ಮಾವು ಹೂವು ಕಾಯಿ ಮಯ

ವಿಕ ವಿಶೇಷ  ಮೈಸೂರು
ಹಣ್ಣುಗಳ ರಾಜ ಮಾವು ಈ ವರ್ಷ ಸಮೃದ್ಧವಾಗಿ ಪಲ್ಲವಿಸಿದೆ. ಮಾವಿನ ತೋಪುಗಳನ್ನು ನಳ ನಳಿಸುವಂತೆ ಮಾಡಿದ್ದ ಹೂವಿಗೆ ಈಗ ಕಾಯಿ ಕಟ್ಟುವ  ಸಂಭ್ರಮ.
ಕಳೆದ ಹಿಂಗಾರು ದೀರ್ಘ ವಾಗಿದ್ದರಿಂದ  ಈ ಬಾರಿ ಹೂವಾಗುವುದು ಸ್ವಲ್ಪ ತಡ ವಾಗಿದ್ದರೂ ಬಂಪರ್ ಫಸಲು ನಿರೀಕ್ಷಿತ. ಬೆಳೆಗಾರರ ಪರಿಭಾಷೆ ಯಲ್ಲಿದು `ಆನ್ ಇಯರ್'.
ಮರುಕಳಿಸಿದರೆ:ಆದರೆ,ಕಳೆದೆರಡು ದಿನದ ಹಿಂದೆ ಅಲಲ್ಲಿ ಬಿದ್ದ `ಬೇಸಿಗೆ ಮಳೆ', ಮೋಡ ಕವಿದ ವಾತಾವರಣ ಮೈಸೂರು, ಮಂಡ್ಯ,ಚಾಮರಾಜನಗರ ಜಿಲ್ಲೆ ಮಾವು ರೈತರ ಮುಖದಲ್ಲಿ ದುಗುಡದ ಗೆರೆ ಮೂಡಿಸಿದೆ. ಮೊದಲ ಮಳೆಯಿಂದ ಹೆಚ್ಚೇನು ತೊಂದರೆ ಆಗಿಲ್ಲ.ಮರುಕಳಿಸಿ,ಮುಂದುವರಿದರೆ ತೊಂದರೆ.

ಚೇಸಿಂಗ್ ಕ್ರೇಜ್ ಅಪಾಯಕ್ಕೆ ರಹದಾರಿ

ಯುವ ಜನತ ವೀಲಿಂಗ್ ಹಾಗೂ ಚೇಸಿಂಗ್ ಕ್ರೇಜ್‌ಗೆ ಬಹುಪಾಲು ಸಿನಿಮಾಗಳ ಪ್ರಭಾವವೇ ಕಾರಣ. ಬಿಸಿರಕ್ತದ ಹುಮ್ಮಸ್ಸಿನಿಂದ ಮುಂದಿನ ಪರಿಣಾಮದ ಆಲೋಚನೆ ಇಲ್ಲದೆ ನಡೆಸುವ ಇಂಥ ಹುಚ್ಚಾಟದಿಂದ ಇತರರ ಪ್ರಾಣಕ್ಕೆ ಎರವಾಗುವುದೇ ಹೆಚ್ಚು.

ಭವಿಷ್ಯದಲ್ಲಿ ಕೊಡಗು ಬರಡು ಭೂಮಿ ?

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗಿನ ಅಮೂಲ್ಯ ಪರಿಸರಕ್ಕೆ ಸಂಬಂಧಿಸಿದಂತೆ ಇದು ಆತಂಕಕಾರಿ ವರದಿ. ಅರಣ್ಯ ಪ್ರದೇಶದ ಮೇಲಾಗು ತ್ತಿರುವ ಗಂಡಾಂತರದ ಮುನ್ಸೂಚನೆ. ಎಂಬತ್ತು ವರ್ಷಗಳ ಅಂತರದಲ್ಲಿ ಮಲೆನಾಡ ಕೊಡಗಿನಲ್ಲಿ ೪೨೯.೫೨ ಚದರ ಅಡಿ ಪ್ರದೇಶದಲ್ಲಿ ಅರಣ್ಯ ನಾಶ ವಾಗಿದೆ. ತಕ್ಷಣ ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಕೊಡಗು ತನ್ನ ಸೊಬಗನ್ನೇ ಕಳೆದು ಕೊಳ್ಳುವ ಭೀತಿ.
೧೯೩೦ ರಲ್ಲಿ ಕೊಡಗಿನ ಒಟ್ಟು ಭೂ ಪ್ರದೇಶದ ೪,೧೦೯.೨೫ ಚದರಡಿಯಲ್ಲಿ ೩,೫೩೮.೫೦ ಚದರಡಿ (ಶೇ.೮೬.೧೧) ಅರಣ್ಯ ಇತ್ತು. ೨೦೧೦ ಕ್ಕೆ ೧೦.೪೫ ಶೇಕಡ ವಾರು ಕುಸಿತ ಕಂಡಿದೆ. ಪ್ರಸ್ತುತ ೩,೧೦೮.೯೮ (ಶೇ. ೭೫.೬೬)ರಷ್ಟು ಅರಣ್ಯ ಇದೆ. ಅರಣ್ಯ ಹಾನಿ ತಡೆಗಟ್ಟ ದಿದ್ದಲ್ಲಿ ಮತ್ತಷ್ಟು ಶರವೇಗದಲ್ಲಿ ಕೊಡಗು ಬರಡಾದೀತು.

ಮೈಸೂರಿಗೆ ಬರ್ತಾಳೆ ರಾಜ್ಯರಾಣಿ

ಪಿ.ಓಂಕಾರ್ ಮೈಸೂರು
ನಾಲ್ಕೈದು ಹೊಸ,ಅನಿರೀಕ್ಷಿತ ರೈಲುಗಳ ಘೋಷಣೆ. ಮೂರು ಮಾರ್ಗಗಳ  ಸರ್ವೇ ಪ್ರಸ್ತಾಪ. ಆದರೆ,ಈ ಬಾರಿಯೂ `ಹಳಿ'ಗೆ ಬರದ ಬಹು ನಿರೀಕ್ಷೆಯ ಯೋಜನೆಗಳು. ಭರವಸೆಗಳ ಪಾಡು ಮತ್ತೊಮ್ಮೆ `ಬರೀ ರೈಲು'ಗೆ ಸೀಮಿತ...
ಕೇಂದ್ರ ರೈಲ್ವೇ ಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಮಂಡಿಸಿದ ರೈಲ್ವೇ ಆಯವ್ಯಯವನ್ನು ಮೈಸೂರು ಪ್ರಾತ್ಯದ ಜನ ಹೀಗೆ ವಿಮರ್ಶಿಸಬಹುದು. ಬೆಂಗಳೂರು-ಮೈಸೂರು ಮಧ್ಯೆ ಹೊಸ ರೈಲುಗಳ ಪ್ರಕಟಣೆ ಖುಷಿಯ ಸಂಗತಿಯಾದರೂ,`ಕ್ರಾಸಿಂಗ್ ಕಾಟ'ದಿಂದ ಪ್ರಯಾಣ ಅವಧಿ ವಿಳಂಭಿಸುವ ಅಪಾಯ ಅದರ ಬೆನ್ನಿಗಿದೆ ಎನ್ನುವುದು ಗಮನಾರ್ಹ.
ಮಮತಾ ಕೊಟ್ಟದ್ದು: ಕಳೆದ ವರ್ಷದ ಘೋಷಣೆಗಳಾದ  ಮೈಸೂರು-ಮಡಿಕೇರಿ- ಮಂಗಳೂರು ಮತ್ತು ಚಾಮರಾಜನಗರ-ಕೃಷ್ಣಗಿರಿ ಮಾರ್ಗಗಳ  ಸರ್ವೆಗೇ ಇನ್ನೂ ಚಾಲನೆ ಸಿಕ್ಕಿಲ್ಲ. ಆದರೂ,ಆಗುತ್ತದೆಂದು ನಂಬಬಹುದಾದರೆ  ನಂಜನಗೂಡು-ನೀಲಂಬೂರು ರೋಡ್, ಚಾ.ನಗರ- ತುಮಕೂರು, ಮೈಸೂರು- ಗುಂಡ್ಲುಪೇಟೆ- ತಲಚೇರಿ ಹೊಸ ಮಾರ್ಗ ಸಮೀಕ್ಷೆ ಪ್ರಕಟಣೆಗಳು ಈ ಬಾರಿಯ `ಕೊಡುಗೆ 'ಗಳು.

ಕಾಳುಗಟ್ಟದ ಕಣಿವೆ ಕನಸು

ಮುಖ್ಯಮಂತ್ರಿ ಮಂಡಿಸಿದ ರಾಜ್ಯ ಆಯವ್ಯಯದಲ್ಲಿ ಕಾವೇರಿ ಕಣಿವೆಗೆ  ಹಲವು ಕೋಟಿಗಳು ಹರಿದಿರುವುದು ಸುಳ್ಳಲ್ಲ.ನಾಲ್ಕು ಜಿಲ್ಲೆಗಳ ಬಾಬ್ತಿನಲ್ಲಿ ದಕ್ಕಿದ ಕೆಲ ಯೋಜನೆಗಳು ಹಿಂದಿನವು, ಇನ್ನು ಕೆಲವು ಎಂದಿನ ವಿಸ್ತರಣೆಗಳು,ಹೊಸದರತ್ತ ನೋಟ ಬೆರಳೆಣಿಕೆಯಷ್ಟು ಮಾತ್ರ ಎನ್ನುವುದೂ ಸುಳ್ಳಲ್ಲ.ಹಿಂದಿನ  ಸತತ ಐದು ವರ್ಷದ  ಹಲವು ಬಜೆಟ್ ಘೋಷಣೆಗಳು `ಗಾಳಿಪಟ'ವಾಗಿ ರಾರಾಜಿಸಿದ್ದೂ  ಖಂಡಿತಾ ಸುಳ್ಳಲ್ಲ. ನಿಜ ! ಮೈಸೂರು ಭಾಗದ ಜನ ಕೇಳುತ್ತಿದ್ದಾರೆ...`ಹೊಸ ಕನಸು ಅರಳಿಲ್ಲ. ಆದದ್ದಾಯಿತು,ಹಳೆಯ ಭರವಸೆಗಳನ್ನಾದರೂ ಈಡೇರಿಸಿ' ಎಂದು.

ಬಜೆಟ್: ಮೈಸೂರಿನ `ಬೃಹತ್'ನಿರೀಕ್ಷೆ

ಸತತ ೬ನೇ ಬಜೆಟ್ ಮಂಡನೆಗೆ ಬಿ.ಎಸ್.ಯಡಿಯೂರಪ್ಪ ಸಜ್ಜಾ ಗಿದ್ದಾರೆ. ಉಪಮುಖ್ಯಮಂತ್ರಿ - ಹಣಕಾಸು ಸಚಿವರಾಗಿ ಎರಡು ಬಾರಿ, ಮುಖ್ಯಮಂತ್ರಿಯಾಗಿ ೩ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಅವರು ಮೈಸೂರು ಭಾಗಕ್ಕೆ ಮೋಸವನ್ನೇನು ಮಾಡಿರಲಿಲ್ಲ. ಬೇಡಿಕೆಗೆ ಸ್ಪಂದಿಸಿದ್ದರು, ಕೆಲವು ಅಚ್ಚರಿಯ ಕೊಡುಗೆಗಳನ್ನೂ  ನೀಡಿದ್ದರು.`ಬೇರೆ ಬೇರೆ' ಕಾರಣಕ್ಕೆ ನಿರೀಕ್ಷೆ ಗಳನ್ನು ಹುಸಿಯಾಗಿಸಿದ್ದೂ ಇದೆ.
ಘೋಷಣೆಗಳ ವಿಷಯದಲ್ಲೂ ಅಷ್ಟೆ. ಕೆಲವಷ್ಟೆ ಕೈಗೂಡಿವೆ. ಕೆಲವು ಜಾರಿ ಹಂತದಲ್ಲಿವೆ.`ಬಾಕಿ' ಸಂಖ್ಯೆಯೇ ಹೆಚ್ಚಿದೆ. ಈಗ,ಇನ್ನೊಂದು `ಬಜೆಟ್ ಬುಟ್ಟಿ' ಹಿಡಿದು ನಿಂತಿದ್ದಾರೆ.`ಕೃಷಿಕರಿಗೆ ಪ್ರತ್ಯೇಕ ' ಎಂಬ ಮಾಯಾ ಅಸ್ತ್ರ ಬತ್ತಳಿಕೆಯಲ್ಲಿದೆ. `ಇದು ಚುನಾವಣಾ ಬಜೆಟ್' ಎಂದೂ ವಿಶ್ಲೇಷಿಸಲಾಗುತ್ತದೆ. ಈ ಕಾರಣಕ್ಕೆ, ಮೈಸೂರು ಜಿಲ್ಲೆ ದೊಡ್ಡ ನಿರೀಕ್ಷೆಗಳನ್ನು ಹೊಂದಿದೆ.ಹಿಂದಿನ ವರ್ಷಗಳ ಕತೆ ಏನೇ ಇರಲಿ, ರಾಜಕೀಯ ಕಾರಣಕ್ಕಾಗಿಯಾದರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತವರಿನ  ಒಟ್ಟು ಅಭಿವೃದ್ಧಿ ದೃಷ್ಟಿಯಿಂದ  ಒಂದಷ್ಟು `ಬಂಪರ್' ಕೊಡಗೆಗಳನ್ನು ನೀಡಿಯಾರು ಎಂಬುದು ನಿರೀಕ್ಷೆಗಳ ಮೂಟೆಯನ್ನು ಉಬ್ಬಿಸಿದೆ.

ನಲ್ಲಿಗಳಲ್ಲಿ ಕಾವೇರಿ ಧುಮ್ಮಿಕ್ಕಲಿಲ್ಲ, ಬವಣೆ ಕೇಳೋರಿಲ್ಲ

 ವಿಕ ಸುದ್ದಿಲೋಕ ಚಾಮರಾಜನಗರ
ತಿ. ನರಸೀಪುರದಿಂದ ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಪೈಪ್‌ಲೈನ್  ಅಲ್ಲಲ್ಲಿ  ಹಲವು ಬಾರಿ ಒಡೆಯುತ್ತಲೇ ಇದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಕಾರಣ ನಗರದ ಜನತೆ ಪರದಾಡುವಂತಾಗಿದೆ.
ಮಾರ್ಗ ಮಧ್ಯದಲ್ಲೇ ಪೈಪ್ ಒಡೆಯುವ ಕಾರಣ, ಅದರ ದುರಸ್ತಿಗೆ ನಗರಸಭೆ ಮುಂದಾದಾಗಲೆಲ್ಲಾ ೨ ದಿನಗಳ ಕಾಲ ನಗರಕ್ಕೆ ನೀರು ಪೂರೈಕೆ ಸ್ಥಗಿತ. ಪರಿಣಾಮ ನಗರದ ೩೧ ವಾರ್ಡ್‌ಗಳಲ್ಲೂ  ಕುಡಿಯುವ ನೀರಿಗೆ ಪರದಾಟ. ವಾರದ ಹಿಂದಷ್ಟೆ  ೧ ದಿನ ಇದೇ ಕಾರಣಕ್ಕೆ ನೀರು ಪೂರೈಕೆ ಆಗಿರಲಿಲ್ಲ. ಇದೀಗ ಮತ್ತೆ ಬುಧವಾರ ಮತ್ತು ಗುರುವಾರ ನೀರು ಪೂರೈಕೆ ಇರುವುದಿಲ್ಲ ಎಂದು ನಗರಸಭೆ ತಿಳಿಸಿದೆ.
ಅದರಂತೆ ಬುಧವಾರ ನಗರದ ನಲ್ಲಿಗಳಲ್ಲಿ ಕಾವೇರಿ ಧುಮಕಲಿಲ್ಲ. ಹೀಗಾಗಿ ಯಾವ ಬಡಾವಣೆಗೆ ಕಾಲಿಟ್ಟರೂ ನೀರು ಹೊರುವ ದೃಶ್ಯ ಸಾಮಾನ್ಯವಾಗಿತ್ತು. ಹೇಳಿ ಕೇಳಿ ನಗರದಲ್ಲಿ ಭೂಮಿ ಮಟ್ಟಕ್ಕೆ ನಲ್ಲಿ ನೀರು ಏರುವುದಿಲ್ಲ.  ಆಳವಾದ ಗುಂಡಿಗಳಲ್ಲಿ ನಲ್ಲಿ ಗಳನ್ನು ಅಳವಡಿಸಿ ನೀರು ಹಿಡಿದುಕೊಳ್ಳಬೇಕಾದ ಸ್ಥಿತಿ ಜಿಲ್ಲಾ ಕೇಂದ್ರದ ಜನತೆಯದ್ದು. ಈ  ಅವ್ಯವಸ್ಥೆ ದಶಕಗಳಿಂದಲೂ ಮುಂದುವರಿದೆ.

ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶೇಷಾಧಿಕಾರಿ

 ಅರವಿಂದ ನಾವಡ ಮೈಸೂರು
ಕನ್ನಡ ಸಂಸ್ಕೃತಿ ಇಲಾಖೆಯ ಅಧ್ಯಕ್ಷತೆಯಲ್ಲಿ ಮಲಗಿ ಕೊಂಡೇ ಇದ್ದ ವಿಶ್ವ ಕನ್ನಡ ಸಮ್ಮೇಳನ ಸಿದ್ಧತೆಗೆ ಕೊನೆಗೂ ಚಾಟಿ ಬೀಸಿರುವ ರಾಜ್ಯ ಸರಕಾರ, ದಿಢೀರನೇ ಇಡೀ ಸಮ್ಮೇಳನ ವ್ಯವಸ್ಥೆಯ ಉಸ್ತುವಾರಿಗೆ ವಿಶೇಷಾಧಿಕಾರಿ ಯನ್ನು ನೇಮಿಸಿದೆ.
ವೈದ್ಯ ಶಿಕ್ಷಣ ಕಾರ್‍ಯದರ್ಶಿಯಾಗಿರುವ ಐ.ಎಂ. ವಿಠ್ಠಲಮೂರ್ತಿಯವರಿಗೆ ಈ ಹೊಣೆ ವಹಿಸಿದ್ದು, ಹೇಗಾದರೂ ಮಾಡಿ ಯಶಸ್ವಿ ಸಮ್ಮೇಳನ ಸಂಘಟಿಸಿದ ಕೀರ್ತಿ ಪಡೆಯಲು ಸರಕಾರ ಗಡ್ಡಕ್ಕೆ ಬೆಂಕಿ ಹೊತ್ತಿದ ಮೇಲಾದರೂ ಬಾವಿ ತೋಡಿದೆ. `ರೆಸ್ಕ್ಯೂ ಆಪರೇಷನ್' ಶುರು ಮಾಡಿರುವ ಸರಕಾರ, ಸಮ್ಮೇಳನದ ಯಶಸ್ವಿಗೆ ಯಾವ ಕ್ರಮಗಳನ್ನಾದರೂ ಕೈಗೊಳ್ಳಲು ನಿರ್ಧರಿಸಿದೆ. ಜತೆಗೆ ವಿಶೇಷಾಧಿಕಾರಿಗೆ ಸಂಬಂಧಪಟ್ಟ ಎಲ್ಲ ಅಧಿಕಾರ ಗಳನ್ನೂ ನೀಡಲು ತೀರ್ಮಾನಿಸಲಾಗಿದೆ. ಈ ಎಲ್ಲ ಕ್ರಮಗಳೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರೂ ಸೇರಿದಂತೆ ಅವರ ಆಪ್ತ ಕೆಲ ಅಧಿಕಾರಿ ಗಳಿಗೆ ತೀರಾ ಮುಜುಗರ ಉಂಟುಮಾಡಿದೆ.
ಮಾರ್ಚ್ ೧೨ ರಿಂದ ೧೪ ರವರೆಗೆ ಬೆಳಗಾವಿಯಲ್ಲಿ ಸಮ್ಮೇಳನ ನಡೆಯಲಿದೆ. ರಾಜ್ಯದ ಇತಿಹಾಸದಲ್ಲೇ ಇದು ಎರಡನೇ ವಿಶ್ವ ಕನ್ನಡ ಸಮ್ಮೇಳನ. ಮೊದಲ ಸಮ್ಮೇಳನ ೧೯೮೫ ರಲ್ಲಿ  ಮೈಸೂರಿನಲ್ಲಿ ನಡೆದಿತ್ತು. ಆಗಲೂ ಆರಂಭದಲ್ಲಿ ವಿಶ್ವ ಕನ್ನಡ ಸಮ್ಮೇಳನ ಸಿದ್ಧತೆಗೆ ಹೆಚ್ಚುವರಿ ನಿರ್ದೇಶಕರಾಗಿ ನೇಮಕವಾಗಿದ್ದ ಐ.ಎಂ. ವಿಠ್ಠಲಮೂರ್ತಿ ಯವರೇ ಈ ಬಾರಿಯೂ `ರೆಸ್ಕ್ಯೂ ಆಪರೇಷನ್'ಗೆ ಮುಂದಾಗಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಕಾಳಜಿ ತೋರಿದ್ದಾರೆ. ಮೊದಲ ಸಮ್ಮೇಳನಕ್ಕೆ ಪ್ರಾಥಮಿಕ ಕೆಲಸಗಳನ್ನು ವಿಠಲಮೂರ್ತಿ ಪೂರೈಸಿದ್ದರೂ, ಸಮ್ಮೇಳನದ ಸಂದರ್ಭದಲ್ಲಿ ಆ ಹುದ್ದೆಯಲ್ಲಿರಲಿಲ್ಲ.

ಶಿಥಿಲಾವಸ್ಥೆಯಲ್ಲಿ ಗುಲಾಂ ಆಲಿಖಾನ್ ಗುಂಬಸ್!

 ಜಿ.ಎನ್. ರವೀಶ್‌ಗೌಡ ಶ್ರೀರಂಗಪಟ್ಟಣ
ಐತಿಹಾಸಿಕ ಸ್ಥಳ ಹಾಗೂ ಕೋಟೆ ಕೊತ್ತಲಗಳ ನಾಡು ಶ್ರೀರಂಗಪಟ್ಟಣದ ಗುಲಾಂ ಅಲಿಖಾನ್ ಗುಮ್ಚಿ(ಗುಂಬಸ್) ಶಿಥಿಲಾವಸ್ಥೆ ತಲುಪಿದ್ದು, ಪುರಾತತ್ತ್ವ ಮತ್ತು ಪ್ರಾಚ್ಯ ವಸ್ತು ಇಲಾಖೆಗಳು ನಿರ್ಲಕ್ಷ್ಯ ತಳೆದಿವೆ.
ಇತಿಹಾಸ ಪ್ರಸಿದ್ಧ ಸ್ಮಾರಕಗಳಿಂದಲೇ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುವ ಶ್ರೀರಂಗಪಟ್ಟಣದಲ್ಲಿ ಅನೇಕ ಸ್ಮಾರಕಗಳು ರಕ್ಷಣೆ ಇಲ್ಲದೆ ಮೂಲೆಗುಂಪಾಗುತ್ತಿವೆ. ಇವುಗಳಲ್ಲಿ ಗುಲಾಂ ಅಲಿಖಾನ್ ಗುಮ್ಚಿಯೂ ಒಂದು.
`ಮೈಸೂರು ಹುಲಿ' ಸುಲ್ತಾನ್ ಟಿಪ್ಪುವಿನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಗುಲಾಂ ಅಲಿಖಾನ್ ಗುಮ್ಚಿ, ಶ್ರೀರಂಗಪಟ್ಟಣದ ರಾಯಭಾರಿಯಾಗಿ ಫ್ರಾನ್ಸ್‌ನ ನೆಪೋಲಿಯನ್ ಬೋನೋ ಪಾರ್ಟೆ ಬಳಿಗೆ ಪಟ್ಟಣದ ನಿಯೋಗ ಕರೆದೊಯ್ದಿದ್ದನು.
ಇದಕ್ಕೂ ಮಿಗಿಲಾಗಿ ಈತ ಟಿಪ್ಪು ಸುಲ್ತಾನನ ಸಂಬಂಧಿ. ಬಹು ಭಾಷಾ ಪಂಡಿತ. ಅಕಾಲಿಕ ಸಾವಿಗೀಡಾದ ತನ್ನ ಪತ್ನಿಯ ನೆನಪಿ ಗಾಗಿ ೧೮ನೇ ಶತಮಾನದ ಅಂತ್ಯಭಾಗದಲ್ಲಿ ಕಾವೇರಿ ನದಿ ದಡ ದಲ್ಲಿ (ಹೊಳೆಚಂದಗಾಲು ರಸ್ತೆ ಬಳಿ) ಗುಂಬಸ್ ನಿರ್ಮಿಸಿದ್ದನು.
ಈ ಕಾರಣಕ್ಕಾಗಿ ಇದು ಗುಲಾಂ ಅಲಿಖಾನ್ ಗುಮ್ಚಿ(ಗುಂಬಸ್) ಎಂದೇ ಹೆಸರಾಗಿದೆ. ಇಂಡೋ-ಅರೇಬಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಗುಂಬಸ್ ನೋಡಲು ತುಂಬಾ ಆಕರ್ಷಣೀಯವಾಗಿತ್ತು.
ಕುಸುರಿ ಕೆತ್ತನೆ, ಬಣ್ಣಗಳ ಚಿತ್ತಾರ ಹೊಂದಿರುವ ಈ ಗುಂಬಸ್,  ೪೦  ೪೦ ಅಡಿಗಳ ವಿಸ್ತೀರ್ಣದ ಅಳತೆಯಲ್ಲಿ ನಿರ್ಮಾಣವಾಗಿದೆ. ಹದಿನಾರು ಕಂಬಗಳನ್ನು ಹೊಂದಿದ್ದ ಇದು ೯೦ ಅಡಿ ಎತ್ತರವಿದೆ. ಆದರೀಗ ೧೬ ಕಂಬಗಳ ಪೈಕಿ ೫ ಮಾತ್ರ ಇವೆ.
ಟಿಪ್ಪು ಆಳ್ವಿಕೆ ನಂತರ ನಿರ್ಲಕ್ಷ್ಯಕ್ಕೊಳಗಾದ ಈ ಗುಂಬಜ್, ದಿನಗಳೆದಂತೆ ತನ್ನ ಆಕರ್ಷಣೆಯನ್ನು ಕಳೆದುಕೊಂಡಿದೆ. ಗುಂಬಜ್ ಮೇಲಿನ ಗುಮ್ಮಟ ಸಂಪೂರ್ಣ ಶಿಥಿಲವಾಗಿದೆ. ಗೋಡೆಗಳು ಹಾಳಾಗಿವೆ. ಈ ಸ್ಮಾರಕದ ಸುತ್ತಲೂ ಗಿಡಗಂಟಿಗಳು ಬೆಳೆದುಕೊಂಡಿವೆ.

ಕಣಿವೆಯಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ

ಕುಂದೂರು ಉಮೇಶಭಟ್ಟ ಮೈಸೂರು
ವಿಶ್ವಕಪ್ ವೀಕ್ಷಣಾ ಉತ್ಸಾಹಕ್ಕೆ ವಿದ್ಯುತ್ ಕಡಿತದ ಭಂಗ, ಪರೀಕ್ಷೆಯ `ಜ್ವರ'ಕ್ಕೆ ಕರೆಂಟ್ ಶಾಕ್ !
ಬೇಸಿಗೆ ಆರಂಭವಾಗಿರುವ ಸೂಚನೆಯಾಗಿ ಮೈಸೂರಿನಲ್ಲಿ ವಾರದಿಂದಲೇ ವಿದ್ಯುತ್ ಕಡಿತ ಶುರುವಾಗಿದೆ. ನಗರ ಮತ್ತು ಈ ಭಾಗದ ಪ್ರಮುಖ ಪಟ್ಟಣಗಳಲ್ಲಿ ನಿತ್ಯ ಮೂರು ತಾಸು,ಗ್ರಾಮಾಂತರ ಪ್ರದೇಶದಲ್ಲಿ ಆರು ತಾಸಿನ ವಿದ್ಯುತ್ ಕಡಿತ `ಜಾರಿ'ಯಲ್ಲಿದೆ.
ಬೇಡಿಕೆ, ಕೊರತೆ: ವಿಶ್ವಕಪ್ ಸಮಯ ಬಹುತೇಕ ಮಂದಿ ಟಿವಿ ಮುಂದೆ ಹೆಚ್ಚು ಹೊತ್ತು ಕಳೆಯುತ್ತಾರೆ. ಜತೆಗೆ ಪರೀಕ್ಷಾ ಸಮಯ.ಮಕ್ಕಳ  ಓದಿಗೆ ವಿದ್ಯುತ್ ಬೇಕೇ ಬೇಕು.ಬೇಸಿಗೆ ದಿನದಲ್ಲಿ ವಿದ್ಯುತ್ ಅವಲಂಬನೆಯೂ ಹೆಚ್ಚು.ಆದರೆ,ನಿತ್ಯ ಮೈಸೂರು ಭಾಗದ ಬೇಡಿಕೆಯ ಪ್ರಮಾಣದಲ್ಲಿ ೧೦೦ ಮೆಗಾ ವ್ಯಾಟ್ ಕೊರತೆ ಇದೆ.ಪರಿಣಾಮ `ಕಡಿತ ಅನಿವಾರ್‍ಯ' ಎಂಬ ಎಂದಿನ ಮಂತ್ರಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ಮೊರೆ ಹೋಗಿದೆ.
ಉತ್ಪಾದನೆ ಇಲ್ಲವೇ ಖರೀದಿ ರೂಪದಲ್ಲಿ ನಿರೀಕ್ಷಿತ ವಿದ್ಯುತ್ ಲಭಿಸಿದರೆ ಕಡಿತ ಕಡಿಮೆಯಾಗ ಬಹುದು. ಇಲ್ಲವೇ ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ಕಡಿತದ ಸೂಚನೆಗಳಿವೆ.

ಒಣ ಮೇವು ಬಿಲ್ಲೆ ಘಟಕ: `ಹಸಿರು' ತುಂಬುವ ನಿರೀಕ್ಷೆ

ಫಾಲಲೋಚನ ಆರಾಧ್ಯ, ಚಾಮರಾಜನಗರ
ರಾಸುಗಳಿಗೆ ಮೇವಿನ ಅಭಾವ ತಪ್ಪಿಸುವುದರೊಂದಿಗೆ ಒಣ ಮೇವು ಪೋಲು ತಡೆಯುವ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ `ಒಣ ಮೇವು ಬಿಲ್ಲೆ ಘಟಕ' ಸ್ಥಾಪನೆಗೆ ಭರದ ಸಿದ್ಧತೆ ನಡೆದಿದೆ.
ಉತ್ತರ ಭಾರತದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಹಾಗೂ ಜಾರ್ಖಂಡ್ ರಾಜ್ಯಗಳಿಗೆ ಸೀಮಿತವಾಗಿದ್ದ ಇಂಥ ಘಟಕ ಸದ್ಯದಲ್ಲೇ ಗಡಿ ಜಿಲ್ಲೆಯಲ್ಲೂ ತಲೆ ಎತ್ತಲಿದೆ. ಪೋಲಾಗುತ್ತಿರುವ ಒಣ ಮೇವಿನ ಸದ್ಬಳಕೆಯ ಮಹತ್ವದ ಕಾರ್‍ಯಕ್ಕೆ ಕೇಂದ್ರ ಸರಕಾರದ ಧನ ಸಹಾಯದಡಿ ಮೈಮುಲ್ ಮುಂದಾಗಿದೆ. ಎಲ್ಲವೂ ಯೋಜನಾ ಬದ್ಧವಾಗಿ ನಡೆದರೆ ಕೆಲವೇ ತಿಂಗಳಲ್ಲಿ ಘಟಕ ಸ್ಥಾಪನೆ ಆಗಲಿದೆ.

ನಾಲಗೆ ಸುಡುತ್ತಿದೆ ಚಹಾ, ಕಾಫಿ !

 ಚೀ.ಜ.ರಾಜೀವ, ಮೈಸೂರು
ಲೀಟರ್ ಹಾಲಿಗೆ ೨ ರೂ. ಜಾಸ್ತಿ ಆದ್ರೆ, ಚೋಟ ಟೀಗೆ  ೧ ರೂ. ಹೆಚ್ಚಿಸುವುದು ಯಾವ ನ್ಯಾಯ ?
ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಗಿರಾಕಿಗಳ  ಟೀ ದಾಹ ತಣಿಸುವ ನಗರದ ಟೀ ಸ್ಟಾಲ್‌ಗಳಲ್ಲಿ, ಟೀ ಕಾರ್ನರ್‌ಗಳಲ್ಲಿ  ಸಣ್ಣದಾಗಿ ಶುರುವಾಗಿರುವ ಚರ್ಚೆ ಇದು. ಈ ಮಾತಿಗೆ  ಯಾವ ಮಾಲೀಕರು ಕಿವಿಗೊಡುತ್ತಿಲ್ಲವಾದರೂ, ಅದು ಶ್ರೀ ಸಾಮಾನ್ಯರ ಅಸಹಾಯಕತೆಯನ್ನು, ಸಿಟ್ಟು-ಸೆಡವನ್ನು  ಕ್ರೋಢಿಕರಿಸುತ್ತಿರುವುದು ಮಾತ್ರ ಸುಳ್ಳಲ್ಲ.
`ಒಂದು  ಲೀಟರ್ ಅಂದ್ರೆ, ಸಾವಿರ  ಮಿಲಿ ಲೀಟರ್ ಹಾಲಿಗೆ ೨ ರೂ. ಜಾಸ್ತಿಯಾಗಿದೆ. ಹೀಗಿರುವಾಗ  ೭೦ ರಿಂದ ೧೦೦ ಮಿಲಿ ಲೀಟರ್ ಅಳೆಯುವ  ಒಂದು ಲೋಟ ಕಾಫಿ ಇಲ್ಲವೇ ಟೀಗೆ  ೧ ರೂ. ಹೆಚ್ಚಿಸುವುದು ಎಷ್ಟರ ಮಟ್ಟಿಗೆ ಸರಿ. ಒಂದು ಲೀಟರ್ ಹಾಲಲ್ಲಿ ಕನಿಷ್ಠ ೧೦ ಲೋಟ ಟೀ  ತಯಾರಿಸಬಹುದು. ಅಂದ್ರೆ, ೨ ರೂ. ಹೆಚ್ಚಳದ ಬೋರ್ಡ್ ಮುಂದಿಟ್ಟುಕೊಂಡು, ೧೦ ರೂ. ಲಾಭ ಮಾಡಿಕೊಳ್ಳುವುದು  ಅನ್ಯಾಯವಲ್ಲವೇ ?
ಮೊದಲೇ ಬೆಲೆ ಏರಿಕೆ ಬಿಸಿಯಿಂದ ಕೂಲಿ-ಕಾರ್ಮಿಕರು ತತ್ತರಿಸುತ್ತಿರುವಾಗ, ಹೋಟೆಲ್ ಹಾಗೂ ಟೀ ಶಾಪ್ ಮಾಲೀಕರು  ಇಷ್ಟೊಂದು ವಸೂಲಿ ಮಾಡುವುದೇಕೆ ?' - ಎಂಬ ಶ್ರೀ ಸಾಮಾನ್ಯರ ಪ್ರಶ್ನೆಗೆ ನಮ್ಮ ವ್ಯವಸ್ಥೆಯಲ್ಲಿ ಉತ್ತರ ನೀಡುವವರೇ ಇಲ್ಲ.

ನಿಟ್ಟುಸಿರು...

ಮೈಸೂರು ನಗರ
ಗುತ್ತಿಗೆ ಪೌರಕಾರ್ಮಿಕರು ೩ ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಸೋಮವಾರ ಹಿಂತೆಗೆದುಕೊಂಡಿದ್ದು, `ಕಸಮಯ' ಸ್ಥಿತಿಗೆ ತಾತ್ಕಾಲಿಕ ತೆರೆ ಬಿದ್ದಿದೆ.
ಎಲ್ಲಾ ಪೌರಕಾರ್ಮಿಕರ ಪಿಎಫ್, ಇಎಸ್‌ಐ ಮಾಹಿತಿಯನ್ನು ಫೆ.೨೮ ರೊಳಗೆ  ಒದಗಿಸುವುದಾಗಿ ಗುತ್ತಿಗೆದಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂತೆಗೆದುಕೊಳ್ಳುವ  ನಿರ್ಧಾರವನ್ನು ಮಧ್ಯಾಹ್ನ ಗುತ್ತಿಗೆ ಪೌರ ಕಾರ್ಮಿಕರು ಕೈಗೊಂಡರು.
ಭರವಸೆಯಂತೆ  ಗಡುವಿನೊಳಗೆ ಬೇಡಿಕೆ ಈಡೇರದಿದ್ದರೆ ಮತ್ತೆ ಧರಣಿ ನಡೆಸುವ  ಎಚ್ಚರಿಕೆಯನ್ನೂ ನೀಡಿದರು. ಆದರೂ, ಸಮಸ್ಯೆ ಇತ್ಯರ್ಥವಾಗುವವರೆಗೆ `ಕಪ್ಪು ಪಟ್ಟಿ 'ಧರಿಸಿ ಕರ್ತವ್ಯ ನಿರ್ವಹಿಸಲು ತೀರ್ಮಾನಿಸಿದ್ದಾರೆ.

ಕೈ ಚುನಾವಣೆ ಭ್ರಮ

ವಿಕ ಸುದ್ದಿಲೋಕ ಮೈಸೂರು
ರಾಜ್ಯದ ರಾಜಧಾನಿಯಲ್ಲಿ ಭಾನುವಾರ ಬಿಜೆಪಿ ಸರಕಾರ `ಸಾವಿರದ ಸಂಭ್ರಮ' ಆಚರಿಸಿಕೊಂಡರೆ, ಸಾಂಸ್ಕೃತಿಕ ರಾಜಧಾನಿಯಲ್ಲಿ ಪ್ರದೇಶ ಕಾಂಗ್ರೆಸ್ `ನಾಡ ರಕ್ಷಣಾರ್‍ಯಾಲಿ' ಮೂಲಕ ಚುನಾವಣಾ ರಣ ಕಹಳೆ ಮೊಳಗಿಸಿದೆ.
ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ಮುಳುಗಿರುವ `ಸುಳ್ಳಿನ ಸರದಾರ 'ಬಿಜೆಪಿ ಸರಕಾರವನ್ನು ಕಿತ್ತೊಗೆಯುವವರೆಗೆ ನಾನಾ ಹಂತದಲ್ಲಿ ಸಂಘರ್ಷಮಯ ಹೋರಾಟ ನಡೆಸಲು ಬೃಹತ್ ರ್‍ಯಾಲಿ ಸಂಕಲ್ಪ ಮಾಡಿತು.
ಮಹಾರಾಜ ಕಾಲೇಜು ಮೈದಾನದ ವಿಶಾಲ ಚಪ್ಪರದಡಿ ಸೇರಿದ್ದ  ಕಂದಾಯ ವಿಭಾಗದ ೮ ಜಿಲ್ಲೆಗಳ ವ್ಯಾಪ್ತಿಯ ಸಾವಿರಾರು ಕಾರ್‍ಯಕರ್ತರನ್ನುದ್ದೇಶಿಸಿ ಮಾತನಾಡಿದ ಪಕ್ಷದ ನಾಯಕರು,ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

ನಾಡ ರಕ್ಷಣಾ ರ್‍ಯಾಲಿ: ನಡೆ-ನುಡಿ

ಭಾನುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ಬಿಸಿ. ಪ್ರದೇಶ ಕಾಂಗ್ರೆಸ್ ಆಯೋಜಿಸಿದ್ದ  ವಿಭಾಗ ಮಟ್ಟದ `ನಾಡ ರಕ್ಷಣಾ ರ್‍ಯಾಲಿ' ರಣಬಿಸಿಲು, ನಾಯಕರ ಬೆಂಕಿಯ ಮಾತಿನಿಂದಾಗಿ `ಬಿಸಿ ಬಿಸಿ'ಯಾಗಿತ್ತು. ಚುನಾವಣೆಯ ರಣೋತ್ಸಾಹದಲ್ಲಿ ನಡೆದ ರ್‍ಯಾಲಿಯಲ್ಲಿ ಕಂಡು, ಕೇಳಿದ ವಿಶೇಷಗಳಿವು.

ಸರಿದಾರಿಗೆ ಮರಳಿದ ಜಿಲ್ಲೆಯ ಕೆಲ ಆಸ್ಪತ್ರೆಗಳು

ವಿಕ ಸುದ್ದಿಲೋಕ ಮಡಿಕೇರಿ  
ಅವ್ಯವಸ್ಥೆಯ ಆಗರವಾಗಿರುವ ಕೊಡಗು ಜಿಲ್ಲೆಯ ಸಾಕಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ  `ಆಸ್ಪತ್ರೆ ಯೋಗಕ್ಷೇಮ' ವಿಕ ಅಭಿಯಾನವು  ತುರ್ತು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ.
ಕೊಡಗು ಜಿಲ್ಲೆಯ ೨೯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವ್ಯವಸ್ಥೆ, ಉತ್ತಮ ಸೇವೆಯ ಸಂಪೂರ್ಣ ಚಿತ್ರಣವನ್ನು ಒಂದು ವಾರಗಳ ಕಾಲ ವಿಜಯ ಕರ್ನಾಟಕ ದೈನಿಕವು `ಆಸ್ಪತ್ರೆ ಯೋಗ ಕ್ಷೇಮ' ಮಾಲಿಕೆಯಲ್ಲಿ ತೆರೆದಿಟ್ಟಿತು. ಅಭಿಯಾನದಿಂದಾಗಿ ಅವ್ಯವಸ್ಥೆಯಿಂದ ಕೂಡಿದ್ದ ಕೆಲವು ಆಸ್ಪತ್ರೆಗಳು ಸರಿದಾರಿಗೆ ಮರಳಿವೆ.
ಚೆನ್ನಯ್ಯನಕೋಟೆ  ಆಸ್ಪತ್ರೆಗೆ ಭಾನುವಾರ ಬಂತೆಂದರೆ ರಜೆ. ನಿಯಮದ ಪ್ರಕಾರ ಭಾನುವಾರ ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸಬೇಕು. ಆದರೆ ಇಲ್ಲಿ ಭಾನುವಾರ ಬಾಗಿಲೇ ತೆರೆಯುವುದೇ ಇಲ್ಲ. ಈ ಬಗ್ಗೆ  `ವಿಕ' ಬೆಳಕು ಚೆಲ್ಲಿದಾಗ ತಕ್ಷಣ ಸ್ಪಂದಿಸಿದ  ವೀರಾಜಪೇಟೆ ತಾ.ಪಂ. ಅಧ್ಯಕ್ಷ ಎಚ್.ಕೆ. ದಿನೇಶ್, ಆಸ್ಪತ್ರೆ ಭಾನುವಾರ ಕೂಡ ತೆರೆದಿರುವಂತೆ ಅಗತ್ಯ ಕ್ರಮ ಕೈಗೊಳ್ಳಲು ತಾಲೂಕು ವೈದ್ಯಾಧಿಕಾರಿಗೆ ನಿರ್ದೇಶನ ನೀಡಿದರು. ಅಲ್ಲದೆ  `ವಿಕ ಅಭಿಯಾನ'ವು ವೀರಾಜಪೇಟೆ ತಾ.ಪಂ. ಕೆಡಿಪಿ  ಸಭೆಯಲ್ಲಿ ಪ್ರಸ್ತಾಪಗೊಂಡು ಆಸ್ಪತ್ರೆಗಳನ್ನು ಸರಿದಾರಿಗೆ ಕೊಂಡೊಯ್ಯುವ ಕುರಿತು ಸಮಾಲೋಚನೆಗೆ ವೇದಿಕೆಯೊದಗಿಸಿತು.

ಮೈಸೂರು ಮೃಗಾಲಯದಲ್ಲಿ ಏಳು ತೋಳ ಮರಿಗಳ ಜನನ

ವಿಕ ಸುದ್ದಿಲೋಕ ಮೈಸೂರು
ಒಂದು ಜೋಡಿ ತೋಳಗಳು ಕಂದು ಬಣ್ಣದ  ಏಳು ತೋಳ ಮರಿಗಳಿಗೆ ಜನ್ಮ ನೀಡಿರುವುದು ಮೈಸೂರು ಮೃಗಾಲಯ ದಲ್ಲಿ ಹೊಸ ಆಕರ್ಷಣೆ. ಈ ಮರಿ ಗಳಿಗೆ ಯಾವುದೇ ರೀತಿ ತೊಂದರೆ ಗಳಾಗದಿರುವುದನ್ನು ಖಾತರಿ ಮಾಡಿ ಕೊಳ್ಳುವ ಉದ್ದೇಶದಿಂದ ತಾತ್ಕಾಲಿಕ ವಾಗಿ ಸಾರ್ವಜನಿಕರಿಗೆ ಅವುಗಳ ದರ್ಶನ ಸದ್ಯಕ್ಕಿಲ್ಲ.

ವೈದ್ಯರೇ ಇಲ್ಲ, ಔಷಧ ತಜ್ಞರೇ ಎಲ್ಲ

ಚೆಯ್ಯಂಡಾಣೆ ಆಸ್ಪತ್ರೆ ಜಿಲ್ಲೆಯ ಮಾದರಿ ಆರೋಗ್ಯ ಕೇಂದ್ರ. ಭಾಗಮಂಡಲ ಆಸ್ಪತ್ರೆಗೆ ಬರುವ ಮುನ್ನ ಒಮ್ಮೆ ಯೋಚಿಸುವುದು ಒಳಿತು. ಸಂಪಾಜೆ ಆಸ್ಪತ್ರೆ ಬಗ್ಗೆ ಊರಿನ ಜನರಲ್ಲಿ ದ್ವಂದ್ವ ಅಭಿಪ್ರಾಯ ಇದೆ. ಚೆಟ್ಟಳ್ಳಿ ಆಸ್ಪತ್ರೆ ವೈದ್ಯರ ಬಗ್ಗೆ ಆರೋಪ ಇದೆ. ಚೇರಂಬಾಣೆಯಲ್ಲಿ ವೈದ್ಯರನ್ನು ಹೊರತು ಪಡಿಸಿ ಎಲ್ಲ  ಹುದ್ದೆ ಭರ್ತಿಯಾಗಿದೆ. ವೈದ್ಯರೆ ಇಲ್ಲದ ಆಸ್ಪತ್ರೆಗೇನು ಅರ್ಥ ಎನ್ನುತ್ತಾರೆ ಕುಂದೈರೀರ ಎಂ. ರಮೇಶ್.

ವಿಶ್ವಾಸನೀಯ ಸೇವೆ; ಅಪರೂಪಕ್ಕೆ ಬರುವ ವೈದ್ಯ

ಕುಗ್ರಾಮ ವ್ಯಾಪ್ತಿಯ ಸೂರ್ಲಬ್ಬಿ ಆಸ್ಪತ್ರೆ ಸಮಸ್ಯೆಗಳಿಂದ ನರಳುತ್ತಿದೆ. ಇಬ್ಬರ ಜೀವ ಬಲಿ ತೆಗೆದುಕೊಂಡ ಬಳಿಕ ಸುಂಟಿಕೊಪ್ಪ ಆಸ್ಪತ್ರೆ ಸುಸಜ್ಜಿತವಾಗಿದೆ. ಮಾದಾಪುರ ಆಸ್ಪತ್ರೆ ವೈದ್ಯರ ಮೇಲೆ ವಿಶ್ವಾಸದಿಂದ ಜನ ಚಿಕಿತ್ಸೆಗೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಬಿಳಿಗೇರಿ ಆಸ್ಪತ್ರೆಗೆ ವೈದ್ಯರ ಭೇಟಿಯೇ ಅಪರೂಪ ಎನ್ನುತ್ತಾರೆ ಬಿ.ಕೆ. ಶಶಿಕುಮಾರ್ ರೈ.

ಮುಡಾಗೆ ನಾಗೇಂದ್ರ ಓಕೆ: ನೆರೆಯವರ ಹಸ್ತಕ್ಷೇಪ ಯಾಕೆ?

ಚೀ. ಜ. ರಾಜೀವ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪಾಲಿಕೆ ಸದಸ್ಯ, ಬಿಜೆಪಿ ಮುಖಂಡ ಎಲ್.ನಾಗೇಂದ್ರರ ನೇಮಕ ಜಿಲ್ಲೆಯ ಬಿಜೆಪಿ ವಲಯದಲ್ಲಿ  ಹೊಸ ರಾಜಕೀಯ ಲೆಕ್ಕಾಚಾರ, ತಳಮಳ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ಅಸಮಾಧಾನವಾಗಿದ್ದರೆ, ಜಿಲ್ಲೆಯ ಆಗು-ಹೋಗುಗಳಲ್ಲಿ ನೆರೆ ಜಿಲ್ಲೆಯ ಸಚಿವರು-ಸಂಸದರು ಕೈಯಾಡಿಸಿದ್ದಾರೆ ಎಂಬ ತಳಮಳ ಜಿಲ್ಲೆಯ ಇಬ್ಬರು ಸಚಿವರಲ್ಲಿ. ಇದರ ಮಧ್ಯೆ ಚಾಮರಾಜ ಕ್ಷೇತ್ರದ ಸಂಭವನೀಯ ಮರು ಚುನಾವಣೆಯ ಟಿಕೆಟ್ ಯಾರಿಗೆಂಬ ಚರ್ಚೆ ಶುರು.

ಬಾರದ ೨೭ ಕೋಟಿ ರೂ. ಹಣ, ಕೆ.ಆರ್. ಆಸ್ಪತ್ರೆ ಅಭಿವೃದ್ಧಿಗೆ ಗ್ರಹಣ

ಲೋಕೇಶ್ ನೀರಬಿದಿರೆ
ಕೆ.ಆರ್.ಆಸ್ಪತ್ರೆ ಅಭಿವೃದ್ಧಿಗೆ ಮೇಜರ್ ಸರ್ಜರಿ ಯಾಗೋದು ಯಾವಾಗ?
ದೊಡ್ಡಾಸ್ಪತ್ರೆ ಎಂದೇ ಜನಜನಿತ ಕೆ.ಆರ್. ಆಸ್ಪತ್ರೆ ಅವ್ಯವಸ್ಥೆ ಆಗರ. ೬ ತಿಂಗಳ ಹಿಂದೆ ಆಸ್ಪತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಅಭಿವೃದ್ಧಿಗೆ ಕೋಟಿ, ಕೋಟಿ ರೂ. ಅನುದಾನದ ಭರವಸೆ ನೀಡಿದ್ದರು. ಈಗಲಾದರೂ ಆಸ್ಪತ್ರೆಯಲ್ಲಿ ಸುಧಾರಣೆ ಪರ್ವ ಶುರುವಾಗುತ್ತದೆ ಎಂದು ಜನ ನಂಬಿದ್ದರು. ಆದರೆ ಹಣ ಬಿಡುಗಡೆಯಾಗಲೇ ಇಲ್ಲ. ಆದರೆ ಸಿಎಂ ಭರವಸೆ ನೀಡಿ ವಾರವಲ್ಲ, ಆರು ತಿಂಗಳೇ ಸರಿದು ಹೋಗಿದೆ. ಇನ್ನೂ ಅನುದಾನ ಬಿಡುಗಡೆ ಸದ್ದು ಸುದ್ದಿ ಇಲ್ಲ.

ಪ್ರಭಾವಿಗಳೇ ಇಲ್ಲಿ `ಫಲಾನುಭವಿಗಳು'

ಈ ಯೋಜನೆ ಅಕ್ಷರಶಃ ಪೂರ್ಣಗೊಂಡಿದ್ದರೆ ಗ್ರಾಮಸ್ಥರ ಬಾಳು `ಸುವರ್ಣ'ವಾಗಬೇಕಿತ್ತು. ಆದರೆ ಕೆಲ ಜನಪ್ರತಿನಿಧಿಗಳ, ಗುತ್ತಿಗೆದಾರರ, ಅಧಿಕಾರಿಗಳ ಬದುಕು ಸುವರ್ಣವಾಗಿದೆ. ಈ ಮಾತಿಗೆ ಇವೆಲ್ಲಾ ಗ್ರಾಮಗಳಲ್ಲಿ ನಡೆದ ಕಾಮಗಾರಿಗಳೇ ನಿದರ್ಶನ. ಅಂದರೆ ಪ್ರಭಾವಿಗಳೇ ಇಲ್ಲಿ ಫಲಾನುಭವಿಗಳು ಎನ್ನುತ್ತಾರೆ ಕೋಟಂಬಳ್ಳಿ  ಗುರುಸ್ವಾಮಿ.

ರೋಗಿಗಳ ಮಹಾಪೂರ, ಸುಸ್ತಾದ ವೈದ್ಯ

ಅನಾರೋಗ್ಯ ಪೀಡಿತ ಶಿರಂಗಾಲ ಆಸ್ಪತ್ರೆ ರೋಗಿಗಳಿಗೆ ಚಿಕಿತ್ಸೆ ನೀಡುವ ಸ್ಥಿತಿಯಲ್ಲಿಲ್ಲ.  ನಿತ್ಯ ನೂರಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುವ ಕೂಡಿಗೆ ಆಸ್ಪತ್ರೆಯಲ್ಲಿ ಇರುವ ಒಬ್ಬ ವೈದ್ಯ ತತ್ತರಿಸಿ ಹೋಗಿದ್ದಾರೆ. ಅಹೋರಾತ್ರಿ ತೆರೆದಿರುವ ಹೆಬ್ಬಾಲೆ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರೊಬ್ಬರೇ ಇದ್ದಾರೆ. ನಂಜರಾಯಪಟ್ಟಣ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದೆ. ಈ ಎಲ್ಲಾ ಆಸ್ಪತ್ರೆಗಳಿಗೆ ತ್ವರಿತ ತುರ್ತುಚಿಕಿತ್ಸೆ ಅಗತ್ಯ ಎನ್ನುತ್ತಾರೆ ಬಿ.ಎಸ್. ಲೋಕೇಶ್‌ಸಾಗರ್.

ವೈದ್ಯರ ಏಕಪಾತ್ರಾಭಿನಯ ಮುಗಿದಿಲ್ಲ !

ಶ್ರೀಮಂಗಲ, ಹುದಿಕೇರಿ, ಬಿರುನಾಣಿ ಹಾಗೂ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಸಮಸ್ಯೆಗಳಿಗೆ ಕೊರತೆ ಇಲ್ಲ. ರೋಗಿಗಳಿಗೆ ಚಿಕಿತ್ಸೆ  ನೀಡ ಬೇಕಾದ ಹುದಿಕೇರಿ ಆಸ್ಪತ್ರೆ `ಸಿಬ್ಬಂದಿ ಬೇರೆಡೆಗೆ ನಿಯೋಜನೆ' ಎಂಬ `ಕಾಯಿಲೆ'ಯಿಂದ ನರಳುತ್ತಿದೆ. ಶ್ರೀಮಂಗಲದಲ್ಲಿ  ಎಲ್ಲವೂ ಸರಿ ಇದೆ. ಆದರೆ ವೈದ್ಯರೇ ಇಲ್ಲ. ಬಿರುನಾಣಿ ಆಸ್ಪತ್ರೆಯಲ್ಲಿ ಸಾಕಷ್ಟು ಔಷಧಗಳಿಲ್ಲ. ಕಾನೂರು ಆಸ್ಪತ್ರೆಯಲ್ಲಿ  ವೈದ್ಯರೊಬ್ಬರ ಏಕಾಪಾತ್ರಾಭಿನಯ ಎನ್ನುತ್ತಾರೆ ಚೆಟ್ಟಂಗಡ ರವಿ ಸುಬ್ಬಯ್ಯ

ಗ್ರಾಮ ಅಪೂರ್ಣ: ದಾಖಲೆಗಳಲ್ಲಿ ಪೂರ್ಣ

ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಕೆಆರ್‌ಐಡಿಎಲ್ ಪ್ರಗತಿಯ ಉಸ್ತುವಾರಿಯನ್ನು ಸ್ಥಳೀಯ ಗ್ರಾ.ಪಂ.ಗೆ  ವಹಿಸದೆ, ಜನಪ್ರತಿನಿಧಿಗಳೂ ಇತ್ತ ಮುಖಮಾಡದ ಕಾರಣ `ದಾಖಲೆ'ಗಳಲ್ಲೇ  ಪ್ರಗತಿ ಪೂರ್ಣಗೊಂಡಿವೆ ಎನ್ನುತ್ತಾರೆ ಮಡಹಳ್ಳಿ ಮಹೇಶ್.

ಜೋಶ್ ಇಲ್ಲದ ವ್ಯಾಲೆಂಟೈನ್ಸ್ ಡೇ

ಮೈಸೂರು ನಗರ
ಕಾರಂಜಿಕೆರೆಯಲ್ಲಿ ಎಂದಿನಂತೆ ಕೈ ಕೈ ಹಿಡಿದು ನಡೆದರು, ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಕುಳಿತು ಪಿಸು ಮಾತನಾಡಿದರು. ಹೋಟೆಲ್-ಗಿಫ್ಟ್ ಶಾಪಿಗಳಲ್ಲಿ ಮನಸ್ಸಿಗೆ ಇಷ್ಟವಾಗುವ ಉಡುಗೊರೆ ಖರೀದಿಸಿದರು...
ಪ್ರೇಮಿಗಳ ದಿನಕ್ಕೆ ಮೈಸೂರಿನಲ್ಲಿ ಇಂಥ ವಾತಾವರಣ ಅಲ್ಲಲ್ಲಿ ಕಂಡು ಬಂದರೂ ಎಂದಿನ ಜೋಶ್ ಮಾತ್ರ ಎಲ್ಲೂ ಇರಲಿಲ್ಲ. ಪೊಲೀಸ್ ಭದ್ರತೆ ಹಾಗೂ ಮಾಧ್ಯಮಗಳ ಕಣ್ಗಾವಲ ಕಾರಣಕ್ಕೆ ಪ್ರೇಮಿಗಳು ಅಲ್ಲಲ್ಲಿ ಸೇರಿದರೂ ಹೆಚ್ಚು ಹೊತ್ತು ಕಳೆಯಲು ಆಗಲಿಲ್ಲ. ಗಂಗೋತ್ರಿ ಮರಗಳ ಕೆಳಗೆ ಮನಸು ಬಿಚ್ಚಿಕೊಳ್ಳಲಿಲ್ಲ.
ಪ್ರೇಮಿಗಳ ದಿನವೀಗ ಆಕರ್ಷಣೆಯನ್ನು ದಾಟಿ ಆಚರಣೆಯಾಗಿ ಮಾರ್ಪಟ್ಟಿದೆ.  ಮೂರ್‍ನಾಲ್ಕು ವರ್ಷದಿಂದ ಪ್ರೇಮಿಗಳ ದಿನವನ್ನು ಅಲ್ಲಲ್ಲಿ ಉತ್ಸಾಹದಿಂದಲೇ ಆಚರಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ಸಹಪಾಠಿ ಪ್ರೇಮಿಗಳೊಂದಿಗೆ ಉತ್ಸಾಹದಿಂದಲೇ ಕಳೆಯುತ್ತಿದ್ದರು. ಪ್ರೇಮಿಗಳಿಗೆ ಮನದಿಷ್ಟದ ಉಡುಗೊರೆ, ಸ್ನೇಹಿತರಿಗೆ ಒಂದಿಷ್ಟು ಟ್ರೀಟ್ ಇರುತ್ತಿದ್ದವು. ಈಗ ಪ್ರೇಮಿಗಳ ದಿನ ಆಚರಣೆಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾದವು. ಹಿಂದಿನ ವರ್ಷ ಅಲ್ಲಲ್ಲಿ ಹಿಂಸಾಚಾರವೂ ನಡೆದವು. ಪೊಲೀಸರು ಮಧ್ಯ ಪ್ರವೇಶಿಸಿದರು.
ಇವುಗಳೆಲ್ಲದ ಫಲ ಎನ್ನುವಂತೆ ಬಹಳಷ್ಟು ಪ್ರೇಮಿಗಳು ಮನಸ್ಸಿನಲ್ಲಿ ಇಲ್ಲವೇ ಮೊಬೈಲ್ ಮಾತುಕತೆ ಮೂಲಕವೇ ಪ್ರೇಮಿಗಳ ದಿನ ಆಚರಿಸಿಕೊಂಡರು. ಯಾರು ಬಂದರೂ ನೋಡಿದರಾಯ್ತು ಎಂಬ ಕೊಂಚ ಧೈರ್‍ಯ ಮನೋಭಾವದ ಬೆರಳೆಣಿಕೆಯಷ್ಟು ಮಂದಿ ಕಾರಂಜಿಕೆರೆ, ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ಕಂಡು ಬಂದರು.

ದಾಖಲೆ ನೀಡಲು ಕ್ಯೂ, ಸಿಲಿಂಡರ್ ವ್ಯತ್ಯಯ

ವಿಕ ವಿಶೇಷ ಮೈಸೂರು
ನಗರದ ಬಹುತೇಕ  ಗ್ಯಾಸ್ ಏಜೆನ್ಸಿಗಳ  ಮುಂದೆ  ಉದ್ದುದ್ದ  ಸಾಲು. ಗ್ಯಾಸ್ ಸಿಲಿಂಡರ್ ಪಡೆಯಲಿಕ್ಕಲ್ಲ,`ಸಕ್ರಮ'ದ ದಾಖಲೆ  ಸಲ್ಲಿಸಲು. ಈ ಪ್ರಕ್ರಿಯೆ, ಸಿಲಿಂಡರ್ ಪೂರೈಕೆಯ ವ್ಯತ್ಯಯಕ್ಕೂ ಕಾರಣವಾಗಿದೆ.
`ಅನಿಲ ಸಿಲಿಂಡರ್  ಸಂಪರ್ಕ ಹೊಂದಿದವರು ಪಡಿತರ  ಕಾರ್ಡ್ ಮತ್ತು ವಿದ್ಯುತ್ ಬಿಲ್ ಪ್ರತಿ ನೀಡಬೇಕು' ಎಂಬ ಆಹಾರ ಮತ್ತು ನಾಗರಿಕ  ಸರಬರಾಜು ಇಲಾಖೆ  ಸೂಚನೆ,ಅದಕ್ಕೆ  ನಿಗದಿಪಡಿಸಿರುವ  ಫೆ.೧೯ರ ಗಡುವು ಏಜೆನ್ಸಿಗಳ ಮುಂದೆ  `ಜನದಟ್ಟಣೆ'ಯನ್ನು ಸೃಷ್ಟಿಸಿದೆ.
ದಾಖಲೆ  ನೀಡುವ ಪ್ರಕ್ರಿಯೆಯನ್ನು ಸಾಕಷ್ಟು  ಸರಳಗೊಳಿಸಲಾಗಿದೆ ಎಂದು ಉನ್ನತ ಅಧಿಕಾರಿಗಳು ಹೇಳುತ್ತಾರಾದರೂ, ನಗರದ ಬಹುತೇಕ ಏಜೆನ್ಸಿಗಳಲ್ಲಿ ಅದು ಅಷ್ಟೊಂದು ಸರಳವಲ್ಲ. ತಾಸು ಗಟ್ಟಲೆ ಸಾಲು ನಿಲ್ಲ ಬೇಕು. ಬೇಗ ಮುಗಿದರೆ, ಅದವರ ಅದೃಷ್ಟ. ಕೆಲವೆಡೆ ಯಂತೂ ೧ರೂ.ನೀಡಿ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ,ಅದಕ್ಕೆ ಮುದ್ರೆ ಒತ್ತಿಸಿ, ನೀಡಲು ಮತ್ತೆ ಸಾಲು ನಿಲ್ಲಬೇಕಾದಂತ ಸ್ಥಿತಿ. ಎಷ್ಟೆ, ಸರಳವೆಂದರೂ ಅರ್ಧ  ದಿನದ  ಬಾಬತ್ತು.
ಡ್ರಾಪ್ ಬಾಕ್ಸ್ ಇಲ್ಲ: ಪಡಿತರ ಕಾರ್ಡ್ ಇಲ್ಲದವರು ಆರ್‌ಆರ್ ಸಂಖ್ಯೆ ನಮೂದಿಸಿ,ವಿದ್ಯುತ್ ಬಿಲ್ ನಕಲು ಪ್ರತಿಯನ್ನು ಗ್ಯಾಸ್ ಅಂಗಡಿ ಮುಂದಿನ `ಡ್ರಾಪ್ ಬಾಕ್ಸ್'ಗೆ ಹಾಕಿದರೆ  ಸಾಕು ಎನ್ನುತ್ತಾರೆ  ಅಧಿಕಾರಿಗಳು. ರಾಜ್ಯದ ಕೆಲವೆಡೆ  ಇಂಥ ವ್ಯವಸ್ಥೆ  ಇರುವುದು ನಿಜ.ಆದರೆ, ನಗರದ ಯಾವ ಏಜೆನ್ಸಿ ಮುಂದೆಯೂ ಇಂಥದೊಂದು ಡ್ರಾಪ್ ಬಾಕ್ಸ್ ವ್ಯವಸ್ಥೆ  ಇಲ್ಲ. ಸಂಬಂಧಪಟ್ಟವರನ್ನು ಕೇಳಿದರೆ `ನಮಗೆ  ಯಾವುದೇ ಸ್ಪಷ್ಟ  ನಿರ್ದೇಶನವಿಲ್ಲ' ಎನ್ನುತ್ತಾರೆ.

ಪ್ರಯೋಜನವಾಗದ ಸುವರ್ಣ

ಕಂಡ ಕನಸು ಸುವರ್ಣವೇ. ಆದರೆ ನನಸಾಗದಿದ್ದಾಗ ದುಃಖವೇ. ರಾಜ್ಯ ಸರಕಾರದ `ಸುವರ್ಣ ಗ್ರಾಮೋದಯ' ಯೋಜನೆಯಡಿ ಗ್ರಾಮಗಳು ಉದಯವಾಗಲೇ ಇಲ್ಲ. ಅಧಿಕಾರ ಶಾಹಿ, ಗುತ್ತಿಗೆದಾರ, ಜನಪ್ರತಿನಿಧಿ - ಹೀಗೆ ಎಲ್ಲೆಲ್ಲೋ ಕೊಂಡಿ ಕಳಚಿ ಜನರಿಗೆ ಸಿಕ್ಕಿದ್ದು  ಕಷ್ಟ ದ ಮೂಟೆಯೇ. `ಶಹಭಾಷ್' ಎನ್ನುವಂಥ ಗ್ರಾಮಗಳು ಸಿಗುವುದೇ ಕಷ್ಟ ಎನ್ನುತ್ತಾರೆ ಪ್ರಸಾದ್ ಲಕ್ಕೂರು. ಇದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ

ಆಸ್ಪತ್ರೆಗಳಿಗೇ ಕೊಡಿ ಚುಚ್ಚುಮದ್ದು

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಗ್ರಾಮೀಣ ಭಾಗದ ಜನಸಾಮಾನ್ಯರ ಪಾಲಿಗೆ ಸಂಜೀವಿನಿ. ಜೀವ ಉಳಿಸುವ ಮಹತ್ವದ ಹೊಣೆ ಇವುಗಳದ್ದು. ಶ್ರೀಮಂತರಿಗೆ ಚಿಕಿತ್ಸೆಯ ಆಯ್ಕೆಯಿದೆ. ಬಡವರಿಗೆ ಈ ಕೇಂದ್ರಗಳೇ ದಿಕ್ಕು. ವಾಸ್ತವದ ಕನ್ನಡಿಯಲ್ಲಿ ಕಂಡರೆ ಕಾಣುವುದು ಹಲವು ಕೊರತೆಗಳ ಬಿಂಬವಷ್ಟೇ. ಅವುಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನದ ಮಾಲಿಕೆ ಇಂದಿನಿಂದ ಆರಂಭ. ಆಸರೆಯಾಗಬೇಕಾದ ಜನಪ್ರತಿನಿಧಿಗಳು ಇತ್ತ ಗಮನಹರಿಸಿದರೆ ಜನರ ಯೋಗಕ್ಷೇಮ ಸುಧಾರಿಸೀತು ಎನ್ನುತ್ತಾರೆ ಚೆರಿಯಮನೆ ಸುರೇಶ್.

ಮದ್ದೂರಿನ ಫುಟ್ ಪಾತ್ ಗಳೆಲ್ಲಾ ಒತ್ತುವರಿ !

* ಶಿವನಂಜಯ್ಯ ಮದ್ದೂರು
ಪಾದಚಾರಿಗಳಿಗೆ ಪ್ರತ್ಯೇಕ ರಸ್ತೆ ಇದ್ದರೂ ಜನ ಅದರಲ್ಲಿ ತಿರುಗಾಡುವಂತಿಲ್ಲ. ಪರಿಣಾಮ ಜನರು ರಸ್ತೆಗಿಳಿಯಲೇಬೇಕು. ಇದಕ್ಕೆ ಕಾರಣ ಫುಟ್‌ಪಾತ್ ಒತ್ತುವರಿ.
ಇದು ಮದ್ದೂರು ಪಟ್ಟಣದ ಬಹುತೇಕ ರಸ್ತೆಗಳ ಸ್ಥಿತಿ. ಪೇಟೆ ಬೀದಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಪ್ರವಾಸಿ ಮಂದಿರ ವೃತ್ತ, ನೂತನ ಕೊಪ್ಪ ರಸ್ತೆ, ಶಿವಪುರದ ಬಸ್ ನಿಲ್ದಾಣ ಸೇರಿದಂತೆ ಹಲವು ರಸ್ತೆಗಳಲ್ಲಿ  ಫುಟ್‌ಪಾತ್ ಅಕ್ಷರಶಃ ಮಾಯವಾಗಿವೆ.
ಬೀದಿಬದಿಯ ಫುಟ್‌ಪಾತ್ ವ್ಯಾಪಾರಿಗಳು, ಎಳನೀರು, ಕಲ್ಲಂಗಡಿ ಹಣ್ಣುಗಳ ಮಾರಾಟಗಾರರು, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರಿಗಷ್ಟೇ ಫುಟ್‌ಪಾತ್ ಮೀಸಲಾಗಿದೆ.  ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಿದೆ.

ರಗಳೆ ಮುಗೀತು: ಇನ್ನು ಯುಗಳ ಗೀತೆ

* ಪಿ.ಓಂಕಾರ್/ಕುಂದೂರು ಉಮೇಶಭಟ್ಟ ಮೈಸೂರು
`ರಾಜಕಾರಣವೇ ಹಾಗೆ. ಯಾವಾಗ ಏನು ಬೇಕಾದರೂ ಆಗಬಹುದು. ಯಾರೂ ಕಾಯಂ ಶತ್ರುಗಳಲ್ಲ,ಮಿತ್ರರೂ ಅಲ್ಲ' ಎನ್ನುವುದು ಪ್ರಸ್ತುತದ ರಾಜಕೀಯಕ್ಕೆ, ರಾಜಕಾರಣಿಗಳಿಗೆ ರಕ್ಷಣಾಸ್ತ್ರ. 
ವೈರಿಗಳಾಗಿದ್ದವರು, ಹಾದಿ ಬೀದಿಯಲ್ಲಿ ನಿಂತು ಬೈಯ್ದಾಡಿಕೊಂಡು ಪರಸ್ಪರ ಬೆತ್ತಲಾದವರು ಮುಂದೊಂದು ದಿನ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡಬಹುದು. ಅಧಿಕಾರ ಹಂಚಿಕೊಳ್ಳಬಹುದು ಎನ್ನುವುದು ಹಲವು ಬಾರಿ ಋಜುವಾತಾಗಿದೆ. ಆಗೆಲ್ಲ, ಇದೇ `ಸೂತ್ರ'ವೇ ರಕ್ಷಣೆ ನೀಡಿದೆ. ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ರಾಜಕೀಯ ವಿದ್ಯಮಾನ  ಈ ಬಾಬ್ತಿಗೆ ಮತ್ತೊಂದು ಉದಾಹರಣೆ.
ಬಿಜೆಪಿ-ಜಾ.ದಳ `ಯುಗಳ ಗೀತೆ' ಹಾಡಿದ್ದು, ಅ?ಕಾರ ಕೊಡುವ- ಬಿಡುವ ವಿಚಾರದಲ್ಲಿ `ವಿಚ್ಛೇದನ' ಪಡೆದು,ಹಾದಿ ಬೀದಿ ರಂಪ ಮಾಡಿದ್ದು, ಕೆಲ ತಿಂಗಳಿಂದ ಮುಖ್ಯಮಂತ್ರಿ ವಿರುದ್ಧವೇ `ದಳ'ಪತಿ ತೊಡೆ ತಟ್ಟಿ ನಿಂತದ್ದು,ಮುಖ ಕೊಟ್ಟು ಮಾತನಾಡದಷ್ಟು ಸಂಬಂಧ ಕೆಡಿಸಿಕೊಂಡಿದ್ದು ಎಲ್ಲವೂ ಇತ್ತೀಚಿನ  ಇತಿಹಾಸ.
ಇದೇ ಕಾರಣಕ್ಕೆ,ಅತಂತ್ರ ಸ್ಥಿತಿಗೆ ಜಾರಿದ ಮೈಸೂರು ಜಿಲ್ಲಾ ಪಂಚಾಯಿತಿ ಯಲ್ಲಿ ಕಾಂಗ್ರೆಸ್-ಜಾ.ದಳ ಹೊಂದಾಣಿಕೆಯೇ `ಗತಿ' ಎಂದು, ೮ ಸ್ಥಾನ ಹೊಂದಿದ್ದ ಬಿಜೆಪಿ ಅಧಿಕಾರದ ಕನಸನ್ನೂ ಕಾಣಲಾರದೆಂದು ರಾಜಕೀಯ ವಲಯ ಭಾವಿಸಿತ್ತು.ಆದರೆ,`ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು' ಎನ್ನುವ  ಸೂತ್ರವೇ `ವರ'ವಾಗಿ ಜಿಲ್ಲೆಯ ಮಟ್ಟಿಗೆ ಮತ್ತೊಮ್ಮೆ ಬಿಜೆಪಿ-ಜಾ.ದಳಗಳ `ಯುಗಳ ಗೀತೆ 'ಗೆ ವೇದಿಕೆ ಸಜ್ಜಾಗಿದೆ. 

'ರಾಯರಥ' ಸಂಚಾರಿ ಧ್ವನಿ-ಬೆಳಕು ಕಾರ್ಯಕ್ರಮ

 ನವೀನ್ ಮಂಡ್ಯ
ಶ್ರೀ ಕೃಷ್ಣದೇವರಾಯರ ೫೦೦ನೇ ವರ್ಷದ ಪೀಠಾರೋಹಣ ಸಮಾರಂಭ ಆಚರಣೆ ಸ್ಮರಣಾರ್ಥ `ರಾಯರಥ' ಶೀರ್ಷಿಕೆಯಡಿ ತಾತ್ಕಾಲಿಕ ಸಂಚಾರಿ ಧ್ವನಿ ಮತ್ತು ಬೆಳಕು ಕಾರ್‍ಯಕ್ರಮಕ್ಕೆ ನಗರದ ಸರ್ ಎಂವಿ ಕ್ರೀಡಾಂಗಣ ಸಜ್ಜುಗೊಂಡಿದೆ.
ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀ ಕೃಷ್ಣದೇವ ರಾಯರ ಆಳ್ವಿಕೆಯ ಗತ ವೈಭವವನ್ನು ಪುನರ್ ನೆನಪಿಸುವ ಮತ್ತು ಪ್ರೇರಣೆ ನೀಡುವ ನಿಟ್ಟಿನಲ್ಲಿ ಆಯೋಜಿಸಿರುವ `ಧ್ವನಿ-ಬೆಳಕು ಕಾರ್‍ಯಕ್ರಮ' ಫೆ.೧೨ರಿಂದ ಎರಡು ದಿನಗಳ ಕಾಲ  ರಾತ್ರಿ ವೇಳೆ ೧ಗಂಟೆ ೧೦ ನಿಮಿಷ  ಪ್ರದರ್ಶನಗೊಳ್ಳಲಿದೆ.
ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕ ಆದಿಯಾಗಿ ಸಾಮ್ರಾಜ್ಯದ ಅವನತಿಯ ದೃಶ್ಯಗಳ ಸೆಟ್ ಗಳನ್ನು ಹಾಕಲಾಗಿದೆ. ಎರಡೂ ದಿನಗಳು ರಾತ್ರಿ ವಿಜಯ ನಗರ ಸಾಮ್ರಾಜ್ಯದ ವೈಭವ ಧ್ವನಿ ಮತ್ತು ಬೆಳಕಿನ ಸಂಯೋಜನೆಯಲ್ಲಿ ಅನಾವರಣಗೊಳ್ಳಲಿದೆ.
`ಸನ್ ಎಟ್ ಲೂಮಿನೇರ್' ಎಂದು ಕರೆಯುವ ಈ ಕಾರ್‍ಯಕ್ರಮ ಪ್ರವಾಸೋದ್ಯಮ ಇಲಾಖೆಯ ಪರಿಕಲ್ಪನೆ ಹೊಂದಿದೆ. ವಿಜಯನಗರ ಸಾಮ್ರಾಜ್ಯದ ಗತ ವೈಭವ, ಆಗಿನ ಪರಂಪರೆ ಮತ್ತು ಇತಿಹಾಸವನ್ನು ದೃಶ್ಯಗಳ ರೂಪದಲ್ಲಿ ಜನರ ಕಣ್ಣಿಗೆ ಕಟ್ಟಿಕೊಡುವ ಉದ್ದೇಶವಿದೆ.

ಅನ್ನದ ಮೇಲೆ ಹರಿದ ರಕ್ಕಸ ಯಂತ್ರ!

ಜಯನಗರ
ಗುರುವಾರ ಮುಂಜಾನೆ  ಜಯನಗರಕ್ಕೆ ಹೊಂದಿಕೊಂಡ `ಸೊಪ್ಪಿನ ತೋಟ'ದಲ್ಲಿ  ಜೆಸಿಬಿ ಘರ್ಜನೆ.ರಕ್ಕಸಯಂತ್ರ ಹಲವು ಬಡ ಕುಟುಂಬಗಳ `ಅನ್ನದ ತಟ್ಟೆ'ಯನ್ನು ಬರಿದುಗೊಳಿಸಿತು.
ವಿಸ್ತಾರ ಪ್ರದೇಶದಲ್ಲಿ ಅಟ್ಟಹಾಸಗೈದು ಗಿಡ,ಮರಗಳನ್ನು ನೆಲಕ್ಕುರುಳಿಸುವುದರ  ಜತೆಗೆ ಸೊಪ್ಪಿನ ಮಡಿ,ತರಕಾರಿ ಸಸಿಗಳನ್ನು `ನುಂಗಿ' ನೊಣೆಯುತ್ತಿದ್ದರೆ ವೃದ್ಧರು, ಮಹಿಳೆ ಯರು, ಮಕ್ಕಳು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಲೆ,ಯಂತ್ರ ಹರಿಯುವ ಮೊದಲು ಆದಷ್ಟು ಸೊಪ್ಪು,ತರಕಾರಿಯನ್ನು `ರಕ್ಷಿಸಿ'ಕೊಳ್ಳುವ ಧಾವಂತದಲ್ಲಿದ್ದರು.ಸಿಟ್ಟಿತ್ತಾದರೂ,ಯಂತ್ರದ ಎದುರು ನಿಲ್ಲಲು ಭಯ. ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರು ಇಡೀ ಪ್ರದೇಶದಲ್ಲಿ `ಅತಿ ಭಯ' ಸೃಷ್ಟಿಸಿ ದುರ್ಬಲ ಜನರ ಧ್ವನಿಯ ಹುಟ್ಟಡಗಿಸಿದ್ದರು.

ಆಶಾದಾಯಕ ಬಜೆಟ್ ನಿರೀಕ್ಷೆಯಲ್ಲಿ ಕೈಗಾರಿಕೆಗಳು

ವಿಕ ವಿಶೇಷ ಮೈಸೂರು
ಮೈಸೂರಿನ ಕೈಗಾರಿಕೆಗಳು ಈ ಬಾರಿ ಆಶಾದಾಯಕ ಬಜೆಟ್ ನಿರೀಕ್ಷೆಯಲ್ಲಿವೆ.
ಬೆಂಗಳೂರಿನ ಬಳಿಕ ಕೈಗಾರಿಕೆಗಳ ಬೆಳವಣಿಗೆಗೆ ವಿಪುಲ ಅವಕಾಶ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ಏಳ್ಗೆ ಕಾಣುತ್ತಿಲ್ಲ ಎನ್ನುವುದು ಉದ್ಯಮಿಗಳ ಆತಂಕ. ದೇಶ ಅಲ್ಲದೇ ವಿದೇಶದಲ್ಲಿಯೂ ಹೆಸರು ಮಾಡಿದ ಕೈಗಾರಿಕೆಗಳು ಬಂದ್ ಅದ ಬಳಿಕ ಬೃಹತ್ ಕೈಗಾರಿಕೆಗಳು ಮೈಸೂರಿಗೆ ಬರಲು ಹಿಂಜರಿಯುತ್ತಿದ್ದು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಜೀವಾಳವಾಗಿವೆ. ಇಂಥವುಗಳು ಕೆಲ ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಬಾರಿ ರಾಜ್ಯ ಸರಕಾರ ಅವಧಿಗೂ ಮುನ್ನವೇ ಮಂಡಿಸಲಿರುವ ಬಜೆಟ್‌ನಲ್ಲಿ `ದೊರೆ ಕೃಪೆ' ದೊರೆಯಲಿದೆಯೇ ಎನ್ನುವ ಕಾತರ ಉದ್ಯಮಿಗಳದ್ದು.
ಉದ್ಯಮಿಗಳ ಅನುಕೂಲಕ್ಕೆ ತಕ್ಕಂತೆ ಈಗ ಮೈಸೂರಿನಲ್ಲಿಯೂ ವಿಮಾನ ಸಂಚಾರ ಆರಂಭಗೊಂಡಿರುವುದಲ್ಲದೇ, ಬೆಂಗಳೂರು- ಮೈಸೂರು ನಡುವಿನ ರೈಲು ಮಾರ್ಗ ಜೋಡಿ ಹಳಿ ನಿರ್ಮಾಣ ಕಾರ್‍ಯ ನಡೆದಿದೆ. ಇದರಿಂದ ಸುಲಭ ಸಾಗಣೆ ವ್ಯವಸ್ಥೆಗೆ ಮೈಸೂರು ಪ್ರಶಸ್ತವಾಗಿದ್ದು, ಸರಕಾರ ನೂತನ ಬಂಡವಾಳಗಾರರನ್ನು ಆಕರ್ಷಿಸುವ ಜತೆಗೆ ಇಲ್ಲಿನ ಉದ್ಯಮಿಗಳಿಗೂ ಉತ್ತೇಜನ ನೀಡುವ ಅಗತ್ಯವಿದೆ.

ನೆಲಕ್ಕುರುಳಿದ ೧೧ ಅನಧಿಕೃತ ಧಾರ್ಮಿಕ ಕಟ್ಟಡ


ವಿಕ ಸುದ್ದಿಲೋಕ ಚಾಮರಾಜನಗರ
ತಾಲೂಕಿನಲ್ಲಿ ಅನಧಿಕೃತವಾಗಿ ನಿರ್ಮಾಣ ಗೊಂಡಿದ್ದ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಬುಧವಾರ ಬೆಳಗ್ಗೆ ನಡೆಯಿತು.
ಸುಪ್ರೀಂಕೋರ್ಟ್ ಆದೇಶದ ಅನ್ವಯ ತಾಲೂಕಿನ ವಿವಿಧೆಡೆ ಅನಧಿಕೃತವಾಗಿದ್ದ ಹಾಗೂ ಸಾರ್ವಜನಿಕ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿದ್ದ ದೇವಾಲಯ, ದರ್ಗಾ, ಸ್ಮಶಾನದ ಗೋಡೆ- ತಂತಿಬೇಲಿಯನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಯಂತ್ರಗಳ ನೆರವಿನಿಂದ ತೆರವು ಮಾಡಲಾಯಿತು. ನಗರಸಭೆ ವ್ಯಾಪ್ತಿಯಲ್ಲಿ ಕೆಲ ರಸ್ತೆ ಬದಿಯಲ್ಲಿದ್ದ ದೇವಾಲಯಗಳನ್ನು ತಾವೇ ತೆರವುಗೊಳಿಸಿಕೊಳ್ಳುವುದಾಗಿ ಭಕ್ತರು, ಕೆಲ ದಿನಗಳ ಕಾಲಾವಕಾಶ ಕೋರಿದರು. ಹೀಗಾಗಿ ಇಂದು ಅವುಗಳ ಕಾರ್ಯಾಚರಣೆ ನಡೆಯಲಿಲ್ಲ. ಉಳಿದಂತೆ ತಾಲೂಕಿನ ವಿವಿಧೆಡೆ ೧೧ ಧಾರ್ಮಿಕ ಕೇಂದ್ರಗಳನ್ನು ನೆಲಕ್ಕುರುಳಿಸಿ, ನ್ಯಾಯಾಲಯದ ಆದೇಶವನ್ನು ಪಾಲಿಸಲಾಯಿತು.

ವರ್ಣಾವರಣದಲ್ಲಿ ಆಚಾರ್ ವರ್ಣಚಿತ್ರಗಳ ಅನಾವರಣ

ಶ್ರೀಕಲಾನಿಕೇತನ ಆರ್ಟ್ ಗ್ಯಾಲರಿ
ಹಿರಿಯ ಕಲಾವಿದ ಎಲ್.ಎಸ್.ಎನ್.ಆಚಾರ್ ಅವರ ಕುಂಚದಲ್ಲಿ ಅರಳಿದ ವರ್ಣ ಕಲಾಕೃತಿಗಳು `ವರ್ಣಾ ವರಣ' ಚಿತ್ರಕಲಾ ಪ್ರದರ್ಶನದಲ್ಲಿ ಅನಾವರಣ ಗೊಂಡಿತ್ತು.
ರೇಖಾಚಿತ್ರಗಳು, ಪೆನ್ಸಿಲ್ ಸ್ಕೆಚ್, ವ್ಯಕ್ತಿಚಿತ್ರಗಳು, ಜಲವರ್ಣಗಳಲ್ಲಿ ಕೋಟೆ- ಕೊತ್ತಲು, ಗುಡಿ- ಗೋಪುರಗಳು, ಕೆರೆ-ಕಟ್ಟೆಗಳು, ಹಳ್ಳಿ, ಪಟ್ಟಣ, ನಗರಗಳ ಚೆಂದದ ಬೀದಿಗಳು, ರಮ್ಯ ನಿಸರ್ಗ ದೃಶ್ಯ ಗಳು, ಗ್ರಾಮೀಣ ಪರಿಸರ, ಪ್ರಾಣಿ, ಪಕ್ಷಿಗಳು ಕ್ಯಾನ್ವಾಸ್ ಮೇಲೆ ಜೀವತಳೆದಿವೆ. ದೇವರು ಚಿತ್ರಪಟಗಳೂ ಇಲ್ಲಿವೆ. ಅಷ್ಟು ಮಾತ್ರವಲ್ಲ, ಆಧುನಿಕ ಶೈಲಿಯ ಅಮೂರ್ತ ಚಿತ್ರಗಳನ್ನೂ ರಚಿಸಲಾಗಿದೆ.

ಶರವೇಗಿಗಳನ್ನು ಬೆನ್ನಟ್ಟಿ ಹಿಡಿದ ಪೊಲೀಸರು

ಮೈಸೂರು ನಗರ
ಪೊಲೀಸ್ ಬ್ಯಾರಿಕೇಡ್‌ಗಳಿಗೆಲ್ಲ ಡೋಂಟ್ ಕೇರ್ ಎನ್ನುತ್ತ ಕಾರು ಶರವೇಗದಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಿತ್ತು. ಏನು ಅನಾಹುತ ಕಾದಿದೆಯೋ ಎಂಬ ಆತಂಕದಲ್ಲಿ ಪೊಲೀಸರೂ ಬೆನ್ನುಹತ್ತಿದರು. ಹತ್ತಲ್ಲ, ಇಪ್ಪತ್ತಲ್ಲ, ಐವತ್ತು ಅರವತ್ತು ಕಿ.ಮೀ. ಬೆನ್ನತ್ತಿ ಹರಸಾಹಸ ಮಾಡಿ ಕೊನೆಗೂ ಕಾರು ತಡೆದ ಪೊಲೀಸರಿಗೆ ಅದರಲ್ಲಿದ್ದವರೆಲ್ಲ ಕುಡಿದ ಅಮಲಿನಲ್ಲಿದ್ದವರೆಂಬುದು ದೃಢಪಟ್ಟಿದ್ದು.
ಎರಡು  ಗಂಟೆಗೂ ಹೆಚ್ಚು ಕಾಲ ಮಂಡ್ಯ ಹಾಗೂ ಮೈಸೂರು ಪೊಲೀಸರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದವರು ಇಬ್ಬರು ವಿದೇಶಿ ವಿದ್ಯಾರ್ಥಿಗಳು ಹಾಗೂ ಅವರ ಜತೆಗಾತಿಯರಿಬ್ಬರು ಈಗ ಪೊಲೀಸರ ಅತಿಥಿಗಳು. ರಿಪಬ್ಲಿಕ್ ಆಫ್ ಯಮೆನ್ ದೇಶದ ಅಬ್ದುಲ್ ಮಲ್ಲಿಕ್(೨೯), ಮಹಮ್ಮದ್ ಅಲಿ (೨೩) ಹಾಗೂ ಮಣಿಪುರದ ಸೀಟಾ (೨೬), ರೆನ್ಯಾ (೨೪)ಬಂಧಿತ ಆರೋಪಿಗಳು.

ಮೈಸೂರು ಜಿಪಂ: ಆದಾಯ ಪ್ರಮಾಣ ಪತ್ರ ರದ್ದು ರಾಜಕೀಯ

ಕುಂದೂರು ಉಮೇಶಭಟ್ಟ ಮೈಸೂರು
ಮೈಸೂರು ಜಿಲ್ಲಾಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಇನ್ನು ನಾಲ್ಕು ದಿನ ಉಳಿದಿರುವಾಗ ಆದಾಯ ಪ್ರಮಾಣ ಪತ್ರ ರಾಜಕೀಯ ಶುರುವಾಗಿದೆ.
ಇಲವಾಲ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜಾ.ದಳ ಸದಸ್ಯೆ ಭಾಗ್ಯ ಶಿವಮೂರ್ತಿ ಅವರ ಆದಾಯ ಪ್ರಮಾಣ ಪತ್ರವನ್ನು ಮೈಸೂರು ತಹಸೀಲ್ದಾರ್ ರದ್ದುಪಡಿಸಿದ್ದು ಇಂಥದೊಂದು ರಾಜಕೀಯಕ್ಕೆ ಅವಕಾಶ ಮಾಡಿಕೊಟ್ಟಿದೆ.
ಜಿಲ್ಲಾ ಪಂಚಾಯಿತಿ ಮೊದಲ ೨೦ ತಿಂಗಳ ಅಧ್ಯಕ್ಷ ಸ್ಥಾನ ಬಿಸಿಎಂ ಬಿ ಮಹಿಳೆಗೆ ಮೀಸಲಾಗಿದ್ದು ಫೆ.೧೧ರಂದು ಚುನಾವಣೆ ನಡೆಯಲಿದೆ. ಈ ಮೀಸಲಿನಡಿ ಗೆದ್ದವರು ಬಿಜೆಪಿಯ ಮಂಜುಳಾ ಪುಟ್ಟಸ್ವಾಮಿ ಮಾತ್ರ. ಆದರೆ ಆದಾಯದ ಲೆಕ್ಕಾಚಾರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಕಾಂಗ್ರೆಸ್‌ನ ಇಬ್ಬರು ಹಾಗೂ ಜಾ.ದಳದ ನಾಲ್ವರಿಗೆ ಅವಕಾಶವಿದೆ. ಈ ನಡುವೆ ಜಾ.ದಳ ಸದಸ್ಯರೊಬ್ಬರ ಆದಾಯ ಪ್ರಮಾಣ ಪತ್ರ ರದ್ದಾಗಿರು ವುದು ಕುತೂಹಲಕ್ಕೆ ಎಡೆ ಮಾಡಿದೆ. ಇದರ ಹಿಂದೆ ಬಿಜೆಪಿ ಕೈವಾಡ ಇರ ಬಹುದೇ ಎನ್ನುವ ಗುಮಾನಿ ಜಾ.ದಳ-ಕಾಂಗ್ರೆಸ್‌ನಲ್ಲಿ ವ್ಯಕ್ತವಾಗಿದೆ.

ತ್ಯಾಜ್ಯ, ಚರಂಡಿ, ರಸ್ತೆ ಮುಖ್ಯ ಸಮಸ್ಯೆ

ಪ್ರಥಮ ಬಾರಿಗೆ ನಗರಸಭೆ ಸದಸ್ಯರಾಗಿ  ಆಯ್ಕೆಯಾಗಿರುವ ಯುವ ಸದಸ್ಯ ಬಿ.ಪಿ. ಪ್ರದೀಪ್ ಪ್ರಾಮಾಣಿಕತೆ ಮತ್ತು ನೇರ ನಡೆನುಡಿಗೆ ಪ್ರಖ್ಯಾತಿ. ಆರ್‌ಎಸ್‌ಎಸ್ ಸ್ವಯಂಸೇವಕನಾಗಿ ಬಿಜೆಪಿ ಸಿದ್ಧಾಂತಕ್ಕೆ ಹೆಚ್ಚಿನ ಒತ್ತು ನೀಡುವ ಯುವಕ. ಸಾಮಾನ್ಯ ಸಭೆಯಲ್ಲಿ ತನಗೆ ಮಾತನಾಡಬೇಕು ಅನಿಸಿದ್ದನ್ನು ನೇರವಾಗಿ ಹೇಳುವುದನ್ನು ರೂಢಿಸಿಕೊಂಡಿದ್ದಾರೆ. ತನ್ನ ನಿಲುವು ಮತ್ತು ಅಭಿಪ್ರಾಯ ವ್ಯಕ್ತ ಪಡಿಸಲು ಯಾರ ಮುಲಾಜಿಗೂ ಒಳಗಾಗದ ಸದಸ್ಯ.

ಕಣ್ಣು-ಕಿವಿ ಇಲ್ಲದ ಕಲಾಮಂದಿರ ಕಂಡಿರಾ...

ಕುಂದೂರು ಉಮೇಶಭಟ್ಟ ಮೈಸೂರು
ಕಲಾಮಂದಿರ ಬಳಕೆಗೆ ಲಭ್ಯವಿದೆ. ಆದರೆ ಕಣ್ಣು-ಕಿವಿ ಇಲ್ಲದೇ....
ಇದೇನು ಹೀಗೆ ಎಂದು ಹುಬ್ಬೇರಿಸಬೇಡಿ. ಕಲಾಮಂದಿರದಲ್ಲಿ ಕಾರ್‍ಯಕ್ರಮ ನಡೆಸಲು ಅವಕಾಶವಿದೆ. ಆದರೆ ಬೆಳಕು ಹಾಗೂ ಧ್ವನಿಯ ವ್ಯವಸ್ಥೆ ಇಲ್ಲ. ಇದನ್ನೆಲ್ಲಾ ಹೊರಗಡೆಯಿಂದಲೇ ತರಬೇಕು..
ಸದ್ಯದ ಪರಿಸ್ಥಿತಿ ನೋಡಿದರೆ ದಸರೆವರೆಗೂ ಕಲಾಮಂದಿರ ಸುಸ್ಥಿತಿಗೆ ಬರುವ ಸಾಧ್ಯತೆ ಕಡಿಮೆ. ರಿಪೇರಿ ನೆಪದಲ್ಲಿ ವರ್ಷದ ಹಿಂದೆಯೇ ಕಲಾಮಂದಿರದಲ್ಲಿ ಕಾರ್‍ಯಕ್ರಮ ಸ್ಥಗಿತಗೊಳಿಸಲಾಗಿತ್ತು. ಆದರೆ ಕಟ್ಟಡದ ನವೀಕರಣಕ್ಕೆ ಸರಕಾರದ ಅನುಮತಿ ಸಿಕ್ಕಿದ್ದು ಕಳೆದ ವಾರ !.
ಸುಮಾರು ೧.೪೮ ಕೋಟಿ ರೂ. ವೆಚ್ಚದಲ್ಲಿ ಕಲಾಮಂದಿರದ ಧ್ವನಿ ಹಾಗೂ ಬೆಳಕಿನ ಸುಧಾರಣೆ ಸೇರಿದಂತೆ ನವೀಕರಣಕ್ಕೆ ಅನುಮತಿ ದೊರೆತಿರುವುದು ಖಚಿತವಾಗಿದೆ. ವರ್ಷದ ಹಿಂದೆಯೇ ನವೀಕರಣದ ಮಾತನಾಡುತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜನರಿಗೆ ಮಂಕುಬೂದಿ ಎರಚಿರುವುದು ಬಹಿರಂಗವಾಗಿದೆ.
ಧ್ವನಿ-ಬೆಳಕಿನ ಕೊರತೆ: ಕಡಿಮೆ ಖರ್ಚಿನಲ್ಲಿ ಕಾರ್‍ಯಕ್ರಮ ನಡೆಸಲಿ ಎಂಬ ವಿಶಾಲ ಮನೋಭಾವದಿಂದ ಸರಕಾರ ನಿರ್ಮಿಸಿದ ಕಲಾಮಂದಿರವಿದು. ಮೈಸೂರಿನಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆದ ಸವಿನೆನಪಿಗೆ ೪ ಕೋಟಿ ರೂ. ವೆಚ್ಚದಲ್ಲಿ ಬೃಹತ್ ಕಟ್ಟಡ ತಲೆ ಎತ್ತಿದೆ. ಪ್ರತಿ ವರ್ಷದ ಸಣ್ಣಪುಟ್ಟ ನಿರ್ವಹಣೆಯೊಂದಿಗೆ ಕಲಾಮಂದಿರ ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಲೇ ಇದೆ.

ಲಂಚಕೋರರಿಗೆ ಲೋಕಾಯುಕ್ತ ಛಾಟಿ ಏಟು

ಆರ್.ಕೃಷ್ಣ ಮೈಸೂರು
ಹಲ್ಲಿಲ್ಲದ ಲೋಕಾಯುಕ್ತದಿಂದ ಏನು ಮಾಡಲು ಸಾಧ್ಯ ಎನ್ನುವವರಿಗೆ ಇಲ್ಲಿದೆ ಉತ್ತರ.
ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದವರಷ್ಟೇ ಅಲ್ಲ, ಮಿತಿಮೀರಿದ ಆಸ್ತಿ ಸಂಪಾದನೆ ಮಾಡಿದವರಿಗೆ  ಈಗ ಛಾಟಿ ಏಟು ಬೀಳ ತೊಡಗಿದೆ.

ಗ್ರಾಮೀಣ ಪ್ರದೇಶದಲ್ಲೂ ಹೆಚ್ಚುತ್ತಿದೆ ಶಿಕ್ಷಣದ ಖಾಸಗೀಕರಣ!

 ಚೀ. ಜ. ರಾಜೀವ ಮೈಸೂರು
ಹಳ್ಳಿಯಲ್ಲಿರುವ ಸ್ಥಿತಿವಂತ ಕುಟುಂಬಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲು ತುದಿಗಾಲಲ್ಲಿ ನಿಂತಿವೆಯೇ? ಗ್ರಾಮೀಣ ಪ್ರದೇಶದ ಸರಕಾರಿ ಶಾಲೆ ಗಳಲ್ಲಿ  ಮಕ್ಕಳ  ದಾಖಲಾತಿ ಪ್ರಮಾಣ ಕಡಿಮೆಯಾಗು ತ್ತಿದೆಯೇ ? 
ಕರ್ನಾಟಕ ರಾಜ್ಯ(ಗ್ರಾಮೀಣ) ಶೈಕ್ಷಣಿಕ ಸ್ಥಿತಿಗತಿಗಳ ವಾರ್ಷಿಕ ವರದಿ-ಆಸರ್(ಆನುಯಲ್ ಸ್ಟೇಟಸ್ ಆಫ್ ಎಜುಕೇಶನ್ ರಿಪೋರ್ಟ್) ಮೇಲೆ ಕಣ್ಣಾಡಿಸಿದರೆ,  ಇಂಥದ್ದೊಂದು ಅನುಮಾನ ಕಾಡುತ್ತದೆ.

ನಮಗೂ ನೀರು ಕೊಡಿ...ಪ್ಲೀಸ್...

ಎಚ್.ಕೆ.ನಾಗೇಶ ಮೈಸೂರು
ಬಳಲಿ ಬಾಯಾರಿದ್ದೇವೆ ಒಂದಷ್ಟು ನೀರು ಕೊಡಿ...ಬರೀ ಗಾಳಿ ಬೆಳಕಿನಿಂದಷ್ಟೇ  ನಾವು ಬದುಕಲು ಸಾಧ್ಯವಿಲ್ಲ. ನಮಗೆ ಈಗ ನೀವು ನೀರುಣಿಸಿದರೆ ಮುಂದಿನ ದಿನಗಳಲ್ಲಿ ನಾವು ನಿಮಗೆ ನೀರು ಕೊಡಲು ಸಹಾಯವಾದೀತು. ಈಗ  ನಮ್ಮನ್ನು ತಾತ್ಸಾರ  ಮಾಡಿದರೆ  ಮುಂದೊಂದು ದಿನ ನೀವೂ ನಮ್ಮ ಹಾಗೆ ನೀರಿಗಾಗಿ ಪರಿತಪಿಸಬೇಕಾಗಬಹುದು.

ಎಂಬಿಬಿಎಸ್ ಪರಿಷ್ಕರಣೆಗೆ ವೈದ್ಯರ ವಿರೋಧ

ಎಂಬಿಬಿಎಸ್ ಪರಿಷ್ಕರಣೆಗೆ ವೈದ್ಯರ ವಿರೋಧ
 ಚೀ. ಜ. ರಾಜೀವ ಮೈಸೂರು
`ಯಾಕೆ ಬೇಕು ?, ಯಾರಿಗೆ ಬೇಕು ಈ ಮೂರೂವರೆ ವರ್ಷದ ಮೆಡಿಕಲ್ ಕೋರ್ಸ್ ?'
`ಕಿವಿ-ಮೂಗು-ಗಂಟಲು(ಇಎನ್‌ಟಿ), ನೇತ್ರ, ಮೂಳೆ, ಚರ್ಮ, ವಿಧಿ-ವಿಜ್ಞಾನ ವಿಷಯಗಳನ್ನು ಕಲಿಯದಿದ್ದರೆ, ವೈದ್ಯ ಪರಿಪೂರ್ಣನಾಗಲು ಹೇಗೆ ಸಾಧ್ಯ ?' 
ಈ ಎರಡು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ವೈದ್ಯ ಸಮುದಾಯ ಬಿಸಿ-ಬಿಸಿ ಚರ್ಚೆಯಲ್ಲಿ ಮಗ್ನವಾಗಿದೆ. ವೈದ್ಯ ಶಿಕ್ಷಣ ಪದವಿಗೆ ಸಂಬಂಧಿಸಿದಂತೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ  ವ್ಯವಸ್ಥಾಪನ ಮಂಡಳಿ ಸದಸ್ಯರು(ಬೋರ್ಡ್ ಆಫ್ ಗವರ್ನರ್‍ಸ್) ನೀಡಿರುವ ಕೆಲವು ಶಿಫಾರಸುಗಳು(ಉದ್ದೇಶಿತ ವಿಷನ್ -೨೦೧೫ ಡಾಕ್ಯೂಮೆಂಟ್) ವೈದ್ಯರು ಹಾಗೂ ವೈದ್ಯ ಸಂಘಟನೆಗಳ ತಲೆ ಬಿಸಿ ಮಾಡಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಈ ಬಗ್ಗೆ  ಸಾರ್ವಜನಿಕವಾಗಿ ತನ್ನ ಆಕ್ಷೇಪ ವ್ಯಕ್ತಪಡಿಸಿ, ಅದನ್ನು ಚರ್ಚೆಗೆ ಒಳಪಡಿಸಿದೆ. ಕೆಲವು ಶಿಫಾರಸುಗಳ ಬಗ್ಗೆ ವೈದ್ಯ ಕಾಲೇಜುಗಳ ಅಧ್ಯಾಪಕರು ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೆ, ಫೆ. ೫ರಂದು ದೇಶಾದ್ಯಂತ ಕಪ್ಪು ಬ್ಯಾಡ್ಜ್ ಧರಿಸಿ ಪ್ರತಿಭಟನೆ ದಾಖಲಿಸುತ್ತಿದ್ದಾರೆ.  ವೈದ್ಯರು ಈ ಪರಿ ತುಮುಲಗೊಳ್ಳಲು ಕಾರಣವಾದ ಸಂಗತಿಗಳತ್ತ ಒಂದು ನೋಟ ಇಲ್ಲಿದೆ.

ಪಕ್ಷಿಗಳ ಪ್ರೇಮ ಪಲ್ಲವಿ

ಲೋಕೇಶ್ ನೀರಬಿದಿರೆ ಮೈಸೂರು
ಶ್ಶ್...! ನೀವು ಕುಕ್ಕರಹಳ್ಳಿಕೆರೆಗೆ ವಾಕಿಂಗ್ ಅಥವಾ ಪರಿಸರ ವೀಕ್ಷಣೆಗೆ ಬಂದಿದ್ದೀರಾ? ಹಾಗಾದರೆ ನಿಶ್ಶಬ್ದವಾಗಿರಿ. `ಪ್ರೇಮಿ' ಗಳಿದ್ದಾರೆ, `ಪ್ರಣಯ'ಕ್ಕೆ ಡಿಸ್ಟರ್‍ಬ್ ಮಾಡಬೇಡಿ...!
ಅರೆ, ಮೈಸೂರು ವಿವಿ ಕ್ರಮ ಕೈಗೊಂಡ ನಂತರವೂ ಕೆರೆಯಂಗಳಕ್ಕೆ ಪ್ರೇಮಿಗಳು ಬರುತ್ತಾರಾ ಎಂದು ಹುಬ್ಬೇರಿಸಬೇಡಿ. ಇದು `ಲವ್ ಬರ್ಡ್ಸ್' ಕಥೆ. ವಂಶಾಭಿವೃದ್ಧಿಗಾಗಿ ದೇಶ ವಿದೇಶಗಳ ಹಲವು ಬಗೆಯ ನೂರಾರು ಪಕ್ಷಿಗಳು ಕೆರೆಯಾವರಣದಲ್ಲಿ ಬೀಡು ಬಿಟ್ಟಿವೆ. ಈ ಬಾರಿ ತುಸು ಹೆಚ್ಚೇ ಎನ್ನಬಹುದು. ಕೆರೆಯಂಗಳದ ನಡುಗಡ್ಡೆಯಲ್ಲಿ ಪೈಂಟೆಡ್ ಸ್ಟಾರ್ಕ್, ಪೆಲಿಕಾನ್(ಹೆಜ್ಜಾರ್ಲೆ), ಸ್ಪೂನ್ ಬಿಲ್, ಓಪನ್‌ಬಿಲ್ ಸ್ಟಾರ್ಕ್, ಕಾರ್ಮೊರೆಂಟ್ ಮತ್ತಿತರ ಪಕ್ಷಿಗಳ `ಗಾನಬಜಾನ' ನಿತ್ಯನೂತನ. ಜತೆಗೆ ಪ್ರೀತಿ, ಪ್ರೇಮ, ಪ್ರಣಯ..., ಮಿಲನಮಹೋತ್ಸವ..!

ಸುತ್ತೂರು ಜಾತ್ರೆಯಲ್ಲಿ `ಕೃಷಿ ಮೇಳ' ಆಕರ್ಷಣೆ

 ಜೆ.ಶಿವಣ್ಣ ಮೈಸೂರು
ಗ್ರಾಮೀಣ ಸೊಗಡಿನ ಪ್ರತಿಬಿಂಬವಾದ `ಸುತ್ತೂರು ಜಾತ್ರೆ'ಯ ಪ್ರಮುಖ ಆಕರ್ಷಣೆ ವಸ್ತುಪ್ರದರ್ಶನ.
ಕೃಷಿ, ವೈದ್ಯಕೀಯ, ಆರೋಗ್ಯ, ತಾಂತ್ರಿಕ ವಿಜ್ಞಾನ, ತಂತ್ರಜ್ಞಾನ ಎಲ್ಲ ವನ್ನೂ ಒಳಗೊಂಡು ವಿಶಾಲ ಅಂಗಳ ದಲ್ಲಿ ಜ್ಞಾನದ ಅಕರಗಳನ್ನು ತೆರೆದಿಟ್ಟು ಜಾಗೃತಿ ಮೂಡಿಸಲಾಗಿದೆ. ಜನರು ಸರದಿ ಸಾಲಿನಲ್ಲಿ ನಿಂತು ಎರಡು ರೂ. ಪ್ರವೇಶ ಶುಲ್ಕ ಪಾವತಿಸಿ ವೀಕ್ಷಿಸುತ್ತಿರುವುದು ಪ್ರದರ್ಶನದ ಆಕರ್ಷಣೆಗೆ ಸಾಕ್ಷಿ.
ಅದರಲ್ಲೂ ಕೃಷಿ ಜ್ಞಾನ ಇಂಗಿಸುವ ಕೃಷಿ ಮೇಳ ಪ್ರದರ್ಶನಕ್ಕೆ ಕಳೆ ತಂದಿದೆ. ಒಂದೆಕರೆಯಲ್ಲಿ `ಕೃಷಿ ಬ್ರಹ್ಮಾಂಡ' ಅದರ ಲ್ಲೊಂದು. ಅಷ್ಟು ಮಾತ್ರವಲ್ಲ, ವ್ಯವಸಾಯ ಸರಳಗೊಳಿಸುವ ಹೊಸ ತಂತ್ರಜ್ಞಾನದ ಕೃಷಿ ಯಂತ್ರೋಪಕರಣಗಳು, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಔಷಧಗಳು ಪ್ರದರ್ಶನದಲ್ಲಿದ್ದು, ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.

ಜೆಎಸ್‌ಎಸ್ ವಸ್ತುಸಂಗ್ರಹಾಲಯ

ವೀಕೃತಗೊಂಡಿರುವ ಜೆಎಸ್‌ಎಸ್ ವಸ್ತುಸಂಗ್ರಹಾಲಯದ ಒಳ ಹೊಕ್ಕರೆ ಧರ್ಮ, ಅಧ್ಯಾತ್ಮ, ಜನಪದ ಸಂಸ್ಕೃತಿಯ ದರ್ಶನವಾಗುತ್ತದೆ.
ಅಷ್ಟು ಮಾತ್ರವಲ್ಲ ಶ್ರೀಮಠದ ಗುರು ಪರಂಪರೆ ದರ್ಶನವೂ ಆಗುತ್ತದೆ. ಸುತ್ತೂರು ಶ್ರೀಮಠವನ್ನು ಮುನ್ನಡೆಸಿದ ಹಿರಿಯ ಶ್ರೀಗಳು ಬಳಸುತ್ತಿದ್ದ ವಸ್ತ್ರಗಳು, ಕುರ್ಚಿ, ಮೇಜು, ಕನ್ನಡಕ, ಪಾದುಕೆ, ಪುಟ್ಟ ಮರದ ಪೆಟ್ಟಿಗೆಗಳು ಇಲ್ಲಿವೆ. ಶ್ರೀಗಳ ಛಾಯಾಚಿತ್ರಗಳು, ತೈಲವರ್ಣದ ಚಿತ್ರಗಳು, ಕೈಬರಹದ ಪುಸ್ತಕಗಳು, ಪ್ರಮುಖವಾಗಿ ಜಗದ್ಗುರುಗಳು ಬಳಸುತ್ತಿದ್ದ ಆಸನಗಳು, ಚೆಂದದ ಚಿತ್ತಾರದ ಮೇನೆ ಮತ್ತು ಬಂಡಿ ಗಮನ ಸೆಳೆಯುತ್ತವೆ. ಅಲ್ಲದೇ, ಗುರುಪರಂಪರೆಗೆ ಸಂಬಂಧಿಸಿದಂತೆ ಅನೇಕ ಐತಿಹಾಸಿಕ ದಾಖಲೆಗಳಾದ ಶಿಲ್ಪಗಳು ಮತ್ತು ಶಾಸನಗಳು ಪ್ರದರ್ಶನದಲ್ಲಿವೆ.

ರಾಜಸ್ಥಾನದ ಕಮ್ಮಾರರಿಗೆ ಕಾಯಕವೇ ಕೈಕಾಸು

ವಿಕ ವಿಶೇಷ ಕೃಷ್ಣರಾಜನಗರ
ಒಂದೆಡೆ ತಮ್ಮ  ದಿನದ ಕೂಳಿಗ ಬೆವರು ಹರಿಸುವ ಪೋಷಕರು, ಮತ್ತೊಂದೆಡೆ  ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಿಲ್ಲದೆ ಪೋಷಕರಿಗೆ ನೆರವಾಗುತ್ತ ದಿನದೂಡುತ್ತಿರುವ ಮಕ್ಕಳು, ಇವೆರಡರ ಪರಿವೆ ಇಲ್ಲದೆ ಪರಿಕರಗಳನ್ನು ಹೇಗೆ ತಯಾರು ಮಾಡುತ್ತಾರೆ ಎಂದು ನೋಡಲು ಮುಗಿಬೀಳುವ ಸ್ಥಳೀಯರು....
ಇದು ಪುರಸಭೆ ಬಯಲು ರಂಗಮಂದಿರ ಮೈದಾನದಲ್ಲಿ ತಮ್ಮ ಕೈಚಳಕದಿಂದ ಜನತೆಯನ್ನು ತಮ್ಮತ್ತ ಸೆಳೆಯುತ್ತಿರುವ ರಾಜಸ್ಥಾನದ ಚಿತ್ತೋಡ್ ಜಿಲ್ಲೆಯ ಕಮ್ಮಾರಿಕೆ ಕೆಲಸ ಮಾಡುವವರ ದೈನಂದಿನ ಬದುಕಿನ ಚಿತ್ರಣ.