ಪ್ರಯಾಣಿಕರ ಜೀವರಕ್ಷಕ ಈ ಚಾಲಕ

 ಜೆ.ಶಿವಣ್ಣ, ಮೈಸೂರು
ಕ್ಷಣಾರ್ಧದಲ್ಲಿ ಅವಘಡ ಸಂಭವಿಸಿತ್ತು. ಆದರೆ ಕೂದಲೆಳೆಯ ಅಂತರ ದಲ್ಲಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಒಂದರೆಗಳಿಗೆ ಎಚ್ಚರ ತಪ್ಪಿದ್ದರೂ ಅಪಾಯ ಕಟ್ಟಿಟ್ಟಬುತ್ತಿ !
ಅದಕ್ಕೆ ಕಾರಣ ಚಾಲಕನ ಚಾಕಚಕ್ಯತೆ, ಮಿಂಚಿನ ಆಲೋಚನೆ, ಆ ಕ್ಷಣದಲ್ಲಿ ತೋರಿದ ಜಾಣ್ಮೆ, ಕೈಗೊಂಡ ನಿರ್ಧಾರ. ಪರಿಣಾಮ-ಬಂದರೆಗಬಹುದಾಗಿದ್ದ  ಆಕಸ್ಮಿಕ ಅಪಾಯದಿಂದ ಪಾರು. ಬಸ್ಸಿನೊಳಗಿದ್ದ ಜೀವಗಳು ನಿಟ್ಟುಸಿರುಬಿಟ್ಟವು. ಚಾಲಕ ಅಮೂಲ್ಯ ಜೀವಗಳನ್ನು ಉಳಿಸಿದ್ದ. ಕಾಣದ ದೇವರಿಗೆ ಹಂಬಲಿಸುವ ಮನಗಳು ಎದುರಿಗಿದ್ದ ಚಾಲಕನೆಂಬೋ ಸಾರಥಿಗೆ ನಮಿಸಿದ್ದು ಸುಳ್ಳಲ್ಲ.
ಹೌದು, ಭರ್ತಿಯಾಗಿದ್ದ ಬಸ್ ಇಕ್ಕಟ್ಟಿನ, ಅಂಕುಡೊಂಕಿನ ರಸ್ತೆಯಲ್ಲಿ ಭರ್ರನೆ ಹೊರಟಿತ್ತು. ಮಾರ್ಗ ಮಧ್ಯೆ ಒಣಗಿದ ತುಸು ದೊಡ್ಡದೇ ಆದ ಮರವೊಂದು ರಸ್ತೆಯತ್ತ ಉರುಳಿತು. ಅದ್ಯಾವ ಕ್ಷಣದಲ್ಲಿ ಅದನ್ನು ಚಾಲಕ ಗಮನಿಸಿದನೋ ಥಟ್ಟನೇ ಬಲಬಿಟ್ಟು ಬ್ರೇಕ್ ಅದುಮಿದ. ನುಣುಪಾದ ರಸ್ತೆಯಲ್ಲಿ ಬಸ್ಸಿನ ಟೈರ್ ಉಜ್ಜಿ ಕೊಂಡು ತುಸು ದೂರ ಸಾಗಿತ್ತು. ಅದೇ ಕ್ಷಣದಲ್ಲಿ ಬುಡ ಸಮೇತ ಮರ ಬಸ್ ನ ಮುಂಭಾಗಕ್ಕೆ ಅಪ್ಪಳಿಸಿತು !
ಮರ ಬಿದ್ದ ರಭಸಕ್ಕೆ ವಾಹನದ ಮುಂಭಾಗದಲ್ಲಿ ಎಡಬದಿಯಲ್ಲಿದ್ದ ಬಾಗಿಲು ಪೂರ್ಣವಾಗಿ ನಜ್ಜುಗುಜ್ಜಾಗಿ ಮುಚ್ಚಿ ಹೋಯಿತು. ಒಂದು ವೇಳೆ ಬಸ್ ನ ಮಧ್ಯಕ್ಕೆ ಬಿದ್ದಿದ್ದರೆ ಜೀವಕ್ಕೆ ಎರವಾಗುತ್ತಿದ್ದರಲ್ಲಿ ಸಂಶಯ ವಿರಲಿಲ್ಲ. ಆದರೆ ಅಚ್ಚರಿಯ ರೀತಿಯಲ್ಲಿ ಎಲ್ಲರೂ ಯಾವುದೇ ತೊಂದರೆ ಇಲ್ಲದೇ ಪಾರಾಗಿದ್ದರು. ನಿರ್ವಾಹಕ ಕೂಡ ಬಚಾವ್. ಬಾಗಿಲ ಬಳಿ ನಿಂತಿದ್ದರೆ ನಜ್ಜು ಗುಜ್ಜಾದ ಬಾಗಿಲಿನಲ್ಲಿ ಸಿಲುಕುತ್ತಿದ್ದರು.
ಮತ್ತೂ ಒಂದು. ಮರ ಬೀಳುವಾಗ ಸನಿಹ ದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಹರಿಯುತ್ತಿದ್ದ  ತಂತಿಯನ್ನು  ತುಂಡಾಗಿಸಿತ್ತು. ಬಸ್ ಮುಂದೆ ಸಾಗಿದ್ದರೆ ತುಂಡಾದ ತಂತಿಗೆ ವಾಹನ ಸಿಲುಕುವ ಸಾಧ್ಯತೆಗಳೂ ಇತ್ತು. ಚಾಲಕ ಎಚ್ಚರ ತಪ್ಪಿದ್ದರೆ ಮರ ಬಿದ್ದು ಇಲ್ಲವೇ, ಕರೆಂಟು ಹರಿದು ಸಾವಿನ ಮನೆಯ  ಕದ ತಟ್ಟುವಂತಾಗುತ್ತಿತ್ತು ! ಚಾಲಕ ಆಪ್ತರಕ್ಷಕನಾಗಿದ್ದ, ಆಪದ್ಭಾಂದವನಾಗಿದ್ದ. ಆ ಚಾಲಕ ಎಸ್.ಕೆ. ಲೋಕೇಶ್.
ಇದ್ಯಾವುದೋ ಸಿನಿಮೀಯ ಘಟನೆ ಅಲ್ಲ. ನಿಜ ಘಟನೆ. ನಡೆದದ್ದು ಮಡಿಕೇರಿ-ಊಟಿ ಮಾರ್ಗದಲ್ಲಿ.
ಅದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್. ಬುಧವಾರ (ನ.೨೪) ಮಧ್ಯಾಹ್ನ ೩.೪೫- ೪ ಗಂಟೆಯ ಸಮಯ. ಮಕ್ಕಳು, ಮಹಿಳೆಯರು ಸೇರಿದಂತೆ ೫೦ಕ್ಕೂ ಹೆಚ್ಚು ಮಂದಿ ಆ ಬಸ್ ನಲ್ಲಿದ್ದರು. ಮಡಿಕೇರಿಯಿಂದ ಊಟಿಗೆ ಹೊರಟಿದ್ದ ಬಸ್ ನ ನಿರ್ವಾಹಕ ಶ್ರೀನಿವಾಸ್. ಸಾರಥಿ -ಚಾಲಕ- ಲೋಕೇಶ್ (ಬ್ಯಾಡ್ಜ್ ನಂ.೭೫೪) ಚಾಲನೆ  ಮಾಡುತ್ತಿದ್ದರು. ಲೋಕೇಶ್ ಎಂದಿನಂತೆ ಪರಿಚಿತವಾದ ಮಾರ್ಗದಲ್ಲಿ ಎಚ್ಚರಿಕೆಯಿಂದ ಚಾಲನೆ ಮಾಡುತ್ತಿದ್ದರು.
ಇನ್ನು ಅವರ ಮಾತುಗಳಲ್ಲೇ ಕೇಳಿ: ಮಡಿಕೇರಿಯಿಂದ ಊಟಿಗೆ ಹೊರಟಿದ್ದ ?? (ಕೆಎ ೧೯ ಎಫ್ ೨೬೪೩) ಟಿ.ಆರ್.ಬಜಾರ್ ದಾಟಿ ಹನುಮಂತಪುರ ಹತ್ತಿರವಾಗುತ್ತಿತ್ತು. ಅಲ್ಲಿ ರಸ್ತೆ ಹಳ್ಳಕೊಳ್ಳದ ಜತೆಗೆ ಅಂಕುಡೊಂಕಾಗಿದೆಯಲ್ಲದೇ, ತೀವ್ರ ತಿರುವು ಇತ್ತು. ಹಾಗಾಗಿ ಚಾಲನೆಯನ್ನು ನಿಧಾನಗೊಳಿಸಿದೆ. ಅದೇ ಕ್ಷಣ ಎತ್ತರದಲ್ಲಿದ್ದ ಮರವೊಂದು ಗಾಳಿಗೆ ಹೊಯ್ದಾಡುತ್ತಾ ಬೀಳುವುದು ಕಣ್ಣಿಗೆ ಬಿತ್ತು. ತಕ್ಷಣವೇ ಎಚ್ಚೆತ್ತು ತಕ್ಷಣ ಬ್ರೇಕ್ ಹಾಕಿದೆ. ಮುಂದಿದ್ದ ಪ್ರಯಾಣಿಕರು ಹಿಂದೆ ಸರಿಯುವಂತೆ ಕೂಗಿಕೊಂಡೆ.
ಚಕ್ರ ಉಜ್ಜಿಕೊಂಡು ಮುಂದೆ ಹೋಯಿತು. ಒಣಗಿದ ಹಳೇ ಮರ ಬಸ್ ಮುಂಭಾಗಕ್ಕೆ ಅಪ್ಪಳಿಸಿತು. ಜಂಘಾಬಲವೇ ಉಡುಗಿ ಹೋಯಿತು. ದೈವವಶಾತ್ ಯಾವುದೇ ಹಾನಿಯಿಲ್ಲದೇ, ಬಚಾವ್ ಆದೆವು. ಮುಂಭಾಗದಲ್ಲಿದ್ದ ಬಾಗಿಲಿಗೆ ಮರ ಸಿಲುಕಿದ್ದರಿಂದ  ತಕ್ಷಣವೇ ಎಲ್ಲಾ ಪ್ರಯಾಣಿಕರನ್ನು ತುರ್ತು ಬಾಗಿಲುಗಳ ಮೂಲಕ ಸುರಕ್ಷಿತವಾಗಿ ಇಳಿಸಲಾಯಿತು. ಒಂದು ಗಳಿಗೆ ಮೈಮರೆತಿ ದ್ದರೆ ಮರ ಇಲ್ಲವೇ ವಿದ್ಯುತ್ ಗೆ ಸಿಲುಕುವ ಸಾಧ್ಯತೆಯಿತ್ತು. ನೆನಪಿಸಿಕೊಂಡರೆ ಶರೀರ ಥರಥರ ಕಂಪಿಸುತ್ತದೆ. ಬಹು ಹೊತ್ತಿನ ವರೆಗೂ ನನ್ನ ಶರೀರ ನಿಯಂತ್ರಣದಲ್ಲಿರಲಿಲ್ಲ, ನಡುಕ ನಿಂತಿರಲಿಲ್ಲ. ?ಚಾ? ಆದ ಪ್ರಯಾಣಿಕರು ಹತ್ತಿರ ಬಂದು ನನ್ನನ್ನು ಹೊಗಳು ತ್ತಿದ್ದರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ೧೮ ವರ್ಷಗಳಿಂದ ಈ ಮಾರ್ಗ ದಲ್ಲಿ ಬಸ್ ಚಲಾಯಿಸುತ್ತಿದ್ದೇನೆ. ಇದೇ ಮೊದಲು ಹೀಗಾಗಿದ್ದು.
೨೩ ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಲೋಕೇಶ್ ಮಡಿಕೇರಿಯ ಬೋಯಿಕೆರೆ ಗ್ರಾಮದವರು. ತಂದೆ, ಪತ್ನಿ, ಪುತ್ರಿ, ಇಬ್ಬರು ಪುತ್ರರಿರುವ ಪುಟ್ಟ ಸಂಸಾರ. ಮೊದಲಿಗೆ ಮೈಸೂರಿನಲ್ಲಿ ವೃತ್ತಿ ಆರಂಭಿಸಿದ ಅವರು ಮಂಗಳೂರು ಸಾರಿಗೆ ವಿಭಾಗದಲ್ಲಿದ್ದು, ವರ್ಷದಿಂದ ಮೈಸೂರು ವಿಭಾಗದ ಮಡಿಕೇರಿ ಡಿಪೋನಲ್ಲಿ ಸೇವೆಯಲ್ಲಿದ್ದಾರೆ. ನಿರ್ವಾಹಕ ಶ್ರೀನಿವಾಸ್ ಅವರೊಡನೆ ೩-೪ ವರ್ಷಗಳಿಂದ ಜತೆಯಾಗಿದ್ದಾರೆ. ಚಾಲಕನಿಗೆ ಮೈಯಲ್ಲಾ ಕಣ್ಣಾಗಿರಬೇಕು ಎನ್ನುವುದಕ್ಕೆ ಈ ಘಟನೆ ಜೀವಂತ ಉದಾಹರಣೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ