ವೈರಮುಡಿ, ಬ್ರಹೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

ನವೀನ್ ಮಂಡ್ಯ
ಐತಿಹಾಸಿಕ ಮೇಲುಕೋಟೆಯಲ್ಲಿ ಮಾ.೨೫ರಂದು ನಡೆಯಲಿರುವ ಶ್ರೀ ಚಲುವನಾರಾಯಣ ಸ್ವಾಮಿಯ ವಿಶ್ವವಿಖ್ಯಾತ ಶ್ರೀ ವೈರಮುಡಿ ಬ್ರಹ್ಮೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಅಂತಿಮ ಹಂತದ ಕಾಮಗಾರಿಗಳು ನಡೆದಿವೆ.
ಈ ಬಾರಿಯ ಶ್ರೀ ವೈರಮುಡಿ ಉತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿಭದ್ರತೆ ಹಾಕಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿರ್ಧರಿಸಿದೆ.
ಉತ್ಸವ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ೩ ಬಾರಿ ಹಾಗೂ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ೧ ಬಾರಿ ಸಭೆ ನಡೆಸಿ ಪೂರ್ವಸಿದ್ಧತೆ ಬಗ್ಗೆ ಚರ್ಚಿಸಲಾಗಿದೆ. ಪ್ರಭಾರ ಜಿಲ್ಲಾಧಿಕಾರಿ ಪುಟ್ಟಮಾದಯ್ಯ ಅವರು ಮಾ. ೨೧ರಂದು ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸುವರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕು ಪ್ರಮುಖ ಕಾಮಗಾರಿಗಳನ್ನು ಉದ್ಘಾಟಿಸಿ, ಒಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. ಸಿಎಂ ಆಗಮನದ ಹಿನ್ನೆಲೆಯಲ್ಲಿ ವೇದಿಕೆ ಕಾರ‍್ಯಕ್ರಮ ನಡೆಸಲು ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ.
ಶ್ರೀ ವೈರಮುಡಿ ಬ್ರಹ್ಮೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಕುಡಿಯುವ ನೀರು, ರಸ್ತೆ, ನಿರಂತರ ವಿದ್ಯುತ್, ಸಾರಿಗೆ, ತಾತ್ಕಾಲಿಕ ಶೌಚಾಲಯಗಳು, ವೈದ್ಯ ಚಿಕಿತ್ಸಾ ಕೇಂದ್ರಗಳು ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಪುಟ್ಟಮಾದಯ್ಯ ಅವರು ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ತಾತ್ಕಾಲಿಕ ಶೌಚಾಲಯ: ಮೇಲುಕೋಟೆಯ ೮ ಪ್ರಮುಖ ಸ್ಥಳಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳಲ್ಲಿ ೪ ಸ್ಥಳಗಳಲ್ಲಿ ತಲಾ ೨೫ ಹಾಗೂ ಉಳಿದೆಡೆ ತಲಾ ೨೦ ಶೌಚಾಲಯಗಳಂತೆ ಒಟ್ಟು ೧೮೦  ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ.
ಕುಡಿಯುವ ನೀರು: ಮೇಲುಕೋಟೆಗೆ ಪ್ರಸ್ತುತ ಕೆರೆತೊಣ್ಣೂರಿನಿಂದ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಜಾರಿಯಲ್ಲಿದೆ. ಭಕ್ತರಿಗಾಗಿ ಅಲ್ಲಲ್ಲಿ ನಲ್ಲಿ ಟ್ಯಾಪ್‌ಗಳನ್ನು ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ತಯಾರಿ ನಡೆದಿದೆ.
ಸ್ವಚ್ಛತೆ: ಕ್ಲೋರಿನ್ ಪೌಡರ್ ಹಾಕಿ ಪಂಚಕಲ್ಯಾಣಿ, ಅಕ್ಕತಂಗಿಯರ ಕೊಳಗಳನ್ನು ಶುಚಿಗೊಳಿಸಲಾಗಿದೆ. ಜತೆಗೆ, ಶ್ರೀಚಲು ವ ನಾರಾಯಣಸ್ವಾಮಿ ದೇವಸ್ಥಾನ, ಶ್ರೀ ಯೋಗಾನರಸಿಂಹಸ್ವಾಮಿ ಬೆಟ್ಟ, ರಾಯಗೋಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಗಿಡ ಗಂಟಿಗಳು, ಕಸವನ್ನು ತೆರವುಗೊಳಿಸಿ ಸ್ವಚ್ಛತೆ ಕಾಯ್ದುಕೊಳ್ಳಲಾಗಿದೆ. ಚರಂಡಿಗಳನ್ನು ಶುಚಿ ಗೊಳಿಸಲಾಗುತ್ತಿದೆ.
ಸಾರಿಗೆ ಸೌಲಭ್ಯ: ಭಕ್ತರು ವಿವಿಧೆಡೆಯಿಂದ ಮೇಲುಕೋಟೆಗೆ ಬರಲು ಅನು ಕೂಲವಾಗುವಂತೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಕೆಎಸ್‌ಆರ್‌ಟಿಸಿ ಮಂಡ್ಯ ವಿಭಾಗದಿಂದ ೭೫ ಬಸ್‌ಗಳನ್ನು ನಿಯೋಜಿಸಲಾಗಿದೆ. ಉಳಿದಂತೆ ಮೈಸೂರು, ಹಾಸನ, ಬೆಂಗಳೂರು ವಿಭಾಗಗಳಿಂದ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬಸ್‌ಗಳ ನಿಲುಗಡೆಗಾಗಿ ಎರಡು ಸ್ಥಳಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ.
ಐರಾವತ, ರಾಜಹಂಸ ಬಸ್: ಈ ಮೊದಲು ಮೈಸೂರು, ಬೆಂಗಳೂರಿನಲ್ಲಿ ಸಂಚರಿಸುವ ವೋಲ್ವೊ ಎಸಿ ಬಸ್‌ಗಳನ್ನು ಮೇಲುಕೋಟೆಗೆ ಜಾತ್ರಾ ಮಹೋತ್ಸವಕ್ಕಾಗಿ ಬಿಡಲು ಚಿಂತಿಸಲಾಗಿತ್ತು. ಆದರೆ, ಮೇಲುಕೋಟೆ ಮಾರ್ಗದ ರಸ್ತೆಗಳಲ್ಲಿ ರಸ್ತೆಡುಬ್ಬಗಳಿರುವ ಕಾರಣ ಆ ಚಿಂತನೆಯನ್ನು ಕೈ ಬಿಡಲಾಗಿದೆ. ಬದಲಿಗೆ ಐರಾವತ, ರಾಜಹಂಸ ಬಸ್‌ಗಳನ್ನು ಬಿಡಲು ನಿರ್ಧರಿಸಲಾಗಿದೆ.
ಚಿಕಿತ್ಸಾ ಕೇಂದ್ರಗಳು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಜತೆಗೆ ವೈದ್ಯ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗುತ್ತಿದೆ. ಎರಡು ಆಂಬ್ಯುಲೆನ್ಸ್‌ಗಳು, ವೈದ್ಯರು ಹಾಗೂ ದಾದಿಯರನ್ನು ನಿಯೋಜಿಸಲಾಗಿದೆ.
ದುರಸ್ತಿ ಕಾಮಗಾರಿ: ಉತ್ಸವದ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಲಿನ ರಸ್ತೆ ಹಾಗೂ ಗ್ರಾಮದ ರಸ್ತೆಗಳ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ದೋಷ ಕಂಡು ಬಂದಿದ್ದ ರಥದ ಮುಂದಿನ ಎರಡು ಚಕ್ರಗಳನ್ನು ಗಂಜಾಂನಲ್ಲಿ ದುರಸ್ತಿ ಪಡಿಸಲಾಗಿದೆ.
ನಿರಂತರ ವಿದ್ಯುತ್: ವೈರಮುಡಿ ಉತ್ಸವಕ್ಕೆ ಯಾವುದೇ ಅಡಚಣೆ ಆಗದಂತೆ ನಿರಂತರ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗಿದೆ. ಈ ಸಂಬಂಧ ಸೆಸ್ಕ್ ಅಧಿಕಾರಿಗಳಿಗೆ ಜಿಲ್ಲಾಡಳಿತ ಅಗತ್ಯ ಸಲಹೆ-ಸೂಚನೆ ನೀಡಿದೆ. ದೇವಾಲಯಗಳು, ಗೋಪುರ ಹಾಗೂ ರಸ್ತೆ ಬದಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ