ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶೇಷಾಧಿಕಾರಿ

 ಅರವಿಂದ ನಾವಡ ಮೈಸೂರು
ಕನ್ನಡ ಸಂಸ್ಕೃತಿ ಇಲಾಖೆಯ ಅಧ್ಯಕ್ಷತೆಯಲ್ಲಿ ಮಲಗಿ ಕೊಂಡೇ ಇದ್ದ ವಿಶ್ವ ಕನ್ನಡ ಸಮ್ಮೇಳನ ಸಿದ್ಧತೆಗೆ ಕೊನೆಗೂ ಚಾಟಿ ಬೀಸಿರುವ ರಾಜ್ಯ ಸರಕಾರ, ದಿಢೀರನೇ ಇಡೀ ಸಮ್ಮೇಳನ ವ್ಯವಸ್ಥೆಯ ಉಸ್ತುವಾರಿಗೆ ವಿಶೇಷಾಧಿಕಾರಿ ಯನ್ನು ನೇಮಿಸಿದೆ.
ವೈದ್ಯ ಶಿಕ್ಷಣ ಕಾರ್‍ಯದರ್ಶಿಯಾಗಿರುವ ಐ.ಎಂ. ವಿಠ್ಠಲಮೂರ್ತಿಯವರಿಗೆ ಈ ಹೊಣೆ ವಹಿಸಿದ್ದು, ಹೇಗಾದರೂ ಮಾಡಿ ಯಶಸ್ವಿ ಸಮ್ಮೇಳನ ಸಂಘಟಿಸಿದ ಕೀರ್ತಿ ಪಡೆಯಲು ಸರಕಾರ ಗಡ್ಡಕ್ಕೆ ಬೆಂಕಿ ಹೊತ್ತಿದ ಮೇಲಾದರೂ ಬಾವಿ ತೋಡಿದೆ. `ರೆಸ್ಕ್ಯೂ ಆಪರೇಷನ್' ಶುರು ಮಾಡಿರುವ ಸರಕಾರ, ಸಮ್ಮೇಳನದ ಯಶಸ್ವಿಗೆ ಯಾವ ಕ್ರಮಗಳನ್ನಾದರೂ ಕೈಗೊಳ್ಳಲು ನಿರ್ಧರಿಸಿದೆ. ಜತೆಗೆ ವಿಶೇಷಾಧಿಕಾರಿಗೆ ಸಂಬಂಧಪಟ್ಟ ಎಲ್ಲ ಅಧಿಕಾರ ಗಳನ್ನೂ ನೀಡಲು ತೀರ್ಮಾನಿಸಲಾಗಿದೆ. ಈ ಎಲ್ಲ ಕ್ರಮಗಳೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರೂ ಸೇರಿದಂತೆ ಅವರ ಆಪ್ತ ಕೆಲ ಅಧಿಕಾರಿ ಗಳಿಗೆ ತೀರಾ ಮುಜುಗರ ಉಂಟುಮಾಡಿದೆ.
ಮಾರ್ಚ್ ೧೨ ರಿಂದ ೧೪ ರವರೆಗೆ ಬೆಳಗಾವಿಯಲ್ಲಿ ಸಮ್ಮೇಳನ ನಡೆಯಲಿದೆ. ರಾಜ್ಯದ ಇತಿಹಾಸದಲ್ಲೇ ಇದು ಎರಡನೇ ವಿಶ್ವ ಕನ್ನಡ ಸಮ್ಮೇಳನ. ಮೊದಲ ಸಮ್ಮೇಳನ ೧೯೮೫ ರಲ್ಲಿ  ಮೈಸೂರಿನಲ್ಲಿ ನಡೆದಿತ್ತು. ಆಗಲೂ ಆರಂಭದಲ್ಲಿ ವಿಶ್ವ ಕನ್ನಡ ಸಮ್ಮೇಳನ ಸಿದ್ಧತೆಗೆ ಹೆಚ್ಚುವರಿ ನಿರ್ದೇಶಕರಾಗಿ ನೇಮಕವಾಗಿದ್ದ ಐ.ಎಂ. ವಿಠ್ಠಲಮೂರ್ತಿ ಯವರೇ ಈ ಬಾರಿಯೂ `ರೆಸ್ಕ್ಯೂ ಆಪರೇಷನ್'ಗೆ ಮುಂದಾಗಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಕಾಳಜಿ ತೋರಿದ್ದಾರೆ. ಮೊದಲ ಸಮ್ಮೇಳನಕ್ಕೆ ಪ್ರಾಥಮಿಕ ಕೆಲಸಗಳನ್ನು ವಿಠಲಮೂರ್ತಿ ಪೂರೈಸಿದ್ದರೂ, ಸಮ್ಮೇಳನದ ಸಂದರ್ಭದಲ್ಲಿ ಆ ಹುದ್ದೆಯಲ್ಲಿರಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ