ಕ್ಷಯ ಭಯ ಹೋಗಲಾಡಿಸಿ

ವಿಕ ಸುದ್ದಿಲೋಕ ಮೈಸೂರು
ರೋಗ ಮುಕ್ತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮಹತ್ತರವಾದದ್ದು. ಹಾಗಾಗಿ ಕ್ಷಯರೋಗ ನಿರ್ಮೂಲನೆಗೆ ವೈದ್ಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ತಿಳಿಸಿದರು.
ಪುರಭವನದಲ್ಲಿ ಬುಧವಾರ ‘ಕ್ಷಯರೋಗದ ವಿರುದ್ಧ ಆಂದೋಲನ, ತ್ವರಿತ ಕ್ರಿಯೆಗೆ ಹೊಸ ತಂತ್ರಗಳ ಆವಿಷ್ಕಾರ’ ಘೋಷಣೆಯಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಹಾಗೂ  ಸ್ವಯಂಸೇವಾ ಸಂಘಗಳು ಏರ್ಪಡಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇವತ್ತಿಗೂ ಕ್ಷಯ ರೋಗ ಸಂಪೂರ್ಣವಾಗಿ ಹೋಗ ಲಾಡಿಸಲಾಗಿಲ್ಲ. ಇದಕ್ಕೆ ಕಾರಣವೇನು ಎನ್ನುವುದನ್ನು ವೈದ್ಯರೇ ಹೇಳಬೇಕು. ಸರಕಾರದ ಕಾರ‍್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವೈದ್ಯ ಸಿಬ್ಬಂದಿ ಮುಂದಾಗಬೇಕು. ಜನರಲ್ಲಿ ಅರಿವು ಮೂಡಿಸಿ ಕ್ಷಯ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಂಡು ಸಮುದಾಯದ ಆರೋಗ್ಯ ಕಾಪಾಡಬೇಕೆಂದರು.
ಉಪಮೇಯರ್ ಶಾರದಮ್ಮ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿ.ರಾಜು, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಎನ್.ಆನಂದ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಾಮದೇವ್,ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷರಾದ ಡಾ.ವಿದ್ಯಾಶಂಕರ್ ಹಾಜರಿದ್ದರು. ನಂತರ ಕ್ಷಯ ರೋಗ ಕುರಿತಾದ ಕಿರು ಚಿತ್ರ, ಕಿರು ನಾಟಕ ಇತ್ಯಾದಿಗಳನ್ನು ನಡೆಸಲಾಯಿತು.
ಅರಿವು ಜಾಥಾ: ಮೈಸೂರು ವೈದ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಗೀತಾ ಅವಧಾನಿ ಚಾಲನೆ ನೀಡಿದರು.
ಕ್ಷಯ ರೋಗ ಗುಣಪಡಿಸಬಹುದಾದ ಕಾಯಿಲೆ, ಧೂಮಪಾನದಿಂದ ಆರೋಗ್ಯಕ್ಕೆ ಹಾನಿಕಾರಕ, ಕೆಮ್ಮುವಾಗ ಬಾಯಿಗೆ ಕರವಸ್ತ್ರ ಅಡ್ಡವಿಟ್ಟುಕೊಳ್ಳಬೇಕು, ಕ್ಷಯ ರೋಗ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತ, ಇವೇ ಮೊದಲಾದ ಭಿತ್ತಿಫಲಕ ಗಳನ್ನು ಹಿಡಿದು ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು ಮೆರವಣಿಗೆ ಯಲ್ಲಿ ಸಾಗಿದರು. ಜಾಥಾ ಇರ‍್ವಿನ್ ರಸ್ತೆ, ನೆಹರು ವೃತ್ತ, ಅಶೋಕ ರಸ್ತೆ ಮೂಲಕ ಪುರಭವನ ತಲುಪಿತು.
ಸಂಪೂರ್ಣ ನಿರ್ಮೂಲನೆಯಾಗಿಲ್ಲ: ಜಿಲ್ಲೆಯಲ್ಲಿ ಕ್ಷಯರೋಗ ಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಇನ್ನೂ ಕೂಡ ಶೇ.೮೦ರಷ್ಟು ಗುರಿಯನ್ನು ಮುಟ್ಟಲಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿ.ರಾಜು ವಿಷಾದಿಸಿದರು.
ಇಂದಿನ ಅನೇಕ ಅನುಕೂಲಗಳ ನಡುವೆಯೂ ಕ್ಷಯ ರೋಗ ನಿಯಂತ್ರಿಸ ಲಾಗದಿರುವುದು ವಿಷಾದದ ಸಂಗತಿ. ರೋಗಿಗಳು ನಿರಂತರ ಚಿಕಿತ್ಸೆ ಪಡೆಯದಿರು ವುದು ಮುಖ್ಯ ಕಾರಣ. ಈ ನಿಟ್ಟಿನಲ್ಲಿ ಜನರಲ್ಲಿ ಇನ್ನಷ್ಟು ಅರಿವು ಮೂಡಿಸುವ ಮತ್ತು ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದರು.
ಜಿಲ್ಲೆಯ ಅಂಕಿ ಅಂಶ: ಜಿಲ್ಲೆಯಲ್ಲಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಜನವರಿ, ೨೦೦೩ರಿಂದ ಡಿಸೆಂಬರ್ ೨೦೦೯ರವರೆಗೆ ೧೮,೭೯೯ ಕ್ಷಯ ರೋಗಿಗಳನ್ನು ಪತ್ತೆಹಚ್ಚಲಾಗಿದ್ದು, ೧೭,೫೬೧ ರೋಗಿಗಳು ಪೂರ್ಣ ಪ್ರಮಾಣ ದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ೪೭೨೫ ರೋಗಿಗಳು ಗುಣಮುಖರಾಗಿದ್ದು, ಶೇ.೭೮ ರಷ್ಟು ಸಾಧನೆ ಮಾಡಲಾಗಿದೆ.
ರೋಗ ಲಕ್ಷಣಗಳು: ಕ್ಷಯ ಸಾಂಕ್ರಾಮಿಕ ರೋಗ. ೨ ವಾರಗಳಿಗಿಂತ ಹೆಚ್ಚು ಸಮಯದಿಂದ ಸತತ ಕೆಮ್ಮು, ಕಫ, ಸಂಜೆ ವೇಳೆ ಜ್ವರ, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಕಫದಲ್ಲಿ ರಕ್ತ... ಇವು ಕ್ಷಯ ರೋಗದ ಲಕ್ಷಣಗಳು. ಆರಂಭದಲ್ಲಿ ಎರಡು ಬಾರಿ ಕಫ ಪರೀಕ್ಷೆಯಿಂದ ರೋಗವನ್ನು ಖಚಿತಪಡಿಸಿಕೊಂಡು  ೬-೮ ತಿಂಗಳು ತಪ್ಪದೇ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ