ಪಿಎಚ್.ಡಿ ಪದವಿಗೀಗ ವಿಪರೀತ ರಶ್ !

ಮೈಸೂರು ವಿವಿ ಯಲ್ಲಿ ಈ ಬಾರಿ ೩೦೪ ಮಂದಿಗೆ ಪದವಿ
ಚೀ. ಜ. ರಾಜೀವ  ಮೈಸೂರು 
ಮೈಸೂರು ವಿಶ್ವವಿದ್ಯಾನಿಲಯದ ೯೦ನೇ ವಾರ್ಷಿಕ ಘಟಿಕೋತ್ಸವದಲ್ಲಿ  ಪಿಎಚ್. ಡಿ ಪದವಿ ಪಡೆಯುತ್ತಿರುವ ವರ ಸಂಖ್ಯೆ ಎಷ್ಟು ಗೊತ್ತೆ ? - ೩೦೧ ಮಂದಿ !
ಇಷ್ಟೊಂದು ಸಂಶೋಧಕರು ಡಾಕ್ಟರೇಟ್ ಪಡೆಯುತ್ತಿರು ವುದು ವಿವಿಯ ಇತಿಹಾಸದಲ್ಲೇ ಪ್ರಥಮ. ಹಾಗಾಗಿ, ಇದು ಸದ್ಯದ ಮಟ್ಟಿಗೆ ದಾಖಲೆ.
ವರ್ಷದ ೩೬೫ ದಿನಗಳ ಪೈಕಿ ವಾರದ ರಜೆಗಳು, ಹಬ್ಬ-ಹರಿದಿನಗಳನ್ನು ಕಳೆದು ಲೆಕ್ಕಹಾಕಿದರೆ-ವಿ ವಿ ಸರಾಸರಿ ದಿನಕ್ಕೊಬ್ಬ ಸಂಶೋಧಕನನ್ನು ತಯಾರು ಮಾಡಿದೆ.
‘ಈ ವರ್ಷ ವಿಜ್ಞಾನ ನಿಕಾಯ (ಸಮೂಹದ ವಿಷಯ ಗಳು)ದಲ್ಲಿ ೧೬೩, ಕಲಾ ನಿಕಾಯದಲ್ಲಿ  ೧೦೬, ವಾಣಿಜ್ಯ ನಿಕಾಯದಲ್ಲಿ ೧೦, ಶಿಕ್ಷಣ ಶಾಸ್ತ್ರದಲ್ಲಿ  ೧೮, ಕಾನೂನು ನಿಕಾಯದಲ್ಲಿ ೪ ಸೇರಿಸಿ ಒಟ್ಟು ೩೦೧  ಅಭ್ಯರ್ಥಿಗಳಿಗೆ ಪಿಎಚ್. ಡಿ ನೀಡಲಾಗುತ್ತಿದೆ’ ಎಂದು ವಿವಿಯ ಪರೀಕ್ಷಾಂಗ ಕುಲಸಚಿವ ಬಿ. ರಾಮು ವಿಜಯ ಕರ್ನಾಟಕಕ್ಕೆ ತಿಳಿಸಿದರು.
ಹೀಗೆ ತಯಾರಾಗಿರುವ ಸಂಶೋಧಕರು, ಅವರ ಸಂಶೋಧನಾ ಪ್ರಬಂಧಗಳ ಪೈಕಿ ಜೊಳ್ಳೆಷ್ಟು ?,  ಗಟ್ಟಿ ಎಷ್ಟು ?- ಎಂಬುದು ಬೇರೆ ವಿಚಾರ. ಆದರೆ ಎಲ್ಲ ಕಡೆಯಂತೆ ಮೈಸೂರು ವಿವಿಯಲ್ಲೂ ಪಿಎಚ್.ಗೀಗ ವಿಪರೀತ ರಶ್.
ಹೊಸದಾಗಿ ಪದವಿ ಕಾಲೇಜಗಳಲ್ಲಿ  ಕೆಲಸ ಪಡೆಯಲು ಬಯಸುವವರಿಗೆ ಪಿಎಚ್.ಡಿಯನ್ನೂ ಒಂದು ಮಾನದಂಡ  ಮಾಡಿರುವುದು;  ಈಗಾಗಲೇ ಕೆಲಸದಲ್ಲಿರುವ ಅಧ್ಯಾಪಕರು ಯುಜಿಸಿ ವೇತನ ಶ್ರೇಣಿ ಪಡೆಯಲು ಪಿಎಚ್.ಡಿ ಮಾಡಿರಬೇಕೆಂಬ ನಿಯಮ;  ಪ್ರಾಂಶುಪಾಲರಾಗಲು ಪಿಎಚ್.ಡಿ ಕಡ್ಡಾಯ ಎಂಬುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸಂಶೋಧಕರ ಸಂಖ್ಯೆ ಹೆಚ್ಚಿದೆ. ಇದರ ಜತೆಗೆ, ಹಾಲಿ ಇರುವ ಪಿಎಚ್.ಡಿ ನಿಯಮಾವಳಿಗಳ ಪ್ರಕಾರ  ೨೦೦೯ ಡಿಸೆಂಬರ್ ಒಳಗೆ - ಎಲ್ಲರೂ ಪಿಎಚ್.ಡಿ ಪೂರ್ಣ ಗೊಳಿಸಬೇಕು (ಇಲ್ಲದಿದ್ದರೆ ಹೊಸ ನಿಯಮಾವಳಿ ಪ್ರಕಾರ ನೊಂದಾಯಿಸಬೇಕು) ಎಂಬುದೂ ಈ ಬಾರಿಯ ರಶ್‌ಗೆ ಕಾರಣ.
ಈ ವರ್ಷ ಪಿಎಚ್.ಡಿ ಪೂರ್ಣಗೊಳಿಸಿದವರಲ್ಲಿ  ಐಎಎಸ್ ಅಧಿಕಾರಿ ಎನ್.ಎಸ್. ಚನ್ನಪ್ಪಗೌಡ, ಕೆಎಎಸ್ ಅಧಿಕಾರಿ ಎಂ. ಆರ್.ರವಿ ಸೇರಿದಂತೆ ಅಧಿಕಾರಿಗಳು, ಸರಕಾರೇತರ ಕ್ಷೇತ್ರ ದವರೂ ಇದ್ದಾರೆ. ಇವರಲ್ಲಿ ಕೆಲವರಷ್ಟೇ ಶೈಕ್ಷಣಿಕ ಆಸಕ್ತಿಯ ಉದ್ದೇಶವಿಟ್ಟುಕೊಂಡು ಸಂಶೋಧನೆಗೆ ತೊಡಗಿದವರು.
ಮೂರೇ ವರ್ಷದಲ್ಲಿ ದ್ವಿಗುಣ: ಮೊದಲೆಲ್ಲಾ ಯಾವುದಾದ ರೊಂದು ಕ್ಷೇತ್ರದಲ್ಲಿ ಆಳವಾದ ಅಧ್ಯಯನ, ಸಂಶೋಧನೆಯ ಉದ್ದೇಶದಿಂದ ಇಲ್ಲವೇ ಶೈಕ್ಷಣಿಕ ಪ್ರತಿಷ್ಠೆ- ಶ್ರೇಷ್ಠತೆಗಾಗಿ ಪಿಎಚ್.ಡಿ  ಮಾಡುವವರ ಸಂಖ್ಯೆ ಹೆಚ್ಚಿತ್ತು. ಆದರೆ, ದಶಕದಿಂದ ಈಚೆಗೆ ಯುಜಿಸಿ ನಿಯಮಾವಳಿ ಬದಲಾದ ಮೇಲೆ ಗರಿಷ್ಠ ವೇತನಕ್ಕಾಗಿಯೇ ಪಿಎಚ್.ಡಿ ಯತ್ತ ಮುಖ ಮಾಡಿದವರು ಹಲವರು. ಈ ಮಧ್ಯೆ, ಯುಜಿಸಿ ವೇತನ ಶ್ರೇಣಿಯನ್ನು ಜಾರಿ ಗೊಳಿಸಲು ರಾಜ್ಯ ಸರಕಾರ ಹಿಂದೇಟು ಹಾಕಿದ  ಪರಿಣಾಮ, ಸಂಶೋಧಕರೂ ಸುಮ್ಮನಾದರು, ಸೋಮಾರಿಗಳಾದರು. ಆದರೆ, ಯಾವಾಗ ರಾಜ್ಯ ಸರಕಾರ ವೇತನಶ್ರೇಣಿ ಜಾರಿಗೊಳಿಸುವ ಮನಸ್ಸು ಮಾಡಿತೋ ಕ್ಯೂ ಆರಂಭವಾಯಿತು.
೨೦೦೭ರಲ್ಲಿ ೧೮೫, ೨೦೦೮ ರಲ್ಲಿ ೨೩೨ ಹಾಗೂ ೨೦೦೯ ರಲ್ಲಿ ೨೬೪ ಮಂದಿಗೆ ಪಿಎಚ್.ಡಿ ನೀಡಲಾಗಿತ್ತು. ಈ ವರ್ಷ  ಈ ಸಂಖ್ಯೆ ಈಗ ೩೦೦ರ ಗಡಿ ದಾಟಿದೆ.
ಜೈವಿಕ ತಂತ್ರಜ್ಞಾನ ಅಧಿಕ: ಕಲೆ, ವಿಜ್ಞಾನ, ವಾಣಿಜ್ಯ, ಶಿಕ್ಷಣ, ಕಾನೂನು ಹೀಗೆ ವಿವಿಧ ನಿಕಾಯಗಳ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿಯೇ ಅತಿಹೆಚ್ಚು- ೧೬೩ ಅಭ್ಯರ್ಥಿಗಳು   ಪಿಎಚ್. ಡಿ ಪಡೆದಿರುವುದು ಒಂದು ವಿಶೇಷವಾದರೆ, ಈ ವಿಜ್ಞಾನ ವಿಭಾಗದಲ್ಲೂ  ಜೈವಿಕ ತಂತ್ರಜ್ಞಾನ(ಬಯೋ ಟೆಕ್ನಾಲಜಿ)ದಲ್ಲಿ  ಅತಿಹೆಚ್ಚು  ಸಂಶೋಧನಾ ಪ್ರಬಂಧಗಳು ಡಾಕ್ಟರೇಟ್ ಗೌರವಕ್ಕೆ ಪಾತ್ರವಾಗಿವೆ. ೩೪ ಅಭ್ಯರ್ಥಿ ಗಳು  ಜೈವಿಕ ತಂತ್ರಜ್ಞಾನದ ವಿವಿಧ ಆಯಾಮಗಳು, ತರಾವರಿ ಪ್ರಯೋಜನಗಳನ್ನು ಕೇಂದ್ರೀಕರಿಸಿದ್ದಾರೆ. ಉಳಿದಂತೆ ಜೀವ ರಸಾಯನಶಾಸ್ತ್ರ -೨೦, ರಸಾಯನ ಶಾಸ್ತ್ರ-೧೪, ಗಣಿತ ಶಾಸ್ತ್ರ-೧೩, ರೇಷ್ಮೆ ಶಾಸ್ತ್ರ-೧೨, ನಗರ ಮತ್ತು ಪ್ರಾದೇಶಿಕ ಯೋಜನೆ-೧೧, ಪ್ರಾಣಿ ಶಾಸ್ತ್ರ -೧೦, ಕಂಪ್ಯೂಟರ್ ಸೈನ್ಸ್ ಮತ್ತು  ಮನಃಶಾಸ್ತ್ರ-೯, ಭೌತಶಾಸ್ತ್ರ-೭ ಅಭ್ಯರ್ಥಿಗಳು ಪಿಎಚ್. ಡಿ ಪಡೆದಿದ್ದಾರೆ. ಉಳಿದಂತೆ ಸಸ್ಯ ಶಾಸ್ತ್ರ, ಭೂ ವಿಜ್ಞಾನ, ಪಾಲಿಮರ್ ವಿಜ್ಞಾನ, ಪರಿಸರ ವಿಜ್ಞಾನದಂಥ ವಿಷಯದಲ್ಲಿ ಬೆರಳೆಣಿಕೆ ಸಂಖ್ಯೆಯ ಸಂಶೋಧನೆಗಳು ಮಾತ್ರ ಈ ವರ್ಷ  ಪೂರ್ಣಗೊಂಡಿವೆ.
ಕಲೆಯಲ್ಲಿ ಅರ್ಥಶಾಸ್ತ್ರ ಮುಂದು: ಕನ್ನಡ, ಇಂಗ್ಲಿಷ್,ಸಂಸ್ಕೃತ, ಉರ್ದು, ಇತಿಹಾಸ, ಸಮಾಜ ಶಾಸ್ತ್ರ, ರಾಜ್ಯ ಶಾಸ್ತ್ರ, ಭಾಷಾ ಶಾಸ್ತ್ರ  ಸೇರಿದಂತೆ ೨೦ ವಿಷಯಗಳನ್ನು  ಒಳಗೊಂಡಿರುವ ಕಲಾ ನಿಕಾಯದಲ್ಲಿ  ಒಟ್ಟು ೧೧೬ ಮಂದಿ ಡಾಕ್ಟರೇಟ್ ಪಡೆಯಲು ಸಿದ್ಧರಾಗಿದ್ದು, ಈ ಪೈಕಿ ಅರ್ಥಶಾಸ್ತ್ರ ವಿಷಯದಲ್ಲಿ ೨೫ ಮಂದಿ ಇದ್ದಾರೆ. ಉಳಿದಂತೆ ಕನ್ನಡ ೧೩, ಇಂಗ್ಲಿಷ್ ೧೨, ಇತಿಹಾಸ ೭ ಜನರನ್ನು ಒಳಗೊಂಡಿದೆ.
ವೇದಿಕೆಯಿಂದ ಕೆಳಗಿಳಿದ ಪಿಎಚ್.ಡಿ !
ಪಿಎಚ್.ಡಿ ಪದವಿ ಪಡೆದವರು ಇನ್ನು ಮುಂದೆ  ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ  ಪ್ರಮಾಣ ಪತ್ರ ಪಡೆಯವಂತಿಲ್ಲ. ಪದವೀಧರರು, ಸ್ನಾತಕೋತ್ತರ ಪದವೀಧರರ ರೀತಿಯಲ್ಲಿಯೆ ಘಟಿಕೋತ್ಸವಕ್ಕೆ ಮುನ್ನ ಕ್ರಾಫರ್ಡ್ ಹಾಲ್‌ನ ಕೌಂಟರ್‌ನಲ್ಲಿ ಸರತಿಯಲ್ಲಿ ನಿಂತು - ವಿವಿಯ ಸಿಬ್ಬಂದಿಯಿಂದ ಪದವಿ ಪಡೆಯಬೇಕು.
ವಿವಿಯ ಈ  ನಿರ್ಧಾರ  ಕೆಲವರಿಗೆ ಬೇಸರ ತಂದಿದೆ. ‘ಉನ್ನತ ಶಿಕ್ಷಣದ  ಅತ್ಯುನ್ನತ ಪದವಿ ಎಂದೇ ಪರಿಗಣಿತವಾದ  ಪಿಎಚ್.ಡಿ ಎಂಬುದು ಜೀವನದ ಅಮೂಲ್ಯ ಕ್ಷಣಗಳಲ್ಲಿ ಒಂದು. ಅದನ್ನು ಸಾಕ್ಷೀಕರಿಸಲೆಂದೇ, ನಮ್ಮ ಮನೆಯವರು, ಹಿತೈಷಿಗಳು ಘಟಿಕೋತ್ಸವಕ್ಕೆ ಬರುತ್ತಿದ್ದರು. ಅಂಥದ್ದೊಂದು ಸಂಭ್ರಮದ  ಗಳಿಗೆಯನ್ನು ಇತಿಹಾಸದ ಪುಟಕ್ಕೆ ಸೇರಿಸಿದ್ದು ಸರಿಯಲ್ಲ’ ಎಂದು ಪಿಎಚ್.ಡಿ ಅಭ್ಯರ್ಥಿಯೊಬ್ಬರು ಪತ್ರಿಕೆಗೆ ಪ್ರತಿಕ್ರಿಯಿಸಿದರು.
‘ರಾಜ್ಯಪಾಲರು ಚಿನ್ನದ ಪದಕ ಹಾಗೂ ನಗದು ಬಹುಮಾನ ವಿಜೇತರಿಗೆ ಮಾತ್ರ ಘಟಿಕೋತ್ಸವದ ವೇದಿಕೆಯಲ್ಲಿ ಪದಕ ಹಾಗೂ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡುವರು. ಪಿಎಚ್.ಡಿ ಪಡೆದವರಿಗೆ ಕುಲಾಧಿಪತಿಗಳು ಖುದ್ದಾಗಿ ಪದವಿ ಧಾರಣೆ ಮಾಡುವುದಿಲ್ಲ ’ ಎಂದು ಮೈಸೂರು ವಿವಿ ಕುಲಸಚಿವ ಬಿ. ರಾಮು ತಿಳಿಸಿದ್ದಾರೆ. ‘ಡಾಕ್ಟರೇಟ್ ಪಡೆಯುವವರ  ಸಂಖ್ಯೆ ಈ ವರ್ಷ ಹೆಚ್ಚಾಗಿರುವುದೇ ಇದಕ್ಕೆ ಕಾರಣ’ ಎಂಬುದು ವಿವಿ ನೀಡಿರುವ  ಕಾರಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ