ಗಟ್ಟಿ ಕಾಳು ಕೊಟ್ಟವರಿಗೆ ದಕ್ಕಿದ್ದು `ಜೊಳ್ಳು' !

* ಪಿ.ಓಂಕಾರ್ ಮೈಸೂರು
ಈಗ ಎಲ್ಲೆಡೆ ಬಿತ್ತನೆ ಬೀಜದ ಚರ್ಚೆ, ಅದೇ ಸಮಸ್ಯೆ. ಹತ್ತಿ ಬಿತ್ತನೆ ಬೀಜದ ಸಮಸ್ಯೆ ಉಲ್ಬಣಿಸಿದೆ. ಭತ್ತದ ಸಮಸ್ಯೆಯೂ ನಿರೀಕ್ಷಿತ. ಇದು ಬೇಡಿಕೆ-ಕೊರತೆಗೆ ಸಂಬಂಧಿಸಿದ ಸಂಗತಿ. ಕೊರತೆ ನೀಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಭತ್ತ ಬಿತ್ತನೆ ಬೀಜ ಉತ್ಪಾದಕರದ್ದೂ ಅಷ್ಟೆ, ಗಟ್ಟಿ ಕಾಳು ನೀಡಿ `ಜೊಳ್ಳು' ಪಡೆಯುವ ಸ್ಥಿತಿ !
ಎರಡು ವರ್ಷದ ಹಿಂದೆ ಬೀಜೋತ್ಪಾದಕರನ್ನು ದಾವಣ ಗೆರೆಯಲ್ಲಿ ಸೇರಿಸಿ, ಸಮಾವೇಶ ಮಾಡಿ, ಪ್ರೋತ್ಸಾಹ ಧನ ಮತ್ತಿತರ ಭರವಸೆಯ `ಕನಸು ಬಿತ್ತಿ' ಎಲ್ಲರ ತಲೆ ಮೇಲೆ `ಹಸಿರು ಟೋಪಿ' ಇಟ್ಟು ಕಳುಹಿಸಿದ್ದ ರಾಜ್ಯ ಸರಕಾರ, ಕೊಟ್ಟ ಮಾತಿನಂತೆ ನಡೆದುಕೊಂಡದ್ದು ಒಂದು ವರ್ಷ ಮಾತ್ರ.
೨೦೦೮ಕ್ಕೆ ಸಂಬಂಧಿಸಿ ದೊರಕಿದ ಪ್ರೋತ್ಸಾಹ ಧನವನ್ನು ಆನಂತರವೂ ದಕ್ಕಿಸಿಕೊಳ್ಳಲು ಬೀಜೋತ್ಪಾದಕ ರೈತರು ನಿರಂತರ ಅಲೆದು, ಕಚೇರಿ ಮೆಟ್ಟಿಲು ಸವೆಸಿದರೂ ಭರವಸೆ ಈಡೇರಿಲ್ಲ. ಸದ್ಯಕ್ಕೆ ಅವರದ್ದೊಂಥರ `ತಬರ'ನ ಕತೆ.

ಮಂಜಿನನಗರಿ ಮಡಿಕೇರಿಗೆ ಕ್ಷಣಿಕ ಭೂಕಂಪನ ಅನುಭವ

*ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಮಂಜಿನನಗರಿ ಮಡಿಕೇರಿಯಲ್ಲಿ ಬುಧವಾರ ಬೆಳಗ್ಗೆ ೧೦.೫೮ ರ ಅವಧಿಯಲ್ಲಿ ಭಾರಿ ಶಬ್ದದೊಂದಿಗೆ ಕ್ಷಣ ವೊಂದರಲ್ಲಿ ಕಂಪನದ ಅನುಭವ ನೀಡಿದ ಜನ ಬೆಚ್ಚಿಬೀಳುವಂತೆ ಮಾಡಿತ್ತು. ಮರುಕ್ಷಣದಲ್ಲಿಯೇ `ಮಡಿಕೇರಿಯಲ್ಲಿ ಭೂಕಂಪನ...' ಎಂಬ ಸಂದೇಶ ಮಿಂಚಿನ ರೀತಿಯಲ್ಲಿ ಸುಳಿದಾಡಿತು. `ಗೊತ್ತಾಯಿತಾ... ಮಡಿಕೇರಿಯಲ್ಲಿ ಭೂಕಂಪನ... ಏನಾಯಿತು ... ?' ಎಂಬ ಪ್ರಶ್ನೆಗಳ ಸುರಿಮಳೆ ವಿನಿಮಯ ವಾಯಿತು.
ಜಿಲ್ಲೆ ಹಾಗೂ ಹೊರ ಪ್ರದೇಶ ದಲ್ಲಿರುವ ಜನತೆ ಮಡಿಕೇರಿಯಲ್ಲಿರುವ ಸ್ನೇಹಿತರು, ಬಂದು- ಬಳಗ ದವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಘಟನೆ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ. ಕೆಲವರು ಆತಂಕ ಭರಿತರಾಗಿ, ಮತ್ತೆ ಕೆಲವರು ಕುತೂಹಲಕಾರಿಯಾಗಿ ಭೂಕಂಪನ ಅನುಭವಿಗಳನ್ನು ಕೇಳಿ ತಿಳಿದುಕೊಳ್ಳಲು ಹಾತೊರೆದರು. `ಏನೇ ಇರ್‍ಲಿ. ಸ್ವಲ್ಪ ಎಚ್ಚರದಲ್ಲಿ ಇರಿಯಪ್ಪ...' ಎಂಬ ಕಿವಿಮಾತುಗಳು ಆಪ್ತರಿಂದ ಆಪ್ತರಿಗೆ ರವಾನೆಯಾಯಿತು.

ರೈತರ ನಿದ್ದೆಗೆಡಿಸಿದ ಹತ್ತಿ ಬಿತ್ತನೆ ಬೀಜ

* ಆರ್. ಕೃಷ್ಣ  ಮೈಸೂರು
ಬೀಜ ಉತ್ಪಾದಕ ಕಂಪನಿ ಹಾಗೂ ಸರಕಾರದ ನಡುವಿನ ದರ ಸಮರ ಹತ್ತಿ ಬೆಳೆಗಾರರನ್ನು ಮೆತ್ತಗಾಗಿಸಿದೆ.
ಉತ್ಪಾದನೆ ವೆಚ್ಚ ಹೆಚ್ಚಾಗಿರುವುದರಿಂದ ಸರಕಾರ ನಿಗದಿ ಪಡಿಸಿದ ದರದಲ್ಲಿ ಬಿತ್ತನೆ ಬೀಜ ಪೂರೈಕೆ ಅಸಾಧ್ಯ ಎಂದು ಕಂಪನಿಗಳು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ, ಬಿತ್ತನೆ ಬೀಜ ಸರಬರಾಜಿನಲ್ಲಿ ಬಹಳ ವ್ಯತ್ಯಯವಾಗಿದೆ.
ಮುಂಗಾರು ಆರಂಭದಲ್ಲೇ ಹತ್ತಿ ಬಿತ್ತುವ ಕನಸು ಕಂಡಿದ್ದ ರೈತರು, ಬಿತ್ತನೆ ಬೀಜಕ್ಕಾಗಿ ಪರದಾಡುತ್ತಿದ್ದಾರೆ. ಇಡೀ ರಾಜ್ಯ ದಲ್ಲಿಯೇ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಬಿತ್ತನೆ ಚಟುವಟಿಕೆ ಆರಂಭಗೊಳ್ಳಲಿದ್ದು, ಬಿತ್ತನೆ ಬೀಜಕ್ಕೆ ರೈತರು ಪರದಾಡುತ್ತಿದ್ದಾರೆ.
ಪರಿಸ್ಥಿತಿಯ ದುರ್ಲಾಭ ಪಡೆಯಲು ಮುಂದಾದ ಮಾರಾಟಗಾರರು ಅತೀ ಬೇಡಿಕೆ ಇರುವ ಬಿತ್ತನೆ ತಳಿಗಳನ್ನು ದುಪ್ಪಟ್ಟು ಹಣಕ್ಕೆ ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ಹಿಂದಿನ ವರ್ಷ ತಮ್ಮ ಊರುಗಳಲ್ಲೇ ಸಿಗುತ್ತಿದ್ದ್ದ ಬಿತ್ತನೆ ಬೀಜಗಳು `ನೋಸ್ಟಾಕ್' ಬೋರ್ಡ್‌ನಿಂದಾಗಿ ಮೈಸೂರಿಗೆ  ಅಲೆದಾಡ ಬೇಕಾದ ಪರಿಸ್ಥಿತಿ ರೈತರದು. ಬೇಡಿಕೆಗಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಿತ್ತನೆ ಬೀಜವನ್ನು ನೀಡುತ್ತಿರುವುದು ರೈತರನ್ನು ಪ್ರತಿಭಟನೆ ಹಾದಿ ತುಳಿಯುವಂತೆ ಮಾಡಿದೆ.

ಈ ಚಿಕಿತ್ಸೆ ಹೃದಯ ಶಸ್ತಚಿಕಿತ್ಸೆಗಿಂತ ದುಬಾರಿ !

*ಜೆ. ಶಿವಣ್ಣ, ಮೈಸೂರು
ತೆರೆದ ಹೃದಯ ಶಸ್ತ್ರಚಿಕಿತ್ಸೆಗಿಂತ ದುಬಾರಿ ಶಸ್ತ್ರಚಿಕಿತ್ಸೆ ಇದೆ. ಅದು `ಕಾಕ್ಲಿಯರ್' ಶ್ರವಣ ಸಾಧನ ಅಳವಡಿಕೆ (ಕಾಕ್ಲಿಯರ್ ಇಂಪ್ಲಾಂಟ್).
ಮೇಲ್ನೋಟಕ್ಕೆ ತೀರಾ ಸರಳ ಎನಿಸಿದರೂ ಅತ್ಯಂತ ಕ್ಲಿಷ್ಟ, ಮಿಗಿಲಾಗಿ ಅತ್ಯಂತ ದುಬಾರಿ !
ಹುಟ್ಟುವಾಗಲೇ `ಎರಡು ಕಿವಿಗಳು ಕೇಳಿಸದಿರು ವುದು' (ಸೆನ್ಸೋರಿನ್ಯೂರಲ್ ಹೀಯರಿಂಗ್ ಲಾಸ್) ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ತೊಂದರೆ. ಆದರೆ ಸರಿಪಡಿಸಲು ದುಬಾರಿ ಹಣವನ್ನು ತೆರಬೇಕು. ಕಾಕ್ಲಿಯರ್ ಇಂಪ್ಲಾಂಟ್ ಎಂಬ ಪುಟ್ಟ ವಿದ್ಯುನ್ಮಾನ ಸಾಧನವನ್ನು ಅಳವಡಿಸಲು ಸುಮಾರು ೧೧ ಲಕ್ಷ ರೂ. ಬಡವರಿಗಂತೂ ಗಗನಕುಸುಮ.
ಕಾಕ್ಲಿಯರ್ ಇಂಪ್ಲಾಂಟ್‌ನಲ್ಲಿ ೨ ಭಾಗ ( ಕಾಂಪೋ ನೆಂಟ್) ವಿದೆ. ಒಂದನ್ನು ಕಿವಿಯ ಹಿಂಭಾಗದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸುವುದು. ಜೀವನ ಪರ್ಯಂತ ದೇಹದ ಒಂದು ಭಾಗವಾಗಿರುತ್ತದೆ. ಇನ್ನೊಂದು ಹೊರಭಾಗದಲ್ಲಿ ಧರಿಸುವುದು. ಈ ಸಾಧನ ತಯಾರಿಕೆ ಕ್ಲಿಷ್ಟ ಮತ್ತು ಸೂಕ್ಷ್ಮ, ಅಳವಡಿಕೆಯೂ ಸಹ. ಇದುವೇ ದುಬಾರಿಗೆ ಕಾರಣ. ಜತೆಗೆ, ಸಿ.ಟಿ.ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್, ಶ್ರವಣ ಪರೀಕ್ಷೆ, ಸರ್ಜರಿ, ಆಸ್ಪತ್ರೆ ವೆಚ್ಚ, ಮಗುವಿಗೆ ತರಬೇತಿ ಇತ್ಯಾದಿಯಿದೆ. ಭಾರತದಲ್ಲಿ ೪ ವಿದೇಶಿ ಕಂಪನಿಗಳ ಸಾಧನ ಲಭ್ಯವಿದ್ದರೂ, ಆಸ್ಟ್ರೇಲಿಯಾ ಮೂಲದ ಕಂಪನಿ ಹೆಚ್ಚು ಬಳಸುತ್ತಾರೆ ಎನ್ನುತ್ತಾರೆ ವೈದ್ಯರು.

ಕೈಗಾರಿಕಾ ಅದಾಲತ್‌ಗೆ ಕೂಡಿ ಬಾರದ ಮುಹೂರ್ತ

*ಆರ್. ಕೃಷ್ಣ ಮೈಸೂರು
ನಾನಾ ಕಾರಣದಿಂದ ಎರಡು ಬಾರಿ ಮುಂದೂಡಲಾಗಿದ್ದ ಕೈಗಾರಿಕಾ ಅದಾಲತ್‌ಗೆ ಏಕೋ ಮುಹೂರ್ತವೇ ಕೂಡಿಬರುತ್ತಿಲ್ಲ. ಮೂರನೇ ಬಾರಿಗೆ ಏ. ೨೭ಕ್ಕೆ ನಿಗದಿಯಾಗಿದ್ದ ಅದಾಲತ್ ಮತ್ತೆ ಮುಂದೂಡ ಲ್ಪಟ್ಟಿದೆ.
ಈ ಹಿಂದೆ ೨೦೧೦ರ ಜನವರಿ ೧೮ರಂದು ನಡೆಯಬೇಕಿದ್ದ ಅದಾಲತ್‌ಅನ್ನು ಚಿತ್ರನಟ ಕೆ.ಎಸ್.ಅಶ್ವಥ್ ಅವರ  ನಿಧನದಿಂದ ಮುಂದೂಡಲಾಯಿತು. ಬಳಿಕ ೨೦೧೦ರ ನವಂಬರ್ ೧೩ರಂದು ನಡೆಯಬೇಕಿದ್ದ ಅದಾಲತ್ ಕೂಡ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರ ವೈಯಕ್ತಿಕ ಸಮಸ್ಯೆಯಿಂದ ಮುಂದೂ ಡಲ್ಪಟ್ಟಿತ್ತು. ಇದೀಗ ೨೭ರ ಅದಾಲತ್  ಮುಂದೂಡಿಕೆಗೆ ಕಾರಣ ಏನೆಂದು ಮಾತ್ರ ಯಾರಿಗೂ ಗೊತ್ತಿಲ್ಲ.  ಆದರೆ ಅದಾಲತ್‌ನಿಂದ ಬಹಳಷ್ಟು ನಿರೀಕ್ಷೆ ಇಟ್ಟು ಕೊಂಡಿದ್ದ ಜಿಲ್ಲೆಯ ಉದ್ಯಮಿಗಳು ಮಾತ್ರ ಇದರಿಂದ ತೀವ್ರ ನಿರಾಸೆಗೊಳಗಾಗಿದ್ದಾರೆ.

ತಲೆ ಎತ್ತಲಿದೆ ಅತಿ ದೊಡ್ಡ ಮೃಗಾಲಯ

*ಕುಂದೂರು ಉಮೇಶಭಟ್ಟ ಮೈಸೂರು
ರಾಜ್ಯದ ಅತಿ ದೊಡ್ಡ ಮೃಗಾಲಯ ಯಾವುದು ಎಂದರೆ, ಥಟ್ಟನೆ ಬರುವ ಉತ್ತರ ಮೈಸೂರು. ಆದರೆ ಇದಕ್ಕಿಂತ ವಿಶಾಲ ಹಾಗೂ ದೊಡ್ಡ ಮೃಗಾಲಯ ಹಂಪಿ ಬಳಿ ತಲೆ ಎತ್ತಲಿದೆ.
ಮೈಸೂರಿನ ನೂರು ವರ್ಷ ಇತಿಹಾಸವಿರುವ ಚಾಮರಾಜೇಂದ್ರ ಮೃಗಾಲಯದ ವಿಸ್ತೀರ್ಣ ೧೦೦ ಎಕರೆ ಯಷ್ಟೆ. ಆದರೆ ಹಂಪಿ ಬಳಿ ಬರೋಬ್ಬರಿ ೧೫೦ ಎಕರೆ ಪ್ರದೇಶದಲ್ಲಿ ರಾಜ್ಯದ ದೊಡ್ಡ ಮೃಗಾಲಯ ರೂಪಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮುಂದಾಗಿದೆ. ಪ್ರಾಧಿಕಾರ ಸೇರಿದಂತೆ ನಾನಾ ಸಂಸ್ಥೆಗಳ ಆರ್ಥಿಕ ನೆರವು ಸುಮಾರು ೨೨ ಕೋಟಿ ರೂ.ಗಳನ್ನು ಬೃಹತ್ ಮೃಗಾಲಯ ಕ್ಕಾಗಿಯೇ ಮೀಸಲಿಡಲಾಗಿದೆ. ಈಗಾಗಲೇ ರಾಜ್ಯ ಸರಕಾರವೂ ಯೋಜನೆಗೆ ಒಪ್ಪಿಗೆ ನೀಡಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಒಪ್ಪಿಗೆಗೆ ಕಾಯಲಾಗುತ್ತಿದೆ.

ಇದು ದೇವ`ರಾಜಾ'ಯಣ

* ಕುಂದೂರು ಉಮೇಶಭಟ್ಟ ಮೈಸೂರು
ಅದು ಡಾ.ರಾಜಕುಮಾರ್ ಅವರ ಕೆರಳಿದಸಿಂಹ  ಚಿತ್ರ. ಬ್ಲಾಕ್ ಟಿಕೆಟ್ ಮಾರಾಟದ ಜಾಲ ಜೋರಾಗಿದ್ದ ಕಾಲ. ಅದಕ್ಕೆ ಅವಕಾಶ ಕೊಡಲೇ ಇಲ್ಲ ಎನ್ನುವ ಕಾರಣಕ್ಕೆ ೧೩ರೌಡಿಗಳು ಬೆನ್ನತ್ತಿ ಜೀವ ತೆಗೆಯಲು ಮುಂದಾಗಿದ್ದರು.ಅಣ್ಣಾವ್ರ ಶೈಲಿಯಲ್ಲೇ ಆಯುಧ ಪ್ರದರ್ಶಿಸಿದಾಗ ಅವರೆಲ್ಲಾ ಓಡಿ ಹೋದರು.ನಾನು ಬದುಕಿದೆ...
-ಹೀಗೆ ಡಾ.ರಾಜ್ ತಮ್ಮ ಮೇಲೆ ಬೀರಿದ್ದ  ಪ್ರಭಾವವನ್ನು ಹೇಳಿದವರು ಡಾ.ರಾಜ್ ಕುಟುಂಬದ ಚಿತ್ರಗಳನ್ನು ಹೆಚ್ಚು ಪ್ರದರ್ಶಿಸಿರುವ ಮೈಸೂರಿನ ಶಾಂತಲಾ ಚಿತ್ರಮಂದಿರದ ಮ್ಯಾನೇಜರ್ ದೇವರಾಜ್.
ರಾಜ್ ಅವರನ್ನು ಹತ್ತಿರದಿಂದ ಬಲ್ಲ, ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ ಪ್ರಾಮಾಣಿಕತೆಯ ಬದುಕು ಕಟ್ಟಿಕೊಂಡವರು ದೇವರಾಜ್. ಚಿತ್ರೋದ್ಯಮದ ಭಾಗವಾಗುಳಿದ ಅವರಿಗೆ  ಡಾ.ರಾಜ್ ಎಂದರೆ  ಅವರೊಬ್ಬ ತಪಃ ಶಕ್ತಿ ಎಂದೇ ನಂಬಿಕೆ. ಹಲವು ಬಾರಿ ದೇವರಾಜ್ ಮೇಲೆ ರೌಡಿಗಳ ದಾಳಿ ಪ್ರಯತ್ನವಾಗಿದೆ. ಒಂದೆರಡು ಬಾರಿ ಸಣ್ಣ ಪುಟ್ಟ ಏಟನ್ನೂ ತಿಂದಿದ್ದಾರೆ.

ಮುಕ್ತ ವಿವಿ:`ಹಂಗಾಮಿ' ಪರ ಮತ್ತೆ ಲಾಬಿ

* ವಿಕ ವಿಶೇಷ ಮೈಸೂರು
ಕಾಯಂ ಬೋಧಕೇತರ ಸಿಬ್ಬಂದಿ ನೇಮಕ ಆಗುವವರೆಗೆ  ಹಂಗಾಮಿ ಯಾಗಿ `ಇರಲಿ' ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನೇಮಿಸಿಕೊಂಡಿರುವ ೮೬ ಮಂದಿ  ನೌಕರರಿಗೆ ವೇತನ ಪರಿಷ್ಕರಣೆ ಮಾಡಿಸಲು ಈಗ ತೆರೆಮರೆಯ ಯತ್ನ ಶುರುವಾಗಿದೆ.
೯೯ ಕಾಯಂ ನೌಕರರನ್ನು ನೇಮಕ ಮಾಡಿಕೊಳ್ಳುವ ಸಂಬಂಧ  ಸರಕಾರ ಈಗಾಗಲೇ ಪ್ರಕ್ರಿಯೆ ಆರಂಭಿಸಿದ್ದರೂ,ಹಂಗಾಮಿ ನೌಕರರಿಗೆ ವೇತನ ಹೆಚ್ಚಿಸಲು ವಿವಿಯ ಕೆಲ ವ್ಯವಸ್ಥಾಪನ ಮಂಡಳಿ ಸದಸ್ಯರು ರಾಜಕೀಯ ಮಾಡುತ್ತಿರುವುದು ವಿವಿ ಕುಲಪತಿ ಪ್ರೊ. ಕೆ. ಎಸ್. ರಂಗಪ್ಪ  ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿವಿ ವ್ಯವಸ್ಥಾಪನ ಮಂಡಳಿ ಸಭೆಯಲ್ಲಿ  ಪ್ರಸ್ತಾಪವಾಗಿರುವ ವೇತನ ಪರಿಷ್ಕರಣೆ ವಿಷಯ, ಸಭೆಯಲ್ಲಿ ಬಿಸಿ-ಬಿಸಿ ಚರ್ಚೆಗೂ ಕಾರಣವಾಗಿದೆ.  ಅಂತಿಮವಾಗಿ ಸಭೆ ಯಾವುದೇ ನಿರ್ಧಾರಕ್ಕೆ ಬರದೇ, ಇದೇ ವಿಷಯ ಚರ್ಚಿಸಲು ಇನ್ನೊಂದು ಸಭೆ ಕರೆಯಲು ನಿರ್ಧರಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

`ಉದ್ಯಮಿಯಾಗಿ, ಉದ್ಯೋಗ ನೀಡಲು' ರೆಡಿಯಾಗಿ

*ಆರ್.ಕೃಷ್ಣ ಮೈಸೂರು
`ಉದ್ಯಮಿಯಾಗು, ಉದ್ಯೋಗ ನೀಡು'-ರಾಜ್ಯ ಸರಕಾರದ  ಮಹತ್ವದ ಯೋಜನೆ ಅನುಷ್ಠಾನಕ್ಕೆ ಕಾಲ ಕೂಡಿ ಬಂದಿದೆ.
ಸರಕಾರಿ ಉದ್ಯೋಗವನ್ನೇ ನಂಬಿ ಕೂರುವ ಕಾಲ ಇದಲ್ಲ. ಸ್ವ-ಉದ್ಯೋಗದ ದಾರಿ ಹಿಡಿದು,ಇತರರಿಗೂ ಉದ್ಯೋಗ ನೀಡುವುದು ಈ ಕಾಲದ ಅಗತ್ಯ.ಇಂಥ ಕನಸುಳ್ಳವರಿಗೆ `ಆಸರೆ'ಯಾಗುವುದು ಸರಕಾರದ ಉದ್ದೇಶ. ನಿರುದ್ಯೋಗ ನಿವಾರಣೆ  ಜತೆಗೆ ಉದ್ಯಮಿಗಳ ಸೃಷ್ಟಿ ಇನ್ನೊಂದು ಆಶಯ.
ಮುಖ್ಯವಾಗಿ ಅಂತಿಮ ವರ್ಷದ ತಾಂತ್ರಿಕ (ಎಂಜಿನಿಯರಿಂಗ್), ಡಿಪ್ಲೊಮಾ ಪದವೀಧರರು ಮತ್ತು ನಿರ್ವಹಣೆ ಅಧ್ಯಯನ (ಮ್ಯಾನೇಜ್‌ಮೆಂಟ್) ಸ್ನಾತಕೋತ್ತರ (ಎಂಬಿಎ) ಪದವೀಧರರನ್ನು ಯೋಜನೆ  ಗುರಿಯಾಗಿಟ್ಟು ಕೊಂಡಿದ್ದು, ಮೈಸೂರು,ಮಂಡ್ಯ, ಕೊಡಗು,ಚಾಮರಾಜನಗರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ವಿದ್ಯಾಭ್ಯಾಸದ ಬಳಿಕ ಉದ್ಯೋಗ ಹುಡುಕಾಟಕ್ಕಿಳಿಯುವವರು, ಸೂಕ್ತ ಮಾರ್ಗದರ್ಶನ ಇಲ್ಲದೆ  ಪರಿತಪಿಸುವವರು ಅನೇಕರು.ವಿದ್ಯಾರ್ಥಿ ದಿಸೆಯಲ್ಲಿಯೇ ಪೂರಕ ಮಾಹಿತಿ ಸಿಕ್ಕರೆ  ಮುಂದೆ ಉದ್ಯಮ ತೆರೆಯಲು ಸಹಾಯಕವಾಗುತ್ತದೆ ಎನ್ನುವ ಚಿಂತನೆ ಸರಕಾರದ್ದು. ಆಸಕ್ತರಿಗೆ ಪೂರಕ ಮಾಹಿತಿ,ಸಾಲ ಸೌಲಭ್ಯ, ಮಾರ್ಗದರ್ಶನ, ತಜ್ಞರು, ಅನುಭವಿಗಳೊಂದಿಗೆ ವಿಚಾರ ವಿನಿಮಯಕ್ಕೆ ಅವಕಾಶವಿದೆ.

ಮೊದಲ ದಿನ ಮಳೆಯದ್ದೇ ಆಟ

* ಸಣ್ಣುವಂಡ ಕಿಶೋರ್ ನಾಚಪ್ಪ ಪೊನ್ನಂಪೇಟೆ
ಕೊಡವ ಕುಟುಂಬ ತಂಡಗಳ ನಡುವಿನ ಹದಿನೈದನೇ ವರ್ಷದ ಹಾಕಿ ಉತ್ಸವ `ಮಚ್ಚಮಾಡ ಕಪ್-೨೦೧೧'ಗೆ  ಮಳೆ ಆತಂಕದ ನಡುವೆಯೂ ಶುಕ್ರವಾರ  ಸಂಭ್ರಮದ ಚಾಲನೆ  ದೊರೆಯಿತು.
ಸರಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ, ಕೊಡವ ಹಾಕಿ ಸಂಸ್ಥೆ ಸ್ಥಾಪಕ ಅಧ್ಯಕ್ಷ ಪಾಂಡಂಡ ಕುಟ್ಟಣಿ ಕುಟ್ಟಪ್ಪ  ಸಂಭ್ರಮಕ್ಕೆ ಚಾಲನೆ ನೀಡಿದರು.
ಉತ್ಸವದ  ಪ್ರಥಮ ದಿನದ ಪಂದ್ಯದ ವೇಳೆ ಧಾರಾಕಾರ ವಾಗಿ ಸುರಿದ ಮಳೆಯಿಂದಾಗಿ ಫಲಿತಾಂಶವನ್ನು ಟೈಬ್ರೇಕರ್- ಸಡನ್‌ಡೆತ್ ಮೂಲಕ ನಿರ್ಧರಿಸ ಲಾಯಿತು.  ಪೊನ್ನಂಪೇಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ  ಮೈದಾನದಲ್ಲಿ ನಡೆಯಬೇಕಾಗಿದ್ದ ನಾಲ್ಕು ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಮೈದಾನದಲ್ಲಿ ನಡೆಯ ಬೇಕಾಗಿದ್ದ ಮೂರು ಪಂದ್ಯದ ಫಲಿತಾಂಶವನ್ನು ಟೈಬ್ರೇಕರ್, ಸಡನ್‌ಡೆತ್ ಮೂಲಕ ತೀರ್ಮಾನಿಸ ಲಾಯಿತು. ಟೈಬ್ರೇಕರ್‌ನಲ್ಲಿ ಜಯ ಸಾಧಿಸಿದ ನಾಯಕಂಡ, ಬಡ್ಡಿರ, ಮತ್ರಂಡ, ತಂಬುಕುತ್ತಿರ, ಕುಯಿಮಂಡ, ಅಲ್ಲಂಡ, ಪಂದ್ಯಂಡ ಕುಟುಂಬ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದಿವೆ.

ಎಂಎಂಸಿಯಲ್ಲಿ ನರ್ಸಿಂಗ್ ಕಾಲೇಜು

* ಜೆ.ಶಿವಣ್ಣ   ಮೈಸೂರು
ಮೈಸೂರು ವೈದ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸದ್ಯವೇ ನರ್ಸಿಂಗ್ ಕಾಲೇಜು ಆರಂಭ ವಾಗಲಿದೆ.
ಪ್ರಸ್ತುತ ರಾಜ್ಯದಲ್ಲಿ ನಾಲ್ಕು ಜಿಲ್ಲೆಗಳಲ್ಲಿ (ಬೆಂಗಳೂರು, ಹಾಸನ, ಹೊಳೆನರಸೀಪುರ, ಬಳ್ಳಾರಿ) ಮಾತ್ರ ಸರಕಾರಿ ನರ್ಸಿಂಗ್ ಕಾಲೇಜುಗಳಿದ್ದು, ಈಗ ಮೈಸೂರು ಸೇರ್ಪಡೆಯಾಗಲಿದೆ.
ರಾಜ್ಯ ಸರಕಾರದ ಅನುಮತಿ ಸಿಕ್ಕರೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ (ಜೂನ್) ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಸಂಸ್ಥೆಯು  ಸರಕಾರದ ಅನುಮತಿ ದೊರೆಯಲಿದೆ ಎನ್ನುವ ಬಹುನಿರೀಕ್ಷೆಯೊಂದಿಗೆ ಕಾಲೇಜು ಆರಂಭಕ್ಕೆ ಸಜ್ಜಾಗುತ್ತಿದೆ. ಸ್ವಂತ ಕಟ್ಟಡ ಹೊಂದುವವರೆಗೆ ತಾತ್ಕಾಲಿಕವಾಗಿ ಕಾಲೇಜು ನಡೆಸಲು ವೈದ್ಯ ಕಾಲೇಜಿಗೆ ಹೊಂದಿಕೊಂಡ ಹಳೆ ವಸ್ತುಪ್ರದರ್ಶನ ಕಟ್ಟಡದ ೨ ನೇ ಅಂತಸ್ತಿನಲ್ಲಿ ನವೀಕರಣ ಕಾರ್ಯ ಆರಂಭವಾಗಿದೆ.

ಸಫಾರಿ ದುಬಾರಿ: ಶಿಫಾರಸು ಭಾರೀ

*ಕುಂದೂರು ಉಮೇಶಭಟ್ಟ ಮೈಸೂರು
`ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಅಭಿಮಾನಿಗಳ ಸಂಘದವರು ನಾವು, ಸಾಹೇಬ್ರೇ ನಮ್ಮನ್ನು ಇಲ್ಲಿಗೆ ಕಳುಹಿಸಿ ದ್ದಾರೆ. ಬೇಗನೆ ಸಫಾರಿ ವ್ಯವಸ್ಥೆ ಮಾಡಿ...ಗೃಹ ಸಚಿವರ ಕಡೆಯವರು ನಾವು,ಅವರ ಲೆಟರ್‌ಹೆಡ್‌ನಲ್ಲೇ ಶಿಫಾರಸು ತಂದಿದ್ದೇವೆ, ನಮ್ಮೆಲ್ಲರಿಗೂ ಅತಿಥಿಗೃಹ ಬೇಕೇ ಬೇಕು...'
ಬೇಸಿಗೆ ರಜೆ ಶುರುವಾಗು ತ್ತಿದ್ದಂತೆ ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿ ಸೇರಿದಂತೆ ರಾಜ್ಯದ ಪ್ರಮುಖ ಅರಣ್ಯ ಪ್ರದೇಶದಲ್ಲೀಗ ಇಂಥದೇ ಶಿಫಾರಸುಗಳ ಮಹಾಪೂರ.

`ವೀರಪ್ಪನ್ ಅರಣ್ಯ' ಇನ್ನು ಪ್ರವಾಸಿ ತಾಣ

*ಫಾಲಲೋಚನ ಆರಾಧ್ಯ/ಗುರುಸ್ವಾಮಿ ಕೊಳ್ಳೇಗಾಲ
ಕಾವೇರಿ ವನ್ಯಜೀವಿ ವಲಯದ ದಟ್ಟಾರಣ್ಯದಲ್ಲಿ ಚಾರಣ ಮಾರ್ಗವನ್ನು ಗುರುತಿಸಿರುವ ಅರಣ್ಯ ಇಲಾಖೆ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಡಿ ಇಟ್ಟಿದೆ.
ಕಾಡುಗಳ್ಳ, ನರಹಂತಕ ವೀರಪ್ಪನ್ ಹಾವಳಿಯಿಂದ ಜಿಲ್ಲೆಯ ಅರಣ್ಯದ ಸೊಬಗನ್ನು ಸವಿಯಲು ಸಾಮಾನ್ಯರಿಂದ ಸಾಧ್ಯವಾಗಿರಲಿಲ್ಲ. ಆತನ ಹುಟ್ಟೂರು ಗೋಪಿನಾಥಂ ಮತ್ತು ಸುತ್ತಮುತ್ತಲ ಸುಂದರ ಅರಣ್ಯ, ಪ್ರವಾಸಿ ತಾಣಗಳಂತು ಅಪರಿಚಿತ.
ಆದರೀಗ ಕಾಡುಗಳ್ಳ ಉಳಿದಿಲ್ಲ. ಆದ್ದರಿಂದ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಹಾಗೂ ಕೊಳ್ಳೇಗಾಲ ಅರಣ್ಯ ವಿಭಾಗಕ್ಕೆ ಸೇರಿದ ಮಲೆಮಹಾದೇಶ್ವರಬೆಟ್ಟ ಹಾಗೂ ನಾಗಮಲೆ ಅರಣ್ಯಗಳಲ್ಲಿ ಈಗ ಚಾರಣ ಸಲೀಸು.

೨೨ ಯೋಜನೆ ೨ವಾರದೊಳಗೆ ಮುಗಿಸಲು ಸೂಚನೆ

*ವಿಕ ಸುದ್ದಿಲೋಕ ಮಡಿಕೇರಿ
ಜಿಲ್ಲೆಯಲ್ಲಿ ಅಪೂರ್ಣವಾದ ೨೨ ಕುಡಿಯುವ ನೀರಿನ ಯೋಜನೆಯನ್ನು ೨ ವಾರದೊಳಗೆ ಪೂರ್ಣಗೊಳಿಸುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಹೇಳಿದ್ದಾರೆ.

ನೀರಿಗಾಗಿ ಕಸರತ್ತು !

ಬಹುತೇಕ ಗ್ರಾಮಗಳ ಜನತೆಗೆ ನೈಸರ್ಗಿಕ ನೀರೇ ಆಧಾರ. ಪೈಪ್‌ಲೈನ್ ಅಳವಡಿಸಲು ಕನಿಷ್ಠ ಹಣ ವಿನಿಯೋಗಿಸಿದರೆ ಈ ಭಾಗದಲ್ಲಿ ನೀರಿನ ಸಮಸ್ಯೆ ಇರದು. ದೊಡ್ಡ ಯೋಜನೆ ರೂಪಿಸಿ, ದೊಡ್ಡದಾಗಿ ಪ್ರಚಾರ ಪಡೆಯುವ ಭರದಲ್ಲಿ ಜನಪ್ರತಿನಿಧಿಗಳು ನೀರಿನ ಶಾಶ್ವತ ಪರಿಹಾರದತ್ತ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಕುಂದೈರೀರ ಎಂ. ರಮೇಶ್.

ಮುಖ್ಯಮಂತ್ರಿಗೆ ಈಗ ಗುರುಬಲ

*ವಿಕ ಸುದ್ದಿಲೋಕ ಸುತ್ತೂರು/ಮೈಸೂರು
`ಯಾರೇ ತೊಂದರೆ ಕೊಟ್ಟರೂ ವೀರಶೈವ ಸಮಾಜ ಸಹಿಸಿಕೊಳ್ಳದು. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಭಯಪಡದೆ ಕೆಲಸ ಮಾಡಿ' ಎಂದು ಅಖಿಲ ಭಾರತ ವೀರಶೈವ ಮಹಾಧಿವೇಶನವು ಸಿಎಂ ಯಡಿಯೂರಪ್ಪ ಅವರಿಗೆ ಸ್ಪಷ್ಟ ಅಭಯ ನೀಡಿದೆ.
ಸುತ್ತೂರು ಮಠದ ಆಶ್ರಯದಲ್ಲಿ ೩ ದಿನಗಳ ಕಾಲ ನಡೆದು ಮಂಗಳವಾರ ಮುಕ್ತಾ--ಯ-ಗೊಂಡ ೨೨ನೇ ಮಹಾಧಿವೇಶ-ನವು ಸಿಎಂ ಅವರ ಪರ ಟೊಂಕ ಕಟ್ಟಿ ನಿಂತಿದೆ.
ಅಧಿವೇಶನದ ಸಮಾರೋಪ ಸಮಾರಂಭ-ದಲ್ಲಿ ಮಾತನಾಡಿದ ಸ್ವಾಮೀಜಿಗಳು, ಸಿಎಂ ಅವರ ಪರವಾಗಿ ಸ್ಪಷ್ಟ ಸಂದೇಶ ರವಾನಿಸಿದರು.

ಕುರ್ಚಿ ಉಳಿಸಿಕೊಳ್ಳಲು ಇಲ್ಲಿಗೆ ಬರಬೇಡಿ: ಸಿದ್ದಲಿಂಗೇಶ್ವರ ಸ್ವಾಮೀಜಿ

 *ಶ್ರೀ ಶಿವರಾತ್ರಿ ರಾಜೇಂದ್ರ ವೇದಿಕೆ ಸುತ್ತೂರು
ಅಣ್ಣಾ ಹಜಾರೆಯವರ ಜನಲೋಕಪಾಲ ವಿಧೇಯಕ  ಜಾರಿಗೆ ಆಗ್ರಹಿಸಿರುವ ಮಠಾಧಿಪತಿಗಳು, ಕುರ್ಚಿ ಉಳಿಸಿಕೊಳ್ಳಲು ತಮ್ಮತ್ತ ಬರಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ೨೨ ನೇ ಮಹಾಅಧಿವೇಶನದ ಮೂರನೇ ದಿನವಾದ ಮಂಗಳವಾರ ಮಠಾಧೀಶರ ಸಮಾವೇಶವನ್ನು ಉದ್ಘಾಟಿಸಿದ ಹರಿಹರದ ವೀರಶೈವ ಲಿಂಗಾಯತ ಶ್ರೀ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ೨೦೦೮ ಸಿದ್ಧಲಿಂಗೇಶ್ವರ ಸ್ವಾಮೀಜಿ ತಮ್ಮ ಅಭಿಪ್ರಾಯ ವನ್ನು ಸ್ಪಷ್ಟಪಡಿಸಿದರು. ವಿಧೇಯಕ ಜಾರಿಯಾಗಲಿ: ಮಠಗಳು ಎಂದಿಗೂ ಭ್ರಷ್ಟಾಚಾರವನ್ನು ಬೆಂಬಲಿಸಿಲ್ಲ, ಬೆಂಬಲಿಸುವುದೂ ಇಲ್ಲ. ಜನಲೋಕಪಾಲ ವಿಧೇಯಕ ಆಗ್ರಹಿಸಿ ಅಣ್ಣಾ ಹಜಾರೆ ನಡೆಸುವ ಹೋರಾಟವನ್ನು ಬೆಂಬಲಿಸಬೇಕು. ಕರ್ನಾಟಕದಲ್ಲಿ ಶೀಘ್ರವೇ ಲೋಕಪಾಲ ವಿಧೇಯಕ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಭಿನ್ನ ಧ್ವನಿಗಳಿಗೆ ವೇದಿಕೆಯಾದ ಅಧಿವೇಶನ

*ವಿಕ ಸುದ್ದಿಲೋಕ ಸುತ್ತೂರು
ಅಖಿಲ ಭಾರತ ವೀರಶೈವ ಮಹಾಸಭಾದ ೨೨ನೇ  ಅಧಿವೇಶನದ ಎರಡನೇ ದಿನ  ಭಿನ್ನದನಿಗಳಿಗೆ ವೇದಿಕೆ ಸಿಕ್ಕಿತು !
ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ  ಹಾಗೂ ಅವರ ಸಂಪುಟದ ಮಂತ್ರಿಗಳ ಒಡ್ಡೋಲಗದಿಂದಾಗಿ ಮೊದಲ ದಿನ  ಒಳ್ಳೆಯ ಮಾತುಗಳು,  ಓಲೈಸುವಿಕೆ, ಸಂಭ್ರಮ-ಸಡಗರಕ್ಕೆ ಮೀಸಲಾಗಿದ್ದ ವೇದಿಕೆಗಳಲ್ಲಿ  ಸೋಮವಾರ ಪ್ರಶ್ನೆಗಳು, ಸಂಶಯಗಳು, ರಾಜಕೀಯ ಟೀಕೆ, ಚರ್ಚೆ, ವಾಗ್ವಾದಗಳು ಎದ್ದವು. ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದು ಸಂಘಟಕರು ಹೇಳಿದ್ದರಾದರೂ, ಎರಡನೇ ದಿನವೂ ರಾಜಕೀಯದ ಮಾತು ವೇದಿಕೆಗಳಿಂದ ಮೊಳಗಿದವು. ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪ, ಕೇಂದ್ರದ ಮಾಜಿ ಸಚಿವ  ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ  `ಭಿನ್ನ' ಮಾತುಗಳು ಮೆರೆದವು !

ಬೇರೆ ಪಕ್ಷ ಅಧಿಕಾರಕ್ಕೆ ಬಂದ್ರೆ ವೀರಶೈವರ ಸ್ಥಾನ ಯಾವುದು ?

*ವಿಕ ಸುದ್ದಿಲೋಕ ಮೈಸೂರು
`ವೀರಶೈವ ಸಮಾಜ ಯಾವುದೋ ಒಂದು ಪಕ್ಷಕ್ಕೆ ಸೀಮಿತ ಹಾಗೂ ವ್ಯಕ್ತಿ ಕೇಂದ್ರಿತ ಎಂಬ ಭಾವನೆ ಇದೆ. ಇದನ್ನು ಹೋಗಲಾಡಿಸಬೇಕಿದೆ. ಇಲ್ಲದಿದ್ದರೆ, ನಾಳೆ ಬೇರೆ ಪಕ್ಷ ಅಧಿಕಾರಕ್ಕೆ ಬಂದರೆ ವೀರಶೈವ ಸಮಾಜ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದೀತು' ಎಂದು ಕೇಂದ್ರದ ಮಾಜಿ ಸಚಿವ, ಜಾತ್ಯತೀತ ಜನತಾದಳ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದ್ದಾರೆ.
ನಂಜನಗೂಡು ತಾಲೂಕು ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆ ಯುತ್ತಿರುವ ಅಖಿಲ ಭಾರತ ವೀರಶೈವ ಮಹಾಸಭಾದ ೨೨ನೇ ಮಹಾ ಅಧಿವೇಶನದ ಎರಡನೇ ದಿನವಾದ ಸೋಮ ವಾರ  ನಡೆದ `ಸಮಾಜ ಸಂಘಟನೆಯಲ್ಲಿ ಸಂಘ-ಸಂಸ್ಥೆಗಳ ಪಾತ್ರ' ಕುರಿತ ಸಮಾವೇಶವನ್ನು ಉದ್ಘಾಟಿಸಿದ ಯತ್ನಾಳ್ ಮಹಾಸಭಾದ ರಾಜಕೀಯ ನಡವಳಿಕೆ ಕುರಿತು ತಕರಾರು ಎತ್ತಿದರು.

ಮೊದಲ ದಿನವೇ ಸಂಭ್ರಮ: ಜನವೋ ಜನ

* ವಿಕ ಸುದ್ದಿಲೋಕ ಸುತ್ತೂರು
ಹಸಿರು ಹೊದ್ದ ಭೂರಮೆ, ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಧ್ವಜಗಳು, ಸಾಂಸ್ಕೃತಿಕ ವೈಭವದ ನಡುವೆ ಹಬ್ಬದ ವಾತಾವರಣ, ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಪ್ರತಿನಿಧಿಗಳ ಉತ್ಸಾಹದ ನಡುವೆ ವೀರಶೈವ ಅಧಿವೇಶನಕ್ಕೆ ಭಾನುವಾರ ಚಾಲನೆ ದೊರಕಿತು.
ಅಧಿವೇಶನಕ್ಕಾಗಿ ಟೌನ್‌ಶಿಪ್ ರೂಪ ಪಡೆದುಕೊಂಡ ಕಪಿಲಾ ತೀರದ ಪುಟ್ಟ ಗ್ರಾಮ ಸುತ್ತೂರಿನಲ್ಲಿ ವಿಭಿನ್ನ ಲೋಕವೇ ರೂಪು ಗೊಂಡಿದೆ. ಸುತ್ತೂರಿಗೆ ಆಗಮಿಸುವ ಮಾರ್ಗ ಮಧ್ಯೆ ಜಮೀನು ಈಗ ಹಸಿರುಮಯ. ಜತೆಗೆ ಗಣ್ಯರ ಫ್ಲೆಕ್ಸ್‌ಗಳ ಭರಾಟೆ ಬೇರೆ.
ಮೈಸೂರಿನಿಂದ ಹೊರಟು ಮಾರ್ಗಮಧ್ಯೆ ಪಟಾಕಿಯ ಸ್ವಾಗತ ಪಡೆದು ಹುಮ್ಮಸ್ಸಿನಿಂದಲೇ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೇದಿಕೆ ಬಲಭಾಗದಲ್ಲಿ ಆಸೀನರಾಗಿದ್ದ ಹರಗುರು ಚರಮೂರ್ತಿಗಳ ಆಶೀರ್ವಾದ ಪಡೆದು ಅಧಿವೇಶನ ಉದ್ಘಾಟಿಸಿದರು. ಮುಖ್ಯಮಂತ್ರಿಗಳ ಪರೋಕ್ಷ ನಾಯಕತ್ವದಲ್ಲೇ ನಡೆಯುತ್ತಿರುವ ಅಧಿವೇಶನದ ಉದ್ಘಾಟನೆ ಸಮಾರಂಭದಲ್ಲಿ ಚಟುವಟಿಕೆಗಳಿಂದಲೇ ಇದ್ದು, ಹಲವರಿಗೆ ಸೂಚನೆಗಳನ್ನು ರವಾನಿಸುತ್ತಿದ್ದರು.

ಬಾವಿಗಳಿಗೇನು ಬರವಿಲ್ಲ ಆದರೆ ಕುಡಿಯಲು ನೀರಿಲ್ಲ

ನೀರಿನ ಹೆಸರಿನಲ್ಲಿ  ಹಣ ಪೋಲಾಗಿರುವುದಕ್ಕೆ ಪಾಳುಬಿದ್ದಿರುವ ಬಾವಿಗಳು  ಸಾಕ್ಷಿ.  ನೀರಿನ ಸಮಸ್ಯೆ ಪರಿಹಾರಕ್ಕೆ ಹಲವು ಶಾಶ್ವತ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಲ್ಲಿ   ಹಣ ಪೋಲಾಗುತ್ತಿರಲಿಲ್ಲ.  ನೀರಿನ ಹೆಸರಿನಲ್ಲಿಯೂ ದುಡ್ಡು ಮಾಡುವವರು ಇದಕ್ಕೆ  ಕಾರಣಕರ್ತರಾಗಿದ್ದಾರೆ ಎನ್ನುತ್ತಾರೆ ಕಾಂಗೀರ ಕೆ. ಬೋಪಣ್ಣ.

ಕಪಿಲೆಯ ತಟದಲ್ಲೂ ತಪ್ಪದ ಪರದಾಟ

* ಶ್ರೀನಿವಾಸ್ ನಂಜನಗೂಡು
`ದೀಪದ ಕೆಳಗೆ ಕತ್ತಲು' ಎಂಬ ಮಾತು ನಂಜನಗೂಡು ಪಟ್ಟಣದಲ್ಲಿ ಅಕ್ಷರಶಃ ಸತ್ಯ. ಕಪಿಲಾನದಿ ತಟದಲ್ಲಿದ್ದರೂ ನೀರಿಗೆ ಪರದಾಟ ತಪ್ಪಿಲ್ಲ.
ನೀರಿಗಾಗಿ ಬೋರ್‌ವೆಲ್‌ಗಳನ್ನು ಅವಲಂಬಿಸಬೇಕಿದ್ದು, ಬಡಾವಣೆ ಸೇರಿದಂತೆ ಹಲವೆಡೆ ನೀರಿಗಾಗಿ ಮನೆ ಮುಂದೆ ೫ ಅಡಿಗಳ ಹೊಂಡ ತೆಗೆಯಲಾಗಿದೆ. ನಾಗಮ್ಮ ಶಾಲೆ ಆವರಣದಲ್ಲಿ ೩ ಲಕ್ಷ ಗ್ಯಾಲನ್ ಸಾಮರ್ಥ್ಯದ ಟ್ಯಾಂಕ್ ಕಾಮಗಾರಿ ಮುಗಿದಿದ್ದು ಉದ್ಘಾಟನೆಗೆ ಕಾದಿದೆ. ಇದು ಪಟ್ಟಣದ ಶೇ ೩೦ ರಷ್ಟು ಭಾಗಕ್ಕೆ ಮಾತ್ರ ನೀರು ಒದಗಿಸುತ್ತದೆ. ಉಳಿದ ಶ್ರೀರಾಮಪುರ, ಶಂಕರಪುರ, ಎಕ್ಸ್‌ಟೆನ್‌ಷನ್‌ಬಡಾವಣೆ, ಹೌಸಿಂಗ್‌ಬೋರ್ಡ್, ನೀಲಕಂಠನಗರ, ಚಾಮಲಾಪುರ ಹುಂಡಿಯ ಜನರ ನೀರಿನ ಬವಣೆ ನೀಗದು.

ಅಸ್ವಸ್ಥ ಆನೆಗೆ ಬೆಂಗಳೂರು ವೈದ್ಯ ತಂಡದ ಚಿಕಿತ್ಸೆ

* ಎಂ.ಎಲ್.ರವಿಕುಮಾರ್ ಎಚ್.ಡಿ. ಕೋಟೆ
ತಾರಕಾ ಜಲಾಶಯದ ಮಧ್ಯೆ ಚೆಂಡು ಎನ್ನುವ ಪ್ರದೇಶದಲ್ಲಿ ತೀವ್ರ ಅಸ್ವಸ್ಥಗೊಂಡಿರುವ ಗಂಡಾನೆ(೨೨)ಯನ್ನು ಉಳಿಸಲು ಅಧಿಕಾರಿಗಳು ಸತತ ಪ್ರಯತ್ನ  ನಡೆಸಿದ್ದಾರೆ.
ಅರಣ್ಯ ಸಂಚಾರಿ ಘಟಕದ  ಎಡಿಜಿಪಿ ಕೆ.ಎನ್.ಎಸ್. ಚಿಕ್ಕರೆರೂರ ನೇತೃತ್ವದಲ್ಲಿ  ಬೆಂಗಳೂರಿನ ವೆಟರ್ನರಿ ಆಸ್ಪತ್ರೆಯ ಕಾಲೇಜಿನಿಂದ ಬಂದಿರುವ ಪ್ರೊಫೆಸರ್‌ಗಳು ಮತ್ತು  ವೈದ್ಯರ ತಂಡ ಪ್ರಯತ್ನ  ನಡೆಸುತ್ತಿದೆ. ಇವರಿಗೆ ಬೆಂಗಳೂರಿನ ಸಿಐಡಿ ಅರಣ್ಯ ಘಟಕದ ಪೊಲೀಸರು ಮತ್ತು ಮೇಟಿಕುಪ್ಪೆ  ವನ್ಯ ಜೀವಿ ವಲಯದ ಅರಣ್ಯಾಧಿಕಾರಿ ಸಂತೋಷ್ ನಾಯಕ್ ಮತ್ತು ಸಿಬ್ಬಂದಿ  ನೆರವಾಗಿದ್ದಾರೆ.
ಆನೆಯ ಬಲಗಾಲಿನ ಮಂಡಿಯಿಂದ ಸುಮಾರು ೧ ಬಕೆಟ್‌ಗೂ ಹೆಚ್ಚಿನ ಕೀವನ್ನು ಹೊರತೆಗೆಯಲಾಗಿದೆ. ಕೀವು ತೆಗೆಯಲು ಪ್ರಾರಂಭಿಸಿದಾಗ ಆನೆ ನೋವಿನಿಂದ  ನರಳಿ, ಕೆಲಸಕ್ಕೆ  ತಡೆಯೊಡ್ಡಿತು. ಆದರೆ ವೈದ್ಯಾಧಿಕಾರಿಗಳ ತಂಡ ಎದೆಗುಂದಲಿಲ್ಲ. ಕೀವು ಹೊರ ತೆಗೆದ ನಂತರ ಆನೆ ಕಾಲುಗಳನ್ನು ಆಡಿಸುತ್ತಿದೆ. ಆನೆಯು ಹಿನ್ನೀರಿನ ದಂಡೆಯಲ್ಲಿದ್ದು ಚಿಕಿತ್ಸೆ ಕೊಡುವಾಗ ಒದ್ದಾಡುವುದರಿಂದ ಸ್ಥಳ ಕೆಸರುಮಯವಾಗಿದೆ. ಹಾಗಾಗಿ ಪಕ್ಕದಲ್ಲಿ ಹಾಕಿರುವ ಹುಲ್ಲಿನ ಮೇಲೆ ಆನೆ  ಮಲಗಿಸಲು  ನಡೆಸಿದ  ಪ್ರಯತ್ನ ವಿಫಲವಾಗಿದೆ. ಪುನಾ ನಾಡಾನೆಗಳ ಸಹಾಯದಿಂದ ಆನೆಯನ್ನು ಹುಲ್ಲಿನ ಹಾಸಿನ ಮೇಲೆ ಹಾಕಿ ಅದಕ್ಕೆ ನೆರಳು ಕಲ್ಪಿಸಬೇಕೆಂದು ಸಿಸಿಎಫ್ ಅಜಯ್ ಮಿಶ್ರಾ ತಿಳಿಸಿದ್ದಾರೆ.

ಬೊಗಸೆಗೆ ಸಿಕ್ಕ ನೀರು, ಏರಲಿಲ್ಲ ಗಂಟಲಿಗೆ

ನೀರಿನ ಸಮಸ್ಯೆ ಎದುರಿಸುತ್ತಿರುವ ಜನಸಾಮಾನ್ಯರ ಕೂಗು ಜನಪ್ರತಿನಿಧಿಗಳು- ಅಧಿಕಾರಿಗಳಿಗೆ ಕೇಳಿಸುತ್ತಿಲ್ಲ. ಆಡಳಿತಗಾರರ ಇಚ್ಛಾಶಕ್ತಿ ಕೊರತೆಯಿಂದ ಜನ ಪ್ರತಿ ಬೇಸಿಗೆಯಲ್ಲಿಯೂ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ನೀರಿನ ಸಮಸ್ಯೆ ದೊಡ್ಡ ವಿಷಯವೇ ಅಲ್ಲ ಅನ್ನೋ ರೀತಿ ಜನ ಸಮಸ್ಯೆಯನ್ನು ಮೈಗೂಡಿಸಿಕೊಂಡಿದ್ದಾರೆ ಎನ್ನುತ್ತಾರೆ ಚೆಟ್ಟಂಗಡ ರವಿ ಸುಬ್ಬಯ್ಯ, ಸಣ್ಣುವಂಡ ಕಿಶೋರ್ ನಾಚಪ್ಪ.

ಕಾವೇರಿ, ಕಪಿಲಾ ಸೆಲೆ: ಟ್ಯಾಂಕ್, ತೊಂಬೆಗಳಿದ್ದರೇನು `ನೀರೇ ಇಲ್ಲ'!

ಪಂಪ್‌ಸೆಟ್ ನೀರೇ ಎಲ್ಲಾ
*ಮಾದೇಶ್ ತಿ.ನರಸೀಪುರ
ವಾಟಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟಾಳುಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಪಂಪ್‌ಸೆಟ್ ನೀರನ್ನೇ ಅವಲಂಬಿಸಬೇಕು.
ಸುಮಾರು ೬೦೦ ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಗೊಂಡಿದ್ದರೂ ನೀರಿನ ಮೂಲದಿಂದ ಟ್ಯಾಂಕ್‌ಗೆ ನೀರು ಸರಬರಾಜು ಮಾಡದ ಕಾರಣ ಗ್ರಾಮದಲ್ಲಿನ ನಲ್ಲಿಗಳಲ್ಲಿ ನೀರು ಹರಿಯುವುದಿಲ್ಲ.
ಟ್ಯಾಂಕ್ ನಿರ್ಮಾಣಗೊಂಡು ಸುಮಾರು ೨ ವರ್ಷ ಕಳೆದರೂ ನಿರ್ವಹಣೆ ಇಲ್ಲದೇ ಇದ್ದೂ ಇಲ್ಲದಂತಾಗಿದೆ. ಈ ಟ್ಯಾಂಕ್‌ನ ನೀರಿನ ಮೂಲದ ಯಂತ್ರಾಗಾರದ ದುರಸ್ತಿಪಡಿಸದ ಕಾರಣ ಲಕ್ಷಾಂತರ ರೂ. ವ್ಯರ್ಥ, ಜತೆಗೆ ನೀರಿಗೂ ತೊಂದರೆ.

ಬನ್ನೂರಲ್ಲಿ ನೀರಿಲ್ಲ
*ರಮೇಶ್ ಬನ್ನೂರು
೫೦ ಸಾವಿರ ಜನಸಂಖ್ಯೆಯುಳ್ಳ ಬನ್ನೂರು ಪಟ್ಟಣದ ಜನರು ನೀರಿಗಾಗಿ ಪರಿತಪಿಸಬೇಕಾದ ಪರಿಸ್ಥಿತಿ ಬಂದಿದ್ದು, ಕೆರೆ, ಬಾವಿ, ಕೈ ಪಂಪ್‌ಗಳನ್ನು ಆಶ್ರಯಿಸಬೇಕಾದ ಸ್ಥಿತಿ ನಿರ್ಮಣವಾಗಿದೆ. ಕಾವೇರಿ ನದಿಯಿಂದ ಪಟ್ಟಣದ ವಾಟರ್ ಟ್ಯಾಂಕ್‌ಗಳಿಗೆ ನೀರನ್ನು ಪಂಪ್ ಮಾಡಿ ಪೂರೈಸಲಾಗುತ್ತಿದೆ. ಪಟ್ಟಣದ ಹೊರವಲಯದಲ್ಲಿರುವ ಆಶ್ರಯ ಬಡಾವಣೆ ಮತ್ತು ಮಾಕನಹಳ್ಳಿ ನಿವಾಸಿಗಳು ನೀರಿಗಾಗಿ ದಿನನಿತ್ಯ ಪರದಾಡಬೇಕಾದ ಸ್ಥಿತಿ ಉಂಟಾಗಿದೆ.

ಕರೆಂಟ್ ಕೊಟ್ರೆ ನೀರು ಬರುತ್ತೆ

ನೀರಿನ ಸಮಸ್ಯೆ ಸರ್ವವ್ಯಾಪಿ. ಮೂರ್ನಾಡಿಗೆ ಕಾವೇರಿ ನದಿ ನೀರು ತರುವ ಯೋಜನೆಯನ್ನು ಏಳು ವರ್ಷದ ಹಿಂದೆ ವ್ಯವಸ್ಥಿತವಾಗಿ ಕೈಗೊಂಡ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ನೀರಿನ ಸಮಸ್ಯೆ ಇಲ್ಲ. ಉಳಿದಂತೆ ಎಲ್ಲಾ ಗ್ರಾಮಗಳಲ್ಲೂ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ ಎನ್ನುತ್ತಾರೆ ಬಿ.ಕೆ. ಶಶಿಕುಮಾರ್ ರೈ, ಟಿ.ಸಿ. ನಾಗರಾಜ್.

ಕಾವೇರಿ ನದಿ ನಂಟು, ನೀರಿಗೆ ಬರ

*ಹನಗೋಡು ನಟರಾಜ ಹುಣಸೂರು
ಇದೀಗ ಬಿರು ಬೇಸಿಗೆ ಬಂದಿದ್ದು, ತಾಲೂಕಿನ ಹಲವು ಗ್ರಾಮ ಹಾಗೂ ಹಾಡಿಗಳಲ್ಲಿ ಕುಡಿಯುವ ನೀರಿಗಾಗಿ ಪಾಡು ಪಡುತ್ತಿದ್ದಾರೆ. ನದಿಗಳಲ್ಲಿ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದಿದೆ. ಹಲವೆಡೆ ವಿದ್ಯುತ್ ಅಡಚಣೆ ಯಿಂದಾಗಿ ಸಮರ್ಪಕ ನೀರು ಪೂರೈಸಲಾಗುತ್ತಿಲ್ಲ.

*ನವೀನ್‌ಕುಮಾರ್ ಪಿರಿಯಾಪಟ್ಟಣ
ಪಿರಿಯಾಪಟ್ಟಣದ ತಾಲೂಕಿನ ಕುಶಾಲನಗರ ಗಡಿ ಭಾಗದ ಗಾಂಧಿನಗರ ಗ್ರಾಮದಲ್ಲಿ ಜನರು ೨ ತಿಂಗಳಿ ನಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿ ದ್ದಾರೆ, ಗ್ರಾಮದಲ್ಲಿ ೮೦ಕ್ಕೂ ಹೆಚ್ಚು ಮನೆಗಳಿದ್ದು ,ಇರುವುದು ೨ ಕೈಪಂಪು ಮಾತ್ರ. ಎಲ್ಲರಿಗೂ ಇದೇ ಆಧಾರ. ಇಲ್ಲಿನ ಟ್ರಾನ್ಸ್‌ಫಾರ್‍ಮರ್ ಕೆಟ್ಟು ನಿಂತು  ಹಲವು ತಿಂಗಳು ಕಳೆದಿದ್ದರೂ ದುರಸ್ತಿಯಾಗಿಲ್ಲ. ಗ್ರಾಮದಿಂದ ಹೊರಭಾಗ ದಲ್ಲಿರುವ ಕೈಪಂಪು ಕುಡಿಯುವ ನೀರಿಗೆ ಮಾತ್ರ. ಇದರಲ್ಲಿ ೨ ಕೊಡ ನೀರು ತೆಗೆದರೆ ಮತ್ತೆರಡು ಕೊಡ ನೀರಿಗೆ ಗಂಟೆಗಟ್ಟಲೆ ಶ್ರಮಪಡಬೇಕು. ಆಗಾಗ ಕೈಪಂಪು ಗಳಿಂದ ಕಲುಷಿತ ನೀರೂ ಬರುತ್ತದೆ . ಇದನ್ನೇ ಶೋಧಿಸಿ ಕಾಯಿಸಿ ಕುಡಿಯುತ್ತಿದ್ದಾರೆ ಇಲ್ಲಿಯ ಮಂದಿ. ತೋಟಗಳ ಬಳಿ ಹಳ್ಳ ತೆಗೆದು ನೀರು ಪಡೆಯುವುದೂ ಉಂಟು.

ಕಾವೇರಿ - ಕಬಿನಿ ಹರಿದರೂ, ನೀರೆಯರ ಕಣ್ಣೀರು ನಿಲ್ಲಲಿಲ್ಲ

ಬೇಸಿಗೆ ಬಂದಿದೆ.. ನೀರಿನ ಬರ ಎಲ್ಲೆಡೆ ಕಾಡುತ್ತಿದೆ. ಹಲವು  ಯೋಜನೆಗಳು ಜಲಾಶಯಗಳು ಜಿಲ್ಲೆಯಲ್ಲಿ ಈ ಬವಣೆ ತಪ್ಪಿಸಲು ಅನುಷ್ಠಾನಗೊಂಡಿದ್ದರೂ ಪ್ರತಿ ವರ್ಷದ ಈ ತಪ್ಪದ ಬವಣೆಗೆ ಯಾರು ಹೊಣೆ?

ಈ ಬೇಸಿಗೆಗೂ ಬವಣೆ ತಪ್ಪಲಿಲ್ಲ

ಕಾವೇರಿ ನದಿ ಗ್ರಾಮದೊಳಗೆ, ಅಕ್ಕಪಕ್ಕದಲ್ಲೇ ಹರಿಯುತ್ತಿದ್ದರೂ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಂಥ ಯೋಜನೆ ರೂಪಿಸದಿರುವುದೇ ಕಾರಣ ಎನ್ನುತ್ತಾರೆ  ಬಿ.ಎಸ್. ಲೋಕೇಶ್ ಸಾಗರ್.

ಮುಖ್ಯಮಂತ್ರಿಗಳೇ ಸ್ವಲ್ಪ ಇತ್ ನೋಡಿ

* ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಡಿಕೇರಿ
ವಿಶ್ವಕಪ್ ಗೆದ್ದ  ಕ್ರಿಕೆಟಿಗರಿಗೆ ಬಿಡಿಎ ಸೈಟ್ ನೀಡಲು ನಾಡದೊರೆ ಯಡಿಯೂರಪ್ಪ  ತರಾತುರಿಯಲ್ಲಿ  ಅತ್ಯುತ್ಸಾಹ ಪ್ರದರ್ಶಿಸಿದರು. ಅದು ವಿವಾದಕ್ಕೆ ನಾಂದಿ ಹಾಡುತ್ತಿದ್ದಂತೆ  ತಲಾ ೨೫ ಲಕ್ಷ ರೂ. ನೀಡುವು ದಾಗಿ ಘೋಷಿಸಿದ್ದಾರೆ. ಇದೇ ಕಾಲಘಟ್ಟದಲ್ಲಿ  ಅಂತಾರಾಷ್ಟ್ರೀಯ ಹಾಕಿ ಆಟಗಾರ  ವಕ್ಕಲಿಗರ ಸ್ವಾಮಿ ವಿನಯ್ ಹುಟ್ಟೂರು ಮಡಿಕೇರಿಯಲ್ಲಿ  ಹತ್ತು ಸೆಂಟ್ಸ್  ಸೈಟ್‌ಗಾಗಿ ಪರಿತಪಿಸುತ್ತಿರುವ ವಿಷಯವಿದು. ಒಮ್ಮೆ ಇತ್ತ ಚಿತ್ತ ಹರಿಸಲು ಸಿಎಂಗೆ ಸಾಧ್ಯವೇ?

ಖಾಲಿ ಟ್ಯಾಂಕ್‌ಗಳಿಗೆ ಆಯುಷ್ಯ ಹೆಚ್ಚು? ನೀರಿಲ್ಲ, ಕರೆಂಟಿಲ್ಲ, ಕೇಳುವಂತಿಲ್ಲ !

ಬೇಸಿಗೆಕಾಲದಲ್ಲಿ ನೀರಿನ ಸಮಸ್ಯೆ ಪರಿಹರಿಸಲೆಂದು ಲಕ್ಷಾಂತರ ರೂಪಾಯಿ ವಿನಿಯೋಗಿಸಿ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಆದರೆ, ವಿದ್ಯುತ್ ಸಂಪರ್ಕ ನೀಡದೇ, ಪೈಪ್ ಲೈನ್ ಎಳೆದಿಲ್ಲ. ಹಾಗಾಗಿ ನೀರಿನ ಸಮಸ್ಯೆ ಬಗೆಹರಿದಿಲ್ಲ ಎನ್ನುತ್ತಾರೆ ಚೆರಿಯಮನೆ ಸುರೇಶ್.

ಇನ್ನು ರಾಮ ಜಪವಿಲ್ಲ; ನೀರ ಜಪ

ಇಲ್ಲಿಯ ಸಮಸ್ಯೆಯೇ ಬೇರೆ. ನೀರಿನ ಸಮಸ್ಯೆ ಬಗೆಹರಿಸಲು ಯಾವುದ್ಯಾವುದೋ ತಾಂತ್ರಿಕ ದೋಷಗಳು. ಅವನ್ನೆಲ್ಲಾ ಒಂದೇ ಹಿಡಿತದಲ್ಲಿ ಸರಿಪಡಿಸಬಹುದು. ಆದರೆ ಆ ಕೆಲಸ ಮುಗಿಸುವವರ್‍ಯಾರು ಎಂಬುದೇ ಪ್ರಶ್ನೆ ಎನ್ನುತ್ತಾರೆ ಸಣ್ಣುವಂಡ ಕಿಶೋರ್ ನಾಚಪ್ಪ.

ಈ ಬೇಸಿಗೆಯೂ ಹಾಗೇ, ನೀರು ತರೋದು ಹ್ಯಾಗೆ?

ಬೇಸಿಗೆ ಈಗಾಗಲೇ ಆರಂಭವಾಗಿದೆ. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಸಿದರೆ ಜನರ ಸಮಸ್ಯೆ ಅಷ್ಟೇನೂ ಬಗೆಹರಿದಿಲ್ಲ. ದೂರದಿಂದ ನೀರು ತರುವ ಸಾಹಸಕ್ಕೆ ಕೊನೆಯಿಲ್ಲ. ಆದರೆ ಜನಪ್ರತಿನಿಧಿಗಳಾಗಲೀ, ಸ್ಥಳೀಯ ಸಂಸ್ಥೆಗಳಾಗಲೀ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಅಜ್ಜಮಾಡ ರಮೇಶ ಕುಟ್ಟಪ್ಪ, ತೇಲಪಂಡ ಕವನ ಕಾರ್ಯಪ್ಪ, ಕಾಂಗೀರ ಕೆ. ಬೋಪಣ್ಣ, ಲೋಕೇಶ್ ಸಾಗರ.

ಸರಕಾರದ ಆದೇಶವೂ ಮೈಸೂರು ವಿವಿಯಲ್ಲಿ ಡಮ್ಮಿ !

*ಚೀ. ಜ. ರಾಜೀವ, ಮೈಸೂರು
ಸಂಸ್ಕೃತ ಪಾಠಶಾಲೆಗಳಲ್ಲಿ ಕಲಿಸುವ  ವಿದ್ವತ್ ಮಧ್ಯಮ ಹಾಗೂ ವಿದ್ವತ್ ಉತ್ತಮ ಕೋರ್ಸ್‌ಗಳನ್ನು ಕ್ರಮವಾಗಿ ಬಿಎ ಮತ್ತು ಎಂಎ ಪದವಿಗೆ ಸಮವೆಂದು ಪರಿಗಣಿಸುವಂತೆ ರಾಜ್ಯ ಸರಕಾರ ಹೊರಡಿಸಿದ ಆದೇಶವನ್ನು ಮೈಸೂರು ವಿಶ್ವವಿದ್ಯಾ ನಿಲಯ ಮರುಪರಿಶೀಲನೆಗೆ ಒಳಪಡಿಸಿರುವ ಪ್ರಸಂಗ ನಡೆದಿದೆ.
ಹಾಗಾಗಿ ಈ ಶೈಕ್ಷಣಿಕ ವರ್ಷದಲ್ಲಿ ವಿದ್ವತ್ ಮಧ್ಯಮ ವಿಷಯವನ್ನು ತೇರ್ಗಡೆಯಾದ ಯಾವುದೇ ವಿದ್ಯಾರ್ಥಿಗೆ ನೇರವಾಗಿ ಸಂಸ್ಕೃತ ಎಂಎ ಗೆ ಅವಕಾಶವಿಲ್ಲ. ವಿವಿಯ ಈ ನಿಲುವಿನ ಕುರಿತು ಸಂಸ್ಕೃತ ಶೈಕ್ಷಣಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.

ಹೊಟ್ಟೆಹಾಡು

ನಗುವಿನಹಳ್ಳಿಯಲ್ಲಿ ಕಂಡು ಬಂದ ಜೇನು ಹಿಡುಕ ಹಕ್ಕಿಯ ಬದುಕ ಕಾವ್ಯ!

ನಾಯಕ ಸ್ಥಾನ ನಿರೀಕ್ಷಿಸಿರಲಿಲ್ಲ: ಅರ್ಜುನ್

*ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಡಿಕೇರಿ
`ತಂಡದ ನಾಯಕನಾಗಿ ಆಯ್ಕೆಯಾದದ್ದು ಅನಿರೀಕ್ಷಿತ. ನಾಯಕತ್ವದ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿ' ಎನ್ನುತ್ತಾರೆ ದಿಲ್ಲಿಯ ಹಾಕಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಅರ್ಜುನ್ ಹಾಲಪ್ಪ.
`ತಂಡವನ್ನು ಮುನ್ನಡೆಸುವುದು ಸದಾ ಒತ್ತಡದ ಕೆಲಸ. ಇದುವರೆಗಿನ ನನ್ನ ಅನುಭವ ಸೇರಿಸಿ ಸಮರ್ಥ ರೀತಿಯಲ್ಲಿ ತಂಡವನ್ನು ಮುನ್ನಡೆಸುವ ವಿಶ್ವಾಸವಿದೆ' ಎಂದು ಗುರುವಾರ ದೂರವಾಣಿ ಮೂಲಕ `ವಿಜಯಕರ್ನಾಟಕ'ಕ್ಕೆ ನೀಡಿದ ಪುಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.
`ನಮ್ಮ ತಂಡ ಮುಂದಿನ ಒಲಿಂಪಿಕ್ ಪಂದ್ಯಾವಳಿಗೆ ಅರ್ಹತೆ ಪಡೆ ಯುವಂತೆ ಮಾಡುವುದೇ ಪ್ರಥಮ ಗುರಿ. ಸುಲ್ತಾನ್ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯೂ ಮಹತ್ವದ್ದು. ಇಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ನಮ್ಮ ಗಮನ. ಇದಕ್ಕೆ ಆಟಗಾರರನ್ನು ಸಜ್ಜುಗೊಳಿಸಲಾಗು ತ್ತದೆ. ಹೊಸ ಆಟಗಾರರು ಸ್ಥಾನ ಪಡೆಯುತ್ತಿದ್ದಾರೆ. ಹೀಗಾಗಿ ತಂಡ ವನ್ನು ಬಲಿಷ್ಠವಾಗಿ ಕಟ್ಟಲು ಸುವರ್ಣಾವಕಾಶ. ಉತ್ತಮ ಆಟದ ಪ್ರದರ್ಶನ ನೀಡುವವರಿಗೆ ಮಾತ್ರ ಸ್ಥಾನ' ಎಂಬುದು ಅವರ ಅಭಿಪ್ರಾಯ.

ಅಭಿರುಚಿ ಸಂಪನ್ನತೆಯೇ ಕಲೆಯ ಸಾರ್ಥಕತೆ

*ವಿಕ ಸುದ್ದಿಲೋಕ ಮೈಸೂರು
`ನೋಡುಗರಿಗೆ ಮನರಂಜನೆ ನೀಡುವುದು,ಅವರನ್ನು ಉಲ್ಲಸಿತರನ್ನಾಗಿಸುವುದು,ದೈನಂದಿನ  ಜಂಜಾಟವನ್ನು ಮರೆಸುವುದು ಯಾವುದೇ ಪ್ರದರ್ಶಕ ಕಲೆಯ ಕೆಲಸವಲ್ಲ.ಅದಕ್ಕೂ ಮೀರಿ,ಪ್ರದರ್ಶನ ನೀಡುವ  ಕಲಾವಿದ ಮತ್ತು ಅದನ್ನು ನೋಡುವ ಪ್ರೇಕ್ಷಕರ  ಗ್ರಹಿಕೆಯ ಅಭಿರುಚಿಯನ್ನು ಸಂಪನ್ನಗೊಳಿಸಬೇಕು.ಅದೇ ಕಲೆಯ ನಿಜವಾದ ಸಾರ್ಥಕತೆ !` 
ಇದು- ರವೀಂದ್ರನಾಥ ಠಾಗೋರ್ ಅವರಿಂದ ಸ್ಫೂರ್ತಿ ಹಾಗೂ ಸಮರ್ಥನೆ  ಪಡೆದಿರುವ  ಭಾರತೀಯ ರಂಗಭೂಮಿಯ ನಟ ಅಮೋಲ್ ಪಾಲೇಕರ್  ಅವರ ಅಭಿಪ್ರಾಯ.

ಕವೀಂದ್ರ ರವೀಂದ್ರರ `ಬಹುರೂಪ' ನೋಡ ಬನ್ನಿ ...

*ವಿಕ ಸುದ್ದಿಲೋಕ ಮೈಸೂರು
ಜನಗಣ ಮನದ `ಅಧಿನಾಯಕ' ರವೀಂದ್ರನಾಥ ಠಾಗೋರ್ ಎಂಬ ಮಹಾ ವ್ಯಕ್ತಿತ್ವವನ್ನು ಅರಿತುಕೊಳ್ಳಬೇಕೆ ?
ಮೈಸೂರಿನ ರಂಗಾಯಣದಲ್ಲಿ ಬುಧವಾರ ಆರಂಭವಾಗಿ ರುವ ಬಹುರೂಪಿಗೆ ಬನ್ನಿ. ಬೇರೆ-ಬೇರೆ  ವಯೋಮಾನದವರು, ಬದುಕಿನ ವಿವಿಧ ರಂಗದವರು  ಅವರವರ  ಶಕ್ತ್ಯಾನುಸಾರ, ತಿಳಿವಳಿಕೆ-ಗ್ರಹಿಕೆಗೆ ಅನುಗುಣವಾಗಿಯೇ ರವೀಂದ್ರರನ್ನು ಪರಿಚಯಿಸುವ, ಅರ್ಥೈಸಿಕೊಳ್ಳಲು ಪ್ರೇರೆಪಿಸುವ ಕೆಲಸ ಮುಂದಿನ ನಾಲ್ಕು ದಿನ ಇಲ್ಲಿ ನಡೆಯಲಿದೆ.
ರವೀಂದ್ರನಾಥರ ನಾಟಕ ಮಾತ್ರವಲ್ಲದೇ ಅವರ ಕತೆ-ಕಾದಂಬರಿ ಆಧಾರಿಸಿದ ನಾಟಕ-ನೃತ್ಯ ನಾಟಕಗಳು, ರವೀಂದ್ರರ  ಸಾಹಿತ್ಯ ಕುರಿತು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವಿಚಾರ ಸಂಕಿರಣಗಳು, ರವೀಂದ್ರರ ಕಾವ್ಯಗಳ ವಾಚನ ಸೇರಿದಂತೆ- ಅವರ ಬದುಕಿನ ಬಹುರೂಪಗಳನ್ನು ಅರ್ಥ ಮಾಡಿಕೊಳ್ಳುವ  ಬೌದ್ಧಿಕ ಕಾರ್ಯಕ್ರಮ/ಉತ್ಸವಗಳು ಒಂದೆಡೆಯಾದರೆ,  ಇನ್ನೊಂದೆಡೆ ರವೀಂದ್ರರನ್ನು ಸರಳವಾಗಿ ಪರಿಚಯಿಸುವ ವಸ್ತು ಪ್ರದರ್ಶನವಿದೆ.
ಕೋಲ್ಕತ್ತಾದ ಶಾಂತಿನಿಕೇತನದ ಪ್ರತಿನಿಧಿಗಳೇ ಬಹುರೂಪಿಯಲ್ಲಿ ಆಯೋಜಿಸಿರುವ  ಠಾಗೋರ್ ಕುರಿತ ವಸ್ತು ಪ್ರದರ್ಶನ ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ  ಅರಳಿ ನಿಂತಿದೆ.

ಹಣ,ಚಿನ್ನ: ಹುಷಾರಿದ್ದರೆ ಚೆನ್ನ

* ಆರ್.ಕೃಷ್ಣ  ಮೈಸೂರು
ಹೆಚ್ಚು ಹಣ,ಚಿನ್ನ ಹೊಂದಿದ್ದಾಗ ಮೈಯೆಲ್ಲಾ ಕಣ್ಣಾಗಿ ದ್ದರೂ, ಲಪಟಾಯಿಸುವವರಿಗೆ ಕಡಿಮೆ ಇಲ್ಲ. ಈ ವಿಷಯದಲ್ಲಿ ನಂಬಿಗಸ್ಥರೇ ದುಷ್ಮನಿ ಗಳಾದ ಎಷ್ಟೋ ಪ್ರಕರಣಗಳು ಆಗಿ ಹೋಗಿವೆ. ಎಷ್ಟೆ ಎಚ್ಚರ ವಹಿಸಿದರೂ, ಚಲನ ವಲನವನ್ನು ಪಕ್ಕಾ ಮಾಡಿಕೊಂಡು ವಂಚಿಸುವಲ್ಲಿ  ದೋಚುವವರು ನಿಸ್ಸೀಮರು.
ಇತ್ತೀಚಿನ  ಕೆಲವು ದರೋಡೆ,ಡಕಾಯಿತಿ ಪ್ರಕರಣ ಗಳನ್ನು ಅವಲೋಕಿಸಿದರೆ  ಇಂಥ ಅನುಮಾನ  ಸಹಜ. ದಿಢೀರ್ ಶ್ರೀಮಂತರಾಗ ಬೇಕೆನ್ನುವ ಕೆಟ್ಟ ಹಂಬಲ, ವೃತ್ತಿ ಪೈಪೋಟಿ, ದುಂದುಗಾರಿಕೆ ಸೃಷ್ಟಿತ `ಅಗತ್ಯ'ವೇ ಇದಕ್ಕೆಲ್ಲ ಕುಮ್ಮಕ್ಕು !
ಪಕ್ಕಾಪುರಾವೆ ಬೇಕೆಂದರೆ, ಒಂದು ವರ್ಷದಲ್ಲಿ ನಡೆದ ಕೆಲ ಘಟನೆಗಳನ್ನೊಮ್ಮೆ ಅವಲೋಕಿಸಿ...

ಮೀಸಲು ಅರಣ್ಯದಂಚಲ್ಲಿ ಕಪ್ಪುಶಿಲೆ ಗಣಿಗಾರಿಕೆ

*ವಿಕ ವಿಶೇಷ, ಕೊಳ್ಳೇಗಾಲ
ಮಲೆ ಮಹಾದೇಶ್ವರ ಬೆಟ್ಟ ಹಾಗೂ ಯಡೆಯಾರಳ್ಳಿ ಮೀಸಲು ಅರಣ್ಯದ ೧೦೦ ಮೀಟರ್ ವ್ಯಾಪ್ತಿಯಲ್ಲೇ ಕಪ್ಪು ಶಿಲೆ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ.ಇನ್ನೂ ಅಚ್ಚರಿಯೆಂದರೆ ಇಲ್ಲಿನ ಕ್ವಾರಿಗಳು ಅಧಿಕೃತ. ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲವೆಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಇಲ್ಲಿ ಕಿಮ್ಮತ್ತಿಲ್ಲ !
ಕಂದಾಯ ಭೂಮಿ: ಮಹಾದೇಶ್ವರಬೆಟ್ಟ ಹಾಗೂ ಯಡೆ ಯಾರಳ್ಳಿ ಮೀಸಲು ಅರಣ್ಯ ಪ್ರದೇಶದ ಸೀಮಾ ರೇಖೆ ೧೦೦ ಮೀಟರ್ ಒಳಗಿನ ಪರಿಮಿತಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಆದರೆ ಇದು ಕಂದಾಯ ಭೂಮಿ. ಹೀಗಾಗಿ ಅರಣ್ಯ ಇಲಾಖೆಗೆ ಇದನ್ನು ತಡೆಯುವ ಹಕ್ಕಿಲ್ಲ.
ಈ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಯನ್ನು ತಡೆಯುವಂತೆ ಕಂದಾಯ ಇಲಾಖೆಗೆ ಅರಣ್ಯ ಇಲಾಖೆ ಪತ್ರ ಬರೆದಿಯಾದರೂ ಈವರೆಗೆ ಕಂದಾಯ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ.

ಇಚ್ಛಾಶಕ್ತಿ `ಇಷ್ಟ'ವಾದರೆ, ಸಮಸ್ಯೆ ಪರಿಹಾರ ಕಷ್ಟವಲ್ಲ

* ಫಾಲಲೋಚನ ಆರಾಧ್ಯ ಚಾಮರಾಜನಗರ
ಜಿಲ್ಲೆಯಲ್ಲಿ  ಸಮಸ್ಯೆಗಳಿಂದ ಮುಕ್ತವಾಗಿರುವ, ಸುಂದರ ಪರಿಸರವುಳ್ಳ ಶಾಲೆಗಳು ಬೆರಳೆಣಿಕೆಯಷ್ಟು ಮಾತ್ರ. ಉಳಿದ ಶಾಲೆಗಳು ಒಂದಿಲ್ಲೊಂದು ಸಮಸ್ಯೆಗಳಿಂದ ನಲುಗುತ್ತಿವೆ.
ಕೊಠಡಿಗಳ ಕೊರತೆ, ಇಕ್ಕಟ್ಟಿನಲ್ಲಿ ಪಾಠ, ಇದ್ದೂ ಇಲ್ಲದಂತಿರುವ ಶೌಚಾಲಯ, ಕುಡಿಯುವ ನೀರಿಗೆ ವಿದ್ಯಾರ್ಥಿಗಳ ಪರಿತಾಪ, ಆಟದ ಮೈದಾನ ಇಲ್ಲದಿರು ವುದು, ಎರಡು- ಮೂರು ವರ್ಷಗಳ ಕಳೆದರೂ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿರು ವುದು, ಅಪೂರ್ಣಗೊಂಡಿರುವುದು, ಶಾಲಾ ಸಮಿತಿ ಹಾಗೂ ಶಿಕ್ಷಕರ ನಡುವಿನ ರಾಜಕೀಯ ಎಲ್ಲ ಕಡೆ ಇದ್ದದೆ.
ಇಂಥ ಅವ್ಯವಸ್ಥಿತ ಸರಕಾರಿ ಶಾಲೆಗಳ ಸ್ಥಿತಿಯನ್ನು ವಿಜಯ ಕರ್ನಾಟಕ ಪತ್ರಿಕೆ ಬಿಡಿಸಿಡುವ ಪ್ರಯತ್ನವನ್ನು ಮಾಡಿದೆ. ಕಳೆದ ಒಂದು ವಾರದಿಂದ `ವಿಕ ಅಭಿಯಾನ' ದಡಿ ಶಾಲೆಗಳಲ್ಲಿನ ಸಮಸ್ಯೆಗಳನ್ನು  ತೋರಿಸಲಾಗಿದೆ. ಎಲ್ಲೆಲ್ಲಿ ಕೊಠಡಿಗಳ ಕೊರತೆ ಇದೆ. ಶಾಲೆಗಳು ಎಂಥ ವಾತಾವರಣದಲ್ಲಿವೆ ಎಂಬುದನ್ನು  ಚಿತ್ರ ಸಮೇತ ಪ್ರಕಟಿಸಲಾಗಿದೆ.

ಹಲ್ಲಿಲ್ಲದ ಕಾಯಿದೆ, ಗಡುವೂ ಮುಗಿದಿದೆ !

* ಜೆ.ಶಿವಣ್ಣ ಮೈಸೂರು
ಖಾಸಗಿ ವೈದ್ಯ ಸಂಸ್ಥೆಗಳ ನೋಂದಣಿಗೆ ನೀಡಿದ್ದ ಮತ್ತೊಂದು ಗಡುವೂ ಮುಗಿದಿದೆ. ಮುಂದೇನು ?
ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ವೈದ್ಯ ಸಂಸ್ಥೆಗಳನ್ನು ನಿಯಂತ್ರಣದಲ್ಲಿಡುವುದು, ಬಹುಮುಖ್ಯವಾಗಿ ನಕಲಿ ವೈದ್ಯರ ಹಾವಳಿ ತಡೆಯಲು ರಾಜ್ಯ ಸರಕಾರ `ಕರ್ನಾಟಕ ಖಾಸಗಿ ವೈದ್ಯ ಸಂಸ್ಥೆಗಳ ಅಧಿನಿಯಮ-೨೦೦೭'ರ ಕಾಯಿದೆ ಯನ್ನು ಅನುಷ್ಠಾನಕ್ಕೆ ತಂದಿತ್ತು.
ಖಾಸಗಿ ವೈದ್ಯ ಸಂಸ್ಥೆಗಳ ನೋಂದಣಿಗೆ ೨೦೧೦ ಫೆ.೭ರವರೆಗೆ ಗಡುವು ನೀಡಲಾಗಿತ್ತು.ನಿರೀಕ್ಷಿತ ಪ್ರತಿಕ್ರಿಯೆ ಲಭ್ಯವಾಗದಿದ್ದರಿಂದ ಅ.೨೪ ರವರೆಗೂ ಅವಧಿ ವಿಸ್ತರಣೆಗೊಂಡಿತ್ತು.ಈಗ ಅದೂ ಮುಗಿದು ತಿಂಗಳು ಆರಾಯಿತು.

ಕುಡಿಯುವ ನೀರು: ೨೪X೭ ಸೇವಾ ಕೇಂದ್ರ

* ಕುಂದೂರು ಉಮೇಶಭಟ್ಟ, ಮೈಸೂರು
ಜಲಾಶಯ,ನದಿಗಳನ್ನು ಬೆನ್ನಿಗೆ ಕಟ್ಟಿಕೊಂಡಿದ್ದರೂ ಜಿಲ್ಲೆಯಲ್ಲಿ ಕುಡಿಯುವ  ನೀರು ಸಮಸ್ಯೆ. ಈ ಹಿನ್ನೆಲೆಯಲ್ಲಿ,ಜನರ ಬಾಯಾರಿಕೆ ನೀಗಿಸಲು ಜಿಲ್ಲಾ ಪಂಚಾಯಿತಿ ಕಾರ್‍ಯಪಡೆ ಸಿದ್ದವಾಗಿದೆ.
ಪ್ರತಿ ಗ್ರಾಮದಲ್ಲಿ ಬೇಸಿಗೆ ವೇಳೆ ತಲೆದೋರುವ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಪ್ರತಿ ತಾಲೂಕಿನಲ್ಲಿ ಕಂಟ್ರೋಲ್‌ರೂಂ ವ್ಯವಸ್ಥೆಯಾಗಿದೆ. ಎಲ್ಲಾ ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ ೨೪X೭ ಆಧಾರದ ಸೇವಾ ಕೇಂದ್ರವನ್ನು ಆರಂಭಿಸಲು ಜಿಪಂ ಸಿಇಒ ಜಿ.ಸತ್ಯವತಿ ಸೂಚಿಸಿದ್ದು, ಏಪ್ರಿಲ್ ೮ರ ಹೊತ್ತಿಗೆ ಸೇವಾ ಕೇಂದ್ರ ಅಣಿಯಾಗಲಿವೆ.

ಆಸೆಯು ಕೈಗೂಡಿತು...ವಿಶ್ವಕಪ್ ದೊರೆತಾಯಿತು

ಮೇರಾ ಭಾರತ್ ಮಹಾನ್
ಶನಿವಾರ ನಡೆದ ಭಾರತ-ಶ್ರೀಲಂಕಾ ನಡುವಿನ ಫೈನಲ್ ಪಂದ್ಯದ ರೋಚಕ ಕ್ಷಣಗಳನ್ನು  ಕ್ರೀಡಾಭಿಮಾನಿಗಳು ವ್ಯಕ್ತಪಡಿಸಿದ್ದು ಹೀಗೆ.

ನೃತ್ಯ ಸೊಬಗು

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಸಂಜೆ  ಒಡಿಸ್ಸಿ ನೃತ್ಯ ಸಂಭ್ರಮ. ` ಒಡಿಸ್ಸಿ ನೃತ್ಯ ಅಕಾಡೆಮಿ'ಯ ವಿದ್ಯಾರ್ಥಿಗಳು ಮತ್ತು ನೃತ್ಯಗಾತಿಯರು ನೃತ್ಯ ಕೌಶಲ್ಯ ಪ್ರದರ್ಶಿಸಿ, ಪ್ರೇಕ್ಷರ ಮನ ತಣಿಸಿದರು. ಆಕಾಡೆಮಿ ಶಿಷ್ಯವರ್ಗ ವಿಷ್ಣುವನ್ನು ಪ್ರಶಂಸಿಸುವ `ಶಾಂಕಾಕಾರಂ ಭುಜಗಶಯ' ನೃತ್ಯ ಪ್ರದರ್ಶಿಸಿದರು. ಇವರಿಗೆ ಸಾಥ್ ನೀಡಲು ಒರಿಸ್ಸಾದ ಭುವನೇಶ್ವರದಿಂದ ಬಂದ `ನೂಪುರ' ಕಲಾವಿದರು `ದೇವಿವಂದ ಲಲಿತ ಲವಂಗ ಲತಾ' ಆಕರ್ಷಕ ನೃತ್ಯ ಪ್ರದರ್ಶಿಸಿದರು.

ಕಾಫಿ ಮೇಲೆ ಜಪಾನ್ ಸುನಾಮಿ ಎಫೆಕ್ಟ್ !

* ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಜಪಾನ್‌ನಲ್ಲಿ ಸಂಭವಿಸಿದ  ಭೂಕಂಪ,ಸುನಾಮಿ ದುಷ್ಪರಿಣಾಮ ಕಾಫಿ ಉದ್ಯಮದ ಮೇಲೆ ಬೀರುವ ಆತಂಕ ಎದುರಾಗಿದೆ.
ಜಪಾನ್ ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ೩ನೇ ಸ್ಥಾನದಲ್ಲಿ,ಒಟ್ಟು ಕಾಫಿ ಬಳಕೆ ಪ್ರಮಾಣದಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆರ್ಥಿಕವಾಗಿ ದೊಡ್ಡ ಹೊಡೆತ ಅನುಭವಿಸಿರುವ ಕಾರಣ ಕಾಫಿ ಖರೀದಿ ಕಡಿಮೆ ಮಾಡುವ  ಸಾಧ್ಯತೆ  ಇದೆ ಎಂದು ಸಮೀಕ್ಷೆ ಹೇಳಿದೆ.
ಕಾಫಿ ಉದ್ದಿಮೆ ಮೇಲೆ ಸುನಾಮಿ ಯಾವ ರೀತಿ ಪರಿಣಾಮ ಬೀರಬಹುದು ಎಂಬುದರ ಸ್ಪಷ್ಟ ಚಿತ್ರಣ ಮೂವತ್ತು-ನಲ್ವತ್ತು ದಿನದಲ್ಲಿ ದೊರೆಯುವ, ಇದನ್ನಾಧರಿಸಿಯೇ  ಕಾಫಿ ಬೆಲೆಯೂ (ಏರುವ ಅಥವಾ ಕುಸಿಯುವ) ನಿರ್ಧಾರವಾಗುವ  ಸಾಧ್ಯತೆ ಇದೆ.

ವಿದ್ಯಾರ್ಥಿಗಳೇ ಅಧ್ಯಾಪಕರನ್ನು ಪಾಸು ಮಾಡಬೇಕು

*ಚೀ. ಜ. ರಾಜೀವ ಮೈಸೂರು
ಆರಂಕಿ ಇಲ್ಲವೇ ಐದಂಕಿ ಸಂಬಳ ಪಡೆದೂ, ಸರಿಯಾಗಿ ಪಾಠ ಮಾಡದ ಪ್ರೊಫೆಸರ್‌ಗಳ  ವೃತ್ತಿ ಸಾಮರ್ಥ್ಯ - ಯೋಗ್ಯತೆಯನ್ನು ಅಳೆಯುವುದು ಹೇಗೆ ?
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ದಿಂದ ಸೈ ಎನಿಸಿಕೊಳ್ಳಲು ಸಾಂಪ್ರದಾಯಿಕ ವಿವಿಗಳು `ಇಂಟರ್‌ನಲ್ ಕ್ವಾಲಿಟಿ ಅಸೆಸ್ ಮೆಂಟ್ ಸೆಲ್' ವ್ಯವಸ್ಥೆಯಡಿ ಕೆಲ ವರ್ಷಗಳಿಂದ  ಕಸರತ್ತು  ಆರಂಭಿಸಿವೆ.
ಯುಜಿಸಿ ನಿಯಮದ ಪ್ರಕಾರ ಪ್ರತಿಯೊಬ್ಬ ಪ್ರಾಧ್ಯಾಪಕರೂ ತಮ್ಮನ್ನು ತಾವೇ ಅಳೆದುಕೊಂಡು, ತಮ್ಮ ಶೈಕ್ಷಣಿಕ ನಿರ್ವಹಣೆಗೆ ಮೌಲ್ಯ ನಿಗದಿಪಡಿಸಿ ಕೊಳ್ಳಬೇಕು.  `ಸೆಲ್ಫ್ ಅಪ್ರೈಸೆಲ್'-ಎಂಬ ಈ ಕಾರ್ಪೋರೇಟ್ ಸಂಸ್ಕೃತಿಯ ಮೌಲ್ಯಾಂಕನ ಪರೀಕ್ಷಾ ಪದ್ಧತಿಗೆ ಎಲ್ಲರೂ ಒಳಗೊಳ್ಳಬೇಕು.
ಬರೆದ ಪುಸ್ತಕಗಳು, ಪ್ರಕಟವಾದ ಲೇಖನಗಳು, ಭಾಗವಹಿಸಿದ ಸೆಮಿನಾರುಗಳು, ಮಾಡಿದ ಪಾಠಗಳು, ಗಳಿಸಿದ  ಪ್ರಶಸ್ತಿ-ಪುರಸ್ಕಾರಗಳು ಸೇರಿದಂತೆ ತನ್ನ ವೃತ್ತಿಗೆ ಸಂಬಂಧಿಸಿದ ಶೈಕ್ಷಣಿಕ ನಿರ್ವಹಣೆಯ  ಅಂಕಿ-ಸಂಖ್ಯೆ ಯನ್ನು ಒಪ್ಪಿಸಬೇಕು.
ಇಷ್ಟೆಲ್ಲಾ ಇದ್ದರೂ ಕೆಲವರು ರಂಗೋಲಿ ಕೆಳಗೆ ನುಸುಳುವಷ್ಟು ಚಾಣಾಕ್ಷರು. ಶೈಕ್ಷಣಿಕವಾಗಿ ವರ್ಷವಿಡೀ ಏನೂ ಮಾಡದಿದ್ದರೂ, ಏನೇನೋ ಮಾಡಿರುವುದಾಗಿ  ದಾಖಲೆಗಳನ್ನು ಸೃಷ್ಟಿಸಬಲ್ಲರು. ಹಾಗಾಗಿ, ಪ್ರಾಧ್ಯಾಪಕರ ನೈಜ ಶೈಕ್ಷಣಿಕ ಯೋಗ್ಯತೆಯನ್ನು ಅಳೆಯಲು ಪರಿಪೂರ್ಣ ವಾಗಿ ಸಾಧ್ಯವಾಗುತ್ತಿಲ್ಲ. ಇದನ್ನು ನೀಗಿಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ `ಬೋಧಕರ ಸಾಮರ್ಥ್ಯ-ವಿದ್ಯಾರ್ಥಿಗಳಿಂದಲೇ ಮೌಲ್ಯಮಾಪನ' ಎಂಬ ನೂತನ ಪದ್ಧತಿಯನ್ನು ಈ ವರ್ಷದಿಂದಲೇ ಜಾರಿಗೆ ತರಲಿದೆ.