ಜ್ಞಾನಾರ್ಜನೆ ಸುಲಭ, ಮೂತ್ರ ವಿಸರ್ಜನೆ ಕಷ್ಟ !

ವಿಕ ಸುದ್ದಿಲೋಕ ಮೈಸೂರು
ನಗರ ಗ್ರಂಥಾಲಯದಲ್ಲಿ ಜ್ಞಾನಾರ್ಜನೆಗೇನೂ ಸಮಸ್ಯೆಯಿಲ್ಲ. ಇಲ್ಲಿ ಮೂತ್ರ ವಿಸರ್ಜನೆಯದ್ದೇ ದೊಡ್ಡ ಸಮಸ್ಯೆ...
ಹೌದು ಇದು ನಗುವ ವಿಷಯವಲ್ಲ. ಬದಲಿಗೆ ಇಲ್ಲಿ ಜ್ಞಾನ ವನ್ನರಸಿ ಬರುವ ಪುಸ್ತಕಪ್ರಿಯರು ಶೌಚಾಲಯಕ್ಕೆ ಸೂಕ್ತ ವ್ಯವಸ್ಥೆಯಿಲ್ಲದೇ ತಮ್ಮ ಮಸ್ತಕವನ್ನೇ ಬಿಸಿ ಮಾಡಿಕೊಂಡು ಹೋಗುತ್ತಿದ್ದಾರೆ. ಇಲ್ಲೇ ಒಂದು ಸುಸಜ್ಜಿತ ಶೌಚಾಲಯವಿದ್ದರೂ ಅದು ಸಿಬ್ಬಂದಿಗೆ ಮಾತ್ರ. ಯಾರಾದರೂ ಕೇಳಿದರೆ ಅವರಿಗೆ ಬೆದರಿಕೆಯೇ ಉತ್ತರ. ಪ್ರತ್ಯೇಕ ಶೌಚಾಲಯವೊಂದನ್ನು ನಿರ್ಮಿಸಿಕೊಡಲು ಗ್ರಂಥಾಲಯ ಅಧಿಕಾರಿಗಳು ಪ್ರಯತ್ನಿಸಿದರೂ ಜಾಗ-ಹಣದ ಕೊರತೆಯಿಂದ ಇನ್ನೂ ಈಡೇರಿಲ್ಲ. ಸಾರ್ವಜನಿಕರ ದೇಹಬಾಧೆ ಸಮಸ್ಯೆ ತೀರುತ್ತಲೇ ಇಲ್ಲ.
ಶೌಚಕ್ಕಿಲ್ಲಿ  ಕಷ್ಟವೋ ಕಷ್ಟ: ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಮುಖ್ಯ ಗ್ರಂಥಾಲಯಕ್ಕೆ ನಿತ್ಯ ೫೦೦ಕ್ಕೂ ಹೆಚ್ಚು ಮಂದಿ ಆಗಮಿಸುತ್ತಾರೆ. ಈಗ ಪರೀಕ್ಷೆ ಸಮಯ ವಾಗಿರುವುದರಿಂದ ಈ ಸಂಖ್ಯೆ ಎರಡುಪಟ್ಟು. ಇದರಲ್ಲಿ ಹಿರಿಯರು, ಮಹಿಳೆಯರು ಗ್ರಂಥಗಳನ್ನು ಅರಸಿ ಬರುತ್ತಾರೆ. ಅಂಥವರಲ್ಲಿ ಯಾರಿಗಾದರೂ ಶೌಚಾಲಯಕ್ಕೆ ಹೋಗಬೇಕೆಂದರೆ ಎಲ್ಲಿಯೂ ಅವಕಾಶವಿಲ್ಲ. ಅಕ್ಕಪಕ್ಕದಲ್ಲಿ ಎಲ್ಲಿಯೂ ಒಂದೂ ಸಾರ್ವಜನಿಕ ಶೌಚಾಲಯವಿಲ್ಲ. ಹತ್ತಿರದಲ್ಲಿ ಅಂದರೆ ಕೆ.ಆರ್. ಆಸ್ಪತ್ರೆಗೆ ಕಡೆಗೆ ಹೋಗಬೇಕು ಇಲ್ಲವೇ ನಗರ ಬಸ್ ನಿಲ್ದಾಣ ಅಥವಾ ಗ್ರಾಮಾಂತರ ಬಸ್ ನಿಲ್ದಾಣದೆಡೆ ಬರಬೇಕು.
ನಾನು ಆಗಾಗ ಗ್ರಂಥಾಲಯಕ್ಕೆ ಬಂದು ಹೋಗುತ್ತೇನೆ. ಇಲ್ಲಿ ಶೌಚಾಲಯ ಇಲ್ಲದೇ ತೊಂದರೆ ಅನುಭವಿಸಬೇಕಾಗಿದೆ. ಇರುವ ಶೌಚಾಲಯವನ್ನಾದರೂ ನೀಡಿ ಎಂದರೆ ಸಿಬ್ಬಂದಿ ಸತಾಯಿಸುತ್ತಾರೆ ಎನ್ನುವುದು ಶಂಕರಸ್ವಾಮಿ ಅವರ ಬೇಸರದ ನುಡಿ.
ಹೆರಿಟೇಜ್ ಕಟ್ಟಡ: ಇದು ಪಾರಂಪರಿಕ ಹಿನ್ನೆಲೆಯ ಕಟ್ಟಡ. ಇಲ್ಲಿ ಹೊಸದಾಗಿ ಶೌಚಾಲಯ ವನ್ನೂ ಕಟ್ಟಲು ಆಗುವುದಿಲ್ಲ. ಅಕ್ಕಪಕ್ಕದಲ್ಲಿ ಶೌಚಾಲಯವೊಂದನ್ನು ನಿರ್ಮಿಸಲು ಗ್ರಂಥಾಲಯ ಇಲಾಖೆ ಅಧಿಕಾರಿಗಳು ಪ್ರಯತ್ನ ಮಾಡಿದ್ದರೂ ಪಾರಂಪರಿಕ ಕಟ್ಟಡ ಎನ್ನುವ ಕಾರಣಕ್ಕೆ ಅನುಮತಿ ಸಿಕ್ಕಿಲ್ಲ. ಪಾಲಿಕೆಯೂ ಹಣ ನೀಡಲು ಹಿಂದೇಟು ಹಾಕುತ್ತಲೇ ಇದೆ. ಆದರೆ ಇರುವ ಶೌಚಾಲಯವನ್ನು ನೀಡೋಣವೆಂದರೆ ವಾತಾವರಣವೇ ಹಾಳಾಗಿ ಹೋಗುವ ಆತಂಕ. ನಿತ್ಯ ಬರುವವರಿಗೆ ಹಿಂದೆ ಒಮ್ಮೆ ಶೌಚಾಲಯ ಬಳಸಲು ಕೊಟ್ಟಾಗ ಸ್ವಚ್ಛತೆ ಇಲ್ಲದೇ ವಾಸನೆ ಉಂಟಾಗಿ ಇಲ್ಲಿಗೆ ಬರುವವರೇ ಬೇಸರ ವ್ಯಕ್ತಪಡಿಸಿದ ಸ್ಥಿತಿ ನಿರ್ಮಾಣವಾಗಿತ್ತು.
ಆದರೂ ಗ್ರಂಥಾಲಯಕ್ಕೆ ಬರುವವರಿಂದಲೇ ೧ ಇಲ್ಲವೇ ೨ ರೂ. ಗಳನ್ನು ಪಡೆದುಕೊಂಡು ಸ್ವಚ್ಛತೆ ಮಾಡಲು ಇಲಾಖೆಯವರಿಗೂ ಅವಕಾಶವಿದೆ. ಅದನ್ನು ಮಾತ್ರ ಈವರೆಗೂ ಯಾರೂ ಮಾಡಿಲ್ಲ,. ಅಧಿಕಾರಿಗಳು ಶೌಚಾಲಯ ನಿರ್ಮಾಣಕ್ಕೆ ಪ್ರಯತ್ನಿಸಿ ಸಫಲ ವಾಗದೇ ಇದ್ದಾಗ ಸುಮ್ಮನಾದರು. ತಮಗೋಸ್ಕರ ನಿರ್ಮಿಸಿಕೊಂಡಿ ರುವ ವಿಶಾಲ ಶೌಚಾಲಯದಲ್ಲಿ ದೇಹಬಾಧೆ ತೀರಿಸಿಕೊಂಡು ಕುಳಿತರು.
ಲೇಖಕರ ಶೌಚದ ಕಥೆ: ನಗರದ ಲೇಖಕರೊಬ್ಬರಿಗೆ ನಿತ್ಯ ಗ್ರಂಥಾಲಯದ ಕಡೆ ಹೋಗುವ ಹವ್ಯಾಸ. ವರ್ಷಗಳಿಂದ ಅಲ್ಲಿಗೆ ಹೋಗುತ್ತಿರುವ ಅವರಿಗೆ ಪುಸ್ತಕದ ತೊಂದರೆ ಆಗಿದ್ದು ಕಡಿಮೆ.
ಶೌಚಾಲಯವಿಲ್ಲದೇ ಹಲವಾರು ಬಾರಿ ಪರದಾಡಿದ್ದಾರೆ. ಈಗ ಬೇಸಿಗೆ ಸಮಯ. ಚೆನ್ನಾಗಿ ನೀರು ಕುಡಿದು ಗ್ರಂಥಾಲಯಕ್ಕೆ ಹೋದರು. ಸ್ವಲ್ಪ ಹೊತ್ತಿನ ನಂತರ ಶೌಚಾಲಯಕ್ಕೆ ಹೋಗಬೇಕೆನಿಸಿತು. ಗ್ರಂಥಾಲಯದಲ್ಲಿರುವ ಮೆಟ್ಟಿಲುಗಳ ಬಳಿ ಇರುವ ಶೌಚಾಲಯದತ್ತ ಬಂದರೆ ಬೀಗ. ಮತ್ತೆ ಮೇಲೆ ಓಡಿ ಸಿಬ್ಬಂದಿಯವರಿಗೆ ಬೀಗ ತೆರೆಯುವಂತೆ ಕೇಳಿ ಕೊಂಡರು. ಇಲ್ಲಿನ ಶೌಚಾಲಯ ಬಳಸಲು ನಿಮಗೆ ಕೊಡೋಲ್ರೀ ಎನ್ನುವ ನಿರ್ಲಕ್ಷ್ಯದ ಉತ್ತರ ಸಿಕ್ಕಿತು. ಕೋಪ ಗೊಂಡ ಅವರು ಚೆನ್ನಾಗಿ ಗದರಿ ಮೇಲಧಿಕಾರಿಗಳ ಗಮನಕ್ಕೂ ತಂದರು. ೫ ನಿಮಿಷದ ನಂತರ ಶೌಚಾಲಯದ ಬೀಗ ತೆಗೆಯ ಲಾಯಿತು. ಇಂಥ ಒತ್ತಡದ ನಡುವೆ ಶೌಚ ಕೆಲಸ ಮುಗಿಸಿದ್ದ ಲೇಖಕರ ಜೀವ ಮತ್ತೆ ಬಂದಿತ್ತು. ಮತ್ತೆ ಮೇಲೆ ಹೋದ ಅವರು ಅಧಿಕಾರಿಗಳ ವಿರುದ್ಧ ಹರಿಹಾಯ್ದು ಬಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ