ರಗಳೆ ಮುಗೀತು: ಇನ್ನು ಯುಗಳ ಗೀತೆ

* ಪಿ.ಓಂಕಾರ್/ಕುಂದೂರು ಉಮೇಶಭಟ್ಟ ಮೈಸೂರು
`ರಾಜಕಾರಣವೇ ಹಾಗೆ. ಯಾವಾಗ ಏನು ಬೇಕಾದರೂ ಆಗಬಹುದು. ಯಾರೂ ಕಾಯಂ ಶತ್ರುಗಳಲ್ಲ,ಮಿತ್ರರೂ ಅಲ್ಲ' ಎನ್ನುವುದು ಪ್ರಸ್ತುತದ ರಾಜಕೀಯಕ್ಕೆ, ರಾಜಕಾರಣಿಗಳಿಗೆ ರಕ್ಷಣಾಸ್ತ್ರ. 
ವೈರಿಗಳಾಗಿದ್ದವರು, ಹಾದಿ ಬೀದಿಯಲ್ಲಿ ನಿಂತು ಬೈಯ್ದಾಡಿಕೊಂಡು ಪರಸ್ಪರ ಬೆತ್ತಲಾದವರು ಮುಂದೊಂದು ದಿನ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡಬಹುದು. ಅಧಿಕಾರ ಹಂಚಿಕೊಳ್ಳಬಹುದು ಎನ್ನುವುದು ಹಲವು ಬಾರಿ ಋಜುವಾತಾಗಿದೆ. ಆಗೆಲ್ಲ, ಇದೇ `ಸೂತ್ರ'ವೇ ರಕ್ಷಣೆ ನೀಡಿದೆ. ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ರಾಜಕೀಯ ವಿದ್ಯಮಾನ  ಈ ಬಾಬ್ತಿಗೆ ಮತ್ತೊಂದು ಉದಾಹರಣೆ.
ಬಿಜೆಪಿ-ಜಾ.ದಳ `ಯುಗಳ ಗೀತೆ' ಹಾಡಿದ್ದು, ಅ?ಕಾರ ಕೊಡುವ- ಬಿಡುವ ವಿಚಾರದಲ್ಲಿ `ವಿಚ್ಛೇದನ' ಪಡೆದು,ಹಾದಿ ಬೀದಿ ರಂಪ ಮಾಡಿದ್ದು, ಕೆಲ ತಿಂಗಳಿಂದ ಮುಖ್ಯಮಂತ್ರಿ ವಿರುದ್ಧವೇ `ದಳ'ಪತಿ ತೊಡೆ ತಟ್ಟಿ ನಿಂತದ್ದು,ಮುಖ ಕೊಟ್ಟು ಮಾತನಾಡದಷ್ಟು ಸಂಬಂಧ ಕೆಡಿಸಿಕೊಂಡಿದ್ದು ಎಲ್ಲವೂ ಇತ್ತೀಚಿನ  ಇತಿಹಾಸ.
ಇದೇ ಕಾರಣಕ್ಕೆ,ಅತಂತ್ರ ಸ್ಥಿತಿಗೆ ಜಾರಿದ ಮೈಸೂರು ಜಿಲ್ಲಾ ಪಂಚಾಯಿತಿ ಯಲ್ಲಿ ಕಾಂಗ್ರೆಸ್-ಜಾ.ದಳ ಹೊಂದಾಣಿಕೆಯೇ `ಗತಿ' ಎಂದು, ೮ ಸ್ಥಾನ ಹೊಂದಿದ್ದ ಬಿಜೆಪಿ ಅಧಿಕಾರದ ಕನಸನ್ನೂ ಕಾಣಲಾರದೆಂದು ರಾಜಕೀಯ ವಲಯ ಭಾವಿಸಿತ್ತು.ಆದರೆ,`ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು' ಎನ್ನುವ  ಸೂತ್ರವೇ `ವರ'ವಾಗಿ ಜಿಲ್ಲೆಯ ಮಟ್ಟಿಗೆ ಮತ್ತೊಮ್ಮೆ ಬಿಜೆಪಿ-ಜಾ.ದಳಗಳ `ಯುಗಳ ಗೀತೆ 'ಗೆ ವೇದಿಕೆ ಸಜ್ಜಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ