ಔಷಧವು ಕಹಿಯಲ್ಲ...ನಂಬಿ ಪಡೆದರೆ ಕೇಡಿಲ್ಲ...

ಕಾಯಿಲೆಗಲ್ಲ, ವ್ಯಕ್ತಿಗೇ ಔಷಧ !
 ವಿಕ ಸುದ್ದಿಲೋಕ ಮೈಸೂರು
‘ಶಸ್ತ್ರ ಚಿಕಿತ್ಸೆಯಂಥ ಅನಿವಾರ್ಯ,ತುರ್ತು ಪ್ರಕರಣ, ಅಸ್ವಾಭಾವಿಕ ಸಮಸ್ಯೆಗಳ  ಹೊರತು ಎಲ್ಲಾ ಕಾಯಿಲೆಗಳಿಗೆ ಹೋಮಿಯೋಪತಿ ಯಲ್ಲಿ ಪರಿಹಾರ  ಇದೆ...’
-ಇದು ಹೋಮಿಯೋಪತಿ ವೈದ್ಯ ಡಾ.ಎಂ.ಸಿ.ಮನೋಹರ್ ಅವರ ಅಭಿಪ್ರಾಯ. ‘ಕೆಮ್ಮಿನಿಂದ ಕ್ಯಾನ್ಸರ್‌ವರೆಗಿನ ಎಲ್ಲಾ ಸ್ವಾಭಾವಿಕ ಕಾಯಿಲೆಗೆ  ಔಷಧವಿದೆ. ನಂಬಿ ಪಡೆದರೆ ಖಂಡಿತಾ ಕೇಡಿಲ್ಲ’ ಎಂಬುದು ಸ್ಪಷ್ಟ ಅಭಿಮತ.
‘ವಿಜಯ ಕರ್ನಾಟಕ’ ಶನಿವಾರ ಆಯೋಜಿಸಿದ್ದ  ‘ಫೋನ್ -ಇನ್ ’ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸಾರ್ವಜನಿಕರ ತರಹೇವಾರಿ ಸಮಸ್ಯೆ, ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರವಾದರು.
ಔಷಧ ಇದೆಯಾ?: ಕತ್ತುನೋವು,ಮಂಡಿನೋವು,ಮೂಳೆ ಸವೆತ, ಕೆಮ್ಮು, ನೆಗಡಿ, ಜ್ವರ, ಸಕ್ಕರೆ ಕಾಯಿಲೆ, ಅಸ್ತಮಾ, ಚರ್ಮ,ಕ್ಯಾನ್ಸರ್  ಕಾಯಿಲೆ ಮತ್ತಿತರ  ಸಮಸ್ಯೆಗಳ ಕುರಿತಂತೆ ದೂರವಾಣಿಯಲ್ಲಿ ‘ದುಮ್ಮಾನ ’ಹೇಳಿಕೊಂಡವರ ಪೈಕಿ ಬಹುತೇಕರದ್ದು ಒಂದೇ ಪ್ರಶ್ನೆ  ‘ಏನೇನೋ ಚಿಕಿತ್ಸೆ ಮಾಡಿದ್ದಾಯಿತು.ಕಾಯಿಲೆ ವಾಸಿನೇ ಆಗ್ಲಿಲ್ಲ. ಹೋಮಿಯೋಪತಿಯಲ್ಲೇನಾದರೂ  ಔಷಧ ಇದೆಯಾ’ ಎಂಬುದು.
‘ಅಪಘಾತ, ಹೃದಯಾಘಾತ, ವಿಷಸೇವನೆಯಂಥ  ತುರ್ತು ಸಂದರ್ಭಗಳಲ್ಲಿ ಹೋಮಿಯೋ ಚಿಕಿತ್ಸೆ ಸಾಧ್ಯವಿಲ್ಲ.ಆದರೆ, ತುರ್ತು ಚಿಕಿತ್ಸೆ ನಂತರ ಆರೋಗ್ಯ ವರ್ಧನೆಗೆ  ಔಷಧ ಉಂಟು. ಅಸ್ವಾಭಾವಿಕ  ಸಮಸ್ಯೆಗಳ ಹೊರತು ಎಲ್ಲಾ ಸ್ವಾಭಾವಿಕ ಕಾಯಿಲೆಗೆ ಚಿಕಿತ್ಸೆ  ಇದೆ. ಇತರೆ ವೈದ್ಯ ಪದ್ಧತಿಗಳಲ್ಲಿ ವಾಸಿಯೇ ಆಗದ ಕಾಯಿಲೆಗಳಿಗೆ ಪರಿಹಾರ ನೀಡಿದ ಅದೆಷ್ಟೋ ಪ್ರಕರಣಗಳಿವೆ ’ ಎಂದು ಪ್ರತಿಕ್ರಿಯಿಸಿದರು.
ಮನೋಧರ್ಮ ಗಟ್ಟಿ: ಹೋಮಿಯೋಪತಿ ವ್ಯಕ್ತಿಯ ಮನೋಧರ್ಮ ವನ್ನು ಗಟ್ಟಿಗೊಳಿಸುತ್ತದೆ. ವಿಷ ಕುಡಿದವರಿಗೆ ತಕ್ಷಣದ ಚಿಕಿತ್ಸೆ  ಸಾಧ್ಯ ವಿಲ್ಲವಾದರೂ ‘ಆತ್ಮಹತ್ಯೆ ಮನೋಧರ್ಮ’ವನ್ನು ನಿವಾರಿಸಬಹುದು. ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು ಇನ್ನೊಂದು ವಿಶೇಷ. ಆತಂಕ,ಖಿನ್ನತೆ, ಮಾನಸಿಕ ಕಾಯಿಲೆ, ಅಷ್ಟೇ ಏಕೆ ತೊನ್ನು, ಪೈಲ್ಸ್ ,ಮಲಬದ್ಧತೆಗೂ ಪರಿಣಾಮಕಾರಿ ಔಷಧವಿದೆ.
ಅಡ್ಡಪರಿಣಾಮವಿಲ್ಲ: ಹೋಮಿಯೋಪತಿ ಚಿಕಿತ್ಸೆ ವ್ಯಕ್ತಿ ಕೇಂದ್ರಿತ. ಮನುಷ್ಯನನ್ನು ಬೇರೆ ಬೇರೆ ಅಂಗಗಳನ್ನಾಗಿ ನೋಡದೆ, ಒಂದು ಘಟಕವನ್ನಾಗಿ ಅವಲೋಕಿಸಿ ಔಷಧ ನೀಡಲಾಗುತ್ತದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನ. ಕಾಯಿಲೆ  ಒಂದೇ ಆದರೂ ಚಿಕಿತ್ಸೆ ,ಪತ್ಯ ಬೇರೆ ಆಗಬಹುದು.‘ಯಾವುದು ಉಂಟು ಮಾಡುತ್ತದೆಯೋ ಅದೇ ವಾಸಿ ಮಾಡುತ್ತದೆ ’ಎನ್ನುವ ತಿಳಿವಳಿಕೆಯ ನೆಲೆಯಲ್ಲಿ ಔಷಧಗಳನ್ನು ಸಿದ್ಧೀಕರಿಸುವುದರಿಂದ  ಪರಿಣಾಮ ಖಂಡಿತಾ; ಅಡ್ಡ  ಪರಿಣಾಮದ ಮಾತೇ ಇಲ್ಲ.
ಮನಸ್ಸಿನ ವಿಷಯ: ‘ಮನಸ್ಥಿತಿ, ದೈಹಿಕ  ಸ್ಥಿತಿ,ಸಾಮಾಜಿಕ  ಸಂಬಂಧಗಳು ಸಮರ್ಪಕವಾಗಿದ್ದರೆ ಅಂಥ ವ್ಯಕ್ತಿ ಆರೋಗ್ಯವಂತ ’ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನ. ಹೋಮಿಯೋಪತಿಯದ್ದು ಇಂಥದೇ ಚಿಕಿತ್ಸಾ ಪದ್ಧತಿ.ರೋಗಿಯ ದೈಹಿಕ ,ಮಾನಸಿಕ, ಸಾಮಾಜಿಕ ಸ್ಥಿತಿ,ಕುಟುಂಬದ ಇತಿಹಾಸವನ್ನು ಅವಲೋಕಿಸಿ ಚಿಕಿತ್ಸೆ ನೀಡುವುದರಿಂದ ಹೆಚ್ಚು ಪರಿಣಾಮಕಾರಿ.
ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ ಕಾಯಿಲೆಗಳಿಗೂ ಔಷಧ ಇದೆ. ಗಾಯಗಳಿಗೆ ಬಳಸುವ ‘ಕ್ಯಾಲೆಂಡುಲ’ಮುಲಾಮು ಹಸುವಿನ ಗಾಯವನ್ನೂ ವಾಸಿಮಾಡಿದ ಉದಾಹರಣೆ   ಇದೆ. ಪಶುವೈದ್ಯರೇ ಹಸು ವಿನ ಕೆಚ್ಚಲು ಬಾವು ಸಮಸ್ಯೆಗೆ ಹೋಮಿಯೋ ಮದ್ದು ನೀಡುತ್ತಿದ್ದಾರೆ.
ಇತಿ ಮಿತಿ: ಅರ್ಹತೆ ಇಲ್ಲದ ವೈದ್ಯರು, ಅಸಹಕಾರ ಮನೋಭಾವದ ರೋಗಿಗಳು  ಈ ಪದ್ಧತಿಯ ಎರಡು ‘ಸವಾಲು’ಗಳು. ಪರಿಣತಿ, ತಿಳಿವಳಿಕೆ ಇಲ್ಲದೆ ‘ನಕಲಿ ಪ್ರಮಾಣ ಪತ್ರ’ಗಳನ್ನಿಟ್ಟುಕೊಂಡು ತಪ್ಪು ಚಿಕಿತ್ಸೆ ನೀಡುವ ಮತ್ತು ಔಷಧವನ್ನು ದುಬಾರಿ ದರಕ್ಕೆ ಮಾರಿ ಹಣ ಮಾಡುತ್ತಿರುವ ‘ವೈದ್ಯರು’ ನಿಜವಾದ ಕಂಟಕರು.ಅಂತೆಯೇ,ರೋಗಿಗಳು ‘ಅಸಹಕಾರ ‘ಮನೋಭಾವ ಪ್ರದರ್ಶಿಸಿದರೆ  ಚಿಕಿತ್ಸೆ  ಅಸಾಧ್ಯವಾಗಬಹುದು.
ಹೋಮಿಯೋಪತಿ ವೈದ್ಯರು ಸಹ ಅಲೋಪತಿ ವೈದ್ಯರಂತೆ ಮಾನವನ ದೇಹರಚನೆ ಸೇರಿದಂತೆ ಎಲ್ಲವನ್ನೂ ಅಧ್ಯಯನ ಮಾಡಿರುತ್ತಾರೆ.  ಆದರೆ ಚಿಕಿತ್ಸಾ ವಿಧಾನ ಬೇರೆಯಷ್ಟೆ.
‘ಹೋಮಿಯೋ ಚಿಕಿತ್ಸೆ ಪಡೆಯುವ  ಮುನ್ನ ವೈದ್ಯರ ಪರಿಣತಿ, ಅರ್ಹತೆ,ಅಧಿಕೃತತೆ,ಬದ್ಧತೆಯನ್ನು ಮೊದಲು ಖಚಿತ ಪಡಿಸಿಕೊಳ್ಳಿ;ನಂತರ, ವೈದ್ಯರ ಬಳಿ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳಿ ’ಎನ್ನುವುದು ಅವರ ಒಟ್ಟು ಮಾತಿನ  ಸಾರ.
ಇವರು ನಿಮ್ಮ ವೈದ್ಯರು
ಡಾ.ಎಂ.ಸಿ.ಮನೋಹರ್  ಬಿಎಚ್‌ಎಂಎಸ್
ಮೈಸೂರಿನವರೇ. ಹುಟ್ಟಿ,ಬೆಳೆದದ್ದು ಸಂತೆಪೇಟೆಯಲ್ಲಿ, ಈಗಿ ರುವುದು ಕುವೆಂಪುನಗರ. ಪಿಯುಸಿವರೆಗಿನ  ಓದು ಇಲ್ಲೇ. ನಂತರ ಬೆಂಗಳೂರಿನ  ಸರಕಾರಿ ಹೋಮಿಯೋಪತಿ ಮಹಾ ವಿದ್ಯಾಲಯದಲ್ಲಿ ಹೋಮಿಯೋಪತಿ ಪದವಿ (ಬಿಎಚ್‌ಎಂಎಸ್).೧೨ ವರ್ಷಗಳಿಂದ ವೈದ್ಯ ವೃತ್ತಿ.ಕ್ಯಾನ್ಸರ್ ಕುರಿತು  ಸಂಶೋಧನೆ  ಮಾಡುತ್ತಿದ್ದಾರೆ. ಹೋಮಿಯೋ ಪತಿ ಕುರಿತೇ ‘ಔಷಧವು ಕಹಿಯಲ್ಲ’ ಎಂಬ ಸಂಗ್ರಹಯೋಗ್ಯ ಪ್ರಸ್ತಕ ಬರೆದಿದ್ದಾರೆ. ಸಮಾನ ಮನಸ್ಕರ ಜತೆ ಸೇರಿ ‘ಅರಿವು’ ಎಂಬ ಶೈಕ್ಷಣಿಕ-ಸಾಂಸ್ಕೃತಿಕ  ಟ್ರಸ್ಟ್ ಸ್ಥಾಪಿಸಿ,ನಡೆಸುತ್ತಿದ್ದಾರೆ. ವಿಳಾಸ: ಮನು ಹೋಮಿಯೋಪತಿ ಕ್ಲಿನಿಕ್, ವಿವೇಕಾನಂದ ವೃತ್ತ, ವಿವೇಕಾನಂದ ನಗರ. ಮೈಸೂರು. ದೂ: ೦೮೨೧-೨೪೬೩೪೮೨.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ