ಸೀಸ ಇಲ್ಲದ ಬಣ್ಣ ಬಳಸಿದರೆ ಬದುಕೇ ಬಣ್ಣ ಬಣ್ಣ !

ಚೀ. ಜ. ರಾಜೀವ ಮೈಸೂರು
‘ಮನೆಯ ಗೋಡೆ, ಪೀಠೋಪಕರಣಗಳಿಗೆ ರಂಗು- ರಂಗಾಗಿ ಬಳಿಯುವ ಬಣ್ಣಗಳು ಮನಸ್ಸಿಗೆ ಮುದ ನೀಡಬಹುದು, ನಿಮ್ಮ ಬಣ್ಣದ ಅಭಿರುಚಿಯನ್ನು, ಮನೆಯ ಸಿರಿವಂತಿಕೆ ಸಾರಬಹುದು. ಆದರೆ, ಹೊಳೆಯುವ, ಪ್ರಕಾಶಮಾನವಾಗಿ ಕಾಣುವ ಬಣ್ಣಗಳು ನಿಮ್ಮ ಮನೆಯ ಮಕ್ಕಳ ಆರೋಗ್ಯಕ್ಕೆ ಸಂಚಕಾರವನ್ನೇ ತರಬಲ್ಲವು. ಏಕೆಂದರೆ, ಬಣ್ಣ ದಲ್ಲಿರುವ ಸೀಸ(ಲೆಡ್)ವೆಂಬ ಲೋಹ ಸದ್ದಿಲ್ಲದೆ ಸಾಯಿಸುವಂಥ ಕ್ರಿಮಿನಲ್. ಹಾಗಾಗಿ ಸೀಸವಿಲ್ಲದ ಬಣ್ಣ ಬಳಸಿ...!’
ನ್ಯಾಷನಲ್ ರೆಫೆರಲ್ ಸೆಂಟರ್ ಫಾರ್ ಲೆಡ್ ಪಾಯಿಸನಿಂಗ್ ಇನ್ ಇಂಡಿಯಾ(ಎನ್‌ಆರ್‌ಸಿಎಲ್‌ಪಿ) ಮತ್ತು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸೇರಿದಂತೆ ಕೆಲ ಸಂಸ್ಥೆಗಳು ನಡೆಸುತ್ತಿರುವ ಇಂಥದ್ದೊಂದು ‘ಬಣ್ಣ ಜಾಗೃತಿ’ ಅಭಿಯಾನದೊಂದಿಗೆ ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಶ್ ಲಿಮಿಟೆಡ್ (ಎಂಪಿವಿಎಲ್) ರಚನಾತ್ಮಕ ವಾಗಿ ಕೈ ಜೋಡಿಸಿದೆ.
ಚುನಾವಣೆಯಲ್ಲಿ ಬಳಸುವ ಶಾಯಿಯ ಉತ್ಪಾದನೆಯಿಂದ ಹತ್ತಾರು ರಾಷ್ಟ್ರಗಳ ಗಮನ ಸೆಳೆದಿರುವ ಸರಕಾರಿ ಸ್ವಾಮ್ಯದ ಈ ಕಂಪನಿ, ಈಗ ಸೀಸವಿಲ್ಲದ ಬಣ್ಣ ಉತ್ಪಾದಿಸುವ ಮೂಲಕ ‘ಆರೋಗ್ಯ ಸ್ನೇಹಿ- ಪರಿಸರ ಸ್ನೇಹಿ’ ಸೇವೆಗೆ ಮುಂದಾಗಿದೆ. ಸೀಸರಹಿತ ಬಣ್ಣ ಉತ್ಪಾದಿಸುತ್ತಿರುವ ದೇಶದ ಮೊದಲ ಸರಕಾರಿ ಸಂಸ್ಥೆ ಎಂಬ ಪ್ರಶಂಸೆಗೂ ಪಾತ್ರವಾಗಿದೆ.
‘ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಬಾಲ ಭವನದ ಅಂಗಳದಲ್ಲಿರುವ ಮಕ್ಕಳ ಆಟಿಕೆಗಳಿಗೆ (ತಯಾರಿಸುವ ಕಂಪನಿಗಳಿಗೆ) ಸೀಸರಹಿತ ಬಣ್ಣವನ್ನು ಪೂರೈಸಿದ ಸಂಸ್ಥೆ, ಬರಲಿರುವ ದಿನಗಳಲ್ಲಿ ರಾಜ್ಯದ ಎಲ್ಲ ಬಾಲಭವನಗಳ ಗೋಡೆಗಳಿಗೆ, ಅಲ್ಲಿನ ಆಟಿಕೆಗಳಿಗೂ ಸೀಸವಿಲ್ಲದ ಬಣ್ಣ ಪೂರೈಸಲು ನಿರ್ಧರಿಸಿದೆ’ ಎಂದು ಎಂಪಿವಿಎಲ್ ಅಧ್ಯಕ್ಷ ಮೈ. ವಿ. ರವಿಶಂಕರ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
‘ಸೀಸ ರಹಿತ ಬಣ್ಣದ ಕುರಿತು ಎನ್‌ಆರ್‌ಸಿಎಲ್‌ಪಿ ಸೇರಿದಂತೆ ಕೆಲ ಸಂಸ್ಥೆಗಳು ನಡೆಸುತ್ತಿರುವ ಜಾಗೃತಿ ಅಭಿಯಾನದ ಅರಿವು ಇತ್ತಾದರೂ, ನಾವು ಕೈ ಹಾಕಿರಲಿಲ್ಲ. ಕೆಲ ದಿನಗಳ ಹಿಂದೆ ಸಂಸ್ಥೆಯ ಸಂಪರ್ಕಕ್ಕೆ ಬಂದ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಪ್ರಧಾನ ಸಲಹೆಗಾರ ಡಾ. ತುಪಿಲ್ ವೆಂಕಟೇಶ್ ಮಾರ್ಗದರ್ಶನ ನೀಡಿದರು. ಸಂಸ್ಥೆಯ ನಾರಾಯಣ್, ವೇಣು ಗೋಪಾಲ್, ಲಕ್ಷ್ಮೀನಾರಾಯಣ್ ನಮ್ಮ ಪ್ರಯೋಗಾಲಯದಲ್ಲಿ ನಡೆಸಿದ ಶ್ರಮದ ಫಲ, ಸಂಸ್ಥೆ ಈಗ ಸೀಸ ರಹಿತ ಬಣ್ಣ ಉತ್ಪಾ ದನೆಯಲ್ಲಿ ತೊಡಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಜೆ.ಸುರೇಶ್ ವಿವರಿಸಿದರು.
ಬಣ್ಣದಲ್ಲಿನ ಸೀಸದಲ್ಲಿ ವಿಷ: ಗೋಡೆ, ಪೀಠೋ ಪಕರಣಗಳಿಗೆ ಬಳಿಯುವ ಬಣ್ಣ ದಲ್ಲಿ ಪಿಗ್‌ಮೆಂಟ್, ಸಾಲ್ವೆಂಟ್‌ನಂಥ ನಾನಾ ಮಿಶ್ರಣಗಳಿವೆ. ಈ ಪೈಕಿ ಬಣ್ಣಕ್ಕೆ ರಂಗು ತರುವುದೇ ಸೀಸದಂಥ ಲೋಹಗಳು (ಪಿಗ್‌ಮೆಂಟ್). ಹೆಚ್ಚು ಆಕರ್ಷಣೆ, ಬಾಳಿಕೆ, ತುಕ್ಕು ಹಿಡಿಯುವ ಪ್ರಮಾಣವನ್ನು ಕಡಿಮೆ ಮಾಡುವ ಸಾಮರ್ಥ್ಯ ಮತ್ತು ವೇಗವಾಗಿ ದ್ರಾವಣವನ್ನು ಒಣಗಿಸುವ ಗುಣವನ್ನು ಸೀಸ ಹೊಂದಿರುವುದರಿಂದ, ಬಹಳಷ್ಟು ಉತ್ಪಾದಕ ಕಂಪನಿಗಳು ಅದನ್ನೇ ಬಳಸುತ್ತಾರೆ. ಹಳದಿ, ಕೆಂಪು ಮತ್ತು ಹಸಿರು ಬಣ್ಣಗಳಲ್ಲಿ ಸೀಸದ ಪ್ರಮಾಣ ಗರಿಷ್ಠ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಪ್ರಕಾರ- ಯಾವುದೇ ಬಣ್ಣದಲ್ಲಿ ಸೀಸದ  ಪ್ರಮಾಣ ೬೦೦ ರಿಂದ ೯೦೦ ಪಾರ್ಟ್ಸ್ ಪರ್ ಮಿಲಿಯನ್(ಪಿಪಿಎಂ) ಇರಬೇಕು. ಆದರೆ, ನಾವು ಬಳಸುವ ಬಣ್ಣಗಳಲ್ಲಿ ೧೫ ರಿಂದ ೩೦ ಪಟ್ಟು ಹೆಚ್ಚಿದೆಯಂತೆ. ಸೀಸ ಹೇಳಿ-ಕೇಳಿ ವಿಷಯುಕ್ತ. ೨೦೧೨ರೊಳಗೆ ಸೀಸದ ಬಳಕೆಯನ್ನು ೬೦೦ ಪಿಪಿಎಂ ಪ್ರಮಾಣಕ್ಕೆ ಇಳಿಸಲೇಬೇಕಿದೆ. ಈ ನಿಟ್ಟಿನಲ್ಲಿ ಎಂಪಿವಿಎಲ್ ಈಗಿನಿಂದಲೇ ಕಾರ್ಯೋನ್ಮುಖ ವಾಗಿದೆ ಎನ್ನುತ್ತಾರೆ ಸುರೇಶ್..
ಹಳದಿಯ ಮೋಹ ಬದುಕಿಗೆ ಕೆಂಪು
ಬಣ್ಣದಲ್ಲಿರುವ ಸೀಸ ಯಾವುದಾದರೂ ರೀತಿಯಲ್ಲಿ ನಮ್ಮ ಅಂಗಾಂಗವನ್ನು ಪ್ರವೇಶಿಸುತ್ತದೆ. ಮುದ್ರಿಸುವ ಪತ್ರಿಕೆ, ಮುಖಕ್ಕೆ ಬಳಸುವ ಸೌಂದರ್ಯವರ್ಧಕಗಳಲ್ಲಿ ಬಣ್ಣದ ಮೂಲಕ ಸೀಸ ದೇಹದೊಳಗೆ ಹೊಕ್ಕಿ ಬಿಡುತ್ತದೆ. ಉದ್ಯಾನದಲ್ಲಿರುವ ಉಯ್ಯಾಲೆ, ಜಾರುವ ಬಂಡಿ, ಜೋಕಾಲಿಯಂಥ ಆಟಿಕೆಗಳಿಗೆ, ಕೃತಕವಾಗಿ ತಯಾರಿಸಿದ ಪ್ರಾಣಿ-ಪಕ್ಷಿಗಳಿಗೆ ಹಾಗೂ ಮನೆಯ ಗೋಡೆಗೆ ಬಳಿದಿರುವ ಬಣ್ಣ- ಧೂಳಿನ ರೂಪದಲ್ಲೂ ನಮ್ಮನ್ನು ಸೇರಬಹುದು. ಹೀಗೆ ಬಣ್ಣದಲ್ಲಿನ ಸೀಸವನ್ನು ಸೇವಿಸಿದರೆ ಆರೋಗ್ಯದಲ್ಲಿ ಏರುಪೇರು ಖಚಿತ. ಮಕ್ಕಳ ಮಾನಸಿಕ ಹಾಗೂ ಭೌತಿಕ ಬೆಳವಣಿಗೆ ವಿಳಂಬ, ಬುದ್ಧಿಮತ್ತೆ ಕ್ಷೀಣಿಸುವುದು; ನರಗಳ ದೌರ್ಬಲ್ಯ ಸಂಬಂಧಿ ಕಾಯಿಲೆಗೆ ತುತ್ತಾಗುವುದು ಇತ್ಯಾದಿ ಬರಬಹುದು. ಹಾಗಾಗಿ ಸೀಸರಹಿತ ಬಣ್ಣಕ್ಕೆ ಜಗತ್ತಿನಾದ್ಯಂತ ಕೂಗು ಎದ್ದಿದೆ. ವಿಶೇಷವಾಗಿ ಹಳದಿ ರಹಿತ ಬಣ್ಣಕ್ಕೆ ಬೇಡಿಕೆ ಹೆಚ್ಚಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ