ವರ್ಷದ ಫೋಟೊ ನೋಟ

2010ರಲ್ಲಿ ನಡೆದ ಪ್ರಮುಖ ಘಟನಾವಳಿಗಳನ್ನು ವಿಕ ಮೈಸೂರು ಆವೃತ್ತಿಯ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ ಸೆರೆ ಹಿಡಿದ ಫೋಟೊವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಕೆಲವೊಂದು ಚಿತ್ರ ಸಂಭ್ರಮ, ಖುಷಿ ತೋರ್ಪಡಿಸಿದರೆ ಮತ್ತೆ ಕೆಲವೊಂದಷ್ಟು ಸಂಕಟ, ನೋವು, ದುಃಖವನ್ನು ಪ್ರತಿಬಿಂಬಿಸುತ್ತಿವೆ. ಒಂದು ಫೋಟೊ ನೂರು ಅಕ್ಷರಗಳಿಗೆ ಸಮ ಎನ್ನುವಂತೆ ಈ ಚಿತ್ರಗಳು ವರ್ಷದ ನೋಟವನ್ನು ಬಿಚ್ಚಿಟ್ಟಿದೆ.

೨೦೧೦ ಮುಗೀತು

ಚಿತ್ರನಟ ಅಶ್ವತ್ಥ್ ವಿಧಿವಶ, ದೇಜಗೌ ಕರ್ನಾಟಕ ರತ್ನ, ಪೇಜಾವರ ಸ್ವಾಮೀಜಿ ಅವರ ಸಾಮರಸ್ಯದ ವಾಸ್ತವ್ಯ, ಅರಳಕುಪ್ಪೆ ಗ್ರಾಮದ ಬಹುತೇಕ ಹೆಣ್ಣು ಮಕ್ಕಳನ್ನು ಸೆಳೆದುಕೊಂಡ ಉಂಡಬತ್ತಿ ಕೆರೆ. ಮೈಸೂರು ಭಾಗದ ೨೦೧೦ರ ನೆನಪಿನ ಸುಳಿಯಿದು...
ಡಿಸೆಂಬರ್ ೧೪ರಂದು ನಂಜನಗೂಡಿನಲ್ಲಿ ಬೀಗರೂಟ ಮುಗಿಸಿ ಊರಿಗೆ ಹಿಂದಿರುಗುತ್ತಿದ್ದ ವಾಹನ ಮೈಸೂರು ಹೊರವಲಯದ ಉಂಡಬತ್ತಿ ಕೆರೆಗೆ  ಉರುಳಿದ್ದರಿಂದ ೩೧ ಮಂದಿ ಪ್ರಾಣಬಿಟ್ಟರು. ಇದರಲ್ಲಿ ೨೬ ಮಂದಿ ಮಹಿಳೆಯರು. ಈಗ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಮನೆಯೊಡತಿಯರೇ ಇಲ್ಲ. ವರ್ಷಾಂತ್ಯದ ದೊಡ್ಡ ದುರಂತವಿದು.
ಡಿಸೆಂಬರ್ ೧೫ರಂದು ಕೊಳ್ಳೇಗಾಲ ತಾಲೂಕಿನ ಮಹಾದೇಶ್ವರ ಬೆಟ್ಟಕ್ಕೆ ಪೂಜೆಗೆಂದು ಹೊರಟಿದ್ದ ಬೆಂಗಳೂರು ಹಾಗೂ ಮಳವಳ್ಳಿಯ ಕುಟುಂಬಗಳ ವಾಹನ ಅಪಘಾತಕ್ಕೀಡಾಗಿ ೬ ಮಂದಿ ಮೃತಪಟ್ಟರು.
ಮೈಸೂರಿನ ಮಂಡಿ ಮೊಹಲ್ಲಾದ ಗುಜರಿಯಲ್ಲಿ ಬೆಂಕಿ ಅವಘಡ. ಆರು ಮಂದಿ ಬೆಂಕಿಗೆ ಆಹುತಿ. ಅನಧಿಕೃತವಾಗಿ ಅನಿಲ ತುಂಬುವಾಗ ಸಂಭವಿಸಿದ ಅನಾಹುತ. ಮೇ ಮೊದಲ ವಾರದಲ್ಲಿ ನೇಪಾಳಕ್ಕೆ ತೆರಳಿದ್ದ ಮೈಸೂರಿಗರ ಬಸ್ ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದರು. ಇನ್ನೂ ಹಲವರು ಗಾಯಗೊಂಡಿದ್ದರು.
ಮೈಸೂರು ಪೊಲೀಸರಿಗೆ ದೊಡ್ಡ ತಲೆನೋವಾಗಿರುವ ಸರಗಳ್ಳರ ಬಂಧನ ಇನ್ನೂ ಸಾಧ್ಯವಾಗೇ ಇಲ್ಲ. ನಿಯಂತ್ರಣವೂ ಕಷ್ಟವಾಗಿದೆ.
೨೦ ವರ್ಷದ ಹಿಂದೆ ನಡೆದಿದ್ದ ಬದನವಾಳು ದುರಂತದ ಎಲ್ಲಾ ೨೦ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ಅಕ್ಟೋಬರ್‌ನಲ್ಲಿ.
ಕೊಡಗಿನಲ್ಲಿ ಉಗ್ರರ ಹೆಜ್ಜೆಯ  ಗುರುತು. ಕೇರಳದ ಮದನಿ ಸೋಮವಾರಪೇಟೆ ತಾಲೂಕಿನಲ್ಲಿ ತಂಗಿದ್ದ ಮಾಹಿತಿ. ಪೊಲೀಸರಿಂದ ಮುಂದುವರಿದ ತನಿಖೆ.

ಬಿಜೆಪಿ,ಕಾಂಗ್ರೆಸ್ ಗೆಲ್ಲುವ ಕಸರತ್ತು

ಕೊಳ್ಳೇಗಾಲ ತಾಲೂಕಿನ ಜಿ.ಪಂ. ಕ್ಷೇತ್ರಗಳು
ತಾಲೂಕಿನ ರಾಜಕೀಯ ಚಿತ್ರಣ ಈ ಬಾರಿ ವಿಚಿತ್ರ ತಿರುವು ಪಡೆದುಕೊಂಡಿದೆ. ವಿಧಾನಸಭೆ ಮರು ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಜಿ.ಎನ್.ನಂಜುಂಡಸ್ವಾಮಿ ಅವರು ಸರಕಾರದ ವಿರುದ್ಧ ಬಂಡಾಯವೆದ್ದು, ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ ಅವರ ಬೆಂಬಲ ಪಕ್ಷಕ್ಕಿಲ್ಲ. ಹೀಗಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಸೇರಿದಂತೆ ಇತರರ ಹೆಗಲಿಗೆ ತಾಲೂಕಿನ ಹೊಣೆ ಬಿದ್ದಿದೆ.
ಇದರ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಹಾಗೆ ನೋಡಿ ದರೆ ಕಳದ ಬಾರಿ ತಾಲೂಕಿನ ೭ ಜಿ.ಪಂ. ಕ್ಷೇತ್ರಗಳಲ್ಲಿ ೫ ಕಾಂಗ್ರೆಸ್, ೨ ಜಾ.ದಳ ಅಭ್ಯರ್ಥಿಗಳು ಆಯ್ಕೆಯಾಗಿ ದ್ದರು. ಈ ಬಾರಿ ಚಿತ್ರಣ ಬದ ಲಾಗಿದ್ದು, ಕಾಂಗ್ರೆಸ್- ಬಿಜೆಪಿ ನಡುವೆ ಹಣಾಹಣಿ ಏರ್ಪ ಟ್ಟಿದೆ. ಅಲ್ಲದೆ ಕೆಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಖಚಿತ. ೭ ಕ್ಷೇತ್ರಗಳಲ್ಲಿ ಕುಂತೂರು ಮಾತ್ರ ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರಕ್ಕೆ ಒಳ ಪಟ್ಟಿದ್ದು, ಉಳಿದ ೬ ಕ್ಷೇತ್ರಗಳು ಹನೂರು ವಿಧಾನಸಭೆ ವ್ಯಾಪ್ತಿ ಯಲ್ಲಿವೆ. ಹೀಗಾಗಿ ಇಲ್ಲಿ ಶಾಸಕ ಆರ್. ನರೇಂದ್ರ ಹಾಗೂ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರಿಗೆ ಪ್ರತಿಷ್ಠೆಯಾಗಿವೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜಾ.ದಳ ಎಲ್ಲ ೭ ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ೩ ಕ್ಷೇತ್ರಗಳಲ್ಲಿರುವ ಬಿಎಸ್ಪಿ ಅಭ್ಯರ್ಥಿಗಳು ತೀವ್ರ ಪೈಪೋಟಿ ನಡೆಸುವ ಸಾಧ್ಯತೆ ಇದೆ.
ಬಂಡಳ್ಳಿ
ಕಳೆದ ಬಾರಿ ಜಾ.ದಳದಿಂದ ಜಯಶೀಲ ರಾಜಶೇಖರ್ ಆಯ್ಕೆ ಯಾಗಿದ್ದರು. ನಂತರ ಇವರು ಪರಿಮಳಾ ನಾಗಪ್ಪ ಅವ ರೊಂದಿಗೆ ಬಿಜೆಪಿ ಸೇರಿದರು. ಈ ಬಾರಿ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಮೈಮುಲ್ ಮಾಜಿ ಅಧ್ಯಕ್ಷ ಗುರು ಮಲ್ಲಪ್ಪ (ಕಾಂಗ್ರೆಸ್), ನಾಗೇಂದ್ರಮೂರ್ತಿ (ಬಿಜೆಪಿ), ಕಾರ್ತೀಕ್ (ಜೆಡಿಎಸ್) ಹಾಗೂ ಆರ್.ಮಹಾದೇವಸ್ವಾಮಿ (ಬಿಎಸ್‌ಪಿ) ಕೃಷ್ಣಮೂರ್ತಿ ಮತ್ತು ಸಿದ್ದಪ್ಪ (ಪಕ್ಷೇತರರು) ಸ್ಪರ್ಧೆಯಲ್ಲಿದ್ದಾರೆ. ಆದರೆ ನೇರ ಹಣಾಹಣಿ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ. ಶಾಸಕ ಆರ್. ನರೇಂದ್ರ ಹಾಗೂ ಮಾಜಿ ಶಾಸಕಿ ಪರಿಮಳಾ ಅವರಿಗೆ ಈ ಕ್ಷೇತ್ರ ಪ್ರತಿಷ್ಠೆಯಾಗಿದೆ.
ಕುಂತೂರು
ಈ ಹಿಂದೆ ಜಾ.ದಳದ ಶಿವಕುಮಾರ್ ಆಯ್ಕೆಯಾಗಿ ನಂತರ ಕಾಂಗ್ರೆಸ್ ಸೇರ್ಪಡೆಯಾದರು. ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಬಿಎಸ್ಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕಮಲಮ್ಮ (ಜೆಡಿಎಸ್), ಯಶೋಧಾ ಪ್ರಭುಸ್ವಾಮಿ (ಕಾಂಗ್ರೆಸ್), ರೇಖಾ (ಬಿಎಸ್ಪಿ ), ಜಿ.ಎಂ.ಲತಾ (ಬಿಜೆಪಿ)ಯಿಂದ ಸ್ಪರ್ಧೆಯಲ್ಲಿದ್ದಾರೆ.
ಲೊಕ್ಕನಹಳ್ಳಿ
ಈ ಬಾರಿ ಈ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು ೨೬೦೧೨ ಮತದಾರರಿದ್ದಾರೆ, ಕಳೆದ ಬಾರಿ ಈ ಕ್ಷೇತ್ರದಿಂದ ಕಾಂಗ್ರೆಸ್‌ನ ರಾಧಾಮಣಿ ಆಯ್ಕೆಯಾಗಿದ್ದರು. ಈ ಬಾರಿ ಸಂಸದ ಆರ್.ಧ್ರುವನಾರಾಯಣ್ ಅವರ ಕಟ್ಟಾ ಬೆಂಬಲಿಗ ಕೆ.ಮಹದೇವ (ಕಾಂಗ್ರೆಸ್) ರೇಖಾ (ಬಿಜೆಪಿ) ಎಂ.ಶಿವಣ್ಣ (ಜೆಡಿಎಸ್) ವೀರಭದ್ರನಾಯಕ (ಪಕ್ಷೇತರರಾಗಿ ಕಣದಲ್ಲಿ ದ್ದಾರೆ, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ.

ಕಾಂಗ್ರೆಸ್, ದಳ ಪೈಪೋಟಿ ನಡುವೆ ಬಿಜೆಪಿ ಕಸರತ್ತು

ವಿಕ ತಂಡ
ಪಿರಿಯಾಪಟ್ಟಣ ತಾಲೂಕಿನ ೫ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಒಟ್ಟು ೨೦ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಇದರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲ ೫ ಕ್ಷೇತ್ರ ಗಳಲ್ಲಿ ಸ್ಪರ್ಧಿಸಿ ದ್ದರೆ, ಬಿಎಸ್‌ಪಿ ೩ ಕ್ಷೇತ್ರಗಳಲ್ಲಿ ಕಣಕ್ಕಿಳಿ ದಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿ ಗಳು ಇದ್ದಾರೆ. ಕಳೆದ ಬಾರಿ ಜೆಡಿಎಸ್ ೧ ಮತ್ತು ಎಬಿಪಿಜೆಡಿಯ ೪ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಬಿಜೆಪಿ ಖಾತೆ ತೆರೆದಿರಲಿಲ್ಲ.
ಕಂಪಲಾಪುರ
ಅನುಸೂಚಿತ ಪಂಗಡಕ್ಕೆ ಮೀಸಲಾಗಿದ್ದು ೩೦೩೮೨ ಮತದಾರರನ್ನು ಹೊಂದಿದೆ. ಈ ಹಿಂದೆ ಜಾ.ದಳದ ಕೋಮಲತಾ ಕಿಟ್ಟಪ್ಪ ಆಯ್ಕೆಯಾಗಿದ್ದರು.ಈ ಬಾರಿ ಕೆ.ಪಿ.ನಿಂಗರಾಜು(ಕಾಂಗ್ರೆಸ್) , ಚಂದ್ರ (ಬಿಜೆಪಿ), ಎಂ.ಪಿ.ಚಂದ್ರೇಶ್ (ಜೆಡಿಎಸ್) ಅಭ್ಯರ್ಥಿಗಳಾಗಿದ್ದಾರೆ. ಜಾ.ದಳದ ಮಾಜಿ ತಾ.ಪಂ.ಸದಸ್ಯ ಚಂದ್ರೇಶ್ ಮತ್ತು ವಾಣಿಜ್ಯೋದ್ಯಮಿ ಕಾಂಗ್ರೆಸ್‌ನ ಕೆ.ಪಿ.ನಿಂಗರಾಜು ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಹುಣಸವಾಡಿ
ಹಿಂದುಳಿದ ಅ ವರ್ಗ ಕ್ಕೆ ಮೀಸಲಾಗಿದ್ದು ಒಟ್ಟು ೨೮೦೬೧ ಮತಗಳಿವೆ.. ಕಳೆದ ಬಾರಿ ಎಬಿಪಿಜೆಡಿಯಿಂದ ಕೆ.ಸಿ. ರಾಜಶೇಖರಯ್ಯ ಆಯ್ಕೆಯಾಗಿದ್ದರು. ಈ ಬಾರಿ ಸರಿತಾ (ಕಾಂಗ್ರೆಸ್), ಎಂ.ಕೆ.ಸುಚಿತ್ರಾ (ಜೆಡಿಎಸ್) ಲತಾ (ಬಿಜೆಪಿ) ಕಣದಲ್ಲಿದ್ದಾರೆ.  ಕಾಂಗ್ರೆಸ್ ಮತ್ತು ಜೆಡಿಎಸ್‌ನಡುವೆ ನೇರ ಸ್ಪರ್ಧೆ ಇದೆ.
ಕೊಪ್ಪ: ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿದ್ದು ತಾಲೂಕಿನಲ್ಲಿ ಅತಿಹೆಚ್ಚು ಮತದಾರರನ್ನು ಒಳಗೊಂಡಿ ರುವ ಜಿ.ಪಂ ಕ್ಷೇತ್ರ. ೩೨೩೩೧ ಮತದಾರರನ್ನು ಹೊಂದಿದೆ. ಈ ಹಿಂದೆ ಎಬಿಪಿಜೆಡಿಯಿಂದ ಚೌಡಯ್ಯ ಆಯ್ಕೆಯಾಗಿ ದ್ದರು. ಈ ಬಾರಿ ಕಾವೇರಿ ಶೇಖರ್(ಕಾಂಗ್ರೆಸ್), ಜಯಂತಿ (ಜೆಡಿಎಸ್), ಎಚ್.ಕೆ.ಭಾಗ್ಯ (ಬಿಜೆಪಿ), ರಾಜಮ್ಮ (ಬಿಎಸ್‌ಪಿ), ಆರ್.ಹರಿಣಿಕುಮಾರಿ(ಪಕ್ಷೇತರ) ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ ಇದ್ದರೂ ಬಿಜೆಪಿ ಅಭ್ಯರ್ಥಿ ಪೈಪೋಟಿ ನಡೆಸಿದ್ದಾರೆ. ಬಿಎಸ್‌ಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಪಡೆ ಯುವ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ.
ಬೆಟ್ಟದಪುರ
ಬೆಟ್ಟದಪುರ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ  ೨೯೧೧೭ ಮತದಾರರಿದ್ದು, ಕಳೆದ ಬಾರಿ ಎಬಿಪಿಜೆಡಿ ವತಿಯಿಂದ ಕೆ.ಸಿ.ಕೃಷ್ಣಪ್ಪ ಆಯ್ಕೆಯಾಗಿದ್ದರು. ಈ ಬಾರಿ ಮಾಜಿ ಶಾಸಕ ಕಾಳಮರೀಗೌಡರ ಪುತ್ರಿ ಡಿ.ಕೆ.ಮಂಜುಳಾರಾಜ್(ಕಾಂಗ್ರೆಸ್), ಕೌಸಲ್ಯ (ಜೆಡಿಎಸ್), ಬಿ.ಸಿ.ಭಾಗ್ಯ (ಬಿಜೆಪಿ), ಯಶೋದಮ್ಮ (ಬಿಎಸ್‌ಪಿ) ಸ್ಪರ್ಧೆಯಲ್ಲಿದ್ದಾರೆ. ಕಾಂಗ್ರೆಸ್, ದಳ, ಬಿಜೆಪಿ ಅಭ್ಯರ್ಥಿಗಳ ನಡುವೆ ಪೈಪೋಟಿ ಇದೆ.
ರಾವಂದೂರು
ಸಾಮಾನ್ಯವರ್ಗಕ್ಕೆ ಮೀಸಲಾಗಿದ್ದು, ೨೭೧೮೪ ಒಟ್ಟು ಮತದಾರರಿದ್ದಾರೆ. ಕಳೆದ ಬಾರಿ  ಎಬಿಪಿಜೆಡಿವತಿಯಿಂದ ಹೇಮಾವತಿ ಶಿವಕುಮಾರ್ ಆಯ್ಕೆಯಾಗಿದ್ದರು. ಕುರುಬ ಮತದಾರರೆ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಕಣದಲ್ಲಿರುವ ನಾಲ್ವರು ಅಭ್ಯರ್ಥಿUಳೂ ಕುರುಬ ಜನಾಂಗಕ್ಕೆ ಸೇರಿದವರಾಗಿದ್ದಾರೆ.
ಡಿ.ಎ.ಜವರಪ್ಪ(ಕಾಂಗ್ರೆಸ್), ಎಸ್.ಎ.ಶಿವಣ್ಣ (ಜೆಡಿಎಸ್) ಜಿ.ಪಂ.ಮಾಜಿ ಉಪಾಧ್ಯಕ್ಷ ವಿ.ಜಿ.ಅಪ್ಪಾಜಿಗೌಡ (ಬಿಜೆಪಿ), ಶಶಿಕುಮಾರ್ (ಬಿಎಸ್‌ಪಿ), ಹೇಮಾವತಿ ಶಿವಕುಮಾರ್ (ಪಕ್ಷೇತರ) ಸ್ಪರ್ಧಿಸಿ ದ್ದಾರೆ. ಐವರು ಕಣದಲ್ಲಿದ್ದರೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಮಬಲ ಹೋರಾಟವಿದೆ.

ಉಗ್ರರ ಭೀತಿ: ನಗರದಲ್ಲೂ ಕಟ್ಟೆಚ್ಚರ

ವಿಧ್ವಂಸಕ ಕೃತ್ಯ ನಡೆಸಲು ಭಯೋತ್ಪಾದಕರು ದೇಶ ಪ್ರವೇಶಿಸಿದ್ದಾರೆ ಎನ್ನುವ ಕೇಂದ್ರ ಗುಪ್ತಚಾರ ಇಲಾಖೆ ಮಾಹಿತಿಯ ಹಿನ್ನೆಲೆಯಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿ ನಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.
ಪ್ರೇಕ್ಷಕರನ್ನು ಸೆಳೆಯುವಲ್ಲಿ ಪ್ರೇಮ ಸೌಧ ತಾಜ್‌ಮಹಲ್ ಅನ್ನು ಮೀರಿಸಿರುವ ಅಂಬಾವಿಲಾಸ ಅರಮನೆ,ಮೃಗಾಲಯ, ಚಾಮುಂಡಿಬೆಟ್ಟ, ವಿದೇಶಿ ಯರನ್ನು ಆಕರ್ಷಿಸುವ ಕೆ.ಆರ್.ಎಸ್. ಬೃಂದಾವನಕ್ಕೆ ನಿತ್ಯ ಸಾವಿರಾರು ಮಂದಿ ಬರುತ್ತಿದ್ದು, ಈ ಸ್ಥಳಗಳು ಭಯೋತ್ಪಾದಕರ ಕೃತ್ಯಗಳಿಗೆ ಟಾರ್ಗೆಟ್ ಎನ್ನಲಾಗಿದೆ.  ಇದರೊಂದಿಗೆ ಆರ್‌ಎಂಪಿ, ಸಿಎಫ್‌ಟಿಆರ್‌ಐ, ಡಿಎಫ್‌ಆರ್‌ಎಲ್ ಅಲ್ಲದೇ, ಇನ್‌ಫೋಸಿಸ್ ಸೇರಿದಂತೆ ಪ್ರಮುಖ ಉದ್ಯಮಗಳು ಮೈಸೂರಿನಲ್ಲಿದ್ದು, ಇವು ಉಗ್ರರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುವುದು ಗುಪ್ತಚಾರ ಇಲಾಖೆಯ ಊಹೆ.

ಸಂಬಾರ ರಾಣಿಗೆ ರಾಜನ ಬೆಲೆ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಸಂಬಾರ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಏಲಕ್ಕಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇರುವುದು ಮತ್ತು ಕಳೆದ ವರ್ಷಕ್ಕಿಂತ ಹೆಚ್ಚುವರಿ ಇಳುವರಿ ಕೈಸೇರುವ ನಿರೀಕ್ಷೆಯಿಂದ ಕೊಡಗಿನ ಏಲಕ್ಕಿ ಬೆಳೆಗಾರರ ಮೊಗದಲ್ಲಿ ಹರ್ಷದ ಹೊನಲು ಮೂಡಿಸಿದೆ. ಬಂಪರ್ ಬೆಲೆ ಬರುತ್ತಿದ್ದಂತೆ ಕಾಫಿ ನಂಬಿ ಏಲಕ್ಕಿ ತೋಟ ನಾಶ ಮಾಡಿದ್ದೆವಲ್ಲಾ ಎಂದು ಹಲವು ಬೆಳೆಗಾರರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
ಬಂಪರ್ ಬೆಲೆ: ಏಲಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗುವ ಗ್ವಾಟೆಮಾಲಾದಲ್ಲಿ ಇಳುವರಿ ತೀರಾ ಕಡಿಮೆಯಾಗಿರುವುದು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ದೊರೆಯುವಂತೆ ಮಾಡಿದೆ. ಉತ್ತಮ ಇಳುವರಿ ಬಂದಿರುವ ಸಂದರ್ಭದಲ್ಲಿಯೇ ಬಂಪರ್ ಬೆಲೆ ಬಂದಿರುವುದು ಏಲಕ್ಕಿ ಬೆಳೆಗಾರರ ಮೊಗದಲ್ಲಿ ಸಂತಸ ಅರಳಿಸಿದೆ.
ದಾಖಲೆ ಅನ್ನುವ ರೀತಿಯಲ್ಲಿ ನೆಲ್ಯಾಣಿ ತಳಿಗೆ ೧,೮೦೦ ಹಾಗೂ ಮಂಜರಬಾದ್‌ಗೆ ೧,೫೦೦ ರೂ. (೧ ಕೆ.ಜಿ.ಗೆ) ಬಂದಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ನೆಲ್ಯಾಣಿಗೆ ೧,೧೦೦ ರಿಂದ ೧,೨೦೦ ಹಾಗೂ ಮಂಜರಬಾದ್‌ಗೆ ೯೦೦ ರಿಂದ ೧,೦೦೦ ಬೆಲೆ ಇದೆ. ಬೆಲೆ ಏರುಮುಖದಲ್ಲಿ ಸಾಗುತ್ತಿರುವುದು ಬೆಳೆಗಾರರನ್ನು ಹರ್ಷಚಿತ್ತರನ್ನಾಗಿಸಿದೆ. ಹತ್ತು ವರ್ಷಗಳ ಹಿಂದೆ ೧೨೦ ರಿಂದ ೧೫೦ ರೂ. ಇದ್ದದ್ದೇ ಹೆಚ್ಚಿನ ಬೆಲೆಯಾಗಿತ್ತು.

ಈ ಮರ ಅಂತರ್ಜಲಕ್ಕೆ ಸಂಚಕಾರ

ಕುಂದೂರು ಉಮೇಶಭಟ್ಟ ಮೈಸೂರು
ಅಂತರ್ಜಲಕ್ಕೆ ಸಂಚಕಾರ ತರುವ ನೀಲಗಿರಿ ಹಾಗೂ ಅಕೇಷಿಯಾ ನಿಷೇಧಕ್ಕೆ ರಾಜ್ಯ ಸರಕಾರ ಮುಂದಾಗಿ ದ್ದರೂ, ಈ ವರ್ಷದಲ್ಲಿ ಬೆಳೆದಿರುವ ಲಕ್ಷಕ್ಕೂ ಹೆಚ್ಚು ಸಸಿಗಳು ನರ್ಸರಿಗಳಲ್ಲಿ ಬೆಳೆದು ನಿಂತಿವೆ.
ಅರಣ್ಯ ಪ್ರದೇಶದಲ್ಲಿ ಏಕಪ್ರಬೇಧ ಬೆಳೆಸುವ ಬದಲು ಬಹುಪಯೋಗಿ ಮರಗಳನ್ನು ಬೆಳೆಸಲು ನೂತನ ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ನರ್ಸರಿಗಳಲ್ಲಿರುವ ನೀಲಗಿರಿ ಹಾಗೂ ಅಕೇಷಿಯಾ ಸಸಿಗಳ ಲೆಕ್ಕ ಶುರುವಾಗಿದೆ.
ನಾಲ್ಕು ದಶಕದಿಂದ ರಾಜ್ಯದಲ್ಲಿ ತಳವೂರಿದ ನೀಲಗಿರಿ ಹಾಗೂ ಅಕೇಷಿಯಾ ರಾಜ್ಯದ ಒಟ್ಟು ಅರಣ್ಯ ಭಾಗ  ಶೇ.೨೨.೬೦ರಲ್ಲಿ ಇರುವುದು ಶೇ.೮ರಷ್ಟು. ಅದರಲ್ಲೂ  ಇಲಾಖೆಯೇ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ, ತುಮಕೂರು ಸೇರಿದಂತೆ ಬಯಲುಸೀಮೆಯ ಜಿಲ್ಲೆಗಳಲ್ಲಿ ಹೆಚ್ಚಾಗಿ ಇದನ್ನು ಬೆಳೆಸಿದೆ
ಅರಣ್ಯ ಇಲಾಖೆ ವೆಬ್‌ಸೈಟ್‌ನಲ್ಲಿರುವ ಮಾಹಿತಿಯಂತೆ, ೪ ನರ್ಸರಿಗಳಲ್ಲೇ ಇರುವ ಸಸಿಗಳ ಸಂಖ್ಯೆ  ೮೫ ಸಾವಿರ. ಅರಣ್ಯ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ೩೫ ವರ್ಷದ ಅವಧಿಯಲ್ಲಿ ಲಕ್ಷಾಂತರ ಸಸಿ ಬೆಳೆಸಲಾಗಿದೆ. ಈಗ ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಯಲ್ಲಿನ ನರ್ಸರಿಗಳಲ್ಲೇ ಈ ಎರಡು ತಳಿಯ ೨ ಲಕ್ಷಕ್ಕೂ ಹೆಚ್ಚು ಸಸಿಗಳಿವೆ. ಅರಣ್ಯ ಇಲಾಖೆಗೆಂದೇ ಈ ಸಸಿಗಳನ್ನು ಬೆಳೆಸಿಲ್ಲ. ಬದಲಿಗೆ ರೈತರ ಬೇಡಿಕೆ ಪೂರೈಸಲು ಈ ಸಸಿಗಳನ್ನು ಬೆಳೆಸಲಾಗಿದೆ.

ಸಮುದಾಯ ಸೇವೆಗೆ ಸಿದ್ಧ ಪೌರ ರಕ್ಷಣಾ ಪಡೆ

ವಿಕ ವಿಶೇಷ ಮೈಸೂರು
ಪೌರ ರಕ್ಷಣಾ ಕಾವಲುಗಾರರು(ಸಿವಿಲ್ ಡಿಫೆನ್ಸ್ -ಸಿಡಿ ವಾರ್ಡನ್ಸ್)  ಈಗ ಮೈಸೂರಿನಲ್ಲಿ  ಸೇವೆಗೆ ಸನ್ನದ್ಧರು.
ವಿಶ್ವವಿದ್ಯಾನಿಲಯದ  ಪ್ರಾಧ್ಯಾಪಕರು, ವೈದ್ಯರು, ವಕೀಲರು, ಉದ್ಯಮಿಗಳು ಸೇರಿದಂತೆ ಸಮಾಜದ ವಿವಿಧ ವಲಯದ  ಶ್ರೀ ಸಾಮಾನ್ಯರು, ಪ್ರತಿಷ್ಠಿತರು ಹಳದಿ ಜಾಕೆಟ್ ಧರಿಸಿ, `ಸಿಡಿ'ಗಳಾಗಿ ನಾನಾ ರೀತಿಯ ಸೇವೆಗಳಿಗೆ ಕೈ ಜೋಡಿಸುವರು. 
ಸಣ್ಣ-ಪುಟ್ಟ ಅಪಘಾತದಿಂದ ಹಿಡಿದು, ಪ್ರಾಕೃತಿಕ ವಿಕೋಪದಂಥ ಸಮಸ್ಯೆ-ಸಂಕಷ್ಟಗಳು ಸೃಷ್ಟಿಯಾದಾಗ  ಪೊಲೀಸರು ಹಾಗೂ ಅಗ್ನಿ ಶಾಮಕ, ತುರ್ತು ಸೇವಾ ದಳದ ಸಿಬ್ಬಂದಿಯಂತೆ, ಸಿಡಿ  ಕಾವಲುಗಾರರು ಕೂಡ ಕರ್ತವ್ಯಕ್ಕಾಗಿ ಕಟಿಬದ್ಧರಾಗಲಿದ್ದಾರೆ. ಏಕೆಂದರೆ- ಈ ಸ್ವಯಂ ಸೇವಕರಿಗೆ ಸರಕಾರವೇ ಶಾಸನಬದ್ಧವಾಗಿ ಸೇವೆ ಮಾಡಲು ಅನುಮತಿ ನೀಡಿ, ಅವರನ್ನು ಸೇವಾಕಣಕ್ಕೆ ಇಳಿಸಲಿದೆ.  ಹಾಗೆ ನೋಡಿದರೆ  ಇವರು ಯಾವುದೇ ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಸದಸ್ಯರಂತಲ್ಲ. ಅವರ ಸೇವೆಯೂ ನಿಸ್ವಾರ್ಥದಿಂದ ಇದ್ದರೂ, ಅದಕ್ಕೆ ಸರಕಾರದ ಅಧಿಕೃತ ಅನುಮತಿ ಇರದು. ಹಾಗಾಗಿ ಸೇವೆಯ ವಿಶ್ವಾಸಾರ್ಹತೆಗೆ ಖಚಿತತೆ(ಗ್ಯಾರಂಟಿ) ಇರುವುದಿಲ್ಲ. ಆದರೆ, ಸಿಡಿ ವಾರ್ಡನ್ಸ್ ಗಳು ಅಧಿಕೃತವಾಗಿ ಗೃಹ ಮಂತ್ರಾಲಯದ ರಹದಾರಿ ಹೊಂದಿರುತ್ತಾರೆ.

ವೇಶ್ಯಾವಾಟಿಕೆ ಇನ್ನೂ ಅವ್ಯಾಹತ

ವೇಶ್ಯಾವಾಟಿಕೆ ಇನ್ನೂ ಅವ್ಯಾಹತ
ನಗರದಲ್ಲಿ ನಿತ್ಯವೂ ನಡೆಯುವ ಈ ದಂಧೆಗೆ ಕೆಲವು ಪೊಲೀಸ್ ಅಧಿಕಾರಿಗಳ ಮೌನ ಸಮ್ಮತಿ ಇದ್ದೇ ಇದೆ. ಎಲ್ಲಾದರೂ ದೂರು ಕೇಳಿ ಬಂದಾಗ ಯಾವುದೋ ನಾಲ್ಕು ಮಂದಿಯನ್ನು ಹಿಡಿದು ತಣ್ಣಗಾಗಿ ಬಿಡುವ ಜಾಗೃತ ದಳ, ಶ್ರೀಮಂತ ವೇಶ್ಯಾವಾಟಿಕೆ ಜಾಲದ ಹಿಂದಿರುವ `ಗಣ್ಯರ' ಮುಖವಾಡ ಕಳಚುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಹಾಗಾಗಿಯೇ ಈ ಚಟುವಟಿಕೆ ಅವ್ಯಾಹತ.

ರೇಷ್ಮೆ ಕೃಷಿ: ಎಲ್ಲೆಡೆ ಶೂನ್ಯ ಮಂಡ್ಯದಲ್ಲಿ ಮಾನ್ಯ

ರೇಷ್ಮೆ ಕೃಷಿ
ಎಲ್ಲೆಡೆ ಶೂನ್ಯ
ಮಂಡ್ಯದಲ್ಲಿ ಮಾನ್ಯ
ವಿಕ ತಂಡ
ಮಂಡ್ಯ:
ಒಂದು ಕಾಲದಲ್ಲಿ ರೇಷ್ಮೆ ಕೃಷಿಯು ಮಳೆಯಾಶ್ರಿತ ಮತ್ತು ಕೊಳವೆ ಬಾವಿ ಆಶ್ರಯಿಸಿದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಾಮರಾಜನಗರ ಜಿಲ್ಲೆಗಳಿಗಷ್ಟೇ ಸೀಮಿತ ಎನ್ನುವಂತಿತ್ತು. ಇದೀಗ ಸಮೃದ್ದ ನೀರಾವರಿ ಪ್ರದೇಶ ಮಂಡ್ಯ ಜಿಲ್ಲೆಯಲ್ಲೂ ದಾಪುಗಾಲಿಟ್ಟಿದೆ.
ಉದ್ಯೋಗ ಸೃಷ್ಟಿ, ಸುಲಭದ ಬೇಸಾಯ, ಕಡಿಮೆ ಅವಧಿ ಮತ್ತು ಬಂಡವಾಳದಲ್ಲಿ ಹೆಚ್ಚು ಲಾಭ ಸಿಗುವಂಥದ್ದು ಇದು. ಇದೀಗ ಜಿಲ್ಲೆಯಲ್ಲಿ ೪೧,೦೩೫ ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆದು, ರೇಷ್ಮೆ ಕೃಷಿ ಅವಲಂಬಿಸಲಾಗಿದೆ. ಕಬ್ಬು ಮತ್ತು ಭತ್ತದ ಬೇಸಾಯದಷ್ಟೇ ರೇಷ್ಮೆ ಕೃಷಿಗೂ ಗಮನ. ಜಿಲ್ಲೆಯಲ್ಲಿ  ವಾರ್ಷಿಕ ೧೫೨೦೦ ಮೆಟ್ರಿಕ್ ಟನ್ ರೇಷ್ಮೆ ಗೂಡು ಉತ್ಪಾದನೆಯಾಗುತ್ತಿದೆ. ಶೇ. ೨೫ರಷ್ಟು ಕುಟುಂಬಗಳು ರೇಷ್ಮೆಗೆ ಮಾರು ಹೋಗಿವೆ. ಇಲ್ಲಿನ ಮಣ್ಣು ಮತ್ತು ಹವಾಗುಣವು ವಿ೧ ತಳಿ ಹಿಪ್ಪುನೇರಳೆ, ಸಿಎಸ್ಆರ್ ಹೈಬ್ರಿಡ್ ರೇಷ್ಮೆ ಹುಳು ಸಾಕಣೆಗೆ ಪೂರಕ. ೨೦೦೯ನೇ ಸಾಲಿನಿಂದ ಹಿಪ್ಪು ನೇರಳೆ ನಾಟಿ ೭೫೦೦ ಎಕರೆಯಷ್ಟು ವಿಸ್ತಾರಗೊಂಡಿದೆ. ಜಿಲ್ಲೆಯಲ್ಲಿ ರೇಷ್ಮೆ ಕೃಷಿ ವಿಸ್ತಾರಗೊಂಡ ಹಿನ್ನೆಲೆಯಲ್ಲಿ ಸರಕಾರವು ಕೆ.ಆರ್.ಪೇಟೆ ಮತ್ತು ಮಳವಳ್ಳಿಯಲ್ಲಿ ಮಾರಾಟ ಕೇಂದ್ರಗಳನ್ನು ತೆರೆದಿದೆ. ರಾಮನಗರ ಮತ್ತು ಚನ್ನಪಟ್ಟಣ ರೇಷ್ಮೆ ಗೂಡು ಮಾರುಕಟ್ಟೆಗಳು ಜಿಲ್ಲೆಗೆ ಸಮೀಪದಲ್ಲಿವೆ. ಹಾಗಾಗಿ ರೈತರಿಗೆ ಮಾರುಕಟ್ಟೆಯ ಸಮಸ್ಯೆ ಇಲ್ಲ. ಸಾಗಣೆಗೂ ಚಿಂತೆ ಇಲ್ಲ.

ಈರುಳ್ಳಿ ದಿಲ್ಲಿಯಲ್ಲಿ ಕುಸಿದಿರಬಹುದು ಹಳ್ಳಿಯಲ್ಲಲ್ಲ !

ವಿಕ ತಂಡ
ಈರುಳ್ಳಿ ದರ ಮಾರುಕಟ್ಟೆಯಲ್ಲಿ ಬಹಳ ಕುಸಿದಿಲ್ಲ. ಹೋಲ್‌ಸೇಲ್ ಕಥೆ ಗೊತ್ತಿಲ್ಲ. ನಿತ್ಯವೂ ಕಾಲು ಕೆಜಿ ಬಳಸುವ ಮಂದಿಗೆ ಇಳಿಕೆಯ ಅನುಭವ ತಿಳಿಯುತ್ತಿಲ್ಲ, ಬರೀ ಏರಿಕೆಯ ಬಿಸಿಯಷ್ಟೇ.
ಮಡಿಕೇರಿಯಲ್ಲಿ:ಈರುಳ್ಳಿ ಬೆಲೆ ಕೊಡಗಿನ ಜನರಿಗೂ ಬಿಸಿ ಮುಟ್ಟಿಸಿದೆ. ಸ್ವಲ್ಪ ಬೆಲೆ ಇಳಿಕೆಯಿಂದ ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.
ಈರುಳ್ಳಿಗೆ ದುಬಾರಿ ಬೆಲೆಯಾದರೂ ಜನರು ಖರೀದಿಯನ್ನು ನಿಲ್ಲಿಸಿಲ್ಲ. ಜಿಲ್ಲೆಯ ಕೆಲವು ವರ್ತಕರು ಪರಿಸ್ಥಿತಿಯ ಲಾಭ ಪಡೆದುಕೊಳ್ಳತೊಡಗಿದ್ದಾರೆ. ಹಾಗಾಗಿ ಒಂದೊಂದು ಅಂಗಡಿಗಳಲ್ಲಿ ಒಂದೊಂದು ದರ. ಒಂದು ಅಂಗಡಿಯಲ್ಲಿ ಗುರುವಾರ ೫೮ ರೂ., ಬುಧವಾರ ೪೮ ರೂ, ಮಂಗಳವಾರ ೪೦ ರೂ. ಗಳಿದ್ದರೆ,  ಮತ್ತೊಂದು ಅಂಗಡಿಯಲ್ಲಿ ಕ್ರಮವಾಗಿ ೪೦, ೬೦, ೩೦ ರೂ. ಗೆ ಈರುಳ್ಳಿ ಲಭ್ಯ.
ಕೊಡಗು ಜಿಲ್ಲೆಯಲ್ಲಿ ಮೂರು ಎಪಿಎಂಸಿಗಳಿದ್ದು, ಇವು ವಿವಿಧ ಸಾಮಗ್ರಿಗಳ ಮಾರಾಟದ ಮಧ್ಯವರ್ತಿಗಳಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ವಸ್ತುಗಳಿಗೆ ಸಂಬಂಧಿಸಿದಂತೆ ಒಂದೇ ದರ ಕಾಣುವುದಿಲ್ಲ. ಜಿಲ್ಲೆಯ ವರ್ತಕರಿಗೆ ಬೆಂಗಳೂರಿನ ಮಾರುಕಟ್ಟೆಯೇ ಆಶ್ರಯ.
ಮಂಡ್ಯದಲ್ಲಿ: ಈರುಳ್ಳಿ ಬೆಲೆ ನಿಯಂತ್ರಣ ಸಂಬಂಧ ಕೇಂದ್ರ ಸರಕಾರ ರಫ್ತು ನಿಷೇಧ ಮಾಡಿದ ಬೆನ್ನಲ್ಲೇ ಪ್ರತಿ ಕಿಲೋ ಈರುಳ್ಳಿಗೆ ೨೦ ರಿಂದ ೨೫ರೂ. ಕಡಿಮೆಯಾಗಿದೆ. ಆದರೆ, ಸರಕಾರದ ಈ ನಿರ್ಧಾರದಿಂದ ತಮಗೆ ನಷ್ಟ ಆಗಿದೆ ಎಂದು ವ್ಯಾಪಾರಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ.

ಬನ್ನೇರುಘಟ್ಟ ಎಷ್ಟು ಸುರಕ್ಷಿತ !

ಚೀ.ಜ.ರಾಜೀವ ಮೈಸೂರು
ಸುಸಜ್ಜಿತ ಚಿರತೆ ಮನೆ ನಿರ್ಮಿಸುವ ಒಂದೇ ಉದ್ದೇಶದಿಂದ ಮೈಸೂರು ಮೃಗಾಲಯದ ಎಂಟು ಚಿರತೆಗಳನ್ನು ಬನ್ನೇರುಘಟ್ಟ ಉದ್ಯಾನಕ್ಕೆ ಸ್ಥಳಾಂತರಿಸಿರುವುದು ಅಚ್ಚರಿ ಮೂಡಿಸಿದೆ.
ವನ್ಯಜೀವಿ ಪ್ರಿಯರಲ್ಲಿ ಇಂಥದ್ದೊಂದು ಪ್ರಶ್ನೆ  ಮೂಡಿದೆ. ನಾಲ್ಕೈದು ತಿಂಗಳ ಹಿಂದೆಯಷ್ಟೇ  `ಪ್ರಾಣಿಗಳ ಸಾವಿನ ಮನೆ' ಎಂಬುವಷ್ಟರ ಮಟ್ಟಿಗೆ ಸದ್ದು ಮಾಡಿದ್ದ  ಬನ್ನೇರು ಘಟ್ಟಕ್ಕೆ ಹೋಗುವುದು ಸರಿಯಲ್ಲ ಎಂಬುದು ಒಂದು ವಾದವಾದರೆ, ಮೈಸೂರು ಮೃಗಾಲಯ ತಾತ್ಕಾಲಿಕವಾಗಿ ಯಾದರೂ  ಚಿರತೆಗಳ ಆಕರ್ಷಣೆಯಿಂದ ವಂಚಿತವಾಗುವುದು ಸರಿಯೇ ಎಂಬ ಸಂಗತಿಯೂ ಚರ್ಚೆಗೆ ಕಾರಣವಾಗಿದೆ.
ಈ ವರ್ಷವಿಡೀ ಬನ್ನೇರುಘಟ್ಟ ಉದ್ಯಾನದ ವನ್ಯಧಾಮ ಪ್ರಾಣಿಗಳ ಸಾವಿನಿಂದಲೇ ಸುದ್ದಿ ಮಾಡಿತು. ಹನ್ನೊಂದೂವರೆ ತಿಂಗಳಲ್ಲಿ ಅಲ್ಲಿ ಸತ್ತ ಪ್ರಾಣಿಗಳ ಸಂಖ್ಯೆ ೧೬. ಬಹುತೇಕ ಪ್ರಾಣಿಗಳು ಸ್ವಾಭಾವಿಕವಾಗಿ ಮೃತಪಟ್ಟವು ಎಂಬುದು ಅಧಿಕಾರಿಗಳು ಹಾಗೂ ಮಂತ್ರಿಗಳ ವಾದವಾದರೂ, ಉದ್ಯಾನದ ವಾತಾವರಣ ಹಾಗೂ ಅಲ್ಲಿನ ಕಳಪೆ ಮಾಂಸವೇ ಪ್ರಾಣಿಗಳ ಸಾವಿಗೆ ಕಾರಣ ಎಂಬುದು  ತಜ್ಞರ ಅಭಿಪ್ರಾಯ.
ಸೆಪ್ಟೆಂಬರ್‌ನ ಮೊದಲ ವಾರದಲ್ಲಿ  ಮೂರು ಹುಲಿಗಳು, ಎರಡು ಸಿಂಹಗಳು ಸಾವಿಗೀಡಾದವು. ಇಷ್ಟು ಕಡಿಮೆ ದಿನಗಳ ಅಂತರದಲ್ಲಿ ಪ್ರಾಣಿಗಳು ಸಾಯುತ್ತಿರು ವುದು ಸಹಜವಲ್ಲ ಎಂದು ಪ್ರಾಣಿ ಪ್ರಿಯರು ವಾದಿಸಿದ್ದರು.  ಈ ಅಕಾಲಿಕ ಸಾವುಗಳಿಗೆ  ಸಮರ್ಪಕ ಉತ್ತರ ನೀಡಿರಲಿಲ್ಲ.  ಇಂಥ ಬನ್ನೇರುಘಟ್ಟಕ್ಕೆ ನಮ್ಮ ಚಿರತೆಗಳು ಹೋಗುವುದು ಎಷ್ಟರ ಮಟ್ಟಿಗೆ ಸರಿ ?, ಅವುಗಳ ಸುರಕ್ಷತೆಗೆ ಏನು ಗ್ಯಾರಂಟಿ ಎಂಬುದು ಪ್ರಾಣಿ ಪ್ರಿಯರ ಪ್ರಶ್ನೆ.

ಮಡಿಕೇರಿ ಗಡಗಡ

ವಿಕ ವಿಶೇಷ
ಮಂಜಿನ ನಗರಿ ಮಡಿಕೇರಿ ಜನ ಈಗ ಚಳಿ ಹೊಡೆತಕ್ಕೆ ಅಕ್ಷರಶಃ ಥರಗುಟ್ಟಿ ಹೋಗಿದ್ದಾರೆ. ಪ್ರವಾಸಿಗರೂ ಇಳಿಮುಖಗೊಂಡ ಉಷ್ಣಾಂಶಕ್ಕೆ ಸಿಲುಕಿ ತತ್ತರಿಸಿದ್ದಾರೆ. ಮಡಿಕೇರಿ ಸದ್ಯಕ್ಕೆ ಗಡಗಡ. ಮುಂಜಾನೆ ಬೆಚ್ಚನೆ ಕಂಬಳಿ ಹೊದ್ದು ಮಲಗಿರಲು ಬಯಸುವವರೇ ಹೆಚ್ಚು. ತಣ್ಣಗೆ ಬೀಸುತ್ತಿರುವ ಕುಳಿರ್ಗಾಳಿ ಹಾಗೆ ಬಿಡದು. ಸೂರ್ಯನ ಬೆಳಕು ಮನೆ ಒಳಗೆ ಹೊಕ್ಕುವವರೆಗೂ ಬೆಚ್ಚನೆ ಕಂಬಳಿ ಯೊಳಗಿರಲು ಹೆಚ್ಚಿನವರು ಬಯಸುತ್ತಿ ದ್ದಾರೆ.
ಒಳಗೊಂದು... ಅದರ ಮೇಲೊಂದು... ಅಲ್ಲಿಂದ ಸ್ವೆಟರ್... ಮಫ್ಲರ್... ಕೈ- ಕಾಲಿಗೆ ಗವುಸುಗಳನ್ನು ಧರಿಸಿದರೂ ಚಳಿ ಬಿಡದು. ಕೊಡಗಿನ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಈ ವರ್ಷ ಡಿಸೆಂಬರ್ ೧೪ ರಂದು ಅತ್ಯಂತ ಕಡಿಮೆ ಉಷ್ಣಾಂಶ ೧೧.೬ ಡಿಗ್ರಿ ಸೆ. ದಾಖಲಾಗಿದೆ. ೨೦೦೬ ರ ಫೆಬ್ರವರಿ ೮ ರಂದು ದಾಖಲಾದ ೫.೧ ಡಿಗ್ರಿ ಸೆ. ಇದುವರೆಗಿನ ದಾಖಲೆ. ಪ್ರಸ್ತುತ ೧೨-೧೩ ಡಿಗ್ರಿ ಸುತ್ತಮುತ್ತಲೇ ಗಿರಕಿ.
ನಿತ್ಯದ ವಾಕಿಂಗ್‌ಗೂ ಸದ್ಯಕ್ಕೆ ಬ್ರೇಕ್. ದೇಹ ದಂಡನೆಗಿಂತ ಚಳಿ ಹೊಡೆತದಿಂದ ತಪ್ಪಿಸಿ ಕೊಂಡರೆ ಸಾಕೆಂಬ ನಿಲುವು. ಅನಿವಾರ್‍ಯವಾಗಿ ವಾಯುವಿಹಾರಕ್ಕೆ ಹೊರಡುವವರು ಗಾಳಿ ಒಳಪ್ರವೇಶಿಸದಂತೆ ಫುಲ್ ಬಂದೋಬಸ್ತ್.
ಒಲೆ ಇರುವ ಮನೆಗಳಲ್ಲಿ ಬೆಚ್ಚನೆ ಬೆಂಕಿ ಕಾಯಿಸಿಕೊಳ್ಳಲು ಈಗ ಪೈಪೋಟಿ. ಉಳ್ಳವರು ಹೀಟರ್, ಆಗಸ್ಟಿಕ್ ಬಳಸುತ್ತಿ ದ್ದಾರೆ. ಮುಸ್ಸಂಜೆ ವೇಳೆಯಲ್ಲಿ `ಗರಂ' ಆಗಿ ಚಳಿಯನ್ನು ದೂರ ಮಾಡಲು ಹಲವರು ಮೈ ಮರೆಯುತ್ತಿದ್ದಾರೆ. ಭುವಿಯೇ ಮಂಚ, ಆಗಸವೇ ಹೊಂದಿಕೆ ಅನ್ನುವ ಪರಿಸ್ಥಿತಿಯಲ್ಲಿರುವ ಬಯಲು ವಾಸಿಗಳು, ಗುಡಿಸಲು ವಾಸಿಗಳು ವಾಸ್ತವ್ಯ ಹೂಡಿರುವ ಸ್ಥಳದ ಪಕ್ಕ `ಕ್ಯಾಂಪ್ ಫೈಯರ್' ಹಾಕಿಕೊಂಡು ಸದ್ಯಕ್ಕೆ ಮುಕ್ತಿ.

ಎಲ್ಲರ ಚಿತ್ತ ಅವರೆಕಾಯಿಯತ್ತ

ಮಾಗಿಯ ಕಾಲ ಬಂದಿದೆ. ಅಂತೆಯೇ ಅವರೆಕಾಯಿಯೂ ಮಾರುಕಟ್ಟೆಗೆ ದಾಳಿ ಇಟ್ಟಿದೆ. ಹಸಿ ಅವರೆಕಾಳಿನಿಂದ ವಿವಿಧ ಬಗೆಯ ಭಕ್ಷ್ಯಗಳನ್ನು ಹೇಗೆ ಮಾಡಬಹುದೆಂಬುದನ್ನು ಇಲ್ಲಿ ತಿಳಿಸಲಾಗಿದೆ. ಇದನ್ನು ಓದಿ ಒಮ್ಮೆ ಟ್ರೈ ಮಾಡಿ ನೋಡಿ...

ಕೊಡಗಿನಲ್ಲೇ ಕಾಫಿ ಇಲ್ಲ !

ಅಜ್ಜಮಾಡ ರಮೇಶ್ ಕುಟ್ಟಪ್ಪ
ಹವಾಮಾನ ವೈಪರೀತ್ಯದಿಂದ ಬರೀ ಮಳೆ ಸುರಿದಿಲ್ಲ, ಕಾಫಿ ಇಳುವರಿ ಕುಸಿದಿದೆ. ಕೊಡಗಿನ ವಾಣಿಜ್ಯ ಬೆಳೆ ಕಾಫಿ. ಅದಕ್ಕೀಗ ಉತ್ತಮ ಧಾರಣೆಯಿದೆ, ವಿಚಿತ್ರವೆಂದರೆ ತೋಟದಲ್ಲಿ ಕಾಫಿ ಬೆಳೆ ಇಲ್ಲ !
ಮಳೆ ಏರುಪೇರಿನಿಂದ ತೋಟದಲ್ಲಿ ಬೆಳೆದ ಫಸಲು ಕೈಸೇರಲಿಲ್ಲ, ನೆಲ ಸೇರಿತು. ಅರೇಬಿಕಾ ಕಾಫಿ ಕೊಯ್ಲು ವೇಳೆಯಲ್ಲೇ ಮಳೆ ಸುರಿದದ್ದಕ್ಕೆ ಶೀತವಾಗಲಿಲ್ಲ, ನಷ್ಟದಿಂದ ಕೈ ಸುಟ್ಟು ಹೋಯಿತು. ಹೆಚ್ಚು  ಕಾಫಿ ಬೆಳೆಯುವ ಸೋಮವಾರಪೇಟೆಯಲ್ಲಿ ಈಗ ಕಳೆಯೇ ಇಲ್ಲ.
ಕಳೆದ ವರ್ಷಕ್ಕಿಂತ ೭ ಸಾವಿರ ಮೆಟ್ರಿಕ್ ಟನ್‌ಗಳಷ್ಟು ಕಡಿಮೆ ಕಾಫಿ ಉತ್ಪಾದನೆ ಆಗಲಿದೆ ಎಂಬುದು ಭಾರತೀಯ ಕಾಫಿ ಮಂಡಳಿ ಅಂದಾಜು, ಬೆಳೆಗಾರರಿಗೆ ಮಾರಕವಾಗುವಂಥ ಹವಾಮಾನ ವೈಪರೀತ್ಯ ಮುಂದುವರಿದದ್ದಕ್ಕೆ ಇನ್ನಷ್ಟು ಇಳುವರಿ ಕಡಿಮೆಯಾಗುವ ಸಂಭವವೂ ಇದೆ.
ರೋಬಸ್ಟಾ ಇಳುವರಿ ಮೇಲೆ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಿಲ್ಲ ಎಂಬುದೇ ಸಮಾಧಾನ. ಆದರೆ ಭವಿಷ್ಯದ ಇಳುವರಿ ಮೇಲೆ ಈ ವರ್ಷದ ಹವಾಮಾನ ಹೊಡೆತ ನೀಡುವುದು ಖಚಿತ. ವರ್ಷಪೂರ್ತಿ ಮೋಡ ಮುಸುಕಿದ ವಾತಾವರಣ ಮತ್ತು ಆಗಾಗ ಮಳೆ ಸುರಿಯುವುದರಿಂದ ತೋಟ ಒಣಗದು. ಇದರಿಂದ ಮೊಗ್ಗು ಬಿಡುವಲ್ಲಿ ಚಿಗುರು ಮೂಡುತ್ತದೆ. ಇದು ಮುಂದಿನ ವರ್ಷದ ಇಳುವರಿ ಕುಸಿತಕ್ಕೆ ಕಾರಣವಾಗಲಿದೆ.
ಅಷ್ಟಕ್ಕೇ ಮುಗಿಯಲಿಲ್ಲ. ಈ ವಾತಾವರಣ ಗುಣಮಟ್ಟದ ಕಾಫಿ ಉತ್ಪಾದನೆ ಮೇಲೂ ಪರಿಣಾಮ ಬೀರಲಿದೆ. ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಸಾಧ್ಯವಾಗದು. ಇದರಿಂದ ಗುಣಮಟ್ಟ ಕೇಳುವಂತಿಲ್ಲ. ಹಾಗಾಗಿ ವ್ಯಾಪಾರಿ ಗಳು ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದರೂ ಬೆಳಗಾರರ ಬೆಳೆಗೆ ಏನಾದರೂ ಕೊಂಕು ಹೇಳಿ ಕೈ ಕೊಡುತ್ತಾರೆ.
ಅರೇಬಿಕಾ ಮತ್ತು ರೋಬಸ್ಟಾ ಎರಡು ಕಾಫಿಗಳಿಗೂ ಕಳೆದ ಹಲವು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ದರ. ೫೦ ಕೆ.ಜಿ. ಚೀಲ (ಚೆರಿ) ಕ್ಕೆ ಪ್ರಸ್ತುತ ಅರೇಬಿಕಾ- ೪,೨೦೦ ರೂ. ಹಾಗೂ ರೋಬಸ್ಟಾ- ೨,೩೫೦ ರೂ. ಸಿಗುತ್ತದೆ. ಇದು ಒಳ್ಳೆಯ ಧಾರಣೆ.

ಬೆಲ್ಲ ಈ ಬಾರಿ ಕಹಿಯಲ್ಲ !

ಮತ್ತೀಕೆರೆ ಜಯರಾಮ್
ಕಬ್ಬು ಬೆಳೆಯುವ ರೈತನ ಬದುಕಿನಲ್ಲಿ ಇದೀಗ ಮತ್ತೆ ಭರವಸೆ. ಸಕ್ಕರೆ ಜತೆಗೆ ಬೆಲ್ಲಕ್ಕೂ ಬಂಪರ್ ಬೆಲೆ. ಪರಿಣಾಮ ಆಲೆಮನೆಗಳಲ್ಲಿ ಗಾಣಗಳ ಸದ್ದು.
ಐದು ವರ್ಷದ ಹಿಂದೆ ಕಬ್ಬು ಬೆಳೆ ಎಂದರೆ ರೈತರು ಮೂಗು ಮುರಿಯುತ್ತಿದ್ದರು. ವರ್ಷ ಉರುಳಿದಂತೆ ಸಕ್ಕರೆ ಮತ್ತು ಬೆಲ್ಲದ ಉದ್ಯಮ ಚೇತರಿಸಿಕೊಂಡಿದೆ. ಸ್ಥಗಿತಗೊಂಡು, ತುಕ್ಕು ಹಿಡಿಯುತ್ತಿದ್ದ ಆಲೆಮನೆ ಗಾಣಗಳು ಪುನರಾರಂಭ ಗೊಂಡಿವೆ.
ಮಂಡ್ಯ ಜಿಲ್ಲೆಯು ಬೆಲ್ಲ ಉತ್ಪಾದನೆಗೆ ಪ್ರಸಿದ್ಧಿ. ಮಂಡ್ಯದ ಬೆಲ್ಲಕ್ಕೆ ದಕ್ಷಿಣ ಭಾರತದಲ್ಲಷ್ಟೇ ಅಲ್ಲದೇ ಉತ್ತರ ಭಾರತದ ದಿಲ್ಲಿ, ಕೋಲ್ಕೊತಾ, ಲಕ್ನೋ, ಗುಜರಾತ್ ಸೇರಿದಂತೆ ನಾನಾ ಕಡೆ ಬೇಡಿಕೆ ಇದೆ. ಹಾಗಾಗಿ ರೈತರು ಮತ್ತೆ ಬೆಲ್ಲ ಉತ್ಪಾದನೆಯತ್ತ ಮುಖ ಮಾಡಿದ್ದಾರೆ. ಮಂಡ್ಯದ ಎಪಿಎಂಸಿ ಬೆಲ್ಲದ ಮಾರುಕಟ್ಟೆಯೆಂದೇ ಪ್ರಖ್ಯಾತಿ. ಇಲ್ಲಿ ಬೆಲ್ಲವಲ್ಲದೆ ಬೇರೆ ವಹಿವಾಟು ನಡೆಯೋದಿಲ್ಲ. ನಿತ್ಯವೂ ಸರಾಸರಿ ೧೨೦೦-೧೫೦೦ ಕ್ವಿಂಟಾಲ್ ವಹಿವಾಟು ನಡೆಯುತ್ತಿದೆ.  ಸಕ್ಕರೆ ಕಾರ್ಖಾನೆಗಳ ನಿರ್ಲಕ್ಷ್ಯ ಮತ್ತು ಅಸಡ್ಡೆಯಿಂದ ಬೇಸತ್ತ ರೈತರ ಪಾಲಿಗೆ ಈ ಬೆಳವಣಿಗೆ ಖುಷಿ ತಂದಿದೆ. ಸಕ್ಕರೆ ಕಾರ್ಖಾನೆಗಳಷ್ಟೇ ಧಾರಣೆ ನೀಡಿ ಆಲೆಮನೆಗಳವರು ಕಬ್ಬು ಖರೀದಿಸುತ್ತಿದ್ದಾರೆ. ಬಕೆಟ್, ಅಚ್ಚು, ಬಾಕ್ಸ್ ಬೆಲ್ಲ ತಯಾರಿಕೆ ಹೇರಳ. ಸ್ಥಳೀಯವಾಗಿ ಕುರಿಕಾಲು ಅಚ್ಚು ಬೆಲ್ಲಕ್ಕೆ ಬೇಡಿಕೆ. ಜಿಲ್ಲೆ ಮತ್ತು ರಾಜ್ಯದ ಹೊರಗೆ ಬಾಕ್ ಹಾಗೂ ಬಕೆಟ್ ಬೆಲ್ಲಕ್ಕೆ ಸಾಕಷ್ಟು ಬೇಡಿಕೆ ಇದೆ.
೧೫ ಸಾವಿರ ಗಾಣಗಳು: ಜಿಲ್ಲೆಯಲ್ಲಿ ಬೆಲ್ಲ ಉತ್ಪಾದನೆ ಏಳೂವರೆ ದಶಕದಿಂದಲೂ ನಡೆಯುತ್ತಿದೆ. ೧೦ ವರ್ಷದ ಹಿಂದಿನ ಮಾಹಿತಿ ಗಮನಿಸಿದರೆ, ೧ ಲಕ್ಷ ಗಾಣಗಳಿದ್ದವು. ಬೆಲ್ಲದ ವ್ಯಾಪಾರ ಮತ್ತು ವಹಿವಾಟು ಕುಸಿದಿದ್ದರಿಂದ ಸಾವಿರಾರು ಆಲೆಮನೆಗಳು ಸ್ಥಗಿತಗೊಂಡವು. ಧಾರಣೆ ಏರಿರುವ ಹಿನ್ನೆಲೆಯಲ್ಲಿ ೧೫ ಸಾವಿರಕ್ಕೂ ಹೆಚ್ಚು ಆಲೆಮನೆಗಳಲ್ಲಿ ಗಾಣಗಳು ಪುನರಾರಂಭಗೊಂಡಿವೆ. ಸುಮಾರು ೩೫ ಆಲೆಮನೆಗಳಲ್ಲಿ ಕೆಲವರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು, ದೊಡ್ಡ ಪ್ರಮಾಣದಲ್ಲಿ ಬೆಲ್ಲ ಉತ್ಪಾದಿಸುತ್ತಿದ್ದಾರೆ. ಸಾಧಾರಣ ಆಲೆಮನೆಗಳಿಗಿಂತ ಹತ್ತು ಪಟ್ಟು ಅಧಿಕ ಬೆಲ್ಲ ಅಲ್ಲಿ ಉತ್ಪಾದನೆ ಸಾಧ್ಯ.

ಅವರೆಕಾಯಿ ಬಂದಿದೆ !

ಎಸ್.ಕೆ.ಚಂದ್ರಶೇಖರ್
ತಾಜಾ ತಾಜಾ ಕಳ್ಳೇಕಾಯ್, ಗರಂ ಗರಂ ಕಳ್ಳೇಕಾಯ್ ಎಂದು ಹಾಡಿದ್ದು ಕಲ್ಪನಾ. ಈಗ ಅವರಿದ್ದಿದ್ದರೆ ತಾಜಾ ತಾಜಾ ಅವರೆಕಾಯ್,  ಚಳಿ ಬಿಡಿಸುವ ಅವರೇಕಾಯ್ ಎಂದು ಕೂಗುತ್ತಿದ್ದರೇನೋ ?
ಮಾಗಿಯ ಚಳಿ ಬಂದಿದೆ. ದಿನೇ ದಿನೆ ಚಳಿ ಹೆಚ್ಚುತ್ತಿದೆ. ಮೈಯೊಳಗೆ ಚಳಿ ಓಡಿಸಲು ಎದುರಾಗಿರುವುದೇ ಅವರೇಕಾಯಿ. ಮಾಗಿಯ ಅತಿಥಿ ಬಂದಿದ್ದಾನೆ ನಮ್ಮ ಮನೆ ಬಾಗಿಲಿಗೆ. ಕೈ ಮುಗಿದು ಒಳಗೆ ಕರೆದುಕೊಳ್ಳಬೇಕಷ್ಟೇ. ಎಲ್ಲೆಲ್ಲೂ ಅವನದ್ದೇ ಘಮಲು. ಬನ್ನಿ ಹೀಗೇ ಒಂದು ಸುತ್ತು ಹಾಕೋಣ.
ದೇವರಾಜ ಮಾರುಕಟ್ಟೆಯಲ್ಲಿ ಈ ಹಿಂದೆ ಮಾರಾಟವಾಗುತ್ತಿದ್ದ ರಾಶಿ ರಾಶಿ ಅವರೆ ಈಗಿಲ್ಲ. ಹಾಗೆಂದು ಅವರೆ ಸಿಗೋದಿಲ್ಲವೆಂದಲ್ಲ. ಸದ್ಯಕ್ಕೆ ಕೆ.ಜಿ.ಗೆ ೨೦-೨೫ ರೂ. ಬೆಳೆ ಕಡಿಮೆಯಾಗಿದ್ದರಿಂದ ಈ ಬೆಲೆ. ಕಳೆದ ವರ್ಷ ೧೦-೧೫ ರೂ. ಗೆ ನಿಮ್ಮ ಚೀಲದಲ್ಲಿ ಅವರೆ ಇರುತ್ತಿತ್ತು. ಅಕಾಲಿಕ ಮಳೆ ಮತ್ತಿತರ ಕಾರಣದಿಂದ ಸ್ವಲ್ಪ ದುಬಾರಿಯಂತೆ. ಸಿಪ್ಪೆಯಿಂದ ಕಾಳುಗಳನ್ನು ಬೇರ್ಪಡಿಸುವ ಗೋಜಿಗೆ ಹೋಗಬಾರದೆಂದರೆ ಬಿಡಿಸಿದ ಕಾಳುಗಳೂ ಲಭ್ಯ. ೧ ಲೀಟರ್‌ಗೆ  ೮೦ರೂ., ಚಿತ್‌ಕವರೆ ಇದಕ್ಕಿಂತ ತುಸು ಹೆಚ್ಚು.

ಬೆಲ್ಲವೇ ಇಲ್ಲ !

ಫಾಲಲೋಚನ ಆರಾಧ್ಯ
ಹತ್ತು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕಬ್ಬು ಬೆಳೆಯುವವರ ಸಂಖ್ಯೆ ಕುಸಿದಿದೆ. ಆಲೆಮನೆಗಳೂ ಕಡಿಮೆ. ಆದರೆ ಬೆಲ್ಲಕ್ಕೆ ಉತ್ತಮ ಬೆಲೆ.
ಆಲೆಮನೆಗಳಿಗೆ ಕಾರ್ಮಿಕರ ಕೊರತೆ, ಬೆಲ್ಲ ಉತ್ಪಾದನೆಗೆ ತಗುಲುತ್ತಿರುವ ವೆಚ್ಚ ಹಾಗೂ ಬೆಲ್ಲದ ಧಾರಣೆಯಲ್ಲಿ ಸ್ಥಿರತೆ ಇಲ್ಲದಿರುವುದು ಕಬ್ಬಿನ ಉತ್ಪತ್ತಿ ಕಡಿಮೆಗೆ ಕಾರಣ. ಬೆಲ್ಲದ ಹರಾಜಿಗೆ ಚಾ.ನಗರದ ಎಪಿಎಂಸಿ ಕೂಡ ಹೆಸರುವಾಸಿ. ದಶಕಗಳ ಹಿಂದೆ ೧೦ ರಿಂದ ೧೫ ಲಕ್ಷ ಬೆಲ್ಲ ಬರುತ್ತಿದ್ದರೆ, ಈಗ ಕೇವಲ ೪ ಲಕ್ಷ.
ಸುಮಾರು ೧೦ ರಿಂದ ೧೨ ಸಾವಿರ ಹೆಕ್ಟೇರ್ ಪ್ರದೇಶದಿಂದ ೭ ಸಾವಿರಕ್ಕೆ ಬೆಳೆಯುವ ಪ್ರದೇಶವೂ ಕುಸಿದಿದೆ.
ಜಿಲ್ಲೆಯ ಏಕೈಕ ಮಹಾದೇಶ್ವರ ಸಕ್ಕರೆ ಕಾರ್ಖಾನೆಯೂ ಮುಚ್ಚಿದೆ. ಅದೇ ಕಾರ್ಖಾನೆ ಮಾಲೀಕರ ನಂಜನಗೂಡಿನ ಅಳಗಂಚಿಯ ಬಣ್ಣಾರಿ ಕಾರ್ಖಾನೆಗೇ ಕಬ್ಬು ಪೂರೈಸಬೇಕು. ೬.೫೦ ಲಕ್ಷ ಟನ್ ಕಬ್ಬಿನಲ್ಲಿ ಅರ್ಧ ಭಾಗ ಸಕ್ಕರೆ ಕಾರ್ಖಾನೆಗೆ, ಉಳೀದದ್ದು ಆಲೆಮನೆಗೆ.

‘ವಿಜಯ ಕರ್ನಾಟಕ ಓದಿ ಬಹುಮಾನ ಗೆಲ್ಲಿ’ ಮುಕ್ತಾಯ...

ಇದು ನಿತ್ಯ ಹೊಸತನವನ್ನು ಬಯಸುವ ಪತ್ರಿಕೆಯ ಮತ್ತೊಂದು ಪ್ರಯತ್ನವಾಗಿತ್ತು. ಎರಡು ವಾರಗಳ ಕಾಲ ‘ವಿಜಯ ಕರ್ನಾಟಕ ಓದಿ ವಿಜೇತರಾಗಿ’ ಸ್ಪರ್ಧೆಗೆ ಓದುಗರ ಬೆಂಬಲ ಅಭೂತಪೂರ್ವವಾಗಿ ವ್ಯಕ್ತವಾಯಿತು. ನಿತ್ಯವು ಸಾವಿರಾರು ಎಸ್‌ಎಂಎಸ್‌ಗಳು ಸೀಮಿತ ಅವಧಿಯಲ್ಲೇ ನಮ್ಮನ್ನು ಮುಟ್ಟಿದವು.
ಯಾವುದೇ ಹೊಸ ಪ್ರಯತ್ನಕ್ಕೆ ಓದುಗರು ಪ್ರತಿ ಕ್ರಿಯಿಸುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ ಎನ್ನುವು ದಕ್ಕೆ ನಮ್ಮ ಈ ಸ್ಪರ್ಧೆಗೆ ವ್ಯಕ್ತವಾದ ಪ್ರತಿಕ್ರಿಯೆಯೇ ಸಾಕ್ಷಿ. ಪತ್ರಿಕೆಯ ಯಾವುದೋ ಒಂದು ಪ್ರಶ್ನೆಗೆ ಉತ್ತರಿಸುವ ಸ್ಪರ್ಧೆ ಇತ್ತಾದರೂ ಅದರ ಮೌಲ್ಯವರ್ಧನೆ ಗೋಸ್ಕರ ನಾವು ನೆನಪಿಸಿಕೊಂಡದ್ದು ನಮ್ಮ ಭವ್ಯ ಪರಂಪರೆಯನ್ನು. ಪಾರಂಪರಿಕ ನಗರವಾದ ಮೈಸೂರಿಗೆ ಪರಂಪರೆಯ ಕಳಶ ಸಂಭ್ರಮವನ್ನು ಹಾಗೂ ಪ್ರತಿಷ್ಠೆಯನ್ನು ತಂದುಕೊಟ್ಟಿದೆ.

ಇಲ್ಲುಂಟು ಹಿರಿಯ ಠಾಣೆ ರಾಜರ ಕಾಲದಲ್ಲೇ ಮನ್ನಣೆ

ಇಲ್ಲುಂಟು ಹಿರಿಯ ಠಾಣೆ ರಾಜರ ಕಾಲದಲ್ಲೇ ಮನ್ನಣೆ
* ಆರ್.ಕೃಷ್ಣ ಮೈಸೂರು
ಆಳರಸರ ರಾಜಧಾನಿಯಾಗಿದ್ದ ಮೈಸೂರಿನ ಪೊಲೀಸ್ ವ್ಯವಸ್ಥೆ, ಕರ್ನಾಟಕದ ಪೊಲೀಸ್ ಇತಿಹಾಸದಲ್ಲಿಯೇ ವಿಶಿಷ್ಟ ಹಾಗೂ ಅಗ್ರಗಣ್ಯ. ಬ್ರಿಟಿಷರ ಆಗಮನಕ್ಕೂ ಮುನ್ನವೇ ವ್ಯವಸ್ಥೆ ಜಾರಿಯಲ್ಲಿತ್ತು. ಇಂದಿನ ಪೊಲೀಸರು ಮಾಡುತ್ತಿದ್ದ ಕೆಲಸ ವನ್ನು ಆ ಕಾಲಕ್ಕೆ ಗ್ರಾಮಣಿ, ಕಂದಾಚಾರಿ, ಕ್ಷೇಮಪಾಲ ಇನ್ನಿತರ ಹೆಸರಿನಲ್ಲಿ ಕರೆಸಿಕೊಳ್ಳುತ್ತಿದ್ದವರು ನಿರ್ವಹಿಸುತ್ತಿದ್ದರು.
ರಾಜರ ಅಸ್ಥಾನದಲ್ಲಿದ್ದ ಕೊತ್ವಾಲ, ಕರ್ಮಚಾರಿ ಸೈನಿಕ ದಳ ರಾಜರ ಪ್ರತಿಸ್ಪರ್ಧಿಗಳನ್ನು ನಾಶ ಮಾಡಲು ಮಾತ್ರ ಬಳಕೆಯಾಗುತ್ತಿತ್ತು. ಇದು ಕೆಲವೊಮ್ಮೆ  ಪ್ರಜೆಗಳ ಆಕ್ರೋಶಕ್ಕೂ ತುತ್ತಾಗುತ್ತಿತ್ತು. ಬದಲಾದಂತೆ ಈ ಪಡೆಗೆ ಕಳ್ಳತನ-ಕೊಲೆ ಮುಂತಾದ ಅಪರಾಧ ತಡೆಗಟ್ಟಿ ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ನೀಡಲಾಯಿತು. ನಂತರ ಆಶ್ವದಳ, ಕರ್ನಾಟಕ ಮತ್ತು ಪಾಶ್ಚಾತ್ಯ ವಾದ್ಯ ಸಂಗೀತ ದಳ, ಅಂಗರಕ್ಷಕ ಪಡೆ, ಫಿರಂಗಿದಳವಾಗಿ ರೂಪುಗೊಂಡಿತು. ಈ ಪಡೆಯ ಸ್ವರೂಪ ರಾಜ್ಯದ ಇತರೆ ಭಾಗಕ್ಕೂ ಮಾದರಿಯಾಯಿತು.

ಶತಮಾನ ದಾಟಿದೆ ವಿದ್ಯಾರ್ಥಿನಿಲಯ ಸೇವೆ

ಶತಮಾನ ದಾಟಿದೆ ವಿದ್ಯಾರ್ಥಿನಿಲಯ ಸೇವೆ
* ಶ್ರೀನಿವಾಸ್ ಸೌತನಹಳ್ಳಿ
ಅರಮನಗಳ ನಗರಿ ಮೈಸೂರಿನಲ್ಲಿ ಮಾತ್ರ ಆಗ ಹೆಚ್ಚಿನ ವಿದ್ಯಾಭ್ಯಾಸಕ್ಕೆ  ಅವಕಾಶವಿದ್ದ  ಕಾಲ. ಅನೇಕ  ಕಡೆಗಳಿಂದ  ಸರಸ್ವತಿಯನ್ನರಸಿ ವಿದ್ಯಾರ್ಥಿ ಗಳ ಸಮೂಹ ?ರುತ್ತಿದ್ದ ಕಾಲ. ಅವರಲ್ಲಿ  ಹೆಚ್ಚಿನವರು ಬಡವರು. ಊಟ ವಸತಿಗೆ ಅನುಕೂಲವಿಲ್ಲದವರು. ಆದರೂ ವಿದ್ಯಾಕಾಂಕ್ಷಿಗಳು. ಅನೇಕರ ಮನೆಗಳಲ್ಲಿ ವಾರಾನ್ನದ  ಸೌಕರ್ಯವಿತ್ತು. ಆದರೆ ವಸತಿ ಸೌಕರ್ಯ ವಿರಲಿಲ್ಲ. ಈ ಸನ್ನಿವೇಶದಲ್ಲಿ  ಸೇವೆಯೇ ಪರಮ ಗುರಿ ಎಂದು ನಂಬಿದ್ದವರು ಶತಮಾನದ ಹಿಂದೆಯೇ ವಿದ್ಯಾರ್ಥಿನಿಲಯಗಳನ್ನು ತೆರೆದರು.

ಕೆರೆ ದಡದಲ್ಲಿ ಜೀವ ಭಯ

ಕೆರೆ ದಡದಲ್ಲಿ ಜೀವ ಭಯ
ಮಂಗಳವಾರದ ಕೆರೆ ದುರಂತದ ಭೀಕರತೆ ಹೇಳತೀರದು. ಇಂಥದೇ ದುರಂತ ಆಹ್ವಾನಿಸುವ ನೂರಾರು ಕೆರೆ ಏರಿಗಳು ನಮ್ಮಲ್ಲಿವೆ. ಅಲ್ಲಿ ಯಾವ ತಡೆಗೋಡೆಗಳೂ ಇಲ್ಲ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡೀತೇ?

ಸಾವು ಬಂದು ಕುಂತೈತಲ್ಲೋ...

ತಿ.ನರಸೀಪುರ
ಬೃಹತ್ ವರುಣಾ ಕೆರೆಯ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ೨೧೨ ಹಾದು ಹೋಗಿದೆ. ಆದರೆ ಈ ಕೆರೆಗೂ ತಡೆಗೋಡೆಗಳೂ ಇಲ್ಲ, ಅಪಾಯವನ್ನು ಎಚ್ಚರಿಸುವ ಫಲಕಗಳೂ ಇಲ್ಲ. ಸದಾ ನೀರಿರುವ ಈ ಕೆರೆಯ ಮತ್ತೊಂದು ಬದಿಯಲ್ಲಿ ೧೫ ರಿಂದ ೨೦ ಅಡಿ ಆಳ ಹೊಂದಿದ ಅಚ್ಚುಕಟ್ಟು ಪ್ರದೇಶವಿದೆ.
ನಿತ್ಯವೂ ಬಸ್ ಸೇರಿದಂತೆ ನೂರಾರು ವಾಹನಗಳು ಸಾಗುತ್ತವೆ. ಓವರ್‌ಲೋಡ್ ಮರಳು ಲಾರಿಗಳಿಗೂ ಕಡಿಮೆ ಇಲ್ಲ. ಸುಮಾರು ೫೦೦-೬೦೦ ಮೀಟರ್ ಉದ್ದದ ಕೆರೆ ಏರಿ ಮೇಲಿನ ಮೈಸೂರು- ತಿ.ನರಸೀಪುರ ಮುಖ್ಯರಸ್ತೆಯಲ್ಲಿ ಸಾಗುವ ವಾಹನಗಳಿಗೆ ವೇಗ ಮಿತಿಯೇ ಇಲ್ಲ. ಖಾಸಗಿ ಬಸ್‌ಗಳಲ್ಲಂತೂ ಪೈಪೋಟಿ.
ಹೀಗಿದ್ದರೂ ಸುರಕ್ಷಿತ ದೃಷ್ಟಿಯಿಂದ ಎರಡೂ ಬದಿಯಲ್ಲೂ ಕಬ್ಬಿಣದ ಕಂಬಗಳನ್ನು ಅಳವಡಿಸಿಲ್ಲ. ಕೆಲ ತಿಂಗಳ ಹಿಂದೆ ಖಾಸಗಿ ಬಸ್ ಅಚ್ಚುಕಟ್ಟು ಪ್ರದೇಶಕ್ಕೆ ಉರುಳಿತ್ತಾದರೂ ಪ್ರಾಣಾಪಾಯ ಸಂಭವಿಸಿರ ಲಿಲ್ಲ. ಒಂದುವೇಳೆ ಕೆರೆಗೆ ಬಿದ್ದಿದ್ದರೆ ಹೇಳುವಂತಿರಲಿಲ್ಲ.

ಈ ಬಡಾವಣೆಗಳೂ ಶತಾಯುಷಿ

ಚೀ. ಜ. ರಾಜೀವ  ಮೈಸೂರು
ಭಾರತೀಯ ಆಧುನಿಕ ಇತಿಹಾಸದಲ್ಲಿ ಸಾಮ್ರಾಜ್ಯಗಳನ್ನು  ನಿರ್ಮಿಸಿದ ಇಲ್ಲವೇ  ನಾಡು ಕಟ್ಟಿದ ಅಧ್ಯಾಯಗಳು ಹೇರಳವಾಗಿವೆ. ಆದರೆ, ನಗರವೊಂದನ್ನು ವ್ಯವಸ್ಥಿತವಾಗಿ ಕಟ್ಟಿ ಬೆಳಸಿದ ಕತೆಗಳು ವಿರಳಾತಿ ವಿರಳ.  ಮೈಸೂರು ನಗರ ನಿರ್ಮಾಣ ಅಂಥದ್ದೊಂದು ಅಪರೂಪದ  ಇತಿಹಾಸವನ್ನು ಹೊಂದಿದೆ ಮಾತ್ರವಲ್ಲ, ೧೯ನೇ ಶತಮಾನದಲ್ಲಿ ವ್ಯವಸ್ಥಿತ  ನಗರ ನಿರ್ಮಾಣಕ್ಕಾಗಿಯೇ  ಪ್ರತ್ಯೇಕ  ಮಂಡಳಿಯನ್ನು ಹೊಂದಿದ್ದ  ದೇಶದ ಪ್ರಥಮ ನಗರ ಎಂಬ ಅಗ್ಗಳಿಕೆಗೂ ಪಾತ್ರವಾಗಿದೆ. ಹಾಗಾಗಿಯೇ ಇಲ್ಲಿನ ಬಡಾವಣೆಗಳಿಗೂ ಪಾರಂಪರಿಕ ಸೊಬಗಿದೆ, ಶತಮಾನದ ಇತಿಹಾಸವಿದೆ.
ಬ್ರಾಹ್ಮಣರೇ ಹೆಚ್ಚು ವಾಸಿಸುವ ಅಗ್ರಹಾರಗಳು, ವೈವಿಧ್ಯಮಯ ವೃತ್ತಿ-ಕಸುಬಿನವರು ಬದುಕು ಕಟ್ಟಿಕೊಂಡಿದ್ದ  ಮೊಹಲ್ಲಾಗಳು, ರೈತಾಪಿ ಕೃಷಿಕರೇ ಹೆಚ್ಚಿದ್ದ  ಕೊಪ್ಪಲುಗಳು ಮೈಸೂರಿನ ವೈಶಿಷ್ಟ್ಯ.  ಒಡೆಯರ್ ಸಂಸ್ಥಾನದಲ್ಲಿ ದಿವಾನ್‌ರಾಗಿದ್ದ  ನೆರೆಯ ತಮಿಳುನಾಡಿನ ಆಡಳಿತಗಾರರ ದೆಸೆಯಿಂದಾಗಿ ತಮ್ಮ ಎಲ್ಲ ಹೆಸರಿನ ಹಿಂದೆ  `ಪುರಂ' ಎಂಬ ಉಪಸರ್ಗಗಳನ್ನು ಹೊಂದಿರುವ ಚಾಮರಾಜಪುರಂ, ಕೃಷ್ಣಮೂರ್ತಿಪುರಂನಂಥ ಬಡಾವಣೆಗಳು ಕೂಡ  ಈ ಪುರಾತನ ನಗರದ  ಅವಿಭಾಜ್ಯಗಳು.ಮಹಾತ್ಮಾ  ಗಾಂಧೀಜಿ ಭೇಟಿ ನೀಡಿದ್ದ  ಅಶೋಕಪುರಂ, ಜನಪದೀಯ ಹಾಗೂ ಸಾಂಸ್ಕೃತಿಕ ಸಿರಿತನದ ಕುಕ್ಕನಹಳ್ಳಿ, ಪಡುವಾರಹಳ್ಳಿಯಂಥ  ಹಳ್ಳಿ-ಬಡಾವಣೆಗಳು ಈ ಊರನ್ನು ರೂಪಿಸಿವೆ, ಇದರ  ಖ್ಯಾತಿಗೆ  ಕಾಣಿಕೆ ನೀಡಿವೆ.

ಟೆಂಪೊ ಕೆರೆಪಾಲು: ೨೭ ಮಂದಿ ಬಲಿ

ವಿಕ ಸುದ್ದಿಲೋಕ ಮೈಸೂರು
ಮಹಿಳೆಯರು, ಮಕ್ಕಳಿದ್ದ ಟೆಂಪೋ ಕೆರೆಗೆ ಉರುಳಿ ೨೭ ಮಂದಿ ಮೃತಪಟ್ಟ ದಾರುಣ ಘಟನೆ ಮೈಸೂರು-ನಂಜನಗೂಡು ರಸ್ತೆಯ ಮರಸೆ ಬಳಿ ಮಂಗಳವಾರ ಸಂಜೆ ನಡೆದಿದೆ.
ನಂಜನಗೂಡಿನಲ್ಲಿ ಬೀಗರ ಔತಣ ಮುಗಿಸಿ ೩೩ ಜನರನ್ನು ಹೊತ್ತು ತರುತ್ತಿದ್ದ  ೪೦೭ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಮಂಡಕಳ್ಳಿ ವಿಮಾನ ನಿಲ್ದಾಣ ಸಮೀಪದ ಉಂಡಬತ್ತಿನ ಕೆರೆಗೆ ಬಿದ್ದಿತು. ಮಕ್ಕಳು ಸೇರಿ ೨೭ ಮಂದಿ ನೀರಿನಲ್ಲೇ ಕೊನೆ ಉಸಿರೆಳೆದರೆ,ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರಲ್ಲಿ ಬಹುತೇಕರು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆಯವರು. ಬಳ್ಳೆಕೆರೆ,ಹಿರೇಮರಳಿ, ಎಲೆಕೆರೆ, ಕಟ್ಟೇರಿಯ ತಲಾ ಒಬ್ಬರು ಕೊನೆ ಉಸಿರೆಳೆದರು. ಚಾಲಕ, ಕ್ಲೀನರ್ ತಲೆ ತಪ್ಪಿಸಿಕೊಂಡಿದ್ದಾರೆ. ರಾತ್ರಿ ೮ರ ಸುಮಾರಿಗೆ ಎಲ್ಲಾ ಶವ ಮತ್ತು ಟೆಂಪೋವನ್ನು ನೀರಿನಿಂದ ಮೇಲೆತ್ತಲಾಯಿತು. ಘಟನಾ ಸ್ಥಳ ಮತ್ತು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಮೃತರ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.ಆಕ್ರೋಶ ತಪ್ತ ಜನ ತೀವ್ರ ಪ್ರತಿಭಟನೆಯನ್ನೂ ನಡೆಸಿದರು.

ನಮ್ಮನೆ ಹೆಣ್ ಸಂತಾನವೇ ಹೋಯ್ತಲ್ಲ...ದೇವ್ರೇ !

ವಿಕ ಸುದ್ದಿಲೋಕ ಮೈಸೂರು
ಒಂದೆಡೆ  ನೋವು-ಆಕ್ರಂದನ, ಇನ್ನೊಂದೆಡೆ ಸಿಟ್ಟು, ಆಕ್ರೋಶ- ಪ್ರತಿಭಟನೆ, ಮತ್ತೊಂದೆಡೆ ಕನಿಕರ, ವಿಷಾದ...
ಸೂತಕದ ಮನೆಯಲ್ಲಿ ದುಃಖ ಮಾತ್ರ ಮನೆ  ಮಾಡಿರುತ್ತದೆ. ಆದರೆ, ಸಾಕ್ಷಾತ್ ಜವರಾಯ ಕಣ್ಣೆದುರಿಗೆ  ಜನರನ್ನು ಎಳೆದೊಯ್ದರೆ, ಉಳಿದವರು ಏನು ಮಾಡಬೇಕು ? ಮಹಿಳೆಯರು ಮತ್ತು ಮಕ್ಕಳು ಸೇರಿ ೨೭ ಜನರನ್ನು ಆಪೋಷನ ತೆಗೆದುಕೊಂಡ ಮೈಸೂರು-ನಂಜನಗೂಡು ಹೆದ್ದಾರಿಯ ಉಂಡಬತ್ತಿನ ಕೆರೆಯ ದಂಡೆ ಮಂಗಳವಾರ ಸಂಜೆ ಶೋಕದ ಮಡುವು. ಜನರ ಸಿಟ್ಟು-ಸೆಡವು-ಆಕ್ರೋಶಕ್ಕೆ ಬಲಿಯಾದ ಕೆಲವು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಸ್ವಲ್ಪದರಲ್ಲಿ  ಸಾರ್ವಜನಿಕರ ಧರ್ಮದೇಟಿನಿಂದ ಪಾರಾದರು !

ರಸ್ತೆಗಳಿಗೂ ಉಂಟು ಇತಿಹಾಸದ ನಂಟು

ಕುಂದೂರು ಉಮೇಶಭಟ್ಟ ಮೈಸೂರು
ಮೈಸೂರು ಎಂದರೆ ಮೊಹಲ್ಲಾಗಳು. ಅವುಗಳಿಗೆ ಸಂಪರ್ಕ ಕಲ್ಪಿಸಿದ್ದ ರಸ್ತೆಗಳಿಗೆ ಶತಮಾನ ತುಂಬಿದೆ. ಕೆಲವು ರಸ್ತೆಗಳಿಗಂತೂ ಎರಡು ಶತಮಾನ.
ದೇವರಾಜ, ಚಾಮರಾಜ, ಖಿಲ್ಲೆ, ಕೃಷ್ಣರಾಜ ಮೊಹಲ್ಲಾಗಳು ಮೈಸೂರಿನ ಹೃದಯಭಾಗ. ಮಹಾರಾಜರ ಕಾಲದಲ್ಲೇ ರೂಪು ಗೊಂಡ ಈ ಮೊಹಲ್ಲಾಗಳು ಈಗ ಪಾರಂಪರಿಕ ಭಾಗ. ಇಲ್ಲಿನ ರಸ್ತೆ ಗಳಿಗೂ ಅಷ್ಟೇ ಇತಿಹಾಸ. ಜಂಬೂ ಸವಾರಿ ಸಂಚರಿಸುತ್ತಿದ್ದ ದೊಡ್ಡಪೇಟೆ ರಸ್ತೆ ಈಗಿನ ಅಶೋಕ ರಸ್ತೆ. ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆ, ಬಿಎನ್ ರಸ್ತೆ...ಹೀಗೆ ನೂರು ವರ್ಷ ಕಂಡ ರಸ್ತೆಗಳು ಹಲವು. ಮೈಸೂರು ಮಹಾರಾಜರು, ಟಿಪ್ಪುಸುಲ್ತಾನ್, ವಿವೇಕಾ ನಂದರು, ಡಾ.ಕೆ.ರಾಧಾಕೃಷ್ಣನ್ ಸೇರಿದಂತೆ ನೂರಾರು ಗಣ್ಯರು ಸಂಚರಿಸಿದ ಖುಷಿ ಈ ರಸ್ತೆಗಳದ್ದು.

ಶತಮಾನ ಕಂಡ ಸಂಘ-ಸಂಸ್ಥೆ

ಜೆ.ಶಿವಣ್ಣ, ಮೈಸೂರು
ಚಾರಿತ್ರಿಕ ಹಿನ್ನೆಲೆಯ ಮೈಸೂರಿನ ಪಾರಂಪರಿಕ ಹೆಗ್ಗಳಿಕೆಗೆ ಸಂಘ ಸಂಸ್ಥೆಗಳು, ಸಂಗೀತ ಸಭಾಗಳು, ಧಾರ್ಮಿಕ ಮಂದಿರಗಳು ನೀಡಿದ ಕೊಡುಗೆ ಅನನ್ಯ. ಅರಸೊತ್ತಿಗೆ ಹೊತ್ತಿನಲ್ಲಿ ಅಸ್ತಿತ್ವಕ್ಕೆ ಬಂದ ಹಲವು ಸಂಸ್ಥೆಗಳು ಶತಮಾನ ಕಂಡಿದ್ದರೆ, ಇನ್ನೂ ಹಲವು ಶತಕದ ಸನಿಹಕ್ಕೆ ಬಂದು ಇತಿಹಾಸಕ್ಕೆ ಸಾಕ್ಷಿಯಾಗಿ ಇವತ್ತಿಗೂ ಚಲನಶೀಲವಾಗಿ ಉಳಿದಿವೆಯಲ್ಲದೇ, ಚರಿತ್ರೆಯನ್ನು ಸಾರುತ್ತಿವೆ. ಪುಸ್ತಕ ತಿರುವಿ ನೋಡುವ ಬದಲಿಗೆ ಒಮ್ಮೆ ಇವುಗಳನ್ನು ದರ್ಶಿಸಿದರೆ ಸಾಕು, ಅವುಗಳ ಕಾಣ್ಕೆ, ಇತಿಹಾಸ, ಪರಂಪರೆಯ ಮೌಲ್ಯ ಎಲ್ಲವೂ ಅರಿವಾಗುತ್ತದೆ. ಜನಾರ್ದನನ ಸೇವೆಯೊಂದಿಗೆ ಜನ ಸೇವೆಗೂ ಉದಾರ ಕೊಡುಗೈ ಇವುಗಳದ್ದು,
ಅವುಗಳ ಸಾಲಿಗೆ ನೂರು ವರ್ಷ ಪೂರೈಸಿರುವ ಶ್ರೀರಾಮಪೇಟೆಯಲ್ಲಿರುವ ರಾಮಾಭ್ಯದಯ ಸಭಾ, ಅದೇ ರಸ್ತೆಯಲ್ಲಿರುವ, ಶತಕದ ಸನಿಹದಲ್ಲಿರುವ ಕಾಶಿ ಮಠದ ಶ್ರೀರಾಮ ಮಂದಿರ, ತುಸು ದೂರದಲ್ಲಿ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ  ಬಿಡಾರಂ ಕೃಷ್ಣಪ್ಪನವರ ರಾಮಮಂದಿರ, ನೂರು ವರ್ಷಗಳ ದಾಟಿ ನಡೆದಿರುವ ಮಹಾರಾಜ ಸಂಸ್ಕೃತ ಪಾಠ ಶಾಲೆಯ ಆವರಣದಲ್ಲಿರುವ ಪ್ರದೋಷ ಸಂಘ, ಪುರಭವನದ ಮೇಲಂತಸ್ತಿನಲ್ಲಿರುವ ೧೩೪ ವರ್ಷಗಳಷ್ಟು ಹಳೆಯದಾದ ದಿ ಮೈಸೂರು ಲಿಟರರಿ ಯೂನಿಯನ್... ಪ್ರಮುಖವಾದವು.

`ಬೆಳಕು' ತೋರಿದ ಶಾಲೆಗಳು

ಎಸ್.ಕೆ.ಚಂದ್ರಶೇಖರ್ ಮೈಸೂರು
ಕತ್ತಲಿನಿಂದ ಬೆಳಕಿನೆಡೆಗೆ ದಾರಿ ತೋರುವುದೇ ಶಿಕ್ಷಣ ಎಂಬ ಮಾತಿನಂತೆ ಮೈಸೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳು ಕಾರ್‍ಯ ನಿರ್ವಹಿಸುತ್ತಿವೆ. ಶತಮಾನೋತ್ಸವ ಆಚರಿಸಿ ದ್ವಿಶತಮಾನದತ್ತ ಮುನ್ನುಗ್ಗುತ್ತಿವೆ. ಜತೆಗೆ ಜ್ಞಾನದ ದೀವಿಗೆಯನ್ನು ಎಲ್ಲೆಡೆ ಪಸರಿಸಿ ಈ ಕ್ಷೇತ್ರದಲ್ಲಿ ಕ್ರಾಂತಿ ಯನ್ನೇ ಮಾಡಿವೆ. ರಾಜರ ಕಾಲದಲ್ಲೇ ಪ್ರಾರಂಭಗೊಂಡ ಮಹಾರಾಜ, ಮಹಾರಾಣಿ , ವಿಎಂವಿ ಬಾಲಬೋಧಿನಿ, ಹಾರ್ಡ್ವಿಕ್, ದಳವಾಯಿ, ಮರಿಮಲ್ಲಪ್ಪ , ಸದ್ವಿದ್ಯಾ ಶಾಲೆಗಳು ವಿಶಿಷ್ಟ ಕೊಡುಗೆ ನೀಡಿವೆ, ನೀಡುತ್ತಿವೆ.

ದಳ್ಳಾಳಿ ಹಾವಳಿ, ಭತ್ತದ ಖರೀದಿ ಕೇಂದ್ರಕ್ಕಾಗಿ ಆಗ್ರಹ


 ವಿಕ ಸುದ್ದಿಲೋಕ ಕೃಷ್ಣರಾಜನಗರ
ತಾಲೂಕಿನ ಕಾವೇರಿ  ನದಿಯ ಎರಡೂ ದಂಡೆಗಳ ಮೇಲೆ ರೈತರು ಬೆಳೆದಿದ್ದ ಹಸಿರಿನಿಂದ ಕಂಗೊಳಿಸುತ್ತಿದ್ದ ಭತ್ತದ ಬೆಳೆಯ ಕಟಾವು ಪ್ರಾರಂಭವಾಗಿದೆ. ಭತ್ತದ ಕಣಜದ ರೈತರು ವರ್ಷದ ಕೂಳು ಕೈಗೆ ಸಿಗುವ ಹಂತದಲ್ಲಿ ಇಡೀ ಕುಟುಂಬ ಗದ್ದೆಯ ಬಯಲಿನಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದಾರೆ.
ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆದ ಬೆಳೆ ಕೈಗೆ ಬಂದಿದ್ದು ವರ್ಷದ ಕೂಳು ಮನೆಗೆ ತರುವ ಸಂತಸದಲ್ಲಿ ತಾಲೂಕಿನ ಎಲ್ಲೆಡೆ ರೈತರು ತಮ್ಮ ಜೀವನಾಡಿಗಳೆನಿಸಿದ ಹಸು ಎತ್ತುಗಳೊಂದಿಗೆ ದಿನ ನಿತ್ಯದ ಇತರ ಜಂಜಾಟಗಳನ್ನು ಮರೆತು ಇಡೀ ದಿನವನ್ನು ಭತ್ತದ ಬಯಲಿನಲ್ಲಿ ಕಳೆಯುತ್ತಿದ್ದಾರೆ.

ಸರ್ವಧರ್ಮ ನೆಲೆಯೂರು !

 ಎಂ.ಸುಬ್ರಹ್ಮಣ್ಯ ಮೈಸೂರು

ಮೈಸೂರು ನಗರದ ಪಾರಂಪರಿಕೆ ಹಿನ್ನೆಲೆಗೆ ಇಲ್ಲಿನ ಶತಮಾನಗಳ ಆಯಸ್ಸಿನ ಕೆಲ ದೇವಸ್ಥಾನ, ಚರ್ಚ್, ಮಸೀದಿ, ಜೈನ ಮಂದಿರ ಗಳ ಮೆರುಗೂ ಇದೆ.
ನಾಡಿನ ಅಧಿದೇವತೆ ಚಾಮುಂಡೇಶ್ವರಿ ಹಾಗೂ ಇದಕ್ಕಿಂತ ಹಳೆಯದಾದ ಮಹಾಬಲೇಶ್ವರ ದೇವಸ್ಥಾನ ಮೈಸೂರಿನ ಪರಂಪರೆಯ ಶಿಖರಗಳು.
ನಗರದಲ್ಲಿ ಅಂದಾಜು ೨೦೦ಕ್ಕೂ ಹೆಚ್ಚು ದೇವಾಲಯ, ೧೦ಕ್ಕೂ ಹೆಚ್ಚು ಚರ್ಚ್‌ಗಳು, ೩೦ಕ್ಕೂ ಹೆಚ್ಚು ಮಸೀದಿಗಳು ಹತ್ತಾರು ಜೈನ ಬಸದಿಗಳು, ಮಠಗಳಿವೆ ಎಂದು ಅಂದಾಜಿಸಲಾಗಿದೆ. ಹೊಯ್ಸಳ, ದ್ರಾವಿಡ ಹಾಗೂ ಹಿಂದೂ ಶಿಲ್ಪ ಕಲಾಕೌಶಲ್ಯದಿಂದ ಕೂಡಿದ ಈ ಧಾರ್ಮಿಕ ಆಲಯಗಳಲ್ಲಿ ಕೆಲವು ೧೫ನೇ ಶತಮಾನಕ್ಕೂ ಹಿಂದಿ ನವು. ಸರ್ವಧರ್ಮಗಳ ಸೌಹಾದಕ್ಕೆ ಹೆಸರಾದ ಇಂಥ ಕೆಲ ದೇವ ಸ್ಥಾನ, ಚರ್ಚ್, ಮಸೀದಿ, ಜೈನ ಮಂದಿರಗಳ ಸಂಕ್ಷಿಪ್ತ ಪರಿಚಯವಿದು.

ಪ್ರಗತಿಯ ಪ್ರತೀಕ; ಸೌಂದರ್‍ಯದ ದ್ಯೋತಕ

ಶಾರದಾದತ್ ಮೈಸೂರು
ಮೈಸೂರು ಅರಮನೆಗಳಿಂದಷ್ಟೇ ಗಮನ ಸೆಳೆಯಲ್ಲ. ಉದ್ಯಾನಗಳ ಮೂಲಕವೂ ಆಕರ್ಷಿಸುತ್ತದೆ. ಮೈಸೂರು ಬಯಲು ಪ್ರದೇಶ. ಮೈಸೂರು ಸುತ್ತಮುತ್ತ ನದಿ ಇದೆ, ಗಿರಿ ಬೆಟ್ಟಗುಡ್ಡಗಳಿವೆ. ಇಂಥ ಸ್ವಾಭಾವಿಕ ಸಂಪತ್ತು ನಗರಕ್ಕೆ ಮೆರುಗು ತಂದುಕೊಟ್ಟರೆ , ಇಲ್ಲಿರುವ ಮಾನವ ನಿರ್ಮಿತ ಉದ್ಯಾನಗಳು  ಸೌಂದರ್ಯವನ್ನು ಇಮ್ಮಡಿಗೊಳಿಸಿವ.
ಹಾಗಾಗಿ ಮೈಸೂರು ಅರಮನೆ ನಗರಿಯಷ್ಟೇ ಅಲ್ಲ. ಉದ್ಯಾನಗಳ ನಗರಿಯೂ ಹೌದು. ಇಲ್ಲಿರುವ ಉದ್ಯಾನಗಳಿಗೆ ನೂರಾರು ವರ್ಷಗಳ ಇತಿಹಾಸ ಇದೆ. ಇವು ನಮ್ಮನಾಳಿದ ಅರಸರ, ಆಡಳಿತಗಾರರ ಸೌಂದರ್ಯ ಪ್ರeಯ ಸಂಕೇತವಾಗಲಿ ಅಥವಾ ಜನತೆ ಮನರಂಜನೆ ತಾಣವಾಗಿಲ್ಲ. ನಗರದ ಆರ್ಥಿಕ, ಸಾಮಾಜಿ, ಶೈಕ್ಷಣಿಕ ಪ್ರಗತಿಗೆ ಸಾಕ್ಷಿಯಾಗಿವೆ.
ನಗರದಲ್ಲಿ ೨೦೦ಕ್ಕೂ ಹೆಚ್ಚು  ಉದ್ಯಾನಗಳಿದ್ದು, ಇದರ ವ್ಯಾಪ್ತಿ ೪೧೫.೭೭ ಹೆಕ್ಟೇರ್. ಇವುಗಳ ಪೈಕಿ  ಕೆಲವು ತೀರ ಇತ್ತೀಚಿನವಾದರೆ ಮತ್ತೆ ಕೆಲವು ನೂರಾರು ವರ್ಷಗಳ ಹಿಂದಿನವು. ನೂರು ವರ್ಷ ಪೂರೈಸಿರುವ ಉದ್ಯಾನಗಳತ್ತ ಒಂದು ಪುಟ್ಟ ಪಯಣ ಇದು.

ನೂರರ ಗರಡಿ

ಎಚ್.ಕೆ.ನಾಗೇಶ ಮೈಸೂರು
ಕುಸ್ತಿಗಳ ತವರೂರಾದ ಮೈಸೂರಿನಲ್ಲಿ ಕುಸ್ತಿ ಪಟುಗಳಿಗೆ ತರಬೇತಿ ನೀಡುತ್ತಿದ್ದ ಗರಡಿಮನೆಗಳು ಆಧುನಿಕತೆಗೆ ತಕ್ಕಂತೆ  ಮಾರ್ಪಾಡಾಗುತ್ತಿದ್ದು, ಇತ್ತೀಚೆಗೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ರಾಜ ಮಹಾರಾಜರ ಆಶ್ರಯ ಪಡೆದಿದ್ದ ಈ ಕುಸ್ತಿಗಳು ಸಾಂಸ್ಕೃತಿಕ ನಗರಿಯಲ್ಲಿ ಹೆಚ್ಚು  ಪ್ರಚಲಿತವಾಗಿತ್ತು. ಗರಡಿ ಮನೆಗಳು   ಮೈಸೂರಿನ ಪರಂಪರೆಯನ್ನು  ಬಿಂಬಿಸುತ್ತಿದ್ದವು. ಈಗ  ಇವು  ಬೆರಳೆಣಿಕೆಯಷ್ಟಿವೆ. ಗರಡಿ ಮನೆಗಳ ಬದಲಾಗಿ ಆಧುನಿಕ ಜಿಮ್ನಾಶಿಯಂಗಳು ತಲೆ ಎತ್ತಿವೆ.
ಒಂದು ಗರಡಿಗೆ ಯಜಮಾನ, ಉಸ್ತಾದ್,  ಖಲೀಫ್  ಮತ್ತು ಒಬ್ಬ  ಲೈಸೆನ್ಸ್ ದಾರರು ಇರುತ್ತಿದ್ದರು. ಇವರ  ಉಸ್ತುವಾರಿಯಲ್ಲಿ ಪ್ರತಿದಿನ ಅಲ್ಲಿ  ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದವು.  ಇವರು ತಮ್ಮ ಸ್ವಂತ ಖರ್ಚಿನಲ್ಲೇ ಅವುಗಳ ನಿರ್ವಹಣೆ ಮಾಡಿ ಪೈಲ್ವಾನ್‌ಗಳಿಗೆ   ತರಬೇತಿ ನೀಡುವುದಲ್ಲದೆ ಅವರಿಗೆ ಬೇಕಾದ ಅನುಕೂಲಗಳನ್ನು ಕಲ್ಪಿಸುತ್ತಿದ್ದರು.
ಸ್ಥಳೀಯರ ಪ್ರಕಾರ ಒಂದೊಂದು ಗರಡಿ ಮನೆಗಳು ೧೦೦ ವರ್ಷ ದಾಟಿವೆ. ಆದರೆ ಅವುಗಳಿಗೆ ಅಧಿಕೃತ ದಾಖಲೆಗಳಿಲ್ಲ. ಕೆಲವೆಡೆ ಸ್ಥಾಪಕರ ಹೆಸರಿನಲ್ಲಿ ಗರಡಿ ಇದ್ದರೂ,  ಹತ್ತೂ ಜನರ ಗರಡಿ ಎಂದು ಸೇರಿಸಲಾಗಿದೆ.  ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ  ಗರಡಿ ಮನೆಗೆ ಸಹಕಾರ ನೀಡಿರುವುದರಿಂದ ಹತ್ತೂ ಜನರ ಗರಡಿ ಎಂದು ನಾಮಕರಣ ಮಾಡಲಾಗಿದೆ. ಆಗಿನ ಕಾಲದಲ್ಲಿ  ಕನಿಷ್ಠ ಮನೆಗೆ  ಒಬ್ಬರೋ, ಇಬ್ಬರೋ ಕುಸ್ತಿ ಪಟುಗಳು ಇರುತ್ತಿದ್ದರು.

ದೀರ್ಘಾಯುಷಿ ಆಸ್ಪತ್ರೆಗಳು

ಕೆ.ಎಸ್.ಮಂಜುನಾಥಸ್ವಾಮಿ, ಮೈಸೂರು
ಮೈಸೂರು ಭಾಗದಲ್ಲಿ ಜನಸಾಮಾನ್ಯರ ಆರೋಗ್ಯವೃದ್ಧಿಗೆ ನೂರಾರು ವರ್ಷ ಗಳಿಂದ ಶ್ರಮಿಸುತ್ತಿರುವ ಆಸ್ಪತ್ರೆಗಳ ಮಾತು ಚಿಕ್ಕದಲ್ಲ. ಅದರಲ್ಲೂ ಕೆ.ಆರ್. ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಮಿಷನ್ ಆಸ್ಪತ್ರೆ ಹಾಗೂ ಆಯುರ್ವೇದ ಆಸ್ಪತ್ರೆಗಳ ಪಾತ್ರ ಹಿರಿದು.

ಮರ ಅಮರ

ಪಿ.ಓಂಕಾರ್ ಮೈಸೂರು
ಮೈಸೂರು ಧರಿಸಿರುವ `ಪಾರಂಪರಿಕ ನಗರಿ'ಯ ಕಿರೀಟ ಬರೀ ಕಟ್ಟಡಗಳಿಂದ ಪ್ರಾಪ್ತವಾದದ್ದಲ್ಲ. ಹಲವು ತಲೆಮಾರುಗಳಿಗೆ ಉಸಿರು-ನೆರಳು ನೀಡಿದ, ಪ್ರಾಣಿ ಪಕ್ಷಿಗಳಿಗೆ ಆಸರೆಯಾದ, ಹಣ್ಣು ಹಂಪಲು ನೀಡಿ ಹಸಿವು ನೀಗಿಸಿದ `ಹಿರಿಯ' ಮರಗಳೂ ಕಿರೀಟದ ಗರಿಗಳೇ. ಹಲವು ತಲೆಮಾರುಗಳ ಸಾಕ್ಷಿ ಪ್ರಜ್ಞೆಯೂ ಸಹ.
ಹೊರವಲಯದ ಚಿಕ್ಕಹಳ್ಳಿಯ `ದೊಡ್ಡ ಆಲ'ವೂ ಸೇರಿ ನಗರದಲ್ಲಿ ಐದು ಪಾರಂಪರಿಕ ವೃಕ್ಷಗಳಿವೆ. ಇಂಥ ಮರಗಳನ್ನು ಗುರುತಿಸಿ, ಸಂರಕ್ಷಿಸುವ ಕಾಳಜಿಯಿಂದ ಆರಂಭವಾದ `ಪಾರಂಪರಿಕ ವೃಕ್ಷ ಸಂರಕ್ಷಣಾ ಸಮಿತಿ' ಈ ಮರಗಳನ್ನು ಗುರುತಿಸಿ ಫಲಕ ಅಳವಡಿಸಿದೆ. ಈ ಪೈಕಿ ಮೂರು ಮರಗಳು( ಚಿಕ್ಕಹಳ್ಳಿ ಆಲದ ಮರ, ಗಂಗೋತ್ರಿಯ ಅರಳಿ, ಕರ್ಜನ್ ಪಾರ್ಕ್‌ನ ಕೆಂಪು ಬೂರಗ) `ಕರ್ನಾಟಕದ ೧೦ ಪಾರಂಪರಿಕ ವೃಕ್ಷ'ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇನ್ನೊಂದು ವಿಶೇಷ. ಕರ್ನಾಟಕ ಜೀವ ವೈವಿಧ್ಯ ಕಾರ್‍ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಈ ಕುರಿತು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ. ೨೦೦೭ರ ಫೆಬ್ರವರಿಯಲ್ಲಿ ಆರಂಭವಾದ ಸಸ್ಯಶಾಸ್ತ್ರಜ್ಞರಾದ ಕೆ.ಬಿ.ಸದಾನಂದ, ಡಾ.ಎ.ರಾಮಲಿಂಗಂ,ಜೀವ ಶಾಸ್ತ್ರಜ್ಞ ಕೆ.ಎಂ.ವೀರಪ್ಪ ಅವರಿರುವ  `ಪಾರಂಪರಿಕ ವೃಕ್ಷ ಸಂರಕ್ಷಣಾ ಸಮಿತಿ' ವಿವಿಧ ಅಂಶಗಳನ್ನು ಪರಿಶೀಲಿಸಿ, ೫ ಮರಗಳಿಗೆ `ಪರಂಪರೆ'ಯ ಕಿರೀಟ ತೊಡಿಸಿದೆ. ಅದು ಅಧಿಕೃತಗೊಂಡು, ಸಂರಕ್ಷಣೆ ಸಾಧ್ಯವಾಗಲೆನ್ನುವುದು ಎಲ್ಲರ ಹಂಬಲ.

ಸಂಸದ ರಾಜಶೇಖರಮೂರ್ತಿ ನಿಧನ

ವಿಕ ಸುದ್ದಿಲೋಕ ಹೊಸದಿಲ್ಲಿ
ರಾಜ್ಯಸಭೆ  ಸದಸ್ಯ ಹಾಗೂ ಕೇಂದ್ರ ಮಾಜಿ ಸಚಿವ ರಾಜಶೇಖರಮೂರ್ತಿ ಅವರು ಭಾನು--ವಾರ ರಾತ್ರಿ ಹೃದಯಾ ಘಾತದಿಂದ ನಿಧನ ಹೊಂದಿದರು.
ಭಾನುವಾರ ರಾತ್ರಿ ೮.೪೫ರ ಸುಮಾರಿಗೆ ಮನೆಯಲ್ಲಿ ಟಿವಿ ನೋಡುತ್ತಿದ್ದ ರಾಜಶೇಖರ-ಮೂರ್ತಿಯವರಿಗೆ ಎದೆನೋವು ಕಾಣಿಸಿ-ಕೊಂಡಿತ್ತು. ಅವರ ಸಹಾಯಕನ ಮೂಲಕ ವಿಷಯ ತಿಳಿದ ರಾಜ್ಯಸಭೆ ಸದಸ್ಯ ಕೆ.ಬಿ. ಶಾಣಪ್ಪ ಆಗಮಿಸಿ ಮೂರ್ತಿಯವರನ್ನು ಸಮೀಪದ ರಾಮ ಮನೋ-ಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು `ಇವರು ಬದು-ಕುವ ಸಾಧ್ಯತೆಗಳು ಕಡಿಮೆ' ಎಂದು ಹೇಳಿದ ತಕ್ಷಣ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಮಧ್ಯರಾತ್ರಿ ೧೨.೦೦ ಗಂಟೆ ಹೊತ್ತಿಗೆ ಅವರು ಕೊನೆಯುಸಿರೆಳೆದರು.

ನಮಗಿರದಷ್ಟು ಆಯಸ್ಸು ಇವುಗಳಿಗೆ

ಸಾಂಸ್ಕ್ರತಿಕ ನಗರಿ, ಅರಮನೆಗಳ ನಗರಿ, ಪ್ರೇಕ್ಷಣೀಯ ತಾಣ ಅಂಥೆಲ್ಲ ಕರೆಸಿಕೊಳ್ಳುವ ಮೈಸೂರು ಮತ್ತೊಂದು ಹೆಸರಿನಿಂದಲೂ ಗುರುತಿಸಲಾಗುತ್ತದೆ. ಅದೆಂದರೆ ಪಾರಂಪರಿಕ ಕಟ್ಟಡ, ಮರಗಳ ಊರು... !
ಶತಮಾನ ಕಂಡು ಮತ್ತೊಂದು ಶತಮಾನಕ್ಕೆ ಮುನ್ನುಗ್ಗುತ್ತಿರುವ ಅಂಬಾವಿಲಾಸ ಅರಮನೆ, ವಸಂತ ಮಹಲ್, ಜಗನ್ಮೋಹನ ಅರಮನೆ, ಟೌನ್ ಹಾಲ್ ಜಿಲ್ಲಾಧಿಕಾರಿ ಕಚೇರಿ, ಶಾಲಾ, ಕಾಲೇಜು , ಮರಗಳ ಕುರಿತು ಬೆಳಕು ಚೆಲ್ಲಲು ಮೈಸೂರು ವಿಕ ಕಚೇರಿ ಹೆರಿಟೇಜ್ ವಾಕ್ (ಇದೊಂದು ಪಾರಂಪರಿಕ ನಡಿಗೆ) ಎಂಬ ಅಭಿಯಾನವನ್ನು ಇಂದಿನಿಂದ ಆರಂಭಿಸಿದೆ. ಎಂಜಾಯ್ ಮಾಡಿ...

ಮೈಸೂರಿನಲ್ಲಿ ಪರಂಪರೆಯ ಕಟ್ಟಡಗಳು ಎಂದು ೧೬೦ರವರೆಗೂ ಗುರುತಿಸಲಾಗಿದೆ. ಈ ಪೈಕಿ ೧೭ ಅರಮನೆಗಳೆನಿಸಿಕೊಳ್ಳುತ್ತವೆ. ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು, ಸರಕಾರಿ ಅಧೀನ ಸಂಸ್ಥೆಗಳು, ವಸತಿಗೃಹಗಳು, ಮಹಲುಗಳು, ಭವನಗಳು ಒಳಗೊಳ್ಳುತ್ತವೆ.
ಈ ಪರಂಪರೆಯ ಕಟ್ಟಡಗಳು ಬರಿಯ ಕಟ್ಟಡಗಳಲ್ಲ. ಅಲ್ಲಲ್ಲಿ ಕಲಾತ್ಮಕ , ಗುಣಾತ್ಮಕ ನೋಟಗಳಿವೆ. ಅಲ್ಲಲ್ಲೇ ಇತಿಹಾಸದ ಕಥನಗಳೇ ಇವೆ. ಜನಹಿತ -ರಾಜಹಿತ ಇಣುಕುತ್ತವೆ. ಎಂಜಿನಿಯರಿಂಗ್ ಹಾಗೂ ವಾಸ್ತು ಶೈಲಿಯಂತೂ ಒಂದಕ್ಕೊಂದು ವಿಭಿನ್ನ ವಿಶಿಷ್ಟ. ಈ ಪರಂಪರೆ ನಡಗೆ ಅಥವಾ ಹೆರಿಟೇಜ್ ವಾಕ್ ಮಾಡಿದರೆ ಅವುಗಳ ಸೌಂದರ್ಯ, ಭವ್ಯತೆ ಕಣ್ಣಿಗೆ ಆನಂದಕೊಡುತ್ತವೆ. ಇವೆಲ್ಲವೂ ನೂರು ವರ್ಷಕ್ಕಿಂತ ಹಳೆಯವು ಎನ್ನುವುದೇ ಮಹತ್ವದ ದೃಷ್ಟಿಕೋನ. ಈ ಮಾರ್ಗದಲ್ಲಿ ನಡೆದು ಈ ಕಟ್ಟಡಗಳನ್ನು ಕಣ್ಣರಳಿಸಿ ನೋಡಬೇಕು.
ಅಂಬಾವಿಲಾಸ ಅರಮನೆ, ಗವರ್‍ನಮೆಂಟ್ ಹೌಸ್, ಜಗನ್‌ಮೋಹನ ಪ್ಯಾಲೇಸ್, ಜಲದರ್ಶಿನಿ, ಜೆ.ಡಿ.ಆಫೀಸ್, ಡಿಸಿ ಆಫೀಸ್, ರಾಜೇಂದ್ರ ವಿಲಾಸ್ ಪ್ಯಾಲೇಸ್, ರಂಗಾಚಾರ್ಲು ಮೆಮೊರಿಯಲ್ ಹಾಲ್, ಲಾ ಕೋರ್ಟ್ಸ್, ಲೋಕರಂಜನ ಮಹಲ್, ವಾಣಿವಿಲಾಸ ಲೇಡಿಸ್ ಕ್ಲಬ್, ವೆಲ್ಲಿಂಗ್‌ಟನ್ ಲಾಡ್ಜ್, ವಸಂತ ಮಹಲ್‌ಗಳ ನೋಟವನ್ನು, ಅವುಗಳ ಹೊರಮೈಯನ್ನು ಮೆಲುಕು ಹಾಕೋಣ.

ರಸ್ತೆಗಳು`ಕುಶಲ'ವಾಗಿಲ್ಲ !

ಕುಶಾಲನಗರ ವ್ಯಾಪ್ತಿಯ ರಸ್ತೆಗಳಲ್ಲಿ ಸಂಚರಿಸುವುದು `ಕುಶಲ' ದಾಯಕವಲ್ಲ. ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ವಾಹನ ಚಾಲನೆ ಡರ್ಟ್‌ಟ್ರ್ಯಾಕ್ ರೂಟ್‌ನಲ್ಲಿ ರೇಸ್‌ನಲ್ಲಿ ವಾಹನ ಓಡಿಸಿದಂತೆ.
ಮೈಸೂರು-ಮಡಿಕೇರಿ ರಾಜ್ಯ ಹೆದ್ದಾರಿ ಹೊರತುಪಡಿಸಿ ಸುತ್ತಮುತ್ತಲಿನ ರಸ್ತೆಗಳ ಸ್ಥಿತಿ ಶೋಚನೀಯ. ಕೂಡಿಗೆ- ಶಿರಂಗಾಲ ರಸ್ತೆಯೇ ಇಲ್ಲದಂತಾಗಿದೆ.  ಈ ರಸ್ತೆ ಅಭಿವೃದ್ಧಿಗಾಗಿ ಆಗ್ರಹಿಸಿ ಹೋರಾಟ ನಡೆದಿತ್ತು. ಕೋಟಿ- ಕೋಟಿ ಅನುದಾನ ಈ ರಸ್ತೆಗೆ ಮಂಜೂರಾಗಿದೆ ಎಂಬ ಘೋಷಣೆ ಸಿಕ್ಕಿತಷ್ಟೇ. ಕಾಮಗಾರಿ ಸಾಗಲಿಲ್ಲ. ಕುಶಾಲನಗರ- ಸಿದ್ದಾಪುರ ರಸ್ತೆಯ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡ ಗಳಿವೆ. ದುಬಾರೆ ಆನೆ ತರಬೇತಿ ಶಿಬಿರ, ಚಿಕ್ಲಿಹೊಳೆಗೆ ಸಾಗಲು ಪ್ರವಾಸಿಗರು ಪ್ರಯಾಸ ಪಡಬೇಕು.
ಮುಖ್ಯಮಂತ್ರಿ ಆಗಿದ್ದ ಆರ್. ಗುಂಡೂರಾವ್ ಅವರ ಹುಟ್ಟೂರು ಕುಶಾಲ ನಗರದಲ್ಲಿ ವ್ಯವಸ್ಥಿತವಾದ ರಸ್ತೆಯೇ ಇಲ್ಲ. ಮಧ್ಯಭಾಗದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಸ್ತುತ ನಡೆಯುತ್ತಿದೆ. ಒಳಭಾಗದ ರಸ್ತೆಗಳಲ್ಲಿ ಬರೀ ಕಲ್ಲು. ಇಂಥ ರಸ್ತೆಗಳಲ್ಲಿ ಸಾಗುವುದೆಂದರೆ ಮುಳ್ಳನ್ನು ಚುಚ್ಚಿಸಿಕೊಂಡಂತೆಯೇ.

ಬಾಚಿದರೂ ಮುಗಿಯದ ಬಾಚಹಳ್ಳಿ ಸಮಸ್ಯೆ

ಬಾಚಹಳ್ಳಿ ಹೊಸ ಬಡಾವಣೆಯ ಜನರನ್ನು    ಹಲವು  ಸಮಸ್ಯೆಗಳು  ಕಾಡಲಾರಂಭಿಸಿವೆ. 
ಗ್ರಾಮದಲ್ಲಿ ವಾಸವಿದ್ದು ಹಲವು ವರ್ಷ ಗಳಿಂದ ಸೂರಿಲ್ಲದ ಹಾಗೂ ಕುಟುಂಬದಿಂದ ವಿಭಜನೆಗೊಂಡವರು ಹೊಸ ಬಡಾವಣೆಯಲ್ಲಿ  ೩೦ ವರ್ಷಗಳಿಂದ ವಾಸವಾಗಿದ್ದಾರೆ. ಹಿಂದು ಳಿದ ಉಪ್ಪಾರ, ಪರಿಶಿಷ್ಟ ಜಾತಿ ಹಾಗೂ ಇತರೆ ವರ್ಗದ ೨೦೦ ಕುಟುಂಬಗಳು ಇಲ್ಲಿ ವಾಸ ಮಾಡುತ್ತಿದ್ದು, ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕುಡಿಯುವ ನೀರು, ಬೀದಿ ದೀಪ, ರಸ್ತೆ ಚರಂಡಿ ಇಂದಿಗೂ ಬಡಾವಣೆಯ ಜನರಿಗೆ ಮರೀಚಿಕೆಯಾಗಿದೆ.

ಗುಂಡಿ ಗುಂಡಿ = ಗುಂಡೀ


ಶ್ರೀಮಂಗಲ/ ಗೋಣಿಕೊಪ್ಪಲು
ದಕ್ಷಿಣ ಕೊಡಗು ಅಂದ್ರೆ ಮೊದಲು ಕಣ್ಣ ಮುಂದೆ ಹಾದು ಹೋಗುವುದು ದುಸ್ಥಿತಿಗೆ ತಲುಪಿರುವ ರಸ್ತೆಗಳು. ಇಲ್ಲಿ ಆಡಳಿತ ವ್ಯವಸ್ಥೆ ಇದೆಯೇ ಎಂಬುದರ ಬಗ್ಗೆಯೇ ಅನುಮಾನ. ಕೆಸರುಗದ್ದೆ ಕ್ರೀಡಾಕೂಟಕ್ಕೆ ಈ ರಸ್ತೆಗಳು ಯೋಗ್ಯ. ಬೇಡದ್ದಕ್ಕೆಲ್ಲ ಬೊಬ್ಬೆ ಹೊಡೆಯುವ ಜನಪ್ರತಿನಿಧಿಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು ಹದಗೆಟ್ಟ ರಸ್ತೆ ವಿಷಯದಲ್ಲಿ ಮೌನವಷ್ಟೇ ಅಲ್ಲ, ಜಾಣ ಕುರುಡು. ಮುಖ್ಯರಸ್ತೆ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳು ಸಂಚಾರಕ್ಕೆ ಅಯೋಗ್ಯ. ಪೊನ್ನಂಪೇಟೆ- ಕುಟ್ಟ (೨೭ ಕಿ.ಮೀ.) ಹೆಸರಿಗೆ ಮಾತ್ರ ಅಂತಾರಾಜ್ಯ ಹೆದ್ದಾರಿ. ಹೇಳಲಾಗದಷ್ಟು ಕುಲಗೆಟ್ಟುಹೋಗಿದೆ.  ಶ್ರೀಮಂಗಲ, ಕುಟ್ಟ, ಪೊನ್ನಂ ಪೇಟೆ, ಗೋಣಿಕೊಪ್ಪಲು, ಬಾಳೆಲೆ, ಬಿ.ಶೆಟ್ಟಿಗೇರಿ ಸೇರಿದಂತೆ ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳ ರಸ್ತೆಗಳ ಬಗ್ಗೆ ಹೇಳುವಂತೇ ಇಲ್ಲ.

ಸತ್ಯ ಹೇಳಿದ್ರೆ `ಸುಸ್ತು' ರಸ್ತೆ ಅಂದ್ರೆ ಮಸ್ತ್

ಮೂರ್ನಾಡು/ ನಾಪೋಕ್ಲು: ವಾಹನ ದಟ್ಟಣೆ ಅಧಿಕವಾಗುತ್ತಿದ್ದರೂ ರಸ್ತೆಗಳು ದೊಡ್ಡ- ದೊಡ್ಡ ಗುಂಡಿಗಳಿಂದ ಕೂಡಿವೆ. ಇದರಿಂದ ಚಾಲಕರು, ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ.
ಕೊಂಡಂಗೇರಿ ಮೂಲಕ ವೀರಾಜಪೇಟೆಗೆ ಸಾಗುವ ರಸ್ತೆ ವರ್ಷಕ್ಕೆ ಎರಡು ಬಾರಿ ಡಾಂಬರೀಕರಣಗೊಂಡರೂ ಗುಂಡಿಗಳೇ ಎದ್ದು ಕಾಣುತ್ತದೆ. ರಸ್ತೆಯಲ್ಲಿ ವಾಹನಗಳು ನಾಟ್ಯವಾಡುತ್ತಿದೆಯೇನೋ ಎಂಬಂತೆ ಸಾಗುವ ವಾಹನಗಳು ಚಾಲಕರಿಗೆ ಕಿರಿಕಿರಿಯುಂಟು ಮಾಡುತ್ತಿವೆ. ಸಾರ್ವಜನಿಕರಿಗೆ ನಡೆದಾಡಲು ಕಷ್ಟವಾಗಿದೆ.
ವೀರಾಜಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿ ಗುಂಡಿಗಳಾಗಿ ಮಾರ್ಪಟ್ಟಿದ್ದು, ಬಲಮುರಿ , ಕಾಂತೂರು- ಮರಗೋಡು ರಸ್ತೆ ಅಸಹನೀಯವಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಬಗ್ಗೆ ಹೇಳುವ ಹಾಗೇ ಇಲ್ಲ. ದುರಸ್ತಿಗೆ ಬಿಡುಗಡೆಯಾಗುತ್ತಿರುವ ಅನುದಾನ ಸಮರ್ಪಕ ಬಳಕೆ ಆಗುತ್ತಿಲ್ಲ.
ನಾಪೋಕ್ಲು ಹಾಗೂ ಸುತ್ತಮುತ್ತಲಿನ ಗ್ರಾಮದ ರಸ್ತೆ ಅವ್ಯವಸ್ಥೆಯ ಆಗರ. ಐದು ತಿಂಗಳ ಹಿಂದೆಯಷ್ಟೇ ಡಾಂಬರೀಕರಣ ಮಾಡಲಾಗಿದ್ದ ನಾಪೋಕ್ಲು- ಭಾಗಮಂಡಲ ರಸ್ತೆ ಮತ್ತೆ ದುಸ್ಥಿತಿಗೆ ತಲುಪಿದೆ. ಕಳೆದ ಹಲವು ವರ್ಷಕ್ಕೆ ಹೋಲಿಸಿದರೆ ಒಂದಿಷ್ಟು ಸುಧಾರಣೆ ಕಂಡಿದೆ. ಅಂದ ಮಾತ್ರಕ್ಕೆ ಪ್ರಸ್ತುತ ರಸ್ತೆಗಳು ಯೋಗ್ಯ ಸ್ಥಿತಿಯಲ್ಲಿವೆ, ಸುಗಮ ಸಂಚಾರಕ್ಕೆ ಸಮರ್ಥವಾಗಿವೆ ಎಂದು ಅರ್ಥೈಸಬೇಕಾಗಿಲ್ಲ. ಕಳಪೆ ಕಾಮಗಾರಿ ಹಾಗೂ ಅನುದಾನದ ಕೊರತೆಯಿಂದ ರಸ್ತೆ ಅಭಿವೃದ್ಧಿ ಪಡಿಸುವುದೆಂದರೇ ತೇಪೆ ಹಾಕುವುದೆಂದೇ ಅರ್ಥ.

ಮುಡಾ: ಸದ್ಬಳಕೆ ಮಾತಿಲ್ಲ, ದುರ್ಬಳಕೆಯೇ ಎಲ್ಲ ...

ವಿಕ ಸುದ್ದಿಲೋಕ ಮೈಸೂರು
ಜನಪ್ರತಿನಿಧಿಗಳು,ಅಧಿಕಾರಿಗಳು ಹೊಸ ಕಟ್ಟಡ ಕಟ್ಟಿಸಲು,ಒಡೆದು ಕಟ್ಟಲು, ಕಾಮಗಾರಿ ನೆಪದಲ್ಲಿ ಲಕ್ಷಾಂತರ ರೂ.`ಖರ್ಚು'ಮಾಡಲು ತೋರುವಷ್ಟು ಉತ್ಸಾಹ, ಅತ್ಯಾಸಕ್ತಿಯನ್ನು ನಿರ್ವಹಣೆ,ಸದ್ಬಳಕೆಗೆ ವಹಿಸುವುದಿಲ್ಲ ಎನ್ನುವುದು ಅನೇಕ ಬಾರಿ ಸಾಬೀತಾಗಿದೆ. ಇಂಥ  ನಿರ್ಮಾಣಗಳು ಬಳಕೆಗೆ ಮುನ್ನವೇ ಉದುರಿಬಿದ್ದ ಉದಾಹರಣೆಗಳಿಗೂ ಕೊರತೆ ಇಲ್ಲ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಿಸಿದ ಮಿನಿ ತರಕಾರಿ ಮಾರುಕಟ್ಟೆಗಳದ್ದು ಹೆಚ್ಚೂ ಕಡಿಮೆ ಇದೇ ಸ್ಥಿತಿ. ಎರಡು ವರ್ಷದ ಹಿಂದೆ ನಿರ್ಮಿಸಿದ,ಇನ್ನೂ ಬಳಕೆಯ ಭಾಗ್ಯ ಕಾಣದ `ರೈತ ಸಂತೆ ಕಟ್ಟಡ'ವೂ ಭವಿಷ್ಯದಲ್ಲಿ ಹೀಗೇ ಆಗುವ `ಮುನ್ಸೂಚನೆ' ನೀಡಿದೆ.
ತಲೆ ಬೇನೆ: ಉತ್ತಮ ಉದ್ದೇಶವನ್ನಿಟ್ಟುಕೊಂಡು, ಸಾರ್ವಜನಿಕರ  ತೆರಿಗೆ ಹಣವನ್ನು ಹಲವು ಲಕ್ಷಗಳ ಲೆಕ್ಕದಲ್ಲಿ ವೆಚ್ಚಮಾಡಿ ನಿರ್ಮಿಸಿದ ಆವರಣಗಳು  ಸದುಪಯೋಗವಾಗುವುದು ಒತ್ತಟ್ಟಿಗಿರಲಿ,ಅದೇ ತೆರಿಗೆದಾರ  ಜನರಿಗೆ ತಲೆಬೇನೆಯಾಗಿ ಪರಿಣಮಿಸಿರುವುದು ವಿಪರ್ಯಾಸ.
ರಾಮಕೃಷ್ಣನಗರ ಐ ಬ್ಲಾಕ್, ವಿಜಯನಗರ ೨ನೇ ಹಂತ, ಕಲ್ಯಾಣಗಿರಿ ನಗರದ ಡಾ.ರಾಜಕುಮಾರ್ ರಸ್ತೆ, ಗೋಕುಲಂ,ಸಿದ್ಧಾರ್ಥನಗರ  ಮತ್ತಿತರ ಕಡೆ ಮುಡಾ ಐದಾರು ವರ್ಷದ ಹಿಂದೆ ನಿರ್ಮಿಸಿರುವ  ಮಿನಿ ಮಾರುಕಟ್ಟೆಗಳು ಕಳೆ,ಪೊದೆಮಯ.`ಗತಕಾಲ'ದ ಪಳೆಯುಳಿಕೆಗಳಂತೆ ವಿರಾಜಿಸುತ್ತಿರುವ ಈ ಆವರಣಗಳು ಅನೈತಿಕ ಚಟುವಟಿಕೆಗಳ ಆಗರವೂ ಹೌದು.ಅಕ್ಕಪಕ್ಕದ ನಿವಾಸಿಗಳಿಗೆ ಗರಿಷ್ಠ `ಪೀಡನೆ 'ಯ ಬೋನಸ್ ಧಾರಾಳ !

ಗುಂಡಿಯದ್ದೆ ಗಂಡಾಗುಂಡಿ

ಸೋಮವಾರಪೇಟೆ/ ಶನಿವಾರಸಂತೆ: ಸೋಮವಾರಪೇಟೆ ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳಿಗೆ ರೂಪವೂ ಇಲ್ಲ, ರೇಷೆಯೂ ಇಲ್ಲ. ಕೆಲ ವರ್ಷಗಳ ಹಿಂದೆ ಈ ಭಾಗದ ರಸ್ತೆಗಳು ಸುಸ್ಥಿತಿಯಲ್ಲಿದ್ದು, ಜಿಲ್ಲೆಯ ಇತರೆಡೆಯವರು `ಇದ್ದರೆ, ಸೋಮವಾರಪೇಟೆ ತಾಲೂಕಿನ ರಸ್ತೆಯಂತಿರಬೇಕು' ಎನ್ನುತ್ತಿದ್ದರು. ಇಂದು ಆ ಭಾಗದವರೇ ಪರಿತಪಿಸುತ್ತಿದ್ದಾರೆ. ರಸ್ತೆಗಳಲ್ಲಿ ಗುಂಡಿ ಇರುವುದರಲ್ಲಿ ವಿಶೇಷ ಅಲ್ಲ. ಆದರೆ, ಈ ತಾಲೂಕಿನ ಗ್ರಾಮೀಣ ಭಾಗದಲ್ಲಿ ಗುಂಡಿಯಲ್ಲಿ ರಸ್ತೆ ಇದೇ ಅನ್ನುವುದೇ ವಿಶೇಷ. ದುಸ್ಥಿತಿಗೆ ಹೊಂದಿಕೊಳ್ಳುವಂಥ ಅನಿವಾರ್‍ಯತೆ ಜನರದ್ದು. ಮಳೆಗಾಲದಲ್ಲಿ ರಸ್ತೆಗೆ ತೇಪೆ ಹಚ್ಚುವುದು, ರಸ್ತೆಗೆ ಬಿಡುಗಡೆಯಾದ ಹಣ ಹಂಚಿಕೊಳ್ಳುವುದು, ಚರಂಡಿ ವ್ಯವಸ್ಥೆ ಇಲ್ಲದಿರುವುದು ರಸ್ತೆಗಳ ಹಾಳುಕೊಂಪೆಗೆ ಕಾರಣ. ರಸ್ತೆ ಬದಿಯ ತೋಟದ ಮಾಲೀಕರು ಮರದ ರೆಂಬೆಗಳನ್ನು ಕಡಿಯದ್ದರಿಂದ ನೀರು ರಸ್ತೆ ಮೇಲೆ ಬಿದ್ದು, ರಸ್ತೆ ಹಾಳಾಗಲು ಕೊಡುಗೆ ನೀಡುತ್ತಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ಸ್ವಲ್ಪ ಪರವಾಗಿಲ್ಲ ಎನ್ನೋದೇ ಸಮಾಧಾನ. ಎರಡು ತಿಂಗಳ ಹಿಂದೆಯಷ್ಟೇ ಪಟ್ಟಣ ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿಪಡಿಸಿರುವುದರಿಂದ ಇಲ್ಲಿನ ಜನ ಬಚಾವು.

ಸಭಾತ್ಯಾಗ ಮಾಡೋದಿಲ್ಲ, ನಮ್ ಕಷ್ಟ ಕೇಳ್ತೀರಾ

ವೀರಾಜಪೇಟೆ: ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು ಹಾಲಿ ವಿಧಾನಭೆ ಅಧ್ಯಕ್ಷರು. ಸ್ಪೀಕರ್ ತಮ್ಮ ಕ್ಷೇತ್ರ ವ್ಯಾಪ್ತಿ ಯಲ್ಲಿ ಮಾಡುತ್ತಿರುವ ಅಭಿವೃದ್ಧಿ ಕೆಲಸವನ್ನು ಈ ರಸ್ತೆಗಳು ಮಾತನಾಡುತ್ತಿವೆ. ತಮ್ಮ ಮುಂಗೋಪ- ಕೋಪ- ತಾಪಗಳನ್ನು ಈ ರಸ್ತೆ ಅಭಿವೃದ್ಧಿಗೆ ಬಳಸಿಕೊಂಡಿದ್ದಲ್ಲಿ ಉಪಕಾರವಾಗುತ್ತಿತ್ತು.
ಜನಪ್ರತಿನಿಧಿಗಳು- ಅಧಿಕಾರಿಗಳು ಮಾತನಾಡುವುದು ಏನಿದ್ದರೂ ಕೋಟಿ ಲೆಕ್ಕದಲ್ಲೇ. ಯಾವ ಕೋಟಿಯೂ ರಸ್ತೆಗಳ ಏಳಿಗೆಗೆ ವಿನಿಯೋಗವಾದಂತೆ ಕಾಣುತ್ತಿಲ್ಲ. ಮಂಜೂರಾಗಿದೆ... ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ... ಶೀಘ್ರದಲ್ಲೇ ಪ್ರಾರಂಭ...          ಈ ಮಾತು ಕೇಳಿ- ಕೇಳಿ ಜನ ಬೇಸತ್ತಿದ್ದಾರೆ.
ಮುಖ್ಯರಸ್ತೆ ಹಾಗೂ ಗ್ರಾಮೀಣ ಭಾಗದ ರಸ್ತೆಗಳು ವ್ಯತ್ಯಾಸವಿಲ್ಲದಂತೆ ಅಧೋಗತಿಗೆ ತಲುಪಿವೆ. ವಾಹನಗಳಲ್ಲಿ ಹೋಗು ವುದಕ್ಕಿಂತ ನಡೆದುಕೊಂಡು ಹೋಗುವುದೇ ವಾಸಿ ಅನ್ನುವ ಪರಿಸ್ಥಿತಿಗೆ ರಸ್ತೆಗಳು ತಲುಪಿವೆ. ವೀರಾಜಪೇಟೆ ಮತ್ತು ಸುತ್ತ ಮುತ್ತಲಿನ ಗ್ರಾಮದಲ್ಲಿ ಉತ್ತಮವಾಗಿರುವ ರಸ್ತೆ ಹುಡುಕುವ ಸ್ಪರ್ಧೆಯನ್ನು ಆಯೋಜಿಸಬಹುದು. ಅಷ್ಟೊಂದು ಹದಗೆಟ್ಟಿವೆ. ರಾಜಕೀಯ ಪಕ್ಷಗಳು, ಈ ವ್ಯಾಪ್ತಿಯಲ್ಲಿರುವ ಸಂಘ- ಸಂಸ್ಥೆಗಳು ಪ್ರಚಾರಕ್ಕಾಗಿ ಏನೇನೋ ಮಾಡುತ್ತವೆ. ಆದರೆ, ರಸ್ತೆ ದುಸ್ಥಿತಿ ಬಗ್ಗೆ ಧ್ವನಿ ಎತ್ತುವ ಸಾಮರ್ಥ್ಯವನ್ನು ಅದ್ಯಾಕೋ ಕಳೆದುಕೊಂಡಿವೆ.