ಭ್ರಷ್ಟಾಚಾರಕ್ಕೆ ಸಮಾಜದ ಧೋರಣೆ ಕಾರಣ


ಮುಕ್ತವಿವಿ ಘಟಿಕೋತ್ಸವದಲ್ಲಿ ಲೋಕಾಯುಕ್ತ ‘ದಾಳಿ’...
ವಿಕ ಸುದ್ದಿಲೋಕ ಮೈಸೂರು
ಭ್ರಷ್ಟಾಚಾರ ದೇಶವನ್ನು ಈ ಪ್ರಮಾಣದಲ್ಲಿ ಆವರಿಸಲು ಸಮಾಜ ಈ ಬಗ್ಗೆ ಹೊಂದಿರುವ ಧೋರಣೆಯೇ ಮುಖ್ಯ ಕಾರಣ ಎಂದು ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ  ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಮುಕ್ತ ವಿವಿ ೧೦ನೇ ಘಟಿಕೋತ್ಸವದಲ್ಲಿ ಗುರುವಾರ ‘ಘಟಿಕೋತ್ಸವ ಭಾಷಣ’ ಮಾಡಿದ ಅವರು, ಸಮಾಜ ನ್ಯಾಯ-ಅನ್ಯಾಯದ ಸಂಪತ್ತಿನ ನಡುವಿನ ವ್ಯತ್ಯಾಸ ತಿಳಿಯದೆ ಸಂಪತ್ತುಳ್ಳವರೇ ‘ಯಶಸ್ವಿ ಜನ ’ಎಂಬ ತೀರ್ಮಾನಕ್ಕೆ ಬಂದಿರುವುದೇ ಭ್ರಷ್ಟಾಚಾರ ಹೆಚ್ಚಾಗಲು ಕಾರಣ ಎಂದರು.
ನ್ಯಾಯಯುತ ಸಂಪತ್ತು ಯಾವುದು,ಅನ್ಯಾಯದಿಂದ ಗಳಿಸಿದ್ದು ಯಾವುದು ಎಂಬುದನ್ನು ಸಮಾಜ ವಿವೇಚಿಸಿ,ತನ್ನ ಧೋರಣೆಯನ್ನು ಸರಿಪಡಿಸಿಕೊಂಡು ‘ಅನ್ಯಾಯಮಾರ್ಗಿ’ಗಳನ್ನು ನಿರಾಕರಿಸುವವರೆಗೆ ಭ್ರಷ್ಟಾಚಾರವನ್ನು ಹೋಗಲಾಡಿಸಲಾಗದು ಎಂದು ಪ್ರತಿಪಾದಿಸಿದರು.
ದೇಶದ ವಾಸ್ತವ ‘ನೋವು’,ಹೊಸ ಪದವೀಧರರು ಭವಿಷ್ಯದಲ್ಲಿ ತಳೆಯಬೇಕಾದ ‘ಭರವಸೆಯ ನಡೆ ’ಗಳ ಕುರಿತು ತಮ್ಮ ಮಾತನ್ನು ಕೇಂದ್ರೀಕರಿಸಿದ ಲೋಕಾಯುಕ್ತರು, ನೇರ, ಹರಿತ, ಪ್ರೇರಣದಾಯಕ ನುಡಿಗಳ ಮೂಲಕ ಪ್ರಾಮಾಣಿಕತೆಯ ‘ದೀಕ್ಷೆ’ ನೀಡಿದರು. ‘ಹಿರಿಯರ ಭ್ರಷ್ಟತೆ ’ಕುರಿತು ಸಾತ್ವಿಕ ವಾಗ್ದಾಳಿ ಮಾಡುತ್ತಲೇ,ಯುವ ಜನರು ದೇಶದ ಭವಿಷ್ಯ-ಬೆಳಕಾಗಬೇಕು ಎಂದು ಸಾರಿ ಹೇಳಿದರು. ಅವರ ಮಾತಿನ ಮುಖ್ಯಾಂಶ.
ಸಂಪತ್ತಿನತ್ತ ಮರುಳು ಓಟ: ಸಂಪತ್ತು ಗಳಿಕೆ ಬದುಕಿನ ಗುರಿಗಳಲ್ಲಿ ಒಂದಷ್ಟೇ. ನ್ಯಾಯ,ನೀತಿ ಮಾರ್ಗದಲ್ಲಿ ಗಳಿಸಿದ ಸಂಪತ್ತಿಗೆ ಪಾಪದ ಕಳಂಕವಿರದು. ಗಳಿಸಿದ್ದನ್ನು ಇಲ್ಲದವರ ಜತೆ ಹಂಚಿಕೊಳ್ಳುವುದೇ ಸದ್ಗುಣ. ಭಷ್ಟತೆ ಕೇವಲ ಅಧಿಕಾರಶಾಹಿ ಮತ್ತು ರಾಜಕೀಯದಲ್ಲಿಲ್ಲ. ವೈದ್ಯ,ವಕೀಲ,ತಂತ್ರಶಾಸ್ತ್ರಜ್ಞ ಸೇರಿದಂತೆ ಎಲ್ಲರೂ ಭ್ರಷ್ಟರಾಗುತ್ತಿದ್ದಾರೆ. ಸಂಪತ್ತಿಗಾಗಿ ನಡೆದಿರುವ ಈ ಮರುಳು ಓಟದಲ್ಲಿ ನೀತಿ ನಿಯಮಗಳಿಲ್ಲ. ನೀವೂ ಅದೇ ಹಾದಿಯನ್ನು ತುಳಿಯಬೇಡಿ.
ಬದಲಾದ ಮೌಲ್ಯಗಳು: ಕೆಲ ದಶಕಗಳಲ್ಲಿ ನಮ್ಮ ಸಮಾಜದ ಮೌಲ್ಯಗಳು ಬದಲಾಗಿವೆ. ನನ್ನ ತಲೆಮಾರಿನವರು ಸಂಪತ್ತಿನ ಮೂಲದ ಗೊಡವೆಗೆ ಹೋಗದೆ ಅದರ ಆರಾಧನೆಯಲ್ಲಿದ್ದರು. ಹೇಗಾದರೂ ಸಂಪಾದಿಸುವ ಆತುರದ ಪರಿಣಾಮ, ಪ್ರಾಮಾಣಿಕ ರಾಷ್ಟ್ರಗಳ ಸಾಲಿನಲ್ಲಿ ಭಾರತ ಚಿಂತಾಜನಕ ಸ್ಥಾನದಲ್ಲಿದೆ.
ವಿಪ್ಲವ ಪರ್ವ: ಪ್ರಸ್ತುತ ಸಮಾಜ ವಿಪ್ಲವ ಪರ್ವವನ್ನು ಹಾದು ಹೋಗುತ್ತಿದೆ.ನಮ್ಮನ್ನು ಆಳುವಂಥ, ಮಾರ್ಗದರ್ಶನ ನೀಡುವಂಥ ಮುತ್ಸದ್ಧಿಗಳಿಲ್ಲ.ರಾಜಕಾರಣಿಗಳು ಅಧಿಕವಾಗಿದದರೂ ಮುತ್ಸದ್ಧಿಗಳ ಕೊರತೆ ಇದೆ. ಧರ್ಮ,ಜಾತಿ,ಶ್ರೀಮಂತಿಕೆ,ಬಡತನದ ಆಧಾರದ ಮೇಲೆ ಸಮಾಜ ಹರಿದು ಹಂಚಿಹೋಗಿದೆ. ಅದ್ಭುತ ಸಂವಿಧಾನ ಜಾರಿಯಾಗಿ ೬೦ ವರ್ಷವಾದರೂ ನಾಗರಿಕರಿಗೆಲ್ಲ ಸಾಮಾಜಿಕ,ಆರ್ಥಿಕ ನ್ಯಾಯ ,ನಂಬಿಕೆ-ಆರಾಧನೆಯ ಸ್ವಾತಂತ್ರ್ಯವನ್ನು ನೀಡಲಾಗಿಲ್ಲ .ಸ್ಥಾನಮಾನ -ಅವಕಾಶಗಳ  ಸಮಾನತೆ ಸಾಧಿಸುವುದೂ ಸಾಧ್ಯವಾಗಿಲ್ಲ. ಆದರೆ, ಸಮಾಜವನ್ನು ಛಿದ್ರಗೊಳಿಸುವ ಷಡ್ಯಂತ್ರಕ್ಕೆ ಬಲಿಯಾಗಬೇಡಿ. ಇಡೀ ಮಾನವತೆಯನ್ನು ಒಂದು ಧರ್ಮವಾಗಿ ನೋಡಿ. ಸಮಾಜದ ಏಕತೆಗಾಗಿ ದುಡಿಯಿರಿ ಎಂದು ಯವಜನರಿಗೆ ಸಲಹೆ ನೀಡಿದರು.
ದೇಶದಲ್ಲಿ ಹಸಿವಿನಿಂದ ಜನ ಬಳಲುವ ಪರಿಸ್ಥಿತಿಯಲ್ಲಿ ವೈಜ್ಞಾನಿಕ ಮತ್ತು ಪರಮಾಣು ಕ್ಷೇತ್ರದಲ್ಲಿನ ನಮ್ಮ ಸಾಧನೆಗೆ ಬೆಲೆಯೇ ಇರದು. ಬಡತನ ನಿವಾರಣೆ ಹಾಗೂ ಮನುಷ್ಯನ ಮೂಲ ಅಗತ್ಯಗಳನ್ನು ದಕ್ಕಿಸುವುದು ಮೊದಲನೇ ಆದ್ಯತೆಯಾಗಬೇಕು  ಎಂದು  ಪ್ರತಿಪಾದಿಸಿದರು.
ನೀವೇ ಭವಿಷ್ಯ: ನೀವೇ ಈ ರಾಷ್ಟ್ರದ ಭವಿಷ್ಯ.ರಾಷ್ಟ್ರದ ಸೂತ್ರವನ್ನು ನೀವು ಹಿಡಿಯಬೇಕು.ಅದಕ್ಕಾಗಿ ಮೌಲ್ಯಾಧರಿತ,ಸತ್ಪಜೆಗಳಾಗಲು ಶ್ರಮವಹಿಸಿ. ಅಸಮಾನತೆಯನ್ನು ತೊಡೆದುಹಾಕಿ,ಹಸಿವು-ಕಣ್ಣೀರು ಇಲ್ಲದ ಸಮಾಜ ನಿರ್ಮಾಣಕ್ಕೆ ಸಹಾಯ ಮಾಡಿ. ‘ಎಷ್ಟೇ ಕಾರ‍್ಯಬಾಹುಳ್ಯದಲ್ಲೂ ಸಾಮಾಜಿಕ ಸಮಸ್ಯೆಗಳ ಕಡೆ ಲಕ್ಷ್ಯಕೊಡಿ.ನಿಮ್ಮ ದನಿಯನ್ನು ನೀವು ಗುರಿಯಾಗಿ ಕೇಳಿಸಿ. ಅಂದಮಾತ್ರಕ್ಕೆ ದುಂಡಾವರ್ತಿಯಾಗಬಾರದು. ಆಲೋಚನೆಯ ಸಮಗ್ರತೆಯಿಂದ, ನ್ಯಾಯಯುತವಾದ ಉದ್ದೇಶಗಳಿಗೆ ದನಿಕೊಡಿ’ ಎಂದರು.

ಲೋಕಾಯುಕ್ತ ‘ನ್ಯಾಯ’
*ಮುಕ್ತವಿವಿ ಘಟಿಕೋತ್ಸವದಲ್ಲಿ ಲೋಕಾಯುಕ್ತ ಸಂತೋಷ್ ಹೆಗ್ಡೆ ‘ಮುಕ್ತ ’ಚಿಂತನೆ.
-ಶ್ರೇಷ್ಠತೆಯನ್ನು ನಾವು ನಿರೀಕ್ಷಿಸುವುದಾದರೆ ಅಂಥ ಶ್ರೇಷ್ಠತೆಯನ್ನು ಹೊಂದಲು ಸಮರ್ಪಕವಾದ ವಾತಾವರಣವನ್ನು ನಿರ್ಮಿಸಬೇಕು.
-ನಿದ್ರಿಸುವುದಕ್ಕೆ ಮೊದಲು ಕ್ರಮಿಸುವ ದೂರ ಬಹಳವಿದೆ.(ಅಮೆರಿಕ ಕವಿ ರಾಬರ್ಟ್ ಫ್ರಾಸ್ಟ್ ಹೇಳಿಕೆ ಉಲ್ಲೇಖಿಸಿ)ನಿಮ್ಮ ಪ್ರಯಾಣದಲ್ಲಿ ನೀವು ಮುಂದುವರಿದಂತೆ  ಅನೇಕ ಘಟನೆಗಳು ಎದುರಾಗಬಹುದು.ಧೈರ್ಯ,ಕೆಚ್ಚಿನಿಂದ ಅವುಗಳನ್ನು ಎದುರಿಸಿ.
-ನಿಮ್ಮ ಯಶಸ್ಸಿನ ಸುಖವನ್ನು ಅನುಭವಿಸಿ.ಸೋಲನ್ನು ಧೃತಿಗೆಡದೆ ಸ್ವೀಕರಿಸಿ.ಯಶಸ್ಸನ್ನು ಹಂತಹಂತವಾಗಿ ಯೋಜಿಸಿ.ಮಹತ್ವಾಕಾಂಕ್ಷೆಯನ್ನು ಒಂದೇ ಬಾರಿಗೆ ಎತ್ತರದಲ್ಲಿ ಸ್ಥಾಪಿಸಬೇಡಿ. ಏಕೆಂದರೆ ಏಣಿಯ ಕಾಲುಗಳನ್ನು ಒಂದು ಬಿಟ್ಟು ಒಂದು ಜಿಗಿಯಲಾಗುವುದಿಲ್ಲ.ಹಾಗೆ ಮಾಡಿದರೆ ನಿರಾಶೆಯ ಸಾಧ್ಯತೆಯೇ ಹೆಚ್ಚು.
-ಭವಿಷ್ಯತ್ತಿನೆಡೆ ಮುಖಮಾಡಿ ನಡೆಯುವಾಗ ಯಶಸ್ಸು ನಿಮ್ಮ ಪಾಲಿಗೆ ದಕ್ಕದಿದ್ದರೆ ಹಿಂತಿರುಗಿ ನೋಡಿ.ನಿಮಗಿಂತ ಎಷ್ಟೋ ಪಾಲು ಪ್ರತಿಭಾವಂತರಾದವರು ಹಿಂದೆ ಬಿದ್ದಿರುವುದು ಕಾಣುತ್ತದೆ. ಆದ್ದರಿಂದ ನಿರಾಶೆ ನಿಮ್ಮ ಧೈರ್ಯಗೆಡಿಸಲು ಅವಕಾಶ ನೀಡಬೇಡಿ.
-ನಾಳಿನ ಮಹತ್ವಾಕಾಂಕ್ಷೆಯ ಹಿನ್ನೆಲೆಯಲ್ಲಿ ಇಂದನ್ನು ಮರೆಯದಿರಿ. ನಿಮ್ಮ ಇವತ್ತನ್ನು ಸುಖಪಡಿ.ನಾಳೆ ಆಗುವುದು ಆಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ