ನಿನ್ನೆ ಮಂಜುನಾಥ ಮಹಿಮೆ ಇಂದು ಶ್ರೀನಿವಾಸ ಪ್ರಸಾದ

ಶ್ರೀಕಂಠೇಶ್ವರನ ದರ್ಶನಕ್ಕೆಂದೋ, ತುಂಬಿ ಹರಿಯುವ ಕಪಿಲೆಯನ್ನ ಕಣ್ತುಂಬಿಕೊಳ್ಳಲೆಂದೋ ದೂರದೂರಿನಿಂದ ಬರುವವವರು ಇಲ್ಲಿಗ್ಯಾಕಾದರೂ ಬಂದೆವೋ ಎಂದು ಪರಿತಪಿಸುವ ಸ್ಥಿತಿ ಇಲ್ಲಿಯದು. ಇನ್ನು ಇಲ್ಲಿನ ನಿವಾಸಿಗಳಿಗೋ, ನಿತ್ಯ ಹಿಡಿಶಾಪ ಹಾಕುತ್ತ ಸಂಚರಿಸಬೇಕಾದ ಅನಿವಾರ್‍ಯತೆ.
ಇದು ನಂಜನಗೂಡಿನ ದುರವಸ್ಥೆ. ದಕ್ಷಿಣಕಾಶಿ,  ಪ್ರಸಿದ್ಧ ಯಾತ್ರಾಸ್ಥಳ ಎಂದೆಲ್ಲಾ ಕೀರ್ತಿ ಪಡೆದಿರುವ ನಂಜನಗೂಡಿಗೆ  ಈಗ  ಕುಲಗೆಟ್ಟ ರಸ್ತೆಗಳ ಅಪಕೀರ್ತಿ. ಮೈಸೂರು ರಸ್ತೆಯಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಚಾ.ನಗರ ಬೈಪಾಸ್ ರಸ್ತೆ, ಬಸ್ ನಿಲ್ದಾಣ, ದೇವಸ್ಥಾನಕ್ಕೆ ಸಂಪರ್ಕಿಸುವ ಪಟ್ಟಣದೊಳ ಗಿನ ಪ್ರಮುಖ ಮಹಾತ್ಮಗಾಂಧಿ ರಸ್ತೆಗಳ ಸ್ಥಿತಿಯಂತೂ ಆ ಶ್ರೀಕಂಠೇಶ್ವರನಿಗೇ ಪ್ರೀತಿ ! ಇನ್ನು ಹಲವು ಗ್ರಾಮಗಳಿಗೆ ತೆರಳಲು ಇರುವ ರೈಲ್ವೆ ಅಂಡರ್ ಬ್ರಿಡ್ಜ್ ರಸ್ತೆಯಂತೂ ಮಳೆ ಬಂತೆಂದರೆ ಓಡಾಡಲೂ ಆಗದ ಸ್ಥಿತಿ. ಹೊಳೆಯಂತೆ ಇಲ್ಲಿ ನೀರು ನಿಂತಿರುತ್ತದೆ.
ಪಟ್ಟಣದ ಬಹುತೇಕ ರಸ್ತೆಗಳು ಹಳ್ಳ-ಗುಂಡಿಗಳಿಂದ ಕೂಡಿದ್ದು  ಮಳೆ ಬಂದರೆ ಕೆರೆಯಂತಾಗುತ್ತವೆ.  ಬಿಸಿಲು ಬಂದರೆ ಧೂಳು ಹಾರುತ್ತದೆ.  ಪಟ್ಟಣದ ಇತರ ಪ್ರಮುಖ ರಸ್ತೆ ಗಳಾದ   ರಾಷ್ಟ್ರಪತಿ  ರಸ್ತೆ, ಹುರ- ಹುಲ್ಲಹಳ್ಳಿ- ನಂಜನಗೂಡು - ಮೈಸೂರು ರಸ್ತೆ ಹಳ್ಳಕೂಳ್ಳಗಳಿಂದ ಕೂಡಿದ್ದು ಬಾಯ್ತೆ ರೆದು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಅನೇಕ ಮಂದಿ ರಾತ್ರಿ ವೇಳೆ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಇನ್ನು ಪಟ್ಟಣದ ಶ್ರೀರಾಂಪುರ, ಶಂಕರಪುರ, ಚಾಮಲಾಪುರ ಹುಂಡಿ, ನರಸಣ್ಣಆಗ್ರಹಾರ, ಹೌಸಿಂಗ್‌ಬೋರ್ಡ್, ನೀಲಕಂಠನಗರ,ಎಕ್ಸ್‌ಟೆಷನ್ ಬಡಾವಣೆ ಸೇರಿದಂತೆ ೨೭ ವಾರ್ಡ್‌ಗಳಲ್ಲಿ  ಒಳಚರಂಡಿಗಾಗಿ ರಸ್ತೆ ಅಗೆದು ಸರಿಯಾಗಿ ಮುಚ್ಚದೆ ಮಳೆ ಬಂದರೆ ಕೆಸರಿನ ಗದ್ದೆಗಳಾಗುತ್ತವೆ.
ಈ ರಸ್ತೆಗಳ ಅವ್ಯವಸ್ಥೆ ನೋಡಿದರೆ  ಇಲ್ಲಿ ಪುರಸಭೆ , ಜನಪ್ರತಿನಿಧಿಗಳು, ಅಧಿಕಾರಿಗಳು ಜೀವಂತ ಇದ್ದಾರೆಯೇ ಎಂಬ ಸಂಶಯ ಮೂಡಿದರೆ ಆಶ್ಚರ್ಯವಿಲ್ಲ. ಈ ಸಂಶಯ ನಿವಾರಿಸಲು ಅವರೇ ಮುಂದಾಗಬೇಕಷ್ಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ