ಮಾರುಕಟ್ಟೆಗಳಿಗೆ ಮರು ಜೀವ

ವಿಕ ವಿಶೇಷ ಮೈಸೂರು
ನಗರದ ಮೂರು ಮಾರುಕಟ್ಟೆಗಳನ್ನು ಖಾಸಗಿ ಸಂಸ್ಥೆಗಳ ನೆರವಿ ನೊಂದಿಗೆ ಪಿಪಿಪಿ(ಪಬ್ಲಿಕ್-ಪ್ರೈವೇಟ್ ಪಾಟ್ನರ್‌ಶಿಪ್) ಮಾದರಿ ಯಲ್ಲಿ ಹೊಸದಾಗಿ ನಿರ್ಮಿಸಲು ಪಾಲಿಕೆ ಚಿಂತನೆ ನಡೆಸಿದೆ.
ಹೃದಯ ಭಾಗದ ದೇವರಾಜ ಮಾರುಕಟ್ಟೆ , ಅಗ್ರಹಾರ ವೃತ್ತದ ವಾಣಿ ವಿಲಾಸ ಮಾರುಕಟ್ಟೆ ಹಾಗೂ ಮಂಡಿ ಮೊಹಲ್ಲಾದ ಮಂಡಿ ಮಾರುಕಟ್ಟೆಯನ್ನು ಅವುಗಳ ಪಾರಂಪರಿಕತೆಗೆ ತಕ್ಕಂತೆ, ಹೊಸದಾಗಿ ನಿರ್ಮಿಸುವ ಆಲೋಚನೆಗೆ ಮತ್ತೆ ಜೀವ ಬಂದಿದೆ.
ಜವಾಹರ್‌ಲಾಲ್ ನೆಹರು ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆ(ಜೆಎನ್-ನರ್ಮ್)ಯಡಿ ದೇವರಾಜ ಮಾರುಕಟ್ಟೆ ಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು. ಆದರೆ, ಈಗ ಏಕಾಏಕಿ ನರ್ಮ್ ಯೋಜನೆಯನ್ನು ಮರೆತು, ಪಿಪಿಪಿ ಮಾದರಿಯ ಮಾತುಗಳನ್ನು ಆಡುತ್ತಿರುವುದು ವಿಶೇಷ.

ಎಚ್‌ಐವಿ ಪ್ರಮಾಣ ಇಳಿಮುಖ

ವಿಕ ಸುದ್ದಿಲೋಕ ಮೈಸೂರು
ಇದೊಂದು ಸಮಾಧಾನಕರ ಸುದ್ದಿ. ಎಚ್‌ಐವಿಯೊಂದಿಗೆ ಜೀವಿಸುವವರ ಸಂಖ್ಯೆ ಮೈಸೂರು ಜಿಲ್ಲೆಯಲ್ಲಿ  ಇಳಿಮುಖವಾಗುತ್ತಿದೆ.
೨೦೦೮ರಲ್ಲಿ  ಜಿಲ್ಲೆಯಲ್ಲಿದ್ದ  ಎಚ್‌ಐವಿ ಬಳಗದವರ ಸಂಖ್ಯೆ ಶೇ. ೧೧ರಷ್ಟಿತ್ತು. ಈ  ಅಂಕಿ-ಸಂಖ್ಯೆಗೆ ಹೋಲಿಸಿದರೆ, ೨೦೧೦ರ ಅಂತ್ಯದ ವೇಳೆಗೆ ಅವರ ಸಂಖ್ಯೆ ಶೇ ೫.೧೮ಕ್ಕೆ ಇಳಿದಿದೆ.  ೨೦೦೯ರಲ್ಲಿ  ಇವರ ಪ್ರಮಾಣ ಶೇ. ೮.೦೨ರಷ್ಟಿತ್ತು. ಸೋಂಕಿತ ಗರ್ಭಿಣಿಯರ ಸಂದರ್ಭದಲ್ಲಂತೂ- ಇಳಿಕೆ ಗಣನೀಯವಾಗಿದೆ. ೨೦೦೮ರಲ್ಲಿ  ಶೇ. ೦.೮೮, ೨೦೦೯ರಲ್ಲಿ ಶೇ. ೦.೩೨ರಷ್ಟಿದ್ದ ಪ್ರಮಾಣ ೨೦೧೦ರ ವೇಳೆಗೆ ಶೇ.೦.೨೭ಗೆ ಇಳಿದಿದೆ.
ಎಚ್‌ಐವಿ ಪಾಸಿಟಿವ್ ಹಾಗೂ ಏಡ್ಸ್ ಬಗ್ಗೆ   ನಡೆಸುತ್ತಿರುವ ಜಾಗೃತಿ, ಸಮಾಲೋಚನೆ, ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ, ಸೇವೆಯಂಥ ಕ್ರಮಗಳು ಇದೆಲ್ಲವನ್ನೂ ಸಾಧ್ಯವಾಗಿಸಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಟಿ.ರಘುಕುಮಾರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ೨೦೦೨ರಿಂದ ೨೦೦೯ರ ಅಕ್ಟೋಬರ್ ತನಕ ಸಾಮಾನ್ಯ ವರ್ಗದಲ್ಲಿ ಒಟ್ಟು ೧೩,೮೬೬ ಎಚ್‌ಐವಿ ಸೋಂಕಿತರನ್ನು, ಗರ್ಭಿಣಿಯರಲ್ಲಿ ೭೭೬ ಸೋಂಕಿತರನ್ನು  ಪತ್ತೆ ಹಚ್ಚಲಾಗಿದ್ದು, ಈ ಪೈಕಿ ೧೦,೦೦೦ ಸೋಂಕಿತರಿಗೆ  ಐಸಿಟಿಸಿ ಇಲ್ಲವೇ ಎಆರ್‌ಟಿ ಕೇಂದ್ರಗಳಲ್ಲಿ ಚಿಕಿತ್ಸೆ  ನೀಡ ಲಾಗುತ್ತಿದೆ ಎಂದರು.

ಹೆಸರಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿ !

ಗುರುಸ್ವಾಮಿ ಕೊಳ್ಳೇಗಾಲ
ತಾಲೂಕಿಗೆ ಸೇರಿದ ೧೨ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ (೨೧೨) ನವೀಕರಣ ಮುಗಿದು ೧೦ ತಿಂಗಳೂ ಕಳೆದಿಲ್ಲ. ಆದರೆ ವಾಹನ ಗಳು ಸಂಚರಿಸಲು ಸರ್ಕಸ್ ಮಾಡಬೇಕು.
ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ನುಣುಪಾಗಿದ್ದರೆ ಇದರ ಸ್ಥಿತಿ ಚಿಂತಾಜನಕ. ರಸ್ತೆಯಲ್ಲೆಲ್ಲ ಮಂಡಿ ಯುದ್ದದ ಹೊಂಡ, ಅಲ್ಲಲ್ಲಿ ಡಾಂಬರು ಕಿತ್ತು ಹೋಗಿದ್ದು, ಕೆಸರು ಗದ್ದೆಯಾಗಿದೆ. ರಸ್ತೆ ಬದಿ ನಡೆಯುವವರಿಗೆ ಕೆಸರಿನ ಸ್ನಾನ ತಪ್ಪಿದ್ದಲ್ಲ.
ಕೊಳ್ಳೇಗಾಲದ ಬಳಿಯ ಉತ್ತಂಬಳ್ಳಿ ಸಮೀಪದಿಂದ ಹೆದ್ದಾರಿ (೨೧೨) ಆರಂಭ. ಟಗರಪುರ ಬಳಿಯ ಚಾಮರಾಜ ನಗರ- ನರಸೀ ಪುರ ಮುಖ್ಯ ರಸ್ತೆ ಬಳಿ ಕೊನೆಗೊಳ್ಳು ತ್ತದೆ. ನಂತರ ಹೆದ್ದಾರಿ ನರಸೀಪುರ ಮಾರ್ಗ ವಾಗಿ, ಮೈಸೂರಿ ನತ್ತ ಹಾದುಹೋಗಿದೆ.
ತಾಂತ್ರಿಕತೆ ಬಳಸಿಲ್ಲ : ೧೨ ಕಿ.ಮೀ. ಉದ್ದಕ್ಕೂ ಹೆದ್ದಾರಿ ಗದ್ದೆಗಳ ಮಧ್ಯೆ ಹಾದುಹೋಗಿದೆ. ಈ ಮಾರ್ಗದಲ್ಲಿ ಉತ್ತಂಬಳ್ಳಿ, ಕುಂತೂರು, ಚಿಲಕವಾಡಿ, ಟಗರಪುರ ಮತ್ತು ಟಗರುಪುರ ಮೋಳೆ ಗ್ರಾಮ ಗಳಿವೆ. ಇದು ಕಪ್ಪು ಮಣ್ಣಿನ ಜೌಗು ಪ್ರದೇಶ. ಇಲ್ಲಿ ರಸ್ತೆ ನಿರ್ಮಾಣಕ್ಕೆ ಬಳಸುವ ತಾಂತ್ರಿಕತೆ ಬಳಸಿಯೇ ಇಲ್ಲ. ಹಾಗಾಗಿ ರಸ್ತೆ ಹಾಳು, ದುಡ್ಡೂ ಹಾಳು.

ಕದ್ದಮಾಲು `ಕೊಳ್ಳು'ವವರಿಗೆ ಪೊಲೀಸರ ಚಾಟಿ !

ವಿಕ ವಿಶೇಷ ಮೈಸೂರು
ಕಳ್ಳಮಾಲು ಗಿರವಿದಾರರಿಗೆ ಚಾಟಿ ಬೀಸಲು ನಗರ ಪೊಲೀಸರು ಸಜ್ಜಾಗಿದ್ದಾರೆ.
ಕದ್ದಮಾಲನ್ನು ಗಿರವಿ ಇಟ್ಟುಕೊಳ್ಳುವುದನ್ನೇ ದಂಧೆ ಮಾಡಿಕೊಂಡ ಕೆಲ ಗಿರವಿದಾರರಿಗೆ ಪೊಲೀಸರು ಈಗಾಗಲೇ ಬಿಸಿ ಮುಟ್ಟಿಸಿದ್ದಾರೆ. ಹಣ ಗಳಿಕೆಗೆ ಸುಲಭ ದಾರಿ ಕಂಡುಕೊಂಡಿದ್ದ  ಇಂಥವರ ಕಳ್ಳತನದ ಪ್ರೋತ್ಸಾಹಕ್ಕೆ ಕಡಿವಾಣ ಹಾಕಲು ಪೊಲೀಸರು ಹೆಜ್ಜೆ ಇಟ್ಟಿದ್ದಾರೆ.
ಕಳವು ಮಾಲನ್ನು ಮಾರಾಟವಾಗದಂತೆ ಎಚ್ಚರ ವಹಿಸಿದರೆ ಅರ್ಧ ಕಳ್ಳತನ ತಡೆಗಟ್ಟಿದಂತೆ ಎನ್ನುವ ಭಾವನೆ ಪೊಲೀಸರದ್ದು. ಇಷ್ಟು ದಿನ ಕಾಲ ಕಳವು ಮಾಲನ್ನು ವಶಪಡಿಸಿಕೊಂಡು ಗಿರವಿ ಅಂಗಡಿ ಮಾಲೀಕರಿಗೆ ಎಚ್ಚರಿಸಲಾಗುತ್ತಿತ್ತು. ಇಷ್ಟು ಸಂದರ್ಭದಲ್ಲಿ ಹೇಳಿಕೆ ಪಡೆದು ಬಿಟ್ಟು ಬಿಡಲಾಗುತ್ತಿತ್ತು. ಆದರೆ ಮುಂದೆ ಇಂಥದ್ದಕ್ಕೆ ಅವಕಾಶ ನೀಡದೆ, ಮಾಲೀಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ ಪೊಲೀಸರು.
ವಿವಿಧ ಗಿರವಿ ಅಂಗಡಿ ಮಾಲೀಕರನ್ನು ಕರೆದು ಎಚ್ಚರಿಸಲಾಗಿದ್ದು, ಪ್ರತಿ ಗಿರವಿ ಅಂಗಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಇದಲ್ಲದೇ ಕಳ್ಳ ಮಾಲನ್ನು ಗಿರವಿ ಇಟ್ಟುಕೊಂಡಿದ್ದ ಐದು ಗಿರವಿ ಅಂಗಡಿ ಮಾಲೀಕರ ವಿರುದ್ಧ ಈಗಾಗಲೇ ಐಪಿಎಸ್ ೪೧೧ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಆಟೋಗೆ ಎಲ್‌ಪಿಜಿ:ಡಿಸೆಂಬರ್ ಡೆಡ್‌ಲೈನ್

ವಿಕ ಸುದ್ದಿಲೋಕ ಮೈಸೂರು
ಆಟೋರಿಕ್ಷಾಗಳಿಗೆ ಎಲ್‌ಪಿಜಿಯನ್ನು ಕಡ್ಡಾಯವಾಗಿ ಅಳವಡಿಸಲು ಇನ್ನು ಒಂದು ತಿಂಗಳ ಡೆಡ್‌ಲೈನ್.
೨೦೧೦ರ ಡಿಸೆಂಬರ್ ೩೧ರ ಹೊತ್ತಿಗೆ ಎಲ್ಲಾ ಆಟೋರಿಕ್ಷಾಗಳು ಎಲ್‌ಪಿಜಿಯನ್ನು ಅಳವಡಿಸಿಕೊಳ್ಳದೇ ಇದ್ದರೆ ಜನವರಿ ಒಂದರಿಂದ ಅಂಥ ಆಟೋರಿಕ್ಷಾಗಳ ಪರವಾನಗಿಯನ್ನೇ ರದ್ದು ಮಾಡಲಾಗುತ್ತದೆ.
ಈಗಾಗಲೇ ಪೆಟ್ರೋಲ್‌ನ  ಜತೆಗೆ ಎಲ್‌ಪಿಜಿ ಕಿಟ್ ಹೊಂದಿ ರುವ ಆಟೋರಿಕ್ಷಾಗಳಿಗೆ ಮಾತ್ರ ಪರವಾನಗಿ ನೀಡಲಾಗುತ್ತಿದೆ. ಎರಡೂ ಇಲ್ಲ ಎಂದರೆ ಪರವಾನಗಿ ಹಾಗೂ ನೋಂದಣಿ ಇಲ್ಲವೇ ಇಲ್ಲ. ಡೆಡ್‌ಲೈನ್ ಸಮೀಪಿಸುತ್ತಿರುವುದರಿಂದ ಸಾರಿಗೆ ಇಲಾಖೆ ಅಧಿಕಾರಿಗಳೂ ಬ್ಯುಸಿ.
ಏನು ಸರಕಾರಿ ಆದೇಶ: ಪರಿಸರ ಮಾಲಿನ್ಯ ತಪ್ಪಿಸುವ ಜತೆಗೆ ಪ್ರಯಾಣಿಕರಿಗೆ ಹಿತಕರವಾಗುವ ಉದ್ದೇಶದಿಂದ ಸಾರಿಗೆ ಇಲಾಖೆ ವರ್ಷಗಳ ಹಿಂದೆಯೇ ಆದೇಶ ಹೊರಡಿಸಿದೆ. ಅದರ ಪ್ರಕಾರ ೧.೪.೧೯೯೧ರಿಂದ ೩೧.೧೦.೨೦೦೮ರವರೆಗೆ ನೋಂದಣಿ ಯಾದ ಎಲ್ಲಾ ಆಟೋರಿಕ್ಷಾಗಳು ಎಲ್‌ಪಿಜಿಯನ್ನು ಕಡ್ಡಾಯ ವಾಗಿ ಅಳವಡಿಸಿಕೊಳ್ಳಲೇಬೇಕು. ಅದರಂತೆ ಸರಕಾರ ೨೦೦೮ರ ಅಕ್ಟೋಬರ್ ೭ರಂದು ಹೊರಡಿಸಿದ ಅಧಿಸೂಚನೆಯಂತೆ ೨೦೧೦ರ ಡಿಸೆಂಬರ್ ೩೧ ರ ಒಳಗೆ ೧೯೯೧ರ ನಂತರ ನೋಂದಣಿ ಯಾದ ಎಲ್ಲಾ ಆಟೋರಿಕ್ಷಾಗಳು ಎಲ್‌ಪಿಜಿ ಅಳವಡಿಸಬೇಕು.

ಮೈಸೂರು ವಿವಿಯ ಪ್ರಮುಖ ಆಸ್ತಿ ನಾಪತ್ತೆ !

ವಿಕ ಸುದ್ದಿಲೋಕ ಮೈಸೂರು
ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ ಪ್ರಮುಖ ಆಸ್ತಿಯೊಂದು ನಾಪತ್ತೆ !
ವಿಶ್ವವಿದ್ಯಾನಿಲಯವೇ ಪ್ರಕಟಿಸಿದ ತನ್ನ ಸ್ಥಿರಾಸ್ತಿ ಪಟ್ಟಿಯಿಂದ ವಿವಿಗೆ ಸೇರಿದ ಪ್ರಮುಖ ಆಸ್ತಿಯೊಂದು ಕೈಬಿಟ್ಟಿದೆ. ರಾಜ್ಯದ ಎಲ್ಲ ನಗರಗಳಲ್ಲೂ ಭೂ ಹಗರಣವೇ ನಿತ್ಯದ  ವರ್ತಮಾನವಾಗಿರುವಾಗ ಇಂಥದ್ದೊಂದು ಹೇಳಿಕೆ ನೀಡಿದರೆ, ಇದ್ದರೂ ಇರಬಹುದು ಎಂದು ನಂಬುವವರು ಹೆಚ್ಚು.

ಆರೋಗ್ಯಕ್ಕೆ `ಟವರ್' ಅವಾಂತರ

 ಚೀ.ಜ.ರಾಜೀವ ಮೈಸೂರು
ನೀವೇನಾದರೂ,  ನಿಮ್ಮ  ಮನೆಯ ಮೇಲಿನ ಪ್ರದೇಶವನ್ನು ಖಾಸಗಿ ಮೊಬೈಲ್ ಕಂಪನಿಯ ಟವರ್ ನಿರ್ಮಾಣಕ್ಕೆ  ಬಾಡಿಗೆಗೆಂದು ನೀಡುತ್ತಿರುವಿರಾ?,   ಒಂದು ಕ್ಷಣ ಯೋಚಿಸಿ. ಮೊಬೈಲ್ ಕಂಪನಿ ನಿಮಗೆ ತಿಂಗಳಿಗೆ ೧೦-೧೫ ಸಾವಿರ ರೂ.  ಇಲ್ಲವೇ ವರ್ಷಕ್ಕಿಷ್ಟು ಎಂದು ಕೈ ತುಂಬ ಹಣ ನೀಡುತ್ತಿರಬಹುದು.  ಈ ಬಗ್ಗೆ  ಪತ್ರ ವ್ಯವಹಾರವೂ  ಆಗಿರಬಹುದು. ಆದರೆ, ಆ ಕಂಪನಿ ಪತ್ರ ವ್ಯವಹಾರದಲ್ಲಿ ಕಾಣಿಸದ ಸಂಗತಿಯೊಂದಿದೆ.  ಕಂಪನಿ ಪ್ರತಿಷ್ಠಾಪಿಸಿರುವ ಸೆಲ್ ಟವರ್  - ನಿಮ್ಮ ಮನೆಯವರಿಗೆ, ಸುತ್ತಮುತ್ತಲಿನವರಿಗೆ ಉಚಿತವಾಗಿ  ಅಪಾಯಕಾರಿ ರೋಗ-ರುಜಿನಗಳನ್ನು ನೀಡುತ್ತಿದೆ.  ಅದು ಪತ್ರದಲ್ಲಿ ಇರುವುದಿಲ್ಲ, ಮಾಸಿಕ ಶುಲ್ಕದಂತೆ ಕಣ್ಣಿಗೆ ಕಾಣುವುದಿಲ್ಲ. ಆದರೆ, ಸದ್ದಿಲ್ಲದೇ ಮಾನವ ದೇಹವನ್ನು ಪ್ರವೇಶಿಸಿ, ಭವಿಷ್ಯದಲ್ಲಿ  ಸ್ಫೋಟಗೊಳ್ಳುತ್ತದೆ !

ಪ್ರಯಾಣಿಕರ ಜೀವರಕ್ಷಕ ಈ ಚಾಲಕ

 ಜೆ.ಶಿವಣ್ಣ, ಮೈಸೂರು
ಕ್ಷಣಾರ್ಧದಲ್ಲಿ ಅವಘಡ ಸಂಭವಿಸಿತ್ತು. ಆದರೆ ಕೂದಲೆಳೆಯ ಅಂತರ ದಲ್ಲಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಒಂದರೆಗಳಿಗೆ ಎಚ್ಚರ ತಪ್ಪಿದ್ದರೂ ಅಪಾಯ ಕಟ್ಟಿಟ್ಟಬುತ್ತಿ !
ಅದಕ್ಕೆ ಕಾರಣ ಚಾಲಕನ ಚಾಕಚಕ್ಯತೆ, ಮಿಂಚಿನ ಆಲೋಚನೆ, ಆ ಕ್ಷಣದಲ್ಲಿ ತೋರಿದ ಜಾಣ್ಮೆ, ಕೈಗೊಂಡ ನಿರ್ಧಾರ. ಪರಿಣಾಮ-ಬಂದರೆಗಬಹುದಾಗಿದ್ದ  ಆಕಸ್ಮಿಕ ಅಪಾಯದಿಂದ ಪಾರು. ಬಸ್ಸಿನೊಳಗಿದ್ದ ಜೀವಗಳು ನಿಟ್ಟುಸಿರುಬಿಟ್ಟವು. ಚಾಲಕ ಅಮೂಲ್ಯ ಜೀವಗಳನ್ನು ಉಳಿಸಿದ್ದ. ಕಾಣದ ದೇವರಿಗೆ ಹಂಬಲಿಸುವ ಮನಗಳು ಎದುರಿಗಿದ್ದ ಚಾಲಕನೆಂಬೋ ಸಾರಥಿಗೆ ನಮಿಸಿದ್ದು ಸುಳ್ಳಲ್ಲ.
ಹೌದು, ಭರ್ತಿಯಾಗಿದ್ದ ಬಸ್ ಇಕ್ಕಟ್ಟಿನ, ಅಂಕುಡೊಂಕಿನ ರಸ್ತೆಯಲ್ಲಿ ಭರ್ರನೆ ಹೊರಟಿತ್ತು. ಮಾರ್ಗ ಮಧ್ಯೆ ಒಣಗಿದ ತುಸು ದೊಡ್ಡದೇ ಆದ ಮರವೊಂದು ರಸ್ತೆಯತ್ತ ಉರುಳಿತು. ಅದ್ಯಾವ ಕ್ಷಣದಲ್ಲಿ ಅದನ್ನು ಚಾಲಕ ಗಮನಿಸಿದನೋ ಥಟ್ಟನೇ ಬಲಬಿಟ್ಟು ಬ್ರೇಕ್ ಅದುಮಿದ. ನುಣುಪಾದ ರಸ್ತೆಯಲ್ಲಿ ಬಸ್ಸಿನ ಟೈರ್ ಉಜ್ಜಿ ಕೊಂಡು ತುಸು ದೂರ ಸಾಗಿತ್ತು. ಅದೇ ಕ್ಷಣದಲ್ಲಿ ಬುಡ ಸಮೇತ ಮರ ಬಸ್ ನ ಮುಂಭಾಗಕ್ಕೆ ಅಪ್ಪಳಿಸಿತು !
ಮರ ಬಿದ್ದ ರಭಸಕ್ಕೆ ವಾಹನದ ಮುಂಭಾಗದಲ್ಲಿ ಎಡಬದಿಯಲ್ಲಿದ್ದ ಬಾಗಿಲು ಪೂರ್ಣವಾಗಿ ನಜ್ಜುಗುಜ್ಜಾಗಿ ಮುಚ್ಚಿ ಹೋಯಿತು. ಒಂದು ವೇಳೆ ಬಸ್ ನ ಮಧ್ಯಕ್ಕೆ ಬಿದ್ದಿದ್ದರೆ ಜೀವಕ್ಕೆ ಎರವಾಗುತ್ತಿದ್ದರಲ್ಲಿ ಸಂಶಯ ವಿರಲಿಲ್ಲ. ಆದರೆ ಅಚ್ಚರಿಯ ರೀತಿಯಲ್ಲಿ ಎಲ್ಲರೂ ಯಾವುದೇ ತೊಂದರೆ ಇಲ್ಲದೇ ಪಾರಾಗಿದ್ದರು. ನಿರ್ವಾಹಕ ಕೂಡ ಬಚಾವ್. ಬಾಗಿಲ ಬಳಿ ನಿಂತಿದ್ದರೆ ನಜ್ಜು ಗುಜ್ಜಾದ ಬಾಗಿಲಿನಲ್ಲಿ ಸಿಲುಕುತ್ತಿದ್ದರು.
ಮತ್ತೂ ಒಂದು. ಮರ ಬೀಳುವಾಗ ಸನಿಹ ದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಹರಿಯುತ್ತಿದ್ದ  ತಂತಿಯನ್ನು  ತುಂಡಾಗಿಸಿತ್ತು. ಬಸ್ ಮುಂದೆ ಸಾಗಿದ್ದರೆ ತುಂಡಾದ ತಂತಿಗೆ ವಾಹನ ಸಿಲುಕುವ ಸಾಧ್ಯತೆಗಳೂ ಇತ್ತು. ಚಾಲಕ ಎಚ್ಚರ ತಪ್ಪಿದ್ದರೆ ಮರ ಬಿದ್ದು ಇಲ್ಲವೇ, ಕರೆಂಟು ಹರಿದು ಸಾವಿನ ಮನೆಯ  ಕದ ತಟ್ಟುವಂತಾಗುತ್ತಿತ್ತು ! ಚಾಲಕ ಆಪ್ತರಕ್ಷಕನಾಗಿದ್ದ, ಆಪದ್ಭಾಂದವನಾಗಿದ್ದ. ಆ ಚಾಲಕ ಎಸ್.ಕೆ. ಲೋಕೇಶ್.
ಇದ್ಯಾವುದೋ ಸಿನಿಮೀಯ ಘಟನೆ ಅಲ್ಲ. ನಿಜ ಘಟನೆ. ನಡೆದದ್ದು ಮಡಿಕೇರಿ-ಊಟಿ ಮಾರ್ಗದಲ್ಲಿ.
ಅದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್. ಬುಧವಾರ (ನ.೨೪) ಮಧ್ಯಾಹ್ನ ೩.೪೫- ೪ ಗಂಟೆಯ ಸಮಯ. ಮಕ್ಕಳು, ಮಹಿಳೆಯರು ಸೇರಿದಂತೆ ೫೦ಕ್ಕೂ ಹೆಚ್ಚು ಮಂದಿ ಆ ಬಸ್ ನಲ್ಲಿದ್ದರು. ಮಡಿಕೇರಿಯಿಂದ ಊಟಿಗೆ ಹೊರಟಿದ್ದ ಬಸ್ ನ ನಿರ್ವಾಹಕ ಶ್ರೀನಿವಾಸ್. ಸಾರಥಿ -ಚಾಲಕ- ಲೋಕೇಶ್ (ಬ್ಯಾಡ್ಜ್ ನಂ.೭೫೪) ಚಾಲನೆ  ಮಾಡುತ್ತಿದ್ದರು. ಲೋಕೇಶ್ ಎಂದಿನಂತೆ ಪರಿಚಿತವಾದ ಮಾರ್ಗದಲ್ಲಿ ಎಚ್ಚರಿಕೆಯಿಂದ ಚಾಲನೆ ಮಾಡುತ್ತಿದ್ದರು.
ಇನ್ನು ಅವರ ಮಾತುಗಳಲ್ಲೇ ಕೇಳಿ: ಮಡಿಕೇರಿಯಿಂದ ಊಟಿಗೆ ಹೊರಟಿದ್ದ ?? (ಕೆಎ ೧೯ ಎಫ್ ೨೬೪೩) ಟಿ.ಆರ್.ಬಜಾರ್ ದಾಟಿ ಹನುಮಂತಪುರ ಹತ್ತಿರವಾಗುತ್ತಿತ್ತು. ಅಲ್ಲಿ ರಸ್ತೆ ಹಳ್ಳಕೊಳ್ಳದ ಜತೆಗೆ ಅಂಕುಡೊಂಕಾಗಿದೆಯಲ್ಲದೇ, ತೀವ್ರ ತಿರುವು ಇತ್ತು. ಹಾಗಾಗಿ ಚಾಲನೆಯನ್ನು ನಿಧಾನಗೊಳಿಸಿದೆ. ಅದೇ ಕ್ಷಣ ಎತ್ತರದಲ್ಲಿದ್ದ ಮರವೊಂದು ಗಾಳಿಗೆ ಹೊಯ್ದಾಡುತ್ತಾ ಬೀಳುವುದು ಕಣ್ಣಿಗೆ ಬಿತ್ತು. ತಕ್ಷಣವೇ ಎಚ್ಚೆತ್ತು ತಕ್ಷಣ ಬ್ರೇಕ್ ಹಾಕಿದೆ. ಮುಂದಿದ್ದ ಪ್ರಯಾಣಿಕರು ಹಿಂದೆ ಸರಿಯುವಂತೆ ಕೂಗಿಕೊಂಡೆ.
ಚಕ್ರ ಉಜ್ಜಿಕೊಂಡು ಮುಂದೆ ಹೋಯಿತು. ಒಣಗಿದ ಹಳೇ ಮರ ಬಸ್ ಮುಂಭಾಗಕ್ಕೆ ಅಪ್ಪಳಿಸಿತು. ಜಂಘಾಬಲವೇ ಉಡುಗಿ ಹೋಯಿತು. ದೈವವಶಾತ್ ಯಾವುದೇ ಹಾನಿಯಿಲ್ಲದೇ, ಬಚಾವ್ ಆದೆವು. ಮುಂಭಾಗದಲ್ಲಿದ್ದ ಬಾಗಿಲಿಗೆ ಮರ ಸಿಲುಕಿದ್ದರಿಂದ  ತಕ್ಷಣವೇ ಎಲ್ಲಾ ಪ್ರಯಾಣಿಕರನ್ನು ತುರ್ತು ಬಾಗಿಲುಗಳ ಮೂಲಕ ಸುರಕ್ಷಿತವಾಗಿ ಇಳಿಸಲಾಯಿತು. ಒಂದು ಗಳಿಗೆ ಮೈಮರೆತಿ ದ್ದರೆ ಮರ ಇಲ್ಲವೇ ವಿದ್ಯುತ್ ಗೆ ಸಿಲುಕುವ ಸಾಧ್ಯತೆಯಿತ್ತು. ನೆನಪಿಸಿಕೊಂಡರೆ ಶರೀರ ಥರಥರ ಕಂಪಿಸುತ್ತದೆ. ಬಹು ಹೊತ್ತಿನ ವರೆಗೂ ನನ್ನ ಶರೀರ ನಿಯಂತ್ರಣದಲ್ಲಿರಲಿಲ್ಲ, ನಡುಕ ನಿಂತಿರಲಿಲ್ಲ. ?ಚಾ? ಆದ ಪ್ರಯಾಣಿಕರು ಹತ್ತಿರ ಬಂದು ನನ್ನನ್ನು ಹೊಗಳು ತ್ತಿದ್ದರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ೧೮ ವರ್ಷಗಳಿಂದ ಈ ಮಾರ್ಗ ದಲ್ಲಿ ಬಸ್ ಚಲಾಯಿಸುತ್ತಿದ್ದೇನೆ. ಇದೇ ಮೊದಲು ಹೀಗಾಗಿದ್ದು.
೨೩ ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಲೋಕೇಶ್ ಮಡಿಕೇರಿಯ ಬೋಯಿಕೆರೆ ಗ್ರಾಮದವರು. ತಂದೆ, ಪತ್ನಿ, ಪುತ್ರಿ, ಇಬ್ಬರು ಪುತ್ರರಿರುವ ಪುಟ್ಟ ಸಂಸಾರ. ಮೊದಲಿಗೆ ಮೈಸೂರಿನಲ್ಲಿ ವೃತ್ತಿ ಆರಂಭಿಸಿದ ಅವರು ಮಂಗಳೂರು ಸಾರಿಗೆ ವಿಭಾಗದಲ್ಲಿದ್ದು, ವರ್ಷದಿಂದ ಮೈಸೂರು ವಿಭಾಗದ ಮಡಿಕೇರಿ ಡಿಪೋನಲ್ಲಿ ಸೇವೆಯಲ್ಲಿದ್ದಾರೆ. ನಿರ್ವಾಹಕ ಶ್ರೀನಿವಾಸ್ ಅವರೊಡನೆ ೩-೪ ವರ್ಷಗಳಿಂದ ಜತೆಯಾಗಿದ್ದಾರೆ. ಚಾಲಕನಿಗೆ ಮೈಯಲ್ಲಾ ಕಣ್ಣಾಗಿರಬೇಕು ಎನ್ನುವುದಕ್ಕೆ ಈ ಘಟನೆ ಜೀವಂತ ಉದಾಹರಣೆ.

'ಬಣ'(ಣ್ಣ) ಬದಲಿಸಿದ ರಾಮದಾಸ್?

 ವಿಕ ಸುದ್ದಿಲೋಕ ಮೈಸೂರು
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರು ಸಂಕಷ್ಟ ಕಾಲದಲ್ಲಿ ಪ್ರದರ್ಶಿಸಿದ ರಾಜಕೀಯ ನಡೆ ಕುತೂಹಲ ಕೆರಳಿಸಿದೆ.
ಈ ಬಗ್ಗೆ ಜಿಲ್ಲೆಯ ಬಿಜೆಪಿ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಯಡಿಯೂರಪ್ಪ ಅವರ ಮುಖ್ಯಮಂತ್ರಿಗಾದಿ ಅಲುಗಾಡಿದ ಸಂದರ್ಭ ದಲ್ಲಿ, ಸಚಿವ ರಾಮದಾಸ್ ವಹಿಸಿದ ಪಾತ್ರ, ಅವರೆಡೆಗೆ ತೋರಿದ ವಿಪರೀತ ಸ್ವಾಮಿ ನಿಷ್ಠೆ- ಎರಡೂ ಸಹಜವಾಗಿಯೇ ಕೆಲ ಪ್ರಶ್ನೆಗಳನ್ನು ಸೃಷ್ಟಿಸಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದಿಲ್ಲಿಯಾತ್ರೆಯ ಸಂದರ್ಭದಲ್ಲಿ ರಾಮದಾಸ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಯಡಿಯೂರಪ್ಪ ಅವರೇ ನಮ್ಮ ನಾಯಕ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ಹಲವರ ಹುಬ್ಬೇರಿಸಿದೆ.
ಶೋಭಾ ಕರಂದ್ಲಾಜೆ, ಸಿ.ಎಚ್. ವಿಜಯಶಂಕರ್ ಅವರಂಥ ಯಡಿಯೂರಪ್ಪ ಪರಮಾಪ್ತರೇ ರಾಜ್ಯ ದಲ್ಲಿ ಉಳಿದು, ಏನೂ ಆಗಿಲ್ಲ ಎಂಬಂತೆ ಇಲಾಖೆಯ ಚಟುವಟಿಕೆಗಳಲ್ಲಿ ಮುಳುಗಿದ್ದಾಗ ರಾಮದಾಸ್ ಅವರೇಕೆ ಇಷ್ಟೊಂದು ಮುತುವರ್ಜಿ ವಹಿಸಿದರು? ಎಂಬುದು ಕಾರ್ಯಕರ್ತರ ತಲೆ ಕೆಡಿಸಿದೆ.

ಸಮ್ಮಿಶ್ರಭಾವ ಸ್ಫುರಿಸಿದ ಜೋಕುಮಾರಸ್ವಾಮಿ...

ಹೊಸ ಹುಡುಗರು
ಭವಿಷ್ಯದಲ್ಲಿ ಇನ್ನಷ್ಟು
ಪಳಗುತ್ತಾರೆ,
`ಜೋಕುಮಾರಸ್ವಾಮಿ'ಯನ್ನು ಇನ್ನಷ್ಟು ಸುಂದರವಾಗಿ
ಬೆಳಗುತ್ತಾರೆ ಎನ್ನುವ  ವಿಶ್ವಾಸದೊಂದಿಗೆ 
ಲೋಪವನ್ನು ಮುಚ್ಚಿ ,
ಒಟ್ಟು ಪ್ರಯತ್ನವನ್ನು ಮೆಚ್ಚಬಹುದು.

ನಿವೇಶನ ಖಾಲಿ: ಕಿರಿಕಿರಿ `ಭರ್ತಿ'!

ವಿಕ ಸುದ್ದಿಲೋಕ ಮೈಸೂರು 
ರಾತ್ರಿ ಸರಿಯಾಗಿ ನಿದ್ದೆ ಬರಲ್ಲ. ಸ್ವಲ್ಪ ಸದ್ದಾದರೂ ಏನೋ ಆತಂಕ. ಕಳ್ಳರ ಭಯ. ಹಾವು, ಚೇಳು, ಹುಳು ಹುಪ್ಪಟೆಗಳ ಭೀತಿ. ಒಟ್ಟಿನಲ್ಲಿ ನೆಮ್ಮದಿ ಎಂಬುದೇ ಇಲ್ಲ !
-ನಿವೇದಿತ ನಗರದ ನಿವಾಸಿಯೊಬ್ಬರ ಆತಂಕ ಅವರದಷ್ಟೆ ಅಲ್ಲ. ನಗರದ ವಿವಿಧ ಬಡಾವಣೆಯ ಸಾವಿರಾರು ಜನರದ್ದು. ಕಾರಣ  ಒಂದೇ. ಖಾಲಿ ನಿವೇಶನಗಳು.
ಮನೆ  ಪಕ್ಕ, ಎದುರು,ಹಿಂಭಾಗ, ಕೆಲವೆಡೆ ಅಕ್ಕ ಪಕ್ಕ-ಹಿಂದೆ ಮುಂದೆ ಎರಡು-ಮೂರು ಕಡೆಯ ಖಾಲಿ ನಿವೇಶನಗಳಲ್ಲಿ `ದಟ್ಟ ಅಡವಿ' ಯಂತೆ ಪೊದೆ ಬೆಳೆದು ನಿಂತಿದ್ದರೆ, ಅಲ್ಲಿಂದ ಆಗಾಗ ಹಾವು, ಚೇಳು, ಹುಳು ಹುಪ್ಪಟೆಗಳು ದರ್ಶನ ನೀಡುತ್ತಿದ್ದರೆ ಯಾರಿಗೆ ನೆಮ್ಮದಿ ಇದ್ದೀತು?
ಕಸ, ಕಳೆಮಯ: ಜೆ.ಪಿ.ನಗರ,ವಿಜಯನಗರದ ವಿವಿಧ ಹಂತ, ಕುವೆಂಪು ನಗರ, ವಿವೇಕಾನಂದ ನಗರ, ರಾಮಕೃಷ್ಣ ನಗರ, ನಿಮಿಷಾಂಬ ಬಡಾವಣೆ, ಶ್ರೀರಾಂಪುರ, ಅರವಿಂದನಗರ,ಶಾರದಾದೇವಿ ನಗರ ಮತ್ತಿತರ ಕಡೆ ಮುಖ್ಯರಸ್ತೆ, ಅಡ್ಡರಸ್ತೆ ಎಂಬ ಭೇದವಿಲ್ಲದೆ ಖಾಲಿ ನಿವೇಶನಗಳು `ಕಸ ಕಳೆ ಪೊದೆ ಮಯ'ವಾಗಿವೆ. ಕಳ್ಳ ಹೊಕ್ಕು ಕುಳಿತರೂ ಗೊತ್ತಾಗದಷ್ಟು ದಟ್ಟ ಪೊದೆ. ಹಲವು ನಿವೇಶನಗಳಂತೂ ಸಾರ್ವಜನಿಕ ಶೌಚಾಲಯ ಮತ್ತು ಕಸದ ತೊಟ್ಟಿಗಳಾಗಿ `ರೂಪಾಂತರ'ಗೊಳ್ಳುವ ಮೂಲಕ  ಒಟ್ಟು ಪರಿಸರವನ್ನೇ ಅಸಹನೀಯಗೊಳಿಸಿವೆ. ಜಯನಗರದ ಕೆಲವೆಡೆಯೂ ಇದೇ ಸ್ಥಿತಿ.

ಗಜಗಳ ಚಿನ್ನಾಟ

ವಿಕ ಸುದ್ದಿಲೋಕ ಗುಡ್ಡೆಹೊಸೂರು
ಮಾವುತ-ಕಾವಾಡಿಗಳು ಅಂಕುಶ ಹಿಡಿದು ಪಳಗಿಸಿದ ಸಾಕಾನೆಗಳು ಬುಧವಾರ ಪ್ರದರ್ಶನ ನೀಡಿದ ವಿವಿಧ ಕಸರತ್ತು ನೂರಾರು ಸಂಖ್ಯೆ ಯಲ್ಲಿ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿತು.
ದುಬಾರೆ ಆನೆ ತರಬೇತಿ ಶಿಬಿರದಲ್ಲಿ ಅರಣ್ಯ ಇಲಾಖೆ ಮಡಿಕೇರಿ ವಿಭಾಗದಿಂದ ನಡೆದ `ಆನೆ ಹಬ್ಬ' ದಲ್ಲಿ ಸಾಕಾನೆಗಳ ಕಲಿಕೆ ಅನಾವರಣಗೊಂಡಿತು.
೫೬ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ದುಬಾರೆಯಲ್ಲಿ ಆನೆ ಹಬ್ಬ ಆಯೋಜಿಸಲಾಗಿತ್ತು. ಕಳೆದ ವರ್ಷ ಈ ಕಾರ್ಯಕ್ರಮಕ್ಕೆ ಪ್ರಪ್ರಥಮ ವಾಗಿ ಚಾಲನೆ ನೀಡಲಾಗಿತ್ತು. ಕ್ಯಾಂಪ್‌ನಲ್ಲಿರುವ ಸಾಕಾನೆಗಳನ್ನು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ, ಪೂಜೆ ಸಲ್ಲಿಸಲಾಯಿತು. ಬಣ್ಣಗಳಿಂದ ಅಲಂಕರಿಸಲಾಗಿತ್ತು.
ಮುಕ್ಕಾಲು ಗಂಟೆ (೧೧ ರಿಂದ ೧೧.೪೫) ಗಳ ಕಾಲ ಸಾಕಾನೆಗಳು ತಮ್ಮ ಕಲಿಕೆ ಪ್ರದರ್ಶಿಸಿದವು. ೯ವರ್ಷದ ಶಿವಗಂಗೆ, ೧೨ ರ ರಂಜನ್ ಹಾಗೂ ೭ರ  ಪರಶುರಾಮ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮಿಂಚಿದವು. ಹಿರಿಯ ಮಾವುತ ಜೆ.ಕೆ.ಡೋಬಿ ಮುಂದಾಳತ್ವದಲ್ಲಿ ಮಾವುತ- ಕಾವಾಡಿಗಳ ನಿರ್ದೇಶನದಂತೆ ಸಾಕಾನೆಗಳು ಪ್ರದರ್ಶನ ನೀಡಿದವು.

ಬಡಾವಣೆ ಕಡೆ ಮುಖಮಾಡದ ಪೊಲೀಸರು

ವಿಕ ಸುದ್ದಿಲೋಕ ಮೈಸೂರು
ಬಡಾವಣೆಗಳನ್ನು ದತ್ತು ತೆಗೆದುಕೊಂಡ ಪೊಲೀಸರಿಗೆ ಅತ್ತ ಹೋಗಲು ಸಮಯವೇ ಇಲ್ಲ !.
ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವ ಕ್ರಮವಾಗಿ ನಗರ ಪೊಲೀಸ್ ಆಯುಕ್ತರು ಆರಂಭಿಸಿದ ‘ಬಡಾವಣೆ ದತ್ತು’ ಯೋಜನೆಗೆ ಗ್ರಹಣ ಹಿಡಿದಿದೆ.
ದಸರೆ ಸೇರಿದಂತೆ ನಾನಾ ಭದ್ರತೆ ಕಾರಣಗಳಿಗೆ ಪೊಲೀಸ್ ಅಧಿಕಾರಿಗಳು ತೊಡಗಿಕೊಂಡಿದ್ದರಿಂದ ಬಡಾವಣೆಗಳ ಕಡೆಗೆ ಮುಖ ಮಾಡಲು ಆಗಿಲ್ಲ.
ಏಳು ತಿಂಗಳ ಹಿಂದೆ ಮಹತ್ವದ ಯೋಜನೆಯೇನೋ ಆರಂಭವಾಯಿತು. ಮೂರ‍್ನಾಲ್ಕು ತಿಂಗಳು ಪ್ರತಿ ಠಾಣೆ ಯವರು ಆಗಾಗ ಬಡಾವಣೆಗಳಿಗೆ ಭೇಟಿ ನೀಡಿ ಸ್ಥಳೀಯ ರೊಂದಿಗೆ ಬೆರೆತು ಅಹವಾಲು ಆಲಿಸಿದರು. ಕೆಲವರು ಸಣ್ಣಪುಟ್ಟ ಸವಲತ್ತನ್ನೂ ವಿತರಿಸಿದರು. ಮೂರು ತಿಂಗಳಿನಿಂದ ಬಹುತೇಕ ಠಾಣೆಯವರು ತಾವು ದತ್ತು ಪಡೆದ ಬಡಾವಣೆಗಳನ್ನು ಮರೆತೇ ಬಿಟ್ಟಿದ್ದಾರೆ.

‘ಮಹಾದೇವ’ನೇ ಕಾಪಾಡಬೇಕು


ಐತಿಹಾಸಿಕ ಮಹತ್ವ ಹೊಂದಿರುವ ಬನ್ನೂರು ಪಟ್ಟಣ ವ್ಯಾಸರಾಯರ ಜನ್ಮಸ್ಥಳವೂ ಹೌದು.ಈ ಹಿಂದೆ ವಿಧಾನಸಭೆ ಕ್ಷೇತ್ರವಾಗಿದ್ದ ಬನ್ನೂರನ್ನು ಕಳೆದ ಬಾರಿ ತಿ.ನರಸೀಪುರ ಕ್ಷೇತ್ರದ ಜತೆ ಸೇರ್ಪಡೆಗೊಳಿಸಲಾಗಿದೆ. ಡಾ.ಎಚ್.ಸಿ.ಮಹದೇವಪ್ಪ ಕ್ಷೇತ್ರದ ಶಾಸಕ. ಪುರಸಭೆಯಾಗಿರುವ ಬನ್ನೂರು ಅಭಿವೃದ್ಧಿಯ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ. ಪಟ್ಟಣದ ತೇರು ಎಳೆಯುವ ರಸ್ತೆ, ಪೊಲೀಸ್ ಠಾಣೆ ರಸ್ತೆ, ಮೈಸೂರು- ಮಳವಳ್ಳಿ ರಾಜ್ಯ ಹೆದ್ದಾರಿಗಳು ಹೊಂಡಗುಂಡಿಗಳಿಂದ ತುಂಬಿದ್ದು, ವಾಹನ ಸವಾರರು ತೊಂದರೆಪಡುವಂತಾಗಿದೆ. ಮಳೆ ಬಂತೆಂದರೆ ರಸ್ತೆಗಳು ಕೆಸರುಮಯ. ಪಾದಚಾರಿಗಳಿಗೆ ಕೆಸರಿನ ಅಭಿಷೇಕ. ಮೂಲ ಸೌಲಭ್ಯವಂಚಿತ ಆಶ್ರಯ ಬಡಾವಣೆ ಮುಖ್ಯರಸ್ತೆ ಮಿನಿಕೆರೆಯಂತಾಗಿದೆ. ಬೋವಿ ಕಾಲೋನಿ ಮೂಲಕ ವಿವೇಕಾನಂದ ಶಿಕ್ಷಣ ಸಂಸ್ಥೆಗೆ ಹೋಗುವ ರಸ್ತೆ ತುಂಬಾ ಹಳ್ಳಕೊಳ್ಳಗಳು. ಮಳೆ ಬಂದಾಗ ವಿದ್ಯಾರ್ಥಿಗಳು, ಸಾರ್ವಜನಿಕರು ಈ ರಸ್ತೆಯಲ್ಲಿ ಮನೆ ಸೇರಲು ಪರಡಾಡಬೇಕು. ಪರಸಭೆಯಾಗಲೀ, ಶಾಸಕರಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಮಳೆ ಬಾರದಿದ್ದಾಗಲೂ ನಷ್ಟ, ಬಂದಾಗಲೂ ನಷ್ಟ

ಫಾಲಲೋಚನ ಆರಾಧ್ಯ ಚಾಮರಾಜನಗರ
ಜಿಲ್ಲೆಯ ರೈತರಿಗೆ  ಈ ವರ್ಷ ಮಳೆ ಬಾರದಿದ್ದಾಗಲೂ ನಷ್ಟ. ಮಳೆ ಬಂದಾಗಲೂ ನಷ್ಟ  !
ಒಮ್ಮೆ ಕೈಕೊಟ್ಟ ವರುಣ, ಮತ್ತೊಮ್ಮೆ ಅಗತ್ಯಕ್ಕಿಂತ ಹೆಚ್ಚಾಗಿ ಅಬ್ಬರಿಸಿ ರೈತರ ಬೆಳೆ ನಷ್ಟಕ್ಕೆ ಕಾರಣನಾಗಿದ್ದಾನೆ. ಕಳೆದ ವರ್ಷ `ಬರ'ದಿಂದ ತತ್ತರಿಸಿದ್ದ ರೈತರು ಈ ಬಾರಿ ಮಳೆ ಅಬ್ಬರಕ್ಕೆ ನಲುಗಿದ್ದಾರೆ.
ಜಿಲ್ಲೆಯಲ್ಲಿ ಪೂರ್ವ ಮುಂಗಾರು ರೈತನ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಈ ಖುಷಿಯಲ್ಲಿ ರೈತರು ಜೋಳ, ಸೂರ್ಯಕಾಂತಿ ಹಾಗೂ ನೆಲಗಡಲೆಯನ್ನು  ಹೆಚ್ಚಾಗಿ ಬಿತ್ತನೆ ಮಾಡಿದ್ದರು. ಆದರೆ, ನಂತರದ ಮುಂಗಾರು  ಜೋಳ ಕಾಳು ಕಟ್ಟುವ ಹಂತದಲ್ಲೇ ಕೈಕೊಟ್ಟಿತು. ಈ ಬಾರಿ ಒಟ್ಟಾರೆ ವಾಡಿಕೆಗಿಂತ ಹೆಚ್ಚಿನ ಮಳೆ ಬಿತ್ತಾದರೂ ನಿರ್ಣಾಯಕ ಹಂತದಲ್ಲಿ ಕೈಕೊಟ್ಟದ್ದು, ಬೆಳೆಯ ಮೇಲೆ ಪರಿಣಾಮ ಬೀರಿತು.
ಜಿಲ್ಲೆಯ ರೈತರ ೧೯೨೨ ಹೆಕ್ಟೇರ್ ಪ್ರದೇಶದಲ್ಲಿ ಹೈಬ್ರಿಡ್ ಜೋಳ, ೨೯೬೩ ಹೆಕ್ಟೇರ್‌ನಲ್ಲಿ ಸ್ಥಳೀಯ ಜೋಳ, ೩೨೫೦ ಹೆಕ್ಟೇರ್ ವ್ಯಾಪ್ತಿಯಲ್ಲಿ ಸೂರ್ಯಕಾಂತಿ ಹಾಗೂ ೧೬೩೨ ಹೆಕ್ಟೇರ್‌ನಲ್ಲಿ ನೆಲಗಡಲೆ ನಷ್ಟಕ್ಕೆ ಒಳಗಾಗಿದೆ. ಒಟ್ಟಾರೆ ನಿರ್ಣಾಯಕ ಹಂತದಲ್ಲೇ ಮುಂಗಾರು ಕೈಕೊಟ್ಟ ಪರಿಣಾಮ ಸುಮಾರು ೯೭೬೮ ಹೆಕ್ಟೇರ್ ಪ್ರದೇಶದ ಬೆಳೆ ನಷ್ಟವಾಗಿದೆ. ಇದರಿಂದ ಹಾನಿಗೊಳಗಾದ ಬೆಳೆಯ ಮೌಲ್ಯ ೩.೧೦ ಕೋಟಿ ರೂ.

ಜೀವನದ ಸಮಸ್ತವೂ ಸಾಹಿತ್ಯದ ಭಾಗ:ಹಳೆಮನೆ

ಹನಗೋಡು ನಟರಾಜ್/ನವೀನ್, ಪಿರಿಯಾಪಟ್ಟಣ ವಿಕ ಸುದ್ದಿಲೋಕ ಹುಣಸೂರು
ಜೀವನ ಮತ್ತು ಸಾಹಿತ್ಯ ಬೇರೆ ಎಂಬ ಭೇದಭಾವ ನಿಧಾನವಾಗಿ ಕಡಿಮೆಯಾಗುತ್ತ ಜೀವನದ ಸಮಸ್ತವೂ ಸಾಹಿತ್ಯದ ಒಂದು ಭಾಗ, ಆದ್ದರಿಂದ ಸಾಹಿತ್ಯ ಚರ್ಚೆ ಎನ್ನುವಂತಹದ್ದು ಜೀವನದ ಸಮಸ್ಯೆಗಳನ್ನು ಕುರಿತು ನಡೆಯುವ ಚರ್ಚೆ ಎನ್ನುವ ಅಭಿಪ್ರಾಯ ಮೂಡುತ್ತಿದೆ ಎಂದು ರಂಗಾಯಣ ನಿರ್ದೇಶಕ ಲಿಂಗದೇವರು ಹಳೆಮನೆ ತಿಳಿಸಿದರು.
ಹುಣಸೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಹುಣಸೂರು ಕೃಷ್ಣಮೂರ್ತಿ ವೇದಿಕೆ ಯಲ್ಲಿ ಏರ್ಪಡಿಸಲಾಗಿದ್ದ ಸಂಕೀರ್ಣಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಇಲ್ಲಿನ ಆದಿವಾಸಿಗಳು ಹುಣಸೂರಿನ ಸಂಸ್ಕೃತಿಗೆ ವೈವಿಧ್ಯತೆಯನ್ನು ತಂದುಕೊಟ್ಟಿದ್ದಾರೆ. ಆದರೆ ಇವರು ಎದುರಿಸುತ್ತಿರುವ ಸಮಸ್ಯೆಗಳನ್ನು ಬದಲಾಗುತ್ತಿರುವ ಆರ್ಥಿಕ ಸುಧಾರಣೆಯಲ್ಲಿ ಆರ್ಥಮಾಡಿಕೊಳ್ಳ ಬೇಕಾಗಿದೆ ಎಂದರು.
ಭಾರತದಲ್ಲಿ ಬಡಕಟ್ಟು ಜನರ ಸಂಖ್ಯೆ ಗಣನೀಯ ವಾಗಿದೆ. ಆದರೆ ಇವರು ಬದುಕುತ್ತಿರುವ ರೀತಿ ಪ್ರಧಾನಧಾರೆಯ ಜೀವನಕ್ಕಿಂತ ಭಿನ್ನವಾದುದು. ಇದನ್ನು ಗಮನಿಸಿ ಅನೇಕ ಚಿಂತಕರು, ಆದಿವಾಸಿ ಸಮಾಜವನ್ನು ‘ಅದರ್ ಇಂಡಿಯಾ’ ಎನ್ನುವ ಮೂಲಕ ಇದು ಬೇರೆಯದೆ ಆದ ಭಾರತ ಎಂದ ಕರೆಯ ಲಾಗುತ್ತಿದೆ. ಈ ವ್ಯವಸ್ಥೆ ವಿಚಿತ್ರವಾದ ಡಿಜಿಟಲ್ ಡಿವೈಡ್‌ಗೆ ಬಂದು ನಿಂತಿದೆ. ಆದ್ದರಿಂದ ಈ ಕುರಿತ ಚಿಂತನೆಯನ್ನು ಇಂತಹ ಸಭೆಗಳಲ್ಲಿ ಚರ್ಚಿಸುವ ಮೂಲಕ ಸಾಮಾನ್ಯರಿಗೂ ಇದರ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.

೧೧ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

ಹನಗೋಡು ನಟರಾಜ್/ನವೀನ್ ಪಿರಿಯಾಪಟ್ಟಣ
ಹುಣಸೂರು ಕೃಷ್ಣಮೂರ್ತಿ ವೇದಿಕೆ
ಕನ್ನಡ ಕನ್ನಡಿಗರನ್ನು ಸಾಕುವ ಭಾಷೆಯಾಗಬೇಕು ಎಂದು ೧೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ  ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟರು.
ಹುಣಸೂರು ಕೃಷ್ಣಮೂರ್ತಿ ವೇದಿಕೆಯಲ್ಲಿ  ಶನಿವಾರ ಆರಂಭಗೊಂಡ ಸಮ್ಮೇಳನದಲ್ಲಿ ಅಧ್ಯಕ್ಷ ಭಾಷಣ ಮಾಡಿದ ಅವರು, ಕನ್ನಡದಲ್ಲಿ  ಓದಿದರೆ ಕೆಲಸ ಸಿಗುತ್ತದೆ. ಜೀವನ ಸಲೀಸಾಗಿ ಸಾಗಿಸ ಬಹುದು, ಬದುಕಿಗೆ ಭದ್ರತೆ ಒದಗುತ್ತದೆ ಎಂದು ಖಾತ್ರಿಯಾದರೆ ಕನ್ನಡವನ್ನು ಯಾರು ಕಡೆಗಣಿಸುತ್ತಾರೆ? ಆದ್ದರಿಂದ ಸಂಬಂಧ ಪಟ್ಟವರು, ಮುಖ್ಯವಾಗಿ ಸರಕಾರ ಈ ಕಡೆ ಒತ್ತು ಕೊಡಬೇಕು ಎಂದರು.
ಜಾತ್ರೆಯೂ ಅಲ್ಲ, ಸಂತೆಯೂ ಅಲ್ಲ:  ಸಮ್ಮೇಳನ ಎಂಬುದು ಸಮಷ್ಟಿ  ಪ್ರಜ್ಞೆಯ ಸಂಕೇತ ಸಾಧನೆಗಳನ್ನು ಶೋಧಿಸುವ ಸಮಾವೇಶ ಎಂದ ಅವರು,  ಸಾಹಿತ್ಯ ಸಮ್ಮೇಳನಗಳನ್ನು ಕೆಲ ವರು ಜಾತ್ರೆ ಎನ್ನುವುದುಂಟು. ಸದ್ಯ ಅವರು ಸಂತೆ ಎನ್ನಲಿಲ್ಲ, ಸಂತೆಗೂ ಜಾತ್ರೆಗೂ ಮೂಲ ಭೂತ ವ್ಯತ್ಯಾಸ ಇದೆ. ಸಂತೆಯಲ್ಲಿ  ಕೇವಲ ಲೌಕಿಕ ಚಟುವಟಿಕೆಗಳು ಕಂಡು ಬಂದರೆ, ಜಾತ್ರೆಯಲ್ಲಿ ಅಲೌಕಿಕ ಸ್ತರದಲ್ಲಿ  ಭಾಗವಹಿಸಿದ ಅನುಭವವಾಗುತ್ತದೆ ಎಂದರು.

ಇಬ್ಬರ ಗೊಂದಲದಲ್ಲಿ ರಸ್ತೆ ಗುಂಡಿಯಾಯಿತು !

ಕೊಡಗು-ಹಾಸನ ಗಡಿ ಭಾಗದಲ್ಲಿರುವ ನಿಲುವಾಗಿಲು ಗ್ರಾಮದ ಜನತೆಗೆ ಅಭಿವೃದ್ಧಿಯೆಂಬುದು ಕೈಗೆ ನಿಲುಕದ ನಕ್ಷತ್ರದಂತಾಗಿದೆ. ಕನಿಷ್ಠ ಮೂಲ ಸೌಲಭ್ಯಗಳಿಂದ ವಂಚಿತ ವಾಗಿರುವ ಇಲ್ಲಿನ ಜನರ ಬದುಕು ಶೋಚನೀಯ.
ಎರಡು ಜಿಲ್ಲೆಗಳನ್ನು ಬೆಸೆಯುವ ಈ ಗ್ರಾಮ ಸಾಕಷ್ಟು ಅಭಿವೃದ್ಧಿ ಕಾಣಬೇಕಾಗಿತ್ತು. ಆದರೆ ಗಡಿ ಭಾಗದಲ್ಲಿ ಉಳಿದುಕೊಂಡಿದ್ದೇ ಶಾಪವಾಗಿ ಪರಿಣಮಿಸಿದೆ. ಕೊಡ್ಲಿ ಪೇಟೆ, ಬೆಸೂರು, ನಿಲುವಾಗಿಲು ಮೂಲಕ ಹಾಸನದ ಮಲ್ಲಿಪಟ್ಟಣಕ್ಕೆ ತೆರಳುವ ರಾಜ್ಯ ಹೆದ್ದಾರಿಯು ಜನಪ್ರತಿ ನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ರಸ್ತೆಯ ತುಂಬ ಹೊಂಡಗಳದ್ದೇ ಕಾರುಬಾರು. ಬೈಕ್‌ಗಳು ಸಂಚರಿಸುವಷ್ಟು ರಸ್ತೆ ಮಾತ್ರ ಉಳಿದುಕೊಂಡಿದ್ದು, ಉಳಿದ ಭಾಗದ ರಸ್ತೆಯನ್ನು ಗುಂಡಿ ನುಂಗಿ ಹಾಕಿದೆ. ರಸ್ತೆ ಇಷ್ಟೊಂದು ಶೋಚನೀಯ ಸ್ಥಿತಿಗೆ ತಲುಪಿದರೂ ಅಭಿವೃದ್ಧಿ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನೂ ಭರವಸೆ ನೀಡುತ್ತಲೇ ಕಾಲ ಕಳೆಯುತ್ತಿದ್ದಾರೆ. ಈ ರಸ್ತೆಯಲ್ಲಿ ಸಣ್ಣಪುಟ್ಟ ವಾಹನಗಳು ಸಂಚರಿಸಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಮಾಹಿತಿ ಹಕ್ಕು ಕೇಳೋಕೆ ಕಂಕ್ಳಲ್ಲಿ ಖಾಲಿ ಅರ್ಜಿ ತನ್ನಿ

ಅರವಿಂದ ನಾವಡ ಮೈಸೂರು
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರ ಉತ್ಸಾಹವನ್ನು ಕಂಡು ಮೆಚ್ಚಲೇಬೇಕು.
ಜಿಲ್ಲಾಡಳಿತಕ್ಕೆ ಒಂದಿಷ್ಟು ಚುರುಕು ಮುಟ್ಟಿಸುವುದಾಗಿ ಹೇಳುತ್ತಿದ್ದಾರೆ, ಅದಕ್ಕೆ ದನಿಗೂಡಿಸುತ್ತಿರುವವರು ಜಿಲ್ಲಾಧಿಕಾರಿ ಹರ್ಷಗುಪ್ತ. ಬಹುಶಃ ಡಿಸಿಯವರನ್ನು ಕಂಡು ಹೇಳುತ್ತಿದ್ದಾರೇನೋ. ಒಮ್ಮೆ ಸರಕಾರಿ ಇಲಾಖೆಯ ಸುತ್ತು ಹಾಕಿ ಬಂದರೆ ಇನ್ನೂ ಉತ್ಸಾಹ ಹೆಚ್ಚಬಹುದು !
ಸದ್ಯದ ಉದಾಹರಣೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ).
ಬಹುಶಃ ಮೈಸೂರಿನಲ್ಲಿರೋ ಕೋಟೆ ಎಂದರೆ ಇದೊಂದೇ ಇರಬೇಕು. ಸಿಕ್ಕಾಪಟ್ಟೆ ಬಂದೋಬಸ್ತ್. ಇಡೀ ಮುಡಾದ ಭದ್ರತೆ ನೋಡಿಕೊಳ್ಳುತ್ತಿರುವ ಖಾಸಗಿ ಭದ್ರತಾ ಪಡೆಗೆ ಜೈ ಎನ್ನಬೇಕೋ, ಉದ್ಧಟತನ ಎನ್ನಬೇಕೋ ಗೊತ್ತಿಲ್ಲ. ಇದು ಸುಮ್ಮನೆ ಒಂದು ರಿಯಾಲಿಟಿ ಚೆಕ್ (ವಾಸ್ತವ ಪರಿಶೀಲನೆ). ಗುರುವಾರ ಮಧ್ಯಾಹ್ನ ಹನ್ನೆರಡೂವರೆ. ಮಾಹಿತಿ ಹಕ್ಕಿನಡಿ ಅರ್ಜಿ ಪಡೆಯಲು ಗೆಳೆಯರೊಬ್ಬರೊಂದಿಗೆ ಮುಡಾಕ್ಕೆ ಹೋದೆ.
ನಮ್ಮ ಮುಡಾ ಕೋಟೆಗೆ ಎರಡು ಬಾಗಿಲುಗಳಿವೆ. ಮೊದಲ ಬಾಗಿಲಿನಲ್ಲಿ ಒಳಹೊಕ್ಕ ಕೂಡಲೇ ನಾಲ್ಕು ಬಾಕ್ಸ್‌ಗಳಿವೆ (ಬ್ಯಾಂಕ್‌ಗಳಲ್ಲಿರುವಂತೆ). ಅದರಲ್ಲಿ ಒಬ್ಬರು  ಸ್ವಲ್ಪ ಖಾಲಿ ಇದ್ದರು. ಉಳಿದ ಕಡೆ ಒಂದಿಷ್ಟು ಮಂದಿ ಇದ್ದರು (ಮುಡಾದಲ್ಲಿ ಕೆಲಸ ಇಲ್ಲ ಅಂತಾರೆ, ಅದು ಬಿಡಿ). ಖಾಲಿ ಇದ್ದಲ್ಲಿ ಹೋಗಿ, `ಮೇಡಂ, ಆರ್‌ಟಿಐ ಫಾರಂ ಬೇಕು' ಅಂದೆವು. ಜಗತ್ತಿನ ಮತ್ತೊಂದು ಅಚ್ಚರಿಯಂತೆ ಅವರು `ಏನು ಆರ್ ಟಿ ಐ ? ಯಾವುದು ಆರ್ ಟಿ ಐ?' ಎಂದು ಪ್ರಶ್ನೆ ಎಸೆದಾಗ ನಾವೇ ಕಂಗಾಲು. ಪರಸ್ಪರ ಮುಖ ನೋಡಿಕೊಂಡು, ಸ್ವಲ್ಪ ಸಾವರಿಸಿಕೊಂಡು, `ಅದೇ ಮೇಡಂ, ಆರ್ ಟಿ ಐ, ಮಾಹಿತಿ ಹಕ್ಕು' ಎಂದು ಜೋರಾಗಿ ಕೇಳಿದೆವು. ಆಗ ನೋಡಿ, ಒಂದು ಮುಗುಳ್ನಗು ಬಂದಿತು. ಆಗ ನೆನಪಾಗಿದ್ದು `ಆಡಳಿತ ಭಾಷೆ ಕನ್ನಡದಲ್ಲೇ' `ಅದಾ...ಆ ಬಾಗಿಲಿನಲ್ಲಿ ಹೋಗಿ. ಅಲ್ಲೊಬ್ಬರು ಇದ್ದಾರೆ, ಅವರೇ ನೋಡಿಕೊಳ್ಳೋದು' ಎಂದರು. ನಂತರ ನಮ್ಮ ಪಯಣ ಎರಡನೇ ಬಾಗಿಲಿಗೆ.
ಅಲ್ಲಿಗೆ ಹೋದಾಗಲೂ ಜನ ಕಡಿಮೆ ಇದ್ದರು. ಬಾಗಿಲಿಗೆ ಬಿಗಿ ಭದ್ರತೆ. ಮೂರು ಮಂದಿ  ಸಿಬ್ಬಂದಿ ಅಕ್ಷರಶಃ ಬಾಗಿಲನ್ನೇ ಕಾಯುತ್ತಿದ್ದರು. `ಸಾರ್, ಅವರು ಎಲ್ಲಿದ್ದಾರೆ?' ಎಂದು ಕೇಳಿದೆವು ನಾವು ಅವರಲ್ಲಿ ಒಬ್ಬರನ್ನು. ಅದಕ್ಕೆ ಸಿಕ್ಕ ಉತ್ತರ, `ನೀವ್ಯಾರ್ರಿ?'. ನಾವು ಅರ್ಜಿ ತೆಗೆದುಕೊಳ್ಳಬೇಕಿತ್ತು, ಅದಕ್ಕೆ ಎಂದರೆ, ಅದಕ್ಕೂ ಅವರಲ್ಲಿ ಸಿದ್ಧ ಉತ್ತರ. `ಒಂದ್ ಕೆಲಸ ಮಾಡಿ, ಒಬ್ಬರೇ ಹೋಗಿ ಬನ್ನಿ'. ಆಸ್ಪತ್ರೆಯಲ್ಲಿ ರೋಗಿಯನ್ನು ನೋಡೋದಿಕ್ಕೆ ಬಿಡ್ತಾರಲ್ಲ ಹಾಗೆಯೇ.

ಆಗ ವ್ಯವಸ್ಥಿತ ಪಟ್ಟಣ, ಈಗ ಅವ್ಯವಸ್ಥೆಗಳ ತಾಣ

ಮೈಸೂರು ಮಹಾರಾಜರ ಕಾಲದಲ್ಲಿ ಸ್ಥಾಪಿತವಾಗಿ ವ್ಯವಸ್ಥಿತ ನಗರವೆನಿಸಿಕೊಂಡ ಕೃಷ್ಣರಾಜನಗರಕ್ಕೆ ಅಮೃತ ಮಹೋತ್ಸವ ಸಂಭ್ರಮ. ಆದರೆ, ರಸ್ತೆಗಳೇ ಸರಿ ಇಲ್ಲ. ಮಹಾರಾಜರ ಕಾಲದಲ್ಲಿ ಎಷ್ಟು ವ್ಯವಸ್ಥಿತವಾಗಿತ್ತೋ ಈಗ ಅಷ್ಟೇ ಅಸ್ತವ್ಯಸ್ತ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಪಾರವೇ ಇಲ್ಲ. ಪಟ್ಟಣದ ಪ್ರಮುಖ ರಸ್ತೆಗಳಾದ ಹಾಸನ-ಮೈಸೂರು ರಸ್ತೆ, ಕಂಠೇನಹಳ್ಳಿಯ ಬೈಪಾಸ್ ರಸ್ತೆ, ಬಜಾರ್ ರಸ್ತೆ, ಸಿ.ಎಂ.ರಸ್ತೆ ಸೇರಿದಂತೆ ಇನ್ನಿತರ ರಸ್ತೆಗಳಲ್ಲಿ ಓಡಾಡುವಂತೆಯೇ ಇಲ್ಲ. ಪರಿಣಾಮ ವಾಹನ ಸವಾರರಿಗೆ ಯಮಯಾತನೆ. ಹಲವೆಡೆ ರಸ್ತೆಗಳು ಕೆಸರು ಗದ್ದೆಯಾಗಿದ್ದರೆ, ಇನ್ನು ಕೆಲವೆಡೆ ಬರೀ ಹೊಂಡ. ಇಂಥ ರಸ್ತೆಯಲ್ಲಿ ಓಡಾಡೋದು ಹೇಗೆ ಎಂದು ಪ್ರಶ್ನಿಸುತ್ತಾರೆ ಪಟ್ಟಣದ ಹಿರಿಯ ನಾಗರಿಕರು ಮತ್ತು ಚಿಂತಕರು.

ಚಿಕ್ಕಣ್ಣನವರ `ಕೋಟೆ'ಯಲ್ಲಿ ಹಳ್ಳಗಳೇ ದೊಡ್ಡಣ್ಣ

ಪಟ್ಟಣ ಪಂಚಾಯಿತಿಯವರಿಗೆ ಪರಸ್ಪರ ಕೆಸರೆರಚಾಟದ ನಡುವೆ ಅಭಿವೃದ್ಧಿ ಕೆಲಸಕ್ಕೆ  ಪುರುಸೊತ್ತು ಇಲ್ಲವಾಗಿದೆ. ಇವರ ದೌರ್ಬಲ್ಯದಿಂದಾಗಿ ಅಧಿಕಾರಿಗಳು ನಿಷ್ಕ್ರಿಯ ರಾಗಿ ಮಲಗಿದ್ದಾರೆ. ಇವರ ಕಿವಿಹಿಂಡಿ ಕೆಲಸ ಮಾಡಿಸುವ ದೊಡ್ಡತನವನ್ನು ಶಾಸಕ ಚಿಕ್ಕಣ್ಣ  ತೋರಿಸಲೇ ಇಲ್ಲ.

ಹೋರಾಟಕ್ಕೆ ಸಜ್ಜಾದ ಭೂಮಿತಾಯಿ ಮಕ್ಕಳು


 ವಿಕ ಸುದ್ದಿಲೋಕ ಮೈಸೂರು 
ಹಸಿರು ಹೊದ್ದ ಭೂಮಿ. ತೆನೆಗಟ್ಟಿದೆ ಭತ್ತ. ಹೂ ನಗೆ ಸೂಸುತ್ತಿರುವ ತೆಂಗು, ಕಂಗು, ಕಬ್ಬು , ಅರಿಶಿನ, ತರಕಾರಿ. ಸಮೃದ್ಧಿಯ ವಾತಾವರಣ. ಆದರೆ,ಗ್ರಾಮಸ್ಥರ ಮುಖದಲ್ಲಿ ಮಡುಗಟ್ಟಿದ ಆತಂಕ.ನೆಲ,ನೆಲೆ ಎರಡನ್ನೂ ಕಳೆದುಕೊಳ್ಳುವ ಭಯ.
ಇದು ಎಚ್.ಡಿ.ಕೋಟೆ  ತಾಲೂಕು ಹಳ್ಳದ ಮನುಗನಹಳ್ಳಿ ಗ್ರಾಮದ ಸದ್ಯದ ವಾತಾವರಣ. ಊರಿನ ಪ್ರವೇಶದಲ್ಲಿರುವ ಕೆರೆ ತುಂಬಿ ತುಳುಕುತ್ತಿದೆ. ೩೦,೪೦ ಅಡಿ ಕೊರೆದರಷ್ಟೆ ಸಾಕು, ಕೊಳವೆ ಬಾವಿಗಳು ನೀರು ಸೂಸುತ್ತವೆ. ಕೆಲವಂತೂ ತಾನೇ ತಾನಾಗಿ ಉಕ್ಕುತ್ತಿವೆ. ವರ್ಷಕ್ಕೆ ಎರಡು,ಕೊಳವೆ ಬಾವಿ ಹೊಂದಿದವರು ಮೂರು ಬೆಳೆ ತೆಗೆಯುತ್ತಾರೆ. ಆದರೂ,ಅಧಿಕಾರಿಗಳ ಪ್ರಕಾರ  ಇದು ಬರಡು ಭೂಮಿ.

ರಸ್ತೆಯಲ್ಲಿ ಪವಡಿಸುವೆ


ರಾಜ್ಯ ಸರಕಾರದ ಗಮನ ಸೆಳೆಯಲು ರಸ್ತೆಯಲ್ಲಿ ಪವಡಿಸಿಯೇ ಪ್ರತಿಭಟಿಸುತ್ತೇನೆ ಎಂದು ಶಾಸಕ ಕೆ.ವೆಂಕಟೇಶ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ವಿಜಯ ಕರ್ನಾಟಕದಲ್ಲಿ ಸೋಮವಾರ `ಪವಡಿಸಿದ ವೆಂಕಟೇಶ' ತಲೆಬರಹದಲ್ಲಿ ಪ್ರಕಟವಾದ `ಹೊಂಡ ಸಿಟಿ ವಿಕ ಅಭಿ ಯಾನ'ಕ್ಕೆ ಪ್ರತಿಕ್ರಿಯಿಸಿ, ಪಟ್ಟಣ ಸೇರಿದಂತೆ ತಾಲೂಕಿನ ಮುಖ್ಯರಸ್ತೆಗಳ ದುಸ್ಥಿತಿಯ ಬಗ್ಗೆ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳು, ಮಂತ್ರಿಗಳ ಕಚೇರಿಗೆ ಪತ್ರ ಬರೆದು, ಮೌಖಿಕವಾಗಿ ವಿವರಿಸಿದ್ದರೂ ಪ್ರಯೋಜ ನ ವಾಗಿಲ್ಲ. ಮೂಲಸೌಕರ್ಯಗಳ ಅಭಿವೃದ್ಧ್ದಿಗೆ ಕಿಂಚಿತ್ ಅನುದಾನ ನೀಡದೆ ಸರಕಾರ ತಾರತಮ್ಯ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮೂರ್ಖ ಮುಖ್ಯಮಂತ್ರಿ :ಮೈಸೂರು ಜಿಲ್ಲೆಯಲ್ಲಿ ಅತಿಹೆಚ್ಚು  ಮಳೆಯಿಂದ ಕೋಟ್ಯಂತರ ರೂ. ನಷ್ಟ ಅನುಭವಿಸುತ್ತಿರುವ ತಾಲೂಕಿನ ಜನತೆಗೆ ಸೂಕ್ತ ಪರಿಹಾರ ದೊರಕಿಸದೆ ಆದ್ಯತೆ ಅಲ್ಲದ ಸೀರೆ, ಲಂಗ ಹಂಚಲು ಮುಂದಾಗಿರುವ ಯಡಿಯೂರಪ್ಪ ಮೂರ್ಖ ಮುಖ್ಯಮಂತ್ರಿ ಎಂದು ಟೀಕಿಸಿದ ಅವರು, ಆಡಳಿತ ಪಕ್ಷದಲ್ಲೇ ಹೆಚ್ಚು ಕಾಲ ಕಳೆದ ನಾವು ಎಂದೂ ಇತರೆ ಪಕ್ಷದ ಸದಸ್ಯರ ಕ್ಷೇತ್ರಗಳಿಗೆ ಈ ಧೋರಣೆ ತೋರಿಲ್ಲ.
 ಇಂದು ಹೋರಾಟ  ಅನಿವಾರ್‍ಯವಾಗಿದ್ದು ರಸ್ತೆಗಳ ನಿರ್ಮಾಣದ ಬಗ್ಗೆ ಸರಕಾರದ ಗಮನ ಸೆಳೆಯಲು ಪಟ್ಟಣದ ಬೆಟ್ಟದಪುರ ಸರ್ಕಲ್ ಬಳಿ ೫ ಸಾವಿರಕ್ಕೂ ಹೆಚ್ಚು  ಕಾರ್ಯಕರ್ತರೊಂದಿಗೆ ಅನಿರ್ದಿಷ್ಟಾವಧಿ ರಸ್ತೆ ತಡೆ ನಡೆಸುವುದಾಗಿ ತಿಳಿಸಿದ್ದಾರೆ.
ಪ.ಪಂ.ನಿರ್ಲಕ್ಷ್ಯದ ಬಗ್ಗೆ ನಾಚಿಕೆ
ಟೌನ್ ಪಂಚಾಯಿತಿ ಸದಸ್ಯರಿಗೆ ಸ್ವಾರ್ಥ ವೇ ಹೆಚ್ಚಾಗಿದ್ದು ಜನರ ಅಭಿವೃದ್ಧಿಯ ಬಗ್ಗೆ ಗಮನಹರಿಸುತ್ತಿಲ್ಲ . ಇಂಥ ಸದಸ್ಯರನ್ನು ಒಳಗೊಂಡ ಪ.ಪಂ.ಗೆ ತೆರಳಲು ನಾಚಿಕೆ ಯಾಗುತ್ತಿದೆ ಎಂದು ವಿಷಾದದಿಂದ ಹೇಳಿದರು.

ಹರ ಹರಾ ಮಹಾದೇವಾ!

ತಿ.ನರಸೀಪುರದಲ್ಲಿ ರಸ್ತೆಯಲ್ಲಿ ಹೊಂಡವಿದೆ ಎನ್ನುವುದಕ್ಕಿಂತ ಹೊಂಡಗಳ ನಡುವೆ ರಸ್ತೆಯನ್ನು ಹುಡುಕಿಕೊಳ್ಳಿ ಎನ್ನುವುದೇ ಸೂಕ್ತ . ಹಿಂದುಳಿದ ತಾಲೂಕು ಕೇಂದ್ರದಲ್ಲಿ ರಸ್ತೆ ಅಭಿವೃದ್ಧಿ ಏಕೆ ಎಂಬುದು ಅಧಿಕಾರಸ್ಥರ ಮನಸ್ಥಿತಿಯಿದ್ದಂತಿದೆ.
ಪಟ್ಟಣದ ಒಂದು ರಸ್ತೆಯೂ ನೆಟ್ಟಗಿಲ್ಲ. ಕೆಲವೆಡೆ  ಚರಂಡಿ ನೀರು ಹರಿಯಲು ಡಾಂಬರು ರಸ್ತೆಯನ್ನೇ ಅಗೆಯಲಾಗಿದೆ. ಲಿಂಕ್‌ರಸ್ತೆಯಲ್ಲಿ ಹಳ್ಳಗಳಿಗೆ ಲಿಂಕ್ ಸಿಗಲಿದೆ. ಮಾರುಕಟ್ಟೆ ರಸ್ತೆ, ರೇಷ್ಮೆ ಗೂಡಿನ ಮಾರುಕಟ್ಟೆ ಮುಂದಿನ ರಸ್ತೆ ಹಳ್ಳಗಳ ಆವಾಸ ಸ್ಥಾನವಾಗಿದೆ.
ತಾಲೂಕು ಕಚೇರಿ ರಸ್ತೆಯೂ  ಹಳ್ಳಗಳಿಂದ ಮುಕ್ತ ವಾಗಿಲ್ಲ.ಗಹಮಂಡಳಿ ಕಾಲೋನಿಯಲ್ಲಿ ಮಳೆ ಸುರಿದಾಗ ಕಪ್ಪು ಮಣ್ಣಿನ ರಸ್ತೆಯಲ್ಲಿ ಸಂಚಾರ ದುಸ್ತರ. ವಿವೇಕಾನಂದ ನಗರ, ತ್ರಿವೇಣಿ ನಗರ, ಬೈರಾಪುರದಲ್ಲಿ ರಸ್ತೆಗಳು ರಸ್ತೆಗಳಾಗಿ ಉಳಿದಿಲ್ಲ.  ಆಡಳಿತ ಕೇಂದ್ರ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಮಳೆ ಬಂದಾಗ ಮಿನಿ ಕೆರೆ ನಿರ್ಮಾಣವಾಗುತ್ತದೆ. ಇನ್ನು ವಿದ್ಯೋದಯ ಕಾಲೇಜು ವೃತ್ತದಿಂದ ಹೊಸ ತಿರುಮಕೂಡಲು ವೃತ್ತದವರೆಗೆ ಪ್ರಗತಿಯಲ್ಲಿ ರುವ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಜನರನ್ನು ಹೈರಾಣಾಗಿಸಿದೆ. ಮಳೆ ಬಿದ್ದಾಗ ಈ ರಸ್ತೆಗಳಲ್ಲಿ ಸಂಚರಿಸಲು ಪ್ರಯಾಸಪಡಬೇಕು.

ಪವಡಿಸಿದ ವೆಂಕಟೇಶ

ಪಿರಿಯಾಪಟ್ಟಣ ಪಟ್ಟಣ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸುಗಮ ರಸ್ತೆ  ವ್ಯವಸ್ಥೆಯ ಬಗ್ಗೆ ಚಿಂತಿಸೇ ಇಲ್ಲ. ಜಿಲ್ಲೆಯ ಹಿರಿಯ ಶಾಸಕರಲ್ಲಿ ಒಬ್ಬರಾದ ಕೆ.ವೆಂಕಟೇಶ್ ಗ್ರಾಮಾಂತರ ರಸ್ತೆಗಳಿರಲಿ, ಪಟ್ಟಣದ ರಸ್ತೆಗಳ ಬಗ್ಗೆಯೂ ತಲೆಕೆಡಿಸಿಕೊಂಡಿದ್ದು ಕಡಿಮೆಯೇ.

ನಿನ್ನೆ ಮಂಜುನಾಥ ಮಹಿಮೆ ಇಂದು ಶ್ರೀನಿವಾಸ ಪ್ರಸಾದ

ಶ್ರೀಕಂಠೇಶ್ವರನ ದರ್ಶನಕ್ಕೆಂದೋ, ತುಂಬಿ ಹರಿಯುವ ಕಪಿಲೆಯನ್ನ ಕಣ್ತುಂಬಿಕೊಳ್ಳಲೆಂದೋ ದೂರದೂರಿನಿಂದ ಬರುವವವರು ಇಲ್ಲಿಗ್ಯಾಕಾದರೂ ಬಂದೆವೋ ಎಂದು ಪರಿತಪಿಸುವ ಸ್ಥಿತಿ ಇಲ್ಲಿಯದು. ಇನ್ನು ಇಲ್ಲಿನ ನಿವಾಸಿಗಳಿಗೋ, ನಿತ್ಯ ಹಿಡಿಶಾಪ ಹಾಕುತ್ತ ಸಂಚರಿಸಬೇಕಾದ ಅನಿವಾರ್‍ಯತೆ.
ಇದು ನಂಜನಗೂಡಿನ ದುರವಸ್ಥೆ. ದಕ್ಷಿಣಕಾಶಿ,  ಪ್ರಸಿದ್ಧ ಯಾತ್ರಾಸ್ಥಳ ಎಂದೆಲ್ಲಾ ಕೀರ್ತಿ ಪಡೆದಿರುವ ನಂಜನಗೂಡಿಗೆ  ಈಗ  ಕುಲಗೆಟ್ಟ ರಸ್ತೆಗಳ ಅಪಕೀರ್ತಿ. ಮೈಸೂರು ರಸ್ತೆಯಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಚಾ.ನಗರ ಬೈಪಾಸ್ ರಸ್ತೆ, ಬಸ್ ನಿಲ್ದಾಣ, ದೇವಸ್ಥಾನಕ್ಕೆ ಸಂಪರ್ಕಿಸುವ ಪಟ್ಟಣದೊಳ ಗಿನ ಪ್ರಮುಖ ಮಹಾತ್ಮಗಾಂಧಿ ರಸ್ತೆಗಳ ಸ್ಥಿತಿಯಂತೂ ಆ ಶ್ರೀಕಂಠೇಶ್ವರನಿಗೇ ಪ್ರೀತಿ ! ಇನ್ನು ಹಲವು ಗ್ರಾಮಗಳಿಗೆ ತೆರಳಲು ಇರುವ ರೈಲ್ವೆ ಅಂಡರ್ ಬ್ರಿಡ್ಜ್ ರಸ್ತೆಯಂತೂ ಮಳೆ ಬಂತೆಂದರೆ ಓಡಾಡಲೂ ಆಗದ ಸ್ಥಿತಿ. ಹೊಳೆಯಂತೆ ಇಲ್ಲಿ ನೀರು ನಿಂತಿರುತ್ತದೆ.
ಪಟ್ಟಣದ ಬಹುತೇಕ ರಸ್ತೆಗಳು ಹಳ್ಳ-ಗುಂಡಿಗಳಿಂದ ಕೂಡಿದ್ದು  ಮಳೆ ಬಂದರೆ ಕೆರೆಯಂತಾಗುತ್ತವೆ.  ಬಿಸಿಲು ಬಂದರೆ ಧೂಳು ಹಾರುತ್ತದೆ.  ಪಟ್ಟಣದ ಇತರ ಪ್ರಮುಖ ರಸ್ತೆ ಗಳಾದ   ರಾಷ್ಟ್ರಪತಿ  ರಸ್ತೆ, ಹುರ- ಹುಲ್ಲಹಳ್ಳಿ- ನಂಜನಗೂಡು - ಮೈಸೂರು ರಸ್ತೆ ಹಳ್ಳಕೂಳ್ಳಗಳಿಂದ ಕೂಡಿದ್ದು ಬಾಯ್ತೆ ರೆದು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಅನೇಕ ಮಂದಿ ರಾತ್ರಿ ವೇಳೆ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಇನ್ನು ಪಟ್ಟಣದ ಶ್ರೀರಾಂಪುರ, ಶಂಕರಪುರ, ಚಾಮಲಾಪುರ ಹುಂಡಿ, ನರಸಣ್ಣಆಗ್ರಹಾರ, ಹೌಸಿಂಗ್‌ಬೋರ್ಡ್, ನೀಲಕಂಠನಗರ,ಎಕ್ಸ್‌ಟೆಷನ್ ಬಡಾವಣೆ ಸೇರಿದಂತೆ ೨೭ ವಾರ್ಡ್‌ಗಳಲ್ಲಿ  ಒಳಚರಂಡಿಗಾಗಿ ರಸ್ತೆ ಅಗೆದು ಸರಿಯಾಗಿ ಮುಚ್ಚದೆ ಮಳೆ ಬಂದರೆ ಕೆಸರಿನ ಗದ್ದೆಗಳಾಗುತ್ತವೆ.
ಈ ರಸ್ತೆಗಳ ಅವ್ಯವಸ್ಥೆ ನೋಡಿದರೆ  ಇಲ್ಲಿ ಪುರಸಭೆ , ಜನಪ್ರತಿನಿಧಿಗಳು, ಅಧಿಕಾರಿಗಳು ಜೀವಂತ ಇದ್ದಾರೆಯೇ ಎಂಬ ಸಂಶಯ ಮೂಡಿದರೆ ಆಶ್ಚರ್ಯವಿಲ್ಲ. ಈ ಸಂಶಯ ನಿವಾರಿಸಲು ಅವರೇ ಮುಂದಾಗಬೇಕಷ್ಟೆ.

ಕೊಡವ ಭಾಷೆಯ ಚೀತೆ ಸಫಲ

ಕೊಡಗಿನಲ್ಲಿ ನೆಲೆನಿಂತ ಮೂಲನಿವಾಸಿ ಯರವ ಜನಾಂಗ (ಪರಿಶಿಷ್ಟ ಜಾತಿ) ಕುಡಿತದ ಮೂಲಕ ಅಧೋಗತಿಗೆ ತಲುಪಿರುವುದನ್ನು ಪ್ರತಿಬಿಂಬಿಸುವಲ್ಲಿ ಯರವ ಮತ್ತು ಕೊಡವ ಭಾಷೆಯಲ್ಲಿ ಮೂಡಿ ಬಂದ `ಚೀತೆ' (ಯರವ ಜನಾಂಗದ ಮಹಿಳೆ ಹೆಸರು) ನಾಟಕ ಸಫಲವಾಯಿತು.
ಒಂದು ನಾಟಕದಲ್ಲಿ ಎರಡು ಭಾಷೆಯನ್ನು ಸರಿಸಮಾನವಾಗಿ ಬಳಸಿ ನಾಟಕ ಪ್ರಸ್ತುತ ಪಡಿಸಿದ್ದು ವಿಶೇಷ. ಯರವ ಜನಾಂಗದ ದುರಂತಕ್ಕೆ ಕಾರಣ ಯಾರು? ಎಂಬ ಪ್ರಶ್ನ್ನೆ ನಾಟಕ ವೀಕ್ಷಿಸಿದವರನ್ನು ಕಾಡಿಸಿದ್ದು ನಿಜ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನಾಟಕ ಕಲಿಕೆ ಯೋಜನೆಯಡಿ `ಸೃಷ್ಟಿ ಕೊಡಗು ರಂಗ'ದ ಅಡ್ಡಂಡ ಸಿ. ಕಾರ್ಯಪ್ಪನವರ ಪರಿಕಲ್ಪನೆ ಮತ್ತು ನಿರ್ದೇಶನವಿದ್ದ `ಚೀತೆ' ಪ್ರದರ್ಶನಗೊಂಡಿದ್ದು ನ.೯ ರಂದು ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದಲ್ಲಿ.

ನಮ್ಮೂರಲ್ಲಿ ಹಂಗೇನಿಲ್ಲ, ರಸ್ತೆ ಬಗ್ಗೆ ಕೇಳೋಂಗಿಲ್ಲ !

ವಿಕ ವಿಶೇಷ ಮೈಸೂರು
ರಾಜ್ಯ ಸರಕಾರ ಸೀರೆ ಹಂಚುವುದರಲ್ಲಿ ಮುಳು ಗಿದೆ, ಜಿಲ್ಲಾಡಳಿತ ಅದರ ಹಿಂದೆ ಮುಂದೆ ಓಡಾಡುವುದರಲ್ಲಿ ಬ್ಯುಸಿ. ಹಾಗಾಗಿ ರಸ್ತೆ ಇತ್ಯಾದಿ ಮೂಲ ಸೌಕರ್ಯಗಳ ಬಗ್ಗೆ ಕೇಳೋರೇ ಇಲ್ಲ. ತಾಲೂಕಿನ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ, ನಮ್ಮ ತಾಲೂಕು ಕೇಂದ್ರಗಳ ರಸ್ತೆ ಕಂಡರೆ ಜ್ವರ ಬರಬೇಕು.
ಬಿಡಿ, ಯಾರೂ ತುಟಿಪಿಟಿಕ್ ಎನ್ನುವಂತಿಲ್ಲ. ಯಾಕೆಂದರೆ ಎಲ್ಲೂ ರಸ್ತೆಗಳೇ ಇಲ್ಲ. ಮೈಸೂರೂ ಸೇರಿದಂತೆ ಮೈಸೂರು ಜಿಲ್ಲೆಯ ಏಳು ತಾಲೂಕು ಗಳಾದ ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ. ಕೋಟೆ, ತಿ. ನರಸೀಪುರ, ನಂಜನಗೂಡು, ಕೆ. ಆರ್. ನಗರ ಪಟ್ಟಣಗಳ ರಸ್ತೆಗಳನ್ನು ಹುಡುಕಿ ಕೊಂಡು ಹೊರಟರೆ ಸಿಗೋದೇ ಇಲ್ಲ. ಹಾಗಿವೆ ಪ್ರತಿ ಪ್ರಮುಖ ರಸ್ತೆಗಳೂ.
ಆಳುದ್ದದ ಗುಂಡಿಗಳಲ್ಲಿ ಬಿದ್ದವರು ಎದ್ದು ಬಂದರೇ ಅದೃಷ್ಟ ಎನ್ನುವಂತಿದೆ. ಜನರೂ ಚಕಾರ ವೆತ್ತಿಲ್ಲ ಎಂದುಕೊಂಡು ಸ್ಥಳೀಯ ಸಂಸ್ಥೆಗಳು (ಪುರಸಭೆ, ಪಟ್ಟಣ ಪಂಚಾಯಿತಿಗಳು) ತಣ್ಣಗೆ ಕುಳಿತಿವೆ, ಒಂಚೂರೂ ತಲೆ ಕೆಡಿಸಿಕೊಂಡೇ ಇಲ್ಲ.
ಒಂದಷ್ಟು ದನಿ ಎತ್ತಿ ಕೆಲಸ ಮಾಡಿಸಬೇಕಾದ ಶಾಸಕರಾಗಲೀ, ಸ್ಥಳೀಯ ಸಂಸ್ಥೆ ಸದಸ್ಯರಾಗಲೀ ಅವರೇ ತೆಪ್ಪಗೆ ಕುಳಿತಿದ್ದಾರೆ. ಅಷ್ಟೇ ಏಕೆ ? ಅವರು ಇರೋ ರಸ್ತೆಗಳ ಸ್ಥಿತಿಯೂ ಅದೇ. ತಮಾಷೆಗೆ ಇಂದು ಹುಣಸೂರಿನ ಕತೆ ಕೇಳಿ : ಮಾಜಿ ಸಚಿವ ಜಿ.ಟಿ.ದೇವೇಗೌಡ, ಹಾಲಿ ಶಾಸಕ ಎಚ್.ಪಿ. ಮಂಜುನಾಥ್ ಸೋದರ, ನ್ಯಾಯಾಧೀಶರು, ಅಧಿಕಾರಿಗಳು, ಗುತ್ತಿಗೆದಾರರು ಸೇರಿದಂತೆ ಪ್ರತಿಷ್ಠಿತರೇ ಇರೋ ಮಂಜುನಾಥ ಬಡಾವಣೆಯ ರಸ್ತೆಗಳದ್ದೂ ಅದೇ ಕಥೆ.

ದಸರೆಗೊಂದು ಪ್ರಾಧಿಕಾರ ಬೇಕು, ಅದಕ್ಕೊಂದು ಸ್ಪಷ್ಟ ರೂಪ ಕೊಡಬೇಕು...

ವಿಶ್ವಪ್ರಸಿದ್ಧ ಜಂಬೂಸವಾರಿ ಮುಗಿದು ತಿಂಗಳಷ್ಟೇ ಆಗಿದೆ. ಇಂಥ ಹಬ್ಬಕ್ಕೆ ಭಿನ್ನ ಮಾರ್ಗ ಬೇಕು ಎನ್ನುವ ಚಿಂತನೆ, ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಆಡಳಿತಜ್ಞರು, ಸಾಧಕರು, ಗಣ್ಯರು, ಸಾರ್ವಜನಿಕರು, ದಸರೆಯನ್ನು ಪ್ರೀತಿಸು ವವರು...
ದಸರೆ ಪ್ರಾಧಿಕಾರ ಏಕೆ ಬೇಕು ಎನ್ನುವ ಆಶಯದೊಂದಿಗೆ ವಿಜಯಕರ್ನಾಟಕ ಆರಂಭಿಸಿದ ಅಭಿಯಾನ ಅಂತಿಮ ಹಂತಕ್ಕೆ ಬಂದಿದೆ. ದಸರೆ ಪ್ರಾಧಿಕಾರ ಏಕೆ ಬೇಕು ಎನ್ನುವುದಕ್ಕೆ ಹಲವರು ತಮ್ಮ ಅಭಿಪ್ರಾಯಗಳ ಮೂಲಕ ವಿಷದಪಡಿಸಿದ್ದಾರೆ.
ಅಕ್ಟೋಬರ್ ೨೬ರಂದು ಆರಂಭಗೊಂಡಿದ್ದು ಅಭಿಯಾನ. ನಿತ್ಯ ನಾಲ್ಕು ಮಂದಿ ವಿಭಿನ್ನ ಕ್ಷೇತ್ರದ ೩೧ ಮಂದಿ ಅಭಿಪ್ರಾಯಗಳು ೧೬ ದಿನಗಳ ಅವಧಿಯಲ್ಲಿ ಪ್ರಕಟವಾದವು. ಇದರಲ್ಲಿ ದಸರೆಯ ಉಸ್ತುವಾರಿ ಹೊತ್ತ ರಾಜಕೀಯ ಧುರೀಣರು, ಅಧಿಕಾರಿಗಳು, ದಸರೆಯ ಭಾಗವಾಗಿಕೊಂಡು ಬಂದ ಗಣ್ಯರು ಮುಕ್ತವಾಗಿ ಮಾತನಾಡಿದರು.
ನಾಡಹಬ್ಬವೆನ್ನುವುದು ಕಾಟಾಚಾರದ ಉತ್ಸವವಾಗಬಾರದು. ದಸರೆ ಮೂಲಕ ಮೈಸೂರಿನ ಅಭಿವೃದ್ಧಿಗೆ ಅವಕಾಶವಾಗಬೇಕು. ಅದಕ್ಕೊಂದು ರೂಪ ಸಿಗುವಂತಾಗಬೇಕು. ರೂಪ ನೀಡಲು ಸಂಸ್ಥೆ ಯೊಂದು ಬೇಕೇ ಬೇಕು ಎನ್ನುವುದು ಬಹುತೇಕರ ಅಭಿಪ್ರಾಯ ವಾಗಿತ್ತು. ಈ ನಿಟ್ಟಿನಲ್ಲಿ ದಸರೆ ಪ್ರಾಧಿಕಾರ ರಚನೆಗೆ ಇದು ಸಕಾಲ.

ಈ ಮೌಢ್ಯ ಕಳೆಯೋಲ್ಲ, ಚಾ.ನಗರಕ್ಕೆ ಸಿಎಂ ಬರೋಲ್ಲ

ವಿಕ ವಿಶೇಷ ಚಾಮರಾಜನಗರ
ನೀವು ಏನೇ ಹೇಳಿ, ಈಗಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಚಾಮರಾಜ ನಗರಕ್ಕೆ ಬರದೇ ತಪ್ಪಿಸಿಕೊಂಡರು !
`ಭಾಗ್ಯಲಕ್ಷ್ಮಿ' ತಾಯಂದಿರಿಗೆ ಸೀರೆ ವಿತರಿಸುವ ಕಾರ್ಯಕ್ರಮವನ್ನು ಗುಂಡ್ಲುಪೇಟೆಯಲ್ಲಿ ನಿಗದಿ ಪಡಿಸಿದ ಬೆನ್ನಲ್ಲೇ ಜಿಲ್ಲೆಯ ಜನರಲ್ಲಿ ಚರ್ಚೆಯಾಗು ತ್ತಿರುವ ಸಂಗತಿ ಇದು. ಐದು ದಿನಗಳಿಂದ ವ್ಯಾಪಕ ಚರ್ಚೆಗೊಳಗಾಗುತ್ತಿರುವುದಲ್ಲದೇ, ಮುಖ್ಯಮಂತ್ರಿ ಯವರ ನಿಲುವಿಗೆ ವಿರೋಧವೂ ಕೇಳಿಬರುತ್ತಿದೆ.
ವಿಚಿತ್ರವೆಂದರೆ ಗುಂಡ್ಲುಪೇಟೆಯಲ್ಲಿ ನ. ೧೫ ರಂದು ನಿಗದಿಯಾಗಿರುವ ಕಾರ್‍ಯಕ್ರಮದಲ್ಲಿ  ೧೯ ಸಾವಿರ ಮಂದಿಗೆ ಸೀರೆ ವಿತರಿಸಿ, ಕೋಟ್ಯಂತರ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಅಂದೇ ಕೊಡಗಿನಲ್ಲೂ ಸೀರೆ ಹಂಚಲಾಗುತ್ತಿದೆ. ಅಲ್ಲಿ ಮಾತ್ರ ತಾಲೂಕು ಕೇಂದ್ರಕ್ಕೆ ಕಾರ್‍ಯಕ್ರಮ ಸ್ಥಳಾಂತರಗೊಂಡಿಲ್ಲ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದುವರೆಗೆ ನಡೆದ ಸೀರೆ ವಿತರಣೆ ಕಾರ್‍ಯಕ್ರಮ ಸಂಘಟನೆಯಾದದ್ದು ಜಿಲ್ಲಾ ಕೇಂದ್ರದಲ್ಲೇ. ಹಾಗಾಗಿ ಸಹಜವಾಗಿ ಚಾಮ ರಾಜನಗರದ ಜನತೆ `ಈ ಬಾರಿಯಾದರೂ ಮುಖ್ಯ ಮಂತ್ರಿಯವರು ಬಂದು ಅಭಿವೃದ್ಧಿಗೆ ಚಾಲನೆ ನೀಡುವರು' ಎಂದು ಕನಸು ಕಂಡರು. ಆದರೆ, ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಚಾಮರಾಜನಗರ ಜಿಲ್ಲೆಯ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಗುಂಡ್ಲುಪೇಟೆಯಲ್ಲಿ ಸೀರೆ ಹಂಚುವುದಾಗಿ ಜಿಲ್ಲಾಡಳಿತ ಪ್ರಕಟಿಸಿತು. ಇದರಿಂದ ಜನ ಅಯ್ಯೋ ನಮ್ಮ ಆಸೆ ಇಷ್ಟೇ ಎಂದು ಪರಿತಪಿಸುವಂತಾಗಿದೆ.

ಪ್ರಾಣ ಒತ್ತೆಯಿಟ್ಟು ಜಲಾಶಯವನ್ನೇ ಈಜಿದ !

ವಿಕ ಸುದ್ದಿಲೋಕ ಶ್ರೀರಂಗಪಟ್ಟಣ
ಸೋರುತ್ತಿದ್ದ ಮನೆ ಮಾಳಿಗೆ ದುರಸ್ತಿಗೆ ಪ್ರಾಣವನ್ನೇ ಒತ್ತೆಯಿಟ್ಟ.
ಈತನ ಸಾಹಸ ವ್ಯರ್ಥವಾಗಲಿಲ್ಲ. ಕೆಆರ್‌ಎಸ್‌ಗೆ ಜಿಗಿದು ಸಾಹಸ ಮೆರೆದ ಆತನ ಬೆನ್ನು ತಟ್ಟಿದ ಗ್ರಾಮಸ್ಥರು ಮನೆ ದುರಸ್ಥಿಗೆ ೧೫ ಸಾವಿರ ರೂ. ನೆರವು ನೀಡುವ ವಾಗ್ದಾನವಿತ್ತಿ ದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಹಳೆಉಂಡವಾಡಿಯ ರವಿ(೩೨) ಆ ಸಾಹಸಿ ಯುವಕ. ತುಂಬಿ ತುಳುಕುತ್ತಿರುವ ಕೆಆರ್‌ಎಸ್ ಜಲಾಶಯದಲ್ಲಿ ಈಜಿಕೊಂಡು ಒಂದು ದಡದಿಂದ ಮತ್ತೊಂದು ದಡವನ್ನು ೩ ಗಂಟೆ ೧೮ ನಿಮಿಷದಲ್ಲಿ  ತಲುಪಿದ.

ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಮೇಲ್ದರ್ಜೆಯ ಚಿಕಿತ್ಸೆ

ಜೆ. ಶಿವಣ್ಣ ಮೈಸೂರು
ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ (ಇ.ಡಿ. ಹಾಸ್ಪಿಟಲ್)ಯನ್ನು ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸುಮಾರು ೧೮೬೧ರಲ್ಲಿ ಆರಂಭಗೊಂಡ ಆಸ್ಪತ್ರೆ ೧೫೦ ವರ್ಷಗಳನ್ನು ದಾಟಿದ್ದು, ಪ್ರಸ್ತುತವಿರುವ ೫೦ ಹಾಸಿಗೆಗಳಿಂದ ೨೫೦ ಹಾಸಿಗೆಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆ ಸುಧಾರಣೆ ಯೋಜನೆಯಡಿ ಹೊಸ ಕಟ್ಟಡಗಳೊಂದಿಗೆ ಆಸ್ಪತ್ರೆಯನ್ನು ವಿಸ್ತರಿಸಿ ಅತ್ಯಾಧುನಿಕ ವಾಗಿ ಸುಸಜ್ಜಿತಗೊಳಿಸಲು ಚಿಂತನೆ ನಡೆಸಲಾಗಿದೆ.
ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಕಾರ್‍ಯದರ್ಶಿ ರಮಣರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿರುವರು. ಮೈಸೂರಿನಲ್ಲಿ `ಜಿಲ್ಲಾ ಆಸ್ಪತ್ರೆ' ಇಲ್ಲ ಎನ್ನುವ ಕಾರಣಕ್ಕೆ ಸರಕಾರವೂ ಆಸಕ್ತಿ ವಹಿಸಿದೆ ಎನ್ನಲಾಗಿದ್ದು, ಅನುಮತಿ ದೊರೆತರೆ  ಇ.ಡಿ.ಆಸ್ಪತ್ರೆ `ಸ್ಪೆಷಾಲಿಟಿ ಆಸ್ಪತ್ರೆ'ಯಾಗಿ ಬದಲಾ ಗಲಿದೆ. 
ಆರಂಭದಲ್ಲಿ ೩೦ ಹಾಸಿಗೆಗಳನ್ನು ಹೊಂದಿದ್ದ  ಆಸ್ಪತ್ರೆ ಒಳರೋಗಿ ಗಳ ಚಿಕಿತ್ಸೆಗೆ ಮೀಸಲಾ ಗಿತ್ತು. ೨೦೦೪-೦೫ರಲ್ಲಿ ೫೦ ಹಾಸಿಗೆಗಳಿಗೇರಿದ ಬಳಿಕ ಹೊರರೋಗಿಗಳ ತಪಾಸಣೆಯನ್ನೂ ಆರಂಭಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊರತುಪಡಿಸಿ ಸುತ್ತಮುತ್ತ ಸರಕಾರಿ ಆಸ್ಪತ್ರೆ ಇಲ್ಲದಿರುವ ಕಾರಣಕ್ಕೆ ಹೊರ ರೋಗಿಗಳಿಗೂ ಅವಕಾಶ ಮಾಡಲಾಯಿತು.
ಪ್ರಸ್ತುತ ಈ ಆಸ್ಪತ್ರೆಯಲ್ಲಿ ಸಾಂಕ್ರಾಮಿಕ ಕಾಯಿಲೆ ಗಳಾದ ವಾಂತಿಭೇದಿ, ಕಾಲರಾ, ಗಂಟಲು ಬೇನೆ, ಧನುರ್ವಾಯು, ನಾಯಿ ಕಡಿತ, ಚಿಕನ್‌ಫಾಕ್ಸ್ ಇತ್ಯಾದಿಗೆ  ಚಿಕಿತ್ಸೆ ನೀಡಲಾಗುತ್ತಿದೆ.

ಕಾಣದ ಕಡಲಿಗೆ... ಹಂಬಲಿಸಿದೇ ಈ ಮನಗಳು

ಅಂಧ ಮಕ್ಕಳ ರಂಗ ಪ್ರೇಮ, ಅಭಿನಯ ತುಡಿತ, ಕ್ರಿಯಾಶೀಲತೆ, ಸೃಜನಶೀಲತೆ....ಅಂತರ್‌ಶಕ್ತಿಯ ದಿಗ್ದರ್ಶನ.
ಅದಕ್ಕೆ ಸಾಕ್ಷಿಯಾದುದು ಒಂದಿಲ್ಲೊಂದು ರಂಗ ಚಟುವಟಿಕೆಗಳಲ್ಲಿ ಸದ್ದಿಲ್ಲದೇ ಮಗ್ನವಾಗಿರುವ `ಬಣ್ಣ' ಗಳ ಬಯಲು ರಂಗಾಯಣ. ಅಲ್ಲೊಂದು ವಿಶೇಷ ನಾಟಕ ರಂಗ ವೇದಿಕೆ ಏರಿ ಮತ್ತೊಂದು ಪ್ರಯೋಗಾತ್ಮಕ ಆಯಾಮಕ್ಕೆ ಒಪ್ಪಿಸಿಕೊಂಡಿತು.
ಅದು `ಕಾಣದ ಕಡಲಿಗೆ...'ನಾಟಕ. ನಾಟಕದಲ್ಲಿ ಅಭಿನಯಿಸಿದ ನಟರು ಅಂಧರು. ಆದರೆ ಕಣ್ಣು ಕಾಣದವರು ನಾಟಕ ಪ್ರದರ್ಶಿಸಿ ಕಣ್ಣಿರುವವರು ಕಣ್ಣು ತೆರೆದು ನೋಡುವಂತೆ ಮಾಡಿದರು. ಮಾತಿಗಿಂತ ಕವಿತೆ ಗಳು ಹೆಚ್ಚು ಮಾತನಾಡಿದವು. ಕವಿತೆಗಳಲ್ಲೇ ನಾಟಕವನ್ನು ಕಟ್ಟಿಕೊಡಲಾಯಿತು.

ಸಂಸ್ಕ್ರತಿ ಸಿಂಚನ ರಿ ಲಾಂಚ್

ಪ್ರತಿ ಶನಿವಾರ ಲವಲವಿಕೆಯಲ್ಲಿ ಮೂಡಿ ಬರುತ್ತಿದ್ದ ಸಂಸ್ಕ್ರತಿ ಸಿಂಚನಕ್ಕೆ ಹೊಸದೊಂದು ಸ್ಪರ್ಶ ನೀಡಲಾಗಿದೆ. ವಿಭಿನ್ನ ಲೇಖನ, ಏಕತಾನತೆ ಮುರಿದ ವಿನ್ಯಾಸ, ಮನಗೆಲ್ಲುವ ಚಿತ್ರಗಳು, ಉದಯೋನ್ಮುಖ ಹಾಗೂ ಖ್ಯಾತ ಕಲಾವಿದರ ಪರಿಚಯ ಮತ್ತಿತರ ವಿಷಯಗಳಿಂದ ಸಿಂಚನ ನೂತನ ಘಟ್ಟಕ್ಕೆ ಕಾಲಿರಿಸಿದೆ. ನೋಡಿ ಎಂಜಾಯ್ ಮಾಡಿ...

ದಸರಾ ಅದರ ಪ್ರಾಧಿಕಾರ

ದಸರಾ ಉತ್ಸವದ ವ್ಯವಸ್ಥಿತ ಸಂಘಟನೆಗೆ ನಿರಂತರ ಕಾರ್ಯಚಟುವಟಿಕೆ ನಡೆಸುವ ಪ್ರತ್ಯೇಕ ವ್ಯವಸ್ಥೆ ಅಗತ್ಯ.  ಪ್ರಾಧಿಕಾರ ಮೈಸೂರಿನಲ್ಲೇ ಕಾರ್ಯನಿರ್ವಹಿಸಬೇಕು, ಅದರ ಎಲ್ಲಾ ಕಾರ್ಯಗಳು ಪಾರದರ್ಶಕವಾಗಿದ್ದು, ಉತ್ತರದಾಯಿತ್ವ ಹೊಂದಿರಬೇಕು ಎಂಬುದು ಗಣ್ಯರ ಅಭಿಮತ. 

ಪ್ರಾಧಿಕಾರ ಅದರ ವಿಸ್ತಾರ

ಸಾಂಸ್ಕೃತಿಕ ಹಿನ್ನೆಲೆಯುಳ್ಳವರು ಹಾಗೂ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ  ಪರಂಪರೆಯನ್ನು ಮುಂದುವರಿಸುವುದರ ಜತೆಗೆ ಹಿರಿಯ ನಾಗರಿಕರನ್ನೊಳಗೊಂಡಂತೆ ದೇಸಿ ಸೊಗಡನ್ನು ಬಿಂಬಿಸುವ ದಸರಾ ಕಾರ್ಯಕ್ರಮಗಳನ್ನು ರೂಪಿಸುವಂತಹ ಮಾದರಿ ಪ್ರಾಧಿಕಾರ ರಚನೆಯಾಗಬೇಕು ಎಂಬುದು ಇಲ್ಲಿನ ಗಣ್ಯರ ಅಭಿಪ್ರಾಯ.

ವೈಶಿಷ್ಟ್ಯಪೂರ್ಣ ಅಕ್ಕಿ ಆಹಾರ ಸಂಸ್ಕೃತಿ ಮೇಳ

ವಿಕ ಸುದ್ದಿಲೋಕ ಮೈಸೂರು
ನಗರದ ಸಾವಯವ ಸಂಘಟನೆಗಳ ನೇತೃತ್ವದಲ್ಲಿ `ಕಿಸಾನ್ ಸ್ವರಾಜ್ ಯಾತ್ರೆ' ಅಂಗವಾಗಿ ಆಯೋಜಿಸಲಾಗಿದ್ದ `ಅಕ್ಕಿ ಆಹಾರ ಸಂಸ್ಕೃತಿ ಮೇಳ' ವೈಶಿಷ್ಟ್ಯ ಪೂರ್ಣ ವಾಗಿ ಮಂಗಳವಾರ ನಡೆಯಿತು.
ರಂಗಾಯಣದ ವನರಂಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸಿರು ವಸ್ತ್ರದಲ್ಲಿ ದೇಸಿ ಕೆಂಪಕ್ಕಿಯನ್ನು ನೀಡುವ ಮೂಲಕ ಅತಿಥಿ ಗಳನ್ನು ಸ್ವಾಗತಿಸಲಾಯಿತು. ಬತ್ತದ ತೆನೆಯ ತೋರಣದಿಂದ ಸಿಂಗರಿಸಿದ್ದ ವೇದಿಕೆಯ ರಂಗವಲ್ಲಿ ಇಟ್ಟ ಅಂಗಳದಲ್ಲಿ ಪುಟ್ಟ ಬತ್ತದ ರಾಶಿಯ ನಡುವೆ ಕೊಳಗದಲ್ಲಿ ತುಂಬಿಟ್ಟ ಬತ್ತವನ್ನು ಒನಕೆಯಿಂದ ಕುಟ್ಟುವ ಮೂಲಕ ರಾಜ್ಯ ರೈತ ಸಂಘದ ಮುಖಂಡ ನಂಜುಂಡೇಗೌಡ ಮೇಳ ಉದ್ಘಾಟಿಸಿದರು. ಉಗ್ರನರಸಿಂಹೇಗೌಡ, ಗುರುಪ್ರಸಾದ್, ಬರ್ಟಿ ಒಲಿವರಾ ಹಾಜರಿದ್ದರು.

ಪ್ರವಾಸೋದ್ಯಮ ಸದೃಢತೆಗೆ ದಸರೆಯೇ ವೇದಿಕೆ

ಮೈಸೂರು ದಸರೆ ಹಾಗೂ ಪ್ರವಾಸೋದ್ಯಮ...
ಈ ಎರಡು ಒಂದನ್ನು ಬಿಟ್ಟು ಇನ್ನೊಂದಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿ ಯಲ್ಲಿ ಮೈಸೂರು ದಸರೆಯ ಪಾತ್ರ ಪ್ರಮುಖವಾದದ್ದು. ದಸೆರೆಗೆ ಪ್ರವಾ ಸೋದ್ಯಮವೇ ಚಿಮ್ಮು ಹಲಗೆ. ದಸರೆ ಎಂದರೆ ಅದೊಂದು ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ ಉತ್ಸವ ಎನ್ನುವ ಪರಿಕಲ್ಪನೆ ಈಗಲೂ ಜನಮಾನಸ ದಲ್ಲಿ ಉಳಿದಿದೆ.ಆಯಾ ಸಾಲಿನ ದಸರೆ ಆರಂಭವಾಗಬೇಕು ಎನ್ನುವ ಮಾತು ಕೇಳಿಬರುತ್ತಿದ್ದಂತೆ ಒಂದೆರಡು ತಿಂಗಳು ಮುಂಚೆ ಸಭೆ, ಸಿದ್ಧತೆ ಚಟುವಟಿಕೆ ಗಳು ಆರಂಭವಾಗುತ್ತವೆ. ಇದು ಮೊದಲಿನಿಂದ ನಡೆದುಕೊಂಡು ಬಂದಿದೆ. ಸ್ಥಳೀಯವಾಗಿ ಅಧಿಕಾರಿಗಳು ದಸರೆಯನ್ನು ಯಶಸ್ವಿಯಾಗಿ ನಿಭಾಯಿಸಲು ಶ್ರಮಿಸಬಹುದೇ ಹೊರತು ವರ್ಷವಿಡೀ ದಸರೆಯ ಕುರಿತೇ ಚಿಂತಿಸುತ್ತಾ ಕೂರಲು ಆಗುವುದಿಲ್ಲ.ಇದಕ್ಕಾಗಿ ಪ್ರಾಧಿಕಾರ ರೂಪದ ಒಂದು ಸಂಸ್ಥೆ ಬೇಕು. ನಾನಾ ಕ್ಷೇತ್ರಗಳ ತಜ್ಞರನ್ನೊಳಗೊಂಡ ಸಮಿತಿಗಳನ್ನು ರಚಿಸಿ ಅವರಿಂದ ಸೂಕ್ತ ಸಲಹೆ, ಸಹಕಾರ ಪಡೆದುಕೊಳ್ಳಬೇಕು. ದಸರೆಯ ಸಾಂಸ್ಕೃತಿಕ ಕಾರ್‍ಯಕ್ರಮಗಳಿಗೆ ಯಾವ್ಯಾವ  ಕಲಾವಿದರು ಆಗಮಿಸಲಿದ್ದಾರೆ. ಈ ವರ್ಷದ ದಸರೆ ವಿಶೇಷತೆ ಏನು ಎನ್ನುವ ಸ್ಪಷ್ಟ ಮಾಹಿತಿ ಮೂರ್‍ನಾಲ್ಕು ತಿಂಗಳು ಮೊದಲೇ ಜಾಗತಿಕ ಮಟ್ಟದಲ್ಲೂ ತಿಳಿಯುವಂತಾಗ ಬೇಕು. ಪ್ರವಾಸೋದ್ಯಮದ ನೆಪದಲ್ಲಿ ಮೂಲ ಸೌಕರ್‍ಯ ಕಲ್ಪಿಸುವಲ್ಲಿ ದಸರೆಯೂ ವೇದಿಕೆಯಾಗಬೇಕು. ದಸರೆಗೆ ನೀಡುವ ಅನುದಾನದಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಮೂಲ ಸೌಕರ್‍ಯ ಕಲ್ಪಿಸುವ ಕೆಲಸವಾದರೆ ನಿಜಾರ್ಥದಲ್ಲಿ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತದೆ.
ದಸರೆಗೆ ನವನವೀನತೆ ತರುವ ಜತೆಯಲ್ಲಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸಮಯ ಬೇಕು. ಅವಸರ ದಲ್ಲಿಯೇ ದಸರೆಗೆ ತಯಾರಿ ಮಾಡಿಕೊಂಡಾಗ ಪ್ರವಾಸೋದ್ಯಮಕ್ಕೆ ಸದೃಢತೆಯೇ ಬರುವುದಿಲ್ಲ. ಅದರ ಬದಲು ದೀರ್ಘಾವಧಿಯ ಯೋಜನೆಗಳನ್ನು ಹಾಕಿಕೊಂಡು ಅದನ್ನು ಹಂತ ಹಂತವಾಗಿ ಅನುಷ್ಠಾನ ಗೊಳಿಸಲು ಪ್ರಾಧಿಕಾರದ ಅಗತ್ಯ ಇದ್ದೇ ಇದೆ.
-ಜಿ.ಕುಮಾರನಾಯಕ್, ಹಿರಿಯ ಐಎಎಸ್ ಅಧಿಕಾರಿ, ಮೈಸೂರು ಹಿಂದಿನ ಜಿಲ್ಲಾಧಿಕಾರಿ

ಯೋಜನಾ ಆಯೋಗದ ಮರ್ಜಿಯಲ್ಲಿ ಶಾಸ್ತ್ರೀಯ ಕನ್ನಡ

ಅರವಿಂದ ನಾವಡ ಮೈಸೂರು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಹಿನ್ನೆಲೆಯಲ್ಲಿ ರೂಪುಗೊಂಡ `ಸವಿವರ ಯೋಜನಾ ವರದಿ' ಕೇಂದ್ರ ಯೋಜನಾ ಆಯೋಗದ ಅಂಕಿತಕ್ಕೆ ಕಾಯುತ್ತಿದೆ.
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ `ಶಾಸ್ತ್ರೀಯ ಭಾಷೆ ಅಭಿವೃದ್ಧಿ ಮಂಡಳಿ' ವಿಭಾಗವು ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾನಾ ವಿದ್ವಾಂಸರ ಸಭೆ ನಡೆಸಿ ಪಡೆದ ಶಿಫಾರಸುಗಳನ್ನು ಆಧರಿಸಿ ಯೋಜನಾ ವರದಿಯನ್ನು ತಯಾರಿಸಿತ್ತು. ಆಗಸ್ಟ್‌ನಲ್ಲಿ ದಿಲ್ಲಿಯ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಭಾಷಾ ವಿಭಾಗಕ್ಕೆ ಕಳುಹಿಸಲಾಗಿದೆ. ಅದೀಗ ಯೋಜನಾ ಆಯೋಗದ ಪರಿಶೀಲನೆಯ ನಿರೀಕ್ಷೆಯಲ್ಲಿದೆ.