ಬೆಲ್ಲ ಈ ಬಾರಿ ಕಹಿಯಲ್ಲ !

ಮತ್ತೀಕೆರೆ ಜಯರಾಮ್
ಕಬ್ಬು ಬೆಳೆಯುವ ರೈತನ ಬದುಕಿನಲ್ಲಿ ಇದೀಗ ಮತ್ತೆ ಭರವಸೆ. ಸಕ್ಕರೆ ಜತೆಗೆ ಬೆಲ್ಲಕ್ಕೂ ಬಂಪರ್ ಬೆಲೆ. ಪರಿಣಾಮ ಆಲೆಮನೆಗಳಲ್ಲಿ ಗಾಣಗಳ ಸದ್ದು.
ಐದು ವರ್ಷದ ಹಿಂದೆ ಕಬ್ಬು ಬೆಳೆ ಎಂದರೆ ರೈತರು ಮೂಗು ಮುರಿಯುತ್ತಿದ್ದರು. ವರ್ಷ ಉರುಳಿದಂತೆ ಸಕ್ಕರೆ ಮತ್ತು ಬೆಲ್ಲದ ಉದ್ಯಮ ಚೇತರಿಸಿಕೊಂಡಿದೆ. ಸ್ಥಗಿತಗೊಂಡು, ತುಕ್ಕು ಹಿಡಿಯುತ್ತಿದ್ದ ಆಲೆಮನೆ ಗಾಣಗಳು ಪುನರಾರಂಭ ಗೊಂಡಿವೆ.
ಮಂಡ್ಯ ಜಿಲ್ಲೆಯು ಬೆಲ್ಲ ಉತ್ಪಾದನೆಗೆ ಪ್ರಸಿದ್ಧಿ. ಮಂಡ್ಯದ ಬೆಲ್ಲಕ್ಕೆ ದಕ್ಷಿಣ ಭಾರತದಲ್ಲಷ್ಟೇ ಅಲ್ಲದೇ ಉತ್ತರ ಭಾರತದ ದಿಲ್ಲಿ, ಕೋಲ್ಕೊತಾ, ಲಕ್ನೋ, ಗುಜರಾತ್ ಸೇರಿದಂತೆ ನಾನಾ ಕಡೆ ಬೇಡಿಕೆ ಇದೆ. ಹಾಗಾಗಿ ರೈತರು ಮತ್ತೆ ಬೆಲ್ಲ ಉತ್ಪಾದನೆಯತ್ತ ಮುಖ ಮಾಡಿದ್ದಾರೆ. ಮಂಡ್ಯದ ಎಪಿಎಂಸಿ ಬೆಲ್ಲದ ಮಾರುಕಟ್ಟೆಯೆಂದೇ ಪ್ರಖ್ಯಾತಿ. ಇಲ್ಲಿ ಬೆಲ್ಲವಲ್ಲದೆ ಬೇರೆ ವಹಿವಾಟು ನಡೆಯೋದಿಲ್ಲ. ನಿತ್ಯವೂ ಸರಾಸರಿ ೧೨೦೦-೧೫೦೦ ಕ್ವಿಂಟಾಲ್ ವಹಿವಾಟು ನಡೆಯುತ್ತಿದೆ.  ಸಕ್ಕರೆ ಕಾರ್ಖಾನೆಗಳ ನಿರ್ಲಕ್ಷ್ಯ ಮತ್ತು ಅಸಡ್ಡೆಯಿಂದ ಬೇಸತ್ತ ರೈತರ ಪಾಲಿಗೆ ಈ ಬೆಳವಣಿಗೆ ಖುಷಿ ತಂದಿದೆ. ಸಕ್ಕರೆ ಕಾರ್ಖಾನೆಗಳಷ್ಟೇ ಧಾರಣೆ ನೀಡಿ ಆಲೆಮನೆಗಳವರು ಕಬ್ಬು ಖರೀದಿಸುತ್ತಿದ್ದಾರೆ. ಬಕೆಟ್, ಅಚ್ಚು, ಬಾಕ್ಸ್ ಬೆಲ್ಲ ತಯಾರಿಕೆ ಹೇರಳ. ಸ್ಥಳೀಯವಾಗಿ ಕುರಿಕಾಲು ಅಚ್ಚು ಬೆಲ್ಲಕ್ಕೆ ಬೇಡಿಕೆ. ಜಿಲ್ಲೆ ಮತ್ತು ರಾಜ್ಯದ ಹೊರಗೆ ಬಾಕ್ ಹಾಗೂ ಬಕೆಟ್ ಬೆಲ್ಲಕ್ಕೆ ಸಾಕಷ್ಟು ಬೇಡಿಕೆ ಇದೆ.
೧೫ ಸಾವಿರ ಗಾಣಗಳು: ಜಿಲ್ಲೆಯಲ್ಲಿ ಬೆಲ್ಲ ಉತ್ಪಾದನೆ ಏಳೂವರೆ ದಶಕದಿಂದಲೂ ನಡೆಯುತ್ತಿದೆ. ೧೦ ವರ್ಷದ ಹಿಂದಿನ ಮಾಹಿತಿ ಗಮನಿಸಿದರೆ, ೧ ಲಕ್ಷ ಗಾಣಗಳಿದ್ದವು. ಬೆಲ್ಲದ ವ್ಯಾಪಾರ ಮತ್ತು ವಹಿವಾಟು ಕುಸಿದಿದ್ದರಿಂದ ಸಾವಿರಾರು ಆಲೆಮನೆಗಳು ಸ್ಥಗಿತಗೊಂಡವು. ಧಾರಣೆ ಏರಿರುವ ಹಿನ್ನೆಲೆಯಲ್ಲಿ ೧೫ ಸಾವಿರಕ್ಕೂ ಹೆಚ್ಚು ಆಲೆಮನೆಗಳಲ್ಲಿ ಗಾಣಗಳು ಪುನರಾರಂಭಗೊಂಡಿವೆ. ಸುಮಾರು ೩೫ ಆಲೆಮನೆಗಳಲ್ಲಿ ಕೆಲವರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು, ದೊಡ್ಡ ಪ್ರಮಾಣದಲ್ಲಿ ಬೆಲ್ಲ ಉತ್ಪಾದಿಸುತ್ತಿದ್ದಾರೆ. ಸಾಧಾರಣ ಆಲೆಮನೆಗಳಿಗಿಂತ ಹತ್ತು ಪಟ್ಟು ಅಧಿಕ ಬೆಲ್ಲ ಅಲ್ಲಿ ಉತ್ಪಾದನೆ ಸಾಧ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ