ಯುಗಾದಿ ಜೂಜು ಇಲ್ಲಿ ಭಲೆ ಜೋರು !

ವಿಕ ಸುದ್ದಿಲೋಕ ಮಂಡ್ಯ
ಚಾಂದ್ರಮಾನ ಯುಗಾದಿ ಹಬ್ಬದ ಸಡಗರ, ಸಂಭ್ರಮ ಬೇರೆಡೆ ಒಂಥರಾ. ಆದರೆ, ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದ ಬಹುತೇಕ ಕಡೆ ಹಬ್ಬದ ಆಚರಣೆಯೇ ಬೇರೆ. ಒಬ್ಬಟ್ಟು, ಹೋಳಿಗೆ ಸವಿದು ಇಸ್ಪೀಟು ಜೂಜಾಟದಲ್ಲಿ  ತೊಡಗುವುದು ಇಲ್ಲಿ  ಮಾಮೂಲು.
ಹಿಂದೂ ಧರ್ಮೀಯರ ಪಾಲಿಗೆ ಯುಗಾದಿಯೇ ಹೊಸ ವರ್ಷ. ಕಡು ಬಡವರೂ ಈ ಹಬ್ಬಕ್ಕೊಂದು ಹೊಸ ಉಡುಗೆ ಕೊಳ್ಳುತ್ತಾರೆ. ಬೆಳಗ್ಗೆಯೇ ಎದ್ದು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ  ತೊಟ್ಟು ಇಷ್ಟ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಬೇವು-ಬೆಲ್ಲ  ಸವಿದ ಮೇಲೆಯೇ ಉಪಾಹಾರ.
ಮನೆ ಮನೆಯಲ್ಲೂ ಒಬ್ಬಟ್ಟು, ಹೋಳಿಗೆ ಊಟ. ಇಷ್ಟಾದ ಮೇಲೆ ಅದೃಷ್ಟ  ಪರೀಕ್ಷೆಗೆ ಜೂಜಾಟ. ಇದು ಹಬ್ಬದ ಸ್ಪೆಷಲ್. ಎಲ್ಲಿ ನೋಡಿದರಲ್ಲಿ ಜೂಜಿನ ಅಡ್ಡೆಗಳು ಕಟ್ಟಿಕೊಂಡಿರುತ್ತವೆ. ಆಬಾಲವೃದ್ಧರಾದಿಯಾಗಿ ಶಕ್ತ್ಯಾನುಸಾರ ಹಣ ಪಣಕ್ಕಿಟ್ಟು, ಜೂಜಾಡುವುದು ವಾಡಿಕೆ.
ಪೊಲೀಸರಿಂದಲೂ ಅಡ್ಡಿ ಇಲ್ಲ: ಕಾನೂನು ಬಾಹಿರ ಜೂಜಾಟಕ್ಕೆ ಈ ಹಬ್ಬದಲ್ಲಿ ವಿನಾಯಿತಿ ಉಂಟು. ನಗರ, ಪಟ್ಟಣ, ಹಳ್ಳಿಗಳ ಹಾದಿ-ಬೀದಿಗಳಲ್ಲೇ ಅಡ್ಡೆ ಕಟ್ಟಿಕೊಂಡು ಜೂಜಾಡಲಾಗುತ್ತದೆ. ಹಬ್ಬದ ಆಚರಣೆ ಪ್ರಯುಕ್ತ ನಡೆಯುವ ಜೂಜಾಟಕ್ಕೆ ಪೊಲೀಸರಿಂದಲೂ ಅಡ್ಡಿಯಿಲ್ಲ.
ಸಾವಿರಾರು ರೂ. ವಹಿವಾಟು: ಇಸ್ಪೀಟು ಆಡಲು ಗೊತ್ತಿಲ್ಲದವರು ಮತ್ತು ಗೊತ್ತಿದ್ದರೂ ಆಡಲಿಚ್ಛಿಸದವರಿಗೆ ಜೂಜಾಡಲು ಬೇರೆಯದೇ ಆಟವಿದೆ. ಹುಣಸೆ ಬೀಜಗಳನ್ನು ಒಂದು ಕಡೆ ತೇಯ್ದು, ಅವುಗಳಿಂದ ಗೆಂಪ(ಪಚ್ಚಿ) ಆಡಲಾಗುತ್ತದೆ. ಒಂದೊಂದು ಅಖಾಡದಲ್ಲೂ  ಸಹಸ್ರಾರು ರೂ. ವಹಿವಾಟು ಇರುತ್ತದೆ.
ನ್ಯಾಯ-ಪಂಚಾಯಿತಿ ಮಾಡುವ ಮನೆಗಳ ಪಡಸಾಲೆ, ಬೀದಿ ದೀಪದ ಕೆಳಗೆ, ದೇವಾಲಯದ ಆವರಣದಲ್ಲೇ ಇಸ್ಪೀಟು-ಗೆಂಪ ಆಡಲಾಗುತ್ತದೆ. ಬೇವು-ಬೆಲ್ಲದ ಹಬ್ಬವೆಂದೇ ಕರೆಯಲಾಗುವ ಯುಗಾದಿ ಜೂಜಿನಲ್ಲೂ  ಸಿಹಿ-ಕಹಿ ಇದ್ದದ್ದೇ. ಗೆದ್ದವರು ಬೀಗುತ್ತಾರೆ. ಸೋತವರು ಸೊರಗುತ್ತಾರೆ.
ಯುಗಾದಿಯ ಜೂಜಾಟದಲ್ಲಿ  ಸಿಕ್ಕಾಪಟ್ಟೆ ಹಣ ಸೋತು ಆಸ್ತಿಪಾಸ್ತಿ ಕಳೆದುಕೊಂಡವರು ಸಾಕಷ್ಟಿದ್ದಾರೆ.  ಜೂಜು ಎಂದ ಮೇಲೆ ಎಲ್ಲರೂ ಗೆಲ್ಲಲಾಗದು. ಸೋತ ಬಹುತೇಕರ  ಸುಖ, ಶಾಂತಿ, ನೆಮ್ಮದಿಯನ್ನು ಈ ಹಬ್ಬ ಕಿತ್ತುಕೊಂಡಿದೆ. ಎಷ್ಟೋ ಕುಟುಂಬಗಳಲ್ಲಿ ಕಲಹಕ್ಕೆ ಈ ಹಬ್ಬವೇ ನಾಂದಿ.
ಮಾರನೆ ದಿನ ಇನ್ನೂ ಜೋರು: ಚಾಂದ್ರಮಾನ ಯುಗಾದಿಯು ಬಾಡು-ಜೂಜು ಪ್ರಿಯರ ಪಾಲಿಗೆ ಒಂದು ದಿನದ ಹಬ್ಬವಲ್ಲ. ಮೂರು ದಿನದವರೆಗೆ ಹಬ್ಬ ಮುಂದುವರಿಯುತ್ತದೆ. ಮೊದಲ ದಿನ ಸಿಹಿ, ಸಸ್ಯಾಹಾರ ಊಟಕ್ಕೆ ಸೀಮಿತ. ಎರಡನೇ ದಿನ ಹೊಸ ತುಡುಕಿನ ಹೆಸರಿನಲ್ಲಿ  ಬಾಡೂಟ.
ಹಬ್ಬದ ಮಾರನೆಯಂದು ಹೊಸ ತುಡುಕು ಎಂದು ಹೇಳಿಕೊಂಡು ಮಾಂಸಾಹಾರಿಗಳ ಮನೆಗಳಲ್ಲಿ ಬಾಡೂಟ ಜೋರು. ನೂರು ಮನೆ ಹಳ್ಳಿಯಲ್ಲೂ ೧೦-೧೨ ಮೇಕೆ, ಕುರಿಗಳನ್ನು ಕುಯ್ಯಲಾಗುತ್ತದೆ. ಕೋಳಿಗಳ ಬಲಿಗೆ ಲೆಕ್ಕವೇ ಇಲ್ಲ. ಎರಡನೇ ದಿನದ ಹಬ್ಬ ಇಷ್ಟೇ ಮುಗಿಯದು.
ಮದ್ಯದ ಗಮತ್ತು ಕಮ್ಮಿಯಿಲ್ಲ: ಮಾಂಸದ ಜತೆಗೆ ಮದ್ಯದ ಗಮ್ಮತ್ತು ಕಮ್ಮಿಯೇನಲ್ಲ. ಮದ್ಯ ವ್ಯಸನಿಗಳ ವಾಲಾಟ, ತೂರಾಟ ಮಾಮೂಲು. ಅಪರೂಪಕ್ಕೆ ಮದ್ಯ ಸೇವಿಸುವ ಹವ್ಯಾಸ ಇದ್ದವರ ಪಾನಗೋಷ್ಠಿಗಳೂ ಆ ದಿನ ಸರ್ವೇಸಾಮಾನ್ಯ. ಹಬ್ಬದ  ಹೆಸರಿನಲ್ಲಿ  ನಡೆಯುವ ಈ ಚಟುವಟಿಕೆಗಳಿಗೆ ಮನೆಗಳಲ್ಲೂ ವಿರೋಧ  ಇರದು. ಹಬ್ಬಕ್ಕಾಗಿಯೇ ಹಳ್ಳಿಗಳಲ್ಲಿ ರಮ್, ವಿಸ್ಕಿ, ಜಿನ್, ಬ್ರಾಂದಿ, ಬಿಯರ್ ತಂದು ಮಾರಾಟ ಮಾಡುವವರಿದ್ದಾರೆ. ಹೀಗೆ ಮಾರಾಟವಾಗುವ ಮದ್ಯದ ಪೈಕಿ ಸೆಕೆಂಡ್ಸ್ ಮತ್ತು ಥರ್ಡ್ಸ್ ಉತ್ಪನ್ನಗಳೇ ಅಧಿಕ. ನಕಲಿ ಮದ್ಯದ ಕಿಕ್‌ನಿಂದ ನಿದ್ರೆಗೆ ಜಾರಿದವರು, ಚಿರನಿದ್ರೆಗೆ ಹೋದವರೂ ಉಂಟು. 
ವಿವಿಧೆಡೆ ಉತ್ಸವಗಳು : ಯುಗಾದಿ ಹಬ್ಬದಂದು ಪ್ರತಿಯೊಂದು ಗ್ರಾಮದ ದೇವಾಲಯಗಳಲ್ಲೂ ತಂಬಿಟ್ಟಿನ ಆರತಿ ಮತ್ತು ವಿಶೇಷ ಪೂಜೆ ಇದ್ದೇ ಇರುತ್ತದೆ. ಮಂಡ್ಯ ಜಿಲ್ಲೆಯ ೧೦೦ಕ್ಕೂ ಹೆಚ್ಚು ದೇವಾಲಯಗಳಲ್ಲಿ  ಉತ್ಸವ ಆಚರಣೆ ನಡೆಯಲಿದೆ. 
ಉತ್ಸವ ನಡೆಯುವ ದೇವಾಲಯಗಳಿಗೆ ಭಕ್ತರು ನಾನಾ ಕಡೆಯಿಂದ ಬರುತ್ತಾರೆ. ನಿಜವಾದ ದೈವಭಕ್ತರು ಉತ್ಸವದಲ್ಲಿ  ತಲ್ಲೀನರಾಗಿರುತ್ತಾರೆ.  ದೇವಾಲಯಗಳ  ಆವರಣದಲ್ಲೇ ಜೂಜು ಕಟ್ಟೆಗಳೂ ಕಟ್ಟಿರುತ್ತವೆ. ಜೂಜುಕೋರರ  ಚಿತ್ತ ಅಡ್ಡೆಯತ್ತಲೇ ನೆಟ್ಟಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ