ಮಾಹಿತಿ ಹಕ್ಕು ಕೇಳೋಕೆ ಕಂಕ್ಳಲ್ಲಿ ಖಾಲಿ ಅರ್ಜಿ ತನ್ನಿ

ಅರವಿಂದ ನಾವಡ ಮೈಸೂರು
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರ ಉತ್ಸಾಹವನ್ನು ಕಂಡು ಮೆಚ್ಚಲೇಬೇಕು.
ಜಿಲ್ಲಾಡಳಿತಕ್ಕೆ ಒಂದಿಷ್ಟು ಚುರುಕು ಮುಟ್ಟಿಸುವುದಾಗಿ ಹೇಳುತ್ತಿದ್ದಾರೆ, ಅದಕ್ಕೆ ದನಿಗೂಡಿಸುತ್ತಿರುವವರು ಜಿಲ್ಲಾಧಿಕಾರಿ ಹರ್ಷಗುಪ್ತ. ಬಹುಶಃ ಡಿಸಿಯವರನ್ನು ಕಂಡು ಹೇಳುತ್ತಿದ್ದಾರೇನೋ. ಒಮ್ಮೆ ಸರಕಾರಿ ಇಲಾಖೆಯ ಸುತ್ತು ಹಾಕಿ ಬಂದರೆ ಇನ್ನೂ ಉತ್ಸಾಹ ಹೆಚ್ಚಬಹುದು !
ಸದ್ಯದ ಉದಾಹರಣೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ).
ಬಹುಶಃ ಮೈಸೂರಿನಲ್ಲಿರೋ ಕೋಟೆ ಎಂದರೆ ಇದೊಂದೇ ಇರಬೇಕು. ಸಿಕ್ಕಾಪಟ್ಟೆ ಬಂದೋಬಸ್ತ್. ಇಡೀ ಮುಡಾದ ಭದ್ರತೆ ನೋಡಿಕೊಳ್ಳುತ್ತಿರುವ ಖಾಸಗಿ ಭದ್ರತಾ ಪಡೆಗೆ ಜೈ ಎನ್ನಬೇಕೋ, ಉದ್ಧಟತನ ಎನ್ನಬೇಕೋ ಗೊತ್ತಿಲ್ಲ. ಇದು ಸುಮ್ಮನೆ ಒಂದು ರಿಯಾಲಿಟಿ ಚೆಕ್ (ವಾಸ್ತವ ಪರಿಶೀಲನೆ). ಗುರುವಾರ ಮಧ್ಯಾಹ್ನ ಹನ್ನೆರಡೂವರೆ. ಮಾಹಿತಿ ಹಕ್ಕಿನಡಿ ಅರ್ಜಿ ಪಡೆಯಲು ಗೆಳೆಯರೊಬ್ಬರೊಂದಿಗೆ ಮುಡಾಕ್ಕೆ ಹೋದೆ.
ನಮ್ಮ ಮುಡಾ ಕೋಟೆಗೆ ಎರಡು ಬಾಗಿಲುಗಳಿವೆ. ಮೊದಲ ಬಾಗಿಲಿನಲ್ಲಿ ಒಳಹೊಕ್ಕ ಕೂಡಲೇ ನಾಲ್ಕು ಬಾಕ್ಸ್‌ಗಳಿವೆ (ಬ್ಯಾಂಕ್‌ಗಳಲ್ಲಿರುವಂತೆ). ಅದರಲ್ಲಿ ಒಬ್ಬರು  ಸ್ವಲ್ಪ ಖಾಲಿ ಇದ್ದರು. ಉಳಿದ ಕಡೆ ಒಂದಿಷ್ಟು ಮಂದಿ ಇದ್ದರು (ಮುಡಾದಲ್ಲಿ ಕೆಲಸ ಇಲ್ಲ ಅಂತಾರೆ, ಅದು ಬಿಡಿ). ಖಾಲಿ ಇದ್ದಲ್ಲಿ ಹೋಗಿ, `ಮೇಡಂ, ಆರ್‌ಟಿಐ ಫಾರಂ ಬೇಕು' ಅಂದೆವು. ಜಗತ್ತಿನ ಮತ್ತೊಂದು ಅಚ್ಚರಿಯಂತೆ ಅವರು `ಏನು ಆರ್ ಟಿ ಐ ? ಯಾವುದು ಆರ್ ಟಿ ಐ?' ಎಂದು ಪ್ರಶ್ನೆ ಎಸೆದಾಗ ನಾವೇ ಕಂಗಾಲು. ಪರಸ್ಪರ ಮುಖ ನೋಡಿಕೊಂಡು, ಸ್ವಲ್ಪ ಸಾವರಿಸಿಕೊಂಡು, `ಅದೇ ಮೇಡಂ, ಆರ್ ಟಿ ಐ, ಮಾಹಿತಿ ಹಕ್ಕು' ಎಂದು ಜೋರಾಗಿ ಕೇಳಿದೆವು. ಆಗ ನೋಡಿ, ಒಂದು ಮುಗುಳ್ನಗು ಬಂದಿತು. ಆಗ ನೆನಪಾಗಿದ್ದು `ಆಡಳಿತ ಭಾಷೆ ಕನ್ನಡದಲ್ಲೇ' `ಅದಾ...ಆ ಬಾಗಿಲಿನಲ್ಲಿ ಹೋಗಿ. ಅಲ್ಲೊಬ್ಬರು ಇದ್ದಾರೆ, ಅವರೇ ನೋಡಿಕೊಳ್ಳೋದು' ಎಂದರು. ನಂತರ ನಮ್ಮ ಪಯಣ ಎರಡನೇ ಬಾಗಿಲಿಗೆ.
ಅಲ್ಲಿಗೆ ಹೋದಾಗಲೂ ಜನ ಕಡಿಮೆ ಇದ್ದರು. ಬಾಗಿಲಿಗೆ ಬಿಗಿ ಭದ್ರತೆ. ಮೂರು ಮಂದಿ  ಸಿಬ್ಬಂದಿ ಅಕ್ಷರಶಃ ಬಾಗಿಲನ್ನೇ ಕಾಯುತ್ತಿದ್ದರು. `ಸಾರ್, ಅವರು ಎಲ್ಲಿದ್ದಾರೆ?' ಎಂದು ಕೇಳಿದೆವು ನಾವು ಅವರಲ್ಲಿ ಒಬ್ಬರನ್ನು. ಅದಕ್ಕೆ ಸಿಕ್ಕ ಉತ್ತರ, `ನೀವ್ಯಾರ್ರಿ?'. ನಾವು ಅರ್ಜಿ ತೆಗೆದುಕೊಳ್ಳಬೇಕಿತ್ತು, ಅದಕ್ಕೆ ಎಂದರೆ, ಅದಕ್ಕೂ ಅವರಲ್ಲಿ ಸಿದ್ಧ ಉತ್ತರ. `ಒಂದ್ ಕೆಲಸ ಮಾಡಿ, ಒಬ್ಬರೇ ಹೋಗಿ ಬನ್ನಿ'. ಆಸ್ಪತ್ರೆಯಲ್ಲಿ ರೋಗಿಯನ್ನು ನೋಡೋದಿಕ್ಕೆ ಬಿಡ್ತಾರಲ್ಲ ಹಾಗೆಯೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ