ಮೊಸಳೆ ಸಂತಾನ ‘ಹರಣ’

ವಿಕ ಸುದ್ದಿಲೋಕ ಮೈಸೂರು
‘ಆತುರಗೆಟ್ಟ’ ಜನರ ಅನಗತ್ಯ ಆತಂಕದಿಂದ ಮೊಸಳೆ ಸಂತಾನ ವೃದ್ಧಿಗೆ ಕಂಟಕ !
ಹೌದು,ಕುಕ್ಕರಹಳ್ಳಿ ಕೆರೆ ಅಂಗಳದಲ್ಲಿ ಹಲವು ‘ಮೊಸಳೆ ’ಗಳು ಮೊಟ್ಟೆಯಿಂದ ಹೊರ ಬರುವ ಮೊದಲೇ ಮಣ್ಣು ಪಾಲಾಗಿವೆ. ಕಳೆದ ವಾರ ಕೆರೆ ಅಂಗಳದಲ್ಲಿ ವಾಯು ವಿಹಾರಿಗಳು ‘ಸೃಷ್ಟಿಸಿದ’ ಆತಂಕದ ‘ಗಾಳಿ’ ಇದಕ್ಕೆ ಕಾರಣ.
ಸೋಮವಾರ ಮತ್ತು ಮಂಗಳ ವಾರ ಕೆರೆ ಅಂಗಳದಲ್ಲಿ ಏಳೆಂಟು ಮೊಟ್ಟೆಗಳು ಒಡೆದ ಸ್ಥಿತಿಯಲ್ಲಿ ಕಾಣಿಸಿವೆ. ಇನ್ನೂ ಹಲವು ಮಣ್ಣಿನೊಳಗೆ ಇರುವ  ಸಾಧ್ಯತೆಯೂ ಇದೆ. ಕಳೆದ ಗುರು ವಾರ ಬೆಳಗ್ಗೆ ಕಾಣಿಸಿಕೊಂಡಿದ್ದ ಮೊಸಳೆ ಮೊಟ್ಟೆ  ಇಡಲು ದಂಡೆಗೆ ಬಂದಿತ್ತು ಎನ್ನುವುದು ಇದರಿಂದ ಖಚಿತವಾಗಿದೆ.
ಉಪಟಳ: ಮೊಟ್ಟೆ ಇಟ್ಟು, ತನ್ನ ಪಾಡಿಗೆ ಮಲಗಿದ್ದ ಮೊಸಳೆಯನ್ನು ಕಂಡ ಬೆಳಗಿನ ವಾಯು ವಿಹಾರಿಗಳು ‘ಪ್ರಾಣವೇ ಹೋದಂತೆ ’ವರ್ತಿಸುವ ಮೂಲಕ ಅದರ ಸಂತಾನಕ್ಕೆ ಸಂಚಕಾರ ತಂದಿದ್ದಾರೆ. ಕುತೂಹಲಿ ಜನ ಮತ್ತು ಕಿಡಿಗೇಡಿಗಳ  ೨ ತಾಸಿನ ‘ಉಪಟಳ ’ದ ನಂತರ ಕೆರೆಯ ನೀರಿಗೆ ಮರಳಿದ್ದ ಮೊಸಳೆ ಮತ್ತೆ ಮೇಲೆ ಬರುವ ಧೈರ್ಯ ತೋರಿದಂತಿಲ್ಲ.
ಬೇಲಿ,ರಕ್ಷಣೆ: ಅದಾಗಿ ಮೂರು ದಿನಕ್ಕೆ, ಈ ಪ್ರದೇಶದಲ್ಲಿ ಏಳೆಂಟು ಮೊಟ್ಟೆಗಳು ಒಡೆದ ಸ್ಥಿತಿಯಲ್ಲಿ ಗೋಚರಿಸಿವೆ.ವಾಸನೆ ಹಿಡಿದ ಮುಂಗುಸಿಗಳು ಮಣ್ಣಿನಿಂದ ಕೆಲ ಮೊಟ್ಟೆಗಳನ್ನು ಹೊರಗೆಳೆದು ತಿಂದಿರಬಹುದು ಎನ್ನಲಾಗಿದೆ.  ಎಚ್ಚೆತ್ತ ಮೈಸೂರು ವಿವಿ ಆಡಳಿತ,‘ಮೊಸಳೆ ಜಾಡಿನ ’ಸುತ್ತ ತಂತಿ ಬೇಲಿ ನಿರ್ಮಿಸಿ ಉಳಿದ ಮೊಟ್ಟೆಗಳನ್ನು ಸಂರಕ್ಷಿ ಸುವ  ಪ್ರಯತ್ನ ಆರಂಭಿಸಿದೆ.
ನಿಗಾವಹಿಸುವಂತೆ,  ಹುಲ್ಲು ಕತ್ತರಿಸಲು ಕೆರೆಗೆ  ಇಳಿ ಯುವ ಜನರಿಗೆ ಎಚ್ಚರಿಕೆ ನೀಡುವಂತೆ ಕಾವಲು ಗಾರರಿಗೆ ನಿರ್ದೇಶನ  ನೀಡಲಾಗಿದೆ.
ಕೆರೆಯ ಸಮಗ್ರ ಅಭಿವೃದ್ಧಿ ಸಂದರ್ಭ ‘ಮೊಸಳೆ ಪಾರ್ಕ್’ ನಿರ್ಮಿಸುವ ಇಂಗಿತ ವನ್ನೂ ವಿವಿ ವ್ಯಕ್ತಪಡಿಸಿದೆ.

ಮೈಸೂರು-ಮಂಡ್ಯಕ್ಕೂ ವಿಸ್ತರಣೆ ಬಾಂಗ್ಲಾ ಯುವತಿಯರ ‘ಕಾರ್ಯಾ’ಚರಣೆ

ವಿಕ ಸುದ್ದಿಲೋಕ ಮೈಸೂರು
ಮೈಸೂರು-ಮಂಡ್ಯಕ್ಕೂ ವಿಸ್ತರಣೆಗೊಂಡಿದೆ ಬಾಂಗ್ಲಾ ಯುವತಿಯರ ವೇಶ್ಯಾವಾಟಿಕೆ ಜಾಲ. ಇದರೊಟ್ಟಿಗೆ ಬಡಾವಣೆಗಳ ಹೈಟೆಕ್ ಜಾಲಕ್ಕೂ ಬಿದ್ದಿಲ್ಲ ಬ್ರೇಕ್, ದೇಹ ಹಂಚಿಕೊಂಡವರಿಗಿಂತ ಮಧ್ಯವರ್ತಿಗಳಿಗೆ ಹಬ್ಬವೋ ಹಬ್ಬವೋ...!
ಪೊಲೀಸರ ಮೂಗಿನಡಿ ಯಲ್ಲೇ ವ್ಯವಹಾರ ನಡೆಯುತ್ತಿದ್ದರೂ ಆಗೊಮ್ಮೆ ಈಗೊಮ್ಮೆ ದಾಳಿ ಶಾಸ್ತ್ರ ನಡೆಯುತ್ತಿದೆಯೇ ಹೊರತು ಬಿಗಿ ಕ್ರಮ ಗಳಿಲ್ಲ. ಸುನೀಲ್ ಅಗರವಾಲ್ ಅವರು ಪೊಲೀಸ್ ಆಯುಕ್ತ ರಾಗಿ ಬಂದ ನಂತರ ಪೊಲೀಸಿಂಗ್‌ನಲ್ಲಿ ಬಿಗಿ ಕಂಡು ಬಂದರೂ ಅವರ ದೃಷ್ಟಿ ಈ ವಹಿವಾಟಿನತ್ತ ಬಿದ್ದಿಲ್ಲ.
ಗುತ್ತಿಗೆ ವ್ಯವಹಾರ: ಇದು ಗುತ್ತಿಗೆ ವ್ಯವಹಾರ. ಇಷ್ಟು ಅವಧಿಗೆ ಇಂತಿಷ್ಟು ಹಣವನ್ನು ಗುತ್ತಿಗೆ ರೂಪದಲ್ಲಿ ಯುವತಿಯರಿಗೆ ನೀಡಲಾಗುತ್ತದೆ. ೧೫ ದಿನದ ಹಿಂದೆ ಮೈಸೂರಿನಲ್ಲಿ ಸಿಕ್ಕಿ ಬಿದ್ದ ಬಾಂಗ್ಲಾದ ಯುವತಿ ಸುಮಯ್ಯಾ ಆಲಿ ಯಾಸ್ ಪ್ರಿಯಾಳ ಪ್ರಕರಣ ಇದನ್ನು ಬಹಿರಂಗ ಪಡಿಸಿದೆ. ಬಾಂಗ್ಲಾದೇಶದಲ್ಲಿ ಬಡತನದ ಬೇಗೆ ಯಲ್ಲಿ ಸಿಲುಕಿದ ಯುವತಿಯರಿಗೆ ಹಣದ ಆಮಿಷ ತೋರಿಸ ಲಾಗುತ್ತದೆ. ಭಾರತದಲ್ಲಿ ಉದ್ಯೋಗ ಕೊಡಿಸುವ ಭರ ವಸೆ ನೀಡಿ ಪಾಸ್‌ಪೋರ್ಟ್ ಅನ್ನು ಕೊಡಿಸಲಾಗುತ್ತದೆ.
ಕೆಲವರು ಪಾಸ್‌ಪೋರ್ಟ್ ಇಟ್ಟುಕೊಂಡೇ ಭಾರತ ಪ್ರವೇಶಿಸಿದರೆ ಇನ್ನು ಕೆಲವರು ಯಾವ ದಾಖಲೆಯೂ ಇಲ್ಲದೇ ಒಳ ನುಸುಳುತ್ತಾರೆ. ಅಲ್ಲಿಂದ ಅವರು ಪ್ರವೇಶ ಪಡೆಯುವುದೇ ಕೋಲ್ಕೊತಾಕ್ಕೆ. ಮುಂಗಡ ಹಣ ಪಡೆಯಲು ಪಾಸ್‌ಪೋರ್ಟ್ ಅನ್ನು ಅಡ ಇಡಬೇಕು. ಆಗ ಇವರ ದರ ನಿಗದಿ. ಜತೆಗೆ ಯಾವ ಊರಿನಲ್ಲಿ ಸೇವೆ ಎನ್ನುವುದನ್ನು ಸೂಚಿಸಲಾಗುತ್ತದೆ.
ಕೇವಲ ಪ್ರಮುಖ ನಗರಗಳಿಗೆ ಸೀಮಿತವಾಗಿದ್ದ ಈ ಚಟುವಟಿಕೆ ಮೈಸೂರಿನಂಥ ಸಾಂಸ್ಕೃತಿಕ ನಗರಕ್ಕೂ ವಿಸ್ತರಿಸಿದೆ. ೨ ವರ್ಷದಿಂದ ಈ ವ್ಯಾಪಾರ ಚಾಲ್ತಿ ಯಲ್ಲಿದೆ. ಕಷ್ಟದ ಮೂಟೆಗಳನ್ನು ಹೊತ್ತು ಮೈಸೂರಿಗೆ ಬಂದ ೩೦ಕ್ಕೂ ಹೆಚ್ಚು ಯುವತಿ ಯರು ಸಿಕ್ಕ ಅಲ್ಪ ಸ್ವಲ್ಪ ಹಣ ದಲ್ಲೇ ಬದುಕನ್ನು ದೂಡಿದರೆ, ಮಧ್ಯವರ್ತಿಗಳು ದುಂಡಗಾಗು ತ್ತಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಯಲ್ಲೂ ಬಾಂಗ್ಲಾ ಯುವತಿಯರು ವೇಶ್ಯಾವಾಟಿಕೆ ವೇಳೆ ಸಿಕ್ಕಿ ಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.
ಶಕ್ತಿಧಾಮದಲ್ಲಿ ಯುವತಿ: ೨ ವರ್ಷದ ಹಿಂದೆ ಮಂಡಿ ಠಾಣೆ ವ್ಯಾಪ್ತಿಯ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಏಳು ಮಂದಿ ಬಾಂಗ್ಲಾ ಯುವತಿಯರು ಅಲ್ಲಿ ಸಿಕ್ಕಿ ಬಿದ್ದರು (ಕೇಸ್ ನಂ ೬/೦೮). ಆ ಪೈಕಿ ಒಬ್ಬಾಕೆ ಬಿಡುಗಡೆ ಯಾಗಿ ಈಗ ಮೈಸೂರಿನ ಶಕ್ತಿಧಾಮ ಸೇರಿದ್ದಾಳೆ. ಇನ್ನೂ ಆರು ಯುವತಿಯರು ಮೈಸೂರು ಜೈಲಿನಲ್ಲೇ ಇದ್ದಾರೆ. ಇನ್ನೂ ಕೆಲವರು ಭಯದ ಮಧ್ಯೆಯೇ ವಹಿವಾಟು ನಡೆಸಿದ್ದಾರೆ.
ಹೈಟೆಕ್ ಸೇವೆ: ಬಾಂಗ್ಲಾಯುವತಿಯರ ಕಥೆ ಬದುಕಿನದ್ದಾದರೂ ಹೈಟೆಕ್ ಸ್ವರೂಪದ್ದೇ. ಕುವೆಂಪುನಗರ, ವಿಜಯ ನಗರದಂಥ ಪ್ರತಿಷ್ಠಿತ ಬಡಾವಣೆಗಳಲ್ಲಿ ಇಂಥ ಹೈಟೆಕ್ ದಂಧೆ ಎಗ್ಗಿಲ್ಲದೇ ನಡೆದಿದೆ. ಕೆಲ ನಿಗದಿತ ವ್ಯಕ್ತಿಗಳು ಮನೆಗಳನ್ನು ಗುರುತಿಸಿಕೊಂಡು ಅವರೇ ಮಧ್ಯವರ್ತಿ ಗಳಾಗಿದ್ದಾರೆ. ವೈದ್ಯರ ರೀತಿ ಅಪಾಯಿಂಟ್‌ಮೆಂಟ್ ನಿಗದಿಪಡಿಸಿಕೊಡುತ್ತಾರೆ. ಇದರ ಹಿಂದೆ ನಡೆಯುವ ಲಕ್ಷಾಂತರ ರೂ. ವಹಿವಾಟಿನ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಇದೆ. ಆಗಾಗ ದಾಳಿ ನಡೆಸುವ ಶಾಸ್ತ್ರ ಮಾಡಲಾಗುತ್ತದೆ.
ವಿಶೇಷ ಘಟಕ ನಿಂತೇ ಹೋಯ್ತು: ೨೦೦೭ರಲ್ಲಿ ಪೊಲೀಸ್ ಆಯುಕ್ತರಾಗಿ ಬಂದ ಡಾ.ಪಿ. ರವೀಂದ್ರನಾಥ್ ಈ ಹೈಟೆಕ್ ವೇಶ್ಯಾವಾಟಿಕೆಯ ಮೇಲೆ ನಿಯಂತ್ರಣ ಹಾಕಲು ವಿಶೇಷ ಪಡೆಯನ್ನು ರಚಿಸಿದರು.  ಇದಕ್ಕೆ ಇನ್ಸ್ ಪೆಕ್ಟರ್ ದರ್ಜೆ ಅಧಿಕಾರಿಗೆ ಉಸ್ತುವಾರಿ ನೀಡಿದರು. ಒಬ್ಬ ಎಸ್‌ಐ ಹಾಗೂ ಕೆಲವು ಸಿಬ್ಬಂದಿಯನ್ನೂ ನಿಯೋಜಿಸಿದರು. ಈ ಪಡೆ ಕುಂಬಾರಕೊಪ್ಪಲು, ವಿಜಯನಗರ, ಕುವೆಂಪುನಗರ ಸಹಿತ ಕೆಲವು ಬಡಾವಣೆಗಳಲ್ಲಿ ದಾಳಿ ನಡೆಸಿತು. ಕೆಲ ದಿನ ವಹಿವಾಟಿಗೆ ಬ್ರೇಕ್ ಬಿದ್ದಂತೆ ಕಂಡಿತು. ಈ ಘಟಕದಿಂದ ಪೊಲೀಸರಿಗೆ ಲಾಭವಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದವು.
ಡಾ.ಪರಶಿವ ಮೂರ್ತಿ ಅವರು ಪೊಲೀಸ್ ಆಯುಕ್ತರಾಗಿ ಬರುತ್ತಿದ್ದಂತೆ ಈ ಚಟುವಟಿಕೆ ಮೇಲೆ ನಿಗಾ ವಹಿಸಿದರೂ ಘಟಕದಿಂದ ಉಪಯೋಗವಾಗದಿದ್ದಾಗ ಆಯಾ ಠಾಣೆಗಳಿಗೆ ಹೊಣೆ ನೀಡಿದ ಪರಿಣಾಮ ಘಟಕ ಒಂದೇ ವರ್ಷದಲ್ಲಿ ಇಲ್ಲವಾಯಿತು.

ಮೈಸೂರು ಗಡಿ ದಾಟಿ ವಿಶ್ವ ‘ರಂಗಾಯಣ’ವಾಗಲಿ

ವಿಕ ಸುದ್ದಿಲೋಕ ಮೈಸೂರು
‘ನಾಡಿನ ಪ್ರತಿಷ್ಠಿತ ರೆಪರ್ಟರಿ ರಂಗಾಯಣ ಮೈಸೂರಿಗೆ ಸೀಮಿತವಾಗುವುದು ಬೇಡ. ಎಲ್ಲ ಕಡೆಯೂ ರಂಗ ಸಂಚಾರ ಮಾಡಲಿ, ವಿಸ್ತಾರವಾಗಲಿ. ಅದು ವಿಶ್ವ ರಂಗಾಯಣವಾಗಿ ಬೆಳಗಲಿ....!’ 
ಇಂಥದ್ದೊಂದು ಬೃಹದ್ ಆಶಯಯೊಂದಿಗೆ  ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ -೨೦೧೦ ಶನಿವಾರ ಆರಂಭವಾಯಿತು. ರಂಗಾಯಣಕ್ಕೆ ಪೂರ್ಣಾವಧಿಯ ನಿರ್ದೇಶಕರು ಇಲ್ಲದೇ ಇರುವುದು ಹಾಗೂ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ  ರಂಗಾಯಣದ ವಾರ್ಷಿಕ ಉತ್ಸವಕ್ಕೆ ಈ ಬಾರಿ ಸರಳತೆಯ ಅಂಗಿ ತೊಡಿಸಲಾಗಿದೆ. ಹಾಗಾಗಿ ಐದು ನಾಟಕಗಳ ಪ್ರದರ್ಶನ, ರಂಗ ಸಂಗೀತ, ಸಂವಾದ, ಪುಸ್ತಕ ಪ್ರದರ್ಶನ ಹಾಗೂ ಮಾರಾಟವಷ್ಟೇ ಈ ಬಾರಿಯ ಬಹುರೂಪಿಯ ಬಹುರೂಪಗಳು. ಪ್ರತಿ ಬಾರಿಯಂತೆ ಬಹುರೂಪಿಗೆ  ಈ ಬಾರಿ ಯಾವುದೇ ಘೋಷಿತ ಆಶಯವೂ ಇಲ್ಲ. ನಾಟಕೋತ್ಸವದ ಉದ್ಘಾಟನೆ ಸಂದರ್ಭದಲ್ಲಿ  ಈ ಕೊರತೆಯನ್ನು ನೀಗಿಸುವ ಪ್ರಯತ್ನ, ಅತಿಥಿಗಳ ಭಾಷಣದಲ್ಲಿ ವ್ಕಕ್ತವಾಯಿತು. ಅದು ಒಂದು ರೀತಿಯಲ್ಲಿ  ರಂಗಾಸಕ್ತರ ಮನಸ್ಸಿನಲ್ಲಿರುವ ಅಘೋಷಿತ ಆಶಯ. 
ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ ವಿ. ಕೆ. ಮೂರ್ತಿ ಅವರ ಗೈರು ಹಾಜರಿಯಲ್ಲಿ ಮೂರು ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿದ ರಂಗಭೂಮಿ ಕಲಾವಿದೆ ಉಮಾಶ್ರೀ, ‘ಬಿ. ವಿ. ಕಾರಂತರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಇಲ್ಲಿನ ಕಲಾವಿದರು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯವಾದುದು. ಇಲ್ಲಿಂದ ಹೊರಬಿದ್ದಿರುವ ಕಲಾವಿದರು ಸಿನಿಮಾದಲ್ಲೂ ಸೈ ಎನಿಸಿಕೊಂಡಿದ್ದಾರೆ. ಹೊಸ ರಂಗ ಸಂಸ್ಥೆಗಳನ್ನು ಕಟ್ಟಿ, ಕಲಾವಿದರನ್ನು ಸೃಷ್ಟಿಸಿದ್ದಾರೆ. ಆದರೆ, ರಂಗಾಯಣ ತನ್ನ ಕ್ರಿಯಾತ್ಮಕ ಹಾಗೂ ರಚನಾತ್ಮಕ  ಚಟುವಟಿಕೆಗಳನ್ನು ಇನ್ನಷ್ಟು ವಿಸ್ತಾರ ಮಾಡಬೇಕಿದೆ.
ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಯ ನಡುವೆ ಸೇತುವೆಯಾಗಿ ರಂಗಾಯಣ ಕೆಲಸ ಮಾಡಲಿ’ಎಂದು ಆಶಿಸಿದರು.
‘ವೃತ್ತಿ ರಂಗಭೂಮಿ ಕಲಾವಿದರಿಂದ ವರ್ಷದ ೩೬೫ ದಿನವೂ ವಿಶ್ವ ರಂಗಭೂಮಿ ದಿನವೇ’ ಎಂದು ನೆನಪಿಸಿದ ಉಮಾಶ್ರೀ, ರಂಗಾಯಣವೂ ಆ ಮಾದರಿಯಲ್ಲಿ  ಕಾರ್ಯಶೀಲವಾಗಲಿ ಎಂಬುದನ್ನು ಹೇಳಿದ್ದು ಹೀಗೆ- ‘ನೀನಾಸಂನ ತಿರುಗಾಟ, ಶಿವ ಸಂಚಾರ ತಂಡಗಳ ರಂಗ ತಿರುಗಾಟದ ಮಾದರಿಯಲ್ಲಿ, ರಂಗಾಯಣ ಕೂಡ ಕರ್ನಾಟಕದಾದ್ಯಂತ ತಿರುಗಾಟ ನಡೆಸಬೇಕು. ಇಲ್ಲಷ್ಟೇ ನಾಟಕ ಮಾಡಿದರೆ, ಅದು ಮೈಸೂರಿಗೆ ಮಾತ್ರ ಸೀಮಿತವಾಗುತ್ತದೆ. ರಂಗಾಯಣ ಕಲಾವಿದರು ಹೊಟ್ಟೆ ತುಂಬಿಸಿಕೊಳ್ಳಲು, ಸಂಬಳಕ್ಕೆ ದುಡಿಯುವ ಕಲಾವಿದರಾಗ ಬಾರದು. ರಂಗಭೂಮಿಗೆ ಇನ್ನಷ್ಟು ಕೊಡುಗೆ ನೀಡಬೇಕು. ಕಲಾವಿದರು ಕಾರಂತರ ಕನಸುಗಳನ್ನು ಕಟ್ಟುವ ಜನತೆಗೆ, ಅವುಗಳನ್ನು ಸಾಕಾರಗೊಳಿಸಬೇಕು’ ಎಂದು ಹೇಳಿದರು. 
‘ಧಾರವಾಡದ ರಂಗಾಯಣ ತನ್ನ ಕಾರ್ಯಚಟುವಟಿಕೆ ಯನ್ನು ಆರಂಭಿಸಿದೆಯಾದರೂ, ಅದು ವಿಸ್ತಾರದ ಕಾರ್ಯ ಆಗಿರ ಲಿಕ್ಕಿಲ್ಲ. ಈ ಕೆಲಸ ಆಗಲಿ. ಸಂಸ್ಥೆ ಬೆಳೆಯಲಿ. ಹೊಸ ತಲೆಮಾರಿಗೂ ಅದು ಸಿಗಲಿ. ವಿಶ್ವ ರಂಗಾಯಣ ವಾಗಲಿ’ ಎಂದು ಹಾರೈಸಿದರು.
ಸುತ್ತಾಟಕ್ಕೆ ಸರಕಾರದ ನೆರವು : ಅಧ್ಯಕ್ಷತೆ ವಹಿಸಿದ್ದ  ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ ಕಾರ್ಯದರ್ಶಿ ಬಿ.ಆರ್. ಜಯರಾಮರಾಜೇ ಅರಸ್ ಅವರು ಉಮಾಶ್ರೀ ಎತ್ತಿದ ಪ್ರಶ್ನೆಗಳಿಗೆ- ಬಯಕೆಗಳಿಗೆ ಸ್ಪಂದನೆ ನೀಡುವ ದಾಟಿಯಲ್ಲಿ ಮಾತನಾಡಿದರು. ‘ರಂಗಾಯಣ ನಿಂತ ನೀರಾಗಬಾರದು. ಹರಿಯುವ ನೀರಿನಂತೆ ಇರಬೇಕು ಎಂಬುದು ಉಮಾಶ್ರೀ ಆಶಯ. ಇದಕ್ಕೆ ಸರಕಾರ ಸಂಪೂರ್ಣ ಬೆಂಬಲ ನೀಡುತ್ತದೆ.  ಇಲ್ಲಿನ ಕಲಾವಿದರು ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿ. ಅವರಿಗೆ ಸ್ವಾತಂತ್ರ್ಯ, ಸ್ವಾಯತ್ತವನ್ನು ನೀಡುತ್ತೇವೆ’ ಎಂದರು. ವೃತ್ತಿ ರಂಗಭೂಮಿಯ ಹಿರಿಯ ಕಲಾವಿದ ಎಚ್.ಟಿ.ವೀರಣ್ಣ ಉತ್ಸವಕ್ಕೆ ಶುಭ ಹಾರೈಸಿ ಮಾತನಾಡಿದರು.
ಪ್ರಭಾರ ನಿರ್ದೇಶಕ ಕಾ.ತ.ಚಿಕ್ಕಣ್ಣ, ಬಹುರೂಪಿ ಸಂಚಾಲಕ ಮೈಮ್ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮಂಜಪ್ಪ ಭಾಗವಹಿಸಿ ದ್ದರು. ಒಂದು ಗಂಟೆ ತಡವಾಗಿ ಆರಂಭವಾದ  ಉದ್ಘಾಟನಾ ಸಮಾರಂಭವನ್ನು ತಮ್ಮ ರಂಗ ಗೀತೆಗಳ ಮೂಲಕ ಹಿಡಿದಿಟ್ಟಿದ್ದ  ಜನ್ನಿ ಮತ್ತು ಸಂಗಡಿಗರು, ಸಭೆಯ ಬಳಿಕ  ರಂಗ ಸಂಗೀತ ಸಂಜೆಯನ್ನು ಮನದಣಿ ನಡೆಸಿಕೊಟ್ಟರು.
ಬಹುರೂಪಿಯ ಮೊದಲ  ಪ್ರದರ್ಶನ - ‘ನಾ ತುಕರಾಂ ಅಲ್ಲಾ’ ನಾಟಕ ಭೂಮಿ ಗೀತಾದಲ್ಲಿ  ಹೌಸ್‌ಫುಲ್ ಪ್ರದರ್ಶನ ಗೊಂಡಿತು. ಬೆಂಗಳೂರಿನ ಎಸ್.ಆರ್. ಥಿಯೇಟರ್ ಗ್ರೂಪ್  ಅಭಿನಯಿಸಿದ ನಾಟಕವನ್ನು ಸುರೇಂದ್ರನಾಥ್ ನಿರ್ದೇಶಿಸಿದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಚ್ಚುವರಿ ಸಮಯ, ಸರಿ ನಿರ್ಧಾರ

ಮೈಸೂರಿನ ಇನ್ಫೋಸಿಸ್ ಗೆ ಸಿಐಎಸ್ಎಫ್ ರಕ್ಷಣೆ

ಸದೃಢ ಆರ್ಥಿಕ ನೀತಿ: ದೇಶಕ್ಕಾಗಲಿಲ್ಲ ಕುಸಿತದ ಭೀತಿ

ಸುರಕ್ಷತೆ ಕುರಿತು ಪ್ರಮಾಣ ಪತ್ರ ಕಡ್ಡಾಯ

ಸಂಯಮ ಮಂಡಳಿ 'ಆದರ್ಶ' ಯೋಜನೆ

‘ರಿಯಲ್’ ವಹಿವಾಟು ಇನ್ನಷ್ಟು ಕುಸಿತ

ಕುಂದೂರು ಉಮೇಶಭಟ್ಟ, ಮೈಸೂರು
ಮೈಸೂರಿನಲ್ಲಿ ಈ ವರ್ಷವೂ ರಿಯಲ್ ಎಸ್ಟೇಟ್ ಬೂಮ್‌ಗೆ ಕವಿದಿದೆ ಮಂಕು.
ಆರ್ಥಿಕ ಹಿಂಜರಿತ ಚೇತರಿಕೆ ಪ್ರಭಾವ ರಿಯಲ್ ಎಸ್ಟೇಟ್ ವಹಿವಾಟಿನ ಮೇಲೆ ಆಗಬಹುದು ಎನ್ನುವ ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ನಿರೀಕ್ಷೆ ಹುಸಿಯಾಗಿದೆ. ಆರ್ಥಿಕ ಹಿಂಜರಿತ ಕಂಡ ವರ್ಷಕ್ಕಿಂತ ಈ ವರ್ಷ ಜಿಲ್ಲೆಯಲ್ಲಿ ಇಲಾಖೆ ಆದಾಯ ಕುಸಿತ ಕಂಡಿದೆ.
ನಗರದಲ್ಲಿ ನಿವೇಶನ, ಮನೆಗಳ ಬೆಲೆಯೇನೋ ಏರಿದೆ, ನಿಜವಾದ ಖರೀದಿದಾರರು ನಿವೇಶನ/ಮನೆ ಖರೀದಿಗೆ ಇನ್ನೂ ಪರದಾಡುವ ದರವೇ ಇದೆ. ಇದು ಇಲಾಖೆಯ ಆದಾಯದಲ್ಲಿ ಮಾತ್ರ ಕಾಣುತ್ತಿಲ್ಲ.
ಬಂಪರ್ ಆದಾಯ: ೨೦೦೬-೦೭ರಲ್ಲಿ  ನೋಂದಣಿ ಹಾಗೂ ಮುದ್ರಾಂಕಗಳ ಇಲಾಖೆಗೆ ಜಿಲ್ಲೆಯಲ್ಲಿ ಬಂದಿದ್ದು ಬಂಪರ್ ಆದಾಯ.
ಇದಕ್ಕೂ ಹಿಂದಿನ ವರ್ಷಗಳಲ್ಲಿ ಮೂರಂಕಿಯನ್ನು ಆದಾಯ ದಾಟಿರ ಲಿಲ್ಲ. ಇಲಾಖೆ ಅಧಿಕಾರಿಗಳು ಸಾಕಷ್ಟು ಶ್ರಮ ವಹಿಸಿದರೂ ೯೦ ಕೋಟಿ ರೂ. ವರೆಗೆ ತಲುಪಿದರೆ ಹೆಚ್ಚು  ಎನ್ನು ವಂತಿತ್ತು. ೨೦೦೬-೦೭ ರಲ್ಲೇ ಇಲಾಖೆಗೆ ‘ರಿಯಲ್’ ಆದಾಯ ಬಂದಿದ್ದು. ಗುರಿ ನೀಡಿದ್ದು ೧೫೦ ಕೋಟಿ ರೂ.ಗಳಾದರೂ ಆದಾಯ ೧೯೫ ಕೋಟಿ ರೂ.ಗಳನ್ನು ತಲುಪಿತ್ತು.
ರಿಯಲ್ ಎಸ್ಟೇಟ್ ವಹಿವಾಟು ಉತ್ತುಂಗದಲ್ಲಿದ್ದ ಕಾಲವದು. ಸಾಕಷ್ಟು ನಿವೇಶನಗಳು ಮಾರಾಟವಾದವು. ಬೆಂಗಳೂರು, ದಿಲ್ಲಿ. ಚೆನ್ನೈ ಹೈದ್ರಾಬಾದ್.. ಹೀಗೆ ಪ್ರಮುಖ ನಗರಗಳ ಉದ್ಯಮಿ ಗಳು ಮೈಸೂರಿನತ್ತ ತಮ್ಮ ಚಟುವಟಿಕೆ ಕೇಂದ್ರೀಕರಿಸಿದರು. ಆಗ ಶೇ.೩೦ ರಿಂದ ೪೦ ರಷ್ಟು ನಿವೇಶನ ಮಾರಾಟ ವಾದವು.
ನಗರದ ಸುತ್ತಮುತ್ತಲಿನ ಜಮೀನು ಗಳು ಕೋಟಿ-ಕೋಟಿಗೆ ಮಾರಾಟ ವಾದವು. ಇದರ ಸಂಪೂರ್ಣ ಲಾಭ ವಾದದ್ದು ನೋಂದಣಿ ಇಲಾಖೆಗೆ.
ಏರಿದ್ದು ಇಳಿಯಿತು: ಹಿಂದಿನ ವರ್ಷದ ಸಾಧನೆ ಕಂಡು ಉತ್ತೇಜಿತವಾದವರು ರಿಯಲ್ ಎಸ್ಟೇಟ್ ಉದ್ಯಮಿಗಳು. ಇದರಿಂದ ಭೂಮಿ ಬೆಲೆಯೂ ಗಗನ ಕ್ಕೇರಿತು. ನಿವೇಶನ ಗಳಿಗೆ ಬೇಡಿಕೆಯೋ ಬೇಡಿಕೆ. ರಿಯಲ್ ಬೂಮ್ ಕಂಡ ಇಲಾಖೆಯೂ ೨೦೦೭- ೦೮ರಲ್ಲಿ ನೋಂದಣಿ ಶುಲ್ಕ ಸಂಗ್ರಹದ ಗುರಿಯನ್ನು ಒಮ್ಮೆಗೆ  ೩೦೦ ಕೋಟಿ  ರೂ. ಗೆ ಏರಿಸಿತು. ಆಗ ಜಿಲ್ಲೆಯಲ್ಲಿನ ಇಲಾಖೆ ಆದಾಯ ಕನಿಷ್ಠ ೨೪೦ ಕೋಟಿ ರೂ. ಗಳನ್ನಾದರೂ ದಾಟಬೇಕಾಗಿತ್ತು. ಅಷ್ಟು ಹೊತ್ತಿಗೆ ವಹಿವಾಟಿನಲ್ಲಿ ಕೊಂಚ ಇಳಿಮುಖದ ವಾತಾವರಣ ಕಂಡು ಬಂದಿತು. ೨೦೦೮-೦೯ ಸಂಪೂರ್ಣ ಆರ್ಥಿಕ ಹಿನ್ನಡೆಯ ವರ್ಷ. ಆಗಲೂ ಬಂದ ಆದಾಯ ೧೩೦ ಕೋಟಿ ರೂ. ಈ ವರ್ಷವೂ ಆರ್ಥಿಕ ಹಿಂಜರಿತ ಮೂಡ್‌ನಿಂದ ಇನ್ನೂ ಹೊರಬಂದಿಲ್ಲ. ಇಲಾಖೆ ಆದಾಯದಲ್ಲೂ ಏರಿಕೆಯೇನೂ ಕಂಡಿಲ್ಲ.

ಜ್ಞಾನಾರ್ಜನೆ ಸುಲಭ, ಮೂತ್ರ ವಿಸರ್ಜನೆ ಕಷ್ಟ !

ವಿಕ ಸುದ್ದಿಲೋಕ ಮೈಸೂರು
ನಗರ ಗ್ರಂಥಾಲಯದಲ್ಲಿ ಜ್ಞಾನಾರ್ಜನೆಗೇನೂ ಸಮಸ್ಯೆಯಿಲ್ಲ. ಇಲ್ಲಿ ಮೂತ್ರ ವಿಸರ್ಜನೆಯದ್ದೇ ದೊಡ್ಡ ಸಮಸ್ಯೆ...
ಹೌದು ಇದು ನಗುವ ವಿಷಯವಲ್ಲ. ಬದಲಿಗೆ ಇಲ್ಲಿ ಜ್ಞಾನ ವನ್ನರಸಿ ಬರುವ ಪುಸ್ತಕಪ್ರಿಯರು ಶೌಚಾಲಯಕ್ಕೆ ಸೂಕ್ತ ವ್ಯವಸ್ಥೆಯಿಲ್ಲದೇ ತಮ್ಮ ಮಸ್ತಕವನ್ನೇ ಬಿಸಿ ಮಾಡಿಕೊಂಡು ಹೋಗುತ್ತಿದ್ದಾರೆ. ಇಲ್ಲೇ ಒಂದು ಸುಸಜ್ಜಿತ ಶೌಚಾಲಯವಿದ್ದರೂ ಅದು ಸಿಬ್ಬಂದಿಗೆ ಮಾತ್ರ. ಯಾರಾದರೂ ಕೇಳಿದರೆ ಅವರಿಗೆ ಬೆದರಿಕೆಯೇ ಉತ್ತರ. ಪ್ರತ್ಯೇಕ ಶೌಚಾಲಯವೊಂದನ್ನು ನಿರ್ಮಿಸಿಕೊಡಲು ಗ್ರಂಥಾಲಯ ಅಧಿಕಾರಿಗಳು ಪ್ರಯತ್ನಿಸಿದರೂ ಜಾಗ-ಹಣದ ಕೊರತೆಯಿಂದ ಇನ್ನೂ ಈಡೇರಿಲ್ಲ. ಸಾರ್ವಜನಿಕರ ದೇಹಬಾಧೆ ಸಮಸ್ಯೆ ತೀರುತ್ತಲೇ ಇಲ್ಲ.
ಶೌಚಕ್ಕಿಲ್ಲಿ  ಕಷ್ಟವೋ ಕಷ್ಟ: ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಮುಖ್ಯ ಗ್ರಂಥಾಲಯಕ್ಕೆ ನಿತ್ಯ ೫೦೦ಕ್ಕೂ ಹೆಚ್ಚು ಮಂದಿ ಆಗಮಿಸುತ್ತಾರೆ. ಈಗ ಪರೀಕ್ಷೆ ಸಮಯ ವಾಗಿರುವುದರಿಂದ ಈ ಸಂಖ್ಯೆ ಎರಡುಪಟ್ಟು. ಇದರಲ್ಲಿ ಹಿರಿಯರು, ಮಹಿಳೆಯರು ಗ್ರಂಥಗಳನ್ನು ಅರಸಿ ಬರುತ್ತಾರೆ. ಅಂಥವರಲ್ಲಿ ಯಾರಿಗಾದರೂ ಶೌಚಾಲಯಕ್ಕೆ ಹೋಗಬೇಕೆಂದರೆ ಎಲ್ಲಿಯೂ ಅವಕಾಶವಿಲ್ಲ. ಅಕ್ಕಪಕ್ಕದಲ್ಲಿ ಎಲ್ಲಿಯೂ ಒಂದೂ ಸಾರ್ವಜನಿಕ ಶೌಚಾಲಯವಿಲ್ಲ. ಹತ್ತಿರದಲ್ಲಿ ಅಂದರೆ ಕೆ.ಆರ್. ಆಸ್ಪತ್ರೆಗೆ ಕಡೆಗೆ ಹೋಗಬೇಕು ಇಲ್ಲವೇ ನಗರ ಬಸ್ ನಿಲ್ದಾಣ ಅಥವಾ ಗ್ರಾಮಾಂತರ ಬಸ್ ನಿಲ್ದಾಣದೆಡೆ ಬರಬೇಕು.
ನಾನು ಆಗಾಗ ಗ್ರಂಥಾಲಯಕ್ಕೆ ಬಂದು ಹೋಗುತ್ತೇನೆ. ಇಲ್ಲಿ ಶೌಚಾಲಯ ಇಲ್ಲದೇ ತೊಂದರೆ ಅನುಭವಿಸಬೇಕಾಗಿದೆ. ಇರುವ ಶೌಚಾಲಯವನ್ನಾದರೂ ನೀಡಿ ಎಂದರೆ ಸಿಬ್ಬಂದಿ ಸತಾಯಿಸುತ್ತಾರೆ ಎನ್ನುವುದು ಶಂಕರಸ್ವಾಮಿ ಅವರ ಬೇಸರದ ನುಡಿ.
ಹೆರಿಟೇಜ್ ಕಟ್ಟಡ: ಇದು ಪಾರಂಪರಿಕ ಹಿನ್ನೆಲೆಯ ಕಟ್ಟಡ. ಇಲ್ಲಿ ಹೊಸದಾಗಿ ಶೌಚಾಲಯ ವನ್ನೂ ಕಟ್ಟಲು ಆಗುವುದಿಲ್ಲ. ಅಕ್ಕಪಕ್ಕದಲ್ಲಿ ಶೌಚಾಲಯವೊಂದನ್ನು ನಿರ್ಮಿಸಲು ಗ್ರಂಥಾಲಯ ಇಲಾಖೆ ಅಧಿಕಾರಿಗಳು ಪ್ರಯತ್ನ ಮಾಡಿದ್ದರೂ ಪಾರಂಪರಿಕ ಕಟ್ಟಡ ಎನ್ನುವ ಕಾರಣಕ್ಕೆ ಅನುಮತಿ ಸಿಕ್ಕಿಲ್ಲ. ಪಾಲಿಕೆಯೂ ಹಣ ನೀಡಲು ಹಿಂದೇಟು ಹಾಕುತ್ತಲೇ ಇದೆ. ಆದರೆ ಇರುವ ಶೌಚಾಲಯವನ್ನು ನೀಡೋಣವೆಂದರೆ ವಾತಾವರಣವೇ ಹಾಳಾಗಿ ಹೋಗುವ ಆತಂಕ. ನಿತ್ಯ ಬರುವವರಿಗೆ ಹಿಂದೆ ಒಮ್ಮೆ ಶೌಚಾಲಯ ಬಳಸಲು ಕೊಟ್ಟಾಗ ಸ್ವಚ್ಛತೆ ಇಲ್ಲದೇ ವಾಸನೆ ಉಂಟಾಗಿ ಇಲ್ಲಿಗೆ ಬರುವವರೇ ಬೇಸರ ವ್ಯಕ್ತಪಡಿಸಿದ ಸ್ಥಿತಿ ನಿರ್ಮಾಣವಾಗಿತ್ತು.
ಆದರೂ ಗ್ರಂಥಾಲಯಕ್ಕೆ ಬರುವವರಿಂದಲೇ ೧ ಇಲ್ಲವೇ ೨ ರೂ. ಗಳನ್ನು ಪಡೆದುಕೊಂಡು ಸ್ವಚ್ಛತೆ ಮಾಡಲು ಇಲಾಖೆಯವರಿಗೂ ಅವಕಾಶವಿದೆ. ಅದನ್ನು ಮಾತ್ರ ಈವರೆಗೂ ಯಾರೂ ಮಾಡಿಲ್ಲ,. ಅಧಿಕಾರಿಗಳು ಶೌಚಾಲಯ ನಿರ್ಮಾಣಕ್ಕೆ ಪ್ರಯತ್ನಿಸಿ ಸಫಲ ವಾಗದೇ ಇದ್ದಾಗ ಸುಮ್ಮನಾದರು. ತಮಗೋಸ್ಕರ ನಿರ್ಮಿಸಿಕೊಂಡಿ ರುವ ವಿಶಾಲ ಶೌಚಾಲಯದಲ್ಲಿ ದೇಹಬಾಧೆ ತೀರಿಸಿಕೊಂಡು ಕುಳಿತರು.
ಲೇಖಕರ ಶೌಚದ ಕಥೆ: ನಗರದ ಲೇಖಕರೊಬ್ಬರಿಗೆ ನಿತ್ಯ ಗ್ರಂಥಾಲಯದ ಕಡೆ ಹೋಗುವ ಹವ್ಯಾಸ. ವರ್ಷಗಳಿಂದ ಅಲ್ಲಿಗೆ ಹೋಗುತ್ತಿರುವ ಅವರಿಗೆ ಪುಸ್ತಕದ ತೊಂದರೆ ಆಗಿದ್ದು ಕಡಿಮೆ.
ಶೌಚಾಲಯವಿಲ್ಲದೇ ಹಲವಾರು ಬಾರಿ ಪರದಾಡಿದ್ದಾರೆ. ಈಗ ಬೇಸಿಗೆ ಸಮಯ. ಚೆನ್ನಾಗಿ ನೀರು ಕುಡಿದು ಗ್ರಂಥಾಲಯಕ್ಕೆ ಹೋದರು. ಸ್ವಲ್ಪ ಹೊತ್ತಿನ ನಂತರ ಶೌಚಾಲಯಕ್ಕೆ ಹೋಗಬೇಕೆನಿಸಿತು. ಗ್ರಂಥಾಲಯದಲ್ಲಿರುವ ಮೆಟ್ಟಿಲುಗಳ ಬಳಿ ಇರುವ ಶೌಚಾಲಯದತ್ತ ಬಂದರೆ ಬೀಗ. ಮತ್ತೆ ಮೇಲೆ ಓಡಿ ಸಿಬ್ಬಂದಿಯವರಿಗೆ ಬೀಗ ತೆರೆಯುವಂತೆ ಕೇಳಿ ಕೊಂಡರು. ಇಲ್ಲಿನ ಶೌಚಾಲಯ ಬಳಸಲು ನಿಮಗೆ ಕೊಡೋಲ್ರೀ ಎನ್ನುವ ನಿರ್ಲಕ್ಷ್ಯದ ಉತ್ತರ ಸಿಕ್ಕಿತು. ಕೋಪ ಗೊಂಡ ಅವರು ಚೆನ್ನಾಗಿ ಗದರಿ ಮೇಲಧಿಕಾರಿಗಳ ಗಮನಕ್ಕೂ ತಂದರು. ೫ ನಿಮಿಷದ ನಂತರ ಶೌಚಾಲಯದ ಬೀಗ ತೆಗೆಯ ಲಾಯಿತು. ಇಂಥ ಒತ್ತಡದ ನಡುವೆ ಶೌಚ ಕೆಲಸ ಮುಗಿಸಿದ್ದ ಲೇಖಕರ ಜೀವ ಮತ್ತೆ ಬಂದಿತ್ತು. ಮತ್ತೆ ಮೇಲೆ ಹೋದ ಅವರು ಅಧಿಕಾರಿಗಳ ವಿರುದ್ಧ ಹರಿಹಾಯ್ದು ಬಂದರು.

ಕ್ಷಯ ಭಯ ಹೋಗಲಾಡಿಸಿ

ವಿಕ ಸುದ್ದಿಲೋಕ ಮೈಸೂರು
ರೋಗ ಮುಕ್ತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮಹತ್ತರವಾದದ್ದು. ಹಾಗಾಗಿ ಕ್ಷಯರೋಗ ನಿರ್ಮೂಲನೆಗೆ ವೈದ್ಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ತಿಳಿಸಿದರು.
ಪುರಭವನದಲ್ಲಿ ಬುಧವಾರ ‘ಕ್ಷಯರೋಗದ ವಿರುದ್ಧ ಆಂದೋಲನ, ತ್ವರಿತ ಕ್ರಿಯೆಗೆ ಹೊಸ ತಂತ್ರಗಳ ಆವಿಷ್ಕಾರ’ ಘೋಷಣೆಯಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಹಾಗೂ  ಸ್ವಯಂಸೇವಾ ಸಂಘಗಳು ಏರ್ಪಡಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇವತ್ತಿಗೂ ಕ್ಷಯ ರೋಗ ಸಂಪೂರ್ಣವಾಗಿ ಹೋಗ ಲಾಡಿಸಲಾಗಿಲ್ಲ. ಇದಕ್ಕೆ ಕಾರಣವೇನು ಎನ್ನುವುದನ್ನು ವೈದ್ಯರೇ ಹೇಳಬೇಕು. ಸರಕಾರದ ಕಾರ‍್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವೈದ್ಯ ಸಿಬ್ಬಂದಿ ಮುಂದಾಗಬೇಕು. ಜನರಲ್ಲಿ ಅರಿವು ಮೂಡಿಸಿ ಕ್ಷಯ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಂಡು ಸಮುದಾಯದ ಆರೋಗ್ಯ ಕಾಪಾಡಬೇಕೆಂದರು.
ಉಪಮೇಯರ್ ಶಾರದಮ್ಮ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿ.ರಾಜು, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಎನ್.ಆನಂದ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಾಮದೇವ್,ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷರಾದ ಡಾ.ವಿದ್ಯಾಶಂಕರ್ ಹಾಜರಿದ್ದರು. ನಂತರ ಕ್ಷಯ ರೋಗ ಕುರಿತಾದ ಕಿರು ಚಿತ್ರ, ಕಿರು ನಾಟಕ ಇತ್ಯಾದಿಗಳನ್ನು ನಡೆಸಲಾಯಿತು.
ಅರಿವು ಜಾಥಾ: ಮೈಸೂರು ವೈದ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಗೀತಾ ಅವಧಾನಿ ಚಾಲನೆ ನೀಡಿದರು.
ಕ್ಷಯ ರೋಗ ಗುಣಪಡಿಸಬಹುದಾದ ಕಾಯಿಲೆ, ಧೂಮಪಾನದಿಂದ ಆರೋಗ್ಯಕ್ಕೆ ಹಾನಿಕಾರಕ, ಕೆಮ್ಮುವಾಗ ಬಾಯಿಗೆ ಕರವಸ್ತ್ರ ಅಡ್ಡವಿಟ್ಟುಕೊಳ್ಳಬೇಕು, ಕ್ಷಯ ರೋಗ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತ, ಇವೇ ಮೊದಲಾದ ಭಿತ್ತಿಫಲಕ ಗಳನ್ನು ಹಿಡಿದು ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು ಮೆರವಣಿಗೆ ಯಲ್ಲಿ ಸಾಗಿದರು. ಜಾಥಾ ಇರ‍್ವಿನ್ ರಸ್ತೆ, ನೆಹರು ವೃತ್ತ, ಅಶೋಕ ರಸ್ತೆ ಮೂಲಕ ಪುರಭವನ ತಲುಪಿತು.
ಸಂಪೂರ್ಣ ನಿರ್ಮೂಲನೆಯಾಗಿಲ್ಲ: ಜಿಲ್ಲೆಯಲ್ಲಿ ಕ್ಷಯರೋಗ ಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಇನ್ನೂ ಕೂಡ ಶೇ.೮೦ರಷ್ಟು ಗುರಿಯನ್ನು ಮುಟ್ಟಲಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿ.ರಾಜು ವಿಷಾದಿಸಿದರು.
ಇಂದಿನ ಅನೇಕ ಅನುಕೂಲಗಳ ನಡುವೆಯೂ ಕ್ಷಯ ರೋಗ ನಿಯಂತ್ರಿಸ ಲಾಗದಿರುವುದು ವಿಷಾದದ ಸಂಗತಿ. ರೋಗಿಗಳು ನಿರಂತರ ಚಿಕಿತ್ಸೆ ಪಡೆಯದಿರು ವುದು ಮುಖ್ಯ ಕಾರಣ. ಈ ನಿಟ್ಟಿನಲ್ಲಿ ಜನರಲ್ಲಿ ಇನ್ನಷ್ಟು ಅರಿವು ಮೂಡಿಸುವ ಮತ್ತು ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದರು.
ಜಿಲ್ಲೆಯ ಅಂಕಿ ಅಂಶ: ಜಿಲ್ಲೆಯಲ್ಲಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಜನವರಿ, ೨೦೦೩ರಿಂದ ಡಿಸೆಂಬರ್ ೨೦೦೯ರವರೆಗೆ ೧೮,೭೯೯ ಕ್ಷಯ ರೋಗಿಗಳನ್ನು ಪತ್ತೆಹಚ್ಚಲಾಗಿದ್ದು, ೧೭,೫೬೧ ರೋಗಿಗಳು ಪೂರ್ಣ ಪ್ರಮಾಣ ದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ೪೭೨೫ ರೋಗಿಗಳು ಗುಣಮುಖರಾಗಿದ್ದು, ಶೇ.೭೮ ರಷ್ಟು ಸಾಧನೆ ಮಾಡಲಾಗಿದೆ.
ರೋಗ ಲಕ್ಷಣಗಳು: ಕ್ಷಯ ಸಾಂಕ್ರಾಮಿಕ ರೋಗ. ೨ ವಾರಗಳಿಗಿಂತ ಹೆಚ್ಚು ಸಮಯದಿಂದ ಸತತ ಕೆಮ್ಮು, ಕಫ, ಸಂಜೆ ವೇಳೆ ಜ್ವರ, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಕಫದಲ್ಲಿ ರಕ್ತ... ಇವು ಕ್ಷಯ ರೋಗದ ಲಕ್ಷಣಗಳು. ಆರಂಭದಲ್ಲಿ ಎರಡು ಬಾರಿ ಕಫ ಪರೀಕ್ಷೆಯಿಂದ ರೋಗವನ್ನು ಖಚಿತಪಡಿಸಿಕೊಂಡು  ೬-೮ ತಿಂಗಳು ತಪ್ಪದೇ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು.

ಬಹು ಮಹಡಿ ಮಹಲು ಎಷ್ಟು ಸುರಕ್ಷಿತ ?

ಚೀ. ಜ. ರಾಜೀವ ಮೈಸೂರು
ಮೊನ್ನೆ ಬೆಂಗಳೂರಿನ ಕಾರ್ಲ್ಟನ್ ಟವರ್‌ನಲ್ಲಿ , ಕೆಲ ಗಂಟೆಗಳ ಹಿಂದೆ ಕೋಲ್ಕತ್ತಾದ ಸ್ಟೀಫನ್ ಹೌಸ್‌ನಲ್ಲಿ , ಅದರ ಬೆನ್ನಲ್ಲೇ ಬೆಂಗಳೂರಿನ ಗೋದಾಮಿನ ಕಟ್ಟಡದಲ್ಲಿ  ಬೆಂಕಿ. ನಾಳೆ ಎಲ್ಲಿ ... ?
ಮೈಸೂರಿನ ಸ್ಥಳೀಯ ಸಂಸ್ಥೆ  ಆಡಳಿತಗಾರರು, ಅಗ್ನಿ ದುರಂತಗಳನ್ನು ನಿರ್ವಹಿಸಬೇಕಾದ ಅಧಿಕಾರಿಗಳು, ಅಗ್ನಿ ಆಕಸ್ಮಿಕಗಳ ಬಗ್ಗೆ ತಿಳಿವಳಿಕೆ ಇಲ್ಲದ ನಾಗರಿಕರು... ಹೀಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕಾದ ಸಂಗತಿ ಇದು. ಏಕೆಂದರೆ ಮೈಸೂರು ಕೂಡ ಅಗ್ನಿ ಆಕಸ್ಮಿಕಗಳನ್ನು ಎದುರಿಸಲು ಸರ್ವ ಸನ್ನದ್ಧವಾಗಿಲ್ಲ. ಬೇಸಿಗೆ ಆರಂಭ ವಾದ ಬಳಿಕ ಇಲ್ಲಿಯೂ ‘ಬೆಂಕಿಯ ಕರೆಗಳ’ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿವೆ. ಜನವರಿಯಿಂದ ಈಚೆಗೆ ಮೈಸೂರಿನ ಮೂರು ಫೈರ್ ಸ್ಟೇಷನ್‌ಗಳು ೨೫೦ಕ್ಕೂ ಹೆಚ್ಚು ಎಮರ್ಜನ್ಸಿ ಕರೆಗಳಿಗೆ ಕಿವಿಯಾಗಿವೆ, ನೆರವಿಗೆ ಧಾವಿಸಿವೆ.
ಮೈಸೂರು ಯಾಕೆ ಹೀಗಾಯಿತು ? ೧೦-೧೫ ವರ್ಷಗಳ ಹಿಂದಿನ ಮಾತು. ಆಗೆಲ್ಲಾ ನಗರದ ಕಟ್ಟಡಗಳ ಪೈಕಿ ಲಕ್ಷ್ಮೀ ಪುರಂನಲ್ಲಿರುವ ಐಯರ್ ಟವರ್‌ಗೆ ದೊಡ್ಡಣ್ಣನ ಸ್ಥಾನ. ಚಾಮುಂಡಿ ಬೆಟ್ಟದಲ್ಲಿ ನಿಂತು ನಗರದ ಮೇಲ್ಮೈ ನೋಡುವ ಮಂದಿಗೆ - ಐಯರ್ ಟವರ್ ಕೂಡ ಪ್ರಮುಖ ಆಕರ್ಷಣೆಯಾಗಿತ್ತು !
ಆದರೆ, ಈಗ ಪರಿಸ್ಥಿತಿ ಆಗಿಲ್ಲ. ಆ ಕಟ್ಟಡಕ್ಕೆ ಸಾಟಿಯಾಗುವ ನೂರಾರು  ಮಹಡಿ-ಮಹಲುಗಳನ್ನು  ಎಣಿಸಬಹುದು. ಒಂದು ಅಂದಾಜಿನ ಪ್ರಕಾರ ಮೈಸೂರಿನಲ್ಲಿ ಐದು ಮಹಡಿ  ಮೀಟರ್ ಎತ್ತರವಿರುವ ಕಟ್ಟಡಗಳ ಸಂಖ್ಯೆ ೨೦೦ರ ಗಡಿ ದಾಟಿದೆ. ಅಪಾರ್ಟ್‌ಮೆಂಟ್‌ಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತ ಲಾರಂಭಿಸಿವೆ. ಮೇಲ್‌ನೋಟಕ್ಕೆ ಸೊಗಸಾಗಿ ಕಾಣುವ ಇಂಥ ಕಟ್ಟಡಗಳು  ವಾಸಿಸಲು ಇಲ್ಲವೇ ಬಳಸಲು  ಯೋಗ್ಯವಾಗಿವೆಯೇ ?, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ?, ಆಕಸ್ಮಿಕ ಬೆಂಕಿ ಬಿದ್ದರೆ, ಅದನ್ನು ಎದುರಿಸಲು ಕಟ್ಟಡಗಳು ಸರ್ವಶಕ್ತವಾಗಿದೆಯೇ?
ಇಂಥದ್ದೊಂದು ಪ್ರಶ್ನೆ ಮುಂದಿಟ್ಟರೆ- ಅಗ್ನಿ ಶಾಮಕ ದಳದ ಅಧಿಕಾರಿಗಳು, ಮೈಸೂರು ಗ್ರಾಹಕ ಪರಿಷತ್‌ನಂಥ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು  ನಿರಾಶೆಯ ಉತ್ತರ ನೀಡುತ್ತಾರೆ. ಬೆಂಗಳೂರಿನ ಕಾರ್ಲ್ಟನ್ ಕಟ್ಟಡದಲ್ಲಿ ನಡೆದ ಅಗ್ನಿ ದುರಂತದ ಬಳಿಕ ಮೈಸೂರಿನ ಕಟ್ಟಡಗಳ ಸುರಕ್ಷತೆಯ ಪರಾಮರ್ಶೆ ನಡೆದಿದೆ.  ಹಾಲಿ ಜಾರಿಯಲ್ಲಿರುವ ಬಹಳಷ್ಟು ನಿಯಮಾವಳಿಗಳು ಉಲ್ಲಂಘನೆ ಯಾಗಿವೆ. ಹಾಗಾಗಿಯೇ ನಗರದ ಕಟ್ಟಡಗಳು ಅಗ್ನಿ ಆಕಸ್ಮಿಕಗಳನ್ನು ಎದುರಿಸಲು ಅಶಕ್ತವಾಗಿವೆ  ಎಂಬುದು ಪರಾಮರ್ಶೆ ನಡೆಸಿರುವ ಮೈಸೂರು ಗ್ರಾಹಕರ ಪರಿಷತ್‌ನ ಆರೋಪ.
ಅಚ್ಚರಿ ಅಂದ್ರೆ, ಬೆಂಗಳೂರಿನ ಕಾರ್ಲ್ಟನ್ ದುರಂತದ ಬಳಿಕ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯ ಕಟ್ಟಡ, ಝಾನ್ಸಿರಾಣಿ ಲಕ್ಷ್ಮೀ ಬಾಯಿ ರಸ್ತೆಯ ಹೋಟೆಲ್ ಸಮೀಪ ಹಾಗೂ ಕೈಗಾರಿಕಾ ಬಡಾವಣೆಯ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕಗಳು ಸಂಭವಿಸಿವೆ. ಅದೃಷ್ಟವಶಾತ್ ಅವು ಯಾವುದೇ ರೀತಿಯ ಪ್ರಾಣ ಹಾನಿ ಉಂಟು ಮಾಡಿಲ್ಲವಾದರೂ, ಕಟ್ಟಡ ಸುರಕ್ಷತೆಯ ಬಗ್ಗೆ ಪರಿಷತ್‌ನ ಆರೋಪಗಳಿಗೆ ಸಮರ್ಥನೆ ಒದಗಿಸುತ್ತವೆ.
ಕಟ್ಟಡ ಸಂಹಿತೆ ಏನನ್ನುತ್ತದೆ ?
ಭಾರತದ ನಗರಗಳಲ್ಲಿ ಕಟ್ಟುವ ಕಟ್ಟಡಗಳು ಹೇಗಿರಬೇಕು ಎಂಬುದಕ್ಕೆ ಕೇಂದ್ರ ಸರಕಾರ ರಾಷ್ಟ್ರೀಯ ಕಟ್ಟಡ ಸಂಹಿತೆಯನ್ನೇ (ನ್ಯಾಷನಲ್ ಬಿಲ್ಡಿಂಗ್ ಕೋಡ್) ರೂಪಿಸಿದೆ. ಈ ಸಂಹಿತೆ ಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ಸರಕಾರ ೨೦೦೩ರ ಡಿಸೆಂಬರ್ ೧೨ರಂದು ಹೊರಡಿಸಿರುವ ರಾಜ್ಯಪತ್ರದಲ್ಲೂ ಪ್ರಕಟಿಸಿದೆ. ಅದರ ಪ್ರಕಾರ ಮೈಸೂರಿನಂಥ ನಗರಗಳಲ್ಲಿ  ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿರುವವರು ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲೇಬೇಕು ಎನ್ನುತ್ತಾರೆ ಮೈಸೂರು ಗ್ರಾಹಕ ಪರಿಷತ್‌ನ ಪಿ.ಎಂ.ಭಟ್.
-ಸಂಭವನೀಯ ದುರಂತ ತಡೆಯಲು ಕಟ್ಟಡಗಳು ಸಜ್ಜಾಗಿರಬೇಕು. ಅಗ್ನಿಯನ್ನು ತಡೆಯುವ, ನಿಯಂತ್ರಿಸುವ ಸಲಕರಣೆಗಳು ಇರಬೇಕು.  ಅಗ್ನಿ ಎಚ್ಚರಿಕೆಗಳ ಕುರಿತು ಜಾಗೃತಿ ಮೂಡಿಸಿರಬೇಕು.  - ಐದು ಮಹಡಿ ಇಲ್ಲವೇ ಅದಕ್ಕಿಂತ ಹೆಚ್ಚು ಮಹಡಿ ಇರುವ ಹಾಗೂ ೧೫ ಮೀಟರ್‌ಗಿಂತ ಎತ್ತರಕ್ಕೆ ಕಟ್ಟಡ ನಿರ್ಮಿಸುವವರು ಸ್ಥಳೀಯ ಅಗ್ನಿಶಾಮಕ ಇಲಾಖೆಯಿಂದ ನಿರಾ ಪೇಕ್ಷಣಾ ಪತ್ರ(ಎನ್‌ಒಸಿ) ಪಡೆದಿರಲೇ ಬೇಕು. ಕಟ್ಟಡ ಪೂರ್ಣಗೊಂಡ ಬಳಿಕ ಸ್ಥಳೀಯ ಸಂಸ್ಥೆ ನೀಡುವ ಕಟ್ಟಡ ಪೂರ್ಣ ವರದಿಗೆ(ಸಿಆರ್)  ಅಗ್ನಿ ಶಾಮಕ ದಳದ ಸಮ್ಮತಿ ಪತ್ರ ಇರಬೇಕು. - ಅಗ್ನಿ ಶಾಮಕ ದಳದ ವಾಹನ ಗಳು ಸುಲಭವಾಗಿ ಪ್ರವೇಶಿಸುವಂಥ ಅಗಲವಾದ ರಸ್ತೆಗಳಲ್ಲಿ ಮಾತ್ರ ಬಹುಮಹಡಿ ಕಟ್ಟಡಗಳನ್ನು ಕಟ್ಟಬೇಕು. - ಪ್ರತಿಯೊಂದು ಬಹುಮಹಡಿ ಕಟ್ಟಡಕ್ಕೂ  ಕನಿಷ್ಠ ಎರಡು ಪ್ರವೇಶ(೪.೫ಮೀಟರ್ ಅಗಲ ಮತ್ತು ೪.೫ ಮೀಟರ್ ಎತ್ತರ) ದ್ವಾರಗಳಿರ ಬೇಕು. - ಪ್ರತಿ ಬಹುಮಹಡಿ ಕಟ್ಟಡಕ್ಕೆ ಕನಿಷ್ಠ ಎರಡು ಮೆಟ್ಟಿಲು ಸಾಲುಗಳಿರಬೇಕು. ಮೆಟ್ಟಿಲು ಸಾಲುಗಳಿಗೆ ಪ್ರತಿ ಮಹಡಿಯಲ್ಲೂ ಅಗ್ನಿ ನಿರೋಧಕ ಬಾಗಿಲು ಇರಬೇಕು.
ವಿಲನ್ ಯಾರು ಗೊತ್ತೆ ?
ಒಂದು ಅಂದಾಜಿನಂತೆ  ನಗರದಲ್ಲಿ ೨೦೦ಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳಿವೆ. ಅಪಾರ್ಟ್ ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು, ಹೋಟೆಲ್‌ಗಳು, ಶಾಲೆಗಳು ಹೀಗೆ ನಾನಾ ರೀತಿಯ ಕಟ್ಟಡಗಳಿವೆ. ಕರ್ನಾಟಕ  ಅಗ್ನಿಶಾಮಕ  ಮತ್ತು ತುರ್ತು ಸೇವೆಗಳ ಪ್ರಾದೇಶಿಕ ಅಗ್ನಿಶಾಮಕ  ಅಧಿಕಾರಿ ಸಿ.ಗುರುಲಿಂಗಯ್ಯ ಅವರು ಹೇಳುವ ಪ್ರಕಾರ-ಬಹಳಷ್ಟು ಅಪಾರ್ಟ್ ಮೆಂಟ್‌ಗಳು ಅಗ್ನಿ ಆಕಸ್ಮಿಕಗಳನ್ನು ಎದುರಿಸಲು ಶಕ್ತವಾಗಿವೆ. ಆದರೆ ಇದೇ ಮಾತನ್ನು ಉಳಿದ ಕಟ್ಟಡಗಳ ಸಂದರ್ಭದಲ್ಲಿ ಹೇಳುವಂತಿಲ್ಲ ಎನ್ನುತ್ತಾರೆ. ಅಂದರೆ  ಅಪಾರ್ಟ್ ಮೆಂಟ್ ಹೊತುಪಡಿಸಿ ಉಳಿದ ಪ್ರಾಕಾರದ ಬಹುತೇಕ ಕಟ್ಟಡಗಳು ಒಂದರ್ಥದಲ್ಲಿ ಅಪಾಯದಲ್ಲಿವೆ. ಈ ಎಲ್ಲವೂ ನಿಯಮದ ಪ್ರಕಾರ ಅಗ್ನಿಶಾಮಕ ಇಲಾಖೆಯ ಅನುಮತಿ ಪಡೆದೇ ಇಲ್ಲ. ಆದರೂ ಪಾಲಿಕೆಯ ಅಧಿಕಾರಿಗಳು ಇಂಥ ಕಟ್ಟಡ ಕಟ್ಟಲು, ಬಳಸಲು ಅನುಮತಿ ನೀಡಿದ್ದಾರೆ. ಇಂಥ ಕಡೆ ದುರಂತವೇನಾದರೂ ಸಂಭವಿಸಿದರೆ, ಅದರ ಮೊದಲ ಆರೋಪಿ ಯಾರು ಎಂಬುದು ಗೊತ್ತಾಯಿತಲ್ಲ ! ವರ್ಷದ ಬಹುತೇಕ ದಿನ ನಾನಾ ನಮೂನೆಯ  ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ವೇದಿಕೆಯಾಗುವ ತಾತ್ಕಾಲಿಕ ತಾಣಗಳು(ಜಿಲ್ಲಾಧಿಕಾರಿ ಕಚೇರಿ ಹಿಂಭಾಗ, ಮಹಾರಾಜ ಮೈದಾನ), ಮಾರುಕಟ್ಟೆ ಪ್ರದೇಶಗಳು, ದಸರಾ ವಸ್ತು ಪ್ರದರ್ಶನ ಮೈದಾನಗಳು  ಕೂಡ ಅಗ್ನಿ ಆಕಸ್ಮಿಕಗಳ ದೃಷ್ಟಿಯಲ್ಲಿ ಅಪಾಯದ  ಸ್ಥಳಗಳು. ಈ ಪ್ರದೇಶಗಳು ಸದಾ ಜನಸಂದಣಿಯಿಂದ ಕೂಡಿರುತ್ತವೆ. ಒಳಗಷ್ಟೇ ಅಲ್ಲ, ಹೊರಗೂ ಗಿಜಿ-ಗಿಜಿ ಎನ್ನುವಷ್ಟು ಜನರು ಇದ್ದೇ ಇರುತ್ತಾರೆ. ಒಳಗಿನ ಜನ ಹೊರಗೆ ಸುಲಭವಾಗಿ ಹೊರಬರಲು ತುರ್ತು ದ್ವಾರಗಳೇ ಇರುವುದಿಲ್ಲ. ಕಾಲ್ತುಳಿತಕ್ಕೂ ಇವು ಯೋಗ್ಯ ಸ್ಥಳಗಳು !

ನೀರು ಪೂರೈಸುವಲ್ಲಿ ಸೋತ ಪಾಲಿಕೆ

ಮೇಯರ್‌ರಿಂದಲೇ ಪ್ರತಿಭಟನೆ ಎಚ್ಚರಿಕೆ
ವಿಕ ಸುದ್ದಿಲೋಕ ಮೈಸೂರು
‘ನಗರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಕೊಡಲು ವಿಫಲರಾಗಿದ್ದೇವೆ. ಜನರಿಗೆ ಉತ್ತರಿಸಲು ಆಗುತ್ತಿಲ್ಲ’
-ಹೀಗೆಂದು ಅಸಹಾಯಕತೆ ತೋಡಿಕೊಂಡವರು ನಗರದ ಪ್ರಥಮ ಪ್ರಜೆ ಮೇಯರ್ ಪುರುಷೋತ್ತಮ್.
‘೪-೫ ದಿನಗಳಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಕ್ರಮವಹಿಸದಿದ್ದರೆ ಮೇಯರ್ ಸ್ಥಾನವನ್ನು ಬದಿಗಿರಿಸಿ ಸಾಮಾನ್ಯನಂತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎನ್ನುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ಎದುರು  ಪ್ರಕಟಿಸಿದರು. ಅವರ ಈ ಮಾತುಗಳು ನೀರಿನ ಬವಣೆಗೆ ಹಿಡಿದ ಕನ್ನಡಿ.
ಮೈಸೂರಿನ ಕಳಕಳಿಯುಳ್ಳ ಪ್ರಜ್ಞಾವಂತ ನಾಗರಿಕರ ವೇದಿಕೆ (ಎಸಿ ಐಸಿಎಂ) ಜಿಲ್ಲಾಡಳಿತ, ಜಸ್ಕೋ, ಇನ್ಸ್‌ಟಿಟ್ಯೂಷನ್ ಆಫ್ ಎಂಜಿನಿಯರ‍್ಸ್ ಸಹ ಭಾಗಿತ್ವದಲ್ಲಿ ಸೋಮವಾರ ವಾಣಿವಿಲಾಸ ನೀರು ಸರಬರಾಜು ಕೇಂದ್ರದಲ್ಲಿ ‘ಆರೋಗ್ಯಕರವಾದ ಪ್ರಪಂಚಕ್ಕೆ ಪರಿಶುದ್ಧ ವಾದ ನೀರು’ ಘೋಷಣೆಯಡಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಿತ್ಯ ಯಾವುದಾದರೂ ಮೂಲೆಯಲ್ಲಿ ನೀರಿಗಾಗಿ ಖಾಲಿ ಕೊಡಗಳ ಪ್ರದರ್ಶನ, ಪ್ರತಿಭಟನೆ, ಗಲಾಟೆ  ನಡೆದಿದೆ. ದಿನದಲ್ಲಿ ಕನಿಷ್ಠ ೨-೩ ಗಂಟೆ ನೀರು ಪೂರೈಸಲು ಆಗುತ್ತಿಲ್ಲ ಎಂದರು.
ನೂರು ವರ್ಷಗಳ ದೂರದೃಷ್ಟಿ ಯೊಂದಿಗೆ ಕೆಆರ್‌ಎಸ್ ಅಣೆಕಟ್ಟೆಯನ್ನು ಕೇವಲ ೯೦ ಲಕ್ಷ ರೂ. ಗಳಲ್ಲಿ ನಿರ್ಮಿಸಲಾಗಿತ್ತು. ಆದರೆ ಇವತ್ತು ನರ್ಮ್ ಅಡಿಯಲ್ಲಿ ೬೦೦ ಕೋಟಿ ರೂ. ವ್ಯಯಿಸಿದರೂ ನೀರು ಪೂರೈಕೆ  ಸಾಧ್ಯವಾಗುತ್ತಿಲ್ಲ. ಜಸ್ಕೋ ಕಂಪನಿಗೆ ನೀರು ನಿರ್ವಹಣೆ ಜವಾಬ್ದಾರಿ ನೀಲಾಗಿದೆ. ಪ್ರತಿ ತಿಂಗಳು ೯೦ ಲಕ್ಷ ರೂ.ಗಳನ್ನು ನಿರ್ವಹಣೆಗೆ ನೀಡಿದರೂ ಪ್ರಯೋಜನ ವಿಲ್ಲ. ಜಸ್ಕೋ ಮತ್ತು ವಾಣಿವಿಲಾಸ ನೀರು ಸರಬರಾಜು ಸಿಬ್ಬಂದಿ ನಡುವೆ ಹೊಂದಾಣಿಕೆಯಿಲ್ಲ ಎಂದು ಬೇಸರಿಸಿದರು.
ನಗರಕ್ಕೆ ದಿನಕ್ಕೆ ೧೮೦ ಎಂಎಲ್‌ಡಿ ನೀರು ಸಾಕು. ಒಂದೇ ರೀತಿಯ ನೀರು ಪೂರೈಕೆ ವ್ಯವಸ್ಥೆ ಇದ್ದರೂ ೧೫-೨೦ ವಾರ್ಡ್‌ಗಳಿಗೆ ೫-೬ ಗಂಟೆ ನೀರು ಲಭ್ಯ. ಕೆಲವೆಡೆ ೨೪ ಗಂಟೆಯೂ ಸಿಗುತ್ತದೆ. ಉಳಿದೆಡೆ ತತ್ವಾರ. ನೀರಿನ ಲಭ್ಯತೆ ಇದ್ದರೂ ಪೂರೈಸಲು ಇರುವ ಅಡ್ಡಿಯಾದರೂ ಏನು ? ಕಾರಣ ರಾರು? ಮಾಹಿತಿ ಕೇಳಿದರೆ ಯಾರಿಂದಲೂ ಸಮರ್ಪಕ ಉತ್ತರ ಸಿಗುತ್ತಿಲ್ಲ.
ಸಂಸದರಾದ ಎಚ್.ವಿಶ್ವನಾಥ್, ಆರ್. ಧ್ರುವ ನಾರಾಯಣ್ ಕಚೇರಿಗೆ ಒಂದು ವಾರದಿಂದ ನೀರಿಲ್ಲ. ವಿದ್ಯುತ್ ಸಮಸ್ಯೆಯಿರುವುದ ರಿಂದ ಜನ ರೇಟರ್ ಖರೀದಿಗೆ ಸೂಚಿಸಿದರೂ ಆಗಿಲ್ಲ. ೪೦-೫೦ ನೀರಿನ ಲಾರಿಗಳು ಬೇಕಾದರೂ ಅಷ್ಟಿಲ್ಲ. ಜಿಲ್ಲಾಧಿಕಾರಿ, ಆಯುಕ್ತರೊಡನೆ ಸಭೆ ನಡೆಸಿ ಸಮಸ್ಯೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು.
ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಮಾತನಾಡಿ, ನೀರು ಪೂರೈಕೆ ಜಾಲದ ಸಮಸ್ಯೆ ಮತ್ತು ಸಿಬ್ಬಂದಿ ಸಮಸ್ಯೆ ಕಾರಣವಾಗಿ ನೀರು  ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ೨೪೭ ಮಾಡಿದರೂ ಸಮಸ್ಯೆಯಿದೆ. ಜಸ್ಕೋ ಮತ್ತು ವಾಣಿ ವಿಲಾಸ ಸಿಬ್ಬಂದಿ ಒಂದೇ ಎನ್ನುವ ಮನೋಭಾವ ಬರಬೇಕು. ನಿಯತ್ತಿನಿಂದ ನೌಕರರು ಕೆಲಸ ಮಾಡಿದರೆ ಸಮಸ್ಯೆ ಕಡಿಮೆ ಮಾಡಬಹುದು ಎಂದರು.
ಜಿಲ್ಲಾಧಿಕಾರಿ ಪಿ.ಮಣಿವಣ್ಣನ್ ಮಾತನಾಡಿ, ಪಾಲಿಕೆ ಸದಸ್ಯ ಅಥವಾ ಇನ್ಯಾರೇ ಆದರೂ ನೀರು ಸರಬರಾಜು ಸಿಬ್ಬಂದಿ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕೇಸು ದಾಖಲಿಸಲಾಗುವುದು. ನೀರಿನ ಸಮಸ್ಯೆಯನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕು. ಸಿಬ್ಬಂದಿಗೆ ಸೂಕ್ತ ರಕ್ಷಣೆಗೆ ಮುಂದಿನ ವಾರ ಪೊಲೀಸ್ ಆಯುಕ್ತರೊಂದಿಗೆ  ಸಭೆ ನಡೆಸಿ ಚರ್ಚಿಸುವೆ ಎಂದರು.
ಕಾರ್ಯಕ್ರಮದಲ್ಲಿ ವಾಣಿ ವಿಲಾಸ ನೀರು ಪೂರೈಕೆ ಕೇಂದ್ರದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ, ನರ್ಮ್ ಅಧೀಕ್ಷಕ ಎಂಜಿನಿಯರ್ ಸುರೇಶ್‌ಬಾಬು, ಜಸ್ಕೋ ಅಧಿಕಾರಿ ಪುರೋಹಿತ್, ಎಂಜಿನಿಯರ್ ಸುಬ್ಬೇಗೌಡ, ಸುಬ್ರಹ್ಮಣ್ಯ, ಎ.ಎನ್.ಸತೀಶ್ ಹಾಜರಿದ್ದರು.

ಸರಕಾರಿ ಆಸ್ಪತ್ರೆಗೆ ಬಂದಿದೆ ದತ್ತು ಯೋಜನೆ

ಕುಂದೂರು ಉಮೇಶಭಟ್ಟ ಮೈಸೂರು
ಗಾಲಯದಲ್ಲಿ ಪ್ರಾಣಿ ದತ್ತು ನಿಮಗೆ ಗೊತ್ತು, ಈಗ ಸರಕಾರಿ ಆಸ್ಪ್ರತ್ರೆಯಲ್ಲಿ ಹಾಸಿಗೆಯನ್ನು ದತ್ತು ತೆಗೆಯುವ ವಿಶಿಷ್ಟ ಯೋಜನೆ ಮೈಸೂರಿನಲ್ಲಿ ಆರಂಭಗೊಳ್ಳುತ್ತಿದೆ.
೫೦೦ ರೂ. ನೀಡಿ ಒಂದು ತಿಂಗಳಿಗೆ ಬೆಡ್(ಹಾಸಿಗೆ) ಒಂದನ್ನು ದತ್ತು ತೆಗೆದುಕೊಳ್ಳಿ, ಆಸ್ಪತ್ರೆ ಅಭಿವೃದ್ಧಿಗೆ ನೆರವಾಗಿ... ಎನ್ನುವ ಮನವಿಯೊಂದಿಗೆ ಶತಮಾನದ ಇತಿಹಾಸವಿರುವ ಮೈಸೂರಿನ ಚಲುವಾಂಬ ಸರಕಾರಿ ಆಸ್ಪತ್ರೆ ದತ್ತು ಯೋಜನೆಗೆ ಚಾಲನೆ ನೀಡಲಿದೆ.
ಇದು ಮಹಿಳೆ ಹಾಗೂ ಮಕ್ಕಳಿಗೆಂದೇ ಮಹಾರಾಜರು ರೂಪಿಸಿದ್ದ ಮಹಾ ಆಸ್ಪತ್ರೆ. ಸರಕಾರ ಸಾಕಷ್ಟು ಅನುದಾನ ನೀಡಿದರೂ ಈ ಆಸ್ಪತ್ರೆಯನ್ನು ಕಾಡುತ್ತಿರುವುದು ಆರ್ಥಿಕ ಸಂಪನ್ಮೂಲದ ಕೊರತೆ.  ಹಣದ ಕೊರತೆಯ ನೆಪವನ್ನಾಗಿಟ್ಟುಕೊಂಡು ಆಸ್ಪತ್ರೆಗೆ ಬರುವವರಿಗೆ ಸೇವೆ ನೀಡುವುದರಲ್ಲಿ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದಲೇ ಆರಂಭವಾಗುತ್ತಿದೆ ದತ್ತು ಯೋಜನೆ. ಯೋಜನೆ ರೂಪಿಸಿದವರು ಮೈಸೂರು ಜಿಲ್ಲಾಧಿಕಾರಿ ಮಣಿವಣ್ಣನ್. ಎಲ್ಲವೂ ಅಂದುಕೊಂಡಂತೆ ಆದರೆ ಏಪ್ರಿಲ್ ಮೊದಲ ವಾರದಲ್ಲಿ ಒಂದು ಹಾಸಿಗೆ ದತ್ತು ತೆಗೆದುಕೊಳ್ಳಿ ಎನ್ನುವ ಯೋಜನೆ ಆರಂಭಗೊಳ್ಳಲಿದೆ.
ಹಣದ್ದೇ ಕೊರತೆ: ಆಸ್ಪತ್ರೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಆಸ್ಪತ್ರೆಗೆ ಪ್ರತಿ ವರ್ಷ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುವ  ಮಹಿಳೆಯರು ೮೦ ಸಾವಿರ, ಮಕ್ಕಳ ಸಂಖ್ಯೆ ೪೦ ಸಾವಿರ, ಒಳರೋಗಿಯಾಗಿ ದಾಖಲಾಗುವ ಮಹಿಳೆಯರ ಪ್ರಮಾಣ ೧೮ ಸಾವಿರ,  ಮಕ್ಕಳ ಸಂಖ್ಯೆ ೭ ಸಾವಿರ. ಇದರಲ್ಲಿ ಹೆರಿಗೆ ಪ್ರಮಾಣ ೧೦ ಸಾವಿರಕ್ಕೂ ಹೆಚ್ಚು, ಶಸ್ತ್ರಚಿಕಿತ್ಸೆ ಪ್ರಮಾಣ ೫ ಸಾವಿರದಷ್ಟು. ಇಲ್ಲಿರುವ ಹಾಸಿಗೆ ಗಳ ಸಂಖ್ಯೆ ೪೦೦. ನಿತ್ಯ ಇಲ್ಲಿಗೆ ಹೆರಿಗೆ ಇಲ್ಲವೇ ಚಿಕಿತ್ಸೆಗೆಂದು ಬರುವವರಿಗೆ ಬಾಗಿಲು ಬಂದ್ ಆಗುವುದೇ ಇಲ್ಲ. ಬಿಪಿಎಲ್ ಕಾರ್ಡ್‌ದಾರರಿಗೆ ಚಿಕಿತ್ಸೆ, ಔಷಧ ಎಲ್ಲಾ ಉಚಿತ. ಅದೇ ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ಹೆರಿಗೆಗೆ ೩೦೦ ರೂ, ಸಿಜೆರಿಯನ್ ಆದರೆ ೧೦೦೦ ರೂ. ಶುಲ್ಕ ವಿಧಿಸಲಾಗುತ್ತದೆ. ಈ ಕಾರ್ಡ್ ಇಲ್ಲ ದಿರುವವರಿಗೂ ಚಿಕಿತ್ಸೆ ಇದೇ ದರದಲ್ಲಿ ಲಭ್ಯ. ಇತ್ತೀಚಿಗೆ ಆಸ್ಪತ್ರೆ ಯನ್ನು ಸರಕಾರವೇ ಸ್ವಾಯತ್ತ ಸಂಸ್ಥೆಯಾಗಿ ರೂಪಿಸಿದೆ. ಇದರಿಂದ ಸಂಬಳ ಹೊರತುಪಡಿಸಿ ಹೆಚ್ಚಿನ ಅನುದಾನವೇನೂ ಆಸ್ಪತ್ರೆಗೆ ಸಿಗುತ್ತಿಲ್ಲ. ಇದಕ್ಕಾಗಿಯೇ ರೂಪುಗೊಂಡಿದೆ ದತ್ತು ಯೋಜನೆ. ಇದರಿಂದ ಬರುವ ಆದಾಯವನ್ನು ಆಸ್ಪತ್ರೆಯ ಸೌಲಭ್ಯಗಳ ಸುಧಾರಣೆ ಮತ್ತಿತರ ಕಾರ‍್ಯಗಳಿಗೆ ಬಳಸಲಾಗುವುದು.
ರಾಜ್ಯದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರು ಈಗಲೂ ಅವಲಂಬಿಸಿರುವುದು ಸರಕಾರಿ ಆಸ್ಪತ್ರೆಗಳನ್ನೇ. ಅಲ್ಲಿಯೇ ಉತ್ತಮ ಸೌಲಭ್ಯ ಸಿಗುತ್ತದೆ ಎನ್ನುವ ಭಾವನೆಯೂ ಮನೆ ಮಾಡಿದೆ. ಮೈಸೂರಿನಲ್ಲಿ ಆರಂಭವಾಗುತ್ತಿರುವ ದತ್ತು ಯೋಜನೆ ರಾಜ್ಯಕ್ಕೆ ಮಾದರಿಯಾಗಲಿದೆ.
ಶತಮಾನದ ಆಸ್ಪತ್ರೆ: ಲಕ್ಷಾಂತರ ಮಹಿಳೆಯರು ಹಾಗೂ ಮಕ್ಕಳ ಆಶಾಕಿರಣವೆನಿಸಿರುವ ಈ ಆಸ್ಪತ್ರೆ ಇತಿಹಾಸ ಬರೋಬ್ಬರಿ ೧೩೦ ವರ್ಷ. ೧೮೮೦ರಲ್ಲಿ ವಾಣಿವಿಲಾಸ ಆಸ್ಪತ್ರೆಯಾಗಿ ೨೪ ಹಾಸಿಗೆಯೊಂದಿಗೆ ಆರಂಭ. ಅಲ್ಲಿಂದ ಈಗಿರುವ ಸ್ಥಳದಲ್ಲಿ ೧೯೩೯ರಲ್ಲಿ ವಿಶಾಲ ಕಟ್ಟಡಕ್ಕೆ ಸ್ಥಳಾಂತರ. ಅದಕ್ಕೆ ನೀಡಿದ ಹೆಸರು ಚೆಲುವಾಂಬ. ೧೯೫೪ರಲ್ಲಿ ಮಕ್ಕಳ ಪ್ರತ್ಯೇಕ ಆಸ್ಪತ್ರೆ ಪಕ್ಕದಲ್ಲೇ ಆರಂಭ. ಸದ್ಯ ಮಹಿಳೆಯರು ಹಾಗೂ ಮಕ್ಕಳ ಆಸ್ಪತ್ರೆಗಳು ಚಲುವಾಂಬ ಆಸ್ಪತ್ರೆಯಡಿ ಕಾರ‍್ಯನಿರ್ವಹಿಸುತ್ತಿವೆ. ಆಸ್ಪತ್ರೆ ಆರಂಭವಾದಾಗ ಇದ್ದ ಮೈಸೂರು ನಗರ ಜನಸಂಖ್ಯೆ ೬೯ಸಾವಿರ. ಈಗ ೧೨ ಲಕ್ಷ ತಲುಪಿದೆ. ಇಲ್ಲಿನ ಆಸ್ಪತ್ರೆಯ ಅಚ್ಚುಕಟ್ಟಾದ ಸೇವೆಯ ಫಲ ಮೈಸೂರು ಮಾತ್ರವಲ್ಲದೇ  ಪಕ್ಕದ ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯವರಿಗೂ ವಿಸ್ತರಣೆ ಗೊಂಡಿತು. ಇದರಿಂದ ೩೦ ಲಕ್ಷಕ್ಕೂ ಹೆಚ್ಚು ಜನರಿಗೆ ಈಗಲೂ ಇದೇ ಪ್ರಮುಖ ಹೆರಿಗೆ ಆಸ್ಪತ್ರೆ.
ನೀವು ದತ್ತು ಪಡೆಯಬೇಕೇ,  ಕರೆ ಮಾಡಿ -  ೯೪೪೮೦೫೭೦೦೭ (ಡಾ.ಕೃಷ್ಣಮೂರ್ತಿ).

ವೈರಮುಡಿ, ಬ್ರಹೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

ನವೀನ್ ಮಂಡ್ಯ
ಐತಿಹಾಸಿಕ ಮೇಲುಕೋಟೆಯಲ್ಲಿ ಮಾ.೨೫ರಂದು ನಡೆಯಲಿರುವ ಶ್ರೀ ಚಲುವನಾರಾಯಣ ಸ್ವಾಮಿಯ ವಿಶ್ವವಿಖ್ಯಾತ ಶ್ರೀ ವೈರಮುಡಿ ಬ್ರಹ್ಮೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಅಂತಿಮ ಹಂತದ ಕಾಮಗಾರಿಗಳು ನಡೆದಿವೆ.
ಈ ಬಾರಿಯ ಶ್ರೀ ವೈರಮುಡಿ ಉತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿಭದ್ರತೆ ಹಾಕಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿರ್ಧರಿಸಿದೆ.
ಉತ್ಸವ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ೩ ಬಾರಿ ಹಾಗೂ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ೧ ಬಾರಿ ಸಭೆ ನಡೆಸಿ ಪೂರ್ವಸಿದ್ಧತೆ ಬಗ್ಗೆ ಚರ್ಚಿಸಲಾಗಿದೆ. ಪ್ರಭಾರ ಜಿಲ್ಲಾಧಿಕಾರಿ ಪುಟ್ಟಮಾದಯ್ಯ ಅವರು ಮಾ. ೨೧ರಂದು ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸುವರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕು ಪ್ರಮುಖ ಕಾಮಗಾರಿಗಳನ್ನು ಉದ್ಘಾಟಿಸಿ, ಒಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. ಸಿಎಂ ಆಗಮನದ ಹಿನ್ನೆಲೆಯಲ್ಲಿ ವೇದಿಕೆ ಕಾರ‍್ಯಕ್ರಮ ನಡೆಸಲು ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ.
ಶ್ರೀ ವೈರಮುಡಿ ಬ್ರಹ್ಮೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಕುಡಿಯುವ ನೀರು, ರಸ್ತೆ, ನಿರಂತರ ವಿದ್ಯುತ್, ಸಾರಿಗೆ, ತಾತ್ಕಾಲಿಕ ಶೌಚಾಲಯಗಳು, ವೈದ್ಯ ಚಿಕಿತ್ಸಾ ಕೇಂದ್ರಗಳು ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಪುಟ್ಟಮಾದಯ್ಯ ಅವರು ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ತಾತ್ಕಾಲಿಕ ಶೌಚಾಲಯ: ಮೇಲುಕೋಟೆಯ ೮ ಪ್ರಮುಖ ಸ್ಥಳಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳಲ್ಲಿ ೪ ಸ್ಥಳಗಳಲ್ಲಿ ತಲಾ ೨೫ ಹಾಗೂ ಉಳಿದೆಡೆ ತಲಾ ೨೦ ಶೌಚಾಲಯಗಳಂತೆ ಒಟ್ಟು ೧೮೦  ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ.
ಕುಡಿಯುವ ನೀರು: ಮೇಲುಕೋಟೆಗೆ ಪ್ರಸ್ತುತ ಕೆರೆತೊಣ್ಣೂರಿನಿಂದ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಜಾರಿಯಲ್ಲಿದೆ. ಭಕ್ತರಿಗಾಗಿ ಅಲ್ಲಲ್ಲಿ ನಲ್ಲಿ ಟ್ಯಾಪ್‌ಗಳನ್ನು ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ತಯಾರಿ ನಡೆದಿದೆ.
ಸ್ವಚ್ಛತೆ: ಕ್ಲೋರಿನ್ ಪೌಡರ್ ಹಾಕಿ ಪಂಚಕಲ್ಯಾಣಿ, ಅಕ್ಕತಂಗಿಯರ ಕೊಳಗಳನ್ನು ಶುಚಿಗೊಳಿಸಲಾಗಿದೆ. ಜತೆಗೆ, ಶ್ರೀಚಲು ವ ನಾರಾಯಣಸ್ವಾಮಿ ದೇವಸ್ಥಾನ, ಶ್ರೀ ಯೋಗಾನರಸಿಂಹಸ್ವಾಮಿ ಬೆಟ್ಟ, ರಾಯಗೋಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಗಿಡ ಗಂಟಿಗಳು, ಕಸವನ್ನು ತೆರವುಗೊಳಿಸಿ ಸ್ವಚ್ಛತೆ ಕಾಯ್ದುಕೊಳ್ಳಲಾಗಿದೆ. ಚರಂಡಿಗಳನ್ನು ಶುಚಿ ಗೊಳಿಸಲಾಗುತ್ತಿದೆ.
ಸಾರಿಗೆ ಸೌಲಭ್ಯ: ಭಕ್ತರು ವಿವಿಧೆಡೆಯಿಂದ ಮೇಲುಕೋಟೆಗೆ ಬರಲು ಅನು ಕೂಲವಾಗುವಂತೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಕೆಎಸ್‌ಆರ್‌ಟಿಸಿ ಮಂಡ್ಯ ವಿಭಾಗದಿಂದ ೭೫ ಬಸ್‌ಗಳನ್ನು ನಿಯೋಜಿಸಲಾಗಿದೆ. ಉಳಿದಂತೆ ಮೈಸೂರು, ಹಾಸನ, ಬೆಂಗಳೂರು ವಿಭಾಗಗಳಿಂದ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬಸ್‌ಗಳ ನಿಲುಗಡೆಗಾಗಿ ಎರಡು ಸ್ಥಳಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ.
ಐರಾವತ, ರಾಜಹಂಸ ಬಸ್: ಈ ಮೊದಲು ಮೈಸೂರು, ಬೆಂಗಳೂರಿನಲ್ಲಿ ಸಂಚರಿಸುವ ವೋಲ್ವೊ ಎಸಿ ಬಸ್‌ಗಳನ್ನು ಮೇಲುಕೋಟೆಗೆ ಜಾತ್ರಾ ಮಹೋತ್ಸವಕ್ಕಾಗಿ ಬಿಡಲು ಚಿಂತಿಸಲಾಗಿತ್ತು. ಆದರೆ, ಮೇಲುಕೋಟೆ ಮಾರ್ಗದ ರಸ್ತೆಗಳಲ್ಲಿ ರಸ್ತೆಡುಬ್ಬಗಳಿರುವ ಕಾರಣ ಆ ಚಿಂತನೆಯನ್ನು ಕೈ ಬಿಡಲಾಗಿದೆ. ಬದಲಿಗೆ ಐರಾವತ, ರಾಜಹಂಸ ಬಸ್‌ಗಳನ್ನು ಬಿಡಲು ನಿರ್ಧರಿಸಲಾಗಿದೆ.
ಚಿಕಿತ್ಸಾ ಕೇಂದ್ರಗಳು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಜತೆಗೆ ವೈದ್ಯ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗುತ್ತಿದೆ. ಎರಡು ಆಂಬ್ಯುಲೆನ್ಸ್‌ಗಳು, ವೈದ್ಯರು ಹಾಗೂ ದಾದಿಯರನ್ನು ನಿಯೋಜಿಸಲಾಗಿದೆ.
ದುರಸ್ತಿ ಕಾಮಗಾರಿ: ಉತ್ಸವದ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಲಿನ ರಸ್ತೆ ಹಾಗೂ ಗ್ರಾಮದ ರಸ್ತೆಗಳ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ದೋಷ ಕಂಡು ಬಂದಿದ್ದ ರಥದ ಮುಂದಿನ ಎರಡು ಚಕ್ರಗಳನ್ನು ಗಂಜಾಂನಲ್ಲಿ ದುರಸ್ತಿ ಪಡಿಸಲಾಗಿದೆ.
ನಿರಂತರ ವಿದ್ಯುತ್: ವೈರಮುಡಿ ಉತ್ಸವಕ್ಕೆ ಯಾವುದೇ ಅಡಚಣೆ ಆಗದಂತೆ ನಿರಂತರ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗಿದೆ. ಈ ಸಂಬಂಧ ಸೆಸ್ಕ್ ಅಧಿಕಾರಿಗಳಿಗೆ ಜಿಲ್ಲಾಡಳಿತ ಅಗತ್ಯ ಸಲಹೆ-ಸೂಚನೆ ನೀಡಿದೆ. ದೇವಾಲಯಗಳು, ಗೋಪುರ ಹಾಗೂ ರಸ್ತೆ ಬದಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ.

ಕ್ಯಾಂಪಸ್‌ಗಳಲ್ಲಿ ಸಂದರ್ಶನ ಸಂಚಲನ

ಚೀ. ಜ. ರಾಜೀವ ಮೈಸೂರು
ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಇದೊಂದು ಸಮಾಧಾನಕರ ಸಮಾಚಾರ. ಪರೀಕ್ಷೆ ಮುಗಿದ ತಕ್ಷಣ ಉದ್ಯೋಗ ಹಿಡಿಯಬೇಕೆಂದಿರುವ ಭಾವೀ ಉದ್ಯೋಗಾರ್ಥಿಗಳ  ಪಾಲಿಗಂತೂ ಇದು ಸಂತಸದ ಸುದ್ದಿಯೇ !
ವಿಷಯ ಏನು ಅಂದ್ರೆ-ಉದ್ಯೋಗ ನೀಡುವುದಕ್ಕಾಗಿ  ಪ್ರತಿಭಾನ್ವಿತ ಯುವ ಪದವೀಧರರನ್ನು ಅರಸುತ್ತಾ ಕಾಲೇಜುಗಳ  ಪ್ರಾಂಶುಪಾಲರ ಬಾಗಿಲು ಹುಡುಕಿಕೊಂಡು ಬರುತ್ತಿದ್ದ  ಪ್ರತಿಷ್ಠಿತ ಕಂಪನಿಗಳು  ಈಗ ಮತ್ತೊಮ್ಮೆ ಕ್ಯಾಂಪಸ್ ಕಡೆ ಮುಖ ಮಾಡಿವೆ.
ನಗರದ ಎನ್‌ಐಇ, ಎಸ್‌ಜೆಸಿಇ, ವಿದ್ಯಾವಿಕಾಸ್ ಎಂಜಿನಿಯ ರಿಂಗ್ ಕಾಲೇಜುಗಳು, ಮಹಾಜನ, ಜೆಎಸ್‌ಎಸ್‌ನಂಥ ಬಿಬಿಎಂ ಕಾಲೇಜುಗಳಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ಶೋಧ ಆರಂಭಿಸಿವೆ. ಕ್ಯಾಂಪಸ್  ಇಂಟರ್‌ವ್ಯೂಗೆ ಈಗ ಶುಕ್ರದೆಸೆ.
ಜಾಗತಿಕವಾಗಿ ಕಾಣಿಸಿಕೊಂಡ ಆರ್ಥಿಕ ಹಿಂಜರಿತದ ಪರಿಣಾಮ, ನೂರಾರು ಕಂಪನಿಗಳು ತಮ್ಮಲ್ಲಿನ ಸಾವಿರಾರು ನೌಕರರಿಗೆ ಸ್ಯಾಲರಿ ಸ್ಲಿಪ್(ವೇತನ ಚೀಟಿ) ಬದಲು, ಪಿಂಕ್ ಸ್ಲಿಪ್(ಕೆಲಸದಿಂದ ತೆಗೆಯುವುದು) ನೀಡಿ ಮನೆಗೆ ಕಳುಹಿಸಿದ್ದೇ  ಹೆಚ್ಚು. ಈ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದೀಚೆಗೆ ಎಲ್ಲ ಕಡೆಯೂ ‘ಹಿಂಜರಿತದ ಹುಚ್ಚಿ’ (ರಿಸೆಷನ್ ಮೇನಿಯಾ)ನದ್ದೇ ಕಾರುಬಾರು ನಡೆದಿತ್ತು. ಇರುವ ನೌಕರಿಗಳೇ ಕರಗುತ್ತಿದ್ದರಿಂದ, ಹೊಸ ನೌಕರಿ ಸದ್ಯಕ್ಕಂತೂ ಸೃಷ್ಟಿಯಾಗುವುದಿಲ್ಲ ಎಂಬ ಭಾವನೆಯೇ ಎಲ್ಲ ಕ್ಯಾಂಪಸ್‌ಗಳ ಕಾರಿಡಾರ್‌ಗಳಲ್ಲಿ, ನೋಟಿಸ್ ಬೋರ್ಡ್‌ಗಳಲ್ಲಿ ಬೇರೂರಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಪ್ರತಿಭಾನ್ವಿತರಿಗಾಗಿ ಕ್ಯಾಂಪಸ್ ತನಕ ಬರುವ ಆಚರಣೆಯನ್ನು ಕಂಪನಿಗಳು ಕೂಡ ನಿಲ್ಲಿಸಿದ್ದವು.
ಆದರೆ, ಆರ್ಥಿಕ ಹಿಂಜರಿಕೆಯ ಸ್ಥಿತಿಯಿಂದ ಜಾಗತಿಕ ಮಾರುಕಟ್ಟೆ ಬಚಾವ್ ಆಗಿದೆ. ಹಾಗಾಗಿ ಭಾರತದ ಸೇವಾ ಹಾಗೂ ಉತ್ಪಾದನಾ ವಲಯದ ಖಾಸಗಿ ಉದ್ಯಮಗಳು ಚೇತರಿಸಿಕೊಂಡಿವೆ. ಐಟಿ, ಬಿಪಿಒ, ಕೆಪಿಒಗಳಲ್ಲಿ ದುಡಿಯಲು ಮಾನವ ಸಂಪನ್ಮೂಲ ಬೇಕಿದೆ.  ಹಾಗಾಗಿ, ಮತ್ತೊಮ್ಮೆ ಪ್ರತಿಭಾನ್ವಿತ ಉದ್ಯೋಗಾರ್ಥಿ ಗಳಿಗಾಗಿ ಖಾಸಗಿ ಕಂಪನಿಗಳು ಬೇಟೆ ಆರಂಭಿಸಿವೆ.
ಎನ್‌ಐಇ ಬಾಗಿಲಲ್ಲಿ ೨೮ ಕಂಪನಿ
ನಗರದ ಪ್ರತಿಷ್ಠಿತ ದಿ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರಿಂಗ್(ಎನ್‌ಐಇ) ಕಾಲೇಜಿನ ತರಬೇತಿ ಮತ್ತು  ಉದ್ಯೋಗ ನೀಡಿಸುವ(ಪ್ಲೇಸ್‌ಮೆಂಟ್) ಘಟಕಕ್ಕೆ ಈ ವರ್ಷ ಕೈ ತುಂಬಾ ಕೆಲಸ. ಉದ್ಯೋಗಕ್ಕೆ ಹೋಗ ಬಯಸುವ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳ ಆಕಾಂಕ್ಷೆ ಈ ಬಾರಿ ಯ ಕ್ಯಾಂಪಸ್ ಸಂದರ್ಶನದಲ್ಲಿಯೇ ಸಾಕಾರಗೊಳ್ಳಬಹುದು ಎಂಬುದು ಎನ್‌ಐಇ ಲೆಕ್ಕಾಚಾರ.
‘ಆರ್ಥಿಕ ಹಿಂಜರಿಕೆ ಕಾಲದಲ್ಲೂ ನಮ್ಮ ಸಂಸ್ಥೆಯ ಪ್ಲೇಸ್‌ಮೆಂಟ್ ಘಟಕ  ಒಂದಿಷ್ಟು  ಸಾಧನೆ ತೋರಿಸಿತ್ತು. ಈಗ ಪರಿಸ್ಥಿತಿ ಸುಧಾರಿಸುವ ಶುಭ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಸಾಲಿಗಿಂತ ದುಪ್ಪಟ್ಟು ಕಂಪನಿಗಳು ನಮ್ಮಲ್ಲಿಗೆ ಬರುವ ಸಾಧ್ಯತೆ ಇದೆ’  ಎಂದು ಘಟಕದ ಅಧಿಕಾರಿ ಡಾ. ಬಿ. ಕೆ. ಶ್ರೀಧರ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
‘ಇದುವರೆಗೆ ನಮ್ಮ ಕಾಲೇಜಿಗೆ ೨೮ ಕಂಪನಿಗಳು ಭೇಟಿ ನೀಡಿ, ಕ್ಯಾಂಪಸ್ ಸಂದರ್ಶನ ನಡೆಸಿವೆ. ಈ ಪೈಕಿ ೧೪ ಕೋರ್ ಎಂಜನಿಯ ರಿಂಗ್‌ಗೆ ಸಂಬಂಧಿಸಿದ್ದು, ಉಳಿದ ೧೪ ಐಟಿ ವಲಯದ ಕಂಪನಿ ಗಳು. ಅಂತಿಮ ಪದವಿಯಲ್ಲಿ ಕಲಿಯುತ್ತಿರುವ ೨೬೦ ವಿದ್ಯಾರ್ಥಿ ಗಳು ಆಯ್ಕೆಯಾಗಿದ್ದಾರೆ. ಜುಲೈ/ಆಗಸ್ಟ್ ಬಳಿಕ ಈ ಎಲ್ಲರೂ ಉದ್ಯೋಗಾರ್ಥಿಗಳಾಗಿ ನೌಕರಿ ಹಿಡಿಯಲಿದ್ದಾರೆ’ ಎಂದು ಸಂತಸದಿಂದ ವಿವರಿಸಿದರು.
ಇನ್ಫೋಸಿಸ್ ಟೆಕ್ನಾಲಜಿಸ್, ಫಿಲಿಪ್ಸ್ ಇಂಡಿಯಾ, ಟಾಟಾ ಕನ್ಸಲ್‌ಟೆನ್ಸಿ ಸರ್ವಿಸಸ್, ಐಬಿಎಂ ಇಂಡಿಯಾ, ಹ್ಯುಲೆಟ್ ಪ್ಯಾ ಕಾರ್ಡ್, ಐ ಗೇಟ್ ಸಲೂಷನ್ಸ್, ನ್ಯಾಷನಲ್ ಇನ್‌ಷ್ಟ್ರುಮೆಂಟ್ಸ್, ಎಲ್ ಅಂಡ್ ಟಿ, ಎಸ್ಸಾರ್ ಗ್ರೂಪ್, ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ, ಮರ್ಸಿಡೆಜ್ ಬೆನ್ಜ್ ಆರ್ ಅಂಡ್ ಡಿ, ಟಿವಿಎಸ್ ಮೋಟಾರ್ ಕಂಪನಿ ಸೇರಿದಂತೆ ೨೮ ಕಂಪನಿಗಳ ಮಾನವ ಸಂಪ ನ್ಮೂಲ ಶಾಖೆಯ ಅಧಿಕಾರಿಗಳು ಎನ್‌ಐಇಗೆ ಬಂದು ಹೋಗಿದ್ದಾರೆ.
ವಿಶೇಷ ಎಂದರೆ ಈ ಎಲ್ಲ ಕಂಪನಿಗಳು ಕೈ ತುಂಬಾ ವೇತನ ನೀಡುವ ಭರವಸೆ ನೀಡಿ ಹೋಗಿವೆ. ವಾರ್ಷಿಕ ೩.೨ ಲಕ್ಷ ರೂ. ಗಳಿಂದ ೬.೫೪ಲಕ್ಷ ರೂ.ಗಳವರೆಗೆ ವಿದ್ಯಾರ್ಥಿಗಳ ಯೋಗ್ಯತೆಗೆ ಅನುಸಾರವಾಗಿ ಸಂಬಳ ಪಡೆಯಲಿದ್ದಾರೆ.
ಪದವಿ ಅಭ್ಯರ್ಥಿಗಳಿಗೂ ಬೇಡಿಕೆ
ಎಂಜನಿಯರಿಂಗ್ ಮಾತ್ರವಲ್ಲ, ಪದವಿ ವಿದ್ಯಾರ್ಥಿಗಳಿಗೂ ಬೇಡಿಕೆ ಹೆಚ್ಚಿದೆ. ಉತ್ತಮ ಸಂವಹನ ಕೌಶಲ್ಯ, ಕೈನಲ್ಲೊಂದು ಪದವಿ ಇದ್ದರೆ ಬಿಪಿಒ ಮತ್ತು ಕೆಪಿಒಗಳಲ್ಲಿ ಉದ್ಯೋಗ ನಿಶ್ಚಿತ.
‘ಅಕೌಂಟಿಂಗ್ ಮತ್ತು ಆಡಿಟಿಂಗ್‌ನಂಥ ಜ್ಞಾನ ಆಧರಿತ ವಲಯದಲ್ಲಿ ಕೆಲಸ ಮಾಡಲು ಬಿಬಿಎಂ ಇಲ್ಲವೇ ವಾಣಿಜ್ಯ ಪದವಿ ಪಡೆದಿರುವ ವಿದ್ಯಾರ್ಥಿಗಳು ಬೇಕಿದ್ದಾರೆ ಎಂಬುದು ಕೆಲವು ಖಾಸಗಿ ವಲಯದ ಸಂಸ್ಥೆಗಳ ಬೇಡಿಕೆ. ಈ ಬಾರಿ ನಮ್ಮ ಕಾಲೇಜಿಗೆ ಸಾಕಷ್ಟು ಸಂಸ್ಥೆಗಳು ಕ್ಯಾಂಪಸ್ ಸಂದರ್ಶನಕ್ಕಾಗಿ ಬರುತ್ತಿವೆ’ ಎನ್ನುತ್ತಾರೆ ಮಹಾಜನ ಪದವಿ ಕಾಲೇಜಿನ ಪ್ಲೇಸ್‌ಮೆಂಟ್ ಅಧಿಕಾರಿ ಪ್ರೊ.ಜಿ. ಬಿ. ಆರವಿಂದ್.
‘ಕಳೆದ ವರ್ಷ ನಮ್ಮಲ್ಲಿ ೧೨೦ ವಿದ್ಯಾರ್ಥಿಗಳಿಗೆ ಮಾತ್ರ ನೌಕರಿ ಸಿಕ್ಕಿತ್ತು. ಈ ಬಾರಿ ಈ ಸಂಖ್ಯೆ  ದುಪ್ಪಟ್ಟು ಇಲ್ಲವೇ ಮೂರು ಪಟ್ಟು ಹೆಚ್ಚುವ ನಿರೀಕ್ಷೆ ಇದೆ. ಕಂಪನಿಗಳ ಬಯಕೆಗೆ ತಕ್ಕಂತೆ ನಮ್ಮ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದೇವೆ’ ಎಂದು ಪತ್ರಿಕೆಗೆ ವಿವರಿಸಿದರು.

ಕಬಿನಿ ಬಲದಂಡೆ ನಾಲೆಗೆ ಮತ್ತಷ್ಟು ಆಧುನೀಕರಣ ಭಾಗ್ಯ

ಕುಂದೂರು ಉಮೇಶಭಟ್ಟ ಮೈಸೂರು
ಕಬಿನಿ ಬಲದಂಡೆ ನಾಲೆ ಇನ್ನಷ್ಟು ಆಧುನೀಕರಣ ಗೊಳ್ಳಲಿದೆ.
ಎರಡು ವರ್ಷದ ಹಿಂದಷ್ಟೇ ೪೦ ಕಿ.ಮೀ. ಉದ್ದದವರೆಗೆ ಲೈನಿಂಗ್‌ನೊಂದಿಗೆ ಹೊಸ ರೂಪ ಪಡೆದಿದ್ದ ನಾಲೆಯ ಮುಂದುವರಿದ ಭಾಗವಾಗಿ ೪೧ರಿಂದ ೧೦೦ ಕಿ.ಮೀ.ವರೆಗೆ ಆಧುನೀಕರಣ ಗೊಳ್ಳುವ ಭಾಗ್ಯ.
ಇದಕ್ಕಾಗಿ ರಾಜ್ಯ ಸರಕಾರ ೮೨ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಒಂದು ವಾರದೊಳಗೆ ಕಾಮಗಾರಿ ಆರಂಭವಾಗಲಿದೆ. ನೀರಾವರಿ ಇಲಾಖೆ ಲೆಕ್ಕಾಚಾರದಂತೆ ಜುಲೈ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಕಳೆದ ತಿಂಗಳು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಕೊಳ್ಳೆಗಾಲ ತಾಲೂಕು ತೆಳ್ಳನೂರು ಭಾಗಕ್ಕೆ ಭೇಟಿ ನೀಡಿ ಕಬಿನಿ ಬಲೆದಂಡೆ ನಾಲೆ ತುದಿ ಭಾಗದ ಜನರ ಕಷ್ಟಗಳನ್ನು ಕಣ್ಣಾರೆ ಕಂಡಿದ್ದರು. ಅಲ್ಲಿಗೆ ನೀರು ತಲುಪ ಬೇಕೆಂದರೆ ಮಧ್ಯ ಭಾಗ ಆಧುನೀಕರಣಗೊಳ್ಳಲೇಬೇಕು ಎನ್ನುವ ರೈತರ ಆಶೋತ್ತರಕ್ಕೆ ಸಚಿವರು ಸ್ಪಂದಿಸಿದ್ದರಿಂದ ಬೇಗನೇ ಅನುಮತಿ ದೊರೆತಿದೆ.
ಸತತ ೨ನೇ ಬಾರಿ: ಕಬಿನಿ ಜಲಾಶಯ ನಿರ್ಮಾಣಗೊಂಡು ಐದು ದಶಕ ಕಳೆದಿದೆ. ಮೂರು ದಶಕದ ಹಿಂದೆ ಬಲ ಮತ್ತು ಎಡದಂಡೆ ನಾಲೆ ನಿರ್ಮಿಸಲಾಗಿದೆ. ಅದರಲ್ಲಿ ಬಲದಂಡೆ ನಾಲೆ ಮೈಸೂರು-ಚಾಮರಾಜನಗರ ಜಿಲ್ಲೆಯ ಜೀವನಾಡಿ. ಈ ನಾಲೆಗಳು ಆಧುನೀಕರಣವಾಗ ಬಹುದು ಎಂಬ ನಿರೀಕ್ಷೆ  ವರ್ಷಗಳಿಂದ ಈ ಭಾಗದ ಜನರಲ್ಲಿತ್ತು. ಹಿಂದೆಲ್ಲಾ ಸಣ್ಣಪುಟ್ಟ ಕಾಮಗಾರಿಗಳು ನಡೆದರೂ ಅವುಗಳ ದರ್ಶನವೂ ಈಗ ಸಿಗುವುದಿಲ್ಲ.
ನಾಲೆ ತುದಿ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರು ತಲುಪಿಸಲು ನಾಲೆ ಆಧುನೀಕರಣ ಆಗಲೇಬೇಕು ಎಂದು ಮನಗಂಡ ಹಿಂದಿನ ಸರಕಾರ ಅನುಮತಿ ನೀಡಿತ್ತು. ಅದರಂತೆ ಕಬಿನಿ ಬಲದಂಡೆ ನಾಲೆಯ ಮೊದಲ ೪೦ ಕಿ.ಮೀ .ಉದ್ದದ ಆಧುನೀಕರಣದ ಕಾಮಗಾರಿಯನ್ನು ೫೫.೭೫ ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳಲಾಯಿತು. ಸಾಕಷ್ಟು ವಿವಾದ, ರಾಜಕೀಯ ಹಸ್ತಕ್ಷೇಪಗಳ  ನಡುವೆಯೂ ಎರಡು ವರ್ಷದ ಹಿಂದೆ ೪೦. ಕಿ.ಮೀ.ವರೆಗಿನ ನಾಲೆ ಕಾಮಗಾರಿ ಮುಗಿದು ನೀರು ಸರಾಗವಾಗಿ ಹರಿಯುತ್ತಿದೆ.
ಇದನ್ನರಿತೇ ಸರಕಾರ ಈಗ ೨ ನೇ ಹಂತದಲ್ಲಿ ಸುಮಾರು ೬೦ ಕಿ.ಮೀ. ಕಾಮಗಾರಿಗೆ ಬೇಗನೇ ಅನುಮತಿ ನೀಡಿದೆ. ಈಗಾಗಲೇ ೨ನೇ ಹಂತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದ್ದು ಕಾಮಗಾರಿ ಆರಂಭವಾಗುವುದಷ್ಟೇ ಬಾಕಿ.
ಈ ಬಾರಿ ಟೆಂಡರ್ ಗೊಂದಲವಿಲ್ಲ: ೦-೪೦ ಕಿ.ಮೀ. ಲೈನಿಂಗ್ ಕಾಮಗಾರಿ ಆರಂಭವಾಗಲು ಸರಕಾರವೇನೋ ಅನುಮತಿ ನೀಡಿತು. ಆದರೆ ಗುತ್ತಿಗೆ ನೀಡುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳಾದವು. ಒಬ್ಬರೇ ಗುತ್ತಿಗೆ ಬಂದಿದ್ದರಿಂದ ಗುಣಮಟ್ಟದ ದೃಷ್ಟಿಯಿಂದ ಕಾಮಗಾರಿಯನ್ನು ಒಂದು ವರ್ಷಕ್ಕೆ ಮುಂದೂಡಲಾಯಿತು.೨೦೦೭ರ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ನೀರಾವರಿ ಇಲಾಖೆಗೆ ಅಡ್ಡಿಯಾಗಿದ್ದು ರಾಜಕೀಯ ಕರಿನೆರಳಿನ ಛಾಯೆ. ಆನಂತರ ೨ ಪ್ಯಾಕೇಜ್‌ಗಳಲ್ಲಿ ವಹಿಸಿ ಕಾಮಗಾರಿಯೂ ಶುರುವಾಗಿತ್ತು. ಈ ವರ್ಷ ಇಂಥ ಗೊಂದಲ ಆಗದಂತೆ ಸಚಿವರ ಮಟ್ಟದಲ್ಲೇ ಮೂರು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ನೀಡಲಾಗಿದೆ.
‘ನಾಲೆ ೨ನೇ ಹಂತದ ಲೈನಿಂಗ್ ಕಾಮಗಾರಿಗೆ ೮೨ ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿಯುವ ಹಂತದಲ್ಲಿದೆ ‘ಎಂದು ಕಬಿನಿ ಅಧೀಕ್ಷಕ ಎಂಜಿನಿಯರ್ ವರದರಾಜು ‘ವಿಜಯ ಕರ್ನಾಟಕ’ಕ್ಕೆತಿಳಿಸಿದರು.

ಯುಗಾದಿ ಜೂಜು ಇಲ್ಲಿ ಭಲೆ ಜೋರು !

ವಿಕ ಸುದ್ದಿಲೋಕ ಮಂಡ್ಯ
ಚಾಂದ್ರಮಾನ ಯುಗಾದಿ ಹಬ್ಬದ ಸಡಗರ, ಸಂಭ್ರಮ ಬೇರೆಡೆ ಒಂಥರಾ. ಆದರೆ, ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದ ಬಹುತೇಕ ಕಡೆ ಹಬ್ಬದ ಆಚರಣೆಯೇ ಬೇರೆ. ಒಬ್ಬಟ್ಟು, ಹೋಳಿಗೆ ಸವಿದು ಇಸ್ಪೀಟು ಜೂಜಾಟದಲ್ಲಿ  ತೊಡಗುವುದು ಇಲ್ಲಿ  ಮಾಮೂಲು.
ಹಿಂದೂ ಧರ್ಮೀಯರ ಪಾಲಿಗೆ ಯುಗಾದಿಯೇ ಹೊಸ ವರ್ಷ. ಕಡು ಬಡವರೂ ಈ ಹಬ್ಬಕ್ಕೊಂದು ಹೊಸ ಉಡುಗೆ ಕೊಳ್ಳುತ್ತಾರೆ. ಬೆಳಗ್ಗೆಯೇ ಎದ್ದು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ  ತೊಟ್ಟು ಇಷ್ಟ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಬೇವು-ಬೆಲ್ಲ  ಸವಿದ ಮೇಲೆಯೇ ಉಪಾಹಾರ.
ಮನೆ ಮನೆಯಲ್ಲೂ ಒಬ್ಬಟ್ಟು, ಹೋಳಿಗೆ ಊಟ. ಇಷ್ಟಾದ ಮೇಲೆ ಅದೃಷ್ಟ  ಪರೀಕ್ಷೆಗೆ ಜೂಜಾಟ. ಇದು ಹಬ್ಬದ ಸ್ಪೆಷಲ್. ಎಲ್ಲಿ ನೋಡಿದರಲ್ಲಿ ಜೂಜಿನ ಅಡ್ಡೆಗಳು ಕಟ್ಟಿಕೊಂಡಿರುತ್ತವೆ. ಆಬಾಲವೃದ್ಧರಾದಿಯಾಗಿ ಶಕ್ತ್ಯಾನುಸಾರ ಹಣ ಪಣಕ್ಕಿಟ್ಟು, ಜೂಜಾಡುವುದು ವಾಡಿಕೆ.
ಪೊಲೀಸರಿಂದಲೂ ಅಡ್ಡಿ ಇಲ್ಲ: ಕಾನೂನು ಬಾಹಿರ ಜೂಜಾಟಕ್ಕೆ ಈ ಹಬ್ಬದಲ್ಲಿ ವಿನಾಯಿತಿ ಉಂಟು. ನಗರ, ಪಟ್ಟಣ, ಹಳ್ಳಿಗಳ ಹಾದಿ-ಬೀದಿಗಳಲ್ಲೇ ಅಡ್ಡೆ ಕಟ್ಟಿಕೊಂಡು ಜೂಜಾಡಲಾಗುತ್ತದೆ. ಹಬ್ಬದ ಆಚರಣೆ ಪ್ರಯುಕ್ತ ನಡೆಯುವ ಜೂಜಾಟಕ್ಕೆ ಪೊಲೀಸರಿಂದಲೂ ಅಡ್ಡಿಯಿಲ್ಲ.
ಸಾವಿರಾರು ರೂ. ವಹಿವಾಟು: ಇಸ್ಪೀಟು ಆಡಲು ಗೊತ್ತಿಲ್ಲದವರು ಮತ್ತು ಗೊತ್ತಿದ್ದರೂ ಆಡಲಿಚ್ಛಿಸದವರಿಗೆ ಜೂಜಾಡಲು ಬೇರೆಯದೇ ಆಟವಿದೆ. ಹುಣಸೆ ಬೀಜಗಳನ್ನು ಒಂದು ಕಡೆ ತೇಯ್ದು, ಅವುಗಳಿಂದ ಗೆಂಪ(ಪಚ್ಚಿ) ಆಡಲಾಗುತ್ತದೆ. ಒಂದೊಂದು ಅಖಾಡದಲ್ಲೂ  ಸಹಸ್ರಾರು ರೂ. ವಹಿವಾಟು ಇರುತ್ತದೆ.
ನ್ಯಾಯ-ಪಂಚಾಯಿತಿ ಮಾಡುವ ಮನೆಗಳ ಪಡಸಾಲೆ, ಬೀದಿ ದೀಪದ ಕೆಳಗೆ, ದೇವಾಲಯದ ಆವರಣದಲ್ಲೇ ಇಸ್ಪೀಟು-ಗೆಂಪ ಆಡಲಾಗುತ್ತದೆ. ಬೇವು-ಬೆಲ್ಲದ ಹಬ್ಬವೆಂದೇ ಕರೆಯಲಾಗುವ ಯುಗಾದಿ ಜೂಜಿನಲ್ಲೂ  ಸಿಹಿ-ಕಹಿ ಇದ್ದದ್ದೇ. ಗೆದ್ದವರು ಬೀಗುತ್ತಾರೆ. ಸೋತವರು ಸೊರಗುತ್ತಾರೆ.
ಯುಗಾದಿಯ ಜೂಜಾಟದಲ್ಲಿ  ಸಿಕ್ಕಾಪಟ್ಟೆ ಹಣ ಸೋತು ಆಸ್ತಿಪಾಸ್ತಿ ಕಳೆದುಕೊಂಡವರು ಸಾಕಷ್ಟಿದ್ದಾರೆ.  ಜೂಜು ಎಂದ ಮೇಲೆ ಎಲ್ಲರೂ ಗೆಲ್ಲಲಾಗದು. ಸೋತ ಬಹುತೇಕರ  ಸುಖ, ಶಾಂತಿ, ನೆಮ್ಮದಿಯನ್ನು ಈ ಹಬ್ಬ ಕಿತ್ತುಕೊಂಡಿದೆ. ಎಷ್ಟೋ ಕುಟುಂಬಗಳಲ್ಲಿ ಕಲಹಕ್ಕೆ ಈ ಹಬ್ಬವೇ ನಾಂದಿ.
ಮಾರನೆ ದಿನ ಇನ್ನೂ ಜೋರು: ಚಾಂದ್ರಮಾನ ಯುಗಾದಿಯು ಬಾಡು-ಜೂಜು ಪ್ರಿಯರ ಪಾಲಿಗೆ ಒಂದು ದಿನದ ಹಬ್ಬವಲ್ಲ. ಮೂರು ದಿನದವರೆಗೆ ಹಬ್ಬ ಮುಂದುವರಿಯುತ್ತದೆ. ಮೊದಲ ದಿನ ಸಿಹಿ, ಸಸ್ಯಾಹಾರ ಊಟಕ್ಕೆ ಸೀಮಿತ. ಎರಡನೇ ದಿನ ಹೊಸ ತುಡುಕಿನ ಹೆಸರಿನಲ್ಲಿ  ಬಾಡೂಟ.
ಹಬ್ಬದ ಮಾರನೆಯಂದು ಹೊಸ ತುಡುಕು ಎಂದು ಹೇಳಿಕೊಂಡು ಮಾಂಸಾಹಾರಿಗಳ ಮನೆಗಳಲ್ಲಿ ಬಾಡೂಟ ಜೋರು. ನೂರು ಮನೆ ಹಳ್ಳಿಯಲ್ಲೂ ೧೦-೧೨ ಮೇಕೆ, ಕುರಿಗಳನ್ನು ಕುಯ್ಯಲಾಗುತ್ತದೆ. ಕೋಳಿಗಳ ಬಲಿಗೆ ಲೆಕ್ಕವೇ ಇಲ್ಲ. ಎರಡನೇ ದಿನದ ಹಬ್ಬ ಇಷ್ಟೇ ಮುಗಿಯದು.
ಮದ್ಯದ ಗಮತ್ತು ಕಮ್ಮಿಯಿಲ್ಲ: ಮಾಂಸದ ಜತೆಗೆ ಮದ್ಯದ ಗಮ್ಮತ್ತು ಕಮ್ಮಿಯೇನಲ್ಲ. ಮದ್ಯ ವ್ಯಸನಿಗಳ ವಾಲಾಟ, ತೂರಾಟ ಮಾಮೂಲು. ಅಪರೂಪಕ್ಕೆ ಮದ್ಯ ಸೇವಿಸುವ ಹವ್ಯಾಸ ಇದ್ದವರ ಪಾನಗೋಷ್ಠಿಗಳೂ ಆ ದಿನ ಸರ್ವೇಸಾಮಾನ್ಯ. ಹಬ್ಬದ  ಹೆಸರಿನಲ್ಲಿ  ನಡೆಯುವ ಈ ಚಟುವಟಿಕೆಗಳಿಗೆ ಮನೆಗಳಲ್ಲೂ ವಿರೋಧ  ಇರದು. ಹಬ್ಬಕ್ಕಾಗಿಯೇ ಹಳ್ಳಿಗಳಲ್ಲಿ ರಮ್, ವಿಸ್ಕಿ, ಜಿನ್, ಬ್ರಾಂದಿ, ಬಿಯರ್ ತಂದು ಮಾರಾಟ ಮಾಡುವವರಿದ್ದಾರೆ. ಹೀಗೆ ಮಾರಾಟವಾಗುವ ಮದ್ಯದ ಪೈಕಿ ಸೆಕೆಂಡ್ಸ್ ಮತ್ತು ಥರ್ಡ್ಸ್ ಉತ್ಪನ್ನಗಳೇ ಅಧಿಕ. ನಕಲಿ ಮದ್ಯದ ಕಿಕ್‌ನಿಂದ ನಿದ್ರೆಗೆ ಜಾರಿದವರು, ಚಿರನಿದ್ರೆಗೆ ಹೋದವರೂ ಉಂಟು. 
ವಿವಿಧೆಡೆ ಉತ್ಸವಗಳು : ಯುಗಾದಿ ಹಬ್ಬದಂದು ಪ್ರತಿಯೊಂದು ಗ್ರಾಮದ ದೇವಾಲಯಗಳಲ್ಲೂ ತಂಬಿಟ್ಟಿನ ಆರತಿ ಮತ್ತು ವಿಶೇಷ ಪೂಜೆ ಇದ್ದೇ ಇರುತ್ತದೆ. ಮಂಡ್ಯ ಜಿಲ್ಲೆಯ ೧೦೦ಕ್ಕೂ ಹೆಚ್ಚು ದೇವಾಲಯಗಳಲ್ಲಿ  ಉತ್ಸವ ಆಚರಣೆ ನಡೆಯಲಿದೆ. 
ಉತ್ಸವ ನಡೆಯುವ ದೇವಾಲಯಗಳಿಗೆ ಭಕ್ತರು ನಾನಾ ಕಡೆಯಿಂದ ಬರುತ್ತಾರೆ. ನಿಜವಾದ ದೈವಭಕ್ತರು ಉತ್ಸವದಲ್ಲಿ  ತಲ್ಲೀನರಾಗಿರುತ್ತಾರೆ.  ದೇವಾಲಯಗಳ  ಆವರಣದಲ್ಲೇ ಜೂಜು ಕಟ್ಟೆಗಳೂ ಕಟ್ಟಿರುತ್ತವೆ. ಜೂಜುಕೋರರ  ಚಿತ್ತ ಅಡ್ಡೆಯತ್ತಲೇ ನೆಟ್ಟಿರುತ್ತದೆ.

ಸಂಗೀತ ವಿವಿಯ ‘ಅರಣ್ಯ’ರೋದನ

ಚೀ.ಜ. ರಾಜೀವ ಮೈಸೂರು
ಮೂರು ತಿಂಗಳಿಗೆ ನೋಟ, ಮೂರು ವರ್ಷಕ್ಕೆ ಮಾತು ಬಂದ್ರೆ- ಮಗು ಆರೋಗ್ಯ ಪೂರ್ಣವಾಗಿ ಬೆಳೆಯುತ್ತಿದೆ ಎಂಬುದು ಜನಪದರ ನಂಬಿಕೆ. ಈಗಿನವರನ್ನು ಕೇಳಿದರೆ-  ‘ಮಾತು ಬರಲು ಮೂರು ವರ್ಷವೇ ?,  ಆ ವೇಳೆಗಾಗಲೇ ಮಗು  ಎಬಿಸಿಡಿ  ಜತೆಗೆ, ಅಆಇಈ ಕೂಡ  ಕಲಿತಿರುತ್ತದೆ - ಎಂದು ಹಳೆಯ ನಂಬಿಕೆಯನ್ನೇ ಗೇಲಿ ಮಾಡಿಬಿಡುತ್ತಾರೆ!. ಜ್ಞಾನ- ವಿಜ್ಞಾನ-ತಂತ್ರಜ್ಞಾನದ ದೆಸೆಯಿಂದ  ಎಲ್ಲದರ  ವೇಗ ವೃದ್ಧಿಸಿದೆ.
ಆದರೆ, ಈ ಎಲ್ಲ ಮಾತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ  ಅವರ  ಕನಸಿನ ಕೂಸು ಸಂಗೀತ ವಿಶ್ವ ವಿದ್ಯಾನಿಲಯಕ್ಕೆ ಅನ್ವಯಿಸುವಂತಿಲ್ಲ. ಮೈಸೂರಿನಲ್ಲಿ  ಸಂಗೀತ ವಿ ವಿ  ಸ್ಥಾಪನೆ ಎಂಬ ಘೋಷಣೆಗೇ ಮೂರು ವರ್ಷ ತುಂಬಿತು. ಆದರೆ ವಿವಿ ಗೆ ನೋಟವೂ ಬಂದಿಲ್ಲ, ಮಾತೂ ಬಂದಿಲ್ಲ. ಶೈಶವಾವಸ್ಥೆಯಲ್ಲೇ. ಬಡಿದಿರುವ ಬಾಲಗ್ರಹ ಇನ್ನೂ ಮುಕ್ತಿಯಾಗಿಲ್ಲ. ಸಂಗೀತ ವಿವಿಯ ವಿಶೇಷಾಧಿಕಾರಿಯಾಗಿ ನೇಮಕ ವಾದ ದೊರೆ ಹನುಮಣ್ಣ ನಾಯಕ್, ನಾಲ್ಕು  ತಿಂಗಳ ಹಿಂದಷ್ಟೇ ಕುಲಪತಿಯಾಗಿ ನೇಮಕವಾದರು. ಈಗಲೂ ಸದ್ಯಕ್ಕೆ ಅವರೊಬ್ಬರೇ ವಿವಿ ಗೆ ಮಾತು ಕಲಿಸುವವರು, ನೋಟ ಹರಿಸುವವರು. ಜಿಲ್ಲಾಡಳಿತದ ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಮೈಸೂರು ಸಂಗೀತ ದಿಗ್ಗಜರು ಸೇರಿದಂತೆ ಯಾರೊಬ್ಬರೂ ಇದರತ್ತ ಗಮನವೇ ಹರಿಸಿಲ್ಲ.
ನೆಲೆಯದ್ದೇ ದೊಡ್ಡ ಸಮಸ್ಯೆ
ವಿವಿಯನ್ನು ಕಟ್ಟಿ ಬೆಳೆಸುವುದು ಎಂದರೆ, ಕಟ್ಟಡಗಳನ್ನು ನಿರ್ಮಿಸುವುದಲ್ಲ  ಎಂಬ ಮಾತಿದೆ. ಆದರೆ, ವಿವಿ ನೆಲೆಯೂರಲು ಜಮೀನು ಬೇಕು, ಕಟ್ಟಡಗಳು ನಿರ್ಮಾಣವಾಗಲೇ ಬೇಕು. ಹಾಗಾಗಿ ಒಂದು ವಿವಿಗೆ ಕನಿಷ್ಠ  ೨೦೦ ರಿಂದ ೩೦೦ ಎಕರೆ ಜಮೀನು ಬೇಕೇ ಬೇಕು ಎಂಬುದು ವಿವಿ ಧನ ಸಹಾಯ ಆಯೋಗದ ಅಪೇಕ್ಷೆ.  ಅಂಥ ವಿವಿಗಳಿಗೆ ನೆರವು ನೀಡಲು ಯುಜಿಸಿ ಬಹಳಷ್ಟು ಉದಾರಿ. ಈ ಸಂಗತಿ ಯನ್ನು ತಲೆಯಲ್ಲಿರಿಸಿಯೇ ಮೈಸೂರಿನಲ್ಲಿ  ಸಂಗೀತ ವಿವಿ ಗೆ ಜಾಗದ  ಹುಡುಕಾಟ ಆರಂಭಿಸಿದ  ವಿಶೇಷಾಧಿಕಾರಿಗೆ, ಆರಂಭದಲ್ಲೇ ಭ್ರಮ ನಿರಸನವಾಯಿತು. ಏಕೆಂದರೆ, ಮೈಸೂರಿನಲ್ಲಿ  ೨೦೦ ಎಕರೆ ಪ್ರದೇಶ ಸಿಗದು. ಎಲ್ಲಿಯಾದರೂ  ಇಡಿಯಾಗಿ ೧೦೦ ಎಕರೆ ಜಮೀನು ಸಿಕ್ಕೀತೆ ಎಂದು ಶೋಧನೆ ಆರಂಭಿಸಿದರು. ಹುಣಸೂರು ರಸ್ತೆಯ ಅಲೋಕದಲ್ಲಿ ಭೂಮಿ ಕೊಡಿಸಲು ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಪ್ರಯತ್ನಿಸಿದರು. ಆದರೆ, ಈ ಪ್ರದೇಶ ಅರಣ್ಯ ಇಲಾಖೆಗೆ ಸೇರಿದೆ  ಎಂಬ ಕಾರಣಕ್ಕೆ ಕೈ ಬಿಡಲಾಯಿತು.
ಬಾಯಿಗೆ ಬರಲಿಲ್ಲ
ಅಲೋಕ ಕೈ ತಪ್ಪಿದ ಬಳಿಕ ಮೈಸೂರಿನ  ಅಷ್ಟ ದಿಕ್ಕುಗಳಲ್ಲಿ ತಲಾಶ್ ನಡೆಯಿತು. ಕಡೆಗೆ ಮುಖ್ಯಮಂತ್ರಿಗಳ ಸಂಸದೀಯ ಕಾರ‍್ಯದರ್ಶಿ  ಎಸ್. ಎ. ರಾಮದಾಸ್, ಜಿಲ್ಲಾಧಿಕಾರಿ ಪಿ. ಮಣಿವಣ್ಣನ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ  ವಿ. ಪಿ. ಬಳಿಗಾರ್ ಅವರ ಪ್ರಯತ್ನದ ಫಲದಿಂದ, ಮೈಸೂರು ತಾಲೂಕು ವರುಣಾ ಬಳಿ ಇರುವ ವರಕೋಡು ಎಂಬಲ್ಲಿ  ೧೦೦ ಎಕರೆ ಭೂಮಿಯನ್ನು ಗುರುತಿಸಲಾಯಿತು.
ಸಂಗೀತ ವಿವಿ ಕ್ಯಾಂಪಸ್‌ಗೆ ಈ ಭೂಮಿ ನೀಡಲು ಆರಂಭದಲ್ಲಿ ಯಾರೊಬ್ಬರೂ ತಕರಾರು ವ್ಯಕ್ತಪಡಿಸಲಿಲ್ಲ. ವಿವಿಗೆ ೧೦೦ ಎಕರೆ ಭೂಮಿ ನೀಡಲು ಸಂಪುಟ ಸಭೆಯೂ ತೀರ್ಮಾನಿಸಿತು. ಪರಿಣಾಮ ಬಹಳ ಬೇಗ  ಕಂದಾಯ ಇಲಾಖೆ ೧೦೦ ಎಕರೆ ಭೂಮಿಯನ್ನು ಸಂಗೀತ ವಿವಿ ಹೆಸರಿಗೆ ವರ್ಗಾಯಿಸಿತು. ಎಲ್ಲವೂ ಸುಸೂತ್ರ ವಾಗಿತ್ತು. ಇತ್ತ ವಿವಿಗೆ ಭೂಮಿ ಸಿಕ್ಕ ಸಂತೋಷದಲ್ಲಿ - ‘ಮುಂದಿನ ಸೆಪೆಂಬರ್‌ನಿಂದಲೇ ವಿವಿಯ ಹೊಸ ಅಂಗಳ ದಲ್ಲಿ ಗುರುಕುಲ ಮಾದರಿ ಸಂಗೀತ ಕೋರ್ಸ್‌ಗಳು ಆರಂಭ’ ಎಂದು ಕುಲಪತಿ ಘೋಷಿಸಿದರು.  ಅದೇ ದಿನವೇ ಅರಣ್ಯ ಇಲಾಖೆ ಅಧಿಕಾರಿಗಳು - ‘ಭೂಮಿ ತಮ್ಮದು; ೧೯೯೬ ರಿಂದಲೂ ಆ ಪ್ರದೇಶ ನಮ್ಮ ಅಧೀನ ದಲ್ಲಿದೆ. ಅದನ್ನು ಯಾರಿಗೂ ನೀಡುವುದಿಲ್ಲ’ ಎಂದರು.
ಅರಣ್ಯ ಇಲಾಖೆ ವಾದ
ಜಿಲ್ಲಾಡಳಿತ ಮಂಜೂರು ಮಾಡಿದ ವರಕೋಡಿನ ೧೦೦ ಎಕರೆ ಪ್ರದೇಶ, ಕಂದಾಯ ಇಲಾಖೆ ದಾಖಲೆಗಳ ಪ್ರಕಾರ  ಸರಕಾರಿ ಗೋಮಾಳ. ಖಾಲಿ ಇದ್ದ ಪ್ರದೇಶದಲ್ಲಿ ಅರಣ್ಯ ಇಲಾಖೆ ದಶಕಗಳಿಂದ ಮರಗಿಡಗಳನ್ನು ಬೆಳೆಸುತ್ತಿದೆ. ಇಷ್ಟು ದಿನ ಇಲಾಖೆ ಸುಮ್ಮನಿದ್ದದ್ದು ಏಕೆ ಎಂಬುದು ಕಂದಾಯ ಇಲಾಖೆಯವರ ಪ್ರಶ್ನೆ. ಇದಕ್ಕೆ ಅರಣ್ಯ ಇಲಾಖೆಯವರ ಉತ್ತರ- ಸಂಗೀತ ವಿವಿಗೆ ಭೂಮಿ ನೀಡುವ ವಿಷಯ ಪ್ರಸ್ತಾಪವಾದಾಗಲೇ ನಾವು ಸರಕಾರಕ್ಕೆ ಪತ್ರ ಬರೆದಿದ್ದೆವು.  ಈ ೧೦೦ ಎಕರೆ ಸೇರಿದಂತೆ  ಎರಡು ಸರ್ವೆ ನಂಬರ್‌ನಲ್ಲಿ ಹರಡಿ ಕೊಂಡಿರುವ ಸುಮಾರು  ೮೦೦ ಎಕರೆ ಭೂಮಿಯಲ್ಲಿ ೪೦ ವರ್ಷಗಳಿಂದ ಅರಣ್ಯ ಇಲಾಖೆ ನೆಡುತೋಪು ನಿರ್ವಹಿಸುತ್ತಿದೆ. ಇದೊಂದು ನೈಸರ್ಗಿಕ ಅರಣ್ಯ.  ಶ್ರೀಗಂಧ, ಕಗ್ಗಲಿ, ಬೇವು, ಕಕ್ಕೆ ಸೇರಿದಂತೆ ಹಲವು ಜಾತಿಯ ಮರಗಿಡಗಳಿದ್ದು, ನೂರಾರು  ಪ್ರಾಣಿ ಪಕ್ಷಿಗಳೂ ಇವೆ. ಇದನ್ನು  ಜಿಲ್ಲಾ ಅರಣ್ಯ ಪ್ರದೇಶವೆಂದೂ ಸರಕಾರ ಗುರುತಿಸಿದ್ದು, ಅರಣ್ಯೇತರ ಉದ್ದೇಶಕ್ಕೆ ನೀಡುವುದು ನಿಯಮ ಬಾಹಿರ.
ಅರಣ್ಯ ಇಲಾಖೆಯರ  ನೀತಿ-ನಿಯಮಗಳು ಸ್ವಭಾವತಃ ಕಠೋರವಾಗಿರುವುದರಿಂದ ಜಿಲ್ಲಾಡಳಿತ ಈಗ ಮೆತ್ತಗಾಗಿದೆ.  ಅವರೊಂದಿಗೆ ಜಗಳ ಆಡುವುದಕ್ಕಿಂತ ಪರ್ಯಾಯ ಭೂಮಿಯನ್ನು ಹುಡುಕಲು ಆರಂಭಿಸಿದೆ. ಬೋಗಾದಿ- ಗದ್ದಿಗೆ ರಸ್ತೆಯಲ್ಲಿರುವ ಮಾದಹಳ್ಳಿ ಸಮೀಪದ ೩೦ ಎಕರೆ ಜಮೀನಿನಲ್ಲಿ ವಿವಿ ಆರಂಭಿಸಿ ಎಂದು ಸಲಹೆ ನೀಡಿದೆ. ಆದರೆ, ವಿವಿ ಕುಲಪತಿ ಅದಕ್ಕೆ ಒಪ್ಪುತ್ತಿಲ್ಲ. ತನ್ನ ಹೆಸರಿನಲ್ಲಿದ್ದ ಭೂಮಿಯನ್ನು ಸಂಗೀತ ವಿವಿ ಹೆಸರಿಗೆ ಮಾಡಿಕೊಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಈಗ ಗಟ್ಟಿತನ ಪ್ರದರ್ಶಿಸಲಿ ಎಂಬುದು ಅವರ ಆಗ್ರಹ.

ಔಷಧವು ಕಹಿಯಲ್ಲ...ನಂಬಿ ಪಡೆದರೆ ಕೇಡಿಲ್ಲ...

ಕಾಯಿಲೆಗಲ್ಲ, ವ್ಯಕ್ತಿಗೇ ಔಷಧ !
 ವಿಕ ಸುದ್ದಿಲೋಕ ಮೈಸೂರು
‘ಶಸ್ತ್ರ ಚಿಕಿತ್ಸೆಯಂಥ ಅನಿವಾರ್ಯ,ತುರ್ತು ಪ್ರಕರಣ, ಅಸ್ವಾಭಾವಿಕ ಸಮಸ್ಯೆಗಳ  ಹೊರತು ಎಲ್ಲಾ ಕಾಯಿಲೆಗಳಿಗೆ ಹೋಮಿಯೋಪತಿ ಯಲ್ಲಿ ಪರಿಹಾರ  ಇದೆ...’
-ಇದು ಹೋಮಿಯೋಪತಿ ವೈದ್ಯ ಡಾ.ಎಂ.ಸಿ.ಮನೋಹರ್ ಅವರ ಅಭಿಪ್ರಾಯ. ‘ಕೆಮ್ಮಿನಿಂದ ಕ್ಯಾನ್ಸರ್‌ವರೆಗಿನ ಎಲ್ಲಾ ಸ್ವಾಭಾವಿಕ ಕಾಯಿಲೆಗೆ  ಔಷಧವಿದೆ. ನಂಬಿ ಪಡೆದರೆ ಖಂಡಿತಾ ಕೇಡಿಲ್ಲ’ ಎಂಬುದು ಸ್ಪಷ್ಟ ಅಭಿಮತ.
‘ವಿಜಯ ಕರ್ನಾಟಕ’ ಶನಿವಾರ ಆಯೋಜಿಸಿದ್ದ  ‘ಫೋನ್ -ಇನ್ ’ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸಾರ್ವಜನಿಕರ ತರಹೇವಾರಿ ಸಮಸ್ಯೆ, ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರವಾದರು.
ಔಷಧ ಇದೆಯಾ?: ಕತ್ತುನೋವು,ಮಂಡಿನೋವು,ಮೂಳೆ ಸವೆತ, ಕೆಮ್ಮು, ನೆಗಡಿ, ಜ್ವರ, ಸಕ್ಕರೆ ಕಾಯಿಲೆ, ಅಸ್ತಮಾ, ಚರ್ಮ,ಕ್ಯಾನ್ಸರ್  ಕಾಯಿಲೆ ಮತ್ತಿತರ  ಸಮಸ್ಯೆಗಳ ಕುರಿತಂತೆ ದೂರವಾಣಿಯಲ್ಲಿ ‘ದುಮ್ಮಾನ ’ಹೇಳಿಕೊಂಡವರ ಪೈಕಿ ಬಹುತೇಕರದ್ದು ಒಂದೇ ಪ್ರಶ್ನೆ  ‘ಏನೇನೋ ಚಿಕಿತ್ಸೆ ಮಾಡಿದ್ದಾಯಿತು.ಕಾಯಿಲೆ ವಾಸಿನೇ ಆಗ್ಲಿಲ್ಲ. ಹೋಮಿಯೋಪತಿಯಲ್ಲೇನಾದರೂ  ಔಷಧ ಇದೆಯಾ’ ಎಂಬುದು.
‘ಅಪಘಾತ, ಹೃದಯಾಘಾತ, ವಿಷಸೇವನೆಯಂಥ  ತುರ್ತು ಸಂದರ್ಭಗಳಲ್ಲಿ ಹೋಮಿಯೋ ಚಿಕಿತ್ಸೆ ಸಾಧ್ಯವಿಲ್ಲ.ಆದರೆ, ತುರ್ತು ಚಿಕಿತ್ಸೆ ನಂತರ ಆರೋಗ್ಯ ವರ್ಧನೆಗೆ  ಔಷಧ ಉಂಟು. ಅಸ್ವಾಭಾವಿಕ  ಸಮಸ್ಯೆಗಳ ಹೊರತು ಎಲ್ಲಾ ಸ್ವಾಭಾವಿಕ ಕಾಯಿಲೆಗೆ ಚಿಕಿತ್ಸೆ  ಇದೆ. ಇತರೆ ವೈದ್ಯ ಪದ್ಧತಿಗಳಲ್ಲಿ ವಾಸಿಯೇ ಆಗದ ಕಾಯಿಲೆಗಳಿಗೆ ಪರಿಹಾರ ನೀಡಿದ ಅದೆಷ್ಟೋ ಪ್ರಕರಣಗಳಿವೆ ’ ಎಂದು ಪ್ರತಿಕ್ರಿಯಿಸಿದರು.
ಮನೋಧರ್ಮ ಗಟ್ಟಿ: ಹೋಮಿಯೋಪತಿ ವ್ಯಕ್ತಿಯ ಮನೋಧರ್ಮ ವನ್ನು ಗಟ್ಟಿಗೊಳಿಸುತ್ತದೆ. ವಿಷ ಕುಡಿದವರಿಗೆ ತಕ್ಷಣದ ಚಿಕಿತ್ಸೆ  ಸಾಧ್ಯ ವಿಲ್ಲವಾದರೂ ‘ಆತ್ಮಹತ್ಯೆ ಮನೋಧರ್ಮ’ವನ್ನು ನಿವಾರಿಸಬಹುದು. ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು ಇನ್ನೊಂದು ವಿಶೇಷ. ಆತಂಕ,ಖಿನ್ನತೆ, ಮಾನಸಿಕ ಕಾಯಿಲೆ, ಅಷ್ಟೇ ಏಕೆ ತೊನ್ನು, ಪೈಲ್ಸ್ ,ಮಲಬದ್ಧತೆಗೂ ಪರಿಣಾಮಕಾರಿ ಔಷಧವಿದೆ.
ಅಡ್ಡಪರಿಣಾಮವಿಲ್ಲ: ಹೋಮಿಯೋಪತಿ ಚಿಕಿತ್ಸೆ ವ್ಯಕ್ತಿ ಕೇಂದ್ರಿತ. ಮನುಷ್ಯನನ್ನು ಬೇರೆ ಬೇರೆ ಅಂಗಗಳನ್ನಾಗಿ ನೋಡದೆ, ಒಂದು ಘಟಕವನ್ನಾಗಿ ಅವಲೋಕಿಸಿ ಔಷಧ ನೀಡಲಾಗುತ್ತದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನ. ಕಾಯಿಲೆ  ಒಂದೇ ಆದರೂ ಚಿಕಿತ್ಸೆ ,ಪತ್ಯ ಬೇರೆ ಆಗಬಹುದು.‘ಯಾವುದು ಉಂಟು ಮಾಡುತ್ತದೆಯೋ ಅದೇ ವಾಸಿ ಮಾಡುತ್ತದೆ ’ಎನ್ನುವ ತಿಳಿವಳಿಕೆಯ ನೆಲೆಯಲ್ಲಿ ಔಷಧಗಳನ್ನು ಸಿದ್ಧೀಕರಿಸುವುದರಿಂದ  ಪರಿಣಾಮ ಖಂಡಿತಾ; ಅಡ್ಡ  ಪರಿಣಾಮದ ಮಾತೇ ಇಲ್ಲ.
ಮನಸ್ಸಿನ ವಿಷಯ: ‘ಮನಸ್ಥಿತಿ, ದೈಹಿಕ  ಸ್ಥಿತಿ,ಸಾಮಾಜಿಕ  ಸಂಬಂಧಗಳು ಸಮರ್ಪಕವಾಗಿದ್ದರೆ ಅಂಥ ವ್ಯಕ್ತಿ ಆರೋಗ್ಯವಂತ ’ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನ. ಹೋಮಿಯೋಪತಿಯದ್ದು ಇಂಥದೇ ಚಿಕಿತ್ಸಾ ಪದ್ಧತಿ.ರೋಗಿಯ ದೈಹಿಕ ,ಮಾನಸಿಕ, ಸಾಮಾಜಿಕ ಸ್ಥಿತಿ,ಕುಟುಂಬದ ಇತಿಹಾಸವನ್ನು ಅವಲೋಕಿಸಿ ಚಿಕಿತ್ಸೆ ನೀಡುವುದರಿಂದ ಹೆಚ್ಚು ಪರಿಣಾಮಕಾರಿ.
ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ ಕಾಯಿಲೆಗಳಿಗೂ ಔಷಧ ಇದೆ. ಗಾಯಗಳಿಗೆ ಬಳಸುವ ‘ಕ್ಯಾಲೆಂಡುಲ’ಮುಲಾಮು ಹಸುವಿನ ಗಾಯವನ್ನೂ ವಾಸಿಮಾಡಿದ ಉದಾಹರಣೆ   ಇದೆ. ಪಶುವೈದ್ಯರೇ ಹಸು ವಿನ ಕೆಚ್ಚಲು ಬಾವು ಸಮಸ್ಯೆಗೆ ಹೋಮಿಯೋ ಮದ್ದು ನೀಡುತ್ತಿದ್ದಾರೆ.
ಇತಿ ಮಿತಿ: ಅರ್ಹತೆ ಇಲ್ಲದ ವೈದ್ಯರು, ಅಸಹಕಾರ ಮನೋಭಾವದ ರೋಗಿಗಳು  ಈ ಪದ್ಧತಿಯ ಎರಡು ‘ಸವಾಲು’ಗಳು. ಪರಿಣತಿ, ತಿಳಿವಳಿಕೆ ಇಲ್ಲದೆ ‘ನಕಲಿ ಪ್ರಮಾಣ ಪತ್ರ’ಗಳನ್ನಿಟ್ಟುಕೊಂಡು ತಪ್ಪು ಚಿಕಿತ್ಸೆ ನೀಡುವ ಮತ್ತು ಔಷಧವನ್ನು ದುಬಾರಿ ದರಕ್ಕೆ ಮಾರಿ ಹಣ ಮಾಡುತ್ತಿರುವ ‘ವೈದ್ಯರು’ ನಿಜವಾದ ಕಂಟಕರು.ಅಂತೆಯೇ,ರೋಗಿಗಳು ‘ಅಸಹಕಾರ ‘ಮನೋಭಾವ ಪ್ರದರ್ಶಿಸಿದರೆ  ಚಿಕಿತ್ಸೆ  ಅಸಾಧ್ಯವಾಗಬಹುದು.
ಹೋಮಿಯೋಪತಿ ವೈದ್ಯರು ಸಹ ಅಲೋಪತಿ ವೈದ್ಯರಂತೆ ಮಾನವನ ದೇಹರಚನೆ ಸೇರಿದಂತೆ ಎಲ್ಲವನ್ನೂ ಅಧ್ಯಯನ ಮಾಡಿರುತ್ತಾರೆ.  ಆದರೆ ಚಿಕಿತ್ಸಾ ವಿಧಾನ ಬೇರೆಯಷ್ಟೆ.
‘ಹೋಮಿಯೋ ಚಿಕಿತ್ಸೆ ಪಡೆಯುವ  ಮುನ್ನ ವೈದ್ಯರ ಪರಿಣತಿ, ಅರ್ಹತೆ,ಅಧಿಕೃತತೆ,ಬದ್ಧತೆಯನ್ನು ಮೊದಲು ಖಚಿತ ಪಡಿಸಿಕೊಳ್ಳಿ;ನಂತರ, ವೈದ್ಯರ ಬಳಿ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳಿ ’ಎನ್ನುವುದು ಅವರ ಒಟ್ಟು ಮಾತಿನ  ಸಾರ.
ಇವರು ನಿಮ್ಮ ವೈದ್ಯರು
ಡಾ.ಎಂ.ಸಿ.ಮನೋಹರ್  ಬಿಎಚ್‌ಎಂಎಸ್
ಮೈಸೂರಿನವರೇ. ಹುಟ್ಟಿ,ಬೆಳೆದದ್ದು ಸಂತೆಪೇಟೆಯಲ್ಲಿ, ಈಗಿ ರುವುದು ಕುವೆಂಪುನಗರ. ಪಿಯುಸಿವರೆಗಿನ  ಓದು ಇಲ್ಲೇ. ನಂತರ ಬೆಂಗಳೂರಿನ  ಸರಕಾರಿ ಹೋಮಿಯೋಪತಿ ಮಹಾ ವಿದ್ಯಾಲಯದಲ್ಲಿ ಹೋಮಿಯೋಪತಿ ಪದವಿ (ಬಿಎಚ್‌ಎಂಎಸ್).೧೨ ವರ್ಷಗಳಿಂದ ವೈದ್ಯ ವೃತ್ತಿ.ಕ್ಯಾನ್ಸರ್ ಕುರಿತು  ಸಂಶೋಧನೆ  ಮಾಡುತ್ತಿದ್ದಾರೆ. ಹೋಮಿಯೋ ಪತಿ ಕುರಿತೇ ‘ಔಷಧವು ಕಹಿಯಲ್ಲ’ ಎಂಬ ಸಂಗ್ರಹಯೋಗ್ಯ ಪ್ರಸ್ತಕ ಬರೆದಿದ್ದಾರೆ. ಸಮಾನ ಮನಸ್ಕರ ಜತೆ ಸೇರಿ ‘ಅರಿವು’ ಎಂಬ ಶೈಕ್ಷಣಿಕ-ಸಾಂಸ್ಕೃತಿಕ  ಟ್ರಸ್ಟ್ ಸ್ಥಾಪಿಸಿ,ನಡೆಸುತ್ತಿದ್ದಾರೆ. ವಿಳಾಸ: ಮನು ಹೋಮಿಯೋಪತಿ ಕ್ಲಿನಿಕ್, ವಿವೇಕಾನಂದ ವೃತ್ತ, ವಿವೇಕಾನಂದ ನಗರ. ಮೈಸೂರು. ದೂ: ೦೮೨೧-೨೪೬೩೪೮೨.

ಸಂಸತ್ ನಲ್ಲಿ ಮೀಸಲು, ಸಂತಸದ ಹೊನಲು

ಕೈಗಾರಿಕಾ ವಸಾಹತು ಪ್ರದೇಶ 'ಬಣ-ಬಣ'

ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಬ್ರಹ್ಮ ರಥೋತ್ಸವ

ಕಟ್ಟಡ ತೆರವು: ಅವಶೇಷಗಳಡಿ ಸಿಲುಕಿ ವ್ಯಕ್ತಿ ಸಾವು

ಜೈವಿಕ ವೈವಿಧ್ಯ: ನಿಖರ ಮಾಹಿತಿ ಕೋಶ ಅವಶ್ಯ

ಅರಣ್ಯದಲ್ಲಿ ಬೆಂಕಿ: ನೂರಾರು ಎಕರೆ ಭಸ್ಮ

ಮಹಿಳಾ ಮೀಸಲಿಗೆ ವಿರೋಧ

ತರವಲ್ಲ ತಗೀರಿ ನಿಮ್ಮ ‘ತಂಬೂರಿ’
 ಚೀ.ಜ.ರಾಜೀವ ಮೈಸೂರು
‘ನೆರೆಯ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿಯೇ  ಮಹಿಳೆಯರಿಗೆ ಶಾಸನಸಭೆಗಳಲ್ಲಿ ಮೀಸಲು ಇರು ವಾಗ, ನಮ್ಮಲ್ಲಿ ಮೀಸಲು ಜಾರಿಗೆ ತಡವಾಗಿದ್ದೇಕೆ ?  ಈ ವಿಷಯದಲ್ಲಿ  ಭಾರತೀಯರಿಗೆ ನಿಜಕ್ಕೂ ನಾಚಿಕೆಯಾಗಬೇಕು. ಅದರಲ್ಲಿ ಬೇರೆ ಒಳ ಮೀಸಲಿನ  ಎಳೆ  ಇಟ್ಟುಕೊಂಡು, ಮೀಸಲನ್ನೇ ಸೋಲಿಸುವ ಹುನ್ನಾರ ಬೇರೆ. ಏನ್ ಸಮಾಜವಿದು !’
ಇದು ಮಲ್ಲಮ್ಮ ಮರಿಮಲ್ಲಪ್ಪ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ವಿದ್ಯಾರ್ಥಿನಿಯರ ಸಿಟ್ಟು. ಶಾಸನ ಸಭೆಗಳಲ್ಲಿ ಮಹಿಳಾ ಮೀಸಲು ಕುರಿತು ‘ವಿದ್ಯಾರ್ಥಿ ವಿಶೇಷ’ ಅಂಕಣಕ್ಕಾಗಿ ಪತ್ರಿಕೆಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯರು- ಮೀಸಲಿನ ಚುಂಗು ಇಟ್ಟುಕೊಂಡು ರಾಜಕೀಯ ಮಾಡುತ್ತಿರು ವವರ ವಿರುದ್ಧ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.
‘ನಮ್ಮದು ಜಾತ್ಯತೀತ ರಾಷ್ಟ್ರ. ಸಮಬಾಳು- ಸಮ ಪಾಲು ಎಂಬುದನ್ನು ಒಪ್ಪಿಕೊಂಡಿದ್ದೇವೆ. ಹಾಗಾಗಿ, ಮೀಸಲಿನಲ್ಲಿಯೇ ಒಳ ಮೀಸಲು ನೀಡುವುದು ತಪ್ಪೇನಲ್ಲ. ಆದರೆ, ಒಳ ಮೀಸಲು ಪ್ರತಿಪಾದಕರಿಗೆ ಬೇಕಿರುವುದು ಒಳ ಮೀಸಲು ಅಲ್ಲ. ಬದಲಿಗೆ ಒಟ್ಟು  ಮೀಸಲು ವ್ಯವಸ್ಥೆ  ಜಾರಿಗೆ ಬರದಂತೆ, ಅದನ್ನು  ಸೋಲಿಸುವುದಷ್ಟರ  ಅವರ ಹುನ್ನಾರ.  ಇದು ನಮಗೆ ಅರ್ಥವಾಗುವುದಿಲ್ಲವೇ ?’ ಎಂದು ರಾಜಕೀಯದಲ್ಲಿ ಮಾಗಿ ಹೋದವರು ಮಾತನಾಡುವಂತೆ ತಮ್ಮ ಅಭಿಪ್ರಾಯ ಮಂಡಿಸಿದರು. ಈ ಹೇಳಿಕೆಗಳನ್ನು  ಇಲ್ಲಿರುವ ಶಬ್ಧದ ನೇರ ಅರ್ಥದಲ್ಲಿ ವ್ಯಕ್ತವಾಗಿರು ವಂತೆ ಅವರೇನೂ  ಅಭಿವ್ಯಕ್ತಿಸಲಿಲ್ಲ. ಆದರೆ, ಅವರ  ಪ್ರತಿಯೊಂದು ಹೇಳಿಕೆಯ ಹಿಂದೆ  ಹತ್ತಾರು  ಪ್ರಶ್ನೆಗಳಿದ್ದವು. ಸಿಟ್ಟು ಮನೆ ಮಾಡಿತ್ತು.
ಮೀಸಲು ಅಗತ್ಯ ಇಲ್ಲ ಎಂದು ಹೇಳಿದ ವಿದ್ಯಾರ್ಥಿ ನಿಯರ ಭಾವನೆಯ ಹಿಂದೆ-  ಅಬಲೆಯಾಗಿದ್ದಾಗ ನೀಡದ ಮೀಸಲು, ಸಬಲೆಯಾದಾಗ ಏಕೆ ಎಂಬ ನೋವಿತ್ತು.
ಸ್ಥಳೀಯ ಸಂಸ್ಥೆಗಳಲ್ಲಿ ಶೇ. ೩೩ರಷ್ಟು ಮೀಸಲು ಜಾರಿಗೆ ಬಂದಿರುವುದರಿಂದ, ಎಲ್ಲ ವರ್ಗದವರು, ಬಡವರು ಕೂಡ ರಾಜಕೀಯಕ್ಕೆ ಬರಲು ಸಾಧ್ಯವಾಗಿದೆ. ಈ ಮಸೂದೆ ಜಾರಿಯಿಂದ, ಪ್ರಜಾಪ್ರಭುತ್ವದ ಪರಮೋಚ್ಚ ಸದನಗಳಿಗೂ ನಮ್ಮ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಲು ಸಾಧ್ಯ. - ಎಸ್. ಶ್ವೇತಾ
ಎಲ್ಲ ಯಶಸ್ವಿ ಪುರುಷರ ಹಿಂದೆ ಮಹಿಳೆಯರು ಇರುತ್ತಾರೆ ಎಂಬುದನ್ನು ಎಲ್ಲ ಕಡೆ ಕೇಳಿದ್ದೇವೆ. ನೇಪಥ್ಯದಲ್ಲಿ ನಿಂತು ಯಶಸ್ಸಿಗೆ ದುಡಿದ ಮಹಿಳೆ, ನೇರವಾಗಿ ರಂಗಕ್ಕೆ ಬಂದರೆ ಇನ್ನಷ್ಟು ಯಶಸ್ಸು ಕಾಣಬಹುದು. ರಾಜಕೀಯ ವೊಂದನ್ನು ಹೊರತು ಪಡಿಸಿ, ಎಲ್ಲ ಕಡೆಯೂ ಮಹಿಳೆ ಗೆದ್ದಿ ದ್ದಾಳೆ. ಸಕಲ ಕಲಾ ವಲ್ಲಭರಂತೆ, ಸಕಲ ಕಲಾ ವಲ್ಲಭೆಯರು ಹೆಚ್ಚಾಗಬಹುದು. - ಆರ್. ನಾಗರತ್ನ.
ಆಟೋ ರಿಕ್ಷಾ ಚಾಲನೆಯಿಂದ ಹಿಡಿದು ಚಂದ್ರಯಾನದ ವರೆಗೆ ಮಹಿಳೆ ಪುರುಷನಿಗೆ ಸರಿಸಾಟಿಯಾಗಿದ್ದಾಳೆ. ಕೆಲವು ರಂಗದಲ್ಲಿ ಪುರುಷನಿಗಿಂತ ಮುಂದಿದ್ದಾಳೆ. ದೇಶದ ಜನಸಂಖ್ಯೆಯಲ್ಲೂ  ಪುರುಷನಷ್ಟೇ ಪ್ರಮಾಣದಲ್ಲಿ ಇದ್ದಾರೆ. ಹಾಗಾಗಿ  ಶೇ. ೫೦ರಷ್ಟು ಮೀಸಲು ಬೇಕಿತ್ತು. ತಡವಾಗಿ ಯಾದರೂ ಸಿಕ್ಕಿದೆ. ಸಂತೋಷ. ಒಳ ಮೀಸಲು ತಪ್ಪಲ್ಲ. ಮುಂಬರುವ ದಿನಗಳಲ್ಲಿ ಅದಕ್ಕೆ ಹೋರಾಟ ನಡೆಯಲಿ. - ಬಿ. ಎಂ.  ಸ್ನೇಹಾ
ಮೀಸಲಿನ ಬಲವಿಲ್ಲದೆ ಮಹಿಳೆ ಇಷ್ಟೊಂದು ಮುಂದೆ ಬಂದಿರುವಾಗ, ಅದರ ಬಲ ಸಿಕ್ಕರೆ ಇನ್ನಷ್ಟು ಮುಂದೆ ಬರು ತ್ತಾಳೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀಡಬೇಕಿತ್ತು. - ಪ್ರತೀಕ್ಷಾ
ನಗರ ಪ್ರದೇಶದ ಮಹಿಳೆಯರು ಸಬಲೆಯರಂತೆ ಮೇಲ್ನೋಟಕ್ಕೆ ಭಾಸವಾಗಬಹುದು. ಆದರೆ, ವಾಸ್ತವವಾಗಿ ಆಗಿಲ್ಲ. ಇದಲ್ಲದೆ ಗ್ರಾಮೀಣ ಪ್ರದೇಶ ಹಾಗೂ ಅಲ್ಪ ಸಂಖ್ಯಾತ ಸಮುದಾಯದ  ಮಹಿಳೆಯರು, ಎಲ್ಲದರಲ್ಲಿಯೂ ಹಿಂದೆ ಇದ್ದಾರೆ. ಶೋಷಣೆಯ ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಹಾಗಾಗಿ, ಒಳ ಮೀಸಲು ಬೇಕೇ ಬೇಕು. ಆದರೆ, ಈ ಅಂಶ ಮೀಸಲು ನೀಡುವುದನ್ನು ಮುಂದೂಡಲು ಕಾರಣವಾಗಬಾರದಷ್ಟೆ. - ಸ್ವಾತಿ ಶೇಖರ್
ಈಗಿನ ವ್ಯವಸ್ಥೆಯಲ್ಲಿ ಎಲ್ಲ ಮಹಿಳೆಯರೂ ರಾಜಕೀಯ ಪ್ರವೇಶಿಸಲು  ಸಾಧ್ಯವಿಲ್ಲ. ಹಣವಿದ್ದವರು, ಜಾತಿ ಇದ್ದವರು ಇಲ್ಲವೇ ರಾಜಕೀಯ ಕುಟುಂಬದಲ್ಲಿ  ಜನಿಸಿದ ಮಹಿಳೆಯರಿಗೆ  ಮಾತ್ರ ರಾಜಕೀಯ ಎಂಬ ಸ್ಥಿತಿ ಈಗಲೂ ಇದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮೀಸಲು ಜಾರಿಯಾದರೆ, ಅದೊಂದು ರೀತಿಯಲ್ಲಿ ನಮಗೆ ದೊರೆತ ರಾಜಕೀಯ ಸ್ವಾತಂತ್ರ್ಯ ಎಂದೇ ಹೇಳಬಹುದು. ಇದರಿಂದ  ಮಹಿಳಾ ದೌರ್ಜನ್ಯವನ್ನು ತಡೆಗಟ್ಟಬಹುದು. - ದೀಪ್ತಿ ರಾಜ್
ನಮ್ಮದು ಜಾತ್ಯತೀತ ರಾಷ್ಟ್ರ, ಇಲ್ಲಿ ಎಲ್ಲರೂ ಸಮಾನ. ಹಾಗಾಗಿ ಎಲ್ಲ ವರ್ಗ, ಜಾತಿಯ ಮಹಿಳೆಯರಿಗೆ ಮೀಸಲಿನ ಫಲ ಸಿಗುವುದು ನ್ಯಾಯ ಸಮ್ಮತ. ಈಗ ಒಳ ಮೀಸಲು ಕಲ್ಪಿಸಬೇಕಷ್ಟೆ. - ಪೂಜಾ ರಾವ್
ಮೀಸಲಿನ ಅಗತ್ಯವಿಲ್ಲದೆ ಮಹಿಳೆ ಎಲ್ಲದರಲ್ಲಿಯೂ ಮುಂದೆ ಬಂದಿರುವಾಗ, ಈಗೇಕೆ ಮೀಸಲು. ಮಹಿಳಾ  ಸಬಲೀಕರಣಕ್ಕೆ ಅದರ ಅಗತ್ಯವೇ ಇಲ್ಲ. ಮೀಸಲಿನಿಂದ ಶೋಷಣೆ ಹೆಚ್ಚಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅನಕ್ಷರಸ್ಥ ಹೆಣ್ಣು ಮಕ್ಕಳಿಗೆ ಅಧಿಕಾರ ನೀಡಿಸಿ, ಅದನ್ನು  ತಮ್ಮ ಮೂಲಕ ಚಲಾಯಿಸುವಂಥ ಕೆಟ್ಟ ಪದ್ಧತಿ ಆರಂಭವಾಗಬಹುದು.  - ಬಿ. ಶ್ವೇತಾ
ಮನೆಯಲ್ಲಿ ನಮ್ಮಪ್ಪ ದುಡಿಯುತ್ತಾರೆಯಷ್ಟೆ. ಮನೆಯ ಆಡಳಿತ ನಡೆಸುವುದು ಅಮ್ಮನೆ. ಇಂಥ ಅಮ್ಮಂದಿರ ಕೈಲಿ ದೇಶದ ಚುಕ್ಕಾಣಿ ಬಂದ್ರೆ, ಅದು ದೇಶಕ್ಕೇ ಒಳ್ಳೆಯದು. ಒಳ ಮೀಸಲಿನ ಸಾಧಕ-ಬಾಧಕಗಳ ಚರ್ಚೆ ಬಳಿಕ, ನಿರ್ಧಾರ  ಕೈಗೊಳ್ಳುವುದು ಒಳಿತು.-ಪಿ. ರಾಧಿಕ
೧೪ ವರ್ಷಗಳ ಹಿಂದೆಯೇ ೧೮೦ ಮಹಿಳೆಯರು ಸಂಸದರಾಗಿದ್ದರೆ, ದೇಶ ಇನ್ನಷ್ಟು ಪ್ರಗತಿ ಕಾಣುತ್ತಿತ್ತು. ಇನ್ನಷ್ಟು ಮಹಿಳಾ ಸಬಲೀಕರಣ ಆಗುತ್ತಿತ್ತು. ಮಹಿಳಾ ರಾಜಕೀಯ ಹೋರಾಟದ ಹಾದಿಯಲ್ಲಿ ಇದು ಆರಂಭವಷ್ಟೆ. ಈ ಮೀಸಲಿನ ಲಾಭ ಪಡೆದು, ಅರ್ಹ ಮಹಿಳೆಯರು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆಗಬೇಕು.  ಆಡಳಿತ ನಡೆಸುವ ಪುರುಷರಿಗೆ ನಮ್ಮ ಬಗ್ಗೆ ಎಷ್ಟೇ ಕನಿಕರ, ಪ್ರೀತಿ ಇದ್ದರೂ. ಮಹಿಳೆಯರ ಕಷ್ಟ ಮಹಿಳೆಯರಿಗಷ್ಟೇ ಗೊತ್ತಾಗಲು ಸಾಧ್ಯ. ಹಾಗಾಗಿ ಮಹಿಳೆ ನೀತಿ ರೂಪಕ ಸದನಗಳನ್ನು ಪ್ರವೇಶಿಸುತ್ತಿರುವುದರಿಂದ, ಬದಲಾವಣೆಯ ಗಾಳಿ ಬೀಸುವುದು ಖಚಿತ. - ರಶ್ಮಿ

ಇವರ ಬದುಕು ತಳ್ಳೋ ಮಾಡಲ್ ಗಾಡಿ

ವೇತನ ಹೆಚ್ಚಳವಿಲ್ಲದೇ ಅತಿಥಿ ಉಪನ್ಯಾಸಕರು ಹೈರಾಣ
ಕುಂದೂರು ಉಮೇಶ ಭಟ್ಟ ಮೈಸೂರು
ಇವರು ಅತಿಥಿ ಉಪನ್ಯಾಸಕರು. ಕಾಲೇಜುಗಳಲ್ಲಿ ಇವರ ಸೇವೆ ಅತಿಥಿಗಳ ರೀತಿಯದ್ದೇ. ಬರುವುದು, ಪಾಠ ಮಾಡುವುದು ಹೋಗುವುದು.
ಸಂಬಳ ಕೇಳಬೇಡ, ಪಾಠಕ್ಕೆ ಮಾಡೋದನ್ನು ಮಾತ್ರ ಮರೀಬೇಡ.. ಎನ್ನುವಂತಾಗಿದೆ ಇವರ ಸ್ಥಿತಿ. ನಮ್ಮ ಸೇವೆ ಕಾಯಂ ಆಗಿಲ್ಲ. ಸದ್ಯಕ್ಕೆ ಬದುಕು ನಡೆಸುವಷ್ಟಾದರೂ ವೇತನ ಕೊಡಿ ಎಂದು ಮೂರು ವರ್ಷದಿಂದ ಕೇಳುತ್ತಲೇ ಇದ್ದಾರೆ. ಅದು ಆಡಳಿತ ನಡೆಸುವವರ ಕಿವಿಗೆ ಬಿದ್ದೇ ಇಲ್ಲ.
ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿರುವ ಖಾಲಿ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿ ರುವವರ ಸಂಖ್ಯೆ ನಾಲ್ಕು ಸಾವಿರಕ್ಕೂ ಹೆಚ್ಚು. ಇವರೆಲ್ಲ ನೇರವಾಗಿ ಕಾಲೇಜು ಶಿಕ್ಷಣ ಇಲಾಖೆ ಆಡಳಿತ ವ್ಯಾಪ್ತಿಗೆ ಬರುತ್ತಾರೆ. ಮಾಸಿಕ ಇವರು ೫೦೦೦ ರೂ.ಗೆ ದುಡಿಯುತ್ತಿದ್ದು, ಇವರಲ್ಲಿ ಸ್ನಾತಕೋತ್ತರ ಪದವಿ, ಡಾಕ್ಟರೇಟ್. ಪಿಎಚ್‌ಡಿ, ಎಂ.ಫಿಲ್ ಪಡೆದವರಿದ್ದಾರೆ. ಈ ಮಧ್ಯೆ ಬರುವ ವೇತನವೂ ವರ್ಷಕ್ಕೆ ಒಂದೇ ಬಾರಿ.
ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವುದು ಸಂವಿಧಾನದ ಆಶಯ. ಆದರೆ ಇಲ್ಲಿ ಇದ್ಯಾವುದೂ ಅನ್ವಯವಾಗದು. ಈ ಅತಿಥಿ ಉಪನ್ಯಾಸಕರ ಬೇಡಿಕೆಯೆಂದರೆ, ಕಾಯಂ ಉಪನ್ಯಾಸಕರಷ್ಟು ಸಂಬಳ ನೀಡಬೇಡಿ. ಬದುಕಲು ಬೇಕಾದಷ್ಟಾದರೂ ಕೊಡಿ ಕೊಡಿ ಎಂಬುದು.
ಅಪ್ಪ-ಮಕ್ಕಳ ಮಿಡಿತ
ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾದ ಅವಧಿ. ಹೆಚ್ಚು ಪದವಿ ಕಾಲೇಜುಗಳ ಆರಂಭಕ್ಕೆ ಮಂಜೂರು ಮಾಡಲಾಯಿತು. ಅವುಗಳಿಗೆ ಕೆಲ ಉಪನ್ಯಾಸಕರನ್ನು ನೇಮಕ ಮಾಡಿಕೊಂಡರೂ ಬಹುತೇಕರು ಅರೆಕಾಲಿಕ ಉಪನ್ಯಾಸಕರಾದರು. ಅವರಿಗೆ ೧೯೮೫ರಿಂದ ೧೯೯೪ರವರೆಗೆ ನೀಡುತ್ತಿದ್ದ ಮಾಸಿಕ ವೇತನ ೬೦೦ ರೂ. ಮಾತ್ರ. ಉಪನ್ಯಾಸಕರು ಮನವಿ ಮಾಡಿದರೂ ವೇತನ ಹೆಚ್ಚಳವಾಗಲೇ ಇಲ್ಲ. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿ ಬರುತ್ತಿದ್ದಂತೆ ವೇತನ ದುಪ್ಪಟ್ಟು ಆಯಿತು. ಆಗ ಅರೆಕಾಲಿಕ ಉಪನ್ಯಾಸಕರಿಗೆ ೧೨೦೦ ರೂ. ಮಾಸಿಕ ವೇತನ ನಿಗದಿಯಾಯಿತು. ೨೦೦೩ರ ಹೊತ್ತಿಗೆ ವೇತನ ಹೆಚ್ಚಳ ಬೇಡಿಕೆ ವ್ಯಕ್ತವಾದಾಗ ಉಪನ್ಯಾಸಕರ ಹುದ್ದೆಯ ಹೆಸರು ಬದಲಾಯಿತು. ನ್ಯಾಯಾಲಯಕ್ಕೆ ಹೋದರೆ ಅವರ ಅನುಭವ ಆಧರಿಸಿ ಕಾಯಂ ಮಾಡಬೇಕೆಂಬ ಕಾರಣಕ್ಕೆ ಅರೆಕಾಲಿಕ ಎನ್ನುವುದನ್ನು ಅತಿಥಿ ಉಪನ್ಯಾಸಕರು ಎಂದು ಬದಲಾಯಿಸಲಾಯಿತು. ೨೦೦೪ರಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಅತಿಥಿ ಉಪನ್ಯಾಸಕರ ವೇತನ ೧೨೦೦ ರೂ.ಗಳಿಂದ ೨೦೦೦ ರೂ.ಗೆ ಏರಿತು. ನಂತರ ೨೦೦೭ರಲ್ಲಿ ಸಚಿವ ಎಚ್.ಡಿ.ರೇವಣ್ಣ ಅವರ ವಿಶೇಷ ಆಸಕ್ತಿಯ ಫಲವಾಗಿ ವೇತನ ೫ ಸಾವಿರ ರೂ. ಗೆ ಏರಿತು. ಉಪನ್ಯಾಸಕರೂ ಖುಷಿಯಾದರು.
ಹೆಣ್ಣೆ ಕೊಡೋಲ್ಲ
ವೇತನ ತಾರತಮ್ಯದಿಂದಾಗಿ ಇವರಿಗೆ ಸಾಮಾಜಿಕ ಸ್ಥಾನಮಾನವೇ ಇಲ್ಲ. ಬಹಳಷ್ಟು ಕಡೆ ಹೆಣ್ಣು ಕೊಡಲು ಒಪ್ಪರು. ಇದು ಹೊಳಲ್ಕೆರೆ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕರಾಗಿದ್ದವರ ಕಥೆ. ಅವರು ಪರಿಚಯಸ್ಥರ ಮಗಳನ್ನು ಮದುವೆ ಮಾಡಿಕೊಳ್ಳಲು ಹೋದರು. ನಿಮ್ಮ ಸಂಬಳ ಇಷ್ಟೇನಾ, ಹಾಗಾದರೆ ನಮ್ಮ ಮಗಳನ್ನು ಕೊಡೋಲ್ಲ ಎಂದು ಮುಖಕ್ಕೆ ಹೊಡೆದಂತೆಯೇ ಹೇಳಿ ಕಳುಹಿಸಿದರು. ಮುಂದೆ ಅದೇ ಅತಿಥಿ ಉಪನ್ಯಾಸಕ ಸವಾಲಾಗಿ ಸ್ವೀಕರಿಸಿ ಕೆಪಿಎಸ್‌ಸಿ ಪರೀಕ್ಷೆಯನ್ನು ಪಾಸು ಮಾಡಿದರು. ಅವರೀಗ ತಹಸಿಲ್ದಾರ್. ಇಂಥವರು ಕಡಿಮೆ.
ಎಲ್ಲ ಕೆಲಸಕ್ಕೂ ಬೇಕು
ಪಾಠ ಮಾಡುವುದಷ್ಟೇ ಉಪನ್ಯಾಸಕನ ಕೆಲಸ. ಆದರೆ ಅತಿಥಿ ಉಪನ್ಯಾಸಕರು ಎಲ್ಲಾ ಕೆಲಸಕ್ಕೆ ಬೇಕು. ಪರೀಕ್ಷೆ, ಮೌಲ್ಯಮಾಪನ, ಅಸೈನ್‌ಮೆಂಟ್ ನಿರ್ವಹಣೆ ಕೆಲಸವನ್ನು ಇವರಿಂದ ನಿರೀಕ್ಷಿಸಲಾಗುತ್ತದೆ. ಇದಾದ ನಂತರ ಪ್ರಾಂಶುಪಾಲರು ಸೂಚಿಸಿದ ಕಚೇರಿ ಕೆಲಸಗಳು ಬೇರೆ. ವೇತನದ ವಿಚಾರದಲ್ಲಿ ಮಾತ್ರ ತಾರತಮ್ಯ. ಇವರಿಗೆ ತಿಂಗಳಿಗೆ ವೇತನ ಸಿಕ್ಕದು, ಸಿಕ್ಕಾಗಲೇ ಸೀರುಂಡೆ. ಕಾಲೇಜುಗಳ ಕಚೇರಿ ಸಿಬ್ಬಂದಿ ಮನಸು ಮಾಡಿದರೆ ಸಂಬಳ ಸಿಕ್ಕೀತು, ಇಲ್ಲದಿದ್ದರೆ ವರ್ಷ. ಅದೂ ಇಲ್ಲದಿದ್ದರೆ ಕಂತುಗಳಲ್ಲಿ ವೇತನ ಭಾಗ್ಯ.
ಎಷ್ಟು  ಹೊರೆ
ಇವರ ಬೇಡಿಕೆಯೆಂದರೆ ೫ ಸಾವಿರದಿಂದ ಮಾಸಿಕ ಗೌರವ ಧನವನ್ನು ೧೨ ಸಾವಿರಕ್ಕೆ ಹೆಚ್ಚಿಸಬೇಕು. ಕನಿಷ್ಠ ಹತ್ತು ಸಾವಿರವಾದರೂ ಬೇಕೇಬೇಕು.ಇದರಿಂದ  ಸರಕಾರಕ್ಕೆ ಆಗುವ ವಾರ್ಷಿಕ ಹೊರೆ ಸುಮಾರು ೨೦ ಕೋಟಿ ರೂ..  ಅದೇ ಯುಜಿಸಿ ನಿಗದಿಪಡಿಸಿರುವ ಹೊಸ ವೇತನದಂತೆ ಉಪನ್ಯಾಸಕರಿಗೆ ನೀಡಬೇಕಾದ ಹೆಚ್ಚುವರಿ ಮೊತ್ತ ೧೭೦ ಕೋಟಿ ರೂ. ಇದರೊಂದಿಗೆ ಅತಿಥಿ ಉಪನ್ಯಾಸಕರ ಕಾಯಂ ಪ್ರಸ್ತಾಪ ವನ್ನು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಇಟ್ಟಿದ್ದಾರೆ. ಮೊದಲು ಅಧಿಸೂಚನೆ ನಂತರ ಮುಂದಿನ ಕ್ರಮ ಎನ್ನೋದು ಸಚಿವರ ಸೂಚನೆ. ಅವರದ್ದೂ ಕೆಲವು ಬೇಡಿಕೆಗಳಿವೆಯಂತೆ, ಹಾಗಾಗಿ ಎಲ್ಲವೂ ಅಂತಿಮಗೊಳ್ಳಬೇಕು ಎನ್ನುತ್ತಾರೆ ಉಪನ್ಯಾಸಕರು. ಈಗ ಎಲ್ಲವೂ ದುಬಾರಿಯೋ ದುಬಾರಿ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಬಸ್ ಪ್ರಯಾಣ ದರವೂ ದುಬಾರಿ. ಬದುಕು ನಡೆಸುವುದೂ ಕಷ್ಟವಾಗಿರುವಾಗ ವೇತನವನ್ನಾದರೂ ಹೆಚ್ಚಿಸಿ ಎಂದು ಬೇಡುತ್ತಿದ್ದಾರೆ ‘ಅತಿಥಿ’ಗಳು.
ಮರೆತ ಜನಪ್ರತಿನಿಧಿಗಳು
ಮೂರು ವರ್ಷದ ಹಿಂದೆ ನಡೆದ ವಿಧಾನಪರಿಷತ್ ಚುನಾವಣೆ ವೇಳೆ ಅತಿಥಿ ಉಪನ್ಯಾಸಕರತ್ತಲೇ ಎಲ್ಲ ಪಕ್ಷಗಳ ಚಿತ್ತ ಹರಿಯಿತು. ಅವರ ಮತಗಳನ್ನು ಪಡೆಯಲೆಂದೇ ಭರವಸೆಗಳ ಮಹಾಪೂರವೂ ಹರಿಯಿತು. ನಿಮ್ಮ ಸೇವೆ ಕಾಯಂ, ಎಲ್ಲರಂತೆ ಸೌಲಭ್ಯ ಕೊಡಿಸುವುದಾಗಿಯೂ ಹೇಳಿದರು. ಗೆದ್ದು ಮೂರು ವರ್ಷವಾದರೂ ಏನೂ ಇಲ್ಲ. ಮೈಸೂರು ಭಾಗದಿಂದ ಗೆದ್ದ ಮರಿತಿಬ್ಬೇಗೌಡ ಅತಿಥಿ ಉಪನ್ಯಾಸಕರ ಜತೆಯೇ ಓಡಾಡಿ ಓಟು ಗಿಟ್ಟಿಸಿದರು. ಒಂದೆರಡು ಬಾರಿ ಬೇಡಿಕೆ ಪಟ್ಟಿ ಮಂಡಿಸಿದರು. ತಮ್ಮ ಮಾತು ನಡೆಯದೆಂದು ಗೊತ್ತಾದಾಗ ಅತಿಥಿ ಉಪನ್ಯಾಸಕರನ್ನು ಮರೆತೇ ಬಿಟ್ಟರು. ಉಳಿದವರ ವರ್ತನೆಯೂ ಹೀಗೇ.
ಮಾನವೀಯತೆ ಮೆರೆಯಿರಿ
ಬಹಳಷ್ಟು  ಇಂಥ ಉಪನ್ಯಾಸಕರಿಗೆ ಕುಟುಂಬ ನಿರ್ವಹಣೆ,  ಬೋಧನೆಗೆ ಅಗತ್ಯವಾದ ಪರಿಕರ-ಲೇಖನ ಸಾಮಗ್ರಿ ಗಳನ್ನು ಕೊಳ್ಳುವುದಕ್ಕೆ, ಸಂಶೋಧನ ಕೆಲಸ, ಪರಾಮರ್ಶನ ಗ್ರಂಥ ಕೊಳ್ಳಲು ಈ ಕನಿಷ್ಠ ವೇತನವೇ ದಿಕ್ಕು. ಈಗ ಕಾಯಂ ಉಪನ್ಯಾಸಕರ ವೇತನ ಪರಿಷ್ಕೃತಗೊಂಡಿದೆ. ಅದ್ದರಿಂದ ಇವರ ವೇತನವನ್ನು ಹೆಚ್ಚು ಮಾಡಲೇಬೇಕು. ಮತ್ತೊಂದು ಯುಜಿಸಿ ವೇತನ ಪರಿಷ್ಕರಣೆ ಅಂತಿಮ ವರದಿ (ಪ್ರೊ.ಚೆಡ್ಡಾ ನೇತೃತ್ವದ ಪರಿಶೀಲನಾ ಸಮಿತಿ)ಯಲ್ಲಿ ಪದವಿ ಕಾಲೇಜು ಮತ್ತು ವಿವಿಗಳು ಖಾಲಿ ಇರುವ ಹುದ್ದೆಗಳಿಗೆ -ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಸಲುವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ,೨೫೦೦೦ ರೂ. ಮೀರದಂತೆ ವೇತನ ನೀಡಬೇಕೆಂಬ ಸಲಹೆಯಿದೆ. ದುರಂತವೆಂದರೆ ರಾಜ್ಯ ಸರಕಾರ ಈ ವೇತನ ಪರಿಷ್ಕರಣೆಯ ಪರಿಶೀಲನೆ ಸಂದರ್ಭ ಸೇರ್ಪಡೆ- ಬೇರ್ಪಡೆ ಗಳೊಂದಿಗೆ ಜಾರಿಗೆ ತರುವ ತನ್ನ ಆದೇಶದಲ್ಲಿ  (ಸರಕಾರಿ ಆದೇಶ ಸಂಖ್ಯೆ: ಕಾಶಿಇ: ೧೪೯:ಯುಜಿಸಿ : ೨೦೦೯-೧೦ಸಿವಿ೫, ದಿನಾಂಕ ೧೮.೦೧.೨೦೧೦) ಈ ಅಂಶವನ್ನು ಕೈಬಿಟ್ಟಿದೆ. ಇದು ಅತಿಥಿ ಉಪನ್ಯಾಸಕರ ಬೇಸರಕ್ಕೆ ಕಾರಣವಾಗಿದೆ.

ಸೀಸ ಇಲ್ಲದ ಬಣ್ಣ ಬಳಸಿದರೆ ಬದುಕೇ ಬಣ್ಣ ಬಣ್ಣ !

ಚೀ. ಜ. ರಾಜೀವ ಮೈಸೂರು
‘ಮನೆಯ ಗೋಡೆ, ಪೀಠೋಪಕರಣಗಳಿಗೆ ರಂಗು- ರಂಗಾಗಿ ಬಳಿಯುವ ಬಣ್ಣಗಳು ಮನಸ್ಸಿಗೆ ಮುದ ನೀಡಬಹುದು, ನಿಮ್ಮ ಬಣ್ಣದ ಅಭಿರುಚಿಯನ್ನು, ಮನೆಯ ಸಿರಿವಂತಿಕೆ ಸಾರಬಹುದು. ಆದರೆ, ಹೊಳೆಯುವ, ಪ್ರಕಾಶಮಾನವಾಗಿ ಕಾಣುವ ಬಣ್ಣಗಳು ನಿಮ್ಮ ಮನೆಯ ಮಕ್ಕಳ ಆರೋಗ್ಯಕ್ಕೆ ಸಂಚಕಾರವನ್ನೇ ತರಬಲ್ಲವು. ಏಕೆಂದರೆ, ಬಣ್ಣ ದಲ್ಲಿರುವ ಸೀಸ(ಲೆಡ್)ವೆಂಬ ಲೋಹ ಸದ್ದಿಲ್ಲದೆ ಸಾಯಿಸುವಂಥ ಕ್ರಿಮಿನಲ್. ಹಾಗಾಗಿ ಸೀಸವಿಲ್ಲದ ಬಣ್ಣ ಬಳಸಿ...!’
ನ್ಯಾಷನಲ್ ರೆಫೆರಲ್ ಸೆಂಟರ್ ಫಾರ್ ಲೆಡ್ ಪಾಯಿಸನಿಂಗ್ ಇನ್ ಇಂಡಿಯಾ(ಎನ್‌ಆರ್‌ಸಿಎಲ್‌ಪಿ) ಮತ್ತು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸೇರಿದಂತೆ ಕೆಲ ಸಂಸ್ಥೆಗಳು ನಡೆಸುತ್ತಿರುವ ಇಂಥದ್ದೊಂದು ‘ಬಣ್ಣ ಜಾಗೃತಿ’ ಅಭಿಯಾನದೊಂದಿಗೆ ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಶ್ ಲಿಮಿಟೆಡ್ (ಎಂಪಿವಿಎಲ್) ರಚನಾತ್ಮಕ ವಾಗಿ ಕೈ ಜೋಡಿಸಿದೆ.
ಚುನಾವಣೆಯಲ್ಲಿ ಬಳಸುವ ಶಾಯಿಯ ಉತ್ಪಾದನೆಯಿಂದ ಹತ್ತಾರು ರಾಷ್ಟ್ರಗಳ ಗಮನ ಸೆಳೆದಿರುವ ಸರಕಾರಿ ಸ್ವಾಮ್ಯದ ಈ ಕಂಪನಿ, ಈಗ ಸೀಸವಿಲ್ಲದ ಬಣ್ಣ ಉತ್ಪಾದಿಸುವ ಮೂಲಕ ‘ಆರೋಗ್ಯ ಸ್ನೇಹಿ- ಪರಿಸರ ಸ್ನೇಹಿ’ ಸೇವೆಗೆ ಮುಂದಾಗಿದೆ. ಸೀಸರಹಿತ ಬಣ್ಣ ಉತ್ಪಾದಿಸುತ್ತಿರುವ ದೇಶದ ಮೊದಲ ಸರಕಾರಿ ಸಂಸ್ಥೆ ಎಂಬ ಪ್ರಶಂಸೆಗೂ ಪಾತ್ರವಾಗಿದೆ.
‘ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಬಾಲ ಭವನದ ಅಂಗಳದಲ್ಲಿರುವ ಮಕ್ಕಳ ಆಟಿಕೆಗಳಿಗೆ (ತಯಾರಿಸುವ ಕಂಪನಿಗಳಿಗೆ) ಸೀಸರಹಿತ ಬಣ್ಣವನ್ನು ಪೂರೈಸಿದ ಸಂಸ್ಥೆ, ಬರಲಿರುವ ದಿನಗಳಲ್ಲಿ ರಾಜ್ಯದ ಎಲ್ಲ ಬಾಲಭವನಗಳ ಗೋಡೆಗಳಿಗೆ, ಅಲ್ಲಿನ ಆಟಿಕೆಗಳಿಗೂ ಸೀಸವಿಲ್ಲದ ಬಣ್ಣ ಪೂರೈಸಲು ನಿರ್ಧರಿಸಿದೆ’ ಎಂದು ಎಂಪಿವಿಎಲ್ ಅಧ್ಯಕ್ಷ ಮೈ. ವಿ. ರವಿಶಂಕರ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
‘ಸೀಸ ರಹಿತ ಬಣ್ಣದ ಕುರಿತು ಎನ್‌ಆರ್‌ಸಿಎಲ್‌ಪಿ ಸೇರಿದಂತೆ ಕೆಲ ಸಂಸ್ಥೆಗಳು ನಡೆಸುತ್ತಿರುವ ಜಾಗೃತಿ ಅಭಿಯಾನದ ಅರಿವು ಇತ್ತಾದರೂ, ನಾವು ಕೈ ಹಾಕಿರಲಿಲ್ಲ. ಕೆಲ ದಿನಗಳ ಹಿಂದೆ ಸಂಸ್ಥೆಯ ಸಂಪರ್ಕಕ್ಕೆ ಬಂದ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಪ್ರಧಾನ ಸಲಹೆಗಾರ ಡಾ. ತುಪಿಲ್ ವೆಂಕಟೇಶ್ ಮಾರ್ಗದರ್ಶನ ನೀಡಿದರು. ಸಂಸ್ಥೆಯ ನಾರಾಯಣ್, ವೇಣು ಗೋಪಾಲ್, ಲಕ್ಷ್ಮೀನಾರಾಯಣ್ ನಮ್ಮ ಪ್ರಯೋಗಾಲಯದಲ್ಲಿ ನಡೆಸಿದ ಶ್ರಮದ ಫಲ, ಸಂಸ್ಥೆ ಈಗ ಸೀಸ ರಹಿತ ಬಣ್ಣ ಉತ್ಪಾ ದನೆಯಲ್ಲಿ ತೊಡಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಜೆ.ಸುರೇಶ್ ವಿವರಿಸಿದರು.
ಬಣ್ಣದಲ್ಲಿನ ಸೀಸದಲ್ಲಿ ವಿಷ: ಗೋಡೆ, ಪೀಠೋ ಪಕರಣಗಳಿಗೆ ಬಳಿಯುವ ಬಣ್ಣ ದಲ್ಲಿ ಪಿಗ್‌ಮೆಂಟ್, ಸಾಲ್ವೆಂಟ್‌ನಂಥ ನಾನಾ ಮಿಶ್ರಣಗಳಿವೆ. ಈ ಪೈಕಿ ಬಣ್ಣಕ್ಕೆ ರಂಗು ತರುವುದೇ ಸೀಸದಂಥ ಲೋಹಗಳು (ಪಿಗ್‌ಮೆಂಟ್). ಹೆಚ್ಚು ಆಕರ್ಷಣೆ, ಬಾಳಿಕೆ, ತುಕ್ಕು ಹಿಡಿಯುವ ಪ್ರಮಾಣವನ್ನು ಕಡಿಮೆ ಮಾಡುವ ಸಾಮರ್ಥ್ಯ ಮತ್ತು ವೇಗವಾಗಿ ದ್ರಾವಣವನ್ನು ಒಣಗಿಸುವ ಗುಣವನ್ನು ಸೀಸ ಹೊಂದಿರುವುದರಿಂದ, ಬಹಳಷ್ಟು ಉತ್ಪಾದಕ ಕಂಪನಿಗಳು ಅದನ್ನೇ ಬಳಸುತ್ತಾರೆ. ಹಳದಿ, ಕೆಂಪು ಮತ್ತು ಹಸಿರು ಬಣ್ಣಗಳಲ್ಲಿ ಸೀಸದ ಪ್ರಮಾಣ ಗರಿಷ್ಠ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಪ್ರಕಾರ- ಯಾವುದೇ ಬಣ್ಣದಲ್ಲಿ ಸೀಸದ  ಪ್ರಮಾಣ ೬೦೦ ರಿಂದ ೯೦೦ ಪಾರ್ಟ್ಸ್ ಪರ್ ಮಿಲಿಯನ್(ಪಿಪಿಎಂ) ಇರಬೇಕು. ಆದರೆ, ನಾವು ಬಳಸುವ ಬಣ್ಣಗಳಲ್ಲಿ ೧೫ ರಿಂದ ೩೦ ಪಟ್ಟು ಹೆಚ್ಚಿದೆಯಂತೆ. ಸೀಸ ಹೇಳಿ-ಕೇಳಿ ವಿಷಯುಕ್ತ. ೨೦೧೨ರೊಳಗೆ ಸೀಸದ ಬಳಕೆಯನ್ನು ೬೦೦ ಪಿಪಿಎಂ ಪ್ರಮಾಣಕ್ಕೆ ಇಳಿಸಲೇಬೇಕಿದೆ. ಈ ನಿಟ್ಟಿನಲ್ಲಿ ಎಂಪಿವಿಎಲ್ ಈಗಿನಿಂದಲೇ ಕಾರ್ಯೋನ್ಮುಖ ವಾಗಿದೆ ಎನ್ನುತ್ತಾರೆ ಸುರೇಶ್..
ಹಳದಿಯ ಮೋಹ ಬದುಕಿಗೆ ಕೆಂಪು
ಬಣ್ಣದಲ್ಲಿರುವ ಸೀಸ ಯಾವುದಾದರೂ ರೀತಿಯಲ್ಲಿ ನಮ್ಮ ಅಂಗಾಂಗವನ್ನು ಪ್ರವೇಶಿಸುತ್ತದೆ. ಮುದ್ರಿಸುವ ಪತ್ರಿಕೆ, ಮುಖಕ್ಕೆ ಬಳಸುವ ಸೌಂದರ್ಯವರ್ಧಕಗಳಲ್ಲಿ ಬಣ್ಣದ ಮೂಲಕ ಸೀಸ ದೇಹದೊಳಗೆ ಹೊಕ್ಕಿ ಬಿಡುತ್ತದೆ. ಉದ್ಯಾನದಲ್ಲಿರುವ ಉಯ್ಯಾಲೆ, ಜಾರುವ ಬಂಡಿ, ಜೋಕಾಲಿಯಂಥ ಆಟಿಕೆಗಳಿಗೆ, ಕೃತಕವಾಗಿ ತಯಾರಿಸಿದ ಪ್ರಾಣಿ-ಪಕ್ಷಿಗಳಿಗೆ ಹಾಗೂ ಮನೆಯ ಗೋಡೆಗೆ ಬಳಿದಿರುವ ಬಣ್ಣ- ಧೂಳಿನ ರೂಪದಲ್ಲೂ ನಮ್ಮನ್ನು ಸೇರಬಹುದು. ಹೀಗೆ ಬಣ್ಣದಲ್ಲಿನ ಸೀಸವನ್ನು ಸೇವಿಸಿದರೆ ಆರೋಗ್ಯದಲ್ಲಿ ಏರುಪೇರು ಖಚಿತ. ಮಕ್ಕಳ ಮಾನಸಿಕ ಹಾಗೂ ಭೌತಿಕ ಬೆಳವಣಿಗೆ ವಿಳಂಬ, ಬುದ್ಧಿಮತ್ತೆ ಕ್ಷೀಣಿಸುವುದು; ನರಗಳ ದೌರ್ಬಲ್ಯ ಸಂಬಂಧಿ ಕಾಯಿಲೆಗೆ ತುತ್ತಾಗುವುದು ಇತ್ಯಾದಿ ಬರಬಹುದು. ಹಾಗಾಗಿ ಸೀಸರಹಿತ ಬಣ್ಣಕ್ಕೆ ಜಗತ್ತಿನಾದ್ಯಂತ ಕೂಗು ಎದ್ದಿದೆ. ವಿಶೇಷವಾಗಿ ಹಳದಿ ರಹಿತ ಬಣ್ಣಕ್ಕೆ ಬೇಡಿಕೆ ಹೆಚ್ಚಲಿದೆ.

ಎಲ್ಲೆಲ್ಲೂ ಬೆಂಕಿ

ನೂರಾರು ಎಕರೆ ಕುರುಚಲು ಕಾಡು ಬೆಂಕಿಗೆ ಆಹುತಿ
ವಿಕ ಸುದ್ದಿಲೋಕ ಯಳಂದೂರು

ಬಿಳಿಗಿರಿರಂಗನಬೆಟ್ಟದ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ವ್ಯಾಪಿಸಿದ್ದು, ನೂರಾರು ಎಕರೆ ಕುರುಚಲು  ಕಾಡು ಬೆಂಕಿಗೆ ಆಹುತಿಯಾ ಗಿದೆ.
ಬಿಆರ್‌ಟಿ ವನ್ಯಧಾಮದ ಕೃಷ್ಣಯ್ಯನಕಟ್ಟೆ ಹಾಗೂ ಸಾಲುಬೆಟ್ಟ, ಜೇನುಗುಡ್ಡ  ಪ್ರದೇಶ ದಲ್ಲಿ ಏಕ ಕಾಲದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಂದೇ ವೇಳೆ ಮೂರು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಇದು ಕಿಡಿಗೇಡಿ ಕೃತ್ಯವೆಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾಳ್ಗಿಚ್ಚು ಸ್ವಾಭಾವಿಕವಾಗಿದ್ದರೆ ಒಂದೇ ಪ್ರದೇಶದಿಂದ ಹರಡುತ್ತಿತ್ತು. ಆದರೆ  ಈಗ ಮೂರು ಕಡೆಗಳಿಂದ ಬೆಂಕಿ ವ್ಯಾಪಿಸಿಕೊಂಡು ಬರುತ್ತಿದೆ. ಹೀಗಾಗಿ ಇದು ಕಿಡಿಗೇಡಿಗಳ ಕೃತ್ಯ. ಬೆಂಕಿ ಕಾಣಿಸಿಕೊಂಡ ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಿಆರ್‌ಟಿ ವನ್ಯಧಾಮದ ಎಲ್ಲ ಸಿಬ್ಬಂದಿಯನ್ನು ಕರೆಸಿಕೊಂಡು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು ೨೦೦ಕ್ಕೂ ಹೆಚ್ಚು  ಮಂದಿಯನ್ನು ಬೆಂಕಿ ನಂದಿಸುವ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ.
ಕುರುಚಲು ಕಾಡು ಮಾತ್ರ: ಬೆಂಕಿ ಭಾರಿ ಗಾತ್ರದ ಮರಗಳಿಗೆ ವ್ಯಾಪಿಸಿಲ್ಲ. ಒಣಗಿರುವ ಹುಲ್ಲು, ಲಾಂಟೆನಾ ಸೇರಿದಂತೆ ಕುರುಚಲು ಗಿಡಗಳು ಮಾತ್ರ ಹೊತ್ತಿ ಉರಿಯುತ್ತಿವೆ. ಮರಗಳು ಇನ್ನೂ ಹಸಿರಿರುವ ಕಾರಣ ಬೆಂಕಿ ಮೇಲ್ಭಾಗಕ್ಕೆ ವ್ಯಾಪಿಸಿಲ್ಲ. ಒಟ್ಟಾರೆ ನೂರಾರು ಎಕರೆ  ಅರಣ್ಯ ಪ್ರದೇಶದಲ್ಲಿ ಬೆಂಕಿ ಹರಡಿ ಕೊಂಡಿದೆ. ಸಿಬ್ಬಂದಿ ನಿರಂತರವಾಗಿ ಹಸಿ ಸೊಪ್ಪಿನಿಂದ ಬೆಂಕಿಯನ್ನು ಬಡಿದು ನಂದಿಸುವ ಕಾರ್ಯದಲ್ಲಿ ನಿರತರಾಗಿರುವ ಕಾರಣ ಕ್ರಮೇಣ ಹತೋಟಿಗೆ ಬರುತ್ತಿದೆ.
ಅಪರೂಪದ ಸಂಕುಲ: ಬಿಆರ್‌ಟಿ ವನ್ಯಧಾಮ ದಲ್ಲಿ ಅಪರೂಪದ ಸಸ್ಯ ಹಾಗೂ ಪ್ರಾಣಿ ಸಂಕುಲವಿದೆ. ಔಷಧ ಗುಣದ ಸಸ್ಯಗಳಿವೆ. ಅದೃಷ್ಟವಶಾತ್ ಬೆಂಕಿ ಪ್ರಾಣಿಗಳು ಹಾಗೂ ಅಪರೂಪದ ಸಸ್ಯ ಸಂಕುಲ ಇರುವ ಕಡೆಗೆ  ವ್ಯಾಪಿಸಿಲ್ಲ. ಅಲ್ಲಿಗೆ ಹರಡುವುದನ್ನು ತಡೆಯಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿಶ್ವಜಿತ್ ಮಿಶ್ರಾ, ಕೆ. ಗುಡಿ ಆರ್‌ಎಫ್‌ಒ ಶಶಿಧರ್ ಸೇರಿದಂತೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ತಾವು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹಾಲ್ತಿ ಬೆಟ್ಟದಲ್ಲೂ ಮರಗಳು ಭಸ್ಮ
ಸಿ.ಎನ್. ಮಂಜುನಾಥ್ ನಾಗಮಂಗಲ
ಬೇಸಿಗೆಯಲ್ಲಿ ಕಾಳ್ಗಿಚ್ಚು ಹರಡುವುದನ್ನು ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲಗೊಂಡ ಪರಿಣಾಮ ತಾಲೂಕು ವ್ಯಾಪ್ತಿಯ ಬಹುತೇಕ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗುತ್ತಿದೆ. ಬೆಲೆ ಬಾಳುವ ಮರಗಳು, ಅಪರೂಪದ, ಔಷಧೀಯ ಗುಣವುಳ್ಳ ಸಸ್ಯಗಳು ಹಾಗೂ ಪ್ರಾಣಿ ಪಕ್ಷಿಗಳು ಸಿಲುಕಿ ದಹನವಾಗುತ್ತಿವೆ.
ಹಾಲ್ತಿ ಬೆಟ್ಟದ ಅರಣ್ಯ ಪ್ರದೇಶ, ಎಚ್.ಎನ್. ಕಾವಲ್, ನಾಗನಕೆರೆ, ಬಸವನಕಲ್ಲು ಅರಣ್ಯ ಸೇರಿದಂತೆ ನಾನಾ ಕಡೆ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಈ ಬಾರಿ ಬೆಂಕಿ ಕಾಣಿಸಿ ಕೊಂಡಿದೆ. ಕುರುಚಲು ಗಿಡಗಳು ಹಾಗೂ ಪೊದೆಗಳು ಸಂಪೂರ್ಣ ಸುಟ್ಟು ಹೋಗಿವೆ. ನೀಲಗಿರಿ, ಹರ್ಕ್ಯೂಲೆಸ್ ಮರಗಳು ಬಹುತೇಕ ಸುಟ್ಟು ಹೋಗಿವೆ. ಕಾಳ್ಗಿಚ್ಚು ಹರಡು ವುದನ್ನು ತಡೆಗಟ್ಟವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈ ಅವಘಡಕ್ಕೆ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ಒಂದೆಡೆ ಕಾಡುಗಳ್ಳರ ಹಾವಳಿ, ಮತ್ತೊಂದೆಡೆ ಬೆಂಕಿಯಿಂದ ನಾಶವಾಗುತ್ತಿರುವ ಕಾಡಿನಿಂದಾಗಿ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಜತೆಗೆ, ಅರಣ್ಯ ಇಲಾಖೆಗೆ ಲಕ್ಷಾಂತರ ರೂ. ನಷ್ಟ ವಾಗುತ್ತಿದೆ.
ಬೆಂಕಿಗೆ ಕಾರಣವೇನು: ಅರಣ್ಯ ಪ್ರದೇಶದ ಬಹುತೇಕ ಭಾಗ ಅಂಚಿಹುಲ್ಲು ಹಾಗೂ ಕುರುಚಲು ಗಿಡಗಳಿಂದ ಆವೃತವಾಗಿದೆ. ಇದಕ್ಕೆ ಸಣ್ಣ ಬೆಂಕಿ ಕಿಡಿ ತಗುಲಿದರೂ ಬಹುಬೇಗ ಬೆಂಕಿಗೆ ಜ್ವಾಲೆಗಳು ವ್ಯಾಪಿಸು ತ್ತವೆ. ಆ ಪರಿಸ್ಥಿತಿಯಲ್ಲಿ ಬೆಂಕಿ ಆರಿಸುವುದು ತುಂಬಾ ಕಷ್ಟ. ಇದನ್ನು ಅರಣ್ಯ ಇಲಾಖೆ ಸಿಬ್ಬಂದಿಯೇ ಒಪ್ಪಿಕೊಳ್ಳುತ್ತಾರೆ.ಅಂಚಿಹುಲ್ಲು ಹಾಗೂ ಕುರುಚಲು ಗಿಡಗಳಿಂದ ಕೂಡಿರುವ ತಾಲೂಕಿನ ಅರಣ್ಯದಲ್ಲಿ ಬೇಸಿಗೆ ವೇಳೆ ನೈಸರ್ಗಿಕವಾಗಿ ಬೆಂಕಿ ಹೊತ್ತಿಕೊಳ್ಳುವುದು ಸ್ವಲ್ಪ ಕಡಿಮೆ. ಆದರೆ, ಕಾಡಿನಲ್ಲಿ ಅಡ್ಡಾಡುವ ವರು, ದನಗಾಹಿಗಳು ಬೀಡಿ, ಸಿಗರೇಟ್ ಸೇದಿ ಎಸೆಯುವ ಬೆಂಕಿ ಕಿಡಿ ಅನಾಹುತಕ್ಕೆ ಕಾರಣವಾಗುತ್ತದೆ. ಕೆಲವು ಕಿಡಿಗೇಡಿಗಳು ಬೇಕೆಂದೇ ಬೆಂಕಿ ಹಚ್ಚುತ್ತಾರೆ.
ತಡೆ ಹೇಗೆ: ಬೇಸಿಗೆಯಲ್ಲಿ ಅರಣ್ಯ ಪ್ರದೇಶಕ್ಕೆ ಜಾನುವಾರುಗಳನ್ನು ಮೇಯಿಸಲು ಹೋಗುವ ದನಗಾಹಿಗಳಿಗೆ ತಡೆಯೊಡ್ಡ ಬೇಕು.ಬೆಂಕಿ ಕಂಡ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಬೇಕು. ಅರಣ್ಯ ವ್ಯಾಪ್ತಿಯ ಹಳ್ಳ-ಕೊಳ್ಳಗಳಿಗೆ ನೀರು ಪೂರಣೆ ಮತ್ತು ಸಂಗ್ರಹ ವ್ಯವಸ್ಥೆ ಮಾಡಬೇಕು. ಇದರಿಂದ ಬೆಂಕಿ ಬಿದ್ದಾಗ ಆ ನೀರನ್ನು ಬಳಸಿಕೊಳ್ಳಬಹುದು.

ಛಬ್ಬಿ ಗುಡ್ಡದಲ್ಲೂ ಅಗ್ನಿ
ವಿಕ ಸುದ್ದಿಲೋಕ ಶಿರಹಟ್ಟಿ
ತಾಲೂಕಿನ ಅರಣ್ಯ ವ್ಯಾಪ್ತಿ ಛಬ್ಬಿ ಮತ್ತು ಕುಂದ್ರಳ್ಳಿ ಗ್ರಾಮಗಳ ಬಳಿಯ ಗುಡ್ಡದಲ್ಲಿ ಸೋಮವಾರ ಬೆಳಗ್ಗೆ ಹತ್ತಿದ ಬೆಂಕಿ ಪಕ್ಕದ ಗುಡ್ಡಕ್ಕೂ ಪಸರಿಸಿ ಕೆನ್ನಾಲಿಗೆ ಚಾಚಿದ್ದರಿಂದ ಛಬ್ಬಿ ಗ್ರಾಮಸ್ಥರಿಗೆ ಆಘಾತ ತಂದೊಡ್ಡಿದೆ.
ಸಸ್ಯಕಾಶಿ ಮತ್ತು ಖನಿಜ ಸಂಪತ್ತಿನ ಆಗರವಾಗಿ ರುವ ಕಪ್ಪತ್ತಗುಡ್ಡ ಪಕ್ಕದ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಮತ್ತು ನಾರಾಯಣಪುರ ಅಲ್ಲದೇ ಶಿರಹಟ್ಟಿ ತಾಲೂಕಿನ ಛಬ್ಬಿ, ಕುಂದ್ರಳ್ಳಿ ಮತ್ತು ಶೆಟ್ಟಿಕೇರಿ ಅರಣ್ಯ ವ್ಯಾಪ್ತಿಯ ಗುಡ್ಡಕ್ಕೆ ಪ್ರತಿ ವರ್ಷ ಬೇಸಿಗೆಯ ದಿನಗಳಲ್ಲಿ ಬೆಂಕಿ ಹಚ್ಚುವುದರಿಂದ ನೂರಾರು ಹೆಕ್ಟೇರ್ ಪ್ರದೇಶದ ಅರಣ್ಯ ಸಂಪತ್ತು ಸುಟ್ಟು ಕರಕಲಾಗುತ್ತಿದೆ. ಬೆಂಕಿ ಇನ್ನೂ ಧಗಧಗಿಸು ತ್ತಿರುವುದರಿಂದ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಗುಡ್ಡವೀಗ ಕರಿ ಮಣ್ಣಿನ ಗುಂಪೆಯಂತೆ ಕಾಣುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ಏನಾದರೂ ಕ್ರಮ ಕೈಗೊಂಡಿ ದ್ದರೆ ಅರಣ್ಯ ಸಂಪತ್ತು ರಕ್ಷಿಸಬಹುದಾಗಿತ್ತು.

ತಾಪ ಪರಿತಾಪ


ಬಿಸಿಲ ಝಳ ಹೆಚ್ಚಳ: ಮೈಯೆಲ್ಲ ಜಳಜಳ
ವಿಕ ಸುದ್ದಿಲೋಕ ಮೈಸೂರು
ರಣ ರಣ ಬಿಸಿಲು. ಹೊರಗೆ ಹೆಜ್ಜೆ ಇಟ್ಟರೆ ‘ಬೆಂಕಿ’ ಮಳೆಯ ಅನುಭವ. ಬಿಸಿಲ ಝಳ ದಿನೇ ದಿನೆ ಹೆಚ್ಚುತ್ತಿದೆ. ರಾತ್ರಿಯ ಉಷ್ಣಾಂಶ ಎಲ್ಲರ ‘ನಿದ್ದೆ’ಗೆಡಿಸಿದೆ. ಹವಾಮಾನ ಇಲಾಖೆ ಮೂಲಗಳ ಪ್ರಕಾರ ತಾಪದ ಪರಿತಾಪ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಸದ್ಯಕ್ಕೆ ಮಳೆಯ ಸೂಚನೆಗಳಿಲ್ಲ.
ಮಾರ್ಚ್‌ನಲ್ಲಿ ಮೈಸೂರಿನ ಸರಾಸರಿ ಹಗಲಿನ ಉಷ್ಣಾಂಶ ೩೪ ಡಿಗ್ರಿ ಸೆಲ್ಸಿಯಸ್. ಆದರೆ ಕಳೆದ ವಾರ ೩೭ ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಸೋಮವಾರ ೩೬ ಡಿಗ್ರಿ ದಾಖಲಾ ಗಿತ್ತು. ಕಳೆದ ವಾರ ಗಾಳಿಯ ಗರಿಷ್ಠ ತೇವಾಂಶ ಶೇ.೭೦ ರಿಂದ ೭೪ರವರೆಗೆ, ಕನಿಷ್ಠ ತೇವಾಂಶ ಶೇ.೨೮ರಿಂದ ೩೪ರ ವರೆಗೆ ಇಳಿದಿದೆ.
ಝಳ ಝಳ: ಸಾಮಾನ್ಯವಾಗಿ ಮೈಸೂರು ಮಂದಿ ೩೫ ರಿಂದ ೩೬ ಡಿಗ್ರಿ ತಾಪ ತಡೆದು ಕೊಳ್ಳುವುದೇ ಹೆಚ್ಚು. ಅದಕ್ಕಿಂತ ಹೆಚ್ಚಿದರೆ ‘ಅಯ್ಯೋ ಎಷ್ಟೊಂದ್ ಸೆಕೆ’ ಎಂದು ಪರಿತಪಿಸು ವವರೇ ಎಲ್ಲ.
ಈಗ ನಗರದಲ್ಲಿ ಅಂಥದೇ ಸ್ಥಿತಿ.ಮಟ ಮಟ ಮಧ್ಯಾಹ್ನ ರಸ್ತೆಗಳಲ್ಲಿ ಜನ ಸಂಚಾರ ವಿರಳ. ಒಳಗಿದ್ದರೂ ತಣ್ಣಗಿರುವಂತಿಲ್ಲ. ಹಗಲು-ರಾತ್ರಿ ಮನೆ, ಮಲಗುವ ಕೋಣೆಯ ಗಾಳಿ ಫಂಕಾದ ‘ವೇಗ ’ಹೆಚ್ಚಿದೆ. ಕರೆಂಟ್ ಕೈಕೊಟ್ಟರೆ ಕರಕಷ್ಟ, ಸೆಕೆಗೆ ನಿದ್ದೆ ನೈವೇದ್ದಯ. ಊಟಕ್ಕೆ ಕುಂತರೂ ‘ಬೆವರು’ ಹರಿಸುವ ಸ್ಥಿತಿ. ತಂಪು ಪಾನೀಯ, ಹಣ್ಣುಗಳಿಗೆ ಬೇಡಿಕೆ ಹೆಚ್ಚು. ‘ಬೇಸಿಗೆಯ ಆರಂಭದ ದಿನಗಳಲ್ಲೇ ನೆತ್ತಿ ಇಷ್ಟೊಂದು ಸುಟ್ಟರೆ, ಏಪ್ರಿಲ್-ಮೇ ತಿಂಗಳಲ್ಲಿ ಇನ್ನು ಹೇಗಿರಬಹುದು?’ ಎನ್ನುವುದು ಎಲ್ಲರ ಆತಂಕಭರಿತ ಪ್ರಶ್ನೆ. ‘ತಾಪಮಾನವನ್ನು ಅವಲೋಕಿಸಿದರೆ ಆತಂಕ ನಿಜ ವಾಗುವ, ‘ದಾಖಲೆ ಮಟ್ಟ’ದ ಧಗೆ ಅನು ಭವಿಸುವ ‘ಅನಿವಾರ‍್ಯ’ ಸಾಧ್ಯತೆಯೇ ಹೆಚ್ಚು.
ತಾಪಮಾನ: ಮಾರ್ಚ್‌ಗೆ ಸಂಬಂಧ ಪಟ್ಟಂತೆ ಹೆಚ್ಚು ತಾಪಮಾನ ದಾಖ ಲಾಗಿರುವುದು ೨೦೦೪ ಮಾರ್ಚ್ ೨೨ ರಂದು ೩೮ ಡಿಗ್ರಿ ಸೆಲ್ಸಿಯಸ್. ಅದರ ಹರತು, ೧೯೩೧ ಮಾ.೩೦ ರಂದು ೩೭.೮, ಅತ್ಯಂತ ಕಡಿಮೆ ೧೯೩೩ ಮಾರ್ಚ್ ೧೧ರಂದು ೧೩.೩ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
೧೯೮೭ರಿಂದ ೨೦೦೯ರ ವರೆಗಿನ ತಾಪಮಾನ ಪಟ್ಟಿಯಂತೆ ತಿಂಗಳ ಸರಾಸರಿ ತಾಪಮಾನ ಮಾರ್ಚ್‌ನಲ್ಲಿ ೩೪, ಏಪ್ರಿಲ್‌ನಲ್ಲಿ ೩೪.೮, ಮೇನಲ್ಲಿ ೩೩.೮ ಡಿಗ್ರಿ ಸೆಲ್ಸಿಯಸ್. ತಿಂಗಳ ಸರಾಸರಿ ಹಗಲಿನ ಕಡಿಮೆ ತಾಪಮಾನ ಡಿಸೆಂಬರ್‌ನಲ್ಲಿ ೨೭.೧, ನವೆಂಬರ್‌ನಲ್ಲಿ ೨೮.೪ ಡಿಗ್ರಿ ಸೆಲ್ಸಿಯಸ್.
ತಿಂಗಳ ಸರಾಸರಿ ರಾತ್ರಿ ಉಷ್ಣಾಂಶ-ಏಪ್ರಿಲ್‌ನಲ್ಲಿ ೨೦.೮,ಮೇ ತಿಂಗಳಲ್ಲಿ ೨೦.೪ ಡಿಗ್ರಿ ಸೆಲ್ಸಿಯಸ್.
ಹಗಲಿನ ಉಷ್ಣಾಂಶ ಹೆಚ್ಚು ದಾಖ ಲಾಗಿರುವುದು ೨೦೦೩ ಮೇ ೩೧ರಂದು ೩೯.೦೫ ಡಿಗ್ರಿ ಸೆಲ್ಸಿಯಸ್ ಮತ್ತು ಅದೇ ಜೂನ್ ೧ರಂದು ೩೮.೦೫ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾತ್ರಿ ಯಲ್ಲಿ ಸರಾಸರಿ ಕಡಿಮೆ ಉಷ್ಣಾಂಶ ಡಿಸೆಂಬರ್‌ನಲ್ಲಿ ೧೩.೮, ಜನವರಿಯಲ್ಲಿ ೧೪.೫ ಡಿಗ್ರಿ ಸೆಲ್ಸಿಯಸ್. ಅತ್ಯಂತ ಕಡಿಮೆ ದಾಖಲಾದ ದಿನ ೨೦೦೭ ನವೆಂಬರ್ ೨೬ ಮತ್ತು ೨೦೦೭ ಡಿ.೧ರಂದು ೯ ಡಿಗ್ರಿ ಸೆಲ್ಸಿಯಸ್.

ಕನ್ನಡ ಸಾರ್ವಭೌಮ ಭಾಷೆಯಾಗಲು ಪೂರಕ ವಾತಾವರಣ ನಿರ್ಮಿಸಿ: ದೇಜಗೌ

ಮೈಸೂರು ವಿವಿ ಪರೀಕ್ಷಾಂಗ ವಿಭಾಗದ ಪದಕ ಗೋಲ್ ಮಾಲ್

ಇನ್ನೂ ಹಸಿಯಾಗಿರುವ ವನ್ಯಜೀವಿಗಳ ಹೆಜ್ಜೆಗುರುತು

'ನಮ್ಮೂರಿನಲ್ಲಿ ಗಣಿಗಾರಿಕೆ ಬೇಡ'

ಸಂಸ್ಕಾರ ಮರೆತರೆ ದೇಶವನ್ನು ಮರೆತಂತೆ: ಗೀತಾ ಮಂದಣ್ಣ

ಜಾತಿ ಪದ್ದತಿ, ಅಸ್ಪೃಶ್ಯತೆ ನಿವಾರಣೆಗೆ ಆರ್ಥಿಕ ಅಭಿವೃದ್ದಿ ಪರಿಹಾರ

ಬಜೆಟ್ ನಲ್ಲಿ ಗಡಿ ಜಿಲ್ಲೆಯತ್ತ ಚಿತ್ತ ಹರಿಸಿದ ಮುಖ್ಯಮಂತ್ರಿ

ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಣೆ: ಜನತೆ ಫುಲ್ ಖುಷ್

ಸಾಹಿತ್ಯದ ವರ್ಗೀಕರಣ ಒಳ್ಳೆಯ ಬೆಳವಣಿಗೆಯಲ್ಲ: ಗೀತಾ ಮಂದಣ್ಣ

ಭ್ರಷ್ಟಾಚಾರಕ್ಕೆ ಸಮಾಜದ ಧೋರಣೆ ಕಾರಣ


ಮುಕ್ತವಿವಿ ಘಟಿಕೋತ್ಸವದಲ್ಲಿ ಲೋಕಾಯುಕ್ತ ‘ದಾಳಿ’...
ವಿಕ ಸುದ್ದಿಲೋಕ ಮೈಸೂರು
ಭ್ರಷ್ಟಾಚಾರ ದೇಶವನ್ನು ಈ ಪ್ರಮಾಣದಲ್ಲಿ ಆವರಿಸಲು ಸಮಾಜ ಈ ಬಗ್ಗೆ ಹೊಂದಿರುವ ಧೋರಣೆಯೇ ಮುಖ್ಯ ಕಾರಣ ಎಂದು ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ  ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಮುಕ್ತ ವಿವಿ ೧೦ನೇ ಘಟಿಕೋತ್ಸವದಲ್ಲಿ ಗುರುವಾರ ‘ಘಟಿಕೋತ್ಸವ ಭಾಷಣ’ ಮಾಡಿದ ಅವರು, ಸಮಾಜ ನ್ಯಾಯ-ಅನ್ಯಾಯದ ಸಂಪತ್ತಿನ ನಡುವಿನ ವ್ಯತ್ಯಾಸ ತಿಳಿಯದೆ ಸಂಪತ್ತುಳ್ಳವರೇ ‘ಯಶಸ್ವಿ ಜನ ’ಎಂಬ ತೀರ್ಮಾನಕ್ಕೆ ಬಂದಿರುವುದೇ ಭ್ರಷ್ಟಾಚಾರ ಹೆಚ್ಚಾಗಲು ಕಾರಣ ಎಂದರು.
ನ್ಯಾಯಯುತ ಸಂಪತ್ತು ಯಾವುದು,ಅನ್ಯಾಯದಿಂದ ಗಳಿಸಿದ್ದು ಯಾವುದು ಎಂಬುದನ್ನು ಸಮಾಜ ವಿವೇಚಿಸಿ,ತನ್ನ ಧೋರಣೆಯನ್ನು ಸರಿಪಡಿಸಿಕೊಂಡು ‘ಅನ್ಯಾಯಮಾರ್ಗಿ’ಗಳನ್ನು ನಿರಾಕರಿಸುವವರೆಗೆ ಭ್ರಷ್ಟಾಚಾರವನ್ನು ಹೋಗಲಾಡಿಸಲಾಗದು ಎಂದು ಪ್ರತಿಪಾದಿಸಿದರು.
ದೇಶದ ವಾಸ್ತವ ‘ನೋವು’,ಹೊಸ ಪದವೀಧರರು ಭವಿಷ್ಯದಲ್ಲಿ ತಳೆಯಬೇಕಾದ ‘ಭರವಸೆಯ ನಡೆ ’ಗಳ ಕುರಿತು ತಮ್ಮ ಮಾತನ್ನು ಕೇಂದ್ರೀಕರಿಸಿದ ಲೋಕಾಯುಕ್ತರು, ನೇರ, ಹರಿತ, ಪ್ರೇರಣದಾಯಕ ನುಡಿಗಳ ಮೂಲಕ ಪ್ರಾಮಾಣಿಕತೆಯ ‘ದೀಕ್ಷೆ’ ನೀಡಿದರು. ‘ಹಿರಿಯರ ಭ್ರಷ್ಟತೆ ’ಕುರಿತು ಸಾತ್ವಿಕ ವಾಗ್ದಾಳಿ ಮಾಡುತ್ತಲೇ,ಯುವ ಜನರು ದೇಶದ ಭವಿಷ್ಯ-ಬೆಳಕಾಗಬೇಕು ಎಂದು ಸಾರಿ ಹೇಳಿದರು. ಅವರ ಮಾತಿನ ಮುಖ್ಯಾಂಶ.
ಸಂಪತ್ತಿನತ್ತ ಮರುಳು ಓಟ: ಸಂಪತ್ತು ಗಳಿಕೆ ಬದುಕಿನ ಗುರಿಗಳಲ್ಲಿ ಒಂದಷ್ಟೇ. ನ್ಯಾಯ,ನೀತಿ ಮಾರ್ಗದಲ್ಲಿ ಗಳಿಸಿದ ಸಂಪತ್ತಿಗೆ ಪಾಪದ ಕಳಂಕವಿರದು. ಗಳಿಸಿದ್ದನ್ನು ಇಲ್ಲದವರ ಜತೆ ಹಂಚಿಕೊಳ್ಳುವುದೇ ಸದ್ಗುಣ. ಭಷ್ಟತೆ ಕೇವಲ ಅಧಿಕಾರಶಾಹಿ ಮತ್ತು ರಾಜಕೀಯದಲ್ಲಿಲ್ಲ. ವೈದ್ಯ,ವಕೀಲ,ತಂತ್ರಶಾಸ್ತ್ರಜ್ಞ ಸೇರಿದಂತೆ ಎಲ್ಲರೂ ಭ್ರಷ್ಟರಾಗುತ್ತಿದ್ದಾರೆ. ಸಂಪತ್ತಿಗಾಗಿ ನಡೆದಿರುವ ಈ ಮರುಳು ಓಟದಲ್ಲಿ ನೀತಿ ನಿಯಮಗಳಿಲ್ಲ. ನೀವೂ ಅದೇ ಹಾದಿಯನ್ನು ತುಳಿಯಬೇಡಿ.
ಬದಲಾದ ಮೌಲ್ಯಗಳು: ಕೆಲ ದಶಕಗಳಲ್ಲಿ ನಮ್ಮ ಸಮಾಜದ ಮೌಲ್ಯಗಳು ಬದಲಾಗಿವೆ. ನನ್ನ ತಲೆಮಾರಿನವರು ಸಂಪತ್ತಿನ ಮೂಲದ ಗೊಡವೆಗೆ ಹೋಗದೆ ಅದರ ಆರಾಧನೆಯಲ್ಲಿದ್ದರು. ಹೇಗಾದರೂ ಸಂಪಾದಿಸುವ ಆತುರದ ಪರಿಣಾಮ, ಪ್ರಾಮಾಣಿಕ ರಾಷ್ಟ್ರಗಳ ಸಾಲಿನಲ್ಲಿ ಭಾರತ ಚಿಂತಾಜನಕ ಸ್ಥಾನದಲ್ಲಿದೆ.
ವಿಪ್ಲವ ಪರ್ವ: ಪ್ರಸ್ತುತ ಸಮಾಜ ವಿಪ್ಲವ ಪರ್ವವನ್ನು ಹಾದು ಹೋಗುತ್ತಿದೆ.ನಮ್ಮನ್ನು ಆಳುವಂಥ, ಮಾರ್ಗದರ್ಶನ ನೀಡುವಂಥ ಮುತ್ಸದ್ಧಿಗಳಿಲ್ಲ.ರಾಜಕಾರಣಿಗಳು ಅಧಿಕವಾಗಿದದರೂ ಮುತ್ಸದ್ಧಿಗಳ ಕೊರತೆ ಇದೆ. ಧರ್ಮ,ಜಾತಿ,ಶ್ರೀಮಂತಿಕೆ,ಬಡತನದ ಆಧಾರದ ಮೇಲೆ ಸಮಾಜ ಹರಿದು ಹಂಚಿಹೋಗಿದೆ. ಅದ್ಭುತ ಸಂವಿಧಾನ ಜಾರಿಯಾಗಿ ೬೦ ವರ್ಷವಾದರೂ ನಾಗರಿಕರಿಗೆಲ್ಲ ಸಾಮಾಜಿಕ,ಆರ್ಥಿಕ ನ್ಯಾಯ ,ನಂಬಿಕೆ-ಆರಾಧನೆಯ ಸ್ವಾತಂತ್ರ್ಯವನ್ನು ನೀಡಲಾಗಿಲ್ಲ .ಸ್ಥಾನಮಾನ -ಅವಕಾಶಗಳ  ಸಮಾನತೆ ಸಾಧಿಸುವುದೂ ಸಾಧ್ಯವಾಗಿಲ್ಲ. ಆದರೆ, ಸಮಾಜವನ್ನು ಛಿದ್ರಗೊಳಿಸುವ ಷಡ್ಯಂತ್ರಕ್ಕೆ ಬಲಿಯಾಗಬೇಡಿ. ಇಡೀ ಮಾನವತೆಯನ್ನು ಒಂದು ಧರ್ಮವಾಗಿ ನೋಡಿ. ಸಮಾಜದ ಏಕತೆಗಾಗಿ ದುಡಿಯಿರಿ ಎಂದು ಯವಜನರಿಗೆ ಸಲಹೆ ನೀಡಿದರು.
ದೇಶದಲ್ಲಿ ಹಸಿವಿನಿಂದ ಜನ ಬಳಲುವ ಪರಿಸ್ಥಿತಿಯಲ್ಲಿ ವೈಜ್ಞಾನಿಕ ಮತ್ತು ಪರಮಾಣು ಕ್ಷೇತ್ರದಲ್ಲಿನ ನಮ್ಮ ಸಾಧನೆಗೆ ಬೆಲೆಯೇ ಇರದು. ಬಡತನ ನಿವಾರಣೆ ಹಾಗೂ ಮನುಷ್ಯನ ಮೂಲ ಅಗತ್ಯಗಳನ್ನು ದಕ್ಕಿಸುವುದು ಮೊದಲನೇ ಆದ್ಯತೆಯಾಗಬೇಕು  ಎಂದು  ಪ್ರತಿಪಾದಿಸಿದರು.
ನೀವೇ ಭವಿಷ್ಯ: ನೀವೇ ಈ ರಾಷ್ಟ್ರದ ಭವಿಷ್ಯ.ರಾಷ್ಟ್ರದ ಸೂತ್ರವನ್ನು ನೀವು ಹಿಡಿಯಬೇಕು.ಅದಕ್ಕಾಗಿ ಮೌಲ್ಯಾಧರಿತ,ಸತ್ಪಜೆಗಳಾಗಲು ಶ್ರಮವಹಿಸಿ. ಅಸಮಾನತೆಯನ್ನು ತೊಡೆದುಹಾಕಿ,ಹಸಿವು-ಕಣ್ಣೀರು ಇಲ್ಲದ ಸಮಾಜ ನಿರ್ಮಾಣಕ್ಕೆ ಸಹಾಯ ಮಾಡಿ. ‘ಎಷ್ಟೇ ಕಾರ‍್ಯಬಾಹುಳ್ಯದಲ್ಲೂ ಸಾಮಾಜಿಕ ಸಮಸ್ಯೆಗಳ ಕಡೆ ಲಕ್ಷ್ಯಕೊಡಿ.ನಿಮ್ಮ ದನಿಯನ್ನು ನೀವು ಗುರಿಯಾಗಿ ಕೇಳಿಸಿ. ಅಂದಮಾತ್ರಕ್ಕೆ ದುಂಡಾವರ್ತಿಯಾಗಬಾರದು. ಆಲೋಚನೆಯ ಸಮಗ್ರತೆಯಿಂದ, ನ್ಯಾಯಯುತವಾದ ಉದ್ದೇಶಗಳಿಗೆ ದನಿಕೊಡಿ’ ಎಂದರು.

ಲೋಕಾಯುಕ್ತ ‘ನ್ಯಾಯ’
*ಮುಕ್ತವಿವಿ ಘಟಿಕೋತ್ಸವದಲ್ಲಿ ಲೋಕಾಯುಕ್ತ ಸಂತೋಷ್ ಹೆಗ್ಡೆ ‘ಮುಕ್ತ ’ಚಿಂತನೆ.
-ಶ್ರೇಷ್ಠತೆಯನ್ನು ನಾವು ನಿರೀಕ್ಷಿಸುವುದಾದರೆ ಅಂಥ ಶ್ರೇಷ್ಠತೆಯನ್ನು ಹೊಂದಲು ಸಮರ್ಪಕವಾದ ವಾತಾವರಣವನ್ನು ನಿರ್ಮಿಸಬೇಕು.
-ನಿದ್ರಿಸುವುದಕ್ಕೆ ಮೊದಲು ಕ್ರಮಿಸುವ ದೂರ ಬಹಳವಿದೆ.(ಅಮೆರಿಕ ಕವಿ ರಾಬರ್ಟ್ ಫ್ರಾಸ್ಟ್ ಹೇಳಿಕೆ ಉಲ್ಲೇಖಿಸಿ)ನಿಮ್ಮ ಪ್ರಯಾಣದಲ್ಲಿ ನೀವು ಮುಂದುವರಿದಂತೆ  ಅನೇಕ ಘಟನೆಗಳು ಎದುರಾಗಬಹುದು.ಧೈರ್ಯ,ಕೆಚ್ಚಿನಿಂದ ಅವುಗಳನ್ನು ಎದುರಿಸಿ.
-ನಿಮ್ಮ ಯಶಸ್ಸಿನ ಸುಖವನ್ನು ಅನುಭವಿಸಿ.ಸೋಲನ್ನು ಧೃತಿಗೆಡದೆ ಸ್ವೀಕರಿಸಿ.ಯಶಸ್ಸನ್ನು ಹಂತಹಂತವಾಗಿ ಯೋಜಿಸಿ.ಮಹತ್ವಾಕಾಂಕ್ಷೆಯನ್ನು ಒಂದೇ ಬಾರಿಗೆ ಎತ್ತರದಲ್ಲಿ ಸ್ಥಾಪಿಸಬೇಡಿ. ಏಕೆಂದರೆ ಏಣಿಯ ಕಾಲುಗಳನ್ನು ಒಂದು ಬಿಟ್ಟು ಒಂದು ಜಿಗಿಯಲಾಗುವುದಿಲ್ಲ.ಹಾಗೆ ಮಾಡಿದರೆ ನಿರಾಶೆಯ ಸಾಧ್ಯತೆಯೇ ಹೆಚ್ಚು.
-ಭವಿಷ್ಯತ್ತಿನೆಡೆ ಮುಖಮಾಡಿ ನಡೆಯುವಾಗ ಯಶಸ್ಸು ನಿಮ್ಮ ಪಾಲಿಗೆ ದಕ್ಕದಿದ್ದರೆ ಹಿಂತಿರುಗಿ ನೋಡಿ.ನಿಮಗಿಂತ ಎಷ್ಟೋ ಪಾಲು ಪ್ರತಿಭಾವಂತರಾದವರು ಹಿಂದೆ ಬಿದ್ದಿರುವುದು ಕಾಣುತ್ತದೆ. ಆದ್ದರಿಂದ ನಿರಾಶೆ ನಿಮ್ಮ ಧೈರ್ಯಗೆಡಿಸಲು ಅವಕಾಶ ನೀಡಬೇಡಿ.
-ನಾಳಿನ ಮಹತ್ವಾಕಾಂಕ್ಷೆಯ ಹಿನ್ನೆಲೆಯಲ್ಲಿ ಇಂದನ್ನು ಮರೆಯದಿರಿ. ನಿಮ್ಮ ಇವತ್ತನ್ನು ಸುಖಪಡಿ.ನಾಳೆ ಆಗುವುದು ಆಗುತ್ತದೆ.

ಬಜೆಟ್:ಘೋಷಣೆಯ ‘ಗಾಳಿಪಟ’


‘ಫಲ’ನೀಡದ ಕೊಡುಗೆಗಳು
ಪಿ.ಓಂಕಾರ್
ಕಳೆದ ರಾಜ್ಯ ಬಜೆಟ್ ಸಂದರ್ಭ ಶೋಭಾ ಕರಂದ್ಲಾಜೆ  ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಆಯವ್ಯಯದಲ್ಲಿ ಮೈಸೂರು ‘ಶೋಭಿಸಿದ್ದು’ ಕಡಿಮೆ. ದೇಗುಲ, ಆಸ್ಪತ್ರೆ,ಕೆರೆ,ಕಲೆಯ ಅಭಿವೃದ್ಧಿ ಬಾಬ್ತಿನಲ್ಲಿ ಒಂದಷ್ಟು ಕೋಟಿಗಳ ‘ಅನಿರೀಕ್ಷಿತ ’ಕೊಡುಗೆ ಪ್ರಾಪ್ತವಾಗಿದ್ದಷ್ಟೇ ಸಮಾಧಾನ.ಈಗ ಮತ್ತೊಂದು ಬಜೆಟ್‌ಗೆ ಎದುರಿಗಿದೆ. ಹಿಂದಿನ ಘೋಷಣೆ-ಭರವಸೆಗಳು ಫಲ ಕೊಟ್ಟಿವೆಯಾ ಎಂದು ‘ಹಿನ್ನೋಟ’ಬೀರಿದರೆ  ಬೇಸರವೇ ಉತ್ತರ.
ಕುಕ್ಕರಹಳ್ಳಿ ಕೆರೆ: ೨೦೦೮ರ ಬಜೆಟ್‌ನಲ್ಲಿ ನೀಡಿದ್ದ ೧ಕೋಟಿ ಖರ್ಚಾಗದಿದ್ದರೂ ಕಳೆದ ಬಜೆಟ್‌ನಲ್ಲಿ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಇನ್ನೆರಡು ಕೋಟಿ ರೂ.ಘೋಷಣೆ. ಅದಾಗಿ ವರ್ಷ ಕಳೆದರೂ ಕೆರೆ ಆವರಣದಲ್ಲಿ ‘ಗಬ್ಬು ನಾತ ’ಕಡಿಮೆಯಾಗಿಲ್ಲ.ಬೇಲಿ-ಬೀಗ ಹಾಕಿ,ಸಾರ್ವಜನಿಕ  ಪ್ರವೇಶವನ್ನು ಬೆಳಗ್ಗೆ,ಸಂಜೆಗೆ ನಿರ್ಬಂಧಿಸಿದ್ದಷ್ಟೇ ಮೈಸೂರು ವಿವಿ ಕೈಗೊಂಡ ‘ಸುಧಾರಣೆ ’.ಯೋಜನೆ ರೂಪಿಸಲಾಗಿದೆ,ಹಣ ಬಂದಿದೆ ಎಂದು ‘ಕತೆ ’ ಹೇಳಿದರೂ ಕಾರ‍್ಯಪ್ರಗತಿ ದಾಖಲಾಗಿಲ್ಲ.
ರಂಗಾಯಣ: ಕರ್ನಾಟಕ ನಾಟಕ ರಂಗಾಯಣದ ಅಭಿವೃದ್ಧಿಗೆ ನೀಡಿದ್ದ ೧ಕೋಟಿ ರೂ.ಗೂ ‘ಸದ್ಗತಿ’ ಸಿಕ್ಕಿಲ್ಲ.ಮೊದಲು ‘ನಿರ್ದೇಶಕರಿಲ್ಲ’ದ ಕೊರಗು.‘ಹೆಚ್ಚು ದಿನ ತಾಳಿಕೊಳ್ಳಲಿಲ್ಲ’ ಎಂಬುದು ಈಗಿನ ಬೇಸರ. ವಿವಿಧ ಅಭಿವೃದ್ಧ ಕೆಲಸ ಕೈಗೊತ್ತಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರೂ ಚಾಲನೆ ಸಿಕ್ಕಿಲ್ಲ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಮಹಾನಾಟಕವಾಗಿ ರಂಗಕ್ಕೆ ಬರುತ್ತಿರುವುದು ಸಂತಸದ ಬೆಳವಣಿಗೆ.
ಆಸ್ಪತ್ರೆಗಳ ಕತೆ: ಕೆ.ಆರ್.ಆಸ್ಪತ್ರೆಯಲ್ಲಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ,ಜಯದೇವ ಹೃದ್ರೋಗ ಆಸ್ಪತ್ರೆಯ ಶಾಖೆ ತೆರೆಯಲು ೧೦ ಕೋಟಿ ರೂ.ಘೋಷಣೆ. ಇತ್ತೀಚೆಗಷ್ಟೇ ಕ್ಯಾನ್ಸರ್ ಆಸ್ಪತ್ರೆ ಶಾಖೆ ಆರಂಭ.‘ಹೃದಯ’ಕ್ಕೆ ಸ್ಪಂದಿಸುವುದು ಇನ್ಯಾವಾಗಲೋ ಖಚಿತವಿಲ್ಲ.ಸರಕಾರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲು ೨ ಕೋಟಿ ರೂ.ಘೋಷಣೆ ಅಷ್ಟಕ್ಕೇ ಸೀಮಿತ.ವಿದ್ಯಾಲಯ ಆಡಳಿತ ಉದ್ದೇಶಿತ ಕಟ್ಟಡದ ನೀಲನಕ್ಷೆ, ಅಂದಾಜು ಮೊತ್ತದ ವಿವರವನ್ನೊಳಗೊಂಡ ಪ್ರಸ್ತಾವನೆಯನ್ನು ಸಲ್ಲಿಸಿ ತಿಂಗಳುಗಳೇ ಸಂದರೂ ಹಣ ಬಿಡುಗಡೆ ಆಗಿಲ್ಲ. ಪ್ರತಿಕ್ರಿಯೆಯೂ ಬಂದಿಲ್ಲ.
ಕ್ರೀಡಾಂಗಣ,ಟ್ರ್ಯಾಕ್: ಕ್ರೀಡಾಂಗಣ ನವೀಕರಣ,ಸಿಂಥೆಟಿಕ್ ಟ್ರ್ಯಾಕ್ ಸ್ಥಾಪನೆಗೆ ೧೦ ಕೋಟಿ ರೂ.ಘೋಷಿಸಿದ್ದರೂ ಇಂಥ ಯಾವುದೇ ಅಭಿವೃದ್ಧಿಗೆ ಚಾಮುಂಡಿವಿಹಾರ ಕ್ರೀಡಾಂಗಣ ಸಾಕ್ಷಿಯಾಗಿಲ್ಲ.೬ ಕೋಟಿರೂ. ಅಂದಾಜು ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್,೩ ಕೋಟಿ ರೂ.ವೆಚ್ಚದಲ್ಲಿ ಆಸ್ಟ್ರೋಟರ್ಫ್ ಹಾಕಿ ಮೈದಾನ  ನಿರ್ಮಾಣಕ್ಕೆ ಮತ್ತೆ ಪ್ರಸ್ತಾವನೆ  ಸಲ್ಲಿಸಿರುವುದು ವಿಶೇಷ.
ದೇವರಿಗೂ ಹಣವಿಲ್ಲ: ನಂಜನಗೂಡು ತಾಲೂಕು ತಗಡೂರು ಅಂಕನಾಥೇಶ್ವರ ದೇಗುಲ ಮತ್ತು ಕಾರ್ಯಸಿದ್ಧೇಶ್ವರ ಬೆಟ್ಟ ಅಭಿವೃದ್ಧಿಗೆ ತಲಾ ೨೫ ಲಕ್ಷ ರೂ.ಬಿಡುಗಡೆಯಾಗಿದೆ.ಆದರೆ,ಎಚ್.ಡಿ.ಕೋಟೆ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನ ದ ಅಭಿವೃದ್ಧಿಗೆ ದೊರಕಿದ್ದ ೧ಕೋಟಿ ರೂ. ಭರವಸೆ ಈಡೇರಿಲ್ಲ.
ಸಂಗೀತದಲ್ಲಿವಿಷಾದ: ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಪಾಲಿಗೆ ೫ ಕೋಟಿ ರೂ.ಘೋಷಿಸಿಯೂ ಪ್ರಯೋಜನವಿಲ್ಲ. ೨೦೦೮ರ ಬಜೆಟ್ ಘೋಷಣೆ ಬಾಬ್ತು ೫ ಕೋಟಿ ರೂ.ಬಂದರೂ ಬಳಸಿಕೊಳ್ಳಲು ಭೂಮಿ ಇಲ್ಲ.ವರಕೋಡು ಬಳಿ ನೀಡಿದ್ದ ೧೦೦ ಎಕರೆ ಭೂಮಿ ಕುರಿತು  ಅರಣ್ಯ ಇಲಾಖೆ ತಕರಾರು ಎತ್ತಿರುವುದರಿಂದ ವಿವಿ ಮತ್ತೆ ‘ಬಾಲಗ್ರಹ ಪೀಡಿತ’.
ಕಾವಾ:ಸೂಕ್ತ ಜಾಗ,ಮೂಲ ಸೌಲಭ್ಯಗಳಿಂದ ಸೊರಗುತ್ತಿರುವ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ)ಗೆ  ‘ಪ್ರಾಣ ವಾಯು’ ಸ್ವರೂಪಿಯಾದ ೨ ಕೋಟಿ ರೂ. ಘೋಷಣೆ ಇನ್ನೂ ನಿಜವಾಗಿಲ್ಲ.ಅಕಾಡೆಮಿ ಅಗತ್ಯ ಯೋಜನೆ-ಪ್ರಸ್ತಾವನೆಗಳನ್ನು ಸಲ್ಲಿಸಿತ್ತಾದರೂ ಈಗ ೧ಕೋಟಿ ರೂ.ಬಿಡುಗಡೆಗೆ ಚಾಲನೆ ಸಿಕ್ಕಿದೆ. ಕನಸಿನಹಕ್ಕಿ:ಸಿದ್ಧ ಉಡುಪು ಸಮುಚ್ಚಯಗಳ ನಿರ್ಮಾಣಕ್ಕೆ ಉದ್ದೇಶಿತ ನಗರಗಳಲ್ಲಿ ಮೈಸೂರು ಸೇರಿತ್ತಾದರೂ ಯಾವುದೇ ಸುಳಿವಿಲ್ಲ.ವಿಮಾನ ನಿಲ್ದಾಣ ಲಘ ವಿಮಾನ ಹಾರಾಟಕ್ಕೆ ಸಜ್ಜಾಗಿದೆಯಾದರೂ,ಕಂಪನಿಗಳ ಬೇಡಿಕೆಗಳಿಗೆ ಸರಕಾರ ಸ್ಪಂದಿಸದ ಕಾರಣ ’ಕನಸಿನ ಹಕ್ಕಿ’ ಹಾರಾಟ ವಿಳಂಭವಾಗುತ್ತಿದೆ.
ಗೋಗ್ರಾಮ: ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶಿಸಿದ್ದ ‘ಗೋ ಗ್ರಾಮ’ಯೋಜನೆಯ ಸದ್ದು-ಸುದ್ದಿಯೂ ಇಲ್ಲ.‘ಸ್ವಾಮಿ ವಿವೇಕಾನಂದ ಕೇಂದ್ರ’ ಸ್ಥಾಪನೆಗೆ  ೨೦೦೮ರ ಬಜೆಟ್‌ನಲ್ಲಿಯೇ ೫ ಕೋಟಿ ರೂ. ಘೋಷಿಸಲಾಗಿತ್ತಾದರೂ ಚಾಲನೆ ಸಿಕ್ಕಿಲ್ಲ.ಹಣ ಬಿಡುಗಡೆಯಾಗಿದೆಯಾದರೂ ತೊಡರುಗಾಲಾಗಿರುವ ‘ಸ್ಥಳೀಯ ರಾಜಕೀಯ’ಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಡಳಿತ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ.
ಉಳಿದಂತೆ,ನಗರಪಾಲಿಕೆಗೆ ನೀಡಿದ ೧೦೦ ಕೋಟಿ ರೂ.ವಿಶೇಷ ಅನುದಾನದಡಿ (೨೦೦೮ ಘೋಷಣೆ)ಕಾಮಗಾರಿಗಳು ಪ್ರಗತಿಯಲ್ಲಿವೆಯಾದರೂ ವೇಗ ಆಮೆಗಿಂತ ನಿಧಾನ. ಘೊಷಣೆಯಂತೆ  ದಸರಾಗೆ ೧೦ ಕೋಟಿ ರೂ.ಬಿಡುಗಡೆ ಮಾಡಿ,‘ಹುಡಿ ಹಾರಿಸಲಾಗಿದೆ ’.

ಮಾತು ಮರೆತ ಮಂಡ್ಯದ ಮಗ
ಮತ್ತೀಕೆರೆ ಜಯರಾಮ್
ಮಾತು ಮಾತಿಗೂ ಮಂಡ್ಯದ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಯಡಿಯೂರಪ್ಪ  ಕಳೆದ ಎರಡೂ ಬಜೆಟ್‌ಗಳಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂಥ ಕೊಡುಗೆ ನೀಡಿಲ್ಲ.ಮೊದಲ ಬಜೆಟ್‌ನಲ್ಲಂತೂ ಮರತೇಬಿಟ್ಟಿದ್ದರು. ಎರಡನೇ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಕೊಸರಿನಷ್ಟು ಮೊತ್ತವೂ ಬಿಡುಗಡೆಯಾಗಿಲ್ಲ.
ಕಳೆದ ಬಾರಿ ಸರಕಾರಿ ಸ್ವಾಮ್ಯದ ಮೈಷುಗರ್ ಪುನಶ್ಚೇತನಕ್ಕೆ ೫೦ ಕೋಟಿ ರೂ. ಘೋಷಣೆ. ಇಲ್ಲಿಯವರೆಗೆ ೧೦ ಕೋಟಿ ರೂ.ಬಿಡುಗಡೆಯಾಗಿದೆ.ಉಳಿದ ಹಣಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಕಡತ ಹಿಡಿದು ವಿಧಾನಸೌಧಕ್ಕೆ ಅಲೆಯುತ್ತಿದೆ.
ಕೆಆರ್‌ಎಸ್‌ನ ಸಣ್ಣಪುಟ್ಟ ದುರಸ್ತಿಗೆ ೫ ಕೋಟಿ ರೂ.,ಹುಟ್ಟೂರು ಬೂಕನಕೆರೆ ಅಭಿವೃದ್ಧಿಗೆ ೩೦ ಕೋಟಿ ರೂ. ಮತ್ತು ಐತಿಹಾಸಿಕ ಮೇಲುಕೋಟೆಗೆ ೧ ಕೋಟಿ ರೂ. ಘೋಷಣೆಯಾಗಿತ್ತು. ಶೇ.೪೦ರಷ್ಟು ಹಣ ಬಿಡುಗಡೆ.ಕಾಮಗಾರಿ ಪ್ರಗತಿಯಲ್ಲಿದೆ.
ಮಂಡ್ಯದಲ್ಲಿ ಫುಡ್‌ಪಾರ್ಕ್ ಮತ್ತು  ಸಕ್ಕರೆ ತಂತ್ರಜ್ಞಾನ ಕೇಂದ್ರ ಸ್ಥಾಪನೆ ಸಂಬಂಧ ಎಸ್.ಎಂ. ಕೃಷ್ಣ ಅವಧಿಯ ಘೋಷಣೆ ಇನ್ನೂ ಮರೀಚಿಕೆ. ೩೦೦ ಕೋಟಿ ರೂ.ನಲ್ಲಿ ಸಮಗ್ರ ರಸ್ತೆ ಅಭಿವೃದ್ಧಿಯ ‘ಪೈಲಟ್ ಯೋಜನೆ’ ಸತ್ತು ಹೋಗಿದೆ.

ಬರಿ ಘೋಷಣೆ,ಇಲ್ಲ ಅನುಷ್ಠಾನ
ಅಜ್ಜಮಾಡ ರಮೇಶ್ ಕುಟ್ಟಪ್ಪ
ಯಡಿಯೂರಪ್ಪ ಅವರು ೪ ಬಜೆಟ್‌ನಲ್ಲಿ ಕೊಡಗಿನ ಜನತೆ ನೆನಪಿನಲ್ಲಿಟ್ಟುಕೊಳ್ಳುವ ಘೋಷಣೆ ಮಾಡಿದ್ದೇನೋ ನಿಜ.ಆದರೆ, ಅನುಷ್ಠಾನಕ್ಕೆ ಬಾರದಿರುವುದು,ಅಗ್ಗದ ಪ್ರಚಾರಕ್ಕೆ ಸೀಮಿತವಾಗಿರುವುದು ವಿಪರ‍್ಯಾಸ.
ಸ್ಮಾರಕ ಭವನ: ಜನರಲ್ ಕೆ.ಎಸ್. ತಿಮ್ಮಯ್ಯ ಜನ್ಮ ತಾಳಿದ ಮನೆ (ಸನ್ನಿಸೈಡ್)ಯನ್ನು ಸ್ಮಾರಕವನ್ನಾಗಿಸಲು ೧ ಕೋಟಿ ರೂ. ಮೊದಲ ಬಜೆಟ್‌ನಲ್ಲೇ ಘೋಷಣೆ. ೫ನೇ ಬಜೆಟ್‌ಗೆ ದಿನ ಸಮೀಪಿಸುತ್ತಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ.ನಯಾಪೈಸೆ ಹಣ ನೀಡಿಲ್ಲ. ‘ಸನ್ನಿಸೈಡ್’ ಬಿಟ್ಟುಕೊಡಲು ಆರ್‌ಟಿಒ ಕುಂಟು ನೆಪವೊಡ್ಡುತ್ತಿದೆ.
ಸಮುಚ್ಚಯ ಭವನ: ಮಡಿಕೇರಿಯಲ್ಲಿ ‘ಸುವರ್ಣ ಮಹೋತ್ಸವ ಸಮುಚ್ಚಯ ಭವನ’ ನಿರ್ಮಾಣಕ್ಕೆ ೧.೫೦ ಕೋಟಿ ರೂ.೨೦೦೬ ರ ಘೋಷಣೆ. ಆದರೆ,ಇನ್ನೂ ಭವನಕ್ಕೆ ಜಾಗ ಗುರುತಿಸಿಲ್ಲ..ಪಿಯು ಕಾಲೇಜು ಸಮೀಪದ ಪೈಸಾರಿ ಜಾಗದಲ್ಲಿ ಹಿಂದೊಮ್ಮೆ ಭೂಮಿ ಪೂಜೆ ನೆರವೇರಿದರೂ ಎದುರಾದ ಅಡೆತಡೆ ಬಗೆಹರಿದಿಲ್ಲ.
ಹಾಕಿ ಮೈದಾನ: ಸಿಂಥೆಟಿಕ್ ಹಾಕಿ ಮೈದಾನ ನಿರ್ಮಾಣಕ್ಕೆ ೨ ಕೋಟಿ ರೂ. ಕಳೆದ ಬಜೆಟ್ ಘೋಷಣೆ. ಅಶ್ವಿನಿ ನಾಚಪ್ಪ ತಮ್ಮ ‘ಕಾಲ್ಸ್ ವಿದ್ಯಾಸಂಸ್ಥೆ ’ಮೈದಾನ ದಲ್ಲಿ ಅಳವಡಿಸಲು ಮಂಜೂರು ಪಡೆದದ್ದು ವಿವಾದಕ್ಕೆ ಈಡಾಗಿ,ಸರಕಾರ ಇತ್ತೀಚೆಗೆ ಆದೇಶ ಹಿಂಪಡೆದಿದೆ. ಈಗ ಪೊನ್ನಂಪೇಟೆ ಪಿಯು ಕಾಲೇಜು ಮೈದಾನದಲ್ಲಿ ಅಳವಡಿಸುವ ಕುರಿತು ಚರ್ಚೆ ನಡೆದಿದೆ.
ಸಾಂಸ್ಕೃತಿಕ ಕೇಂದ್ರ: ಕೊಡವ ಸಮಾಜಗಳ ಒಕ್ಕೂಟದಿಂದ ಬಾಳುಗೋಡಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೊಡವ ಸಾಂಸ್ಕೃತಿಕ ಕೇಂದ್ರಕ್ಕೆ ಕಳೆದ ಬಜೆಟ್‌ನಲ್ಲಿ ೧ ಕೋಟಿ ರೂ.ಘೋಷಣೆ. ಅನುದಾನ ಪಡೆಯುವ ಪ್ರಯತ್ನವನ್ನು  ಒಕ್ಕೂಟ ಮುಂದುವರಿಸಿದೆ.
ವಿಶೇಷ ಅನುದಾನ: ೨೦೦೮ರಲ್ಲಿ ಬಜೆಟ್ ಮೇಲಿನ ಚರ್ಚೆವೇಳೆ ಎಂ.ಸಿ.ನಾಣಯ್ಯ ಅವರ ಪ್ರಸ್ತಾಪಕ್ಕೆ ಸ್ಪಂದಿಸಿದ ಸಿಎಂ,೨೫ ಕೋಟಿ ರೂ. ವಿಶೇಷ ಅನುದಾನ  ಘೋಷಿಸಿದರು.‘ಆ ಕಾಮಗಾರಿ-ಈ ಕಾಮಗಾರಿ’ ಕೈಗೆತ್ತಿಕೊಳ್ಳಲಾಗುವುದೆಂದು ಜನಪ್ರತಿನಿಧಿಗಳು ಹೇಳುತ್ತಿದ್ದಾರಾದರೂ ಸಮರ್ಪಕ ಸದ್ಬಳಕೆ ಸಾಧ್ಯವಾಗಿಲ್ಲ.
ವಿಜ್ಞಾನ ಪಾರ್ಕ್: ವಿಜ್ಞಾನ ಪಾರ್ಕ್ ನಿರ್ಮಿಸಲು ೫೦ ಲಕ್ಷ ರೂ. ಘೋಷಣೆ. ಪಾರ್ಕ್ ಸ್ಥಾಪನೆ ಹೋಗಲಿ,ಆ ಬಗ್ಗೆ  ಚರ್ಚೆಯೂ ನಡೆಯುತ್ತಿಲ್ಲ. ಘೋಷಣೆಯನ್ನೇ ಬಹುತೇಕರು ಮರೆತಂತಿದೆ.
ಅಧ್ಯಯನ ಪೀಠ: ಮಂಗಳೂರು ವಿವಿಯಲ್ಲಿ ಕೊಡವ ಅಧ್ಯಯನ ಪೀಠ ಘೋಷಣೆ ಈಡೇರಿದೆ. ಆದರೆ, ಅಧ್ಯಯನ  ಏನು-ಎತ್ತ ಎಂಬ ಮಾಹಿತಿ ಬಹುತೇಕ ಕೊಡವರ ಅರಿವಿಗೆ ಬಂದಿಲ್ಲ. ಚಿಕ್ಕಅಳುವಾರದಲ್ಲಿ ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರ ಆರಂಭಿಸುವ ಘೋಷಣೆಯೂ ನಿಜವಾಗಿಲ್ಲ.

ಹಸಿರಾಗದ ‘ಅರಿಸಿನ’ದ ಭರವಸೆ
ಫಾಲಲೋಚನ ಆರಾಧ್ಯ
ಗಡಿ ಜಿಲ್ಲೆ ಚಾಮರಾಜನಗರಕ್ಕೆ  ಸಂಬಂಧಿಸಿದ ಅವಜ್ಞೆ ಯಡಿಯೂರಪ್ಪ ಕಾಲದಲ್ಲೂ ಮುಂದುವರಿದಿದೆ.
ಚಾಮರಾಜನಗರದಲ್ಲಿ ಅರಿಶಿನ ಸಂಸ್ಕರಣ ಘಟಕ ಹಾಗೂ ದಾಸ್ತಾನು ಗೋದಾಮು ಸ್ಥಾಪಿಸಲು ೧೦ ಕೋಟಿ ರೂ.ಅನ್ನು ಕಳೆದ ಬಜೆಟ್‌ನಲ್ಲಿ ಯಡಿಯೂರಪ್ಪ ಘೋಷಿಸಿ ಗಡಿ ಜಿಲ್ಲೆಯ ಅರಿಶಿನ ಬೆಳೆಗಾರರಲ್ಲಿ ಹರ್ಷ ಮೂಡಿಸಿದ್ದರು. ವಿಪರ್ಯಾಸವೆಂದರೆ ಇದರ ಪ್ರಾಥಮಿಕ ಹಂತದ ಕಾರ್ಯವೂ ಆರಂಭವಾಗಿಲ್ಲ.
ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿಬೆಟ್ಟಗಳನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲು ತಲಾ ೨ ಕೋಟಿ ರೂ. ಘೋಷಣೆ ಮಾಡಲಾಗಿತ್ತಾದರೂ, ಈವರೆಗೆ ಅದಕ್ಕಿಂತ ಹೆಚ್ಚಿನದು ಏನೂ ಆಗಿಲ್ಲ.
ಬಿಜೆಪಿ-ಜಾ.ದಳ ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ ಯಡಿಯೂರಪ್ಪ , ಮಲೆ ಮಹಾದೇಶ್ವರಬೆಟ್ಟದಲ್ಲಿ ಜಾನಪದ ಅಧ್ಯಯನ ಕೇಂದ್ರ ಸ್ಥಾಪಿಸಲು ೫ ಕೋಟಿ ರೂ.,ಯಡಿಯೂರು ಸಿದ್ಧಲಿಂಗೇಶ್ವರ ಜನ್ಮ ಸ್ಥಳ ಹರದನಹಳ್ಳಿ ಗ್ರಾಮದ  ಗದ್ದುಗೆ  ಅಭಿವೃದ್ಧಿಗೆ ೨ ಕೋಟಿ ರೂ. ಘೋಷಿಸಿದ್ದರು. ಈ ಪೈಕಿ ಜಾನಪದ ಅಧ್ಯಯನ ಕೇಂದ್ರದ ವಿಚಾರ  ಬಜೆಟ್ ಪ್ರತಿಯಲ್ಲೇ ಉಳಿದಿದೆ. ಹರದನಹಳ್ಳಿ ಗ್ರಾಮದಲ್ಲಿನ ಸಿದ್ದಲಿಂಗೇಶ್ವರ ಗದ್ದುಗೆ ಅಭಿವೃದ್ಧಿ ಕಾರ್ಯ ಕಳೆದ ತಿಂಗಳು ಪ್ರಾರಂಭವಾಗಿದೆ.ಮೊದಲ ಹಂತದಲ್ಲಿ ೧ ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾರ್ಯ ಭರದಿಂದ ನಡೆದಿದೆ.