ನಮ್ಮೂರಲ್ಲಿ ಹಂಗೇನಿಲ್ಲ, ರಸ್ತೆ ಬಗ್ಗೆ ಕೇಳೋಂಗಿಲ್ಲ !

ವಿಕ ವಿಶೇಷ ಮೈಸೂರು
ರಾಜ್ಯ ಸರಕಾರ ಸೀರೆ ಹಂಚುವುದರಲ್ಲಿ ಮುಳು ಗಿದೆ, ಜಿಲ್ಲಾಡಳಿತ ಅದರ ಹಿಂದೆ ಮುಂದೆ ಓಡಾಡುವುದರಲ್ಲಿ ಬ್ಯುಸಿ. ಹಾಗಾಗಿ ರಸ್ತೆ ಇತ್ಯಾದಿ ಮೂಲ ಸೌಕರ್ಯಗಳ ಬಗ್ಗೆ ಕೇಳೋರೇ ಇಲ್ಲ. ತಾಲೂಕಿನ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ, ನಮ್ಮ ತಾಲೂಕು ಕೇಂದ್ರಗಳ ರಸ್ತೆ ಕಂಡರೆ ಜ್ವರ ಬರಬೇಕು.
ಬಿಡಿ, ಯಾರೂ ತುಟಿಪಿಟಿಕ್ ಎನ್ನುವಂತಿಲ್ಲ. ಯಾಕೆಂದರೆ ಎಲ್ಲೂ ರಸ್ತೆಗಳೇ ಇಲ್ಲ. ಮೈಸೂರೂ ಸೇರಿದಂತೆ ಮೈಸೂರು ಜಿಲ್ಲೆಯ ಏಳು ತಾಲೂಕು ಗಳಾದ ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ. ಕೋಟೆ, ತಿ. ನರಸೀಪುರ, ನಂಜನಗೂಡು, ಕೆ. ಆರ್. ನಗರ ಪಟ್ಟಣಗಳ ರಸ್ತೆಗಳನ್ನು ಹುಡುಕಿ ಕೊಂಡು ಹೊರಟರೆ ಸಿಗೋದೇ ಇಲ್ಲ. ಹಾಗಿವೆ ಪ್ರತಿ ಪ್ರಮುಖ ರಸ್ತೆಗಳೂ.
ಆಳುದ್ದದ ಗುಂಡಿಗಳಲ್ಲಿ ಬಿದ್ದವರು ಎದ್ದು ಬಂದರೇ ಅದೃಷ್ಟ ಎನ್ನುವಂತಿದೆ. ಜನರೂ ಚಕಾರ ವೆತ್ತಿಲ್ಲ ಎಂದುಕೊಂಡು ಸ್ಥಳೀಯ ಸಂಸ್ಥೆಗಳು (ಪುರಸಭೆ, ಪಟ್ಟಣ ಪಂಚಾಯಿತಿಗಳು) ತಣ್ಣಗೆ ಕುಳಿತಿವೆ, ಒಂಚೂರೂ ತಲೆ ಕೆಡಿಸಿಕೊಂಡೇ ಇಲ್ಲ.
ಒಂದಷ್ಟು ದನಿ ಎತ್ತಿ ಕೆಲಸ ಮಾಡಿಸಬೇಕಾದ ಶಾಸಕರಾಗಲೀ, ಸ್ಥಳೀಯ ಸಂಸ್ಥೆ ಸದಸ್ಯರಾಗಲೀ ಅವರೇ ತೆಪ್ಪಗೆ ಕುಳಿತಿದ್ದಾರೆ. ಅಷ್ಟೇ ಏಕೆ ? ಅವರು ಇರೋ ರಸ್ತೆಗಳ ಸ್ಥಿತಿಯೂ ಅದೇ. ತಮಾಷೆಗೆ ಇಂದು ಹುಣಸೂರಿನ ಕತೆ ಕೇಳಿ : ಮಾಜಿ ಸಚಿವ ಜಿ.ಟಿ.ದೇವೇಗೌಡ, ಹಾಲಿ ಶಾಸಕ ಎಚ್.ಪಿ. ಮಂಜುನಾಥ್ ಸೋದರ, ನ್ಯಾಯಾಧೀಶರು, ಅಧಿಕಾರಿಗಳು, ಗುತ್ತಿಗೆದಾರರು ಸೇರಿದಂತೆ ಪ್ರತಿಷ್ಠಿತರೇ ಇರೋ ಮಂಜುನಾಥ ಬಡಾವಣೆಯ ರಸ್ತೆಗಳದ್ದೂ ಅದೇ ಕಥೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ