ಕೊಡಗಿನಲ್ಲೇ ಕಾಫಿ ಇಲ್ಲ !

ಅಜ್ಜಮಾಡ ರಮೇಶ್ ಕುಟ್ಟಪ್ಪ
ಹವಾಮಾನ ವೈಪರೀತ್ಯದಿಂದ ಬರೀ ಮಳೆ ಸುರಿದಿಲ್ಲ, ಕಾಫಿ ಇಳುವರಿ ಕುಸಿದಿದೆ. ಕೊಡಗಿನ ವಾಣಿಜ್ಯ ಬೆಳೆ ಕಾಫಿ. ಅದಕ್ಕೀಗ ಉತ್ತಮ ಧಾರಣೆಯಿದೆ, ವಿಚಿತ್ರವೆಂದರೆ ತೋಟದಲ್ಲಿ ಕಾಫಿ ಬೆಳೆ ಇಲ್ಲ !
ಮಳೆ ಏರುಪೇರಿನಿಂದ ತೋಟದಲ್ಲಿ ಬೆಳೆದ ಫಸಲು ಕೈಸೇರಲಿಲ್ಲ, ನೆಲ ಸೇರಿತು. ಅರೇಬಿಕಾ ಕಾಫಿ ಕೊಯ್ಲು ವೇಳೆಯಲ್ಲೇ ಮಳೆ ಸುರಿದದ್ದಕ್ಕೆ ಶೀತವಾಗಲಿಲ್ಲ, ನಷ್ಟದಿಂದ ಕೈ ಸುಟ್ಟು ಹೋಯಿತು. ಹೆಚ್ಚು  ಕಾಫಿ ಬೆಳೆಯುವ ಸೋಮವಾರಪೇಟೆಯಲ್ಲಿ ಈಗ ಕಳೆಯೇ ಇಲ್ಲ.
ಕಳೆದ ವರ್ಷಕ್ಕಿಂತ ೭ ಸಾವಿರ ಮೆಟ್ರಿಕ್ ಟನ್‌ಗಳಷ್ಟು ಕಡಿಮೆ ಕಾಫಿ ಉತ್ಪಾದನೆ ಆಗಲಿದೆ ಎಂಬುದು ಭಾರತೀಯ ಕಾಫಿ ಮಂಡಳಿ ಅಂದಾಜು, ಬೆಳೆಗಾರರಿಗೆ ಮಾರಕವಾಗುವಂಥ ಹವಾಮಾನ ವೈಪರೀತ್ಯ ಮುಂದುವರಿದದ್ದಕ್ಕೆ ಇನ್ನಷ್ಟು ಇಳುವರಿ ಕಡಿಮೆಯಾಗುವ ಸಂಭವವೂ ಇದೆ.
ರೋಬಸ್ಟಾ ಇಳುವರಿ ಮೇಲೆ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಿಲ್ಲ ಎಂಬುದೇ ಸಮಾಧಾನ. ಆದರೆ ಭವಿಷ್ಯದ ಇಳುವರಿ ಮೇಲೆ ಈ ವರ್ಷದ ಹವಾಮಾನ ಹೊಡೆತ ನೀಡುವುದು ಖಚಿತ. ವರ್ಷಪೂರ್ತಿ ಮೋಡ ಮುಸುಕಿದ ವಾತಾವರಣ ಮತ್ತು ಆಗಾಗ ಮಳೆ ಸುರಿಯುವುದರಿಂದ ತೋಟ ಒಣಗದು. ಇದರಿಂದ ಮೊಗ್ಗು ಬಿಡುವಲ್ಲಿ ಚಿಗುರು ಮೂಡುತ್ತದೆ. ಇದು ಮುಂದಿನ ವರ್ಷದ ಇಳುವರಿ ಕುಸಿತಕ್ಕೆ ಕಾರಣವಾಗಲಿದೆ.
ಅಷ್ಟಕ್ಕೇ ಮುಗಿಯಲಿಲ್ಲ. ಈ ವಾತಾವರಣ ಗುಣಮಟ್ಟದ ಕಾಫಿ ಉತ್ಪಾದನೆ ಮೇಲೂ ಪರಿಣಾಮ ಬೀರಲಿದೆ. ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಸಾಧ್ಯವಾಗದು. ಇದರಿಂದ ಗುಣಮಟ್ಟ ಕೇಳುವಂತಿಲ್ಲ. ಹಾಗಾಗಿ ವ್ಯಾಪಾರಿ ಗಳು ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದರೂ ಬೆಳಗಾರರ ಬೆಳೆಗೆ ಏನಾದರೂ ಕೊಂಕು ಹೇಳಿ ಕೈ ಕೊಡುತ್ತಾರೆ.
ಅರೇಬಿಕಾ ಮತ್ತು ರೋಬಸ್ಟಾ ಎರಡು ಕಾಫಿಗಳಿಗೂ ಕಳೆದ ಹಲವು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ದರ. ೫೦ ಕೆ.ಜಿ. ಚೀಲ (ಚೆರಿ) ಕ್ಕೆ ಪ್ರಸ್ತುತ ಅರೇಬಿಕಾ- ೪,೨೦೦ ರೂ. ಹಾಗೂ ರೋಬಸ್ಟಾ- ೨,೩೫೦ ರೂ. ಸಿಗುತ್ತದೆ. ಇದು ಒಳ್ಳೆಯ ಧಾರಣೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ