ಅಲ್ಲೂ ಕ್ರಿಕೆಟ್... ಇಲ್ಲೂ ಕ್ರಿಕೆಟ್... ಎಲ್ಲೆಲ್ಲೂ ಕ್ರಿಕೆಟ್...

ಕಾಯಿಲೆಗಳಿಗೂ ಕ್ರಿಕೆಟ್ ಸಡ್ಡು
ದೊಡ್ಡಾಸ್ಪತ್ರೆಯಲ್ಲಿ ದೊಡ್ಡ ಕ್ಯೂ ಕಾಣಲಿಲ್ಲ. ಕಾಯಿಲೆಗೂ ಕ್ರಿಕೆಟ್ ಸಡ್ಡು ಹೊಡೆದಿತ್ತು. ಸದಾ ರೋಗಿಗಳಿಂದ ಗಿಜಿಗುಡುತ್ತಿದ್ದ ಕೆ.ಆರ್.ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನದ ಹೊತ್ತಿಗೆ ಸರದಿ ಸಾಲು ಕರಗಿತ್ತು. ಎಂದಿನಂತೆ ಹೊರರೋಗಿಗಳ ವಿಭಾಗದಲ್ಲಿ ಬೆಳಗ್ಗೆ ಸಾಲು ಕಂಡಿತಾದರೂ ಮಧ್ಯಾಹ್ನ ೨ ಗಂಟೆಯಾಗುತ್ತಿದ್ದಂತೆ ಮಾಯವಾಗಿತ್ತು. ನೆರೆಯ ನಾಲ್ಕಾರು ಜಿಲ್ಲೆಗಳಿಗೆ ಪ್ರಮುಖ ಸರಕಾರಿ ಆಸ್ಪತ್ರೆಯಾಗಿರುವ ಕೆ.ಆರ್.ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ಸದಾ ರೋಗಿಗಳು ನೋಂದಣಿ ಕೌಂಟರ್‌ನಲ್ಲಿ ಚೀಟಿ ಪಡೆಯಲು ಸಾಲುಗಟ್ಟಿ ನಿಂತಿರುತ್ತಾರೆ. ಆದರೆ ಕ್ರಿಕೆಟ್ ಕಾರಣವಾಗಿ ಒಳರೋಗಿಗಳ ವಿಭಾಗಗಳನ್ನು ಹೊರತುಪಡಿಸಿದರೆ ಹೊರ ರೋಗಿಗಳ ವಿಭಾಗ ಬಿಕೋ ಎನ್ನುತಿತ್ತು. ವೈದ್ಯರು ಹಾಗೂ ಸಿಬ್ಬಂದಿಗೆ ತುಸು ಬಿಡುವು ಸಿಕ್ಕಂತಾಗಿತ್ತು.

ತನು ಮನ ಜಯ ಭಾರತ

ಮೈಸೂರು:  ನಡು ಮಧ್ಯಾಹ್ನ ಮೈಸೂರಿನ ಬಹುತೇಕ ಎಲ್ಲ ರಸ್ತೆಗಳಲ್ಲೂ ನೀರವತೆ. ಜನಸಂಚಾರ ವಿರಳ.  ಆದರೆ  ರಾತ್ರಿ ೧೦.೩೦ರ ಸುಮಾರಿಗೆ ಅದೇ ರಸ್ತೆಗಳಲ್ಲಿ  ಒಮ್ಮಿಂದೊಮ್ಮೆಲೆ ಟ್ರಾಫಿಕ್ ಜಾಮ್ !
ಮಕ್ಕಳು-ಹಿರಿಯರು ಎಂಬ ತಾರತಮ್ಯವಿಲ್ಲದೇ ನೂರಾರು ಜನ ರಸ್ತೆಗಿಳಿದು ಕೇಕೆ ಹಾಕಿದರು, ಕುಣಿದು ಕುಪ್ಪಳಿಸಿದರು, ತ್ರಿ ವರ್ಣ ಧ್ವಜ  ಹಿಡಿದು ರಸ್ತೆಯಲ್ಲೆಲ್ಲಾ  ಓಡಾಡಿದರು, ಪಟಾಕಿ ಸಿಡಿಸಿ ಸಂಭ್ರಮಿಸಿದರು.... ಕೆಲವರಂತೂ ಧರಿಸಿದ ಬಟ್ಟೆ ಬಿಚ್ಚಿ, ಗಾಳಿಯಲ್ಲಿ ತೂರಾಡಿದರು.
ಸಂಭ್ರಮ ಹೀಗೆಲ್ಲಾ ಸ್ಫೋಟವಾಗುವುದು ಸಾಧ್ಯವೇ ಎಂದು ಜನ ನಿಬ್ಬೆರಗಾಗಿ ನೋಡುವಂತೆ, ಮೈಸೂರಿಗೆ ಮೈಸೂರೇ ಸಂತಸದಲ್ಲಿ ಮುಳುಗೇಳುವಂತೆ ಮಾಡಿದ್ದು ಮೊಹಾಲಿಯ ಅರ್ಹ ಗೆಲುವು.  ಎಲ್ಲರ ಬಾಯಲ್ಲೂ ಒಂದೇ ತಾರಕ ಘೋಷಣೆ- ಭಾರತ್ ಮಾತಾ ಕಿ ಜೈ !
ಪ್ರಮುಖ ವೃತ್ತಗಳಾದ ಹೃದಯ ಭಾಗದ ಕೆ. ಆರ್. ವೃತ್ತ, ಅಗ್ರಹಾರ, ರಾಮಸ್ವಾಮಿ ವೃತ್ತ, ವಿವೇಕಾನಂದ ವೃತ್ತ, ಮಾತೃಮಂಡಳಿ ಸೇರಿದಂತೆ ಎಲ್ಲ ವೃತ್ತಗಳಲ್ಲೂ  ಹಬ್ಬದ ಸಂಭ್ರಮವೇ. ಯುಗಾದಿಗೆ ಮೂರು ದಿನ ಮುಂಚಿತವೇ ಮೈಸೂರು ಜನ ಚಂದ್ರ ದರ್ಶನ ಮಾಡಿದಂತೆ ಸಂತಸಪಟ್ಟರು.

ಗೆಲುವಿನ ಮುಖ ನೋಡೋ ತವಕ

ಭಾರತ ತಂಡಕ್ಕೆ ಶುಭಹಾರೈಸಿ ಬೈಕ್ ರ್‍ಯಾಲಿ
ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವಿಗೆ ಶುಭಹಾರೈಸಿ ಮೈಸೂರಿನಲ್ಲಿ ಯುವಕರು ಬುಧವಾರ ಬೈಕ್ ರ್‍ಯಾಲಿ ನಡೆಸಿದರು.
ಜಯಲಕ್ಷ್ಮಿಪುರಂನ ಮಹಾಜನ ಪದವಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಹಾಗೂ ಒಂಟಿಕೊಪ್ಪಲು, ಪಡುವಾರಹಳ್ಳಿಯ ಯುವಕರು ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚು ಮಂದಿ ರ್‍ಯಾಲಿಯಲ್ಲಿ ಪಾಲ್ಗೊಂಡರು. ಒಂಟಿಕೊಪ್ಪಲ್‌ನಿಂದ ಮಧ್ಯಾಹ್ನ ೧೨ಕ್ಕೆ ರ್‍ಯಾಲಿ ಹೊರಟಿತು. ಕೆನ್ನೆ ಮೇಲೆ ತಿರಂಗ ಚಿಹ್ನೆ ಬಿಡಿಸಿಕೊಂಡು, ತ್ರಿವರ್ಣ ಧ್ವಜ ಹಿಡಿದುಕೊಂಡು ಉತ್ಸಾಹದಿಂದ ಬೀಗುತ್ತಿದ್ದ ಯುವಕರು ಭಾರತಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಪಡುವಾರಹಳ್ಳಿ, ವಿನೋಬಾರಸ್ತೆ ಮತ್ತಿತರ ಪ್ರಮುಖ ರಸ್ತೆಗಳಲ್ಲಿ ಪಂದ್ಯ ಪ್ರಾರಂಭವಾಗುವವರೆಗೂ ಟೀಂ ಇಂಡಿಯಾ ಪರ ಘೋಷಣೆ ಕೂಗುತ್ತಾ ರ್‍ಯಾಲಿ ನಡೆಸಿ ಗಮನಸೆಳೆದರು.

ಅನರ್ಹ ಶಾಸಕರ ಕ್ಷೇತ್ರಕ್ಕೆ ಭರಪೂರ ಕೊಡುಗೆ

* ಆರ್.ಕೃಷ್ಣ, ಮೈಸೂರು
ಚನ್ನಪಟ್ಟಣ ಸೇರಿದಂತೆ ಮೂರು ಕ್ಷೇತ್ರಗಳಿಗೆ ಮರು ಚುನಾವಣೆ ನಡೆಯುತ್ತಿರುವ ಮಧ್ಯೆಯೇ ಬಿಜೆಪಿ, ಸಿದ್ಧಗೊಳ್ಳುತ್ತಿರುವುದು `ಚಾಮರಾಜ' ಕ್ಷೇತ್ರ ಸೇರಿದಂತೆ ೧೧ ಕ್ಷೇತ್ರಗಳ ಮರು ಚುನಾವಣೆಗೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಡ್ಡು ಹೊಡೆದಿದ್ದ ೧೧ ಬಿಜೆಪಿ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿದ್ದಲ್ಲದೇ, ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ವಿಧಾನ ಸಭಾಧ್ಯಕ್ಷರು ತೀರ್ಪು ನೀಡಿದ್ದರು. ಇದನ್ನು ಪ್ರಶ್ನಿಸಿ ೧೧ ಶಾಸಕರು ನ್ಯಾಯಾ ಲಯದ ಮೆಟ್ಟಿಲೇರಿದ್ದು, ತೀರ್ಪು ಸದ್ಯವೇ ಹೊರಬೀಳುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ತೀರ್ಪು ತನ್ನ ಪರವಾಗಿರಲಿದೆ ಎಂಬ ವಿಶ್ವಾಸ ದಿಂದ ಸರಕಾರ ಈಗಾಗಲೇ ಅನರ್ಹಗೊಂಡ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ರಾಜ್ಯ ಹಣಕಾಸು ಆಯೋಗ (ಎಸ್‌ಎಫ್‌ಸಿ) ದಿಂದ ಸ್ಥಳೀಯ ಸಂಸ್ಥೆಗಳಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.

ಬಡವರಿಗೆ ವರಮಾನ ಸಾಧಕರಿಗೆ ಸಮ್ಮಾನ

ಫ್ರೆಂಡ್ಲಿ `ಮ್ಯಾಚ್'...
ನಗರ ಪಾಲಿಕೆ ತೆರಿಗೆ ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್ ಮಂಡಿಸಿದ ಬಜೆಟ್‌ಗೆ ಆಡಳಿತ,ಪ್ರತಿಪಕ್ಷದ ಯಾರಿಂದಲೂ ಹೆಚ್ಚಿನ ಆಕ್ಷೇಪ ವ್ಯಕ್ತವಾಗಲಿಲ್ಲ. ಕಾರಣ, ಪಾಲಿಕೆಯಲ್ಲಿ ತಾಂತ್ರಿಕವಾಗಿ ಬಿಜೆಪಿ ಪ್ರತಿಪಕ್ಷ. ಸದಸ್ಯ ಬಾಹುಳ್ಯದ ಮೇಲೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಿಗಿದೆ. ಶಿವಕುಮಾರ್ ಆ ಪಕ್ಷದ ಸದಸ್ಯರಾಗಿದ್ದರಿಂದ ಟೀಕೆಯನ್ನು ನಿರೀಕ್ಷಿಸುವಂತಿಲ್ಲ. ಮೇಯರ್ ಸಂದೇಶ್ ಸ್ವಾಮಿ ಜಾ.ದಳ ಸದಸ್ಯ.ಉಪಮೇಯರ್ ಪುಷ್ಪಲತಾ ಕಾಂಗ್ರೆಸ್. ಈ ಕಾರಣ ಯಾರಿಗೂ ಟೀಕಿಸುವ `ಅವಕಾಶ 'ಇಲ್ಲ. ಟೀಕಿಸಿದರೆ ತಮ್ಮನ್ನು ತಾವೇ ಟೀಕಿಸಿಕೊಂಡಂತೆ. ಪರಿಣಾಮ, ಬಜೆಟ್ ಎಲ್ಲರಿಗೂ `ಅನಿವಾರ್‍ಯ ಅಮೃತ'. ಒಂದರ್ಥದಲ್ಲಿ, ಫ್ರೆಂಡ್ಲಿ ಮ್ಯಾಚ್.


ಹೊಸ ಪರಿಕಲ್ಪನೆಯೂ ಇರಲಿ, ವ್ಯವಸ್ಥೆ ಬದಲಾಗಲಿ

ವಿಕ ಸುದ್ದಿಲೋಕ ಮೈಸೂರು
ರಾಜ್ಯದ ಬಹುದೊಡ್ಡ ಸಂಪರ್ಕ ಜಾಲವಾಗಿರುವ ಕೆಎಸ್‌ಆರ್‌ಟಿಸಿಯಿಂದ ಮೈಸೂರು ನಗರ ಸಾರಿಗೆ ವಿಭಾಗದಲ್ಲಿ `ಬಸ್ ದಿನಾಚರಣೆ 'ಪರಿಕಲ್ಪನೆಗೆ ನಗರ ನಾಗರಿಕರಿಂದ ಸ್ವಾಗತ ಸಿಕ್ಕಿರುವ ಬೆನ್ನ ಹಿಂದೆಯೇ ಸಾರಿಗೆ (ಅ)ವ್ಯವಸ್ಥೆಯ ಹುಳುಕನ್ನೂ ಎತ್ತಿ ತೋರಿದ್ದಾರೆ.
ಏಳು ದಿನಗಳಿಂದ ವಿಜಯ ಕರ್ನಾಟಕ ನಡೆಸಿದ `ವಿಕ ಅಭಿಯಾನ'ಕ್ಕೆ ಸಿಕ್ಕ ಪ್ರತಿಕ್ರಿಯೆ ನಿಜಕ್ಕೂ ಅದ್ಭುತ. ಭವಿಷ್ಯದ ನೆಲೆಯಲ್ಲಿ ಒಂದು ಉತ್ತಮ ಪರಿಕ್ರಮ ವಾದಂಥ' ಬಸ್ ದಿನ ದಂಥ ಪರಿಕಲ್ಪನೆಗೆ ಜನರನ್ನು ಮುಖಾಮುಖಿಗೊಳಿಸಲೆಂದೇ ಪತ್ರಿಕೆ ಇಂಥದೊಂದು ಅಭಿಯಾನವನ್ನು ಆರಂಭಿಸಿತ್ತು. ಈ ವೇದಿಕೆಯನ್ನು ಸಮರ್ಥವಾಗಿ ಬಳಸಿದ ಸಾರ್ವ ಜನಿಕರು, ಬಸ್ ದಿನ ದ ಸಾರ್ಥಕತೆ ಬಗ್ಗೆ ಸಾಕಷ್ಟು ಸಲಹೆ ಗಳನ್ನು ಕೊಟ್ಟರಲ್ಲದೇ, ತಿಂಗಳಿಗೊಂದು ದಿನವೇಕೆ ? ದಿನವೂ ಬಸ್ ದಿನ ಆಚರಿಸಲು ಕೆಎಸ್‌ಆರ್‌ಟಿ ಸಿ ಯ ನಗರ ಸಾರಿಗೆ ವಿಭಾಗ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಕೊಟ್ಟ ಟಿಪ್ಸ್ ಬಹಳ ಅನುಪಮವಾದುದು.
ಅಭಿಯಾನದ ಕೊನೇ ದಿನವಾದ ಸೋಮವಾರ ಸಂಜೆ ೫ ರಿಂದ ೬ ವರೆಗೆ ಸಾಕಷ್ಟು ಮಂದಿ ಸಾರ್ವಜನಿಕರು ದೂರವಾಣಿ ಕರೆ ಮಾಡಿ, `ವಿಕ ಫೋನ್-ಇನ್' ನಲ್ಲಿ ಪ್ರಶ್ನೆಗಳ ಸುರಿಮಳೆಗರೆದರು. ಸಂಸ್ಥೆಯ ಅಧಿಕಾರಿಗಳು ಸಹ ಸ್ಪಷ್ಟ ಉತ್ತರ ನೀಡಿದರು. ಒಂದರ್ಥದಲ್ಲಿ ಬಸ್ ದಿನದ ನೆಪದಲ್ಲಿ ಸಾರಿಗೆ ಸಂಸ್ಥೆ ಮತ್ತು ಜನರ ನಡುವೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು ನಿಜ.

ಬಡಾವಣೆಯಿಂದ ಬಡಾವಣೆಗೆ ನೇರ ಸೌಲಭ್ಯ

ಏಳು ದಿನ ನಡೆದ ಚರ್ಚೆಯಲ್ಲಿ ಸ್ಪಷ್ಟಗೊಂಡ ಮಹತ್ವದ ಅಂಶವೆಂದರೆ ನಗರದ ಬಹಳಷ್ಟು ಮಂದಿಗೆ ಬಸ್ ಮೇಲೆ ಪ್ರೀತಿ ಇದೆ. ಕಾರಣ ಕಾಳಜಿ, ಪ್ರೀತಿ ಇದ್ದವರ ಮೇಲೆ ಮಾತ್ರ ನಾವು ಅಧಿಕಾರಯುಕ್ತ ಟೀಕೆ ಮಾಡುತ್ತೇವೆ. ಇದೇ ಸಂವಾದದಲ್ಲಿ ಕೇಳಿ ಬಂದಿರುವುದು ಆ ಧ್ವನಿಯ ಮಾತೇ ಹೊರತು ದೂರುಗಳಲ್ಲ. ನಗರ ಸಾರಿಗೆ ವಿಭಾಗದ ಅಧಿಕಾರಿಗಳು  ಹೊಸ ಪರಿಕ್ರಮಕ್ಕೆ ಮುಂದಾಗುವ ಉತ್ಸಾಹದ ಜತೆಗೆ ಹಳತನ್ನು ಸರಿ ಮಾಡಬೇಕೆಂಬುದೇ ಈ ಅಭಿಯಾನದ ಆಗ್ರಹ.

ನಮ್ಮಲ್ಲೇ ಮಾತಾಡಿದ್ದು ಸಾಕು, ಅವರಿಗೂ ಇದ ಹೇಳಬೇಕು ?

ಬೆಂಗಳೂರಿನ ಆಲೋಚನೆ ಮೈಸೂರಿನಲ್ಲಿ ಸಾಕಾರಗೊಳ್ಳುವ ಸಾಧ್ಯತೆ ಹೇಳಿಕೊಳ್ಳುವಂತಿಲ್ಲ. ಕಾರಣ ಮೈಸೂರು ಹತ್ತಾರು ಕಿ.ಮೀ. ವ್ಯಾಪ್ತಿಯಲ್ಲೇ ಮುಗಿದು ಹೋಗುತ್ತದೆ. ಆದರೆ ಬೆಂಗಳೂರು ಹಾಗಲ್ಲ. ಸಾಗಿದಷ್ಟು ದೂರ ಮುಗಿಯುವುದೇ ಇಲ್ಲ.

ಸುಧಾರಿಸಿದರೆ ಬಸ್ಸೇ ಬೆಸ್ಟು !

ಸಂಚಾರ ಸುರಕ್ಷತೆ ವಿಷಯದಲ್ಲಿ ಬಹುಪಾಲು ಜನರ ಆಯ್ಕೆ ಇಂದಿಗೂ `ಬಸ್' ಎಂಬುದು ಸತ್ಯವಾದರೂ
ರಸ್ತೆ ದುಸ್ಥಿತಿ, ಸಾರಿಗೆ ಸಂಸ್ಥೆಯ ಬಸ್‌ಗಳ ಸಮಯಪಾಲನೆ, ಸೇವಾ ಸೌಲಭ್ಯ ಹಾಗೂ ಚಾಲಕರು, ನಿರ್ವಾಹಕರ ವರ್ತನೆಯಲ್ಲೂ ಸುಧಾರಣೆ ಕಾಣಬೇಕು ಎಂಬುದು ಇಂದಿನ ಒಟ್ಟಾರೆ ಜನಾಭಿಪ್ರಾಯ.

ಮುಡಾ ಸಿಬ್ಬಂದಿಗೆ ಬಯೋಮೆಟ್ರಿಕ್ ಮೂಗುದಾರ

* ಮೈಸೂರು ನಗರ
`ಅನ್ಯ ಕಾರ್‍ಯನಿಮಿತ್ತ' ಸದಾ ಬ್ಯುಸಿಯಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿಗೆ ಕೊನೆಗೂ ಕಡಿವಾಣ ಬಿದ್ದಿದೆ.
ತಮಗೆ ಬೇಕಾದಾಗ ಕಚೇರಿಗೆ ಬರುತ್ತಿದ್ದ ಬಹುತೇಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಈಗ ಬಯೋ ಮೆಟ್ರಿಕ್ ಹಾಜರಿ ಕಡ್ಡಾಯ. ಇದರಿಂದ ಸಿಬ್ಬಂದಿಯಲ್ಲಿ ಶಿಸ್ತು ತರುವ ಮೊದಲ ಹೆಜ್ಜೆಯಾಗಿ ನೂತನ ಆಯುಕ್ತ ಡಾ. ಚಂದ್ರಶೇಖರ ಬೆಟ್ಟಸೂರಮಠ ತಮ್ಮದೇ ಹೆಬ್ಬೆರಳ ದಾಖಲೆ ನೀಡಿ ಕಚೇರಿ ಪ್ರವೇಶಿಸುವ ಬಯೋಮೆಟ್ರಿಕ್ ಪದ್ಧತಿ ಜಾರಿ ಗೊಳಿಸಿದ್ದಾರೆ.


ಈಸ್ಟ್ ಆರ್ ವೆಸ್ಟ್ ಇಂಡಿಯಾ ಈಸ್ ದ ಬೆಸ್ಟ್

ಗುರುವಾರ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ  ಕುರಿತು ಕ್ರೀಡಾಸಕ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಹೀಗೆ...

`ನೆನೆ ಬನ'ವ ನೆನೆ ಮನವೇ

* ಪಿ.ಓಂಕಾರ್ ಮೈಸೂರು
ನಿಮ್ಮ ಇಂದಿನ ಸಂಭ್ರಮ,ಖುಷಿ ಅರ್ಥಪೂರ್ಣವಾಗಿ ಕೊನರಿ, ಅರಳಿ, ಗಿಡವಾಗಿ, ಮರವಾಗಿ ನೂರ್‍ಕಾಲ ನೆರಳಾಗಿ ಇರಬೇಕೆಂದರೆ ಅದಕ್ಕೆ ಇಲ್ಲೊಂದು ವನ ಆವರಣ ಸೃಷ್ಟಿಯಾಗಿದೆ. ಹುಟ್ಟುಹಬ್ಬ,ವಿವಾಹ-ವಾರ್ಷಿ ಕೋತ್ಸವ ಸೇರಿ ಯಾವುದೇ ಸಂತಸದ ಕ್ಷಣಕ್ಕೆ, ಸ್ನೇಹದ ನೆನಪಿಗೆ,ಪರಿಸರದ ಉಳಿವಿಗೆ ಅಥವಾ ವಿನಾಕಾರಣ ೧ಸಾವಿರ ರೂ.ಗಳನ್ನು ದೇಣಿಗೆ ರೂಪದಲ್ಲಿ ನೀಡಿದರೆ  ಅದು `ನೆನೆ ಬನ'ದ ಕಂಪಿಗೆ-ತಂಪಿಗೆ-ಇಂಪಿಗೆ ನೆರವಾಗುತ್ತದೆ.
ಅಂದಹಾಗೆ,ಏನಿದು `ನೆನೆ ಬನ'?: ಗಾಂಧಿ ಪ್ರಣೀತ ಸರ್ವೋದಯ ಚಿಂತನೆಯ ನೆಲೆಯಲ್ಲಿ ಐದು ದಶಕಗಳ ಹಿಂದೆ ಆರಂಭವಾಗಿ,ಈಗ ಸುವರ್ಣ ಸಂಭ್ರಮದಲ್ಲಿರುವ ಮಂಡ್ಯ ಜಿಲ್ಲೆ ಮೇಲುಕೋಟೆಯ `ಜನಪದ ಸೇವಾ ಟ್ರಸ್ಟ್' ರೂಪಿಸಿರುವ ಹೊಸ ಪರಿಕಲ್ಪನೆ.

ಬಿಎಂಟಿಸಿ ಪರಿಕಲ್ಪನೆ ಮೈಸೂರಿಗೂ ಒಪ್ಪುವುದಾ?

ಬೆಳೆಯುತ್ತಿರುವ ನಗರಕ್ಕೆ ಸಾಮೂಹಿಕ ಸಾರಿಗೆ ವ್ಯವಸ್ಥೆ ಯಾವಾಗಲೂ ಪೂರಕ. ವ್ಯತ್ಯಾಸ ಆರಂಭವಾಗುವುದು ಅಲ್ಲಿನ ಲಭ್ಯ ಸಂಪನ್ಮೂಲ ಮತ್ತು ಬೇಡಿಕೆಯ ನಡುವಿನ ಅಂತರ ಆ ವ್ಯವಸ್ಥೆಯ ಯಶಸ್ಸನ್ನು ನಿರ್ಧರಿಸಬಲ್ಲದು. ಬಸ್ ದಿನ ಬೆಂಗಳೂರಿನಲ್ಲಿ ಯಶಸ್ವಿಯಾಗಿದೆ ಎಂಬುದು ಸಾರಿಗೆ ಸಂಸ್ಥೆಯ ಅಭಿಮತ. ಆದರೆ ಅಲ್ಲಿದ್ದಷ್ಟೇ ಸಂಪನ್ಮೂಲ ಮೈಸೂರಿನಲ್ಲಿದೆಯೇ ಎಂಬುದು ನಾಗರಿಕರ ಪ್ರಶ್ನೆ.

ಬಸ್ಸು ಸದ್ಯದ ಸಂಚಾರ ಸಮಸ್ಯೆಗೆ ಪರಿಹಾರ !?

ವಾಹನ ದಟ್ಟಣೆ, ಇಂಧನ ಉಳಿತಾಯ, ಪರಿಸರ ರಕ್ಷಣೆಯ ಸದುದ್ದೇಶ ಹೊತ್ತ `ಬಸ್ ದಿನ'ದ ವಿನೂತನ ಆಚರಣೆ ಉತ್ತಮವಾದರೂ ಪ್ರಯಾಣಿಕರಿಗೆ ಸೇವಾ, ಸೌಲಭ್ಯದಲ್ಲಿ ಆಗುತ್ತಿರುವ ತೊಂದರೆಗಳನ್ನು ಮೊದಲು ತೊಡೆದು ಹಾಕಬೇಕೆಂಬುದು ಒಟ್ಟಾರೆ ಜನಾಭಿಪ್ರಾಯ.

ಬಸ್ ದಿನ ನಾಂದಿಯಾಗುವುದೆ

ಮೈಸೂರು ನಗರ
ಇವತ್ತಿನ ವಾಹನ ದಟ್ಟಣೆಗೆ ಸಾಮೂಹಿಕ ಸಾರಿಗೆ ವ್ಯವಸ್ಥೆ ಅಲ್ಪಮಟ್ಟಿಗಿನ ಪರಿಹಾರ ಎನ್ನಬಹುದು.
ಪರಿಸರ ನಾಶ ತಡೆ, ಅಪಘಾತ ತಡೆ, ಇಂಧನ ಉಳಿತಾಯ... ಎಲ್ಲಕ್ಕೂ ಕೂಡ. ಬಸ್ ಡೇ ಇದಕ್ಕೆ ನಾಂದಿ ಆಗಬಲ್ಲದೇ?
ಬಸ್ ಡೇ ವಿನೂತನ ಪರಿಕಲ್ಪನೆಗೆ ಸಾರ್ವಜನಿಕರ ಸಹಕಾರ ಬೇಕು. ನಿಜ, ಮಿಗಿಲಾಗಿ ಸಾರಿಗೆ ಅಧಿಕಾರಿಗಳಿಗೆ ಬದ್ಧತೆ ಬೇಕು. ಯಾರೋ ಒಬ್ಬರೀ, ಇಬ್ಬರೋ ಅಧಿಕಾರಿಗಳಿಗೆ ಕಾಳಜಿಯಿದ್ದರೆ ಸಾಲದು, ಸಾಮೂಹಿಕ ಕಾಳಜಿ ಅವಶ್ಯ. ಬಸ್ ಡೇ ಕಾಟಾಚಾರ ವಾಗಬಾರದು. ಕೇವಲ `ಆಚರಣೆ'ಯಾಗಿ ಒಂದು ದಿನಕ್ಕೆ ಸೀಮಿತ ವಾಗಬಾರದು. ಆ ದಿನ ಹೆಚ್ಚು ಹೆಚ್ಚು ಜನರು ಬಸ್‌ನಲ್ಲಿ ಪ್ರಯಾಣಿಸುವಂತೆ ಮಾಡಿ ಯಶಸ್ಸು ಪಡೆಯುವುದು ದೊಡ್ಡದಲ್ಲ. ಸದಾ ಉತ್ತಮ ಸೇವೆ ಒದಗಿಸಿ ಜನರಲ್ಲಿ `ನಂಬಿಕೆ' ಮೂಡಿಸುವ ಕೆಲಸ ಮೊದಲಾಗಬೇಕು.

ಬಸ್ ದಿನ ಏಕೆ ಹೇಗೆ

`ಬಸ್ ದಿನ' ಭವಿಷ್ಯಕ್ಕೆ ಹಾಕಿರುವ ಏಣಿ. ಏರುತ್ತಿರುವ ಇಂಧನ ಬೆಲೆ, ಹೆಚ್ಚುತ್ತಿರುವ ವಾಯುಮಾಲಿನ್ಯ, ಆತಂಕ ಹುಟ್ಟಿಸುತ್ತಿರುವ ರಸ್ತೆ ಅಪಘಾತ...ಇದಕ್ಕೆ ಸಾಮೂಹಿಕ ಸಾರಿಗೆ ವ್ಯವಸ್ಥೆ ಉಪಯೋಗ ವಾಗಬಹುದು. ಆದರೆ  ಆ ಏಣಿ ಎಷ್ಟು ಗಟ್ಟಿಮುಟ್ಟು ಎಂಬುದನ್ನು ಪರೀಕ್ಷಿಸುವ, ಅವಲೋಕಿಸುವ ಪ್ರಯತ್ನ ಈ ಅಭಿಯಾನ.

ಸಾಂಘಿಕ ಪ್ರದರ್ಶನ ಅವಶ್ಯ

ಭಾನುವಾರ (ಮಾ. ೨೦) ನಡೆದ  ವಿಶ್ವ ಕಪ್ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್
ವಿರುದ್ಧ  ಭಾರತ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಈ ಸಂಬಂಧ ಕ್ರಿಕೆಟ್ ಪ್ರೇಮಿಗಳು ಮನದಾಳದ ಮಾತುಗಳನ್ನಾಡಿದ್ದಾರೆ.

ಒಂದು ದಿನವಾದರೂ ಬೈಕ್, ಕಾರು ಬಿಡಿ

ಜೆ.ಶಿವಣ್ಣ ಮೈಸೂರು
ಒಂದು ದಿನವಾದರೂ ವಾಹನವುಳ್ಳವರು ತಮ್ಮ ಎಲ್ಲಾ ವಾಹನಗಳನ್ನು ಮನೆಯಲ್ಲಿಟ್ಟು ನಗರ ಸಾರಿಗೆ ಬಸ್‌ನಲ್ಲಿ ಸಂಚರಿಸಿದರೆ ಹೇಗೆ ?
ಹಳ್ಳಕೊಳ್ಳಗಳ ರಸ್ತೆ, ಸದಾ ಟ್ರಾಫಿಕ್ ಜಾಮ್, ಸಂಚಾರ ನಿಯಮ ಗಳನ್ನು ಉಲ್ಲಂಘಿಸಿ ದಿಢೀರ್ ನುಗ್ಗುವ ವಾಹನಗಳು ಮತ್ತು ಪಾದಚಾರಿಗಳು... ಇವುಗಳ ನಡುವೆ ಆತಂಕದಲ್ಲೇ ಬೈಕನ್ನೋ, ಕಾರನ್ನೋ ಚಲಾಯಿಸುವವರು ಕನಿಷ್ಠ ಒಂದು ದಿನ ಈ ಎಲ್ಲವು ಗಳಿಂದ ಮುಕ್ತಿ ಪಡೆದು ನಿರಾಳವಾಗಿ ಗಮ್ಯ ತಲುಪಿದರೆ ಎಷ್ಟು ಚೆಂದ. ಒಂದೆಡೆ ನೆಮ್ಮದಿ,ಇನ್ನೊಂದೆಡೆ ಹಣ ಮತ್ತು ಪೆಟ್ರೋಲ್ ಉಳಿತಾಯ,ವಾಹನ ದಟ್ಟಣೆ ಕಡಿಮೆ,ಪರಿಸರ ಮಾಲಿನ್ಯ ಮುಕ್ತ, ಟ್ರಾಫಿಕ್ ಜಾಮ್‌ಗೆ ಮುಕ್ತಿ.

`ನಿಧಾನವೇ ಪ್ರಧಾನ': ಇದು ತಾಲೂಕು ದಂಡಾಧಿಕಾರಿ ಆಫೀಸು....

ಎಸ್.ಕೆ.ಚಂದ್ರಶೇಖರ್ ಮೈಸೂರು
ಸರಕಾರಿ ಕಚೇರಿಯಲ್ಲಿ ಅರ್ಜಿ ಪಡೆದು ಸ್ವೀಕೃತಿ ನೀಡಲು ಎಷ್ಟು ಸಮಯವಾಗಬಹುದು? ೧,೨,೩ ಗಂಟೆ ? ಒಂದು ದಿನ ? ಖಂಡಿತಾ ಆಗಲ್ಲ. ಉಳಿದ ಕಚೇರಿಗಳ ಕತೆ ಎಂತೋ. ಮೈಸೂರು ತಾಲೂಕು ಆಫೀಸಿನಲ್ಲಂತೂ ಬರೋಬ್ಬರಿ ಮೂರ್‍ನಾಲ್ಕು ದಿನ  ಬೇಕೇ ಬೇಕು. ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ತಾಲೂಕು ಕಚೇರಿಯಲ್ಲಿ ಅರ್ಜಿ ಪಡೆದು, ಸ್ವೀಕೃತಿ ನೀಡಲು ಸತತ ನಾಲ್ಕು ದಿನ ಸತಾಯಿಸಿ ನಂತರ ನೀಡಿದ ಪ್ರಕರಣ ಇತ್ತಿಚಿನ ಉದಾಹಣೆ. ಇದು ಒಬ್ಬರ ಕತೆಯಷ್ಟೆ ಅಲ್ಲ. ಒಂದೇ ಪ್ರಕರಣವೂ ಅಲ್ಲ. ಕಚೇರಿಯ ಕಾರ್‍ಯವೈಖರಿಯೇ ಅಂತದ್ದು. ಅರ್ಜಿ ಹಿಡಿದು ಬರುವ ಒಬ್ಬೊಬ್ಬರದೂ ಒಂದೊಂದು `ತಬರನ ಕತೆ'.
ಜನರ ಕೆಲಸವನ್ನು ಒಂದು ಭೇಟಿಗೆ ಕೊಟ್ಟರೆ  ಅದನ್ನು ಅವಮಾನ ಎಂದು  ಇಲ್ಲಿನ ಅಧಿಕಾರಿ ಸಿಬ್ಬಂದಿ ಭಾವಿಸಿದಂತಿದೆ. ಅದೇ,ಹಣ ಬಿಚ್ಚಿದರೆ, ಪ್ರಭಾವ ಬಳಸಿದರೆ  ಎಲ್ಲಾ ಫಟಾಫಟ್.
ತಾಲೂಕು ಕಚೇರಿಯ `ಕಾರ್‍ಯ ವೈಖರಿ' ಕುರಿತ ಆರೋಪಗಳ ಹಿನ್ನೆಲೆಯಲ್ಲಿ, `ವಿಜಯಕರ್ನಾಟಕ' ಅರ್ಜಿದಾರರೊಬ್ಬರ ಬೆನ್ನಿಗೆ ನಿಂತು ನಡೆಸಿದ `ರಿಯಾಲಿಟಿ ಚೆಕ್` ಇದು. ಕೆಲಸ ಆಗುವ-ಹೋಗುವ ಮಾತಿರಲಿ, ಕೇವಲ ಅರ್ಜಿಯೊಂದನ್ನು  ನೀಡಿ ಸ್ವೀಕೃತಿ ಪಡೆಯಲಿಕ್ಕೇ ನಾಲ್ಕು ದಿನ  ಅಲೆದಾಡಿದ್ದು, ತಾಸುಗಟ್ಟಲೆ ಕಚೇರಿ ಬಾಗಿಲು ಕಾಯ್ದದ್ದು, ಆ ವೇಳೆ  ಜನ ಆಡಿದ್ದು-ಅನುಭವಿಸಿದ್ದು  ಇಲ್ಲಿದೆ.

ಪ್ಲೇಸ್‌ಮೆಂಟ್ ಮಾಹಿತಿಗೆ ವೆಬ್ ಪೋರ್ಟಲ್ ಸಿದ್ಧ

 ವಿಕ ವಿಶೇಷ  ಮೈಸೂರು
ಯಶಸ್ವಿ ವಿದ್ಯಾರ್ಥಿಗಳಿಗೆ ಎಲ್ಲೆಲ್ಲಿ ಉದ್ಯೋಗವಕಾಶಗಳ ಸಿಗುತ್ತವೆ ?, ಯಾವೆಲ್ಲಾ ಅನಂತ ಸಾಧ್ಯತೆಗಳು ಇವೆ ?
ಇನ್ಮುಂದೆ  ಮೈಸೂರು ವಿಶ್ವವಿದ್ಯಾನಿಲಯ ಇಂಥ ಮಾಹಿತಿಗಳನ್ನು  ತನ್ನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ನೀಡಲಿದೆ.  ಕಂಪ್ಯೂಟರ್ ಕೀ ಬೋರ್ಡ್ ಮುಂದೆ  ಕುಳಿತ ವರಿಗೆ ಬೆರಳತುದಿಯಲ್ಲಿ ಮಾಹಿತಿ ನೀಡುವುದರ ಜತೆಗೆ,  ಎಲ್ಲರ ಜೇಬು/ಪರ್ಸ್‌ಗಳಲ್ಲಿರುವ ವಿದ್ಯಾರ್ಥಿಗಳ ಮೊಬೈಲ್‌ಗೆ  ನೇರವಾಗಿ ಮಾಹಿತಿಯನ್ನು ರವಾನಿಸಲಿದೆ. ಮೈಸೂರು ವಿವಿ ಈಗ ವೆಬ್ ಪೋರ್ಟಲ್ ಮೂಲಕವೇ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಗಳ ಮಾಹಿತಿ ನೀಡುವ ಸೇವಾ ಸೌಲಭ್ಯವನ್ನು ಅಭಿವೃದ್ಧಿ ಪಡಿಸಿದೆ. ಮುಂದಿನ ಕೆಲ ದಿನಗಳಲ್ಲಿ ಈ ಸೌಲಭ್ಯವನ್ನು ಉದ್ಘಾಟಿಸಲಾಗುವುದು ಎಂದು ಕುಲಪತಿ ಪ್ರೊ. ವಿ. ಜಿ. ತಳವಾರ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಹುಟ್ಟು ನಿಜ, ದಾಖಲೆ ಸುಳ್ಳು!

ನವೀನ್‌ಕುಮಾರ್ ಪಿರಿಯಾಪಟ್ಟಣ
ನಕಲಿ ಜನನ ದೃಢೀಕರಣ ಪತ್ರ `ಸೃಷ್ಟಿಸಿ' ಕೊಡುವ  ಜಾಲವೊಂದು ಪಟ್ಟಣದಲ್ಲಿ ಸಕ್ರೀಯವಾಗಿದ್ದು,ವಿದೇಶಕ್ಕೆ ಹಾರುವ ಬೈಲುಕುಪ್ಪೆಯ ನಿರಾಶ್ರಿತ ಟಿಬೆಟಿಯನ್ನರಿಗೂ ಇಂಥದೇ ನಕಲಿ ದಾಖಲೆ ನೀಡಿರುವ ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಪಾಸ್‌ಪೋರ್ಟ್,ವೀಸಾ ಪಡೆಯಲು ಜನನ ಪ್ರಮಾಣ ಪತ್ರ ಅವಶ್ಯ. ಇಂಥ ದಾಖಲೆ ಹೊಂದಿರದ ಟಿಬೆಟಿಯನ್ನರಿಗೆ ಪಟ್ಟಣದ ಕೆಲವು ಮಧ್ಯವರ್ತಿಗಳು, ಪಟ್ಟಣ ಪಂಚಾಯಿತಿಯ ನಕಲಿ ದಾಖಲೆ ಸೃಷ್ಟಿಸಿ ಸುಳ್ಳು ಪತ್ರ ನೀಡಿ ಹಣ ಮಾಡುತ್ತಿದ್ದಾರೆ. ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿರುವ ಪೊಲೀಸರು,ಜಾಲದ ಬೆನ್ನು ಬಿದ್ದಿದ್ದಾರೆ.
ಸುಳ್ಳು ನಿಜ: ಈ ಸಂಬಂಧ ದಲಿತ ಸಂಘರ್ಷ ಸಮಿತಿ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದು, ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ. ಪರಿಶೀಲನೆ ನಡೆಸಿದ ಪಟ್ಟಣ ಪಂಚಾಯಿತಿ `ಸುಳ್ಳು ಪತ್ರ ನೀಡಿರುವುದು ನಿಜ'ಎಂದು ವರದಿ ಯನ್ನೂ ನೀಡಿದೆ. ಮಾತ್ರವಲ್ಲ,ಕೇಂದ್ರ ಗುಪ್ತಚರ ಇಲಾಖೆ ಪಟ್ಟಣಕ್ಕೆ ಬಂದು ನಕಲಿ ಜನನ ಪ್ರಮಾಣ ಪತ್ರಗಳ ಬಗ್ಗೆ ದಾಖಲೆ ಸಂಗ್ರಹಿಸಿದೆ.

ಅಧಿಕಾರಿಗಳ ಬೇಜವಾಬ್ದಾರಿ

ನವೀನ್ ಮಂಡ್ಯ
ಇಲ್ಲೊಂದು ಕೈಗಾರಿಕಾ ವಸಾಹತು ಇದೆ. ಇಲ್ಲಿಗೆ ಸಾರಿಗೆ ಸೇವೆ ಅತ್ಯುತ್ತಮವಾಗಿದೆ. ಉದ್ಯಮಿಗಳು ಕೈಗಾರಿಕೆಗಳನ್ನು ಆರಂಭಿಸಲು ಸಿದ್ಧರಿ ದ್ದಾರೆ. ಆದರೆ, ಇವರನ್ನು ಉತ್ತೇಜಿಸಲು ಇರಬೇಕಾದ ಸೂಕ್ತ ಮೂಲ ಸೌಕರ್ಯಗಳೇ ಇಲ್ಲ.
ಕುಡಿಯುವ ನೀರು, ವಿದ್ಯುತ್, ಬೀದಿ ದೀಪಗಳು, ಚರಂಡಿ, ಶೌಚಾ ಲಯ, ಕಾಂಪೌಂಡ್ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಹಾಗೂ ಅವ್ಯವಸ್ಥೆ ಗಳು ತಾಂಡವವಾಡುತ್ತಿವೆ. ಇದು ನಗರದ ಹೊರವಲಯದಲ್ಲಿನ ೨ನೇ ಹಂತದ ಕೈಗಾರಿಕಾ ವಲಯದ ಸ್ಥಿತಿಗತಿ.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ(ಕೆಎಸ್‌ಎಸ್‌ಐಡಿಸಿ)ವು ೧೯೮೮ರಲ್ಲೇ ನಗರದಲ್ಲಿ ಎರಡನೇ ಹಂತದ ಕೈಗಾರಿಕಾ ವಸಾಹತುವನ್ನು ಅಭಿವೃದ್ಧಿಪಡಿಸಿದೆ. ಇಲ್ಲಿ ೩೫ ಕೈಗಾರಿಕಾ ಮಳಿಗೆಗಳನ್ನು (ಶೆಡ್‌ಗಳು)ನ್ನು ನಿರ್ಮಿಸಲಾಗಿದೆ.

ಗ್ರಾಹಕರ ದಿನದಲ್ಲಿ ಪರಿಹಾರ ವೇದಿಕೆ ಅಧ್ಯಕ್ಷರ ಕಿವಿಮಾತು

ಮೈಸೂರು ನಗರ
ನಗರದಲ್ಲಿ ಮಂಗಳವಾರ ಗ್ರಾಹಕನ ಧ್ಯಾನ.
ವಿಶ್ವ ಗ್ರಾಹಕರ ದಿನಾಚರಣೆ ಸಂದರ್ಭದಲ್ಲಿ ಹಲವು ಸಂಘಟನೆ ಗಳು ಗ್ರಾಹಕ ಕೇಂದ್ರಿತ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.
ಜಿಲ್ಲಾಡಳಿತ, ಆಹಾರ ಇಲಾಖೆ, ಎಂಜಿನಿಯರ್ ಸಂಸ್ಥೆ ಸಹಯೋಗದಲ್ಲಿ ಪ್ರಮುಖ ಕಾರ್ಯಕ್ರಮ ನಡೆಯಿತು.  ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗ್ರಾಹಕ ಹಕ್ಕುಗಳ ಕುರಿತು ಮಾಹಿತಿ ಪಡೆದುಕೊಂಡರು.
ಮೈಸೂರು ಗ್ರಾಹಕರ ಪರಿಷತ್ ಹಿನಕಲ್‌ನಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಿತ್ತು. ಇದರ ಅಂಗವಾಗಿ ಹಲವು ಪ್ರಾತ್ಯಕ್ಷಿಕೆ ಗಳನ್ನು ಶ್ರೀಮತಿ ಹರಿಪ್ರಸಾದ್, ಒಂಭತ್ಕೆರೆ, ಸಿ.ವಿ. ನಾಗರಾಜು, ಎ.ಆರ್.ವೆಂಕಟೇಶನ್ ಮತ್ತಿತರರು ನಡೆಸಿಕೊಟ್ಟರು.
ಗಾಂಧಿ ವೃತ್ತದಲ್ಲೂ ಗ್ರಾಹಕರಿಗೆ ಜಾಗೃತಿ ಮೂಡಿಸುವ ಫಲಕ ಹಿಡಿದ ಪ್ರಮುಖರು ಕಾರ್ಯಕ್ರಮ ನಡೆಸಿದರು.

ವೈರಮುಡಿ ಉತ್ಸವಕ್ಕೆ ಕ್ಷಣಗಣನೆ

ವಿಕ ಸುದ್ದಿಲೋಕ ಮಂಡ್ಯ
ವಿಶ್ವವಿಖ್ಯಾತ  ಚಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು,ಮಾ.೧೫ರಂದು ನಡೆಯುವ ಉತ್ಸವಕ್ಕೆ ಮೇಲುಕೋಟೆ ಸಂಪೂರ್ಣ ಸಜ್ಜಾಗಿದೆ.
ಎರಡು ದಿನ ನಡೆಯುವ ಜಾನಪದ ಮತ್ತು ಶಾಸ್ತ್ರೀಯ ಸಂಭ್ರಮ,ವೈವಿಧ್ಯಮಯ ವಿದ್ಯುತ್ ದೀಪಾಲಂಕಾರ ಕಾರ್‍ಯಕ್ರಮಕ್ಕೆ ಸೋಮವಾರ ಸಂಜೆ ಚಾಲನೆ ನೀಡಲಾಯಿತು.ವಿಶೇಷ ವಿದ್ಯುತ್ ದೀಪಗಳಿಂದ ಇಡೀ ಮೇಲುಕೋಟೆ ಝಗಮಗಿಸುತ್ತಿದೆ.
ದಿನದ ೨೪ ಗಂಟೆಯೂ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಭಕ್ತರಿಗೆ ನಲ್ಲಿ, ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಂಪರ್ಕ ಕಲ್ಪಿಸುವ ಮತ್ತು ಗ್ರಾಮದೊಳಗಿನ ರಸ್ತೆಗಳು ದುರಸ್ತಿ ಕಂಡಿವೆ.ವಿದ್ಯುತ್ ದೀಪಾಲಂಕಾರ,ತಳಿರು, ತೋರಣಗಳಿಂದ ಊರು ಸಿಂಗಾರಗೊಂಡಿದೆ.
ಪಂಚಕಲ್ಯಾಣಿ, ಭುವನೇಶ್ವರಿ ಮಂಟಪ, ಅಕ್ಕ-ತಂಗಿಯರ ಕೊಳ, ರಾಯರಗೋಪುರ ಹಾಗೂ ಇತರ ಸ್ಮಾರಕಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ವಿಧೆಡೆ ೧೦೦ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

`ಮರಳಿ ಬಾ ಗರಡಿ'ಯಲ್ಲಿ ಕಾಟಾ ಕುಸ್ತಿ ಸೊಬಗು...

ವಿಕ ಸುದ್ದಿಲೋಕ ಮೈಸೂರು
ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ಮೈಸೂರು ಕುಸ್ತಿ ಅಭಿವೃದ್ಧಿ ಸೇವಾ ಟ್ರಸ್ಟ್  ಪಾರಂಪರಿಕ ಕಲೆ ಕುಸ್ತಿ ಯನ್ನು ಉಳಿಸಿ,ಬೆಳೆಸುವ ಆಶಯ ದೊಂದಿಗೆ ಆರಂಭಿಸಿರುವ `ಮರಳಿ ಬಾ ಗರಡಿಗೆ' ಎರಡನೇ ನಿರಂತರ ಕುಸ್ತಿ ಪಂದ್ಯಾವಳಿಯಲ್ಲಿ ೨೫ ಜೋಡಿ ಕಾಟಾ ಕುಸ್ತಿಗಳು ಭಾನುವಾರ ಯಶಸ್ವಿಯಾಗಿ ನಡೆದವು.
ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಕೆಮ್ಮಣ್ಣಿನ ವಿಶಾಲ ಅಖಾಡದಲ್ಲಿ ಮಲ್ಲರು ಅಕ್ಷರಶಃ ಕಾದಾಡಿದರು. ಜಟ್ಟಿಗಳು ತೊಡೆ, ತೋಳು ತಟ್ಟಿ, ಮಟ್ಟಿ ಮಣ್ಣಿನ ಮೇಲೆ ತಮ್ಮೆಲ್ಲಾ ಪಟ್ಟುಗಳನ್ನು ಹಾಕಿದರು. ಬಲಿಷ್ಠ ತೋಳುಗಳ ಬಿಗಿ ಹಿಡಿತಕ್ಕೆ  ಸಾಮು, ದಂಡ ಮಾಡಿ ಹುರಿ ಗಟ್ಟಿದ ಶರೀರವೂ ನಜ್ಜುಗುಜ್ಜು, ಉಕ್ಕಿನ ಹಿಡಿತದಿಂದ ಬಿಡಿಸಿಕೊಳ್ಳಲು ಪರಸ್ಪರ ಹೆಣಗಾಟ, ಸೆಣಸಾಟ. ಪಟ್ಟಿಗೆ ಪ್ರತಿ ಪಟ್ಟು. ಗೆಲುವಿನ ನಗೆ ಬೀರಿದ ಒಬ್ಬ ಪಟು, ಸೋತರೂ ಪ್ರೀತಿಯಿಂದಲೇ ಸೋಲನ್ನು ಸ್ವೀಕರಿಸಿ ನಡೆದ ಮತ್ತೊಬ್ಬ ಪಟು.

ಉಸ್ತುವಾರಿ ಮಂತ್ರಿ, ಡಿಸಿ, ಮೇಯರ್ ಶೀತಲ ಸಮರ: ಬರಲಿದೆ ಬೀದಿಗೆ

ವಿಕ ವಿಶೇಷ ಮೈಸೂರು
ಮುಖ್ಯಮಂತ್ರಿಗಳ ೧೦೦ ಕೋಟಿ ರೂ.ಅನುದಾನ ಬಳಕೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು,ಜಿಲ್ಲಾಧಿಕಾರಿ ಮತ್ತು ಮೇಯರ್ ನಡುವೆ ಶೀತಲ ಸಮರ ನಡೆಸಿದ್ದು, ಬೀದಿಗೆ ಬರುವ ಸೂಚನೆಗಳು ಕಾಣುತ್ತಿವೆ.
ಅನುದಾನ ಬಳಕೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರು ಶನಿವಾರ ಕರೆದಿದ್ದ ವಿಶೇಷ ಪ್ರಗತಿ ಪರಿಶೀಲನೆ ಸಭೆ ದಿಢೀರ್ ಮುಂದೆ ಹೋಗಿದೆ.
ತರಾತುರಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಮೇಯರ್ ಹಾಗೂ ಸದಸ್ಯರಿಗೆ ಕೊಂಡಿಯಾಗಬೇಕಾಗಿದ್ದ ಆಯುಕ್ತರೂ ಗಮನ ನೀಡುತ್ತಿಲ್ಲ ಎನ್ನುವ ಅಸಮಾಧಾನದ ಹೊಗೆ ಪಾಲಿಕೆಯಲ್ಲಿ ಸದ್ದಿಲ್ಲದೇ ಆಡುತ್ತಿದೆ.

ಬಗೆಹರಿದ ದಶಕದ ವಿವಿ ಭೂ ವಿವಾದ

ಚೀ. ಜ. ರಾಜೀವ ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯಕ್ಕೆ  ಮಾನಸಗಂಗೋತ್ರಿಯಲ್ಲಿರುವ  ೧೫ ಎಕರೆ  ಭೂಮಿಯನ್ನು ಮೈಸೂರು ವಿವಿ ಬಿಟ್ಟು ಕೊಟ್ಟಿದೆ. ಇದರೊಂದಿಗೆ  ಸಾಂಸ್ಕೃತಿಕ ನಗರಿ ಮೈಸೂರಿನ ಎರಡು ವಿವಿಗಳ ನಡುವೆ  ದಶಕದಿಂದ ನಡೆಯುತ್ತಿದ್ದ  `ಭೂ ವಿವಾದ' ಬಗೆಹರಿದಿದೆ.
ಉನ್ನತ ಶಿಕ್ಷಣ ಸಚಿವ ಡಾ. ವಿ. ಎಸ್. ಆಚಾರ್ಯ ಅವರ ಸಾಮರಸ್ಯ ಬೋಧನೆ, ಮೈಸೂರು ವಿವಿ ಕುಲಪತಿ ಪ್ರೊ.ವಿ.ಜಿ. ತಳವಾರ್ ಅವರ ಕಡೆ ಕ್ಷಣದ  ಉದಾರತೆ, ಮುಕ್ತ ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ದೀರ್ಘಕಾಲೀನ  ಜಾಣ್ಮೆ  ಹಾಗೂ  ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರ ಮಧ್ಯಸ್ಥಿಕೆಗಳು ಒಗ್ಗೂಡಿದ ಪರಿಣಾಮ ಸಮಸ್ಯೆ ಸೌಹಾರ್ದಯುತವಾಗಿ ಅಂತ್ಯ ಕಂಡಿದೆ.

ಪ್ರಕೋಪಕ್ಕೆ ರೀಕೋ ತಲ್ಲಣ, ತಳಮಳ

* ಚೀ. ಜ. ರಾಜೀವ  ಮೈಸೂರು
ನಮಗೆ ಭೂಕಂಪನ ಹೊಸತಲ್ಲ. ಭೂಮಿ ನಡುಗುವುದನ್ನು ಆಗಾಗ ಅನುಭವಿಸಿದ್ದೇವೆ. ಆದರೆ, ಭೂ ಕಂಪನ, ತ್ಸುನಾಮಿಗಳು
ಈ ಪರಿ ದೈತ್ಯ ರೂಪವನ್ನು ಹೊತ್ತು, ನನ್ನ ದೇಶವನ್ನೇ ಕೊಚ್ಚಿಕೊಂಡು ಹೋದರೆ, ಯಾರನ್ನು ದೂಷಿಸಲಿ,ಯಾರಿಗೆ  ಮೊರೆ ಇಡಲಿ... ?   
-ಜಪಾನಿನ ಟೋಕಿಯೋ ನಗರದ ರೀಕೋ ಪ್ರಶ್ನೆ ಇದು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ  ಸಮಾಜಶಾಸ್ತ್ರ ವಿಷಯ ದಲ್ಲಿ ಎಂಎ ವ್ಯಾಸಂಗ ಮಾಡುತ್ತಿರುವ ರೀಕೋ ಶುಕ್ರವಾರ ಬೆಳಗ್ಗೆಯಿಂದ ವ್ಯಾಕುಲಕ್ಕೆ ಬಿದ್ದಿದ್ದಾಳೆ.
ವಿಷಯ ಗೊತ್ತಾದ ಕ್ಷಣದಿಂದ ಸಂಜೆವರೆಗೂ ಆಕೆಗೆ ಟೋಕಿಯೋದಲ್ಲಿರುವ ತನ್ನ ಕುಟುಂಬವನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಸಾಧ್ಯವಾಗಿಲ್ಲ. ಆದರೆ, ಇಂಟರ್‌ನೆಟ್ ಮೂಲಕ ಸ್ನೇಹಿತರೊಂದಿಗೆ ಚಾಟ್ ಮಾಡಿ, ತನ್ನ  ಕುಟುಂಬ ವಾಸವಿರುವ  ಪ್ರಾಂತ್ಯದಲ್ಲಿ ಗಂಭೀರ ಪ್ರಮಾಣದ ಅನಾಹುತ ಆಗಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡಿದ್ದಾಳೆ.
ತನ್ನ ಕುಟುಂಬ ಪ್ರಾಣಾಪಾಯದ ದವಡೆಯಿಂದ ಪಾರಾಗಿದೆ ಎಂಬ ಸಮಾಧಾನ ಇದ್ದರೂ, ವಿಕೋಪ ಪೀಡಿತ ಪ್ರಾಂತ್ಯದ ತನ್ನವರು ಏನಾದರೋ ಎಂಬ ಆತಂಕ ಆಕೆಯದ್ದು.
ದುಗುಡ ದುಮ್ಮಾನ: ಹಾಗಾಗಿ ಬೆಳಗಿನಿಂದ ಹೊಟ್ಟೆಗೆ ಏನೂ ತಿನ್ನದೇ ಸಂಕಟದಲ್ಲಿಯೇ  ಟೋಕಿಯೋದ ತನ್ನವರನ್ನು ಸಂಪರ್ಕಿಸಲು ಯತ್ನಿಸುತ್ತಿರುವ ೩೫ ವರ್ಷದ ರೀಕೋ `ವಿಜಯ ಕರ್ನಾಟಕ'ದೊಂದಿಗೆ ತನ್ನ ದುಗಡ-ದುಮ್ಮಾನವನ್ನು ಹಂಚಿಕೊಂಡಳು.

ಕೈದಿ ಸಿಡಿಸಿದ್ದು ಪೊಲೀಸ್ ಗುಂಡು!

* ಕುಂದೂರು ಉಮೇಶ ಭಟ್ಟ ಮೈಸೂರು
ಪೊಲೀಸರು ಬಳಸುವ ಗುಂಡುಗಳು ಗೂಂಡಾಗಳಿಗೆ ಸಿಕ್ಕಿದ್ದಾದರೂ ಹೇಗೆ?
ಮೈಸೂರು ಕಾರಾಗೃಹ ಆವರಣದಲ್ಲಿ ನಡೆದ ರೌಡಿಗಳ ಗುಂಡಿನ ಕಾಳಗದ ವೇಳೆ ಬಳಸಿದ ರಿವಾಲ್ವರ್ ಹಾಗೂ ಗುಂಡುಗಳ ಕುರಿತು ಇಂಥದೊಂದು ಪ್ರಶ್ನೆ ಉದ್ಭವಿಸಿದ್ದು, ಪೊಲೀಸ್ ತನಿಖೆ ಚುರುಕು ಗೊಂಡಿದೆ.
ತಾವು ಬಳಸುವ, ಅದರಲ್ಲೂ ಇತರರಿಗೆ ನಿಷೇತ ಗುಂಡು ಗಳು ರೌಡಿಗಳ ಕೈಯಿಂದ ಹೇಗೆ ಬಂದಿತು ಎನ್ನುವುದು ಕುತೂಹಲಕ್ಕೆ ಕಾರಣ.ಬೆಂಗಳೂರಿನ  ಪ್ರೇಮ್ ಎಂಬಾತ ರಿವಾಲ್ವರ್ ನೀಡಿರುವ ಅಂಶ ಬಯಲಿಗೆ ಬಂದಿದ್ದು,ಆತನ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸ್ ತಂಡ ತೆರಳಿದೆ.ಕಾರಾಗೃಹ ಇಲಾಖೆಯ ಸ್ಥಳೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವೈಫಲ್ಯದ ಕುರಿತು ವಿಚಾರಣೆ ನಡೆಯುತ್ತಿದೆ.

ಮೈಸೂರು ಜೈಲಿನಲ್ಲಿ ಗುಂಡಿನ ಸದ್ದು

ವಿಕ ಸುದ್ದಿಲೋಕ ಮೈಸೂರು
ನಗರ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಗುಂಡಿನ  ಸದ್ದು ಮೊಳಗಿಸಿದ್ದು,ಸಹ ಕೈದಿಯ ಕೊಲೆಗೆ ಯತ್ನಿಸಿದ್ದಾನೆ.
ಸದಾ ಪೊಲೀಸ್ ಕಣ್ಗಾವಲಿರುವ ಕಾರಾಗೃಹದಲ್ಲಿ ಗುರುವಾರ ಮಧ್ಯಾಹ್ನ ಕೈದಿ ಬಾಲಾಜಿರಾವ್ ಅಲಿಯಾಸ್ ಟಿಬೆಟ್,ನೆಲಮಂಗಲದ ಬೆತ್ತನಗೆರೆಯ ಶ್ರೀನಿವಾಸ ಅಲಿಯಾಸ್ ಸೀನನ ಮೇಲೆ ನಾಡ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು,ಗಾಯಗೊಂಡ ಸೀನನನ್ನು ಕೆ.ಆರ್.ಆಸ್ಪತ್ರೆಗೆ  ದಾಖಲಿಸಲಾಗಿದೆ.
ಸೀನನ ದಾಯಾದಿಯಿಂದ `ಸುಪಾರಿ' ಪಡೆದು ಬಾಲಾಜಿ ಈ ಕೃತ್ಯ ನಡೆಸಿದ್ದಾನೆ  ಎಂದು ಹೇಳಲಾಗಿದೆ. ಹಲವು ಸುತ್ತಿನ ತಪಾಸಣೆ ಮೂಲಕವೇ ಎಲ್ಲರನ್ನೂ ಒಳ-ಹೊರ ಬಿಡುವ ಕಾರಾಗೃಹದೊಳಗೆ ಪಿಸ್ತೂಲು ನುಸುಳಿದ್ದಾದರೂ ಹೇಗೆ ಎಂಬುದು ಹಲವು ಅನುಮಾನಗಳನ್ನು ಮೂಡಿಸಿದೆ.

ಬಡವರ ಹೃದಯ ನೋವಿಗೆ ಮಿಡಿಯುತ್ತಿದೆ ಜಯದೇವ ಘಟಕ

ಜೆ.ಶಿವಣ್ಣ  ಮೈಸೂರು
ನಗರದ ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ `ಜಯದೇವ ಹೃದ್ರೋಗ ಘಟಕ'ಸದಾ ರಶ್. ಘಟಕದಲ್ಲಿರುವ ೭೦ ಹಾಸಿಗೆಗಳು ನಿರಂತರ ಭರ್ತಿ.
ಇದು ಹೃದಯ ರೋಗಗಳ ಚಿಕಿತ್ಸೆಯ ಅಗತ್ಯಕ್ಕೆ ಹಿಡಿದ ಕನ್ನಡಿ. ಬೇನೆ  ಇದ್ದರೂ ದುಬಾರಿ ಎನ್ನುವ ಕಾರಣಕ್ಕೆ ಚಿಕಿತ್ಸೆ ಪಡೆಯದೇ ನರಳುತ್ತಿದ್ದ ಅನೇಕರ ಪಾಲಿಗೆ ಘಟಕ ಸಂಜೀವಿನಿ. ಶೇ.೭೫ ಕ್ಕೂ ಮಿಗಿಲಾಗಿ ಬಡವರು, ಗ್ರಾಮೀಣರು ಸೇವೆ ಪಡೆಯುತ್ತಿರುವುದು ಗಮನಾರ್ಹ. ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆ ದುಬಾರಿಯಾಗಿರುವಾಗ ಖಾಸಗಿ ಆಸ್ಪತ್ರೆಗೆ ಹೋಲಿಸಿ ದರೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಇಲ್ಲಿ ಲಭ್ಯ.
ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಮಾನವೀಯ ನೆಲೆಯಲ್ಲಿ ಬಡವರಿಂದ  ಚಿಕಿತ್ಸಾ ವೆಚ್ಚ ಪಡೆದಿರುವ, ಜಯದೇವ ಸಂಸ್ಥೆಯೇ ಉಳಿಕೆ ಮೊತ್ತವನ್ನು ಭರಿಸಿರುವ, ನಿರಾಶ್ರಿತರಿಗೆ ಉಚಿತ ಚಿಕಿತ್ಸೆ ನೀಡಿರುವ ಉದಾಹರಣೆ ಗಳು ಅನೇಕ.`ರೋಗಿಯ ಆರ್ಥಿಕ ಸಾಮರ್ಥ್ಯವೇನೇ ಇರಲಿ, ಚಿಕಿತ್ಸೆ ಅಗತ್ಯವಿರುವ ಪ್ರತಿಯೊಬ್ಬರಿಗೂ ಗುಣ ಮಟ್ಟದ ಚಿಕಿತ್ಸೆ ದೊರೆಯತಕ್ಕದ್ದು' ಎನ್ನುವ ಧ್ಯೇಯ ದೊಂದಿಗೆ ಸಂಸ್ಥೆ ಕಾರ್ಯನಿರತವಾಗಿದೆ. ಮತ್ತೊಂದೆಡೆ ಹೃದಯ ಸಂಜೀವಿನಿ,ಯಶಸ್ವಿನಿ ಯೋಜನೆಗಳು ಬಡವರ ನೆರವಿಗೆ ನಿಂತಿವೆ. ಹೃದಯ ಸಂಜೀವಿನಿ ಯೋಜನೆಯಡಿ ೭೦ ಸಾವಿರ ರೂ.ವರೆಗೆ ಉಚಿತ ಚಿಕಿತ್ಸೆ ಸಾಧ್ಯ.ಯಶಸ್ವಿನಿ ಯೋಜನೆಯಲ್ಲೂ ಉಚಿತ ಸೇವೆ.

ವಿವಿ ಅಂಗಳದಲ್ಲಿ ಗಹನ ಚರ್ಚೆ...

ವಿಕ ವಿಶೇಷ  ಮೈಸೂರು
ಪ್ರಾಧ್ಯಾಪಕರೊಬ್ಬರ ಮೇಲೆ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಹೊರಿಸಿರುವ  ಲೈಂಗಿಕ ಕಿರು ಕುಳ ಪ್ರಕರಣವನ್ನು ಮುಂದಿಟ್ಟುಕೊಂಡು ಮೈಸೂರು ವಿವಿ ಕುಲಪತಿ ಪ್ರೊ.ವಿ. ಜಿ. ತಳವಾರ್ ಅವರ ತೇಜೋವಧೆಗೆ ಯತ್ನ ನಡೆದಿದೆಯೇ? ಪ್ರೊ.ತಳವಾರ್  ಆಡಳಿತ ನೀಡಲು ಅಸಮರ್ಥರು ಎಂಬುದನ್ನು ಬಿಂಬಿಸಲು ಕೆಲ ಶಕ್ತಿಗಳು ಯತ್ನಿಸುತ್ತಿವೆಯೇ ?
ಗಂಗೋತ್ರಿಯ ಅಂಗಳದಲ್ಲಿ ಇಂಥ ಅನುಮಾನ ಗಳು ಶುರುವಾಗಿವೆ.  ಇದೇ ವಿಷಯವಾಗಿ ವಿವಿಯ ಕೆಲವು ಪ್ರಾಧ್ಯಾಪಕರು,ಅಧ್ಯಾಪಕ ಹಾಗೂ ನೌಕರರ ಸಂಘಟನೆ ಗಳ ಪದಾಧಿಕಾರಿಗಳು ದನಿ ಎತ್ತಲಾರಂಭಿಸಿದ್ದಾರೆ. 
ತಮ್ಮ ಕಚೇರಿ ಹಾಗೂ ಅಧಿಕಾರದ  ವ್ಯಾಪ್ತಿಯಲ್ಲಿ ಯಾವುದೆಲ್ಲಾ ರೀತಿ  ಕ್ರಮ ಜರುಗಿಸಬಹುದೋ - ಅಷ್ಟರ ಮಟ್ಟಿಗೆ  ಎಲ್ಲ ಕ್ರಮ ಕೈಗೊಂಡಿದ್ದರೂ, ಕುಲಪತಿ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ, ಸಂಶೋಧನಾ ವಿದ್ಯಾ ರ್ಥಿನಿ ಸರಿತಾ ಅವರು ನೀಡಿದ ದೂರಿನ ಆಧಾರದ ಮೇಲೆ ಕುಲಪತಿಯನ್ನೇ  ಆರೋಪಿಯನ್ನಾಗಿಸಿರುವುದು ಕೆಲವರಿಗೆ ಆತಂಕ ಹಾಗೂ ಅಚ್ಚರಿ ಮೂಡಿಸಿದೆ. ಈ ನಡುವೆ ಶಿವಬಸವಯ್ಯ ವಿರುದ್ಧ  ದೂರು ನೀಡಿರುವ ಎಂ. ಸರಿತಾ ಹಾಗೂ ಡಾ.ವಿಜಯ್‌ಕುಮಾರ್ ದಂಪತಿ, `ನಾವು ಕುಲಪತಿ ವಿರುದ್ಧ ದೂರು ನೀಡಿಲ್ಲ ಹಾಗೂ ಅದು ನಮ್ಮ ಉದ್ದೇಶವೇ ಆಗಿರಲಿಲ್ಲ. ದೂರಿನಲ್ಲಿ ಅವರ ಹೆಸರು ಹೇಗೆ ಸೇರಿತು, ಅದಕ್ಕೆ ಯಾರು ಕಾರಣ ಎಂಬುದು ನಮಗೆ ತಿಳಿದಿಲ್ಲ' ಎಂದು ಹೇಳಿಕೆ ನೀಡಿರುವುದು ಸಂದೇಹವನ್ನು ಹೆಚ್ಚಿಸಿದೆ.

ಬಕಾಸುರ ಬಸ್

ಜೆ.ಶಿವಣ್ಣ ಮೈಸೂರು
ಡೀಸೆಲ್ ಕಬಳಿಸುವ ಬಕಾಸುರ `ಮಾರ್ಕೋಪೋಲೊ'!
ಪೆಟ್ರೋಲ್, ಡೀಸೆಲ್ ಬೆಲೆ ವರ್ಷಕ್ಕೆ ೨-೩ ಬಾರಿಯಾದರೂ ಏರಿಕೆಯಾಗುತ್ತಿರುವ  ಈ ಹೊತ್ತಿನಲ್ಲೂ ಇತರ ವಾಹನಗಳಿಗೆ ಸೆಡ್ಡು ಹೊಡೆಯುವಂತೆ  ಇದು ಹೊಟ್ಟೆ  ಭರ್ತಿ ಡೀಸೆಲ್ ಕುಡಿಯುತ್ತದೆ. ಕಾರ್ಯನಿರ್ವಹಣೆ ಮಾತ್ರ ಅಷ್ಟಕಷ್ಟೆ.
ಟಾಟಾ ಮಾರ್ಕೋಪೋಲೊ ಬಸ್ ನಗರ ಸಾರಿಗೆ ವ್ಯವಸ್ಥೆಯಲ್ಲಿ ಸೇವೆಯಲ್ಲಿರುವ  ಪ್ರಯಾಣಿಕರ ಬಸ್. ಡೀಸೆಲ್ ಹೀರುವುದರಲ್ಲಿ ಎತ್ತಿದ ಕೈ.ಆದರೆ  ಮೈಲೇಜ್ ಮಾತ್ರ ಕೇಳ ಬೇಡಿ. ಒಂದು ಲೀಟರ್ ಡೀಸೆಲ್ ಕುಡಿದರೆ  ಓಡೋದು ಕೇವಲ ೨ ರಿಂದ ೨.೫ ಕಿ.ಮೀ. ಮಾತ್ರ. ಇದು ಹೀರುವ ಡೀಸೆಲ್‌ನಲ್ಲಿ ಎರಡು ಸಾಧಾರಣ ಬಸ್ ಓಡಿಸಬಹುದು. ಇತರ ಬಸ್‌ಗಳಿಗಿಂತ ದುಬಾರಿ ಕೂಡ. ಒಂದರ್ಥದಲ್ಲಿ ಸಾರಿಗೆ ಇಲಾಖೆ ಪಾಲಿಗಿದು ಬಿಳಿಯಾನೆ !

ಭಾನುವಾರ ಯುವಜನರ ಸ್ಪರ್ಧೋತ್ಸಾಹ

ವರುಣ/ಚಾಮುಂಡಿಬೆಟ್ಟ
ಕೆಸರು ಗದ್ದೆಯಲ್ಲಿ ಓಡಿದರು, ಬಿದ್ದರು, ಎದ್ದರು, ಕೊನೆಗೂ ಗುರಿ ಮುಟ್ಟಿದರು. ಇಡೀ ಶರೀರ ಕೆಸರುಮಯ. ಆದರೆ ಗೆದ್ದ ಸಂಭ್ರಮದಲ್ಲಿ ಮೈಗೆ ಮೆತ್ತಿದ ಕೆಸರು ಮರೆತು ಹರ್ಷದಲ್ಲಿ ತೇಲಾಡಿದರು.
ಕೆಸರಿನ ಕೊಳದಲ್ಲಿ ಉದ್ದನೆಯ ಹಗ್ಗದ ಹಿಡಿದು ಶಕ್ತಿ ಪ್ರದರ್ಶನಕ್ಕೆ ನಿಂತರು. ಹಗ್ಗದ ಎರಡೂ ತುದಿಯಲ್ಲಿ ನಿಂತ ಹತ್ತಾರು ಮಂದಿ ಬಲವನ್ನೆಲ್ಲಾ ಸೇರಿಸಿ ಜಗ್ಗಿದರು. ಅದೇನು ತುಂಡಾಗಲಿಲ್ಲ, ಬದಲಿಗೆ ಒಂದೆಡೆಯವರು ನಿಂತರೆ, ಮತ್ತೊಂದೆಡೆಯವರು ಬಿದ್ದರು. ಮೈಯಿಗೆ ಕೆಸರಿನ ಸ್ನಾನ. ಆದರೂ ಉತ್ಸಾಹ ಹಿಂಗಲಿಲ್ಲ. ಸ್ಪರ್ಧೆ ವೀಕ್ಷಿಸಲು ನೆರೆದಿದ್ದ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಸ್ಪರ್ಧಿಗಳನ್ನು ಹುರಿದುಂಬಿಸಿದರು.
ಇವು ವರುಣ ಗ್ರಾಮದ ಮಾಜಿ ಚೇರ್‍ಮನ್ ಸಿ.ನಂಜಪ್ಪ ಅವರ ಗದ್ದೆಯಲ್ಲಿ ಭಾನುವಾರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಯುವಕ, ಯುವತಿಯರಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೆಸರು ಗದ್ದೆ ಓಟ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕಂಡು ಬಂದ ಪೈಪೋಟಿಯ ಕ್ಷಣಗಳು. ಪುರುಷ, ಮಹಿಳಾ ಮತ್ತು ಬಾಲಕಿಯರ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಚಾಮುಂಡಿಬೆಟ್ಟದಲ್ಲಿ ಬೆಟ್ಟ ಏರುವ ಸ್ಪರ್ಧೆಯೂ ನಡೆಯಿತು.

ವಿಕ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ

ಫಾಲಲೋಚನ ಆರಾಧ್ಯ ಚಾಮರಾಜನಗರ
ಯಾವುದೇ ಒಂದು ಊರಿನ ಅಭಿವೃದ್ಧಿಯಲ್ಲಿ ರಸ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾರಾದರೂ ಒಂದು ಊರಿಗೆ ಹೋಗ ಬೇಕಾದರೆ ಮೊದಲು ವಿಚಾರಿಸೋದು ರಸ್ತೆ ಚೆನ್ನಾಗಿದಿಯೇ ಎಂದು ?
ಹಾದಿ ಚೆನ್ನಾಗಿಲ್ಲ ಎಂದರೆ ಆ ಊರಿನ ಅಥವಾ ಪಟ್ಟಣವೂ ಚೆಂದ ಕಾಣುವುದಿಲ್ಲ. ಅಲ್ಲಿ ಸಂಚರಿಸುವವರಿಗೆ ನಿತ್ಯ ಕಿರಿಕಿರಿ. ಈ ನಿಟ್ಟಿನಲ್ಲಿ ವಿಜಯ ಕರ್ನಾಟಕ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಮುಖ್ಯ ಹೋಬಳಿ ಕೇಂದ್ರಗಳ ವ್ಯಾಪ್ತಿ ಹಾಗೂ ಅವುಗಳ ಸಂಪರ್ಕ ರಸ್ತೆಗಳ ಸ್ಥಿತಿಗತಿಯನ್ನು ಒಂದು ವಾರ ತೆರೆದಿಟ್ಟಿತ್ತು.  ಜಿಲ್ಲೆಯ ಯಾವ ಕಡೆ ಹೋದರೂ ಉತ್ತಮ ರಸ್ತೆಗಳು ಎಂಬದು ವಿರಳ. ಹದಗೆಟ್ಟ, ರಾಡಿ ಹಿಡಿದ ರಸ್ತೆಗಳ ಸಂಖ್ಯೆಯೇ ಹೆಚ್ಚು.

ಲೇಡಿಸ್ ಕಂಪಾರ್ಟ್‌ಮೆಂಟ್ !

ಚೀ.ಜ.ರಾಜೀವ ಮೈಸೂರು
ಲೇಡಿಸ್ ಕಂಪಾರ್ಟ್‌ಮೆಂಟ್ !
ಹೆಸರೇ ಹೇಳುವಂತೆ ಅದೊಂದು ಮಹಿಳೆಯರ ಪ್ರತ್ಯೇಕ ಲೋಕ. ಎಲ್ಲ ರೈಲು ಗಾಡಿಗಳ ಅಂತ್ಯದ ಬೋಗಿಯಾಗಿ,ಸದ್ದಿಲ್ಲದೆ ಹಳಿಗಳ ಮೇಲೆ ಚಲಿಸುವ ಕಂಪಾರ್ಟ್‌ಮೆಂಟ್‌ನಲ್ಲಿ ಚರ್ಚೆಯಾಗದ ಸಂಗತಿ ಏನುಂಟು- ಏನಿಲ್ಲ. 
ಉದ್ಯೋಗಸ್ಥ ಮಹಿಳೆಯರೇ ಸೇರಿದರೆಂದರೆ ಮುಗಿದೇ ಹೋಯಿತು. ಅಡುಗೆ ಮನೆಯ ರಾಜಕೀಯದಿಂದ ಅಂತಾರಾಷ್ಟ್ರೀಯ ಮಟ್ಟದವರೆಗಿನ ರಾಜಕೀಯ, ಮಾಸಾಂತ್ಯದ ಸೊಂಟ ನೋವಿನಿಂದ ಹಿಡಿದು ವಾರಾಂತ್ಯದ ರಜೆ ಸುಖದವರೆಗೆ- ಮಹಿಳೆ ಯರ  ನಾಲಗೆಯ ಹಿಡಿತಕ್ಕೆ  ಸಿಕ್ಕಿ ಬೀಳದ ಸಂಗತಿಗಳೇ ಇಲ್ಲ ಎನ್ನಬಹುದೇನೋ. ಅದೊಂದು ರೀತಿ ಅನಧಿಕೃತ ಪ್ರತ್ಯೇಕ ಮಹಿಳಾ ಸಂಸತ್ !

`ಡೈಬ್ಯಾಕ್' ದಾಳಿಗೆ ಬೇವು ಬರಡು

 ಚೀ. ಜ. ರಾಜೀವ  ಮೈಸೂರು
`ಸಂದೇಹವೇ ಬೇಡ, ಬೀದರ್ ಜಿಲ್ಲೆ ಔರಾದ್ ತಾಲೂಕಿನ  ಮದನೂರು ಗ್ರಾಮದ ಬೇವಿನ ಮರಗಳಿಗೆ `ಡೈಬ್ಯಾಕ್' ಎಂಬ ರೋಗ ದಾಳಿ ಇಟ್ಟಿದೆ. ಹಾಗಾಗಿ, ಆ ಮರಗಳು ಈಗ ಬೋಳು-ಬೋಳಾಗಿವೆ. ಗಂಗೋತ್ರಿಯ ಸುಮಾರು ಮೂರು ಸಾವಿರ ಮರಗಳಿಗೆ ಬಹಳ ಹಿಂದೆಯೇ ಈ ರೋಗ ಕಾಣಿಸಿತ್ತು. ಅಂದಿನಿಂದ ಇಂದಿನವರೆಗೂ ರೋಗ ಬೇವಿಗೆ ದಾಳಿ ಇಡುತ್ತಲೇ ಇದೆ !'
-ಹೀಗೆನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಸಸ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಂಕರ ಭಟ್. ೧೫ ವರ್ಷಗಳ ಹಿಂದೆಯೇ ಬೇವಿನ ಮರಗಳ ರೋಗಗ್ರಸ್ತ ಸ್ಥಿತಿಯನ್ನು ಕಂಡು, ಅದರ ಮೇಲೆ ಅಧ್ಯಯನ ನಡೆಸಿದ ಶಂಕರ್ ಭಟ್, `ಡೈಬ್ಯಾಕ್' ಬಗ್ಗೆ  ಅಧಿಕೃತವಾಗಿ ಮಾತನಾಡುತ್ತಾರೆ.

ಹೆದ್ದಾರಿ ಓಕೆ, ಉಳಿದ ರಸ್ತೆ ಹೀಗೇಕೆ !

ರಾಘವಾಪುರ  ದೇವಯ್ಯ ಬೇಗೂರು
ಗುಂಡ್ಲುಪೇಟೆ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಬೇಗೂರು ಗ್ರಾಮದ ಮಧ್ಯೆ ರಾಷ್ಟ್ರೀಯ ಹೆದ್ದಾರಿ ೨೧೨ ಹಾದು ಹೋಗಿದೆ. ಇದೊಂದು ರಸ್ತೆಯನ್ನು ಹೊರತು ಪಡಿಸಿ ಉಳಿದ ರಸ್ತೆಗಳ ಸ್ಥಿತಿ ಚಿಂತಾಜನಕ. ಈ ರಸ್ತೆಗಳ ದುರಸ್ತಿಗೆ ಸಣ್ಣ, ಪುಟ್ಟ ಆಪರೇಷನ್ ಸಾಲದು. ಮೇಜರ್ ಸರ್ಜರಿಯೇ ನಡಿಯಬೇಕು.  ಆ ಮಟ್ಟಕ್ಕೆ ಹದಗೆಟ್ಟಿವೆ ಇಲ್ಲಿನ ರಸ್ತೆಗಳು.
ಬೇಗೂರು ದೊಡ್ಡೂರು. ಹೋಬಳಿಯೊಂದಿಗೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವೂ ಹೌದು. ಆದರೆ  ಈ ಊರಿನ ರಸ್ತೆಗಳೆಲ್ಲಾ ಸಣ್ಣವು. ಇಂಥ ಸಣ್ಣ ರಸ್ತೆಗಳನ್ನು ಸರಿಯಾಗಿ ಇಟ್ಟುಕೊಳ್ಳುವಲ್ಲಿ ಗ್ರಾ.ಪಂ. ಆಡಳಿತ ನಿರ್ಲಕ್ಷ್ಯ ವಹಿಸಿದೆ. ಅಭಿವೃದ್ಧಿಯ `ಪ್ರಸಾದ'ವೂ ರಸ್ತೆಗಳಿಗೆ ಸಿಗದೇ ಇರುವುದು ದುರದೃಷ್ಟಕರ.  ಯಾವ ಜನಪ್ರತಿನಿಧಿಗಳು ಸಹ ಬೇಗೂರಿನ ರಸ್ತೆಗಳ ಬಗ್ಗೆ ಕಾಳಜಿ ವಹಿಸಿಲ್ಲ.

ಕಾಮನ ಬಿಲ್ಲಿನಂಥ ಕಲಾಕೃತಿಗಳು !

ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ  `ನವ ವರ್ಣಗಳು- ೯ ವಿ' ಆರಂಭವಾಗಿದೆ.
ಯುವ ಕಲಾವಿದರಾದ ಎಸ್. ಸಂದೀಪ್, ಕೆ. ನರೇಂದ್ರ, ಸಿ. ಕಿರಣ್, ಸಿ. ಸಂತೋಷ್, ಬಿ. ಎಚ್. ವಿಜಯಕುಮಾರ್, ಎಸ್. ಯೋಗೇಶ್, ಐ.ಟಿ. ಮೊಹಮ್ಮದ್ ಉನ್ಸಿ, ಸೂರಜ್ ಸ್ಟೀಫನ್ ಡಿಸೋಜಾ ಮತ್ತು ಜಿ. ಕಾರ್ತೀಕ ಅವರು ಒಂಬತ್ತು ಬಣ್ಣಗಳನ್ನು ಬಳಸಿಕೊಂಡು ಬಗೆ-ಬಗೆಯ ಚಿತ್ರಗಳನ್ನು  ಪ್ರದರ್ಶನಕ್ಕೆ ಇಟ್ಟಿದ್ದಾರೆ. 
ಪ್ರದರ್ಶನ ಉದ್ಘಾಟಿಸಿದ ಸಾಹಿತಿ ಡಾ. ಕಾಳೇಗೌಡ ನಾಗವಾರ- `ಕಲಾವಿದನ ಮನಸ್ಸು  ಮುಗ್ಧವಾಗಿದ್ದಾಗ, ಸಹಜವಾಗಿದ್ದಾಗ ಮಾತ್ರ ಶ್ರೇಷ್ಠ ಕಲಾಕೃತಿಗಳು ಸೃಷ್ಟಿಯಾಗಲು ಸಾಧ್ಯ' ಎಂದರು. ಈ ಚಿತ್ರಗಳಲ್ಲೂ  ಸಹಜತೆ -ಮುಗ್ಧತೆಯನ್ನು ಹುಡುಕಬಹುದು. ಮಾ. ೮ ರವರೆಗೆ ವೀಕ್ಷಣೆಗೆ ಮುಕ್ತ ಅವಕಾಶ. 

ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು, ಜನತೆಗೆ ನಿತ್ಯ ಬವಣೆ

ಪುರುಷೋತ್ತಮ್ ಸಂತೇಮರಹಳ್ಳಿ
ಚಾ.ನಗರ ತಾ.ಹೋಬಳಿ ಕೇಂದ್ರಗಳ ಪೈಕಿ ಸಂತೇಮರಹಳ್ಳಿ ಪ್ರಮುಖವಾದದ್ದು. ಇದು ಜಿಲ್ಲಾ ಕೇಂದ್ರ ಸೇರಿದಂತೆ ೫ ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್. ಆದರೆ ಈ ಊರಿನ ರಸ್ತೆಗಳು ಓಡಾಟಕ್ಕೆ ಯೋಗ್ಯವಾಗಿಲ್ಲ. ಇಲ್ಲಿನ ರಸ್ತೆಗಳ ಸ್ಥಿತಿ ಬಗ್ಗೆ ಜನಪ್ರತಿನಿಧಿಗಳಾದವರೂ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ.  ಇದರಿಂದಾಗಿ ಜನತೆ ನಿತ್ಯ ಬವಣೆ ಪಡುವಂತಾಗಿದೆ.
ಮರಹಳ್ಳಿಯಲ್ಲಿ ಪ್ರತಿ ಮಂಗಳವಾರ ಬೃಹತ್ ಪ್ರಮಾಣದ ಸಂತೆ ನಡೆಯುತ್ತದೆ. ಹೀಗಾಗಿಯೇ ಇದಕ್ಕೆ ಸಂತೇಮರಹಳ್ಳಿ ಎಂಬ ಹೆಸರು ಬಂದಿದೆ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ತಂದು ಈ ಸಂತೆಯಲ್ಲಿ  ಮಾರಾಟ ಮಾಡುತ್ತಾರೆ. ಊರು ಇಷ್ಟು ಜನಪ್ರಿಯವಾಗಿದ್ದರೂ ರಸ್ತೆಗಳ ವಿಚಾರದಲ್ಲಿ ಶಾಪಗ್ರಸ್ತ. ಊರಿನ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೨೦೯ ಅನ್ನು ಹೊರತು ಪಡಿಸಿ ಇನ್ನಾವ ರಸ್ತೆಯೂ `ಸುಮಾರು' ಎಂಬ ಮಟ್ಟಿಗೂ ಇಲ್ಲ.

ಎಲ್ಲಾ ಶಿವಮಯವೋ

ದಿನವಿಡೀ ಬಿಲ್ವಪ್ರಿಯ ಪರಶಿವನ ದರ್ಶನ ಪಡೆದ ಭಕ್ತರು, ಧ್ಯಾನ, ಜಾಗರಣೆಯಲ್ಲಿ ಹರನಾಮ ಜಪಿಸಿದರು. ಲಿಂಗರೂಪಿಗೆ ಸಹಸ್ರ ಸಹಸ್ರ ಬಿಲ್ವಪತ್ರೆ ಅರ್ಚನೆ, ಹಾಲಿನ ಅಭಿಷೇಕ, ಪೂಜೆ ಪುನಸ್ಕಾರಗಳು ಶಿವ ದೇವಾಲಯಗಳಲ್ಲಿ ನಡೆದವು. ಅಲಂಕಾರಭೂಷಿತ ಗಂಗಾಧರನನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹ ಸಾಲುಗಟ್ಟಿ ನಿಂತಿತ್ತು.

ಪ್ರಸಾದದಂತೆ ಗುತ್ತಿಗೆ ಹಂಚಿಕೆ, ಕಳಪೆಯಾದ ಗುಣಮಟ್ಟ

ಮಡಹಳ್ಳಿ ಮಹೇಶ್ ಗುಂಡ್ಲುಪೇಟೆ
ಒಳಚರಂಡಿ ನಿರ್ಮಾಣ ಕಾಮಗಾರಿ ಪರಿಣಾಮ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಹಾಳಾಗಿವೆ. ಗುಂಡ್ಲುಪೇಟೆಯ ಮುಖ್ಯ ರಸ್ತೆಗಳನ್ನು ಹೊರತು ಪಡಿಸಿ ಉಳಿದವುಗಳಲ್ಲಿ ಗುಂಡಿ ನಡುವೆ ರಸ್ತೆ ಹುಡುಕುವ ಸ್ಥಿತಿ. ರಸ್ತೆಗಳ ವಿಚಾರದಲ್ಲಿ  ಪುರಸಭೆ ನಿದ್ರೆಗೆ ಜಾರಿದೆ. ಹೀಗಾಗಿ ಹದಗೆಟ್ಟ ರಸ್ತೆಗಳದ್ದೇ ಕಾರುಬಾರು.
ಈಚೆಗೆ ನಿರ್ಮಿಸಿದ್ದ ಡಾಂಬರು ಹಾಗೂ ಮೆಟ್ಲಿಂಗ್ ರಸ್ತೆಗಳನ್ನು ಒಳ ಚರಂಡಿ ನಿರ್ಮಾಣಕ್ಕಾಗಿ ಅಗೆಯಲಾಗಿದೆ. ಮ್ಯಾನ್ ಹೋಲ್‌ಗಳು ರಸ್ತೆಗಿಂತ ಎತ್ತರವಾಗಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ.  ಇದರಿಂದ ವಾಹನ ಸಂಚಾರ ಪಟ್ಟಣದಲ್ಲಿ ತ್ರಾಸದಾಯಕ. ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ ಹಣ ಜಲ್ಲಿ ಕಲ್ಲಿನಡಿ ಹೂತು ಹೋಗಿದೆ. 
ರಸ್ತೆ ಕಾಮಗಾರಿಗಳ ಗುತ್ತಿಗೆಯನ್ನು `ಪ್ರಸಾದ' ಹಂಚಿದಂತೆ ಹಂಚಿದ ಪರಿಣಾಮ ಗುಣಮಟ್ಟವೂ ಅವಿತುಕೊಂಡಿದೆ. ಮಳೆ ಬಿದ್ದ ವೇಳೆಯಲ್ಲಂತೂ ಕಾಮಗಾರಿ ಬಂಡವಾಳ ಎಲ್ಲರಿಗೂ ರಾಚುತ್ತದೆ.

ಬಿಪಿ ಗುಳಿಗೆ ಹೋಲುವ ಪೆಪ್ಪರಮೆಂಟು !

ವಿಕ ವಿಶೇಷ ಮೈಸೂರು
ತರಹೇವಾರಿ ಮಾತ್ರೆಗಳು ಗೊತ್ತು.ಪೆಪ್ಪರಮೆಂಟುಗಳಲ್ಲೂ ವೈವಿಧ್ಯ ಸಾಮಾನ್ಯ.ಮಾತ್ರೆ ಮಾದರಿ ಪೆಪ್ಪರಮೆಂಟುಗಳೂ ಇವೆ ಗೊತ್ತಾ?
ನಗರ ಮತ್ತು ಜಿಲ್ಲೆಯ ಸಣ್ಣ ಪುಟ್ಟ ಅಂಗಡಿಗಳಲ್ಲಿ ಮಾತ್ರೆಯನ್ನು ಹೋಲುವ  ಪೆಪ್ಪರಮೆಂಟು ಮಾರಾಟ ಭರ್ಜರಿ. ಈವರೆಗೆ ಯಾವುದೇ ಅನಾಹುತ ಆಗಿಲ್ಲ ವಾದರೂ, ಸಂಭವಿಸುವ  ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಗೆದ್ದು ಬಾ ಭಾರತ

ಮೊನ್ನೆ ನಡೆದ ಭಾರತ-ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ಪಂದ್ಯ ಚಿಣ್ಣರಿಂದ ಹಿಡಿದು ಅಜ್ಜರವರೆಗೂ ರೋಮಾಂಚನ ಮೂಡಿಸಿತ್ತು. ಚಾನಲ್ ಬದಲಾಯಿಸದೇ, ಕುಳಿತ್ತಲ್ಲಿಂದ ಮೇಲೆರದೇ, ಉಸಿರು ಬಿಗಿ ಹಿಡಿದು ನೋಡಿದಂಥ ಮ್ಯಾಚ್ ಅದು. ಆ ಕುರಿತು ಅಭಿಮಾನಿಗಳು ಪ್ರತಿಕ್ರಿಯೆ ನೀಡಿರುವುದು ಹೀಗೆ...

ಕಳಪೆ ಕಾಮಗಾರಿ ಅವಾಂತರ, ಮಳೆ ಬಂದರೆ ಬಣ್ಣಗೇಡು

ಕೋಟಂಬಳ್ಳಿ ಗುರುಸ್ವಾಮಿ ಕೊಳ್ಳೇಗಾಲ 
ಪಟ್ಟಣದಲ್ಲಿ  ರಸ್ತೆ ಕಳೆದಿದೆ! ಹುಡುಕಿಕೊಡಿ ಎನ್ನುವುದು ಜನತೆ ಒಕ್ಕೊರಲು. ರಸ್ತೆಯನ್ನು ಕಾಲುದಾರಿ ನುಂಗಿದೆಯೋ, ಕಾಲು ದಾರಿಯಲ್ಲಿ ರಸ್ತೆ ಕಳೆದು ಹೋಗಿದೆಯೋ, ತಿಳಿಯುತ್ತಿಲ್ಲ್ಲ. ಕಾಲುದಾರಿಯನ್ನೇ ರಸ್ತೆ ಎನ್ನಬೇಕು ಅಷ್ಟರ ಮಟ್ಟಿಗೆ ಸ್ಥಿತಿ ಹೀನಾಯ. ಹಗಲಿನಲ್ಲಿ ದೀಪ ಹಿಡಿದು ಹುಡುಕಿದರೂ ಸುಸ್ಥಿತಿ ರಸ್ತೆ ಒಂದೂ ಕಂಡುಬರದು. ಕಾಲು ದಾರಿಯಂತಿರುವ ಮಾರ್ಗವನ್ನು ರಸ್ತೆ ಎನ್ನಬೇಕು.
ಇದಕ್ಕೆ ಅಪೂರ್ಣ ಕಾಮಗಾರಿಯ ಕೃಪೆ ಒಂದೆಡೆ ಇದ್ದರೆ, ಕೆಲ ರಸ್ತೆಗಳ ಕಾಮಗಾರಿ ನಡೆದಿರುವುದು ನೀಜ. ಆದರೆ, ಡಾಂಬರೀಕರಣವಾಗಿದೆ ಎನ್ನುವುದಕ್ಕೆ ಪುರಾವೆಯೇ ಸಿಗದಂತಿದೆ ಇನ್ನೊಂದೆಡೆ. ಅಲ್ಲದೇ, ಮಳೆ ಬಂದರೆ ಕಾಮಗಾರಿ ಬಣ್ಣ ಪೂರ್ಣ ಪ್ರಮಾಣದಲ್ಲಿ ಬಯಲು. ಡಾಂಬರೀಕರಣ ಮಾಡುವಾಗ ಒಂದು ರಸ್ತೆಯನ್ನು ಎರಡು ಭಾಗ ಮಾಡಿ  ಕೆಲಸ ಮಾಡಲಾಗುತ್ತದೆ. ಒಂದು ಭಾಗ ಪೂರ್ಣವಾಗಿ ಇನ್ನೊಂದರ ಕೆಲಸ ಕೈಗೆತ್ತಿಕೊಳ್ಳುವಷ್ಟರಲ್ಲಿ  ಮೊದಲ ಭಾಗ ಯಥಾಸ್ಥಿತಿಗೆ ಬರುತ್ತದೆ.