ಸರಕಾರದಿಂದಲೇ ಕುಂಭಮೇಳ: ಮುಖ್ಯಮಂತ್ರಿ



ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದಲ್ಲಿ ನಡೆದ ಕುಂಭಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಕುಂಭಮೇಳವನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುವುದು ಎಂದು ಹೇಳಿದರು.

ಪೂರ್ಣಕುಂಭ ಮೇಳದ ಪಕ್ಕನೋಟ



ಬಟ್ಟೆ ಬದಲಿಸಲು ಯಡಿಯೂರಪ್ಪ ಶಾಮಿಯಾನದ ಸುತ್ತ ಪ್ರದಕ್ಷಿಣೆ, ಆಕರ್ಷಿಸಿದ ಮರಳು ಕಲೆ, ಬ್ಯಾರಿಕೇಡ್ ಮುರಿದ ಭಕ್ತರು...

ಮುಖ್ಯಮಂತ್ರಿ ಸೇರಿ ಸಾವಿರಾರು ಮಂದಿ ಪವಿತ್ರ ಸ್ನಾನ



ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಡೆದ 8ನೇ ಪೂರ್ಣಕುಂಭ ಮೇಳಕ್ಕೆ ಶನಿವಾರ ತೆರೆಬಿತ್ತು. ಶನಿವಾರ ಮುಖ್ಯಮಂತ್ರಿ ಸೇರಿದಂತೆ ಸಹಸ್ರಾರು ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.

ಈಗ ಉದ್ಯಾನದ ಮರಗಳಿಗೂ ಕುತ್ತು



ಪ್ರಮುಖ ರಸ್ತೆಗಳ ಮರಗಳಿಗೆ ಕೊಡಲಿ ಹಾಕಿದ ಬೆನ್ನಲ್ಲೇ ಈಗ ಉದ್ಯಾನದಲ್ಲಿನ ಮರಗಳಿಗೆ ಕಟುಕರು ಕೊಡಲಿ ಹಾಕಿದ್ದಾರೆ. ಪಡುವಾರಹಳ್ಳಿ 2ನೇ ಅಡ್ಡರಸ್ತೆಯಲ್ಲಿರುವ ಉದ್ಯಾನದಲ್ಲಿ ಬೆಳೆದಿದ್ದ 12 ಮರಗಳನ್ನು ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಕಡಿಯಲಾಗಿದೆ.

ಪ್ರತ್ಯೇಕ ಶಿಕ್ಷಣ ವ್ಯವಸ್ಥೆ ಸಲ್ಲ:ದೇಜಗೌ


-‘ಕರ್ನಾಟಕ ರತ್ನ’ ಪ್ರಶಸ್ತಿಗೆ ಭಾಜನರಾಗಿರುವ ವಿಶ್ರಾಂತ ಕುಲಪತಿ ದೇ.ಜವರೇಗೌಡ ಅವರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಅಭಿನಂದಿಸಲಾಯಿತು.

ವಿಕ ಸುದ್ದಿಲೋಕ ಮೈಸೂರು
ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಶಿಕ್ಷಣ ವ್ಯವಸ್ಥೆ ಸರಿಯಲ್ಲ.ಎಲ್ಲಾ ಧರ್ಮಿಯರು ಒಟ್ಟು ಕುಳಿತು ಕಲಿಯುವ ವ್ಯವಸ್ಥೆ ಸೂಕ್ತ ಎಂದು ವಿಶ್ರಾಂತ ಕುಲಪತಿ ಪ್ರೊ.ದೇ.ಜವರೇಗೌಡ ಅವರು ಪ್ರತಿಪಾದಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಶಾಲಾ,ಕಾಲೇಜು ತೆರೆದಿರುವುದರ ಔಚಿತ್ಯವನ್ನು ಪ್ರಶ್ನಿಸಿದ ಅವರು,ರಾಜಕಾರಣಿಗಳು ಮತಕ್ಕಾಗಿ ಜಾತಿ,ಧರ್ಮಗಳ ಹೆಸರಿನಲ್ಲಿ ಮನಸ್ಸುಗಳನ್ನು ಛಿದ್ರಗೊಳಿಸುತ್ತಿದ್ದಾರೆ.ಬೆಸೆಯುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ ಎಂದು ವಿಷಾದಿಸಿದರು.
‘ಕರ್ನಾಟಕ ರತ್ನ’ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಪತ್ರಕರ್ತರ ಸಂಘ ನೀಡಿದ ಪ್ರೀತಿ ಪೂರ್ವಕ ಅಭಿನಂದನೆಯನ್ನು ಸ್ವೀಕರಿಸಿ ‘ಮಾಧ್ಯಮ ಸಂವಾದ’ದಲ್ಲಿ ಮಾತನಾಡಿದ ಅವರು,ನಾಡಿನ ಶ್ರೀಮಂತ ಪರಂಪರೆ, ಕನ್ನಡಿಗರ ನಿಷ್ಕಾಳಜಿ,ಮತಾಂತರ ಸಮಸ್ಯೆ,ಶಿಕ್ಷಣ ವ್ಯವಸ್ಥೆ,ರಾಜಕಾರಣ ಎಲ್ಲದರ ಕುರಿತು ‘ಹಕ್ಕಿನೋಟ’ಬೀರಿದರು.
ಮನಸ್ಸುಗಳನ್ನು ಬೆಸೆಯುವ ನಿಟ್ಟಿನಲ್ಲಿ ಎಲ್ಲಾ ಜಾತಿ,ಧರ್ಮದ ಮಕ್ಕಳು ಒಂದೇ ಸೂರಿನಡಿ ಕಲಿಯುವಂತಾಗಬೇಕು.ಅಲ್ಲಿ ಉರ್ದು ಸೇರಿದಂತೆ ಎಲ್ಲ ಅಗತ್ಯ ಭಾಷೆಯನ್ನೂ ಕಲಿಸಬಹುದು. ಆದರೆ,ಪ್ರತ್ಯೇಕ ಶಾಲೆ,ಕಾಲೇಜು ಸಲ್ಲ.ಯಾವುದೇ ಜಾತಿ,ಧರ್ಮದ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಯೂ ಸರಿಯಲ್ಲ. ಭಾಷೆಯಾಗಿ ಉರ್ದು,ಸಂಸ್ಕೃತ ವಿವಿಗಳನ್ನು ಆರಂಭಿಸಿದರೆ ಅಭ್ಯಂತರವಿಲ್ಲ ಎಂದು ಹೇಳಿದರು.
ಮತಾಂತರ -ಮಠಗಳು:ಮತಾಂತರಕ್ಕೆ ಮಠಗಳು,ರಾಜಕಾರಣಿಗಳೇ ಕಾರಣ. ಮತಾಂತರದ ಬೇರುಗಳಿರುವುದು ಹಿಂದೂ ಧರ್ಮದಲ್ಲಿಯೇ.
ದೇಶದಲ್ಲಿರುವ ಸಾವಿರಾರು ಮಠಗಳು ‘ಎಲ್ಲರನ್ನು ಪ್ರೀತಿಯಿಂದ ಕಾಣುವುದೇ ಧರ್ಮ’ ಎಂಬ ಸತ್ಯ ಅರಿತು ಅಸ್ಪೃಶ್ಯತೆ,ಜಾತೀಯತೆ ನಿವಾರಣೆಗೆ ಪ್ರಯತ್ನಿಸಿದ್ದರೆ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ.
ಯಾವತ್ತೂ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ರಾಜಕಾರಣಿಗಳಿಗೂ ಈ ಬಗ್ಗೆ ಕಾಳಜಿ ಇಲ್ಲ.ಆಮಿಷ, ಬಲತ್ಕಾರದಿಂದ ಮತಾಂತರ ಮಾಡಿದರೆ ಅದು ತಪ್ಪು.ಹಾಗಂತ,ದಾಳಿ ನಡೆಸಿ ಕ್ರಿಸ್ತ,ಮೇರಿ ಪ್ರತಿಮೆಯನ್ನು ಭಗ್ನಗೊಳಿಸುವುದು ಸಲ್ಲ. ಧೈರ್ಯ ಶಕ್ತಿ ಇದ್ದರೆ ಉಪವಾಸ ಕುಳಿತುಕೊಳ್ಳಿ.
ಭಾಷೆಗೆ ಬೆಸೆಯುವ ಶಕ್ತಿ: ಧರ್ಮ ಜನರ ಮನಸ್ಸುಗಳನ್ನು ಛಿದ್ರ ಮಾಡುತ್ತಿದೆ.ಇಂಥ ಸಂದರ್ಭದಲ್ಲಿ ಕನ್ನಡದ ಮೂಲಕ ಮಾತ್ರ ನಾಡು ಕಟ್ಟಲು,ಹೃದಯಗಳನ್ನು ಬೆಸೆಯಲು ಸಾಧ್ಯ.ಮನೆಯೊಳಗಿನ ಮಾತು ಯಾವುದೇ ಆಗಿರಲಿ,ಹೊರಗಿನ ವ್ಯವಹಾರ ಭಾಷೆ ಕನ್ನಡವೇ ಆಗಬೇಕು.ಇಲ್ಲಿನ ನೆಲ,ಜಲವನ್ನು ಬಳಸಿಕೊಳ್ಳುವ ಬಹುರಾಷ್ಟ್ರೀಯ ಕಂಪನಿಗಳೂ ಸೇರಿ ನಾಡಿನಲ್ಲಿರುವ ಎಲ್ಲರೂ ಕನ್ನಡದಲ್ಲೇ ಕಡ್ಡಾಯವಾಗಿ ವ್ಯವಹರಿಸಬೇಕು.
ನಿಷ್ಕಾಳಜಿ: ಕನ್ನಡ ಸಾಹಿತ್ಯ,ನಾಡು ನುಡಿಯದ್ದು ಶ್ರೀಮಂತ ಪರಂಪರೆ. ನಾಡಿನ ಬಗ್ಗೆ ಕಾಳಜಿ ಕಡಿಮೆಯಾಗುತ್ತಿರುವುದು ದುರ್ದೈವ.ತಮಿಳುನಾಡು ಸೇರಿ ಹಲವು ರಾಜ್ಯದ ಜನರು ಅಪಾರ ಸಂಖ್ಯೆಯಲ್ಲಿ ಬಂದು ಜಮೀನು ಖರೀದಿಸುತ್ತಿದ್ದಾರೆ. ಸರಕಾರ ಎಚ್ಚರ ವಹಿಸುತ್ತಿಲ್ಲ.ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳೂ ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಹಾಗಂತ,ನಮ್ಮದು ಭಾಷಾ ದುರಭಿಮಾನ ಅಲ್ಲ. ಹೊರಗಿನಿಂದ ಬಂದವರು ಕನ್ನಡದ ಮೇಲೆ ಸವಾರಿ ಮಾಡುವಂತಾಗಬಾರದು.
ಟೀಕೆ-ಟಿಪ್ಪಣಿ:ಶಾಸ್ತ್ರೀಯ ಭಾಷೆ ವಿಚಾರದಲ್ಲಿ ತಮಿಳುನಾಡು ಸರಕಾರದ ನಡವಳಿಕೆಗಳನ್ನು ಅವರು ಟೀಕಿಸಿದರು. ಕೇಂದ್ರ ಸರಕಾರ ಈ ವಿಷಯದಲ್ಲಿ ಅಪರಾಧ ಮಾಡಿದೆ. ಆನಂತರವಾದರೂ ತಿದ್ದಿಕೊಳ್ಳುವ ಗೋಜಿಗೆ ಹೋಗಿಲ್ಲ ಎಂದು ಆಕ್ಷೇಪಿಸಿದರು.
ಕನ್ನಡದ ಕೆಲಸಕ್ಕಾಗಿ ಕೋಟಿ ಅನುದಾನ ಪಡೆದಿರುವ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಸಂಸ್ಥೆಗಳು ಈ ನಿಟ್ಟಿನಲ್ಲಿ ಏನನ್ನೂಮಾಡದ ಬಗ್ಗೆ ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡಲು ನಿರಾಕರಿಸಿದರು.‘ ಆ ಬಗ್ಗೆ ಹೇಳಬೇಕಾದ್ದನ್ನು ಸರಕಾರಕ್ಕೆ ಹೇಳಿದ್ದೇನೆ. ಎಲ್ಲವನ್ನೂ ಹೇಳಿ ಮೈಮೇಲೆ ಎಳೆದುಕೊಳ್ಳಲಾರೆ. ಏನಾಗಬೇಕು ಎನ್ನುವ ಬಗ್ಗೆ ನೀವೇ ಪ್ರಯತ್ನ ನಡೆಸಿ’ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಕೆ.ಶಿವಕುಮಾರ್,ಪ್ರಧಾನ ಕಾರ‍್ಯದರ್ಶಿ ಬಿ.ಎಸ್.ಪ್ರಭುರಾಜನ್ ಸನ್ಮಾನಿಸಿದರು. ಉಪಾಧ್ಯಕ್ಷ ರಾಜೇಶ್ವರನ್ ಸ್ವಾಗತಿಸಿ,ಖಜಾಂಚಿ ಕುಂದೂರು ಉಮೇಶ್ ಭಟ್ ವಂದಿಸಿದರು. ಹಿರಿಯ ಪತ್ರಕರ್ತ ಈಚನೂರು ಕುಮಾರ್ ದೇಜಗೌ ಕುರಿತು ಮಾತನಾಡಿದರು.
***********************
***
‘ಪಾಪಿ’ಗುದ್ಧಾರಮಿಹುದು ...
ಕನ್ನಡ ಹೋರಾಟದಲ್ಲಿ ಮುತ್ತಪ್ಪರೈ ಮತ್ತಿತರ ಅಪರಾಧಿ ಹಿನ್ನೆಲೆಯ ‘ಕನ್ನಡ ರಕ್ಷಕ’ರು,‘ದಂಧೆ ’ಯ ರಕ್ಷಣೆಗೆ ಕನ್ನಡವನ್ನು ಬಳಸಿಕೊಳ್ಳುತ್ತಿರುವವರ ಪಾಲ್ಗೊಳ್ಳುವಿಕೆಯ ಔಚಿತ್ಯದ ಕುರಿತ ಪ್ರಶ್ನೆಗೆ ದೇಜಗೌ ಉತ್ತರ ‘ನನಗೆ ಕನ್ನಡ ಒಂದೇ ಗೊತ್ತು.ಉಳಿದದ್ದೆಲ್ಲ ಅಮುಖ್ಯ...’. ಈ ಕುರಿತ ‘ಪ್ರಶ್ನಾಸ್ತ್ರ’ಕ್ಕೆ ಕರ್ನಾಟಕ ರತ್ನ ನೀಡಿದ ಉತ್ತರ ಹೀಗಿತ್ತು.
*ಹಾಗಿದ್ರೆ,ದಂಧೆ-ವ್ಯವಹಾರಕ್ಕೂ ಕನ್ನಡ ಹೋರಾಟ ಬಳಕೆ ಆಗಬಹುದಾ?
-ಪಾಪಿಗೂ ಉದ್ಧಾರದ ಅವಕಾಶ ಇದೆ. ಸಾಹಿತ್ಯವನ್ನು ಓದಿ, ನಿಮಗೆ ಎಲ್ಲಾ ಅರ್ಥವಾಗುತ್ತೆ (ರಾಮಾಯಣ ದರ್ಶನಂ ಉದಾಹರಣೆ)
*ಉದ್ದಾರವಾದ್ರೆ ತೊಂದರೆ ಇಲ್ಲ; ‘ದಂಧೆ’ಗೆ ಹೆಚ್ಚು ಬಳಕೆ ಆಗ್ತಿದೆಯಲ್ಲ?
- ಮುಂದೆ ನನಗೂ ನೀವು ಹೀಗೇ ಹೇಳಬಹುದು,ಹೋರಾಟದಿಂದ ಇಷ್ಟೆಲ್ಲ ಮಾಡಿಕೊಂಡ ಅಂತ...
* ಅಷ್ಟಕ್ಕೂ ಇಂಥ ರಕ್ಷಕರು ಭಾಷೆಗೆ ನೀಡಿದ ಕೊಡುಗೆ ಏನು?
- ಕನ್ನಡದ ಕೆಲಸಕ್ಕೆ ಎಷ್ಟಾದರೂ ಹಣ ಕೊಡ್ತಾರೆ. ಪುಸ್ತಕ ಪ್ರಕಟಿಸುತ್ತಾರೆ...
* ಅಕ್ರಮ ದಂಧೆಯಿಂದ ಗಳಿಸಿದ ಹಣವನ್ನು ಕನ್ನಡದ ಉದ್ಧಾರಕ್ಕೆ ಬಳಸುವಂತ ದರ್ದ್ದು ಏನಿದೆ?
- ನಿಮ್ಮ ಪ್ರಶ್ನೆ,ಕಾಳಜಿ ಅರ್ಥ ಆಗಿದೆ. ಆದರೆ, ಸರಕಾರದಲ್ಲೆ ಅಂಥ ಹಿನ್ನೆಲೆಯ ಮಂತ್ರಿಗಳಿದ್ದಾರಲ್ಲ, ಏನ್ ಮಾಡೋದು !?
***********************

ಪೂರ್ಣಕುಂಭ ಮೇಳಕ್ಕೆ ಚಾಲನೆ



ವಿಕ ಸುದ್ದಿಲೋಕ ತಿರುಮಕೂಡಲು ನರಸೀಪುರ
ಕಪಿಲೆ-ಕಾವೇರಿ-ಗುಪ್ತಗಾಮಿನಿ ಸ್ಫಟಿಕ ಸರೋವರದ ಸಂಗಮ ಕ್ಷೇತ್ರದಲ್ಲಿ ೮ನೇ ಪೂರ್ಣಕುಂಭಮೇಳ ಗುರುವಾರ ವಿಧ್ಯುಕ್ತವಾಗಿ ಆರಂಭವಾಯಿತು.
ಸಂಗಮ ಕ್ಷೇತ್ರದ ಮರಳು ದಿಬ್ಬದ ಮೇಲಿನ ‘ಮಹಾಮಂಟಪ’ದಲ್ಲಿ ಇಳಿ ಸಂಜೆ ನಡೆದ ಕಾರ‍್ಯಕ್ರಮದಲ್ಲಿ ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ‘ಕುಂಭ’ದ ಮೇಲಿಟ್ಟ ದೀಪ ಬೆಳಗುವ ಮೂಲಕ ಮೂರು ದಿನದ ಪವಿತ್ರ ಮಾಘ ಸ್ನಾನಕ್ಕೆ ಚಾಲನೆ ನೀಡಿದರು.
ಮೂರು ದಿನದ ಪುಣ್ಯ ಸ್ನಾನಕ್ಕೆ ಲಕ್ಷಾಂತರ ಜನರನ್ನು ನಿರೀಕ್ಷಿಸಿ,ಸಕಲ ವ್ಯವಸ್ಥೆ ಮಾಡಲಾಗಿದೆಯಾದರೂ ಆರಂಭದ ದಿನ ತ್ರಿವೇಣಿ ಸಂಗಮ ಭಕ್ತರ ಕೊರತೆಯನ್ನು ಎದುರಿಸಿತು.ಉದ್ಘಾಟನೆಯ ನಂತರ ಸಂಜೆ ಸಂಗಮ ಸ್ಥಳ ಜಾತ್ರೆಯ ಮೆರಗು ಪಡೆಯಿತು.ಶನಿವಾರ ಪುಣ್ಯ ಸ್ನಾನಕ್ಕೆ ಶುಭ ಮೂಹೂರ್ತ ನಿಗಧಿಯಾಗಿದೆ.
ನಿಜ ಧರ್ಮ:ಪರರ ಕಷ್ಟದಲ್ಲಿ ಭಾಗಿಯಾಗುವುದು,ಯಾರಿಗೂ ಕೇಡು ಬಯಸದಿರುವುದು ನಿಜವಾದ ಧರ್ಮ. ಮಾಡಬಾರದ ಪಾಪಗಳನ್ನೆಲ್ಲ ಮಾಡಿ ಸಂಗಮಕ್ಕೆ ಬಂದು ಮುಳುಗು ಹಾಕಿದರೆ ಪ್ರಯೋಜನವಿಲ್ಲ.ಒಳ್ಳೆಯ ಮನಸ್ಸು,ಹೃದಯ,ಭಾವನೆಗಳೊಂದಿಗೆ ಬಂದು ಸ್ನಾನ ಮಾಡಿ;ಒಳ್ಳೆಯದಾಗುತ್ತದೆ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಸಲಹೆ ನೀಡಿದರು.
ಸಾಮರಸ್ಯ :ಹಲವು ಧರ್ಮ,ಜಾತಿ,ಭಾಷೆಗಳಿಂದ ಕೂಡಿದ ವೈವಿಧ್ಯಮಯ ಭಾರತದಲ್ಲಿ ಸಾಮರಸ್ಯ ಮೂಡಿಸುವುದು,ಕಾಪಿಡುವುದು ಎಲ್ಲರ ಜವಾಬ್ದಾರಿ.ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ,ಅದಕ್ಕೆ ಪ್ರಚೋದನೆ ಯಾವುದೇ ಧರ್ಮದಲ್ಲಿ ನಂಬಿಕೆ ಇಲ್ಲದ ಕಿಡಿಗೇಡಿಗಳ ಕೃತ್ಯ. ದ್ವೇಷ ಬಿತ್ತುವುದಕ್ಕಿಂತ ದ್ರೋಹ ಮತ್ತೊಂದಿಲ್ಲ. ಆದ್ದರಿಂದ ಧರ್ಮವನ್ನು ಸರಿಯಾಗಿ ಅರ್ಥೈಸುವ ನಿಟ್ಟಿನಲ್ಲಿ ಇಂಥ ಮೇಳಗಳು ಅಗತ್ಯ ಎಂದು ಹೇಳಿದರು.
ಸಮಗ್ರ ಅಭಿವೃದ್ಧಿ : ಮುಂದಿನ ಕುಂಭಮೇಳದ ವೇಳೆಗೆ ತಿರುಮಕೂಡಲು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ವ ಪ್ರಯತ್ನ ಮಾಡುತ್ತೇನೆ.ಈ ಬಾರಿಯ ಲೋಪಗಳನ್ನು ಮುಂದಿನ ಮೇಳದಲ್ಲಿ ಸರಿಪಡಿಸಿ,ಉತ್ತಮ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಒಳಗಿನ ಕೊಳೆ:ಉಪನ್ಯಾಸ ನೀಡಿದ ಮಹಾರಾಜ ಕಾಲೇಜು ಪ್ರಾಧ್ಯಾಪಕ ಡಾ.ಎಸ್.ಶಿವರಾಜಪ್ಪ ,ಮಾಘ ಸ್ನಾನ ಸಾಂಕೇತಿಕ. ಎಲ್ಲರೂ ಒಳಗಿನ ಕೊಳೆ ತೊಳೆದುಕೊಂಡು ಮನಸ್ಸುಗಳನ್ನು ಶುಚಿಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,ಆದಿಚುಂಚನಗಿರಿ ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ,ಬೆಂಗಳೂರು ಓಂಕಾರಾಶ್ರಮದ ಮಧುಸೂದನಾಂದ ಸ್ವಾಮೀಜಿ,ವಾಟಾಳು ಮಠದ ಸಿದ್ಧಲಿಂಗ ಸ್ವಾಮೀಜಿ,ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಹಲವರು ಗೈರು:ಕ್ಷೇತ್ರದ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಆಹ್ವಾನಿತ ಹಲವು ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು. ಜಿ.ಪಂ.ಅಧ್ಯಕ್ಷ ಕೆ.ಎಸ್.ಧರ್ಮೇಂದ್ರ,ಉಪಾಧ್ಯಕ್ಷೆ ನಂದಿನಿ ಚಂದ್ರಶೇಖರ್,ತಾ.ಪಂ.ಅಧ್ಯಕ್ಷ ಎಸ್.ಸಿದ್ದು ,ಪ.ಪಂ.ಅಧ್ಯಕ್ಷೆ ಯಶೋಧ,ಭೈರಾಪುರ ಗ್ರಾ.ಪಂ. ಅಧ್ಯಕ್ಷೆ ಇಂದ್ರಮ್ಮ ಸೇರಿದಂತೆ ಸ್ಥಳೀಯ ಸಂಸ್ಥೆ ಯ ಹಲವು ಜನಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ಡಾ.ಬೆಟ್‌ಸೂರ್ ಮಠ, ಮೇಳದ ವಿಶೇಷಾಧಿಕಾರಿ ಭಾರತಿ ,ಎಸ್ಪಿ ರಾಮಸುಬ್ಬ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು. ಕೆ.ಎಂ.ನಾಗಣ್ಣಾಚಾರ್ ಸ್ವಾಗತಿಸಿದರು.
ಧಾರ್ಮಿಕ ಕಾರ‍್ಯಕ್ರಮ: ಬೆಳಗ್ಗೆ ಅಗಸ್ತ್ಯೇಶ್ವರಸ್ವಾಮಿ ದೇವಾಲಯದಲ್ಲಿ ಪ್ರಧಾನ ಅರ್ಚಕ ಜ್ಞಾನಸ್ಕಂದ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆದಿಚುಂಚನಗಿರಿ ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿ, ವಾಟಾಳು ಸಿದ್ಧಲಿಂಗ ಸ್ವಾಮೀಜಿ,ಅರ್ಚಕ ಕುಮಾರಸ್ವಾಮಿ ದೀಕ್ಷಿತ್, ಅಶ್ವತ್ಥನಾರಾಯಣ, ಎಂ.ಎ.ಕುಮಾರ್, ಪಿ.ಸ್ವಾಮಿನಾಥ್ ಮತ್ತಿತರರು ಹಾಜರಿದ್ದರು.
***********

ಜೀವಜಾಲ ಸಂಶೋಧನೆಯತ್ತ ವಿವಿ ಚಿತ್ತ

ಚೀ. ಜ. ರಾಜೀವ ಮೈಸೂರು
‘ಜೀವ ವೈವಿಧ್ಯ, ಜೀವ ಸಂಪನ್ಮೂಲಗಳ ಅನ್ವಯಿಕ ಉಪಯುಕ್ತತೆ ಮತ್ತು ಸುಸ್ಥಿರ ಅಭಿವೃದ್ಧಿ’ ಕುರಿತ ಬೃಹತ್ ಸಂಶೋಧನಾ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಕಡೆಗೂ ಮೈಸೂರು ವಿಶ್ವವಿದ್ಯಾನಿಲಯ ಅಣಿಗೊಂಡಿದೆ.
ಯಾವುದಾದರೊಂದು ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಜ್ಞಾನದ ಉತ್ಕೃಷ್ಟ ಮಂದಿರವಾಗಿ(ಇನ್ಸುಟಿಟ್ಯೂಷನ್ ಆಫ್ ಎಕ್ಸಲೆನ್ಸ್) ರೂಪುಗೊಳ್ಳಬೇಕೆಂಬುದು ಕೇಂದ್ರ ಸರಕಾರದ ಆಶಯ. ಹಾಗಾಗಿ ಎರಡು ವರ್ಷಗಳ ಹಿಂದೆ ವಿವಿಗೆ ೧೦೦ ಕೋಟಿ ರೂ. ವಿಶೇಷ ಅನುದಾನ ಘೋಷಿಸಿ, ಐದು ತಿಂಗಳ ಹಿಂದೆಯಷ್ಟೇ ಅದರ ಬಾಬ್ತಿನ ಹಣ ಬಿಡುಗಡೆ ಮಾಡಿದೆ. ತಾನು ನೀಡುವ ಅನುದಾನದ ಪೈಕಿ ಒಂದಿಷ್ಟು ಹಣವನ್ನು ವಿವಿಯ ಮೂಲ ಸೌಕರ‍್ಯಗಳ ಅಭಿವೃದ್ಧಿ ಹಾಗೂ ಗಣಕೀಕರಣದಂಥ ಉನ್ನತೀಕರಣ ಕಾರ‍್ಯಕ್ಕೆ ಬಳಸಿಕೊಂಡು, ಕನಿಷ್ಠ ಶೇ. ೫೦ರಷ್ಟು ಅನುದಾನದಲ್ಲಿ ವಿಶಿಷ್ಟ ರೀತಿಯ ಸಂಶೋಧನಾ ಚಟುವಟಿಕೆ ಕೈಗೊಳ್ಳಬೇಕು ಎಂಬುದು ಕೇಂದ್ರದ ಕಟ್ಟುಪಾಡು. ಈ ಹಿನ್ನೆಲೆಯಲ್ಲಿ ಸಕಲ ಜೀವ ಚರಾಚರಗಳ ಪ್ರವರವನ್ನು ಶೋಧಿಸಿ, ವಿಶ್ಲೇಷಿಸಿ ಅವುಗಳ ವಾಣಿಜ್ಯ ಉಪಯುಕ್ತತೆಯ ಸಾರವನ್ನು ಸಮಾಜಕ್ಕೆ ಉಣ ಬಡಿಸುವುದಾಗಿ ಹೇಳಿದ್ದ ವಿ ವಿ ಯ ಯೋಜನೆಗೆ, ಕೇಂದ್ರ ಭೇಷ್ ಎಂದಿತ್ತು. ವಿವಿಯ ಪಂಡಿತರ ತಲೆಯಲ್ಲಿರುವ ಈ ಯೋಜನೆ-ಯೋಚನೆ, ಅಕ್ಷರಶಃ ಈಗ ಕಾರ‍್ಯರೂಪಕ್ಕೆ ಇಳಿಯಲಿದೆ.
ವಿಶ್ವವಿದ್ಯಾನಿಲಯ ಸಂಶೋಧನಾ ಚಟುವಟಿಕೆಗಾಗಿ ಆಯ್ದು ಕೊಂಡಿರುವ ವಿಷಯದ ಕುರಿತು ೪೩ಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು ವಿವಿಯ ಸಂಶೋಧಕರು ಸಲ್ಲಿಸಿದ್ದಾರೆ. ಶೇ. ೯೯ರಷ್ಟು ಈ ಎಲ್ಲವೂ ಸ್ವೀಕರಿಸಲು ಅರ್ಹವಾಗಿವೆ. ವಿವಿಯ ಅಧ್ಯಾಪಕ ವರ್ಗದಲ್ಲಿಯೇ ಇರುವ ಸಂಶೋಧಕರು, ಕಿರಿಯ ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ೧೦೦ಕ್ಕೂ ಹೆಚ್ಚು ಪರಿಣತರು ೧೦ ಗುಂಪುಗಳಲ್ಲಿ ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ, ವಿವಿ ಈ ಯೋಜನೆಗಾಗಿ ೫೭ ಕೋಟಿ ರೂ. ಗಳನ್ನು ಮೀಸಲಿರಿಸಲಿದೆ ’ ಎಂದು ಯೋಜನೆಯ ನಿರ್ವಹಣಾ ಹಾಗೂ ಸಮನ್ವಯ ಸಮಿತಿಯ ಸಂಚಾಲಕ ಡಾ. ಎಸ್. ಆರ್. ನಿರಂಜನ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.
‘ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಸೇರಿದಂತೆ ರಾಜ್ಯದಲ್ಲಿ ಹಾದು ಹೋಗಿರುವ ೯ ಜಿಲ್ಲೆಗಳ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಮ್ಮ ಕೆಲಸ ನಡೆಯಲಿದೆ.
ಕ್ಷೇತ್ರ ಕಾರ್ಯದ ಬಳಿಕ, ಅಲ್ಲಿನ ಎಲ್ಲ ಸಂಗತಿಗಳ ಕುರಿತು ಸಂಶೋಧನೆ ನಡೆಸಲೆಂದೇ, ಮಾನಸ ಗಂಗೋತ್ರಿಯ ಆವರಣದಲ್ಲಿ ಅತ್ಯಾಧುನಿಕ ಸಂಶೋಧನಾಲಯವನ್ನು ನಿರ್ಮಿಸಲಾಗುವುದು’ ಎಂದು ವಿವರಿಸಿದರು. ಜೈವಿನ ತಂತ್ರಜ್ಞಾನ, ರಸಾಯನ, ಭೌತ, ಜೀವ ವಿಜ್ಞಾನ, ಸಸ್ಯ ಶಾಸ್ತ್ರ, ಪ್ರಾಣಿ ಶಾಸ್ತ್ರ, ಭೂಗೋಳ ಶಾಸ್ತ್ರ, ಭೂ ಗರ್ಭ ಶಾಸ್ತ್ರ, ಮಾನವ ಶಾಸ್ತ್ರ, ಸಮಾಜ ವಿಜ್ಞಾನ ಶಾಸ್ತ್ರ ಸೇರಿದಂತೆ ವಿವಿಧ ಅಧ್ಯಯನ ವಿಭಾಗಗಳು ಈ ಕಾರ್ಯದಲ್ಲಿ ಭಾಗವಹಿಸಲಿವೆ. ಏನೀ ಸಂಶೋಧನೆ
ಪಶ್ಚಿಮ ಘಟ್ಟಗಳ ಸಕಲ ಜೀವವೈವಿಧ್ಯ, ಮಾನವ ಸಂಪನ್ಮೂಲ, ಸಾಂಪ್ರದಾಯಿಕ ಜ್ಞಾನ ಪರಂಪರೆ ಹಾಗೂ ನಿರ್ಜೀವ ಸಂಪನ್ಮೂಲಗಳನ್ನು ಗುರುತಿಸುವುದು ಮತ್ತು ದಾಖಲೆ ಮಾಡುವುದು; -ಅವನತಿಯ ಅಂಚಿನಲ್ಲಿರುವ ಎಲ್ಲ ಔಷಧೀಯ ಸಸ್ಯಗಳನ್ನು ಸಂರಕ್ಷಿಸುವ ಬಗೆ ಕುರಿತು ಅಧ್ಯಯನ ನಡೆಸುವುದು; ಜನಪದ ಮತ್ತು ಆಯುರ್ವೇದ ವೈದ್ಯ ಪದ್ಧತಿಯ ವೈಜ್ಞಾನಿಕ ಮೌಲ್ಯವನ್ನು ನಿರ್ಧರಿಸುವುದು; ಜೀವವೈವಿಧ್ಯತೆಯ ಅಳಿವು-ಉಳಿವಿನಲ್ಲಿ ಸಮಾಜೋ ಆರ್ಥಿಕ ನೆಲೆಯ ಸಂಬಂಧಗಳ ಅಧ್ಯಯನ ಮತ್ತು ಸುಸ್ಥಿರ ಅಭಿವೃದ್ಧಿ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಂಶೋಧನೆ,ವಿಶ್ಲೇಷಣೆ ನಡೆಯಲಿದೆ.
ಸಂಶೋಧನಾ ಕಾರ‍್ಯದ ಬಳಿಕ ವಿವಿಯಲ್ಲೇ ಪ್ರಯೋಗಾಲಯ ಸ್ಥಾಪಿಸುವುದು ಮತ್ತು ಅಲ್ಲಿಯೇ ಸಂಶೋಧನಾ ತರಬೇತಿ ನೀಡುವುದು; ಬೌದ್ಧಿಕ ಹಕ್ಕು ಸ್ವಾಮ್ಯತೆ ಪಡೆಯಲು ಸಹಕಾರ ; ಸಂಶೋಧನೆಯ ಫಲ ಕೈಗಾರಿಕೆಗೆ ತಲುಪುವಂತೆ ಮಾಡುವುದು ಸೇರಿದಂತೆ ನಾನಾ ರೀತಿಯ ರಚನಾತ್ಮಕ ಕಾರ‍್ಯಗಳ ಕನಸು ಕಂಡಿದೆ ಮೈಸೂರು ವಿವಿ. ಎಲ್ಲವೂ ನನಸಾಗುವ ಹಾದಿ ಹಿಡಿಯಬೇಕಷ್ಟೆ !
ಕೋಟ್
ನಮ್ಮ ಸುತ್ತಮುತ್ತಲಿನ ನೈಸರ್ಗಿಕ ಸಂಪನ್ಮೂಲವನ್ನು ಮಾನವ ಕಲ್ಯಾಣಕ್ಕೆ, ಆರೋಗ್ಯ ಕ್ಷೇತ್ರಕ್ಕೆ ಸದ್ವಿನಿಯೋಗ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಶೋಧನೆ ನಡೆಸಲೆಂದೇ ವಿವಿ ಈ ಯೋಜನೆ ಕೈಗೆತ್ತಿಕೊಂಡಿದೆ. ಸಮಾಜಕ್ಕೆ ಇದರ ಗರಿಷ್ಠ ಹಾಗೂ ಶಾಶ್ವತ ಪ್ರಯೋಜನ ದೊರೆಯಬೇಕು. ಈ ನಿಟ್ಟಿನಲ್ಲಿ - ಒಂದು ಸುಸಜ್ಜಿತ ಜೀವ ಸಂಪನ್ಮೂಲಗಳ ನಿರ್ವಹಣಾ ಸಂಸ್ಥೆಯನ್ನು ವಿವಿ ಸ್ಥಾಪಿಸಲಿದೆ. ಈ ಸಂಸ್ಥೆ ಜಗತ್ತಿನಲ್ಲಿಯೇ ಉತ್ಕೃಷ್ಟ ಸಂಶೋಧನಾ ಕೇಂದ್ರವಾಗಬೇಕೆಂಬುದು ನಮ್ಮ ಆಸೆ.
- ಪ್ರೊ. ವಿ. ಜಿ. ತಳವಾರ್, ಕುಲಪತಿ.
------------

ಮೈಸೂರಲ್ಲಿ ಕಳ್ಳತನಕ್ಕೂ ‘ಯುವೋತ್ಸಾಹ‘

ವಿಕ ಸುದ್ದಿಲೋಕ ಮೈಸೂರು
ಜೀವನ ಶೈಲಿಯಲ್ಲಿ ಬದಲಾವಣೆಯಾದಂತೆ ಮೈಸೂರಿನಲ್ಲಿ ಕಳ್ಳತನದ ಮಾರ್ಗದಲ್ಲೂ ಬದಲಾವಣೆ ಪರ್ವ.
ಮನೆಗಳ್ಳತನದತ್ತ ಚಿತ್ತ ಹರಿಸುತ್ತಿದ್ದ ಚೋರರು ಅದು ಕಷ್ಟವಾಗುತ್ತಿದೆ ಎನ್ನುವ ಕಾರಣಕ್ಕೆ ಈಗೇನಿದ್ದರೂ ಗುಂಪು ಕಳ್ಳತನಕ್ಕಿಂತ ಏಕವ್ಯಕ್ತಿ ಕಳ್ಳತನದ ಕಡೆಯೇ ಗಮನಹರಿಸತೊಡಗಿದ್ದಾರೆ. ಅದರ ರೂಪವೇ ಮೈಸೂರು ಪೊಲೀಸರಿಗೆ ದೊಡ್ಡ ತಲೆನೋವಾಗಿರುವ ಸರಗಳ್ಳತನ.
ಇಡೀ ಸಮಾಜವೇ ಬದಲಾವಣೆ ಪರ್ವದಲ್ಲಿರುವಾಗ ನಾವೇಕೆ ಬದಲಾಗಬಾರದು ಎನ್ನುವ ಪ್ರಶ್ನೆಯೊಂದಿಗೆ ಕಳ್ಳರ ಸಮೂಹ ಭಿನ್ನ ಹಾದಿ ಹಿಡಿಯ ತೊಡಗಿದೆ. ವಯಸ್ಸಾದವರಿಗಿಂತ ಯುವ ಪಡೆಯೇ ಕಳ್ಳತನದತ್ತ ಮುಖ ಮಾಡಿರುವುದು ಕೇವಲ ಮೂರು ವರ್ಷದಲ್ಲೇ ಕಳ್ಳತನದ ಮಾರ್ಗಕ್ಕೆ ಯುವೋತ್ಸಾಹ ಬಂದಿರುವುದನ್ನು ತೋರಿಸುತ್ತದೆ.
ಬದಲಾವಣೆಯ ಈ ಪರಿ: ಮೂರು ವರ್ಷದಲ್ಲೇ ಮೈಸೂರಿನಲ್ಲಿ ಕಳ್ಳತನದ ಬದಲಾವಣೆಆಗಿರುವುದನ್ನು ಪೊಲೀಸ್ ಅಂಕಿ ಸಂಖ್ಯೆಗಳೇ ಹೇಳುತ್ತವೆ.
೨೦೦೭ರಲ್ಲಿ ನಗರದಲ್ಲಿ ದಾಖಲಾದ ಮನೆಗಳ್ಳತನದ ಸಂಖ್ಯೆ ೭೩೬. ಇದರಲ್ಲಿ ರಾತ್ರಿ ಕಳ್ಳತನ ೧೫೬. ಇತರೆ ಕಳ್ಳತನ ಪ್ರಕರಣ ೫೭೩. ಇದು ೨೦೦೮ರಲ್ಲೂ ಏರಿಕೆಯಾಯಿತು. ದಾಖಲಾದ ೮೨೪ ಪ್ರಕರಣದಲ್ಲಿ ರಾತ್ರಿ ಕಳವು ೧೭೨. ಅದೇ ಕಳೆದ ವರ್ಷ ರಾತ್ರಿ ಮನೆಗಳವಿನ ಸಂಖ್ಯೆಯಲ್ಲಿ ಕೊಂಚ ಇಳಿಮುಖ ಕಂಡಿದೆ. ಈ ಸಂಖ್ಯೆ ಇಳಿದಿದ್ದು ೧೭೨ರಿಂದ ೧೩೮ಕ್ಕೆ. ಹಗಲು ಕಳ್ಳತನ ಪ್ರಕರಣದಲ್ಲೂ ಇದೇ ಸ್ಥಿತಿ. ೨೦೦೭ರಲ್ಲಿ ೧೭ರಿಂದ ೨೦೦೮ಕ್ಕೆ ೨೨ಕ್ಕೆ ಏರಿಕೆ. ೨೦೦೯ರಲ್ಲಿ ಅದು ೧೩ಕ್ಕೆ ಇಳಿಕೆ ಕಂಡಿರುವುದು ಗಮನಾರ್ಹ. ಇದೇ ರೀತಿ ದರೋಡೆಯ ಸಂಖ್ಯೆಯನ್ನೂ ಗಮನಿಸಿದರೆ ಅಲ್ಲಿಯೂ ಇಳಿಮುಖವಾಗಿದೆ. ೨೦೦೭ರಲ್ಲಿ ೭೧ ದರೋಡೆ ಪ್ರಕರಣಗಳನ್ನು ಕಂಡ ಮೈಸೂರು ನಗರ ೨೦೦೯ರಲ್ಲಿ ೪೪ ಮಾತ್ರ.
ಇನ್ನು ಸರಗಳ್ಳತನದ ಸಂಖ್ಯೆ ಸಾಕಷ್ಟು ಏರಿದೆ. ೨೦೦೯ರಲ್ಲಿ ದಾಖಲಾದ ಸರಗಳ್ಳತನದ ಪ್ರಕರಣಗಳ ಸಂಖ್ಯೆ ೯೫. ೨೦೦೮ರಲ್ಲಿ ಇದು ೬೧, ೨೦೦೭ರಲ್ಲಿ ಕೇವಲ ೩೨. ಎರಡೇ ವರ್ಷದ ಅಂತರದಲ್ಲಿ ಸರಗಳ್ಳತನ ಪ್ರಮಾಣ ಮೂರುಪಟ್ಟು ಹೆಚ್ಚಾಗಿದೆ.
ವೃತ್ತಿಪರರು ನಡೆಸುವ ಡಕಾಯಿತಿಯಲ್ಲಿ ಕೊಂಚ ಮಾತ್ರ ಕೊಂಚ ಏರಿಕೆಯಾಗಿದೆ. ೨೦೦೭ರಲ್ಲಿ ನಗರದಲ್ಲಿ ೪, ೨೦೦೮ರಲ್ಲಿ ೧ ಪ್ರಕರಣ ದಾಖಲಾದರೆ, ೨೦೦೯ರಲ್ಲಿ ಇದು ಏರಿದ್ದು ೯ಕ್ಕೆ. ಆದರೆ ಪೊಲೀಸರು ತುಮಕೂರು ಜಿಲ್ಲೆಯಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣವನ್ನೂ ಬೇಧಿಸಿದ್ದು ಸಮಾಧಾನಕರ ಸಂಗತಿ.
ಶೈಲಿ ಬದಲಾವಣೆಗೆ ಕಾರಣವಾದರೂ ಏನು: ಕಳ್ಳತನ ಎನ್ನುವುದು ಅಪರಾಧವಾದರೂ ಅದರಲ್ಲಿ ಡಕಾಯಿತಿಯಿಂದ ಹಿಡಿದು ಸಣ್ಣ ಕಳ್ಳತನದವರೆಗೂ ಸೇರುತ್ತದೆ. ಆದರೆ ಡರೋಡೆ, ಮನೆಗಳ್ಳತನದೊಂದಿಗೆ ಸರಗಳ್ಳತನದತ್ತ ವೃತ್ತಿಪರತೆ ರೂಪಿಸಿಕೊಳ್ಳುವತ್ತ ಕಳ್ಳನ ಚಿತ್ತ ಹರಿಯುತ್ತಿದೆ.
ದರೋಡೆ ಇಲ್ಲವೇ ಭಾರೀ ಕಳ್ಳತನಗಳಿಗೆ ತಿಂಗಳಿನಿಂದ ಸಂಚು ರೂಪಿಸಬೇಕು. ಇದಕ್ಕಾಗಿ ಸೂಕ್ತ ಹಾಗೂ ವಿಶ್ವಾಸಾರ್ಹ ತಂಡವನ್ನು ಕಟ್ಟಿಕೊಳ್ಳಬೇಕು. ಕೊಂಚ ಭಿನ್ನಾಭಿಪ್ರಾಯ ಬಂದರೆ ಸಿಕ್ಕಿ ಬೀಳುವುದು ಗ್ಯಾರಂಟಿ. ಜತೆಗೆ ಕಳ್ಳರಲ್ಲಿಯೇ ಪರಸ್ಪರ ವಿಶ್ವಾಸಾರ್ಹತೆ ಪ್ರಮಾಣ ಕಡಿಮೆಯಾಗುತ್ತಿದೆ. ಇವೆಲ್ಲದರ ಜತೆಗೆ ಭದ್ರತೆ ಹಿಂದೆಂಗಿಂತಲೂ ಹೆಚ್ಚಾಗಿರುವುದರಿಂದ ಪೊಲೀಸ್ ತಂತ್ರಗಳನ್ನು ಬೇಧಿಸುವ ಚಾಣಾಕ್ಷತೆ ಬೇಕು. ಸಿಕ್ಕಿ ಬಿದ್ದರೆ ಶಿಕ್ಷೆ ಪ್ರಮಾಣವೂ ಹೆಚ್ಚು.
ಅದೇ ಸರಗಳ್ಳತನಕ್ಕೆ ನಿಮಿಷಗಳ ಚಾಣಾಕ್ಷತೆ ಸಾಕು. ಸರ ಕಿತ್ತುಕೊಂಡು ಪರಾರಿಯಾದರೆ ಆಯ್ತು. ಹಣ ಸಂಪಾದನೆಯೂ ಸುಲಭ. ಹಾಗೇನಾದರೂ ಆದೃಷ್ಟ ಕೈ ಕೊಟ್ಟು ಸಿಕ್ಕಿ ಬಿದ್ದರೂ ಸರಗಳ್ಳತನಕ್ಕೆ ಸಜೆಯೂ ಕಡಿಮೆಯೆ. ಸರಗಳ್ಳತನ ಮಾಡಿದು ಸಿಕ್ಕಿ ಬಿದ್ದವರೂ ಅತ್ಯಲ್ಪ. ಅದರಲ್ಲಿ ಶಿಕ್ಷೆಗೆ ಗುರುಯಾದವರ ಸಂಖ್ಯೆ ಇನ್ನೂ ಕಡಿಮೆ. ಇದರಿಂದ ಹಣ ಗಳಿಸಲು ಸುಲಭ ಮಾರ್ಗಗಳ ಕಡೆ ಗಮನಹರಿಸಲು ಶುರು ಮಾಡಿರುವುದರಿಂದ ಶೈಲಿಯಲ್ಲೂ ಬದಲಾಗಿದೆ.
ಒಪ್ಪಿಕೊಂಡಿದ್ದಾರೆ ಕಳ್ಳರು: ತಾವು ಶೈಲಿ ಬದಲಾವಣೆ ಮಾಡಿಕೊಂಡಿರುವುದನ್ನು ಸ್ವತಃ ಕಳ್ಳರೇ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಕಳೆದ ಮೂರು ತಿಂಗಳಿನಲ್ಲಿ ಮೈಸೂರು ಪೊಲೀಸರು ಬೇಧಿಸಿದ ತಂದೆ-ಮಗು ಕಿಡ್ನಾಪ್ ಪ್ರಕರಣದ ಆರೋಪಿಗಳು ಬಹುತೇಕ ಯುವಕರೇ. ಅವರೇ ಪೊಲೀಸರ ಮುಂದೆ ಹೇಳಿಕೊಂಡಂತೆ, ಕೃತ್ಯದ ಹಿಂದೆ ಏಕೈಕ ಉದ್ದೇಶ ದಿಢೀರ್ ಹಣ ಮಾಡುವುದು. ಅದೇ ರೀತಿ ಸರಗಳ್ಳತನ ಮಾಡಿ ಸಿಕ್ಕಿ ಬಿದ್ದವರೂ ಹಣಕ್ಕಾಗಿ ಈ ದಾರಿ ಹಿಡಿದಿದ್ದನ್ನು ಒಪ್ಪಿಕೊಂಡಿದ್ದಾರೆ.
ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎನ್ನುವುದು ಗಾದೆ ಮಾತು. ಅದನ್ನು ನಮ್ಮ ಹೊಸ ಟ್ರೆಂಡ್‌ನ ಕಳ್ಳರು, ಸಣ್ಣ(ಸರ)ಗಳ್ಳತನ ಮಾಡಿ ತಪ್ಪಿಸಿಕೊಂಡರೆ ನೂರಾರು ಕಳ್ಳತನಕ್ಕೆ ದಾರಿ ಎಂದು ಬದಲಾಯಿಸಿಕೊಂಡಂತಿದೆ.
============
ಮೈಸೂರಿನಲ್ಲಿ ಕಳ್ಳತನದ ಶೈಲಿಯಲ್ಲೂ ಬದಲಾವಣೆ ಆಗುತ್ತಿರುವುದು ನಿಜ. ಸುಲಭವಾಗಿ ಹಣ ಸಂಪಾದನೆಯೇ ಮೂಲ ಕಾರಣ. ಇದಕ್ಕಾಗಿ ಪೊಲೀಸ್ ಕಾರ‍್ಯಾಚರಣೆ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ
-ಸುನೀಲ್ ಅಗರವಾಲ್, ಪೊಲೀಸ್ ಆಯುಕ್ತರು.
=============

ಘಟನೆ-೧(೨೪/೧೧/೦೯)
ಆಗಬೇಕಾಗಿದ್ದು ಅಂತರಾಷ್ಟ್ರೀಯ ಕ್ರಿಕೇಟರ್,ಓದಿದ್ದು ಅನಿಮೇಶನ್, ತಲೆ ಬಳಸಿಕೊಂಡಿದ್ದು ಡಕಾಯಿತಿಗೆ....ಕ್ರಿಕೆಟ್ ಲೋಕದಿಂದ ಡಕಾಯಿತಿ ಪಾತಕಕ್ಕೆ ಸಿಲುಕಿದ ಬೆಂಗಳೂರಿನ ಕಿಶೋರ ಎಂಬಾತ ಜೈಲು ಸೇರಿದ ಕಥೆ.
ಆರ್‌ಪಿಸಿ ಲೇಔಟ್ ನಿವಾಸಿಮೋಹನಜೆಟ್ಟಿ ಎಂಬುವವರ ಪುತ್ರನಾದ ಕಿಶೋರ್‌ಗಿನ್ನೂ ೨೨ರ ಹರೆಯ. ಐದು ವರ್ಷದ ಹಿಂದೆ ಮಲೇಷಿಯಾದಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಪಂದ್ಯದ ೧೯ ವರ್ಷದೊಳಗಿನ ವಿಭಾಗದಲ್ಲಿ ಪಾಲ್ಗೊಂಡು ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಮುಡಿಗೇರಿಸಿದ್ದ. ಆರೋಗ್ಯದ ಕಾರಣಕ್ಕೆ ಕ್ರಿಕೆಟ್‌ನಿಂದ ದೂರವಾದವನಿಗೆ ಜೈಲಿನಲ್ಲಿದ್ದು ಬಂದಿದ್ದ ಕುಖ್ಯಾತನೊಬ್ಬ ಹತ್ತಿರವಾದ. ಕಿಶೋರನಲ್ಲಿರುವ ಚಾಣಾಕ್ಷತನವನ್ನು ನೋಡಿದ ಆತ ದಿಢೀರ್ ಶ್ರೀಮಂತನಾಗುವ ಆಸೆ ಹುಟ್ಟಿಸಿ ಡಕಾಯಿತಿಗಳಿಗೆ ಇಳಿಸಿದ. ವಯೋ ಸಹಜ ಆಸೆಯಂತೆ ಕಿಶೋರ್ ಡಕಾಯಿತಿಗಳಿಗೆ ಇಳಿದು ಈಗ ಜೈಲಿನ ಅತಿಥಿ.

ಘಟನೆ-೨(೧೮/೧೨/೦೯)
ದಿಢೀರ್ ಹಣ ಮಾಡಬೇಕು ಎನ್ನುವ ಕಾರಣಕ್ಕೆ ಸರಗಳ್ಳತನಕ್ಕೆ ಇಳಿದು ಸಿಕ್ಕಿ ಬಿದ್ದವರು ಶ್ರೀರಂಗಪಟ್ಟಣ ತಾಲೂಕು ಕೆಆರ್‌ಎಸ್‌ನ ಹರೀಶ್‌ಕುಮಾರ್(೨೨), ಹೊಸ ಆನಂದೂರು ಗ್ರಾಮದ ಎಚ್.ಪಿ.ಕೃತನ್(೨೦), ಶಶಿಕುಮಾರ್(೨೧), ಬಸ್ತಿಪುರದ ಶೇಖರ(೨೩), ಮೈಸೂರು ಅರವಿಂದ ನಗರದ ಚೇತನಕುಮಾರ್(೨೧).
ಶಿಕ್ಷಣ ಪೂರೈಸದೇ ಈ ಕಾರ‍್ಯಾಚರಣೆ ನಡೆಸುತ್ತಿದ್ದ ಇವರು ಮೊದಲ ಬಾರಿ ಅಪರಾಧ ಪ್ರಕರಣದಲ್ಲಿ ಸಿಲುಕಿದ್ದಾರೆ. ಮೈಸೂರಿನ ಹೊರ ವಲಯದಲ್ಲಿ ಡರೋಡೆ ಮಾಡಲು ಸಜ್ಜಾಗಿದ್ದಾಗ ಸಿಕ್ಕಿ ಬಿದ್ದವರಿವರು.

ಮೈಸೂರು ಭಾಗದಲ್ಲಿ ಕಂಡ ಹುಲಿಗಳು ೭೦

ಮುಗಿದ ಗಣತಿ: ಇನ್ನೇನಿದ್ದರೂ ವರದಿಯತ್ತ ಚಿತ್ತ
ಕುಂದೂರು ಉಮೇಶಭಟ್ಟ/ಮೈಸೂರು
ಮೈಸೂರು ಭಾಗದಲ್ಲಿ ಗಣತಿಗೆ ಸಿಕ್ಕ ಹುಲಿಗಳ ಸಂಖ್ಯೆ ೭೦. ಚಿರತೆಗಳು ೨೭.
ಗುರುವಾರ ಮುಕ್ತಾಯವಾದ ಆರು ದಿನಗಳ ಹುಲಿ ಗಣತಿಯ ಪ್ರಾಥಮಿಕ ಅಂದಾಜಿನ ಲೆಕ್ಕಾಚಾರವಿದು.
ಬಂಡೀಪುರ, ನಾಗರಹೊಳೆಯನ್ನೊಳಗೊಂಡ ಹುಲಿ ಯೋಜನೆ ಹಾಗೂ ಬಿಳಿಗಿರಿರಂಗ ವನ್ಯಧಾಮದಲ್ಲಿ ಹುಲಿ ಗಣತಿ ಯಶಸ್ವಿಯಾಗಿ ಮುಗಿದಿದೆ. ೫೪೮ ಸ್ವಯಂ ಸೇವಕರು ಹಾಗೂ ೫೦೦ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಹೆಜ್ಜೆ ಜಾಡು ಹಿಡಿದು ಆರು ದಿನ ಕಾಡು ಸುತ್ತಿದ್ದಾರೆ.
ಗಣತಿದಾರರು ಅರಣ್ಯ ಇಲಾಖೆ ಸಿಬ್ಬಂದಿಗೆ ನೀಡಿದ ಮಾಹಿತಿಯನ್ನು ಕಲೆ ಹಾಕುವ ಕೆಲಸ ಶುಕ್ರವಾರದಿಂದಲೇ ಆರಂಭಗೊಂಡಿದ್ದು. ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಪೂರ್ಣ ವರದಿ ಲಭ್ಯವಾಗಲಿದೆ. ಬರುವ ಅಕ್ಟೋಬರ್‌ನಲ್ಲಿ ವಿಶ್ವ ಹುಲಿ ಸಮ್ಮೇಳನ ಭಾರತದಲ್ಲಿ ನಡೆಯುತ್ತಿರುವುದರಿಂದ ಈ ಬಾರಿಯ ಹುಲಿ ಗಣತಿ ಮಹತ್ವ ಪಡೆದಿದೆ.
ಬಂಡೀಪುರ ರಾಷ್ಟೀಯ ಉದ್ಯಾನದ ೧೨ ವಲಯದ ೧೦೩ ಬೀಟ್‌ಗಳಲ್ಲಿ ಸಂಚರಿಸಿದಾಗ ಕಂಡ ಹುಲಿಗಳ ಸಂಖ್ಯೆ ೩೦. ಚಿರತೆಗಳ ಸಂಖ್ಯೆ ೧೫. ಇದರಲ್ಲಿ ಮಾಂಸಾಹಾರಿ ಪ್ರಾಣಿಗಳ ಗಣತಿ ದಿನ ೧೭, ಸಸ್ಯಾಹಾರಿ ಗಣತಿ ದಿನ ೧೩ ಹುಲಿ ಕಂಡಿವೆ. ಹುಲಿ ಹೆಜ್ಜೆಯಲ್ಲದೇ, ಮಲವನ್ನು ಸಂಗ್ರಹಿಸಲಾಗಿದೆ. ೨೬೭ ಮಂದಿ ಸ್ವಯಂ ಸೇವಕರು ಬಂಡೀಪುರ ವ್ಯಾಪ್ತಿಯ ೯೦೦ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಸುತ್ತು ಹಾಕಿದ್ದಾರೆ.
ನಾವೀಗ ಮಾಹಿತಿಯನ್ನೆಲ್ಲಾ ಸಾಫ್ಟ್‌ವೇರ್‌ನಲ್ಲಿ ಕಲೆ ಹಾಕುತ್ತಿದ್ದೇವೆ. ಪೂರ್ಣ ವರದಿಯನ್ನು ಹುಲಿ ಯೋಜನೆ ನಿರ್ದೇಶಕರಿಗೆ ರವಾನಿಸಲಾಗುತ್ತದೆ. ಬಂಡೀಪುರ ದಲ್ಲಿ ಹುಲಿ ಸಂಖ್ಯೆ ಹೆಚ್ಚಾಗಿರುವ ವಾತಾವರಣವಂತೂ ಗಣತಿ ವೇಳೆ ಕಂಡು ಬಂದಿದೆ ಎಂದು ಬಂಡೀಪುರ ಡಿಸಿಎಫ್ ಡಾ.ಕೆ.ಟಿ.ಹನುಮಂತಪ್ಪ ತಿಳಿಸಿದರು.
ಇನ್ನು ನಾಗರಹೊಳೆಯ ೬೪೩ ಚದರ ಕಿ.ಮಿ ವ್ಯಾಪ್ತಿಯಲ್ಲಿ ೨೫ ಹುಲಿ ಹಾಗೂ ೭ ಚಿರತೆ ಕಂಡು ಬಂದಿವೆ. ೭ ವಲಯದಲ್ಲಿ ಅಂತರಸಂತೆ ವನ್ಯಜೀವಿ ವಲಯದಲ್ಲೇ ಅತಿ ಹೆಚ್ಚು ಅಂದರೆ ೬. ಡಿ.ಬಿ.ಕುಪ್ಪೆ ಹಾಗೂ ವೀರನಹೊಸಳ್ಳಿ ವಲಯದಲ್ಲಿ ತಲಾ ೫, ಮೇಟಿಕುಪ್ಪೆ ಹಾಗೂ ಕಲ್ಲಹಳ್ಳದಲ್ಲಿ ತಲಾ ೩, ಆನೆಚೌಕಲೂರು ವಲಯದಲ್ಲಿ ೨ ಹಾಗೂ ನಾಗರಹೊಳೆ ವಲಯದಲ್ಲಿ ೧ ಹುಲಿಯನ್ನು ನೇರವಾಗಿಯೇ ಕಂಡಿವೆ.
೬೩ ಬೀಟ್ ರೂಪಿಸಿ ೧೯೯ ಸ್ವಯಂ ಸೇವಕರನ್ನು ಬಳಸಲಾಗಿತ್ತು. ೧೫ ಕಿ,ಮೀ.ಗೆ ಒಂದು ಬೀಟ್‌ನಂತೆ ರೂಪಿಸಿ ಯಶಸ್ವಿಯಾಗಿ ಗಣತಿ ನಡೆಸಿದ್ದೇವೆ ಎಂದು ನಾಗರಹೊಳೆ ಡಿಸಿಎಫ್ ವಿಜಯರಂಜನ್‌ಸಿಂಗ್ ಹೇಳಿದರು.
ತಮಿಳುನಾಡು ಗಡಿಗೆ ಹೊಂದಿಕೊಂಡ ಬಿಳಿಗಿರಿರಂಗ ವನ್ಯಧಾಮದಲ್ಲೂ ಹುಲಿಗಳ ಸಂಖ್ಯೆ ಚೆನ್ನಾಗಿಯೇ ಇದೆ. ಇಲ್ಲಿ ೧೫ ಹುಲಿ ಹಾಗೂ ೫ ಚಿರತೆ ಕಂಡಿವೆ.ಇಲ್ಲಿ ೮೨ ಸ್ವಯಂ ಸೇವಕರನ್ನು ಬಳಸಿ ೪೩ಬೀಟ್‌ಗಳಲ್ಲಿ ಗಣತಿ ಕಾರ‍್ಯ ನಡೆದಿದೆ ಎನ್ನುವುದು ಅಲ್ಲಿನ ಡಿಸಿಎಫ್ ಬಿಸ್ವಜೀತ್ ಮಿಶ್ರ ನೀಡಿದ ಹೇಳಿಕೆ.
ಈ ವನ್ಯಧಾಮವನ್ನು ಹುಲಿ ಯೋಜನೆಗೆ ಸೇರಿಸಬೇಕೆಂಬ ಪ್ರಸ್ತಾವ ಇದ್ದರೂ ಸ್ಥಳೀಯರ ವಿರೋಧದಿಂದ ಇನ್ನೂ ಅನುಮತಿ ಕೇಂದ್ರದಿಂದ ಸಿಕ್ಕಿಲ್ಲ.
================
ಎಲ್ಲಿ ಎಷ್ಟು
ಬಂಡೀಪುರ-೩೦
ನಾಗರಹೊಳೆ-೨೫
ಬಿಆರ್‌ಟಿ-೧೫
--------

ಹುಲಿ ಗಣತಿ ಕಾರ‍್ಯ ಪೂರ್ಣಗೊಂಡಿದೆ. ಈಗ ಕಲೆ ಹಾಕಿದ ಮಾಹಿತಿ ಒಂದೆಡೆ ಸೇರಿಸುವ ಕೆಲಸ ಶುರುವಾಗಿದೆ. ಇದು ಸುದೀರ್ಘ ಕೆಲಸವಾಗಿರುವುದರಿಂದ ಮೂರು ತಿಂಗಳಾದರೂ ಸಮಯ ಬೇಕು. ಅದನ್ನು ಕೇಂದ್ರಕ್ಕೆ ಸಲ್ಲಿಸಿದ ನಂತರ ವೈಜ್ಞಾನಿಕ ಪರಾಮರ್ಶೆಯ ನಂತರ ಹುಲಿಗಳ ಸಂಖ್ಯೆಯ ಸ್ಪಷ್ಟ ಚಿತ್ರಣ ಸಿಗಲಿದೆ.
-ಬಿ.ಜೆ.ಹೊಸಮಠ, ಹುಲಿ ಯೋಜನೆ ನಿರ್ದೇಶಕ ಮೈಸೂರು.

ಇಂದಿನಿಂದ ತಿರುಮಕೂಡಲು ಪೂರ್ಣಕುಂಭ ಮೇಳ

ಜೆ.ಶಿವಣ್ಣ ಶ್ರೀಕ್ಷೇತ್ರ ತಿರುಮಕೂಡಲು, ವಿಕ ಸುದ್ದಿಲೋಕ
ಕುಂಭ ಮೇಳದ ಪವಿತ್ರ ಮಾಘ ಸ್ನಾನ ಮಾಡುವ ಭಕ್ತಾದಿಗಳಿಗೆ ಪುಣ್ಯ ಧಾರೆ ಎರೆಯಲು ತಿರುಮಕೂಡಲಿನಲ್ಲಿ ಕಪಿಲೆ-ಕಾವೇರಿ ಸಿದ್ಧರಾಗಿ ನಿಂತಿದ್ದಾರೆ. ಈ ಎರಡು ನದಿಗಳೊಂದಿಗೆ ಗುಪ್ತಗಾಮಿನಿಯಾಗಿ ಹರಿಯುವ ಸ್ಫಟಿಕ ಸರೋವರವೂ ಸನ್ನದ್ಧವಾಗಿದೆಯಂತೆ !
ಕೇವಲ ನಾಲ್ಕು ತಿಂಗಳ ಅಂತರದಲ್ಲಿ ಎರಡು ಮಹಾ ಹಬ್ಬಗಳನ್ನು ಕಂಡ ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಮಹಾ ಉತ್ಸವ ಬಂದಿದೆ. ಜಗದ್ವಿಖ್ಯಾತ ನಾಡಹಬ್ಬ ದಸರೆ ಬಳಿಕ, ಮರಳು ರಾಶಿಯ ನಡುವಿನ ಪುರಾಣ ಪ್ರಸಿದ್ಧ ತಲಕಾಡಿನ ಪಂಚಲಿಂಗ ದರ್ಶನದ ಮಹಾ ಧಾರ್ಮಿಕ ಉತ್ಸವಗಳನ್ನು ಸಂಭ್ರಮದಿಂದ ಆಚರಿಸಿದ ಬೆನ್ನ ಹಿಂದೆಯೇ ಈಗ ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಪರಿಗಣಿತವಾಗಿರುವ ಸ್ಥಳ ಐತಿಹ್ಯವಿರುವ ‘ತಿರುಮಕೂಡಲು ಪೂರ್ಣಕುಂಭ’ ಮೇಳದ ಆಗಮನವಾಗಿದೆ.
ಶ್ರೀ ವಿರೋಧಿನಾಮ ಸಂವತ್ಸರದಲ್ಲಿ ನಡೆದ ಕಾವೇರಿ ತಡಿಯ ತಲಕಾಡಿನಲ್ಲಿ ಮರಳರಾಶಿಯ ನಡುವೆ ಹುದುಗಿರುವ ಪಂಚಲಿಂಗಗಳ ದರ್ಶನದ ಭಕ್ತಿಭಾವದ ಗುಂಗಿನಿಂದ ಹೊರ ಬರುವ ಮುನ್ನವೇ ತಿರುಮಕೂಡಲು ನರಸೀಪುರದ ಜನತೆ ರಾಜ್ಯ, ಹೊರರಾಜ್ಯಗಳಿಂದ ಆಗಮಿಸಿರುವ ಅಪಾರ ಸಂಖ್ಯೆಯ ಭಕ್ತಾದಿಗಳನ್ನು ಕುಂಭಮೇಳಕ್ಕೆ ಸ್ವಾಗತಿಸಲು ಸಜ್ಜಾಗಿದ್ದಾರೆ.
ನಾಡಿನ ಜೀವನಾಡಿಯಾಗಿರುವ ಜೀವನದಿ ಕಾವೇರಿ, ಕಪಿಲೆಯ ನದಿ ಪಾತ್ರ ಕಳೆಗಟ್ಟಲಾರಂಭಿಸಿದೆ. ಈ ಎರಡೂ ಪವಿತ್ರ ನದಿಗಳು ಗುಪ್ತಗಾಮಿನಿ ಸ್ಫಟಿಕ ಸರೋವರದೊಂದಿಗೆ ಸಂಗಮಿಸುವ ನದಿಯ ನಟ್ಟನಡುವಿನ ಸ್ಥಳ ‘ಬಸವನ ಕಲ್ಲಿನಕಂಭ’ಪ್ರಮುಖ ಆಕರ್ಷಣೆ. ಪುರಾಣೇತಿಹಾಸಗಳಲ್ಲಿ ಮಹತ್ವದ ಮನ್ನಣೆ ಪಡೆದಿರುವ ತ್ರಿವೇಣಿ ಸಂಗಮ ಭಕ್ತರನ್ನು ಪಾವನಗೊಳಿಸಲು ಸಂಭ್ರಮಾದರಗಳಿಂದ ಸಜ್ಜಾಗುತ್ತಿದೆ.
ಉತ್ತರ ಭಾರತದ ಪ್ರಯಾಗ, ಹರಿದ್ವಾರ, ನಾಸಿಕ, ಉಜ್ಜಯಿನಿಯಂತೆಯೇ ಪುರಾಣ ಪ್ರಸಿದ್ಧ, ಇತಿಹಾಸ ಪ್ರಸಿದ್ಧ ಸಂಗಮ ಕ್ಷೇತ್ರವಾದ ಶ್ರೀಕ್ಷೇತ್ರದ ‘ತ್ರಿವೇಣಿ ಸಂಗಮ’ದಲ್ಲಿ ಲಕ್ಷಾಂತರ ಮಂದಿ ಪುಣ್ಯಸ್ನಾನ ಮಾಡಿ ಪುನೀತರಾಗಲಿದ್ದಾರೆ.
ತಿರುಮಕೂಡಲುವಿನಲ್ಲಿ ೧೯೮೯ ರಿಂದ ಆರಂಭಗೊಂಡು ೩ ವರ್ಷಗಳಿಗೊಮ್ಮೆ ನಡೆಯುವ ಈ ಮಹಾಮೇಳದ ವಿಶೇಷವೆಂದರೆ ಪುಣ್ಯಸ್ನಾನ. ಈ ಬಾರಿ ಮಹೋದಯ ಪುಣ್ಯಸ್ನಾನಕ್ಕೆ ಜ.೩೦ ರಂದು ಮೀನ ಲಗ್ನದಲ್ಲಿ ಬೆಳಗ್ಗೆ ೯.೨೫ ರಿಂದ ೧೧.೦೫ ಹಾಗೂ ಮಧ್ಯಾಹ್ನ ೧೨.೨೫ ರಿಂದ ೧.೧೩ ರವರೆಗೆ ಅಭಿಜಿನ್ ಮುಹೂರ್ತ, ವಿಧಿಮುಹೂರ್ತ ಹಾಗೂ ವೇದಮುಹೂರ್ತ ಪ್ರಶಸ್ತವೆಂದು ನಿಗದಿಯಾಗಿದೆ.
ಎರಡೂ ನದಿಯ ದಡದಲ್ಲಿ ಪ್ರಾಚೀನ ಶ್ರೀ ಗುಂಜಾ ನರಸಿಂಹಸ್ವಾಮಿ ಮತ್ತು ಶ್ರೀಅಗಸ್ತ್ಯೇಶ್ವರ ಸ್ವಾಮಿ ದೇವಾಲಯಗಳು (ಹರಿ-ಹರ) ಇರುವುದು ಮತ್ತೊಂದು ವಿಶೇಷ. ಅಗಸ್ತ್ಯ ಮುನಿಗಳು ಮರಳಿನಿಂದ ಲಿಂಗ ರೂಪಿಸಿ ಪ್ರತಿಷ್ಠಾಪಿಸಿ ಪೂಜಿಸಿದರೆನ್ನುವುದಕ್ಕೆ ಅಗಸ್ತ್ಯೇಶ್ವರ ಸ್ವಾಮಿ ದೇವಾಲಯ ಸಾಕ್ಷಿಭೂತವಾಗಿದೆ. ಅಗಸ್ತ್ಯೇಶ್ವರ ಲಿಂಗದಿಂದ ನೆತ್ತಿಯಿಂದ ಸದಾ ತೀರ್ಥೋದ್ಭವ ಮತ್ತೊಂದು ವಿಶೇಷ ಮತ್ತು ಅಚ್ಚರಿ.
ಜತೆಗೆ ಭಿಕ್ಷೇಶ್ವರ, ಮೂಲನಾಥೇಶ್ವರ, ಚೌಡೇಶ್ವರಿ, ರುದ್ರಪಾದ, ಭಾರದ್ವಾಜ ಋಷ್ಯಾಶ್ರಮ, ಅಕ್ಷಯ ವಟವೃಕ್ಷ, ಅಶ್ವತ್ಥ್‌ವೃಕ್ಷ, ವ್ಯಾಸರಾಜ ಮಠ ಇತ್ಯಾದಿ ಸಂಗಮವೂ ಹೌದು ಈ ತಿರುಮಕೂಡಲು.
ಇಂದಿನಿಂದ ಆರಂಭ
ಗುರುವಾರ (ಜ.೨೮)ದಿಂದ ತಿರುಮಕೂಡಲಿನಲ್ಲಿ ಕುಂಭ ಮೇಳ ನದಿಯ ಮರಳಿನ ದಿಬ್ಬದ ಮೇಲೆ ಆರಂಭವಾಗಲಿದೆ. ಕುಂಭಮೇಳ ನಡೆಯುವ ದಕ್ಷಿಣ ಭಾರತದ ಏಕೈಕ ಶ್ರೀಕ್ಷೇತ್ರ ತಿರುಮಕೂಡಲುವಿನಲ್ಲಿ ೧೯೮೯, ೧೯೯೨, ೧೯೯೫, ೧೯೯೫, ೧೯೯೮, ೨೦೦೧, ೨೦೦೪, ೨೦೦೭ ರ ಬಳಿಕ ಎಂಟನೇ ಪೂರ್ಣಕುಂಭ ನಾಳೆ(ಜ.೨೮)ಯಿಂದ ಆರಂಭವಾಗಲಿದ್ದು, ಮೂರು ದಿನಗಳು ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಶ್ರದ್ಧಾಭಕ್ತಿ ಮೆರೆಯಲಿದೆ.
ಜ.೨೮ ರಂದು ಬೆಳಗ್ಗೆ ೬ಕ್ಕೆ ಅಗಸ್ತ್ಯೇಶ್ವರಸ್ವಾಮಿ ದೇವಾಲಯದಲ್ಲಿ ಅನುಜ್ಞೆ, ಪುಣ್ಯಾಹ ಕಲಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ ಮೂಲಕ ಆಶೀರ್ವಾದ ಪಡೆದು ಲಿಂಗದಲ್ಲಿ ಉದ್ಭವಿಸುವ ಅಗ್ರತೀರ್ಥ ಸಮೇತ ಯಾಗಶಾಲೆ ಪ್ರವೇಶಿಸಿ ಹೋಮ, ಹವನ ನಡೆಸುವ ಮೂಲಕ ಮೇಳಕ್ಕೆ ಚಾಲನೆ ದೊರೆಯಲಿದೆ.
ಗಂಗೆ, ಕಾವೇರಿ, ಕಪಿಲೆ, ಯಮುನೆ ಸೇರಿದಂತೆ ಸಪ್ತ ನದಿಗಳಿಂದ ಕಳಶದಲ್ಲಿ ತರಲಾಗಿರುವ ಪವಿತ್ರ ಜಲವನ್ನು ಯಜ್ಞ ಸ್ಥಳದಲ್ಲಿಟ್ಟು ಪೂಜೆ, ಹೋಮ ನಡೆಸಿ ಜ.೩೦ ರಂದು ಬೆಳಗ್ಗೆ ೯.೨೫ಕ್ಕೆ ಪೂರ್ಣಾಹುತಿಯೊಂದಿಗೆ ಮೂರು ನದಿಗಳು ಸಂಗಮಿಸುವ ಸ್ಥಳವಾದ ಬಸವನ ಕಂಬದ ಬಳಿ ವಿಸರ್ಜಿಸುವ ಮೂಲಕ ಪುಣ್ಯಸ್ನಾನಕ್ಕೆ ಚಾಲನೆ ಸಿಗಲಿದೆ.

ಬೀಸೋ ಕೊಡಲಿಯಿಂದ ಸಾಲು ಮರ ಬಚಾವ್

ವಿಕ ಸುದ್ದಿಲೋಕ ಮೈಸೂರು
ಅಂತೂ ನಗರದ ಲಲಿತಮಹಲ್ ರಸ್ತೆಯ ನೂರಕ್ಕೂ ಹೆಚ್ಚು ಮರಗಳು ‘ಬೀಸೋ ಕೊಡಲಿ’ಯಿಂದ ಬಚಾವಾಗಿವೆ. ಪಾರಂಪರಿಕ ‘ರಾಜ ಮಾರ್ಗ’ದ ಮರಗಳನ್ನು ಉಳಿಸಬೇಕು ಎಂಬ ಪರಿಸರ ಪ್ರೇಮಿಗಳ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ.
ಅಭಿವೃದ್ಧಿಯ ದಾಹದಿಂದ ಮರಗಳನ್ನು ಕಡಿದುರುಳಿಸಲು ಕತ್ತಿ ಮಸೆಯುತ್ತಿದ್ದ ‘ಪ್ರಭಾವಿ’ಗಳ ಒತ್ತಾಯಕ್ಕೆ ಸೊಪ್ಪು ಹಾಕದ ಮಹಾನಗರಪಾಲಿಕೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಗಳು, ಸಾಲು ಮರಗಳನ್ನು ಉಳಿಸಿಕೊಂಡೆ ರಸ್ತೆ ಅಭಿವೃದ್ಧಿ ಪಡಿಸಲು ನಿರ್ಧರಿಸಿವೆ.
ಮರಕಡಿಯಲು ತೀವ್ರ ವಿರೋಧ ದಾಖಲಿಸಿದ್ದ ನಗರದ ಸ್ವಯಂ ಸೇವಾ ಸಂಘ,ಸಂಸ್ಥೆಗಳ ಪ್ರಮುಖರೊಂದಿಗೆ ಸೋಮವಾರ ಸಂಜೆ ಚರ್ಚೆ ನಡೆಸಿ,ಸಲಹೆ ಸೂಚನೆ ಆಲಿಸಿದ ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್,ಮುಡಾ ಆಯುಕ್ತ ಎಸ್.ಜಯಣ್ಣ ಅವರು ಅಂತಿಮವಾಗಿ‘ಮರ ಉಳಿಸುವ ’ಬದ್ಧತೆ ಪ್ರದರ್ಶಿಸಿದರು.
ಸೈಕಲ್ ಪಥ: ಪಾರಂಪರಿಕ ಮಹತ್ವದ ಮಾರ್ಗದ ಸಾಲು ಮರಗಳನ್ನು ಖಂಡಿತಾ ಕಡಿಯುವುದಿಲ್ಲ.‘ಪರ‍್ಯಾಯ’ಗಳ ಕುರಿತು ಸಭೆಯಲ್ಲಿ ವ್ಯಕ್ತವಾದ ಸಲಹೆ,ಸೂಚನೆಗಳನ್ನು ಸ್ವೀಕರಿಸಿದ್ದು,ಅನುಷ್ಠಾನ ಕುರಿತು ಚಿಂತನೆ ನಡೆಸಲಾಗುವುದು. ಪಾರಂಪರಿಕ ಪ್ರವಾಸೋದ್ಯಮಕ್ಕೆ ಪೂರಕವಾಗಿ ಮರಗಳ ಎರಡು ಮಗ್ಗುಲಲ್ಲಿ ಸೈಕಲ್ ಮತ್ತು ನಡಿಗೆ ಪಥವನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಇಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಮಾದರಿ ಮಾರ್ಗವನ್ನಾಗಿ ರೂಪಿಸುವ ಕುರಿತು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ವರ್ತುಲ ರಸ್ತೆ: ವರ್ತುಲ ರಸ್ತೆಯ ೯ ಕಿ.ಮಿ.ಬಾಕಿ ಕಾಮಗಾರಿಗೆ ಇದ್ದ ತೊಡಕು ನಿವಾರಣೆಯಾಗಿದ್ದು,ನಿರ್ಮಾಣ ಸಂಬಂಧ ಪ್ರಕ್ರಿಯೆ ಆರಂಭವಾಗಿದೆ. ಒಂದೂವರೆ ವರ್ಷದಲ್ಲಿ ಪೂರ್ತಿಗೊಳಿಸಲಾಗುವುದು.ಭೂಮಿ ಮಾಲೀಕರಿಗೆ ಪರಿಹಾರದ ಜತೆಗೆ ನಿವೇಶನವನ್ನು ನೀಡಲು ಮುಡಾ ಒಪ್ಪಿದೆ. ಇಷ್ಟರಲ್ಲೇ ವಿವಾದ ಬಗೆಹರಿಯಲಿದ್ದು, ಫೆಬ್ರವರಿ ಅಂತ್ಯದೊಳಗೆ ವಶಕ್ಕೆ ಪಡೆಯುತ್ತೇವೆ ಎಂದು ಎಂದು ಮುಡಾ ಆಯುಕ್ತ ಜಯಣ್ಣ ಸಭೆಗೆ ತಿಳಿಸಿದರು.
ವರ್ತುಲ ರಸ್ತೆ ಮುಗಿದರೆ ಸಂಚಾರ ಸಮಸ್ಯೆ ಬಹುತೇಕ ಬಗೆ ಹರಿಯಲಿದೆ.ಅಲ್ಲಿಯವರೆಗೆ ಸುಗಮ ಸಂಚಾರಕ್ಕೆ ‘ಪರ‍್ಯಾಯ’ಕ್ರಮಗಳ ಕುರಿತು ಚರ್ಚೆನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು.ಸಾಧ್ಯವಿರುವ ಕಡೆ ಮಾತ್ರ ಚತುಷ್ಪತ ರಸ್ತೆ ನಿರ್ಮಿಸಿ,ಉಳಿದೆಡೆ ವಾಹನ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಮರ ಕಡಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೇಡ,ಬೇಕು:ಅರಣ್ಯ ಇಲಾಖೆ ಎಸಿಎಫ್ ಗೋಪಿನಾಥ್ ,‘ಪ್ರಕರಣ ನ್ಯಾಯಾಲಯದಲ್ಲಿದೆ. ಟ್ರೀಕೋರ್ಟ್ ಮತ್ತು ಜಿಲ್ಲಾಧಿಕಾರಿಗಳು ತಡೆ ನೀಡಿದ್ದಾರೆ. ಏನೇ ಮಾಡಬೇಕೆಂದರೂ ಮೇಲ್ಮನವಿ ಹೋಗಬೇಕು. ಇಲ್ಲಿರುವ ೫೦ ವರ್ಷದ ೯೪ ಬೇವಿನ ಮರಗಳನ್ನು ಕಡಿಯುವುದು ಉಚಿತವಲ್ಲ’ ಎಂದು ಅಭಿಪ್ರಾಯಪಟ್ಟರು. ನಗರಪಾಲಿಕೆ ಕಾರ‍್ಯಪಾಲಕ ಎಂಜಿನಿಯರ್ ಹಾಗೂ ಸಂಚಾರ ಎಸಿಪಿ ಶಂಕರೇಗೌಡ,ಇನ್ಸ್‌ಪೆಕ್ಟರ್ ರಾಮಚಂದ್ರ ಅವರು ಸಂಚಾರ ದಟ್ಟಣೆ ಮತ್ತು ಅಪಘಾತದ ಅಂಕಿ ಅಂಶ ನೀಡುವ ಮೂಲಕ ರಸ್ತೆ ವಿಸ್ತರಣೆಯ ಅಗತ್ಯವನ್ನು ಪ್ರತಿಪಾದಿಸಿದರು.
ಏಕ ಅಭಿಪ್ರಾಯ:ಆದರೆ,ಸಭೆಯಲ್ಲಿ ಮಾತನಾಡಿದ ಸಂಸ್ಥೆಯ ಪ್ರತಿನಿಧಿಗಳು ‘ನಾವು ಅಭಿವೃದ್ಧಿ ವಿರೋಧಿಗಳಲ್ಲ.ಹಾಗಂತ ಮರ ಕಡಿದು ಅಭಿವೃದ್ಧಿ ಮಾಡುವುದನ್ನು ಒಪ್ಪುವುದೂ ಇಲ್ಲ.ಉಳಿಸಿಕೊಂಡೇ ಅಭಿವೃದ್ಧಿ ಮಾಡುವ ಕುರಿತು ಚಿಂತನೆ ನಡೆಸಿ’ ಎಂದು ಏಕ ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರು ಗ್ರಾಹಕರ ಪರಿಷತ್‌ನ ಡಾ.ಭಾಮಿ ವೀ.ಶೆಣೈ, ಬಾಪು ಸತ್ಯನಾರಾಯಣ, ಎಸಿಐಸಿಎಂನ ಎಂ.ಲಕ್ಷ್ಮಣ್, ನಿವೃತ್ತ ಕರ್ನಲ್ ಡಾ.ಆನಂದ್,ವಕೀಲರಾದ ತಮ್ಮಯ್ಯ,ಭಾಸ್ಕರ್, ಮಾಜಿ ಉಪಮೇಯರ್ ಪುಷ್ಪವಲ್ಲಿ,ವಿವಿಧ ಸಂಘಟನೆಗಳ ರವಿ,ಬಾಲಕೃಷ್ಣ, ಬಸವರಾಜ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
*****
ಸಲಹೆ -ಸೂಚನೆ-ಅಭಿಪ್ರಾಯ
೧.ಸಂಚಾರ ದಟ್ಟಣೆಗೂ ಅಪಘಾತಕ್ಕೂ ಸಂಬಂಧ ಕಲ್ಪಿಸೋದು ಸರಿಯಲ್ಲ. ಇತ್ತೀಚೆಗೆ ಈ ಮಾರ್ಗದಲ್ಲಿ ಅಪಘಾತ ನಡೆದದ್ದು ಮುಂಜಾನೆ ೫.೩೦ಕ್ಕೆ. ಆಗ ,ಯಾವ ಸಂಚಾರ ದಟ್ಟಣೆ ಇತ್ತು ? ಯಾವುದೇ ಅಪಘಾತಕ್ಕೆ ಅತಿವೇಗ, ಚಾಲಕರ ನಿರ್ಲಕ್ಷ್ಯಕಾರಣ. ಅದಕ್ಕೆ ಕಡಿವಾಣ ಹಾಕಿ.ಅಗತ್ಯವಿರುವ ಎಲ್ಲಾ ಕಡೆ ಹಂಪ್ಸ್ ಅಳವಡಿಸಿ. ಏಕ ಮುಖ ಸಂಚಾರ ವ್ಯವಸ್ಥೆ ಮಾಡಿ.
೨. ವಸತಿ ಪ್ರದೇಶದಲ್ಲಿ ನ್ಯಾಷಿನಲ್ ಹೈವೆಗೆ ಅನುಮತಿ ನೀಡಿದ್ದೇ ತಪ್ಪು. ಅನುಮತಿಗೆ ಮೊದಲು ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಅಧ್ಯಯನವನ್ನೇ ಮಾಡಿಲ್ಲ. ‘ಪಿಸಿಯು’ಕೂಡ ಹಾದಿ ತಪ್ಪಿಸುವಂತದ್ದು.
೩.ಈ ಮಾರ್ಗದ ಮರಗಳು ಪಾರಂಪರಿಕ ಮಹತ್ವದವು. ಕಡಿಯುವುದು ಸುಲಭ. ಬೆಳೆಸುವುದರ ಕಷ್ಟವನ್ನು ಅರ್ಥಮಾಡಿಕೊಳ್ಳಿ. ವರ್ತುಲ ರಸ್ತೆ ನಿರ್ಮಿಸಿದರೆ ಎಲ್ಲಾ ಸಮಸ್ಯೆ ಬಗೆ ಹರಿಯುತ್ತೆ. ಮರ ಕಡಿಯುವ ಬದಲು ಆ ಬಗ್ಗೆ ಆಸಕ್ತಿ ವಹಿಸಿ.
೪.ಮೃಗಾಲಯ ಸುತ್ತ ೧ ಕೀ.ಮಿ.ನಿಷೇಧಿತ ಪ್ರದೇಶ ಎನ್ನುವುದು ಪಾಲಿಕೆಯದೇ ತೀರ್ಮಾನ. ಅದನ್ನೇ ಉಲ್ಲಂಘಿಸುವುದು ಎಷ್ಟು ಸರಿ.ಅಪಘಾತವನ್ನೇ ನೆಪ ಮಾಡಿಕೊಂಡು ೩೨ ಮರ ಕಡಿಯಲು ಪ್ರೇರೇಪಿಸಿದ ದುಷ್ಕರ್ಮಿಗಳ ವಿರುದ್ಧ ಅಗತ್ಯ ಕ್ರಮಕೈಗೊಳ್ಳಿ.
೫.ಕೆ.ಸಿ.ಬಡಾವಣೆಯ ನಿವೇಶನ ಮೌಲ್ಯ ಹೆಚ್ಚಿಸಿಕೊಳ್ಳಲು ಅಗಲ ರಸ್ತೆ ಅಗತ್ಯವನ್ನು ಪ್ರತಿಪಾದಿಸುವ ಷಡ್ಯಂತ್ರ ನಡೆಯುತ್ತಿದೆ.
೬.ಕಾಮಗಾರಿ ನಡೆಯದಿದ್ದರೆ ಐದೋ -ಹತ್ತೋ ಕೋಟಿ ಅನುದಾನ ವಾಪಸ್ ಹೋಗುತ್ತೆ ಎಂದು ಕೆಲ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ.ಆದರೆ,ಒಂದು ಮರದ ‘ನಿಜ ಮೌಲ್ಯ’ ೫೦ಲಕ್ಷ ರೂ.ಗಿಂತ ಹೆಚ್ಚು .೧೧೪ ಮರ ಕಡಿದರೆ ಮೈಸೂರಿಗೆ ೫೦ ಕೋಟಿ ರೂ.ಗಿಂತ ಹೆಚ್ಚು ನಷ್ಟವಾಗುತ್ತೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.

ಶೌಚಾಲಯ ಕಟ್ಟುವಂತೆ ಪೋಷಕರಿಗೆ ಪಾಠ ಮಾಡಿ


ಶಿಕ್ಷಕರೇ ಜಿಲ್ಲೆಯಲ್ಲಿ ಶೌಚಾಲಯ ಕ್ರಾಂತಿ ಮಾಡಬೇಕಿದೆ. ಇದಕ್ಕಾಗಿ ಬೆಳಗ್ಗೆ 1 ಗಂಟೆ, ಸಂಜೆ 1ಗಂಟೆ ನೀವೂ ಕೂಡ ತೊಡಗಿಸಿಕೊಳ್ಳಿ. ಶೌಚಾಲಯ ಇಲ್ಲದ ಕುಟುಂಬಳಿಗೆ ಅದನ್ನು ಕಟ್ಟಿಸಿಕೊಡಿ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ನೀಡಿರುವ ಸೂಚನೆ ಇದು.

ಖಾಲಿ ಹುದ್ದೆಗಳ ಪ್ಯಾಕೇಜ್


ಬೃಹತ್ ನಗರಪಾಲಿಕೆಯಾಗಿ ಪರಿವರ್ತನೆಗೊಳ್ಳಲು ಸಿದ್ಧಗೊಳ್ಳುತ್ತಿರುವ ಮೈಸೂರು ಮಹಾನಗರಪಾಲಿಕೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳದ್ದೇ ಕಾರುಬಾರು.

ಬೊಂಬಾಯಿ 'ರೈಲು' ಹತ್ತಿದ್ದ ಹುಡುಗ ಫಾಲ್ಕೆ ಪ್ರಶಸ್ತಿ ತಂದ



ಆ ಹುಡುಗನಿಗೆ ಆಗಿನ್ನೂ ಹದಿನಾಲ್ಕು ವರ್ಷ. ಪತ್ರಿಕೆಯಲ್ಲಿ ಬಂದ ಜಾಹೀರಾತು ನೋಡಿ ದೊಗಳೆ ಚಡ್ಡಿ, ಅಂಗಿ ತೊಟ್ಟು ಮೈಸೂರಿನಿಂದ ಬೊಂಬಯಿ ರೈಲು ಹತ್ತಿದ ಆತನ ಕೈಯಲಿದ್ದದು ನಲವತ್ತೋ ಐವತ್ತೋ ರೂಪಾಯಿ ಮತ್ತು ಅಗಣಿತ ಹಂಬಲ.

ಮರೆಯಾದ ಮರ್ಯಾದ ಪುರುಷ


ಶಿಷ್ಯ 'ರಾಮಾಚಾರಿ'ಹಾದಿಯನ್ನೇ ಚಾಮಯ್ಯ ಮೇಷ್ಟ್ರು ಹಿಡಿದಿದ್ದಾರೆ. ಸುಮಾರು 371 ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದಿಂದ ಮನೆ ಮಾತಾಗಿದ್ದ ಅವರು, ನಾಯಕರಾಗಿಯೂ ನಟಿಸಿದ್ದರು. ಆದರೆ ಹೆಚ್ಚು ಖ್ಯಾತಿ ಪಡೆದಿದ್ದು ಪೋಷಕ ಪಾತ್ರದಿಂದ.

ಅಶ್ವತ್ಥ್ ಅಂತರಂಗ ಬಹಿರಂಗ


ಡಾ.ಕೆ.ಎಸ್.ಅಶ್ವತ್ಥ್ ಅವರು ತಮ್ಮ ಮನದಾಳದ ಮಾತನ್ನು ಪತ್ರದ ಮುಖಾಂತರ ತೋರ್ಪಡಿಸಿದ ಬಗೆ ಇದು.

'ಚಾಮಯ್ಯ ಮೇಷ್ಟ್ರು' ಇನ್ನಿಲ್ಲ

ಮೈಸೂರಿನಲ್ಲಿ ಆರ್ಎಸ್ಎಸ್ ತರುಣ ಸಮಾವೇಶ


ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೈಸೂರು, ಚಾಮರಾಜನಗರ ಜಿಲ್ಲೆಯ 'ತರುಣ ಸಮಾವೇಶ'ನಗರದಲ್ಲಿ ಭಾನುವಾರ ನಡೆಯಿತು. ಸಂಘದ ಹಿರಿಯ ಪ್ರಚಾರ ಕೃ.ಸೂರ್ಯನಾರಾಯಣರಾವ್ ಮಾತನಾಡಿ, ಸಂಘವನ್ನು ಹತ್ತಿಕ್ಕುವ ಪ್ರಯತ್ನಗಳ ವಿರುದ್ಧ ಕಿಡಿಕಾರಿದರು.

ಮೃಗಾಲಯಕ್ಕೆ ಮುಖ್ಯ ಮೇಟಿಯೇ ಇಲ್ಲ


ಶತಮಾನದ ಇತಿಹಾಸವಿರುವ ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ಎರಡು ತಿಂಗಳಿನಿಂದ ಕಾಯಂ ಕಾರ್ಯನಿರ್ವಾಹಕ ನಿರ್ದೇಶಕರಿಲ್ಲ.

ಎಚ್.ಡಿ.ಕೋಟೆಯಲ್ಲೊಂದು ಮಾಹಿತಿ ಸಂತೆ


ಮಾಹಿತಿ ಹಕ್ಕು ಜಾಗೃತಿ ಮೂಡಿಸಲು ನಾನಾ ಮಾರ್ಗಗಳು. ರಾಜ್ಯದ ಗಡಿ ತಾಲೂಕು ಹೆಗ್ಗಡದೇವನಕೋಟೆಯಲ್ಲಿ ಸಂತೆಯೇ ಮಾಹಿತಿ ಹಕ್ಕು ಜಾಗೃತಿ ವೇದಿಕೆ. ಸಂತೆಗೆ ಬಂದು ದಿನನಿತ್ಯದ ದಿನಸಿ ತರಕಾರಿ ಖರೀದಿಸುವವರು ಮಾಹಿತಿ ಹಕ್ಕು ವಿವರಗಳನ್ನು ಪಡೆದುಕೊಂಡು ಹೋಗುತ್ತಾರೆ.

ಇದು ಶಾಶ್ವತ ಹಸುರೀಕರಣ


ಪಾರಂಪರಿಕ ನಗರಿ ಮುಂದಿನ 3 ವರ್ಷದಲ್ಲಿ ವಿಷಯಾಧಾರಿತ ಉದ್ಯಾನ (ಥೀಮ್ಡ್ ಬೇಸ್ಡ್ ಪಾರ್ಕ್) ಗಳ ನಗರವೂ ಆಗಲಿದೆ.

ವಿದ್ಯಾರ್ಥಿಗಳಿಗೆ ರಜೆಯ ಡಬಲ್ ಧಮಾಕಾ


ಸಂಕ್ರಾಂತಿಯ ಮರು ದಿನವೂ ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಜೆಯ ಮಜೆ !

ನೆರೆ ಪರಿಹಾರ ಕಡಿತ ಆದೇಶ ಪರಿಶೀಲಿಸಿ


ಪೊಲೀಸ್ ಆಯುಕ್ತರೇ ದಯಮಾಡಿ ಆರು ದಿನಗಳ ವೇತನವನ್ನು ಕಡಿತ ಮಾಡಿ ನಾವು ತೊಂದರೆಗೆ ಒಳಗಾಗದಂತೆ ಮಾಡಬೇಡಿ. ನೀವು ಅಧಿಕಾರಿಯಾಗಿರಬಹುದು , ಕೆಳ ಹಂತದ ಪೊಲೀಸ್ ಸಿಬ್ಬಂದಿಯ ಸ್ಥಿತಿಯನ್ನು ನೋಡಿ... ಇದು ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಗಳ ಮನವಿ ಇದು.

ರಮ್ಮಿ ಆಟಕ್ಕೆ ಪೊಲೀಸರಿಂದಲೇ ರಕ್ಷಣೆ


ಮಂಡ್ಯ ನಗರದ ಹೊರ ವಲಯದಲ್ಲಿರುವ ಕ್ಲಬ್ ವೊಂದರಲ್ಲಿ ಭಾನುವಾರ ಮತ್ತು ಸೋಮವಾರ ರಮ್ಮಿ ಪಂದ್ಯಾವಳಿ ಪೊಲೀಸ್ ಬಂದೋಬಸ್ತ್ ನಲ್ಲೇ ನಡೆದಿದೆ.

ನರ್ಸ್ ಆತ್ಮಹತ್ಯೆ: ವೈದ್ಯಾಧಿಕಾರಿ ಕಾಮಕೇಳಿ ಬಹಿರಂಗ


ಐದು ನಿಮಿಷ ನಿನ್ನ ಬಳಿ ಬಂದು ಹೋಗ್ತೇನೆ. ಬಾಗಿಲು ತೆಗೆದಿರು. ಒಪ್ಪದಿದ್ದರೆ ನಡತೆಗೆಟ್ಟವಳು ಎಂದು ಹೇಳುವುದಾಗಿ ಬೆದರಿಸುತ್ತಿದ್ದ ವೈದ್ಯಾಧಿಕಾರಿ. ಇದನ್ನು ಮೇಲಧಿಕಾರಿಗಳಿಗೆ ತಿಳಿಸಿದರೂ ಈತನ ಕಿರುಕುಳ ನಿಲ್ಲದ ಕಾರಣ ನರ್ಸ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೆಟ್ಟಿದ್ದಕ್ಕಿಂತ ಕಟಾವೇ ಹೆಚ್ಚು !


ಅಭಿವೃದ್ಧಿ ನೆಪದಲ್ಲಿ ಮರಗಳ ಬುಡಕ್ಕೆ ಕೊಡಲಿ ಏಟು ನೀಡುವ ಅಧಿಕಾರಿಗಳು, ಅದಕ್ಕೆ ಪರ್ಯಾಯವಾಗಿ ಸಸಿಗಳನ್ನು ನೆಡುವುದಾಗಿ ಹೇಳುತ್ತಾರೆಯೇ ಹೊರತು ಕೆಲಸವಂತೂ ಆಗಿಲ್ಲ. ಮತ್ತೆ ಇದು ನೆನಪಿಗೆ ಬರುವುದು ಮತ್ತೊಂದು ಸರಣಿ ಮರಗಳ ಹತ್ಯೆ ಸಂದರ್ಭದಲ್ಲೇ !

ನೃತ್ಯ, ಸುತ್ತೂರು ಜಾತ್ರೆ, ಜಾಗೃತಿ ಜಾಥಾ

ಬುಲೇವಾರ್ಡ್ ನ ಕತೆ, ವ್ಯಥೆ


ಹೆಸರು ನರಸಿಂಹರಾಜ ಬುಲೇವಾರ್ಡ್ ಮಾರ್ಗ. ಫ್ರೆಂಚ್ ಮೂಲದ ಬುಲೇವಾರ್ಡ್ ಪದದ ಅರ್ಥ 'ಸಾಲು ಮರಗಳ ವಿಶಾಲ ರಾಜ ಮಾರ್ಗ' ಎಂದು . ಆದರೆ ಅಭಿವೃದ್ಧಿ ದಾಹ ಹಿಂದಿನ ಎಲ್ಲವನ್ನೂ ಕಿರಿದುಗೊಳಿಸುತ್ತಿದೆ ಎಂಬುದಕ್ಕೆ ಈ ಮಾರ್ಗ ಸದ್ಯದ ಉದಾಹರಣೆ.

ಘಟಿಕೋತ್ಸವ: ಇನ್ಮುಂದೆ ಕಪ್ಪು ಗೌನ್ ಗೆ ಟಾಟಾ


ಇನ್ಮುಂದೆ ಘಟಿಕೋತ್ಸವದಲ್ಲಿ ಬ್ರಿಟಿಷ್ ಸಂಸ್ಕ್ರತಿಯ ಕಪ್ಪು ಗೌನ್, ಮಾರ್ಟರ್ ಬೋರ್ಡ್ ಬದಲು ದೇಸಿ ಸಂಸ್ಕ್ರತಿ ಬಿಂಬಿಸುವ ಮೈಸೂರು ಪೇಟ ಮತ್ತು ಪೋಷಾಕು ಘಟಿಕೋತ್ಸವದಲ್ಲಿ ಪದವೀಧರರ ಮೈ-ಮನಗಳನ್ನು ಆವರಿಸಿಕೊಳ್ಳಲಿದೆ. ಇದನ್ನು ಮೈಸೂರು ವಿವಿ ಜಾರಿಗೆ ತರಲಿದೆ.

ದಿಕ್ಕೆಟ್ಟ ಗಿರಿಜನರಿಗೆ ಎತ್ತುಗಳ ಸಾವಿನ ಬರ ಸಿಡಿಲು


ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಫಲಾನುಭವಿಗಳಿಗೆ ವಿತರಿಸಿದ ಉಳುಮೆ ಎತ್ತುಗಳು ಸರಣಿಯೋಪಾದಿಯಲ್ಲಿ ಮೃತಪಡುತ್ತಿದ್ದು, ಈವರೆಗೆ ಒಟ್ಟು 10 ಜಾನುವಾರುಗಳು ಅಸುನೀಗಿವೆ.

ಬರುತ್ತಿದ್ದಾರೆ ಗಣತಿಗೆ... ಮಾಹಿತಿ ಕೊಡಿ


ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳವಾರ 'ಸಮಗ್ರ ಮಕ್ಕಳ ಗಣತಿ-2010'ಅನ್ನು ಆರಂಭಿಸಿದ್ದು ,ಇದರಲ್ಲಿ ಹತ್ತಾರು ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಇವರಿಗೆ ಸಹಕಾರ ನೀಡಬೇಕೆಂದು ಡಿಡಿಪಿಐ ಕೋರಿದ್ದಾರೆ.

ದೇವರ ಹೆಸರಿನಲ್ಲಿ ಉದ್ಯಾನ ಸ್ವಾಹಕ್ಕೆ ಸನ್ನಾಹ


ನಗರದ ತೊಣಚಿಕೊಪ್ಪಲು ಬಡಾವಣೆಯ ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಿ, ಉದ್ಯಾನವನ್ನೇ ನುಂಗುವ ಪ್ರಯತ್ನ ಸದ್ದಿಲ್ಲದೇ ಆರಂಭಗೊಂಡಿದೆ. ಇದಕ್ಕೆ ಸ್ಥಳೀಯ ಪಾಲಿಕೆ ಸದಸ್ಯರ ಪರೋಕ್ಷ ಬೆಂಬಲವೂ ಇದೆ.

ಆನೆ ಸಾಕಲು ಬಿಳಿಯಾನೆ


ಒಂದೆಡೆ ತುಂಬಿ ತುಳುಕುತ್ತಿರುವ ಅಧಿಕಾರಿಗಳು, ಮತ್ತೊಂದೆಡೆ ಕೆಳಹಂತದ ಸಿಬ್ಬಂದಿಗಳು ಖಾಲಿ ಇರುವ ಸ್ಥಿತಿ ಇದ್ದಾಗಲೂ ವಿವಿಯಿಂದ ಹೊರದೂಡಲಾದ ಅಧಿಕಾರಿಗೆ ಅರಣ್ಯ ಪ್ರದೇಶದಲ್ಲಿ ಆಯಕಟ್ಟಿನ ಜಾಗವೊಂದನ್ನು ತೋರಿಸಬೇಕೆಂಬ ಕಾರಣಕ್ಕಾಗಿಯೇ ಆನೆ ಯೋಜನೆ ರೂಪಿಸಿರುವುದು ಬಿಳಿಯಾನೆ ಸೃಷ್ಟಿಸಿದ್ದಲ್ಲದೇ ಮತ್ತೇನು ?

ಬಿಜೆಪಿ ನಗರ ಅಧ್ಯಕ್ಷ ಹುದ್ದೆಗೆ ಪೈಪೋಟಿ ಶುರು


ಬಿಜೆಪಿ ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಈಗ ಪೈಪೋಟಿ ಶುರುವಾಗಿದೆ. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಸಾಂಸ್ಥಿಕ ಚುನಾವಣೆ ನಡೆಯುತ್ತಿದ್ದು, ಜ. 6 ರಂದು ನಗರ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.

ಕರಾವಳಿ ಉತ್ಸವ, ಜಾತ್ರಾ ನೋಟ

ರಾಮ್ ಸನ್ಸ್ ನಲ್ಲಿ ಕಲೆ ಅನಾವರಣ

ಜಿರಾಫೆ ಮರಿ ದತ್ತು ಪಡೆದ ಜಂಬೋ


ವಾರದ ಹಿಂದಷ್ಟೆ ಮೃಗಾಲಯದ ಅತಿಥಿಯಾಗಿ ಆಗಮಿಸಿರುವ ಜಿರಾಫೆ ಮರಿಯನ್ನು ಕ್ರಿಕೆಟಿಗ ಅನಿಲ್ ಕುಂಬ್ಳೆ ದತ್ತು ಪಡೆದರು.

ಸತ್ಯನ್ ಹೆಸರಲ್ಲಿ ರಾಜ್ಯ ಪ್ರಶಸ್ತಿ: ಚಿಂತನೆ


ಇತ್ತೀಚಿಗೆ ನಿಧನರಾದ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರ ಪತ್ರಕರ್ತ ಟಿ.ಎನ್. ಸತ್ಯನ್ ಅವರ ಹೆಸರಿನಲ್ಲಿ ಛಾಯಾಚಿತ್ರ ಪತ್ರಕರ್ತರಿಗೆ ರಾಜ್ಯ ಮಟ್ಟದ ಪ್ರಶಸ್ತಿಯೊಂದನ್ನು ಸ್ಥಾಪಿಸಲು ಕರ್ನಾಟಕ ಫೋಟೊ ನ್ಯೂಸ್ (ಕೆಪಿಎನ್) ಚಿಂತಿಸುತ್ತಿದೆ.

ಮೃಗಾಲಯ ಎದುರು ಸಂಚಾರ ಒತ್ತಡ


ಮೈಸೂರು ಮೃಗಾಲಯದ ಎದುರು ಸೃಷ್ಟಿಯಾಗುತ್ತಿರುವ ಸಂಚಾರ ಒತ್ತಡಕ್ಕೆ ಬೇಕಾಗಿದೆ ಮೇಜರ್ ಸರ್ಜರಿ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಬಡಾವಣೆಯ ಅವರಿವರ ಮನೆ ಮುಂದೆ ವಾಹನ ನಿಲ್ಲಿಸುವಂತಾಗಿದೆ. ಇದರಿಂದ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ.

ಆಸ್ತಿ ತೆರಿಗೆ ಪಾವತಿಯಲ್ಲೂ 'ಅಡ್ಡದಾರಿ'


ಮೈಸೂರಿನ ದೇವರಾಜ ಅರಸು ರಸ್ತೆ ಸೇರಿ ನಗರ ಹೃದಯ ಭಾಗದ ಕೆಲವು ವಾಣಿಜ್ಯ ಮಳಿಗೆ ಮಾಲೀಕರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಯಲ್ಲೂ 'ಅಡ್ಡ ದಾರಿ' ಹಿಡಿದಿರುವ ಅಂಶ ಬೆಳಕಿಗೆ ಬಂದಿದೆ.