ಸಂಗೀತ ವಿವಿಯ ‘ಅರಣ್ಯ’ರೋದನ

ಚೀ.ಜ. ರಾಜೀವ ಮೈಸೂರು
ಮೂರು ತಿಂಗಳಿಗೆ ನೋಟ, ಮೂರು ವರ್ಷಕ್ಕೆ ಮಾತು ಬಂದ್ರೆ- ಮಗು ಆರೋಗ್ಯ ಪೂರ್ಣವಾಗಿ ಬೆಳೆಯುತ್ತಿದೆ ಎಂಬುದು ಜನಪದರ ನಂಬಿಕೆ. ಈಗಿನವರನ್ನು ಕೇಳಿದರೆ-  ‘ಮಾತು ಬರಲು ಮೂರು ವರ್ಷವೇ ?,  ಆ ವೇಳೆಗಾಗಲೇ ಮಗು  ಎಬಿಸಿಡಿ  ಜತೆಗೆ, ಅಆಇಈ ಕೂಡ  ಕಲಿತಿರುತ್ತದೆ - ಎಂದು ಹಳೆಯ ನಂಬಿಕೆಯನ್ನೇ ಗೇಲಿ ಮಾಡಿಬಿಡುತ್ತಾರೆ!. ಜ್ಞಾನ- ವಿಜ್ಞಾನ-ತಂತ್ರಜ್ಞಾನದ ದೆಸೆಯಿಂದ  ಎಲ್ಲದರ  ವೇಗ ವೃದ್ಧಿಸಿದೆ.
ಆದರೆ, ಈ ಎಲ್ಲ ಮಾತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ  ಅವರ  ಕನಸಿನ ಕೂಸು ಸಂಗೀತ ವಿಶ್ವ ವಿದ್ಯಾನಿಲಯಕ್ಕೆ ಅನ್ವಯಿಸುವಂತಿಲ್ಲ. ಮೈಸೂರಿನಲ್ಲಿ  ಸಂಗೀತ ವಿ ವಿ  ಸ್ಥಾಪನೆ ಎಂಬ ಘೋಷಣೆಗೇ ಮೂರು ವರ್ಷ ತುಂಬಿತು. ಆದರೆ ವಿವಿ ಗೆ ನೋಟವೂ ಬಂದಿಲ್ಲ, ಮಾತೂ ಬಂದಿಲ್ಲ. ಶೈಶವಾವಸ್ಥೆಯಲ್ಲೇ. ಬಡಿದಿರುವ ಬಾಲಗ್ರಹ ಇನ್ನೂ ಮುಕ್ತಿಯಾಗಿಲ್ಲ. ಸಂಗೀತ ವಿವಿಯ ವಿಶೇಷಾಧಿಕಾರಿಯಾಗಿ ನೇಮಕ ವಾದ ದೊರೆ ಹನುಮಣ್ಣ ನಾಯಕ್, ನಾಲ್ಕು  ತಿಂಗಳ ಹಿಂದಷ್ಟೇ ಕುಲಪತಿಯಾಗಿ ನೇಮಕವಾದರು. ಈಗಲೂ ಸದ್ಯಕ್ಕೆ ಅವರೊಬ್ಬರೇ ವಿವಿ ಗೆ ಮಾತು ಕಲಿಸುವವರು, ನೋಟ ಹರಿಸುವವರು. ಜಿಲ್ಲಾಡಳಿತದ ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಮೈಸೂರು ಸಂಗೀತ ದಿಗ್ಗಜರು ಸೇರಿದಂತೆ ಯಾರೊಬ್ಬರೂ ಇದರತ್ತ ಗಮನವೇ ಹರಿಸಿಲ್ಲ.
ನೆಲೆಯದ್ದೇ ದೊಡ್ಡ ಸಮಸ್ಯೆ
ವಿವಿಯನ್ನು ಕಟ್ಟಿ ಬೆಳೆಸುವುದು ಎಂದರೆ, ಕಟ್ಟಡಗಳನ್ನು ನಿರ್ಮಿಸುವುದಲ್ಲ  ಎಂಬ ಮಾತಿದೆ. ಆದರೆ, ವಿವಿ ನೆಲೆಯೂರಲು ಜಮೀನು ಬೇಕು, ಕಟ್ಟಡಗಳು ನಿರ್ಮಾಣವಾಗಲೇ ಬೇಕು. ಹಾಗಾಗಿ ಒಂದು ವಿವಿಗೆ ಕನಿಷ್ಠ  ೨೦೦ ರಿಂದ ೩೦೦ ಎಕರೆ ಜಮೀನು ಬೇಕೇ ಬೇಕು ಎಂಬುದು ವಿವಿ ಧನ ಸಹಾಯ ಆಯೋಗದ ಅಪೇಕ್ಷೆ.  ಅಂಥ ವಿವಿಗಳಿಗೆ ನೆರವು ನೀಡಲು ಯುಜಿಸಿ ಬಹಳಷ್ಟು ಉದಾರಿ. ಈ ಸಂಗತಿ ಯನ್ನು ತಲೆಯಲ್ಲಿರಿಸಿಯೇ ಮೈಸೂರಿನಲ್ಲಿ  ಸಂಗೀತ ವಿವಿ ಗೆ ಜಾಗದ  ಹುಡುಕಾಟ ಆರಂಭಿಸಿದ  ವಿಶೇಷಾಧಿಕಾರಿಗೆ, ಆರಂಭದಲ್ಲೇ ಭ್ರಮ ನಿರಸನವಾಯಿತು. ಏಕೆಂದರೆ, ಮೈಸೂರಿನಲ್ಲಿ  ೨೦೦ ಎಕರೆ ಪ್ರದೇಶ ಸಿಗದು. ಎಲ್ಲಿಯಾದರೂ  ಇಡಿಯಾಗಿ ೧೦೦ ಎಕರೆ ಜಮೀನು ಸಿಕ್ಕೀತೆ ಎಂದು ಶೋಧನೆ ಆರಂಭಿಸಿದರು. ಹುಣಸೂರು ರಸ್ತೆಯ ಅಲೋಕದಲ್ಲಿ ಭೂಮಿ ಕೊಡಿಸಲು ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಪ್ರಯತ್ನಿಸಿದರು. ಆದರೆ, ಈ ಪ್ರದೇಶ ಅರಣ್ಯ ಇಲಾಖೆಗೆ ಸೇರಿದೆ  ಎಂಬ ಕಾರಣಕ್ಕೆ ಕೈ ಬಿಡಲಾಯಿತು.
ಬಾಯಿಗೆ ಬರಲಿಲ್ಲ
ಅಲೋಕ ಕೈ ತಪ್ಪಿದ ಬಳಿಕ ಮೈಸೂರಿನ  ಅಷ್ಟ ದಿಕ್ಕುಗಳಲ್ಲಿ ತಲಾಶ್ ನಡೆಯಿತು. ಕಡೆಗೆ ಮುಖ್ಯಮಂತ್ರಿಗಳ ಸಂಸದೀಯ ಕಾರ‍್ಯದರ್ಶಿ  ಎಸ್. ಎ. ರಾಮದಾಸ್, ಜಿಲ್ಲಾಧಿಕಾರಿ ಪಿ. ಮಣಿವಣ್ಣನ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ  ವಿ. ಪಿ. ಬಳಿಗಾರ್ ಅವರ ಪ್ರಯತ್ನದ ಫಲದಿಂದ, ಮೈಸೂರು ತಾಲೂಕು ವರುಣಾ ಬಳಿ ಇರುವ ವರಕೋಡು ಎಂಬಲ್ಲಿ  ೧೦೦ ಎಕರೆ ಭೂಮಿಯನ್ನು ಗುರುತಿಸಲಾಯಿತು.
ಸಂಗೀತ ವಿವಿ ಕ್ಯಾಂಪಸ್‌ಗೆ ಈ ಭೂಮಿ ನೀಡಲು ಆರಂಭದಲ್ಲಿ ಯಾರೊಬ್ಬರೂ ತಕರಾರು ವ್ಯಕ್ತಪಡಿಸಲಿಲ್ಲ. ವಿವಿಗೆ ೧೦೦ ಎಕರೆ ಭೂಮಿ ನೀಡಲು ಸಂಪುಟ ಸಭೆಯೂ ತೀರ್ಮಾನಿಸಿತು. ಪರಿಣಾಮ ಬಹಳ ಬೇಗ  ಕಂದಾಯ ಇಲಾಖೆ ೧೦೦ ಎಕರೆ ಭೂಮಿಯನ್ನು ಸಂಗೀತ ವಿವಿ ಹೆಸರಿಗೆ ವರ್ಗಾಯಿಸಿತು. ಎಲ್ಲವೂ ಸುಸೂತ್ರ ವಾಗಿತ್ತು. ಇತ್ತ ವಿವಿಗೆ ಭೂಮಿ ಸಿಕ್ಕ ಸಂತೋಷದಲ್ಲಿ - ‘ಮುಂದಿನ ಸೆಪೆಂಬರ್‌ನಿಂದಲೇ ವಿವಿಯ ಹೊಸ ಅಂಗಳ ದಲ್ಲಿ ಗುರುಕುಲ ಮಾದರಿ ಸಂಗೀತ ಕೋರ್ಸ್‌ಗಳು ಆರಂಭ’ ಎಂದು ಕುಲಪತಿ ಘೋಷಿಸಿದರು.  ಅದೇ ದಿನವೇ ಅರಣ್ಯ ಇಲಾಖೆ ಅಧಿಕಾರಿಗಳು - ‘ಭೂಮಿ ತಮ್ಮದು; ೧೯೯೬ ರಿಂದಲೂ ಆ ಪ್ರದೇಶ ನಮ್ಮ ಅಧೀನ ದಲ್ಲಿದೆ. ಅದನ್ನು ಯಾರಿಗೂ ನೀಡುವುದಿಲ್ಲ’ ಎಂದರು.
ಅರಣ್ಯ ಇಲಾಖೆ ವಾದ
ಜಿಲ್ಲಾಡಳಿತ ಮಂಜೂರು ಮಾಡಿದ ವರಕೋಡಿನ ೧೦೦ ಎಕರೆ ಪ್ರದೇಶ, ಕಂದಾಯ ಇಲಾಖೆ ದಾಖಲೆಗಳ ಪ್ರಕಾರ  ಸರಕಾರಿ ಗೋಮಾಳ. ಖಾಲಿ ಇದ್ದ ಪ್ರದೇಶದಲ್ಲಿ ಅರಣ್ಯ ಇಲಾಖೆ ದಶಕಗಳಿಂದ ಮರಗಿಡಗಳನ್ನು ಬೆಳೆಸುತ್ತಿದೆ. ಇಷ್ಟು ದಿನ ಇಲಾಖೆ ಸುಮ್ಮನಿದ್ದದ್ದು ಏಕೆ ಎಂಬುದು ಕಂದಾಯ ಇಲಾಖೆಯವರ ಪ್ರಶ್ನೆ. ಇದಕ್ಕೆ ಅರಣ್ಯ ಇಲಾಖೆಯವರ ಉತ್ತರ- ಸಂಗೀತ ವಿವಿಗೆ ಭೂಮಿ ನೀಡುವ ವಿಷಯ ಪ್ರಸ್ತಾಪವಾದಾಗಲೇ ನಾವು ಸರಕಾರಕ್ಕೆ ಪತ್ರ ಬರೆದಿದ್ದೆವು.  ಈ ೧೦೦ ಎಕರೆ ಸೇರಿದಂತೆ  ಎರಡು ಸರ್ವೆ ನಂಬರ್‌ನಲ್ಲಿ ಹರಡಿ ಕೊಂಡಿರುವ ಸುಮಾರು  ೮೦೦ ಎಕರೆ ಭೂಮಿಯಲ್ಲಿ ೪೦ ವರ್ಷಗಳಿಂದ ಅರಣ್ಯ ಇಲಾಖೆ ನೆಡುತೋಪು ನಿರ್ವಹಿಸುತ್ತಿದೆ. ಇದೊಂದು ನೈಸರ್ಗಿಕ ಅರಣ್ಯ.  ಶ್ರೀಗಂಧ, ಕಗ್ಗಲಿ, ಬೇವು, ಕಕ್ಕೆ ಸೇರಿದಂತೆ ಹಲವು ಜಾತಿಯ ಮರಗಿಡಗಳಿದ್ದು, ನೂರಾರು  ಪ್ರಾಣಿ ಪಕ್ಷಿಗಳೂ ಇವೆ. ಇದನ್ನು  ಜಿಲ್ಲಾ ಅರಣ್ಯ ಪ್ರದೇಶವೆಂದೂ ಸರಕಾರ ಗುರುತಿಸಿದ್ದು, ಅರಣ್ಯೇತರ ಉದ್ದೇಶಕ್ಕೆ ನೀಡುವುದು ನಿಯಮ ಬಾಹಿರ.
ಅರಣ್ಯ ಇಲಾಖೆಯರ  ನೀತಿ-ನಿಯಮಗಳು ಸ್ವಭಾವತಃ ಕಠೋರವಾಗಿರುವುದರಿಂದ ಜಿಲ್ಲಾಡಳಿತ ಈಗ ಮೆತ್ತಗಾಗಿದೆ.  ಅವರೊಂದಿಗೆ ಜಗಳ ಆಡುವುದಕ್ಕಿಂತ ಪರ್ಯಾಯ ಭೂಮಿಯನ್ನು ಹುಡುಕಲು ಆರಂಭಿಸಿದೆ. ಬೋಗಾದಿ- ಗದ್ದಿಗೆ ರಸ್ತೆಯಲ್ಲಿರುವ ಮಾದಹಳ್ಳಿ ಸಮೀಪದ ೩೦ ಎಕರೆ ಜಮೀನಿನಲ್ಲಿ ವಿವಿ ಆರಂಭಿಸಿ ಎಂದು ಸಲಹೆ ನೀಡಿದೆ. ಆದರೆ, ವಿವಿ ಕುಲಪತಿ ಅದಕ್ಕೆ ಒಪ್ಪುತ್ತಿಲ್ಲ. ತನ್ನ ಹೆಸರಿನಲ್ಲಿದ್ದ ಭೂಮಿಯನ್ನು ಸಂಗೀತ ವಿವಿ ಹೆಸರಿಗೆ ಮಾಡಿಕೊಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಈಗ ಗಟ್ಟಿತನ ಪ್ರದರ್ಶಿಸಲಿ ಎಂಬುದು ಅವರ ಆಗ್ರಹ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ