ಇವರ ಬದುಕು ತಳ್ಳೋ ಮಾಡಲ್ ಗಾಡಿ

ವೇತನ ಹೆಚ್ಚಳವಿಲ್ಲದೇ ಅತಿಥಿ ಉಪನ್ಯಾಸಕರು ಹೈರಾಣ
ಕುಂದೂರು ಉಮೇಶ ಭಟ್ಟ ಮೈಸೂರು
ಇವರು ಅತಿಥಿ ಉಪನ್ಯಾಸಕರು. ಕಾಲೇಜುಗಳಲ್ಲಿ ಇವರ ಸೇವೆ ಅತಿಥಿಗಳ ರೀತಿಯದ್ದೇ. ಬರುವುದು, ಪಾಠ ಮಾಡುವುದು ಹೋಗುವುದು.
ಸಂಬಳ ಕೇಳಬೇಡ, ಪಾಠಕ್ಕೆ ಮಾಡೋದನ್ನು ಮಾತ್ರ ಮರೀಬೇಡ.. ಎನ್ನುವಂತಾಗಿದೆ ಇವರ ಸ್ಥಿತಿ. ನಮ್ಮ ಸೇವೆ ಕಾಯಂ ಆಗಿಲ್ಲ. ಸದ್ಯಕ್ಕೆ ಬದುಕು ನಡೆಸುವಷ್ಟಾದರೂ ವೇತನ ಕೊಡಿ ಎಂದು ಮೂರು ವರ್ಷದಿಂದ ಕೇಳುತ್ತಲೇ ಇದ್ದಾರೆ. ಅದು ಆಡಳಿತ ನಡೆಸುವವರ ಕಿವಿಗೆ ಬಿದ್ದೇ ಇಲ್ಲ.
ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿರುವ ಖಾಲಿ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿ ರುವವರ ಸಂಖ್ಯೆ ನಾಲ್ಕು ಸಾವಿರಕ್ಕೂ ಹೆಚ್ಚು. ಇವರೆಲ್ಲ ನೇರವಾಗಿ ಕಾಲೇಜು ಶಿಕ್ಷಣ ಇಲಾಖೆ ಆಡಳಿತ ವ್ಯಾಪ್ತಿಗೆ ಬರುತ್ತಾರೆ. ಮಾಸಿಕ ಇವರು ೫೦೦೦ ರೂ.ಗೆ ದುಡಿಯುತ್ತಿದ್ದು, ಇವರಲ್ಲಿ ಸ್ನಾತಕೋತ್ತರ ಪದವಿ, ಡಾಕ್ಟರೇಟ್. ಪಿಎಚ್‌ಡಿ, ಎಂ.ಫಿಲ್ ಪಡೆದವರಿದ್ದಾರೆ. ಈ ಮಧ್ಯೆ ಬರುವ ವೇತನವೂ ವರ್ಷಕ್ಕೆ ಒಂದೇ ಬಾರಿ.
ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವುದು ಸಂವಿಧಾನದ ಆಶಯ. ಆದರೆ ಇಲ್ಲಿ ಇದ್ಯಾವುದೂ ಅನ್ವಯವಾಗದು. ಈ ಅತಿಥಿ ಉಪನ್ಯಾಸಕರ ಬೇಡಿಕೆಯೆಂದರೆ, ಕಾಯಂ ಉಪನ್ಯಾಸಕರಷ್ಟು ಸಂಬಳ ನೀಡಬೇಡಿ. ಬದುಕಲು ಬೇಕಾದಷ್ಟಾದರೂ ಕೊಡಿ ಕೊಡಿ ಎಂಬುದು.
ಅಪ್ಪ-ಮಕ್ಕಳ ಮಿಡಿತ
ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾದ ಅವಧಿ. ಹೆಚ್ಚು ಪದವಿ ಕಾಲೇಜುಗಳ ಆರಂಭಕ್ಕೆ ಮಂಜೂರು ಮಾಡಲಾಯಿತು. ಅವುಗಳಿಗೆ ಕೆಲ ಉಪನ್ಯಾಸಕರನ್ನು ನೇಮಕ ಮಾಡಿಕೊಂಡರೂ ಬಹುತೇಕರು ಅರೆಕಾಲಿಕ ಉಪನ್ಯಾಸಕರಾದರು. ಅವರಿಗೆ ೧೯೮೫ರಿಂದ ೧೯೯೪ರವರೆಗೆ ನೀಡುತ್ತಿದ್ದ ಮಾಸಿಕ ವೇತನ ೬೦೦ ರೂ. ಮಾತ್ರ. ಉಪನ್ಯಾಸಕರು ಮನವಿ ಮಾಡಿದರೂ ವೇತನ ಹೆಚ್ಚಳವಾಗಲೇ ಇಲ್ಲ. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿ ಬರುತ್ತಿದ್ದಂತೆ ವೇತನ ದುಪ್ಪಟ್ಟು ಆಯಿತು. ಆಗ ಅರೆಕಾಲಿಕ ಉಪನ್ಯಾಸಕರಿಗೆ ೧೨೦೦ ರೂ. ಮಾಸಿಕ ವೇತನ ನಿಗದಿಯಾಯಿತು. ೨೦೦೩ರ ಹೊತ್ತಿಗೆ ವೇತನ ಹೆಚ್ಚಳ ಬೇಡಿಕೆ ವ್ಯಕ್ತವಾದಾಗ ಉಪನ್ಯಾಸಕರ ಹುದ್ದೆಯ ಹೆಸರು ಬದಲಾಯಿತು. ನ್ಯಾಯಾಲಯಕ್ಕೆ ಹೋದರೆ ಅವರ ಅನುಭವ ಆಧರಿಸಿ ಕಾಯಂ ಮಾಡಬೇಕೆಂಬ ಕಾರಣಕ್ಕೆ ಅರೆಕಾಲಿಕ ಎನ್ನುವುದನ್ನು ಅತಿಥಿ ಉಪನ್ಯಾಸಕರು ಎಂದು ಬದಲಾಯಿಸಲಾಯಿತು. ೨೦೦೪ರಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಅತಿಥಿ ಉಪನ್ಯಾಸಕರ ವೇತನ ೧೨೦೦ ರೂ.ಗಳಿಂದ ೨೦೦೦ ರೂ.ಗೆ ಏರಿತು. ನಂತರ ೨೦೦೭ರಲ್ಲಿ ಸಚಿವ ಎಚ್.ಡಿ.ರೇವಣ್ಣ ಅವರ ವಿಶೇಷ ಆಸಕ್ತಿಯ ಫಲವಾಗಿ ವೇತನ ೫ ಸಾವಿರ ರೂ. ಗೆ ಏರಿತು. ಉಪನ್ಯಾಸಕರೂ ಖುಷಿಯಾದರು.
ಹೆಣ್ಣೆ ಕೊಡೋಲ್ಲ
ವೇತನ ತಾರತಮ್ಯದಿಂದಾಗಿ ಇವರಿಗೆ ಸಾಮಾಜಿಕ ಸ್ಥಾನಮಾನವೇ ಇಲ್ಲ. ಬಹಳಷ್ಟು ಕಡೆ ಹೆಣ್ಣು ಕೊಡಲು ಒಪ್ಪರು. ಇದು ಹೊಳಲ್ಕೆರೆ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕರಾಗಿದ್ದವರ ಕಥೆ. ಅವರು ಪರಿಚಯಸ್ಥರ ಮಗಳನ್ನು ಮದುವೆ ಮಾಡಿಕೊಳ್ಳಲು ಹೋದರು. ನಿಮ್ಮ ಸಂಬಳ ಇಷ್ಟೇನಾ, ಹಾಗಾದರೆ ನಮ್ಮ ಮಗಳನ್ನು ಕೊಡೋಲ್ಲ ಎಂದು ಮುಖಕ್ಕೆ ಹೊಡೆದಂತೆಯೇ ಹೇಳಿ ಕಳುಹಿಸಿದರು. ಮುಂದೆ ಅದೇ ಅತಿಥಿ ಉಪನ್ಯಾಸಕ ಸವಾಲಾಗಿ ಸ್ವೀಕರಿಸಿ ಕೆಪಿಎಸ್‌ಸಿ ಪರೀಕ್ಷೆಯನ್ನು ಪಾಸು ಮಾಡಿದರು. ಅವರೀಗ ತಹಸಿಲ್ದಾರ್. ಇಂಥವರು ಕಡಿಮೆ.
ಎಲ್ಲ ಕೆಲಸಕ್ಕೂ ಬೇಕು
ಪಾಠ ಮಾಡುವುದಷ್ಟೇ ಉಪನ್ಯಾಸಕನ ಕೆಲಸ. ಆದರೆ ಅತಿಥಿ ಉಪನ್ಯಾಸಕರು ಎಲ್ಲಾ ಕೆಲಸಕ್ಕೆ ಬೇಕು. ಪರೀಕ್ಷೆ, ಮೌಲ್ಯಮಾಪನ, ಅಸೈನ್‌ಮೆಂಟ್ ನಿರ್ವಹಣೆ ಕೆಲಸವನ್ನು ಇವರಿಂದ ನಿರೀಕ್ಷಿಸಲಾಗುತ್ತದೆ. ಇದಾದ ನಂತರ ಪ್ರಾಂಶುಪಾಲರು ಸೂಚಿಸಿದ ಕಚೇರಿ ಕೆಲಸಗಳು ಬೇರೆ. ವೇತನದ ವಿಚಾರದಲ್ಲಿ ಮಾತ್ರ ತಾರತಮ್ಯ. ಇವರಿಗೆ ತಿಂಗಳಿಗೆ ವೇತನ ಸಿಕ್ಕದು, ಸಿಕ್ಕಾಗಲೇ ಸೀರುಂಡೆ. ಕಾಲೇಜುಗಳ ಕಚೇರಿ ಸಿಬ್ಬಂದಿ ಮನಸು ಮಾಡಿದರೆ ಸಂಬಳ ಸಿಕ್ಕೀತು, ಇಲ್ಲದಿದ್ದರೆ ವರ್ಷ. ಅದೂ ಇಲ್ಲದಿದ್ದರೆ ಕಂತುಗಳಲ್ಲಿ ವೇತನ ಭಾಗ್ಯ.
ಎಷ್ಟು  ಹೊರೆ
ಇವರ ಬೇಡಿಕೆಯೆಂದರೆ ೫ ಸಾವಿರದಿಂದ ಮಾಸಿಕ ಗೌರವ ಧನವನ್ನು ೧೨ ಸಾವಿರಕ್ಕೆ ಹೆಚ್ಚಿಸಬೇಕು. ಕನಿಷ್ಠ ಹತ್ತು ಸಾವಿರವಾದರೂ ಬೇಕೇಬೇಕು.ಇದರಿಂದ  ಸರಕಾರಕ್ಕೆ ಆಗುವ ವಾರ್ಷಿಕ ಹೊರೆ ಸುಮಾರು ೨೦ ಕೋಟಿ ರೂ..  ಅದೇ ಯುಜಿಸಿ ನಿಗದಿಪಡಿಸಿರುವ ಹೊಸ ವೇತನದಂತೆ ಉಪನ್ಯಾಸಕರಿಗೆ ನೀಡಬೇಕಾದ ಹೆಚ್ಚುವರಿ ಮೊತ್ತ ೧೭೦ ಕೋಟಿ ರೂ. ಇದರೊಂದಿಗೆ ಅತಿಥಿ ಉಪನ್ಯಾಸಕರ ಕಾಯಂ ಪ್ರಸ್ತಾಪ ವನ್ನು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಇಟ್ಟಿದ್ದಾರೆ. ಮೊದಲು ಅಧಿಸೂಚನೆ ನಂತರ ಮುಂದಿನ ಕ್ರಮ ಎನ್ನೋದು ಸಚಿವರ ಸೂಚನೆ. ಅವರದ್ದೂ ಕೆಲವು ಬೇಡಿಕೆಗಳಿವೆಯಂತೆ, ಹಾಗಾಗಿ ಎಲ್ಲವೂ ಅಂತಿಮಗೊಳ್ಳಬೇಕು ಎನ್ನುತ್ತಾರೆ ಉಪನ್ಯಾಸಕರು. ಈಗ ಎಲ್ಲವೂ ದುಬಾರಿಯೋ ದುಬಾರಿ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಬಸ್ ಪ್ರಯಾಣ ದರವೂ ದುಬಾರಿ. ಬದುಕು ನಡೆಸುವುದೂ ಕಷ್ಟವಾಗಿರುವಾಗ ವೇತನವನ್ನಾದರೂ ಹೆಚ್ಚಿಸಿ ಎಂದು ಬೇಡುತ್ತಿದ್ದಾರೆ ‘ಅತಿಥಿ’ಗಳು.
ಮರೆತ ಜನಪ್ರತಿನಿಧಿಗಳು
ಮೂರು ವರ್ಷದ ಹಿಂದೆ ನಡೆದ ವಿಧಾನಪರಿಷತ್ ಚುನಾವಣೆ ವೇಳೆ ಅತಿಥಿ ಉಪನ್ಯಾಸಕರತ್ತಲೇ ಎಲ್ಲ ಪಕ್ಷಗಳ ಚಿತ್ತ ಹರಿಯಿತು. ಅವರ ಮತಗಳನ್ನು ಪಡೆಯಲೆಂದೇ ಭರವಸೆಗಳ ಮಹಾಪೂರವೂ ಹರಿಯಿತು. ನಿಮ್ಮ ಸೇವೆ ಕಾಯಂ, ಎಲ್ಲರಂತೆ ಸೌಲಭ್ಯ ಕೊಡಿಸುವುದಾಗಿಯೂ ಹೇಳಿದರು. ಗೆದ್ದು ಮೂರು ವರ್ಷವಾದರೂ ಏನೂ ಇಲ್ಲ. ಮೈಸೂರು ಭಾಗದಿಂದ ಗೆದ್ದ ಮರಿತಿಬ್ಬೇಗೌಡ ಅತಿಥಿ ಉಪನ್ಯಾಸಕರ ಜತೆಯೇ ಓಡಾಡಿ ಓಟು ಗಿಟ್ಟಿಸಿದರು. ಒಂದೆರಡು ಬಾರಿ ಬೇಡಿಕೆ ಪಟ್ಟಿ ಮಂಡಿಸಿದರು. ತಮ್ಮ ಮಾತು ನಡೆಯದೆಂದು ಗೊತ್ತಾದಾಗ ಅತಿಥಿ ಉಪನ್ಯಾಸಕರನ್ನು ಮರೆತೇ ಬಿಟ್ಟರು. ಉಳಿದವರ ವರ್ತನೆಯೂ ಹೀಗೇ.
ಮಾನವೀಯತೆ ಮೆರೆಯಿರಿ
ಬಹಳಷ್ಟು  ಇಂಥ ಉಪನ್ಯಾಸಕರಿಗೆ ಕುಟುಂಬ ನಿರ್ವಹಣೆ,  ಬೋಧನೆಗೆ ಅಗತ್ಯವಾದ ಪರಿಕರ-ಲೇಖನ ಸಾಮಗ್ರಿ ಗಳನ್ನು ಕೊಳ್ಳುವುದಕ್ಕೆ, ಸಂಶೋಧನ ಕೆಲಸ, ಪರಾಮರ್ಶನ ಗ್ರಂಥ ಕೊಳ್ಳಲು ಈ ಕನಿಷ್ಠ ವೇತನವೇ ದಿಕ್ಕು. ಈಗ ಕಾಯಂ ಉಪನ್ಯಾಸಕರ ವೇತನ ಪರಿಷ್ಕೃತಗೊಂಡಿದೆ. ಅದ್ದರಿಂದ ಇವರ ವೇತನವನ್ನು ಹೆಚ್ಚು ಮಾಡಲೇಬೇಕು. ಮತ್ತೊಂದು ಯುಜಿಸಿ ವೇತನ ಪರಿಷ್ಕರಣೆ ಅಂತಿಮ ವರದಿ (ಪ್ರೊ.ಚೆಡ್ಡಾ ನೇತೃತ್ವದ ಪರಿಶೀಲನಾ ಸಮಿತಿ)ಯಲ್ಲಿ ಪದವಿ ಕಾಲೇಜು ಮತ್ತು ವಿವಿಗಳು ಖಾಲಿ ಇರುವ ಹುದ್ದೆಗಳಿಗೆ -ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಸಲುವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ,೨೫೦೦೦ ರೂ. ಮೀರದಂತೆ ವೇತನ ನೀಡಬೇಕೆಂಬ ಸಲಹೆಯಿದೆ. ದುರಂತವೆಂದರೆ ರಾಜ್ಯ ಸರಕಾರ ಈ ವೇತನ ಪರಿಷ್ಕರಣೆಯ ಪರಿಶೀಲನೆ ಸಂದರ್ಭ ಸೇರ್ಪಡೆ- ಬೇರ್ಪಡೆ ಗಳೊಂದಿಗೆ ಜಾರಿಗೆ ತರುವ ತನ್ನ ಆದೇಶದಲ್ಲಿ  (ಸರಕಾರಿ ಆದೇಶ ಸಂಖ್ಯೆ: ಕಾಶಿಇ: ೧೪೯:ಯುಜಿಸಿ : ೨೦೦೯-೧೦ಸಿವಿ೫, ದಿನಾಂಕ ೧೮.೦೧.೨೦೧೦) ಈ ಅಂಶವನ್ನು ಕೈಬಿಟ್ಟಿದೆ. ಇದು ಅತಿಥಿ ಉಪನ್ಯಾಸಕರ ಬೇಸರಕ್ಕೆ ಕಾರಣವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ