ಕ್ಯಾಂಪಸ್‌ಗಳಲ್ಲಿ ಸಂದರ್ಶನ ಸಂಚಲನ

ಚೀ. ಜ. ರಾಜೀವ ಮೈಸೂರು
ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಇದೊಂದು ಸಮಾಧಾನಕರ ಸಮಾಚಾರ. ಪರೀಕ್ಷೆ ಮುಗಿದ ತಕ್ಷಣ ಉದ್ಯೋಗ ಹಿಡಿಯಬೇಕೆಂದಿರುವ ಭಾವೀ ಉದ್ಯೋಗಾರ್ಥಿಗಳ  ಪಾಲಿಗಂತೂ ಇದು ಸಂತಸದ ಸುದ್ದಿಯೇ !
ವಿಷಯ ಏನು ಅಂದ್ರೆ-ಉದ್ಯೋಗ ನೀಡುವುದಕ್ಕಾಗಿ  ಪ್ರತಿಭಾನ್ವಿತ ಯುವ ಪದವೀಧರರನ್ನು ಅರಸುತ್ತಾ ಕಾಲೇಜುಗಳ  ಪ್ರಾಂಶುಪಾಲರ ಬಾಗಿಲು ಹುಡುಕಿಕೊಂಡು ಬರುತ್ತಿದ್ದ  ಪ್ರತಿಷ್ಠಿತ ಕಂಪನಿಗಳು  ಈಗ ಮತ್ತೊಮ್ಮೆ ಕ್ಯಾಂಪಸ್ ಕಡೆ ಮುಖ ಮಾಡಿವೆ.
ನಗರದ ಎನ್‌ಐಇ, ಎಸ್‌ಜೆಸಿಇ, ವಿದ್ಯಾವಿಕಾಸ್ ಎಂಜಿನಿಯ ರಿಂಗ್ ಕಾಲೇಜುಗಳು, ಮಹಾಜನ, ಜೆಎಸ್‌ಎಸ್‌ನಂಥ ಬಿಬಿಎಂ ಕಾಲೇಜುಗಳಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ಶೋಧ ಆರಂಭಿಸಿವೆ. ಕ್ಯಾಂಪಸ್  ಇಂಟರ್‌ವ್ಯೂಗೆ ಈಗ ಶುಕ್ರದೆಸೆ.
ಜಾಗತಿಕವಾಗಿ ಕಾಣಿಸಿಕೊಂಡ ಆರ್ಥಿಕ ಹಿಂಜರಿತದ ಪರಿಣಾಮ, ನೂರಾರು ಕಂಪನಿಗಳು ತಮ್ಮಲ್ಲಿನ ಸಾವಿರಾರು ನೌಕರರಿಗೆ ಸ್ಯಾಲರಿ ಸ್ಲಿಪ್(ವೇತನ ಚೀಟಿ) ಬದಲು, ಪಿಂಕ್ ಸ್ಲಿಪ್(ಕೆಲಸದಿಂದ ತೆಗೆಯುವುದು) ನೀಡಿ ಮನೆಗೆ ಕಳುಹಿಸಿದ್ದೇ  ಹೆಚ್ಚು. ಈ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದೀಚೆಗೆ ಎಲ್ಲ ಕಡೆಯೂ ‘ಹಿಂಜರಿತದ ಹುಚ್ಚಿ’ (ರಿಸೆಷನ್ ಮೇನಿಯಾ)ನದ್ದೇ ಕಾರುಬಾರು ನಡೆದಿತ್ತು. ಇರುವ ನೌಕರಿಗಳೇ ಕರಗುತ್ತಿದ್ದರಿಂದ, ಹೊಸ ನೌಕರಿ ಸದ್ಯಕ್ಕಂತೂ ಸೃಷ್ಟಿಯಾಗುವುದಿಲ್ಲ ಎಂಬ ಭಾವನೆಯೇ ಎಲ್ಲ ಕ್ಯಾಂಪಸ್‌ಗಳ ಕಾರಿಡಾರ್‌ಗಳಲ್ಲಿ, ನೋಟಿಸ್ ಬೋರ್ಡ್‌ಗಳಲ್ಲಿ ಬೇರೂರಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಪ್ರತಿಭಾನ್ವಿತರಿಗಾಗಿ ಕ್ಯಾಂಪಸ್ ತನಕ ಬರುವ ಆಚರಣೆಯನ್ನು ಕಂಪನಿಗಳು ಕೂಡ ನಿಲ್ಲಿಸಿದ್ದವು.
ಆದರೆ, ಆರ್ಥಿಕ ಹಿಂಜರಿಕೆಯ ಸ್ಥಿತಿಯಿಂದ ಜಾಗತಿಕ ಮಾರುಕಟ್ಟೆ ಬಚಾವ್ ಆಗಿದೆ. ಹಾಗಾಗಿ ಭಾರತದ ಸೇವಾ ಹಾಗೂ ಉತ್ಪಾದನಾ ವಲಯದ ಖಾಸಗಿ ಉದ್ಯಮಗಳು ಚೇತರಿಸಿಕೊಂಡಿವೆ. ಐಟಿ, ಬಿಪಿಒ, ಕೆಪಿಒಗಳಲ್ಲಿ ದುಡಿಯಲು ಮಾನವ ಸಂಪನ್ಮೂಲ ಬೇಕಿದೆ.  ಹಾಗಾಗಿ, ಮತ್ತೊಮ್ಮೆ ಪ್ರತಿಭಾನ್ವಿತ ಉದ್ಯೋಗಾರ್ಥಿ ಗಳಿಗಾಗಿ ಖಾಸಗಿ ಕಂಪನಿಗಳು ಬೇಟೆ ಆರಂಭಿಸಿವೆ.
ಎನ್‌ಐಇ ಬಾಗಿಲಲ್ಲಿ ೨೮ ಕಂಪನಿ
ನಗರದ ಪ್ರತಿಷ್ಠಿತ ದಿ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರಿಂಗ್(ಎನ್‌ಐಇ) ಕಾಲೇಜಿನ ತರಬೇತಿ ಮತ್ತು  ಉದ್ಯೋಗ ನೀಡಿಸುವ(ಪ್ಲೇಸ್‌ಮೆಂಟ್) ಘಟಕಕ್ಕೆ ಈ ವರ್ಷ ಕೈ ತುಂಬಾ ಕೆಲಸ. ಉದ್ಯೋಗಕ್ಕೆ ಹೋಗ ಬಯಸುವ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳ ಆಕಾಂಕ್ಷೆ ಈ ಬಾರಿ ಯ ಕ್ಯಾಂಪಸ್ ಸಂದರ್ಶನದಲ್ಲಿಯೇ ಸಾಕಾರಗೊಳ್ಳಬಹುದು ಎಂಬುದು ಎನ್‌ಐಇ ಲೆಕ್ಕಾಚಾರ.
‘ಆರ್ಥಿಕ ಹಿಂಜರಿಕೆ ಕಾಲದಲ್ಲೂ ನಮ್ಮ ಸಂಸ್ಥೆಯ ಪ್ಲೇಸ್‌ಮೆಂಟ್ ಘಟಕ  ಒಂದಿಷ್ಟು  ಸಾಧನೆ ತೋರಿಸಿತ್ತು. ಈಗ ಪರಿಸ್ಥಿತಿ ಸುಧಾರಿಸುವ ಶುಭ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಸಾಲಿಗಿಂತ ದುಪ್ಪಟ್ಟು ಕಂಪನಿಗಳು ನಮ್ಮಲ್ಲಿಗೆ ಬರುವ ಸಾಧ್ಯತೆ ಇದೆ’  ಎಂದು ಘಟಕದ ಅಧಿಕಾರಿ ಡಾ. ಬಿ. ಕೆ. ಶ್ರೀಧರ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
‘ಇದುವರೆಗೆ ನಮ್ಮ ಕಾಲೇಜಿಗೆ ೨೮ ಕಂಪನಿಗಳು ಭೇಟಿ ನೀಡಿ, ಕ್ಯಾಂಪಸ್ ಸಂದರ್ಶನ ನಡೆಸಿವೆ. ಈ ಪೈಕಿ ೧೪ ಕೋರ್ ಎಂಜನಿಯ ರಿಂಗ್‌ಗೆ ಸಂಬಂಧಿಸಿದ್ದು, ಉಳಿದ ೧೪ ಐಟಿ ವಲಯದ ಕಂಪನಿ ಗಳು. ಅಂತಿಮ ಪದವಿಯಲ್ಲಿ ಕಲಿಯುತ್ತಿರುವ ೨೬೦ ವಿದ್ಯಾರ್ಥಿ ಗಳು ಆಯ್ಕೆಯಾಗಿದ್ದಾರೆ. ಜುಲೈ/ಆಗಸ್ಟ್ ಬಳಿಕ ಈ ಎಲ್ಲರೂ ಉದ್ಯೋಗಾರ್ಥಿಗಳಾಗಿ ನೌಕರಿ ಹಿಡಿಯಲಿದ್ದಾರೆ’ ಎಂದು ಸಂತಸದಿಂದ ವಿವರಿಸಿದರು.
ಇನ್ಫೋಸಿಸ್ ಟೆಕ್ನಾಲಜಿಸ್, ಫಿಲಿಪ್ಸ್ ಇಂಡಿಯಾ, ಟಾಟಾ ಕನ್ಸಲ್‌ಟೆನ್ಸಿ ಸರ್ವಿಸಸ್, ಐಬಿಎಂ ಇಂಡಿಯಾ, ಹ್ಯುಲೆಟ್ ಪ್ಯಾ ಕಾರ್ಡ್, ಐ ಗೇಟ್ ಸಲೂಷನ್ಸ್, ನ್ಯಾಷನಲ್ ಇನ್‌ಷ್ಟ್ರುಮೆಂಟ್ಸ್, ಎಲ್ ಅಂಡ್ ಟಿ, ಎಸ್ಸಾರ್ ಗ್ರೂಪ್, ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ, ಮರ್ಸಿಡೆಜ್ ಬೆನ್ಜ್ ಆರ್ ಅಂಡ್ ಡಿ, ಟಿವಿಎಸ್ ಮೋಟಾರ್ ಕಂಪನಿ ಸೇರಿದಂತೆ ೨೮ ಕಂಪನಿಗಳ ಮಾನವ ಸಂಪ ನ್ಮೂಲ ಶಾಖೆಯ ಅಧಿಕಾರಿಗಳು ಎನ್‌ಐಇಗೆ ಬಂದು ಹೋಗಿದ್ದಾರೆ.
ವಿಶೇಷ ಎಂದರೆ ಈ ಎಲ್ಲ ಕಂಪನಿಗಳು ಕೈ ತುಂಬಾ ವೇತನ ನೀಡುವ ಭರವಸೆ ನೀಡಿ ಹೋಗಿವೆ. ವಾರ್ಷಿಕ ೩.೨ ಲಕ್ಷ ರೂ. ಗಳಿಂದ ೬.೫೪ಲಕ್ಷ ರೂ.ಗಳವರೆಗೆ ವಿದ್ಯಾರ್ಥಿಗಳ ಯೋಗ್ಯತೆಗೆ ಅನುಸಾರವಾಗಿ ಸಂಬಳ ಪಡೆಯಲಿದ್ದಾರೆ.
ಪದವಿ ಅಭ್ಯರ್ಥಿಗಳಿಗೂ ಬೇಡಿಕೆ
ಎಂಜನಿಯರಿಂಗ್ ಮಾತ್ರವಲ್ಲ, ಪದವಿ ವಿದ್ಯಾರ್ಥಿಗಳಿಗೂ ಬೇಡಿಕೆ ಹೆಚ್ಚಿದೆ. ಉತ್ತಮ ಸಂವಹನ ಕೌಶಲ್ಯ, ಕೈನಲ್ಲೊಂದು ಪದವಿ ಇದ್ದರೆ ಬಿಪಿಒ ಮತ್ತು ಕೆಪಿಒಗಳಲ್ಲಿ ಉದ್ಯೋಗ ನಿಶ್ಚಿತ.
‘ಅಕೌಂಟಿಂಗ್ ಮತ್ತು ಆಡಿಟಿಂಗ್‌ನಂಥ ಜ್ಞಾನ ಆಧರಿತ ವಲಯದಲ್ಲಿ ಕೆಲಸ ಮಾಡಲು ಬಿಬಿಎಂ ಇಲ್ಲವೇ ವಾಣಿಜ್ಯ ಪದವಿ ಪಡೆದಿರುವ ವಿದ್ಯಾರ್ಥಿಗಳು ಬೇಕಿದ್ದಾರೆ ಎಂಬುದು ಕೆಲವು ಖಾಸಗಿ ವಲಯದ ಸಂಸ್ಥೆಗಳ ಬೇಡಿಕೆ. ಈ ಬಾರಿ ನಮ್ಮ ಕಾಲೇಜಿಗೆ ಸಾಕಷ್ಟು ಸಂಸ್ಥೆಗಳು ಕ್ಯಾಂಪಸ್ ಸಂದರ್ಶನಕ್ಕಾಗಿ ಬರುತ್ತಿವೆ’ ಎನ್ನುತ್ತಾರೆ ಮಹಾಜನ ಪದವಿ ಕಾಲೇಜಿನ ಪ್ಲೇಸ್‌ಮೆಂಟ್ ಅಧಿಕಾರಿ ಪ್ರೊ.ಜಿ. ಬಿ. ಆರವಿಂದ್.
‘ಕಳೆದ ವರ್ಷ ನಮ್ಮಲ್ಲಿ ೧೨೦ ವಿದ್ಯಾರ್ಥಿಗಳಿಗೆ ಮಾತ್ರ ನೌಕರಿ ಸಿಕ್ಕಿತ್ತು. ಈ ಬಾರಿ ಈ ಸಂಖ್ಯೆ  ದುಪ್ಪಟ್ಟು ಇಲ್ಲವೇ ಮೂರು ಪಟ್ಟು ಹೆಚ್ಚುವ ನಿರೀಕ್ಷೆ ಇದೆ. ಕಂಪನಿಗಳ ಬಯಕೆಗೆ ತಕ್ಕಂತೆ ನಮ್ಮ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದೇವೆ’ ಎಂದು ಪತ್ರಿಕೆಗೆ ವಿವರಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ