ಮಹಿಳಾ ಮೀಸಲಿಗೆ ವಿರೋಧ

ತರವಲ್ಲ ತಗೀರಿ ನಿಮ್ಮ ‘ತಂಬೂರಿ’
 ಚೀ.ಜ.ರಾಜೀವ ಮೈಸೂರು
‘ನೆರೆಯ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿಯೇ  ಮಹಿಳೆಯರಿಗೆ ಶಾಸನಸಭೆಗಳಲ್ಲಿ ಮೀಸಲು ಇರು ವಾಗ, ನಮ್ಮಲ್ಲಿ ಮೀಸಲು ಜಾರಿಗೆ ತಡವಾಗಿದ್ದೇಕೆ ?  ಈ ವಿಷಯದಲ್ಲಿ  ಭಾರತೀಯರಿಗೆ ನಿಜಕ್ಕೂ ನಾಚಿಕೆಯಾಗಬೇಕು. ಅದರಲ್ಲಿ ಬೇರೆ ಒಳ ಮೀಸಲಿನ  ಎಳೆ  ಇಟ್ಟುಕೊಂಡು, ಮೀಸಲನ್ನೇ ಸೋಲಿಸುವ ಹುನ್ನಾರ ಬೇರೆ. ಏನ್ ಸಮಾಜವಿದು !’
ಇದು ಮಲ್ಲಮ್ಮ ಮರಿಮಲ್ಲಪ್ಪ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ವಿದ್ಯಾರ್ಥಿನಿಯರ ಸಿಟ್ಟು. ಶಾಸನ ಸಭೆಗಳಲ್ಲಿ ಮಹಿಳಾ ಮೀಸಲು ಕುರಿತು ‘ವಿದ್ಯಾರ್ಥಿ ವಿಶೇಷ’ ಅಂಕಣಕ್ಕಾಗಿ ಪತ್ರಿಕೆಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯರು- ಮೀಸಲಿನ ಚುಂಗು ಇಟ್ಟುಕೊಂಡು ರಾಜಕೀಯ ಮಾಡುತ್ತಿರು ವವರ ವಿರುದ್ಧ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.
‘ನಮ್ಮದು ಜಾತ್ಯತೀತ ರಾಷ್ಟ್ರ. ಸಮಬಾಳು- ಸಮ ಪಾಲು ಎಂಬುದನ್ನು ಒಪ್ಪಿಕೊಂಡಿದ್ದೇವೆ. ಹಾಗಾಗಿ, ಮೀಸಲಿನಲ್ಲಿಯೇ ಒಳ ಮೀಸಲು ನೀಡುವುದು ತಪ್ಪೇನಲ್ಲ. ಆದರೆ, ಒಳ ಮೀಸಲು ಪ್ರತಿಪಾದಕರಿಗೆ ಬೇಕಿರುವುದು ಒಳ ಮೀಸಲು ಅಲ್ಲ. ಬದಲಿಗೆ ಒಟ್ಟು  ಮೀಸಲು ವ್ಯವಸ್ಥೆ  ಜಾರಿಗೆ ಬರದಂತೆ, ಅದನ್ನು  ಸೋಲಿಸುವುದಷ್ಟರ  ಅವರ ಹುನ್ನಾರ.  ಇದು ನಮಗೆ ಅರ್ಥವಾಗುವುದಿಲ್ಲವೇ ?’ ಎಂದು ರಾಜಕೀಯದಲ್ಲಿ ಮಾಗಿ ಹೋದವರು ಮಾತನಾಡುವಂತೆ ತಮ್ಮ ಅಭಿಪ್ರಾಯ ಮಂಡಿಸಿದರು. ಈ ಹೇಳಿಕೆಗಳನ್ನು  ಇಲ್ಲಿರುವ ಶಬ್ಧದ ನೇರ ಅರ್ಥದಲ್ಲಿ ವ್ಯಕ್ತವಾಗಿರು ವಂತೆ ಅವರೇನೂ  ಅಭಿವ್ಯಕ್ತಿಸಲಿಲ್ಲ. ಆದರೆ, ಅವರ  ಪ್ರತಿಯೊಂದು ಹೇಳಿಕೆಯ ಹಿಂದೆ  ಹತ್ತಾರು  ಪ್ರಶ್ನೆಗಳಿದ್ದವು. ಸಿಟ್ಟು ಮನೆ ಮಾಡಿತ್ತು.
ಮೀಸಲು ಅಗತ್ಯ ಇಲ್ಲ ಎಂದು ಹೇಳಿದ ವಿದ್ಯಾರ್ಥಿ ನಿಯರ ಭಾವನೆಯ ಹಿಂದೆ-  ಅಬಲೆಯಾಗಿದ್ದಾಗ ನೀಡದ ಮೀಸಲು, ಸಬಲೆಯಾದಾಗ ಏಕೆ ಎಂಬ ನೋವಿತ್ತು.
ಸ್ಥಳೀಯ ಸಂಸ್ಥೆಗಳಲ್ಲಿ ಶೇ. ೩೩ರಷ್ಟು ಮೀಸಲು ಜಾರಿಗೆ ಬಂದಿರುವುದರಿಂದ, ಎಲ್ಲ ವರ್ಗದವರು, ಬಡವರು ಕೂಡ ರಾಜಕೀಯಕ್ಕೆ ಬರಲು ಸಾಧ್ಯವಾಗಿದೆ. ಈ ಮಸೂದೆ ಜಾರಿಯಿಂದ, ಪ್ರಜಾಪ್ರಭುತ್ವದ ಪರಮೋಚ್ಚ ಸದನಗಳಿಗೂ ನಮ್ಮ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಲು ಸಾಧ್ಯ. - ಎಸ್. ಶ್ವೇತಾ
ಎಲ್ಲ ಯಶಸ್ವಿ ಪುರುಷರ ಹಿಂದೆ ಮಹಿಳೆಯರು ಇರುತ್ತಾರೆ ಎಂಬುದನ್ನು ಎಲ್ಲ ಕಡೆ ಕೇಳಿದ್ದೇವೆ. ನೇಪಥ್ಯದಲ್ಲಿ ನಿಂತು ಯಶಸ್ಸಿಗೆ ದುಡಿದ ಮಹಿಳೆ, ನೇರವಾಗಿ ರಂಗಕ್ಕೆ ಬಂದರೆ ಇನ್ನಷ್ಟು ಯಶಸ್ಸು ಕಾಣಬಹುದು. ರಾಜಕೀಯ ವೊಂದನ್ನು ಹೊರತು ಪಡಿಸಿ, ಎಲ್ಲ ಕಡೆಯೂ ಮಹಿಳೆ ಗೆದ್ದಿ ದ್ದಾಳೆ. ಸಕಲ ಕಲಾ ವಲ್ಲಭರಂತೆ, ಸಕಲ ಕಲಾ ವಲ್ಲಭೆಯರು ಹೆಚ್ಚಾಗಬಹುದು. - ಆರ್. ನಾಗರತ್ನ.
ಆಟೋ ರಿಕ್ಷಾ ಚಾಲನೆಯಿಂದ ಹಿಡಿದು ಚಂದ್ರಯಾನದ ವರೆಗೆ ಮಹಿಳೆ ಪುರುಷನಿಗೆ ಸರಿಸಾಟಿಯಾಗಿದ್ದಾಳೆ. ಕೆಲವು ರಂಗದಲ್ಲಿ ಪುರುಷನಿಗಿಂತ ಮುಂದಿದ್ದಾಳೆ. ದೇಶದ ಜನಸಂಖ್ಯೆಯಲ್ಲೂ  ಪುರುಷನಷ್ಟೇ ಪ್ರಮಾಣದಲ್ಲಿ ಇದ್ದಾರೆ. ಹಾಗಾಗಿ  ಶೇ. ೫೦ರಷ್ಟು ಮೀಸಲು ಬೇಕಿತ್ತು. ತಡವಾಗಿ ಯಾದರೂ ಸಿಕ್ಕಿದೆ. ಸಂತೋಷ. ಒಳ ಮೀಸಲು ತಪ್ಪಲ್ಲ. ಮುಂಬರುವ ದಿನಗಳಲ್ಲಿ ಅದಕ್ಕೆ ಹೋರಾಟ ನಡೆಯಲಿ. - ಬಿ. ಎಂ.  ಸ್ನೇಹಾ
ಮೀಸಲಿನ ಬಲವಿಲ್ಲದೆ ಮಹಿಳೆ ಇಷ್ಟೊಂದು ಮುಂದೆ ಬಂದಿರುವಾಗ, ಅದರ ಬಲ ಸಿಕ್ಕರೆ ಇನ್ನಷ್ಟು ಮುಂದೆ ಬರು ತ್ತಾಳೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀಡಬೇಕಿತ್ತು. - ಪ್ರತೀಕ್ಷಾ
ನಗರ ಪ್ರದೇಶದ ಮಹಿಳೆಯರು ಸಬಲೆಯರಂತೆ ಮೇಲ್ನೋಟಕ್ಕೆ ಭಾಸವಾಗಬಹುದು. ಆದರೆ, ವಾಸ್ತವವಾಗಿ ಆಗಿಲ್ಲ. ಇದಲ್ಲದೆ ಗ್ರಾಮೀಣ ಪ್ರದೇಶ ಹಾಗೂ ಅಲ್ಪ ಸಂಖ್ಯಾತ ಸಮುದಾಯದ  ಮಹಿಳೆಯರು, ಎಲ್ಲದರಲ್ಲಿಯೂ ಹಿಂದೆ ಇದ್ದಾರೆ. ಶೋಷಣೆಯ ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಹಾಗಾಗಿ, ಒಳ ಮೀಸಲು ಬೇಕೇ ಬೇಕು. ಆದರೆ, ಈ ಅಂಶ ಮೀಸಲು ನೀಡುವುದನ್ನು ಮುಂದೂಡಲು ಕಾರಣವಾಗಬಾರದಷ್ಟೆ. - ಸ್ವಾತಿ ಶೇಖರ್
ಈಗಿನ ವ್ಯವಸ್ಥೆಯಲ್ಲಿ ಎಲ್ಲ ಮಹಿಳೆಯರೂ ರಾಜಕೀಯ ಪ್ರವೇಶಿಸಲು  ಸಾಧ್ಯವಿಲ್ಲ. ಹಣವಿದ್ದವರು, ಜಾತಿ ಇದ್ದವರು ಇಲ್ಲವೇ ರಾಜಕೀಯ ಕುಟುಂಬದಲ್ಲಿ  ಜನಿಸಿದ ಮಹಿಳೆಯರಿಗೆ  ಮಾತ್ರ ರಾಜಕೀಯ ಎಂಬ ಸ್ಥಿತಿ ಈಗಲೂ ಇದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮೀಸಲು ಜಾರಿಯಾದರೆ, ಅದೊಂದು ರೀತಿಯಲ್ಲಿ ನಮಗೆ ದೊರೆತ ರಾಜಕೀಯ ಸ್ವಾತಂತ್ರ್ಯ ಎಂದೇ ಹೇಳಬಹುದು. ಇದರಿಂದ  ಮಹಿಳಾ ದೌರ್ಜನ್ಯವನ್ನು ತಡೆಗಟ್ಟಬಹುದು. - ದೀಪ್ತಿ ರಾಜ್
ನಮ್ಮದು ಜಾತ್ಯತೀತ ರಾಷ್ಟ್ರ, ಇಲ್ಲಿ ಎಲ್ಲರೂ ಸಮಾನ. ಹಾಗಾಗಿ ಎಲ್ಲ ವರ್ಗ, ಜಾತಿಯ ಮಹಿಳೆಯರಿಗೆ ಮೀಸಲಿನ ಫಲ ಸಿಗುವುದು ನ್ಯಾಯ ಸಮ್ಮತ. ಈಗ ಒಳ ಮೀಸಲು ಕಲ್ಪಿಸಬೇಕಷ್ಟೆ. - ಪೂಜಾ ರಾವ್
ಮೀಸಲಿನ ಅಗತ್ಯವಿಲ್ಲದೆ ಮಹಿಳೆ ಎಲ್ಲದರಲ್ಲಿಯೂ ಮುಂದೆ ಬಂದಿರುವಾಗ, ಈಗೇಕೆ ಮೀಸಲು. ಮಹಿಳಾ  ಸಬಲೀಕರಣಕ್ಕೆ ಅದರ ಅಗತ್ಯವೇ ಇಲ್ಲ. ಮೀಸಲಿನಿಂದ ಶೋಷಣೆ ಹೆಚ್ಚಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅನಕ್ಷರಸ್ಥ ಹೆಣ್ಣು ಮಕ್ಕಳಿಗೆ ಅಧಿಕಾರ ನೀಡಿಸಿ, ಅದನ್ನು  ತಮ್ಮ ಮೂಲಕ ಚಲಾಯಿಸುವಂಥ ಕೆಟ್ಟ ಪದ್ಧತಿ ಆರಂಭವಾಗಬಹುದು.  - ಬಿ. ಶ್ವೇತಾ
ಮನೆಯಲ್ಲಿ ನಮ್ಮಪ್ಪ ದುಡಿಯುತ್ತಾರೆಯಷ್ಟೆ. ಮನೆಯ ಆಡಳಿತ ನಡೆಸುವುದು ಅಮ್ಮನೆ. ಇಂಥ ಅಮ್ಮಂದಿರ ಕೈಲಿ ದೇಶದ ಚುಕ್ಕಾಣಿ ಬಂದ್ರೆ, ಅದು ದೇಶಕ್ಕೇ ಒಳ್ಳೆಯದು. ಒಳ ಮೀಸಲಿನ ಸಾಧಕ-ಬಾಧಕಗಳ ಚರ್ಚೆ ಬಳಿಕ, ನಿರ್ಧಾರ  ಕೈಗೊಳ್ಳುವುದು ಒಳಿತು.-ಪಿ. ರಾಧಿಕ
೧೪ ವರ್ಷಗಳ ಹಿಂದೆಯೇ ೧೮೦ ಮಹಿಳೆಯರು ಸಂಸದರಾಗಿದ್ದರೆ, ದೇಶ ಇನ್ನಷ್ಟು ಪ್ರಗತಿ ಕಾಣುತ್ತಿತ್ತು. ಇನ್ನಷ್ಟು ಮಹಿಳಾ ಸಬಲೀಕರಣ ಆಗುತ್ತಿತ್ತು. ಮಹಿಳಾ ರಾಜಕೀಯ ಹೋರಾಟದ ಹಾದಿಯಲ್ಲಿ ಇದು ಆರಂಭವಷ್ಟೆ. ಈ ಮೀಸಲಿನ ಲಾಭ ಪಡೆದು, ಅರ್ಹ ಮಹಿಳೆಯರು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆಗಬೇಕು.  ಆಡಳಿತ ನಡೆಸುವ ಪುರುಷರಿಗೆ ನಮ್ಮ ಬಗ್ಗೆ ಎಷ್ಟೇ ಕನಿಕರ, ಪ್ರೀತಿ ಇದ್ದರೂ. ಮಹಿಳೆಯರ ಕಷ್ಟ ಮಹಿಳೆಯರಿಗಷ್ಟೇ ಗೊತ್ತಾಗಲು ಸಾಧ್ಯ. ಹಾಗಾಗಿ ಮಹಿಳೆ ನೀತಿ ರೂಪಕ ಸದನಗಳನ್ನು ಪ್ರವೇಶಿಸುತ್ತಿರುವುದರಿಂದ, ಬದಲಾವಣೆಯ ಗಾಳಿ ಬೀಸುವುದು ಖಚಿತ. - ರಶ್ಮಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ