ಮೈಸೂರಲ್ಲಿ ಕಳ್ಳತನಕ್ಕೂ ‘ಯುವೋತ್ಸಾಹ‘

ವಿಕ ಸುದ್ದಿಲೋಕ ಮೈಸೂರು
ಜೀವನ ಶೈಲಿಯಲ್ಲಿ ಬದಲಾವಣೆಯಾದಂತೆ ಮೈಸೂರಿನಲ್ಲಿ ಕಳ್ಳತನದ ಮಾರ್ಗದಲ್ಲೂ ಬದಲಾವಣೆ ಪರ್ವ.
ಮನೆಗಳ್ಳತನದತ್ತ ಚಿತ್ತ ಹರಿಸುತ್ತಿದ್ದ ಚೋರರು ಅದು ಕಷ್ಟವಾಗುತ್ತಿದೆ ಎನ್ನುವ ಕಾರಣಕ್ಕೆ ಈಗೇನಿದ್ದರೂ ಗುಂಪು ಕಳ್ಳತನಕ್ಕಿಂತ ಏಕವ್ಯಕ್ತಿ ಕಳ್ಳತನದ ಕಡೆಯೇ ಗಮನಹರಿಸತೊಡಗಿದ್ದಾರೆ. ಅದರ ರೂಪವೇ ಮೈಸೂರು ಪೊಲೀಸರಿಗೆ ದೊಡ್ಡ ತಲೆನೋವಾಗಿರುವ ಸರಗಳ್ಳತನ.
ಇಡೀ ಸಮಾಜವೇ ಬದಲಾವಣೆ ಪರ್ವದಲ್ಲಿರುವಾಗ ನಾವೇಕೆ ಬದಲಾಗಬಾರದು ಎನ್ನುವ ಪ್ರಶ್ನೆಯೊಂದಿಗೆ ಕಳ್ಳರ ಸಮೂಹ ಭಿನ್ನ ಹಾದಿ ಹಿಡಿಯ ತೊಡಗಿದೆ. ವಯಸ್ಸಾದವರಿಗಿಂತ ಯುವ ಪಡೆಯೇ ಕಳ್ಳತನದತ್ತ ಮುಖ ಮಾಡಿರುವುದು ಕೇವಲ ಮೂರು ವರ್ಷದಲ್ಲೇ ಕಳ್ಳತನದ ಮಾರ್ಗಕ್ಕೆ ಯುವೋತ್ಸಾಹ ಬಂದಿರುವುದನ್ನು ತೋರಿಸುತ್ತದೆ.
ಬದಲಾವಣೆಯ ಈ ಪರಿ: ಮೂರು ವರ್ಷದಲ್ಲೇ ಮೈಸೂರಿನಲ್ಲಿ ಕಳ್ಳತನದ ಬದಲಾವಣೆಆಗಿರುವುದನ್ನು ಪೊಲೀಸ್ ಅಂಕಿ ಸಂಖ್ಯೆಗಳೇ ಹೇಳುತ್ತವೆ.
೨೦೦೭ರಲ್ಲಿ ನಗರದಲ್ಲಿ ದಾಖಲಾದ ಮನೆಗಳ್ಳತನದ ಸಂಖ್ಯೆ ೭೩೬. ಇದರಲ್ಲಿ ರಾತ್ರಿ ಕಳ್ಳತನ ೧೫೬. ಇತರೆ ಕಳ್ಳತನ ಪ್ರಕರಣ ೫೭೩. ಇದು ೨೦೦೮ರಲ್ಲೂ ಏರಿಕೆಯಾಯಿತು. ದಾಖಲಾದ ೮೨೪ ಪ್ರಕರಣದಲ್ಲಿ ರಾತ್ರಿ ಕಳವು ೧೭೨. ಅದೇ ಕಳೆದ ವರ್ಷ ರಾತ್ರಿ ಮನೆಗಳವಿನ ಸಂಖ್ಯೆಯಲ್ಲಿ ಕೊಂಚ ಇಳಿಮುಖ ಕಂಡಿದೆ. ಈ ಸಂಖ್ಯೆ ಇಳಿದಿದ್ದು ೧೭೨ರಿಂದ ೧೩೮ಕ್ಕೆ. ಹಗಲು ಕಳ್ಳತನ ಪ್ರಕರಣದಲ್ಲೂ ಇದೇ ಸ್ಥಿತಿ. ೨೦೦೭ರಲ್ಲಿ ೧೭ರಿಂದ ೨೦೦೮ಕ್ಕೆ ೨೨ಕ್ಕೆ ಏರಿಕೆ. ೨೦೦೯ರಲ್ಲಿ ಅದು ೧೩ಕ್ಕೆ ಇಳಿಕೆ ಕಂಡಿರುವುದು ಗಮನಾರ್ಹ. ಇದೇ ರೀತಿ ದರೋಡೆಯ ಸಂಖ್ಯೆಯನ್ನೂ ಗಮನಿಸಿದರೆ ಅಲ್ಲಿಯೂ ಇಳಿಮುಖವಾಗಿದೆ. ೨೦೦೭ರಲ್ಲಿ ೭೧ ದರೋಡೆ ಪ್ರಕರಣಗಳನ್ನು ಕಂಡ ಮೈಸೂರು ನಗರ ೨೦೦೯ರಲ್ಲಿ ೪೪ ಮಾತ್ರ.
ಇನ್ನು ಸರಗಳ್ಳತನದ ಸಂಖ್ಯೆ ಸಾಕಷ್ಟು ಏರಿದೆ. ೨೦೦೯ರಲ್ಲಿ ದಾಖಲಾದ ಸರಗಳ್ಳತನದ ಪ್ರಕರಣಗಳ ಸಂಖ್ಯೆ ೯೫. ೨೦೦೮ರಲ್ಲಿ ಇದು ೬೧, ೨೦೦೭ರಲ್ಲಿ ಕೇವಲ ೩೨. ಎರಡೇ ವರ್ಷದ ಅಂತರದಲ್ಲಿ ಸರಗಳ್ಳತನ ಪ್ರಮಾಣ ಮೂರುಪಟ್ಟು ಹೆಚ್ಚಾಗಿದೆ.
ವೃತ್ತಿಪರರು ನಡೆಸುವ ಡಕಾಯಿತಿಯಲ್ಲಿ ಕೊಂಚ ಮಾತ್ರ ಕೊಂಚ ಏರಿಕೆಯಾಗಿದೆ. ೨೦೦೭ರಲ್ಲಿ ನಗರದಲ್ಲಿ ೪, ೨೦೦೮ರಲ್ಲಿ ೧ ಪ್ರಕರಣ ದಾಖಲಾದರೆ, ೨೦೦೯ರಲ್ಲಿ ಇದು ಏರಿದ್ದು ೯ಕ್ಕೆ. ಆದರೆ ಪೊಲೀಸರು ತುಮಕೂರು ಜಿಲ್ಲೆಯಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣವನ್ನೂ ಬೇಧಿಸಿದ್ದು ಸಮಾಧಾನಕರ ಸಂಗತಿ.
ಶೈಲಿ ಬದಲಾವಣೆಗೆ ಕಾರಣವಾದರೂ ಏನು: ಕಳ್ಳತನ ಎನ್ನುವುದು ಅಪರಾಧವಾದರೂ ಅದರಲ್ಲಿ ಡಕಾಯಿತಿಯಿಂದ ಹಿಡಿದು ಸಣ್ಣ ಕಳ್ಳತನದವರೆಗೂ ಸೇರುತ್ತದೆ. ಆದರೆ ಡರೋಡೆ, ಮನೆಗಳ್ಳತನದೊಂದಿಗೆ ಸರಗಳ್ಳತನದತ್ತ ವೃತ್ತಿಪರತೆ ರೂಪಿಸಿಕೊಳ್ಳುವತ್ತ ಕಳ್ಳನ ಚಿತ್ತ ಹರಿಯುತ್ತಿದೆ.
ದರೋಡೆ ಇಲ್ಲವೇ ಭಾರೀ ಕಳ್ಳತನಗಳಿಗೆ ತಿಂಗಳಿನಿಂದ ಸಂಚು ರೂಪಿಸಬೇಕು. ಇದಕ್ಕಾಗಿ ಸೂಕ್ತ ಹಾಗೂ ವಿಶ್ವಾಸಾರ್ಹ ತಂಡವನ್ನು ಕಟ್ಟಿಕೊಳ್ಳಬೇಕು. ಕೊಂಚ ಭಿನ್ನಾಭಿಪ್ರಾಯ ಬಂದರೆ ಸಿಕ್ಕಿ ಬೀಳುವುದು ಗ್ಯಾರಂಟಿ. ಜತೆಗೆ ಕಳ್ಳರಲ್ಲಿಯೇ ಪರಸ್ಪರ ವಿಶ್ವಾಸಾರ್ಹತೆ ಪ್ರಮಾಣ ಕಡಿಮೆಯಾಗುತ್ತಿದೆ. ಇವೆಲ್ಲದರ ಜತೆಗೆ ಭದ್ರತೆ ಹಿಂದೆಂಗಿಂತಲೂ ಹೆಚ್ಚಾಗಿರುವುದರಿಂದ ಪೊಲೀಸ್ ತಂತ್ರಗಳನ್ನು ಬೇಧಿಸುವ ಚಾಣಾಕ್ಷತೆ ಬೇಕು. ಸಿಕ್ಕಿ ಬಿದ್ದರೆ ಶಿಕ್ಷೆ ಪ್ರಮಾಣವೂ ಹೆಚ್ಚು.
ಅದೇ ಸರಗಳ್ಳತನಕ್ಕೆ ನಿಮಿಷಗಳ ಚಾಣಾಕ್ಷತೆ ಸಾಕು. ಸರ ಕಿತ್ತುಕೊಂಡು ಪರಾರಿಯಾದರೆ ಆಯ್ತು. ಹಣ ಸಂಪಾದನೆಯೂ ಸುಲಭ. ಹಾಗೇನಾದರೂ ಆದೃಷ್ಟ ಕೈ ಕೊಟ್ಟು ಸಿಕ್ಕಿ ಬಿದ್ದರೂ ಸರಗಳ್ಳತನಕ್ಕೆ ಸಜೆಯೂ ಕಡಿಮೆಯೆ. ಸರಗಳ್ಳತನ ಮಾಡಿದು ಸಿಕ್ಕಿ ಬಿದ್ದವರೂ ಅತ್ಯಲ್ಪ. ಅದರಲ್ಲಿ ಶಿಕ್ಷೆಗೆ ಗುರುಯಾದವರ ಸಂಖ್ಯೆ ಇನ್ನೂ ಕಡಿಮೆ. ಇದರಿಂದ ಹಣ ಗಳಿಸಲು ಸುಲಭ ಮಾರ್ಗಗಳ ಕಡೆ ಗಮನಹರಿಸಲು ಶುರು ಮಾಡಿರುವುದರಿಂದ ಶೈಲಿಯಲ್ಲೂ ಬದಲಾಗಿದೆ.
ಒಪ್ಪಿಕೊಂಡಿದ್ದಾರೆ ಕಳ್ಳರು: ತಾವು ಶೈಲಿ ಬದಲಾವಣೆ ಮಾಡಿಕೊಂಡಿರುವುದನ್ನು ಸ್ವತಃ ಕಳ್ಳರೇ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಕಳೆದ ಮೂರು ತಿಂಗಳಿನಲ್ಲಿ ಮೈಸೂರು ಪೊಲೀಸರು ಬೇಧಿಸಿದ ತಂದೆ-ಮಗು ಕಿಡ್ನಾಪ್ ಪ್ರಕರಣದ ಆರೋಪಿಗಳು ಬಹುತೇಕ ಯುವಕರೇ. ಅವರೇ ಪೊಲೀಸರ ಮುಂದೆ ಹೇಳಿಕೊಂಡಂತೆ, ಕೃತ್ಯದ ಹಿಂದೆ ಏಕೈಕ ಉದ್ದೇಶ ದಿಢೀರ್ ಹಣ ಮಾಡುವುದು. ಅದೇ ರೀತಿ ಸರಗಳ್ಳತನ ಮಾಡಿ ಸಿಕ್ಕಿ ಬಿದ್ದವರೂ ಹಣಕ್ಕಾಗಿ ಈ ದಾರಿ ಹಿಡಿದಿದ್ದನ್ನು ಒಪ್ಪಿಕೊಂಡಿದ್ದಾರೆ.
ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎನ್ನುವುದು ಗಾದೆ ಮಾತು. ಅದನ್ನು ನಮ್ಮ ಹೊಸ ಟ್ರೆಂಡ್‌ನ ಕಳ್ಳರು, ಸಣ್ಣ(ಸರ)ಗಳ್ಳತನ ಮಾಡಿ ತಪ್ಪಿಸಿಕೊಂಡರೆ ನೂರಾರು ಕಳ್ಳತನಕ್ಕೆ ದಾರಿ ಎಂದು ಬದಲಾಯಿಸಿಕೊಂಡಂತಿದೆ.
============
ಮೈಸೂರಿನಲ್ಲಿ ಕಳ್ಳತನದ ಶೈಲಿಯಲ್ಲೂ ಬದಲಾವಣೆ ಆಗುತ್ತಿರುವುದು ನಿಜ. ಸುಲಭವಾಗಿ ಹಣ ಸಂಪಾದನೆಯೇ ಮೂಲ ಕಾರಣ. ಇದಕ್ಕಾಗಿ ಪೊಲೀಸ್ ಕಾರ‍್ಯಾಚರಣೆ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ
-ಸುನೀಲ್ ಅಗರವಾಲ್, ಪೊಲೀಸ್ ಆಯುಕ್ತರು.
=============

ಘಟನೆ-೧(೨೪/೧೧/೦೯)
ಆಗಬೇಕಾಗಿದ್ದು ಅಂತರಾಷ್ಟ್ರೀಯ ಕ್ರಿಕೇಟರ್,ಓದಿದ್ದು ಅನಿಮೇಶನ್, ತಲೆ ಬಳಸಿಕೊಂಡಿದ್ದು ಡಕಾಯಿತಿಗೆ....ಕ್ರಿಕೆಟ್ ಲೋಕದಿಂದ ಡಕಾಯಿತಿ ಪಾತಕಕ್ಕೆ ಸಿಲುಕಿದ ಬೆಂಗಳೂರಿನ ಕಿಶೋರ ಎಂಬಾತ ಜೈಲು ಸೇರಿದ ಕಥೆ.
ಆರ್‌ಪಿಸಿ ಲೇಔಟ್ ನಿವಾಸಿಮೋಹನಜೆಟ್ಟಿ ಎಂಬುವವರ ಪುತ್ರನಾದ ಕಿಶೋರ್‌ಗಿನ್ನೂ ೨೨ರ ಹರೆಯ. ಐದು ವರ್ಷದ ಹಿಂದೆ ಮಲೇಷಿಯಾದಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಪಂದ್ಯದ ೧೯ ವರ್ಷದೊಳಗಿನ ವಿಭಾಗದಲ್ಲಿ ಪಾಲ್ಗೊಂಡು ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಮುಡಿಗೇರಿಸಿದ್ದ. ಆರೋಗ್ಯದ ಕಾರಣಕ್ಕೆ ಕ್ರಿಕೆಟ್‌ನಿಂದ ದೂರವಾದವನಿಗೆ ಜೈಲಿನಲ್ಲಿದ್ದು ಬಂದಿದ್ದ ಕುಖ್ಯಾತನೊಬ್ಬ ಹತ್ತಿರವಾದ. ಕಿಶೋರನಲ್ಲಿರುವ ಚಾಣಾಕ್ಷತನವನ್ನು ನೋಡಿದ ಆತ ದಿಢೀರ್ ಶ್ರೀಮಂತನಾಗುವ ಆಸೆ ಹುಟ್ಟಿಸಿ ಡಕಾಯಿತಿಗಳಿಗೆ ಇಳಿಸಿದ. ವಯೋ ಸಹಜ ಆಸೆಯಂತೆ ಕಿಶೋರ್ ಡಕಾಯಿತಿಗಳಿಗೆ ಇಳಿದು ಈಗ ಜೈಲಿನ ಅತಿಥಿ.

ಘಟನೆ-೨(೧೮/೧೨/೦೯)
ದಿಢೀರ್ ಹಣ ಮಾಡಬೇಕು ಎನ್ನುವ ಕಾರಣಕ್ಕೆ ಸರಗಳ್ಳತನಕ್ಕೆ ಇಳಿದು ಸಿಕ್ಕಿ ಬಿದ್ದವರು ಶ್ರೀರಂಗಪಟ್ಟಣ ತಾಲೂಕು ಕೆಆರ್‌ಎಸ್‌ನ ಹರೀಶ್‌ಕುಮಾರ್(೨೨), ಹೊಸ ಆನಂದೂರು ಗ್ರಾಮದ ಎಚ್.ಪಿ.ಕೃತನ್(೨೦), ಶಶಿಕುಮಾರ್(೨೧), ಬಸ್ತಿಪುರದ ಶೇಖರ(೨೩), ಮೈಸೂರು ಅರವಿಂದ ನಗರದ ಚೇತನಕುಮಾರ್(೨೧).
ಶಿಕ್ಷಣ ಪೂರೈಸದೇ ಈ ಕಾರ‍್ಯಾಚರಣೆ ನಡೆಸುತ್ತಿದ್ದ ಇವರು ಮೊದಲ ಬಾರಿ ಅಪರಾಧ ಪ್ರಕರಣದಲ್ಲಿ ಸಿಲುಕಿದ್ದಾರೆ. ಮೈಸೂರಿನ ಹೊರ ವಲಯದಲ್ಲಿ ಡರೋಡೆ ಮಾಡಲು ಸಜ್ಜಾಗಿದ್ದಾಗ ಸಿಕ್ಕಿ ಬಿದ್ದವರಿವರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ