ಬಹು ಮಹಡಿ ಮಹಲು ಎಷ್ಟು ಸುರಕ್ಷಿತ ?

ಚೀ. ಜ. ರಾಜೀವ ಮೈಸೂರು
ಮೊನ್ನೆ ಬೆಂಗಳೂರಿನ ಕಾರ್ಲ್ಟನ್ ಟವರ್‌ನಲ್ಲಿ , ಕೆಲ ಗಂಟೆಗಳ ಹಿಂದೆ ಕೋಲ್ಕತ್ತಾದ ಸ್ಟೀಫನ್ ಹೌಸ್‌ನಲ್ಲಿ , ಅದರ ಬೆನ್ನಲ್ಲೇ ಬೆಂಗಳೂರಿನ ಗೋದಾಮಿನ ಕಟ್ಟಡದಲ್ಲಿ  ಬೆಂಕಿ. ನಾಳೆ ಎಲ್ಲಿ ... ?
ಮೈಸೂರಿನ ಸ್ಥಳೀಯ ಸಂಸ್ಥೆ  ಆಡಳಿತಗಾರರು, ಅಗ್ನಿ ದುರಂತಗಳನ್ನು ನಿರ್ವಹಿಸಬೇಕಾದ ಅಧಿಕಾರಿಗಳು, ಅಗ್ನಿ ಆಕಸ್ಮಿಕಗಳ ಬಗ್ಗೆ ತಿಳಿವಳಿಕೆ ಇಲ್ಲದ ನಾಗರಿಕರು... ಹೀಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕಾದ ಸಂಗತಿ ಇದು. ಏಕೆಂದರೆ ಮೈಸೂರು ಕೂಡ ಅಗ್ನಿ ಆಕಸ್ಮಿಕಗಳನ್ನು ಎದುರಿಸಲು ಸರ್ವ ಸನ್ನದ್ಧವಾಗಿಲ್ಲ. ಬೇಸಿಗೆ ಆರಂಭ ವಾದ ಬಳಿಕ ಇಲ್ಲಿಯೂ ‘ಬೆಂಕಿಯ ಕರೆಗಳ’ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿವೆ. ಜನವರಿಯಿಂದ ಈಚೆಗೆ ಮೈಸೂರಿನ ಮೂರು ಫೈರ್ ಸ್ಟೇಷನ್‌ಗಳು ೨೫೦ಕ್ಕೂ ಹೆಚ್ಚು ಎಮರ್ಜನ್ಸಿ ಕರೆಗಳಿಗೆ ಕಿವಿಯಾಗಿವೆ, ನೆರವಿಗೆ ಧಾವಿಸಿವೆ.
ಮೈಸೂರು ಯಾಕೆ ಹೀಗಾಯಿತು ? ೧೦-೧೫ ವರ್ಷಗಳ ಹಿಂದಿನ ಮಾತು. ಆಗೆಲ್ಲಾ ನಗರದ ಕಟ್ಟಡಗಳ ಪೈಕಿ ಲಕ್ಷ್ಮೀ ಪುರಂನಲ್ಲಿರುವ ಐಯರ್ ಟವರ್‌ಗೆ ದೊಡ್ಡಣ್ಣನ ಸ್ಥಾನ. ಚಾಮುಂಡಿ ಬೆಟ್ಟದಲ್ಲಿ ನಿಂತು ನಗರದ ಮೇಲ್ಮೈ ನೋಡುವ ಮಂದಿಗೆ - ಐಯರ್ ಟವರ್ ಕೂಡ ಪ್ರಮುಖ ಆಕರ್ಷಣೆಯಾಗಿತ್ತು !
ಆದರೆ, ಈಗ ಪರಿಸ್ಥಿತಿ ಆಗಿಲ್ಲ. ಆ ಕಟ್ಟಡಕ್ಕೆ ಸಾಟಿಯಾಗುವ ನೂರಾರು  ಮಹಡಿ-ಮಹಲುಗಳನ್ನು  ಎಣಿಸಬಹುದು. ಒಂದು ಅಂದಾಜಿನ ಪ್ರಕಾರ ಮೈಸೂರಿನಲ್ಲಿ ಐದು ಮಹಡಿ  ಮೀಟರ್ ಎತ್ತರವಿರುವ ಕಟ್ಟಡಗಳ ಸಂಖ್ಯೆ ೨೦೦ರ ಗಡಿ ದಾಟಿದೆ. ಅಪಾರ್ಟ್‌ಮೆಂಟ್‌ಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತ ಲಾರಂಭಿಸಿವೆ. ಮೇಲ್‌ನೋಟಕ್ಕೆ ಸೊಗಸಾಗಿ ಕಾಣುವ ಇಂಥ ಕಟ್ಟಡಗಳು  ವಾಸಿಸಲು ಇಲ್ಲವೇ ಬಳಸಲು  ಯೋಗ್ಯವಾಗಿವೆಯೇ ?, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ?, ಆಕಸ್ಮಿಕ ಬೆಂಕಿ ಬಿದ್ದರೆ, ಅದನ್ನು ಎದುರಿಸಲು ಕಟ್ಟಡಗಳು ಸರ್ವಶಕ್ತವಾಗಿದೆಯೇ?
ಇಂಥದ್ದೊಂದು ಪ್ರಶ್ನೆ ಮುಂದಿಟ್ಟರೆ- ಅಗ್ನಿ ಶಾಮಕ ದಳದ ಅಧಿಕಾರಿಗಳು, ಮೈಸೂರು ಗ್ರಾಹಕ ಪರಿಷತ್‌ನಂಥ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು  ನಿರಾಶೆಯ ಉತ್ತರ ನೀಡುತ್ತಾರೆ. ಬೆಂಗಳೂರಿನ ಕಾರ್ಲ್ಟನ್ ಕಟ್ಟಡದಲ್ಲಿ ನಡೆದ ಅಗ್ನಿ ದುರಂತದ ಬಳಿಕ ಮೈಸೂರಿನ ಕಟ್ಟಡಗಳ ಸುರಕ್ಷತೆಯ ಪರಾಮರ್ಶೆ ನಡೆದಿದೆ.  ಹಾಲಿ ಜಾರಿಯಲ್ಲಿರುವ ಬಹಳಷ್ಟು ನಿಯಮಾವಳಿಗಳು ಉಲ್ಲಂಘನೆ ಯಾಗಿವೆ. ಹಾಗಾಗಿಯೇ ನಗರದ ಕಟ್ಟಡಗಳು ಅಗ್ನಿ ಆಕಸ್ಮಿಕಗಳನ್ನು ಎದುರಿಸಲು ಅಶಕ್ತವಾಗಿವೆ  ಎಂಬುದು ಪರಾಮರ್ಶೆ ನಡೆಸಿರುವ ಮೈಸೂರು ಗ್ರಾಹಕರ ಪರಿಷತ್‌ನ ಆರೋಪ.
ಅಚ್ಚರಿ ಅಂದ್ರೆ, ಬೆಂಗಳೂರಿನ ಕಾರ್ಲ್ಟನ್ ದುರಂತದ ಬಳಿಕ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯ ಕಟ್ಟಡ, ಝಾನ್ಸಿರಾಣಿ ಲಕ್ಷ್ಮೀ ಬಾಯಿ ರಸ್ತೆಯ ಹೋಟೆಲ್ ಸಮೀಪ ಹಾಗೂ ಕೈಗಾರಿಕಾ ಬಡಾವಣೆಯ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕಗಳು ಸಂಭವಿಸಿವೆ. ಅದೃಷ್ಟವಶಾತ್ ಅವು ಯಾವುದೇ ರೀತಿಯ ಪ್ರಾಣ ಹಾನಿ ಉಂಟು ಮಾಡಿಲ್ಲವಾದರೂ, ಕಟ್ಟಡ ಸುರಕ್ಷತೆಯ ಬಗ್ಗೆ ಪರಿಷತ್‌ನ ಆರೋಪಗಳಿಗೆ ಸಮರ್ಥನೆ ಒದಗಿಸುತ್ತವೆ.
ಕಟ್ಟಡ ಸಂಹಿತೆ ಏನನ್ನುತ್ತದೆ ?
ಭಾರತದ ನಗರಗಳಲ್ಲಿ ಕಟ್ಟುವ ಕಟ್ಟಡಗಳು ಹೇಗಿರಬೇಕು ಎಂಬುದಕ್ಕೆ ಕೇಂದ್ರ ಸರಕಾರ ರಾಷ್ಟ್ರೀಯ ಕಟ್ಟಡ ಸಂಹಿತೆಯನ್ನೇ (ನ್ಯಾಷನಲ್ ಬಿಲ್ಡಿಂಗ್ ಕೋಡ್) ರೂಪಿಸಿದೆ. ಈ ಸಂಹಿತೆ ಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ಸರಕಾರ ೨೦೦೩ರ ಡಿಸೆಂಬರ್ ೧೨ರಂದು ಹೊರಡಿಸಿರುವ ರಾಜ್ಯಪತ್ರದಲ್ಲೂ ಪ್ರಕಟಿಸಿದೆ. ಅದರ ಪ್ರಕಾರ ಮೈಸೂರಿನಂಥ ನಗರಗಳಲ್ಲಿ  ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿರುವವರು ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲೇಬೇಕು ಎನ್ನುತ್ತಾರೆ ಮೈಸೂರು ಗ್ರಾಹಕ ಪರಿಷತ್‌ನ ಪಿ.ಎಂ.ಭಟ್.
-ಸಂಭವನೀಯ ದುರಂತ ತಡೆಯಲು ಕಟ್ಟಡಗಳು ಸಜ್ಜಾಗಿರಬೇಕು. ಅಗ್ನಿಯನ್ನು ತಡೆಯುವ, ನಿಯಂತ್ರಿಸುವ ಸಲಕರಣೆಗಳು ಇರಬೇಕು.  ಅಗ್ನಿ ಎಚ್ಚರಿಕೆಗಳ ಕುರಿತು ಜಾಗೃತಿ ಮೂಡಿಸಿರಬೇಕು.  - ಐದು ಮಹಡಿ ಇಲ್ಲವೇ ಅದಕ್ಕಿಂತ ಹೆಚ್ಚು ಮಹಡಿ ಇರುವ ಹಾಗೂ ೧೫ ಮೀಟರ್‌ಗಿಂತ ಎತ್ತರಕ್ಕೆ ಕಟ್ಟಡ ನಿರ್ಮಿಸುವವರು ಸ್ಥಳೀಯ ಅಗ್ನಿಶಾಮಕ ಇಲಾಖೆಯಿಂದ ನಿರಾ ಪೇಕ್ಷಣಾ ಪತ್ರ(ಎನ್‌ಒಸಿ) ಪಡೆದಿರಲೇ ಬೇಕು. ಕಟ್ಟಡ ಪೂರ್ಣಗೊಂಡ ಬಳಿಕ ಸ್ಥಳೀಯ ಸಂಸ್ಥೆ ನೀಡುವ ಕಟ್ಟಡ ಪೂರ್ಣ ವರದಿಗೆ(ಸಿಆರ್)  ಅಗ್ನಿ ಶಾಮಕ ದಳದ ಸಮ್ಮತಿ ಪತ್ರ ಇರಬೇಕು. - ಅಗ್ನಿ ಶಾಮಕ ದಳದ ವಾಹನ ಗಳು ಸುಲಭವಾಗಿ ಪ್ರವೇಶಿಸುವಂಥ ಅಗಲವಾದ ರಸ್ತೆಗಳಲ್ಲಿ ಮಾತ್ರ ಬಹುಮಹಡಿ ಕಟ್ಟಡಗಳನ್ನು ಕಟ್ಟಬೇಕು. - ಪ್ರತಿಯೊಂದು ಬಹುಮಹಡಿ ಕಟ್ಟಡಕ್ಕೂ  ಕನಿಷ್ಠ ಎರಡು ಪ್ರವೇಶ(೪.೫ಮೀಟರ್ ಅಗಲ ಮತ್ತು ೪.೫ ಮೀಟರ್ ಎತ್ತರ) ದ್ವಾರಗಳಿರ ಬೇಕು. - ಪ್ರತಿ ಬಹುಮಹಡಿ ಕಟ್ಟಡಕ್ಕೆ ಕನಿಷ್ಠ ಎರಡು ಮೆಟ್ಟಿಲು ಸಾಲುಗಳಿರಬೇಕು. ಮೆಟ್ಟಿಲು ಸಾಲುಗಳಿಗೆ ಪ್ರತಿ ಮಹಡಿಯಲ್ಲೂ ಅಗ್ನಿ ನಿರೋಧಕ ಬಾಗಿಲು ಇರಬೇಕು.
ವಿಲನ್ ಯಾರು ಗೊತ್ತೆ ?
ಒಂದು ಅಂದಾಜಿನಂತೆ  ನಗರದಲ್ಲಿ ೨೦೦ಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳಿವೆ. ಅಪಾರ್ಟ್ ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು, ಹೋಟೆಲ್‌ಗಳು, ಶಾಲೆಗಳು ಹೀಗೆ ನಾನಾ ರೀತಿಯ ಕಟ್ಟಡಗಳಿವೆ. ಕರ್ನಾಟಕ  ಅಗ್ನಿಶಾಮಕ  ಮತ್ತು ತುರ್ತು ಸೇವೆಗಳ ಪ್ರಾದೇಶಿಕ ಅಗ್ನಿಶಾಮಕ  ಅಧಿಕಾರಿ ಸಿ.ಗುರುಲಿಂಗಯ್ಯ ಅವರು ಹೇಳುವ ಪ್ರಕಾರ-ಬಹಳಷ್ಟು ಅಪಾರ್ಟ್ ಮೆಂಟ್‌ಗಳು ಅಗ್ನಿ ಆಕಸ್ಮಿಕಗಳನ್ನು ಎದುರಿಸಲು ಶಕ್ತವಾಗಿವೆ. ಆದರೆ ಇದೇ ಮಾತನ್ನು ಉಳಿದ ಕಟ್ಟಡಗಳ ಸಂದರ್ಭದಲ್ಲಿ ಹೇಳುವಂತಿಲ್ಲ ಎನ್ನುತ್ತಾರೆ. ಅಂದರೆ  ಅಪಾರ್ಟ್ ಮೆಂಟ್ ಹೊತುಪಡಿಸಿ ಉಳಿದ ಪ್ರಾಕಾರದ ಬಹುತೇಕ ಕಟ್ಟಡಗಳು ಒಂದರ್ಥದಲ್ಲಿ ಅಪಾಯದಲ್ಲಿವೆ. ಈ ಎಲ್ಲವೂ ನಿಯಮದ ಪ್ರಕಾರ ಅಗ್ನಿಶಾಮಕ ಇಲಾಖೆಯ ಅನುಮತಿ ಪಡೆದೇ ಇಲ್ಲ. ಆದರೂ ಪಾಲಿಕೆಯ ಅಧಿಕಾರಿಗಳು ಇಂಥ ಕಟ್ಟಡ ಕಟ್ಟಲು, ಬಳಸಲು ಅನುಮತಿ ನೀಡಿದ್ದಾರೆ. ಇಂಥ ಕಡೆ ದುರಂತವೇನಾದರೂ ಸಂಭವಿಸಿದರೆ, ಅದರ ಮೊದಲ ಆರೋಪಿ ಯಾರು ಎಂಬುದು ಗೊತ್ತಾಯಿತಲ್ಲ ! ವರ್ಷದ ಬಹುತೇಕ ದಿನ ನಾನಾ ನಮೂನೆಯ  ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ವೇದಿಕೆಯಾಗುವ ತಾತ್ಕಾಲಿಕ ತಾಣಗಳು(ಜಿಲ್ಲಾಧಿಕಾರಿ ಕಚೇರಿ ಹಿಂಭಾಗ, ಮಹಾರಾಜ ಮೈದಾನ), ಮಾರುಕಟ್ಟೆ ಪ್ರದೇಶಗಳು, ದಸರಾ ವಸ್ತು ಪ್ರದರ್ಶನ ಮೈದಾನಗಳು  ಕೂಡ ಅಗ್ನಿ ಆಕಸ್ಮಿಕಗಳ ದೃಷ್ಟಿಯಲ್ಲಿ ಅಪಾಯದ  ಸ್ಥಳಗಳು. ಈ ಪ್ರದೇಶಗಳು ಸದಾ ಜನಸಂದಣಿಯಿಂದ ಕೂಡಿರುತ್ತವೆ. ಒಳಗಷ್ಟೇ ಅಲ್ಲ, ಹೊರಗೂ ಗಿಜಿ-ಗಿಜಿ ಎನ್ನುವಷ್ಟು ಜನರು ಇದ್ದೇ ಇರುತ್ತಾರೆ. ಒಳಗಿನ ಜನ ಹೊರಗೆ ಸುಲಭವಾಗಿ ಹೊರಬರಲು ತುರ್ತು ದ್ವಾರಗಳೇ ಇರುವುದಿಲ್ಲ. ಕಾಲ್ತುಳಿತಕ್ಕೂ ಇವು ಯೋಗ್ಯ ಸ್ಥಳಗಳು !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ