ತರಾತುರಿ ಬೇಡ, ಪ್ರಯೋಗ ನಡೆಯಲಿ

ಪ್ರತಿ ಸಂಚಿಕೆಯಲ್ಲೂ ದಸರಾ ಪ್ರಾಧಿಕಾರ ಕುರಿತು ವ್ಯವಸ್ಥಿತವಾಗೇ ರೂಪುಗೊಳ್ಳಬೇಕು, ಕಾಟಾಚಾರಕ್ಕೆ ಮತ್ತೊಂದು ಪ್ರಾಧಿಕಾರ ಬಲಿಯಾಗಬಾರದು ಎಂಬುದೇ  ಗಣ್ಯರು ವ್ಯಕ್ತಪಡಿಸುತ್ತಿರುವ ಒಕ್ಕೊರಲ ಅಭಿಪ್ರಾಯ.

`ವಿಕ ಅಭಿಯಾನ'

ನಾಡಹಬ್ಬದ ಪ್ರಾಧಿಕಾರದ ವ್ಯಾಪ್ತಿ ಎಂಥದ್ದು? ಅದು ಕೇವಲ ದಸರಾ ಕುರಿತೇ ಆಲೋಚಿಸಬೇಕೆ? ಅಥವಾ ಒಟ್ಟು ಮೈಸೂರು ಅಭಿವೃದ್ಧಿಯತ್ತ ಗಮನಹರಿಸಬೇಕೇ- ಈ ಕುರಿತೇ ಗಣ್ಯರು ಚರ್ಚಿಸಿದ್ದಾರೆ.

ಕಟುಕರ ಕೈಗೇ ಅಧಿಕಾರದ `ಕೊಡಲಿ'

ಪಿ.ಓಂಕಾರ್ ಮೈಸೂರು
ಪಾರಂಪರಿಕ,ಸಾಂಸ್ಕೃತಿಕ ನಗರಿ ಮೈಸೂರಿಗೆ `ಹಸಿರು ತೋರಣ'ದಂತಿರುವ,ಅಳಿದುಳಿದ ಸಾಲುಮರಗಳಿಗೆ  ಇನ್ನು ಉಳಿಗಾಲವಿಲ್ಲ !
-ಹಸಿರು ಹನನಕ್ಕೆ ಸರಳ ಅವಕಾಶಗಳಿಲ್ಲದಿದ್ದರೂ ಅಭಿವೃದ್ದಿಯ `ಮಾಯೆ` ಇತ್ತೀಚಿನ ವರ್ಷಗಳಲ್ಲಿ ನಗರದ ಮೂರ್‍ನಾಲ್ಕು ಸಾವಿರ ಮರಗಳನ್ನು ಉರುಳಿಸಿದೆ. ಇನ್ನು ಮುಂದೆ ಕೇಳುವಂತೆಯೇ ಇಲ್ಲ,`ಮಾಯೆ'ಯ ವಶದಲ್ಲಿರುವ ಸ್ವಹಿತಾಸಕ್ತರ ಕೈಗೇ ಸರಕಾರ `ಮರ ಪ್ರಾಧಿಕಾರ 'ಅಧಿಕಾರದ ಕೊಡಲಿ ಕೊಡುವ ಮೂಲಕ ಅಭಿವೃದ್ಧಿಗೆ `ಅಡ್ಡಿ'ಯಾದ ಮರಗಳ ತೆರವಿಗೆ ಸರಳ ಮಾರ್ಗ ತೋರಿಸಿದೆ.    
ಅಂದರೆ ?: ಹಿಂದೆ, ನಗರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಮರ ಕಡಿಯುವುದು ಸುಲಭವಿರಲಿಲ್ಲ. ಅರಣ್ಯಾಧಿಕಾರಿ, ಸೇವಾ ಸಂಸ್ಥೆ ಪ್ರತಿನಿಧಿಗಳನ್ನು ಒಳಗೊಂಡ `ವೃಕ್ಷ ನ್ಯಾಯಾಲಯ'ದ ಮುಂದೆ ವಿಷಯ ಪ್ರಸ್ತಾಪವಾಗಿ, ಆಕ್ಷೇಪಣೆ ಆಹ್ವಾನಿಸಿ,ವಿಚಾರಣೆ ನಡೆದು ತೀರಾ ಅಗತ್ಯ ಎನ್ನಿಸಿದರೆ  ಮಾತ್ರ ಅನುಮತಿ ನೀಡಲಾಗುತ್ತಿತ್ತು.

ಶಿಸ್ತಿನ ದಸರೆಗೆ ಭೂಮಿಕೆಯಾಗಲಿ

ಪ್ರಾಧಿಕಾರ ಮೂರು ತಿಂಗಳ ವ್ಯವಸ್ಥೆಯಾಗಬೇಕೇ ? ವರ್ಷಪೂರ್ತಿ ಕ್ರಿಯಾಶೀಲವಾಗಬೇಕಾದ ಸಂಸ್ಥೆ ಯಾಗಬೇಕೇ ? ಎಂಬುದೇ ಚರ್ಚೆಯ ಮೂಲ ನೆಲೆ.
ಆ ಕುರಿತೇ - ಇಂದಿನ ಗಣ್ಯರು ಪ್ರಸ್ತಾಪಿಸಿದ್ದಾರೆ.

ಯಶಸ್ಸಿಗೆ ವಿಎಂಐ ಸೂತ್ರ

ಪ್ರಾಧಿಕಾರ ಎನ್ನುವುದು ನಾಡಹಬ್ಬ ವನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಮಾಡುವ, ಮೈಸೂರಿನ ಅಭಿವೃದ್ಧಿಗೆ ಪೂರಕವಾಗುವ ವೇದಿಕೆಯಾಗಬೇಕು. ಇದಕ್ಕೆ ಪೂರಕವಾಗಿ ದಸರೆ ಕಾರ್‍ಯಕ್ರಮ ಗಳಿಗೂ ಮೂರು ಹಂತದ ಸಮಿತಿ ಗಳಿರಬೇಕು. ಒಂದು ದೂರದೃಷ್ಟಿಯ ಸಮಿತಿ(ವಿಷನ್ ಕಮಿಟಿ) ಮತ್ತೊಂದು ನಿರ್ವಹಣಾ ಸಮಿತಿ(ಮಾನಿಟರಿಂಗ್ ಕಮಿಟಿ), ಹಾಗೂ ಅನುಷ್ಠಾನ ಸಮಿತಿ (ಇಂಪ್ಲಿಮೆಂಟೇಷನ್ ಕಮಿಟಿ).
ದಸರೆ ಹೇಗಿರಬೇಕು, ಕಾರ್ಯಕ್ರಮಗಳ ಗಂಭೀರತೆ, ಅಭಿ ವೃದ್ಧಿ ಪೂರ್ವಪರ ಚರ್ಚೆಯಾಗಿ ಒಂದು ಸೂಕ್ತ ರೂಪರೇಷೆ ಇಲ್ಲೇ ಸಿದ್ಧವಾಗಬೇಕು. ವಿವಿಧ ಕ್ಷೇತ್ರದಲ್ಲಿ ತಜ್ಞರಾದವರು, ಸಾಧಕರನ್ನು ವಿಷನ್ ಕಮಿಟಿಗೆ ಆಯ್ಕೆ ಮಾಡಬೇಕು.
೨ನೇ ಹಂತದಲ್ಲಿ ಬೇಕಾಗಿದ್ದು ಮಾನಿಟರಿಂಗ್ ಕಮಿಟಿ. ಇಲ್ಲಿ ದಸರೆಗೆ ಆಗುವ ಕೆಲಸಗಳು ಹೇಗೆ ನಡೆಯುತ್ತಿವೆ. ತಪ್ಪಾಗಿದ್ದರೆ ಅದನ್ನು ಗುರುತಿಸಿ ಹೇಳುವ, ಯೋಜನೆಯಲ್ಲೇ ಆಗುತ್ತಿರುವ ಲೋಪಗಳ ಮೇಲೆ ನಿಗಾ ಇಡುವುದು ಈ ಸಮಿತಿ ಹೊಣೆ.

ದಸರಾ ಪ್ರಾಧಿಕಾರ ಹೇಗಿರಲಿ

ಅರವಿಂದ ನಾವಡ ಮೈಸೂರು
ನಾಡಹಬ್ಬ ದಸರಾ ನಡೆಸಲೊಂದು ಪ್ರತ್ಯೇಕ ಪ್ರಾಧಿಕಾರ ಬೇಕೆಂಬ ಚಿಂತನೆ ಕೊನೆಗೂ ಮೂರ್ತ ಸ್ವರೂಪ ಪಡೆಯುವ ಹೊತ್ತು ಬಂದಿದೆ. ಈ ದಸರೆ ಮುಗಿಯುವವರೆಗೂ ಮೊಟ್ಟೆಯಾಗಿಯೇ ಇತ್ತು. ಅದಕ್ಕೆ ಕಾವು ಕೊಟ್ಟರೆ ಮರಿಯಾದೀತೆಂಬ ವಿಶ್ವಾಸವೂ ಬಹಳಷ್ಟು ಮಂದಿಯಲ್ಲಿರಲಿಲ್ಲವೇನೋ ? ಅದಕ್ಕೇ ದಿನದೂಡುವುದರಲ್ಲೇ ಆ ಮೊಟ್ಟೆ ಹಳತಾಯಿತು.
ಈಗ ಮತ್ತೊಮ್ಮೆ ಪ್ರಾಧಿಕಾರದ ಅಗತ್ಯ ಪ್ರಸ್ತಾಪವಾಗಿದೆ. ಆದರೆ ಮೊದಲ ಬಾರಿಗೆ ಕಾಲನಿಗದಿಗೊಂಡಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರೇ ನಾಲ್ಕು ತಿಂಗಳೊಳಗೆ ಅದರ ಕುರಿತಾದ ಕರಡು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುವ ಬಗ್ಗೆ ಹೇಳಿದ್ದಾರೆ. ಒಂದು ಕರಡು ಸಿದ್ಧಗೊಳ್ಳುವ ಮುನ್ನ ಅದರ ಹಿಂದೆ ನಡೆಯಬಹುದಾದ ಕಸರತ್ತು ದೊಡ್ಡದೇ. ಸಾರ್ವಜನಿಕ ಅಭಿಪ್ರಾಯ ಸಂಗ್ರಹ, ಗಣ್ಯರ ಸಲಹೆ, ಹಿಂದೆ ದಸರಾ ಆಚರಿಸಿದಾಗಿನ ಅನುಭವಗಳ ಸಂಗ್ರಹ...ಹತ್ತು ಹಲವು ಮೂಲೆಗಳಿಂದ ಬರುವ ಒಳ್ಳೆಯದನ್ನು ಕ್ರೋಡೀಕರಿಸಿ ಕರಡನ್ನು ರೂಪಿಸುವುದು ಸಹಜವೇ.

ಒಕ್ಕೂಟ ಹೋರಾಟಕ್ಕೆ ೬೩ ವರ್ಷ

ಆರ್.ಕೃಷ್ಣ  ಮೈಸೂರು
ಅಗಸ್ಟ್ ೧೫. ಹೊಸದಿಲ್ಲಿಯಲ್ಲಿ ತ್ರಿವರ್ಣ ಧ್ವಜ ಹಾರುತ್ತಿದ್ದಂತೆ ಇಡೀ ದೇಶ ಸಂಭ್ರಮಪಟ್ಟಿತು. ಆದರೆ ಕರ್ನಾಟಕದ ಉತ್ತರದ ತುದಿ, ದಕ್ಷಿಣದ ಕೊನೆಯ ಭಾಗದಲ್ಲಿ ಸ್ವಾತಂತ್ರ್ಯೋತ್ಸವದ ಸಡಗರ ಕಾಣಲೇ ಇಲ್ಲ. ಅಲ್ಲಿ ಹೈದರಾಬಾದ್ ನಿಜಾಮ, ಇಲ್ಲಿ ಮೈಸೂರು ಸಂಸ್ಥಾನದ ಒಡೆಯರು ಒಕ್ಕೂಟದಲ್ಲಿ ಸೇರ್ಪಡೆಯಾಗಲು ಸಮ್ಮತಿಸಲೇ ಇಲ್ಲ. ಪರಿಣಾಮ ಈ ಎರಡೂ ಪ್ರಭುತ್ವಗಳ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ.
ತಮ್ಮ ಆಳ್ವಿಕೆಯ ಪ್ರದೇಶಗಳನ್ನು ಒಕ್ಕೂಟದಲ್ಲಿ ವಿಲೀನ ಮಾಡುವುದು ರಾಜರಿಗೆ ಬಿಟ್ಟ ವಿಚಾರ ಎಂದು ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಆಯ್ಕೆ ಇಟ್ಟಿದ್ದರು. ಅದನ್ನೇ ಮುಂದಿಟ್ಟುಕೊಂಡು ಮೈಸೂರು ಸಂಸ್ಥಾನದ ದಿವಾನ ಆರ್ಕಾಟ ರಾಮಸ್ವಾಮಿ ಜನರ ಕೈಗೆ ಅಧಿಕಾರ ಕೊಡಲು ಒಪ್ಪಲಿಲ್ಲ. ಜತೆಗೆ ಐಕ್ಯತೆಯ ಸಂಕೇತವಾದ ತ್ರಿವರ್ಣಧ್ವಜ ಹಾರಿಸಲೂ ಬಿಡಲಿಲ್ಲ. ಒಕ್ಕೂಟ ವ್ಯವಸ್ಥೆ ಸೇರಿಕೊಳ್ಳಲು ಮಹಾರಾಜರು ಸಮ್ಮತಿಸಿದರೂ ಜನರ ಸರ್ಕಾರ ದೂರದ ಮಾತಾಗಿಯೇ ಉಳಿಯಿತು.

ಬೀದಿಗೆ ಬೀಳಲಿದೆ ಸಾವಿರಾರು ರೈತ ಕುಟುಂಬ

ಎಂ.ಎಲ್.ರವಿಕುಮಾರ್ ಎಚ್.ಡಿ.ಕೋಟೆ
ಚಾಮಲಾಪುರ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಆತಂಕ ದೂರವಾಗಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಷ್ಟರಲ್ಲೇ, ಕೈಗಾರಿಕೆ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿ ಕಸಿದುಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ.
ಎಚ್.ಡಿ.ಕೋಟೆ ಮತ್ತು ಹುಣಸೂರು ತಾಲೂಕುಗಳ ಗಡಿಯಂಚಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಸುಮಾರು ೯ ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾಗಿದ್ದು, ಇದರಿಂದ ಸಾವಿರಾರು ರೈತ ಕುಟುಂಬಗಳು ಬೀದಿಗೆ ಬೀಳಲಿವೆ.
ತಾಲೂಕಿನ ಹಂಪಾಪುರ ಹೋಬಳಿ, ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳದ ಮನುಗನಹಳ್ಳಿ, ಶಂಖಹಳ್ಳಿ,ಆಲನಹಳ್ಳಿ ಮತ್ತು ಗಡಿ ಗ್ರಾಮದ ಕೆಲವು ಜಮೀನುಗಳು ಸೇರಿದಂತೆ ೯೯೦.೦೮ ಎಕರೆ ಮತ್ತು ಹುಣಸೂರು ತಾಲೂಕಿನ ಬೀಚನಹಳ್ಳಿ,ಹರದನಹಳ್ಳಿ, ದಳ್ಳಾಲಕೊಪ್ಪಲು ಸೇರಿದಂತೆ ೭ ಸಾವಿರ ಎಕರೆ , ಸಾಮಾಜಿಕ ಅರಣ್ಯ ವಲಯದ ೮೮೦ ಎಕರೆ ಪ್ರದೇಶವನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ಗುರುತಿಸಲಾಗಿದೆ.
ಸರಕಾರವೇ ಜಮೀನು ಸ್ವಾಧೀನಕ್ಕೆ ಮುಂದಾಗಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಅನಕ್ಷರಸ್ಥರೇ ಹೆಚ್ಚಿರುವ ಗ್ರಾಮಸ್ಥರಿಗೆ ಮಂಡಳಿಯ ಭೂಸ್ವಾಧೀನ ಅಧಿಕಾರಿಗಳು ನೋಟಿಸ್ ನೀಡಿ ಮೂರು ತಿಂಗಳಾಗಿದೆ. ಇದರಲ್ಲಿ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಲಾಗುವುದು. ಆಕ್ಷೇಪಣೆ ಇದ್ದಲ್ಲಿ ೩೦ ದಿನದೊಳಗೆ ಲಿಖಿತ ರೂಪದಲ್ಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
 ಕೆಲವು ರೈತರು ಜಮೀನನ್ನು ಕೊಡುವುದಿಲ್ಲ ಎಂಬುದನ್ನು ದಾಖಲೆಗಳ ಮೂಲಕ ವಿವರಿಸಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೆ ಕೆಲವರು ಎಕರೆಗೆ ೫೦ ರಿಂದ ೭೦ ಲಕ್ಷ ರೂ.ಕೊಡಬೇಕು ಜತೆಗೆ ಕುಟುಂಬಕ್ಕೆ ೧ ನಿವೇಶನ ಮತ್ತು ಒಬ್ಬರಿಗೆ ಕೆಲಸ ಕೊಡುವ ನಿಬಂಧನೆಯನ್ನು ಪತ್ರವನ್ನು ಸಲ್ಲಿಸಿದ್ದಾರೆ.

`ಗಾಳಕ್ಕೆ ಬೀಳೋದಿಲ್ಲ

ಮತ್ತೀಕೆರೆ ಜಯರಾಮ್ ಮಂಡ್ಯ 
ಸರಕಾರ ಸುಭದ್ರಗೊಳಿಸಲು ಪುನಾರಂಭಿಸಿರುವ `ಆಪರೇಷನ್ ಕಮಲ' ಕಾರ್ಯಾಚರಣೆಯಲ್ಲಿ ಬಿಜೆಪಿ ಗಾಳಕ್ಕೆ ಬೀಳೋದಿಲ್ಲ. ಹಣ, ಅಧಿಕಾರದ ಆಮಿಷ ತಮ್ಮ ಮುಂದೆ ನಡೆಯೋದಿಲ್ಲ ಎನ್ನುವ ಸಂದೇಶವನ್ನು ಜಿಲ್ಲೆಯ ಶಾಸಕರು ಬಿಜೆಪಿಗೆ ನೀಡಿದ್ದಾರೆ.
ಬಿಜೆಪಿ ಮುಖಂಡರು ಜಿಲ್ಲೆಯ ೭ ಶಾಸಕರ ಪೈಕಿ ಜಾ.ದಳದ ಎಂ. ಶ್ರೀನಿವಾಸ್(ಮಂಡ್ಯ), ಎ.ಬಿ. ರಮೇಶ್ ಬಂಡಿಸಿದ್ದೇಗೌಡ(ಶ್ರೀರಂಗಪಟ್ಟಣ), ಕಾಂಗ್ರೆಸ್‌ನ ಕೆ. ಸುರೇಶಗೌಡ(ನಾಗಮಂಗಲ), ಕೆ.ಬಿ. ಚಂದ್ರಶೇಖರ್(ಕೆ.ಆರ್.ಪೇಟೆ) ಅವರನ್ನು ಸೆಳೆಯಲು ಸ್ಕೆಚ್ ರೂಪಿಸಿದ್ದರು.
ತಮಗೆ ಗಾಳ ಬೀಸಲು ಬಿಜೆಪಿ ರೆಡಿಯಾಗಿದೆ ಎನ್ನುವ ಸುದ್ದಿಯಿಂದ ನಾಲ್ವರು ಶಾಸಕರು ಎಚ್ಚೆತ್ತುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ತಾವಿರುವ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಮೂಲಕ ಗೊಂದಲ ನಿವಾರಣೆಗೆ ಮುಂದಾಗಿದ್ದಾರೆ.
ನಿಷ್ಠೆ ಬದಲಿಸಿದಕ್ಕೆ ತಕ್ಕ ಶಾಸ್ತಿ: ನಿಷ್ಠೆ ಬದಲಿಸಿದ್ದಕ್ಕಾಗಿ ಸಚಿವ ಸ್ಥಾನದ ಜತೆಗೆ ಶಾಸಕತ್ವಕ್ಕೂ ಕುತ್ತು ತಂದೊಡ್ಡಿಕೊಂಡಿರುವ ಮಳವಳ್ಳಿಯ ಪಕ್ಷೇತರ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರೀಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜತೆ ಗುರ್ತಿಸಿಕೊಂಡಿದ್ದಾರೆ.

ಗೆದ್ದ ಮಿತವ್ಯಯ ಮಂತ್ರ

ಪಿ. ಓಂಕಾರ್ ಮೈಸೂರು
ಹೇಳಿಕೆ ಒಂದು: ದಸರೆ ಎಂದರೆ ಕಳೆದೆರಡು ವರ್ಷಗಳದ್ದು. ಎಷ್ಟೊಂದು `ಸಂಭ್ರಮ', ಏನ್ ಕತೇ. ಈ ವರ್ಷ ಫುಲ್ ಡಲ್. ಎಲ್ಲಾ ಅಧಿಕಾರಿಗಳದ್ದೇ ದರ್ಬಾರು. ಕಾರ್‍ಯಕ್ರಮ ವೈವಿಧ್ಯದಲ್ಲಿ ಸ್ವಾರಸ್ಯಗಳೇ ಇರಲಿಲ್ಲ.
ಇನ್ನೊಂದು: ಕಳೆದೆರಡು ವರ್ಷ ಹಣವೇ ವಿಜೃಂಭಿಸಿತ್ತು. ಈ ವರ್ಷ ಕಡಿವಾಣ ಬಿದ್ದಿತಾದರೂ ಸಂಭ್ರಮಕ್ಕೆ ಕೊರತೆ ಇರಲಿಲ್ಲ. ರಾಜಕೀಯ ಅನಿಶ್ಚಿತತೆ ಮತ್ತಿತರ  ಕಾರಣಕ್ಕೆ ರಾಜಕಾರಣಗಳ `ಅತಿ ಪಾಲ್ಗೊಳ್ಳುವಿಕೆ' ತಪ್ಪಿದ್ದು ಒಳ್ಳೆಯದೇ ಆಯಿತೇನೋ. ಇದ್ದುದ ರಲ್ಲಿಯೇ ಶಿಸ್ತುಬದ್ಧ ಉತ್ಸವ ನಡೆಯಿತು.
- ಒಂದನೇ ಹೇಳಿಕೆ ದಸರೆಯ ಸಂಘಟನೆಗೆ ನಿಯೋಜಿತ ಉಪ ಸಮಿತಿಗಳ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ನುಂಗಣ್ಣ ಅಧಿಕಾರಗಳದ್ದು. ಸಂಭ್ರಮವನ್ನು ಹಿಂದಿನ ವರ್ಷಗಳಿಗೆ ಹೋಲಿಸಿ ನೋಡಿದ ಶ್ರೀಸಾಮಾನ್ಯ ರದ್ದು ಎರಡನೆಯದು. ಎರಡರಲ್ಲೂ ಸತ್ಯವಿದೆ.ಅಷ್ಟೇ `ಮಿತ್ಯ'ವೂ ಅಡಗಿದೆ.
ಅವಸರದ ಹೆರಿಗೆ: ಉತ್ಸವ ಸಿದ್ಧತೆ, ಸಾಂಸ್ಕೃತಿಕ ಕಾರ್‍ಯಕ್ರಮ ಗಳ ಆಯೋಜನೆ, ಸುಧಾರಣೆ, ವೈವಿಧ್ಯಕ್ಕೆ `ಜೀವ'ತುಂಬುವ ಭರವಸೆ  ಈಡೇರಿಕೆಯಲ್ಲಿ ಹಿಂದಿನ ವರ್ಷಗಳಂತೆ  ಈ ವರ್ಷವೂ ಜಿಲ್ಲಾಡಳಿತ  ಎಡವಿತು.

ಜನರಿಗೆ ದರ್ಶನವಿತ್ತ ತೀರ್ಥರೂಪಿಣಿ

ಅಜ್ಜಮಾಡ ರಮೇಶ್ ಕುಟ್ಟಪ್ಪ, ತಲಕಾವೇರಿ
ಪ್ರಕೃತಿ ವೈಭವದ ವನಸಿರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಉಗಮವಾಗಿರುವ ನಾಡಿನ ಅಸಂಖ್ಯಾತ ಜನರ ಪಾಲಿನ ಜೀವಾಳ ಕಾವೇರಿ ನದಿಯ ಉಗಮ ಸ್ಥಾನ ಬ್ರಹ್ಮಕುಂಡಿಕೆಯಲ್ಲಿ ಸೋಮವಾರ ನಸುಕಿನ ವೇಳೆ (೩.೧೨) ತೀರ್ಥರೂಪಿಣಿಯಾಗಿ ಮೇಲೇರಿ ಕಾವೇರಿ ಮಾತೆ ಭಕ್ತ ಸಮೂಹಕ್ಕೆ ದರ್ಶನ ನೀಡಿದಳು.
ಪ್ರಾತಃಕಾಲದಲ್ಲಿ ಪವಿತ್ರ ತೀರ್ಥೋದ್ಭವ ಘಟಿಸಿದ ಹಿನ್ನೆಲೆಯಲ್ಲಿ ಈ ಹಿಂದಿನ ವರ್ಷಗಳಲ್ಲಿ ಕಂಡುಬರುತ್ತಿದ್ದ ಭಕ್ತ ಸಮೂಹದ ಭಾರಿ  ಒತ್ತಡ ಈ ವರ್ಷ ಕಾಣಿಸಿಕೊಳ್ಳಲಿಲ್ಲ. ಸಹಾಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಾವಪರವಶರಾಗಿದ್ದ ಭಕ್ತ ಸಮೂಹ ಮಾತ್ರ ಕಾವೇರಿ ತೀರ್ಥಕ್ಕಾಗಿ ಮುಗಿಬಿದ್ದಿದ್ದರಿಂದ ಅರ್ಚಕ ಸಮೂಹ ಕುಂಡಿಕೆಯಲ್ಲಿ ಮುಂಜಾನೆ ವೇಳೆ ಸಂಕಷ್ಟ ಅನುಭವಿಸಿದರು.
ಬ್ರಹ್ಮಗಿರಿ ಬೆಟ್ಟವನ್ನು ಸಂಪೂರ್ಣವಾಗಿ ಆವರಿಸಿದ್ದ ದಟ್ಟ ಮಂಜು, ಮೈನಡುಗುವ ಚಳಿ, ಹನಿ- ಹನಿಯಾಗಿ ಬೀಳುತ್ತಿದ್ದ ಇಬ್ಬನಿ, ತಂಪಾ ದ ಹವಾಮಾನದ ಆಹ್ಲಾದಕರ ವಾತಾವರಣದಲ್ಲಿ ನಂಬಿಕೆಯ ತೀರ್ಥೋದ್ಭವ  ನಡೆಯಿತು.

ಜನಸಾಗರದಲ್ಲಿ ಮಿಂದ ಜಂಬೂಸವಾರಿ

ಜೆ.ಶಿವಣ್ಣ ಮೈಸೂರು 
ಕಣ್ಣತುಂಬ ಪರಂಪರೆಯ ಬೆಳಕನ್ನು ಹೊತ್ತಿಸಿ ಬಿಡುವ ದಸರೆಯ ಭವ್ಯ ಜಂಬೂಸವಾರಿಯ ವೈಭವಕ್ಕೆ-ಅದರ ಸಂಭ್ರಮಕ್ಕೆ ಯಾರು ಸಾಟಿ ?
ಅದಕ್ಕೆ ಅದುವೇ ಸಾಟಿ. ಮಳೆಯೇ ಬರಲಿ, ಬಿರು ಬಿಸಿಲೇ ಇರಲಿ, ರಾಜಕೀಯ ಸ್ಥಿರತೆ- ಅಸ್ಥಿರತೆ ಏನೇ ಇರಲಿ, ಏನೇ ಬರಲಿ. ದಸರೆಯ  ಸಂಭ್ರಮ ಮಾತ್ರ ನಿಲ್ಲದು.  ಭಾನುವಾರ ಅರಮನೆ ನಗರಿ ಮೈಸೂರಿನಲ್ಲಿ ನಡೆದ ನಾನೂರನೇ ದಸರಾ ಮಹೋತ್ಸವದ ಜಂಬೂ ಸವಾರಿ ಯದು ಮತ್ತದೇ ವೈಭವ, ಸಡಗರ-ಸಂಭ್ರಮದೊಂದಿಗೆ ಸಾಂಗೋಪಾಂಗವಾಗಿ ನಡೆಯಿತು. ಲಕ್ಷಾಂತರ ಜನ ಜಂಬೂಸವಾರಿಯಲ್ಲಿ ಮೆರೆಯುತ್ತಿದ್ದ ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು, ಆಕೆಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿಸುತ್ತಿದ್ದ ಗಜರಾಜ ಬಲರಾಮ ವನ್ನು ನೋಡಿ ಉಘೇ-ಉಘೇ ಎಂದರು.
ಐದು ಕಿ.ಮೀ. ದೂರ ಸಾಗುವ ವಿಜಯದಶಮಿ ಮೆರವಣಿಗೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಮನೋಜ್ಞವಾಗಿ ಬಿಂಬಿಸಿತಲ್ಲದೆ, ನೆರೆದ ಜನರನ್ನು ನಾಡ ಪರಂಪರೆಯ ಅಭಿಮಾನದ ಸವಾರಿಯಲಿ ಮುಳುಗಿಸಿತು.
ವೈವಿಧ್ಯಮಯ ಕಲಾತಂಡಗಳು, ನಾಡನ್ನಾಳಿದ ರಾಜ ಮಹಾರಾಜರ ಪರಂಪರೆ, ಇತಿಹಾಸದ ವೈಭವವನ್ನು ಅನಾವರಣಗೊಳಿಸುವ ಸ್ತಬ್ಧ ಚಿತ್ರಗಳನ್ನೊಳಗೊಂಡ ವರ್ಣರಂಜಿತ ಮೆರವಣಿಗೆ ಅತ್ಯಂತ ಶಿಸ್ತುಬದ್ಧವಾಗಿ ಸಾಗಿತ್ತಲ್ಲದೇ, ವೀಕ್ಷಣೆಯೂ ಕಿರಿಕಿರಿ, ಗೊಂದಲಗಳಿಂದ ಮುಕ್ತವಾಗಿದ್ದು ಈ ಬಾರಿಯ ವಿಶೇಷ.

ಶಿಸ್ತಿನಿಂದ ಗೆದ್ದ ಪೊಲೀಸರು

ಶಿಸ್ತಿನಿಂದ ಗೆದ್ದ ಪೊಲೀಸರು
ದಸರೆ ನೋಡಲು ಬಂದಿದ್ದ ಲಕ್ಷಾಂತರ ಮಂದಿಯನ್ನು ನಿಯಂತ್ರಿಸಿ ಗೆದ್ದು ಜನ ಸ್ನೇಹಿ ಎನ್ನಿಸಿದರು ಪೊಲೀಸರು.
ಕಡೆಯ ದಿನ ಐದು ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸರು ಲಕ್ಷಕ್ಕೂ ಹೆಚ್ಚು ಮಂದಿಯನ್ನು ನಿಯಂತ್ರಿಸಿ ಸಂಯಮದಿಂದಲೇ ನಡೆದುಕೊಂಡರು.
ಅರಮನೆ ಪ್ರವೇಶದಿಂದ ಹಿಡಿದು ಸಂಚಾರ ದಟ್ಟಣೆ ಇರುವ ಸ್ಥಳ, ಪ್ರಮುಖ ವೃತ್ತದಲ್ಲಿ ಕನಿಷ್ಠ ೫ ಪೊಲೀಸರು ಕಾರ್‍ಯನಿರ್ವಹಿಸಿದರು. ಸಣ್ಣಪುಟ್ಟ ಮಾತಿನ ಚಕಮಕಿ ಬಿಟ್ಟರೆ ಎಲ್ಲೂ ಪೊಲೀಸರು ಮಿತಿ ಮೀರಿ ವರ್ತಿಸಲಿಲ್ಲ. ಕೆಲವು ಪಡೆ ಪೊಲೀಸರೇ ಮಾರ್ಗದರ್ಶನ ನೀಡುತ್ತಿದ್ದರು. ನೀವು ಹೋಗಬೇಕಾದ ದ್ವಾರ ಇದು ಎಂದು ಸೂಚಿಸುತ್ತಲೂ ಇದ್ದರು. ಸಂಚಾರ ಪೊಲೀಸರು ಎಲ್ಲೂ ತಮ್ಮ ದರ್ಪವನ್ನ್ನು ತೋರದೇ ಕೆಲಸ ಮಾಡಿದರು.
ಜಂಬೂ ಸವಾರಿ ಸಾಗಿದ ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಅರಮನೆ ಆವರಣದೊಳಗೆ ಕೆಲವರು ಮುಂದೆ ನುಗ್ಗಿದಾಗ ತಾಳ್ಮೆಯಿಂದಲೇ ನಿಯಂತ್ರಿಸಿದ್ದು ಕಂಡು ಬಂದಿತು. ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್ ಅವರು ಆರಂಭದಲ್ಲೇ ಹೇಳಿಕೊಂಡಂತೆ ಜನಸ್ನೇಹಿಯಾಗಿದ್ದರು. ಎಲ್ಲೂ ಅತಿರೇಕದಿಂದ ವರ್ತಿಸಲಿಲ್ಲ ಎಂದು ಬಹಳಷ್ಟು ಮಂದಿ ದಸರೆಗೆ ಬಂದ ಪ್ರವಾಸಿಗರು ಪತ್ರಿಕೆ ಎದುರು ಹೇಳಿಕೊಂಡರು.
ಇವರೊಂದಿಗೆ ನಿಯೋಜಿಸಿದ್ದ ಎನ್‌ಸಿಸಿ ವಿದ್ಯಾರ್ಥಿಗಳೂ ಅಚ್ಚುಕಟ್ಟಾಗಿ ಕೆಲಸ ಮಾಡಿದರು. ಹೋಮ್ ಗಾರ್ಡ್ಸ್‌ಗಳೂ ಕೈ ಜೋಡಿಸಿದರು.
ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು, ಒತ್ತಡ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವ ಕುರಿತು ಕೆ.ಆರ್.ವಿಭಾಗದ ಸಂಚಾರ ಪೊಲೀಸರು ನಮಗೆ ಮೂರು ದಿನ ತರಬೇತಿ ನೀಡಿದ್ದರು. ಇದರಿಂದ ನಾವೂ ತಾಳ್ಮೆಯಿಂದಲೇ ಕೆಲಸ ಮಾಡಲು ಖುಷಿಯಾಯ್ತು. ಇದರಿಂದ ಒಳ್ಳೆಯ ಅನುಭವವಾಗಿದೆ ಎನ್ನುವುದು ಡಿಪ್ಲೊಮಾ ವಿದ್ಯಾರ್ಥಿ ಕೆಆರ್‌ಎಸ್‌ನ ನಿಶಾಂತ್ ಸಂತಸದ ನುಡಿ.

ದಸರಾ ಫೋಟೊ ಫಿನಿಶ್


ಮೆರವಣಿಗೆಯಲ್ಲಿ ಚರಿತ್ರೆ ಸಾರುವ ಸ್ತಬ್ಧ ಚಿತ್ರ...

ಪಿ.ಓಂಕಾರ್ ಮೈಸೂರು
ಮಿತವ್ಯಯದ ಮಂತ್ರ,ರಾಜಕೀಯ ಅನಿಶ್ಚಿತತೆ, ಕೊನೆ ಘಳಿಗೆಯ ತರಾತುರಿ, ಸಂಭ್ರಮ ತುಂಬುವ `ಶತ ಪ್ರಯತ್ನ'ದ ನಡುವೆಯೇ ನಡೆದ `ಮೈಸೂರು ದಸರೆ ' ಯ ೪೦೦ನೇ ವರ್ಷದ ಸೊಬಗು ಇನ್ನೆರಡೇ ದಿನ. ಶನಿವಾರ ನವರಾತ್ರಿ ಸಾಂಸ್ಕೃತಿಕ ರಂಗಿಗೆ ತೆರೆ. ಭಾನುವಾರ  ಜಂಬೂ ಸವಾರಿ,ಪಂಜಿನ ಕವಾಯಿತು ವೈಭವ.
ಕಲೆ,ಸಾಹಿತ್ಯ,ಸಂಸ್ಕೃತಿ,ಕ್ರೀಡೆ,ಸಾಹಸ ಸಹಿತ ವೈವಿಧ್ಯಮಯ ಚಟುವಟಿಕೆಗಳನ್ನೊಳಗೊಂಡು ಮೈದಳೆದ ಹತ್ತು ದಿನದ ಸಂಭ್ರಮವನ್ನು ಸಂಪನ್ನ ಗೊಳಿಸಲು ಜಿಲ್ಲಾಡಳಿತ, ಪೊಲೀಸ್ ವ್ಯವಸ್ಥೆ  ಅಂತಿಮ ಸ್ಪರ್ಶ ನೀಡುತ್ತಿದೆ.
ಅಡ್ಡಿ ಆತಂಕವಿಲ್ಲ: ಇತ್ತೀಚಿನ ವರ್ಷಗಳಲ್ಲಿ ಜಂಬೂಸವಾರಿ ಸಂಪೂರ್ಣ ನಿರಾತಂಕವಾಗಿ ನಡೆದದ್ದು ಕಡಿಮೆ. ಒಂದಿಲ್ಲೊಂದು `ವಿಘ್ನ'ದ ಪರಿಣಾಮ ಖಾಕಿ ದರಬಾರಿನಲ್ಲೇ  ಜನೋತ್ಸವ ನಡೆ ಯುತ್ತಿತ್ತು. ಆದರೆ,೪೦೦ನೇ ವರ್ಷದ ದಸರೆ ವಿಶೇಷವೋ ಏನೋ ಈ ಬಾರಿ ಯಾವುದೇ `ಆತಂಕ'ದ ಸ್ಥಿತಿ ಇಲ್ಲ. ಗುರುವಾರದವ ರೆಗಿನ  ರಾಜಕೀಯ ಅನಿಶ್ಚಿತತೆಯೂ ಸದ್ಯ ತಿಳಿಯಾಗಿರುವುದು `ಸವಾರಿ' ಸಂಭ್ರಮವನ್ನು ಹೆಚ್ಚಿಸುವ ನಿರೀಕ್ಷೆ ಮೂಡಿಸಿದೆ.

ದಸರಾ ದರ್ಶನ: ಊಟವಿಲ್ಲದ್ದಕ್ಕೇ ಅಸಮಾಧಾನ

ವಿಕ ಸುದ್ದಿಲೋಕ ಮೈಸೂರು
ಈ ಬಾರಿಯ ದಸರಾ ದರ್ಶನ ಇಂದಿಗೆ ಮುಗಿಯಿತು. ಅಷ್ಟೂ ದಿನ ಸಾರ್ವಜನಿಕರಿಂದ ಕೇಳಿಬಂದ ಒಂದೇ ಒಂದು ದೂರೆಂದರೆ `ಊರೆಲ್ಲಾ ತೋರಿಸಿದಿರಿ, ಉಪವಾಸ ಹಾಕಿಸಿದಿರಿ'.
ಕಳೆದ ವರ್ಷ ದಸರಾ ದರ್ಶನಕ್ಕೆ ಬಂದವರಿಗೆ ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವರ್ಷ ಅದೇ ವ್ಯವಸ್ಥೆ ಮುಂದುವರಿಸಲು  ಜಿಲ್ಲಾಧಿಕಾರಿಗಳನ್ನೊಳಗೊಂಡ ಉನ್ನತ ಸಮಿತಿ ಒಪ್ಪಲಿಲ್ಲ. ಹಾಗಾಗಿ ದಸರಾ ದರ್ಶನ ಸಮಿತಿಯವರು ೫೦ ರೂ. ಪಡೆದು ಊರನ್ನಷ್ಟೇ ತೋರಿಸಿದರು. ಈ ಹಿನ್ನೆಲೆಯಲ್ಲಿ ಸಾರ್ವತ್ರಿಕ ಟೀಕೆ ಗುರಿಯಾಗಿದ್ದು ಉನ್ನತ ಸಮಿತಿಯ ತೀರ್ಮಾನ.
`ಮಧ್ಯಾಹ್ನವೆಲ್ಲಾ ಹೊಟ್ಟೆ ಹಸಿದಾಗ ನೋಡೋಕೆ ಎಲ್ಲಿ ಮನಸ್ಸು ಬರುತ್ತೆ. ವರ್ಷಕ್ಕೊಂದು ಥರ ವ್ಯವಸ್ಥೆ ಆದ್ರೆ ಕಷ್ಟ ' ಎಂಬುದು ದಸರಾ ನೋಡಲು ಬಂದವರ ಅಭಿಪ್ರಾಯವಲ್ಲ, ಅಸಮಾಧಾನ.
ಗುರುವಾರ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ವಿವಿಧ ತಾಲೂಕುಗಳ ಜನರನ್ನು ಪೂರ್ವನಿಗದಿ ಯಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮೈಸೂರಿಗೆ ಕರೆತರ ಲಾಗಿತ್ತು. ಆಗಮಿಸಿದ ಸಾವಿರಾರು ಜನರಿಗೆ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟಗಳ ದರ್ಶನ ಮಾಡಿಸ ಲಾಯಿತು. ದಸರಾ ದರ್ಶನದ ಬಗ್ಗೆ ಹಳ್ಳಿಗರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರೂ, ಹಿಂದೆ ಊಟ ಕೊಡ್ತಾ ಇದ್ರು, ಈ ಬಾರಿ ಏಕಿಲ್ಲ? ಈ ಸರಕಾರವೇ ಸರಿ ಇಲ್ಲ ಎಂದು ಟೀಕಿಸಿದರು.

ಬೆಳಗ್ಗೆ ಗ್ರಾಮೀಣ ಸೊಗಡು, ಸಂಜೆ ಸಾಂಸ್ಕೃತಿಕ ಸೊಬಗು

ಜೆ.ಶಿವಣ್ಣ ಮೈಸೂರು
ನಗರದ ಹಲವೆಡೆ ಬೆಳಗ್ಗೆ ಗ್ರಾಮೀಣ ಸೊಗಡಿನ ಸ್ಪರ್ಧೆ ಗಳ ಮೆರಗು, ಸಂಜೆ ಸಾಂಸ್ಕೃತಿಕ ಸಂಭ್ರಮದ ಬೆರಗು.
ಅರಮನೆ ಅಂಗಳದಲ್ಲಿ ಮುಂಜಾನೆ ರಂಗು ರಂಗಿನ ರಂಗವಲ್ಲಿಯ ಚಿತ್ತಾರ. ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು  ಉತ್ತರ ದ್ವಾರದ  ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಅರಮನೆ ಎದುರಿನ ವಿಶಾಲ ಅಂಗಳದಲ್ಲಿ ರಂಗೋಲಿ ಬಿಡಿಸಿ ಬಣ್ಣ ತುಂಬಿದರು. ಇತ್ತ ಗ್ರಾಮ ವಿದ್ಯಾರ್ಥಿನಿಲಯದ ಮೈದಾನದಲ್ಲಿ ಮೈನ ವಿರೇ ಳಿಸುವ ಎತ್ತಿನಗಾಡಿಗಳ ಓಟ ರೋಮಾಂಚನ ಹುಟ್ಟಿಸಿತು. ಯುವ ಸಮೂಹ ಚಾಮುಂಡಿಬೆಟ್ಟ ಏರಿತು.
ಜೆ.ಕೆ.ಮೈದಾನದಲ್ಲಿ ರೈತಾಪಿಯ ಹಾಲು ಕರೆಯುವ ಸ್ಪರ್ಧೆಯಲ್ಲಿ ಹಾಲ್ನೊರೆ ತುಂಬಿ ತುಳುಕಿತು. ಬೂಲೆ ವಾರ್ಡ್ ರಸ್ತೆಯಲ್ಲಿ `ಒಲವೇ ಜೀವನ ಸಾಕ್ಷಾತ್ಕಾರ' ಎಂಬಂತೆ ದಂಪತಿಗಳು `ಜೊತೆ ಜೊತೆಯಲಿ' ಸೈಕಲ್ ಏರಿ ಸವಾರಿ ನಡೆಸಿ ಸಂಭ್ರಮಿಸಿದರು. ನಾವು ಯಾರಿಗೇನು ಕಮ್ಮಿಯಿಲ್ಲ ಎನ್ನುವಂತೆ ವಿಕಲಚೇತನರು ತ್ರಿಚಕ್ರ ವಾಹನದಲ್ಲಿ ರೇಸ್ ನಡೆಸಿ ಅಚ್ಚರಿಹುಟ್ಟಿಸಿದರು.
ಸಂಜೆ ಹೊತ್ತಿಗೆ `ಎಲ್ಲೆಲ್ಲೂ ಸಂಗೀತವೇ...' ಅರ ಮನೆಯ ಜಗಮಗಿಸುವ ದೇದೀಪ್ಯಾಮಾನ ಬೆಳಕಿನಲ್ಲಿ ಕರ್ನಾಟಕ ಪೊಲೀಸ್ ಬ್ಯಾಂಡ್‌ನ  ಸಂಗೀತ ಮಾಧುರ್‍ಯದ ದಿವ್ಯಾನುಭೂತಿ, ಸುಗಮ ಸಂಗೀತದ ಮಧುರಾನುಭೂತಿ, ಪಂಚವೀಣೇಯ ನಾದವೈಭವ. ಮನರಂಜನಾ ದಸರೆ ಯಲ್ಲಿ ಸಂಗೀತ ಗಾರುಡಿಗ ಹಂಸಲೇಖ, ಮಧುರ ಕಂಠದ ಗಾಯಕ ರಾಜೇಶ್ ಕೃಷ್ಣನ್ ಅವರ ಸಂಗೀತ-ಹಾಡಿನ ಮೋಡಿ.. ಇವು ದಸರೆಯ ಆರನೇ ದಿನದ ಹೈಲೈಟ್ಸ್.

ಅರಳು ಕವಿಗಳ ಕಾವ್ಯದಲ್ಲಿ ಅರಳಲಿಲ್ಲ ರೂಪಕ


ವಿಕ ಸುದ್ದಿಲೋಕ ಮೈಸೂರು
`ಯಾವುದು ಮಾತುಗಳನ್ನು ಕಡಿಮೆಗೊಳಿಸಿ, ರೂಪಕ ಗಳ ಮೂಲಕ ರೂಪಿತವಾಗುತ್ತದೆಯೋ ಅದೇ ಶ್ರೇಷ್ಠ ಕಾವ್ಯ' ಎಂಬ ಭಾಷಣ ಕೇಳಿ ಕಾವ್ಯ ಓದಲು ಸಾಲು ಗಟ್ಟಿದ ಉದಯೋನ್ಮುಖ ಕವಿಗಳು ವಾಚಿಸಿದ್ದು ಮಾತ್ರ `ವಾಚಾಳಿ'ಕವನಗಳನ್ನೇ !
ಎಲ್ಲವೂ ನೇರ-ನೇರ. ಕೆಲವಂತೂ ಕಾವ್ಯವೆಂಬ ಗದ್ಯಗಳು. ದಸರಾ ಅಂಗವಾಗಿ ಮಂಗಳವಾರ ಬೆಳಗ್ಗೆ ನಡೆದ ಅರಳು ಕವಿಗೋಷ್ಠಿ `ಎಂದಿನ' ಕವಿಗೋಷ್ಠಿ ಯಾಗಿ ದಸರೆಯ ಇತಿಹಾಸದಲ್ಲಿ ದಾಖಲಾಯಿತು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ. ರಾಜಪ್ಪ ದಳವಾಯಿ ಕಾವ್ಯಗೋಷ್ಠಿ ಉದ್ಘಾಟಿಸಿದರು. ಬಳಿಕ ಮಾತನಾಡಿ, ಕಾವ್ಯ ಎಲ್ಲ ಕಾಲದ ತತ್ತ್ವಜ್ಞಾನ. ಅದು ಎಲ್ಲ ಸಮಕಾಲೀನ ಬದುಕಿನ ಸ್ಪಂದನೆಯೂ ಸಹ. ವ್ಯವಸ್ಥೆಯ ಗ್ರಹಿಕೆ, ಅದರ ಅಪಾಯಗಳನ್ನು ಮುಂಜಾಗ್ರತೆಯಾಗಿ ಗ್ರಹಿಸುವುದು ಕಾವ್ಯದ ಸ್ವಭಾವ ಎಂದರು.

ಚಿಗುರು ಕವಿಗೋಷ್ಠಿಯಲ್ಲಿ ಅರಳಿದೆಲ್ಲವೂ ಹೂವು

ವಿಕ ಸುದ್ದಿಲೋಕ ಮೈಸೂರು
ನಾಡಹಬ್ಬ ದಸರೆಯಲ್ಲಿ ಚಿಗುರು ಕವಿಗಳ ಕಾವ್ಯ ವೈಭವ. ನವರಾತ್ರಿ ವೈಭೋಗವನ್ನು ಸಾರುವ ಕವಿತೆ, ಅಂದು ಇಂದಿನ ದಸರಾ ಸಂಭ್ರಮ, ದೇಶ ಪ್ರೇಮ, ಕನ್ನಡ ಪ್ರೀತಿ ಕವಿತೆಗಳಲ್ಲಿ ಹೊರಹೊಮ್ಮಿದರೆ, ಗಾಂಧಿ ತತ್ತ್ವಗಳ ಹರಣ, ಕಾಣೆಯಾದ ಕೋಮು ಸೌಹಾರ್ದ, ಕುವೆಂಪು ಚಿಂತನೆಗಳು ಅಡಕವಾಗಿದ್ದ ಕಾವ್ಯವೂ ಪಲ್ಲವಿಸಿದ್ದವು. ಪ್ರೇಮ ರಾಗವೂ ಅರಳಿತ್ತು.
ಅದು ನಟರಾಜ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ದಸರಾ ಚಿಗುರು ಕವಿಗೋಷ್ಠಿ.`ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು' ಎಂಬಂತೆ ಹಿರಿಯರ ಸಾನ್ನಿಧ್ಯದಲ್ಲಿ ಕಿರಿಯರು ಕಾವ್ಯ ವಾಚಿಸಿ ಪ್ರಶಂಸೆಗೆ ಒಳಗಾದರು. ೭೭ ರ ವಯಸ್ಸಿನ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅವರು ಮಕ್ಕಳ ಕಾವ್ಯಗೋಷ್ಠಿಗೆ ಚಾಲನೆ ನೀಡಿದರೆ, ೧೭ರ ಹರೆಯದ ಕಿರಿಯ ಕವಯಿತ್ರಿ ಚೈತ್ರಾ ಬೇವಿನಗಿಡದ ಅಧ್ಯಕ್ಷತೆ ವಹಿಸಿದ್ದು ವಿಶೇಷ.

೨ನೇ ದಿನ: ಸಂಭ್ರಮಕ್ಕೆ ಇನ್ನಷ್ಟು ರಂಗು

ಪಿ. ಓಂಕಾರ್ ಮೈಸೂರು
ನವರಾತ್ರಿಯ ೨ನೇ ದಿನ ಶನಿವಾರ  ದಸರಾ ಮಹೋ ತ್ಸವದ ಸಂಭ್ರಮಕ್ಕೆ ಇನ್ನಷ್ಟು ವೈವಿಧ್ಯಗಳ ಸೇರ್ಪಡೆ.
ನಾಡಿನಲ್ಲಿ ರಾಜಕೀಯ ಕಾರ್ಮೋಡ  ದಟ್ಟೈಸಿ ದ್ದರೂ ಉತ್ಸವ ಉತ್ಸಾಹಕ್ಕೆ ಯಾವುದೇ ಭಂಗವಿರಲಿಲ್ಲ. ಮೊದಲ ದಿನ ಚೆಲ್ಲಾಟವಾಡಿದ್ದ ಮಳೆ ‘ರಜೆ ’ಹಾಕಿ ಆಹ್ಲಾದಕರ  ಸಂಜೆಯ ಆಸ್ವಾದಕ್ಕೆ ಅವಕಾಶ ನೀಡಿತ್ತು.
ಆದರೆ, ಕ್ಷಣ ಕ್ಷಣದ ‘ರಾಜಕೀಯ ಮನರಂಜನೆ’ ಯನ್ನು ವೀಕ್ಷಿಸಲು ಜನ ಟೀವಿ ಪರದೆಗಳಿಗೆ ಅಂಟಿ ಕೊಂಡಿದ್ದ ರಿಂದಲೋ ಏನೋ ಅರಮನೆ, ಮನರಂಜನಾ ದಸರಾ ಸೇರಿದಂತೆ ವಿವಿಧೆಡೆ  ನಿರೀಕ್ಷೆಯಂತೆ ಜನಸ್ತೋಮ ಇರ ಲಿಲ್ಲ. ರಾಜಕಾರಣಗಳ ‘ದಟ್ಟಣೆ’ಯೂ ಕಡಿಮೆ ಇತ್ತು.
ಶೋಭಾ ಊಟ: ವಿವಿಧ ಕಾರ‍್ಯಕ್ರಮಗಳ ಉದ್ಘಾಟನೆಗೆ ಆಗಮಿಸಬೇಕಿದ್ದ ಆಹ್ವಾನಿತ ಮಂತ್ರಿಗಳು ಬರಲಿಲ್ಲ. ಆದರೆ, ಶುಕ್ರವಾರವೇ ‘ಅನಿರೀಕ್ಷಿತ’ ಭೇಟಿ ನೀಡಿದ  ಸಚಿವೆ ಶೋಭಾ ಕರಂದ್ಲಾಜೆ  ಶನಿವಾರ ಮಧ್ಯಾಹ್ನ ಅರಮನೆ ಅಂಗಳದಲ್ಲಿ ದಸರೆ ಗಜಪಡೆಯ ಮಾವುತರು,ಕಾವಾಡಿಗಳ ಕುಟುಂಬದವರಿಗೆ ‘ಭೋಜನ ಕೂಟ’ ಏರ್ಪಡಿಸಿ ಗಮನ  ಸೆಳೆದರು.

‘ರೈತ ದರ್ಬಾರ್’ ಶುರು

ವಿಕ ಸುದ್ದಿಲೋಕ ಮೈಸೂರು
ದಸರಾ ಮಹೋತ್ಸವದ ಸೊಬಗಿಗೆ ಶನಿವಾರ ಅನ್ನದಾತ ರೈತರ ಸಂಭ್ರಮ ಸೇರ್ಪಡೆ.
ಕೃಷಿ ವಸ್ತುಪ್ರದರ್ಶನ, ವಿವಿಧ ಸ್ಪರ್ಧೆ, ಗ್ರಾಮೀಣ ಕ್ರೀಡೆ, ಉಪನ್ಯಾಸ, ಚರ್ಚೆ ಮತ್ತಿತರ ಕಾರ‍್ಯಕ್ರಮಗಳನ್ನೊಳಗೊಂಡು ಜೆಕೆ ಮೈದಾನದಲ್ಲಿ ಆಯೋಜಿಸಿರುವ ‘ರೈತ ದಸರಾ’ವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಉದ್ಘಾಟಿಸಿ, ವೀಕ್ಷಿಸಿದರು.
ಅಧಿಕಾರಿಗಳಿಗೆ ಸೂಚನೆ: ನಂತರ, ನಡೆದ ಕಾರ‍್ಯಕ್ರಮದಲ್ಲಿ ರೈತರೊಂದಿಗೆ ‘ಸಂವಾದ’ ನಡೆಸಿದ ಅವರು ರೈತರಿಗೆ ಮಾಹಿತಿ ನೀಡಲು ಪ್ರತಿ ಪ್ರದರ್ಶನ ಮಳಿಗೆಗೆ ಪ್ರಗತಿಪರ ರೈತರನ್ನು ಸಂಪ ನ್ಮೂಲ ವ್ಯಕ್ತಿಗಳನ್ನಾಗಿ ನಿಯೋಜಿಸುವಂತೆ, ಉತ್ತಮ ಇಳುವರಿ ಪಡೆದ ರೈತರ ವಿವರ, ಭಾವಚಿತ್ರವನ್ನು ಮಳಿಗೆಗಳಲ್ಲಿ ಪ್ರದರ್ಶಿಸು ವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೈತ ದಸರೆಯನ್ನು ರೈತರಷ್ಟೆ ನೋಡು ವುದಲ್ಲ. ನಗರದ ಜನರು, ವಿಶೇಷವಾಗಿ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಅನ್ನದಾತರ ಕಷ್ಟ, ನಷ್ಟಗಳನ್ನು, ಕೃಷಿಯ ಹಿಂದಿನ ಶ್ರಮವನ್ನು ಅರಿಯ ಬೇಕು. ಅ.೧೦ರಿಂದ ದಸರೆ ವೀಕ್ಷಿಸಲು ಬರುವ ಶಾಲಾ ಮಕ್ಕಳನ್ನು ಇಲ್ಲಿಗೂ ಭೇಟಿ ನೀಡಲು ಕಲ್ಪಿಸುವುದಾಗಿ ತಿಳಿಸಿದರು.

ನಾಡಹಬ್ಬಕ್ಕೆ ಅಣಿಯಾದ ಸಾಂಸ್ಕೃತಿಕ ನಗರಿ

ಕುಂದೂರು ಉಮೇಶಭಟ್ಟ ಮೈಸೂರು
ರಾಜಕೀಯ ಸುನಾಮಿಯಲ್ಲಿ ಸಿಲುಕಿದ ಸರಕಾರದ ಸಂಕಷ್ಟಗಳ ಮಧ್ಯೆಯೇ ಮೈಸೂರಿನಲ್ಲಿ ೪೦೦ನೇ ವರ್ಷದ ದಸರೆ ಸಂಭ್ರಮ.
ಶುಕ್ರವಾರ ಬೆಳಗ್ಗೆ ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಪೂಜೆ ಸಲ್ಲಿಸುವ ಮೂಲಕ ೧೦ ದಿನಗಳ ನಾಡಹಬ್ಬಕ್ಕೆ ಸಿಗಲಿದೆ ಅಧಿಕೃತ ಚಾಲನೆ.
ಬಂಡಾಯದ ಬಿಸಿಯಿಂದ ಬಸವಳಿದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಶುಕ್ರವಾರ ಬೆಳಗ್ಗೆ ನಗರಕ್ಕೆ ಆಗಮಿಸಿ ನಾಡಹಬ್ಬದ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ತಾಯಿ ಆಶೀರ್ವಾದಕ್ಕೆ ಕಾದಿದ್ದಾರೆ. ದಶಕದ ಹಿಂದೆ ಹೊಸತನಕ್ಕೆ ತೆರೆದಿದ್ದ ದಸರೆಗೆ ಈ ವರ್ಷ ವಿಭಿನ್ನ ರೂಪ ನೀಡುವ ಪ್ರಯತ್ನವೂ  ನಡೆದಿದೆ. ಇದರ  ಜತೆಗೆ ಉಳಿತಾಯದ ಮಂತ್ರವನ್ನೂ ಪಠಿಸಲಾಗುತ್ತಿದೆ. ನಾಡಹಬ್ಬದ ಪ್ರಮುಖ ಆಕರ್ಷಣೀಯ ಕೇಂದ್ರ ಚಾಮುಂಡಿಬೆಟ್ಟ, ಅರಮನೆ ಒಳಗೊಂಡಂತೆ ಇಡೀ ನಗರವೇ ಸಿಂಗಾರಗೊಂಡಿದೆ. ಪ್ರತಿವರ್ಷದಂತೆ ಕೊನೆ ಕ್ಷಣದ ಕಾಮಗಾರಿಗಳ ಮಧ್ಯೆ ಬೆಳಕಿನಲ್ಲಿ ಮೈಸೂರು ಝಗಮಗಿಸುತ್ತಿದೆ.

ನಡೆದಿದೆ ದೀಪಾಲಂಕಾರ ಕಳೆಗಟ್ಟುತ್ತ್ತಿದೆ ಮೈಸೂರು

ಲೋಕೇಶ್ ನೀರಬಿದಿರೆ ಮೈಸೂರು
ನವರಾತ್ರಿ ಆರಂಭಗೊಳ್ಳುವ ಅ.೮ರಿಂದ ಮೈಸೂರಿನಲ್ಲಿ ‘ರಾತ್ರಿ’ಗೆ ಬಹುಪಾಲು ರಜೆ! ‘ಬೆಳ(ಗಿ)ಕಿ’ಗೆ ಡಬ್ಬಲ್ ಡ್ಯೂಟಿ!
ಇದೇನಪ್ಪಾ ಅಚ್ಚರಿಯಾಯಿತೆ ? ಹೌದು ಅ.೮ರಿಂದ ನಾಡಹಬ್ಬ ದಸರಾ ಆರಂಭ. ನಂತರ ವಿಜಯದಶಮಿ (ಜಂಬೂಸವಾರಿ) ಮೆರವಣಿಗೆ (ಅ.೧೭) ವರೆಗೆ ಅಷ್ಟೂದಿನ ಮೈಸೂರು ವಿದ್ಯುತ್ ದೀಪಗಳಿಂದ ಝಗ ಮಗಿಸಲಿದೆ. ಅರಮನೆ ಸೇರಿದಂತೆ ಪ್ರಮುಖ ರಸ್ತೆಗಳು, ಪಾರಂಪರಿಕ ಕಟ್ಟಡಗಳು ದೀಪಾಲಂಕಾರ ಗೊಂಡು ಅರ್ಧಪಾಲು ರಾತ್ರ್ರಿಯನ್ನು ಮರೆಯಾಗಿಸಲಿವೆ.
೧.೭೦ ಲಕ್ಷ ಬಲ್ಬ್: ಅರಮನೆ ಹೊರತುಪಡಿಸಿ ದೀಪಾಲಂಕಾರಕ್ಕೆ ೧ ಲಕ್ಷ ೭೦ ಸಾವಿರ ಇನ್ ಕ್ಯಾಂಡಿಸೆಂಟ್ ಸೇರಿದಂತೆ ವಿವಿಧ ಬಲ್ಬ್‌ಗಳ ಬಳಕೆ. ಇದಲ್ಲದೆ ೩,೫೦೦ರಷ್ಟು ಮೆಟಲ್ ಅಲೈಡ್ ಲ್ಯಾಂಪ್(ಫೋಕಸ್ ಲೈಟ್) ಗಳನ್ನು ಸಾಲು ಮರಗಳಿಗೆ ಅಳವಡಿಸಲಾಗುವುದು. ವಿವಿಧೆಡೆ ೧೩ ಜನರೇಟರ್ ಬಳಕೆಯಾಗಿದೆ.
ಯಾವ ರಸ್ತೆಗಳಿಗೆ ದೀಪಾಲಂಕಾರ?: ಜಂಬೂ ಸವಾರಿ ಮೆರವಣಿಗೆ ಸಾಗುವ ಸಯ್ಯಾಜಿರಾವ್ ರಸ್ತೆ (ಬನ್ನಿಮಂಟಪವರೆಗೆ), ದೇವರಾಜ ಅರಸು, ಜೆಎಲ್‌ಬಿ, ಚಾಮರಾಜ ಜೋಡಿ, ಧನ್ವಂತರಿ, ನಾರಾಯಣಶಾಸ್ತ್ರಿ, ವಿನೋಬಾ, ನ್ಯೂ ಕಾಂತರಾಜ ಅರಸ್, ಲಲಿತಮಹಲ್, ಇರ‍್ವಿನ್, ಬೋಗಾದಿ, ಬೆಂಗಳೂರು- ಮೈಸೂರು ರಸ್ತೆ ಟೋಲ್‌ಗೇಟ್‌ವರೆಗೆ, ಅರಮನೆ ಸುತ್ತಮುತ್ತಲ ರಸ್ತೆ, ಬನ್ನೂರು ರಸ್ತೆ ಟೆರೇಷಿಯನ್ ಕಾಲೇಜುವರೆಗೆ, ಜಿ.ಪಂ. ಮುಂಭಾಗದ ರಸ್ತೆ ಹೀಗೆ ಸುಮಾರು ೨೦ಕ್ಕೂ ಹೆಚ್ಚು ರಸ್ತೆಗಳು ದೀಪಾಲಂಕಾರಗೊಂಡಿವೆ. ಚಾಮುಂಡಿ ಬೆಟ್ಟದವರೆಗೆ ರಸ್ತೆಯುದ್ದಕ್ಕೂ ಫೋಕಸ್ ಲೈಟ್ ಅಳವಡಿಸಲಾಗುವುದು.

ವೈಭವದ ನೆಪದಿ ದುಂದುವೆಚ್ಚಕ್ಕೆ ಜಿಲ್ಲಾಧಿಕಾರಿ ಬಿಗಿಪಹರೆ

ವಿಕ  ವಿಶೇಷ ಮೈಸೂರು
‘ವೈಭವ ಬೇಕಂತೆ. ಆದರೆ, ಅಧಿಕಾರಿಗಳ ಕೈ ಉದಾರವಾಗುವುದು ಬೇಡವಂತೆ. ಇಷ್ಟೊಂದು ಬಿಗಿ ಇದ್ದರೆ, ಉತ್ಸವ ಯಶಸ್ವಿಯಾಗುವುದು ಹೇಗೆ ?’
-ದಸರಾ ಉಪ ಸಮಿತಿಗೆ ಅಧ್ಯಕ್ಷ- ಉಪಾಧ್ಯಕ್ಷರಾಗಿ ನೇಮಕವಾಗಿರುವ  ಬಹುತೇಕ ಎಲ್ಲ  ರಾಜಕಾರಣಿಗಳು- ಕಾರ್ಯಕರ್ತರ ಪ್ರಶ್ನೆ ಇದು.
‘ಸರಕಾರದ ದುಡ್ಡನ್ನು ಬಳಸಿಕೊಂಡು ಅದ್ದೂರಿತನ ಮಾಡಲು ಇಲ್ಲವೇ  ದುಂದು ವೆಚ್ಚಕ್ಕೆ ಅವಕಾಶವೇ ಇಲ್ಲ. ಪ್ರಾಯೋಜಕತ್ವದ ಮೂಲಕ ಅದ್ದೂರಿಯಾಗಿ ಮಾಡುವುದಾದರೆ ಅಭ್ಯಂತರವಿಲ್ಲ. ಆದರೆ, ಅದಕ್ಕೂ ಪಕ್ಕಾ ರಾಮನ ಲೆಕ್ಕವೇ ಬೇಕು. ಇಲ್ಲದಿದ್ದರೆ, ಕ್ರಮ ನಿಶ್ಚಿತ’ ಎಂಬ ಜಿಲ್ಲಾಧಿಕಾರಿ ಹರ್ಷಗುಪ್ತ ಅವರ ಕಟ್ಟುನಿಟ್ಟಿನ ಆದೇಶದ ಫಲ, ಎಲ್ಲ ಸಮಿತಿಗಳ ಕಾರ್ಯಾಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳ ಕೈ ಬಿಗಿ ಆಗಿದೆ. ಪರಿಣಾಮ ದಸರಾ ಮಹೋತ್ಸವ -೨೦೧೦ರ ಸಿದ್ಧತಾ ಪ್ರಕ್ರಿಯೆಯಲ್ಲಿ  ತೊಡಗಿರುವ  ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರ ಮುನಿಸು ಹೆಚ್ಚಾಗುತ್ತಲೇ ಇದೆ. 
ಕಾಫೀ-ಟೀ ಕುಡಿಯುವಂತಿಲ್ಲ : ದಸರಾ ಮಹೋತ್ಸವ -೨೦೦೯ರ ಖರ್ಚು- ವೆಚ್ಚದಲ್ಲಿ ದುಂದುಗಾರಿಕೆಯೇ ಸದ್ದು ಮಾಡಿತ್ತು. ಕಳೆದ ವರ್ಷ ಕಾಫೀ- ಟೀ ಕುಡಿಯಲು ಸಾವಿರಾರು ರೂ.  ಬಿಲ್ ಮಾಡಿದ ಮಹಾನುಭವರೂ ಇದ್ದರು. ಒಂದು ಸಮಿತಿಯವರು ಒಂದು ಕುರ್ಚಿಗೆ ೩ ರೂ. ಬಾಡಿಗೆ ತೋರಿಸಿದ್ದರೆ, ಇನ್ನೊಂದು ಸಮಿತಿಯವರು ಅದೇ ಕುರ್ಚಿಗೆ ೧೦ ರೂ. ಬಿಲ್ ಮಾಡಿದ್ದರು. ಯುವ ದಸರಾ, ಜನಪದೋತ್ಸವದಂಥ ಕಾರ್ಯಕ್ರಮಗಳ ವೇದಿಕೆ ನಿರ್ಮಾಣ ದಲ್ಲೂ ಲಕ್ಷಾಂತರ ರೂ. ವ್ಯರ್ಥವಾಗಿ ಹರಿದಿತ್ತು. ಈ ಎಲ್ಲ ಸಂಗತಿಗಳ ಶ್ವೇತ ಪತ್ರವನ್ನು ಮುಂದಿಟ್ಟುಕೊಂಡೇ, ಈಗಿನ ವಿಶೇಷಾಧಿಕಾರಿ  ದಸರಾ ಸಿದ್ಧತೆಗೆ ಇಳಿದಿದ್ದಾರೆ. ಪರಿಣಾಮ ಅಗತ್ಯಕ್ಕಿಂತ ಹೆಚ್ಚಾಗಿಯೇ ಕೈ  ಬಿಗಿ ಮಾಡುತ್ತಿದ್ದಾರೆ ಎಂಬುದು ಬಿಜೆಪಿ ಮುಖಂಡರ ವಾದ.

ಎಲ್ ನೋಡಿದ್ರೂ ಇದೇ ಕಥೆ... !

ಮೈಸೂರು ನಿವೃತ್ತರ ಸ್ವರ್ಗ, ಉತ್ತಮ ಹವಾಗುಣವಿರುವ ನಿರ್ಮಲ ನಗರ ಎಂಬಿತ್ಯಾದಿ ಅಭಿದಾನಕ್ಕೆ ಪಾತ್ರವಾಗಿದೆ. ಆದರೆ ನಗರವನ್ನೊಮ್ಮೆ  ಸುತ್ತಿ ಬಂದರೆ  ನಿರ್ಮಲ ನಗರದ ಬಣ್ಣ ಬಟಬಯಲು. ಯಾವುದೇ ರಸ್ತೆಗೆ ಅಡಿಯಿಟ್ಟರೂ  ತ್ಯಾಜ್ಯರಾಶಿ, ಗಬ್ಬುನಾರುವ ಚರಂಡಿಗಳು, ಅಂದಗೆಡಿಸುವ ದೃಶ್ಯಗಳು ಎದ್ದು ಕಾಣುತ್ತದೆ. ತ್ಯಾಗರಾಜ , ನಾರಾಯಣಶಾಸ್ತ್ರಿ  ರಸ್ತೆ ಮತ್ತು ಇಲ್ಲಿನ ಅಕ್ಕಪಕ್ಕದ ಪ್ರದೇಶಗಳಲ್ಲಿ ಕಣ್ಣು ಹಾಯಿಸಿದರೆ ಸಾಕ್ಷಾತ್ ಕಾಣಬಹುದು.

ಕ್ಲೀನ್ ಅಲ್ಲ, ಡರ್ಟಿ ಸಿಟಿ


‘ನಮ್ಮದು ಸ್ವಚ್ಛ ನಗರ’ ಎಂದು ಬೀಗುವ ಮಂದಿ ಒಮ್ಮೆ ಹೃದಯ ಭಾಗದಲ್ಲಿ ಕಣ್ಣು ಬಿಟ್ಟು ನೋಡುತ್ತಾ ನಡೆದರೆ ಅನೈರ್ಮಲ್ಯದ ದಿವ್ಯದರ್ಶನ ಖಂಡಿತ. ದೇವರಾಜ ಮಾರುಕಟ್ಟೆ  ಮತ್ತು ರೈಲ್ವೆ ನಿಲ್ದಾಣ ಸುತ್ತಲಿನ ‘ಕ್ಲೀನ್ ಸಿಟಿ’ಯ ನೋಟಗಳಿವು.

ಗಜಪಡೆಯೊಂದಿಗೆ ಶ್ವಾನದಳವೂ ದಸರೆಗೆ ಅಣಿ

ಕುಂದೂರು ಉಮೇಶಭಟ್ಟ, ಮೈಸೂರು
ದಸರೆಗೆ ಲಕ್ಷಾಂತರ ಜನ ಬರಬಹುದು, ನಿಮ್ಮನ್ನು ಕಾಯಲು ನಮ್ಮ ತಂಡವೂ ರೆಡಿ...
ಹೀಗೆಂದು ಯಾರು ಅಭಯ ನೀಡಿದರು ಎಂದುಕೊಂಡಿರಿ, ಪೊಲೀಸ್ ಆಯುಕ್ತರು ಇಲ್ಲವೇ ಜಿಲ್ಲಾಧಿಕಾರಿ ಎಂದುಕೊಂಡಿರಾ ಖಂಡಿತ ಅಲ್ಲ..
ಅದು ಮೈಸೂರು ನಗರ ಹಾಗೂ ಜಿಲ್ಲೆಯ ಪೊಲೀಸ್ ಶ್ವಾನ ಪಡೆ.
ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಆರು ವಿಶಿಷ್ಟ ನಾಯಿಗಳು ಭದ್ರತೆ ಹಾಗೂ ಅಪರಾಧ ಪತ್ತೆ ಕಾರ‍್ಯದಲ್ಲಿ ನಿರತವಾಗಿವೆ. ಅದರಲ್ಲೂ ಎರಡು ನಾಯಿಗಳಂತೂ ಸ್ಫೋಟಕಗಳ ಪತ್ತೆಯದ್ದೆ ಕಾಯಕ. ಉಳಿದ ನಾಲ್ಕು ನಾಯಿಗಳು ಅಪರಾಧದ ಜಾಡು ಹಿಡಿಯುವ ಸೇವೆಯಲ್ಲಿ ನಿರತ.
ಆರು ನಾಯಿಗಳ ಜತೆಗೆ ಅಕ್ಕಪಕ್ಕದ ಜಿಲ್ಲೆಯ ಇನ್ನೂ ಆರಕ್ಕೂ ಹೆಚ್ಚು ನಾಯಿಗಳು ದಸರೆ ಭದ್ರತೆಗೆ ಆಗಮಿಸುವ ನಿರೀಕ್ಷೆಯಿದೆ.
ನಾವು ತಂಡದ ಸದಸ್ಯರು... ಮೈಸೂರು ನಗರ ವ್ಯಾಪ್ತಿಯಲ್ಲಿ ಇರುವ ಮೂರು ಶ್ವಾನಗಳಲ್ಲಿ ರೇಖಾ ಅಪರಾಧ ಪತ್ತೆಗೆ ನಿಯೋಜನೆಗೊಂಡಿದೆ. ಐದೂವರೆ ವರ್ಷದ ಪ್ರಾಯದ ಇದು ಡಾಬರ್ ಮನ್ ಜಾತಿಯದ್ದು. ಬಸಂತಕುಮಾರ್ ಅವರೊಂದಿಗೆ ಮೂವರಿಗೆ ಈ ನಾಯಿಯ ಉಸ್ತುವಾರಿ ಹೊಣೆ.

ಮೈಸೂರಲ್ಲಿ ಕ್ಲೀನೇ ಇಲ್ಲ ರೀ... !

ಮೈಸೂರಿಗೆ ಬಸ್ ಮೂಲಕ ಬರುವ ಪ್ರಯಾಣಿಕರು ಗ್ರಾಮಾಂತರ ಬಸ್ ನಿಲ್ದಾಣದ ಸುತ್ತಮುತ್ತಲಿನ  ಈ ಸ್ಥಿತಿ ನೋಡಿದರೆ, ವಾಪಸ್ ಹೋಗುವಾಗ ಅವರು ಕೊಂಡೊಯ್ಯವ ಭಾವನೆ ಹೇಗಿರಬೇಡ ? ಅಯ್ಯೋ ಮೈಸೂರೇನ್ರಿ ?, ಸ್ವಲ್ಪನೂ ಕ್ಲೀನ್ ಇಲ್ಲ. ಅದ್ಯಾವ ಸಂಸ್ಥೆಯವರು ಸ್ವಚ್ಛತೆಯಲ್ಲಿ ಎರಡನೇ ನಗರ ಎಂದು ಬಿರುದು ನೀಡಿದರೋ, ದೇವರೇ ಬಲ್ಲ ಎಂದು ಗೇಲಿ ಮಾಡುವುದು ನಿಶ್ಚಿತ.

ಕೆಲವೆಡೆ ದರ ದು‘ಬಾರಿ’ಧಿಮಾಕು !

ವಿಕ ವಿಶೇಷ ಮೈಸೂರು
ದಸರೆಯ ಹಿನ್ನೆಲೆಯಲ್ಲಿ  ನಗರದ ವಸತಿಗೃಹಗಳಲ್ಲಿ ಬುಕಿಂಗ್ ಜೋರು.ಆದರೆ,ಕೆಲ ವಸತಿಗೃಹಗಳಲ್ಲಿ ‘ದರ ಸುಲಿಗೆ ’ಯದ್ದೇ ಕಾರುಬಾರು !
ದಸರೆ ಬಂತೆಂದರೆ  ಎಲ್ಲೆಲ್ಲೂ ಪ್ರವಾಸೋ ದ್ಯಮದ ಮಂತ್ರ. ಸರಕಾರ,ಜಿಲ್ಲಾಡಳಿತ, ದಸರಾ ಉನ್ನತಾಧಿಕಾರ ಸಮಿತಿ ಸೇರಿದಂತೆ ಎಲ್ಲರದ್ದೂ ‘ಪ್ರವಾಸಿ ಸ್ನೇಹಿ’ ಜಪ. ಹೋಟೆಲ್ ಮಾಲೀಕ ರಂತೂ ‘ಪ್ರವಾಸೋದ್ಯಮ ದೃಷ್ಟಿಯಿಂದ ಸರಕಾರ ಕೈಗೊಳ್ಳಬೇಕಾದ ಕ್ರಮ, ವಿನಾಯಿತಿ- ರಿಯಾ ಯಿತಿ’ಯ ಪಟ್ಟಿ ಕೊಡುತ್ತಾರೆ. ಆದರೆ, ವಸತಿ ಗೃಹಗಳ ದರದ ವಿಷಯಕ್ಕೆ ಬಂದರೆ ಇದ್ಯಾ ವುದೂ ಅನ್ವಯಿಸದು. ದಸರೆಯ ಸಂಭ್ರಮದಲ್ಲಿ ತಕ್ಕಷ್ಟು ಬಾಚಿಕೊಳ್ಳುವ ಲಾಭಕೋರತನ ಹಲವರದ್ದು.
ಸ್ಟಾರ್ ದರ್ಜೆ ಹೋಟೆಲ್ ದರ ಮೊದಲೇ ದುಬಾರಿ. ಹಾಗಾಗಿ ಹೆಚ್ಚಿನ ವ್ಯತ್ಯಾಸವಿರದು. ಆದರೆ, ಮಧ್ಯಮ ವರ್ಗದ ವಸತಿಗೃಹಗಳು ಗಗನ ಕುಸುಮಗಳೇ !

ದೇವರಾಜದಲ್ಲಿ ‘ಮಾರುಕಟ್ಟೆ ಪ್ರದರ್ಶನ’

ಜೆ.ಶಿವಣ್ಣ ಮೈಸೂರು
ನಗರದ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆ ಈ ಬಾರಿಯ ನಾಡಹಬ್ಬ ದಸರೆ ಸಂಭ್ರಮವನ್ನು ಆಚರಿಸಲು ಸಜ್ಜಾಗುತ್ತಿದೆ. ಬರೋಬರಿ ೨೬ ವರ್ಷಗಳ ಬಳಿಕ ‘ಮಾರುಕಟ್ಟೆ ಪ್ರದರ್ಶನ’ಕ್ಕೆ ಅಣಿಯಾಗುತ್ತಿದೆ. ಇದು ಈ ಬಾರಿಯ ದಸರಾ ವಿಶೇಷ.
ಮೈಸೂರು ರಾಜ್ಯಾವನ್ನಾಳಿದ ಅರಸರ ಕೊಡುಗೆ ಯಾಗಿ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಗೊಂಡ ದೇವರಾಜ ಮಾರುಕಟ್ಟೆಯಲ್ಲಿ ಒಡೆಯರ್ ಕಾಲದಿಂದಲೂ ನವರಾತ್ರಿ ದಸರೆ ಉತ್ಸವದಲ್ಲಿ ಪ್ರತಿ ವರ್ಷ ಫಲಪುಷ್ಫ, ತರಕಾರಿ ಪ್ರದರ್ಶನ ಕಾಯಂಆಗಿ ನಡೆಯುತ್ತಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ಬಳಿಕವೂ ಮುಂದುವರಿದಿತ್ತು. ಆ ದಿನಗಳಲ್ಲಿ ದೇವರಾಜ ಮಾರುಕಟ್ಟೆ ಮಾತ್ರ ವಲ್ಲದೇ, ವಿವಿ ಮಾರುಕಟ್ಟೆ, ಮಂಡಿಮಾರುಕಟ್ಟೆ ಮಳಿಗೆದಾರರು ಕೈಜೋಡಿಸುತ್ತಿದ್ದರು ಎನ್ನುವುದನ್ನು ಮಾರುಕಟ್ಟೆ ಯಲ್ಲಿ ಹಲವು ವರ್ಷಗಳಿಂದ ವಹಿವಾಟು ನಡೆಸುತ್ತಿರುವ ಹಿರಿಯರು ನೆನೆಪಿಸಿಕೊಳ್ಳುತ್ತಾರೆ.