ಮೈಸೂರು ಗಡಿ ದಾಟಿ ವಿಶ್ವ ‘ರಂಗಾಯಣ’ವಾಗಲಿ

ವಿಕ ಸುದ್ದಿಲೋಕ ಮೈಸೂರು
‘ನಾಡಿನ ಪ್ರತಿಷ್ಠಿತ ರೆಪರ್ಟರಿ ರಂಗಾಯಣ ಮೈಸೂರಿಗೆ ಸೀಮಿತವಾಗುವುದು ಬೇಡ. ಎಲ್ಲ ಕಡೆಯೂ ರಂಗ ಸಂಚಾರ ಮಾಡಲಿ, ವಿಸ್ತಾರವಾಗಲಿ. ಅದು ವಿಶ್ವ ರಂಗಾಯಣವಾಗಿ ಬೆಳಗಲಿ....!’ 
ಇಂಥದ್ದೊಂದು ಬೃಹದ್ ಆಶಯಯೊಂದಿಗೆ  ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ -೨೦೧೦ ಶನಿವಾರ ಆರಂಭವಾಯಿತು. ರಂಗಾಯಣಕ್ಕೆ ಪೂರ್ಣಾವಧಿಯ ನಿರ್ದೇಶಕರು ಇಲ್ಲದೇ ಇರುವುದು ಹಾಗೂ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ  ರಂಗಾಯಣದ ವಾರ್ಷಿಕ ಉತ್ಸವಕ್ಕೆ ಈ ಬಾರಿ ಸರಳತೆಯ ಅಂಗಿ ತೊಡಿಸಲಾಗಿದೆ. ಹಾಗಾಗಿ ಐದು ನಾಟಕಗಳ ಪ್ರದರ್ಶನ, ರಂಗ ಸಂಗೀತ, ಸಂವಾದ, ಪುಸ್ತಕ ಪ್ರದರ್ಶನ ಹಾಗೂ ಮಾರಾಟವಷ್ಟೇ ಈ ಬಾರಿಯ ಬಹುರೂಪಿಯ ಬಹುರೂಪಗಳು. ಪ್ರತಿ ಬಾರಿಯಂತೆ ಬಹುರೂಪಿಗೆ  ಈ ಬಾರಿ ಯಾವುದೇ ಘೋಷಿತ ಆಶಯವೂ ಇಲ್ಲ. ನಾಟಕೋತ್ಸವದ ಉದ್ಘಾಟನೆ ಸಂದರ್ಭದಲ್ಲಿ  ಈ ಕೊರತೆಯನ್ನು ನೀಗಿಸುವ ಪ್ರಯತ್ನ, ಅತಿಥಿಗಳ ಭಾಷಣದಲ್ಲಿ ವ್ಕಕ್ತವಾಯಿತು. ಅದು ಒಂದು ರೀತಿಯಲ್ಲಿ  ರಂಗಾಸಕ್ತರ ಮನಸ್ಸಿನಲ್ಲಿರುವ ಅಘೋಷಿತ ಆಶಯ. 
ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ ವಿ. ಕೆ. ಮೂರ್ತಿ ಅವರ ಗೈರು ಹಾಜರಿಯಲ್ಲಿ ಮೂರು ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿದ ರಂಗಭೂಮಿ ಕಲಾವಿದೆ ಉಮಾಶ್ರೀ, ‘ಬಿ. ವಿ. ಕಾರಂತರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಇಲ್ಲಿನ ಕಲಾವಿದರು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯವಾದುದು. ಇಲ್ಲಿಂದ ಹೊರಬಿದ್ದಿರುವ ಕಲಾವಿದರು ಸಿನಿಮಾದಲ್ಲೂ ಸೈ ಎನಿಸಿಕೊಂಡಿದ್ದಾರೆ. ಹೊಸ ರಂಗ ಸಂಸ್ಥೆಗಳನ್ನು ಕಟ್ಟಿ, ಕಲಾವಿದರನ್ನು ಸೃಷ್ಟಿಸಿದ್ದಾರೆ. ಆದರೆ, ರಂಗಾಯಣ ತನ್ನ ಕ್ರಿಯಾತ್ಮಕ ಹಾಗೂ ರಚನಾತ್ಮಕ  ಚಟುವಟಿಕೆಗಳನ್ನು ಇನ್ನಷ್ಟು ವಿಸ್ತಾರ ಮಾಡಬೇಕಿದೆ.
ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಯ ನಡುವೆ ಸೇತುವೆಯಾಗಿ ರಂಗಾಯಣ ಕೆಲಸ ಮಾಡಲಿ’ಎಂದು ಆಶಿಸಿದರು.
‘ವೃತ್ತಿ ರಂಗಭೂಮಿ ಕಲಾವಿದರಿಂದ ವರ್ಷದ ೩೬೫ ದಿನವೂ ವಿಶ್ವ ರಂಗಭೂಮಿ ದಿನವೇ’ ಎಂದು ನೆನಪಿಸಿದ ಉಮಾಶ್ರೀ, ರಂಗಾಯಣವೂ ಆ ಮಾದರಿಯಲ್ಲಿ  ಕಾರ್ಯಶೀಲವಾಗಲಿ ಎಂಬುದನ್ನು ಹೇಳಿದ್ದು ಹೀಗೆ- ‘ನೀನಾಸಂನ ತಿರುಗಾಟ, ಶಿವ ಸಂಚಾರ ತಂಡಗಳ ರಂಗ ತಿರುಗಾಟದ ಮಾದರಿಯಲ್ಲಿ, ರಂಗಾಯಣ ಕೂಡ ಕರ್ನಾಟಕದಾದ್ಯಂತ ತಿರುಗಾಟ ನಡೆಸಬೇಕು. ಇಲ್ಲಷ್ಟೇ ನಾಟಕ ಮಾಡಿದರೆ, ಅದು ಮೈಸೂರಿಗೆ ಮಾತ್ರ ಸೀಮಿತವಾಗುತ್ತದೆ. ರಂಗಾಯಣ ಕಲಾವಿದರು ಹೊಟ್ಟೆ ತುಂಬಿಸಿಕೊಳ್ಳಲು, ಸಂಬಳಕ್ಕೆ ದುಡಿಯುವ ಕಲಾವಿದರಾಗ ಬಾರದು. ರಂಗಭೂಮಿಗೆ ಇನ್ನಷ್ಟು ಕೊಡುಗೆ ನೀಡಬೇಕು. ಕಲಾವಿದರು ಕಾರಂತರ ಕನಸುಗಳನ್ನು ಕಟ್ಟುವ ಜನತೆಗೆ, ಅವುಗಳನ್ನು ಸಾಕಾರಗೊಳಿಸಬೇಕು’ ಎಂದು ಹೇಳಿದರು. 
‘ಧಾರವಾಡದ ರಂಗಾಯಣ ತನ್ನ ಕಾರ್ಯಚಟುವಟಿಕೆ ಯನ್ನು ಆರಂಭಿಸಿದೆಯಾದರೂ, ಅದು ವಿಸ್ತಾರದ ಕಾರ್ಯ ಆಗಿರ ಲಿಕ್ಕಿಲ್ಲ. ಈ ಕೆಲಸ ಆಗಲಿ. ಸಂಸ್ಥೆ ಬೆಳೆಯಲಿ. ಹೊಸ ತಲೆಮಾರಿಗೂ ಅದು ಸಿಗಲಿ. ವಿಶ್ವ ರಂಗಾಯಣ ವಾಗಲಿ’ ಎಂದು ಹಾರೈಸಿದರು.
ಸುತ್ತಾಟಕ್ಕೆ ಸರಕಾರದ ನೆರವು : ಅಧ್ಯಕ್ಷತೆ ವಹಿಸಿದ್ದ  ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ ಕಾರ್ಯದರ್ಶಿ ಬಿ.ಆರ್. ಜಯರಾಮರಾಜೇ ಅರಸ್ ಅವರು ಉಮಾಶ್ರೀ ಎತ್ತಿದ ಪ್ರಶ್ನೆಗಳಿಗೆ- ಬಯಕೆಗಳಿಗೆ ಸ್ಪಂದನೆ ನೀಡುವ ದಾಟಿಯಲ್ಲಿ ಮಾತನಾಡಿದರು. ‘ರಂಗಾಯಣ ನಿಂತ ನೀರಾಗಬಾರದು. ಹರಿಯುವ ನೀರಿನಂತೆ ಇರಬೇಕು ಎಂಬುದು ಉಮಾಶ್ರೀ ಆಶಯ. ಇದಕ್ಕೆ ಸರಕಾರ ಸಂಪೂರ್ಣ ಬೆಂಬಲ ನೀಡುತ್ತದೆ.  ಇಲ್ಲಿನ ಕಲಾವಿದರು ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿ. ಅವರಿಗೆ ಸ್ವಾತಂತ್ರ್ಯ, ಸ್ವಾಯತ್ತವನ್ನು ನೀಡುತ್ತೇವೆ’ ಎಂದರು. ವೃತ್ತಿ ರಂಗಭೂಮಿಯ ಹಿರಿಯ ಕಲಾವಿದ ಎಚ್.ಟಿ.ವೀರಣ್ಣ ಉತ್ಸವಕ್ಕೆ ಶುಭ ಹಾರೈಸಿ ಮಾತನಾಡಿದರು.
ಪ್ರಭಾರ ನಿರ್ದೇಶಕ ಕಾ.ತ.ಚಿಕ್ಕಣ್ಣ, ಬಹುರೂಪಿ ಸಂಚಾಲಕ ಮೈಮ್ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮಂಜಪ್ಪ ಭಾಗವಹಿಸಿ ದ್ದರು. ಒಂದು ಗಂಟೆ ತಡವಾಗಿ ಆರಂಭವಾದ  ಉದ್ಘಾಟನಾ ಸಮಾರಂಭವನ್ನು ತಮ್ಮ ರಂಗ ಗೀತೆಗಳ ಮೂಲಕ ಹಿಡಿದಿಟ್ಟಿದ್ದ  ಜನ್ನಿ ಮತ್ತು ಸಂಗಡಿಗರು, ಸಭೆಯ ಬಳಿಕ  ರಂಗ ಸಂಗೀತ ಸಂಜೆಯನ್ನು ಮನದಣಿ ನಡೆಸಿಕೊಟ್ಟರು.
ಬಹುರೂಪಿಯ ಮೊದಲ  ಪ್ರದರ್ಶನ - ‘ನಾ ತುಕರಾಂ ಅಲ್ಲಾ’ ನಾಟಕ ಭೂಮಿ ಗೀತಾದಲ್ಲಿ  ಹೌಸ್‌ಫುಲ್ ಪ್ರದರ್ಶನ ಗೊಂಡಿತು. ಬೆಂಗಳೂರಿನ ಎಸ್.ಆರ್. ಥಿಯೇಟರ್ ಗ್ರೂಪ್  ಅಭಿನಯಿಸಿದ ನಾಟಕವನ್ನು ಸುರೇಂದ್ರನಾಥ್ ನಿರ್ದೇಶಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ