ಹೆದ್ದಾರಿಯಲ್ಲಿ ಅವರೆ: ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳುವರೇ?

* ಹನಗೋಡು ನಟರಾಜ್ ಹುಣಸೂರು
ಇದನ್ನು ನೀವು ಅವರೆಕಾಯಿ ಜಾಮ್ ಎನ್ನಬಹುದೇನೋ ? ಅಂದರೆ ತಿನ್ನೋ ಜಾಮ್ ಅಲ್ಲ, ಟ್ರಾಫಿಕ್ ಜಾಮ್ !
ಹುಣಸೂರು-ಮೈಸೂರು ಹೆದ್ದಾರಿಯ ಬನ್ನಿಕುಪ್ಪೆ ಗೇಟ್‌ನಲ್ಲಿ ಎರಡು ಬದಿಯೂ ಅವರೆ ವ್ಯಾಪಾರ ನಡೆಯುತ್ತದೆ. ಸದಾ ಟ್ರಾಫಿಕ್ ಜಾಮ್. ಆಕಸ್ಮಾತ್ ಏನಾದರೂ ಬಸ್ಸೋ, ಲಾರಿಯೋ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿದರೆ ಆಗುವ ನಷ್ಟಕ್ಕೆ ಲೆಕ್ಕವಿಲ್ಲ. ಆದರೂ  ಗ್ರಾ.ಪಂ., ಪೊಲೀಸರು, ಆರ್‌ಟಿಒ ಅಧಿಕಾರಿಗಳು ತಲೆ ಕೆಡಿಸಿಕೊಂಡೇ ಇಲ್ಲ.
ನೂರಾರು ಬಾರಿ ಜಾಮ್: ಬೆಳಗ್ಗೆ  ೬ ರಿಂದ ಮಧ್ಯಾಹ್ನ ೨ ಗಂಟೆವರೆಗೆ ವ್ಯಾಪಾರ ಜೋರು. ಹೆದ್ದಾರಿಯಲ್ಲೇ ವಾಹನ ದಟ್ಟಣೆ ಹೆಚ್ಚಿರುವುದರಿಂದ ನಿತ್ಯ ನೂರಾರು ಬಾರಿ ೧೦ ರಿಂದ ೨೦ ನಿಮಿಷ ಜಾಮ್. ಆಂಬ್ಯುಲೆನ್ಸ್‌ಗಳಿಗೂ ಸಾಗಲು ಅವಕಾಶವಿರದ ಸ್ಥಿತಿ.
ಹತ್ತು ವರ್ಷಗಳಿಂದ ವ್ಯಾಪಾರ ನಡೆಯುತ್ತಿದ್ದರೂ, ಹೆದ್ದಾರಿಯಲ್ಲಿ ಇಷ್ಟೊಂದು ವಾಹನ ಸಂಚಾರವಿರಲಿಲ್ಲ. ಅದರಲ್ಲೂ ಮೈಸೂರು-ಬಂಟ್ವಾಳ ಹೆದ್ದಾರಿ ಆದ ಮೇಲಂತೂ ವಾಹನಗಳ ಹಾವಳಿ ತುಸು ಹೆಚ್ಚು. ಇದುವರೆಗೆ ಯಾವುದೇ ಅನಾಹುತ ನಡೆಯಲಿಲ್ಲ ಎಂಬುದೇ ಸದ್ಯದ ಸಮಾಧಾನ. ಆದರೆ, ಸಣ್ಣಪುಟ್ಟ ಘಟನೆಗಳು ಲೆಕ್ಕಕ್ಕಿಲ್ಲ. ಬನ್ನಿಕುಪ್ಪೆ ಗೇಟ್‌ನ ರಸ್ತೆ ಹಳ್ಳದಲ್ಲಿದ್ದು , ಯಾವುದಾದರೂ ವಾಹನ ಬ್ರೇಕ್ ಫೇಲ್ ಆದರೆ ಕಥೆ ಮುಗೀತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ