊ. ವಿ. ಜಿ. ತಳವಾರ್ ಸೇರಿದಂತೆ ಬಹುತೇಕರ  ಅಪೇಕ್ಷೆ.  ಈ ಹಿನ್ನೆಲೆಯಲ್ಲಿ ಉಡುಪುಗಳು ಹೇಗಿರಬೇಕು ಎಂಬುದನ್ನು ಚರ್ಚಿಸಿ, ಸೂಕ್ತ  ನಿರ್ಧಾರ ಕೈಗೊಳ್ಳಲು ಸಿಂಡಿಕೇಟ್ ಉಪ ಸಮಿತಿಯನ್ನು ರಚಿಸಲಾಗಿತ್ತು.  ಆದರೆ  ಕಳೆದ ವರ್ಷ ಉಪ ಸಮಿತಿಯಲ್ಲಿದ್ದ  ಕೆಲ ಸದಸ್ಯರ ನಿರುತ್ಸಾಹದಿಂದಾಗಿ ಸಿಂಡಿಕೇಟ್ ನಿರ್ಧಾರ  ಜಾರಿಗೆ ಬರಲಿಲ್ಲ. ಹಾಗಾಗಿ ಈಗ ಮತ್ತೆ ಇದೇ ವಿಷಯ ಚರ್ಚೆಗೆ ಬಂದಿದೆ. 

ಗೌಡ್ರೆ. ರಸ್ತೆಯೆಲ್ಲಾ `ಜಲ್ಲಿ' ಹೋಗೋದು ಎಲ್ಲಿ?

 ಸಿ.ಎನ್.ಮಂಜುನಾಥ್ ನಾಗಮಂಗಲ
ಸ್ವಾತಂತ್ರ್ಯ ದೊರೆತು ೬೪ ವರ್ಷಗಳಾದರೂ ನಾಗಮಂಗಲ ಪಟ್ಟಣದ ಶೇ.೮೦ರಷ್ಟು ರಸ್ತೆಗಳು ಇನ್ನೂ ಮಣ್ಣಿನ ರಸ್ತೆಗಳೇ ಆಗಿವೆ.
ಡಾಂಬರು ಕಾಣದ ರಸ್ತೆಗಳು. ಅವುಗಳಲ್ಲಿ ಬರೀ ಗುಂಡಿಗಳು ಮತ್ತು ಧೂಳು. ಪರಿಣಾಮ ಇಲ್ಲಿನ ಜನರದು ನಿತ್ಯ ಗೋಳು. ಹೀಗಾಗಿ ಪಟ್ಟಣದ ರಸ್ತೆಗಳು ಹಾಗೂ ಜನರ ಸಂಕಷ್ಟಮಯ ಬದುಕು ಆ ಸೌಮ್ಯಕೇಶವಸ್ವಾಮಿಗೆ ಪ್ರೀತಿಯಾಗಬೇಕು.
ಹದಗೆಟ್ಟ ರಸ್ತೆಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತೆಯನ್ನು ಸಹಿಸಿ ಕೊಂಡು ಪಟ್ಟಣದ ಜನರು ಸೌಮ್ಯವಾಗಿರುವುದು ನಿಜಕ್ಕೂ ಆಶ್ಚರ್ಯ. ಶಾಸಕ ಸುರೇಶ್‌ಗೌಡರ ಕ್ಷೇತ್ರದಲ್ಲಿ ಯಾವೊಂದು ರಸ್ತೆಗಳು ಪ್ರಕಾಶಿಸುತ್ತಿಲ್ಲ.
ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ರಸ್ತೆಗಳು ಅಧ್ವಾನಗೊಂಡಿವೆ. ಇತಿಹಾಸ ಪ್ರಸಿದ್ಧ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಸುತ್ತಮುತ್ತಲಿನ ರಸ್ತೆಗಳೇ ಕಳಪೆ ಕಾಮಗಾರಿಯಿಂದ ಗುಂಡಿ ಬಿದ್ದಿವೆ.
ಒಳಚರಂಡಿ, ಚರಂಡಿ ನಿರ್ಮಾಣ ನೆಪದಲ್ಲಿ ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ. ಕೆಲವು ರಸ್ತೆಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಟಿ.ಬಿ. ಬಡಾವಣೆಯ ೨ನೇ ಹಂತದ ಚರಂಡಿಗೆ ಹಾಕಿದ ಕಲ್ಲು ಚಪ್ಪಡಿಗಳು ಮುರಿದು ರಸ್ತೆಯಲ್ಲಿ ಬಿದ್ದಿವೆ. ಮುಸ್ಲಿಂ ಕಾಲೋನಿ, ದಲಿತರ ಕಾಲೋನಿ, ಕುಂಬಾರ ಬೀದಿ, ಬ್ರಾಹ್ಮಣರ ಬೀದಿಗಳಂತೂ ಧೂಳು ಮಗ ಧೂಳ್.

ಶಿಕ್ಷಣ ತಜ್ಞ ದಿ.ಶಿವಾನಂದಶರ್ಮರ ಜನ್ಮಶತಮಾನೋತ್ಸವ

 ಮಾದೇಶ್ ತಿ.ನರಸೀಪುರ
ಏಳು ದಶಕದ ಹಿಂದೆಯೇ ಬಿಸಿಯೂಟವನ್ನು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಶುರು ಮಾಡಿದ್ದ ಬೆಂಗಳೂರಿನ ಪ್ರತಿಷ್ಠಿತ ರಾಷ್ಟ್ರೀಯ ವಿದ್ಯಾಲಯ(ಆರ್.ವಿ. ಕಾಲೇಜು) ಹಾಗೂ ತಿ.ನರಸೀಪುರದ ವಿದ್ಯೋದಯ ಶಿಕ್ಷಣ ಸಂಸ್ಥೆ ಸಂಸ್ಥಾಪಕ ದಿ.ಎಂ.ಸಿ.ಶಿವಾನಂದ ಶರ್ಮ ಅವರದ್ದೀಗ ಜನ್ಮ ಶತಮಾನೋತ್ಸವ.
೫೫ ವರ್ಷದಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ನಿರಂತರ ಅಕ್ಷರ ದೊಂದಿಗೆ ಅನ್ನ ದಾಸೋಹ ನೀಡುವ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದ ಹರಿಕಾರ ಶರ್ಮ ಅವರಿಗೆ ಜ.೨೨ ಕ್ಕೆ ನೂರು ವಸಂತಗಳು ಸಂದಲಿದೆ. ಈ ಸಂದರ್ಭದಲ್ಲಿ ಜನ್ಮಶತಮಾನೋತ್ಸವ ಸಮಾರಂಭಕ್ಕೆ ತಿ.ನರಸೀಪುರದ ಗ್ರಾಮ ವಿದ್ಯೋದಯ ಸಂಘ ಸಜ್ಜಾಗಿದೆ.
ಗ್ರಾಮೀಣ ಪ್ರದೇಶದ ಬಡ ರೈತ ಕುಟುಂಬದಲ್ಲಿ ಜನಿಸಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನಿಸ್ವಾರ್ಥ ಸೇವೆ ಮೂಲಕ ತಾಲೂಕು ಕೇಂದ್ರದಲ್ಲಿ ಪ್ರಥಮ ವಾಗಿ ಬೃಹತ್ ಪ್ರಮಾಣದ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಕೀರ್ತಿ ಎಂ.ಸಿ. ಶಿವಾನಂದ ಶರ್ಮ ಅವರದ್ದು.

ಧೂಳು ಹಿಡಿಯುತ್ತಿರುವ ಕಡತಗಳು!

ಮಡಹಳ್ಳಿ ಮಹೇಶ್ ಗುಂಡ್ಲುಪೇಟೆ
ತಾಲೂಕಿನ ಜನರಿಗೆ ಸರಕಾರದ ಸೌಲಭ್ಯ ಒದಗಿಸುವ ಹಾಗೂ ಆಡಳಿತ ನಿರ್ವಹಣೆ ಮಾಡುವ ಶಕ್ತಿ ಕೇಂದ್ರ ಎನಿಸಿದ ಮಿನಿ ವಿಧಾನಸೌಧಅವ್ಯವಸ್ಥೆಯ ಆಗರವಾಗಿದೆ. ಇಲ್ಲಿನ ಆಡಳಿತ ವ್ಯವಸ್ಥೆ  ಹದಗೆಟ್ಟಿದೆ.
ತಮ್ಮ ಕೆಲಸ, ಕಾರ್ಯಗಳಿಗಾಗಿ ಗ್ರಾಮೀಣ ಭಾಗಗಳಿಂದ ಬರುವ ರೈತರು, ಮಹಿಳೆಯರು, ವೃದ್ಧರು ಸೇರಿದಂತೆ ಸಾರ್ವಜನಿಕರಿಗೆ ಇಲ್ಲಿ ಸುಲಭ ಮಾರ್ಗದಲ್ಲಿ ಯಾವುದೇ ಕೆಲಸ ನಡೆಯಲ್ಲ. ಇನ್ನು ಸೌಲಭ್ಯಗಳ ವಿಚಾರದಲ್ಲಿ ಈ ಮಿನಿ ವಿಧಾನಸೌಧದಲ್ಲಿ ದೊಡ್ಡ ಸಮಸ್ಯೆಗಳೇ ಕಾಣಿಸಿಕೊಳ್ಳುತ್ತವೆ.

ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಮಯ

 ಕುಂದೂರು ಉಮೇಶಭಟ್ಟ ಮೈಸೂರು
ದೇಶದಲ್ಲೇ ೨ನೇ ಸ್ವಚ್ಛ ನಗರಿ ಎಂಬ ಅಭಿದಾನಕ್ಕೆ ಪಾತ್ರವಾದ(? !) ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಿಮಗೆ ಸಿಗೋದು ಪ್ಲಾಸ್ಟಿಕ್ ಸ್ವಾಗತ...!
ಚಾಮುಂಡಿತಾಯಿ ದರ್ಶನಕ್ಕೆಂದು ನೀವೇನಾದರೂ ಬೆಟ್ಟಕ್ಕೆ ಹೊರಟರೆ ಬೆಟ್ಟದ ಏಳು ಕಿ.ಮೀ. ಉದ್ದಕ್ಕೂ  ನಿಮಗೆ ಕಾಣುವುದು ಬರೀ ಪ್ಲಾಸ್ಟಿಕ್. ಅಷ್ಟರ ಮಟ್ಟಿಗೆ ಚಾಮುಂಡಿಬೆಟ್ಟವೀಗ ಪ್ಲಾಸ್ಟಿಕ್ ತೊಟ್ಟಿಯಾಗಿ ಮಾರ್ಪಟ್ಟಿದೆ.
ಬರೀ ಆದಾಯದ ಮೇಲೆ ಕಣ್ಣಿಟ್ಟಿರುವ ಸ್ಥಳೀಯ ಗ್ರಾಮಪಂಚಾಯಿತಿ, ಮುಜರಾಯಿ ಇಲಾಖೆಗಳಿಗೆ ದುಡ್ಡಿನ ಮುಂದೆ ಪ್ಲಾಸ್ಟಿಕ್ ಕಾಣುತ್ತಲೇ ಇಲ್ಲ. ಪರಿಸರ ಇಲಾಖೆ ಮಾತ್ರ, ಬೆಟ್ಟ ಎಷ್ಟೇ ಮಲಿನವಾದರೂ ಇದು ನಮಗೆ ಬರುವುದಿಲ್ಲ ಎಂದು ಮೌನ ವಹಿಸಿದೆ. ಅವ್ಯವಸ್ಥೆ, ಇಲಾಖೆಗಳ ನಿಷ್ಕ್ರಿಯತೆ ನಡುವೆ ಚಾಮುಂಡಿ ಬೆಟ್ಟ ಕ್ಕೆ ಬರುವ ಭಕ್ತರು ಮಾತ್ರ ಪ್ಲಾಸ್ಟಿಕ್ ಮಧ್ಯೆಯೇ ಬಂದು ಹೋಗುತ್ತಿದ್ದಾರೆ.ಪ್ರವಾಸಿ ನಗರದ ಆಡಳಿತ ವ್ಯವಸ್ಥೆಯನ್ನೇ  ಅಣಕಿಸುವಂತಿದೆ ಅಲ್ಲಿನ ಸ್ಥಿತಿ.

ಓದಿದ್ದು ಎಂಎಸ್ಸಿ, ಆಗಿದ್ದು "ಮಾಸ್ಟರ್ ಆಫ್ ಕೃಷಿ'

ಚೀ.ಜ. ರಾಜೀವ ಮೈಸೂರು
ಕೃಷಿ ಅಂದ್ರೆ ಏನು ? - ಅದೊಂದು ಅನ್ನ ಸೃಷ್ಟಿಯ ಕಾಯಕ, ರೈತರ ಬದುಕು, ವ್ಯವಹಾರ, ಸಂಸ್ಕೃತಿ, ಜೀವನ ಪದ್ಧತಿ, ದೇಶದ ಬೆನ್ನೆಲುಬು, ಮೇಟಿ ವಿದ್ಯೆ... ಹೀಗೆ  ಸರ್ವಸ್ವವನ್ನು ಕೃಷಿಯೊಂದಿಗೆ ಜೋಡಿಸಿ ವ್ಯಾಖ್ಯಾನಿಸಬಹುದು.
ಆದರೆ  ಇದೇ ಪ್ರಶ್ನೆಯನ್ನು ಜಿ.ಬಿ. ಸರಗೂರಿನ ಕೆ. ವೆಂಕಟೇಶ್ ಎಂಬ ಯುವ ಕೃಷಿಕನ ಮುಂದಿಟ್ಟರೆ,  `ಅದೊಂದು ಖುಷಿ ನೀಡುವ  ಕಲೆ, ಅಷ್ಟು  ಮಾತ್ರವಲ್ಲ. ಪರಿಶ್ರಮದಿಂದ ಮಾಡಿದರೆ, ಲಾಭದಾಯಕ  ವ್ಯವಹಾರ.  ಯಂತ್ರೋಪಕರಣ ಬಳಕೆ,  ಸಾವಯವ ಪದ್ಧತಿ ಹಾಗೂ ಅರಣ್ಯ ಆಧರಿತವಾಗಿ(ಒಂದು  ಪ್ರಯೋಗ) ದುಡಿಸಿಕೊಂಡರೆ, ಅದನ್ನೊಂದು ಲಾಭದಾಯಕ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನೇ ಮಾಡಬಹುದು !' ಎಂದು ಅಚ್ಚರಿ ಮೂಡಿಸುತ್ತಾರೆ !
ಎಚ್. ಡಿ. ಕೋಟೆ ತಾಲೂಕು ಹಳ್ಳದ ಮನುಗನಹಳ್ಳಿ ರಸ್ತೆಯಲ್ಲಿ ಬರುವ ಜಿ. ಬಿ. ಸರಗೂರಿನಲ್ಲಿ ವೆಂಕಟೇಶ್ ಅವರೇ ಅಭಿವೃದ್ಧಿ ಪಡಿಸಿರುವ ೨೫ ಎಕರೆ ವಿಶಾಲ  ತೋಟದಲ್ಲಿ  ನಿಂತು, ಕೃಷಿಯನ್ನು ಕಂಪನಿ ವ್ಯವಹಾರಕ್ಕೆ  ಹೋಲಿಸಿ ಮಾತನಾಡುತ್ತಿದ್ದರೆ, ಅವರ ಮಾತಿನ ಮೇಲೆ ವಿಶ್ವಾಸ ಮೂಡುತ್ತದೆ. ಏಕೆಂದರೆ, ಅವರ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ತೋಟವೇ ಅಲ್ಲಿ ಮೈದಾಳಿ ನಿಂತಿದೆ.  

ಎದ್ದೇಳು ರಂಗನಾಥ ಎದ್ದೇಳು, ರಸ್ತೆ ಅವ್ಯವಸ್ಥೆಯ ನೋಡೇಳು

 ಜಿ.ಎನ್. ರವೀಶ್‌ಗೌಡ ಶ್ರೀರಂಗಪಟ್ಟಣ
ಕೋಟೆ ಕೊತ್ತಲ ನಾಡು ಶ್ರೀರಂಗಪಟ್ಟಣದಲ್ಲಿ ಸ್ಮಾರಕಗಳಂತೆಯೇ ರಸ್ತೆಗಳು ನಿರ್ಲಕ್ಷ್ಯಕ್ಕೊಳಗಾಗಿ ಸಾರ್ವಜನಿಕರಿಗೆ ತಲೆ ನೋವಾಗಿ ಪರಿಣಮಿಸಿವೆ.
ಡಾಂಬರು ಕಾಣದ ಹಾಗೂ ಗುಂಡಿ ಬಿದ್ದ ರಸ್ತೆಗಳಿಂದಾಗಿ ಇಡೀ ಪಟ್ಟಣವೇ ಧೂಳುಮಯ. ಅಭಿವೃದ್ಧಿಯ `ಬಂಡಿ'ಯೇ `ಸಿದ್ಧ'ವಾಗದ ಪಟ್ಟಣದಲ್ಲಿನ ರಸ್ತೆಗಳ ಸ್ಥಿತಿ ಆ ಶ್ರೀರಂಗನಾಥಸ್ವಾಮಿಗೇಪ್ರೀತಿ.
ಐತಿಹಾಸಿಕ, ಧಾರ್ಮಿಕ ಹಾಗೂ ಪ್ರವಾಸಿ ತಾಣವೂ ಶ್ರೀರಂಗಪಟ್ಟಣದಲ್ಲಿ ಸಮಸ್ಯೆಗಳ ಪೊಟ್ಟಣವೇ ಇದೆ. ಶ್ರೀರಂಗನಾಥಸ್ವಾಮಿಗೆ ದೇವಾಲಯಕ್ಕೆ ತೆರಳುವ ರಾಂಪಾಲ್ ರಸ್ತೆಯು ಪಟ್ಟಣದ ಇತಿಹಾಸ ಹೇಳುವಷ್ಟು ದುಸ್ಥಿತಿಯಲ್ಲಿದೆ.

ಕಾಲೇಜು ಮಂಜೂರಾಯ್ತು, ಕಟ್ಟಡ ನಿರ್ಮಾಣಕ್ಕೆ ಹಣ ಇಲ್ಲ!

ಡಿ.ಪಿ. ಶಂಕರ್ ಯಳಂದೂರು
ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿದ ಸರಕಾರ ಸೂಕ್ತ ಕಟ್ಟಡ ನಿರ್ಮಿಸಲು ಹಣ ಬಿಡುಗಡೆ ಮಾಡಿಲ್ಲ. ಪರಿಣಾಮ ಪದವಿ ಕಾಲೇಜಿನ ತರಗತಿಗಳು ಮತ್ತೊಂದು ಕಾಲೇಜಿನ ಕೊಠಡಿಗಳಲ್ಲಿ ನಡೆಯುವಂತಾಗಿದೆ.
ಕಾಲೇಜು ಕಟ್ಟಡ ನಿರ್ಮಿಸಲು ಪಟ್ಟಣದ  ರೈತರೊಬ್ಬರು ತಮ್ಮ ಜಮೀನನ್ನು ದಾನವಾಗಿ ನೀಡಿದ್ದಾರೆ. ರಾಜ್ಯಪಾಲರ ಹೆಸರಿಗೆ ಆ ಜಮೀನು ಹಸ್ತಾಂತರವೂ ಆಗಿದೆ. ಆದರೆ ಆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಹಣವೇ ಇಲ್ಲ !

ಚರಂಡಿ ಅಧೋಗತಿ; ರಸ್ತೆ ದುಸ್ಥಿತಿ

ಪ್ರಥಮ ಬಾರಿಗೆ ನಗರಸಭೆಗೆ ಆಯ್ಕೆಯಾಗಿರುವ ಬಿ.ಕೆ. ಅರುಣ್‌ಕುಮಾರ್ ಉತ್ಸಾಹಿ ಸದಸ್ಯ. ಸಾಮಾನ್ಯಸಭೆಗಳಲ್ಲಿ ನಡೆಯುವ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.  ಗೆದ್ದು ಬಂದಿರುವ ವಾರ್ಡ್‌ನೊಂದಿಗೆ ಮಡಿಕೇರಿ ನಗರದ ವಿವಿಧೆಡೆಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಸದಾ ಮುಂದು. ನಗರಸಭೆ ಸದಸ್ಯ ಸ್ಥಾನದೊಂದಿಗೆ ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊತ್ತಿದ್ದಾರೆ.

ಹೆದ್ದಾರಿ ಬಿಟ್ಟರೆ ಉಳಿದಿದ್ದೆಲ್ಲಾ ಕಿರಿಕಿರಿ...

ಶಿವನಂಜಯ್ಯ  ಮದ್ದೂರು
ಮದ್ದೂರಿನ ಮುದ್ದಾದ ರಸ್ತೆಗಳು ಕಳಪೆ ಕಾಮಗಾರಿಯಿಂದ ಮುಕ್ಕಾಗಿವೆ. ಒಳಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ನೆಪದಲ್ಲಿ ರಸ್ತೆಗಳನ್ನು ಅಗೆದು ಅಂದಗೆಡಿಸಲಾಗಿದೆ.
ಪಟ್ಟಣದಲ್ಲಿ ಅರ್ಧದಷ್ಟು ರಸ್ತೆಗಳು ಇನ್ನೂ ಮಣ್ಣಿನ ರಸ್ತೆಗಳೇ. ಅರೆಬರೆ ಕಾಮಗಾರಿ ನಡೆದಿರುವ ರಸ್ತೆಗಳೇ ಹೆಚ್ಚು. ಬಹುತೇಕ ಕಡೆಗಳಲ್ಲಿ ಮೆಟ್ಲಿಂಗ್ ಹಂತದಲ್ಲೇ ಕಾಮಗಾರಿ ನಿಂತಿದೆ. `ಕಲ್ಪನೆ'ಗೂ ನಿಲುಕದಂತಿರುವ ಇಲ್ಲಿನ ರಸ್ತೆಗಳ ಸ್ಥಿತಿ ಆ `ಮದ್ದೂರಮ್ಮ'ನಿಗೆ ಪ್ರೀತಿಯಾಗಬೇಕು.
ರಸ್ತೆಗಳ ನಡುವೆಯೂ ಮ್ಯಾನ್ ಹೋಲ್‌ಗಳು ಬಾಯ್ತೆರೆದು ನಿಂತಿದೆ. ಕೆಲವೆಡೆ ಕಿರಿದಾದ ರಸ್ತೆಗಳಲ್ಲಿ ಸಂಚಾರ ದುಸ್ತರ. ಕಟ್ಟಡಗಳ ತ್ಯಾಜ್ಯ ಹಾಗೂ ಕಸವನ್ನು ರಸ್ತೆ ಬದಿಯಲ್ಲೇ ಸುರಿದಿರುವುದು ಕಿರಿಕಿರಿ ಉಂಟು ಮಾಡುತ್ತದೆ.

ರಾಗ -ರಂಗು

ರಂಗನ ತಿಟ್ಟಿನಲ್ಲೀಗ ಪಕ್ಷಿಗಳ ಕಲರವ. ಗ್ರೇ ಹೆರಾನ್,  ಹೆಜ್ಜಾರ್ಲೆ, ಪೈಡ್ ಕಿಂಗ್ ಫಿಶರ್,  ಪೇಂಟೆಡ್ ಸ್ಟಾರ್ಕ್, ನೈಟ್ ಹೆರಾನ್, ರಿವರ್ ಟರ್ನ್, ಮಿಡ್ಲ್‌ವೈಟ್ ಈಗ್ರೇಟ್ ಸೇರಿದಂತೆ ಹತ್ತು ಹಲವು ಪ್ರಬೇಧದ, ಸಾವಿರಾರು ಪಕ್ಷಿಗಳ ಪಾಲಿಗಿದು ರಮ್ಯ ಚೈತ್ರಕಾಲ. ನೀರ ನಡುಗಡ್ಡೆ ಯಲ್ಲಿ ದೇಶ, ವಿದೇಶಿ ಅತಿಥಿಗಳ ರಾಗ ರಂಗು. ಗೂಡು ಕಟ್ಟುವ, ಮೊಟ್ಟೆ ಇಡುವ,  ತುತ್ತು ಹೆಕ್ಕಿ ತರುವ,  ಮರಿಗಳಿಗೆ ತುತ್ತುಣ್ಣಿಸುವ, ಹಾರುವ, ನಲಿಯುವ,  ತೇಲುವ, ಚಿತ್ತ-ಚಿತ್ತಾರ ಮೂಡಿಸುವ,  ನೋಡುವ ಕಣ್ಣುಗಳಿಗೆ ನಲಿವಿನ ಸಂಭ್ರಮ ತುಂಬುವ....ಹೀಗೆ ತಿಟ್ಟಿಗೆ ತಿಟ್ಟೇ ಸಂಭ್ರಮದ ಸಾಕ್ಷಾತ್ಕಾರಕ್ಕೆ  ಪಕ್ಕಾಗಿದೆ. ಬೆಳಗ್ಗೆ,  ಸಂಜೆ ತಿಟ್ಟಿನಲ್ಲಿ ಕುಳಿತರೆ,  ದೋಣಿಯಲ್ಲಿ ಕುಳಿತು `ನೀರವ ಯಾನ' ಹೊರಟರೆ  ಪಕ್ಷಿಗಳದ್ದೇ ಗಾನದಿಂಚರ. ಎಲ್ಲವನ್ನೂ ಕಣ್ಣು, ಕಿವಿಗೆ ಮೊಗೆದು ತುಂಬಿಕೊಳ್ಳಬೇಕೆಂದರೆ ಅಲ್ಲಿಗೇ ಹೋಗಬೇಕು.

ಕೆಲಸ ಮುಗಿಯುತ್ತಲೇ ಇಲ್ಲ !

ಕುಂದೂರು ಉಮೇಶಭಟ್ಟ ಮೈಸೂರು
ಮಿತಿಗೂ ಮೀರಿ ಹಣ ಖರ್ಚು ಮಾಡಿದ ಫಲವಾಗಿ ಮೈಸೂರು ತಾಲೂಕು ಮಿನಿ ವಿಧಾನಸೌಧಕ್ಕೆ ಇನ್ನೂ ಮುಕ್ತಿಯೇ ಇಲ್ಲ.
ಬರೋಬ್ಬರಿ ಏಳು ವರ್ಷದ ಹಿಂದೆ ಆರಂಭಗೊಂಡು ಎರಡೇ ವರ್ಷದಲ್ಲಿ ಮುಗಿಯಬೇಕಾಗಿದ್ದ ಮಿನಿ ವಿಧಾನಸೌಧ ಕಾಮಗಾರಿ ಇನ್ನೂ ಪ್ರಗತಿಯಲ್ಲೇ ಇದೆ. ಕಟ್ಟಡ ನಿರ್ಮಾಣ ಕಾಮಗಾರಿ ಯೇನೋ ಮುಗಿದಿದ್ದರೂ ಸಣ್ಣ ಪುಟ್ಟ ಕೆಲಸ ಮುಗಿಸಲು ಈಗ ಹಣದ ಅಭಾವ. ಸರಕಾರ ನಿಗದಿಪಡಿಸಿದ ಅನುದಾನಕ್ಕಿಂತ ಹೆಚ್ಚಿನ ಹಣವನ್ನು ಇಲ್ಲಿ ಬಳಸಲಾಗಿದೆ. ಹೆಚ್ಚಿನ ಹಣ ಕೊಡಲು ಸರಕಾರ ತಯಾರಿಲ್ಲ. ಮೈಸೂರಿನ ಮತ್ತೊಂದು ಅರಮನೆ ಮಾದರಿಯಲ್ಲೇ ಕಟ್ಟಿದ ಕಟ್ಟಡಕ್ಕೆ ಬಳಕೆ ಭಾಗ್ಯವೇ ಬರುತ್ತಿಲ್ಲ.  ಲೋಕೋಪಯೋಗಿ ಇಲಾಖೆ ಅಧಿಕಾರಿಗಳ `ಮಿತಿ ಮೀರಿದ ` ಖರ್ಚಿನ ಪರಿಣಾಮ ನೇರವಾಗಿ ಆಗುತ್ತಿರುವುದು ಕಕ್ಷಿದಾರನ ಮೇಲೆ.

ಅರಸರ ಮೈಸೂರಿಗೆ ಯೋಜನೆಗಳದೇ ಅಡ್ಡಗಾಲು

ಚೀ. ಜ. ರಾಜೀವ  ಮೈಸೂರು
ನರ್ಮ್, ಆಧಾರ್ ಮತ್ತು ಇನ್‌ಸ್ಟಿಟ್ಯೂಷನ್ ಆಫ್ ಎಕ್ಸಲೆನ್ಸ್ !
ಇವು ಮೈಸೂರು ನಗರ ಮತ್ತು ಜಿಲ್ಲೆಯ ಜನತೆಯಷ್ಟೇ `ಕೇಳಿ ಬಲ್ಲ-ನೋಡಿ ಬಲ್ಲ' ಕೇಂದ್ರ ಸರಕಾರದ ವಿಶೇಷ  ಅಭಿವೃದ್ಧಿ ಯೋಜನೆಗಳು. ಎಲ್ಲ ಜಿಲ್ಲೆಗಳಲ್ಲೂ  ಜಾರಿ ಯಲ್ಲಿರುವ ಎನ್‌ಆರ್‌ಇಜಿ, ಎನ್‌ಆರ್‌ಎಚ್‌ಎಂನಂಥ ಹತ್ತು-ಹಲವು ಯೋಜನೆಗಳ ಜತೆ ಮೈಸೂರು ಜಿಲ್ಲೆ  ಹೆಚ್ಚುವರಿಯಾಗಿ ಈ ಯೋಜನೆಗಳನ್ನೂ ದಿಲ್ಲಿಯಿಂದ ಸಂಪಾದಿಸಿದೆ. ಇವು ಸರಿಯಾಗಿ ಸಾಕಾರಗೊಂಡರೆ  ನಾಲ್ವಡಿ ಕಾಲದ `ಮಾದರಿ ಮೈಸೂರು' ಎಂಬ ಅಭಿ ದಾನವನ್ನು ನಮ್ಮ ಕಾಲದ ಮೈಸೂರು ಮತ್ತೊಮ್ಮೆ  ಪಡೆಯಬಹುದೇನೋ.  ಆದರೆ, ಇಲ್ಲಿ  ಆಗುತ್ತಿರುವುದೇ ಬೇರೆ.
ನರ್ಮ್ ಯೋಜನೆಗೆ ತುಕ್ಕು : ಮುಂದಿನ ೨೦ ವರ್ಷಗಳ ನಗರದ ದೃಷ್ಟಿಯನ್ನು ಗಮನದಲ್ಲಿರಿಸಿ ಮೈಸೂರನ್ನು ನವೀಕರಿಸಿ ಎಂದು ಕೇಂದ್ರ ಸರಕಾರ  ಜವಹಾರ್‌ಲಾಲ್ ನೆಹರು ರಾಷ್ಟ್ರೀಯ ನಗರ ಪುನ ರುಜ್ಜೀವನ ಯೋಜನೆ (ಜೆಎನ್-ನರ್ಮ್) ಯಡಿ ೧೮೬೮ ಕೋಟಿ ರೂ. ಗಳನ್ನು ನಗರಕ್ಕೆ ಮಂಜೂರು ಮಾಡಿದೆ. ಈ ಬೃಹತ್ ಮೊತ್ತದ ಬಳಕೆಗೆ ಪಾಲಿಕೆ ನೋಡಲ್ ಏಜೆನ್ಸಿಯಾದರೆ, ನಗರಾಭಿವೃದ್ಧಿ ಪ್ರಾಧಿಕಾರ, ಪಾರಂಪರಿಕ ಇಲಾಖೆ, ಕೆಎಸ್‌ಆರ್‌ಟಿಸಿ, ಕೊಳಚೆ ನಿರ್ಮೂಲನೆ ಮಂಡಳಿ,  ಕರ್ನಾಟಕ ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿಯಂಥ ಇಲಾಖೆ ಗಳು ಪಾಲುದಾರ ಸಂಸ್ಥೆಗಳು. ಈ ಮೊತ್ತದ ಪೈಕಿ ಮೈಸೂರು ಇದುವರೆಗೆ ಪಡೆಯಲು ಸಾಧ್ಯವಾದದ್ದು  ೧೩೦೦ ಕೋಟಿ ರೂ. ಹಾಗೂ ಇದರಲ್ಲೂ  ಬಳಕೆಯಾ ದದ್ದು  ಸುಮಾರು ೫೦೦ ಕೋಟಿ ರೂ. ಅಷ್ಟೇ. ಕೆಎಸ್‌ಆರ್‌ಟಿಸಿ ಒಂದಿಷ್ಟು  ಕಣ್ಣಿಗೆ ಕಾಣುವ ಕೆಲಸ ಮಾಡಿದೆ ಎಂಬುದನ್ನು ಬಿಟ್ಟರೆ, ಒಟ್ಟಾರೆ, ನರ್ಮ್ ಅನುದಾನ ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗುತ್ತಿಲ್ಲ . ಸಂಸದ ಅಡಗೂರು ಎಚ್. ವಿಶ್ವನಾಥ್ ಕೂಡ ಇದೇ ಮಾತನ್ನು ಹೇಳುತ್ತಲೇ ಇದ್ದಾರೆ.

ವರ್ಷದಲ್ಲೇ ಮರೆತು ಹೋದರೆ ಧೀಮಂತ ನಟ ?...

ಪಿ.ಓಂಕಾರ್ ಮೈಸೂರು
ಕನ್ನಡ ಚಿತ್ರರಂಗವನ್ನು ದೀರ್ಘ ಕಾಲ ಬೆಳಗಿದ ಕೆ.ಎಸ್.ಅಶ್ವತ್ಥ್  ಬದುಕಿನ `ತೆರೆ ಮರೆ'ಗೆ ಸರಿದು  ಜ.೧೮ಕ್ಕೆ  ಒಂದು ವರ್ಷ.
ಶಿಸ್ತು,ಸಮಯಪ್ರಜ್ಞೆ, ಸರಳತೆ,ಬದ್ಧತೆ, ಸ್ವಾಭಿಮಾನದ ಕಾರಣಕ್ಕೆ ಉದ್ಯಮದಲ್ಲಿ ತಮ್ಮದೇ ಧೀಮಂತಿಕೆಯನ್ನು ಉಳಿಸಿ ಕೊಂಡಿದ್ದ ಹಿರಿಯ ನಟನ ನೆನಪನ್ನು ಚಿರಸ್ಥಾಯಿಗೊಳಿಸುವ ಪ್ರಯತ್ನಕ್ಕೆ ಸರಕಾರ ವಾಗಲಿ, ಚಿತ್ರೋದ್ಯಮವಾಗಲಿ ಚಾಲನೆ ನೀಡಿಲ್ಲ. ಸ್ಮರಣೆಯ ಒಂದು ಕಾರ್‍ಯಕ್ರಮವೂ ಆಯೋಜನೆಯಾಗಿಲ್ಲ.
ಅಂತಿಮ ಪಯಣದ ದಿನ  ವ್ಯಕ್ತ ಅಭಿಪ್ರಾಯ, ಭರವಸೆಗಳೆಲ್ಲ ಅಷ್ಟಕ್ಕೇ ಸೀಮಿತ. ಚಿತ್ರರಂಗದ `ಮರ್ಯಾದಾಪುರುಷ'ನ ನೆನಪು ವರ್ಷದಲ್ಲೇ `ತೆರೆ'ಮರೆಗೆ ಸರಿಯಿತಾ ಎನ್ನುವುದು ಕಾಡುವ ಸಂಗತಿ.

`ನರ'ರಿಗಲ್ಲವೋ ಈ ರಸ್ತೆ...

 ಕೆ.ಎಸ್. ಶಿವಶಂಕರ್ ಮಳವಳ್ಳಿ
ಕಿತ್ತು ಬಂದ ಡಾಂಬರು. ರಸ್ತೆಯಲ್ಲಿ ಗುಂಡಿಗಳದೇ ಕಾರುಬಾರು. ಕಿರಿದಾದ ರಸ್ತೆಗಳಲ್ಲಿ ಸಂಚಾರಕ್ಕೆ ಇಕ್ಕಟ್ಟು.  ಜಿಲ್ಲೆಯಲ್ಲಿ ಅತಿ ದೊಡ್ಡ ಪಟ್ಟಣವೆಂಬ ಹೆಗ್ಗಳಿಕೆ ಹೊಂದಿದ ಮಳವಳ್ಳಿ ಟೌನ್‌ನ ರಸ್ತೆಗಳ ಸ್ಥಿತಿಗತಿ.  ಹಲವೆಡೆ ಗುಂಡಿಯೊಳಗೆ ರಸ್ತೆಗಳು. ಕೆಲವೆಡೆ ಡಾಂಬರೇ ಕಾಣದ ಮಾರ್ಗಗಳು. ಈ ರಸ್ತೆಗಳಲ್ಲಿ ಸಂಚಾರ ನಿಜಕ್ಕೂ ದುಸ್ತರ.
ಕೆಲವು ಬಡಾವಣೆಗಳಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡ ರಸ್ತೆಗಳು ಈವರೆಗೆ ಡಾಂಬರನ್ನೇ ಕಂಡಿಲ್ಲ. ಡಾಂಬರಿನ ಮಾತಿರಲಿ ಮೆಟ್ಲಿಂಗ್ ಕಾಮಗಾರಿಯೇ ನಡೆದಿಲ್ಲ. ಇನ್ನೂ ಕಚ್ಚಾ ರಸ್ತೆಗಳೇ ಆಗಿರುವ ಅವುಗಳ ಸ್ಥಿತಿ ಆ ದಂಡಿನ ಮಾರಮ್ಮನಿಗೇ ಪ್ರೀತಿಯಾಗಬೇಕು. ತೇಪೆ ಹಚ್ಚುವ ಕೆಲಸಗಳೂ ಸರಿಯಾಗಿ ನಡೆಯುತ್ತಿಲ್ಲ.
ಗುಂಡಿಬಿದ್ದ ರಸ್ತೆಗಳಲ್ಲಿ ವಾಹನಗಳು ಸಂಚರಿಸಿದಾಗ ಬರೀ ಧೂಳು. ಸುತ್ತಮುತ್ತಲಿನ ವಾತಾವರಣವೂ ಧೂಳುಮಯ. ೨೩ ವಾರ್ಡ್‌ಗಳಿರುವ ಮಳವಳ್ಳಿಯ ಯಾವೊಂದು ವಾರ್ಡ್‌ಗಳಲ್ಲೂ ಒಂದೂ ರಸ್ತೆಯೂ ಸರಿಯಿಲ್ಲ. ಅವುಗಳ ದುರಸ್ತಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಿದ್ದೂ ಇಲ್ಲ. ಪ್ರತಿಷ್ಠಿತರು ವಾಸವಿರುವ ಎನ್‌ಇಎಸ್ ಬಡಾವಣೆ, ಆದರ್ಶ ಕಾನ್ವೆಂಟ್ ಪ್ರದೇಶ, ಕೀರ್ತಿನಗರ, ಸಿದ್ಧಾರ್ಥ ನಗರದಲ್ಲೂ ರಸ್ತೆಗಳನ್ನು ಹುಡುಕಬೇಕು. ಹೊಸ ಬಡಾವಣೆಗಳಲ್ಲಿ ಸರಿಯಾದ ರಸ್ತೆಗಳೇ ನಿರ್ಮಾಣವಾಗಿಲ್ಲ.

ಕನಸಿಗೆ ಬಣ್ಣ ತುಂಬಲು ಅವಳೇ ಇರಲಿಲ್ಲ!

ಆರ್. ಕೃಷ್ಣ, ಮೈಸೂರು
ಕಲಿಯಬೇಕು, ಕಲಿಸಬೇಕೆನ್ನುವ ಹಂಬಲ ಅಗಾಧವಾಗಿತ್ತು. ಆದರೆ...?
ತಾವು ಕಲಿತಿದ್ದನ್ನೆಲ್ಲಾ ಧಾರೆ ಎರೆಯುವ ಉತ್ಸಾಹದಲ್ಲಿದ್ದ ಪ್ರಾಧ್ಯಾಪಕಿ ನೀಲಮ್ಮ, ವಿದ್ಯಾರ್ಥಿಗಳಿಗೆ ಕಲಿಸುತ್ತಿರುವಾಗಲೇ ಪ್ರಯೋಗಾಲಯದಲ್ಲಿ ಸಂಭವಿಸಿದ ಅವಘಡದಿಂದ ದುರಂತ ಅಂತ್ಯ ಕಂಡರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಬಯೋಟೆಕ್ನಾಲಜಿ ಪ್ರಾಧ್ಯಾಪಕಿ ನೀಲಮ್ಮ (೩೮)  ಅವರಿಗೆ ಕಲಿಯುವ-ಕಲಿಸುವ ದಾಹ. ಇದಕ್ಕಾಗಿ ಪ್ರಯೋಗಾಲಯದಲ್ಲಿ ತಾವೇ ಮುಂದೆ ನಿಂತು ವಿದ್ಯಾರ್ಥಿಗಳಿಗೆ ವಿವರಿಸುತ್ತಿದ್ದರು.
ಡಿ.೨೨ ರಂದು ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮುಗಿಸಿ ಹೆಕ್ಸೆನ್ ಸಾಲ್ವೆಂಟ್ ದ್ರಾವಣ ಇದ್ದ ಗಾಜಿನ ಕಂಟೈನರ್ ಅನ್ನು ಕಬೋರ್ಡ್‌ಗೆ ಎತ್ತಿಡುತ್ತಿದ್ದಾಗ ಪಕ್ಕದಲ್ಲಿ ಉರಿಯುತ್ತಿದ್ದ ಬೆಂಕಿ ತಗುಲಿ ಕೈ ಸುಟ್ಟು ಹೋಯಿತು. ಗಾಬರಿಗೊಂಡ ನೀಲಮ್ಮ, ಬಾಟಲಿಯನ್ನು ಕೆಳಗಿಡುವಾಗ ಜಾರಿ ನೆಲಕ್ಕೆ ಬಿದ್ದಿದ್ದೇ ಬೆಂಕಿ ಏಕಾಏಕಿ ವ್ಯಾಪಿಸಿತು. ಜ್ವಾಲೆಯಿಂದ ಕೈ, ಕಾಲು, ಎದೆ, ಹೊಟ್ಟೆ, ಬೆನ್ನೆಲ್ಲಾ ಸುಟ್ಟಿತು. ಅವರನ್ನು ಉಳಿಸಿಕೊಳ್ಳುವ ಹೋರಾಟ ಕೈಗೂಡಲಿಲ್ಲ.

ಅಭಿವೃದ್ಧಿಗೆ ಕೈಜೋಡಿಸಿದರೆ ಸಹಕಾರ: ಯಡಿಯೂರಪ್ಪ

 ಹೆಬ್ಬಾಳು
ಇನ್ಫೋಸಿಸ್ ರೀತಿಯಲ್ಲಿ ಯಾವುದೇ ಖಾಸಗಿ ಸಂಸ್ಥೆಗಳು ನಾಡಿನ ಅಭಿವೃದ್ಧಿಗೆ ಸರಕಾರದೊಂದಿಗೆ ಕೈ ಜೋಡಿಸಿದರೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಹೇಳಿದ್ದಾರೆ,
ಹೆಬ್ಬಾಳ ಕೈಗಾರಿಕೆ ಪ್ರದೇಶದಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ ನವರು ನಿರ್ಮಿಸಿದ ಆಧುನಿಕ ಅಗ್ನಿ ಶಾಮಕ ಠಾಣೆ ಹಾಗೂ ೧೪ ವಸತಿ ಗೃಹಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಕುಡಿತ ಬಿಡಲು ಅಯ್ಯಪ್ಪ ಧ್ಯಾನ: ಸಿಕ್ಕಿದ್ದು ಸಾವಿನ ಸನ್ನಿಧಾನ

ಎಂ.ಎಲ್.ರವಿಕುಮಾರ್, ಎಚ್.ಡಿ.ಕೋಟೆ
ಕುಡಿತ ಬಿಡಲೆಂದೇ ಅಯ್ಯಪ್ಪಸ್ವಾಮಿ ಸನ್ನಿಧಿಗೆ ಮಗನೊಂದಿಗೆ ಹೋದವನು ನೇರವಾಗಿ ತೆರಳಿದ್ದು ವಾಪಾಸ್ ಬಾರದ ಲೋಕಕ್ಕೆ.
ತಾಲೂಕಿನ ಚಕ್ಕೋಡನಹಳ್ಳಿ ಗ್ರಾಮಪಂಚಾ ಯಿತಿ ವ್ಯಾಪ್ತಿಯ ಸೋನಹಳ್ಳಿ ಗ್ರಾಮದವ ನಾದರೂ ಬೆಂಗಳೂರಿನಲ್ಲಿ ನೆಲೆಸಿದ್ದ ಕೃಷ್ಣ ಎಂಬಾತನ ಸಾವಿನ ಹಿಂದಿನ ಕಥೆಯಿದು.
ಉದ್ಯೋಗ ಅರಸಿ ರಾಜಧಾನಿ ಸೇರಿದ್ದರೂ ವರ್ಷದ ಹಿಂದೆಯಷ್ಟೇ ಕುಟುಂಬವನ್ನು ಹಳ್ಳಿ ಯಿಂದ ಬೆಂಗಳೂರಿಗೆಕರೆಯಿಸಿಕೊಂಡಿದ್ದ ಕೃಷ್ಣ. ಮೊದಲು ನಾಲ್ಕು ವರ್ಷ ಯಾತ್ರೆ ಮಾಡಿ ದಶಕದ ನಂತರ ಶಬರಿಮಲೈಗೆ  ಈ ವರ್ಷ ವಿನ್ನೂ ಹೋಗಿದ್ದ. ತನ್ನ ಮಗನೊಂದಿಗೆ ಈಗ ಹೆಣವಾಗಿ ಬಂದಿದ್ದಾನೆ.

ಶ್ರೀರಂಗಪಟ್ಟಣ: ವಿಜೃಂಭಣೆಯ ಲಕ್ಷ ದೀಪೋತ್ಸವ

ವಿಕ ಸುದ್ದಿಲೋಕ ಶ್ರೀರಂಗಪಟ್ಟಣ
ಆದಿರಂಗ ಎಂದೇ ಹೆಸರಾದ ಶ್ರೀರಂಗಪಟ್ಟಣದ ಶ್ರೀ ಶ್ರೀರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ಶನಿವಾರ ಸಂಧ್ಯಾಕಾಲದಲ್ಲಿ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.
 ಶನಿವಾರ ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆ ೧೬ ಸಾಲುಗಳಲ್ಲಿ ದೀಪಗಳನ್ನು ಬೆಳಗಲಾಯಿತು. ದೇವಾಲಯ ಎದುರಿನ ರಾಜ ಮಾರ್ಗದಲ್ಲಿ ಗಂಡ ಭೇರುಂಡ ವೃತ್ತದವರಗೆ ದಬ್ಬೆ ಪಟ್ಟಿಗಳನ್ನು ಕಟ್ಟಿ ದೀಪಗಳನ್ನು ಇಡಲಾಗಿತ್ತು. ಲಕ್ಷ ದೀಪೋತ್ಸವ ಸಮಿತಿಯು ಸಾರ್ವ ಜನಿಕರು ಮತ್ತು ಭಕ್ತರ ನೆರವಿನಿಂದ ಎಣ್ಣೆ, ದೀಪಗಳನ್ನು ಸಂಗ್ರಹಿಸಿ ಜೋಡಿಸಿತ್ತು. ಬೇಬಿ ಗ್ರಾಮದ ಶ್ರೀ ದುರ್ದಂಡೇಶ್ವರ ಮಠದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅವರು ದೀಪೋತ್ಸವಕ್ಕೆ ಚಾಲನೆ ನೀಡಿದರು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ೨೫ ಸಾವಿರಕ್ಕೂ ಹೆಚ್ಚು ಭಕ್ತರು ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.

ಹೆಬ್ಬಾಳಿನಲ್ಲಿ ಹೊಸ ಅಗ್ನಿಶಾಮಕ ಠಾಣೆ

ವಿಕ ವಿಶೇಷ
ಸಂಭವನೀಯ ಆಗ್ನಿದುರಂತ ಶಮನಕ್ಕೆ ನಗರದಲ್ಲಿ ಮತ್ತೊಂದು ಆಗ್ನಿಶಾಮಕ ಠಾಣೆ ಕಾರ್‍ಯಾರಂಭ ಗೊಳ್ಳಲಿದೆ.
ಜಿಲ್ಲೆಯಲ್ಲಿ ಇದು ಎಂಟನೇ ಅಗ್ನಿಶಾಮಕ ಠಾಣೆ. ನಗರಕ್ಕೆ ಮೂರನೆಯದು. ಇದರಿಂದ ನೂರಾರು ಕೈಗಾರಿಕೆಗಳಿರುವ ಹೆಬ್ಬಾಳು ಕೈಗಾರಿಕಾ ಪ್ರದೇಶಕ್ಕೆ ಮುಂಜಾಗ್ರತಾ ಕ್ರಮವಾಗಿ ಆಗ್ನಿಶಾಮಕ ಠಾಣೆ ಬೇಕೆಂಬ ಉದ್ದಿಮೆಗಳ ಬೇಡಿಕೆ ಈಡೇರಿದೆ.
ಸರಸ್ವತಿಪುರಂ, ಬನ್ನಿಮಂಟಪ ಪೂರ್ಣ ಪ್ರಮಾಣದ ಠಾಣೆ ಇದ್ದರೆ, ಮೇಟಗಳ್ಳಿ ಕೈಗಾರಿಕಾ ಪ್ರದೇಶದ ಭಾರತೀಯ ನೋಟು ಮುದ್ರಣ ಘಟಕ (ಆರ್‌ಬಿಐ)ಬಳಿ ಉಪಠಾಣೆ ಕಾರ್‍ಯ ನಿರ್ವಹಿಸುತ್ತಿದೆ. ಒಂದೊಮ್ಮೆ ಕೈಗಾರಿಕೆಗಳಲ್ಲಿ ಆಗ್ನಿ ದುರಂತ ಸಂಭವಿಸಿ ದರೆ ಹಾಲಿ ಸರಸ್ವತಿಪುರಂ, ಬನ್ನಿಮಂಪಟದಲ್ಲಿನ ವಾಹನಗಳು ಕೈಗಾರಿಕಾ ಪ್ರದೇಶಕ್ಕೆ ಬರಲು ಬಹು ಸಮಯ ಹಿಡಿಯುವುದು ಸಾಮಾನ್ಯ. ಹಾಗಾಗಿ ಅಲ್ಲಿಗೆ ಪ್ರತ್ಯೇಕ ಠಾಣೆ ಅಗತ್ಯವಿದೆ ಎಂಬ ಬೇಡಿಕೆ ಇತ್ತು.

ಹೆಸರಿಗಿದು ಸುವರ್ಣ ಗ್ರಾಮ; ಸೌಲಭ್ಯ ಅಯೋಮಯ

ಮಾದೇಶ್ ತಿ.ನರಸೀಪುರ
ಸೋಸಲೆ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಸೇರಿಸಿದರೂ ಸುವರ್ಣಮಯವಾಗಿಲ್ಲ  !
ಯೋಜನೆಯಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿದರೂ ಕಾಮಗಾರಿಗಳು ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಸುವರ್ಣ ಗ್ರಾಮ ಯೋಜನೆ ಕಾಮಗಾರಿಗಳು ಮಾತ್ರ ಹಳ್ಳ ಹಿಡಿಯುತ್ತಿವೆ.
ಸುವರ್ಣ ಗ್ರಾಮ ಯೋಜನೆ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಗ್ರಾಮಸ್ಥರ ನಿರೀಕ್ಷೆ ಪ್ರಮಾಣದಲ್ಲಿ ಗುಣಮಟ್ಟದ ಕಾಮಗಾರಿಗಳು ನಡೆದಿಲ್ಲ.

ಕಾಂಗ್ರೆಸ್ ಅಭ್ಯರ್ಥಿಯನ್ನೇ `ಹೈಜಾಕ್'ಮಾಡುವ ತಂತ್ರ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಮಡಿಕೇರಿ ನಗರಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿಲ್ಲದ ಹಿನ್ನೆಲೆಯಲ್ಲಿ `ಆಪರೇಷನ್ ಕಮಲ' ದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಮುಂದಾಗಿದೆ. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿದ್ದ ಎಚ್.ಎಂ. ನಂದಕುಮಾರ್ ಅವರನ್ನೇ  ಸೆಳೆದುಕೊಂಡು ಅಧ್ಯಕ್ಷರನ್ನಾಗಿಸಲು ಬಿಜೆಪಿ ಮುಂದಾಗಿರುವುದು ಬೆಳಕಿಗೆ ಬಂದಿದೆ.
ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಪ್ರಥಮ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಪಿ.ಡಿ. ಪೊನ್ನಪ್ಪ ಅವರನ್ನು ಪ್ರಥಮ ಅವಧಿಯ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ. ಸುನೀಲ್ ಸುಬ್ರಹ್ಮಣಿ ಪ್ರಸ್ತುತ ಆಪರೇಷನ್ ಕಮಲದ ರೂವಾರಿ.

ನಡೆದಿವೆ ಕಾಟಾಚಾರದ, ತೇಪೆ ಕೆಲಸ

ಕೋಟಂಬಳ್ಳಿ ಗುರುಸ್ವಾಮಿ  ಕೊಳ್ಳೇಗಾಲ
ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಮತ್ತೆ ಬರುತ್ತಿದೆ. ಆದರೆ ಚಿಕ್ಕಲ್ಲೂರಿನತ್ತ ಸೌಲಭ್ಯಗಳು ಸುಳಿದಿಲ್ಲ.
ಈ ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಸತ್ಯ ಗೊತ್ತಿದ್ದರೂ ಈ ಕ್ಷೇತ್ರಕ್ಕೊಂದು ವ್ಯವಸ್ಥಿತ ರಸ್ತೆಯನ್ನು ಕಲ್ಪಿಸಲು ಜಿಲ್ಲಾಡಳಿತ ಮನಸ್ಸು ಮಾಡಿಲ್ಲ. ಪರಿಣಾಮ ಜಾತ್ರೆ ಸಮೀಪಿಸುತ್ತಿದ್ದಂತೆ ಕಿತ್ತು ರಾಡಿ ಹಿಡಿದಿರುವ ರಸ್ತೆಗೆ ಮಣ್ಣು ಎರಚುವ ಕಾರ್ಯ ಭರದಿಂದ ನಡೆದಿದೆ.

ಯಾವ ಕಾಲೇಜಿನಲ್ಲೂ ವಿವೇಕಾನಂದ ಸ್ಮರಣೆಯಿಲ್ಲ

ಧೀರ ಸನ್ಯಾಸಿ

ಏಳಲಿಲ್ಲ, ಎದ್ದೇಳಲಿಲ್ಲ

ಕಪಿಲಾ ಸೇತುವೆ ಕಾಮಗಾರಿ ಆರಂಭ

ವಿವೇಕರಿಲ್ಲ, ವಿವೇಕವಿಲ್ಲ

ಮೊಟ್ಟೆಗೆ ದರ ಏರಿಕೆ `ಕಾವು'

ಪಿ.ಓಂಕಾರ್ ಮೈಸೂರು
ಬೆಲೆ ಏರಿಕೆಯ `ಕಾವು' ಈಗ ಕೋಳಿ ಮೊಟ್ಟೆಗೆ ತಟ್ಟಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿ ದರ ದಾಖಲೆಯ ಏರಿಕೆಯಾಗಿದೆ.
ಸೋಮವಾರ ಎನ್‌ಇಸಿಸಿ ಪ್ರಕಟಿಸಿದ ದರ ಪಟ್ಟಿಯಂತೆ ಮೈಸೂರಿನಲ್ಲಿ ಸಗಟು ದರ ನೂರಕ್ಕೆ ೩೦೧ರೂ., ಹತ್ತಕ್ಕೆ ೩೨ ರೂ. ಚಿಲ್ಲರೆ ಅಂಗಡಿಗಳಲ್ಲಿ ಪ್ರತಿ ಮೊಟ್ಟೆ ೩.೨೫ ರಿಂದ ೩.೫೦ ರೂ.ಗೆ ಮಾರಾಟ. ಬೆಂಗಳೂರಿ ನಲ್ಲಿ ೧೦೦ಕ್ಕೆ ೩೦೦ ರೂ.ನಿಗದಿ. ಹೆಚ್ಚು ಮೊಟ್ಟೆ ಉತ್ಪಾದನೆಯಾಗುವ ಹೊಸಪೇಟೆಯಲ್ಲಿ ೨.೮೫ ರೂ. ಇದ್ದರೂ, ಮಾರಾಟವಾಗುತ್ತಿ ರುವ ದರ ೩.೨೦ರೂ.

`ರಾಜ್ಯಪಾಲ'ನೆಯತ್ತ ಶ್ರೀನಿವಾಸಪ್ರಸಾದ್?

ಕುಂದೂರು ಉಮೇಶಭಟ್ಟ, ಮೈಸೂರು
ಶಾಸಕತ್ವದಿಂದ ರಾಜ್ಯಪಾಲನೆಯತ್ತ ತೆರಳಿದ್ದಾರೆಯೇ ನಂಜನಗೂಡು ಶಾಸಕ ವಿ.ಶ್ರೀನಿವಾಸ ಪ್ರಸಾದ್?.
ಇಂಥ ಚರ್ಚೆ ಪ್ರಸಾದ್ ಅವರ ಆಪ್ತ ವಲಯದಲ್ಲಿ ಕೆಲವು ದಿನಗಳಿಂದ ಸದ್ದಿಲ್ಲದೇ ಹರಿದಾಡುತ್ತಿದೆ. ಸದ್ಯದ ರಾಜಕೀಯ ಸನ್ನಿವೇಶ, ಕಾಂಗ್ರೆಸ್‌ನ ಭವಿಷ್ಯದ ಲೆಕ್ಕಾಚಾರದೊಂದಿಗೆ ಅವರು ರಾಜ್ಯಪಾಲ ಹುದ್ದೆ ಆಯ್ಕೆ ಮಾಡಿ ಕೊಳ್ಳಲು ಪ್ರಮುಖ ಕಾರಣ ಎಂಬುದು ಆಪ್ತ ವಲಯದ ಮಾತು. ಈಗ ಕೇಂದ್ರ ದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಆಸ್ಕರ್ ಫರ್ನಾಂಡೀಸ್ ಸೇರಿದಂತೆ ಬಹಳಷ್ಟು ಮಂದಿ ಆಪ್ತರಿದ್ದು, ಇದನ್ನು ಬಳಸಿಕೊಳ್ಳುವುದು ಅವರ ಯೋಚನೆ.

ಮೂವರೂ ಅಂಧರು, ಕೈ ಹಿಡಿದು ನಡೆಸುವರಾರು

ನವೀನ್‌ಕುಮಾರ್  ಪಿರಿಯಾಪಟ್ಟಣ
ಮೊದಲೇ ಕಿತ್ತು ತಿನ್ನೋ ಬಡತನ. ಜತೆಗೆ ಕುಟುಂಬಕ್ಕೆ ಆಧಾರವಾಗಬೇಕಿದ್ದ ಮೂವರೂ ಮಕ್ಕಳು ಅಂಧರು. ಇನ್ನು ತಂದೆಗೆ ವೃದ್ಧಾಪ್ಯ.
ತಾಲೂಕಿನ ಗಡಿ ಗ್ರಾಮ ಕಿತ್ತೂರು ಗುರುವಯ್ಯನಕೊಪ್ಪಲು ತಮ್ಮಯ್ಯಶೆಟ್ಟಿ ಕುಟುಂಬದ ಸ್ಥಿತಿಯಿದು. ತಮ್ಮಯ್ಯಶೆಟ್ಟಿಗೆ ಒಬ್ಬ ಮಗಳು, ಇಬ್ಬರು ಪುತ್ರರು. ದುರದೃಷ್ಟವಶಾತ್ ಇವರೆಲ್ಲರೂ ದೃಷ್ಟಿಹೀನರು. ತಮಗಾರಾದರೂ ಬೆಳಕು ನೀಡಬಹುದೇ ಎಂಬ ಕನಸು ಹೊತ್ತು ಕುಳಿತವರು.
ಸುಧಾಮಣಿ (೩೦), ರವಿರಾಜ (೨೮) ಭಾಸ್ಕರ (೨೬)ರಿಗೆ  ತಂದೆ ತಮ್ಮಯ್ಯಶೆಟ್ಟಿ ಮತ್ತು ತಾಯಿ ಜಯಮ್ಮ ತಂದ ಕೂಲಿ ಹಣವೇ ಆಧಾರ. ಹೇಗೋ ಜೀವನ ನಡೆಸುತ್ತಿದ್ದಾಗ ಜಯಮ್ಮ ವರ್ಷದ ಹಿಂದೆ ಹೃದಯ ತೊಂದರೆ ಮತ್ತು ಅಸ್ತಮಾದಿಂದ ಕೊನೆಯುಸಿರೆಳೆದರು.

ಮೈಸೂರಲ್ಲಿ ಸಚಿವರಿಗೇ ಇಲ್ಲ ಇಟ್ಟಿಗೆ!

* ಕುಂದೂರು ಉಮೇಶಭಟ್ಟ, ಮೈಸೂರು
ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಅವರಿಗೂ ಎದುರಾಗಿದೆ ಇಟ್ಟಿಗೆ ಸಮಸ್ಯೆ !.
ಕರ್ನಾಟಕದ ಇಟ್ಟಿಗೆಗೆ ತಮಿಳುನಾಡಿನಲ್ಲಿ ಭಾರಿ ಬೇಡಿಕೆ. ಆದರೆ ಮೈಸೂರಿನಲ್ಲಿ ಶಾಸಕರ ಒಡೆತನದ ಇಟ್ಟಿಗೆಗೆ ಸಚಿವರಿಂದಲೂ ಬೇಡಿಕೆ !
ಮೈಸೂರಿನಿಂದ ತಮಿಳುನಾಡಿಗೆ ಹೋಗುತ್ತಿರುವುದು ಕಡಿಮೆ. ಆದರೆ ಸ್ಥಳೀಯವಾಗಿಯೇ  ಪೂರೈಸಲು ಆಗದಷ್ಟು ಬೇಡಿಕೆ.
ಮನೆ ಕಟ್ಟಿ ನೋಡು
ಮೂಲತಃ ಹಾವೇರಿ ಜಿಲ್ಲೆ ಬ್ಯಾಡಗಿಯವರಾದರೂ ಎರಡೂವರೆ ದಶಕದ ಹಿಂದೆಯೇ ಹುಣಸೂರಿಗೆ ಬಂದು ಅಕ್ಕನ ಮನೆಯಲ್ಲಿ ಇದ್ದು ಸಿಮೆಂಟ್ ವ್ಯಾಪಾರ ನಡೆಸಿದವರು ವಿಜಯಶಂಕರ್. ಎರಡು ಬಾರಿ ಎಂಪಿ, ಒಮ್ಮೆ ಶಾಸಕ, ಈಗ ವಿಧಾನಪರಿಷತ್ ಸದಸ್ಯತ್ವ ದೊಂದಿಗೆ ಸಚಿವರಾದರು. ಈಗ ಮನೆ ಕಟ್ಟಿ ನೋಡುವ ಸಾಹಸಕ್ಕೆ ಮುಂದಾಗಿದ್ದಾರೆ. ಕಳೆದ ವರ್ಷ ಮುಡಾ ಹರಾಜಿನಲ್ಲಿ ವಿಜಯನಗರದಲ್ಲಿ ನಿವೇಶನ ಖರೀದಿಸಿ ಕಾಮಗಾರಿ ಆರಂಭಿಸಿದರು. ತಮ್ಮ ಮನೆಗೆ ಚಾಮುಂಡೇಶ್ವರಿ ಶಾಸಕ ಸತ್ಯನಾರಾಯಣ ಅವರ ಬಟ್ಟಿಯ ಇಟ್ಟಿಗೇಗಳೇ ಬೇಕೆಂದು ಬೇಡಿಕೆ ಇಟ್ಟರು. ಆದರೆ ಸದ್ಯಕ್ಕೆ ಸಿಗದೆಂಬ ಉತ್ತರ ಸಿಕ್ಕಿತು. ಇದರಿಂದ ಮನೆ ಕೆಲಸ ಕೊಂಚ ವಿಳಂಬವಾಗಿದೆ.

ಮಂಜು ಮುಸುಕಿದ ಹಾದಿಯಲಿ...

ಈಗ ಪ್ರತಿ ಬೆಳಗುಗಳನ್ನು ಮಂಜು ದಟ್ಟವಾಗಿ ಆವರಿಸುತ್ತಿದೆ. ಮೈಸೂರು- ಮಾನಂದವಾಡಿ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ೮ರ ಸುಮಾರಿಗೆ ರಸ್ತೆ ಕಾಣದಷ್ಟು ಕಾವಳ. ಮಂಜು ಮುಸುಕಿದ ಹಾದಿಯಲ್ಲಿ ದನ,ಕುರಿ ಜತೆ ಜಮೀನಿನತ್ತ ಹೊರಟ ಕೃಷಿಕ ಮಹಿಳೆ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.

ಹೆದ್ದಾರಿಯಲ್ಲಿ ಅವರೆ: ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳುವರೇ?

* ಹನಗೋಡು ನಟರಾಜ್ ಹುಣಸೂರು
ಇದನ್ನು ನೀವು ಅವರೆಕಾಯಿ ಜಾಮ್ ಎನ್ನಬಹುದೇನೋ ? ಅಂದರೆ ತಿನ್ನೋ ಜಾಮ್ ಅಲ್ಲ, ಟ್ರಾಫಿಕ್ ಜಾಮ್ !
ಹುಣಸೂರು-ಮೈಸೂರು ಹೆದ್ದಾರಿಯ ಬನ್ನಿಕುಪ್ಪೆ ಗೇಟ್‌ನಲ್ಲಿ ಎರಡು ಬದಿಯೂ ಅವರೆ ವ್ಯಾಪಾರ ನಡೆಯುತ್ತದೆ. ಸದಾ ಟ್ರಾಫಿಕ್ ಜಾಮ್. ಆಕಸ್ಮಾತ್ ಏನಾದರೂ ಬಸ್ಸೋ, ಲಾರಿಯೋ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿದರೆ ಆಗುವ ನಷ್ಟಕ್ಕೆ ಲೆಕ್ಕವಿಲ್ಲ. ಆದರೂ  ಗ್ರಾ.ಪಂ., ಪೊಲೀಸರು, ಆರ್‌ಟಿಒ ಅಧಿಕಾರಿಗಳು ತಲೆ ಕೆಡಿಸಿಕೊಂಡೇ ಇಲ್ಲ.
ನೂರಾರು ಬಾರಿ ಜಾಮ್: ಬೆಳಗ್ಗೆ  ೬ ರಿಂದ ಮಧ್ಯಾಹ್ನ ೨ ಗಂಟೆವರೆಗೆ ವ್ಯಾಪಾರ ಜೋರು. ಹೆದ್ದಾರಿಯಲ್ಲೇ ವಾಹನ ದಟ್ಟಣೆ ಹೆಚ್ಚಿರುವುದರಿಂದ ನಿತ್ಯ ನೂರಾರು ಬಾರಿ ೧೦ ರಿಂದ ೨೦ ನಿಮಿಷ ಜಾಮ್. ಆಂಬ್ಯುಲೆನ್ಸ್‌ಗಳಿಗೂ ಸಾಗಲು ಅವಕಾಶವಿರದ ಸ್ಥಿತಿ.
ಹತ್ತು ವರ್ಷಗಳಿಂದ ವ್ಯಾಪಾರ ನಡೆಯುತ್ತಿದ್ದರೂ, ಹೆದ್ದಾರಿಯಲ್ಲಿ ಇಷ್ಟೊಂದು ವಾಹನ ಸಂಚಾರವಿರಲಿಲ್ಲ. ಅದರಲ್ಲೂ ಮೈಸೂರು-ಬಂಟ್ವಾಳ ಹೆದ್ದಾರಿ ಆದ ಮೇಲಂತೂ ವಾಹನಗಳ ಹಾವಳಿ ತುಸು ಹೆಚ್ಚು. ಇದುವರೆಗೆ ಯಾವುದೇ ಅನಾಹುತ ನಡೆಯಲಿಲ್ಲ ಎಂಬುದೇ ಸದ್ಯದ ಸಮಾಧಾನ. ಆದರೆ, ಸಣ್ಣಪುಟ್ಟ ಘಟನೆಗಳು ಲೆಕ್ಕಕ್ಕಿಲ್ಲ. ಬನ್ನಿಕುಪ್ಪೆ ಗೇಟ್‌ನ ರಸ್ತೆ ಹಳ್ಳದಲ್ಲಿದ್ದು , ಯಾವುದಾದರೂ ವಾಹನ ಬ್ರೇಕ್ ಫೇಲ್ ಆದರೆ ಕಥೆ ಮುಗೀತು.

ಅಂತೂ ಇಂತೂ ವಿವಿ ರಸ್ತೆಗೆ ಮುಕ್ತಿ

* ನವೀನ್ ಮಂಡ್ಯ
ಅಂತೂ ಇಂತೂ ಮಂಡ್ಯದ ವಿಶ್ವೇಶ್ವರಯ್ಯ ರಸ್ತೆಗೆ (ವಿವಿ ರೋಡ್)ಗೆ ಮುಕ್ತಿ ನೀಡಲು ನಗರಸಭೆ ನಿರ್ಧರಿಸಿದೆ. ಆರಂಭಿಕ ಹಂತವಾಗಿ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ.
ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ-ಮುಂಗಟ್ಟುಗಳು ಹಾಗೂ ಕಟ್ಟಡಗಳ ಮಾಲೀಕರು ಫುಟ್ಪಾತ್ ಅನ್ನು ಒತ್ತುವರಿ ಮಾಡಿ ಕೊಂಡಿದ್ದರು. ಕೆಲವರು ಫುಟ್ಪಾತ್ ಮೇಲೆಯೇ ಅಂಗಡಿಗಳಿಗೆ ಹೋಗಲು ಮೆಟ್ಟಿಲು ನಿರ್ಮಿಸಿಕೊಂಡಿದ್ದರೆ, ಹಲವರು ಮಾರಾಟದ ವಸ್ತುಗಳನ್ನು ಪ್ರದರ್ಶನಕ್ಕಿಟ್ಟು ಪುಕ್ಕಟೆ ಜಾಹೀರಾತು ಪಡೆ ಯುತ್ತಿದ್ದರು. ಈ ಬಗ್ಗೆ ಸಾರ್ವಜನಿಕರ ದೂರುಗಳು ಮತ್ತು ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಕಡೆಗೂ ನಗರಸಭೆ ಫುಟ್ಬಾತ್ ಒತ್ತುವರಿ ತೆರವಿಗೆ ಮುಂದಾಗಿತ್ತು.
ಪ್ರಭಾವಿ ಅಧ್ಯಕ್ಷರಾಗಿದ್ದ ಉಪಾಧ್ಯಕ್ಷ ಎಂ.ಜೆ. ಚಿಕ್ಕಣ್ಣ ಅವರು ತಾವೇ ಖುದ್ದು ನಿಂತು ಎರಡು ದಿನಗಳ ಕಾರ್‍ಯಾಚರಣೆ ನಡೆಸಿ ದ್ದರು. ಕಾರ್‍ಯಾಚರಣೆ ಪೂರ್ಣಗೊಂಡ ನಂತರ ವಿದೇಶಿ ಮಾದರಿ ಯಲ್ಲಿ ಅತ್ಯಾಧುನಿಕ ಫುಟ್ಪಾತ್ ನಿರ್ಮಿಸುವುದಾಗಿ ಘೋಷಿಸಿ ದ್ದರು.

ಸೆರೆ ಸಿಕ್ಕ ಚಿರತೆ ಅರಣ್ಯಕ್ಕೆ

* ವಿಕ ಸುದ್ದಿಲೋಕ ಎಚ್.ಡಿ. ಕೋಟೆ
ಕೊನೆಗೆ ಸೆರೆ ಸಿಕ್ಕಿತು ಬಲವಾದ ಚಿರತೆ.
ಒಂದು ವಾರದಿಂದ ಚಿರತೆ ಸೆರೆ ಹಿಡಿಯಲೆಂದೇ ಅರಣ್ಯ ಇಲಾಖೆ ಸಿಬ್ಬಂದಿ ಬೋನನ್ನು ಅಳವಡಿಸಿ ಕೊಂಡು ಕಾಯುತ್ತಲೇ ಇದ್ದರು. ಚಿರತೆ ಬೋನಿಗೆ ಬೀಳಬಹುದು ಎಂದುಕೊಂಡಿದ್ದ ಇಲಾಖೆಯವರಿಗೆ ಶನಿವಾರ ಮಧ್ಯರಾತ್ರಿ ಕಾರ್‍ಯಾಚರಣೆ ಯಶಸ್ವಿಯಾಗಿದೆ.
ಹಳ್ಳಿಗಳಿಗೆ ನುಗ್ಗಿ ಜಾನುವಾರುಗಳನ್ನು ತಿನ್ನುತ್ತ, ಜನತೆ ಯಲ್ಲಿ ಭೀತಿ ಮೂಡಿಸಿದ್ದ  ಚಿರತೆಯನ್ನು ಸೆರೆ ಹಿಡಿಯ ಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಬಹಳ ದಿನಗಳಿಂದಲೇ ಈ ಭಾಗದಲ್ಲಿ ಚಿರತೆ ಕಾಟವಿದೆ ಎನ್ನುವುದು ಗ್ರಾಮಸ್ಥರ ದೂರಾಗಿತ್ತು,
ಹಳ್ಳದ ಮನುಗನಹಳ್ಳಿಯ ಕೃಷ್ಣೇಗೌಡರ ಜಮೀನಿ ನಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ೭ ರಿಂದ ೮ ವರ್ಷದ ಚಿರತೆ ಶನಿವಾರ  ಮಧ್ಯರಾತ್ರಿ ೧೨ ಗಂಟೆ ಸಮಯದಲ್ಲಿ ಬೋನಿಗೆ ಬಿದ್ದಿದೆ.

ಅಕ್ಕಿ ಬೇಳೆ ಇಲ್ಲ, ಕಾಫಿ ಇದೆ !

* ವಿಕ ವಿಶೇಷ
ಕೊಡಗಿನಲ್ಲಿ ಭತ್ತದ ಗದ್ದೆಗಳೇ ಬತ್ತುತ್ತಿವೆ. ಅಕ್ಕಿ ಬೆಳೆಯುತ್ತಿದ್ದ ಫಲವತ್ತಾದ ಜಮೀನು ಈಗ ಅನ್ಯ ಕಾರ್‍ಯಕ್ಕೆ ಬಳಸಲ್ಪಡುತ್ತಿವೆ. ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಅಂತರ್ಜಲ ವೃದ್ಧಿಯ ಜೀವಸೆಲೆಯಾಗಿದ್ದ ಗದ್ದೆಗಳು ವರ್ಷದಿಂದ ವರ್ಷಕ್ಕೆ ಕಣ್ಮರೆಯಾಗುತ್ತಿವೆ.
ಜೇಬು ತುಂಬಿಸುವ ವಾಣಿಜ್ಯ ಬೆಳೆಗಳು ಅಷ್ಟಾಗಿ ಗೊತ್ತಿರದ ಕಾಲಘಟ್ಟದಲ್ಲಿ ಭತ್ತ ಬೆಳೆಯುವುದೇ ಹೆಮ್ಮೆಯಾಗಿತ್ತು. ತನ್ನ ಜೀವನದ ಬಹುಪಾಲು ಕೃಷಿಯಲ್ಲೇ ಕಳೆಯುತ್ತಿದ್ದ ರೈತ, ಈಗ ಸಂಪೂರ್ಣ ಬದಲಾಗಿದ್ದಾನೆ.
ಸ್ವತಃ ಭೂ ಹಿಡುವಳಿದಾರರೇ ಜಾನುವಾರುಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾಗ ಲಾಭವಿತ್ತು. ಯಂತ್ರೋಪಕರಣ- ರಸಗೊಬ್ಬರ ಬಳಕೆ, ಕಾರ್ಮಿಕರ ಅವಲಂಬನೆ ಹೆಚ್ಚಾಗುತ್ತಿದ್ದಂತೆ ಭತ್ತ ಹೊರೆಯಾಯಿತು. ಭತ್ತ ಬೆಳೆಯುವುದು ಶ್ರಮದಾಯಕ, ಲಾಭ ಕಡಿಮೆ ಎಂದೆಲ್ಲಾ ಅನಿಸತೊಡಗಿತು. ನಂತರ ಬಹುತೇಕ ಮಂದಿ ಜಮೀನುಗಳನ್ನು ಅನ್ಯ ಕಾರ್ಯಕ್ಕೆ ಬಳಸತೊಡಗಿದರು. ಹಲವರು ಗದ್ದೆ ಗದ್ದಲ ಬೇಡ ಎಂದು ಪಾಳುಬಿಟ್ಟರು.

ಸೋ.ಪೇಟೆ: 56 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ !

* ಬಿ.ಎಸ್.ಲೋಕೇಶ್ ಸಾಗರ್ ಕುಶಾಲನಗರ
ಸೋಮವಾರಪೇಟೆ ತಾಲೂಕಿನ ಸಾಕಷ್ಟು  ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದೆ ಪುಟ್ಟ ಮಕ್ಕಳು ಸಮಸ್ಯೆಗಳ ನಡುವೆ ಕಾಲ ಕಳೆಯುವಂತಾಗಿದೆ. ವಿಶೇಷವಾಗಿ ಅರಣ್ಯದಂಚಿನಲ್ಲಿರುವ ಹಾಡಿಗಳಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರಗಳು ಶೋಚನೀಯ ಸ್ಥಿತಿಯಲ್ಲಿವೆ.
ಸರಕಾರದಿಂದ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಾರದ ಕಾರಣ ನೂತನ ಕಟ್ಟಡಗಳು ನಿರ್ಮಾಣಗೊಳ್ಳುತ್ತಿಲ್ಲ. ತಾಲೂಕಿನಲ್ಲಿ  ವರ್ಷಕ್ಕೆ ಎರಡು ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಮಾತ್ರ ಸರಕಾರ ಅನುದಾನ ನೀಡುತ್ತಿರುವ ಪರಿಣಾಮ ತಾಲೂಕಿನಲ್ಲಿ  ೫೬ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಕಂಡಿಲ್ಲ.

ಸಂಚಾರ ನಿಯಮಗಳ ನಿರ್ಲಕ್ಷ್ಯ

ಆರ್. ಕೃಷ್ಣ ಮೈಸೂರು
ಮೋಜಿನ  ಸವಾರಿ, ಅಜಾಗರೂಕ ಚಾಲನೆಗೆ ಕಳೆದ ವರ್ಷ ಬಲಿಯಾದವರು ೧೩೬ ಮಂದಿ.
ಯುವ ಜನಾಂಗದಲ್ಲಿ ಹೆಚ್ಚುತ್ತಿರುವ ಮೋಜಿನ ಸವಾರಿಯಿಂದ ಅಪಘಾತಗಳ ಏರಿಕೆ ಒಂದೆಡೆಯಾದರೆ, ಕುಡಿತದ ಅಮಲಿನಲ್ಲಿ ಹೆಚ್ಚುತ್ತಿರುವ ಅನಾಹುತಗಳು ದಿಗಿಲು ಹುಟ್ಟಿಸುವಂತಿವೆ. ಅಜಾಗರೂಕ ಚಾಲನೆ ಪ್ರಮಾಣವೂ ಗಣನೀಯವಾಗಿ ಹೆಚ್ಚುತ್ತಲೇ ಇದ್ದು, ಸಂಚಾರ ನಿಯಮ ಜಾಗೃತಿ ಕೊರತೆಯಿಂದಾಗಿ ಬರೋಬರಿ ೧.೬೧ ಲಕ್ಷ ಪ್ರಕರಣ ದಾಖಲಾಗಿದೆ.
ಜಾರಿದ ೨೦೧೦ನೇ ಇಸವಿಯಲ್ಲಿ ೯೨೭ ರಸ್ತೆ ಅಪಘಾತ ಪ್ರಕರಣ ವರದಿಯಾಗಿದ್ದು, ೧೦೨೮ ಮಂದಿ ಗಾಯಗೊಂಡಿ ದ್ದಾರೆ.
ಹಿಂದಿನ ವರ್ಷಕ್ಕೆ (೨೦೦೯) ಹೋಲಿಕೆ ಮಾಡಿದಲ್ಲಿ ಶೇ. ೩.೪೩ರಷ್ಟು ಅಪಘಾತ ಕಡಿಮೆಯಾಗಿದೆ. ಮೃತರ ಪ್ರಮಾಣ ದಲ್ಲಿ ಶೇ.೧.೪೩ರಷ್ಟು ಕಡಿಮೆಯಾಗಿದ್ದರೂ ಗಾಯ ಗೊಂಡ ವರ ಪ್ರಮಾಣ ಶೇ.೧೫.೩೭ರಷ್ಟು ಏರಿಕೆಯಾಗಿರುವುದು ಆತಂಕ ಮೂಡಿಸಿದೆ.

ಮೈಸೂರು ಜಿ.ಪಂ.ನಲ್ಲಿ ಅಮ್ಮಾವ್ರ ಧ್ವನಿ

ಪಿ.ಓಂಕಾರ್ ಮೈಸೂರು
ಮೈಸೂರು ಜಿಲ್ಲಾ ಪಂಚಾಯಿತಿ ಅಧಿಕಾರ ಅತಂತ್ರ. ಆದರೆ, ಮಹಿಳಾ `ಪಕ್ಷ'ಕ್ಕೆ ಬಹುಮತ !
ಪೂರ್ವ ನಿರ್ಧಾರದಂತೆ ೪೬ ಸ್ಥಾನಗಳ ಪೈಕಿ ೨೪ ಮಹಿಳೆಯರ ಮಡಿಲು ಸೇರಿವೆ. ಅಂದರೆ, ಸರಳ ಬಹುಮತ. ಇದು ಶೇ.೫೦ ಮೀಸಲು ಫಲ. ಯಾವ ಪಕ್ಷಕ್ಕೂ ಅರ್ಧದಷ್ಟೂ ಹಾದಿಯನ್ನು ಸವೆಸಲಾಗಿಲ್ಲ.
ಪುರುಷ ಕೇಂದ್ರಿತ ರಾಜಕೀಯ ದರ್ಬಾರಿ ದ್ದರೂ, ಯಾವ ಪಕ್ಷ ಏನೇ ಲಾಗ ಹೊಡೆದಿದ್ದರೂ ಇವರ ಆಯ್ಕೆಯನ್ನು ತಡೆಯಲು ಸಾಧ್ಯ ವಾಗು ತ್ತಿರಲಿಲ್ಲ ಎಂಬುದೂ ನಿಜವೇ. ಈಗ, ಅಧಿಕಾರ ಹಿಡಿಯುವುದು ಸಾಧ್ಯವಿಲ್ಲ ವಾದರೂ ಗಟ್ಟಿ ಧ್ವನಿಯಾಗಿ ಹೊರ ಹೊಮ್ಮಬಹುದು.

ಪಾಂಡವಪುರ ಸಂತೆಗೆ ಪಡಬಾರದ ಕಷ್ಟ

ರಘುವೀರ್ ಪಾಂಡವಪುರ
ಪಾಂಡವಪುರದ ಗುರುವಾರದ ಸಂತೆಗೆ ವಯಸ್ಸು ಅರವತ್ತು ಮೀರಿರಬಹುದು, ಆದರೆ ಸೌಲಭ್ಯ ಮಾತ್ರ ಮೂರೂ ಇಲ್ಲ.
ಬಹಳ ಪ್ರಮುಖವಾಗಿ ಸಂತೆ ನಡೆಸಲು ಸೂಕ್ತ ಮೈದಾನವೂ ಇಲ್ಲ. ಸ್ವಾತಂತ್ರ್ಯಬರುವುದಕ್ಕೂ ಮೊದಲಿ ನಿಂದಲೂ ಪಟ್ಟಣದ  ಸಂತೆ ಜಿಲ್ಲೆಯಲ್ಲೇ ಪ್ರಸಿದ್ಧವಾಗಿತ್ತು. ಅಂದಿನಿಂದಲೂ ಇಂದಿಗೂ ಕುಂಟುತ್ತಲೇ ನಡೆದಿದೆ.
ಸಂತೆಯಲ್ಲಿ ದಿನಸಿ, ತರಕಾರಿ, ಸಾಂಬಾರ ಪದಾರ್ಥಗಳ ಜತೆಗೆ ಕೋಳಿ-ಕುರಿಗಳ ವ್ಯಾಪಾರವೂ ನಡೆಯುತ್ತದೆ. ರೈತರು ಕೃಷಿ ಉತ್ಪನ್ನಗಳನ್ನು ಎತ್ತಿನಗಾಡಿ ಹಾಗೂ ಇತರ ವಾಹನಗಳ ಮೂಲಕ ತಂದು ಸಂತೆಯಲ್ಲಿ ಮಾರಿ ವಾಪಸಾಗುತ್ತಾರೆ. ಆದರಿಲ್ಲಿ ಶೌಚಾಲಯ, ಕಸದ ತೊಟ್ಟಿಗಳು, ಮೇಲ್ಚಾವಣಿ ಸೇರಿದಂತೆ ಯಾವುದೂ ಇಲ್ಲ. ಪರಿಣಾಮ ಕಸದ ರಾಶಿ, ಅಶುಚಿತ್ವದ ಮಧ್ಯೆಯೇ ವ್ಯಾಪಾರ. ಹತ್ತಿರದ ಮಾಂಸದ ಮಾರುಕಟ್ಟೆ ಹಾಗೂ ತ್ಯಾಜ್ಯವಸ್ತುಗಳ ದುರ್ವಾಸನೆ ಸಹಿಸಲೇಬೇಕು.

ಆಂಥೊರಿಯಂ: ಹಣ ಗಳಿಕೆಯ ಹೊಸ ಮಾರ್ಗ

ಸದೇಶ್ ಕಾರ್ಮಾಡ್
ಸದಾ ಸಸ್ಯರಾಶಿಯ ಮಧ್ಯೆ ಕಂಗೊಳಿಸುವ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಂಥೊರಿಯಂ ಹೂಗಳ ಸಾಮ್ರಾಜ್ಯ.
ಸಾಕಷ್ಟು ಮನೆಗಳಲ್ಲಿ ಅಲಂಕಾರಿಕ ಪುಷ್ಪವಾಗಿ ಅರಳಿದ ಆಂಥೊರಿಯಂ, ಉಳಿದೆಡೆ ವಾಣಿಜ್ಯ ಉದ್ದೇಶಕ್ಕೆ ಅರಳಿ ನಿಂತಿವೆ. ಕೇಂದ್ರ ಸರಕಾರವು ಕೊಡಗನ್ನು ಈ ಬೆಳೆಗೆ ಸೂಕ್ತ ಪ್ರದೇಶವೆಂದು ಗುರುತಿಸಿದೆ. ದೇಶದ ಯಾವುದೇ ಭಾಗದಲ್ಲೂ ಕೊಡಗಿನಲ್ಲಿ ಬೆಳೆಯುವಷ್ಟು ಉತ್ಕೃಷ್ಟ ಮಟ್ಟದ ಆಂಥೊರಿಯಂ ದೊರೆಯದು. ಇಲ್ಲಿನ ಫಲವತ್ತಾದ ಮಣ್ಣು ಹಾಗೂ ಹವಾಗುಣವೇ ಅದಕ್ಕೆ ಕಾರಣ.
ಆಂಥೊರಿಯಂ ಜನಪ್ರಿಯ ವಾಣಿಜ್ಯ ಪುಷ್ಪ ಬೆಳೆ. ನೆರಳು ಮನೆ ಅಥವಾ ಹಸಿರುಮನೆಗಳಲ್ಲಿ, ಪಾತಿ ಅಥವಾ ಕುಂಡಗಳಲ್ಲಿ ಬೆಳೆಯಲಾಗುತ್ತಿದೆ. ಇವುಗಳನ್ನು ಹೂದಾನಿಗಳಲ್ಲಿ ಇಡಲು, ಪುಷ್ಪಗುಚ್ಛ ತಯಾರಿಕೆಯಲ್ಲಿ ಹಾಗೂ ಹೂ ಜೋಡಣೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಆಂಥೊರಿಯಂ ಅನ್ನು ವರ್ಷವಿಡೀ ಬೆಳೆಯ ಬಹುದಾದರೂ ತಂಪಾದ ಹವಾಮಾನವಿರುವ ಮತ್ತು ಶೇ.೭೫ ರಿಂದ ೮೦ರಷ್ಟು ನೆರಳಿರುವ ೧೮ ರಿಂದ ೨೮ ಡಿಗ್ರಿ ಸೆ.ಉಷ್ಣಾಂಶ ಹಾಗೂ ಶೇ.೭೦ ರಿಂದ ೭೫ ರಷ್ಟು ಆರ್ದ್ರತೆಯಿಂದಿರುವ ಪ್ರದೇಶವೇ ಸೂಕ್ತ. ಜೂನ್‌ನಿಂದ ಅಕ್ಟೋಬರ್ ಸೀಸನ್.

ರಸ್ತೆಯಲ್ಲೇ ಒಕ್ಕಣೆ, ಸಂಚಾರಿಗಳಿಗೆ ಬವಣೆ

ವಿಕ ವಿಶೇಷ ಮೈಸೂರು
ವಾಹನಗಳ ಮುಖಾಮುಖಿ ಡಿಕ್ಕಿಯಿಂದ  ಹತ್ತು ಸಾವು ; ಹಳ್ಳ-ಕೊಳ್ಳಗಳ ರಸ್ತೆಯಲ್ಲಿ  ಸ್ಕಿಡ್ ಆಗಿ, ವಾಹನ ಉರುಳಿ ೨ ಸಾವು ; ರಸ್ತೆಯಲ್ಲಿ ನಿಯಂತ್ರಣ ತಪ್ಪಿ- ಮೂವರಿಗೆ ಗಾಯ ; ನಿಂತ ವಾಹನಕ್ಕೆ ಡಿಕ್ಕಿ- ಬೈಕ್ ಸವಾರ ನಿಧನ; ಬ್ರೇಕ್ ಫೇಲ್‌ನಿಂದ ರಸ್ತೆಯಿಂದ ಹಳ್ಳಕ್ಕೆ ಉರುಳಿದ ಬಸ್-ಎಲ್ಲರೂ ಪಾರು...!
ಈ ಎಲ್ಲವೂ ರಸ್ತೆ ಅಪಘಾತದ ಸಾಮಾನ್ಯ ಮಾದರಿಗಳು. ಇವುಗಳನ್ನು ಮೀರಿ, ಬೇರೆ  ಸ್ವರೂಪದಲ್ಲಿ ಅಪಘಾತ ನಡೆಯುವುದು ಕಡಿಮೆ. ನಡೆದರೂ ಅದು ವಿರಳಾತಿ ವಿರಳ ಎನ್ನಬಹುದು. ಆದರೆ, ಮೈಸೂರು ಸೇರಿದಂತೆ ಹಲವೆಡೆ ಹೊಸ ಮಾದರಿ ಅಪಘಾತ ಘಟಿಸತೊಡಗಿದೆ. ಅದು-‘ಒಕ್ಕಣಿಕೆ’ ಅಪಘಾತಗಳು. ನಟ್ಟನಡು ರಸ್ತೆಯಲ್ಲೇ ರೈತರು ಒಕ್ಕಣಿಕೆ ಮಾಡಲು ಬೆಳೆಯನ್ನು ತಂದು ಸುರಿಯುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ದುಬಾರಿಯಾಗಲಾರಂಭಿಸಿದೆ.
ಉದಾಹರಣೆಗೆ ಮೈಸೂರಿನ ಹೊರವಲಯದ ಕೇರ್ಗಳ್ಳಿ, ಬೋಗಾದಿ, ಉದ್ಬೂರು, ದೂರ, ಬೀರಿಹುಂಡಿ, ಟಿ. ಕಾಟ್ನೂರು ಸೇರಿದಂತೆ ಬಹುತೇಕ ಒಳ ರಸ್ತೆಗಳಲ್ಲಿ ಇಂಥ ಅಪಘಾತಗಳು ಹೆಚ್ಚುತ್ತಿವೆ. ಪ್ರಾಣಾಪಾಯದ ಮಟ್ಟಿಗೆ ಬೆಳೆದು ನಿಂತಿಲ್ಲ ಎನ್ನುವುದೇ ಸದ್ಯದ ಸಮಾಧಾನ. ಹಾಗಾಗಿ ಪೊಲೀಸರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ, ವಾಹನ ಸವಾರರಿಗೆ ಆಗುತ್ತಿರುವ ತೊಂದರೆ, ಕಿರಿಕಿರಿ ಹೇಳುವಂತಿಲ್ಲ.